Thursday, December 30, 2010

ಸಹಾಯ ಹಸ್ತಕ್ಕೆ ನಮನ

ಕೀನ್ಯಾ ದೇಶದ ಹಲವಾರು ಜಲಾವೃತ ಊರುಗಳನ್ನು ತಲುಪುವುದು ದುಸ್ಸಾಹಸ. ಈ ನದಿಗಳಲ್ಲಿ ಯಾವಾಗ ಬೇಕಾದರೂ ಬರಬಹುದಾದ ಕ್ಷಿಪ್ರ ಪ್ರವಾಹ. ಅದರ ಜೊತೆ ಆ ನದಿಗಳು ಮೊಸಳೆಗಳಿಂದ ತುಂಬಿವೆ. ಈ ನದಿಗಳಿಗೆ ಸೇತುವೆಗಳಿಲ್ಲ. ಇಂತಹ ಪ್ರದೇಶಗಳಿಗೆ ಸ್ವಯಂಸೇವಕರಾಗಿ ಬಂದ ಅಮೇರಿಕನ್ ದಂಪತಿಗಳೊಬ್ಬರು ಅಂತಹ ನದಿಯೊಂದರಲ್ಲಿ ಕೊಚ್ಚಿಕೊಂಡು ಹೋಗುತ್ತಾರೆ. ಅದಾಗಿ ಸುಮಾರು ೧೩ ವರ್ಷದ ನಂತರ ಆ ದಂಪತಿಗಳ ಮಗ ಅದೇ ಊರಿಗೆ ಮರಳಿ ಬರುತ್ತಾನೆ. ತನ್ನಂತೆ ಇತರರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಳ್ಳಬಾರದೆಂದು, ತನ್ನ ತಂದೆ-ತಾಯಿಯನ್ನು ನುಂಗಿದ ನದಿಗೆ ಅಡ್ಡಲಾಗಿ ಸೇತುವೆ ಕಟ್ಟುತ್ತಾನೆ.

ನಂತರ ಅದೇ ದೇಶದಲ್ಲೇ ಉಳಿದು ಅದೇ ತರ ಬೇರೆ ಜಲಾವೃತ ಊರುಗಳಿಗೆ ಸೇತುವೆ ಕಟ್ಟಲು ತೊಡಗುತ್ತಾನೆ. ಸ್ಥಳೀಯರ ಸಹಕಾರದಿಂದ ಇಲ್ಲಿಯವರಿಗೆ ಸುಮಾರು ೪೫ ಸೇತುವೆಗಳು ಕಟ್ಟಿದ್ದಾನೆ.ಈ ಊರುಗಳಿಗೆಲ್ಲಾ ಹೊರಜಗತ್ತಿನ ಸಂಪರ್ಕಕ್ಕೆ ಎಕೈಕ ಕೊಂಡಿಯಾಗಿವೆ ಈ ಸೇತುವೆಗಳು. ವಾಣಿಜ್ಯ, ಉದ್ಯೋಗ, ಶಿಕ್ಷಣದ ಕ್ಷೇತ್ರಗಳಲ್ಲಿ ಸ್ಪಲ್ಪ ಪ್ರಗತಿಗೆ ಈ ಸೇತುವೆಗಳು ಪಾಲುದಾರರಾಗಿವೆ.

ಆತನ ಹೆಸರು ಡೇವಿಡ್ ಕಕುಕೊ.

***************

ಡ್ಯಾನ್ ವಾಲ್‍ರತ್ ಮನೆಗಳನ್ನು ಕಟ್ಟಿಕೊಡುವ ವೃತ್ತಿಯಲ್ಲಿರುವವನು. ತನ್ನ ಸ್ನೇಹಿತನೊಬ್ಬನ ಮನೆ ನವೀಕರಣಕ್ಕೆ ಹೋದಾಗ, ಸ್ನೇಹಿತನ ಮಗ ಇರಾಕ್ ಯುದ್ಧದಲ್ಲಿ ಗಾಯಾಳುವಾಗಿ ಮರಳಿದ ದೃಶ್ಯ ನೋಡುತ್ತಾನೆ. ಈಡೀ ಕುಟುಂಬಕ್ಕೆ ಆಸರೆಯಾಗಿದ್ದ ಮಗ ಈಗ ಸಂಪೂರ್ಣ ಜರ್ಜಿತನಾಗಿ ಮರಳಿ ಬಂದದ್ದು ನೋಡಿ ಮನ ಮರುಗುತ್ತದೆ. ಆತನ ಕುಟುಂಬ ಇರುವ ಮನೆಯನ್ನು ಆವನಿಗೆ ಅನುಕೂಲವಾಗುವಂತೆ ಮಾರ್ಪಾಡಿಸಲು ಡ್ಯಾನ್‍ನನ್ನು ಕರೆದಿರುತ್ತಾರೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವ - ಅಂಗಗಳನ್ನು ಕಳೆದುಕೊಂಡು ಈಡೀ ಜೀವನ ಬದುಕುವ ಸೈನಿಕರಿಗೆ ಅವರ ಕುಟುಂಬದವರಿಗೆ ಏನಾದರೂ ಸಹಾಯ ಮಾಡಬೇಕೆಂದು ಅಲ್ಲೇ ನಿರ್ಧಾರ ಮಾಡುತ್ತಾನೆ. ಆ ಮನೆಯನ್ನು ಸಂಪೂರ್ಣವಾಗಿ ಮಾರ್ಪಾಡಿಸುತ್ತಾನೆ, ಏನೂ ದುಡ್ಡು ತೆಗೆದುಕೊಳ್ಳದೇ..

ನಂತರ ಯುದ್ಧದಿಂದ ಮರಳಿ ಬರುವ ಸೈನಿಕರಿಗೆ ಉಚಿತವಾಗಿ ಮನೆಗಳನ್ನು ಕಟ್ಟಿಸಿ ಕೊಡತೊಡಗುತ್ತಾನೆ. ಯುದ್ಧದಿಂದ ಮರಳಿ ಗಾಯಾಳುಗಳಾಗಿ, ಅಂಗವಿಹನರಾಗಿ ತಮ್ಮ ಜೀವನ ಸಾಗಿಸಿಲಿಕ್ಕೆ ಹೋರಾಡುವ ಈ ಯೋಧರಿಗೆ, ಸ್ವಂತ ಮನೆ ಒದಗಿಸಿ ಅವರ ಪರಿಶ್ರಮ ಕಡಿಮೆ ಮಾಡುತ್ತಿದ್ದಾನೆ.

*****************

ಕೀನ್ಯಾ ಮತ್ತು ಅಫ್ರಿಕಾದ ಇತರೆ ಹಲವು ದೇಶಗಳ ಮನೆಗಳಲ್ಲಿ, ಅಡುಗೆ ಮಾಡಲು ಮತ್ತು ರಾತ್ರಿ ದೀಪಕ್ಕೆ ಸೀಮೆ ಎಣ್ಣೆಯೊಂದೇ ಆಧಾರ. ಶಾಲಾಮಕ್ಕಳಿಗೆ ಓದಲು ಸೀಮೆ ಎಣ್ಣೆ ಬುಡ್ಡಿ. ರಾತ್ರಿ ಸೀಮೆ ಎಣ್ಣೆ ಉರಿಸಿದರೆ ಮರುದಿನಕ್ಕೆ ಏನೂ ಇಲ್ಲ. ಮತ್ತೆ ಸೀಮೆ ಎಣ್ಣೆ ಕೊಳ್ಳಬೇಕೆಂದರೆ , ಅಂದಿನ ಅನ್ನಕ್ಕೆ ಬೇಕಾದ ದುಡ್ಡು ಕೊಡಬೇಕು. ಅದಕ್ಕೆ ಬಹುತೇಕ ಮನೆಗಳಲ್ಲಿ ರಾತ್ರಿ ಸೀಮೆ ಎಣ್ಣೆ ಉಪಯೋಗ ಸೀಮಿತ. ಮಕ್ಕಳು ಓದು ಕುಂಟಿತ.

ಇದಲ್ಲೆವನ್ನೂ ನೋಡಿದ ಇವಾನ್ಸ್ ವಡಂಗೊ ಇದಕ್ಕೆ ಪರಿಹಾರ ಕಂಡುಕೊಳ್ಳಲು ಹಿಡಿದ ದಾರಿ ವಿಶಿಷ್ಟ. ತನ್ನ ಅನ್ವೇಷಣೆಯಿಂದ ಕಡಿಮೆ ವೆಚ್ಚದಲ್ಲಿ ತಯಾರಿಸಬಹುದಾದ ಸೌರ್ಯಶಕ್ತಿ ಚಲಿತ ದೀಪಗಳನ್ನು ಕಂಡುಹಿಡಿದಿದ್ದಾನೆ. ೨೩ ವರ್ಷದ ಇವಾನ್ಸ್ ವಡಂಗೊ ಇಲ್ಲಿಯವರಿಗೆ ೧೦೦೦೦ ಸೌರ್ಯ ದೀಪಗಳನ್ನು ತಯಾರಿಸಿ ಉಚಿತವಾಗಿ ಹಂಚಿದ್ದಾನೆ.

ಇದರಿಂದ ಮಕ್ಕಳ ಓದು, ಸೀಮೆ ಎಣ್ಣೆಗಾಗಿ ಪಡುವ ಕಷ್ಟ ಸ್ಪಲ್ಪ ತಪ್ಪಿಸಬಹುದೆಂಬ ಇವಾನ್ಸ್‍ಗೆ ವಿಶ್ವಾಸವಿದೆ.

*********************

ವರ್ಷಕ್ಕೆ ಸುಮಾರು ೧೦ ರಿಂದ ೧೫ ಸಾವಿರ ಹೆಣ್ಣುಮಕ್ಕಳನ್ನು ನೇಪಾಳದ ಗಡಿಯಿಂದ ಭಾರತಕ್ಕೆ ವೇಶ್ಯಾಟನೆಗೆ ಸಾಗಿಸಲಾಗುತ್ತದಂತೆ. ಒಮ್ಮೆ ಈ ಸುಳಿಯೊಳಗೆ ಬಿದ್ದವರು, ಅಲ್ಲಿನ ನಿತ್ಯ ಹಿಂಸೆ, ವೇದನೆ, ರೋಗಗಳಿಂದ ಮರಳಿ ಬರುವುದು ಅಸಾಧ್ಯ. ಅಲ್ಲಿಂದ ಮರಳಿ ಬಂದರೂ, ಸಮಾಜದಲ್ಲಿ ಅವರು ಹೊರಗಿನವರು.

ಇಂತಹ ವೇದನೆಯಲ್ಲಿ ಬೇಯುತ್ತಿರುವ ಹೆಣ್ಣುಮಕ್ಕಳಿಗೆ ಆಸರೆಯಾಗಿ ಕಾಪಾಡುತ್ತಿರುವ ೬೧ ವರ್ಷದ ಮಹಿಳೆ ಅನುರಾಧ ಕೊಯಿರಾಲ.

ಇಲ್ಲಿಯವರೆಗೆ ಸುಮಾರು ಅಂತಹ ೪೦೦ ಹೆಣ್ಣುಮಕ್ಕಳನ್ನು ಕಾಪಾಡಿ ತಮ್ಮ ’ಮೇಟಿ ನೇಪಾಳ’ ದಲ್ಲಿ ಆಶ್ರಯ ನೀಡಿದ್ದಾರೆ. ಆಶ್ರಯದ ಜೊತೆ ಅವರಿಗೆ ಬೇಕಾದ ಶಿಕ್ಷಣ, ತರಬೇತಿ ಎಲ್ಲಕ್ಕಿಂತ ಹೆಚ್ಚಾಗಿ ಸಾಂತ್ವನ ನೀಡಿದ್ದಾರೆ. ಇವರಲ್ಲಿ ಏಡ್ಸ್‍ನಿಂದ ಬಳಲುತ್ತಿರುವ ಅನೇಕರಿಗೆ ಚಿಕಿತ್ಸೆ ಮತ್ತು ಅವರ ಕೊನೆಯ ದಿನಗಳ ಮನೆಯಾಗಿದ್ದಾರೆ.

ಇದು ಅಲ್ಲದೇ ನೇಪಾಳದ ಹಳ್ಳಿಗಳಲ್ಲಿ ಉದ್ಯೋಗದ ಅಮೀಷ ತೋರಿಸಿ ಸಾಗಿಸುವುದರ ಬಗ್ಗೆ ಜನಜಾಗೃತಿ ಮೂಡಿಸುತ್ತಿದ್ದಾರೆ.

*********************

ಮಾನವತೆ ಸಕಾರ ಎತ್ತಿದಂತೆ ಇರುವ ಈ ಮಹನೀಯರು, ತಮ್ಮ ವೈಯುಕ್ತಿಕ ಬದುಕನ್ನು ಮೀರಿ, ತಮ್ಮ ಸುತ್ತಲಿನ ಜನರಿಗೆ ಒಳಿತು ಮಾಡುವ ಕಾಯಕದಲ್ಲಿ ತೊಡಗಿದವರು. ಇವರಿಗೆಲ್ಲಾ ಬೇಕಾಗಿದ್ದರೆ ತಮ್ಮ ಜೀವನ ತಾವು ನೋಡಿಕೊಂಡು ತಮ್ಮ ಪಾಡಿಗೆ ತಾವು ಇರಬಹುದಿತ್ತು. ಆದರೆ ಅವರು ಆರಿಸಿಕೊಂಡ ದಾರಿ ಬೇರೆಯಾಗಿತ್ತು. ಚಿಕ್ಕ ಚಿಕ್ಕ ಹೆಜ್ಜೆಗಳಿಂದ ಶುರುಮಾಡಿದ ಅವರ ಸೇವೆ ಹೆಮ್ಮರವಾಗಿ ಬೆಳೆದು ನಿಂತಿವೆ.

ಮಹಾತ್ಮ ಗಾಂಧೀಜಿ ಹೇಳಿದಂತೆ ’Be the change you want to see’.

ಹೊಸ ವರುಷದಲ್ಲಿ ಎಲ್ಲರಿಗೂ ಶುಭವಾಗಲಿ.

ಹಾಗೇ ಅಸಹಾಯಕರಿಗೆ-ನೊಂದವರಿಗೆ ಸಾಂತನ್ವದ ಮಾತುಗಳು ಮತ್ತು ಸಹಾಯ ಹಸ್ತ ಚಾಚುವ ಮನಸ್ಸು ನಮ್ಮದಾಗಲಿ..

Monday, November 29, 2010

ಪರೋಪಕಾರ್ಥಂ ಇದಂ ಶರೀರಂ

ಮೆಕ್ಸಿಕೋ ದೇಶ ದಿನನಿತ್ಯ ನರಳುತ್ತಿರುವುದು ಡ್ರಗ್ಸ್ ಮಾಫಿಯಾದ ಕಪಿಮುಷ್ಟಿಯಲ್ಲಿ. ಸರ್ಕಾರ ಡ್ರಗ್ಸ್ ಮಾಫಿಯಾ ವಿರುದ್ಧ ಯುದ್ಧ ಶುರುಮಾಡಿ ವರ್ಷಗಳೇ ಕಳೆದಿದ್ದರೂ, ಮಾಫಿಯಾದ ಹಾವಳಿ ಕಡಿಮೆಯೇನು ಆಗಿಲ್ಲ. ಗ್ಯಾಂಗ್ ವಾರ್‌ಗಳು ಮತ್ತು ಪೋಲಿಸ್‍ ವಿರುದ್ಧ ಹೋರಾಟದಲ್ಲಿ ನಿತ್ಯವೂ ಹೆಣಗಳು ಉರುಳುತ್ತಲೇ ಇವೆ. ಜೌರಿಜ್ ಎಂಬ ಪಟ್ಟಣವೊಂದರಲ್ಲೇ ೨೦೦೭ ರಿಂದ ಇಲ್ಲಿಯವರೆಗೇ ಸುಮಾರು ೬೦೦೦ ಜನ ಹತರಾಗಿದ್ದಾರೆ.

೭೪ ವರ್ಷದ ಅಜ್ಜಿಯೊಬ್ಬಳು, ಹಿಂಸೆಯಲ್ಲಿ ಬೇಯುತ್ತಿರುವ ಈ ನಗರಕ್ಕೆ ನಿತ್ಯವೂ ತೆರಳಿ ಗಾಯಗೊಂಡವರ ಸೂಶ್ರುಷೆ ಮಾಡುವಲ್ಲಿ ಶ್ರಮಿಸುತ್ತಿದ್ದಾಳೆ. ಆ ಅಜ್ಜಿ ಕಟ್ಟಿದ ಅಸ್ಪತ್ರೆಯಲ್ಲಿ ಇಲ್ಲಿಯವರೆಗೆ ಸಾವಿರಾರು ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ನಿತ್ಯದ ಹಿಂಸಾಚಾರದಲ್ಲಿ ತನ್ನ ಅನೇಕ ಸ್ನೇಹಿತ-ಬಂಧುಗಳನ್ನು ಕಳೆದುಕೊಂಡಿದ್ದರೂ ಆ ಹಿರಿಯ ವಯಸ್ಸಿನ ಮಹಿಳೆ ತನ್ನ ಸೇವೆಯನ್ನು ಚಾಚು ತಪ್ಪದೆ ಮಾಡುತ್ತಿದ್ದಾಳೆ.

ಅದರ ಜೊತೆ ಅಲ್ಲಿನ ಮಹಿಳೆಯರ ಮತ್ತು ಮಕ್ಕಳ ಆರೋಗ್ಯಕ್ಕೆ ತನ್ನ ಆಸ್ಪತ್ರೆಯಲ್ಲಿ ವಿಶೇಷ ಸವಲತ್ತು ಕಲ್ಪಿಸಿದ್ದಾಳೆ. ವಿಶೇಷವಾಗಿ ಗರ್ಭಿಣಿ ಸ್ತ್ರೀ ಮತ್ತು ನವಜಾತ ಶಿಶುಗಳ ಪಾಲನೆಯಲ್ಲಿ ತೊಡಗಿಸಿಕೊಂಡಿದ್ದಾಳೆ.

ಕಳೆದ ೩೫ ವರ್ಷದಿಂದ ಆ ನಗರಕ್ಕೆ ಬ್ಯಾಂಡೇಜ್ ಹಾಕುತ್ತಿರುವ ಅಜ್ಜಿಯ ಹೆಸರು - ಗೊಡಲುಪ್ ಲಿ ವೆಗಾ.

********************

ಮಧುರೆಯ ನಾರಾಯಣ ಕೃಷ್ಣನ್ ಪಂಚತಾರ ಹೋಟೆಲೊಂದರಲ್ಲಿ ಮುಖ್ಯ ಚೆಫ್ (ಬಾಣಾಸಿಗ)ನಾಗಿ ಕೆಲಸ ಮಾಡುತ್ತಿದ್ದವನು. ಸ್ವಿಟ್ಸರ್‌ಲೆಂಡ್‌ನಲ್ಲಿ ಅವನು ಆಸೆಪಟ್ಟ ಕೆಲಸವೂ ಸಿಕ್ಕಿತ್ತು. ಅಲ್ಲಿಗೆ ಹೋಗುವದಕ್ಕಿಂತ ಮುಂಚೆ ತನ್ನ ಕುಟುಂಬವನ್ನು ಮಾತಾಡಿಸಲು ತನ್ನೂರಿಗೆ ಹೋದವನು ದಾರಿಯಲ್ಲಿ ಕಂಡ ದೃಶ್ಯ ನೋಡಿ ಅವಕ್ಕಾದನು. ವೃದ್ಧನೊಬ್ಬ ಹಸಿವೆಯಿಂದ ತನ್ನ ವಿಸರ್ಜನೆಯನ್ನು ತಾನೇ ತಿನ್ನುತ್ತಿರುವ ದೃಶ್ಯ ಮನ ಕಲಕಿತು. ತನ್ನ ಹೋಟೆಲ್ ನೌಕರಿ ಬಿಟ್ಟು- ಸ್ವಿಟ್ಸರ್‌ಲೆಂಡ್‌ನ ಕೆಲಸದ ಆಮಂತ್ರಣವನ್ನು ತಿರಸ್ಕರಿಸಿದರು. ೨೦೦೩ರಲ್ಲಿ ತಾನು ಗಳಿಸಿದ ಸ್ವಂತ ಹಣದಿಂದ ’ಅಕ್ಷಯಾ ಟ್ರಸ್ಟ್’ ಶುರುಮಾಡಿ, ದೀನರ ಸಹಾಯಕ್ಕೆ ನಿಂತರು.

ದಿನ ನಿತ್ಯವೂ ತನ್ನ ಮನೆಯಲ್ಲಿ ಅಡುಗೆ ಮಾಡಿಕೊಂಡು ತನ್ನ ವ್ಯಾನ್‍ನಲ್ಲಿ ಹಾಕಿಕೊಂಡು ನಾರಾಯಣ ಹಸಿದವರನ್ನು ಹುಡುಕಿಕೊಂಡು ಹೋಗುತ್ತಾರೆ. ಮಾನಸಿಕ ಅಸ್ವಸ್ಥರು, ವಯಸ್ಸಾಗಿ ಮನೆಯಿಂದ ಹೊರಗಟ್ಟಿಸಿಕೊಂಡವರು, ಯಾವುದೋ ಪಾಳು ಕಟ್ಟಡಗಳಲ್ಲಿರುವವರು..ಎಲ್ಲರ ಬಳಿಗೆ ಹೋಗಿ ಬಿಸಿಯೂಟ ಮಾಡಿಸಿಬರುತ್ತಾರೆ. ಹಾಗೆಯೇ ತನ್ನ ಜೊತೆಯಲ್ಲಿ ಬಾಚಣಿಕೆ, ಕತ್ತರಿ, ಶೇವಿಂಗ್ ಸೇಟ್ ಒಯ್ಯುವ ನಾರಾಯಣ್ ಆ ನತದೃಷ್ಟರ ಕ್ಷೌರಿಕನಾಗಿಯೂ ಕೆಲಸ ಮಾಡುತ್ತಾರೆ. ದಿನವೂ ಸುಮಾರು ೪೦೦-೫೦೦ ಜನರಿಗೆ ಅನ್ನ ನೀಡುತ್ತಿರುವ ನಾರಾಯಣ್‍ಗೆ ೨೯ ವರ್ಷ.

**********************

ಮಾದಕ ವಸ್ತುಗಳ ಸೇವನೆಗಾಗಿ ಜೈಲಿಗೆ ಹೋದ ಸೂಸನ್ ಬರ್ಟನ್ ಅಲ್ಲಿಂದ ಹೊರಬಂದಾಗ, ಅಪರಾಧ ಲೋಕ ಕೈಬೀಸಿ ಕರೆಯುತಿತ್ತು. ಅದರ ಕಟು ಅನುಭವವಿದ್ದ ಸೂಸನ್, ತನ್ನಂತೆ ಜೈಲಿನಿಂದ ಶಿಕ್ಷೆ ಅನುಭವಿಸಿ ಹೊರಬರುವ ಮಹಿಳೆಯರಿಗೆ ಏನಾದರೂ ಸಹಾಯ ಮಾಡಬೇಕೆನ್ನುವ ಉದ್ದೇಶದಿಂದ ತನ್ನ ಮನೆಯನ್ನು ಅವರಿಗೊಸ್ಕರ ತೆರೆದಿಟ್ಟಳು. ಜೈಲಿನಿಂದ ಹೊರಬಂದ ಮಹಿಳೆಯರನ್ನು ತಾನೇ ಹೋಗಿ ಜೈಲಿನ ಗೇಟಿನಿಂದ ತನ್ನ ಕರೆತಂದು ಅವರಿಗೆ ಸಾಂತ್ವನ ಹೇಳಿದಳು. ಆ ಮಹಿಳೆಯರ ಮುಂದಿನ ಜೀವನಕ್ಕೆ ಬೇಕಾದ ವೃತ್ತಿ ತರಬೇತಿ, ಕೌನ್ಸಿಲಿಂಗ್, ಬೆಂಬಲವನ್ನು ನೀಡುತ್ತಾ ಬಂದಿದ್ದಾಳೆ.

ಇಲ್ಲಿಯವರೆಗೆ ಸೂಸನ್ ತರಬೇತಿ ನೀಡಿದ ಸುಮಾರು ೫೦೦ ಮಹಿಳೆಯರು ತಮ್ಮ ಕಾಲಮೇಲೆ ನಿಂತುಕೊಂಡು ಮತ್ತೆ ಅಪರಾಧಿ ಲೋಕದ ಸುಳಿಗೆ ಸಿಲುಕಿಲ್ಲ. ಇದರ ಜೊತೆ ತನ್ನ ಊರಿನಲ್ಲಿ ಮಹಿಳೆಯರ ಮತ್ತು ಮಕ್ಕಳ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾಳೆ.

*************************

ಕಂಬೋಡಿಯ ದೇಶ ಅಂತರಿಕ ಯುದ್ಧದಲ್ಲಿ ಸುಮಾರು ೩ ದಶಕಗಳ ಕಾಲ ನಲುಗಿತು. ಆ ಸಮಯದಲ್ಲಿ ಸುಮಾರು ೧೫ ಲಕ್ಷ ಜನ ಹತರಾಗಿದ್ದರು. ದೇಶದ ತುಂಬೆಲ್ಲಾ ನೆಲಬಾಂಬ್‍(ಲ್ಯಾಂಡ್ ಮೈನ್)ಗಳನ್ನು ಹುದುಗಿಸಿ ಇಡಲಾಗಿತ್ತು.

ಮಿಲಿಟೆಂಟ್ ಪಡೆಗಳು ಕುಟುಂಬಗಳನ್ನು ಹತ್ಯೆ ಮಾಡಿ, ಚಿಕ್ಕ ಬಾಲಕರನ್ನು ಹೊತ್ಯೊಯ್ದು ಅವರಿಗೆ ತಮ್ಮ ಪಡೆಯಲ್ಲಿ ಸೇರಿಸಿಕೊಳ್ಳುತ್ತಿದ್ದರು. ಅಂತಹ ಒಬ್ಬ ಬಾಲ ಸೈನಿಕ - ಅಕಿರೋ. ೧೦ ವರ್ಷಕ್ಕೆ ಮಿಲಿಟೆಂಟ್ ಪಡೆಯಲ್ಲಿ ಬಲವಂತವಾಗಿ ಸೇರಿಸಲ್ಪಟ್ಟ ಅಕಿರೋ ತನ್ನ ಅರಿವು ಮೂಡುವ ವಯಸ್ಸಿಗಾಗಲೇ ಮಾಡಿದ ಹತ್ಯೆಗಳಿಗೆ ಲೆಕ್ಕವಿರಲಿಲ್ಲ.

ಕದನವೆಲ್ಲಾ ಮುಗಿದು ಶಾಂತಿ ಮರಳಿದಾಗ, ದೇಶಕ್ಕೆ ಕಾಡಿದ ಮುಂದಿನ ಸಮಸ್ಯೆ ನೆಲದಲ್ಲಿ ಹುದುಗಿಸಿಟ್ಟಿದ್ದ ನೆಲಬಾಂಬ್‍ಗಳು. ಸುಮಾರು ೨೦ ಸಾವಿರ ಜನ ನೆಲಬಾಂಬ್ ತುಳಿದು ಹತರಾಗಿದ್ದರು.

ಅಕಿರೋ ತಾನು ಅರಿವಿಲ್ಲದಂತೆ ಬಾಲ್ಯದಲ್ಲಿ ಮಾಡಿದ ಅಪರಾಧಗಳ ಪ್ರಾಯಶ್ಚಿತಕ್ಕೆ ಹುಡುಕಿಕೊಂಡ ಹಾದಿ - ನೆಲಬಾಂಬ್ ನಿಷ್ಕ್ರಿಯಗೊಳಿಸುವುದು. ಇಲ್ಲಿಯವರೆಗೆ ಅಕಿರೋ ಸುಮಾರು ೫೦ ಸಾವಿರ ನೆಲಬಾಂಬ್‍ಗಳನ್ನು ಪತ್ತೆ ಹಚ್ಚಿ ನಿಷ್ಕ್ರಿಯಗೊಳಿಸಿದ್ದಾನೆ. ತನ್ನದೇ ಒಂದು ತಂಡ ಕಟ್ಟಿಕೊಂಡು, ಈಡೀ ದೇಶದ ಪ್ರತಿ ಅಂಗುಲವನ್ನೂ ತಪಾಸಿಸುತ್ತಿದ್ದಾನೆ.

*****************************

ಥ್ಯಾಂಕ್ಸ್ ಗೀವಿಂಗ್ ಎಂಬುದು ಅಮೇರಿಕೆಯ ವಿಶಿಷ್ಟ ಆಚರಣೆ. ಪ್ರತಿ ವರ್ಷ ನವೆಂಬರ್ ಕೊನೆಯ ಗುರುವಾರ ಆಚರಿಸಲ್ಪಡುವ ಈ ಹಬ್ಬದ ಮೂಲ ಧೇಯೋದ್ದೇಶ ಹೆಸರೇ ಹೇಳುವಂತೆ - ವಂದನೆ ಅರ್ಪಿಸುವುದು. ಇಂತಹ ಥ್ಯಾಂಕ್ಸ್ ಗೀವಿಂಗ್ ದಿನ ’ಸಿಎನ್‍ಎನ್’ ಶುರುಮಾಡಿದ ವಿಭಿನ್ನ ಕಾರ್ಯಕ್ರಮ - ’ಸಿಎನ್‍ಎನ್ ಹೀರೋ’. ಪ್ರಪಂಚದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳನ್ನು ಗುರುತಿಸಿ ಅವರೆಲ್ಲರಿಗೂ ಕರೆದು ಸನ್ಮಾನ ಮಾಡುವುದು ಈ ಕಾರ್ಯಕ್ರಮದ ಉದ್ದೇಶ. ಕಳೆದ ಮೂರು ವರ್ಷದಿಂದಲೂ ನಡೆಯುತ್ತಿರುವ ಈ ಕಾರ್ಯಕ್ರಮ ವಿಶಿಷ್ಟ ಮತ್ತು ಸ್ಪೂರ್ತಿದಾಯಕ.

ಗೊಡಲುಪ್, ನಾರಾಯಣ್, ಸೂಸೆನ್, ಅಕಿರೋ - ಈ ಎಲ್ಲಾ ಅದ್ಭುತ ವ್ಯಕ್ತಿಗಳೆಲ್ಲರೂ ಈ ವರ್ಷದ ’ಸಿಎನ್‍ಎನ್ ಹೀರೊ’ ಗಳ ಪಟ್ಟಿಯಲ್ಲಿರುವವರು.

ತಮ್ಮ ಅವಿರತ ಪ್ರಯತ್ನದಿಂದ, ತಮ್ಮ ನಿಸ್ವಾರ್ಥ ಸೇವಾಮನೋಭಾವದಿಂದ ಸಮಾಜದ ಸ್ವಾಸ್ಥಕ್ಕಾಗಿ ಶ್ರಮಿಸುತ್ತಿರುವ ಈ ಹೀರೋಗಳನ್ನು ನೋಡಿ ಕಣ್ಣುಗಳು ತುಂಬಿ ಬಂದವು. ಮಾನವತೆ ಇನ್ನೂ ಉಸಿರಾಡುತ್ತದೆ ಎಂಬ ಸಮಾಧಾನ. ಯಾವಾಗಲೂ ನಾನು-ನನ್ನದೆನ್ನುವ ಸುಳಿಯಲ್ಲಿ ಇರುವ ನಾವುಗಳು ಈ ಮಟ್ಟಕ್ಕೆ ಏರುವುದು ಯಾವಾಗ ಎಂಬ ಪ್ರಶ್ನೆ ಕಾಡತೊಡಗಿತ್ತು.

(ಮುಂದಿನ ಕಂತಿನಲ್ಲಿ ಇನ್ನೂ ಹಲವಾರು ಮಾನವೀಯ-ಸ್ಪೂರ್ತಿದಾಯಕ ಕತೆಗಳು ಮತ್ತು ಉಳಿದ ಹೀರೋಗಳ ಪರಿಚಯ)

Sunday, October 31, 2010

ಎಲೆನ್

ಆ ಚಿಕ್ಕ ದೋಣಿಯಲ್ಲಿ ತನ್ನ ತಾಯಿ ಮತ್ತು ಇನ್ನು ಕೆಲವರೊಂದಿಗೆ ಕ್ಯೂಬಾವೆಂಬ ಆ ದ್ವೀಪದೇಶದಿಂದ ಪಲಾಯನ ಮಾಡಿ, ಅಮೇರಿಕೆಗೆ ಹೊರಟಾಗ, ಎಲೆನ್ ಎಂಬ ಹೆಸರಿನ ಹುಡುಗನಿನ್ನೂ ೫ ವರ್ಷದವನು. ಆದರೆ ದೋಣಿಯ ಯಂತ್ರ ಕೆಟ್ಟು, ನೀರು ತುಂಬಿಕೊಂಡು ಸಮುದ್ರದಲ್ಲಿ ಮುಳುಗತೊಡಗಿದಾಗ, ಆತನ ತಾಯಿ ಅವನನ್ನು ರಬ್ಬರ್ ಟ್ಯೂಬ್‍ವೊಂದರಲ್ಲಿ ತೇಲಿಬಿಡುತ್ತಾಳೆ. ದೋಣಿಯಲ್ಲಿದ್ದ ಎಲ್ಲರೂ ನೀರು ಪಾಲಾಗುತ್ತಾರೆ. ರಬ್ಬರ್ ಟ್ಯೂಬಿನಲ್ಲಿ ಸಮುದ್ರದಲ್ಲಿ ತೇಲುತ್ತಿದ್ದ ಬಾಲಕನನ್ನು ಅಮೇರಿಕನ್ ಮೀನುಗಾರರಿಬ್ಬರ ಕಣ್ಣಿಗೆ ಬಿದ್ದು, ಅಲ್ಲಿಂದ ಅಮೇರಿಕೆ ಗಡಿ ರಕ್ಷಣ ಪಡೆ ತಲುಪುತ್ತಾನೆ.

ಅಮೇರಿಕೆಯ ವಲಸೆ ಇಲಾಖೆ ಆ ಬಾಲಕನನ್ನು , ಅಮೇರಿಕೆದ ಮೀಯಾಮಿಯಲ್ಲಿಯೇ ಇದ್ದ ಆತನ ಹತ್ತಿರದ ಸಂಬಂಧಿಯೊಬ್ಬರ ವಶಕ್ಕೆ ನೀಡುತ್ತಾರೆ. ಈ ಹುಡುಗನ ತರವೇ, ಕ್ಯೂಬಾದಿಂದ ವಲಸೆ ಬಂದು ಅಮೇರಿಕದ ಆಶ್ರಯ ಕೋರಿ ಬಹಳಷ್ಟು ಕ್ಯೂಬನ್ ವಲಸೆಗಾರು ನೆಲವುರಿದ್ದು ಆ ಮೀಯಾಮಿಯಲ್ಲಿ. ಅವರೆಲ್ಲರ ಒಮ್ಮತ ಅಭಿಪ್ರಾಯದಂತೆ ಆ ಬಾಲಕನನ್ನು ತಮ್ಮೊಡನೆ ಅಮೇರಿಕದಲ್ಲೇ ಬೆಳಸುವುದೆಂದು ತೀರ್ಮಾನಿಸುತ್ತಾರೆ. ಅಮೇರಿಕದ ಸುದ್ಧಿಮಾಧ್ಯಮಗಳಲ್ಲಿ ಈ ಬಾಲಕನದೇ ಸುದ್ಧಿ.

ಇದಾಗಿ ಸ್ಪಲ್ಪ ದಿನಕ್ಕೆ ಕ್ಯೂಬಾದಿಂದ ಎಲೆನ್‍ನ ತಂದೆಯ ಪತ್ರ ಬರುತ್ತದೆ. ತನ್ನ ಮಗನನ್ನು ತನ್ನ ಇಚ್ಚೆಗೆ ವಿರುದ್ಧವಾಗಿ ತನ್ನ ಹೆಂಡತಿ ಕರೆದೊಯ್ಯದಳೆಂದು, ತನಗೆ ತನ್ನ ಮಗನನ್ನು ಒಪ್ಪಿಸಬೇಕೆಂದು ಮನವಿ ಮಾಡಿಕೊಂಡಿರುತ್ತಾನೆ. ಕ್ಯೂಬಾಕ್ಕೆ ಮರಳಿದರೆ ಆ ಹುಡುಗನಿಗೆ ಭವಿಷ್ಯವಿಲ್ಲವೆಂದು, ಆತನಿಗೆ ಅಮೇರಿಕೆದಲ್ಲಿಯೇ ಉಳಿಸಿಕೊಳ್ಳಬೇಕೆಂದು ಅಮೇರಿಕದ ಸಂಬಂಧಿಗಳ ವಾದ ಶುರುವಾಗುತ್ತದೆ.

ಕುಟುಂಬವೊಂದರ ವ್ಯಾಜ್ಯದಂತಿದ್ದ ಈ ಪ್ರಕರಣ, ಕ್ರಮೇಣ ಕ್ಯೂಬಾ-ಅಮೇರಿಕೆಯ ಪ್ರತಿಷ್ಠೆ ಪ್ರಶ್ನೆಯವರೆಗೆ ಬೆಳಯುತ್ತದೆ. ಹುಡುಗ ಸ್ಪಲ್ಪ ಸಮಯದಲ್ಲೇ ಸುದ್ಧಿಮಾಧ್ಯಮಗಳ ಪ್ರಿಯವಸ್ತುವಾಗುತ್ತಾನೆ. ಅನೇಕ ಅನಿರೀಕ್ಷಿತ ಸವಲತ್ತುಗಳು-ತಲೆನೋವುಗಳು ಅವನೆಡೆಗೆ ಬರತೊಡಗುತ್ತವೆ. ಒಂದು ದಿನ, ಎಲೆನ್ ಡಿಸ್ನಿಲ್ಯಾಂಡ್‍ ನೋಡಲು ಹೋದರೆ, ಮಗದೊಂದು ದಿನ ರಾಜಕೀಯದವರು ಎಲೆನ್‍ನನ್ನು ನೋಡಲು ಬರುತ್ತಾರೆ.

ಪ್ರಕರಣ ಕೋರ್ಟಿನ ಮೆಟ್ಟಲೇರಿ, ಮಗುವಿಗೆ ಅಮೇರಿಕ ಆಶ್ರಯ ನೀಡಬೇಕೆಂಬ ವಾದವನ್ನು ನ್ಯಾಯಾಲಯ ತಳ್ಳಿ ಹಾಕಿ, ಆತನನ್ನು ತಂದೆಯ ವಶಕ್ಕೆ ಒಪ್ಪಿಸಬೇಕೆಂದು ಆದೇಶಿಸುತ್ತದೆ. ಮೀಯಾಮಿಯ ಕ್ಯೂಬನ್ ವಲಸೆಗಾರರು ಇದ್ದಕ್ಕೆ ಭಾರೀ ವಿರೋಧ ವ್ಯಕ್ತಪಡಿಸುತ್ತಾರೆ. ಅಮೇರಿಕೆದ ಸಂಬಂಧಿಗಳು ನ್ಯಾಯಾಲಯದ ಮಾತನ್ನು ನಿರಾಕರಿಸಿ ಮಗುವನ್ನು ಮತ್ತೆ ಕ್ಯೂಬಾಕ್ಕೆ ಮರಳಿಸಲಿಕ್ಕೆ ಬಿಡುವುದಿಲ್ಲವೆಂದು ಪಟ್ಟುಹಿಡಿಯುತ್ತಾರೆ.
ಎಲ್ಲಾ ಸಂಧಾನಗಳು ವಿಫಲವಾದಾಗ, ಕಡೆಗೆ ಮಗುವನ್ನು ಕರೆತರೆಲು ಕ್ಷಿಪ್ರ ಪಡೆಯನ್ನು ನಿಯೋಜಿಸಲಾಗುತ್ತದೆ. ಅಕ್ಷರಶಃ ಮಗುವಿದ್ದ ಮನೆ ರಣರಂಗವಾಗುತ್ತದೆ. ಕ್ಯೂಬನ್ ವಲಸಿಗಾರರು ತೀವ್ರ ಪ್ರತಿರೋಧವೊಡ್ಡುತ್ತಾರೆ. ಕಡೆಗ ಕ್ಷಿಪ್ರ ಪಡೆ ಮನೆಯೊಳಗೆ ನುಗ್ಗಿ ಎಲೆನ್‍ನನ್ನು ಕರೆತರುತ್ತಾರೆ.

ಎಲೆನ್‍ನನ್ನು ವಶಕ್ಕೆ ಪಡೆದು ಅವನ ತಂದೆ ಮರಳಿ ಕ್ಯೂಬಾಕ್ಕೆ ಕರೆದೊಯ್ಯದಾಗ, ಆ ದೇಶದಾಂತ್ಯ ಭಾರೀ ಸಂಭ್ರಮ. ಮಗು ಕ್ಯೂಬಾ ಸರ್ಕಾರದ ಕಣ್ಮಣಿಯಾಗಿ ಬಿಡುತ್ತದೆ. ಖುದ್ದು ಕ್ಯೂಬಾದ ಅಧ್ಯಕ್ಷ ಫಿಡಲ್ ಕ್ಯಾಸ್ಟ್ರೋ ಎಲೆನ್ ಹುಟ್ಟುಹಬ್ಬಕ್ಕೆ ಆಗಮಿಸುತ್ತಾನೆ.

ಒಂದು ಕುಟುಂಬದ ಕಲಹವಾಗಿದ್ದ ಇದು, ಎರಡು ದೇಶಗಳ ನಡುವೆ ಚಕಮಕಿಗೆ ಕಾರಣವಾದದ್ದು ಹೇಗೆ ?

ಕ್ಯೂಬಾ ಮತ್ತು ಅಮೇರಿಕೆದ್ದು ಬಹಳ ಹಿಂದಿನಿಂದಲೂ ಸಂಘರ್ಷ ನಡದೇ ಇದೆ. ಕ್ಯೂಬಾದಲ್ಲಿ ರಕ್ತಕ್ರಾಂತಿ ನಡೆದು, ಫೀಡಲ್ ಕ್ಯಾಸ್ಟ್ರೋ ನೇತೃತ್ವದಲ್ಲಿ ಕಮ್ಯುನಿಷ್ಟ್ ಅಳ್ವಿಕೆ ಬಂದಾಗಿನಿಂದ, ಅಮೇರಿಕ ಆ ಸರ್ಕಾರ ಉರುಳಿಸಲು ಸತತ ಪ್ರಯತ್ನಪಟ್ಟಿತ್ತು. ಅದು ೧೯೬೨, ಶೀತಲ ಸಮರ ಪರಾಕಾಷ್ಟೆ ಮುಟ್ಟಿದ ವರ್ಷ. ಈಡೀ ಪ್ರಪಂಚ, ಅಮೇರಿಕ ಮತ್ತು ರಷ್ಯಾ ಎಂಬ ಎರಡು ಶಕ್ತಿಗಳಲ್ಲಿ ಹಂಚಿಹೋಗಿ, ನ್ಯೂಕ್ಲಿಯರ್ ಮಾರಕಾಸ್ತ್ರಗಳ ಪೈಪೋಟಿ ನಡೆಯುತ್ತಿದ್ದ ಸಮಯ. ಅಮೇರಿಕದ ಹಿತ್ತಲಲ್ಲೇ ಇದ್ದ ಕ್ಯೂಬಾವನ್ನು ರಷ್ಯಾ ತನ್ನ ಗುಂಪಿಗೆ ಸೆಳೆದುಕೊಂಡಿತು. ರಷ್ಯ ತನ್ನ ನ್ಯೂಕ್ಲಿಯರ್ ಕ್ಷಿಪಣಿ ನೆಲೆಗಳನ್ನು ಕ್ಯೂಬಾದಲ್ಲಿ ಸ್ಥಾಪಿಸಿತ್ತು. ಅಲ್ಲಿಂದ ಹಾರಿಸಿದ ಕ್ಷಿಪಣಿಗಳು ಈಡೀ ಅಮೇರಿಕೆಯನ್ನು ಧ್ವಂಸ ಮಾಡುವ ಶಕ್ತಿಹೊಂದಿದ್ದವು.

ಜಗತ್ತು ಅಣುಯುದ್ಧದ ಅಂಚಿಗೆ ಬಂದು ನಿಂತಿತ್ತು. ಅದೃಷ್ಟವಷಾತ್ ಸಂಧಾನ ಸಫಲವಾಗಿ ರಷ್ಯಾ ತನ್ನ ಕ್ಷಿಪಣಿಗಳನ್ನು ಕ್ಯೂಬಾದಿಂದ ಹಿಂದೆಗೆತಿತ್ತು. ಅಮೇರಿಕಾ ಕ್ಯೂಬಾದ ಮೇಲೆ ದಾಳಿ ಮಾಡುವುದಿಲ್ಲವೆಂದು ಘೋಷಿಸಿತ್ತು. ಅಂದಿನಿಂದ ಇಲ್ಲಿಯವರೆಗೆ ಕ್ಯೂಬಾ ಮತ್ತು ಅಮೇರಿಕೆಯ ಸಂಬಂಧ ಅಷ್ಟಕಷ್ಟೇ. ಅವಕಾಶ ಸಿಕ್ಕಾಗಲೆಲ್ಲಾ ಒಬ್ಬರೊನ್ನಬ್ಬರು ಹಣಿಯುವ ತವಕ. ಬಾಲಕ ಎಲೆನ್ ಪ್ರಕರಣ, ಅದಕ್ಕೆ ಒಂದು ಚಿಕ್ಕ ಉದಾಹರಣೆ ಅಷ್ಟೇ

ಕ್ಯೂಬಾದ ಜನರ ಸ್ಥಿತಿಗತಿ ಅಷ್ಟೇನೂ ಚೆನ್ನಾಗಿಲ್ಲವೆನ್ನುತ್ತವೆ ಮಾಧ್ಯಮಗಳು. ಅರ್ಥಿಕ ಸಮಸ್ಯೆಗಳು- ಸರ್ಕಾರದ ಅತಿರೇಕಗಳ ಬಗ್ಗೆ ಕ್ಯೂಬಾ ವಾಸಿಗಳಲ್ಲಿ ಅಸಮಾಧಾನವಿದೆ. ಹಾಗೆಯೇ ಭವಿಷ್ಯದ ಬಗ್ಗೆ ಚಿಂತೆಯಿದೆ. ಅವಕಾಶ ದೊರೆತಾಗ ಕ್ಯೂಬಾದಿಂದ ತಪ್ಪಿಸಿಕೊಂಡು ಅಮೇರಿಕೆಗೆ ತಲುಪಿ ಹೊಸ ಜೀವನ ಕಂಡುಕೊಳ್ಳುವುದು ಅನೇಕ ಕ್ಯೂಬನ್‍ರ ಹಂಬಲವಂತೆ.


ಎಲೆನ್ ಕ್ಯೂಬಾಕ್ಕೆ ಮರಳಿ ಹೋದಾಗ ಆತನಿಗೆ ೫ ವರ್ಷ. ನಂತರ ಅವನನ್ನು ಕ್ಯೂಬಾ ಸರ್ಕಾರ, ಮಾಧ್ಯಮಗಳಿಂದ ದೂರವೇ ಇಟ್ಟಿತ್ತು. ಏನಾದ ಆ ಹುಡುಗ ಎಂಬ ಪ್ರಶ್ನೆ ತುಂಬಾ ಜನರಲ್ಲಿತ್ತು. ಹತ್ತು ವರ್ಷದ ನಂತರ, ಕಳೆದ ತಿಂಗಳು ಕ್ಯೂಬಾದಿಂದ ಎಲೆನ್‍ನ ಹೊಸ ಪೋಟೋ-ಸುದ್ಧಿ ಬಂದಿವೆ. ಈಗ ೧೫ ವರ್ಷದ ಎಲೆನ್ ಹೈಸ್ಕೂಲ್ ಮುಗಿಸಿ, ಮಿಲಿಟರಿ ಶಾಲೆಯೊಂದಕ್ಕೆ ಸೇರಿದ್ದಾನೆ. ಹಾಗೆಯೇ ಯುವ ಕಮ್ಯುನಿಷ್ಟ್ ಪಕ್ಷದ ಸದಸ್ಯತ್ವ ಪಡೆದಿದ್ದಾನೆ.

ಇಲ್ಲಿಯವರೆಗೆ ಎಲೆನ್ ಸಾಗಿದ ಹಾದಿ ಬಹಳ ವಿಭಿನ್ನವಾದದ್ದು.

ಸನ್ನಿವೇಶ-ಸಮಯ ಯಾರನ್ನು ಎಲ್ಲೆಲ್ಲಿ ಕರೆದೊಯ್ಯುವುದೋ ಏನೋ...

Thursday, September 30, 2010

ಜೋನ್ಸ್ ಟೌನ್

ಬಹುಷಃ ಮನುಷ್ಯನ ಮನಸ್ಸಿನಷ್ಟು ನಿಗೂಢವಾದದ್ದು ಇನ್ನೊಂದು ಈ ಜಗತ್ತಿನಲ್ಲಿ ಇರಲಿಕ್ಕಿಲ್ಲ.

ಚಂದ್ರಯಾನ, ಎವೆರಷ್ಟ್ ಆರೋಹಣದಂತಹ ಊಹೆಗೆ ಮೀರಿದ ಅಸಾಧ್ಯತೆಗಳನ್ನು ಸಾಧಿಸಿದ ಮನಸ್ಸುಗಳು ಹಲವು.

ಆದರೆ ತರ್ಕಕ್ಕೆ ನಿಲುಕದ ಮನಸ್ಸುಗಳು ಕೆಲವು.ಅಂತಹ ವಿಚಿತ್ರ ಮನಸ್ಸುಗಳ ಒಂದು ಘೋರ ಕತೆ ಇತಿಹಾಸದ ಪುಟಗಳಿಂದ.

ಅಂದು ನವೆಂಬರ್ ೧೮, ೧೯೭೮. ೯೧೩ ಜನ ಅಮೇರಿಕನ್‍ರು ಗಯಾನದ ಕಾಡಿನಲ್ಲಿ ’ಸಾಮೂಹಿಕ ಆತ್ಮಹತ್ಯೆ’ ಮಾಡಿಕೊಂಡಿದ್ದಾರೆಂಬ ಭೀಕರ ಸುದ್ಧಿ ಎಲ್ಲೆಡೆ ತಲ್ಲಣವುಂಟು ಮಾಡಿತ್ತು. ಸತ್ತ ಅವರೆಲ್ಲರೂ ’ಪೀಪಲ್ಸ್ ಟೆಂಪಲ್’ ಹೆಸರಿನ ವಿಲಕ್ಷಣ ಗುಂಪೊಂದಕ್ಕೆ ಸೇರಿದವರಾಗಿದ್ದರು.

’ಜಿಮ್ ಜೇಮ್ಸ್’ ಹೆಸರಿನ ಆ ವ್ಯಕ್ತಿ ವರ್ಣಭೇದದ ದಿನಗಳಲ್ಲಿ, ೧೯೬೩ರಲ್ಲಿ ಎಲ್ಲಾ ವರ್ಣದವರನ್ನು ಸೇರಿಸಿ ಯಾವಾಗ ’ಪೀಪಲ್ಸ್ ಟೆಂಪಲ್’ ಹೆಸರಿನ ಚರ್ಚ್ ಶುರುಮಾಡಿದನೋ, ಅಲ್ಲಿಂದ ಈ ಕತೆ ತೆರೆದುಕೊಳ್ಳುತ್ತದೆ. ಜಿಮ್ ಜೇಮ್ಸ್ ಸಮಾಜದಲ್ಲಿ ತುಳಿತಕ್ಕೆ ಒಳಗಾದವರನ್ನು, ಜೀವನದಲ್ಲಿ ತುಂಬಾ ಹತಾಶೆಗೊಳಗಾದವರನ್ನು ತನ್ನ ಚರ್ಚ್‍ಗೆ ಸೆಳೆದುಕೊಳ್ಳುತ್ತಾನೆ. ಇದರ ಜೊತೆಗೆ ಸ್ಪರ್ಶ-ಪ್ರಾರ್ಥನೆಯಿಂದ ಕ್ಯಾನ್ಸರ್ ಗುಣ ಪಡಿಸುವುದು-ಅಂಧರಿಗೆ ಕಣ್ಣು ಬರುವಂತೆ ಮಾಡುವ ವಿದ್ಯೆ ತನಗಿದೆಯೆಂದು ಅಲ್ಲಿಂದೊಷ್ಟು ಹಣ ಮಾಡುತ್ತಾನೆ. ಹಣ ಬರತೊಡಗಿದನೆ ಸ್ಥಳೀಯ ರಾಜಕಾರಣಿಗಳ ಸಾಂಗತ್ಯ ಬೆಳಿಸಿಕೊಂಡು, ಎಲ್ಲರಿಗೂ ಬೇಕಾದವನಾಗುತ್ತಾನೆ. ನೋಡುನೋಡುತ್ತಲೇ ಅವನ ಚರ್ಚ್ ಇಂಡೀಯಾನಪೋಲಿಸ್‍ನಲ್ಲಿ ಬೆಳಯತೊಡಗುತ್ತದೆ. ಅದರ ಜೊತೆಗೆ ಅವನ ಹುಚ್ಚಾಟಗಳು ಬೆಳೆಯತೊಡಗುತ್ತವೆ.

ಪೀಪಲ್ಸ್ ಟೆಂಪಲ್‍ಗೆ ಸೇರಬಯಸುವವ ಸದಸ್ಯರಿಗೆ ತಮ್ಮ ನಿಷ್ಠೆ ಪ್ರದರ್ಶಿಸಲು ಕಠಿಣವಾದ ಪರೀಕ್ಷೆಗಳಿರುತ್ತವೆ.ಹೊಸದಾಗಿ ಸೇರಿದವರು ಚರ್ಚ್‍ಗೆ ಬೇಕಾದರೆ ವಂತಿಗೆ ನೀಡಬಹುದಾಗಿರುತ್ತದೆ.ಹೊಸ ಸದಸ್ಯರು ಕಾಲ ಕಳೆದಂತೆ ಚರ್ಚ್‍ಗೆ ಕೊಡುವ ವಂತಿಗೆಯೂ ಹೆಚ್ಚಾಗುತ್ತ ಹೋಗುತ್ತದೆ.ಕೊನೆಯ ಹಂತದಲ್ಲಿ ಅನೇಕ ಸದಸ್ಯರು ತಮ್ಮ ಆಸ್ತಿ-ಹಣ ಎಲ್ಲವನ್ನೂ ಜಿಮ್‍ಗೆ ನೀಡಿ ಅವನ ಇಚ್ಚೆಯಂತೆ ನಡೆಯುತೊಡಗುತ್ತಾರೆ.ಜಿಮ್ ಅವರಿಗೆಲ್ಲಾ ಚಿಂತೆಗಳಿಲ್ಲದ-ಕಷ್ಟನಷ್ಟಗಳಿಲ್ಲದ ಸಮಾಜವಾದದ ಕನಸೊಂದನ್ನು ಕಟ್ಟಿಬಿಟ್ಟಿರುತ್ತಾನೆ. ಸದಸ್ಯರು ತಮ್ಮ ವೈಯುಕ್ತಿಕ ದುರ್ಬಲತೆಗಳನ್ನು ಅವನೊಂದಿಗೆ ಹಂಚಿಕೊಂಡು ಇರುತ್ತಾರೆ. ಹೀಗೆ ಅರ್ಥಿಕವಾಗಿ-ಮಾನಸಿಕವಾಗಿ ಜಿಮ್ ಮೇಲೆ ಅವಲಂಬಿತವಾದ ಒಂದು ದೊಡ್ಡ ಪಡೆಯೇ ತಯಾರಾಗುತ್ತದೆ.

ಯಾವಾಗ ಪೀಪಲ್ಸ್ ಟೆಂಪಲ್‍ನ ವಿಲಕ್ಷಣತೆಯ ಬಗ್ಗೆ ಇಂಡೀಯಾನಪೊಲಿಸ್‍ನಲ್ಲಿ ಸುದ್ಧಿಮಾಧ್ಯಮಗಳು ಮಾತಾಡತೊಡಗುತ್ತವೋ,ಜಿಮ್ ಅಲ್ಲಿಂದ ಕ್ಯಾಲಿಪೋರ್ನಿಯಾಕ್ಕೆ ತನ್ನ ಶಿಷ್ಯರೊಂದಿಗೆ ವರ್ಗವಾಗುತ್ತಾನೆ. ಸ್ಯಾನ್‍ಪ್ರಾನ್ಸಿಸ್ಕೊದ ತನ್ನದೇ ಒಂದು ಚಿಕ್ಕ ಪ್ರದೇಶದಲ್ಲಿ ಚಟುವಟಿಗೆಗಳು ಮುಂದುವರೆಯುತ್ತವೆ. ಸ್ಯಾನ್‍ಪ್ರಾನ್ಸಿಸ್ಕೊದ ಮೇಯರ್ ಚುನಾವಣೆಯಲ್ಲಿ ಸಾಕಷ್ಟು ಹಣ ಸಹಾಯ ಮಾಡಿ ಅಲ್ಲಿನವರಿಗೆ ಪ್ರಿಯವಾಗುತ್ತಾನೆ. ಅಷ್ಟೇ ಅಲ್ಲದೇ ಆಗೀನ ಅಮೇರಿಕ ಅಧ್ಯಕ್ಷರ ಚುನಾವಣೆಯ ಸಂದರ್ಭದಲ್ಲಿ ಜಿಮ್ಮಿ ಕಾರ್ಟರ್‌ಗೆ ತನ್ನ ಬೆಂಬಲ ಘೋಷಿಸಿ, ಅದಕೋಸ್ಕರ ದೇಣಿಗೆ ಸಂಗ್ರಹದಲ್ಲೂ ನೆರವಾಗುತ್ತಾನೆ.

ಇದೆಲ್ಲದರ ಮಧ್ಯೆ ಪೀಪಲ್ಸ್ ಟೆಂಪಲ್‍ನಿಂದ ಹೊರಗೆ ಬಂದವರು ಮೆಲ್ಲಗೆ ಹೊರಜಗತ್ತಿಗೆ ಅದರ ವಿರುದ್ಧ ಮಾತಾಡತೊಡಗುತ್ತಾರೆ. ಗುಂಪಿನಿಂದ ಹೊರಬಂದವರು ಕೆಲವರು ನಿಗೂಢವಾಗಿ ಸತ್ತಾಗ ಎಲ್ಲೆಡೆ ’ಪೀಪಲ್ಸ್ ಟೆಂಪಲ್’ ಕೈವಾಡ ಕೇಳಿಬರತೊಡಗುತ್ತದೆ. ಹಾಗೇ ಸದಸ್ಯರ ಕುಟುಂಬದವರು ತಮಗೆ ತಮ್ಮ ಮಗ/ಮಗಳು/ಗಂಡ/ಹೆಂಡತಿ ಜಿಮ್‍ನಿಂದ ಬಿಡಿಸಿಕೊಡಬೇಕೆಂದು ಕೋರ್ಟ್‍ಗಳ ಮೊರೆ ಹೋಗುತ್ತಾರೆ. ಇಡೀ ಮಾಧ್ಯಮವೇ ಯಾವಾಗ ಜಿಮ್-ಪೀಪಲ್ಸ್ ಬಗ್ಗೆ ಕೂಗತೊಡಗುತ್ತದೋ, ಜಿಮ್‍ನ ಹೊಸ ಯೋಜನೆ ಶುರುವಾಗುತ್ತದೆ.

ದಕ್ಷಿಣ ಅಮೇರಿಕಾ ಖಂಡದ ಗಯಾನ ಹೆಸರಿನ ದೇಶದ ಸರ್ಕಾರದೊಡನೆ ಹೇಗೋ ಒಪ್ಪಂದ ಕುದುರಿಸಿ, ಅಲ್ಲಿ ಸುಮಾರು ೧೭೦ ಎಕರೆ ಕಾಡನ್ನು ಜಿಮ್ ಕೊಂಡುಕೊಳ್ಳುತ್ತಾನೆ. ಸ್ಯಾನ್‍ಪ್ರಾನ್ಸಿಸ್ಕೊದ ಸಹವಾಸ ಸಾಕು ಮಾಡಿ, ಜಿಮ್ ತನ್ನ ಶಿಷ್ಯಕೋಟಿಯೊಡನೆ ಗಯಾನಕ್ಕೆ ಹೊರಡುತ್ತಾನೆ. ಹೊಸ ದೇಶದಲ್ಲಿ, ಕಗ್ಗಾಡಿನಲ್ಲಿ ತಮ್ಮದೇ ಲೋಕ ಕಟ್ಟಿಕೊಳ್ಳುವ ಕನಸು ತೋರಿಸುತ್ತಾನೆ. ಅವರೆಲ್ಲರು ಕೈಕಾರ್ಯ ಮಾಡಿ ಆ ಕಾಡಿನ ಮಧ್ಯೆ ಚಿಕ್ಕ ಪಟ್ಟಣವನ್ನು ಕಟ್ಟುತ್ತಾರೆ. ಅದಕ್ಕೆ ’ಜೋನ್ಸ್ ಟೌನ್’ ಎಂಬ ಹೆಸರನ್ನೂ ಇಡುತ್ತಾರೆ.

ಸುದ್ಧಿ ಮಾಧ್ಯಮ-ಸರಕಾರದ ಕಣ್ಣಿಂದ ದೂರವಾದ ನಂತರ ಜಿಮ್ ತನ್ನ ಪಟ್ಟಣದಲ್ಲಿ ಸಮಾಜವಾದ ಜೀವನದ ಪ್ರಯೋಗಗಳನ್ನು ಶುರುಮಾಡುತ್ತಾನೆ. ಎಲ್ಲರೂ ದುಡಿದು ತಿನ್ನುವುದು, ಸಮಾಜದ ಒಳಿತಿಗಾಗಿ ಎಲ್ಲರೂ ಶ್ರಮಿಸುವುದು ಎಲ್ಲವೂ ಮೊದಮೊದಲು ಚೆನ್ನಾಗೇ ನಡೆಯುತ್ತದೆ. ಕೆಲ ಸಮಯದ ನಂತರ ಸದಸ್ಯರ ಕುಟುಂಬಗಳು ಅಮೇರಿಕೆಯಲ್ಲಿ ಮತ್ತೆ ಪೀಪಲ್ಸ್ ಬಗ್ಗೆ ಅಕ್ಷೇಪಗಳನ್ನು ಎತ್ತತೊಡಗುತ್ತಾರೆ. ಕೆಲ ಸದಸ್ಯರನ್ನು ಅವರ ಇಚ್ಚೆಗೆ ವಿರುದ್ಧವಾಗಿ ಗಯಾನಕ್ಕೆ ಕರೆದೊಯ್ಯಲಾಗಿದೆಯೆಂಬ ಅರೋಪವು ನಡೆಯುತ್ತದೆ.

ಈ ಕಡೆ ಜಿಮ್‍ನಿಂದ ತನ್ನ ಹಿಂಬಾಲಕರಿಗೆ ಮತ್ತೆ ಅಮೇರಿಕೆಗೆ ಮರಳಿ ಅಲ್ಲಿ ತಮಗೆ ಆಗದವರ ಜೊತೆ ಬಾಳುವುದಕ್ಕಿಂತ ತಾವಿರುವ ಸ್ಥಳದಲ್ಲಿ ಕಷ್ಟಪಟ್ಟು ಬದುಕುವುದೇ ಲೇಸು ಎನ್ನುವ ನಿತ್ಯ ಪ್ರವಚನ ನಡದೇ ಇರುತ್ತದೆ. ಜಿಮ್‍ನನ್ನು ದೇವರೆಂದೇ ಭಾವಿಸುವ ಆ ಶಿಷ್ಯಪಡೆ, ಅಕ್ಷರಶ: ಜಿಮ್ ಹೇಳಿದ್ದನ್ನೇ ಕೇಳುತ್ತದೆ. ಕಡೆಕಡೆಗೆ ಸಂದರ್ಭ ಬಂದರೆ ತಾವೆಲ್ಲರೂ ಒಟ್ಟಿಗೆ ಮರಣಿಸಲು ತಯಾರಿರಬೇಕೆಂದು ಜಿಮ್‍ ಬ್ರೆನ್‍ವಾಶ್ ನಡೆಸಿರುತ್ತಾನೆ.

ಇತ್ತ ಕುಟುಂಬದವರ-ಸುದ್ಧಿಮಾಧ್ಯಮದವರ ಅಕ್ಷೇಪಗಳು ಹೆಚ್ಚಾದಾಗ,ಅಮೇರಿಕದ ಸಂಸತ್ ಸದಸ್ಯ ’ಲಿಯೋ ರಯಾನ್’, ಪ್ರತ್ಯಕ್ಷವಾಗಿ ನೋಡಲು ಗಯಾನಕ್ಕೆ ಬರುತ್ತಾನೆ. ರಯಾನ್ ಭೇಟಿಯ ಸಮಯದಲ್ಲಿ, ಜಿಮ್‍ನ ಗುಂಪಿನಿಂದ ಹಲವಾರು ಪೀಪಲ್ಸ್ ಬಿಟ್ಟು ಮರಳಿ ಅಮೇರಿಕೆಗೆ ಬರುವ ಆಶಯ ವ್ಯಕ್ತಪಡಿಸುತ್ತಾರೆ. ರಯಾನ್ ಅವೆರಲ್ಲರನ್ನೂ ಕರೆದುಕೊಂಡು ವಿಮಾನ ಹತ್ತುತ್ತಿದ್ದಂತೆ ಜಿಮ್ ಕಡೆಯ ಬಂದೂಕಧಾರಿಗಳು ರಯಾನ್ ಸಮೇತವಾಗಿ ೫-೬ ಜನರನ್ನು ಕೊಲ್ಲುತ್ತಾರೆ.

ನಂತರ ನಡೆಯುವುದೇ ವಿವೇಚನೆಗೆ ನಿಲುಕದ ಘಟನೆ..

ರಯನ್ ಮತ್ತು ಅಮೇರಿಕದ ತಂಡವನ್ನು ತಾವು ಕೊಂದ ನಂತರ,ಜಿಮ್ ತನ್ನ ಎಲ್ಲಾ ಅನುಮಾಯಿಗಳಿಗೆ ಸಭೆಗೆ ಕರೆದು ಹೇಳುತ್ತಾನೆ.ಅಮೇರಿಕ ಸರಕಾರ ತಮ್ಮೆಲ್ಲರನ್ನೂ ಹುಡುಕಿ ಕೊಲ್ಲಿಸುತ್ತೆಂದು,ಅದಕ್ಕಿಂತ ಉತ್ತಮ ಮಾರ್ಗವೆಂದರೆ ಜೀವ ತೊರೆದು ಕ್ರಾಂತಿ ಮಾಡುವುದೆಂದು ಘೋಷಿಸುತ್ತಾನೆ. ಅದಾಗಿ ಕೆಲ ಸಮಯದಲ್ಲಿ ಸೈನಾಯಿಡ್ ಮಿಶ್ರಿತ ಪಾನೀಯವನ್ನು ಸಭೆಯಲ್ಲಿದ್ದವರೆಲ್ಲಾ ಒಟ್ಟಾಗಿ ಕುಡಿಯುತ್ತಾರೆ. ಕೆಲವು ನಿಮಿಷಗಳಲ್ಲೇ ಅಲ್ಲಿದ್ದ ೯೧೪ ಜನ ಜೀವ ಚೆಲ್ಲುತ್ತಾರೆ. ಅವರಲ್ಲಿ ೨೭೬ ಮಕ್ಕಳು...

ಆ ಸಾಮೂಹಿಕ ಆತ್ಮಹತ್ಯೆ ನಡೆದು ಸುಮಾರು ೩೦ ವರ್ಷಗಳೇ ಕಳೆದಿದೆ. ಅಷ್ಟೊಂದು ಜನ ಅದು ಹೇಗೆ ಇಂತಹ ಕಾರ್ಯಕ್ಕೆ ಶರಣಾದರು ಎಂಬ ಪ್ರಶ್ನೆ ಈಗಲೂ ಇದೆ. ಅಷ್ಟೊಂದು ಜನರ ಮನವನ್ನು ಸೂತ್ರದಾರನಂತೆ ಜಿಮ್ ಹೇಗೆ ನಿಯಂತ್ರಿಸಿದ್ದು ಎಂಬುದು ಯಕ್ಷಪ್ರಶ್ನೆ.

ಸಮಾಜ ಜೀವಿಗಳಾದ ಮಾನವರು ,ತಮಗಿಂತ ದೊಡ್ಡದಾದ ಒಂದು ಶಕ್ತಿ-ಪಂಗಡ-ವ್ಯಕ್ತಿಯ ಮೂಲಕ ತಮ್ಮ ಗುರುತನ್ನು ಕಂಡುಕೊಳ್ಳುವ ಪ್ರಯತ್ನ ನಿರಂತರ. ಈ ತರದ ಆಶಯಗಳನ್ನು, ಜನರ ದುರ್ಬಲತೆಗಳನ್ನು ಉಪಯೋಗಿಸಿಕೊಳ್ಳುವ ಚಾಣಾಕ್ಷರು ಯಾವಾಗಲೂ ಇದ್ದೇ ಇರುತ್ತಾರೆ.

ಮನಸ್ಸಿಗಿಂತ ದೊಡ್ಡ ಮಿತ್ರ-ಶತ್ರು ಇನ್ನ್ಯಾವುದಿದೆ ?

Sunday, September 05, 2010

ಗುರವೇ ನಮಃ

ಗಾಂಧೀ ಸರ್ಕಲ್ ದಾಟಿ ಸ್ವಲ್ಪ ಮುಂದೆ ಹೋಗಿ ಅಂಡರ್‌ಬ್ರೀಡ್ಜ್ ಕೆಳಗೆ ಹಾದು, ಏರಿನಲ್ಲಿ ಸೈಕಲ್‍ ತುಳಿದರೆ ಸಿಗುವುದು ಶಾಲೆ. ಈ ಏರಿನಲ್ಲೇ ಆ ಲೂನ ಎದುಸಿರು ಬಿಡುತ್ತ ಹೋಗಲಿಕ್ಕೆ ಹರಸಾಹಸ ಪಡುತ್ತಿದ್ದರೆ, ಲೂನ ಪಕ್ಕದಲ್ಲಿಯೇ ಶರವೇಗದಲ್ಲಿ ಸೈಕಲ್ ತುಳಿಯುತ್ತಾ ’ಗಣಪ’ ಎಂದು ಕರೆದು ಮಾಯವಾಗುತ್ತಿದ್ದ ಹುಡುಗರು.ಲೂನ ಶಾಲೆ ಮುಂದೆ ನಿಂತು, ಅಷ್ಟರಲ್ಲಿ ಪ್ರಾರ್ಥನೆ ಶುರುವಾಗಿ, ನಂತರ ತರಗತಿಗೆ ಡೊಳ್ಳು ಹೊಟ್ಟೆ ’ಗಣಪ’ ಬಂದಾಗ ಹುಡುಗರಲ್ಲಿ ಮುಂದೇನಾಗುತ್ತೆ ಎಂಬುದು ಖಾತ್ರಿಯಾಗಿರುತಿತ್ತು. ’ಯಾವನೋ ಆವನು ಗಣಪ ಅಂತದ್ದು ಓಡಿ ಬಂದವನು, ನೀವಾಗಿ ಬರ್ತಿರೋ ಇಲ್ಲಾ ನಾನೇ ಎಬ್ಬಿಸಬೇಕಾ ’. ಮಾಮೂಲಿಯಾಗಿ ಇದೇ ಕೆಲಸ ಮಾಡ್ತಿದ್ದ ಗುಂಪಿನಿಂದ ಒಂದಿಬ್ಬಿರು ಹುಡುಗರು ತರಗತಿಯಿಂದ ಹೊರಕ್ಕೆ.

ಅದೇಗೆ ಹಾಗೆ ಏನೋ, ಹೈಸ್ಕೂಲ್ ಶಾಲೆಯ ಎಲ್ಲಾ ಸರ್‌ಗಳಿಗೂ ಒಂದು ಸಂಕ್ಷಿಪ್ತ ಹೆಸರಿತ್ತು. ಸಿ.ಜಿ.ಕೆ, ಕೆ.ಜಿ.ಕೆ, ಅರ್.ಎನ್.ಅರ್, ಎಲ್.ಎಸ್.ಪಿ, ಅರ್.ಅರ್,ವಿ.ಎಸ್.ಎಚ್,ಜಿ.ಎನ್.ಜಿ, ಎಮ್.ಜೆ.ಜ... ತುಂಬಾ ದಿವಸದವರೆಗೆ ಅವರ ಪೂರ್ತಿ ಹೆಸರೇನು ಅಂತ ಗೊತ್ತೇ ಇರಲಿಲ್ಲ. ಇನ್ನು ಕೆಲವರದು ಈಗಲೂ ಗೊತ್ತಿಲ್ಲ.

***************

ಆಗಿನ್ನು ಶಾಲೆ ಸೇರಿದ ಸಮಯವಿರಬೇಕು. ಶಾಲೆ ವಾತಾವರಣ ಹೊಸದು. ನಗುಮುಖದಿಂದ ಯಾವಾಗಲೂ ಅಮ್ಮನ ತರ ಮಾತಾಡಿಸುತ್ತಿದ್ದ ಉಮ ಟೀಚರ್. ಶಾಲೆಯಿಂದ ಮಕ್ಕಳನ್ನು ಕರೆದೊಯ್ಯಲು ಬರುತ್ತಿದ್ದ ಅಪ್ಪ-ಅಮ್ಮಂದಿರು ಬರುವುದು ತಡವಾದರೆ, ಅವರು ಬರುವ ತನಕ ಜೊತೆಗೆ ಇದ್ದು ಸಮಾಧಾನಿಸುತ್ತಿದ್ದ ಪರಿ, ಇನ್ನೂ ನೆನಪಿಂದ ಮಾಸಿಲ್ಲ.

****************

ಇಂಜಿನಿಯರಿಂಗ್ ಓದುವಾಗ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿದ್ದ ನಮಗೆಲ್ಲಾ ಒಬ್ಬರು ಪ್ರೊಫೆಸರ್‍ ಬಗ್ಗೆ ಸ್ಪಲ್ಪ ಹೆದರಿಕೆ. ಗಡ್ಡಧಾರಿ ಆ ಪ್ರೊಫೆಸರ್ ಕೈಯಲ್ಲಿ ಸಿಕ್ಕುಬಿದ್ದು ಬೈಸಿಕೊಂಡ ಕತೆಗಳು ವಿಪುಲವಾಗಿದ್ದವು. ಕ್ಲಾಸಿ‍ನಲ್ಲಿ ಮಾಡಿದ ಕಿತಾಪತಿ-ತರಲೆಗಳ ಜೊತೆ, ತರಗತಿಯ ಹೊರಗೆ-ಲ್ಯಾಬಿನಲ್ಲಿ-ಕಾಲೇಜ್ ಕಾರಿಡಾರಿನಲ್ಲಿ ನಡೆದ ಮಂಗಾಟಗಳಿಗೂ ಇವರಿಂದ ಮಂಗಳಾರತಿ ಕಾದಿರುತಿತ್ತು. ಇಂತಹ ಪ್ರೊಫೆಸರ್ ನಮ್ಮ ಪ್ರೊಜಕ್ಟ್ ಗೈಡ್ ಆಗಿದ್ದು ನಮ್ಮ ಯಾವ ಜನ್ಮದ ಪುಣ್ಯವೋ ಅಂದುಕೊಂಡು ಹಲುಬಿದ್ದೆವು.

ಬರುಬರುತ್ತಾ ಅವರು ಹೇಳಿದ್ದು ನಮ್ಮ ಒಳ್ಳೆಯದಕ್ಕೆನ್ನುವ ಸತ್ಯ ಅರಿವಾಗತೊಡಗಿತ್ತು.ನಮ್ಮ ಕಾಲೇಜಿನ ಕೊನೆಯ ದಿನಗಳಲ್ಲಿ ಅವರು ರಸ್ತೆ ಅಪಘಾತವೊಂದರಲ್ಲಿ ಗಾಯಗೊಂಡು, ತುಂಬಾ ಬಳಲಿಬಿಟ್ಟಿದ್ದರು. ಅವರನ್ನು ಮಾತಾಡಿಸಲು ಮನೆಗೆ ಹೋದಾಗ, ಹಾಸಿಗೆ ಪಕ್ಕ ಕುಳ್ಳಿರಿಸಿಕೊಂಡು ಒಂದೆರಡು ಹಿತವಾಗಿ ಮಾತಾಡಿದ್ದರು.ನಮಗೆ ಅವರ ಬಗ್ಗೆ ಇದ್ದ ಕಲ್ಪನೆಗಳಿಗೆ ಅಂದು ಅವರ ಮಾತುಗಳಿಗೂ ಯಾಕೋ ಹೊಂದಿಕೆ ಆಗುತ್ತಿರಲಿಲ್ಲ. ಅವರು ಬೇಕೆಂದಲೇ ಕಾಲೇಜ್‍ನಲ್ಲಿ ಆ ತರ ಇದ್ದಿರಬಹುದೇ ಅನಿಸಿತ್ತು.

****************

ಮಿಡ್ಲ್ ಸ್ಕೂಲ್‍ನಲ್ಲಿ ವಿಜ್ಞಾನ-ಗಣಿತ ಭೋದಿಸುತ್ತಿದ್ದ ಪಾಟೀಲ್ ಮೇಷ್ಟ್ರು, ತರಗತಿಯಲ್ಲಿ ರಾಗದಂತೆ ಮಾತಾಡುತ್ತಿದ್ದರು. ಅವರ ತರಗತಿಯಲ್ಲಿ ಅಶಿಸ್ತನ್ನು ಎಂದೂ ಸಹಿಸುತ್ತಿರಲಿಲ್ಲ, ಸಿಕ್ಕಬಿದ್ದವರಿಗೆ ಕಠಿಣ ಶಿಕ್ಷೆ ಇರುತಿತ್ತು. ಅವರ ರಾಗದಂತಿದ್ದ ಮಾತುಗಳ ಬಗ್ಗೆ ನಮ್ಮನಮ್ಮಲ್ಲಿ ಗುಪ್ತವಾಗಿ ಮಾತಾಡಿಕೊಂಡು ನಗುವುದು ನಡೆಯುತಿತ್ತು.

ಅದ್ಯಾವುದೋ ಒಂದು ದಿವಸ , ಶಾಲೆಯ ಬಿಡುವಿನ ಸಮಯ ’ಗೇಮ್ಸ್ ರೂಮ್’ನಲ್ಲಿ ಗೆಳಯರೊಂದಿಗೆ ಚೆಸ್ ಆಡುತ್ತಿದ್ದೆ. ಅದು ಇದು ಮಾತಾಡುತ್ತಾ ನಡೆಯುತ್ತಿದ್ದ ಆಟದ ಭರದಲ್ಲಿ ನಾನು ಆ ಮೇಷ್ಟ್ರ ತರ ಮಾತಾಡತೊಡಗಿದ್ದೆ. ಅವರನ್ನೇ ಅನುಕರಿಸಿ ಸುಮಾರು ಒಂದು ಹತ್ತು ನಿಮಿಷ ಮಾತಾಡಿರಬಹುದು. ಇದರ ಮಧ್ಯೆದಲ್ಲಿ ಆ ರೂಮ್‍ನಲ್ಲಿದ್ದವರು ಅದ್ಯಾಕೋ ಒಮ್ಮೆಲೇ ಮಾತಾಡದೇ ಸುಮ್ಮನಾಗಿದ್ದರು. ನಾನು ಅದನ್ನು ಗಮನಿಸದೆ, ಮೇಷ್ಟ್ರನ್ನೇ ಅನುಕರಿಸುತ್ತಾ ಮಾತಾಡುತ್ತ ಹಿಂದೆ ತಿರುಗಿದೆ. ಆ ಮೇಷ್ಟ್ರು ನನ್ನ ಬೆನ್ನ ಹಿಂದೆ ನಿಂತು ನಮ್ಮ ಚೆಸ್ ಆಟವನ್ನೂ-ಅವರ ಅನುಕರಣೆಯನ್ನು ನೋಡಿದ್ದರು. ನಾನು ಒಮ್ಮೆಗೆ ಸಣ್ಣಗೆ ನಡುಗಿದ್ದೆ. ಅವರು ಎನೂ ಹೇಳದೇ ಸುಮ್ಮನೆ ನಗುತ್ತಾ ಅಲ್ಲಿಂದ ಹೊರನಡೆದರೂ, ನನಗೆ ಮರುದಿನ ಗ್ರಹಚಾರ ಕಾದಿದೆ ಎಂಬ ಹೆದರಿಕೆ ಶುರುವಾಗಿತ್ತು. ಆ ತರ ಏನು ಆಗದೇ ನನಗೆ ಸಂತೋಷ-ಆಚ್ಚರಿಗಳಾಗಿದ್ದವು.

********************

ಕೆಲಸಕ್ಕೆ ಸೇರಿ ನಾನು ಬೆಂಗಳೂರಿಗೆ ಬಂದ ಕೆಲ ವರ್ಷದಲ್ಲಿ, ಅಪ್ಪ-ಅಮ್ಮನಿಗೆ ನಾವಿದ್ದ ಊರಿನ ಪೇಟೆಯಲ್ಲಿ ಸಿಕ್ಕದ್ದರಂತೆ ನಮ್ಮ ಟೀಚರ್. ನಮ್ಮ ಮಿಡ್ಲ್ ಸ್ಕೂಲ್‍ನ ಹೆಡ್ ಮಾಸ್ಟರ್ ಆಗಿದ್ದವರು. ನಾನು ಶಾಲೆ ಮುಗಿಸಿ ಸುಮಾರು ೮-೧೦ ವರ್ಷದ ನಂತರ ಸಿಕ್ಕ ಮೇಲೂ ಸಹ ನನ್ನ ಹೆಸರನ್ನು ನೆನಪಿಟ್ಟುಕೊಂಡು, ನನ್ನ ಬಗ್ಗೆ ಸವಿವರವಾಗಿ ಕೇಳಿದರಂತೆ.

ಆ ನಮ್ಮ ಕಮಲ ಮಿಸ್, ನನ್ನ ಆತ್ಮವಿಶ್ವಾಸ ಹೆಚ್ಚು ಮಾಡಿದವರು, ಹೊಸತನದ ಹವ್ಯಾಸಗಳನ್ನು ಪರಿಚಯಿಸಿದವರು, ಏನೋ ವಿಶ್ವಾಸ-ಪ್ರೀತಿ.

********************

ಇನ್ನೊಬ್ಬರಿದ್ದರು ಹೈಸ್ಕೂಲ್‍ನಲ್ಲಿ ಟಿ.ಆರ್.ಜಿ. ದಿನವೂ ಇನ್ನೊಂದು ಊರಿನಿಂದ ಬಸ್ಸಿನಲ್ಲಿ ಬಂದು ಹೋಗುತ್ತಿದ್ದರು. ಅವರ ತರಗತಿಯನ್ನು ಯಾರು ತಪ್ಪಿಸಿಕೊಳ್ಳುತ್ತಿರಲಿಲ್ಲ, ಅವರ ವಿರುದ್ಧ ಮಾತಾಡಿದ್ದು ಕಂಡೇ ಇರಲಿಲ್ಲ. ಅವರ ವೃತ್ತಿಪರತೆ, ಭೋಧನಾ ಶೈಲಿ, ಅವರ ವ್ಯಕ್ತಿತ್ವ..ನಮಗೆಲ್ಲಾ ಅವರು ಸಂಪೂರ್ಣ ಜಂಟಲ್‍ಮನ್. ತುಂಬಾ ಸಲ, ನಾನೇದರೂ ಮೇಷ್ಟ್ರು ಆದರೆ ಇವರ ತರ ಆಗಬೇಕೆಂದುಕೊಂಡದ್ದು ಇದೆ.

********************

ಕ್ಲಾಸಿನಲ್ಲಿ ತಿಂಗಳು ಕೊಡುವ ಮಾರ್ಕ್ಸ್ ಕಾರ್ಡ್‍ಗಳನ್ನು ತುಂಬಲು ನಮ್ಮ ಕ್ಲಾಸ್ ಟೀಚರ್‌ಗೆ ಸಹಾಯ ಮಾಡುತ್ತಿದ್ದೆ. ಅದು ಶಾಲೆ ಮುಗಿದ ಮೇಲೆ ಸಂಜೆ ಅವರ ಮನೆಯಲ್ಲಿ ನಡೆಯುತಿತ್ತು. ನನಗೆ ಅದಕ್ಕಿಂತ ಇಷ್ಟವಾಗುತ್ತಿದ್ದು ಅವರ ಮನೆಯಲ್ಲಿ ಕೊಡುತ್ತಿದ್ದ ಧಾರವಾಡ ಫೇಡೆ-ಖಾರಾ ! ಅದರ ಜೊತೆ ನಮ್ಮ ಗಡ್ ಸರ್ ಮಾತಾಡುತ್ತಿದ್ದ ವಿಷಯಗಳು. ಸಂಸ್ಕೃತ ಪಂಡಿತರೂ ಆಗಿದ್ದ ಅವರ ಮಾತುಗಳು ಕಾಳಿದಾಸನಿಂದ ಹಿಡಿದು ಮಣಿರತ್ನಂ ಸಿನಿಮಾಗಳ ಬಗ್ಗೆ ನಡೆಯುತಿತ್ತು.

*********************

ಶಿಕ್ಷಕರು ಎಂದೊಡನೆ. ಸಿನಿಮಾ ರೀಲಿನಂತೆ ಹೀಗೆ ಸಾಲು ಸಾಲಾಗಿ ನನ್ನ ತಲೆಯಲ್ಲಿ ಓಡಿದ ನೆನಪಿನ ದೃಶ್ಯಾವಳಿಗಳು ಇವು.ಈ ತರ ಇನ್ನೂ ಅನೇಕ ಶಿಕ್ಷಕರ ನೆಚ್ಚಿನ ನೆನಪುಗಳಿವೆ. ಮೇಲೆ ಹೇಳಿದ ಸನ್ನಿವೇಶಗಳು ಕೇವಲ ಕೆಲವು ಉದಾಹರಣೆಗಳಷ್ಟೇ. ಇದೊಂದು ಶಿಕ್ಷಕರ ದಿನಾಚರಣೆಯ ನೆವದಲ್ಲಿ ನಮಗೆಲ್ಲಾ ದಾರಿದೀಪದವರ ಬಗ್ಗೆ ನೆನೆವ ಅವಕಾಶ.

ಶಾಲೆಯಿಂದ ಹಿಡಿದು ಉನ್ನತ ವ್ಯಾಸಂಗದವರೆಗೆ ಹೆಜ್ಜೆಹೆಜ್ಜೆಗೂ ಜೊತೆಗಿದ್ದು, ಶಿಕ್ಷಣ ಎಂಬ ಅದ್ಭುತ ಶಕ್ತಿಯನ್ನು ಧಾರೆ ಎರೆದವರು ನಮ್ಮ ಶಿಕ್ಷಕರು. ನಮ್ಮನ್ನು ರೂಪಿಸಿ, ನಮ್ಮ ವ್ಯಕ್ತಿತ್ವ ವಿಕಾಸದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ನಮ್ಮನ್ನು ವಿಶ್ವದ ಉತ್ತಮ ಪ್ರಜೆಗಳನ್ನಾಗಿ ಮಾಡುವ ಕೆಲಸ ಮಾಡಿದವರು.

ನಮ್ಮ ಪ್ರೀತಿ, ಮೆಚ್ಚುಗೆ, ತಮಾಷೆ, ವಿಶ್ವಾಸ ಎಲ್ಲದರಲ್ಲೂ ಭಾಗಿಯಾದವರು.

ಅಮ್ಮನಂತ ಪ್ರೀತಿ, ಅಪ್ಪನಂತ ಶಿಸ್ತು, ಗೆಳಯನಂತ ವಿಶ್ವಾಸ ತೋರಿದ ನಮ್ಮ ಶಿಕ್ಷಕರಿಗೆಲ್ಲಾ ಹೃದಯಪೂರ್ವಕ ವಂದನೆಗಳು.

Sunday, August 22, 2010

1984

Big Brother, Thought Police, Doublethink, Memory hole, Thoughtcrime

ಈ ಎಲ್ಲಾ ಇಂಗ್ಲೀಷ್ ಪದಗಳಲ್ಲಿರುವ ಸಾಮ್ಯತೆಯೇನು !
ಎಲ್ಲಾ ಪದಗಳು ಇಂಗ್ಲೀಷ್‍ಗೆ ಕಾಲಿರಿಸಿದ್ದೇ ಒಂದು ಪುಸ್ತಕದ ಮೂಲಕ. ಆ ಕೃತಿಯ ಹೆಸರು ’1984'.

ಪುಸ್ತಕದ ಹೆಸರು '1984' ಆದರೂ, ಆ ಪುಸ್ತಕ ಬಂದದ್ದು ೧೯೪೮ರಲ್ಲಿ. ಈಗಲೂ ಇಂಗ್ಲೀಷ್‍ನ ಅತ್ಯಂತ ಜನಪ್ರಿಯ ಅಥವಾ ಪ್ರಮುಖ ೧೦-೨೦ ಪುಸ್ತಕಗಳ ಸಾಲಿನಲ್ಲಿ ಈ ಪುಸ್ತಕ ಇದ್ದೇ ಇರುತ್ತದೆ.

ಅಂದ ಹಾಗೆ ಯಾವುದರ ಬಗ್ಗೆ ಈ ಪುಸ್ತಕ ?

ಜಾರ್ಜ್ ಆರ್ವೆಲ್ ಎಂಬ ಲೇಖಕ ೧೯೪೮ರಲ್ಲಿ ಈ ಕೃತಿಯನ್ನು ಬರೆದಿದ್ದು.ಆರ್ವೆಲ್ ಬ್ರಿಟಿಷ್ ಸೇನೆಯಲ್ಲಿ ಕೆಲಸ ಮಾಡಿ, ಕೆಲವು ವರ್ಷ ಭಾರತ-ಬರ್ಮದಲ್ಲೂ ಕಳೆದಿದ್ದ. ಆಗಿಂದ ಸುಮಾರು ೩೦-೪೦ ವರ್ಷಗಳಲ್ಲಿ, ಸರಿಸುಮಾರು ೧೯೮೪ರ ಸಮಯದಲ್ಲಿ ಪ್ರಪಂಚದ ರಾಜಕೀಯ-ಸಾಮಾಜಿಕ-ಸಾಂಸ್ಕೃತಿಕ ತಲ್ಲಣಗಳ ಬಗ್ಗೆ ಬರೆದಿರುವ ಒಂದು ಕಾಲ್ಪನಿಕ ಕಾದಂಬರಿ. ನಿರಂಕುಶ ಆಡಳಿತದಲ್ಲಿ ಹೇಗೆ ಎಲ್ಲವನ್ನೂ ಸರಕಾರ ನಿಯಂತ್ರಿಸಬಹುದು, ಸಾಂಸ್ಕೃತಿಕ ಲೋಕದ ಜೊತೆ ಜನರ ವೈಯುಕ್ತಿಕ ಜೀವನವನ್ನು ಪ್ರತಿ ಗಳಿಗೆಯೂ ಬಿಡದೆ ಕಣ್ಣಿಟ್ಟು ಹೇಗೆ ಗಮನಿಸಬಹುದು ಎನ್ನುವ ಕಥಾವಸ್ತುವನ್ನು ಬಿಚ್ಚಿಟ್ಟು ಜನರನ್ನು ಬೆಚ್ಚಿಬೀಳಿಸುವಂತೆ ಮಾಡಿದ್ದೇ ಈ ಪುಸ್ತಕ.


ಓಷಿಯನೀಯಾ ಎಂಬ ಕಾಲ್ಪನಿಕ ದೇಶದಲ್ಲಿ ನಡೆಯುವ ಕತೆಗೆ ಹಿನ್ನಲೆಯಾಗಿ ವಿಶ್ವದ ಕೊನೆಯ ಮಹಾಯುದ್ಧ ನಡೆದು, ಇಡೀ ಜಗತ್ತೆ ಪ್ರಮುಖ ಮೂರು ಭಾಗಗಳಾಗಿ ವಿಂಗಡನೆಯಾಗಿರುತ್ತದೆ - ಓಷಿಯನೀಯಾ(Ocenia), ಯೂರೇಷಿಯಾ(Eurosia)ಮತ್ತು ಈಸ್ಟೇಷಿಯಾ(Eastasia).

ಬ್ರಿಟನ್, ಅಸ್ಟ್ರೇಲಿಯಾ, ಅಮೇರಿಕಾ, ಆಪ್ರಿಕಾದ ದಕ್ಷಿಣ ಭಾಗದ ಪ್ರಾಂತ್ಯಗಳು ಸೇರಿ ಓಷಿಯನೀಯಾ ಎಂಬ ಬೃಹತ್ ದೇಶವಾಗಿರುತ್ತದೆ. ಯೂರೋಪಿನ ಎಲ್ಲಾ ದೇಶಗಳು ಮತ್ತು ಉತ್ತರ ಏಷ್ಯಾದ ಭಾಗಗಳು ಸೇರಿ ಯೂರೇಷಿಯಾವಾಗಿರುತ್ತದೆ. ಚೀನಾ, ಜಪಾನ್, ಕೊರಿಯಾ, ಉತ್ತರ ಭಾರತ ಸೇರಿ ಈಸ್ಟೇಷಿಯಾ. ಈ ಮೂರರ ಆಡಳಿತದಲ್ಲಿ ಬರದೇ ಇರುವ ಪ್ರಾಂತ್ಯಗಳ ನಿಯಂತ್ರಣಕ್ಕೆಂದು ಈ ಮೂರು ದೇಶಗಳ ಮಧ್ಯೆ ಯಾವಾಗಲೂ ನಿರಂತರ ಯುದ್ಧ.

ಓಷಿಯನೀಯಾ ದೇಶವನ್ನು ಆಳುವ ಸರ್ವಾಧಿಕಾರಿಗೆ ಹೆಸರಿಲ್ಲ, ಆದರೆ ಎಲ್ಲರೂ ಅವನನ್ನು ಕರೆಯುವುದು ’ಬಿಗ್ ಬ್ರದರ್’(Big Brother). ಬಿಗ್ ಬ್ರದರ್‌ಗೆ ದೇಶದ ಪ್ರತಿಯೊಂದರ ಮೇಲೂ ನಿಯಂತ್ರಣ, ಜನರ ಪ್ರತಿ ನಡೆ-ನುಡಿಯೂ ಟೆಲೆಸ್ಚ್ರೀನ್(Telescreen)ಯೆಂಬ ಯಂತ್ರದ ಮೂಲಕ ನಿರಂತರವಾಗಿ ಪರಿಶೀಲನೆಗೆ ಒಳಪಟ್ಟಿರುತ್ತದೆ. ಯಾರಾದರೂ ಬಿಗ್ ಬ್ರದರ್‍ ವಿರುದ್ಧವಾಗಿ ಮಾತಾಡಿದ್ದೇ ಆದರೆ, ವಿರೋಧಿಸುವ ಯೋಚಿಸಿದ್ದೇ ಆದರೆ , ಅವರು ಕೆಲವೇ ದಿನಗಳಲ್ಲೇ ಜನಜೀವನದಿಂದ ಮಾಯ ! ಅದಕ್ಕಾಗಿ 'Thought Police' ಎಂಬ ಜನರ ಯೋಚನೆಗಳ ನಿಯಂತ್ರಿಸುವ ಗುಪ್ತ ಪೋಲಿಸ್ ಪಡೆ.

ಬಿಗ್ ಬ್ರದರ್‌ನ ಆಡಳಿತದಲ್ಲಿರುವ ಇಲಾಖೆಗಳು- ಶಾಂತಿ ಸಚಿವಾಲಯ (Ministry of Peace), ಸಮೃದ್ಧಿ ಸಚಿವಾಲಯ(Ministry of Plenty), ಪ್ರೇಮ ಸಚಿವಾಲಯ(Ministry of Love) , ಸತ್ಯ ಸಚಿವಾಲಯ(Ministry of Truth). ಹೆಸರಿಗೂ ಮಾಡುವ ಕೆಲಸಕ್ಕೂ ಏನೂ ಸಂಬಂಧವೇ ಇಲ್ಲದ ಇಲಾಖೆಗಳಿವು.

ಶಾಂತಿ ಸಚಿವಾಲಯದ ಕೆಲಸ ದೇಶದ ಪ್ರಜೆಗಳನ್ನು ಸದಾ ಯುದ್ಧದ ಆತಂಕದಲ್ಲಿ, ಭಯದ ನೆರಳಿನಲ್ಲಿ ಇಡುವುದು. ಪ್ರೇಮ ಸಚಿವಾಲಯದ ಕೆಲಸ ವಿರೋಧಿಗಳನ್ನು ನಿರಂತರವಾಗಿ ಹುಡುಕಿ ರಾತ್ರೋರಾತ್ರಿ ನಾಶಮಾಡುವುದು. ಸಮೃದ್ಧಿ ಸಚಿವಾಲಯಕ್ಕೆ ದೇಶದ ಆರ್ಥಿಕ ಪ್ರಗತಿಯ ಹೊಣೆ, ಜನರಿಗೆಲ್ಲಾ ದೇಶ ಅತೀವ ಪ್ರಗತಿ ಸಾಧಿಸುತ್ತಿದೆ ಎಂದು ಹೇಳುತ್ತ ಜನರಿಗೆ ವಾರಕೆ ಇಷ್ಟೇ ಎಂದು ರ್‍ಏಷನ್ ನೀಡುವ ಕೆಲಸ. ಸತ್ಯ ಸಚಿವಾಲಯಕ್ಕೆ ಇತಿಹಾಸವನ್ನು ತಿರುಚಿ, ಸುದ್ದಿಮಾಧ್ಯಮವನ್ನು ಬೇಕಾದ ಹಾಗೇ ನಿಯಂತ್ರಿಸಿ, ಸುಳ್ಳನ್ನೇ ಸತ್ಯವಾಗಿ ಬಿಂಬಿಸುವ ಕೆಲಸ.

ಹೀಗಿರುವ ಸರ್ವಾಧಿಕಾರಿ ಬಿಗ್ ಬ್ರದರ್‌ನ ಪರಮ ವೈರಿ ’ಇಮಾನ್ಯುಯಿಲ್ ಗೋಲ್ಡ್ ಸ್ಟೇನ್’(Emmanuel Goldstein). ಬಿಗ್ ಬ್ರದರ್ ಜೊತೆ ಹಲವು ವರ್ಷವಿದ್ದು ಕಡೆಗೆ ಆಡಳಿತವನ್ನು ವಿರೋಧಿಸಿ ಭೂಗತನಾದವನು. ಗೋಲ್ಡ್ ಸ್ಟೇನ್‍ ಎಲ್ಲಿದ್ದಾನೆ, ಯಾರೆಂದು ಯಾರಿಗೂ ತಿಳಿಯದು. ಆದರೂ ಬಿಗ್ ಬ್ರದರ್ ಬಗ್ಗೆ ಕೋಪವಿರುವವರಿಗೆ ಗೋಲ್ಡ್‍ಸ್ಟೇನ್ ಮುಂದೊಂದು ದಿನ ಬಂದೇ ಬರುತ್ತಾನೆಂಬ ನಂಬುಗೆ.

ಈ ’ಸತ್ಯ ಸಚಿವಾಲಯ’ದಲ್ಲಿ ಕೆಲಸ ಮಾಡುವ ವಿನಸ್ಟನ್ ಸ್ಮಿತ್‍(Winstein Smith).ನಮ್ಮ ಕಥಾನಾಯಕ ಹಾಗು ಕಥೆ ಸಾಗುವುದೇ ಅವನ ಕಣ್ಣಿನ ಮೂಲಕ. ಅನೇಕ ವರ್ಷಗಳಿಂದ ಈ ಉಸಿರುಗಟ್ಟುವ ಆಡಳಿತದಲ್ಲಿ ಬದುಕಿದ್ದ ವಿನಸ್ಟನ್‍ಗೆ ಸಿಡಿದೇಳುವ ತುಡಿತ. ಅದಕ್ಕೆ ಧ್ವನಿಗೂಡಿಸುವ ಜೂಲೀಯ ಎಂಬ ಅದೇ ಸಚಿವಾಲಯದದಲ್ಲಿ ಕೆಲಸ ಮಾಡುವವಳು. ಬಿಗ್ ಬ್ರದರ್ ಆಳ್ವಿಕೆಯಲ್ಲಿ ಪ್ರೇಮ-ಕಾಮಕ್ಕೆ ಅವಕಾಶವೇ ಇರುವುದಿಲ್ಲ. ಹೀಗಿದ್ದರೂ ಇವರಿಬ್ಬರೂ ಗುಪ್ತವಾಗಿ ಅದರಲ್ಲಿ ತೊಡಗಿಕೊಳ್ಳುವರು. ಗೋಲ್ಡ್ ಸ್ಟೇನ್‍ ಕಡೆಯವರೆಂದು ತಿಳಿದು Thought policeನವರ ಹತ್ತಿರವೇ ಇವರಿಬ್ಬರೂ ಬಿಗ್ ಬ್ರದರ್ ವಿರುದ್ಧ ಯೋಚನೆ ರೂಪಿಸಿ ಸಿಕ್ಕು ಬೀಳುವುದು.Thought policeನವರಿಂದ ಹಿಂಸೆಗೆ ಒಳಪಟ್ಟು , ಕೊನೆಗೆ ಬಿಗ್ ಬ್ರದರ್‍ ಎನ್ನುವುದೇ ಸತ್ಯ ಉಳಿದಿದ್ದೆಲ್ಲಾ ಮಿಥ್ಯ ಎಂದು ಪೂರ್ತಿ ಬದಲಾಗಿ, ಬದುಕಿಗೆ ಮರಳುವುದರಲ್ಲಿ ಕಾದಂಬರಿ ಮುಗಿಯುತ್ತದೆ.

ಪುಸ್ತಕದ ಕೊನೆ ನಿರಾಶದಾಯಕವಾಗಿ ಕಂಡುಬಂದರೂ, ಅದರ ಲೇಖಕ ಅರ್ವಲ್ ಹೇಳುವಂತೆ ಅದು ಮುಂಬರುವ ದಿನಗಳಿಗೆ ಒಂದು ಎಚ್ಚರಿಕೆ ಗಂಟೆ ಅಷ್ಟೆ !

೧೯೮೪ರ ತಾಕತ್ತಿರುವುದು ಆದರ ಆಳವಾದ ವಿಶ್ಲೇಷಣೆಯಲ್ಲಿ, ಅಲ್ಲಿ ಬಾಗಿಲು ತೆರೆದುಕೊಳ್ಳುತ್ತಾ ಹೋಗುವ ನಾಳೆಯ ಭಯಾನಕವಾದ ದಿನಗಳ ವರ್ಣನೆಯಲ್ಲಿ.

ಪುಸ್ತಕ ಓದುತ್ತಿದ್ದಂತೆ ಅದು ಕ್ರಮೇಣ ಮನವನ್ನು ಆವರಿಸಕೊಳ್ಳತೊಡಗುತ್ತದೆ.

ಪುಸ್ತಕದಲ್ಲಿ ಆರ್ವೆಲ್ ಕೊಡುವ ಕೆಲವೊಂದು ಉದಾಹರಣೆಗಳನ್ನು ನೋಡಿ
- ಜನರನ್ನು ಹತೋಟಿಯಲ್ಲಿ ಇಡಲು ಯಾವಾಗಲೂ ಅವರನ್ನು ಯುದ್ಧದ ಭಯದ ನೆರಳಿನಲ್ಲಿಡಬೇಕು. ಕೆಲವೊಮ್ಮೆ ತಮ್ಮ ದೇಶದ ಊರುಗಳ ಮೇಲೆ ತಾವೇ ರಾಕೆಟ್ ದಾಳಿ ಮಾಡಿ ಅದು ವೈರಿಗಳ ಕೈವಾಡವೆಂದು ಭಯ ಹೆಚ್ಚಿಸಬೇಕು
- ಚಿಕ್ಕ ವಯಸ್ಸಿನಲ್ಲಿಯೇ ಬಿಗ್ ಬ್ರದರ್ ಬಗ್ಗೆ ನಂಬುಗೆ-ಗೌರವ ಉಂಟು ಮಾಡಲು ಶಿಕ್ಷಣದಲ್ಲಿ ಬಿಗ್ ಬ್ರದರ್‍ ಬಗ್ಗೆಯೇ ಪಾಠಗಳಿರಬೇಕು. ಯಾವಾಗಲೂ ಬಿಗ್ ಬ್ರದರ್ ಬಗ್ಗೆ ವಿಜಯದ-ಸಾಧನೆಯ ಸುದ್ದಿಗಳೇ ಬರುತ್ತಿರಬೇಕು
- ಪ್ರೇಮ-ಕಾಮವೆಂಬುದು ದೇಶದ ಪ್ರಗತಿಗೆ ಮಾರಕ. ಇದರಲ್ಲಿ ಮೈಮರತರೆ ವೈರಿಗೆ ಅವಕಾಶ. ಆದ್ದರಿಂದ ಚಿಕ್ಕ ವಯಸ್ಸಿನಿಂದ ಇದರ ಬಗ್ಗೆ ವಿರೋಧ ಬೆಳಯಬೇಕು.
- ಜನರಿಗೆ ವಾರಕ್ಕೆ ರೇಷನ್‍ನಲ್ಲಿ ಒಂದು ಬಾರ್ ಚಾಕಲೇಟ್
- ಬಿಗ್ ಬ್ರದರ್ ವಿರೋಧಿಗಳನ್ನು ಗಲ್ಲಿಗೇರಿಸುವ, ಹಿಂಸಿಸುವ ಚಟುವಟಿಗೆಗಳು ಚಿಕ್ಕ ಮಕ್ಕಳ ಮನೋರಂಜನಾತ್ಮಕ ಚಟುವಟಿಕೆಗಳು. ಸ್ವಂತ ಕುಟುಂಬದ ಸದಸ್ಯರು ಬಿಗ್ ಬ್ರದರ್ ಬಗ್ಗೆ ವಿರೋಧಿಸಿದರೆ ಅವರನ್ನು ಸಹ Thought Policeಗೆ ಹಿಡಿದುಕೊಡಬೇಕು
- ಯಾವುದಾದರೂ ಪುಸ್ತಕ-ಪತ್ರಿಕೆಯಲ್ಲಿ ಬಿಗ್ ಬ್ರದರ್ ಬಗ್ಗೆ ವಿರೋಧಿಸಿ ಬರೆದಿದ್ದರೆ, ಅದನ್ನು ತಕ್ಷಣ ಬೇಕಾದಂತೆ ತಿದ್ದಿ ಮತ್ತೆ ಬಿಡುಗಡೆ ಮಾಡಬೇಕು. ಹಾಗೆಯೇ ಇತಿಹಾಸವನ್ನು ಬಿಗ್ ಬ್ರದರ್‌ಗೆ ಪೂರಕವಾಗಿ ತಿದ್ದಿಬರೆಯಬೇಕು

ಸುಮಾರು ೭೦ ಭಾಷೆಗಳಲ್ಲಿ ಈ ಪುಸ್ತಕ ಪ್ರಕಟವಾಗಿದೆ. ಈ ಪುಸ್ತಕ ಬಂದು ಸುಮಾರು ೬೦ ವರುಷಗಳೇ ಕಳೆದಿವೆ. ಇನ್ನೂ ಈ ಪುಸ್ತಕ ಸಮಕಾಲೀನವೆನಿಸುತ್ತದೆ. ಇದನ್ನು ಕಾಲ್ಪನಿಕ ಕತೆಯೆಂದು ತಳ್ಳಿಹಾಕಲು ಆಗುವುದಿಲ್ಲ. ನಮ್ಮ ದೇಶದಲ್ಲೇ ೧೯೭೫ರ ತುರ್ತು ಪರಿಸ್ಥಿತಿ, ಆಗ ನಡೆದ ವಿದ್ಯಮಾನಗಳು ಆ ಸರ್ವನಿಯಂತ್ರಿತ ಆಡಳಿತವೆನ್ನುವುದು ಮರೆಯಲ್ಲಿ ಕಾದಿರುವ ಮಾರಿಯೆಂದೆ ಸೂಚಿಸುತ್ತದೆ. ಹಾಗೆಯೇ ಪ್ರಪಂಚದ ಅನೇಕ ಕಡೆ ತಲೆ ಎತ್ತಿದ ಸರ್ವಾಧಿಕಾರಿ ಸರ್ಕಾರಗಳು ನಮ್ಮ ಕಣ್ಮುಂದೆ ಇವೆ.

ಇನ್ನು Big brother is watching ಎನ್ನುವುದು ಪುಸ್ತಕದಲ್ಲಷ್ಟೇ ಉಳಿದಿಲ್ಲ.ಪ್ರತಿಯೊಬ್ಬರ ಮಾತು-ಚಟುವಟಿಕೆಗಳನ್ನು ಆಲಿಸುವ ಟೆಲಿಸ್ಕ್ರೀನ್ ಯಂತ್ರ ಕಾಲ್ಪನಿಕವಾಗೇನೂ ಉಳಿದಿಲ್ಲ. ಸಿಸಿಟಿವಿ-ಕಂಪ್ಯೂಟರ್-ಈಮೇಲ್-ಪೋನ್‍ಗಳ ಮೂಲಕ ಯಾರನ್ನೂ ಎಲ್ಲಿ ಬೇಕಾದರೂ ಅನುಸರಿಸಿ ಒಂದು ಕಣ್ಣಿಡಬಹುದಾಗಿದೆ.

ಇನ್ನು ಈ ಪುಸ್ತಕ ಉಂಟುಮಾಡಿದ ಸಾಂಸ್ಕೃತಿಕ ಪರಿಣಾಮಗಳು ಅನೇಕ.

ಅದು ಇಂಗ್ಲೀಷ್‍ಗೆ ಕೊಟ್ಟ ಪದಗಳ ಬಗ್ಗೆ ಹೇಳುವುದಾದರೆ, Doublethink ಎನ್ನುವುದು ಎರಡು ಸಂಪೂರ್ಣ ತದ್ವಿರುದ್ಧ ವಿಚಾರಗಳನ್ನು ಸರಿಯೆಂದು ಒಪ್ಪಿಕೊಳ್ಳುವುದು. Memory hole ಎನ್ನುವುದು ಬೇಡವಾದ-ಮುಜುಗರವುಂಟು ಮಾಡುವ ದಾಖಲೆಗಳನ್ನು, ಪ್ರತಿಗಳನ್ನು, ಚಿತ್ರಗಳನ್ನು ನಾಶಮಾಡುವುದು ಅಥವಾ ತಿರುಚುವುದು.Thoughtcrime ಎನ್ನುವುದು ವಿರೋಧಿ ಯೋಚನೆಗಳನ್ನು-ಭಾವನೆಗಳನ್ನು ನಿಯಂತ್ರಿಸುವ ಸಾಧನ.

ಈ ಎಲ್ಲಾ ತತ್ವಗಳನ್ನು ಒಟ್ಟಾಗಿ ಅರ್ವೆಲಿಸಮ್(Orwellism)ಎಂದು ಕರೆಯುತ್ತಾರೆ.

ಹಾಗೆಯೇ ಈ ಪುಸ್ತಕದಿಂದ ಪ್ರಭಾವಿತವಾದ ಅನೇಕ ಪುಸ್ತಕಗಳು, ಚಲನಚಿತ್ರಗಳು, ಹಾಡುಗಳು ಹೊರಹೊಮ್ಮಿವೆ. 'Big Brother' ಹೆಸರಿನ ಟಿವಿ ಷೋ ಇದರಿಂದ ಪ್ರೇರಿತವಾಗಿದ್ದು.

ಪುಸ್ತಕದಿಂದ ಅತ್ಯಂತ ಪ್ರಭಾವಿತ ಆಪೆಲ್(Apple)ಕಂಪೆನಿ ೧೯೮೪ರಲ್ಲಿ ಆಪೆಲ್ ಮೆಕಂತೋಷ್(Macintosh)ಬಿಡುಗಡೆ ಮಾಡಿದಾಗಿನ ಜಾಹೀರಾತು ಇಲ್ಲಿದೆ.

ಕೆಲವು ಪುಸ್ತಕಗಳೇ ಹಾಗೇ, ಓದಿದ ಮೇಲೂ ಕಾಡುತ್ತಿರುತ್ತವೆ. ಅಂತಹ 1984ರ ಬಗ್ಗೆ ಯೋಚಿಸುತ್ತಾ , ಪುಸ್ತಕದ ಅತ್ಯಂತ ಸುಪ್ರಸಿದ್ಧ ಸಾಲುಗಳೊಂದಿಗೆ ಮುಗಿಸೋಣ.

War is Peace
Freedom is Slavery
Ignorance is Stregth

Friday, August 13, 2010

ಮರಿದುಂಬಿ !

ನಲ್ಮೆಯ ಸ್ನೇಹಿತರೇ,

ಹೀಗೊಂದು ವಾರದ ಹಿಂದೆ ನಮ್ಮ ಮನೆಯಲ್ಲಿ ನವಜೀವದ ಪ್ರವೇಶವಾಗಿದೆ.
ನಮ್ಮ ಪ್ರೀತಿಯ ಪ್ರತೀಕದ ಮಗಳ ಹೆಸರು - ಸಾನ್ವಿ

ಸಾನ್ವಿ ಚಿಕ್ಕ ಚಿಕ್ಕ ಹೆಜ್ಜೆ ಗುರುತುಗಳನ್ನು ಹೆಕ್ಕಿ ಜೋಪಾನಿಸಲಿಕ್ಕೆ ಒಂದು ಹೊಸ ಬ್ಲಾಗ್ ಶುರುಮಾಡಿದ್ದೇನೆ.

ಬ್ಲಾಗ್ ಹೆಸರು - ’ಸಾನ್ವಿಯ ಜೊತೆಯಲಿ’.

http://oursaanvi.blogspot.com/

ನಮ್ಮ ಸಂತಸ-ಸಡಗರದ ಹೆಜ್ಜೆಗಳನ್ನು ನೀವು ಬ್ಲಾಗ್ ಮೂಲಕ ನೋಡಿ ಆನಂದಿಸಿ ಆಶೀರ್ವದಿಸಿ.

ಪ್ರೀತಿಯಿಂದ,
ಪಾತರಗಿತ್ತಿ (ಮರಿದುಂಬಿಯೊಂದಿಗೆ)

Saturday, July 10, 2010

ಸಂಖ್ಯೆ ೧೦ ಜರ್ಸಿ

ಎಲ್ಲಾ ಕ್ರೀಡೆಗಳಲ್ಲಿ ಇದ್ದಂತೆ ಪುಟ್ಬಾಲ್‍ನಲ್ಲೂ ಜರ್ಸಿಯ ಪಾತ್ರ ಮಹತ್ವದ್ದು. ಜರ್ಸಿಯ ಬಣ್ಣ- ವಿನ್ಯಾಸದಿಂದ ಅದು ಯಾವ ತಂಡದ್ದೆಂದು ಅರಿಯಲು ಹೆಚ್ಚು ಸಮಯ ಬೇಕಿಲ್ಲ. ಹಾಲೆಂಡಿನ ಕೇಸರಿ ಬಣ್ಣದ ಜರ್ಸಿ, ಬ್ರೆಜಿಲ್‍ನ ಹಳದಿ ಜರ್ಸಿ, ಮೆಕ್ಸಿಕೋದ ಹಸಿರು ಜರ್ಸಿ, ಅರ್ಜೆಂಟೇನಾದ ಆಕಾಶ ನೀಲಿ-ಬಿಳಿ ಪಟ್ಟೆ ಜರ್ಸಿ..ಹೀಗೆ ನೋಡಿದ ತಕ್ಷಣ ಯಾವ ದೇಶದೆಂದು ಗೊತ್ತಾಗುವ ಪ್ರಸಿದ್ಧ ಜರ್ಸಿಗಳು.

ಇವೆಲ್ಲಕ್ಕಿಂತಲೂ ಸುಪ್ರಸಿದ್ಧವಾದದ್ದು ನಂ.೧೦ ರ ಜರ್ಸಿ.

ತಂಡದ ಶ್ರೇಷ್ಠ ಆಟಗಾರನಿಗೆ ಆ ೧೦ನೇ ಸಂಖ್ಯೆಯ ಜರ್ಸಿ ಮೀಸಲು. ಈ ಆಟಗಾರರು ಉತ್ಕೃಷ್ಟ ಪುಟ್ಬಾಲ್ ಕಲೆವುಳ್ಳವರು, ಹಾಗೇ ತಂಡದದ ಆಟದ ವೇಗವನ್ನು ನಿಯಂತ್ರಿಸುವವರು. ಒಂದೇ ಮಾತಲ್ಲಿ ಹೇಳುವುದಾದರೆ - ಪ್ಲೇ ಮೇಕರ್.


ಸಂಖ್ಯೆ ೧೦ ಜರ್ಸಿಯ ಸಂಪ್ರದಾಯ ಯಾವಾಗ-ಎಲ್ಲಿ ಪ್ರಾರಂಭವಾಯಿತೋ ಗೊತ್ತಿಲ್ಲ. ಆದರೆ ಸಂಖ್ಯೆ ೧೦ ಜರ್ಸಿ ಧರಿಸಿ ಅದಕ್ಕೆ ಸಿಕ್ಕಾಪಟ್ಟೆ ಮಹತ್ವವನ್ನು ತಂದವನು ಪೀಲೆ. ಬ್ರೆಜಿಲ್‍ನ ಈ ದಂತಕತೆ ಬಗ್ಗೆ ಅರಿಯದವರು ತುಂಬಾ ಕಡಿಮೆ.

ಆದರೆ ಸಂಖ್ಯೆ ಎಲ್ಲರ ಜನಮನದಲ್ಲಿ ನೆಲಸುವಂತೆ ಮಾಡಿದವನು ಮರಡೋನ. ಅರ್ಜೇಂಟೇನಾದ ಈ ಮಹಾನ್ ಆಟಗಾರ ೧೦ರ ಜರ್ಸಿ ಧರಿಸಿ ಮೈದಾನಕ್ಕೆ ಇಳಿದರೆ ಅಭಿಮಾನಿಗಳಲ್ಲಿ ರೋಮಾಂಚನ.


ನಂತರದ ದಿನಗಳಲ್ಲಿ ಇಟಲಿಯಲ್ಲಿ ರಾಬರ್ಟೋ ಬ್ಯಾಗಿಯೋ, ಫ್ರಾನ್ಸ್‍ನಲ್ಲಿ ಜಿನಡೀನ್ ಜೀಡಾನ್, ಬ್ರೆಜಿಲ್‍ನಲ್ಲಿ ರಿವಾಲ್ಡೋ, ರೋನಾಲ್ಡೋ ೧೦ರ ಜರ್ಸಿ ಧರಿಸಿದವರು.

ಇತ್ತೀಚಿನ ದಿನಗಳಲ್ಲಿ ೧೦ರ ಜರ್ಸಿ ವಾರಸುದಾರರು ಹೊಸ ಪೀಳಿಗೆಯ ಶ್ರೇಷ್ಠ ಆಟಗಾರರು. ಈ ಸಲದ ವಿಶ್ವಕಪ್‍ನಲ್ಲಿ ನಂ.೧೦ ಧರಿಸಿದವರ ಪಟ್ಟಿ ನೋಡಿ.

ಅರ್ಜೆಂಟೇನಾದ ಮಾಯಾವಿ ಲಿಯಾನಾಲ್ ಮೆಸ್ಸಿ

ಇಂಗ್ಲೆಂಡ್‍ನ ವೇನ್ ರೂನಿ

ಬ್ರೆಜಿಲ್‍ನ ಕಾಕಾ

ಹಾಲೆಂಡ್‍ನ ವೆಸ್ಲೆ ಸಿನ್ಡಿಜರ್

ಸ್ಪೇನ್‍ನ ಪೆಬ್ರಿಗಸ್

ಹೀಗೆ ನಿಜಕ್ಕೂ ಬಹುತೇಕ ತಂಡಗಳಲ್ಲಿ ನಂ.೧೦ ಶ್ರೇಷ್ಠರಿಗೆ ಮೀಸಲಾಗಿದೆ.

ಈ ಬಾರಿಯ ವಿಶ್ವಕಪ್‍ನ ಇನ್ನೊಂದು ಸಂಗತಿಯೆಂದರೆ ತುಂಬಾ ನಿರೀಕ್ಷೆಯುಂಟು ಮಾಡಿದ್ದ ಅನೇಕ ನಂ.೧೦ ಆಟಗಾರರು, ಹೇಳಿಕೊಳ್ಳುವಂತಹ ಪಾತ್ರವಹಿಸದಿದ್ದದ್ದು.


ಮೆಸ್ಸಿ, ಮೆರಡೋನ ನಂತರ ಯಾರು ಎಂಬ ಪ್ರಶ್ನೆಗೆ ಆರ್ಜೆಂಟೇನಾದ ಉತ್ತರ. ಮರಡೋನನ ಶೈಲಿ ಹೋಲುವ ಆಟ, ಡ್ರಿಬ್ಲಿಂಗ್ ಮತ್ತು ಸುಂದರ ಪಾಸ್‍ಗಳು. ಆದರೆ ಅಂತಹ ಹೇಳಿಕೊಳ್ಳುವಂತಹ ಸಾಧನೆ ಬರಲೇ ಇಲ್ಲ. ಅರ್ಜೆಂಟೇನಾ ವಿಶ್ವಕಪ್‍ನಿಂದ ಹೊರಗೆ.

ಮತ್ತೊಬ್ಬ ಆಟಗಾರ ರೂನಿ, ಇಂಗ್ಲೆಂಡ್‍ ತಂಡದ ಮಿಂಚಿನ ಬಳ್ಳಿ ಈ ಸಲ ಮಿಂಚಲೇ ಇಲ್ಲ. ಇಂಗ್ಲೆಂಡ್ ಸಹ ವಿಶ್ವಕಪ್‍ನಿಂದ ಹೊರಕ್ಕೆ.

ಇದರ ಆಧಾರದ ಮೇಲೆ ಸಂಚಲಿಸುತ್ತಿರುವ ಹೊಸ ವಾದವೆಂದರೆ ನಂ.೧೦ರ ಶ್ರೇಷ್ಠನನ್ನು ನೆಚ್ಚಿಕೊಂಡ ತಂಡಗಳೆಲ್ಲಾ ಸೋಲು ಕಂಡಿವೆ. ಅದರ ಬದಲಿಗೆ ಯಾವುದೇ ಶ್ರೇಷ್ಠರಿಲ್ಲದ ಆದರೆ ಅತ್ಯುತ್ತಮ ಸಾಂಘಿಕ ಆಟ ನೀಡುವ ತಂಡಗಳು ಮುನ್ನಡೆಯುತ್ತಿವೆ. ಉದಾಹರಣೆಗೆ ಜರ್ಮನಿ.

ಎನೇ ಆಗಲಿ, ನಂ.೧೦ ಜರ್ಸಿ ಧರಿಸಿದವರಿಗಷ್ಟೇ ಗೊತ್ತು ಅದರ ಮಹಿಮೆ ಮತ್ತು ಭಾರ.

Monday, July 05, 2010

ಜೋಗ ಬೋನಿಟೊ !!

ಅದು ೧೯೫೦

ವಿಶ್ವಕಪ್ ಪುಟ್ಬಾಲ್ ಆ ವರ್ಷ ಬ್ರೆಜಿಲ್‍ನಲ್ಲಿ, ಎಲ್ಲಕ್ಕೂ ಕಳಶವಿಟ್ಟಂತೆ ಅತಿಥೇಯ ಬ್ರೆಜಿಲ್ ಫೈನಲ್ ತಲುಪಿತ್ತು. ಫೈನಲ್‍ನಲಿ ಎದುರಾಳಿ ಉರುಗ್ವೆ. ಬ್ರೆಜಿಲ್ ವಿಜಯ ನಿರೀಕ್ಷಿಸಿ ಇಡೀ ಬ್ರೆಜಿಲ್‍ಗೆ ಬ್ರೆಜಿಲ್ ಕಾತರದಿಂದ ಕಾದಿತ್ತು. ಆದರೆ ಫೈನಲ್‍ನಲ್ಲಿ ಉರುಗ್ವೆ ಬ್ರೆಜಿಲ್‍ನ್ನು ೨-೧ ಗೋಲುಗಳ ಅಂತರದಿಂದ ಸೋಲಿಸಿ ವಿಶ್ವಕಪ್ ಗೆದ್ದುಬಿಟ್ಟಿತ್ತು.ಸೋಲಿನ ಸುದ್ದಿ ಬ್ರೆಜಿಲ್ ಜನರನ್ನು ಕಂಗೆಡಿಸಿಬಿಟ್ಟಿತ್ತು. ೧೦ ವರ್ಷದ ಚಿಕ್ಕ ಹುಡುಗನೊಬ್ಬ ತನ್ನ ತಂದೆ ಆ ಸೋಲಿನ ಸುದ್ದಿಗೆ ಕಣ್ಣೀರು ಹಾಕಿದ್ದನ್ನು ನೋಡಿದ್ದ. ಮಲಗುವ ಮುನ್ನ ತನ್ನ ತಂದೆಗೆ ಹೇಳಿದ್ದ ’ನಾನು ವಿಶ್ವಕಪ್ ಗೆಲ್ಲುತ್ತೇನೆ. ಬ್ರೆಜಿಲ್‍ಗೆ ಮತ್ತು ನಿನಗೆ ವಿಶ್ವಕಪ್ ತಂದುಕೊಡುತ್ತೇನೆ’.

ಅದಾಗಿ ೮ ವರ್ಷದಲ್ಲಿ ಆ ಹುಡುಗ ಬ್ರೆಜಿಲ್‍ಗೆ ವಿಶ್ವಕಪ್‍ನ್ನು ಗೆದ್ದುಕೊಟ್ಟ ಸಹ. ನಂತರ ಇನ್ನೂ ಎರಡು ಸಲ ಬ್ರೆಜಿಲ್ ಪುಟ್ಬಾಲ್ ವಿಶ್ವಕಪ್ ‍ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ.

ಆತ ಪೀಲೆ. ಪುಟ್ಬಾಲ್‍ನ ದಂತಕತೆ ಆದವನು.

ಜಗತ್ತಿನ ಬೇರೆಡೆ ಪುಟ್ಬಾಲ್ ಒಂದು ಕ್ರೀಡೆಯಾದರೆ , ಬ್ರೆಜಿಲ್‍ಗೆ ಪುಟ್ಬಾಲ್ ಎಂದರೆ ಜೀವನ, ಜೀವನವೆಂದರೆ ಪುಟ್ಬಾಲ್.

ಇಂಗ್ಲೀಷ್‍ರು ಪುಟ್ಬಾಲ್‍ ಕಂಡುಹಿಡಿದದ್ದು, ಬ್ರೆಜಿಲ್‍ನವರು ಪುಟ್ಬಾಲ್ ಪರಿಪಕ್ವ ಮಾಡಿದ್ದು ಎಂಬ ಮಾತಲ್ಲಿ ಏನೂ ಸಂಶಯವಿಲ್ಲ.

ಪೀಲೆ ಕಾಲದಲ್ಲಿ ಶುರುವಾದ ಪುಟ್ಬಾಲ್ ಸೊಗಸು ಇಲ್ಲಿಯವರಿಗೆ ಹಾಗೇ ಸಾಗಿ ಬಂದು, ಬ್ರೆಜಿಲ್ ಐದು ಬಾರಿ ವಿಶ್ವಕಪ್ ಗೆದ್ದಿದೆ. ಪೀಲೆ ನಂತರ ರೋನಾಲ್ಡೋ, ರೋಮಾರಿಯೋ, ರಿವಾರಿಯೋ, ರಿರ್ಚಾಡೋ ಕಾರ್ಲೋಸ್, ಬೆಬಿಟೋ ತರದ ಇನ್ನೂ ಅನೇಕ ಶ್ರೇಷ್ಠ ಆಟಗಾರರು ಬ್ರೆಜಿಲ್‍ನಿಂದ ಹೊರಹೊಮ್ಮಿದ್ದಾರೆ.


ಒಂದು ದೇಶದಿಂದ ಇಷ್ಟೊಂದು ಜನ ಶ್ರೇಷ್ಠ ಆಟಗಾರರು, ಒಂದು ತಂಡದಿಂದ ಇಷ್ಟೊಂದು ನಿರೀಕ್ಷೆ ಆಗಿದ್ದಾದರೂ ಹೇಗೆ?

ಉತ್ತರ ಇರುವುದು ಬ್ರೆಜಿಲ್‍ನ ಗಲ್ಲಿಗಲ್ಲಿಗಳಲ್ಲಿ !

ಪೀಲೆಯಿಂದ ಹಿಡಿದು ಇತ್ತೀಚಿನ ರೋನಾಲ್ಡೋವರೆಗೆ, ಎಲ್ಲಾ ಮಹಾನ್ ಆಟಗಾರರು ಬಂದದ್ದು ಬ್ರೆಜಿಲ್‍ನ ಕಡುಬಡತನದಿಂದ ನರಳುತ್ತಿದ್ದ ಬೀದಿಗಳಿಂದ. ಪುಟ್ಬಾಲ್ ಆಟದ ಪ್ರೀತಿಯ ಜೊತೆಗೆ ಬಡತನದ ಸುಳಿಯಿಂದ ಹೊರಬರುವ ಹೋರಾಟವು ಸೇರಿ, ಪುಟ್ಬಾಲ್ ಜೀವನದ ಭಾಗವೇ ಆಗಿಬಿಟ್ಟಿತ್ತು. ಪೀಲೆಯಂತ ಬ್ರೆಜಿಲ್‍ ಆಟಗಾರನನ್ನು ಕೋಟಿಗಟ್ಟಲೇ ಹಣ ನೀಡಿ,ತಮ್ಮ ಕ್ಲಬ್‍ಗಳಿಗೆ ಆಡುವಂತೆ ಯೂರೋಪ್‍ನ ಹಣವಂತ ಪುಟ್ಬಾಲ್ ಕ್ಲಬ್‍ಗಳು ಬ್ರೆಜಿಲ್ ಕದ ತಟ್ಟಲು ಯಾವಾಗ ಶುರು ಮಾಡಿದವೋ, ಬ್ರೆಜಿಲ್‍ನ ಬೀದಿಬೀದಿಗಳಲ್ಲಿ ಪುಟ್ಬಾಲ್ ಆಡುತ್ತಿದ್ದ ಹುಡುಗರಲ್ಲಿ ಬಡತನಕ್ಕೆ ಉತ್ತರ ಸಿಕ್ಕಿಬಿಟ್ಟಿತ್ತು.ಬ್ರೆಜಿಲ್ ಅಲ್ಲದೇ ಲ್ಯಾಟೀನ್ ಅಮೇರಿಕಾದ ಅನೇಕ ದೇಶಗಳಲ್ಲಿ ಪುಟ್ಬಾಲ್ ಆಡುವ ಹುಡುಗರು ಪೌಂಡ್-ಡಾಲರ್-ಯುರೋಗಳಲ್ಲಿ ಹಣ ಎಣಿಸತೊಡಗಿದರು. ಈಗಲೂ ಯುರೋಪಿನ ಪುಟ್ಬಾಲ್ ಕ್ಲಬ್‍ನ ಆಟಗಾರರ ಪಟ್ಟಿಯಲ್ಲಿ ಬ್ರೆಜಿಲ್ ಮತ್ತು ಇತರೆ ಲ್ಯಾಟೀನ್ ಅಮೇರಿಕಾ ದೇಶದ ಆಟಗಾರರ ಸಂಖ್ಯೆ ಗಣನೀಯ.


ಅದರೆ ಅಭಿಮಾನಿಗಳಿಗೆ ಬ್ರೆಜಿಲ್ ಇತರ ತಂಡಗಳಿಗಿಂತ ಬಿನ್ನವಾಗಿ ನಿಲ್ಲುವುದು - ಆಟದ ಶೈಲಿಯಲ್ಲಿ. ಬ್ರೆಜಿಲ್‍ನ ಆಟಕ್ಕೆ ಇರುವ ಹೆಸರು ’ಜೋಗ ಬೋನಿಟೊ’(ಸುಂದರ ಆಟ). ಹೆಸರಿಗೆ ತಕ್ಕಂತೆ ಬ್ರೆಜಿಲ್ ಆಟ ನೋಡಲು ಮನಮೋಹಕ. ಆಟದಲ್ಲಿನ ಕಲ್ಮಾತಕತೆ, ಕೌಶಲ್ಯ, ಕುಸುರಿ ಕಲೆ. ನೋಡಲಿಕ್ಕೆ ಚೆಂದ.

ಇಂತಹ ಬ್ರೆಜಿಲ್, ಪೀಲೆಯ ನಂತರ ಸುಮಾರು ೨೪ ವರ್ಷ ವಿಶ್ವಕಪ್‍ನಲ್ಲಿ ಅಂತಹ ಸಾಧನೆಯೇನೂ ಮಾಡಲಿಲ್ಲ. ಕೊನೆಗೆ ೧೯೯೪ರಲ್ಲಿ ಮರಳಿ ವಿಶ್ವಕಪ್ ಗೆದ್ದಾಗ ಆ ಬರಗಾಲ ಮುಗಿದಿತ್ತು. ಅದಾದ ನಂತರ ಮತ್ತೆ ೨೦೦೨ರ ವಿಶ್ವಕಪ್ ಜಯಿಸಿತ್ತು. ನಂತರ ೨೦೦೬ರ ವಿಶ್ವಕಪ್‍ನಲ್ಲೂ ಅಂತಹ ನಿರೀಕ್ಷಿತ ಫಲಿತಾಂಶ ಬರಲಿಲ್ಲ.

ಬ್ರೆಜಿಲ್ ಯಾವ ಪಂದ್ಯ ಆಡಲು ಇಳಿದರೂ, ಗೆದ್ದೆ ಗೆಲ್ಲಬೇಕೆಂಬ ನಿರೀಕ್ಷೆ ಯಾವಾಗಲೂ ಇದ್ದದ್ದೇ. ಈ ನಂಬಿಕೆ ಮತ್ತು ನಿರೀಕ್ಷೆ ಕೆಲವೊಮ್ಮೆ ಬ್ರೆಜಿಲ್‍ ತಂಡವನ್ನು ಸುಖಾಸುಮ್ಮನೆ ಅತೀ ಒತ್ತಡಕ್ಕೆ ಒಳಪಡಿಸುವಂತೆ ತೋರುತ್ತದೆ. ಈ ಒತ್ತಡದ ಜೊತೆ ಬ್ರೆಜಿಲ್ ಆಟದ ಶೈಲಿಯ ಬಗ್ಗೆಯೂ ಚರ್ಚೆ ನಡೆದಿದೆ. ಜೋಗ ಬೋನಿಟೋ ಶೈಲಿ ನೋಡಲಿಕ್ಕೆ ಸೊಗಸೆನಿಸಿದರೂ ಫಲಿತಾಂಶ ಬರುತ್ತಿಲ್ಲವೆಂಬ ವಾದವಿದೆ.

ಆ ವಾದದ ಆಧಾರದ ಮೇಲೆಯೇ ಈ ಸಲದ ವಿಶ್ವಕಪ್‍ನ ಬ್ರೆಜಿಲ್ ತರಬೇತುದಾರ ಡುಂಗಾ, ಶೈಲಿಗಿಂತ ಫಲಿತಾಂಶ ನೀಡುವ ಕಡೆಗೆ ಗಮನ ಹರಿಸಿದ್ದ.ವಿಶ್ವಕಪ್‍ನ ಮೊದಲು ನಾಲ್ಕು ಪಂದ್ಯಗಳಲ್ಲಿ ಸೊಗಸಾಗಿ ಆಡಿ ಗೆದ್ದ ಬ್ರೆಜಿಲ್ ಮತ್ತೆ ನಿರೀಕ್ಷೆ ಮೂಡಿಸಿತ್ತು. ಆದರೆ ಬ್ರೆಜಿಲ್ ಕ್ವಾರ್ಟರ್ ಫೈನಲ್‍ನಲ್ಲಿ ಅನಿರೀಕ್ಷಿತವಾಗಿ ಮುಗ್ಗರಿಸಿತು.

ಈಗ ಮತ್ತೆ ಬ್ರೆಜಿಲ್ ಆಟದ ತಂತ್ರಗಾರಿಕೆಯ ಬಗ್ಗೆ ವಾದ ಶುರುವಾಗಿದೆ. ಮುಂದಿನ ವಿಶ್ವಕಪ್ ೨೦೧೪ರಲ್ಲಿ ಬ್ರೆಜಿಲ್‍ನಲ್ಲೇ ನಡೆಯಲಿದೆ. ಅಲ್ಲಿಯವರೆಗೆ ಬ್ರೆಜಿಲ್ ಪುಟ್ಬಾಲ್ ಯಾವ ಹಾದಿಯಲ್ಲಿ ನಡೆಯಲಿದೆ ಎನ್ನುವುದು ಕುತೂಹಲ ಎಲ್ಲಾ ಅಭಿಮಾನಿಗಳಿಗೆ ಇದ್ದೇ ಇದೆ.ಇಲ್ಲಿಯವರೆಗೆ ಆದ ಎಲ್ಲಾ ವಿಶ್ವಕಪ್‍ಗಳಲ್ಲಿ ಭಾಗವಹಿಸಿದ ಏಕಮೇವ ದೇಶ, ಮುಂದಿನ ದಿನಗಳಲ್ಲಿ ಹೇಗೆ ಮುಂದುವರೆಯಲಿದೆ, ಕಾದು ನೋಡಬೇಕು.

Sunday, June 13, 2010

ವೀವಾ ಪುಟ್ಬಾಲ್ !


ನೆರೆತ ಗಡ್ಡದ ಚಿಕ್ಕ ಕಾಯದ ಆ ಸೂಟ್‍ದಾರಿ ಕ್ರೀಡಾಂಗಣದಲ್ಲಿ ಬರುತ್ತಿದ್ದಂತೆ ಎಲ್ಲೆಡೆ ಮಿಂಚಿನ ಸಂಚಲನ. ಸಾವಿರಾರು ಪ್ರೇಕ್ಷಕರಿಂದ ಮೆಚ್ಚುಗೆಯ ಕರತಾಡನ. ಆತ ಆ ತಂಡದ ಆಟಗಾರನಲ್ಲ. ತಂಡದ ಕೋಚ್..

ಆತ ಡಿಯಗೋ ಮರಡೋನ..

ಅರ್ಜೆಂಟೇನಾ ಎಂಬ ಆ ಲ್ಯಾಟೀನ್ ಅಮೇರಿಕಾದ ದೇಶದ ಬಗ್ಗೆ ಜಗತ್ತು ನಿಬ್ಬೆರಗಾಗಿ ನೋಡುವಂತೆ ಮಾಡಿದ್ದವನು. ನಮ್ಮಂತಹ ಸಣ್ಣ ಊರಿನ ಚಿಕ್ಕ ಹುಡುಗರು ಪುಟ್ಬಾಲ್‍ ಎಂಬ ಆ ಮೋಹಕ ಸುಳಿಯಲ್ಲಿ ಸಿಲುಕುವಂತೆ ಮಾಡಿದ್ದವನು. ನಿಜವೆಂದರೆ ಆರ್ಜೆಂಟೇನಾ ಎಂಬ ದೇಶದ ಹೆಸರು ಮೊದಲು ಕೇಳಿದ್ದೆ ಆತನ ಮೂಲಕ. ಒಂದಿಡೀ ತಲೆಮಾರು ಪುಟ್ಬಾಲ್‍ನ್ನು ಒಂದು ಧರ್ಮದಂತೆ , ಆತನನ್ನು ಪುಟ್‍ಬಾಲ್ ದೈವದಂತೆ ಕಂಡಿದ್ದರಲ್ಲಿ ಆಶ್ಚರ್ಯವೇನಿಲ್ಲ.

’ಜಯ್ ಹಿಂದ್’ ಹೆಸರಿನ ನಮ್ಮೂರಿನ ಪುಟ್ಬಾಲ್ ಕ್ಲಬ್‍ಗೆ ಸೇರುವಂತೆ ಮಾಡಿದ್ದು ಮರಡೋನ ಎಂಬ ಮಾಂತ್ರಿಕನ ಆಟದ ಮೋಡಿ. ಆಗ ಮೋಡಿ ಎಷ್ಟಿತ್ತೆಂದರೆ ಆರ್ಜೇಂಟೇನಾದ ನೀಲಿ-ಬಿಳಿ ಪಟ್ಟಿಯ ಸಮವಸ್ತ್ರ ನಮ್ಮ ತಂಡದ ಸಮವಸ್ತ್ರವೂ ಆಗಿಬಿಟ್ಟಿತ್ತು. ನಮ್ಮೂರಿನ ಕ್ಲಬ್ ಅದಕ್ಕಿಂತ ತುಂಬಾ ವರ್ಷ ಮುಂಚಿನಿಂದ ಇದ್ದು ಹೆಸರು ಮಾಡಿದ್ದರೂ, ಅನೇಕ ಬಾಲಕರನ್ನು, ಬಿಸಿ ರಕ್ತದ ಹುಡುಗರನ್ನು ಪುಟ್ಬಾಲ್ ಕಡೆ ಸೆಳೆದದ್ದು ಮರಡೋನ ಕಾಲದಲ್ಲಿ.

ಒರೆಗೆಯ ಹುಡುಗರು ಕ್ರಿಕೆಟ್ ಬ್ಯಾಟ್-ಬಾಲ್ ಹಿಡಿದು ಓಡಾಡುತ್ತಿದ್ದರೆ, ನಮ್ಮದು ಬೇರೆಯದೇ ಪ್ರಪಂಚ. ಮಂಗಳವಾರವೊಂದು ಬಿಟ್ಟು ವಾರದ ಪ್ರತಿದಿನವು ೫ ಗಂಟೆಗೆ ಗಾಂಧೀ ಮೈದಾನದಲ್ಲಿ ಪುಟ್ಬಾಲ್ ಓಡತೊಡಗುತಿತ್ತು. ಮಂಗಳವಾರ ನಮ್ಮೂರಿನ ಸಂತೆ ಇದ್ದರಿಂದ ಆವತ್ತು ಮೈದಾನಕ್ಕೆ-ನಮಗೆ ರಜೆ !

ಮೈದಾನಕ್ಕೆ ಬರುತ್ತಿದ್ದಂತೆ ಎಲ್ಲರೂ ಕಡ್ಡಾಯವಾಗಿ ಮೈದಾನದ ೨-೩ ಸುತ್ತು ಓಡಿ, ನಂತರ ವಾರ್ಮ್-ಅಪ್ ಕಸರತ್ತು ಮಾಡಿದ ಮೇಲೆಯೇ ಪುಟ್ಬಾಲ್ ಮುಟ್ಟುವುದಕ್ಕೆ ಬಿಡುತ್ತಿದ್ದದ್ದು. ನಮ್ಮ ಕ್ಲಬ್‍ನ ಹಿರಿಯ-ಕಿರಿಯ ಆಟಗಾರವೆನ್ನದೆ ಎಲ್ಲರಿಗೂ ಇದು ಕಡ್ಡಾಯ. ನಮ್ಮಂತಹ ೧೦-೧೨ ವರ್ಷದ ಹುಡುಗರಿಂದ ಹಿಡಿದು ೪೦-೫೦ ವರ್ಷದವರೆಗಿನ ದೊಡ್ಡವರೆಲ್ಲರೂ ನಮ್ಮ ಕ್ಲಬ್‍ನ ಸದಸ್ಯರು. ವಯಸ್ಸಿಗೆ ಅನುಗುಣವಾಗಿ ಸಬ್ ಜ್ಯೂನಿಯರ್, ಜ್ಯೂನಿಯರ್ ಮತ್ತು ಸೀನಿಯರ್ ತಂಡಗಳಾಗಿ ವಿಂಗಡನೆ.

ವಾರ್ಮ್ ಅಪ್ ಆದ ನಂತರ ಉರುಳುವ ಚೆಂಡನ್ನು ಗೋಲ್ ಮೇಲೆ ಹೊಡೆಯುವ ಅಭ್ಯಾಸ. ಸಬ್ ಜ್ಯೂನಿಯರ್- ಜ್ಯೂನಿಯರ್ ಆಟಗಾರರೆಲ್ಲಾ ಗೋಲ್ ಕಂಬದ ಹಿಂದೆ ನಿಲ್ಲುತ್ತಿದ್ದೆವು. ಸೀನಿಯರ್ ತಂಡದ ಆಟಗಾರರು ಹೊಡೆದ ಚೆಂಡು ಮೈದಾನದ ಆಚೆ ಹೋಗದಂತೆ ತಡೆಯುವುದೇ ನಮ್ಮ ಕೆಲಸ. ಆ ಮೈದಾನಕ್ಕೆ ಕಾಂಪೊಂಡ್-ಬೇಲಿ ಯಾವುದೂ ಇರದಿದ್ದರಿಂದ ಒದ್ದ ಬಾಲ್‍ಗಳೆಲ್ಲಾ ಪಕ್ಕದ ರಸ್ತೆಗೆ ಬೀಳುತ್ತಿದ್ದವು. ಕ್ಲಬ್‍ಗೆ ಹೊಸದಾಗಿ ಸೇರಿದ ನಮ್ಮಂತಹ ಕಲಿಯುವ ಹುಡುಗರ ಕೆಲಸ ಆ ಚೆಂಡುಗಳು ರಸ್ತೆಗೆ ಬೀಳದಂತೆ ನೋಡಿಕೊಳ್ಳುವುದು. ಅದರ ಜೊತೆ ಗೋಲ್ ಪೋಸ್ಟಿನ ಹಿಂದಿನಿಂದ ಯಾವ ಸಂದರ್ಭದಲ್ಲಿ ಚೆಂಡನ್ನು ಹೇಗೆ ಹೊಡೆಯಬೇಕೆಂಬುದನ್ನು ಹತ್ತಿರದಿಂದ ನೋಡಿ ಕಲಿಯುವ ಅವಕಾಶ.

ಗೋಲ್ ಹೊಡೆಯುವ ಅಭ್ಯಾಸದ ನಂತರ ಅಭ್ಯಾಸ ಪಂದ್ಯ ಪ್ರಾರಂಭ. ಅಭ್ಯಾಸಕ್ಕೆ ಬಂದ ಆಟಗಾರರನ್ನು ಎರಡು ತಂಡಗಳಾಗಿ ವಿಂಗಡಿಸಲಾಗುತಿತ್ತು. ಸೀನಿಯರ್ ಮತ್ತು ಬಹುತೇಕ ಜ್ಯೂನಿಯರ್ ಆಟಗಾರರು ಆ ತಂಡಗಳಲ್ಲಿ ಇರುತ್ತಿದ್ದರು. ಅವರ ಪಂದ್ಯ ಶುರುವಾಗುತಿದ್ದಂತೆ ನಾವು ಸಬ್ ಜ್ಯೂನಿಯರ್ ಆಟಗಾರರು ನಮ್ಮದೇ ತಂಡಗಳನ್ನು ಮಾಡಿಕೊಂಡು ನಮ್ಮ ಪಂದ್ಯ ಶುರುಮಾಡಿಕೊಳ್ಳುತ್ತಿದ್ದೆವು.

ಪುಟ್‍ಬಾಲ್‍ನಲ್ಲಿ ಪಾಸ್‍ಗಳ ಪಾತ್ರ ಪ್ರಮುಖ, ಒಬ್ಬ ಆಟಗಾರ ಚೆಂಡನ್ನು ಇನ್ನೊಬ್ಬ ಆಟಗಾರನಿಗೆ ಸಾಗಿಸುವುದೇ ಪಾಸ್. ನಮ್ಮ ಕ್ಲಬ್‍ನಲ್ಲಿ ಯಾವಾಗಲೂ ಬಾಲ್ ಪಾಸ್ ಮಾಡಬೇಕೆಂಬುದು ಮೊದಲ ಪಾಠ . ಕ್ಷಿಪ್ರ ಪಾಸ್‍ಗಳಿಂದ ಎದುರಾಳಿ ತಂಡದ ರಕ್ಷಣೆ ಭೇದಿಸಿ ಗೋಲ್ ಮಾಡುವುದು ಉದ್ದೇಶ.

ಅದೇ ಸಮಯದಲ್ಲಿ ನಾವೆಲ್ಲ ನೋಡಿದ್ದು ಮರಡೋನನ ಅದ್ಭುತ ಕಾಲ್ಚೆಳಕ. ಪಾಸ್‍ಗಳಿಗಿಂತ ಡ್ರಿಬ್ಲಿಂಗ್‍ನಿಂದ ನಮ್ಮನ್ನು ಆಕರ್ಷಿಸಿದವನು. ಪ್ರತಿದ್ವಂದಿ ತಂಡದ ಆಟಗಾರರನ್ನು ಕಲಾತ್ಮಕವಾಗಿ-ಚಾಣಾಕ್ಷತೆಯಿಂದ ಕಂಗೆಡಿಸಿ ಚೆಂಡನ್ನು ಮುನ್ನಡಿಸಿಕೊಂಡು ಹೋಗುವುದೆ ಡ್ರಿಬ್ಲಿಂಗ್‍. ಮರಡೋನ ತಾಕತ್ ಇದ್ದಿದ್ದೇ ಇದರಲ್ಲಿ. ೩-೪ ಎದುರಾಳಿ ಆಟಗಾರರನ್ನು ವಂಚಿಸಿ ಗೋಲ್ ಮಾಡಿದ್ದು, ಒಮ್ಮೆ ಇಂಗ್ಲೆಂಡ್ ವಿರುದ್ಧ ೬ ಆಟಗಾರರನ್ನು ವಂಚಿಸಿ ಗೋಲ್ ಮಾಡಿದ್ದು, ನಮಗೆಲ್ಲಾ ಮರಡೋನ ಹೀರೋ ಪಟ್ಟಕ್ಕೆ ಏರಿಸಲು ಸಾಕಿತ್ತು.

ಡ್ರಿಬ್ಲಿಂಗ್ ಮಾಡುವದರಿಂದ ಅದು ಸಾಂಘಿಕ ಆಟವಾಗದೇ ಒಬ್ಬ ಆಟಗಾರನ ಆಟವಾಗುತ್ತೆಂಬ ಭಾವನೆಯಿದೆ. ಅದು ತಕ್ಕ ಮಟ್ಟಿಗೆ ನಿಜ ಸಹ. ಅದೇ ಕಾರಣಕ್ಕೆ ನಮ್ಮ ಕ್ಲಬ್‍ನಲ್ಲಿ ಡ್ರಿಬ್ಲಿಂಗ್‍ಕ್ಕಿಂತ ಪಾಸ್‍ಗೆ ಹೆಚ್ಚು ಒತ್ತು ನೀಡುತ್ತಿದ್ದುದು. ಆವಾಗಲೇ ಮರಡೋನ ಪರಿಣಾಮ ಕಾಣಿಸತೊಡಗಿದ್ದು. ನಮ್ಮ ತಂಡದಲ್ಲಿ ಜ್ಯೂನಿಯರ್ ಆಟಗಾರರು ಹೆಚ್ಚು ಡ್ರಿಬ್ಲಿಂಗ್ ಮಾಡತೊಡಗಿದ್ದು ಮತ್ತು ಸೀನಿಯರ್ ಆಟಗಾರರು ನಮ್ಮನೆಲ್ಲಾ ಬೈಯತೊಡಗಿದ್ದು !

ಮರಡೋನ ತಂಡದಲ್ಲಿ ಇರುವವರೆಗೆ ಆರ್ಜೆಂಟೇನಾ ಬಿಟ್ಟು ಬೇರೆ ತಂಡವನ್ನು ವಿಶ್ವಕಪ್‍ನಲ್ಲಿ ಬೆಂಬಲಿಸಿದ್ದೇ ಇಲ್ಲ. ಮರಡೋನ ಆಟಗಾರನಾಗಿ ನೇಪಥ್ಯಕ್ಕೆ ಸರಿದದ್ದು ೧೯೯೪ರಲ್ಲಿ. ಅಂತಹ ಮರಡೋನ ಬಹು ವರ್ಷಗಳ ನಂತರ ಮರಳಿದ್ದು ಈ ಸಲದ ವಿಶ್ವಕಪ್‍ಗೆ ಅರ್ಜೆಂಟೀನಾ ತಂಡದ ಕೋಚ್ ಆಗಿ.

ಪುಟ್ಬಾಲ್ ವಿಶ್ವಕಪ್...

೪ ವರ್ಷಗಳಿಗೊಮ್ಮೆ ನಡೆಯುವ ಪುಟ್ಬಾಲ್ ಮಾಂತ್ರಿಕರ ಸಮರ. ಬಹುಷಃ ಓಲಂಪಿಕ್‍ನಷ್ಟೇ ಜಗತ್ತಿನಾದ್ಯಂತದ ದೇಶಗಳಲ್ಲಿ ಜನ ನೋಡುವ ಪಂದ್ಯಾವಳಿ.ಜಗತ್ತಿನ ಸುಮಾರು ೨೦೦ಕ್ಕೂ ಹೆಚ್ಚು ದೇಶಗಳು ಪೂರ್ವಭಾವಿ ಸುತ್ತುಗಳಲ್ಲಿ ಸೆಣಸಿ, ಅದರಲ್ಲಿ ೩೨ ದೇಶಗಳಷ್ಟೇ ವಿಶ್ವಕಪ್‍ಗೆ ಮುನ್ನಡೆಯುವುದು. ಅಲ್ಲಿ ಜಗತ್ತಿನ ಶ್ರೇಷ್ಠ ತಂಡಗಳೊಡನೆ ಸ್ಪರ್ಧಿಸಿ ಕೊನೆಗೆ ವಿಶ್ವಕಪ್ ಗೆಲ್ಲುವುದು ಎಲ್ಲಾ ದೇಶಗಳ ಕನಸು.

ಒಂದೊಂದು ವಿಶ್ವಕಪ್‍ ಸಹ ಹಲವಾರು ಯಶಸ್ಸಿನ ಕತೆಗಳನ್ನು ಮತ್ತು ಅಮೋಘ ಆಟಗಾರರ ದಂತಕತೆಗಳನ್ನು ತೆರೆದಿಡುತ್ತದೆ. ಹಾಗೆಯೇ ಮತ್ತೆ ನೆನಪು ಮಾಡಿಕೊಳ್ಳಲು ಇಚ್ಚಿಸದ ಕತೆಗಳನ್ನು ಸಹ.

೧೯೮೬ ಮೆಕ್ಸಿಕೋ ವಿಶ್ವಕಪ್‍ನಲ್ಲಿ ಆರ್ಜೆಂಟೇನಾ ತಂಡದ ಜಯ, ೧೯೯೦ ಇಟಲಿ ವಿಶ್ವಕಪ್‍ನಲ್ಲಿ ಅದೇ ಅರ್ಜೆಂಟೇನಾ ತಂಡ ಸೋತದ್ದು, ೧೯೯೪ರ ಅಮೇರಿಕಾ ವಿಶ್ವಕಪ್‍ನಲ್ಲಿ ಬ್ರೆಜಿಲ್‍ನ ಪುನಾರಗಮನ, ೧೯೯೮ರ ಫ್ರಾನ್ಸ್ ವಿಶ್ವಕಪ್‍ನಲ್ಲಿ ಅತಿಥೇಯರ ದಿಗ್ವಿಜಯ, ಅದೇ ಪಂದ್ಯಾವಳಿಯಲ್ಲಿ ಬ್ರೆಜಿಲ್‍ ಮುಖಭಂಗ ಅನುಭವಿಸಿದ್ದು, ೨೦೦೨ರ ಜಪಾನ್ ವಿಶ್ವಕಪ್‍ನಲ್ಲಿ ಮತ್ತೆ ಬ್ರೆಜಿಲ್‍ನ ಪರಾಕ್ರಮ, ೨೦೦೬ರ ಜರ್ಮನಿ ವಿಶ್ವಕಪ್‍ನಲ್ಲಿ ಇಟಲಿಯ ವಿಜಯ....ಹೀಗೆ ಅನೇಕ ಗೆಲುವಿನ-ಸೋಲಿನ ಮಹಾನ್ ಕತೆಗಳು.

ಹಾಗೆಯೇ ಮರಡೋನ, ರೋನಾಲ್ಡೋ, ಬೆಕಮ್, ಜೀಡಾನ್‍ನಂತಹ ವಿಸ್ಮಯಿ ಆಟಗಾರರ ಕತೆಗಳು.

ಅಂತಹ ಜಾಗತಿಕ ಪುಟ್ಬಾಲ್ ಹಬ್ಬ ಮತ್ತೆ ಶುರುವಾಗಿದೆ. ಇನ್ನೊಂದು ತಿಂಗಳು ಪುಟ್ಬಾಲ್ ರಸದೂಟ ಎಲ್ಲೆಡೆ.

ವೀವಾ ಪುಟ್ಬಾಲ್ !