Saturday, August 12, 2006
ಪೋಟೋ ಪ್ಲ್ಯಾಶ್ ಬ್ಯಾಕ್
ಹೀಗೆ ಸುಮ್ಮನೆ ಹಳೇ ಪೋಟೋಗಳನ್ನು ಆನ್ ಲೈನ್ ಅಲ್ಬಮ್‍ನಲ್ಲಿ ನೋಡ್ತಾ ಇದ್ದೆ. ಮಿತ್ರರೊಂದಿಗೆ ಹೋದ ಪಿಕನಿಕ್-ಪ್ರವಾಸ ಪೋಟೋಗಳು, ಟ್ರೆಕಿಂಗ್ ಪೋಟೋಗಳು. ಸುನಾಮಿ ಸಂತ್ರಸ್ತ ಪ್ರದೇಶದಲ್ಲಿ ಕಳೆದ ಆ ದಿನಗಳ ಪೋಟೋಗಳು, ಆಫೀಸ್ ಪೋಟೋಗಳು,ಸ್ನೇಹಿತರ ಮದುವೆ ಪೋಟೋ..
ಈ ಪೋಟೋ-ಕ್ಯಾಮರಗಳಲ್ಲಿದ್ದರೆ ಬಹುಷಃ ನಮ್ಮ ನೆನಪುಗಳನ್ನು ಮತ್ತೆ ಮತ್ತೆ ಹೆಕ್ಕಿ ತೆಗೆದು ಆ ನೆನಪುಗಳಲ್ಲಿ ಕಳೆದುಹೋಗೋದು ಕಷ್ಟವಾಗತಿತ್ತೋ ಎನೋ..
ಹಂಗೆ ಯೋಚನೆ ಮಾಡ್ತಾ ಇದ್ದಾಗ ನೆನಪಾದದ್ದು ಶಾಲೆಯ ಆ ಪೋಟೋ ಸೆಷನ್‍ಗಳು.ನಮ್ಮ ಶಾಲೆಯಲ್ಲಿ ಪ್ರತಿ ವರ್ಷ ತರಗತಿಯ ಗ್ರೂಪ್ ಪೋಟೋ ತೆಗೆತಿದ್ದರು.ಆಮೇಲೆ ಪೋಟೋ ಬೇಕಾದವರೆಲ್ಲ ಟೀಚರ್‍ಗೆ ಹೆಸರು ಕೊಡ್ತಾ ಇದ್ದಿವಿ.ಒಂದು ವಾರ ನಂತರ ಕವರ್‍ನಲ್ಲಿ ಒಂದೊಂದು ಪೋಟೋ ಸಿಗ್ತಾ ಇತ್ತು.ಆವಾಗ ಆ ಪೋಟೋಗಳು ಅಂತ ವಿಶೇಷ ಅನಿಸಿರಲಿಲ್ಲ.ಈಗ ಆ ಫೋಟೋಗಳಲ್ಲಿ ಸ್ನೇಹಿತರನ್ನು ಗುರ್ತಿಸಿ ಅವರ ಅವಾಗೀನ ಅವತಾರವನ್ನು ಈಗೀನ ಅವತಾರಕ್ಕೆ ಹೋಲಿಸಿ ನೋಡುವದರಲ್ಲಿ ಮಜಾ ಇರುತ್ತೆ!
ಮನೆಯಲ್ಲಿ ನಾನು ೬ ತಿಂಗಳು ಆಗಿದ್ದಾಗ ತೆಗೆದ ಕಪ್ಪು-ಬಿಳುಪು ಪೋಟೋ ಒಂದು ಇದೆ.ಅದರಲ್ಲಿ ಅಳುತ್ತಿರುವ ನನ್ನ ನೋಡಿದಾಗ ಈಗ ಮಂದಹಾಸ ಮೂಡದಿದ್ದರೆ ಕೇಳಿ! ಹಾಗೆ ಅಪ್ಪ-ಅಮ್ಮ ಮದುವೆಯ ನಂತರ ಸ್ಟುಡಿಯೋದಲ್ಲಿ ತೆಗೆಸಿಕೊಂಡ ಪೋಟೋ. ಆ ಪೋಟೋಗಳಿಗೆ ಹಾಕಿದ ಆ ಕಪ್ಪು ಫ್ರೇಮ್.
ನಮ್ಮ ಊರು ಕಡೆ ಅದಕ್ಕೆ 'ಪೋಟೋಕ್ಕೆ ಕಟ್ಟು ಹಾಕಿಸೋದು' ಅಂತಿದ್ದರು.ಅದಕ್ಕೆ ಅಂತಾ ಒಂದು ಅಂಗಡಿ ಇತ್ತು.ಅಲ್ಲಿ ಪೋಟೋ ಕೊಟ್ಟರೆ ,ಒಂದು ತೆಳು ಹಲಗೆ ಮೇಲೆ ಅದನ್ನು ಇಟ್ಟು, ಅದಕ್ಕೆ ಹೊಂದುವಷ್ಟು ಗಾಜು ಕೊರೆದು ಅದನ್ನು ಪೋಟೋ ಮೇಲೆ ಇಟ್ಟು ಅದಕ್ಕೆ ನಾಲ್ಕು ಕಡೆ ಫ್ರೇಮ್ ಹಾಕಿ ಕೊಡ್ತಾ ಇದ್ದರು.ಅದನ್ನು ತಂದು ಮನೆ ಗೋಡೆ ಮೇಲೆ ತೂಗಿ ಹಾಕೋದರಲ್ಲಿ ಒಂದು ಸಂಭ್ರಮ!
ಕ್ರಮೇಣ ಪೋಟೋಗೆ ಕಟ್ಟು ಹಾಕಿಸೋದು ಕಡಿಮೆಯಾಗ್ತ ಬಂತು.ಅದರ ಜಾಗದಲ್ಲಿ ಬಂತು ಅಲ್ಬಮ್‍ಗಳು.ಅದು ಒಂದು ತರ ಮಜದ ಕೆಲಸ, ಸ್ಟುಡಿಯೋದಿಂದ ಪೋಟೋ ಪ್ರಿಂಟ್ ಹಾಕಿಸಿಕೊಂಡು ಬಂದು ಒಂದೊಂದೇ ಪೋಟೋ ಮೊದಲ ಸಲ ನೋಡಿ ಅದನ್ನು ಅಲ್ಬಮ್‍ಗೆ ಹಾಕೋದರಲ್ಲಿ ಎನೋ ಖುಷಿಯಾಗ್ತಿತ್ತು.
ಕ್ಯಾಮರ ಬಗ್ಗೆ ಆವಾಗಿಂದ ಒಂದು ಪ್ರೀತಿಭರಿತ ಕುತೂಹಲವಿದ್ದೆ ಇತ್ತು.ಮೊದಲ ಸಲ ನನ್ನ ಕೈಗೆ ಕ್ಯಾಮರ ಸಿಕ್ಕಿದು ನಾನು ಇಂಜಿನಿಯರಿಂಗ್ ಸೇರಿದ ಮೇಲೆನೇ. ೬ನೇಯ ಸೆಮಿಸ್ಟರ್ ಇದ್ದಾಗ ಈಡೀ ಕ್ಲಾಸ್ ೧೯ ದಿನಗಳ ಒಂದು ಮಹಾ ಪ್ರವಾಸ ಹೋಗಿದ್ದೆವು .ಅವಾಗ ಅಣ್ಣನಿಂದ ಕ್ಯಾಮರ ಪಡೆದು ತೆಗೆದುಕೊಂಡು ಹೋಗಿದ್ದೆ.ಆ ಪ್ರವಾಸದ್ದು ಒಂದು ದೊಡ್ಡ ಕತೆಗಳ ಕಂತೆಯಾದರೆ ಆ ಸಮಯದಲ್ಲಿ ತೆಗೆದ ಪೋಟೋಗಳದ್ದು ಇನ್ನೊಂದು ಕತೆ.
ಪ್ರವಾಸದ ಸಮಯದಲ್ಲಿ ಆದ ಒಂದು ಪೋಟೋ ಕತೆ...ನನ್ನ ಸ್ನೇಹಿತೆಯೊಬ್ಬಳು ಕ್ಯಾಮರದಲ್ಲಿ ಕ್ಲಿಕ್‍ಸಿದ ಪೋಟೋ ರೋಲನ್ನು ನನ್ನ ಬಳಿ ಜೋಪಾನವಾಗಿ ಇಟ್ಟುಕೊಳ್ಳಲು ಕೊಟ್ಟಿದ್ದಳು.ಪ್ರವಾಸವೆಲ್ಲ ಮುಗಿಸಿ ಬಂದು ಪೋಟೋ ಡೆವಲಪ್‍ಗೆ ಕೊಟ್ಟಾಗ ಕಾದಿತ್ತು ನಮಗೆ ಅಘಾತ.ಸ್ನೇಹಿತೆ ನನ್ನ ಬಳಿ ಕೊಟ್ಟಿದ್ದ ಪೋಟೋ ರೋಲ್ ಡೆವಲಪ್ ಮಾಡಿದಾಗ ಪೂರ್ತಿ ಬ್ಲ್ಯಾಂಕ್ ಆಗಿಬಂದಿತ್ತು.ನನ್ನ ರೋಲ್ ಡೆವಲಪ್‍ಗೆ ಕೊಟ್ಟಾಗ ಕಾದಿತ್ತು ಇನ್ನೊಂದು ಅಘಾತ.ಒಂದು ರೋಲ್‍ನಲ್ಲಿ ಒಂದರ ಮೇಲೆ ಒಂದರಂತೆ ಎರಡೆರಡು ಪೋಟೋಗಳು ಇದ್ದವು! ಆಗಿದ್ದೆನೆಂದರೆ ನನ್ನ ಖಾಲಿ ರೋಲ್ ಮತ್ತು ಸ್ನೇಹಿತೆಯ ರೋಲ್ ಅದಲು ಬದಲಾಗಿ, ನನ್ನ ಕ್ಯಾಮರಕ್ಕೆ ಖಾಲಿ ರೋಲ್ ಬದಲು ಸ್ನೇಹಿತೆಯ ರೋಲ್ ಹಾಕಿ ಕ್ಲಿಕ್‍ಸಿದ್ದೆ!!
ಕೆಲಸಕ್ಕೆ ಸೇರಿ ಸ್ಪಲ್ಪ ದಿನದಲ್ಲೇ ನನ್ನದೇ ಒಂದು ಸ್ವಂತ ಕ್ಯಾಮರ ಖರೀದಿಸಿದ್ದೆ. ಆ ಕ್ಯಾಮರ ನನ್ನ ಅನೇಕ ನೆನಪುಗಳಿಗೆ ಜೊತೆ ನೀಡಿತು.ನನ್ನ ಎಲ್ಲ ಪ್ರವಾಸ,ಪಿಕ್‍ನಿಕ್,ಟ್ರೇಕಿಂಗ್‍ಗಳ ಅವಿಭಾಜ್ಯ ಅಂಗವಾಯಿತು.ಹಾಗೆಯೇ ಸುನಾಮಿಯ ಪ್ರಳಯದ ನಂತರದ ಘೋರ ಘಟನೆಗಳನ್ನು ನೋಡಿದ್ದು ಈ ಕ್ಯಾಮರ ಕಣ್ಣುಗಳಿಂದ.
ಕೆಲ ವರ್ಷಗಳ ನಂತರ ವೀಸಾ ಸಂದರ್ಶನಕ್ಕೆ ಹೋಗುವ ಸಮಯ ಬಂತು.ಆ ವೇಳೆಯಲ್ಲಿ ನಡೆದದ್ದು ಈ ಪೋಟೋ ತೆಗೆಸುವ ಪ್ರಸಂಗ.ನನ್ನ ಎಲ್ಲ ವೀಸಾ ಪೇಪರ್ ತೆಗೊಂಡು ಹೋಗಿ ನಮ್ಮ ಕಛೇರಿಯ ವೀಸಾ ಸೆಲ್‍ನವರಿಗೆ ಕೊಟ್ಟರೆ, ಅವರು ಪೋಟೋ ಸಂಪೂರ್ಣ ಬಿಳಿ ಬ್ಯಾಕ್‍ಗ್ರೌಂಡ್ ಇರಬೇಕು,ಆದರೆ ಇದರಲ್ಲಿ ಅಷ್ಟು ಬಿಳಿ ಕಾಣಿಸುತ್ತಿಲ್ಲ, ಇನ್ನೊಮ್ಮ ತೆಗೆಸಿಕೊಳ್ಳಿ ಅಂದಾಗ ಪೂರ್ತಿ ತಲೆಕೆಟ್ಟು ಹೋಗಿತ್ತು.ನಂತರ ನಮ್ಮ ವೀಸಾ ಸೆಲ್‍ನವರು ಹೇಳಿದರು 'ಇಲ್ಲೇ ಸರಿ ಮಾಡಿಕೊಂಡು ಹೋಗುವುದು ಒಳ್ಳೆದು, ಇಲ್ಲಾ ಅಂದರೆ ಅಲ್ಲಿ ವೀಸಾ ಸಂದರ್ಶನದಲ್ಲಿ ಹೆಂಗಿದ್ದರೂ ಅದನ್ನು ನೋಡಿ ತಿರಸ್ಕರಿಸಬಹುದು'.ಇದು ಒಳ್ಳೆ ಸರ್ಪ್ ಎಕ್ಸಲ್ ಬಿಳುಪಿನ ಕತೆ ಆಯಿತಲ್ಲ ಅಂತಾ ಗೊಣಿಗಿಕೊಂಡು ಮತ್ತೊಮ್ಮೆ ಹಾಲಿನಂತ ಬಿಳುಪಿನ ಬ್ಯಾಕ್‍ಗ್ರೌಂಡ್ ಪೋಟೋ ತೆಗೆಸಿಕೊಂಡಾಯಿತು.
ಅಲ್ಲಿಂದ ಇಲ್ಲಿಗೆ ನೆಗೆದ ಮೇಲೆ ನಾನು ಮಾಡಿದ ಮೊದಲ ಕೆಲಸ ಡಿಜಿಟಲ್ ಕ್ಯಾಮರ ಕೊಂಡಿದ್ದು. ಡಿಜಿಟಲ್ ಕ್ಯಾಮರದಲ್ಲಿ ಖುಷಿಯಾಗುವ ವಿಚಾರವೆಂದರೆ ತೆಗೆದ ಪೋಟೋ ಅಲ್ಲೇ ನೋಡಬಹುದು, ಬೇಡದಿದ್ದರೆ ಇನ್ನೊಮ್ಮೆ ಕ್ಲಿಕ್‍ಸಿಬಹುದು.ಪೋಟೋ ರೋಲ್ ಹಾಕುವ ಆಗಿಲ್ಲ, ಕ್ಲಿಕ್‍ಸಿದ ಅ ಪೋಟೋ ಹೇಗೆ ಬಂದಿರಬಹುದು ಅಂತಾ ಕಾಯುವ ಆಗಿಲ್ಲ.ಎಲ್ಲ ಅಲ್ಲೇ ಗೊತ್ತಾಗಿ ಬಿಡುತ್ತೆ. ಈಗ ಎನಿದ್ದರೂ ಪೋಟೋ ಕ್ಲಿಕ್‍ಸಿ, ಅದನ್ನು ಕ್ಯಾಮರದಿಂದ ಕಂಪ್ಯೂಟರ್‍ಗೆ ವರ್ಗಾಯಿಸಿದರೆ ಆಯಿತು.ಅಲ್ಲಿಂದ ಬೇಕಾದವರಿಗೆ ಇ-ಮೇಲ್‍ನಲ್ಲಿ ಪೋಟೋ ಕಳಿಸಬಹುದು.ಇಲ್ಲ ಅಂದರೆ ಎಲ್ಲ ಪೋಟೋ ಆನ್‍ಲೈನ್ ಅಲ್ಬಮ್‍ಗೆ ಹಾಕಿ, ಆ ಆಲ್ಬಮ್ ಲಿಂಕ್ ಕಳುಹಿಸಿದರಾಯಿತು.
ಫಿಲ್ಮ್ ರೋಲ್ ಕ್ಯಾಮರದಿಂದ ಡಿಜಿಟಲ್ ಕ್ಯಾಮರಕ್ಕೆ,ಅಲ್ಬಮ್‍ನಿಂದ ಆನ್‍ಲೈನ್ ಅಲ್ಬಮ್‍ಗೆ ಬಂದಾಯಿತು.ಮುಂದಿನ ಅವಿಷ್ಕಾರಗಳು ಪೋಟೋ-ಕ್ಯಾಮರವನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಾವೋ ನೋಡಬೇಕು.
ಇಷ್ಟೆಲ್ಲ ಆದರೂ ಆ ಕಪ್ಪು-ಬಿಳುಪು ಪೋಟೋಗಳು,ಆ ಕಟ್ಟು ಹಾಕಿದ ಪೋಟೋಗಳನ್ನು ನೋಡುತ್ತಿದ್ದರೆ ನಾಸ್ಟಾಲಿಜಿಯಾ ಆಗದಿದ್ದರೆ ಹೇಳಿ..
Subscribe to:
Post Comments (Atom)
15 comments:
ಫೋಟೋಆಯಣ ಬಹಳ ಚೆನ್ನಾಗಿದೆ. ಹಳೆಯ ಚಿತ್ರಗಳನ್ನು ಹಾಕೇ ಇಲ್ಲ. ನೀವು ಮಗುವಾಗಿದ್ದಾಗ ತೆಗೆದ ಚಿತ್ರವನ್ನೂ ಹಾಕಿ. ಅಂದ ಹಾಗೆ ಮಕ್ಕಳಿದ್ದಾಗ ಚಡ್ಡಿ ಇಲ್ಲದೇ ಇರೋ ಫೋಟೋ ತೆಗೆದಿರ್ತಾರಲ್ವಾ? ಅದು ನಿಮ್ಮಲ್ಲಿ ಇದೆಯಾ? ಆಗಾಗ ನನ್ನ ಮಗನನ್ನು ರೇಗಿಸಲು ಆ ಚಿತ್ರ ತೋರಿಸ್ತಿರ್ತೀನಿ. ಒಮ್ಮೆಯಂತೂ ಕೋಪದಿಂದ ಅದನ್ನು ಹರಿದು ಹಾಕಿದನು. ಆದರೇ ನೆಗೆಟಿವ್ ಇರೋದು ಅವನಿಗೆ ಗೊತ್ತಿಲ್ಲ.
ಡಿಜಿಟಲ್ ಕ್ಯಾಮೆರಾ ಬಗ್ಗೆ ನನಗೆ ಗೊತ್ತಿರ್ಲಿಲ್ಲ. ಈಗ ನಾನೂ ಅಂತಹ ಒಂದು ಕ್ಯಾಮೆರಾವನ್ನು ಕೊಳ್ಲಬೇಕು.
ಚೆನ್ನಾಗಿದೆ ರೀ ಫೋಟೋಗಳ ಜೊತೆಗಿನ ನಾಸ್ಟಾಲ್ಜಿಯಾ ಟ್ರಿಪ್!(ನನ್ನ್ ಭಾಷೆ ನೋಡಿ ಅಳ್ಬೇಡಿ, ಬೆಂಗ್ಳೂರ್ನವ್ಳು ಪಾಪ ಅಂತ ಕ್ಷಮ್ಸ್ಬಿಡಿ ಎಲ್ಲಾರೂ!:P) ಈಚೆಗೆ ನಮ್ಮ್ ಸ್ಕೂಲಿನ ಜುನಿಯರ್ ಒಬ್ಬ ಅವರ ಕ್ಲಾಸ್ ಫೊಟೊನ ಕಳ್ಸಿದ್ದ - ಅಲ್ಲಿ ನಾನಿಲ್ಲದಿದ್ದ್ರೂ ಆ ಪುಟ್ಟ ಗೆಳೆಯರ ಮುದ್ದು ಮುಖಗಳನ್ನ್ ನೋಡ್ತಾ ನಾನೂ ಒಂದು ಹದಿನೈದ್ ವರ್ಷ ಹಿಂದೆ ಹೋಗಿಬಿಟ್ಟೆ...ಬಾಲ್ಯದ ಸವಿನೆನಪುಗಳು, ಕಾಲೇಜಿನ ಹುಚ್ಚಾಟಗಳ ದಿನಗಳು, ಆ ಎತ್ನಿಕ್ ಡೇ ಸಂಭ್ರಮಗಳು, ಕಾಲೇಜ್ ಡೇ ರಾಜ್ಯಭಾರಗಳು...ಎಲ್ಲ ನೆನಪುಗಳು ಆಲ್ಬಂನಲ್ಲಿ ಬೆಚ್ಚಗೆ ಕೂತು ಬೇಕಾದಾಗ ಕಣ್ಣು ತುಂಬಿಸೋ ಅನುಭವಗಳು!
ನೆನಪಿನ ಅಂಗಳಕ್ಕೆ ಕಳ್ಸ್ಬಿಟ್ಟ್ರಿ! ಅದಕ್ಕೆ ಥ್ಯಾಂಕ್ಸ್:)
ಹೌದು, ತ ವಿ ಶ್ರೀ ಯವ್ರು ಹೇಳಿದ್ ಹಾಗೆ ಆ ಫೋಟೊಗಳನ್ನ್ ಹಾಕಿದ್ದ್ರೆ ಇನ್ನೂ ಚೆನ್ನಾಗಿರೋದು - ಜುಟ್ಟು ಗಿಟ್ಟು ಕಟ್ಟ್ಕೊಂಡು ಫ್ರಾಕ್ ಹಾಕಿರೋ ಫೋಟೋ ಇದ್ದ್ರಂತೂ ಇನ್ನೂ ಒಳ್ಳೇದು;)
ಮಾವಿನಯಸರೇ,
ಚಡ್ಡಿ ಇಲ್ಲದೇ ಇರೋ ಪೋಟೋ ನಾ :D
ಇಲ್ಲಿ ಬೇಡ ನಿಮಗೆ ಬೇಕಾದರೆ ಪ್ರತ್ಯೇಕವಾಗಿ ಕಳ್ಸಿತೀನಿ :)
ಶ್ರೀ,
ಪೋಟೋ ಅಲ್ಬಮ್ ಒಂದು ಮಾಯಲೋಕವೇ ಸರಿ..ಒಂದೊಂದು ಪುಟ ತಿರುಗಿಸುತ್ತಿದ್ದಂತೆ ಅದು ಒಂದೊಂದು ಮಧುರ ನೆನಪಿನಾಂಗಳಕ್ಕೆ ಕರೆದೊಯ್ಯುತ್ತೆ..
ನಿಮ್ಮ ಭಾಷೆಗೆ ಎನಾಗಿದೆ ರೀ? ಚೆನ್ನಾಗಿ ಇದೆಯಲ್ವಾ?
ಜುಟ್ಟಿನ ಪೋಟೋ :)ಅದೂ ಇದೆ..
ಫ್ರಾಕ್ ಹಾಕಿದ್ದ..ಹೀ ಹೀ..ಇಲ್ಲಪ್ಪಾ ಆ ತರದ್ದು ಇಲ್ಲ..
hmmmm!!! naasTaljiyaage hogalu photos mattu albuma oMdu sulabhavada dAri...time machine thara kelsa mado e photogalu, albumagalu ellaru ( friends & family) seridaaga baroo gammatte bEre.... nimma chaDDi irade iro photo copy taviSrigaLa jote illoMdu copy haaki....
neevu helida anubhava nanna jote koDa agide... nanna badami,Ihole ,pattadakallu etc amulya chitragalu higaagi haLagiddu..Ig Digital Camera irodrinda astenu bhayapadabekagilla.. Modlu adro photo tagasi print nodovarage samadana iratiralilla... nimma juttu mattu frack iro photo hakkidare blog baaLa chalo iratittu.....
ಶಿವ್ ಅವರೆ,
ನಾನು Flash backಗೆ ಹೋದಾಗ ಅದು ನಂಗೇ back-lash ಆಗ್ತಾ ಇದೆಯಲ್ಲಾ....
ನಿಮ್ಮ ಜುಟ್ಟು ಕಳ್ಸಿಕೊಡಿ... ನಿಮ್ ಜುಟ್ಟು ನಮ್ ಕೈಯಲ್ಲಿದೆ ಅಂತ ಹೇಳ್ಬೋದು...
ಮಹಾಂತೇಶ್,
ಪೋಟೋ ರೀಲ್ ಪ್ರಿಂಟ್‍ಗೆ ಕೊಟ್ಟು ಅದು ಬರುವರೆಗೆ ಅದರದೇ ಚಿಂತೆ.ಬಂದ ಮೇಲೆ ನೋಡೋ ಸಡಗರ..
ಓ ನೀವು ಪೋಟೋ ನನ್ನ ತರನೇ ಹಾಳಮಾಡಿಕೊಂಡು ಅಭ್ಯಾಸ ಇದೆ :)
ಅಸತ್ಯಿಗಳೇ,
ಅಯ್ಯೋ ನಿಮಗೆ ಜುಟ್ಟು ಕೊಡೋಕೆ ಆಗುತ್ತಾ..ಎನೂ ಇಲ್ಲದೆ ಅನ್ವೇಷಣೆ ಮಾಡ್ತಾ ಇರ್ತೀರಾ..ಇನ್ನೂ ಜುಟ್ಟು ಕೊಟ್ಟರೆ ಅಷ್ಟೇ :)
"ಒಳ್ಳೆ ಕ್ಷಣಗಳ ಕೂಡಿಡಬೇಕು
ಬದುಕಿನ ನೆನಪಿಗೆ
ಋತುಗಳ ಜೂಟಾಟಕೆ.."
ಕಾಲವನ್ನು ಹಿಡಿದಿಡುವ ನಮ್ಮ ಒಂದು ವ್ಯರ್ಥ ಪ್ರಯತ್ನ ಈ ಫೋಟೋಗಳು :)
ತ್ರಿವೇಣಿಯವರೇ,
ಎಂತ ಸುಂದರ ಸಾಲುಗಳು !
ಎಲ್ಲೋ ಕೇಳಿದ ಹಾಗೆ ಇದೆ..ಎಲ್ಲಿದೂ ರೀ ಇವು ಸಾಲುಗಳು?
ವ್ಯರ್ಥ ಪ್ರಯತ್ನವಾದರೂ ಅದರ ಫಲಿತಾಂಶ ಮಾತ್ರ ವ್ಯರ್ಥವಲ್ಲ..
ನಿಮಗೆ ಗೊತ್ತಾಗಬಹುದು ಅಂದುಕೊಂಡಿದ್ದೆ :) ಗೊತ್ತಾಗಲಿಲ್ವಾ?
ಇಲ್ಲಿದೆ ನೋಡಿ - http://www.kannadaaudio.com/Songs/Moviewise/N/Nenapirali/Indu.ram
ಶಿವ್,
ಫೋಟಾಯಣ ಚೆನ್ನಗಿದೆ ಮಾರಾಯ್ರೆ. ನನ್ನ ಶಾಲೆಯಲ್ಲಿಯು ತೆಗೆಯುತಿದ್ದರು ಆದರೆ, ಭೂತಗಳಾದರಿಂದ, ಖಾಲಿ ಫೋಟೋಗಳು :D !
ನನ್ನ ನೆಟ್ ಕಿರಿಕ್ ನಿಂದ, ಬ್ಲಾಗ್ಗಳನ್ನ ನೋಡೊಕ್ಕೆ ಆಗ್ದೆ, ಓದಲು ಆಗ್ತ ಇಲ್ಲ. ಹಂಗು ಹಿಂಗು ಬಂದು ಓದಿದೆ. ಒಳ್ಳೆ ಓದು.
ಭೂತ
nanagiinu ella odoke aagilla...shiv matte bartini..
ತ್ರಿವೇಣಿಯವರೇ,
ಓ !! ನೆನಪಿರಲಿ...ಹಂಸವಿರಚಿತ ಗೀತೆ..ತುಂಬ ಸೊಗಸಾಗಿದೆ..
ಭೂತ,
ನಿಮಗೂ ಶಾಲೆ ಅಂತಾ ಒಂದು ಇರುತ್ತಾ :)
ಎನ್ರೀ ಅದು ಭೂತಕ್ಕೆ ಕಿರಿಕ್..ಯಾರ್ರೀ ಅದು ಕೊಡ್ತಾ ಇರೋದು..
ಜಯಂತ..
ನನ್ನ ಬ್ಲಾಗ್ ಬಾಗಿಲು ಯಾವಾಗಲೂ ನಿಮಗೆ ತೆರೆದಿರುತ್ತೆ !
ನಾವು ಫೋಟೋಗೆ ಕಟ್ಟು ಹಾಕ್ತೀವಿ, ಫೋಟೋಗಳು ನಮ್ಮ ನೆನಪನ್ನ ಕಟ್ಟಿ ಹಾಕ್ತಾವೆ!
tumba chennagide. For a moment, naanu namma school days ge hogidde....prati varsha photo tegiskoLokke paDtha idda saDagara....naanu illi nilthini, neenu alli nillu...naanu sir/madam pakka kuDthini anno jagaLa...aamele ondu vaarad tanka aa photo na pade pade noDodu...ohoho...koi lautaade mere beethe hue din...
andhage 'MyClub' nalli annual day time nalli tegiskoLthidda photos collection kuDa irbeku...
Digital camera advantageousee. adre aa analog camera dalli photo tegiskonDmele adu develop aagi baro tanka irtha idda kutuhala ne bere...develop aagi banda photo chennagi bandilla andre aagthidda niraase...adella onthara chenna :)
ಕಾಲು ದಾದಾ,
ಸರಿಯಾದ ಮಾತು
ಪಾತರಗಿತ್ತಿಗೆ ನಿಮಗೆ ಸ್ವಾಗತ !
ವಿದ್ಯಾ,
ಹೌದು , ಶಾಲೆ ಗ್ರೂಪ್ ಪೋಟೋದ ಸಡಗರ ಇನ್ನೂ ಮುದ ನೀಡುತ್ತೆ. ಮೈ ಕ್ಲಬ್‍ನ ವಾರ್ಷಿಕ ದಿನದ ಪೋಟೋಗಳು ಸಹ ಇವ.ರೋಲ್ ಕ್ಯಾಮಾರ ಪೋಟೋ ಡೆವಲಪ್‍ಗೆ ಕೊಟ್ಟಾಗ ಆ ಸ್ಟುಡೀಯೋದವನ ಹತ್ತಿರ 'ಬೇಗ ಪ್ರಿಂಟ್ ಹಾಕಿಕೊಡ್ರಿ ಪ್ಲೀಸ್' ಅಂತಾ ರಿಕ್ಚೆಸ್ಟ್ ಮಾಡೋದೆನೂ, ಅವನು ಇದೇ ಟೈಮ್ ಅಂತಾ 'ಅಯ್ಯೋ ತುಂಬಾ ಆರ್ಡರ್ಸ್ ಇವೇ,ಆದರೂ ನಾನು ಟ್ರೈ ಮಾಡ್ತೀನಿ' ಅನ್ನೋ ಚಮಕ್ !!
Post a Comment