Thursday, February 21, 2008

ನಾಳೆಗಳ ಭರವಸೆಯಲ್ಲಿ...

ಗಾಢ ಅಂಧಕಾರದಲ್ಲಿನ
ಮುದುಡಿದ ಕೆಂದಾವರೆಗೆ
ಸೂರ್ಯೋದಯವಾಗದಿದ್ದರೆ ಎನ್ನುವ ಆತಂಕ

ಚಂದ್ರನಿಲ್ಲದ ಬಾನು
ಅಮಾವಾಸ್ಯೆ ನಿರಂತರ
ಎನ್ನುವ ಹೆದರಿಕೆ

ಬೀಜ ಬಿತ್ತಿದ ರೈತನಿಗೆ
ಮಳೆ ಹೊತ್ತು ತರುವ ಕರಿಮೋಡ
ಬಾರದಿದ್ದರೆ ಎನ್ನುವ ಆತಂಕ

ಯಾಕೇ ಗೆಳತಿ ಈ ಹತಾಶೆ

ರಾತ್ರಿಯ ಕತ್ತಲ ಸೀಳಿ
ಸೂರ್ಯ ಬಂದೇ ಬರುತ್ತಾನೆ
ಆಗ ಕೆಂದಾವರೆ ಅರಳಲಿದೆ

ಅಮಾವಾಸ್ಯೆಯ ನಂತರ
ಚಂದ್ರ ಮೂಡುತ್ತಾನೆ
ಬೆಳದಿಂಗಳು ಎಲ್ಲೆಡೆ ಚೆಲ್ಲಲಿದೆ

ಬರಗಾಲದ ನಂತರ
ಒಂದು ವರ್ಷಧಾರೆ ಅಗುತ್ತದೆ
ರೈತನಿಗೆ ಮತ್ತೆ ಹುಮ್ಮಸ್ಸು ಬರಲಿದೆ

ಕನಸುಗಳ ಹೊಲಕ್ಕೂ
ಅವಕಾಶದ ಮಳೆ ಬರಲಿದೆ
ಆಸೆಗಳೆಲ್ಲಾ ಚಿಗುರಿ ಫಸಲಾಗಲಿದೆ

ಅಲ್ಲಿಯವರೆಗೆ ಇರಲಿ ಗೆಳತಿ
ಆ ಗಳಿಗೆಗೋಸ್ಕರ ಛಲದಿಂದ ಕಾಯುವ
ಸೋಲಿನ ನೆರಳಿನಿಂದ ದೂರವಿರುವ ಮನ

18 comments:

Parisarapremi said...

ಹುಣ್ಣಿಮೆ ಆಗಿ ಇನ್ನೂ ಇಪ್ಪತ್ನಾಲ್ಕು ಗಂಟೆಯೂ ಆಗಿಲ್ವಲ್ಲಾ ಸರ್? ಆಗ್ಲೇ ಅಮಾವಾಸ್ಯೆ ಬಗ್ಗೆ ಬರ್ದಿದೀರಲ್ಲಾ?? ;-)

Sree said...

ನಂಗೆ ಸ್ವಲ್ಪ ಕುಂಬಳ್ಕಾಯ್ ಕಳ್ಳರ್ ಫೀಲಿಂಗು ಈ ಕವನ ಓದ್ತಾ!:))
ಅಂದಹಾಗೆ
"ಚಂದ್ರನಿಲ್ಲದ ಭಾನು
ಅಮಾವಾಸ್ಯೆ ನಿರಂತರ
ಎನ್ನುವ ಹೆದರಿಕೆ"
ಇಲ್ಲಿ ’ಚಂದ್ರನಿಲ್ಲದ ಬಾನು’ ಆಗ್ಬೇಕಿತ್ತಲ್ಲ್ವಾ? ಭಾನು=ಸೂರ್ಯ ಅಲ್ಲ್ವಾ?
ಅಂತೂ ನಿಮ್ಮ”ಬಿಡುವಿಲ್ಲದ ದಿನಚರಿ’ಯ ಮಧ್ಯ ತಿಂಗಳಿಗೊಂದಾದ್ರೂ ಚಿಟ್ಟೆ ಹಾರಿಬಿಡ್ತಿದೀರಲ್ಲ, ಅದಿಕ್ಕೆ ಥ್ಯಾಂಕ್ಸ್;)

sunaath said...

ಒಳ್ಳೆ ಆಶಾವಾದಿ ಕಣ್ರೀ ನೀವು.
ಪಾತರಗಿತ್ತಿ ಪಕ್ಕಾ,
ಖುಶಿಯಾಯ್ತು ಅಕ್ಕಾ!

ಸುಪ್ತದೀಪ್ತಿ suptadeepti said...

ಹೊಸ ಜೀವನದ ಹೊಸತನ ಇನ್ನೂ ಮಾಸಿಲ್ಲ, ಆಗಲೇ ಯಾಕೆ ಗೆಳತಿಗೆ ನಿರಾಶೆ? ಹೊಸ ಊರಿನ ಗೊಂದಲವೆ? ತವರಿನ ನೆನಪೆ? ಬಿಟ್ಟು ಬಿಟ್ಟು ಸುರಿಯುವ ಛಳಿ ಹೊತ್ತ ಮಳೆಯೇ? ಏನೇ ಇರಲಿ, ಪಾತರಗಿತ್ತಿಪಕ್ಕ ಜೋಪಾನವಾಗಿರಲಿ...

Shiv said...

ಪರಿಸರಪ್ರೇಮಿ,
ವಂದನೆಗಳು ಪಾತರಗಿತ್ತಿಗೆ ಭೇಟಿ ನೀಡಿದ್ದಕ್ಕೆ..
ಹುಣ್ಣಿಮೆ-ಅಮಾವಾಸೆ ಬರ್ತಾವೆ-ಹೋಗ್ತಾವೆ...ಅಲ್ವಾ

ಶ್ರೀ,
ಕುಂಬಳಕಾಯಿ ಕಳ್ಳ ?? ಗೊತ್ತಾಗಲಿಲ್ಲಾರೀ
ನೀವು ಹೇಳೋದು ಸರಿ..ಅದು ಬಾನು..ಧನ್ಯವಾದಗಳು

ಸುನಾಥ್,
ಜೀವನ ನಡೆಯೋದೇ ಆಸೆಗಳ ಬೆನ್ನ ಮೇಲೆ..
ವಂದನೆಗಳು

ಸುಪ್ತದೀಪ್ತಿ,
ಬಹುಷಃ ನಿಮ್ಮೂರಿನ ಚಳಿ-ಮಳೆ ಇರಬೇಕು :)

mouna said...

shiv,
how are you? long time....
naaLeyalli baravase... it is perhaps the best way to take a tomorrow.

as far as i go, we are all basically good at heart, so things can't really go all that wrong, as they appear to be.

sakkath kavana, as always!! :D

Anonymous said...

ಗುರುವೇ,

ಏನೇ ಹೇಳು, ಅಮಾವಾಸ್ಯೆ ಇದ್ದರೇ ಬೆಳದಿಂಗಳನ್ನು ಮೆಚ್ಚುವುದಕ್ಕಾಗೋದು...ಅಲ್ವಾ? So, all in the right stride.

ಅಂದಹಾಗೆ...'ಭಾನು' ಅಥವಾ 'ಬಾನು'? Typo?

Shiv said...

ಮೌನ,
ಭರವಸೆಯೇ ಬದುಕು
ತುಂಬಾ ದಿವಸ ಆದ ನಂತರ ಪಾತರಗಿತ್ತಿಗೆ ಬರ್ತಾ ಇದೀರಾ..

DS,
ನೀವು ಹೇಳೋದು ನಿಜ..
ಬೆಳದಿಂಗಳ ಬೆಲೆ ತಿಳಿಯೋದೇ ಅಮಾವಾಸ್ಯೆ ಇದ್ದಾಗ
ಅದು typo :)

ಶಾಂತಲಾ ಭಂಡಿ (ಸನ್ನಿಧಿ) said...

shiv ಅವರೆ...
ಮೊದಲ ಮೂರು stanzas ಓದುವಾಗ ನಕಾರಾತ್ಮಕ ಭಾವಗಳು ಆವರಿಸಿಕೊಂಡವು. ಅವುಗಳ ಪರಿಹಾರವನ್ನು ಇನ್ನುಳಿದ stanzaಗಳು ನೀಡಿದಾಗ ಜೀವನೋತ್ಸಾಹ ಮರುಕಳಿಸುವಂತಿದೆ. ಎಲ್ಲ ಸಾಲುಗಳೂ ಸಂದೇಶವೇ.
ತುಂಬ ಇಷ್ಟವಾಯ್ತು ಕವಿತೆ.

aks said...

ನಮಸ್ಕಾರ
ಕತ್ತಲಾ ದಮೇಲೆ ಬೆಳಕು ಅನ್ನೋದು ಎಷ್ಟು ಸತ್ಯ ಅಲ್ವಾ......

ಕೋಮಲ

ಕಿರಣ್ ಜಯಂತ್ said...

ಶಿವ್ ಅವರೇ,

ನಿಮ್ಮ ಬ್ಲಾಗನ್ನು ನೋಡಿ ತುಂಬಾ ಖುಶಿಯಾಯಿತು. ಈ ಕವನ ಅತ್ಯದ್ಭುತವಾಗಿ ಮೂಡಿಬಂದಿದೆ.ನಿಮ್ಮ ಮೊದಲ ಕ್ರುತಿಯ ಒಂದು ಪ್ರತಿಯನ್ನು ಮೇಲ್ ಮಾಡಿ ಅಂತ ಒಂದು ಬಾರಿ Sdreams1@gmail.com ಗೆ ವಿನಂತಿಸಿದ್ದೆ. ನೀವು ಬಹುಶಹ ನೊಡಿರಲಿಕ್ಕಿಲ್ಲ.

ಅಂದ ಹಾಗೆ ನಾನು ಇತ್ತೀಚಗೆ ಬ್ಲಾಗ್ ಬರೀಲಿಕ್ಕೆ ಶುರು ಮಾಡಿದ್ದೇನೆ. ನಿಮ್ಮ ಅತ್ಯಮೂಲ್ಯ ಅನಿಸಿಕೆ ವ್ಯಕ್ತಪಡಿಸಬೇಕಾಗಿ ವಿನಂತಿ.

http://kiranjayanth.blogspot.com

ಧನ್ಯವಾದಗಳು.
ಕಿರಣ್

Shiv said...

ಶಾಂತಲಾ ಅವರೇ,
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು !

ಕೋಮಲಾ,
ಪಾತರಗಿತ್ತಿಗೆ ಭೇಟಿ ನೀಡಿದ್ದಕ್ಕೆ ಮತ್ತು ಕಾಮೆಂಟಿಸಿದ್ದಕ್ಕೆ ವಂದನೆಗಳು

ಕಿರಣ್,
ಪಾತರಗಿತ್ತಿಗೆ ಸ್ವಾಗತ !
ಕವನವನ್ನು ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು
ನಿಮ್ಮ ಮೇಲ್ ನೋಡಿರಲಿಲ್ಲ..ಕ್ಷಮೆ ಇರಲಿ
ನಿಮ್ಮ ಬ್ಲ್ಲಾಗ್‍ಗೆ ಖಂಡಿತ ಭೇಟಿ ನೀಡುತ್ತೇನೆ

Srikanth said...

ಈ ಕವನ ಸಿಕ್ಕಾಪಟ್ಟೆ ಚೆನಾಗಿದೆ ಶಿವು... ಬರೀತಾ ಇರಿ :)

Sushrutha Dodderi said...

ಪ್ರಿಯ ಶಿವ್,

ನಮಸ್ಕಾರ. ಹೇಗಿದ್ದೀರಿ?

ನಿಮ್ಗೂ ಗೊತ್ತಿರೋ ಹಾಗೆ, ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಸುಶ್ರುತ ದೊಡ್ಡೇರಿ

ಅಮರ said...

ನೆನ್ನೆಗಳಲಿ ನಲುಗಿದ ಬದುಕು ನೆಮ್ಮದಿಯ ನಾಳೆಗಳ ಕನಸ ಹೊತ್ತು ಸಾಗುತ್ತದೆ, ಆ ನಂಬಿಕೆಯೆ ಇರಬೇಕು ನಮ್ಮಿಂದ ಎಲ್ಲವನ್ನ ಮಾಡಿಸೋದು..... ಕವನದ ಹರಿವು ಚಂದಕ್ಕೆ ಮೂಡಿ ಬಂದಿದೆ.

ಒಲವಿನಿಂದ
-ಅಮರ

ಪೂರ್ಣ ವಿ-ರಾಮ said...

ಆ ನೀಲಿ ಆಗಸದಲ್ಲೊಂದು ಸುತ್ತುಹಾಕಿ ಬಂದ ಹಾಗಾಯಿತು.


ಕವಿತೆಯಲ್ಲಿ ಅಂಥದ್ದೊಂದು ತಾಕತ್ತಿದೆ.



ಬರೀತಿರಿ..........


ಧನ್ಯವಾದ

ಕಿರಣ್ ಜಯಂತ್ said...

Hello Shiv,

Elli thaavu pattene illa Feb 21st inda..I keep checking if there are any new posts. Kelasada ottaDave? Samayada abhaavave? Nimma abhimaanigaLige niraase maaDade tingaLige ondaadaru lekhana prakaTisi.

- inti
Kiran

Shiv said...

ಶ್ರೀಕಾಂತ್,
ಧನ್ಯವಾದಗಳು !

ಅಮರ,
ಪಾತರಗಿತ್ತಿಗೆ ಭೇಟಿ ನೀಡಿದ್ದಕ್ಕೆ ವಂದನೆಗಳು
ಮೆಚ್ಚುಗೆಗೆ ಆಭಾರಿ

ಪೂರ್ಣ ವಿ-ರಾಮ,
ಪಾತರಗಿತ್ತಿಗೆ ಸ್ವಾಗತ

ಕಿರಣ್,
ಕ್ಷಮೆಯಿರಲಿ..
ಕೆಲಸದ ಒತ್ತಡ ಬರೀಲಿಕ್ಕೆ ಆಗಲಿಲ್ಲ
ನಿಮ್ಮ ಆಭಿಮಾನಕ್ಕೆ ವಂದನೆಗಳು