Tuesday, January 29, 2008

ಮಾಯನಗರಿಯ ಸೆರಗಿನಲ್ಲಿ...

ಕಣ್ಣು ಕೊರೈಸುವ ಬಣ್ಣದ ಲೈಟ್‍ಗಳು
ಜಗಮಗಿಸುವ ಹೋಟೆಲ್‍-ಕ್ಯಾಸಿನೋಗಳು
ಇಜೀಪ್ಟಿಯನ್, ರೋಮನ್,ಫ್ರೆಂಚ್
ಒಂದೊಂದು ಕಟ್ಟಡವು ಒಂದೊಂದು ವಾಸ್ತುಶೈಲಿ

ಆ ಮಾಯನಗರಿಯ ಮುಖ್ಯರಸ್ತೆಯಲ್ಲಿ
ಓಡಾಡುವುದೇ ಒಂದು ಸೊಬಗು
ಎಲ್ಲಿಂದೆಲ್ಲಿಂದಲೋ ಬಂದ ಪ್ರವಾಸಿಗರು
ವಿಸ್ಮಯ ತುಂಬಿದ ಕಣ್ಣುಗಳು

ಅಲ್ಲೆಲ್ಲೋ ಆಕಾಶದೆತ್ತರಕ್ಕೆ ಚಿಮ್ಮಿ
ಮೋಹಕ ನೃತ್ಯ ಮಾಡುತ್ತಿರುವ ಸಂಗೀತ ಕಾರಂಜಿ
ಅದರ ಎದುರಿಗೆ ಪ್ಯಾರಿಸ್‍ನ ಒಂದು ತುಂಡು
ಇಲ್ಲಿ ತೇಲಿಬಂದಿದೆಯೇ ಎಂಬಂತಿರುವ ಚಿಕ್ಕ ಐಫಿಲ್

ಹೋಟೆಲ್‍ಗಳ ಕ್ಯಾಸಿನೋದಲ್ಲಿನ
ಜೂಜು ಯಂತ್ರಗಳ ಸದ್ದು
ಅದಕ್ಕೆ ಹಿಮ್ಮೇಳವಾಗಿ ಕಾಂಚಣದ
ಜಣಜಣದ ಸದ್ದು

ಕ್ಯಾಸಿನೋದ ಟೇಬಲ್‍ಗಳ ಮುಂದೆ
ದುಡ್ಡು ಪಣಕ್ಕಿಟ್ಟು ಕುಳಿತ ಪಂಟರ್‍ಗಳು
ಅವರಿಗೆಲ್ಲಾ ಮದ್ಯ ನೀಡುತ್ತಾ ಎಳಲಾಗದಂತೆ ಮಾಡುವ
ಆ ತುಂಡು ಲಂಗದ ಕ್ಯಾಸಿನೋದ ಹುಡುಗಿಯರು

ಜೂಜು ಗೆದ್ದವರ ಸಂಭ್ರಮದ ಕೇಕೆ
ಸೋತವರ ಹತಾಶೆ
ಇಬ್ಬರದು ಇನ್ನೊಮ್ಮೆ ಅದೃಷ್ಟ ಹುಡುಕುವ
ಹಣ ಗೆಲ್ಲುವ ಆಸೆ

ಇತ್ತ ನಡುಬೀದಿಯಲ್ಲಿ ಕಾಮವನ್ನು
ಸರಕಿನಂತೆ ಮಾರುತ್ತಿರುವ ಜನ
ಡಾಲರ್‍ ಯಾರನ್ನು ಯಾಕೇ ಯಾವ ಯಾವ
ದಂಧೆಗೆ ಇಳಿಸುತ್ತೋ ಯಾರಬಲ್ಲರು

ರಸ್ತೆಯಲ್ಲಿ ಚೆಲ್ಲಿದ ಬೆತ್ತಲೆ
ಕಾರ್ಡ್‍ಗಳನ್ನು ನೋಡುತ್ತಲ್ಲೇ
ಬೇರೆಡೆ ಮುಖ ತಿರುಗಿಸಿ ನಡೆವ ಸಭ್ಯರು
ಕುತೂಹಲದಿಂದ ಅದನ್ನೇ ನೋಡುವ ಪಡ್ಡೆಗಳು

ಮಧ್ಯ ರಾತ್ರಿ ಆಗಿ ಕತ್ತಲೆಗೆ ವಯಸ್ಸಾದರೂ
ಇನ್ನೂ ಜಗಮಗಿಸುತ್ತಿರುವ ಬೀದಿಗಳು
ಜಣಜಣಿಸುತ್ತಿರುವ ಕ್ಯಾಸಿನೋಗಳು
ಹರಿಯುತ್ತಲೇ ಇರುವ ಮಧ್ಯ ದ್ರವಗಳು

ಸ್ಪಲ್ಪ ಹೊತ್ತಿನಲ್ಲಿ ಸೂರ್ಯ ಎದ್ದಾಗ
ಮದವೇರಿದ ಬೀದಿಗಳಿಗೆ ನಿದ್ದೆಯ ಮಂಪು
ಮಗ್ಗಲು ಬದಲಾಯಿಸಿ ಮಲಗುತ್ತದೆ
ಲಾಸ್ ವೇಗಾಸ್ ಎನ್ನುವ ಆ ಮಾಯನಗರಿ !