Thursday, January 18, 2007

ಮಿಸ್ಟಿರೀ ಪಾಯಿಂಟ್

ಅವತ್ತು ನಾವು ಹೊರಟ ಜಾಗಕ್ಕೆ ಇದ್ದ ಹೆಸರಲ್ಲೇ ಒಂದು ಕೌತಕವಿತ್ತು... 'ಮಿಸ್ಟಿರೀ ಸ್ಪಾಟ್' !

ಕುಪರ್ಟಿನೋದಿಂದ ೨ ಗಂಟೆ ಡ್ರೈವ್ ನಂತರ ನಾವು ಒಂದು ಕಾಡಿನಂತ ಜಾಗ ಹೊಕ್ಕಾಗ ನಾವು ನಿಜಕ್ಕೂ 'ಮಿಸ್ಟಿರೀ ಸ್ಪಾಟ್' ಕಡೆ ಹೊರಟಿದ್ದಿವಾ ಅಥವಾ ಅದು ಎಲ್ಲಿದೆ ಅಂತಾ ಹುಡುಕೋದೇ ಒಂದು 'ಮಿಸ್ಟರೀ' ಆಗೋತ್ತೋ ಅಂತಾ ಅನಿಸಿಕೆ ನಮ್ಮಲ್ಲಿ. ರಸ್ತೆ ಫಲಕಗಳನ್ನು ಪಾಲಿಸಿಕೊಂಡು ಕೊನೆಗೂ ಆ ಕಾಡಿನ ಮಧ್ಯೆ ಒಂದು ಅತೀ ಚಿಕ್ಕ ಗುಡ್ಡದ ಹತ್ತಿರ ಬಂದು ನಿಂತೆವು. ಎದುರಲ್ಲೇ 'ಮಿಸ್ಟಿರೀ ಸ್ಪಾಟ್‍ಗೆ ಪ್ರವೇಶ ದ್ವಾರ' ಅಂತಾ ದೊಡ್ಡ ಫಲಕ.

೫ $ ಕೊಟ್ಟು ಪ್ರವೇಶ ಚೀಟಿ ಪಡೆದು, ಒಂದು ಹತ್ತು ನಿಮಿಷ ಕಾಯ್ದೆವು. ೨೦ ಜನರ ಗುಂಪು ಮಾಡಿ ಒಳೆಗೆ ಬಿಡ್ತಾ ಇದ್ದರು. ಒಬ್ಬ 'ಮಿಸ್ಟಿರೀ ಸ್ಪಾಟ್'ನ ಗೈಡ್ ಬಂದು ನಮ್ಮನ್ನು ಒಳೆಗೆ ಕರೆದುಕೊಂಡು ಹೋದ. ಮೊದಲು ಅವನು ಕರೆದುಕೊಂಡು ಹೋಗಿ ನಮ್ಮನೆಲ್ಲಾ ಒಂದು ಸ್ಥಳದ ಸುತ್ತ ನಿಲ್ಲಿಸಿದ. ಅಲ್ಲಿ ನಡುವಲ್ಲಿ ಇದ್ದವು ಎರಡು ಚಿಕ್ಕ ಸಿಮೆಂಟ್‍ನ ಕಟ್ಟೆ.ಗುಂಪಿನಿಂದ ೫ ಅಡಿ ಮತ್ತು ಐದುವರೆ ಅಡಿ ಎತ್ತರದ ಇಬ್ಬರನ್ನು ಕರೆದ ಗೈಡ್ ಅವುಗಳ ಮೇಲೆ ಎದುರುಬದುರಾಗಿ ನಿಲ್ಲಲು ಹೇಳಿದ. ಅಂತಾ ವಿಶೇಷವೇನು ಕಾಣಲಿಲ್ಲ.ಈಗ ಅವರಿಬ್ಬರಿಗೆ ಪರಸ್ಪರ ಜಾಗ ಬದಲಾಯಸಿಕೊಳ್ಳಲು ಹೇಳಿದ. ಈಗ ಕಾದಿತ್ತು ಆಶ್ಚರ್ಯ, ೫ ಅಡಿಯ ವ್ಯಕ್ತಿಯ ಎತ್ತರ ಐದುವರೆ ಅಡಿಯ ವ್ಯಕ್ತಿಯಷ್ಟೇ ಅನಿಸ್ತಾ ಇತ್ತು !

ಅದರ ಬಗ್ಗೆ ಯೋಚನೆ ಮಾಡ್ತ ಇದ್ದಾಗೆ ಮುಂದಿನ ಜಾಗಕ್ಕೆ ಹೋದೆವು.ಅದೊಂದು ಇಳಿಜಾರು. ನೀವು ಇಳಿಜಾರಿನಲ್ಲಿ ನಿಂತಾಗ ನಿಮ್ಮ ಕಾಲು, ಆ ಇಳಿಜಾರಿಗೆ ಯಾವ ಕೋನದಲ್ಲಿ ಇದೆ ನೋಡಿ. ೯೦ ಡಿಗ್ರಿ ಕೋನದ ಅಸುಪಾಸು ಇರುತ್ತೆ. ಆದರೆ ಇಲ್ಲಿ ನಮ್ಮ ಕಾಲು ಹಾಗೀರದೆ ಸುಮಾರು ೧೨೦ ಡಿಗ್ರಿ ಕೋನದಲ್ಲಿತ್ತೇ? ನಮಗೆ ಇನ್ನೂ ಆಶ್ಚರ್ಯ.ಅದು ಮುಗಿಯುವ ಮೊದಲು ಗೈಡ್ ಕರೆದುಕೊಂಡು ಹೋಗಿದ್ದು 'ಫನ್ ಹೌಸ್'ಗೆ.

ಮರದಿಂದ ಮಾಡಿದ ಆ ಮನೆ ನೆಲಕ್ಕೆ ೩೦ ಡಿಗ್ರಿ ಕೋನಕ್ಕೆ ಬಾಗಿ ವಿಚಿತ್ರವಾಗಿ ಕಾಣುತಿತ್ತು. ಗೈಡ್ ಈಗ ಒಂದು ಸಮದಟ್ಟವಾದ ಮರದ ಹಲಗೆಯ ಮೇಲೆ ಒಂದು ಚೆಂಡನ್ನು ಇಟ್ಟ. ಸಮದಟ್ಟವಾದ್ದರಿಂದ ಚೆಂಡು ಅಲ್ಲೇ ನಿಲ್ಲುತ್ತೆ ಅಂದುಕೊಳ್ಳುವಷ್ಟರಲ್ಲಿ ಅದು ಆಗಲೇ ಆ ಮನೆ ಕಡೆ ಉರುಳೋಕೆ ಶುರುವಾಗಿತ್ತು.ಈಗ ಆ ಮನೆ ಒಳೆಗೆ ಹೊಕ್ಕಾಗ ಯಾವುದೋ ಒಂದು ಕಾಣದ ಕೈ ದೂಕುವಂತ ಅನುಭವ. ನಾವೆಲ್ಲರೂ ನೆಲಕ್ಕೆ ೪೫ ಡಿಗ್ರಿಯಲ್ಲಿ ಇದ್ದೀವಿ ಅನಿಸ್ತಿತ್ತು. ಅದೇ ಕೋಣೆಯಲ್ಲಿದ್ದ ಟೇಬಲ್ ಮೇಲೆ ಹತ್ತಿದ ಗೈಡ್ ಮೆಟ್ರಿಕ್ಸ್ ಸಿನಿಮಾ ಶೈಲಿಯಲ್ಲಿ ಅಲ್ಲಿಂದ ಗಾಳಿಯಲ್ಲಿ ನೆಲಕ್ಕೆ ಸುಮಾರು ೩೦ ಡಿಗ್ರಿ ಕೋನದಲ್ಲಿ ನಿಲ್ಲುವುದೇ ! ನಾವು ನೋಡೇಬಿಡೋಣ ಅಂದುಕೊಂಡು ಆ ಟೇಬೆಲ್ ಮೇಲಿಂದ ನಿಂತು ಮುಂದೆ ಬಾಗಿದೆವು. ಅರೇ ! ನಾವು ಸಹ ಗೈಡ್‍ನಂತೆ ಗಾಳಿಯಲ್ಲಿ ನಿಂತಂತೆ ಭಾಸವಾಗ್ತಿತ್ತು.ಗುರುತ್ವಾಕರ್ಷಣೆಯ ನಿಯಮಗಳೆಲ್ಲಾ ಇಲ್ಲಿ ಮರೆತು ಹೋದಂತೆ ಕಾಣುತಿತ್ತು.

ಆ ಮನೆ ಒಳಗಿದ್ದ ಬಾಗಿಲಲ್ಲಿ ಜೋತು ಬಿದ್ದಾಗ ನಮ್ಮ ದೇಹ ಮತ್ತೆ ಯಾವ ಕಡೆಗೋ ಎಳೆದಂತೆ ಅನಿಸಿತು. ಬಾಗಿಲಿಂದ ಅಥವಾ ಎತ್ತರದ ಬಾರ್‌ನಿಂದ ಜೋತು ಬಿದ್ದಾಗ ನಮ್ಮ ದೇಹ ಆ ಬಾಗಿಲಿಗೆ ಅಥವಾ ಬಾರ್‌ಗೆ ಸಮಾನಂತರವಾಗಿರುತ್ತೆ.ಆದರೆ ಇಲ್ಲಿ ಬಾಗಿಲಿಗೆ ದೇಹ ಮತ್ತೆ ೪೫ ಡಿಗ್ರಿ ಕೋನದಲ್ಲಿರುವುದೇ.

ಎನೋ ವಿಚಿತ್ರವಾಗಿತ್ತು ಆ ಮರದ ಮನೆ !

ಅಲ್ಲಿಂದ ಹೊರಬಂದಾಗ ಗೈಡ್ ವಿವಿಧ ಎತ್ತರದ ೪-೫ ಜನರನ್ನು ಒಂದು ಕಟ್ಟೆ ಮೇಲೆ ಎತ್ತರಕ್ಕೆ ಅನುಗುಣವಾಗಿ ನಿಲ್ಲಲು ಹೇಳಿದ. ಎಲ್ಲಾ ಸರಿಯಾಗಿ ಇತ್ತು. ನಂತರ ಆ ಗುಂಪಿನಲ್ಲಿ ಅತೀ ಉದ್ದದ ಮತ್ತು ಅತೀ ಚಿಕ್ಕ ವ್ಯಕ್ತಿಗಳನ್ನು ಜಾಗ ಅದಲುಬದಲಿಸುವಂತೆ ಹೇಳಿದ. ಮತ್ತೆ ಆಶ್ಚರ್ಯ ಕಾದಿತ್ತು. ಅವರಿಬ್ಬರೂ ಒಂದೇ ಎತ್ತರದಲ್ಲಿರುವಂತೆ ಅನಿಸುತಿತ್ತು !

ಗೈಡ್ ಈಗ ಆ ಮನೆಯ ಸುತ್ತ ಇರೋ ಮರಗಳ ಬಗ್ಗೆ ಹೇಳ್ತಾ ಇದ್ದ. ಅಲ್ಲಿದ್ದ ಎಲ್ಲಾ ಮರಗಳು ವಿಚಿತ್ರವಾದ ಕೋನದಲ್ಲಿ ಬಾಗಿದಂತೆ ಅನಿಸ್ತಾ ಇದ್ದವು ಅಥವಾ ಗೈಡ್ ಹಾಗೇ ಹೇಳಿದ ಮೇಲೆ ಹಾಗೇ ಅನಿಸಿತೋ ತಿಳಿಯಲಿಲ್ಲ. ಅವನು ಹೇಳಿದ ಹಾಗೇ ಅಲ್ಲಿ ಒಂದು ಪಕ್ಷಿಗಳು ಇರಲಿಲ್ಲ.

ಅಲ್ಲಿಂದ ಹೊರಬಂದಾಗ ತಲೆಯಲಿ ನೂರೆಂಟು ಪ್ರಶ್ನೆ.

ಗೈಡ್ ಹೇಳಿದ ಹಾಗೇ ಇದು 'ವಿಜ್ಞಾನ ಉತ್ತರಿಸಿಲಾಗದ ಕೌತಕವೇ?' ಅಥವಾ ಇದೆಲ್ಲಾ 'ಆಪ್ಟಿಕಲ್ ಇಲ್ಯೂಷನ್' ಪ್ರಭಾವವೇ? ಅಥವಾ ಎಲ್ಲೋ ಓದಿದ ಹಾಗೇ ಅಲ್ಲಿರಬಹುದಾದ ವಿಪರೀತ ಖನಿಜದ ಪ್ರಭಾವವೇ ಅದು ? ಅಲ್ಲಿ ನಿಜವಾಗಿಯೂ ಗುರುತ್ವಾಕರ್ಷಣ ಶಕ್ತಿ ಬೇರೆ ಕಡೆ ಇದ್ದಾಗೆ ಇಲ್ಲವೇ? ಅಥವಾ ಇನ್ನೂ ಕೆಲವು ಜನ ಹೇಳುವಂತೆ ಅದು ಅನ್ಯಗ್ರಹಿಗಳು ಭೂಮಿಯಲ್ಲಿ 'ಹಾರುವ ತಟ್ಟೆ' ಬಚ್ಚಿಟ್ಟ ಸ್ಥಳವೇ?

ಪ್ರಶ್ನೆಗಳು ಪ್ರಶ್ನೆಗಳಾಗೇ ಉಳಿಯುತ್ತೆ...

ಮಿಸ್ಟಿರೀ ಪಾಯಿಂಟ್‍ನಿಂದ ನಾವು ಹೊರಟಿದ್ದು '೧೭ ಮೈಲಿಗಳ ಡ್ರೈವ್'ಗೆ . ಈ ಜಾಗ ಹೆಸರೇ ಹೇಳುವಂತೆ ೧೭ ಮೈಲಿಗಳ ಸುಂದರ ಕಡಲು ತೀರದ ಉದ್ದಕ್ಕೂ ಸಾಗುವ ರಸ್ತೆ. ಇದರಲ್ಲಿ ಸುಮಾರು ೨೦ ಪಾಯಿಂಟ್‍ಗಳು ಸಿಗುತ್ತೆ. ಅಲ್ಲಿಂದ ಫೆಸಿಪಿಕ್ ಎಷ್ಟು ಅದ್ಬುತವಾಗಿ ಕಾಣುತಿತ್ತು.ಫೆಸಿಪಿಕ್ ಗ್ರೂವ್‍ನಿಂದ ಶುರುವಾಗೋ ಇದು ಸ್ಪಾನಿಷ್ ಬೇ, ಪೆಬೆಲ್ ಬೀಚ್, ಬರ್ಡ್ಸ್ ಎನ್‍ಕ್ಲೋವ್, ಲೋನ್ಲಿ ಸೈಪ್ರ್‍ಅಸ್ ಟ್ರೀ..ಹೀಗೆ ಕೆಲವು ವಿಶಿಷ್ಟವಾದ ಪ್ರೇಕ್ಷಣೀಯ ಪಾಯಿಂಟ್‍ಗಳ ಮೂಲಕ ಹೋಗುತ್ತೆ.

೧೭ ಮೈಲ್ ಡ್ರೈವ್ ನಂತರ ನಾವು ಮರಳಿ ಕುಪರ್ಟಿನೋಗೆ ಹೊರಟಾಗ ಆಗಲೇ ಸಂಜೆ ಆಗುತಿತ್ತು.

ಅಂದು ಬೆಳಿಗ್ಗೆ ನೋಡಿದ 'ಮಿಸ್ಟಿರೀ ಪಾಯಿಂಟ್' ಬಗ್ಗೆ ಯೋಚಿಸುತ್ತಿದ್ದೆ, ಆಗ ಅನಿಸಿದ್ದು ಇವೆಲ್ಲಕ್ಕಿಂತ ಮಿಗಿಲಾದ ಒಂದು 'ಮಿಸ್ಟಿರೀ ಪಾಯಿಂಟ್' ಒಂದು ಇದೆ ಅಂತಾ. ಅದು ಬೇರೆ ಎಲ್ಲೂ ಇಲ್ಲ, ನಮ್ಮಲ್ಲೇ ಇರೋದು ಅದು. ಅದೇ ನಮ್ಮ ಮನಸ್ಸು ! ಸಂತಸ, ದುಃಖ, ಆಸೆ, ನಿರಾಸೆ, ಮೋಹ, ದಾಹ, ಸಿಟ್ಟು, ಕೋಪ, ಕರುಣೆ, ವಾತ್ಸಲ್ಯ..ಹೀಗೆ ಹತ್ತು ಹನ್ನೊಂದು ಭಾವನೆಗಳು ಹುಟ್ಟೋದು ಒಂದೇ ಜಾಗದಲ್ಲಿ, ಅದು ಮನಸೆಂಬ ಈ ಮಿಸ್ಟಿರೀ ಪಾಯಿಂಟ್‍ನಲ್ಲಿ.

ಈ ಮನಸಿಗಿಂತ ಬೇರೆ 'ಮಿಸ್ಟಿರೀ ಪಾಯಿಂಟ್' ಉಂಟೇ ?

18 comments:

Mahantesh said...

tumba mistary agidailla re nimma lekhana!!!!!..... adru premalokdalli telada avirige hege kanutte anno sanna gumaane barta ide :))))

mouna said...

naanu idara bagge keLiddu unTu, aadare neevu bahaLa vivarisiddiri. aa sthALA hege irodhu yaake antha tiLite?

howdu manassu ondu mystery ne. adu yavaaga, yenu maaDutte, munde yenu yochisuvudu yendu oohisalu sadhyavilla.

Sushrutha Dodderi said...

ಶಿವ್,
ಬಹುಶಃ ಭೂಮಿಗೆ ಮಿಸ್ಟರಿ ಪಾಯಿಂಟಿನಲ್ಲಿ ಗುರುತ್ವಾಕರ್ಷಣೆಯ ನಿಯಮ ಮರೆತುಹೋಗಿರಬೇಕು; ಅದಿಲ್ಲಾಂದ್ರೆ ನೀವು ಅಡ್ಡಡ್ಡ ನಿಂತ್ರೂ ಬೀಳಲಿಲ್ಲ ಅಂದ್ರೆ ಏನರ್ಥ? ನಾನು ಯೋಚಿಸ್ತಿದ್ದೆ: ನೇರವಾದ, ಮಟ್ಟಸವಾದ ರಸ್ತೆಯಲ್ಲೇ ಸರಿಯಾಗ ನಡೆಯಲು ಬಾರದ ಕುಡುಕರನ್ನು ಮಿಸ್ಟರಿ ಪಾಯಿಂಟಿಗೆ ಕರೆದೊಯ್ದರೆ ಹೇಗಿರಬಹುದು ಅಂತ...? :)

Unknown said...

ಶಿವ್,
ಲೇಖನ ಚೆನ್ನಾಗಿದೆ. ಮನಕ್ಕಿ೦ತ ಬೇರೆ ಕೌತುಕದ ಸ್ಥಳ ನಮಗೆಲ್ಲೂ ಸಿಗಲ್ಲ.
ಅ೦ದ ಹಾಗೆ Mystery Spotನ address ತಿಳಿಸಿದ್ರೆ ಚೆನ್ನಾಗಿರ್ತಿತ್ತು.

~ಹರ್ಷ

Shiv said...

ಮಹಾಂತೇಶ್,
ಛೇ ಛೇ...ಪ್ರೇಮಲೋಕಕ್ಕೂ ಇಲ್ಲಿನ ಮಿಸ್ಟಿರಿಗೂ ಯಾವುದೇ ಸಂಬಂಧವಿಲ್ಲ ಅಂತಾ ಸ್ಫಷ್ಟಪಡಿಸುತ್ತೇನೆ !

ಮೌನ,
ಆ ಸ್ಥಳ ಯಾಕೇ ಹಾಗಿದೆ ಅನ್ನೋದರ ಬಗ್ಗೆ ತುಂಬಾ ಥಿಯರಿಗಳು ಇವೆ.ಆದರೆ ಯಾವುದೂ ಸರಿಯಾಗಿ ವಿವರಣೆ ನೀಡಲ್ಲ.ಅದಕ್ಕೆ ಅದು ಮಿಸ್ಟರೀ ಆಗೇ ಉಳಿದಿದೆ.

ಮನಸ್ಸು...ಊಹೆಗೂ-ಕಲ್ಪನೆಗೂ ನಿಲುಕದ ಒಂದು ಅದ್ಬುತ ಅದು

ಸುಶ್ರುತ,
ಹಿಹೀ..ನಾನು ನನ್ನ ಸ್ನೇಹಿತರು ಮಿಸ್ಟಿರಿ ಪಾಯಿಂಟ್‍ನಲ್ಲಿ ಇದ್ದಾಗ ನೀವು ಹೇಳಿದ ಕುಡುಕುರ ವಿಚಾರ ಬಗ್ಗೆ ಮಾತಾಡಿದ್ದೇವಿ.
ಬಹುಷಃ ಮಂಗಕ್ಕೆ ಹೆಂಡ ಕುಡಿಸಿದಂಗೆ ಇರಬಹುದೇ ? ಅಥವಾ ಹೆಂಡದ ಪ್ರಭಾವ, ಮಿಸ್ಟಿರೀ ಪಾಯಿಂಟ್ ಪ್ರಭಾವ ಒಂದಕೊಂದು nullify ಆಗಿ ಅವರಿಗೆ ಎಲ್ಲಾ ಸಾಮಾನ್ಯವಾಗಿ ಕಾಣಬಹುದೇ?

bhadra said...

ಒಂದು ಕಾರ್ಟೂನ್ ಚಿತ್ರದಲ್ಲಿ ಈ ಜಾಗೆಯನ್ನು ನೋಡಿದ್ದೆ. ಚಿಕ್ಕ ಪರದೆಯ ಮೇಲೆ ನೋಡಿದುದರಿಂದಲೇನೋ ಮಿಸ್ಟರಿ ಪಾಯಿಂಟಿನ ಬಗ್ಗೆ ಅಷ್ಟು ಅನುಭವವಾಗಿರಲಿಲ್ಲ.
ಬಹಳ ಸೊಗಸಾದ ಸಚಿತ್ರ ಲೇಖನ ಓದುಗರಿಗೆ ನೀಡಿದುದಕ್ಕೆ ವಂದನೆಗಳು.
ನೀವು ನೋಡಿದ ಮಿಸ್ಟರಿ ಪಾಯಿಂಟಿಗಿಂತಲೂ ಮಿಗಿಲಾದ ಮಿಸ್ಟರಿ ಪಾಯಿಂಟ್ ಮನಸ್ಸು ಎಂದು ಹೇಳುವುದರಲ್ಲಿ ಸಂಶಯವೇ ಇಲ್ಲ. ಎಲ್ಲೆಲ್ಲಿಯೋ ನುಗ್ಗಿ, ಅಪರಿಚಿತರೊಳಗೆ ನುಗ್ಗಿ, ಪರಕಾಯಗಳ ಅನುಭವದ ಸ್ವಾದವನ್ನು ನೀಡುವ ಮನಸ್ಸು, ವಿಧ ವಿಧ ಆಕೃತಿಗಳನ್ನು ತೋರುವ ಮೋಡದಂತೆ. ಇಷ್ಟಾದರೂ ಅವೆರಡೂ ನಿರ್ಮಲ. ಸತ್ ಚಿತ್ ಆನಂದ.

ಒಳ್ಳೆಯದಾಗಲಿ

Shiv said...

ಶ್ರೀಹರ್ಷ,
'ಮಿಸ್ಟಿರಿ ಸ್ಪಾಟ್' ಇರೋದು ಕ್ಯಾಲಿರ್ಪೋನಿಯಾದ ಸಂತಾ ಕ್ರೂಸ್ ಅನ್ನುವಲ್ಲಿ.ಇದು ಸ್ಯಾನ್ ಫ್ರಾನ್ಸ್ ಸಿಸ್ಕೋದಿಂದ ಸುಮಾರು ೭೦ ಮೈಲಿ ದೂರದಲ್ಲಿದೆ.ಸುಮಾರು ೧.೫-೨ ಗಂಟೆ ಡ್ರೈವ್ ಆಗಬಹುದು.

ಅದರ ನಿಖರ ವಿಳಾಸ
The Mystery Spot
465 Mystery Spot Road
Santa Cruz, CA 95065

ಅಂದಾಗೆ ಇದೇ ತರದ್ದು ಇನ್ನೂ ಹಲವಾರಿ 'ಮಿಸ್ಟಿರೀ ಸ್ಪಾಟ್' ಜಗತ್ತಿನ ಹಲವಾರು ಭಾಗದಲ್ಲಿ ಇವೆ ಅಂತೆ.

Shiv said...

ತವಿಶ್ರೀ,
ಧನ್ಯವಾದಗಳು !
ಮೋಡದಂತೆ ಮನಸ್ಸು..ಚೆನ್ನಾಗಿದೆ ಉಪಮೆ..
ಅವೆರಡೂ ನಿರ್ಮಲ ??

Anveshi said...

ಶಿವ್ ಅವರೆ,
<"ಬಹುಷಃ ಮಂಗಕ್ಕೆ ಹೆಂಡ ಕುಡಿಸಿದಂಗೆ ಇರಬಹುದೇ ? ಅಥವಾ ಹೆಂಡದ ಪ್ರಭಾವ, ಮಿಸ್ಟಿರೀ ಪಾಯಿಂಟ್ ಪ್ರಭಾವ ಒಂದಕೊಂದು nullify ಆಗಿ ಅವರಿಗೆ ಎಲ್ಲಾ ಸಾಮಾನ್ಯವಾಗಿ ಕಾಣಬಹುದೇ?">

ನೀವು ಹೇಳಿದ್ದು ಸರಿ, ನಮ್ಮ ಪೂರ್ವಜರು ಮಿಸ್ಟರಿ ಪಾಯಿಂಟಿಗೆ ಹೋದಾಗ ಏನೂ ಆಗಿಲ್ಲವಂತೆ...!!

ಮಿಸ್ಟರಿ ಪಾಯಿಂಟಿನ ಹಿಸ್ಟರಿಯನ್ನು ಮನಸ್ಸಿಗೂ ಸರಿಯಾಗಿಯೇ ಹೋಲಿಕೆ ಮಾಡಿದ್ದೀರಿ... ಮರ್ಕಟ ಮನಸು!

Shiv said...

ಅಸತ್ಯಿಗಳೇ,

ನಿಮ್ಮ ಪೂರ್ವಿಕರ ಅಲ್ಲಿ ಮಾಡಿದ್ದೇನು ಅಂತಾ ಅನ್ವೇಷಣೆಗೆ ಹೊರಟಾಗ ಗುಲಾಬಿ ಹಿಡಿದ ಮಂಗದ ನೆನಪು ಬರದೇ ಇರಲಿಲ್ಲ :)

Satish said...

ಎಲ್ಲಾ ಮರದಿಂದ್ಲೇ ಕಟ್ತಾರಂತಲ್ಲ ಮನೀನ...ಅದೆಲ್ಲಿಂದ ತರತಾರ್ರೀ ಅಷ್ಟೊಂದು ವುಡ್ಡೂ, ಇಲ್ಲಿ ಒಂದ್ ಕೊಳ್ಳೋಕೆ ನಮ್ ಕೈಯಲ್ಲಿರೋ ದುಡ್ಡ್ ಸಾಲಂಗಿಲ್ಲ!

Shiv said...

ಕಾಲು ದಾದಾ,
ಹೌದುರೀ ಎಲ್ಲಾ ಮರದಿಂದೇ ಕಟ್ಟೋದು..
ಇಲ್ಲಿ ಕಾಡು ಪ್ರದೇಶ ಜಾಸ್ತಿ..ಸೋ ಮರಕ್ಕೆ ಎನೂ ಬರವಿಲ್ಲ

VENU VINOD said...

ಶಿವ, ಪೂಚಂತೇ ಅವರ ಮಿಲೇನಿಯಂ ಸೀರೀಸ್ ಕೃತಿಯೊಳಗಿನ ಬರಹ ಓದಿದ ಹಾಗೆ ಆಯ್ತು. ತುಂಬ ಉಪಯುಕ್ತ ಲೇಖನ

Shiv said...

ವೇಣು,

ಪಾತರಗಿತ್ತಿಗೆ ಸ್ವಾಗತ !

ತುಂಬಾ ದೊಡ್ಡ ಮಾತು..
ಪೂಚಂತೇ ಅವರ ಕೃತಿಗಳಲ್ಲಿ ತೆರೆದಿಡುವ ವಿಸ್ಮಯದ ಲೋಕಗಳಿಗೆ ಸಾಟಿವುಂಟೇ?

ನಿಮ್ಮ ಮೆಚ್ಚುಗೆ ಮಾತುಗಳಿಗೆ ವಂದನೆಗಳು

ಶ್ರೀನಿಧಿ.ಡಿ.ಎಸ್ said...

shiv,
chennnagi bardideeri kanri!

mala rao said...

ಶಿವು ಅವರೇ,
ಮಿಸ್ಟರಿ ಸ್ಪಾಟ್ ನ ರಹಸ್ಯವನ್ನು ಒಂದೆರಡು ವರ್ಷಗಳ ಹಿಂದೆ ಸ್ಟಾನ್ ಫರ್ಡೋ, ಬರ್ಕ್ಲೀದೋ ಪ್ರೊಫೆಸರ್ ಒಬ್ರು ಬಿಡಿಸಿದ ಬಗ್ಗೆ
`ಸ್ಯಾನ್ ಹೋಸೆ ಮರ್ಕ್ಯುರಿ ನ್ಯೂಸ್ ' ನಲ್ಲಿ ವಿವರವಾದ ಸಚಿತ್ರ ಲೇಖನ ಬಂದಿತ್ತು
ಅದರಲ್ಲಿ ಇದು ಸಾಮಾನ್ಯ ಜನರನ್ನು ದೋಚಲು ಇದೊಂದು ಕಣ್ಕಟ್ಟು ಅಂತ ಆಧಾರ ಸಮೇತ ನಿರೂಪಿಸಿದ್ದರು ವಿವರಗಳು ಸದ್ಯಕ್ಕೆ ನನಗೆ ನೆನಪಲ್ಲಿ ಇಲ್ಲ
ಗೂಗಲ್ಲಲ್ಲಿ ಹುಡುಕಿದರೆ ವಿವರಗಳು ಸಿಗಬಹುದೇನೋ

Shiv said...

ಶ್ರೀನಿಧಿ,

ಪಾತರಗಿತ್ತಿಗೆ ಸ್ವಾಗತ !
ಧನ್ಯವಾದಗಳು..

ಮಾಲಾ ಅವರೇ,
ಅದರ ಬಗ್ಗೆ ಎಲ್ಲೋ ಓದಿದ ನೆನಪಿದೆ..
ಅದು ಕಣ್ಕಟ್ಟು ಆದರೂ ಜನ ಮರುಳಾಗಿರೋದು ನಿಜ..
ಬ್ಲಾಗ್ ಭೇಟಿಗೆ ವಂದನೆಗಳು

jayaraj said...

ಚನ್ನಾಗಿದೆ ಪಾತರಗಿತ್ತಿಗೆ ಶುಭ ವಾಗಲಿ