ಅದು ಸುಮಾರು 90ರ ದಶಕದ ಮಧ್ಯದ ಸಮಯ ಅನಿಸುತ್ತೆ. ಬೆಂಗಳೂರಿಗೆ ಭಾರತದಲ್ಲೇ ಮೊದಲ ಕೆ ಎಫ್ ಸಿ ಬಂದದ್ದು. ಬ್ರಿಗೇಡ್ ರೋಡಿನಲ್ಲಿದ್ದ ಆ ಕೆ ಎಫ್ ಸಿ ವಿರುದ್ಧ ಪ್ರತಿಭಟನೆ ನಡೆಯಿತೆಂದು ಓದಿದ ನೆನಪು. ಹಾಗೇ ಅದರ ಆಸುಪಾಸಿನಲ್ಲೇ ಪಿಜ್ಜಾ ಹಟ್ ಸಹ ಬಂದಿದ್ದು ಅನಿಸುತ್ತೆ. ಆಗಲೇ ನಮ್ಮ ಜನರೇಶನಿನವರಿಗೆ ‘ಜಾಗತೀಕರಣ’ ಅರಿವಾಗಿದ್ದು, ದೋಸೆ-ಇಡ್ಲಿ ಎನ್ನುವವರ ಕಿವಿ-ಬಾಯಿಗಳಿಗೆ ಬರ್ಗರ್, ಪಿಜ್ಜಾನಂತಹ ಪದಗಳ ಪ್ರವೇಶವಾಗಿದ್ದು.
ವಸುಧೇಂದ್ರ ಅವರ 'ರೇಷ್ಮೆ ಬಟ್ಟೆ' ಓದುತ್ತಿದ್ದಂತೆ , ನಮ್ಮ ಕಣ್ಣ ಮುಂದೆಯೇ ಇವೆಲ್ಲಾ ನಡೆದು ಹೋದದ್ದು , ಅರಿವಿಲ್ಲದೆಯೇ ಜಾಗತೀಕರಣದ ಭಾಗವಾಗಿದ್ದು ಭಾಸವಾಯಿತು. ಆದರೆ ಈ ಜಾಗತೀಕರಣವೆಂಬುದು ಇಂದು-ನಿನ್ನೆಯದ್ದಲ್ಲ. ಅದು ಯಾವುದೋ ಕಾಲದಿಂದ ನಡೆದು ಬಂದದ್ದು ಎಂಬುದನ್ನು ರೇಷ್ಮೆ ಬಟ್ಟೆ ಪುಟ ತಿರುಗಿಸಿದ್ದನಂತೆ ಖಾತ್ರಿಯಾಗತೊಡಗಿತು.
ಇತಿಹಾಸದ ಕಂಬಗಳಿಗೆ ಕಲ್ಪನೆಯ ಹಂದರ ಹಾಕಿ, ಪ್ರಭಾವಿ ಪಾತ್ರಗಳ ಮಾಲೆ ತೊಡಿಸಿ , ಅಲ್ಲೊಂದು ಇಲ್ಲೊಂದು ಧರ್ಮದ ತೂಗುದೀಪ ಇಳಿಬಿಟ್ಟರೆ … ಅದೇ ರೇಷ್ಮೆ ಬಟ್ಟೆ !
ನಾವು ಬೆಳೆದ ಅಥವಾ ನಮ್ಮ ಸುತ್ತಲಿನ ಪರಿಸರದ ಆಧಾರಿತವಾಗಿ ತಕ್ಕ ಮಟ್ಟಿಗೆ ಶ್ರಮಪಟ್ಟರೆ ಒಂದು ಪ್ರಪಂಚವನ್ನು ಓದುಗರಿಗೆ ಕಟ್ಟಿಕೊಡುವುದು ಸುಲಭವೆನಿಸುತ್ತೆ. ಅದೇ ಕಾಣದ ಕೇಳದ ಕಾಲದ ಒಂದು ಕಲ್ಪನಾ ಪ್ರಪಂಚ ರಚಿಸುವುದು ಎಂತಹ ಲೇಖಕನಿಗೂ ಒಂದು ಸವಾಲೇ ! ವಸುಧೇಂದ್ರ ಇಷ್ಟವಾಗುವುದು ಅವರು ಕಟ್ಟಿರುವ 2ನೇ ಶತಮಾನದ ಈ ಒಂದು ಪ್ರಪಂಚದ ಚಿತ್ರಣದಲ್ಲಿ..
2000 ವರ್ಷಗಳ ಹಿಂದೆ ಚೀನಾದಿಂದ ರೋಮ್ ದೇಶದವರೆಗೆ ಇದ್ದದ್ದು ‘ಸಿಲ್ಕ್ ರೂಟ್’ . ಈ ವ್ಯಾಪಾರದ ರಸ್ತೆ ಹಾದು ಹೋಗಿದ್ದು ಅನೇಕ ದೇಶ-ಪ್ರದೇಶಗಳ ಮೂಲಕ. ಅದು ಹೇಗೆ ಒಂದು ವ್ಯಾಪಾರದ ರಸ್ತೆ ಸ್ಥಳೀಯ ಸಂಸ್ಕೃತಿಯ ಮೇಲೆ ಪರಿಣಾಮ ಬೀರಿತು. ಅದರಿಂದ ಅದು ಹೇಗೆ ಭಾಷೆ-ವೇಷ-ಮನುಷ್ಯ ಬದಲಾದ ಎನ್ನುವುದು ಕಾದಂಬರಿಯ ಸಾರ. ಪುರುಷಪುರ, ಬಾಹ್ಲಿಕಾ, ಸಮರಖಂಡ ಮತ್ತು ಲುವೊಯಾಂಗ್ , ಈ ನಾಲ್ಕು ಪ್ರದೇಶಗಳು ಹೇಗೆ ಈ ರೇಷ್ಮೆ ದಾರಿಯಲ್ಲಿ ಬದಲಾದವು, ಅದು ಹೇಗೆ ತಳಕು ಹಾಕಿಕೊಂಡವು ಎನ್ನುವುದು ವಿಭಿನ್ನ ಪಾತ್ರಗಳು ಮತ್ತು ಹೃದಯಕ್ಕೆ ಹತ್ತಿರವಾಗುವ ಅವುಗಳ ಕತೆಗಳ ಮೂಲಕ ಅನಾವರಣವಾಗುತ್ತಾ ಸಾಗುತ್ತದೆ.
ಕಾದಂಬರಿ ಓದಿಸಿಕೊಂಡು ಹೋಗುತ್ತೆ ಅಂದರೆ ತಪ್ಪಾಗುತ್ತದೆ. ಓದಿಸಿಕೊಂಡು ಹೋಗುವ ಜೊತೆಗೆ ಚಿಂತನೆಗೂ ಹಚ್ಚುತ್ತದೆ. 2000 ವರ್ಷದ ಹಿಂದಿನ ಕತೆಯಾದರೂ ಅಲ್ಲಲ್ಲಿ ಬರುವ ಕೆಲವೊಂದು ಪ್ರಶ್ನೆಗಳಿಗೆ ಈಗಲೂ ನಮ್ಮ ಬಳಿ ಉತ್ತರವಿಲ್ಲವೆನಿಸುತ್ತೆ. ಧರ್ಮ-ರಾಜಕೀಯ, ಕಾಡು-ನಾಡು, ಪರ್ವತ-ಮರುಭೂಮಿ, ವಜ್ರ-ರೇಷ್ಮೆ , ಸನ್ಯಾಸಿ-ಸಂಸಾರಿ, ಹೀಗೆ ಹಲವಾರು ತದ್ವಿರುದ್ಧವೆನಿಸಬಹುದಾದ ಸಂಗತಿಗಳು ಘರ್ಷಿಸಿ, ಕೊನೆಗೆ ಅವುಗಳೆಲ್ಲಾ ತಾರ್ಕಿಕ ಅಂತ್ಯವಾಗುವುದು ಖುಷಿ ನೀಡುತ್ತದೆ.
ನನಗೆ ತಿಳಿದ ಮಟ್ಟಿಗೆ ಕನ್ನಡದಲ್ಲಿ ಹಳೆಯ ಚೀನಾದ ಸಾಮಾಜಿಕ ಸ್ತರಗಳ ಬಗ್ಗೆ ಇಷ್ಟು ಚೆನ್ನಾಗಿ ಬರೆದಿದ್ದು ಕಡಿಮೆ, ಅಲ್ಲಿನ ವಿವಿಧ ಶ್ರೇಣಿಯ ಪ್ರಜೆಗಳು, ಭ್ರಷ್ಟಾಚಾರ, ವಾಮಾಚಾರ , ಗೃಹಿಣಿಯರ ಬಗ್ಗೆ ಬರೆದಿರುವುದು ಸೋಜಿಗವೇ ಸರಿ.
ವ್ಯಾಪಾರ-ವಾಣಿಜ್ಯದಲ್ಲಿ ಜನ ಸಾಮಾನ್ಯರ ಬದುಕು ಹೇಗೆ ಬದಲಾಯಿತು ಎನ್ನುವುದರ ಜೊತೆಗೆ ಮತ್ತೊಂದು ಸುಂದರ ಚಿತ್ರಣವೆಂದರೆ ಅದು ಧರ್ಮಗಳದ್ದು. ಬೌದ್ಧ, ಪಾರಿಸಿಕ, ವೈದಿಕ, ಕಾನ್ ಪ್ಯೂಷಿಯಸ್, ತಾವೋ ಧರ್ಮಗಳ ಸಾರವನ್ನು ಬಟ್ಟಿಯಿಳಿಸಿ, ಅದನ್ನು ಹಿತವಾಗಿ ಅಲ್ಲಲ್ಲಿ ನೀಡಿದ ರೀತಿ ಇಷ್ಟವಾಗುತ್ತದೆ. ನನ್ನ ಪ್ರಕಾರ ಮಹಿಳಾ ಪಾತ್ರಗಳು ಹೆಚ್ಚು ಅಳ ಮತ್ತು ಪರಿಣಾಮಕಾರಿ ಅನಿಸುತ್ತವೆ.
ಕತೆಯ ಕೆಲವು ಎಳೆಗಳನ್ನು ಹಾಗೆಯೇ ಕೂಡಿಸದೆ ಬಿಟ್ಟ ಹಾಗಿದೆ. ಅದು ಪ್ರಯತ್ನಪೂರ್ವಕವಾಗಿ ಮಾಡಿದ್ದೋ ಅಥವಾ ಭಾಗ ಎರಡಕ್ಕೆ ಬಿಟ್ಟಿರುವುದೋ ತಿಳಿಯಲಿಲ್ಲ.
ಇದೊಂದು ಮ್ಯಾಗ್ನ್ಯಾಯಂ ಓಪಸ್. ಇಲ್ಲಿ ಕ್ಯಾನ್ವಾಸ್ ಮತ್ತು ಚಿತ್ರಣದ ವ್ಯಾಪ್ತಿ ದೊಡ್ಡದ್ದು. ಒಮ್ಮೆ ಕಾಡಿನ ಆಳದಲ್ಲಿ, ಇನ್ನೊಮ್ಮೆ ಗುಹೆಗಳಲ್ಲಿ, ಅಲ್ಲಿ ನಗರಗಳ ಬೀದಿಯಲ್ಲಿ , ಮತ್ತೆ ಅಲ್ಲಿ ಮರುಭೂಮಿಯಲ್ಲಿ ಪಾತ್ರಗಳೊಂದಿಗೆ ನೀವು ಪಯಾಣಿಸುತ್ತೀರಿ. ವಿಶಾಲ ವ್ಯಾಪ್ತಿಯಲ್ಲಿ ಸಾಗುತ್ತಾ ಕೆಲವೊಂದೆಡೆ ಪಾತ್ರಗಳ ಮೇಲೆ ಕೇಂದ್ರೀಕರಿಸುತ್ತಾ ನಡೆಯುತ್ತದೆ. ನೀವು ಎಲ್ಲೇ ಹೋದರೂ ಯಾವ ಕತೆಯ ಭಾಗವಾದರೂ, ರೇಷ್ಮೆ ದಾರಿಯಲ್ಲಿ ನಿಮ್ಮ ಜೊತೆ ಯಾವಾಗಲೂ ಸಾಗುವುದು ಮಾತ್ರ ತಥಾಗತ ಒಬ್ಬನೇ !
ರೇಷ್ಮೆ ಬಟ್ಟೆ ಕನ್ನಡದ ಮಟ್ಟಿಗೆ ಒಂದು ಅಪರೂಪದ ಪ್ರಯತ್ನ. ಅಂತಹ ಪ್ರಯತ್ನಗಳನ್ನು ಮೆಚ್ಚಬೇಕು.
No comments:
Post a Comment