Friday, July 14, 2006

ನಯಾಗರದ ಜಲಸಿರಿ

ಭಾಫೆಲೋದ ಆ ಹೋಟೆಲ್ ನಲ್ಲಿ ದಿಂಬಿಗೆ ತಲೆ ಇಟ್ಟದೊಂದೆ ನೆನಪು. ಕಾಯ್ದು ಕುಳಿತಿದ್ದ ನಿದ್ರೆ ಅನ್ನುವ ಕಿನ್ನರಿ ತಡಮಾಡದೆ ನಮ್ಮನ್ನು ಅವಾರಿಸಿಕೊಂಡದ್ದಾಯಿತು. ಬೆಳಿಗ್ಗೆ ಆದಷ್ಟು ಬೇಗ ಎದ್ದು ನಯಾಗರಕ್ಕೆ ಹೊರಡುವ ಯೋಚನೆ ಯೋಚನೆಯಾಗಿಯೇ ಉಳಿಯಿತು.ನಾವೆಲ್ಲ ಎದ್ದು ಸಿದ್ದವಾದಾಗ ಬೆಳಿಗ್ಗೆ ೧೧ ಗಂಟೆ.

ನಿದ್ದೆಗೊಮ್ಮೆ ನಿತ್ಯಮರಣ ಎದ್ದ ಸಲ ನವೀನ ಜನನ...

ಒಂದು ಒಳ್ಳೆಯ ನಿದ್ದೆ ದಣಿದ ದೇಹವನ್ನು ಹೇಗೆ ಉಲ್ಲಾಸಿತಗೊಳಿಸುತ್ತೆ! ಆ ಒಂದು ಸುನಿದ್ದೆಯ ನಂತರ ನಮ್ಮ ಗೆಳೆಯರಲ್ಲಿ ಹೊಸ ಉತ್ಸಾಹ ಪುಟಿಯುತಿತ್ತು.ಭಾಫೆಲೋದಿಂದ ೫೦ ಮೈಲಿ ದೂರದಲ್ಲಿನ ನಯಾಗರದೆಡೆಗೆ ಶುರುವಾಯಿತು ನಮ್ಮ ಪಯಣ .ನಯಾಗರ ನಗರ ಮುಟ್ಟಿದಾಗ ೧ ಗಂಟೆ.ಕಾರ್ ಪಾರ್ಕಿಂಗ್ ಹುಡುಕೋದರಲ್ಲಿ ಇನ್ನೊಂದು ಅರ್ಧಗಂಟೆ.ಕೊನೆಗೆ ಯಾವುದೋ ಪೇಡ್ ಪಾರ್ಕಿಂಗ್ ಅಲ್ಲಿ ಕಾರ್ ನಿಲ್ಲಿಸಿ, ನಯಾಗರ ಇನ್‍ಪರ್ಮೇಷನ್ ಸೆಂಟರ್‍ಗೆ ಲಗ್ಗೆ ಹಾಕಿದೆವು.

ನಯಾಗರ ಸೊಬಗು ಸವಿಯಲು ಅಲ್ಲಿರುವ ಕೆಲವು ಜಲಪ್ರವಾಸಗಳನ್ನು ಮಾಡಬೇಕೆಂದು ನಮ್ಮ ಗೂಗಲ್ ಜ್ಞಾನ ಹೇಳುತಿತ್ತು.ಸೆಂಟರ್‍ನಲ್ಲಿ ನೀಡಿದ ಮಾಹಿತಿಯು ಅದನ್ನು ಪುಷ್ಟೀಕರಿಸುತಿತ್ತು.ಅಲ್ಲಿದ್ದ 'ಸಂಪೂರ್ಣ ನಯಾಗರ ದರ್ಶನ' ಪ್ರವಾಸಕ್ಕೆ ಟಿಕೇಟ್ ಕೊಂಡೆವು.ಅದರೆ ನಮ್ಮ ಪ್ರವಾಸ ಸಂಜೆ ೪:೩೦ಗೆ ಶುರುವಾಗಲಿತ್ತು.ಅಂದರೆ ಇನ್ನೂ ೨ ಗಂಟೆಗಳ ಸಮಯವಿತ್ತು.ನಮ್ಮ ಮೊದಲಿನ ಯೋಜನೆ ಪ್ರಕಾರ ನಾವು ನಯಾಗರದಿಂದ ೪-೫ ಗಂಟೆಗೆ ಮರಳಿ ಹೊರಡಬೇಕಿತ್ತು.ಈಗ ನೋಡಿದರೆ ನಮ್ಮ ಪ್ರವಾಸ ಆರಂಭವಾಗುವುದೇ ೪:೩೦ ಗೆ ! ಪ್ರವಾಸ ಅಂದರೆ ಇದೇ ಅಲ್ವಾ..ಎನೋ ಯೋಜನೆ ಹಾಕಿಕೊಂಡು ಹೋಗೋದು,ಅಲ್ಲಿ ಎನೋ ಆಗುತ್ತೆ, ನಂತರ ಯೋಜನೆಗಿಂತ ಭಿನ್ನವಾಗಿ ಇನ್ನೇನೋ ಆಗುತ್ತೆ.ಕೊನೆಗೆ ಹಂಗೆ ಆಗಿದ್ದೆ ಒಳ್ಳೆದಾಯಿತು ಅನಿಸುತ್ತೆ!

ತಾಳ ಹಾಕುತ್ತಿದ್ದ ಹೊಟ್ಟೆಯನ್ನು ತಣಿಸಲು ಹತ್ತಿರದಲ್ಲೇ ಇದ್ದ 'ಪಂಜಾಬಿ ಢಾಭಾ'ಕ್ಕೆ ನುಗ್ಗಿದೆವು. ಅಂದಾಗೆ ಭಾರತದ ಯಾವುದೋ ಪಟ್ಟಣದಲ್ಲಿದ್ದೆವೆನೋ ಅನ್ನುವ ಭಾವನೆ ಬರುವಷ್ಟು ದೇಸಿಗಳಿದ್ದರು ನಯಾಗರದಲ್ಲಿ .ಅದು ಯಾವುದೇ ಕೋನದಿಂದ ಢಾಭಾದ ತರ ಇದ್ದಿಲ್ಲವಾದರೂ ದೇಸಿ ಊಟ ಸವಿಯುವ ಉದ್ದೇಶದಿಂದ ಹೊಕ್ಕಿದ್ದಾಯಿತು.ಸರದಾರಜೀಯ ಹೋಟೆಲ್‍ನಲ್ಲಿ ಬುಫೆ ಊಟ ಮತ್ತು ಹರಟೆ ನಡೆಯಿತು.

ನಯಾಗರ ಪ್ರವಾಸ ಆರಂಭ ಮಾಡುವ ಮುನ್ನ ನಯಾಗರದ ಬಗ್ಗೆ ಸ್ಪಲ್ಪ ಮಾಹಿತಿ.ನಯಾಗರ ಇರುವುದು ಆಮೇರಿಕಾ ಮತ್ತು ಕೆನಡಾ ದೇಶಗಳ ಗಡಿಯಲ್ಲಿ. ಹತ್ತಿರದಲ್ಲೆ ಕಾಣುತಿತ್ತು ಗಡಿ ಚೆಕ್‍ಪೋಸ್ಟ್ .ನಯಾಗರವೆಂದರೆ ಕೇವಲ ಒಂದು ಜಲಪಾತವಲ್ಲ.ಅಲ್ಲಿರೋದು ೩ ಜಲಪಾತಗಳು - ಆಮೇರಿಕನ್ ಜಲಪಾತ,ಬ್ರೈಡಲ್ ವೇಲ್ ಜಲಪಾತ ಮತ್ತು ಕೆನಡಿಯನ್ ಜಲಪಾತ.

ನಮ್ಮ ನಯಾಗರ ದರ್ಶನದ ಮೊದಲನೆಯ ಭಾಗದಲ್ಲಿ 'Maid of the Mist' ಅನ್ನುವ ಪ್ರವಾಸಕ್ಕೆ ಕರೆದೊಯ್ಯದರು. ಹೋಗುತ್ತಿದ್ದಂತೆ ಎಲ್ಲ ಪ್ರವಾಸಿಗರಿಗೆ ನೀಲಿ ಬಣ್ಣದ ಜಾಕೇಟ್‍ಗಳನ್ನು ನೀಡಲಾಯಿತು.ಆ ಪ್ಲಾಸ್ಟಿಕ್ ಜಾಕೇಟ್‍ನಲ್ಲಿ ನಾವೆಲ್ಲ ಯಾವುದೋ ಗ್ರಹದಿಂದ ಇಳಿದವರ ತರ ಕಾಣುತ್ತಿದ್ದೆವು! ಅಂದಾಗೆ 'ಮೇಡ್ ಆಫ್ ದಿ ಮಿಸ್ಟ್' ಅನ್ನೋದು ನಯಾಗರ ಜಲಪಾತಕ್ಕೆ ಪ್ರವಾಸಿಗರನ್ನು ಕರೆದೊಯ್ಯುವ ದೋಣಿಯ ಹೆಸರು. ದೋಣಿ ಜಲಪಾತದೆಡೆಗೆ ಸಾಗುತ್ತಿದ್ದಂತೆ ಜಾಕೇಟ್‍ನ ಮಹಿಮೆ ಅರಿವಾಗತೊಡಗಿತು.

ಮೊದಲು ಸಿಕ್ಕಿದ್ದು ಅಮೇರಿಕನ್ ಜಲಪಾತ.

೧೦೬೦ ಅಡಿ ಅಗಲ ಮತ್ತು ೧೮೦ ಅಡಿ ಎತ್ತರದ ಆಗಾಧ ಜಲಪಾತ.ವೇಗವಾಗಿ ಬೀಸುತ್ತಿದ್ದ ಗಾಳಿ ಜಲಪಾತದ ನೀರ ಹನಿಗಳನ್ನು ತಂದು ನಮ್ಮ ಮೇಲೆ ಸಿಂಚನ ಮಾಡುತಿತ್ತು.ಜಾಕೇಟ್ ಇಲ್ಲದಿದ್ದರೆ ಎಲ್ಲರೂ ತೊಯ್ದು ತುಪ್ಪೆಯಾಗುತ್ತಿದ್ದೆವೋ ಎನೋ..

ಅಷ್ಟೊಂದು ನೀರು ಅಷ್ಟೊಂದು ಎತ್ತರದಿಂದ ದುಮ್ಮಿಕ್ಕಿತ್ತಿರುವದನ್ನು ನೋಡುವುದೇ ಚಂದ. ಆ ನೀರಿನ ಬಿಂದುಗಳು ಸೂರ್ಯ ಕಿರಣಗಳ ಜೊತೆ ಚೆಲ್ಲಾಟವಾಡಿ, ಜಲಪಾತದ ಮೇಲ್ಗಡೆ ಕಾಮನಬಿಲ್ಲು ಮೂಡಿತ್ತು.ಅತ್ಯಂತ ಸೊಬಗಿನ ದೃಶಾವಳಿಗಳಲ್ಲಿ ಒಂದು. ಅಮೇರಿಕನ್ ಜಲಪಾತದ ದೃಶ್ಯವೈಭವವನ್ನು ಇನ್ನೂ ಮೆಲುಕು ಹಾಕುತ್ತಿದ್ದಂತೆ ಹತ್ತಿರದಲ್ಲೆ ಭೋರ್ಗೆರವ ನೀರಿನ ಸದ್ದು.

ನಮ್ಮ ದೋಣಿ ಸ್ಪಲ್ಪ ದೂರ ಹೋಗುತ್ತಿದ್ದಂತೆ ಅಲ್ಲಿ ಕಂಡಿತು 'ಹಾರ್ಸ್ ಶ್ಯೂ'.

ಕುದುರೆಲಾಳ ಅಥವಾ 'U' ಆಕಾರದ ಆ ಕೆನಡಿಯನ್ ಜಲಪಾತ.ದೋಣಿ ಆ 'ಹಾರ್ಸ್ ಶ್ಯೂ' ಒಳಗೆ ತೇಲುತ್ತಿದ್ದಂತೆ ಕಂಡದ್ದು.......ಎಡಕ್ಕ..ಬಲಕ್ಕೆ..ಎದುರಿನಲ್ಲಿ... ಹುಚ್ಚೆದ್ದು ದುಮುಕುತಿರುವ ಜಲರಾಶಿ.ನಾ ಕಂಡ ಇನ್ನೊಂದು ಮರೆಯಲಾಗದಂತ ದೃಶ್ಯ.

೨೬೦೦ ಅಡಿ ಅಗಲದ,೧೭೩ ಅಡಿ ಎತ್ತರದ ಆ ಜಲಪಾತ ಮುಂದೆ ನಿಂತಾಗ ಎನೋ ಅವ್ಯಕ್ತ ಸಂತಸ.ದೋಣಿಯ ಧ್ವನಿವರ್ದಕದಲ್ಲಿ 'Ladies & Gentlemen, This is Niagara' ಅನ್ನೋ ಘೋಷಣೆ ಮಾಡುತ್ತಿದ್ದಂತೆ ದೋಣಿಯಲ್ಲಿ ಕರತಾಡನ ಮತ್ತು ಆನಂದದ ಕೇಕೆ.

ಆ ಕೆನಡಿಯನ್ ಜಲಪಾತದಿಂದ ದೋಣಿ ನಮ್ಮನ್ನು ಮರಳಿ ಕರೆತರುವಾಗ ತಿರುತಿರುಗಿ ಅದನ್ನು ನೋಡಿದ್ದಾಯಿತು.ನಿಸರ್ಗದ ಮೋಹಕ ಮತ್ತು ಅಷ್ಟೆ ದೈತ ಶಕ್ತಿಯ ಮುಂದೆ ಮಾನವ ಎಷ್ಟು ಕುಬ್ಜ ಎನಿಸಿತು. ದಡಕ್ಕೆ ಬಂದು ಅಮೇರಿಕನ್ ಜಲಪಾತವನ್ನು ಇನ್ನೊಂದು ಹತ್ತಿರದ view point ನಿಂದ ನೋಡಿದೆವು.

ಅಲ್ಲಿಂದ ನಮ್ಮನ್ನು ಕರೆದುಕೊಂಡು ಹೊರಟಿತು ನಮ್ಮ ನಯಾಗರ ಪ್ರವಾಸ ಬಸ್ಸು.ನಮ್ಮ ನಯಾಗರ ದರ್ಶನದ ಎರಡನೇಯ ಚರಣದಲ್ಲಿ 'Cave of the Winds' ಅನ್ನುವ ಇನ್ನೊಂದು ಪ್ರವಾಸ ಕಾದಿತ್ತು. ಇಲ್ಲಿ ನಮೆಗೆಲ್ಲ ಹಳದಿ ಜಾಕೇಟ್ ಜೊತೆಗೆ ಸ್ಲಿಪರ್‍ಗಳನ್ನು ನೀಡಿದರು.ತುಂಬಾ ಉದ್ದದ ಸರದಿ.ಸಾಲಿನಲ್ಲಿ ನಿಂತೆ 'ಫ್ರೆಂಚ್ ಫ್ರೈ'-ಸೇಬುರಸ ಸ್ವಾಹ ಮಾಡಿದೆವು. ನಮ್ಮ ಸರದಿ ಬಂದಾಗ ಮುಸ್ಸಂಜೆಯಾಗಿತ್ತು.ನಾನು ಮೊದಲೇ ಹೇಳಿದಾಗೆ ಇಲ್ಲಿರುವ ೩ ಜಲಪಾತಗಳು.ಅವುಗಳ ಪೈಕಿ ಚಿಕ್ಕದು 'Bridal Veil' ಜಲಪಾತ.ಈ ಚರಣದಲ್ಲಿ ನಾವು ಈ ಒಂದು ಜಲಪಾತದ ಬುಡ ತಲುಪಲಿದ್ದೆವು.

ಸ್ಪಲ್ಪ ದೂರ ಸಾಗಿದಂತೆ ಕಂಡಿತು ರಭಸವಾಗಿ ಬೀಳುತ್ತಿದ್ದ ಆ ಜಲಪಾತ.ಕನ್ನಡದಲ್ಲಿ 'ವಧುವಿನ ಸೆರಗು' ಎಂಬ ಸುಂದರ ಹೆಸರಿನ ಆ ಜಲಪಾತ. ಅಲ್ಲಿರುವ ಮರದ ಅಟ್ಟಣಿಗೆಗಳನ್ನು ಏರಿ ಮುಂದೆ ಹೋದರೆ ಸೀದಾ ಜಲಪಾತದ ಕೆಳಗೆ. ಧೋ ಅಂತಾ ಸುರಿಯುತ್ತಿದ್ದ ಜಲಪಾತದ ಕೆಳಗೆ ನಿಂತಾಗ ಅ ಜಲಶಕ್ತಿಯ ಅರಿವಾಯಿತು.ಎಷ್ಟೊಂದು ಬಲವಿದೆ ಅದರಲ್ಲಿ.ನೀರು ಕಂಡರೆ ಎಂತವರಿಗೂ ಆಡಬೇಕೆನಿಸುತ್ತೆಲ್ವಾ.ನಮ್ಮ ತಲೆಯ ಮೇಲಿದ್ದ ಆ ಪ್ಲಾಸ್ಟಿಕ್ ಟೊಪ್ಪಿಗೆಯಂತದನ್ನು ಕಳಚಿ ಜಲಪಾತದ ಕೆಳಗೆ ಹೋಗಿ ನಿಂತೆವು.ಪ್ಲಾಸ್ಟಿಕ್ ಜಾಕೀಟ್-ಸ್ಲಿಪರ್ ಪೂರ್ತಿ ಉಪಯೋಗವಾಯಿತು.ಅದ್ಬುತ ಅನುಭವ!

ಅಲ್ಲಿಂದ ಪಕ್ಕದಲ್ಲಿದ್ದ ಅಮೇರಿಕನ್ ಜಲಪಾತ ಇನ್ನೊಂದು ಕೋನದಿಂದ ಮೋಹಕವಾಗಿ ಕಾಣುತಿತ್ತು.ಹಾಗೆಯೇ ಕೆನಡಾ ಮತ್ತು ಅಮೇರಿಕೆಯ ಮಧ್ಯವಿರುವ 'ರೈನ್ ಬೋ' ಸೇತುವೆಯ ನೋಟ ಸೊಗಸಾಗಿತ್ತು.ಸೂರ್ಯ ದಿನದ ತನ್ನ ಕೊನೆಯ ಕ್ಷಣಗಳನ್ನು ನಯಾಗರದ ಜೊತೆ ಕಳೆಯುತ್ತಿರುವಂತೆ ಭಾಸವಾಗುತಿತ್ತು.'ಕೇವ್ ಆಫ್ ದಿ ವಿಂಡ್ಸ್' ನಿಂದ ಹೊರಬರುತ್ತಿದ್ದಂತೆ ಕೆನಡಾ ಗಡಿಯಿಂದ ವಿದ್ಯುತ್ ಬೆಳಕು ನಯಾಗರದ ಮೇಲೆ ಬೀಳತೊಡಗಿತು.ಎಲ್ಲೆಡೆ ಪೂರ್ತಿ ಕತ್ತಲೆ ಕವಿದಿತ್ತು.

ನಮ್ಮ ನಯಾಗರ ಪ್ರವಾಸದ ಗೈಡ್ ಹ್ಯಾರಿ ನಮಗೆ ಇನ್ನು ಸ್ವಲ್ಪ ಹೊತ್ತಿನಲ್ಲಿ ಸಿಡಿಮದ್ದಿನ ಶೋ ಶುರುವಾಗುವದೆಂದು, ಅದನ್ನು ಎಲ್ಲಿಂದ ನೋಡಿದರೆ ಚೆನ್ನಾ ಎಂಬ ಮಾಹಿತಿ ನೀಡಿದನು.ಈಗ ನಾವುಗಳು ಅಮೇರಿಕನ್ ಜಲಪಾತ ಮತ್ತು ಬ್ರೈಡಲ್ ವೇಲ್ ಜಲಪಾತಗಳ ಮಧ್ಯೆವಿರುವ 'ಗೋಟ್ ದ್ಪೀಪ' ದಲ್ಲಿ ನಿಂತೆವು.

ರಾತ್ರಿಯಲ್ಲಿ ನಯಾಗರದ್ದು ವಿಭಿನ್ನ ಸೌಂದರ್ಯ.ಕೆಂಪು,ನೀಲಿ,ಹಸಿರು ಬಣ್ಣಗಳ ಬೆಳಕಿನಲ್ಲಿ ಅದು ಇನ್ನೂ ಸುಂದರವಾಗಿ ಕಾಣುತಿತ್ತು. ನದಿಯ ಆ ದಡದಲ್ಲಿ, ಅದೇ ಕೆನಡಾದಲ್ಲಿ ಎತ್ತರವಾದ ಕಟ್ಟಡಗಳು ಬಣ್ಣಬಣ್ಣದ ವಿದ್ಯುತ್ ದೀಪಗಳಲ್ಲಿ ಜಗಮಗಿಸುತ್ತಿದ್ದವು.ಸರಿಯಾಗಿ ೧೦ ಗಂಟೆಯಾಗುತ್ತಿದ್ದಂತೆ ಕೆನಡಾ ಗಡಿಯಿಂದ ಶುರುವಾಯಿತು ಸಿಡಿಮದ್ದಿನ ಶೋ.ಬಣ್ಣದ ಬಣ್ಣದ ಪಟಾಕಿಗಳು ಆಕಾಶದಲ್ಲಿ ಸಿಡಿದು ಅಲ್ಲಿ ಚಿತ್ತಾರಗಳನ್ನು ರಚಿಸುತ್ತಿದ್ದವು.ಪಕ್ಕಕ್ಕೆ ದುಮುಕುತ್ತಿರುವ ನಯಾಗರ, ಆಕಾಶದಲ್ಲಿ ಬಾಣ-ಬಿರುಸುಗಳ ಸಿಡಿತ.ಯಾವುದೋ ಸ್ವಪ್ನ ಲೋಕದಲ್ಲಿ ವಿಹಾರಿಸುತ್ತಿದೆವೆಯೇ ಅನ್ನೋ ಭಾವನೆ..

ಮಳೆಯ ಕಾರಣ ಸಿಡಿಮದ್ದು ಶೋ ೫ ನಿಮಿಷ ಬೇಗ ನಿಂತರೂ ಮನ ಹರ್ಷಿತವಾಗಿತ್ತು.ಮರಳಿ ಬಸ್ಸು ನಮ್ಮನ್ನು ನಯಾಗರ ಸೆಂಟರ್ ಹತ್ತಿರ ಬಿಟ್ಟಾಗ ರಾತ್ರಿ ೧೧ ಗಂಟೆ.ಅಲ್ಲಿದ್ದ ಇನ್ನೊಂದು ಭಾರತೀಯ ಹೋಟೆಲ್‍ಗೆ ರಾತ್ರಿ ಭೋಜನಕ್ಕೆ ತೆರಳಿದೆವು. ಹೋಟೆಲ್‍ನಲ್ಲಿ ಒಬ್ಬ ದೇಸಿ ಮತ್ತು ಹೋಟೆಲ್ ‍ಮಾಲೀಕನ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ನಡೆಯುತಿತ್ತು. ನಾವು ಊಟ ಮಾಡಿ ಹೊರಡುತ್ತಿದ್ದಂತೆ ಅಲ್ಲಿಯವರಿಗೆ ವಾಗ್ದಾಳಿಯಲ್ಲಿ ತೊಡಗಿದ್ದ ಅವರಿಬ್ಬರು ರಾಜಿಯಾಗಿ ಹೋಟೆಲ್ ಮಾಲೀಕ ಆ ದೇಸಿಯನ್ನು 'ಭೂರಾ ಮತ್ ಸಮ್ಜನಾ ಭೇಟ' ಅಂದದ್ದನ್ನು ನೋಡಿ ನಮಗೆ ಮುಸಿಮುಸಿ ನಗು..

ಸ್ಪಲ್ಪ ಒದ್ದೆಯಾಗಿದ್ದ ಬಟ್ಟೆಗಳನ್ನು ಬದಲಿಸಿ, ಕಾರಿಗೆ ಊಟ ಮಾಡಿಸಿ(ಪೆಟ್ರೋಲ್ ಕುಡಿಸಿ) ನಯಾಗರ ಬಿಟ್ಟಾಗ ರಾತ್ರಿ ೧ ಗಂಟೆ. ನಮ್ಮ ಪ್ರಯಾಣ ಮರಳಿ ನ್ಯೂಯಾರ್ಕ್ ಗೆ.ದೂರ ೪೫೦ ಮೈಲಿ.ಓಪನಿಂಗ್ ಬ್ಯಾಟ್ಸ್ ‍ಮೆನ್ ಆಗಿ ನಾನು ಡ್ರೈವರ್ ಸ್ಥಾನದಲ್ಲಿ ಅಸೀನನಾದೆನು.ಮತ್ತೆ ಶುರುವಾಯಿತು ಫ್ರೀ ವೇ ಸವಾರಿ.

ಬೆಳಗಿನ ಹೊತ್ತಿನ ಡ್ರೈವ್ ರಾತ್ರಿಯ ಡ್ರೈವ್‍ಗಿಂತ ವಿಭಿನ್ನವಾಗಿತ್ತು. ಹಿಂದಿನ ಸೀಟಿನಲ್ಲಿದ್ದ ಅರ್ಚನಾ ಮತ್ತು ಪೊನ್ನಮ್ಮ ಆಯಾಸದಿಂದ ನಿದ್ರೆಗೆ ಜಾರಿದ್ದರು. ದೀಪ್ತೀ ಐ-ಪೋಡ್ ನಲ್ಲಿ request show ಮುಂದುವರಿಸುತ್ತಿದ್ದಳು. ನಮ್ಮ ಮುಂದಿನ ಬ್ಯಾಟ್ಸ್ ಮೆನ್ ಸುಪ್ರೀತನಿಗೆ ವಿಶ್ರಾಂತಿ ಕೊಡುವ ಉದ್ದೇಶದಿಂದ ಅವನಿಗೆ ಮಲಗಿಕೊಳ್ಳಲು ಹೇಳಿದೆವು.ಹಾಡು-ಮಾತುಗಳ ಮಧ್ಯೆ ದಾರಿ ಹೋಗಿದ್ದೆ ತಿಳಯಲಿಲ್ಲ.ನಾನು ಸುಪ್ರೀತ್‍ನ ಕೈಗೆ ಸ್ಟೇರಿಂಗ್ ಕೊಟ್ಟಾಗ ಬೆಳಗಿನ ೪:೩೦.ಹಾಗೆಯೇ ನಿದ್ದೆಗೆ ಜಾರಿದೆ.

ಎರಡು ಗಂಟೆಗಳ ನಂತರ ಎಚ್ಚರವಾದಗ ನ್ಯೂಯಾರ್ಕ್‍‍ಗೆ ಸಮೀಪದಲ್ಲಿದ್ದೆವು..

ಮುಂದಿನ ಭಾಗದಲ್ಲಿ...ನ್ಯೂಯಾರ್ಕ್ ನಗರ ವೀಕ್ಷಣೆ

19 comments:

Anveshi said...

ಪಾತರಗಿತ್ತಿ,
ನಯಾ ಗರದಲ್ಲಿ ನೀವು ಅಷ್ಟು ಜಲಪಾತಗಳನ್ನು ಗರಬಡಿದವರಂತೆ ನೋಡಿದ್ದು ಕೇಳಿ... (ಓದಿ) ಆನಂದವಾಯಿತು.

ಅಲ್ಲಿ ಭಾರತೀಯರೇ ಹೆಚ್ಚಾಗಿದ್ದಾರೆ ಅಂತ ಅನ್ವೇಷಣೆ ಮಾಡಿರುವ ಕಾರಣ ಊರಿನ ಹೆಸರನ್ನು ನಯಾ ನಗರ ಅಂತ ಅಚ್ಚ ಭಾರತೀಯ ನಗರವಾಗಿಸೋಣವೇ?

Anonymous said...

ಪ್ರವಾಸ ಕಥನ ಚೆನ್ನಾಗಿದೆ.
ಚಿತ್ರಗಳು ಚೆನ್ನಾಗಿವೆ. ಆದರೆ ಕರ್ನಾಟಕದ ಜೋಗದ ವೈಭವದ ಸಿರಿಗೂ ನಯಾಗರದ ಜಲಪಾತಗಳಿಗೂ ಏನಾದರೂ ವ್ಯತ್ಯಾಸ ಕಂಡಿರೇ?

Soni said...

Shiv!

sakkat photos! hAge oLLe Vimarshe kooda..Superr

Mahantesh said...

Shiv!!!!!!
neevu e reethine nimma pravas mundavarsi re! haage adanna innstu cholo agi barita iri.....ondu thara hottene oritu re ....
Asatyanashwi avar salahe ondu marpadu...
naya nagar ginta nav nagar chennagi irrutt:))

Shiv said...

ಅಸತ್ಯಿಗಳೇ,
ನಿಮ್ಮ ಸಲಹೆ ಅಮೋಘವಾಗಿದೆ.ಅದರ ಜೊತೆ ಅಲ್ಲಿನ ಬೀದಿಗಳ ಹೆಸರುಗಳನ್ನು ಬದಲಾಯಿಸಿ ಗಾಂಧಿ ರೋಡ್,ನೆಹರು ರಸ್ತೆ ಇತ್ಯಾದಿ ಮಾಡಬಹುದು!

ಸೋನಿ,
ಪಾತರಗಿತ್ತಿಗೆ ಸ್ವಾಗತ !
ನಿಮ್ಮ ಮೆಚ್ಚುಗೆಗೆ ವಂದನೆಗಳು..

ಮಹಾಂತೇಶ್,
ನೀವು ಅಸತ್ಯಿಗಳು ಮಾತಾಡಿ ನಯಾ ಬೇಕೋ ಅಥವಾ ನವ ಬೇಕೋ ಅಂತಾ ನಿರ್ಧಾರ ಮಾಡಿ :)

Shiv said...

ಅವಿ,
ಪಾತರಗಿತ್ತಿಗೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು.

ನಮ್ಮ ಜೋಗ ಜಲಪಾತವನ್ನು ನಯಾಗರಕ್ಕೆ ಹೋಲಿಸುವುದು ಸೂಕ್ತವಲ್ಲ ಅಂತಾ ನನ್ನ ಅನಿಸಿಕೆ.ಜೋಗದಲ್ಲಿ ಇರುವ ನಾಲ್ಕು ಜರಿಗಳಿಗೆ ಅವುಗಳೇ ಆದ ವಿಶಿಷ್ಟತೆ ಇದೆ.ಒಂದು ಕಡೆ ನಿಂತು ಜೋಗ ಜಲಪಾತದ ಪೂರ್ತಿ ದರ್ಶನ ಪಡೆಯಬಹುದು.ಆದರೆ ನಯಾಗರದ ವ್ಯಾಪ್ತಿ ದೊಡ್ಡದು.ಇದರಲ್ಲಿನ ಮೂರು ಜಲಪಾತಗಳನ್ನೂ ದರ್ಶಿಸಲು ಮೂರು ವಿಭಿನ್ನ ಸ್ಥಳಗಳಿವೆ.

ಇನ್ನೊಂದು ಮುಖ್ಯ ಅಂಶವೆಂದರೆ ನಯಾಗರವನ್ನು ಪ್ರವಾಸಿಗರಿಗೆ ಪ್ರಸ್ತುತ ಪಡಿಸುವ ರೀತಿ.ಅಲ್ಲಿಗ ಹೋದವರು ಮತ್ತೊಮ್ಮೆ ಮರಳದಿದ್ದರೆ ಕೇಳಿ.ಒಂದು ಒಳ್ಳೆ ಪ್ರವಾಸಿತಾಣಕ್ಕೆ ಬೇಕಿರುವ ಎಲ್ಲವೂ ಇಲ್ಲಿದೆ.

ಜೋಗಕ್ಕೆ ನಾನು ಹೋಗಿದ್ದು ತುಂಬಾ ಹಿಂದೆ.ಈಗ ಪರಿಸ್ಥಿತಿ ಹೇಗಿದೆ ಅಂತಾ ಗೊತ್ತಿಲ್ಲ.

Anonymous said...

ನಾನು ನಯಾಗರ ನೊಡಿ ಈಷ್ಟು ಭ್ಹಾಉಕನಾಗಿರಲಿಲ್ಲ ಅದರೆ ನಿನ್ನ ಲೇಖನ ಓದಿ ಬಾಉಕನಾಗಿದ್ದಿನಿ. ಅದಕ್ಕೆ ಹೇಳುಉದು ರವಿ ಕಾಣದ್ದನ್ನು ಕವಿ ಕ೦ಡನು.

Phantom said...

ಸೊಗಸಾಗಿದೆ ವರ್ಣನೆ. ಅಲ್ಲಿಗೆ ಬಂದು ನೋಡಿದಶ್ಟು ಖುಶಿ ಆಯ್ತು.

ಮುಂದಿನ ಸಂಚಿಕೆಗಾಗಿ ಕಾತುರದಿಂದ ಕಾಯ್ತ ಇದ್ದಿನಿ.

ಭೂತ

Shiv said...

ಸುಪ್ಪಿ,
ನೆನಪುಗಳೇ ಹಾಗೆ..ಮದ್ಯದ ತರ..ಹಳೆಯಾದದಷ್ಟು ಉತ್ತಮ! ಈ ಪ್ರವಾಸದಲ್ಲಿ ತಮ್ಮನ್ನು ಭಾವನಲೋಕಕ್ಕೆ ನಯಾಗರ ಒಂದೇನಾ ಕರೆದುಕೊಂಡು ಹೋಗಿದ್ದು..ನನಗೆ ಅನಿಸಿದ ಹಾಗೆ ನೀವು ಭಾವನಲೋಕಕ್ಕೆ ಹೋಗಲು ಇನ್ನೂ ಒಂದು ಕಾರಣವಿತ್ತು :)

ಭೂತ,
ಧನ್ಯವಾದಗಳು ! ಹೆಂಗಿದ್ದರೂ ನಿಮಗೆ ಇಲ್ಲಿಗೆ ಬಂದಾಗೆ ಆಗಿರುವದರಿಂದ ಹಂಗೆ ನಮ್ಮ ಊರಿನ ಕಡೆ ಬಂದು ಹೋಗಿ !

Anonymous said...

ಶಿವು, ನಯಾಗರದ ಚಿತ್ರಣ ಚೆನ್ನಾಗಿ ಮೂಡಿ ಬಂದಿದೆ. ಮುಂದಿನ ಪಯಣ ಎಲ್ಲಿಗೆ?

ಅಸತ್ಯಾನ್ವೇಷಿಗಳಿಗೆ ಹೆಚ್ಚಿಗೆ ಅಧಿಕಾರ ಕೊಡಬೇಡಿ. ಅವರಿಗೆ ನಾಮಕರ್ಣ ಪಿಶಾಚಿ ಹಿಡಿದಂತಿದೆ :)

Shiv said...

ತ್ರಿವೇಣಿಯವರೇ,

ಪಾತರಗಿತ್ತಿಗೆ ಭೇಟಿ ನೀಡಿದ್ದಕ್ಕೆ ವಂದನೆಗಳು.ಮುಂದಿನ ಪಯಾಣ ನೂಯಾರ್ಕ್ ನಗರಕ್ಕೆ.

ಯಾಕ್ರೀ, ಅಸತ್ಯಿಗಳೂ ನಿಮಗೂ ನಾಮಕರಣದ ಬಗ್ಗೆ ಎನಾದರೂ ಹೇಳಿದಾರ ಹೆಂಗೆ :)

Karthik CS said...

ಶಿವ್,

ನಿಮ್ಮ ನಯಾಗರದ ಲೇಖನ ಓದುತ್ತಿದ್ದರೆ ನಾನು ಮತ್ತೆ ಅಲ್ಲಿಗೆ ಹೋಗಿ ಬಂದಂತಾಯಿತು .. ಬಹಳ ಚೆನ್ನಾಗಿದೆ.. ಕತ್ತಲಿನಲ್ಲಿ ನಯಾಗರ ಇನ್ನೂ ಚೆನ್ನಾಗಿ ಕಾಣುತ್ತದೆ.. ಇಲ್ಲಿದೆ ನಾನು ತೆಗೆದ ಒಂದು ಚಿತ್ರ

--> http://static.flickr.com/70/192268771_2a3dbafcb2_o.jpg

Anveshi said...

ಶಿವ್ ಅವರೆ,
ನನಗೇನೋ ಇಲ್ಲಿ ಬಂದಾಗ ಭೂತದ ಉಪಟಳ ಆದಂತೆ ಭಾಸವಾಗಿದೆ ಈಗ.

ಯಾಕಂದ್ರೆ ನೀವು, ಶ್ರಿತ್ರಿ ಅವರೂ ಮತ್ತು ಮಹಾಂತೇಶ್ ಸೇರಿಕೊಂಡು ನಮ್ಮನ್ನು ಪಿಶಾಚಿ ಮಾಡುವ ಸಂಚು ನಡೀತಿದೆ.

ಆ ಭೂತ ಇನ್ನೊಮ್ಮೆ ಬಂದಾಗ ಹಿಡಿದಿಟ್ಟುಕೊಳ್ಳಿ, ಯಾವಾಗ್ಲಾದ್ರೂ ಬೇಕಾಗುತ್ತೆ!

Mahantesh said...

ಅಸತ್ಯಿಗಳೇ ನಿಮ್ಮ ಬವಣೆ ಕೇಳಿ ಶಾನೆ ಖುಶಿ ಅಯಿತು!!!.ಪಿಶಾಚಿ ಅಂತಾ ಎಲ್ಲಾ ಮಾತಡ್ತಾ ಇದೀರಾ???ಆದಕ್ಕೆ ಭೂತ ಸಾಕ್ಷೀ ಬೇರೆ ಬೇಕಾ? ಓತಿಕಾಟಕ್ಕೆ ಬೇಲಿ ಸಾಕ್ಷೀ ಅನ್ನೊ ಹಾಗೆ??? ಏನು ಅಂತೀರಾ Shiv?

Enigma said...

yup i ahve visted niagar thrice :) feel like going there again.
did u try canda side too?

Shiv said...

ಕಾರ್ತಿಕ್,
ನಿಮ್ಮ ನಯಾಗರದ ರಾತ್ರಿ ಚಿತ್ರ ಚೆನ್ನಾಗಿದೆ.ನಾನು ನಿಮ್ಮ ಬ್ಲಾಗ್ ನಲ್ಲಿ ಬರೆದ ಹಾಗೆ ನಿಮ್ಮದು 'ಕ್ಯಾಮರ ಕಣ್ಣು'!

ಎನಿಗ್ಮಾ,
ಇಲ್ಲಾರೀ, ಕೆನಡಾ ಕಡೆಯಿಂದ ನೋಡೋಕೋ ಆಗಲಿಲ್ಲ.
ಮುಂದಿನ ಸಲ ಹೋದರೆ ಕೆನಡಾ ಕಡೆಯಿಂದ ನೋಡೋಣ ಅಂತಾ.ನೀವು ಬಹುಷಃ ಕೆನಡಾ ಕಡೆಯಿಂದ ನೋಡಿದಿರ ಅನಿಸುತ್ತೆ.

ಅಸತ್ಯಿಗಳೇ,
ಅಯ್ಯೋ ಇಲ್ಲ ಇಲ್ಲಾ..ನಿಮ್ಮನ್ನು ಯಾರು ಪಿಶಾಚಿ ಮಾಡೋಕೋ ಹೊರಟಿಲ್ಲ.ನಿಮಗೆ ಭೂತದ ಉಪಟಳ ಆದರೆ ಆ 'ಫ್ಯಾಂಟಮ್' ಕಾರಣ.

ಮಹಾಂತೇಶ್,
ನೋಡ್ರೀ ಅಸತ್ಯಿಗಳು ಭೂತ-ಪಿಶಾಚಿ ಅಂತಾ ಕನವರಿಸುತ್ತಿದ್ದಾರೆ.ಅದರ ಮೇಲೆ ನಿಮ್ಮ ಮೇಲೆ, ತ್ರಿವೇಣಿಯವರ ಮೇಲೇ ಅಪವಾದ ಮಾಡ್ತಿದ್ದಾರೆ.
ಅವರ 'ಅಲ್-ಕೋಲಹಾಲ್' ಪ್ರಭಾವವೇ ಇರಬಹುದೇ ಇದು?

Mahantesh said...

ಶಿವ,
ಅಸತ್ಯಿಗಳ ಬವಣೆಗೆ ಅಲ್-ಕೋಲಹಾಲ್ ಅಥವಾ ನೆಗರ್ ಖಾನ್ ಭರ್ಜರಿ ಪ್ರದರ್ಶನ ಎಂಬುದನ್ನಾ ತನಿಖೆ ಮಾಡಲು ಭೂತವನ್ನೇ ಕಳೀಸೋಣ!!!! ದಯವಿಟ್ಟು ಬೂತಕ್ಕೇ inform ಮಾಡಿ ಬಿಡಿ.

Anveshi said...

ಎನಿಗ್ಮಾ ಅವರು negar (khan) 3 ಸಲ ಭೇಟಿ ಮಾಡಿದ್ದಾರಂತ ಹೇಳ್ತಿದ್ದಾರಾ?

Shiv said...

ಮಹಾಂತೇಶ್,
ಇದೀಗ ಬಂದ ಸುದ್ದಿಯ ಪ್ರಕಾರ ಅಲ್-ಕೊಲಹಾಲ್ ನಶೆಯಲ್ಲಿ ನೆಗರ್ ಶೋ ಅಯ್ತಿಂತೆ..ಅದರ ಪ್ರಭಾವವೇ ಇದು

ಅಸತ್ಯಿಗಳೇ,
ಎನಿಗ್ಮಾ ಅವರ ಉವಾಚ
"yup i ahve visted niagar thrice :) feel like going there again."

feel like goin there again ನೋಡಿದರೆ ಬಹುಷಃ ನಿಮ್ಮ ಗುಮಾನಿ ನಿಜವಿದ್ದರು ಇರಬಹುದು !