Sunday, February 08, 2009

ಜಯ್ ಹೋ...

ಆಸ್ಕರ್‌ನವರು ಇದಕ್ಕೆ ಒಂದು ಪ್ರಶಸ್ತಿ ಕೊಟ್ಟು, ಡ್ಯಾನಿ ಬಾಯಿಲ್ ಪ್ರಶಸ್ತಿ ಸ್ವೀಕರಿಸಿ ’ಈ ಪ್ರಶಸ್ತಿ ಜಮಾಲ್‍ನಂತಹ ಎಲ್ಲಾ ಮುಂಬೈ ಸ್ಲಂ ಹುಡುಗರಿಗೆ’ ಅಂತಾ ಹೇಳಿ, ಆಮೇಲೆ ಅದರ ಬಗ್ಗೆ ಮತ್ತೆ ಚರ್ಚೆಯಾಗಿ, ಸಾಕಪ್ಪ ಇದರ ಬಗ್ಗೆ ಓದಿದ್ದು ಅನ್ನುವರೆಗೆ ಬಹುಷಃ ಇದು ನಡೀತಾ ಇರುತ್ತೆ.

ಇಲ್ಲಿ ನಮ್ಮ ಗೆಳೆಯರ ಬಾಯಿಯಲ್ಲಿ ಮೊದಲು ಕೇಳಿದಾಗ , ಮತ್ತೆ ಇದು ಯಾವುದೋ ’ರಿಯಲ್’ ಭಾರತವನ್ನು ತೋರಿಸುವ ಮತ್ತೊಂದು ಚಿತ್ರವಿರಬಹುದೇ ಅನಿಸಿತು. ಅಷ್ಟರಲ್ಲಿ ಶುರುವಾಯ್ತು ನೋಡಿ ಇಲ್ಲಿ ಪ್ರಶಸ್ತಿಗಳ ಸುಗ್ಗಿ, ಮೊದಲಿಗೆ ಹಾಲಿವುಡ್ ವಿಮರ್ಶಕರು ನೀಡುವ ಪ್ರಶಸ್ತಿಗಳಲ್ಲಿ ಮಿಂಚುವಿಕೆ, ನಂತರ ಆಕ್ಟರ್ ಗಿಲ್ಡ್ ನಲ್ಲಿ ಮುಂದುವರಿಯಿತು ಹಬ್ಬ. ಅಷ್ಟರಲ್ಲಿ ಎಲ್ಲಡೆ ಅದರ ಮಾತು.

ಅದೊಂದು ದಿವಸ ಕೆಲಸದಿಂದ ಬಂದಾಗ ನನ್ನಾಕೆ ಗರಮ್ ಆಗಿದ್ದಳು . ಆಗಿದ್ದೇನೆಂದರೆ ಅಲ್ಲಿ ಇವಳ ಜೊತೆ ಕೆಲಸ ಮಾಡುವ ಪ್ರೆಡ್ ಅನ್ನೋ ಅಮೇರಿಕನ್‍ನೊಬ್ಬ ’ಸ್ಲಂ ಡಾಗ್ ಅದ್ಬುತ ಸಿನಿಮಾ, ನಿಜವಾದ ಭಾರತ ಏನು ಅಂತಾ ಅದರಲ್ಲಿ ತೋರಿಸಿದ್ದಾರೆ. ಭಾರತದಲ್ಲಿ ಜನ ಇನ್ನೂ ಪಾಪ ಹಾಗೇ ಇದ್ದಾರೆ’, ಭಾರತ ಅಂದರೆ ಒಂದು ಸ್ಲಂ ಅನ್ನುವ ಹಾಗೇ ಹೇಳಿದ್ದ.

ಒಬ್ಬ ಪ್ರೆಡ್ ಗೆ ಆದಂತೆ ಈ ’ರಿಯಲ್’ ಭಾರತದ ದರ್ಶನ ಪ್ರಪಂಚದ ಬೇರೆಡೆ ಇನ್ನೂ ಅದೆಷ್ಟು ಜನರಿಗೆ ಆಗಿರಬಹುದು. ಅದೆಷ್ಟು ಜನ ಈ ’ಸ್ಲಂ ಡಾಗ್’ ಅನ್ನೋ ಮಹಾನ್ ಬೋಧಿ ವೃಕ್ಷದ ಕೆಳಗೆ ಕುಳಿತು , ೨ ತಾಸಿನ ನಂತರ ಬುದ್ಧನ ತರ ಫೋಸ್ ನೀಡುತ್ತಾ ’ಭಾರತ ಅಂದರೆ ಇಷ್ಟೇ ರೀ, ಅವರು ಐಟಿ-ಬಿಟಿ-ಚಂದ್ರ ಅಂತಾ ನಮ್ಮ ಕಣ್ಣಿಗೆ ಚಮಕ್ ತೋರಿಸ್ತಾ ಇದ್ದರು, ನೋಡಿದರೆ ಅವರು ಎಲ್ಲಿ ಶುರುಮಾಡಿದ್ದರೋ ಇನ್ನು ಅಲ್ಲೇ ಇದಾರೆ’ ಅಂತ ಮಾತಾಡಿಕೊಂಡರೇನೊ.

ಬೇರೆಯವರು ಬೇಡ, ನಮ್ಮದೇ ಬಾಲಿವುಡ್‍ನ ಪ್ರೀತಿ ಜಿಂಟಾ, ’ನಮ್ಮ ಮುಂಬೈನಲ್ಲಿ ಇಷ್ಟು ಕೊಳಚೆ-ಸ್ಲಂ ಇದೆ ಅಂತಾ ಈ ಸಿನಿಮಾ ನೋಡಿದ ಮೇಲೆ ನನಗೆ ತಿಳಿಯಿತು’ ಅಂದರೆ..

ಈ ಚಿತ್ರದ ಬಗ್ಗೆ ಪೂರ್ವಾಗ್ರಹ ಪೀಡಿತ ಅಭಿಪ್ರಾಯಗಳೇನು ಇರಲಿಲ್ಲ. ನಿಜ ಹೇಳಬೇಕೆಂದರೆ ಚಿತ್ರ ವೀಕ್ಷಿಸುವಾಗ ಪಕ್ಕಾ ಮನೋರಂಜನಾತ್ಮಕ ಅನಿಸಿತ್ತು. ಚಿತ್ರದ ನಿರೂಪಣೆ ಮತ್ತೆ ಛಾಯಾಗ್ರಹಣ ಹಿಡಿದಿಟ್ಟಿದ್ದು ನಿಜ. ಆಶಾದಾಯಕವಾದ ಅಂತ್ಯವಾದ್ದರಿಂದ ಒಂದು ತರಹ ಫೀಲ್ ಗುಡ್.

ಅದು ನೋಡಿ ಸ್ಪಲ್ಪ ದಿವಸಕ್ಕೆ ಇಲ್ಲಿ ಓಬಾಮನ ಅಧಿಕಾರ ಸ್ವೀಕಾರ ನಡೆದಿದ್ದು ಆಯ್ತು. ನಿಜಕ್ಕೂ ಪ್ರತಿಭೆಯುಳ್ಳ ’ಅಂಡರ್ ಡಾಗ್’ನನ್ನು ಜನ ಹೇಗೆ ಕೈ ಹಿಡಿದು ಮೇಲೆ ಎತ್ತುತ್ತಾರೆಂದು ಅನಿಸಿತು. ಹಾಗೆ ಕೆಳವರ್ಗದ, ತುಳಿತಕ್ಕೆ ಒಳಗಾದವರಿಂದ ಒಬ್ಬ ಮೇಲೆ ಬಂದರೆ ಆ ಕತೆಯನ್ನು ಜನ-ಮಾಧ್ಯಮ ಹೇಗೆ ಇಷ್ಟಪಡುತ್ತಾರೆಂದು ಗೊತ್ತಾಗಿದ್ದು ಆವಾಗಲೇ. ಬಹುಷಃ ಅದೇ ಕಾರಣಕ್ಕೇ ಜಮಾಲ್‍ನ ಕತೆ ನಮಗೂ ಇಷ್ಟವಾಗಿರಬಹುದು ಅನಿಸಿತ್ತು.

ಆದರೆ ಇನ್ನೂ ಸೂಕ್ಷ್ಮವಾಗಿ ನೋಡಿದಾಗ, ಕತೆಯಲ್ಲಿ ಎಷ್ಟೊಂದು ಕಂದಕಗಳಿದ್ದವು.

’ಅಂಡರ್ ಡಾಗ್’ ವಿಷಯದಲ್ಲಿ ಭಾರತೀಯರು ತೋರಿಸುವ ಮೆಚ್ಚುಗೆ-ಕುತೂಹಲ ಗೊತ್ತಿದ್ದದ್ದೆ. ಅಲ್ಲಿ ಒಬ್ಬ ’ಗೋವಿಂದ್ ಜಸ್ವಾಲ್’ ಐಎ‍ಎಸ್ ಪರೀಕ್ಷೆಯಲ್ಲಿ ರಾಂಕ್ ಬಂದಾಗ, ಆತ ಬಡ ಕಾರ್ಮಿಕನ ಮಗನೆಂದು-ಎಷ್ಟು ಶ್ರಮಪಟ್ಟಿದ್ದನೆಂದು , ಮಾಧ್ಯಮದವರು ಅದರ ಬಗ್ಗೆ ಪ್ರಶಂಸಿ ಬರೆದಿದ್ದು ನೆನಪಿರಬಹುದು. ಅದೇ ರೀತಿ ಅದನ್ನು ಕೇಳಿದ-ಓದಿದ ನಾವೆಲ್ಲಾ ಮೆಚ್ಚುಗೆ ಸೂಚಿಸಿದ್ದೆವು. ತುಂಬಾ ಕಷ್ಟ ಪಟ್ಟು ಮೇಲೆ ಬಂದವರ ಬಗ್ಗೆ ನಮ್ಮ ಮೆಚ್ಚುಗೆ ಇದ್ದೇ ಇರುತಿತ್ತು.
ಹೀಗಿರುವಾಗ ಜಮಾಲ್‍ನನ್ನು ’ಚಾಯ್‍ವಾಲ’ ಅಂತಾ ಗೇಮ್ ಶೋ ದಲ್ಲಿ ಹಾಸ್ಯ ಮಾಡಿದ್ದು, ಅವನನ್ನು ಪೋಲಿಸ್‍ಗೆ ಒಪ್ಪಿಸಿದ್ದು...ಭಾರತದಲ್ಲಿ ಎಲ್ಲಿ ಮಾಡ್ತಾರೆ?

ಹಾಗೇ ಇನ್ನೊಂದೆಡೆ ಇರುವ ’ರಿಯಲ್ ಅಮೇರಿಕನ್’ ಸನ್ನಿವೇಶ. ಇದು ನನಗೆ ತುಂಬಾ ನಗು ತರಿಸಿದ ವಿಷಯ. ಈ ಚಿತ್ರವಿರೋದು ಭಾರತದ ಬಗ್ಗೆ, ಚಿತ್ರ ಮಾಡುತ್ತಾ ಇರೋದು ಒಬ್ಬ ಬ್ರಿಟಿಷ್, ಅದರ ಅಲ್ಲಿ ನೂರು ಡಾಲರ್ ಕೊಡಿಸಿ ’ರಿಯಲ್ ಅಮೇರಿಕ’ ತೋರಿಸುವ ಅವಶ್ಯಕತೆ ಎಲ್ಲಿತ್ತು? ಬಹುಷಃ ಅಸ್ಕರ್ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿನ ಅಮೇರಿಕನ್‌ರನ್ನು ಪಟಾಯಿಸಲಿಕ್ಕೆ ಇರಬಹುದೇ ಈ ಡೈಲಾಗು !

ಮತ್ತೊಂದು ಅತೀ ಅನಿಸುವಷ್ಟು ಇದ್ದ ಆ ಅಮಿತಾಭ್ ಆಟೋಗ್ರಾಫ್ ಸನ್ನಿವೇಶ. ನಿಜ, ಅಲ್ಲಿ ಹಾಗೇ ಇರಬಹುದು. ಆದರೆ ಅದನ್ನು ವೈಭವೀಕರಿಸಿ ಅಷ್ಟು ತೋರಿಸುವ ಅವಶ್ಯಕತೆ ಇತ್ತೇ?

ಅವಶ್ಯಕತೆ ಇತ್ತು..ಇಲ್ಲದಿದ್ದರೆ ನಮ್ಮ-ನಿಮ್ಮಂತಹವರು ಇದರ ಬಗ್ಗೆ ಮಾತಾಡುತ್ತಿದ್ದವೆ? ಗೊತ್ತಿಲ್ಲದ ಹಾಗೆ ಪುಗಸಟ್ಟೆ ಪಬ್ಲಿಸಿಟಿ ನೀಡುತ್ತಿದ್ದವೆ? ಆಸ್ಕರ್ ಅನ್ನೋ ಆ ಮಹಾನ್ ಶಂಖದಿಂದ ಬರುವ ತೀರ್ಥದ ಹತ್ತಿರ ಇದಕ್ಕೆ ಹೋಗಲಿಕ್ಕೆ ಆಗುತಿತ್ತೆ?

ಇದೇನೂ ಸಾಮಾಜಿಕ ಕಾಳಜಿ ಇಟ್ಟುಕೊಂಡು ಮಾಡಿದ ಚಿತ್ರವಲ್ಲ.’ಪಥೇರ್ ಪಂಚಲಿ’ಯ ಹಾಗೆ ಬಡತನದ ಬಗ್ಗೆ ಮರುಗುವಂತೆ ಮಾಡುವುದಿಲ್ಲ, ಹಾಗೇ ಸ್ಲಂ‍ನ ಕ್ರೂರತೆ-ಆಪರಾಧದ ತೆರೆದಿಡುವ ’ಸಿಟಿ ಆಫ್ ಗಾಡ್’ ಕೂಡ ಅಲ್ಲ. ಇದು ಕೇವಲ ಮನೋರಂಜನಾತ್ಮಕ ಚಿತ್ರ !

ಆದರೆ ಜಿಗುಪ್ಸೆ ತರಿಸಿದ್ದು ಪಾಶ್ಚಾತ್ಯರ ನಿಲುವುಗಳು. ಯಾವುದೋ ಒಂದು ೨ ಗಂಟೆ ಸಿನಿಮಾ ನೋಡಿ, ಭಾರತವನ್ನು ಆಳೆಯುವುದು. ಏನೇ ಮಾಡಿದರೂ ಇವರಿನ್ನು ಅಲ್ಲಿಂದ ಮುಂದೆ ಬೆಳೆದೇ ಇಲ್ಲಾ ಅನ್ನುವ ಅದೇ ಗತಕಾಲದ ಗತ್ತಿನ ನಡವಳಿಕೆ.

ಹಾಗಂತ ಭಾರತದಲ್ಲಿ ಅಲ್ಲಿ ತೋರಿಸಿದ್ದು ಯಾವುದು ಇಲ್ಲವೇ ಇಲ್ಲಾ ಅಂತಲ್ಲ. ಅದೇ ರೀತಿ ಕರಣ್ ಜೋಹರ್-ಸೂರಜ್ ಭಾರತ್ಯಾಜ ಚಿತ್ರಗಳಲ್ಲಿದ್ದಂತೆ ಜನ ಚಮಕ್ ಶೆರ್ವಾನಿ-ಗಾಗ್ರ-ಚೋಲಿಗಳಲ್ಲಿ ಯಾವಾಗಲೂ ಮಿಂಚುತ್ತಾ ಇರುತ್ತಾರೆಂಬುದು ಸುಳ್ಳು.

ಭಾರತ ಇವೆರಡು ಅಲ್ಲಾ. ಅದು ಇವುಗಳ ಮಧ್ಯೆದಲ್ಲೆಲೋ ಇದೆ.

ನೂರು ಕೋಟಿ ಜನಸಂಖ್ಯೆಯಿಟ್ಟುಕೊಂಡೂ, ಭಾಷೆ-ಜಾತಿ-ಪ್ರಾಂತ್ಯ ಅಂತೆಲ್ಲಾ ಭಿನ್ನಾಭಿಪ್ರಾಯಗಳಿದ್ದೂ, ನಾವು ಮುನ್ನಡೆಯುತ್ತಿದ್ದೇವೆ. ಹೌದು, ಈಗಲೂ ನಮ್ಮಲ್ಲಿ ಸ್ಮಂ ಗಳಿವೆ, ಜನ ಮೂಲಭೂತ ಸೌಕರ್ಯಗಳಿಗೆ ಪರದಾಡುತ್ತಿದ್ದಾರೆ. ಆದರೂ ನಾವು ಕನಸು ಕಾಣುವುದು ನಿಲ್ಲಿಸಿಲ್ಲ. ಅದು ನಿಜವಾದ ಭಾರತ.

ಹೊಸ ಗಾದೆ: ಸಿನಿಮಾಗೆ ಆಸ್ಕರ್ ಬೇಕು ಅಂತಾ ಕೇಳಿದರೆ, ಅದರಲ್ಲಿ ಭಾರತದ ಸ್ಲಂ ಇದೆಯಾ ಅಂದರಂತೆ !

ಜಯ್ ಹೋ !

8 comments:

sunaath said...

ಶಿವು,
ಇಷ್ಟು ದಿನಾ ಎಲ್ಲಿ ಹೋಗಿದ್ರಿ? ಹನಿಮೂನ್‌ನಲ್ಲೇ ಇದ್ರಾ?
ಅಂತೂ ನೀವು ಹೊರ ಬರಲು slumdogಏ ಬೇಕಾಯ್ತಾ?

ಈ ಚಿತ್ರ ಹ್ಯಾಗಿದೆ ಅಂದ್ರೆ ಒಳಗೆ ಹೊಲಸು ತುಂಬಿ ಮೇಲೆ ಬ್ಯಾಗಡಿಯ package ಮಾಡಿದ ಥರಾ!

Keshav.Kulkarni said...

ಶಿವಶಂಕರ್,
ನಿಮ್ಮ ಬರಹಕ್ಕೆ ನನ್ನ ಬರಹಗಳು (ಕೆಂಡಸಂಪಿಗೆ) ಪೂರಕವಾಗಬಹುದು, ಓದಿ:

http://kendasampige.com/article.php?id=2015


http://kendasampige.com/article.php?id=1964

- ಕೇಶವ (www.kannada-nudi.blogspot.com)

Sree said...

nice to see you back in action!:) slum dog bagge nannadU exactly idE abhipraaya! - 'chaaywala' anta haasya maaDo scene, amitabh autograph scene...naanu andkonDiddannE neev bardirOdu Odi aashcharya aaytu, haagE idara bagge bariyOdaa bEDvaa annO dilemma kooda solve aaytu!:))

ಸುಪ್ತದೀಪ್ತಿ suptadeepti said...

ನಿಮ್ಮ ಹೊಸ ಗಾದೆ ತುಂಬಾ ಇಷ್ಟ ಆಯ್ತು... ಲೇಖನಕ್ಕೆ ಕಿರೀಟ ಅದು.

ಒಟ್ಟಾರೆ ಸಿನಿಮಾನೋಡಲು ಚೆನ್ನಾಗಿದೆ. ಬೋರ್ ಹೊಡೆಸದೆ ನೋಡಿಸಿಕೊಳ್ಳತ್ತೆ. ಕೊನೆ ಚೆನ್ನಾಗಿದೆ, ಹಿತವಾಗಿದೆ. ಆಸ್ಕರ್ ಪಡೆಯಲು ಇಷ್ಟೇ ಸಾಕಾ ಅಂತ ಕೇಳಿಕೊಳ್ಳಬೇಕಾಗಿದೆ.

Shiv said...

ಸುನಾಥ್,
ಇಲ್ಲಾ ಸಾರ್ ! ಆಗೇನೂ ಇಲ್ಲಾ :)
ಕೆಲಸದ ಒತ್ತಡ ಜಾಸ್ತಿ

ಕೇಶವ್,
ಪಾತರಗಿತ್ತಿಗೆ ಭೇಟಿ ನೀಡಿದ್ದಕ್ಕೆ ವಂದನೆಗಳು

ಶ್ರೀ,
ನೀವು ಸಹ ಬ್ಲಾಗಿಂಗ್‍ನಲ್ಲಿ ಸಕ್ರಿಯಾವಾಗಿಲ್ಲವಲ್ಲಾ..
ನೀವು ಅದೇ ವಿಷಯಗಳ ಬಗ್ಗೆ ಬರೆಯಬೇಕೆಂದು ಇದ್ದೀರಾ...ಅಶ್ಚರ್ಯ :)


ಸುಪ್ತದೀಪ್ತಿ,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.
ಆಸ್ಕರ್ ಮಂಡಳಿ ಸಹ ಹಾಗೇ ಮರಳುಗಾತ್ತೋ ನೋಡೋಣಾ..

Anonymous said...

ನಿಮ್ಮ ಬ್ಲಾಗಲ್ಲೊಂದು ಹಲ ಕೊರತೆಗಳು ಕಂಡವು ಮತ್ತು ಏಕಪಕ್ಷೀಯ ನೋಟವೆನಿಸಿತು.

ಸಿನಿಮ ಆಗಲೀ, ನಾಟಕವಾಗಲೀ, ಕಾವ್ಯ,ಕವನ, ಕತೆ ಅಷ್ಟೇ ಯಾಕೆ ನಿಮ್ಮ ಬ್ಲಾಗೂ ಕೂಡ ಒಂದು ಬಗೆಯ ಉತ್ಪ್ರೇಕ್ಷೆಗಳೇಮ ಕಲ್ಪನೆಗಳೇ. ಅವೆಲ್ಲ ’ದಿಟ’ವನ್ನು, ’ಸತ್ಯ’ವನ್ನು ಹೇಳುವ ನ್ಯೂಸ್ ಪೇಪರ್‍ಗಳೆ ಇಲ್ಲವೇ ಡಾಕ್ಯುಮೆಂಟರಿಗಳೇ?! :).

ನನಗಂತೂ ಆ ಸಿನಿಮ ತುಂಬಾ ಹಿಡಿಸಿತು. ನನ್ನ ಅಚ್ಚುಮೆಚ್ಚಿನ ಸಿನಿಮಗಳಲ್ಲೊಂದಾಯಿತು. ನನ್ನ ಹಾಗೇ ನನ್ನ ಗೆಳೆಯರಿಗೂ ಕೂಡ..... ನಾವೇಲ್ಲ ಇಂಡಿಯದೇಶ ಅಲ್ಪಸಂಖ್ಯಾತರು, ಪಾಶ್ಟಿಮಾತ್ಯ ಸಂಸ್ಕೃತಿಯ ವ್ಯಾಮೋಹಿಗಳು ಎಂದು ಮಂದಿ ಅನ್ನಬಹುದು. ಈ ಅನ್ನುವುದು ಎಷ್ಟೇ ಆದರೂ ’ಭಾರತ’ದ ಸಂಪ್ರದಾಯವಲ್ಲವೇ.
ನಾವು ಇಂಡಿಯದೋರೂ ಕೂಡ, ಪಾಶ್ಚಿಮಾತ್ಯರ ಮೇಲೆ ಅವರ ಹಾಲಿವುಡ್ನ ಸಿನಿಮಗಳಲ್ಲಿರುವ Action ಮತ್ತು sexಅನ್ನು ಕಂಡು ಎಷ್ಟೆಲ್ಲ ಪೂರ್ವಾಗ್ರಹ ಇಟ್ಟುಕೊಂಡಿಲ್ಲ? ಅದು ಬೇರೆ ವಿಷಯ ಅಂತೀರ.. ಇರಲಿ ಬಿಡಿ....

ಮನರಂಜಿಸಲು ಆ ಸಿನಿಮ ದಿಟವಾಗಲೂ ಯಶಸ್ವಿಯಾಗಿದೆ. ಒಳ್ಳೇ ಸಂಗೀತ, ಪೋಟೋಗ್ರಪಿ, ಕತೆಯ ಹೆಣಿತ( ಸುಳ್ಳು-ದಿಟದ ಪ್ರಶ್ನೆ ನಾಟಕ,ಸಿನಿಮದಲ್ಲಿ ಬರುವುದೇ ಇಲ್ಲ). ಅದೇ ತಾನೆ ಸಿನಿಮ ಒಂದ ಮುಖ್ಯ ಉದ್ದೇಶ. ಹಾಗಾಗಿ ಅದು ಗೆದ್ದಿದೆ. ಆಸ್ಕರ್‍ಗೂ ಅರ್ಹವಾಗಿದೆ... ಬರಲೆಂದು ಹರಸೋಣ.

ಇಲ್ಲಿ ನನಗಿನ್ನೂ ಅರ್ಥವಾಗದ ವಿಷಯ, ಪಬ್ ದಾಳಿ ಮಾಡಿ ಜಗತ್ತಿಗೆ ಶ್ರೀರಾಮಸೇನೆ ಭಾರತದ ಮೇಲೆ ಕಟ್ಟಿಕೊಟ್ಟ ಅಭಿಪ್ರಾಯ, ವ್ಯಾಲೆಂಟೈನ್ ಡೇ ತಡೆಯಲು ಸಿಕ್ಕಸಿಕ್ಕ ಕಡೆ ನೆರೆಯದ ಹುಡುಗ-ಹುಡುಗಿಯರಿಗೆ ಮದುವೆ ಮಾಡಿಸಿದ, ಹೆಣ್ಣುಗಳನ್ನು ಜಡೆ ಹಿಡಿದು ಹೊಡೆದ ವಿಡಿಯೋಗಳು ಸುದ್ದಿ ಮಾಧ್ಯಮಗಳಿಂದ ಜಗತ್ತು ನೋಡಿ, ಭಾರತದ ಮೇಲೆ ಮಾಡಿಕೊಂಡ ಅಭಿಪ್ರಾಯ, ಈ ಒಂದು ’ಸಿನಿಮ’ ನೋಡಿ ಕಟ್ಟಿಕೊಂಡ ಕಲ್ಪನೆಗಿಂತ ಹೇಯವೆಂಬುದು ದಿಟವೇ? ಗಮನಿಸಿರಿ ಆ ಪಬ್ ದಾಳಿ, ವ್ಯಾಲೆಂಟೈನ್ಸ್ ಡೇ ಸ್ಲಂ ಅಲ್ಲಿ ನಡೆದೇ ಇಲ್ಲ. ಅವೆಲ್ಲ ಶ್ರೀಮಂತ ವರ್ಗದ ಭಾರತದ ದೃಶ್ಯಗಳು.

ಯಾಕೆ ಒಂದು ಸಿನಿಮದ ಹಿಂದೆ ಹೀಗೆ ಮಂದಿ ಬಿದ್ದಿದ್ದಾರೆ? ನಾನಂತು ಮೆಚ್ಚುಗೆಯ ಬರಹ ಬರೆದುಕೊಂಡೆ. ತನಗೆ ಇಷ್ಟವಿಲ್ಲ ಅಂದ ಮೇಲೇ ಅದಕ್ಕೆ ಪ್ರಚಾರ ಕೊಡುವುದು ಬುದ್ಧಿವಂತಿಕೆಯೇ? ಓ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್‍ಯದ ಮಾತು. ಅದೂ ಆ ಸಿನಿಮ ಮಾಡಿದೋನಿಗೂ ಇದೆ ಅಲ್ವೇ!

ನಲ್ಮೆಯ ನನ್ನಿ
ಮಹೇಶ.

Shiv said...

ಮಹೇಶ್,

ಸಿನಿಮಾ ಮನೋರಂಜತ್ಮಾಕವಾಗಿದೆ..ಒಪ್ಪುತ್ತೇನೆ.
ಬೇರೆ ವಿಷಯಗಳ ಬಗ್ಗೆ ಅಭಿಪ್ರಾಯಗಳು ಭಿನ್ನವಾಗಿವೆ.
ನಿಮ್ಮ ಅಭಿಪ್ರಾಯಗಳಿಗೆ ವಂದನೆಗಳು

Anonymous said...

nimma hosa gaadhe ishta aaytu,
aadre keloryaaru.. illi noDi nanna kathe! saadyavaadre banni.