Wednesday, December 20, 2006

ಪ್ರೀತಿಯ ಶರಧಿಯೇ..

ನನ್ನ ಹೃದಯದ ಒಡತಿಯೇ,

ನೀನು ನನಗೆ ಗೊತ್ತಿಲ್ಲದಂಗೆ ಕದ್ದೊಯ್ದ ನನ್ನ ಹೃದಯ ಹೇಗಿದೆ?

ಅದು ಯಾವಾಗ, ಎಲ್ಲಿ, ಹೇಗೆ ಅದನ್ನ ನೀ ದೋಚಿದೆ ಇನ್ನೂ ಗೊತ್ತಾಗಲಿಲ್ಲ. ನಿನ್ನ ಸುಖ ಬಂಧನದಲ್ಲಿ ಅದಕ್ಕೆ ಬಹುಷಃ ನಾನು ಮರೆತುಹೋಗಿದೀನಿ ಅನಿಸುತ್ತೆ.ಪಾಪ, ಅದರ ತಪ್ಪಿಲ್ಲ ಬಿಡು, ನೀನು ಇರೋದೇ ಹಾಗೆ, ಜೊತೆಗಿದ್ದರೆ ಈಡೀ ಜಗತನ್ನೇ ಮರೆಸಿಬಿಡೋ ಹಾಗೇ ಪ್ರೀತಿ ಮಾಡಿಸ್ತಿಯಾ..

ಮೊನ್ನೆ ನಿನ್ನ ನೆನಪು ನನ್ನ ಸಿಕ್ಕಪಟ್ಟೆ ಕಾಡ್ತಿತ್ತು. ಅದು ಯಾವಾಗ ಕಾಡೋದಿಲ್ಲ ಹೇಳು. ಆದರೆ ಅವತ್ತು ಯಾಕೋ ಬಹಳ ಬಹಳ ನೆನಪಾಗ್ತ ಇದ್ದೆ ಹುಡುಗಿ..

ಒಲವಿನ ಪ್ರಿಯಲತೆ
ಅವಳದೇ ಚಿಂತೆ
ಅವಳ ಮಾತೇ ಮಧುರ ಗೀತೆ
ಅವಳೇಯೆನ್ನ ದೇವತೆ

ಇಲ್ಲಿ ನನ್ನ ಮೆಚ್ಚಿನ ಒಂದು ಜಾಗವಿದೆ - ಪಾಲೋಸ್ ವರ್ಡೀಸ್ ಅಂತಾ. ಫೆಸಿಪಿಕ್ ಸಾಗರದ ಪಕ್ಕದಲ್ಲಿದೆ ಹರಡಿದೆ ಈ ಗುಡ್ಡ, ಸಾಗರದ ಪಕ್ಕಕ್ಕೆ ಈ ಗುಡ್ಡದಲ್ಲಿ ಓಡುತ್ತೆ ರಸ್ತೆ. ಪ್ರಶಾಂತ ಮಹಾಸಾಗರದ ಸೊಬಗು ಸವಿಯುತ್ತ ಈ ರಸ್ತೆಯಲ್ಲಿ ಡ್ರೈವ್ ಮಾಡಿಕೊಂಡು ಹೋಗಿ, ಅಲ್ಲಿ ಸಮುದ್ರ ತಟದಲ್ಲಿ ಕೂತು ಸೂರ್ಯಾಸ್ತ ನೋಡಿಬರೋದು ನನ್ನ ಮೆಚ್ಚಿನ ಕೆಲಸ.

ಅವತ್ತು ನಿನ್ನ ನೆನಪನ್ನು ಜೊತೆಗೆ ಕರಕೊಂಡು ಸಾಗರದ ಹತ್ತಿರ ಡ್ರೈವ್‍ಗೆ ಹೋಗಿದ್ದೆ. ಸಂಜೆ ಸಮಯವಾಗ್ತಾ ಇತ್ತು. ಹಕ್ಕಿಗಳೆಲ್ಲಾ ಮನೆ ಕಡೆ ವಾಪಾಸ್ ಹೋಗ್ತಾ ಇದ್ದವು. ಆ ಹಕ್ಕಿಗಳ ಹಾಗೆ ನನಗೂ ರೆಕ್ಕೆ ಇದ್ದರೆ ಎಷ್ಟು ಚೆನ್ನಾ ಅನಿಸ್ತು. ದಿನ ಹಾರಿಕೊಂಡು ಬಂದು ನಿನ್ನ ಬಾಹುಗಳ ಗೂಡು ಸೇರುತಿದ್ದೆ.ದಿನ ನಿನ್ನ ಪ್ರೀತಿಯ ಗುಟುಕು ತಿನ್ತಾ ಇದ್ದೆ...

ಫೆಸಿಪಿಕ್ ಸಾಗರದ ಮೇಲೆ ಒಂದು ಜೋಡಿ ಹಕ್ಕಿ ಎಲ್ಲಾ ಮರೆತು ತಮ್ಮ ಪ್ರಪಂಚದಲ್ಲಿ ತಾವು ಹಾರಿಕೊಂಡು ಆರಾಮಾಗಿ ವಿಹರಿಸುತ್ತಿದ್ದವು.

ಅದು ಯಾಕೋ ಗೊತ್ತಿಲ್ಲ ನನಗೆ ಫೆಸಿಪಿಕ್ ಸಾಗರ ತುಂಬಾ ಶಾಂತ ಅನಿಸುತ್ತೆ.ಅದಕ್ಕೆ ಅದನ್ನ ಪ್ರಶಾಂತ ಮಹಾಸಾಗರ ಅಂತಾ ಕರಿತಾರೋ ಎನೋ. ಅದನ್ನು ನೋಡ್ತಾ ಇದ್ದಂಗೆ ಮತ್ತೆ ನಿನ್ನ ನೆನಪು ಶುರುವಾಯಿತು. ನಿನ್ನ ಪ್ರೀತಿನೂ ಹಂಗೆ ಅಲ್ವಾ...ಏನೂ ಸದ್ದು ಮಾಡದೇ ಇದ್ದರೂ, ಅದರ ಆಳ ಆ ಸಾಗರಕ್ಕಿಂತ ಕಡಿಮೆ ಏನಿಲ್ಲ. ಆ ನಿನ್ನ ಮನಸ್ಸೆಂಬ ಸಾಗರದ ಆಳಕ್ಕೆ ಇಳಿಯುತ್ತಿದ್ದಂತೆ, ಅಲ್ಲಿ ನನಗೋಸ್ಕರ ಇರುವ ಪ್ರೀತಿ ನೋಡಿ ನಾನು ಸೋತು, ಈಜೋದನ್ನು ಬಿಟ್ಟು , ಅಲ್ಲೇ ಮುಳುಗಿ , ನಿನ್ನ ಮನದಲ್ಲಿ ಉಳಿದು ಹೋಗಿದೀನಿ..

ಅವತ್ತು ಸೂರ್ಯಾಸ್ತ ತುಂಬಾ ಸುಂದರ ಅನಿಸ್ತು.ಸೂರ್ಯ ಪೂರ್ತಿ ಸಾಗರದ ಆಳಕ್ಕೆ ಸೇರೋವರೆಗೆ ನೋಡಿ ಅಲ್ಲಿಂದ ಹೊರಟೆ.ಸೂರ್ಯಸ್ತ ನೋಡೋಕೆ ಬಂದಿತ್ತು ಯಾವುದೋ ಒಂದು ಜೋಡಿ. ಸೂರ್ಯಾಸ್ತದ ಆ ಸುಂದರ ಸಂಜೆಯಲ್ಲಿ ಆ ಜೋಡಿ ಇನ್ನೂ ಸುಂದರವಾದ ಕೆಲಸದಲ್ಲಿ ತೊಡಗಿದ್ದರು! ಬಹಳ ಬಹಳ ನಿನ್ನ ಮಿಸ್ ಮಾಡಕೊಂಡೆ ಹುಡುಗಿ..

ಡ್ರೈವ್ ಮಾಡಿಕೊಂಡು ವಾಪಾಸ್ ಬರಬೇಕಾದರೆ, ನಿನ್ನ ಜೊತೆಗಿದ್ದ ಆ ೩ ದಿನ ಇಷ್ಟು ನೆನಪಿಗೆ ಬಂತು ಗೊತ್ತಾ. ನಾವಿಬ್ಬರು ಒಟ್ಟಿಗೆ ಮೊದಲ ಸರ್ತಿ ಪಾನಿಪುರಿ ತಿಂದದ್ದು ನೆನಪಾಯಿತು. ಹಂಗೆ ಆ ತಂಪು ಸಂಜೆಯಲ್ಲಿ ನಿನ್ನ ಜೊತೆ ಕೆಲವೊಮ್ಮೆ ಮಾತಿಲ್ಲದೇ, ಕೆಲವೊಮ್ಮೆ ಮಾತು ಹೊರಡದೇ, ಕೆಲವೊಮ್ಮೆ ಸುಮ್ಮನೆ ನಿನ್ನ ನೋಡಕೊಂಡು , ಕೆಲವೊಮ್ಮೆ ನೀನು ಮಾತಾಡೋದಾ ಕೇಳಿಕೊಂಡಿದ್ದು, ಹಂಗೆ ಆಟೋದಲ್ಲಿ ವಾಪಾಸ್ ಹೋಗುವಾಗ ನಿನ್ನ ಮನ ಎಲ್ಲೋ ಕಳೆದುಹೋಗಿದ್ದು..ಎಲ್ಲಾ ನೆನಪಾಯ್ತು.

ಡ್ರೈವ್ ಮಾಡ್ತಾ ಇದ್ದೋನು ಇಂಡಿಯನ್ ಶ್ಯಾಪ್ ಬರ್ತಾ ಇದ್ದಾಗೆ ನಿಲ್ಲಿಸಿದೆ. ನೀನು ತುಂಬಾ ಇಷ್ಟ ಪಡೋ ಪಾನಿಪುರಿ ನೋಡಿದ್ದೇ ಅಲ್ಲಿ ಹೊಕ್ಕೆ. ಪಾನಿಪುರಿ ತಿನ್ನಬೇಕು ಅನ್ನೋದಿಕ್ಕಿಂತ ನಿನ್ನ ನೆನಪಾಗಿ ಸುಮ್ಮನೇ ಪಾನಿಪುರಿ ತಗೊಂಡೆ.ಪಾನಿಪುರಿ ಮೊದಲು ತಿನ್ನಬೇಕಾದರೆ ಸುಮ್ಮನೆ ಪಾನಿಪುರಿ ಬಿಟ್ಟರೆ ಎನೂ ತಲೆಯಲಿ ಬರ್ತಾ ಇದ್ದಿಲ್ಲ.ಈಗ ಹೆಂಗೆ ಆಗಿದೆಯೆಂದರೆ ಒಂದೊಂದು ಪಾನಿಪುರಿ ತಿನ್ನಬೇಕಾದರೂ ನಿನ್ನ ನೆನಪು ಬಂದು ಬಾಯಿ ತೆರೆಯುತ್ತೆ.

ಅಲ್ಲಿಂದ ಮನೆಗೆ ಬಂದ ಮೇಲೆ ಯಾಕೋ ಗೊತ್ತಿಲ್ಲ, ಎನೂ ಮಾಡೋಕೆ ಮನಸು ಬರ್ತಾ ಇಲ್ಲ. ಸುಮ್ಮನೆ ಹಾಸಿಗೆ ಮೇಲೆ ಬಿದ್ದಿದೀನಿ, ನಿನ್ನ ನೆನಪೆಂಬ ಹೊದ್ದಿಕೆ ಹೊದ್ದುಕೊಂಡು. ಅದು ಯಾವಾಗ ಕನಸಿಗೆ ಜಾರ್ತಿನೋ ಗೊತ್ತಿಲ್ಲ...

ಸರಿ, ಅಲ್ಲೇ ಕನಸಲಿ ಸಿಗ್ತೀನಿ..ಉಳಿದದ್ದು ಅಲ್ಲೇ ಹೇಳ್ತೀನಿ..

ನಿನ್ನ ಪ್ರೀತಿಯಲ್ಲಿ ಕಳೆದುಹೋದ,
ನಿನ್ನವನು

13 comments:

Sushrutha Dodderi said...

ಪೆಸಿಫಿಕ್ ಮಹಾಸಾಗರದ ಅಗಾಧತೆಯಂತೆ ನಿಮ್ಮ ಪ್ರೀತಿಯೂ ಎಂಬುದು ನಿಮ್ಮ ಪತ್ರ ನೋಡಿದರೇ ಅರ್ಥವಾಗುತ್ತದೆ. ಸುಂದರ ಪತ್ರ. No doubt, ಪ್ರೇಯಸಿಗೆ ಖುಷಿಯಾಗುವಂತಹ ಪತ್ರ.

Shiv said...

ಸುಶ್ರುತ,
ಅದು ಸರಿನೇ..ಪ್ರೀತಿ ಎಂಬುದು ಒಂದು ಸಾಗರ ಇದ್ದಾಗೆ..ಅದರಲ್ಲಿ ನೆನಪುಗಳು ಆಲೆಗಳ ಬಂದಾಗ ಅಲ್ಲಿ ಈ ತರದ ಭಾವನೆಗಳು ಹೊಮ್ಮುತ್ತೆ..

mouna said...

u've talked about the pacific ocean quite a no. of times. a place of solitude imbibes the feeling of longingness in us, moreso, if that particular place is dear to us.

does she read your articles, if no, please ask her to do so?

bhadra said...

ಮನದ ಮಾತುಗಳನ್ನು ಬರಹದಲ್ಲಿ ಚೆನ್ನಾಗಿ ಮೂಡಿಸಿದ್ದೀರ. ನಿಮ್ಮ ವ್ಯಥೆ ಕಡಿಮೆ ಮಾಡಲು, ನಿಮ್ಮವರ ಮನವನ್ನು ಕದ್ದು ತನ್ನಿ. ಆಗ ಎಲ್ಲವೂ ಸರಿ ಹೋಗುವುದು. ಇಲ್ಲದಿದ್ದರೆ ಆ ಚಕ್ಕಡಿಯಲ್ಲಿ ಮುಂಭಾರ.

Mahantesh said...

premlokada premige namaskar,
modle prashne,nimma preeti pacific sharadi thara na? yaa nimma priyatame pacific sharadi na? dayavittu spastane neDi....

P.S.-> blog hesaranna pataragittiyinda premloka aMta badilasidare olledayeno :)

Anonymous said...

I was staring at the pacific ocean for sucha long time over the weekend and yes, I also agreed that it was aptly called 'shAMta mahAsAgara'.

Very nice writing......

Shiv said...

ಮೌನ,
ನೀವು ಹೇಳ್ತಾ ಇರೋದು ನಿಜ..ಆ ಜಾಗ ನಿಜವಾಗಲೂ ಹಂಬಲವನ್ನು ಇನ್ನೂ ಹೆಚ್ಚು ಮಾಡುತ್ತೆ..ನನ್ನ ಹುಡುಗಿಗೆ ಮೊದಲು ತೋರಿಸಿದ ನಂತರ ಈ ಲೇಖನಗಳು ಇಲ್ಲಿ ಬರುತ್ತೆ

ತವಿಶ್ರೀ,
ಮನವನ್ನು ಕದ್ದು ಬಹಳ ದಿನಗಳೇ ಆಗಿದೆ..

ಮಹಾಂತೇಶ್,
ಎರಡು ಅಲ್ಲಾ..ನನ್ನ ಹುಡುಗಿಯ ಪ್ರೀತಿ ಫೆಸಿಪಿಕ್ ಇದ್ದಾಗೆ ಅಂತಾ ಹೇಳಿದ್ದು..
ನಿಮ್ಮ ಪ್ರೇಮಲೋಕಭರಿತ ಸಲಹೆಯನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೇನೆ :)

ಡಿಸೆಂಬರ್ ಸ್ಟಡ್,
ಧನ್ಯವಾದಗಳು !
ನೀವು ಸಹ ಆ ಪ್ರಶಾಂತ ಸಾಗರದ ತೀರದಲ್ಲಿ ಇದೀರಾ ಅನ್ನಿಸುತ್ತೆ..

Anonymous said...

houdu kaNayya nAnU allE.....

Oh, and please don't change the name of your blog .... what you have is beautiful ;)

Shiv said...

ಡಿಸೆಂಬರ್ ಸ್ಟಡ್,

ನಾನು ಹಂಗೆ ತಮಾಷೆಗೆ ಹೇಳಿದ್ದು ಸಾರ್..ಹೆಸರು ಬದಲಾವಣೆ ಪರಿಗಣಿಸಲಾಗಿದೆ ಅಂತಾ :) ಅಂತಾ ವಿಚಾರ ಇಲ್ಲ!

ನೀವು ಫೆಸಿಪಿಕ್ ತೀರದ ಯಾವ ಊರಲ್ಲಿ ಇರೋದು?

Anveshi said...

ಪೆಸಿಫಿಕ್ ತೀರ, ಪಾನಿಪೂರಿ, ಪಾತರಗಿತ್ತಿ, ಪ್ರೇಮಲೋಕ, ಕಾಡುವ ನೆನಪುಗಳು....
ಒಂದಕ್ಕೊಂದು ಎಷ್ಟು ಚೆನ್ನಾಗಿ ಹೊಂದಿಸಿಕೊಟ್ಟಿದ್ದೀರಿ ನಿಮ್ಮ ಬರಹಗಳ ಮೂಲಕ !

Shiv said...

ಅಸತ್ಯಿಗಳೇ,

ಜೀವನವೇ ಒಂದು ಕೋಲೇಜ್ ಅಲ್ವಾ..
ಪ್ರೀತಿ ಸಹ ಅಂತದ್ದೇ..ಅದರಲ್ಲಿ ಕಾಡುವ ನೆನಪುಗಳು, ಹೋಗುವ ಸ್ಥಳಗಳು, ಒಂದೊಂದು ಹೆಜ್ಜೆಯೂ ತಳಕು ಹಾಕಿಕೊಂಡಿರುತ್ತೆ ಅಲ್ವಾ..

ಭಾವಜೀವಿ... said...

ಚೆನ್ನಾಗಿದೆ ಕಲ್ಪನೆಯನ್ನು ಕಾಣಿಸಿದ್ದು...!!

ನೆನಪು ಹಾಗು ಕನಸುಗಳ ಕರಾಮತ್ತೇ ಅಂತದು, ಜನರ ಮಧ್ಯದಲ್ಲೇ ಒಂಟಿಯಾಗಿಸಬಲ್ಲವು ಅಥವಾ ಒಬ್ಬಂಟಿ ಇರುವಾಗ ಅವಳು/ಅವನನ್ನ ಜೊತೆಯಾಗಿಸ ಬಲ್ಲವು!
ಆದರೆ ನಾವೆಲ್ಲಾ ಅದೃಷ್ಟದಾಟದ ಕೈಬೊಂಬೆಗಳು.. ಕೆಲವರಿಗೆ ನೆನಪುಗಳು ಎಂದೆಂದಿಗೂ ಮಧುರವಾಗಿ, ಸವಿಯಾಗಿದ್ದರೆ, ಇನ್ನು ಹಲವರಿಗೆ ಸದಾ ಕಹಿಯನ್ನು ಕಾಣಿಸುತ್ತದೆ! ಇವಲ್ಲಕ್ಕಿಂತ ಭಿನ್ನವಾಗಿ ಒಂದಿಷ್ಟು ಮಂದಿಗೆ ನೆನೆಪುಗಳು ಸುಂದರವಾಗಿದ್ದರೂ, ನೋವನ್ನೇ ತರಬಲ್ಲವು..
ನಿಸಾರರ ಈ ಭಾವಗೀತೆಯನ್ನು ನೋಡಿ..

ಎಲ್ಲ ಮರೆತಿರುವಾಗ ಇಲ್ಲಸಲ್ಲದ ನೆವವ
ಹೂಡಿ ಬರದಿರು ಮತ್ತೆ ಹಳೆಯ ನೆನಪೆ..
ಕಲ್ಲಿನಂದದಿ ಬಿದ್ದು ತಿಳಿಯಾದ ಎದೆಗೊಳವ
ರಾಡಿಗೊಳಿಸುವೆ ಏಕೆ ಮಧುರ ನೆನೆಪೇ...

ಕಪ್ಪು ಕಣ್ಣಿನ ನೆಟ್ಟ ನೋಟದರೆಚಣವನ್ನೆ
ತೊಟ್ಟು ಬಾಣದ ಹಾಗೆ ಬಾರದಿರು ನೆನಪೆ..
ಬಿರಿದ ತುಟಿಗಳ ತುಂಬು ನಗೆಯ ಕಾರಣವನ್ನೆ
ಹಿರಿದು ಕೊಲ್ಲಲು ಬಳಿಗೆ ಸಾರದಿರು ನೆನಪೆ...

ಸತ್ತ ಭೂತವನೆತ್ತಿ ಹತ್ತಿನಂದದಿ ತಂದು
ಎನ್ನ ಮನದಂಗಳಕ್ಕೆ ಹಾಕದಿರು ನೆನಪೆ..
ಭವ್ಯ ಭವಿತವ್ಯಕ್ಕೆ ಮುಖ ಮಾಡಿ ನಿಂತಿರುವೆ
ಬೆನ್ನಲ್ಲೆ ಇರಿಯದಿರು ಓ ಚೆನ್ನ ನೆನಪೆ...

ಬಹುಷಃ ಅದು ಎಷ್ಟೇ ಸುಮಧುರವಾಗಿದ್ದರೂ ಬದುಕನ್ನು ಬತ್ತಿಸುವ ವಿಷವಾಗಿ ಕಂಡಿರ ಬೇಕು ಅವರಿಗೆ...

ಬರೆಯುತ್ತಿರಿ..ನಾವೂ ಬೆಳೆದು, ಕನ್ನಡವನ್ನು ಸಹ ಬೆಳಸೋಣ..
ಅಂದ ಹಾಗೆ ನನ್ನ ಬ್ಲಾಗ್ ಸ್ಪಾಟ್ - www.bhaavajeevi.blogspot.com
ಎಂದಾದರೂ ಒಮ್ಮೆ ಬಿಡುವು ಮಾಡಿಕೊಂಡು ಬನ್ನಿ, ಕೂತು ಹರಟೋಣ!!

Shiv said...

ಭಾವಜೀವಿ,

ಪಾತರಗಿತ್ತಿಗೆ ಸ್ವಾಗತ !
ನೆನಪು ಮತ್ತು ಕನಸಿನ ಕರಾಮತ್ತಿನ ಬಗ್ಗೆ ತುಂಬಾ ಸೊಗಸಾಗಿ ಹೇಳಿದಿರಾ.

ಇನ್ನು ನಿಸಾರ್‍ರ 'ಎಲ್ಲ ಮರೆತಿರುವಾಗ ಇಲ್ಲಸಲ್ಲದ ನೆವವ'...ಕವನದ ಬಗ್ಗೆ ಎನು ಹೇಳೋದು..ಬಹುಷಃ ಇದಕ್ಕಿಂತ ಚೆನ್ನಾಗಿ ನೆನಪುಗಳ ಮಧುರ ನೋವನ್ನು ಬೇರೆ ವರ್ಣಿಸಲು ಆಗೋದಿಲ್ಲ..

ಭಾವಜೀವಗಳ ಬ್ಲಾಗ್ ಲೋಕಕ್ಕೆ ಬೇಗ ಬರ್ತೀನಿ..