Friday, December 12, 2008

ನಮಗೂ ಒಂದು ಮೊಸದ್ ಬೇಕೇ ?

ಅದಾಗಿ ೧೫ ದಿವಸ ಆಗ್ತಾ ಬಂತು..

ಅಲ್ಲಿ ಮುಂಬೈ ನಗರಿ ಕರಾಳ ಹಸ್ತಗಳಲ್ಲಿ ಸಿಲುಕಿ ಹಿಂಸೆ ಅನುಭವಿಸುತ್ತಿತ್ತು.ಆ ದೃಶ್ಯಗಳನ್ನು ನೋಡುತ್ತಿದ್ದಂತೆ, ಆಕ್ರೋಶ ಕುದಿಯತೊಡಗಿತ್ತು.

ಪಾಕಿ ವಿದೇಶಾಂಗ ಮಂತ್ರಿ ಅಲ್ಲಿ ಪಾಕಿಸ್ತಾನದಲ್ಲಿ ಕುಳಿತು, ಮುಂಬೈ ಘಟನೆಗೂ ಪಾಕಿಸ್ತಾನಕ್ಕೂ ಏನೂ ಸಂಬಂಧವಿಲ್ಲ ಎಂದು ಕತೆ ಹೇಳುತ್ತಿದ್ದ. ಸಿಎನ್‍ಎನ್‍ನಲ್ಲಿ ಅದನ್ನು ನೋಡುತ್ತಿದ್ದ ನನ್ನಾಕೆಗೆ ಬಂತು ನೋಡಿ ಸಿಟ್ಟು, 'ಈ ಪಾಕಿಸ್ತಾನದವರದು ಬರೀ ಇದೇ ಆಯ್ತು, ಮಾಡೋದೆಲ್ಲಾ ಮಾಡಿ ಈಗ ಏನೂ ಗೊತ್ತಿಲ್ಲಾ ಅಂತಾರೆ. ಏಕೆ ನಂಬಬೇಕು ಅವರು ಹೇಳೋದು' ಅಂತಾ ಎನ್‍ಡಿಟಿವಿ ಪ್ರಣಬ್‍ರಾಯ್ ತರನೇ ಕೇಳಿದಳು.

ಹೌದಲ್ವಾ ಅನಿಸ್ತು..

ಸಿಕ್ಕಬಿದ್ದ ಆ ಆತಂಕವಾದಿ ಕರಾಚಿಯವನಂತೆ, ಅಲ್ಲೇ ಪಾಕಿಸ್ತಾನದಲ್ಲಿ ಅವರಿಗೆ ತರಬೇತಿ ಕೊಟ್ಟು ಕಳಿಸಿದರಂತೆ ಅಂತಾ ಪತ್ರಿಕೆಗಳು ಪುಟಗಟ್ಟಲೆ ಬರೀತಾ ಇದ್ದರೆ, ಅಲ್ಲಿ ಪಾಕಿ ಅಧ್ಯಕ್ಷ 'ನಾವು ಅಷ್ಟೇ, ನಿಮ್ಮ ತರನೇ ಆತಂಕವಾದಿಗಳಿಂದ ನರಳುತ್ತಾ ಇದೀವಿ' ಅಂತಾ ಟಿವಿಯಲ್ಲಿ ಹೇಳಿದಾಗ, ಮೊದಲೇ ಕೆಟ್ಟ ತಲೆ ಇನ್ನೂ ಕೆಟ್ಟಾಗಿತ್ತು. ಟಿವಿ ನೋಡ್ತಾ ಇದ್ದ ನನ್ನಾಕೆ ಮುಖ ನೋಡಿದೆ, ಟಿವಿಯಲ್ಲಿದ್ದ ಆ ಅಧ್ಯಕ್ಷನನ್ನು ಗುರಾಯಿಸುತ್ತಿದ್ದಳು.

ಸ್ಪಲ್ಪ ದಿನದಲ್ಲೇ ಮತ್ತೆ ಶುರುವಾಯಿತು ನೋಡಿ ಗೂಬೆ ಕೂರಿಸುವ ಕೆಲಸ. ನೌಕದಳದವರು ಗುಪ್ತಚರ ಇಲಾಖೆ ಮೇಲೆ, ಅವರು ಇವರ ಮೇಲೆ..ನಡದೇ ನಡೀತು. ಎನ್‍ಎಸಿಜಿ ಕಮೊಂಡೋಗಳು ಬರೋಕೇ ಯಾಕೇ ಅಷ್ಟು ವಿಳಂಬವಾಯ್ತು ಅಂತಾ ಇನ್ನೊಂದು ಸುದ್ದಿ. ಇವುಗಳಿಗೆಲ್ಲಾ ಕಳಸವಿಟ್ಟಂತೆ ಮುಂಬೈ ಬೆಂಕಿಯಲ್ಲಿ ರಾಜಕೀಯ ಪಕ್ಷಗಳು ಬಿಸಿ ಕಾಯಿಸಿಕೊಳ್ಳೋಕೆ ಪ್ರಯತ್ನ ಮಾಡಿದ್ದು ಆಯ್ತು.

ಹಿಂದಿನ ವಿದ್ವಂಸಕಾರಿ ಘಟನೆಗಳಂತೆ , ಈ ಸಲನೂ ಏನೂ ಪಾಠ ಕಲಿದೇ, ಯಾರಿಗೂ ಪಾಠನೂ ಕಲಿಸದೇ, ಸ್ಪಲ್ಪ ದಿವಸ ಉದ್ವೇಗದಿಂದ ಮಾತಾಡಿ, ಮತ್ತೆ ಎಲ್ಲಾ ಮರೆತುಹೋಗ್ತಾ ಇದೀವಿ ಅನಿಸೋಕೆ ಶುರುವಾಯ್ತು.

ನನ್ನ ಅರ್ಧಾಂಗಿ ಕೇಳಿದಳು 'ಯಾಕೇ ಸೆಪ್ಟಂಬರ್ ೧೧ರ ದಾಳಿಯ ನಂತರ ಅಮೇರಿಕೆಯಲ್ಲಿ ಮತ್ತೆ ದಾಳಿ ಆಗಲಿಲ್ಲ? ನಮ್ಮಲ್ಲಿ ಯಾಕೇ ತಿಂಗಳಿಗೊಂದು ಆಗ್ತಾ ಇದೆ'.

ಪ್ರಶ್ನೆ ಪ್ರಶ್ನೆಯಾಗೇ ಉಳಿದು ಹೋಯ್ತು..

ಇವೆಲ್ಲದರ ಮಧ್ಯೆ ನಿಜಕ್ಕೂ ಮಿಂಚಂತೆ ಬೆಳಗಿದ್ದು, ನಮ್ಮ ಪೋಲಿಸ್, ನಮ್ಮ ಕಮೊಂಡೋಗಳ ನಿಸ್ವಾರ್ಥ ತ್ಯಾಗ, ವೀರ ಹೋರಾಟ. ಒಂದೊಂದು ವೀರೋಚಿತ ಕತೆಯು ನಮ್ಮ ಸೇನೆಯ ಬಗ್ಗೆ, ನಮ್ಮ ಪೋಲಿಸ್ ಬಗ್ಗೆ ಇನ್ನೂ ಹೆಚ್ಚು ಆಭಿಮಾನದ ಕಿಚ್ಚು ಹೊತ್ತಿಸಿತು.

ಇದೇ ಪೋಲಿಸ್‍ನವರ ಬಗ್ಗೆ ಅಲ್ವಾ, ನಮ್ಮ ಸಿನಿಮಾಗಳಲ್ಲಿ ಲಂಚಕೋರರು-ಕೆಲಸಕ್ಕೆ ಬಾರದವರು ಅಂತಾ ತೋರಿಸಿದ್ದು, ನಾವು ಹೌದು-ಹೌದು ಅಂದಿದ್ದು.ಅದೇ ಖಾಕಿ ಪೋಲಿಸ್‍ನಲ್ಲಿ ಕೆಲ ದಿಟ್ಟಿಗರು, ಅಲ್ಲಿ ಸಿಎಸ್‍ಟಿ ನಿಲ್ದಾಣದಲ್ಲಿ ಕೈಯಲ್ಲಿ ಹಳೇ ರೈಫಲ್/ಬಂದೂಕು ಹಿಡಕೊಂಡು, ಆ ಎಕೆ೪೭-ಗ್ರೆನೇಡ್ ವಿರುದ್ಧ ಹೋರಾಡುತ್ತಿದ್ದರು. ಮತ್ತೊಂದು ಕಡೆ ಅಲ್ಲಿ ತಾಜ್ ಹೋಟೆಲ್‍ನಲ್ಲಿ, ಒಬ್ಬ ಪೋಲಿಸ್ ಆಧಿಕಾರಿ ೬ ಪೇದೆಗಳೊಂದಿಗೆ ಅಲ್ಲಿದ್ದ ಉಗ್ರರೊಂದಿಗೆ, ಕಮಾಂಡೋಗಳು ಬರೋವರೆಗೆ ಹೋರಾಟ ಮಾಡ್ತಾನೇ ಇದ್ದರು..

ಇದೆಲ್ಲದರ ಮಧ್ಯೆ , ಯಾಕೋ ಇಸ್ರೇಲಿ ಗುಪ್ತಚರ ಸಂಸ್ಥೆ 'ಮೊಸದ್' ನೆನಪಾಯ್ತು.

೧೯೭೨ರ ಮ್ಯುನಿಚ್ ಒಲಂಪಿಕ್‍ನಲ್ಲಿ ೧೧ ಇಸ್ರೇಲಿ ಒಲಂಪಿಯನ್‍ರನ್ನು ಉಗ್ರರು ನುಗ್ಗಿ ಹತ್ಯೆ ಮಾಡಿದ್ದರು. ಇಸ್ರೇಲ್ ಸರ್ಕಾರ ತನ್ನ ಗುಪ್ತಚರ ಸಂಸ್ಥೆಗೆ ಒಂದಂಶದ ಆದೇಶ ನೀಡಿತು - 'ಇದಕ್ಕೆ ಕಾರಣರಾದವರಿಗೆ ಶಿಕ್ಷೆಯಾಗಬೇಕು'. ಮೊಸದ್ ಮುಂದಿನ ಹಲವು ವರ್ಷಗಳ ಕಾಲ ಆ ಹಿಂಸೆಗೆ ಕಾರಣರಾದವರನ್ನು ಜಾಲಾಡಿತು, ವಿವಿಧ ತಂತ್ರಗಳಿಂದ ಅವರನ್ನು ಮುಗಿಸಿತು.

ನಮ್ಮಲ್ಲಿ ಆ ತರದ ಒಂದು ಧೃಡ ನಿರ್ಧಾರ ತೆಗೆದುಕೊಳ್ಳುವವರು, ಈ ತರ ನಮ್ಮ ತಂಟೆಗೆ ಬಂದಾಗ, ಅದಕ್ಕೆ ಮರು ಉತ್ತರ ಕೊಡುವವರು ಬೇಕಲ್ವಾ ..

4 comments:

ಸುಪ್ತದೀಪ್ತಿ suptadeepti said...

ನಮಗೂ ಒಂದು ಮೊಸ್ಸದ್.... ಹೌದು! ಬೇಕು!!

ಮೊದಲಾಗಿ ಈ ಕೇಡಿ ರಾಜಕಾರಿಣಿಗಳಿಂದ ಮುಕ್ತವಾದ ಒಂದು ಮೊಸ್ಸದ್...
ನಂತರ ಕೆಟ್ಟ ನಿರಂಕುಶ ಧುರೀಣರಿಂದ ದೂರವಾಗಿರುವ ಒಂದು ಮೊಸ್ಸದ್...
ಆಮೇಲೆ ಸ್ವಾರ್ಥಿ ಕರೋಡ್'ಪತಿಗಳಿಂದ ಹೊರಗಿರುವ ಒಂದು ಮೊಸ್ಸದ್...
ಜೊತೆಗೆ ದುಷ್ಟ ಡಾನ್'ಗಳಿಂದ ಮುಟ್ಟಲಾಗದ ಒಂದು ಮೊಸ್ಸದ್...

ಇಂಥ ಒಂದೇಒಂದು ಸಂಸ್ಥೆ ಸಾಧ್ಯವಿದ್ದರೆ...
ನಮಗದೇ ಬೇಕಾಗಿದೆ.

Shiv said...

ಸುಪ್ತದೀಪ್ತಿ,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ಇಂಥ ಒಂದು ಸಂಸ್ಥೆ ಇವಾಗಲಾದರೂ ಸಾಧ್ಯವಾದರೆ ಸಾಕು..

ತೇಜಸ್ವಿನಿ ಹೆಗಡೆ said...

ದುರದೃಷ್ಟವೆಂದರೆ ನಮ್ಮಲ್ಲಿ "ಮೌಲಾನಾ ಮಸೂದ್"ಅಂತವರು ಬೇಕಾದಷ್ಟಿದ್ದಾರೆ. ಅದಕ್ಕೇ ತಾನೇ ಉಗ್ರರು ಸಾಮಾನ್ಯರ ವೇಶ ಧರಿಸಿ ದೇಶದೊಳಗೆಲ್ಲಾ ಸುಲಭವಾಗಿ ನುಸುಳಿರುವುದು!!

sunaath said...

ಶಿವೂ,
ಸಿಕ್ಕಿಬಿದ್ದವರನ್ನೇ ನೇಣಿಗೆ ಹಾಕದೆ ಸುಮ್ಮನೆ ಕಾಲ ದೂಡುತ್ತಿರುವ
ನಾವು, ಮೊಸಾದ್ ತರಹ ಮುನ್ನುಗ್ಗಿ ಹಂತಕರನ್ನು ಹೊಡೆಯುವದು ಸಾಧ್ಯವೆ?