Saturday, April 28, 2007

ಸಡಗರ

ಬಳೆಗಳಿಗೆ ಸಡಗರ
ಅವಳ ಕೈ ಹಿಡಿದಿರುವನೆಂದು
ಓಲೆಗಳಿಗೆ ಸಡಗರ
ಅವಳ ಕಿವಿ ಕಚ್ಚುವೆನೆಂದು
ಕುಂಕುಮಕ್ಕೆ ಸಡಗರ
ಅವಳ ಹಣೆ ಮುತ್ತಿಡುವೆನೆಂದು
ಮಲ್ಲಿಗೆಗೆ ಸಡಗರ
ಅವಳ ಮುಡಿಯಲಿ ಬೆರಳಾಡಿಸುವೆನೆಂದು
ಕನ್ನಡಿಗೆ ಸಡಗರ
ಅವಳ ಸೌಂದರ್ಯ ನೋಡುವೆನೆಂದು

ಸರಕ್ಕೆ ಸಡಗರ
ಎದೆ ಹತ್ತಿರ ಇರುವೆನೆಂದು
ವೇಣಿಗೆ ಸಡಗರ
ಅವಳ ಬೆನ್ನು ಸವರುವೆನೆಂದು
ಸೀರೆಗೆ ಸಡಗರ
ಅವಳ ನಡು ಬಳಸುವೆನೆಂದು
ದಿಂಬಿಗೆ ಸಡಗರ
ಅವಳ ಕೆನ್ನೆ ತಟ್ಟುವೆನೆಂದು
ಹೊದಿಕೆಗೆ ಸಡಗರ
ಅವಳ ಆಲಂಗಿಸಿ ಮಲಗುವೆನೆಂದು

ಕಾಲುಗಳಿಗೆ ಸಡಗರ
ಅವಳ ಗೆಜ್ಜೆನಾದ ಮಾಡುವೆನೆಂದು
ಕಂಠಕ್ಕೆ ಸಡಗರ
ಅವಳ ಮುದ್ದುಮಾತು ನುಡಿವೆನೆಂದು
ರೆಪ್ಪೆಗಳಿಗೆ ಸಡಗರ
ಅವಳ ಕಣ್ಣೋಟ ಬಚ್ಚಿಟ್ಟುಕೊಳ್ಳುವೆನೆಂದು
ತುಟಿಗಳಿಗೆ ಸಡಗರ
ಅವಳ ಜೇನು ತನ್ನಲ್ಲಿ ಇಹುದೆಂದು
ಹೃದಯಕ್ಕೆ ಸಡಗರ
ಅವಳ ಎದೆಬಡಿತ ತನ್ನಿಂದೆಂದು

ಅವಕ್ಕೆ ಗೊತ್ತಿಲ್ಲವೇ ನಾ
ಅವಕ್ಕಿಂತ ಹೆಚ್ಚು ಸಡಗರ ಪಡುವವನೆಂದು
ಅವಕ್ಕೆ ಗೊತ್ತಿಲ್ಲವೇ ನಾ
ಅವು ಸಡಗರ ಪಡುವ ಎಲ್ಲವನ್ನು ಮಾಡುವವನೆಂದು
ಅವಕ್ಕೆ ಗೊತ್ತಿಲ್ಲವೇ ನಾ
ಅವಳ ಒಲವಿನ ನಲ್ಲನೆಂದು

Wednesday, April 18, 2007

ಕಾರ್ ಡ್ರೈವಿಂಗ್ ವೃತ್ತಾಂತವೂ ಮತ್ತು ಭಾವಾನುವಾದವೂ..

ಕಾಲ, ದೇಶಗಳು ಕಾರು ಕಲಿಯೋದಿಕ್ಕೆ ಕೂಡಿ ಬರಬೇಕು ಅನ್ನೋದು ನನ್ನ ಮಟ್ಟಿಗಂತು ನಿಜ. ಯಾಕಂದ್ರೆ, ಇಂಜಿನಿಯರಿಂಗ್ ಓದುವಾಗ, ಬೆಂಗಳೂರಿನಲ್ಲಿ ಕೆಲಸ ಮಾಡುವಾಗ ಕೂಡ ಈ ವಾಹನ ಚಾಲನೆ (ಮೋಟಾರ್ ಬೈಕು ಸೇರಿ) ನನ್ನನ್ನು ಅಷ್ಟೇನೂ ಆಕರ್ಷಿಸಿರಲಿಲ್ಲ. ಎಲ್ಲಿ ಹೋದರೂ ಜೊತೆ ಕೊಡುತಿದ್ದ ಸ್ನೇಹಿತರ ಪಿಲಿಯನ್ ಸೀಟು, ಬಿಟ್ಟರೆ ಬಸ್ಸು ಇಲ್ಲಾಂದ್ರೆ ಆಟೊ ರಿಕ್ಷಾ ಹೀಗೆ ನಡೀತಿತ್ತು ಬಿಡಿ.

ಕೆಲಸದ ನಿಮಿತ್ತ ಕ್ಯಾಲಿಫೋರ್ನಿಯಾಗೆ ಕಾಲಿಟ್ಟ ಮೇಲೆ ಕಾರು ಫಾರಿನ್ ದೈವ ಅನಿಸಿ, ಒಂದು ಶುಭ ದಿನದಂದು ಸ್ವಂತ ಸಂಪಾದನೆಯಲ್ಲಿ ಕಾರು ಕೊಂಡೆ. ಕಾರು ನನ್ನ ಬಳಿ ಚಲಿಸಿತೆ ವಿನಃ ನನಗೆ ಅದರ ಚಾಲನೆ ಬರಲಿಲ್ಲ. ಕಾನೂನಿನ ಪ್ರಕಾರ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಮೊದಲು ಲಿಖಿತ ಪರೀಕ್ಷೆ ಕೊಡಬೇಕಿತ್ತು, ರಸ್ತೆ ನಿಯಮಗಳು, ಚಾಲನಾ ಮಾಹಿತಿಗಳಿಗೆ ಸಂಬಂಧಪಟ್ಟಂತೆ. ಅದರಲ್ಲೇನೊ ಪಾಸಾದೆ. ಗಂಟೆಗೆ ೩೫ ಡಾಲರ್ ಕೊಟ್ಟು, ಒಂದು ತರಬೇತಿ ಕೇಂದ್ರ ಸೇರಿ ಡ್ರೈವಿಂಗ್‌ನ ಪ್ರಥಮ ಪಾಠಗಳನ್ನು ಕಲಿತಿದ್ದಾಯಿತು.

ಹತ್ತಿರದ ವಾಣಿಜ್ಯ ಮಳಿಗೆಯ ಬೃಹತ್ ಪಾರ್ಕಿಂಗ್ ಮಳಿಗೆಗಳಲ್ಲಿ ಅದೆಷ್ಟೋ ರಾತ್ರಿ ನಡೆದ ನನ್ನ ಡ್ರೈವಿಂಗ್ ಸರ್ಕಸ್, ನಂತರ ಕಡಿಮೆ ಜನಸಂದಣಿಯ ದಾರಿಗೆ ಬಡ್ತಿ ಪಡೆಯಿತು. ಹೀಗೆ ನನ್ನ ಆತ್ಮವಿಶ್ವಾಸವು ಹೆಚ್ಚಿ ಕಛೇರಿಗೂ ಕೂಡ ಕಾರಲ್ಲಿಯೆ ಹೋಗಿ ಬರಲು ಶುರುಮಾಡಿದೆ, ಗೆಳೆಯನೊಬ್ಬ ವಿಪರೀತ ಧೈರ್ಯ ಮಾಡಿ ಜೊತೆ ಕೊಟ್ಟ. ಎಲ್ಲ ಸರೀನೆ ಇತ್ತು, ಕಾರಿನ ಹಿಡಿತ ತಪ್ಪಿ ಅಪಾರ್ಟ್‌ಮೆಂಟ್‌ವೊಂದರ ಗೋಡೆ ಒಡೆಯುವವರೆಗೆ. ಬಾಡಿಗೆ ಕಾರು ಆಗಿದ್ದರಿಂದ ಇನ್ಶುರೆನ್ಸ್‌ನ ತಲೆನೋವು ತಪ್ಪಿತು ಅಷ್ಟೆ. ಜೊತೆಗೆ ನನ್ನ ವಿಶ್ವಾಸವು ಕುಸಿದು ಕಾರು ೧೫ ದಿನ ಮನೆಯಲ್ಲಿ ಉಳಿತು.

ಮರಳಿ ಯತ್ನವ ಮಾಡಿ ಅಂತೂ ಡ್ರೈವಿಂಗ್ ಪರೀಕ್ಷೆ ಕೊಡುವ ದಿನ ಬಂತು. ಇಲ್ಲಿನ RTO ತರಹ ಅಲ್ಲಿನ್ಲ DMV (ಮೋಟಾರು ವಾಹನಗಳ ಇಲಾಖೆ) ಲೈಸೆನ್ಸ್ ಕೊಡುತ್ತೆ. ಪರೀಕ್ಷೆ ಹೇಗೆ ಅಂದರೆ ಪರೀಕ್ಷಕ ಬಂದು ಪಕ್ಕದಲ್ಲಿ ಕೂತ ಮೇಲೆ ಆತ ಹೇಳಿದ ಹಾಗೆ ಡ್ರೈವ್ ಮಾಡಬೇಕು. ನಾನು ಸ್ವಲ್ಪ ಹೆಚ್ಚಾಗಿಯೇ ತಯಾರಾಗಿದ್ದೆ, ಅದಕ್ಕೆ ಪರೀಕ್ಷಕ ಬಂದು ಕೂರುವ ಮೊದಲೆ ಕಾರು ಸ್ಟಾರ್ಟ್ ಮಾಡಿದೆ, ಗಡಿಬಿಡಿಯಲ್ಲಿ ಬ್ರೇಕ್ ಬದಲು ಆಕ್ಸಿಲೇಟರ್ ಒತ್ತಿದೆ. ಕಾರು ಜೋರಾಗಿ ಕೂಗಿತು, ಆ ಸದ್ದಿಗೆ ಪರೀಕ್ಷೆ ಮಾಡುವವ ಹೆದರಿ ಓಡಿ ಹೋದ, ಪರೀಕ್ಷೆ ರದ್ದಾಯ್ತು.

ಆದರೆ ಅದೃಷ್ಟ ಚೆನ್ನಾಗಿತ್ತು ಅನಿಸುತ್ತೆ, ಅದಕ್ಕೆ ಮಾರನೆ ದಿನವೆ ಇನ್ನೊಮ್ಮೆ ಪರೀಕ್ಷೆ ತೆಗೆದುಕೊಳ್ಳುವ ಅವಕಾಶ ಸಿಕ್ಕಿತು. ಅಂದು ಯಾವ ತಪ್ಪು ಮಾಡದೆ ಪರೀಕ್ಷೆ ಕೊಟ್ಟೆ, ಫಲಿತಾಂಶ ಪಾಸು ಅಂತ ಗೊತ್ತಾದಾಗ ಅತ್ಯದ್ಭುತವಾದ ವಿದ್ಯೆ ಕರಗತವಾದ ಸಂಭ್ರಮ ನನ್ನಲ್ಲಿತ್ತು.

**************************************************

ಇದು ನನಗೆ ಡ್ರೈವಿಂಗ್ ಲೈಸನ್ಸ್ ಸಿಕ್ಕಾಗಿನ ಕತೆ.

ಈ ಲೇಖನ ನನ್ನ ಇಂಗ್ಲೀಷ್ ಬ್ಲಾಗ್‍ನೆಲ್ಲೂ ಅಡಗಿ ಕುಳಿತಿತ್ತು. ಈ ಸಲ ಸುಧಾ ಯುಗಾದಿ ವಿಶೇಷಾಂಕದಲ್ಲಿ 'ಕಾರ್ ಡ್ರೈವಿಂಗ್ ಕಲಿತದ್ದು' ಅನ್ನೋ ಶೀರ್ಷಿಕೆಯಲ್ಲಿ ಲೇಖನ ಆಹ್ವಾನಿಸಿದಾಗ ನನ್ನ ಇಂಗ್ಲೀಷ್ ಬ್ಲಾಗ್‍ನಲ್ಲಿ ಇದ್ದ ನನ್ನ ಕಾರು ಕತೆಯನ್ನ (ನನ್ನ ಅನುಮತಿ ಪಡೆದು!)ಕನ್ನಡಕ್ಕೆ ಭಾವಾನುವಾದ ಮಾಡಿ, ಅದನ್ನು ಸುಧಾಕ್ಕೆ ಕಳಿಸಿದವಳು ನನ್ನ ಹುಡುಗಿ !!

ಅದು ಈ ಸರ್ತಿ ಸುಧಾ ವಿಶೇಷಾಂಕದಲ್ಲಿ ಪ್ರಕಟನೂ ಆಗಿ, ಇದರ ಕ್ರೆಡಿಟ್ ಯಾರಿಗೆ ಹೋಗಬೇಕು ಅಂತಾ ನಾನು ನನ್ನ ಹುಡುಗಿ ಪ್ರೀತಿಯ ಜಗಳವಾಡಿದ್ದು ಆಯ್ತು !

ಲೇಖನವನ್ನು ಮೂಲಕ್ಕೆ ಧಕ್ಕೆಯಾಗದಂತೆ ಇರುವ ಪದಗಳ ಸಂಖೆಯ ನಿರ್ಬಂಧದಲ್ಲಿ ಭಾವಾನುವಾದ ಮಾಡೋದು ಕಷ್ಟದ ಕೆಲಸ,ಭಾವಾನುವಾದ ಮಾಡಿದ ಅವಳಿಗೆ ಇದರ ಕ್ರೆಡಿಟ್ಟು ಅಂತಾ ನಾನೆಂದೆ. ಯಾವಾಗಲೂ ಮೂಲ ಲೇಖನನೇ ಮೂಖ್ಯ,ಅದರಲ್ಲಿ ಸತ್ವ ಇದ್ದರೆ ಅನುವಾದ ಮಾಡೋದು ಸುಲಭ ಅಂತಾ ಕ್ರೆಡಿಟ್ಟು ನನ್ನ ಕಡೆ ಕಳಿಸಿದಳು ಅವಳು.ನಮ್ಮ ಪ್ರೀತಿ-ಜಗಳಗಳು ಹೀಗೆ ಇರುತ್ತೆ ಬಿಡಿ !!

ನಮ್ಮದು ಹೆತ್ತವರಿಗೆ ಹೆಗ್ಗಣನೂ ಮುದ್ದು ತರ ಆಯ್ತು..ನಿಮಗೇನು ಅನಿಸ್ತು ಅನುವಾದ ಓದಿ?

ನೀವೇನಂತೀರಾ..ಅನುವಾದಗೊಂಡ ಲೇಖನಗಳಲ್ಲಿ ಯಾರಿಗೆ ಜಾಸ್ತಿ ಪಾಲು..ಮೂಲ ಲೇಖಕ(ಕೆ)ಅಥವಾ ಭಾವಾನುವಾದ ಲೇಖಕ(ಕೆ)? ಅಥವಾ ಸೇಫ್ ಆಗಿ ಇಬ್ಬರಿಗೂ ಸಮಪಾಲು ಅಂತೀರಾ ?

Friday, April 06, 2007

ಬಿಳಿಗಡ್ಡದ ಅಂಕಲ್

ಅವತ್ತು ಪೋನ್‍ನಲ್ಲಿ ಮಾತಾಡುವಾಗ ನನ್ನ ಹುಡುಗಿ ಕೇಳಿದಳು 'ರೀ ಇವತ್ತು ಯಾರನ್ನ ನೋಡಿದೆ ಹೇಳಿ'.

ಆ ಊರಿನಲ್ಲಿದ್ದುಕೊಂಡು ಅವಳು ಅಷ್ಟು ಖಾತರದಿಂದ ಹೇಳ್ತಿದಾಳೆ ಅಂದ್ರೆ ನನಗೆ ನೆನಪಾಗಿದ್ದು ಕೇವಲ ಒಂದೇ ಹೆಸರು.. 'ತೇಜಸ್ವಿ' !

ಕಾನನದ ಆ ವಿಸ್ಮಯದ ಲೋಕ ಸೃಷ್ಟಿಸಿದವರು.ಅಲ್ಲಿ ಹಾರುವ ಓತಿಯನ್ನು ಹುಡುಕುತ್ತಾ ಆ ದಟ್ಟ ಕಾಡಲ್ಲಿ ಹೊರಟರೆ ಓದುಗರಿಗೆ ಕಾಡಿನಲ್ಲಿ ಎಲೆಗಳ ಮೇಲೆ ಚರಪರ ಸದ್ದು ಮಾಡಿ ನಡೆದಾಡಿದ ಹಾಗೆ ಮಾಡಿದವರು. ಕಾನನವನ್ನು ಅಷ್ಟು ಪ್ರೀತಿಸಿ ಅದರಲ್ಲೇ ಬದುಕಿದವರು. ಕನ್ನಡದಲ್ಲಿ ದೊಡ್ಡ ಮಟ್ಟದಲ್ಲಿ ವಿಜ್ಞಾನ ವಿಷಯಗಳ ಬರೆದು ಅದನ್ನು ಓದಿಸಿದವರು. ಹಾಗೆಯೇ ಮನಕ್ಕೆ ತಟ್ಟುವ ಪ್ರಭಾವಿ ಪಾತ್ರಗಳನ್ನು ತಂದು ನಿಲ್ಲಿಸಿದವರು.ಕ್ಯಾಮರ ಕಣ್ಣಲ್ಲಿ ಪ್ರಕೃತಿಯನ್ನು ಅಷ್ಟು ಸುಂದರವಾಗಿ ಸೆರೆಹಿಡಿದು ತಂದು ತೋರಿಸಿದವರು..

ಕುವೆಂಪುರಂತಹ ತಂದೆಯ ಮಗನಾಗಿ ಅದೇ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸುವುದು ಸುಲಭದ ಕೆಲಸವಲ್ಲ. ಕುವೆಂಪು ಒಂದು ಶರಧಿ. ಅದರ ಪರಧಿಯನ್ನು ಮೀರಿ ಬಂದು ,'ಕುವೆಂಪು ಅವರ ಮಗ ತೇಜಸ್ವಿ' ಅನ್ನೋ ಇಮೇಜ್‍ನಿಂದ ದೂರವಿದ್ದು, ತಮ್ಮದೇ ಒಂದು ಸ್ವಂತ ಇಮೇಜ್ ಸೃಷ್ಟಿಸಿಕೊಂಡವರು..

ನಾನು ನನ್ನ ಹುಡುಗಿ ಸಂಬಂಧದಲ್ಲಿ ಸೇರಿದ ಪ್ರಾರಂಭದ ದಿನಗಳವು.ಅದು-ಇದು ಮಾತಾಡುತ್ತ ಮಾತು 'ಕರ್ವಾಲೋ' ಕಡೆ ಬಂದಾಗ, ನಾವು ಅದೆಷ್ಟು ಮಾತಾಡಿದ್ದೆವು. ನಂತರ ನನ್ನ ಹುಡುಗಿ ತೇಜಸ್ವಿಯವರ ಭಾರೀ ಅಭಿಮಾನಿಯೆಂದು ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ತೇಜಸ್ವಿಯವರ ಕೃತಿಗಳ ಮಾತು ಬಂದರೆ ನನ್ನಾಕೆಯ ಉತ್ಸಾಹ ಇಮ್ಮಡಿಯಾಗುತಿತ್ತು.

ಅವತ್ತು ನನ್ನ ಹುಡುಗಿ ದಾರಿಯಲ್ಲಿ ಹೋಗುವಾಗ, ಎದುರಿಗೆ ಸ್ಕೂಟರ್ ಸವಾರಿ ಮಾಡಿಕೊಂಡು ಬಿಳಿಗಡ್ಡದ ಅವಳ ನೆಚ್ಚಿನ ಸಾಹಿತಿ ಹೋದಾಗ ಅವಳಿಗೆ ಆದ ಸಂತೋಷದಲ್ಲೇ ನನ್ನ ಕೇಳಿದ್ದು ಯಾರನ್ನು ನೋಡಿದೆ ಹೇಳಿಯೆಂದು. ಆಮೇಲೆ ನಾನು 'ನೀನು ಯಾಕೇ ತೇಜಸ್ವಿಯವರನ್ನು ಒಮ್ಮೆ ಮಾತಾಡಿಸಿಕೊಂಡು ಬರಬಾರದು' ಎನ್ನುವ ಮೊದಲೇ ಅವಳು ಮೂಡಿಗೆರೆಯಲ್ಲಿ ಅವರ ಮನೆಯನ್ನು ಪತ್ತೆ ಮಾಡಿದ್ದಾಗಿತ್ತು.ಅವರ ಎಸ್ಟೇಟ್ ಇವರ ಕಾಲೇಜಿಂದ ತೀರಾ ಹತ್ತಿರದಲ್ಲಿ ಇದೆಯಂತೆ.

ಅದೊಂದು ದಿವಸ ಪೋನ್‍ನಲ್ಲಿ ನನ್ನ ಹುಡುಗಿ ಧ್ವನಿಯಲ್ಲಿ ಸಾರ್ಥಕ ಭಾವ. ಅವಳಿಗೆ ಎಷ್ಟು ಖುಷಿಯಾಗಿತ್ತೆಂದರೆ ಅವಳು ಮಾತಾಡ್ತಾನೇ ಇಲ್ಲ. ಮತ್ತೆ ಕೇಳಿದಳು 'ಇವತ್ತು ಗೊತ್ತಾ ಎನಾಯ್ತು, ಊಹಿಸಿ ನೋಡೋಣ' ? ನನಗೆ ತಕ್ಷಣವೇ ಹೊಳೆದಿದ್ದು 'ತೇಜಸ್ವಿಯವರು ಸಿಕ್ಕಿದಿರಾ?' ಅದಕ್ಕೆ ಅವಳು 'ಅಷ್ಟೆ ಅಲ್ಲಾ..ನಾನು ಅವರ ಮನೆಗೆ ಹೋಗಿದ್ದೆ !'

ಆಗಿದ್ದೆನೆಂದರೆ ನನ್ನ ಹುಡುಗಿಯ ಸ್ನೇಹಿತೆಯ ಪ್ರೊಪೆಸರ್‍ರೊಬ್ಬರು ತೇಜಸ್ವಿಯವರು ಒಳ್ಳೆ ಗೆಳಯರು. ಅವರ ಪರಿಚಯದ ಮೇಲೆ ನನ್ನ ಹುಡುಗಿ ಮತ್ತು ಅವಳ ಸ್ನೇಹಿತೆ ತೇಜಸ್ವಿಯವರ ಮನೆಗೆ ಹೋಗಿದ್ದಾರೆ. ಇವರಿಗೋ ಮನದಲ್ಲಿ ಅಳಕು, ಗೊತ್ತು ಪರಿಚಯವಿಲ್ಲದೇ ತೇಜಸ್ವಿಯವರನ್ನು ಭೇಟಿಮಾಡಲು ಹೊರಟಿದ್ದೇವೆ ಅಂತಾ.ಅದರ ಜೊತೆಗೆ ತೇಜಸ್ವಿಯವರ ಭಯಂಕರ ಮೂಡಿನ ಬಗ್ಗೆ ಎಲ್ಲೋ ಓದಿದ-ಕೇಳಿದ ನೆನಪು.

ಇವರನ್ನು ನೋಡಿದ ತೇಜಸ್ವಿ ಮತ್ತು ಅವರ ಪತ್ನಿ ರಾಜೇಶ್ವರಿಯವರು ತುಂಬಾ ಪ್ರೀತಿಯಿಂದ ಕರೆದು ಮಾತಾಡಿಸಿದ್ದಾರೆ. ನನ್ನ ಹುಡುಗಿಯನ್ನು ನೋಡಿ 'ನೀನು ಅಲ್ಲಿ ಕಾಲೇಜ್‍ನಲ್ಲಿ ಟ್ರೈನಿಂಗ್ ಕೊಡ್ತಾ ಇದೀಯಾ, ಚಿಕ್ಕ ಹುಡುಗಿ ತರ ಇದಿಯಾ' ಅಂತಾ ತೇಜಸ್ವಿ ತಮಾಷೆ ಮಾಡಿದರಂತೆ. ನಂತರ ನನ್ನಾಕೆ ಅದು ಇದು ಮಾತಾಡುತ್ತ ತೇಜಸ್ವಿಯವರ ಸ್ಕೂಟರ್ ಬಗ್ಗೆ ಕೇಳಿದ್ದಾಳೆ. ಮೂಡಿಗೆರೆಯಲ್ಲೇ ಪ್ರಖ್ಯಾತವಾದ, ೨೦ಕ್ಕೂ ವರ್ಷ ಹಳೆಯದಾದ ಅವರ ಆ ಸ್ಕೂಟರ್ ಇತಿಹಾಸ ಸಿಕ್ಕಿದೆ !

ನಂತರ ಅವರು ತೆಗೆದ ಕಾಡು-ಹಕ್ಕಿಗಳ ಪೋಟೋ ನೋಡಿದ್ದಾಳೆ. ನನ್ನ ಹುಡುಗಿ ಅವರ ಪ್ರಕಾಶನದಲ್ಲಿ ಅವರ ಕೆಲವು ಪುಸ್ತಕ ತೆಗೆದುಕೊಂಡಿದ್ದಾಳೆ. ಅವಳ ಹತ್ತಿರ 'ಅಣ್ಣನ ನೆನಪು' ಇದ್ದರೂ ತೇಜಸ್ವಿಯವರ ಆಟೋಗ್ರಾಪ್‍ಗಾಗಿ ಮತ್ತೆ ಆ ಪುಸ್ತಕ ತೆಗೊಂಡು ಅವರ ಹತ್ತಿರ ಆಟೋಗ್ರಾಪ್ ಕೇಳಿದ್ದಾಳೆ. ಅವರು ಸಂತೋಷದಿಂದ ಅದಕ್ಕೆ ಸಹಿ ಹಾಕಿಕೊಟ್ಟಿದ್ದಾರೆ. ನಂತರ ಅವರ ಮನೆಯ ಸುತ್ತವಿರುವ ವಿವಿಧ ಹಕ್ಕಿಗಳ ವಿವರಣೆ ಸಿಕ್ಕಿದೆ.ನನ್ನ ಹುಡುಗಿ ಅವರ ಪತ್ನಿ ರಾಜೇಶ್ವರಿಯವರೊಂದಿಗೆ ತೇಜಸ್ವಿಯವರ ಜೊತೆ ಜೀವನದ ಅನುಭವಗಳ ಬಗ್ಗೆ ಹರಟಿದ್ದಾಳೆ. ಅವರ ತೋಟದಲ್ಲಿ ಯಾವುದೋ ಗಿಡದ ರುಟಿಂಗ್ ಮಾಡಿಕೊಟ್ಟಿದ್ದಾಳೆ.

ಕೊನೆಗೆ ಅಳುಕುತ್ತಲೇ ಕ್ಯಾಮರ ಹೊರತೆಗೆದು ತೇಜಸ್ವಿಯವರಿಗೆ ಅವರ ಜೊತೆ ಪೋಟೋ ತೆಗೆಸಿಕೊಳ್ಳಬೇಕೆಂದಿದ್ದಾಳೆ.ಅವರು ಸಂತೋಷವಾಗಿ ಒಪ್ಪಿಕೊಂಡು ಪೋಟೋಗೆ ಪೋಸ್ ಕೊಟ್ಟು ಇನ್ನೇನೂ ಕ್ಲಿಕಿಸಬೇಕೆಂದಾಗ ಕ್ಯಾಮರದ ಬ್ಯಾಟರಿ ಖಾಲಿಯಾಗಬೇಕೇ? ಆಗಿದ್ದೆನೆಂದರೆ ನನ್ನ ಹುಡುಗಿ-ಅವಳ ಸ್ನೇಹಿತೆ ತೇಜಸ್ವಿಯವರ ಎಸ್ಟೇಟ್-ಅವರ್‍ಅ ಪತ್ನಿ ಜೊತೆ ಪೋಟೋ ಕ್ಲಿಕಿಸುವ ಭರದಲ್ಲಿ ಬ್ಯಾಟರಿ ಸ್ಥಿತಿ ಮರತೇ ಬಿಟ್ಟಿದ್ದಾರೆ.ತೇಜಸ್ವಿಯವರ ಹತ್ತಿರ ಪೋಟೋ ತೆಗೆಸಿಕೊಳ್ಳುವಾಗ ಬ್ಯಾಟರಿ ಕೈಕೊಟ್ಟಿದೆ.

ತೇಜಸ್ವಿಯವರು ತಕ್ಷಣವೇ ತಮ್ಮ ಕ್ಯಾಮರ ಹೊರತೆಗೆದು ಅದರಲ್ಲಿ ಪೋಟೋ ತೆಗೆದುಕೊಳ್ಳುವಂತೆ ಹೇಳಿದರಂತೆ.ಅವರ 'ಉದ್ದದ' ಹೈ-ಟೆಕ್ ಕ್ಯಾಮರ ಹೇಗೆ ಉಪಯೋಗಿಸುವುದು ಅಂತಾನೂ ಹೇಳಿಕೊಟ್ಟು, ನಂತರ ಇವರ ಜೊತೆ ಪೋಟೋ ತೆಗೆಸಿಕೊಂಡಿದ್ದಾರೆ.ನನ್ನ ಹುಡುಗಿ-ಅವಳ ಸ್ನೇಹಿತೆ ಅಲ್ಲಿಂದ ಮರಳುವಾಗ ತೇಜಸ್ವಿ ದಂಪತಿಗಳಿಂದ 'ಆವಾಗವಾಗ ಬಂದು ಹೋಗ್ತಾ ಇರೀ' ಅಂತಾ ಕೇಳಿ ನನ್ನ ಹುಡುಗಿಗೆ ಸ್ವರ್ಗಕ್ಕೆ ಮೂರೇ ಗೇಣು.

ವಾಪಾಸ್ ಬರುವಾಗ ಅವಳ ಸ್ನೇಹಿತೆ 'ಎನೇ ಮಾರಾಯ್ತಿ, ತೇಜಸ್ವಿಯವರನ್ನು ಹಾಗೇ ನೋಡುತ್ತಾ ಇದ್ದೆ..ನಿನ್ನ ಹುಡುಗನ್ನು ಯಾವಾಗಲಾದರೂ ಹಾಗೇ ನೋಡಿದ್ದೋ ಇಲ್ವೋ !' ಅಂತಾ ಛೇಡಿಸಿದಳಂತೆ.

ಅವತ್ತು ಪೋನ್‍ನಲ್ಲಿ ತೇಜಸ್ವಿ ಬಿಟ್ಟರೆ ಬೇರೆ ಎನೂ ಮಾತೇ ಇಲ್ಲಾ. ಮೊದಲೇ ಅವರ ಅಭಿಮಾನಿಯಾಗಿದ್ದ ನನ್ನಾಕೆ ಅವತ್ತು ಸಿಕ್ಕಾಪಟ್ಟೆ ಖುಷಿಯಾಗಿದ್ದಳು.

ಅವಳ ಮಾತುಗಳಲ್ಲೇ ಕೇಳಿ ತೇಜಸ್ವಿ ಹೇಗೆ ಅನಿಸಿದರು ಅಂತಾ..

"ಅವರು ಜನರೊಂದಿಗೆ ಸರಿಯಾಗಿ ಮಾತಾಡೊಲ್ಲಾ-ಬೆರೆಯೊಲ್ಲಾ ಅಂತಾ ಕೇಳಿದ್ದೆ-ಓದಿದ್ದೆ..ಅವರು ಇಷ್ಟು ಆತ್ಮೀಯವಾಗಿ ಮಾತಾಡಿಸಿದರು..ಅವರದೇ ಆದ ಒಂದು ಸುಂದರ ಲೋಕ ಕಟ್ಟಿಕೊಂಡಿದ್ದಾರೆ ಅವರು ಅಲ್ಲಿ. ಅವರು ಎಷ್ಟು ಚೆನ್ನಾಗಿ ಪೋಟೋ ತೆಗೆದಿದ್ದಾರೆ ಗೊತ್ತಾ.ಅವರ ಎಸ್ಟೇಟ್‍ ಸುತ್ತ ಎಷ್ಟೊಂದು ವಿಧವಿಧದ ಹಕ್ಕಿಗಳಿವೆ. ಅವರು ಅವುಗಳ ಪೋಟೋ ಹೇಗೆ ತೆಗೆದಿದಾರೆ ಗೊತ್ತಾ...ಅಬ್ಬಾ..ಅವರಿಗೆ ಕಂಪ್ಯೂಟರ್ ಬಗ್ಗೆ ಎಷ್ಟೆಲ್ಲಾ ಗೊತ್ತು ! ಅದೇನೋ ಕಂಪ್ಯೂಟರ್‌ನಲ್ಲಿ ಕನ್ನಡ ಅಳವಡಿಕೆ ಮಾಡ್ತಾ ಇದ್ದರು.ಅವರು ಇಷ್ಟು ವಯಸ್ಸಲ್ಲಿ ಎಷ್ಟು ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.ನಿಮಗೆ ಗೊತ್ತಾ.. ರಾಜೇಶ್ವರಿ ಅಂಟಿದು-ತೇಜಸ್ವಿಯವರದು ಲವ್ ಮ್ಯಾರೇಜ್... ಮುಂದಿನ ಸಲ ಹೋದಾಗ ಅವರ ಕ್ಯಾಮರದಲ್ಲಿರುವ ಅವರ ಜೊತೆ ತೆಗೆಸಿಕೊಂಡ ಪೋಟೋಗಳನ್ನು ತೆಗೆದುಕೊಂಡು,ಹಾಗೇ ಬರುವಾಗ ತೇಜಸ್ವಿಯವರಿಗೆ ಬಲು ಇಷ್ಟದ ಅಣಬೆಗಳನ್ನು ತರ್ತೀನಿ ಅಂತಾ ಹೇಳಿಬಂದೆ"

ಅಮೇಲೆ ಮತ್ತೆ ಯಾವಾಗಲೋ ಮಾತಾಡುವಾಗ ನಾನು ಕೇಳಿದೆ 'ತೇಜಸ್ವಿಯವರನ್ನು-ರಾಜೇಶ್ವರಿ ಅಂಟಿನಾ ನಮ್ಮ ಮದುವೆಗೆ ಕರೆಯೋಣವಾ'. ಅದಕ್ಕೆ ನನ್ನ ಹುಡುಗಿ 'ಕರಿಬಹುದು, ಆದರೆ ತೇಜಸ್ವಿಯವರು ಬಹುಷಃ ಬರೋ ಸಾಧ್ಯತೆ ತುಂಬಾ ಕಡಿಮೆ ರೀ..ಅವರು ಇಂತಹ ಕಾರ್ಯಕ್ರಮಗಳಿಗೆ ಹೋಗೋದು ಕಡಿಮೆಯಂತೆ' ಅಂದಿದ್ದಳು.

ಇಷ್ಟು ಆಗಿ ಕೆಲವು ದಿನಕ್ಕೆ ಇವಳ ಕಾಲೇಜ್‍ನಲ್ಲಿ 'ಕೀಟ ಪ್ರದರ್ಶನ'ಕ್ಕೆ ತೇಜಸ್ವಿ ಬಂದಿದ್ದರಂತೆ.ಪ್ರದರ್ಶನದ ನಡುವೆ ನನ್ನ ಹುಡುಗಿ ಎದುರಿಗೆ ಸಿಕ್ಕಾಗ 'ಯಾಕೋ ಮನೆ ಕಡೆ ಬಂದೇ ಇಲ್ಲಾ.ಅವತ್ತು ನೀನು ಮಾಡಿದ ರುಟಿಂಗ್ ಸರಿಯಾಗಿ ಮಾಡಿರಲಿಲ್ಲ ಅನಿಸುತ್ತೆ' ಅಂದರಂತೆ. ತೇಜಸ್ವಿ ಇವಳ ಜೊತೆ ಹೀಗೆ ಆತ್ಮೀಯವಾಗಿ ಮಾತಾಡೋದು ಕೇಳಿ ಅಲ್ಲಿದ್ದವರೆಲ್ಲಾ ಎಷ್ಟು ವರ್ಷದ ಪರಿಚಯವೋ ಅಂದುಕೊಂಡಿರಬಹುದು.

ಇನ್ನೊಂದು ಸಲ ಪೋನ್‍ನಲ್ಲಿ ನನ್ನಾಕೆಗೆ ಕೇಳಿದೆ 'ನಾನು ಅಲ್ಲಿಗೆ ಬಂದಾಗ ತೇಜಸ್ವಿಯವರನ್ನು ಭೇಟಿಮಾಡಿಸೇ'.ಅದಕ್ಕೆ 'ಆಯ್ತು ನೋಡೋಣಾ' ಅಂತಾ ನನ್ನ ಹುಡುಗಿಯ ಬಿಂಕ !

ಮೊನ್ನೆ ದಿನ ಮಾತಾಡಬೇಕಾದರೆ ಯಾಕೋ ಮಾತು ತೇಜಸ್ವಿಯವರ ಬಗ್ಗೆ ತಿರುಗಿತು.ನಾನು ನನ್ನ ಹುಡುಗಿಗೆ ತೇಜಸ್ಚಿಯವರ ಮನೆಗೆ ಮತ್ತೆ ಹೋಗಿಬಂದೆಯಾ ಅಂದೆ.ಅದಕ್ಕೆ ಅವಳು 'ಇಲ್ಲಾರೀ, ಅವರ ಇಷ್ಟದ ಅಣಬೆ ಪ್ಯಾಕ್ ಮಾಡಿಕೊಂಡಿದ್ದೆ ಎರಡು ಸಲನೂ ಎನೋ ಕೆಲಸದಿಂದ ಹೋಗೋಕೇ ಆಗಲಿಲ್ಲ. ಮುಂದಿನವಾರ ಅಣಬೆ ತಗೊಂಡು ಅವರನ್ನು ನೋಡಿಕೊಂಡು ಬರ್ತಿನಿ' ಅಂದಿದ್ದಳು.ನಾನು ಅವಾಗ 'ನಾನು ಬಂದಾಗ, ನಾವಿಬ್ಬರು ಹೋಗಿ ನಿಮ್ಮ 'ಅಂಕಲ್' ಭೇಟಿಯಾಗೋಣ' ಅಂದಿದ್ದೆ.

ಈಗ ನೋಡಿದರೆ ಅಣಬೆ ತಗೊಂಡು ಹೋಗಿ ಕೊಟ್ಟರೆ...ಇಷ್ಟಪಡೋ ಅವರೇ ಇಲ್ಲಾ...

ಅವರ ಸಾವಿನ ಸುದ್ದಿ ಕೇಳಿದ ನಂತರ ನನ್ನ ಹುಡುಗಿಗೆ ಪೋನ್ ಮಾಡಿದಾಗ ಅವಳ ಧ್ವನಿಯಲ್ಲಿ ಇನ್ನೂ ಶಾಕ್ ಇತ್ತು,ಹಾಗೇ ಇನ್ನೊಮ್ಮೆ ನೋಡಲ್ಲಿಕ್ಕಾಗಲಿಲ್ಲ ಎನ್ನುವ ಕೊರಗು. ಅವರ ಇಷ್ಟದ ಅಣಬೆ ಅವರಿಗೆ ಕೊನೆಗೂ ತಗೊಂಡು ಹೋಗಿ ಕೊಡಲಿಲ್ಲ ಎನ್ನೋ ಕೊರಗು. ಬಹುಷಃ ಅದು ಅವಳಿಗೆ ತುಂಬಾ ದಿನ ಕಾಡುತ್ತೆ..

ಸುದ್ದಿ ಕೇಳಿದ ತಕ್ಷಣ ಅವರ ಮನೆಗೆ ಹತ್ತಿರವೇ ಇರುವ ಕಾಲೇಜ್ ಕ್ಯಾಂಪಸ್‍ನಿಂದ ಇವರೆಲ್ಲಾ ಅಲ್ಲಿಗೆ ಧಾವಿಸಿಹೋದರಂತೆ.ನನ್ನ ಹುಡುಗಿ ತೇಜಸ್ವಿಯವರಿಗೆ ಹೇಳಿದಂತೆ ಮತ್ತೆ ಅವರ ಮನೆಗೆ ಹೋಗಿದ್ದಾಳೆ..

ಆದರೆ ರುಟಿಂಗ್ ಬಗ್ಗೆ, ಪಕ್ಷಿಗಳ ಬಗ್ಗೆ, ಗಿಡಗಳ ಬಗ್ಗೆ ಹೇಳೋಕೆ ಅಲ್ಲಿ ಅವಳ 'ಅಂಕಲ್' ಈಗ ಅಲ್ಲಿರಲಿಲ್ಲ..

ಅಲ್ಲಿ ಇದದ್ದು ಕೇವಲ 'ನಿರುತ್ತರ' ..

Sunday, April 01, 2007

ಮಳೆ

ಆಕಾಶದಿ ತೇಲಿ ಬಂದಿವೆ
ಮಳೆ ಹೊತ್ತ ಮೋಡಗಳು
ಮೋಡ ಸುರಿಸೋ ಹನಿಗಳ
ಚುಂಬನಕೆ ತವಕದಿ
ಕಾದಿರುವಳು ಭುವಿ

ಇಲ್ಲಿ ಕಿಟಕಿಯಲಿ ನೋಡುತಾ
ಕಾಯುತಿಹೆವು ನಾವಿಬ್ಬರು
ಆಕಾಶದಿಂದ ಧರೆಗಿಳಿವ
ಮಳೆ ಹನಿಗಳು
ಭುವಿಯನು ಸ್ಪರ್ಶಿಸುವ ಕ್ಷಣಕೆ

ಕೊನೆಗೂ ಆಕಾಶನಿಗೆ
ಭುವಿಯನು ಕಾಡಿಸಿದ್ದು ಸಾಕೇನಿಸಿ
ಬಂದಿರುವನು ಭುವಿಯ ಸೇರಲು
ನಾವಿಬ್ಬರೂ ಓಡಿದ್ದೇವೆ
ಮನೆಯಿಂದ ಆ ಮಳೆಯಲಿ ನೆನೆಯಲು

ಆಕಾಶನಿಗೆ ಭುವಿಯನು ಎಷ್ಟು
ಮುತ್ತಿಟ್ಟರು ತೀರದ ದಾಹ
ಕೈಯಲಿ ಕೈ ಹಿಡಿದು
ನಡೆದಿಹೆವು ಮಳೆಯಲಿ
ನೆನೆದಿಹೆವು ನಮ್ಮ ಮೊದಲ ಮಳೆಯಲಿ

ನೆನೆದು ನಡೆದು ನಲಿದು
ಕುಣಿದು ಈಗ ತೆಕ್ಕೆಯಲಿ
ಸೇರಿವೆ ಆಕಾಶ ಭುವಿ
ನಡುಗುವ ಮೈಗಳಿಗೆ
ಬಿಸಿ ಅಪ್ಪುಗೆ ಹೊದಿಕೆ

ಮಳೆ ನಿಂತಾ ಹಾಗಿದೆ
ನಾವು ನಡೆದಿಹೆವು ಮನೆಯೊಳಗೆ
ಒದ್ದೆ ಬಟ್ಟೆ ಬದಲಿನಿ
ಬೆಚ್ಚನೆ ವಸ್ತ್ರ ಧರಿಸಿ
ಮತ್ತೆ ಕುಳಿತಿಹೆವು ಕಿಟಕಿಯಲಿ

ಹೊರಗೆ ಮಳೆ ನಿಂತರೂ
ಮನದಲಿ ದಟ್ಟವಾಗುತಿದೆ
ಬಯಕೆಯ ಮೋಡಗಳು
ಕಣ್ಣಿನಲಿ ಮಿಂಚುಗಳು
ಎದೆಯ ಡವಡವ ಗುಡುಗು

ಸ್ಪರ್ಶವೊಂದು ಸಾಕಿತ್ತು
ಬಯಕೆ ಮಳೆ ಸುರಿಯಲು
ಸುರಿಯುತಿದೆ ಮುಸಲಧಾರೆಯಾಗಿ
ಆ ಮಳೆಯಲೂ ತಾಪವೇರಿ
ಅರಳಿವೆ ಮೈ-ಮನಗಳು

ಒಳಗೆ ಸತತ ಸಾಗಿದೆ
ಒಲವು ಸುಖದ ನೃತ್ಯ
ಮತ್ತೆ ತೊಯ್ದು ಹೋಗಿದ್ದೆವೆ
ಹೊರಗೆ ಮತ್ತೆ ಶುರುವಾಗಿದೆ
ಮಳೆ-ಭುವಿಯ ನೃತ್ಯ