Thursday, February 09, 2017

ಗೋಲಕದಿಂದ ...


ಮಗಳು ಬೆಳಗ್ಗೆಯೇ ಗೋಲಕ ಮುಂದಿಟ್ಟುಕೊಂಡು ಕುಳಿತು ಕೊಂಡಿದ್ದಳು...

ಅದರಲ್ಲಿ ಅವಳು ಬಹು ದಿನಗಳಿಂದ ಕೂಡಿಟ್ಟಿದ್ದ ನಾಣ್ಯ-ನೋಟುಗಳು.  ಮಗಳಿಗೆ ಆ ದುಡ್ಡಿನಿಂದ ತನ್ನ ಇಷ್ಟದ ಯಾವುದೋ ಒಂದು ಗೊಂಬೆ ಕೊಂಡುಕೊಳ್ಳುವ ಮಹತ್ ಯೋಜನೆ. ಅದರ ಬಗ್ಗೆ ಬಹಳ ಸಲ ಹೇಳಿದ್ದೇ ಹೇಳಿದ್ದು. ಗೋಲಕದಲ್ಲಿದ್ದ ಆ ಹಣದ ಬಗ್ಗೆ ಸ್ವಲ್ಪ ಜಾಸ್ತಿ ಪ್ರೀತಿ !

ಇಂತಪ್ಪ ಗೋಲಕದಿಂದ ಬೆಳ್ಳಂಬೆಳ್ಳಿಗ್ಗೆಯೇ ದುಡ್ಡು ಹೊರಬಂದಿತ್ತು. ಮಗಳು ನೋಟುಗಳನ್ನು ಮತ್ತು ನಾಣ್ಯಗಳನ್ನು ಗುಂಪೆ ಹಾಕಿಕೊಂಡು ಎಣಿಸುತ್ತಿದ್ದಳು.

ಮಗಳಿಗೆ ಕಾರಣ ಕೇಳಿದಾಗ ತಿಳಿದಿದ್ದು...
ಮಗು ನನ್ನ ಹುಟ್ಟುಹಬ್ಬಕ್ಕೆ ಗಿಫ್ಟ್ ತರಲಿಕ್ಕೆ , ತಾನು ಕೂಡಿಟ್ಟಿದ್ದ ಹಣ ಹೊರತೆಗೆಯುತಿತ್ತು.

ನನ್ನ ಮಗಳ ಪ್ರೀತಿಗೆ ಅದರ ನಿಷ್ಕಳಂಕ ರೀತಿಗೆ, ಕಣ್ಣ ಅಂಚಿನಲಿ ಹನಿ....



**********************

ನನ್ನ ಕಾಲೇಜಿನ ಕೊನೆಯ ಸೆಮಿಸ್ಟರ್ ಹೊತ್ತಿಗೆ ಮನೆಯಲ್ಲಿ ಸ್ವಲ್ಪ ಕಷ್ಟದ ಸಮಯ.

ನನ್ನ ಅಮ್ಮ ಗೋಲಕ ಒಡೆದು, ತಾನು ಕೂಡಿಟ್ಟಿದ್ದ ಹಣ ತೆಗೆದು ನನ್ನ ಕೈಗಿಟ್ಟಿದ್ದಳು.
ಆ ಕಷ್ಟದ ಕಾಲದಲ್ಲಿ ಆ ದುಡ್ಡು ಮತ್ತು ಆ ಸಾಂತ್ವನದ ಮಾತುಗಳು ನೀಡಿದ್ದವು ಧೈರ್ಯ..

*******************

ಧೈರ್ಯಕ್ಕೆ ಇನ್ನೊಂದು ಹೆಸರು ಬಹುಷಃ ಇವಳಿರಬಹುದು !

ಕಾಲೇಜಿನ ತನ್ನ ಓದು, ಮನೆಯ ಕೆಲಸ, ಮಗಳ ಕಾಳಜಿ ..
ಇವೆಲ್ಲವುಗಳನ್ನು ಅದು ಎಷ್ಟು ಸಮವಾಗಿ ತೂಗಿಸಿಕೊಂಡು ಹೋಗುತ್ತಿದ್ದಾಳೆ .

ಇಡೀ ದಿನ ಆಫೀಸಿನ ಕೆಲಸ ಮುಗಿಸಿಕೊಂಡು ಬಂದು, ಮತ್ತೆ ಅಡುಗೆಮನೆಯಲ್ಲಿ ಒಂದು ಗಂಟೆ ನಿಂತು ಏನೋ ಮಾಡುತ್ತಿದ್ದಳು.
ಆ ಶ್ರಮದ ಫಲ ನನ್ನ ನೆಚ್ಚಿನ ಹಾಲಿನ ಕೋವಾ !

ಜಿ.ಎಸ್.ಎಸ್ ಹೇಳಿದ್ದಂತೆ

ಮನೆಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ

*******************

ಆಫೀಸಿನಿಂದ ಮನೆಗೆ ಬಂದರೆ ಮನೆಯಲ್ಲಿ ಚೆಂದದ ಅಲಂಕಾರ !

ಮಗಳು ಅಮ್ಮನೊಂದಿಗೆ ಹೋಗಿ ಪುಟ್ಬಾಲ್ ತರದ ಕೇಕ್ ತಂದಿಟ್ಟಿದ್ದಳು..

ಈ ಪ್ರೀತಿಯ ಧಾರೆ..

ಆ ಧಾರೆಗೆ ನಾನು ಅರ್ಹನೇ ?
ಬಹು ಧನ್ಯತೆ, ಚಿಕ್ಕ ಭಯ

*******************

ಮತ್ತೆ ಜಿ.ಎಸ್.ಎಸ್ ಪದಗಳ ನೆರವು ಪಡೆದು...

ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?

2 comments:

sunaath said...

ನಿಮ್ಮ ಹುಟ್ಟುಹಬ್ಬದ ಶುಭಾಶಯಗಳು. ಸ್ತ್ರೀಕುಲಕ್ಕೆ ಪ್ರಣಾಮಗಳು.

‘ತಾಯಿ ಕನಿಮನೆಯೇ ನೀ ಅಕ್ಕ ಅಕ್ಕರತೆಯೇ
ಬಾಯೆನ್ನ ತಂಗಿ ಬಾ ಮುದ್ದು ಬಂಗಾರವೇ
ನೀಯೆನ್ನ ಹೆಂಡತಿಯೊ ಮೈಗೊಂಡ ನನ್ನಿಯೋ
ಮಗಳೊ ನನ್ನೆದೆಯ ಮುಗುಳೋ?’
--ಬೇಂದ್ರೆ

Pataragitti (ಪಾತರಗಿತ್ತಿ) said...

ಸುನಾಥ್ ಕಾಕಾ,

ನಿಮ್ಮ ಆಶೀರ್ವಾದ ಇರಲಿ ಸದಾ !

ಎಂತಹ ಚೆಂದದ ಸಾಲುಗಳು.
ಬೇಂದ್ರೆಯವರ ಯಾವ ಕವನವಿದು ?