ಆ ದಿನಗಳೇ ಹಾಗೇ...
ವಯಸ್ಸು ಸಹ ಅಂತದ್ದೇ.ಎನೋ ಸಾಧಿಸಬೇಕೆಂಬ ಹಂಬಲ, ಕಣ್ಣುಗಳಲ್ಲಿ ನಾಳೆಯ ಕನಸುಗಳು, ಮನದ ಮೂಲೆಯಲೆಲ್ಲೋ ಅನಿಶ್ಚಿತತೆ ಹಾಗೂ ಯಾವಯಾವುದೋ ಅಕರ್ಷಣೆಗಳು.
ಮಿತ್ರನ್ನೊಂದಿಗೆ ಕಾಲೇಜ್ ದಿನಗಳ ಬಗ್ಗೆ ಮಾತಾಡುತ್ತಿರುವಾಗ ನೆನಪಾಗಿದ್ದು ಆ ಹುಡುಗನ ಕತೆ...
ಅವನೊಬ್ಬ ಕನಸುಗಳನ್ನು ತುಂಬಿಕೊಂಡ ಹುಡುಗ. ತುಂಬಾ ಶ್ರಮಜೀವಿ. ತನ್ನ ಇತಿಮಿತಿಗಳನ್ನು ಅರಿತು ನಡೆವ ಹುಡುಗ.ಇಂತಹ ಸ್ಥಿತಪ್ರಜ್ಞ ಹುಡುಗ ಬಹುಷಃ ತಾನಾಯಿತು ತನ್ನ ಓದಾಯಿತು ಅಂತ ಇರುತ್ತದ್ದನೋ ಎನೋ, ಆ ಹುಡುಗಿ ಇಲ್ಲದಿದ್ದರೆ....
ಆ ಹುಡುಗಿ...ಸರಳ ಮತ್ತು ಸೌಜನ್ಯದ ಪ್ರತೀಕ. ಸ್ನೇಹ ಬೆಳಯಲು ತುಂಬಾ ದಿನ ಬೇಕಾಗಲಿಲ್ಲ. ಎಂತಹ ಮಧುರ ಸ್ನೇಹವದು..ಆ ಹುಡುಗಿಗೆ ಯಾಹೂನಲ್ಲಿ ಐಡಿ ಕ್ರಿಯೇಟ್ ಮಾಡಿ, ಹೇಗೆ ಚಾಟು ಮಾಡುವುದು ಅಂತ ನಮ್ಮ ಹುಡುಗ ಹೇಳಿಕೊಟ್ಟಿದ್ದ. ಹಾಗೆಯೇ ಹುಡುಗನ ಬಗ್ಗೆ ಎನೋ ಭರವಸೆ-ನಂಬುಗೆ ಆ ಹುಡುಗಿಯಲ್ಲಿ.

ಅದು ಯಾರು ಯಾವ ಮಹೂರ್ತದಲ್ಲಿ ಹೇಳಿದರೋ..'ಒಬ್ಬ ಹುಡುಗ ಒಬ್ಬ ಹುಡುಗಿ ಒಳ್ಳೆ ಸ್ನೇಹಿತರಾಗೇ ಇರಲು ಸಾಧ್ಯವೇ ಇಲ್ಲ'.
ಅದು ಎನಾಯಿತೋ ಎನೋ ಆ ಹುಡುಗನಿಗೆ ಆ ಹುಡುಗಿಯ ಬಗ್ಗೆ ಸ್ನೇಹಕ್ಕಿಂತ ಮಿರಿದ ಸೆಳೆತ ಶುರುವಾಯಿತು. ಹುಡುಗ ತಾನು ಮಾಡುತ್ತಿರುವದು ಸರಿಯೇ ಅನ್ನೋ ಗೊಂದಲ. 'ಈಗ ಇರೋ ಸ್ನೇಹಕ್ಕೂ ದ್ರೋಹ ಬಗೆತಿದಿಯಾ' ಅಂತ ಒಂದು ಸರ್ತಿ ಮನಸ್ಸು ಹೇಳಿದರೆ, ಇನ್ನೊಂದು ಸಲ ಅದೇ ಮನಸ್ಸು ಹೇಳಿತು 'ಸ್ನೇಹವಿಲ್ಲದೆ ಪ್ರೀತಿ ಇರೋಕೆ ಸಾಧ್ಯ ಇಲ್ಲ, ನಿನ್ನ ಭಾವನೆಗಳು ಸರಿ'.
ಆಂತು ಇಂತು ಧೈರ್ಯ ಮಾಡಿ ಒಂದು ದಿನ ಆ ಹುಡುಗಿಗೆ ನಮ್ಮ ಹುಡುಗ ಸೂಚ್ಯವಾಗಿ ತನ್ನ ಮನದ ಮಾತು ಬಿಚ್ಚಿಟ್ಟಿದ್ದ.ಆದರೆ ಅವನೆಂದುಕೊಂಡಂತೆ ಆಕೇ ಸಿಟ್ಟಿಗೇಳಲಿಲ್ಲ. ಬದಲಾಗಿ ತುಂಬಾ ಸೌಮ್ಯವಾಗಿ ಹುಡುಗನಿಗೆ 'ಇದು ಆಗದ ಹೋಗದ ಮಾತು.ನಾವಿಬ್ಬರು ಒಳ್ಳೆ ಸ್ನೇಹಿತರು.ಹಾಗೇ ಇದ್ದಬಿಡೋಣ' ಅಂದಿದ್ದಳು.
ಈ ರೀತಿ ಸಂದರ್ಭದಲ್ಲಿ ನಾನು ನೋಡಿರೋ ಪ್ರಕಾರ ಹುಡುಗರು ಎರಡು ರೀತಿಯಾಗಿ ವರ್ತಿಸುತ್ತಾರೆ. ಒಂದನೇಯ ಪ್ರಕಾರದವರು ಹುಡುಗಿ ಹೇಳಿದ್ದು ಒಪ್ಪಿಕೊಂಡು ಮಿತ್ರರಾಗಿ ಉಳಿದುಬಿಡ್ತಾರೆ. ಎರಡನೇಯವರು ಆವಾಗ ಒಪ್ಪಿಕೊಂಡರೂ ಮನದಲ್ಲಿ ಆ ಭಾವನೆ ಇದ್ದೆ ಇರುತ್ತೆ, ಮುಂದೊಂದು ದಿನ ಆಕೇ ಒಪ್ಪುತ್ತಾಳೆ ಅನ್ನೋ ಆಸೆವುಳ್ಳವರು.
ನಮ್ಮ ಹುಡುಗ ಎರಡನೇಯ ಪ್ರಕಾರದವನು. ಅದು ಆ ಹುಡುಗಿಗೆ ಗೊತ್ತಾದಗ ಈ ಸಲ ಸ್ಪಲ್ಪ ಖಾರವಾಗಿಯೇ ಹುಡುಗನಿಗೆ ಉತ್ತರ ಸಿಕ್ಕಿತ್ತು.ಇಷ್ಟರಲ್ಲಿ ಕಾಲೇಜ್ ಜೀವನ ಮುಗಿದು ನೌಕರಿ ಎಂಬ ಇನ್ನೊಂದು ಅಧ್ಯಾಯ ಶುರುವಾಗಿತ್ತು.ಅದರ ಮೊದಮೊದಲ ಸಂಭ್ರಮ ಆಚರಿಸುವ ಮೊದಲೇ ಆ ಹುಡುಗಿಯಿಂದ ಆ ಸುದ್ದಿ ಬಂದಿತ್ತು ಅಮಂತ್ರಣದೊಂದಿಗೆ...
ಆದಾಗಿ ಎಷ್ಟೋ ವರ್ಷಗಳು ಕಳೆದವೋ..ಈಗಲೂ ಅವರಿಬ್ಬರ ಮಧ್ಯೆ ಒಂದು ಮಾತಿಲ್ಲಿದ, ಮೇಲ್ ಇಲ್ಲದ ಮೌನದ ಬೇಲಿ.
ನನ್ನ ಸ್ನೇಹಿತನ ಭೇಟಿಯ ನಂತರ ಮರಳಿ ಬರುವಾಗ ನೆನಪಾಗಿದ್ದು ಇನ್ನೊಂದು ಪ್ರೀತಿಯ ಕತೆ..
ಇದು ಒಂದಾನೊಂದು ಅಫೀಸ್ನಲ್ಲಿ ಅರಳಿದ ಕತೆ. ಆತ ತುಂಬಾ ಸ್ನೇಹಮಯಿ,ಹಾಸ್ಯಪ್ರಜ್ಞೆವುಳ್ಳ ಒಬ್ಬ ಉತ್ಸಾಹಿ ಯುವಕ.ಅದೇ ಅಫೀಸ್ನಲ್ಲಿದ್ದಾಳೆ ಆ ಯುವತಿ.ಇಬ್ಬರಿಗೂ ಸಮಾನ ಇಷ್ಟವಾದ ಅನೇಕ ಅಭಿರುಚಿಗಳು.ಬಹು ಬೇಗನೆ ಬೆಳಯಿತು ಗಾಢ ಸ್ನೇಹ. ಅವರಿಬ್ಬರು ಮಾತಾಡದ ವಿಷಯವಿಲ್ಲ,ಪೋನ್-ಮೇಲ್-ಎಸೆಂಎಸ್ ಇಲ್ಲದ ದಿನಗಳಿಲ್ಲ.ದೋಸೆ,ಐಸ್ಕ್ರೀಮ್,ಪಾಸ್ತ,ಫಿಡ್ಜಾ..ಒಟ್ಟಿಗೆ ತಿನ್ನದ ಹೋಟೆಲ್ಗಳಿಲ್ಲ.

ಕೊನೆಗೆ ಒಂದು ದಿನ ಅವರ ಸಂಜೆ ಭೇಟಿಯಲ್ಲಿ ಆಕೆ ಅವನಿಗೆ ಆ ಸುದ್ದಿ ಹೇಳಿದ್ದಳು. ಅವನಿಗೆ ಅದು ಅನಿರೀಕ್ಷಿತವಲ್ಲದಿದ್ದರೂ ಮನದಲ್ಲಿ ಒಂದು ನೋವಿನ ಅಲೆ ಬಂದು ಅಪ್ಪಳಿಸಿತ್ತು. ಆಕೆಗೆ ಗೊತ್ತು ಅವನ ಮನದಲ್ಲಿ ನಡೆಯುತ್ತಿರುವ ಗದ್ದಲದ ಬಗ್ಗೆ, ಆದರೆ ಅವಳು ಆಸಹಾಯಕಳು?
ಅದೊಂದು ಅಶ್ರುತುಂಬಿದ ವಿದಾಯ...ಆದರೆ ಅವರ ನಡುವಿನ ನಿಷ್ಕಲ್ಮಶ ಸ್ನೇಹ ಮುಂದುವರೆದಿತ್ತು.ಅವಗೊಮ್ಮೆ ಇವಗೊಮ್ಮೆ ಕಳಿಸುವ ಮೇಲ್ಗಳು, ಅಪರೂಪದ ಪೋನ್ಕಾಲ್ಗಳು.ಅದೇ ಸ್ನೇಹ.. ಆದರೆ ಇಬ್ಬರಿಗೂ ಗೊತ್ತು ಎಲ್ಲಿ ಗೆರೆ ಎಳೆಯಬೇಕೆಂದು.
ಈ ಕತೆಗಳ ಬಗ್ಗೆ ಯೋಚಿಸುತ್ತಿರುವಾಗ ನನ್ನ ಸ್ನೇಹಿತೆಯೊಬ್ಬಳ ಕರೆ ಬಂತು.ಅವಳು ಬಹಳ ಗಲಿಬಿಲಿಗೊಂಡಿದ್ದಳು. ೨-೩ ತಿಂಗಳುಗಳಿಂದ ಜೊತೆಗೆ ಕೆಲಸ ಮಾಡುವ ಅವಳ ಸಹೋದ್ಯೋಗಿಯೊಬ್ಬ ಅವಳ ಬಗ್ಗೆ ವಿಪರೀತ ಆಸಕ್ತಿ ಬೆಳಸಿಕೊಂಡಿದ್ದಾನೆ ಅಂತಾ ತಿಳಿಯಿತು.ನಂತರ ಮಾತುಕತೆಯ ನಂತರ ಸ್ಪಷ್ಟವಾಗಿದ್ದು ಅದರಲ್ಲಿ ಆಕೆ ಆ ರೀತಿ ಭಾವನೆ ಬರೋ ಹಾಗೆ ಮಾಡಿದ್ದು ಎನೂ ಇಲ್ಲ. ಅವಳು ಅವನಿಗೆ ಸ್ಪಷ್ಟವಾಗಿ ನಿರಾಕರಿಸಿ ಹೇಳಿದಳಂತೆ.
ನನ್ನ ಸ್ನೇಹಿತೆಗೆ ಕಿವಿಮಾತು ಹೇಳಿದೆ "Feeling of love is like sea waves, it keeps coming.Watch out !'
ಈ ಎಲ್ಲ ಎಪಿಸೋಡ್ಗಳನ್ನು ನೋಡಿದಾಗ ಮೂಡಿದ್ದು ಅನೇಕ ಪ್ರಶ್ನೆಗಳು....
೧. ಪ್ರೀತಿ ಅಥವಾ ಆ ಹೆಸರಿನ ಭಾವನೆಗಳು ಹೇಗೆ-ಯಾಕೆ ಮೊಳೆಯುತ್ತೆ?
೨. ಅಸಾಧ್ಯ ಅಂತಾ ಗೊತ್ತಿದ್ದರೂ ಕೊನೆಯ ಕ್ಷಣದವರೆಗೆ ಪ್ರೀತಿ ಮರಳಿ ಬರುತ್ತೆ ಅಂತಾ ಯಾಕೇ ಅಸೆ ಇರುತ್ತೆ?
೩. ಒಬ್ಬ ಹುಡುಗ-ಒಬ್ಬ ಹುಡುಗಿ ಒಳ್ಳೆ ಸ್ನೇಹಿತರಾಗೇ ಇರೋಕೆ ಸಾಧ್ಯನೇ ಇಲ್ವಾ?
ಪ್ರಶ್ನೆಗಳು ಕಾಡುತ್ತಿದ್ದಂತೆ ಬಂತು ಒಂದು ಸಂತಸದ ಸುದ್ದಿ. ನನ್ನ ಅತ್ಯಂತ ಅತ್ಮೀಯರಾದ ದಂಪತಿಗಳ ಕುಟುಂಬಕ್ಕೆ ಹೊಸ ಜೀವವೊಂದರ ಸೇರ್ಪಡೆ. ದಂಪತಿಗಳಿಬ್ಬರೂ ನನ್ನ ಕಾಲೇಜ್ ಸಹಪಾಠಿಗಳು ,ನಮ್ಮ ಮುಂದೆಯೇ ಅರಳಿದ ಪ್ರೀತಿಯದು, ಅವರು ಅನುಭವಿಸಿದ ನೋವು-ನಲಿವು ಎಲ್ಲ ತಿಳಿದ ನಾನು ಸಂಭ್ರಮದಿಂದ ಫೋನಾಯಿಸಿದೆ.
ಬಹುಷ: ಈ ಮೇಲಿನ ಪ್ರಶ್ನೆಗಳಿಗೆ ಉತ್ತರ ಇವರ ಹತ್ತಿರ ಉತ್ತರ ಸಿಕ್ಕರೂ ಸಿಗಬಹುದೇನೋ.ಆ ಕಡೆಯಿಂದ ನನ್ನ ಮಿತ್ರನ ಧ್ವನಿಯಲ್ಲಿ ಧನ್ಯನಾದೆ ಅನ್ನುವ ಭಾವನೆ..ಸಂತಸದ ಹೊನಲು..ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವಂತೆ ಇದ್ದ ಅವರ ಪ್ರೀತಿಯಲ್ಲಿ ಅರಳಿದ ಹೂವು.
ಬಹುಷಃ ಪ್ರೀತಿಯೆಂದರೆ ಇದೇನಾ?