Friday, June 16, 2006

ಆಹಾ ! ಪಾನಿಪುರಿ !!



ಸುಮ್ಮನೆ ಕೆಲಸ ಮಾಡುತ್ತ ಕುಂತಾಗ ಎಲ್ಲಿಂದ ಬಂತೋ ಗೊತ್ತಿಲ್ಲ..ಅದರ ನೆನಪು !

ಬಂದು ಸುಮ್ಮನೆ ಹೋದರೆ ಚೆನ್ನಾರ್ಗಿತಿತ್ತು.ಆದರೆ ಪಾಪಿ ಅಮೇರಿಕಾಕ್ಕೆ ಹೋದರೂ ಪಾನಿಪುರಿ ನೆನಪು ತಪ್ಪಲಿಲ್ಲವಂತೆ !! ಅದರ ರುಚಿನೆನಪಿನಲ್ಲಿ ಪಟ್ಟ ಹಿಂಸೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳೋಣ ಅಂತ...

ಪಾನಿಪುರಿ ಅಂದ ಕೂಡಲೇ ಏನು ನೆನಪಿಗೆ ಬಂತು ರೀ?
ಸಣ್ಣ ಸಣ್ಣ ಪುರಿ,ಬಟಾಣಿಯಿಂದ ಕಟ್ಟಿದ ದುಂಡು ಒಡ್ಡು, ಅದರಲ್ಲಿ ಯಾವಾಗಲೂ ಹೊಗೆಯಾಡುತ್ತಿರುವ ಬಟಾಣಿ,'ಪಾನಿ' ಅಂತ ಕರೆಯಲ್ಪಡುವ ಆ ವಿಶಿಷ್ಟ ಮಸಾಲನೀರು ಹಾಗೂ ಆ ಪಾನಿಪುರಿ ತಳ್ಳುಗಾಡಿಗಳು..

ನನಗೆ ಅನಿಸಿದ ಹಾಗೆ ಪಾನಿಪುರಿದು ಬಹುಷಃ ರಾಜಸ್ತಾನಿ ಮೂಲ.ನಾನು ಚಿಕ್ಕವನಿದ್ದಾಗ ತಿಂದದ್ದು ಎಲ್ಲ ಈ ರಾಜಸ್ತಾನಿ ಪಾನಿಪುರಿ ಗಾಡಿಗಳಲ್ಲೆ.ಅದಕ್ಕೆನಾದರೂ ಅದು ರಾಜಸ್ತಾನಿ ಅಂದುಕೊಂಡಿರಬಹುದು.ಅದು ಎಲ್ಲಿದೇ ಇರಲಿ, ಎಷ್ಟು ಬೇಗ ಪ್ರಸಿದ್ದ ಆಯಿತು ಅಲ್ವ? ನಮ್ಮೂರಲ್ಲಿ ಮೊದಲಿದದ್ದು ೪-೫ ಪಾನಿಪುರಿ ಗಾಡಿಗಳು.ನೋಡು ನೋಡುಷ್ಟರಲ್ಲಿ ಪಾನಿಪುರಿ ಗಾಡಿಗಳು ಬೀದಿಗೊಂದರಂತೆ ಅದವು. ಸಂಜೆ ಗೆಳಯರ ಗುಂಪಿನಲ್ಲಿ ತಿರುಗಾಡಿ ಪಾನಿಪುರಿ ತಿಂದೆ ಮುಂದಿನ ಕೆಲಸ ಸಾಗುತಿತ್ತು. ಆದರೆ ಎಷ್ಟು ದಿನ ಇರುತ್ತೆ ಆ ಊರಿನ ಪಾನಿಪುರಿ ನಂಟು?

ಅಲ್ಲಿಂದ ನೆಗದದ್ದು ಬೆಂಗಳೂರೆಂಬ ನಗರಿಗೆ.ಮೊದಮೊದಲು ಕೆಲವೊಂದು ರಾತ್ರಿಗಳಿಗೆ ಪಾನಿಪುರಿ ಒಂದೇ ತಿಂದು ಜೀವಿಸಿದ್ದೂ ಆಯಿತು.ನಂತರ ಐಟಿಪಿಎಲ್ ಎಂಬ ಚಮಕ್‍ನಲ್ಲಿದ್ದ ೩ ವರ್ಷ ಅಲ್ಲಿದ್ದ ಇದ್ದಬದ್ದ ಪಾನಿಪುರಿ ಸೇವನೆ ಮಾಡಿದ್ದಾಯಿತು.ರುಚಿ ಬಗ್ಗೆ ಕೇಳೋಕ್ಕೆ ಹೋಗಬೇಡಿ.ಪಾನಿಪುರಿ ಸೇವನೆಗೆ ಜೊತೆ ಚೆನ್ನಾಗಿತ್ತು.ಅಷ್ಟು ಗೊತ್ತಾಗಲಿಲ್ಲ! ಅವಗಾವಗ ಮೇಯೋಹಾಲ್ ಹತ್ತಿರ ಹಾಗು ಸಿಎಂಹೆಚ್ ರೋಡ್‍ನಲ್ಲಿ ಸ್ವಾಹ ಆಗುತಿತ್ತು.

ಅನೇಕ ಹೋಟೆಲ್-ದರ್ಶಿನಿಗಳಲ್ಲಿ ನಾವೆಲ್ಲ ಪಾನಿಪುರಿ ತಿಂದಿರಬಹುದು, ಆದರೆ ತಳ್ಳುಗಾಡಿಯ ಪಾನಿಪುರಿಯ ರುಚಿಯ ಮುಂದೆ ಎಲ್ಲವೂ ಶೂನ್ಯ!

ಇದೇನು..ಆವಾಗಿಂದ ಪಾನಿಪುರಿ ಒಂದೇ ಆಯ್ತು, ಉಳಿದವು ಎಲ್ಲಿ ಅಂತೀರಾ..
ಪಾನಿಪುರಿ ಜೊತೆ ಸೇವ್‍ಪುರಿ,ಮಸಾಲಪುರಿ,ಬೇಲ್‍ಪುರಿ,ದಾಹಿಪುರಿಗಳ ಬಗ್ಗೆ ಹೇಳದಿದ್ದರೆ ಹೇಗೆ..ಒಂದೊಂದಕ್ಕೂ ಒಂದೊಂದು ವಿಶಿಷ್ಟ ರುಚಿ.ಅವುಗಳನ್ನು ಮಾಡೋದ ನೋಡೋದೇ ಚೆನ್ನಾ ! ಪುರಿಯನ್ನು ಮುರಿದು, ಅದರ ಮೇಲೆ ಆ ಬಟಾಣಿ ಮಿಶ್ರಣ ಹರಡಿ,ನಂತರ ಸೇವ್ ಅಥವಾ ಮೊಸರನ್ನೋ ಹಾಕಿ, ಉಪ್ಪು-ಮಸಾಲೆ ಉದುರಿಸುತ್ತಿದ್ದರೆ ..ಇಲ್ಲದಿರುವ ಎಲ್ಲಾ ಹಸಿವುಗಳು ಒಮ್ಮೆಗೆ ಪ್ರತ್ಯಕ್ಷ. ಬಾಯಿಯಲ್ಲಿ 'ಗಂಗೇಚಾ ಯಮೂನಾ' !!ಇನ್ನು ಬೇಲ್‍ಪುರಿಯಾದರೆ , ನೂರೆಂಟು ಮಸಾಲೆ,ಟಮೋಟ,ಮಂಡಕ್ಕಿ ಒಂದು ಪಾತ್ರೆಯಲ್ಲಿ ಹಾಕಿ ಆವನ್ನು ಸೌಟಿನಲ್ಲಿ ಕಲೆಸುತ್ತಿದ್ದರೆ..

ಈ ಎಲ್ಲ ಪುರಿಗಳನ್ನು ತಿಂದ ಮೇಲೆ ಪ್ರತ್ಯೇಕವಾಗಿ 'ಪಾನಿ' ಹಾಕಿಸಿಕೊಂಡು ಕುಡಿಯದಿದ್ದರೆ ಹೇಗೆ ?

ಇಲ್ಲಿಗೆ ಬಂದ ಮೇಲೆ ಮೊದಲ ಸಲ 'ಇಂಡಿಯನ್ ಶ್ಯಾಪ್' ನಲ್ಲಿ ಪಾನಿಪುರಿ ನೋಡಿದ್ದೆ , ಯಾವತ್ತು ಅದನ್ನು ನೋಡೇ ಇಲ್ಲ ಅನ್ನೋರ ತರ ಅದನ್ನು ನೋಡಿ, ೨ ಡಾಲರ್ ಕೊಟ್ಟು ತಗೊಂಡು ತಿಂದದ್ದಾಯಿತು.ಬೇಡ ಬೇಡವೆಂದರೂ ಇಲ್ಲಿನ ರುಚಿಯನ್ನು ಅಲ್ಲಿಗೆ ಹೋಲಿಸಿ ಕಷ್ಟಪಟ್ಟಿದ್ದೂ ಆಯಿತು ! ಸರಿ, ಮಾಡೋದೇನು ಅಂತ 'ಪಾಲಿಗೆ ಬಂದದ್ದು ಪಾನಿಪುರಿ' ಅಂತ ಸ್ವೀಕರಿಸಿದ್ದಾಯಿತು!!!

ಇಂದು ಇಲ್ಲಿ ಪಾನಿಪುರಿ ,ನಾಳೆ ಇನ್ನೇಲ್ಲೋ....

'ಪಾನಿಪುರಿ ಪುರಾಣ'ವನ್ನು ಈ ಒಂದು ಮಸಾಲಭರಿತ ಪದ್ಯದಿಂದ ಮುಗಿಸುತ್ತಿದ್ದೇನೆ.

ಪಾನಿಪುರಿ ಮಾಡೋನು ಬಟಾಣಿ,ಇರುಳ್ಳಿ,ಪಾನಿ ತುಂಬಿಸಿ,
ಪುರಿಯನ್ನು ಒಂದೊಂದೇ ಕೊಡುತ್ತಾ ಇದ್ದರೆ,
ಒಂದೇ ಗುಕ್ಕಿನಲ್ಲಿ ಅದನ್ನು ಬಾಯಿ ತುಂಬಾ ತುಂಬಿಸಿ,
ಹಾಗೆಯೇ ಕರಗಿಸಿ ಮೆಲ್ಲುತ್ತಿದ್ದರೆ ಸ್ವರ್ಗಕ್ಕೆ ಒಂದು ಪ್ಲೇಟ್ ಕಳುಹಿಸೆಂದ ಪಾನಿಪುರಿ ತಜ್ಞ

ವಿ.ಸೂ:ಇದೆಲ್ಲ ಓದಿದ ಮೇಲೆ ನೀವು ಪಾನಿಪುರಿ ಹುಡುಕಿಕೊಂಡು ಹೊರಟರೆ ನಾನು ಜವಾಬ್ದಾರನಲ್ಲ !!!

Sunday, June 04, 2006

ಮಾಮರವೆಲ್ಲೋ..ಮೇಕೆ ಹಾಲೆಲ್ಲೋ


ಮನೆ ಹತ್ತಿರ ಇರುವ ಅಂಗಡಿಗೆ ಹೊಕ್ಕು ವಾರಕ್ಕೆ ಬೇಕುವಾಗ ದಿನಸಿ,ತರಕಾರಿ,ಹಣ್ಣು,ಹಾಲು ಇತ್ಯಾದಿಗಳನ್ನು ಖರೀದಿಸುತ್ತಿರುವಾಗಲೇ ಕಣ್ಣಿಗೆ ಬಿದ್ದದ್ದು 'ಪ್ರೋಸನ್ ಮ್ಯಾಂಗೋ'.ಮಾವಿನಕಾಯಿಯನ್ನು ತುಂಡು ತುಂಡಾಗಿಸಿ ಅದನ್ನು ಒಂದು ಬಾಟಲಿನಲ್ಲಿ ಸಂಸ್ಕರಿಸಿದ್ದು.

ಆ ಮಾವಿನಕಾಯಿಯನ್ನು ನೋಡಿದ್ದೆ ನನ್ನ ಮನ ಶರವೇಗದಲ್ಲಿ ಪ್ಲಾಶ್‍ಬ್ಯಾಕ್‍ನಲ್ಲಿ ಹೋಗಿಬಿಟ್ಟಿತು.

ಆಗ ನಾನು ಪ್ರಾಥಮಿಕ ಶಾಲೆಯಲ್ಲಿದ್ದೆ.ವಾರ್ಷಿಕ ಪರೀಕ್ಷೆಯ ಫಲಿತಾಂಶ ನೋಡಿಕೊಂಡು ಮನೆಗೆ ಬಂದರೆ ಅಮ್ಮನ ಕೈಯಲ್ಲಿ ಬ್ಯಾಗು.ಎಲ್ಲಿಗೆ ಹೋಗ್ತಿದಿವಿ ಅಂತಾ ಕೇಳುವಷ್ಟರಲ್ಲಿ ನಮ್ಮ ಚಿಕ್ಕಪ್ಪ 'ಬೇಸಿಗೆ ರಜಕ್ಕೆ ನಿಮ್ಮನ್ನು ನಮ್ಮ ಹಳ್ಳಿಗೆ ಕರಕೊಂಡು ಹೋಗುತ್ತಿದ್ದಿನಿ'.

ದಾವಣಗೆರೆಗೆ ಹೋಗಿ ಅಲ್ಲಿಂದ ಖಾಸಗಿ ಬಸ್ಸೊಂದನ್ನೇರಿ, ಅದರಲ್ಲಿದ್ದ ಎರಡು ಬಸ್ಸಿಗೆ ಆಗುವಷ್ಟಿದ್ದ ಜನರ ಮಧ್ಯ ಸೀಟೊಂದನ್ನು ಗಿಟ್ಟಿಸಿ,ಶ್ಯಾಗಲೆ ಅನ್ನುವ ಆ ಹಳ್ಳಿಯನ್ನು ಮುಟ್ಟುವಷ್ಟರಲ್ಲಿ ಸುಸ್ತೋ ಸುಸ್ತು. ಮರುದಿನ ಚಿಕ್ಕಪ್ಪ ಹೊಲಕ್ಕೆ ಹೊರಟು ನಿಂತಾಗ ಚಿಕ್ಕಮ್ಮ 'ಇವ್ನು ಯಾಕೆ ಕರಕೊಂಡು ಹೋಗಬಾರದು'ಅಂತಾ ತಾಕೀತು.ಸರಿ, ಚಿಕ್ಕಪ್ಪನ ಜೊತೆ ಹೊಲಕ್ಕೆ ಹೆಜ್ಜೆ ಹಾಕಿದ್ದಾಯಿತು. ಅಲ್ಲಿ ತಲುಪಿದಾಗಲೇ ತಿಳಿದದ್ದು ಅದು ಹೊಲ ಅಲ್ಲ ಅದು ಮಾವಿನ ತೋಪು.

ಮೊದಲ ದಿನ ಕೆಲಸಕ್ಕೆ ಸೇರಿಕೊಂಡ ಉದ್ಯೋಗಿಯನ್ನು ಮೆನೇಜರ್ ಕರೆದು ಕೆಲಸದ ಬಗ್ಗೆ ತಿಳಿಹೇಳುವಂತೆ, ಚಿಕ್ಕಪ್ಪನಿಂದ ಮಾವಿನ ತೋಪಿನಲ್ಲಿ ನಾನು ಮಾಡಬೇಕಿರುವ ಕೆಲಸದ ಬಗ್ಗೆ ಬ್ರೀಫಿಂಗ್ ! ನನ್ನ ಕೆಲಸ ತೋಪಿನಲ್ಲಿರುವ ಮಾವಿನಕಾಯಿಗಳನ್ನು ಕಾಯುವುದು.ನಾನು ಕಣ್ಣಿಟ್ಟು ಮಾವಿನಕಾಯಿಗಳನ್ನು ಕಾಯಬೇಕಿರುವುದು ದನ-ಎಮ್ಮೆ-ಮೇಕೆ ಕಾಯುವ ಹುಡುಗರಿಂದ.ಆ ದನಗಾಹಿಗಳು ತೋಟದಲ್ಲಿ ಕಂಡ ತಕ್ಷಣ ಒಂದು ಕೂಗು ಹಾಕುವುದು ನನ್ನ ಕೆಲಸ. ಹತ್ತಿರವೇ ಇರುವ ಗದ್ದೆಯಲ್ಲಿ ಕೆಲಸ ಮಾಡುತ್ತಿರುವ ಚಿಕ್ಕಪ್ಪನಿಗೆ ನನ್ನ ಕೂಗು ಒಂದು ಅಲರ್ಟ್ ಸಿಗ್ನಲ್.

ಚಿಕ್ಕಮ್ಮ ಮಧ್ಯಾಹ್ನ ಊಟ ತಗೊಂಡು ಬಂದಾಗಲೇ ಗೊತ್ತಾಗಿದ್ದು ಮಧ್ಯಾಹ್ನ ಆಗಿದೆಯಂತ.ಮಾವಿನ ಮರದ ತಂಪಿನಲ್ಲಿ ಕುಳಿತು ರೊಟ್ಟಿ-ಚಟ್ನಿ-ಬುತ್ತಿ ತಿನ್ನುವಾಗ ಅದುವೇ ಅಮೃತ.ಊಟದ ನಂತರ ಪಕ್ಕದಲ್ಲಿಯೇ ಹರಿಯುತ್ತಿದ್ದ ತೊರೆಯಲ್ಲಿ ಕುಡಿಯಲು ನೀರು.ಊಟದ ನಂತರ ಮತ್ತೆ ಶುರು ಕಾವಲು ಕಾರ್ಯ.ಆಗಾಗ ಮಾವಿನಕಾಯಿ ರುಚಿ ನೋಡಲು ಅವಕಾಶ.ಮಧ್ಯಾಹ್ನ ವಿಪರೀತ ಬಿಸಿಲು ಜಾಸ್ತಿಯಾಗುತ್ತಿದಂತೆ ತೊರೆಯಲ್ಲಿ ಸ್ನಾನ-ನೀರಾಟ-ದೋಣಿ ಆಟ.

ಸಂಜೆ ಆಗುತ್ತಿದಂತೆ ಮನೆಗೆ ವಾಪಸಾಗುವ ತಯಾರಿ. ಆ ಸಮಯಕ್ಕೆ ಸರಿಯಾಗಿ ಎಲ್ಲ ಎಮ್ಮೆ-ದನದ ಹಿಂಡುಗಳು ಮನೆ ಕಡೆಗೆ.ಆ ರೀತಿ ಸಂಜೆ ದೂಳೆಬ್ಬಿಸುತ್ತ ಹೊರಟ ದನದ ಹಿಂಡಿನ ಹಿಂದೆ ನಮ್ಮ ಸವಾರಿ.'ಗೋದೂಳಿ' ಪದದ ಅರ್ಥವಾಗಿದ್ದು ಆಗ.ಮನೆಗೆ ಬಂದೊಡನೆ ತೋಟದಿಂದ ತಂದ ಮಾವಿನಕಾಯಿ ಅಮ್ಮ-ಚಿಕ್ಕಮ್ಮನಿಗೆ ಅರ್ಪಣೆ.ರಾತ್ರಿ ಊಟದಲ್ಲಿ ಮಾವಿನಕಾಯಿ ಚಟ್ನಿ ಹಾಜರ್!

ಈ ದಿನಚರಿ ಹೀಗೆ ನಡೆಯಿತು ಕೆಲವು ದಿನ.ಅದೊಂದು ದಿನ ಕಾವಲು ಮಾಡುವಾಗ ನೋಡಿದರೆ ದನಗಾಹಿಯೊಬ್ಬ ತೋಟದಲ್ಲಿ ಕಾಣಬೇಕೇ.ಇನ್ನೇನು ಕೂಗು ಹಾಕಬೇಕುವೆನ್ನುವಷ್ಟರಲ್ಲಿ ಅವನ ಜೊತೆ ಚಿಕ್ಕಪ್ಪ..ಬಹುಷಃ ಮಾವಿನಕಾಯಿ ಕದಿಯಲು ಬಂದಾಗ ಸಿಕ್ಕಿಬಿದ್ದಿರಬೇಕು ಅಂದುಕೊಂಡು ಅಲ್ಲಿಗೆ ಹೋದರೆ, ಆಶ್ಚರ್ಯ ಕಾದಿತ್ತು.ಚಿಕ್ಕಪ್ಪ ಅವನಿಗೆ ಸಾಕಷ್ಟು ಮಾವಿನಕಾಯಿ ಕೊಡಬೇಕೇ ! ಆ ದನಗಾಹಿ ಮಾವಿನಕಾಯಿ ತಗೊಂಡು ನಂತರ ಚಿಕ್ಕಪ್ಪನ ಜೊತೆ ಹೊರಟ.ನೀನು ಬಾ ಎಂಬಂತೆ ನನಗೆ ಸನ್ನೆ.

ಆ ಹುಡುಗ ಕರೆದುಕೊಂಡು ಹೋಗಿದ್ದು ಅವನ ಮೇಕೆ ಹಿಂಡಿನ ಹತ್ತಿರ. ಒಂದು ಮೇಕೆಯನ್ನು ಕರೆದುಕೊಂಡು ಬಂದು ಚಿಕ್ಕಪ್ಪನ ಹತ್ತಿರವಿದ್ದ ಚೊಂಬಿನಲ್ಲಿ ಸರಸರ ಅಂತ ಹಾಲು ಕರೆದುಬಿಟ್ಟ. ನಂತರ ನನ್ನೆಡೆಗೆ ನೋಡಿ 'ಮೇಕೆ ಹಸಿ ಹಾಲು ಕುಡಿದಿಯಾ ಯಾವಾಗಲದರೂ' ಎಂದಾಗ ನಾನು ಕಕ್ಕಾಬಿಕ್ಕಿ. ಚಿಕ್ಕಪ್ಪ 'ಪಟ್ಟಣದ ಹುಡುಗ ಬಹುಷಃ ಮೇಕೆನೇ ನೋಡಿಲ್ಲ, ಹಾಲು ಎಲ್ಲಿಂದ ಬರಬೇಕು' ಅನ್ನುತ್ತ ನಕ್ಕಿದ್ದೆ ನಕ್ಕಿದ್ದು.

ಚಿಕ್ಕಪ್ಪ ಹಾಲಿನ ಚೊಂಬು ನನಗೆ ಕೊಡುತ್ತ ರುಚಿ ನೋಡು ಅಂದಾಗೆ, ಆ ಮೇಕೆ ಹುಡುಗ 'ಆ ಚೊಂಬಿನಲ್ಲಿ ಆಮೇಲೆ ಕುಡಿ, ಈಗ ಇಲ್ಲಿ ಬಾ' ಅಂದ.ನನ್ನನ್ನು ನೆಲದ ಮೇಲೆ ಬಾಗಿ ಕುಳಿತುಕೊಳ್ಳುವಂತೆ ಹೇಳಿ, ಆ ಮೇಕೆ ಕೆಚ್ಚಲಿನಿಂದ ನೇರವಾಗಿ ನನ್ನ ಬಾಯಿಗೆ ಹಾಲು ಬೀಳುವಂತೆ ಕರೆಯತೊಡಗಿದ.ನಮ್ಮ ಹಾಲಿನವ ಕೊಡುತ್ತಿದ್ದ ನೀರಿನಂತ ಹಾಲಿಗಿಂತ ಗಟ್ಟಿ ಮತ್ತು ರುಚಿ. ಹಾಲು ಆಗಾಗ ಬಾಯಿಗೆ ಬೀಳದೆ ಮುಖದ ಮೇಲೆ ಬಿದ್ದಾಗ ಹಾಲಿನ ಅಭಿಷೇಕ!

ಈ ಮಾವು ಕಾಯುವ ಕಾಯಕ ನನ್ನ ಬೇಸಿಗೆ ರಜೆ ಮುಗಿಯುವರೆಗೆ ನಡೆಯಿತು...ಆ ನಡುವೆ ಆ ದನಗಾಹಿಗಳೊಂದಿಗೆ ಬೆಳೆದ ಸ್ನೇಹ,ಸಂಜೆ ಮನೆಗೆ ಮರುಳುವಾಗ ಅವರ ಎಮ್ಮೆಯ ಮೇಲೆ ಕುಳಿತು ಮಾವಿನಕಾಯಿ ತಿನ್ನುತ್ತಾ ಸವಾರಿ. ಎಷ್ಟೊಂದು ಸುಮಧುರ ಆ ನೆನಪುಗಳು..

ಶ್ಯಾಪಿಂಗ್ ಮಳಿಗೆಯಲ್ಲಿ '2% fat milk' ಡಬ್ಬಿಯನ್ನು ಮತ್ತು 'frozen cut mango' ನೋಡಿ ಮುಖದ ಮೇಲೆ ಮಂದಹಾಸ.

ನೊರೆಭರಿತ ಮೇಕೆ ಹಾಲಿನ ನೆನಪು...

ತೋಟದಲ್ಲಿ ಉಪ್ಪಿನ ಜೊತೆ ತಿಂದ ಮಾವಿನಕಾಯಿಯ ನೆನಪು..

Friday, June 02, 2006

ಪಾತರಗಿತ್ತಿಯ ಮೊದಲ ಮಾತು..



ಅತ್ಮೀಯ ಚಿಟ್ಟೆಗಳಲ್ಲಿ,

ನನ್ನ ಜೇನುಭರಿತ ನಮಸ್ತೆ !

ಕನ್ನಡದಲ್ಲಿ ಬ್ಲಾಗ್‍ಸಿಬೇಕೆಂದು ಅಂದುಕೊಂಡ ಮೇಲೆ ಅದೆಷ್ಟು ಹೂವುಗಳು ಅರಳಿ ಕಾಯಿ ಅದವೋ ನಾ ಅರಿಯೆ.ಕನ್ನಡ ಬ್ಲಾಗ್ ಶುರುಮಾಡುವ ತುಡಿತ ಮಿತಿ ಮೀರಿ ಕೊನೆಗೂ ಬ್ಲಾಗೋದಯವಾಯಿತು.

ಬ್ಲಾಗ್‍ಗೆ ಹೆಸರಿಡುವಾಗಲೇ ಗೊತ್ತಾಗಿದ್ದು ಹುಟ್ಟಿದ ಕೂಸಿಗೆ ಹೆಸರಿಡುವುದು ಎಷ್ಟು ಕಷ್ಟ ಅಂತ. ಮಗುವಾಗಿದರೂ ಹೆಸರಿಡಲು ಒಂದು ನಕ್ಷತ್ರ-ಜನ್ಮ ಸಮಯ ಎನೋ ಒಂದು ಇರುತ್ತೆ, ಬ್ಲಾಗ್‍ಗೆ ಎಲ್ಲಿಂದ ತರೋದು ಅವೆಲ್ಲ? ಸಾಕಷ್ಟು ಮನಮಂಥನದ ನಂತರ 'ಪಾತರಗಿತ್ತಿ ಪಕ್ಕ' ಅಂತಾ ಹೆಸರಿಸಿದೆ.

ಯಾಕೆ ಆ ಹೆಸರು ಅಂತಾ ಕೇಳತ್ತಿರಾ?

ಪಾತರಗಿತ್ತಿ ಅಥವಾ ಚಿಟ್ಟೆ ಕಂಡ್ರೆ ಯಾರಿಗೇ ಇಷ್ಟ ಇಲ್ಲಾ ಹೇಳಿ. ಆ ಪಾತರಗಿತ್ತಿ ತನ್ನ ಚೆಲುವ ರೆಕ್ಕೆ ಬೀಸಿಕೊಂಡು ಗಿಡದಿಂದ ಗಿಡಕ್ಕೆ ಹೂವಿಂದ ಹೂವಿಗೆ ಹಾರೋದ ನೋಡೋದೆ ಚೆಂದ.ಆ ಪಾತರಗಿತ್ತಿ ತರ ನಾನು ಇದ್ದರೆ ಹೇಗೆ ಎಂಬ ಮನದಾಳದ ಆಸೆ. ಪಾತರಗಿತ್ತಿ ತರ ನಾನು ಬ್ಲಾಗ್‍ನಲ್ಲಿ ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ಹಾರಿ ಅದರ ಸವಿ ಉಂಡು ಉಣಬಡಿಸುವ ಇಚ್ಚೆ.ಆಗ ನೆನಪಾದದ್ದೆ ಬೇಂದ್ರ ಅಜ್ಜನ 'ಪಾತರಗಿತ್ತಿ ಪಕ್ಕ ನೋಡಿದೇನಾ ' ಕವಿತೆ.

ಹಾಂ...ಕನ್ನಡ ಬ್ಲಾಗ್‍ ಬರಿಬೇಕು ಎಂದು ನಾನು ಯೋಚನೆ ಮಾಡುತ್ತಿರುವಾಗಲೇ , 'ನೀವು ಕನ್ನಡದಲ್ಲಿ ಯಾಕೇ ಬರಿಬಾರದು ರೀ....' ಅಂತ ಉರಿಯುವ ಯೋಚನಾಗ್ನಿಗೆ ತುಪ್ಪ ಸುರಿದವರು ಗೆಳತಿ ಶ್ರೀಮಾತಾ.ಹಾಗೆಯೇ 'ಮಾವಿನಯನಸ' ಓದಿದಾಗಲೆಲ್ಲ ನಾನು ಈ ರೀತಿ ಕನ್ನಡದಲ್ಲಿ ಬರೆದರೆ ಹೇಗೆ ಅಂತಾ ಯೋಚನೆಗೀಡು ಮಾಡಿದವರು ಮಿತ್ರರಾದ ತಳುಕು ಶ್ರೀನಿವಾಸ್. ಈ ಇಬ್ಬರು ಸನ್ಮಿತ್ರರಿಗೆ ಪಾತರಗಿತ್ತಿವತಿಯಿಂದ ಸವಿಸವಿ ವಂದನೆಗಳು.

ಆಂರ್ತಜಾಲದಲ್ಲಿರುವ ಕನ್ನಡದ ಚಿಟ್ಟೆಗಳಿಗೆ 'ಪಾತರಗಿತ್ತಿ ಪಕ್ಕ' ಕ್ಕೆ ಸ್ವಾಗತ !