Sunday, July 30, 2006

ಪ್ರೀತಿಯೆಂದರೆ ಇದೇನಾ ?

ಕಾಲೇಜ್ ದಿನದ ಸ್ನೇಹಿತರನ್ನು ಬಹಳ ವರ್ಷಗಳ ನಂತರ ಭೇಟಿ ಮಾಡೋದರಲ್ಲಿ ಎನೋ ಒಂದು ಸಂಭ್ರಮವಿರುತ್ತೆ.ಕಳೆದ ವಾರ ನನ್ನ ಒಬ್ಬ ಕಾಲೇಜ್ ಮಿತ್ರನನ್ನು ಸುಮಾರು ೫ ವರ್ಷಗಳ ನಂತರ ನೋಡುತ್ತಿದ್ದೆ. ಉಭಯಕೋಶಲೋಪರಿಯ ನಂತರ ನಮ್ಮ ಮಾತುಕತೆಗಳು ಕಾಲೇಜ್ ದಿನಗಳೆಡೆಗೆ ಹೊರಳಿದವು.

ಆ ದಿನಗಳೇ ಹಾಗೇ...

ವಯಸ್ಸು ಸಹ ಅಂತದ್ದೇ.ಎನೋ ಸಾಧಿಸಬೇಕೆಂಬ ಹಂಬಲ, ಕಣ್ಣುಗಳಲ್ಲಿ ನಾಳೆಯ ಕನಸುಗಳು, ಮನದ ಮೂಲೆಯಲೆಲ್ಲೋ ಅನಿಶ್ಚಿತತೆ ಹಾಗೂ ಯಾವಯಾವುದೋ ಅಕರ್ಷಣೆಗಳು.

ಮಿತ್ರನ್ನೊಂದಿಗೆ ಕಾಲೇಜ್ ದಿನಗಳ ಬಗ್ಗೆ ಮಾತಾಡುತ್ತಿರುವಾಗ ನೆನಪಾಗಿದ್ದು ಆ ಹುಡುಗನ ಕತೆ...

ಅವನೊಬ್ಬ ಕನಸುಗಳನ್ನು ತುಂಬಿಕೊಂಡ ಹುಡುಗ. ತುಂಬಾ ಶ್ರಮಜೀವಿ. ತನ್ನ ಇತಿಮಿತಿಗಳನ್ನು ಅರಿತು ನಡೆವ ಹುಡುಗ.ಇಂತಹ ಸ್ಥಿತಪ್ರಜ್ಞ ಹುಡುಗ ಬಹುಷಃ ತಾನಾಯಿತು ತನ್ನ ಓದಾಯಿತು ಅಂತ ಇರುತ್ತದ್ದನೋ ಎನೋ, ಆ ಹುಡುಗಿ ಇಲ್ಲದಿದ್ದರೆ....

ಆ ಹುಡುಗಿ...ಸರಳ ಮತ್ತು ಸೌಜನ್ಯದ ಪ್ರತೀಕ. ಸ್ನೇಹ ಬೆಳಯಲು ತುಂಬಾ ದಿನ ಬೇಕಾಗಲಿಲ್ಲ. ಎಂತಹ ಮಧುರ ಸ್ನೇಹವದು..ಆ ಹುಡುಗಿಗೆ ಯಾಹೂನಲ್ಲಿ ಐಡಿ ಕ್ರಿಯೇಟ್ ಮಾಡಿ, ಹೇಗೆ ಚಾಟು ಮಾಡುವುದು ಅಂತ ನಮ್ಮ ಹುಡುಗ ಹೇಳಿಕೊಟ್ಟಿದ್ದ. ಹಾಗೆಯೇ ಹುಡುಗನ ಬಗ್ಗೆ ಎನೋ ಭರವಸೆ-ನಂಬುಗೆ ಆ ಹುಡುಗಿಯಲ್ಲಿ.

ಅದು ಯಾರು ಯಾವ ಮಹೂರ್ತದಲ್ಲಿ ಹೇಳಿದರೋ..'ಒಬ್ಬ ಹುಡುಗ ಒಬ್ಬ ಹುಡುಗಿ ಒಳ್ಳೆ ಸ್ನೇಹಿತರಾಗೇ ಇರಲು ಸಾಧ್ಯವೇ ಇಲ್ಲ'.

ಅದು ಎನಾಯಿತೋ ಎನೋ ಆ ಹುಡುಗನಿಗೆ ಆ ಹುಡುಗಿಯ ಬಗ್ಗೆ ಸ್ನೇಹಕ್ಕಿಂತ ಮಿರಿದ ಸೆಳೆತ ಶುರುವಾಯಿತು. ಹುಡುಗ ತಾನು ಮಾಡುತ್ತಿರುವದು ಸರಿಯೇ ಅನ್ನೋ ಗೊಂದಲ. 'ಈಗ ಇರೋ ಸ್ನೇಹಕ್ಕೂ ದ್ರೋಹ ಬಗೆತಿದಿಯಾ' ಅಂತ ಒಂದು ಸರ್ತಿ ಮನಸ್ಸು ಹೇಳಿದರೆ, ಇನ್ನೊಂದು ಸಲ ಅದೇ ಮನಸ್ಸು ಹೇಳಿತು 'ಸ್ನೇಹವಿಲ್ಲದೆ ಪ್ರೀತಿ ಇರೋಕೆ ಸಾಧ್ಯ ಇಲ್ಲ, ನಿನ್ನ ಭಾವನೆಗಳು ಸರಿ'.

ಆಂತು ಇಂತು ಧೈರ್ಯ ಮಾಡಿ ಒಂದು ದಿನ ಆ ಹುಡುಗಿಗೆ ನಮ್ಮ ಹುಡುಗ ಸೂಚ್ಯವಾಗಿ ತನ್ನ ಮನದ ಮಾತು ಬಿಚ್ಚಿಟ್ಟಿದ್ದ.ಆದರೆ ಅವನೆಂದುಕೊಂಡಂತೆ ಆಕೇ ಸಿಟ್ಟಿಗೇಳಲಿಲ್ಲ. ಬದಲಾಗಿ ತುಂಬಾ ಸೌಮ್ಯವಾಗಿ ಹುಡುಗನಿಗೆ 'ಇದು ಆಗದ ಹೋಗದ ಮಾತು.ನಾವಿಬ್ಬರು ಒಳ್ಳೆ ಸ್ನೇಹಿತರು.ಹಾಗೇ ಇದ್ದಬಿಡೋಣ' ಅಂದಿದ್ದಳು.

ಈ ರೀತಿ ಸಂದರ್ಭದಲ್ಲಿ ನಾನು ನೋಡಿರೋ ಪ್ರಕಾರ ಹುಡುಗರು ಎರಡು ರೀತಿಯಾಗಿ ವರ್ತಿಸುತ್ತಾರೆ. ಒಂದನೇಯ ಪ್ರಕಾರದವರು ಹುಡುಗಿ ಹೇಳಿದ್ದು ಒಪ್ಪಿಕೊಂಡು ಮಿತ್ರರಾಗಿ ಉಳಿದುಬಿಡ್ತಾರೆ. ಎರಡನೇಯವರು ಆವಾಗ ಒಪ್ಪಿಕೊಂಡರೂ ಮನದಲ್ಲಿ ಆ ಭಾವನೆ ಇದ್ದೆ ಇರುತ್ತೆ, ಮುಂದೊಂದು ದಿನ ಆಕೇ ಒಪ್ಪುತ್ತಾಳೆ ಅನ್ನೋ ಆಸೆವುಳ್ಳವರು.

ನಮ್ಮ ಹುಡುಗ ಎರಡನೇಯ ಪ್ರಕಾರದವನು. ಅದು ಆ ಹುಡುಗಿಗೆ ಗೊತ್ತಾದಗ ಈ ಸಲ ಸ್ಪಲ್ಪ ಖಾರವಾಗಿಯೇ ಹುಡುಗನಿಗೆ ಉತ್ತರ ಸಿಕ್ಕಿತ್ತು.ಇಷ್ಟರಲ್ಲಿ ಕಾಲೇಜ್ ಜೀವನ ಮುಗಿದು ನೌಕರಿ ಎಂಬ ಇನ್ನೊಂದು ಅಧ್ಯಾಯ ಶುರುವಾಗಿತ್ತು.ಅದರ ಮೊದಮೊದಲ ಸಂಭ್ರಮ ಆಚರಿಸುವ ಮೊದಲೇ ಆ ಹುಡುಗಿಯಿಂದ ಆ ಸುದ್ದಿ ಬಂದಿತ್ತು ಅಮಂತ್ರಣದೊಂದಿಗೆ...

ಆದಾಗಿ ಎಷ್ಟೋ ವರ್ಷಗಳು ಕಳೆದವೋ..ಈಗಲೂ ಅವರಿಬ್ಬರ ಮಧ್ಯೆ ಒಂದು ಮಾತಿಲ್ಲಿದ, ಮೇಲ್ ಇಲ್ಲದ ಮೌನದ ಬೇಲಿ.

ನನ್ನ ಸ್ನೇಹಿತನ ಭೇಟಿಯ ನಂತರ ಮರಳಿ ಬರುವಾಗ ನೆನಪಾಗಿದ್ದು ಇನ್ನೊಂದು ಪ್ರೀತಿಯ ಕತೆ..

ಇದು ಒಂದಾನೊಂದು ಅಫೀಸ್‍ನಲ್ಲಿ ಅರಳಿದ ಕತೆ. ಆತ ತುಂಬಾ ಸ್ನೇಹಮಯಿ,ಹಾಸ್ಯಪ್ರಜ್ಞೆವುಳ್ಳ ಒಬ್ಬ ಉತ್ಸಾಹಿ ಯುವಕ.ಅದೇ ಅಫೀಸ್‍ನಲ್ಲಿದ್ದಾಳೆ ಆ ಯುವತಿ.ಇಬ್ಬರಿಗೂ ಸಮಾನ ಇಷ್ಟವಾದ ಅನೇಕ ಅಭಿರುಚಿಗಳು.ಬಹು ಬೇಗನೆ ಬೆಳಯಿತು ಗಾಢ ಸ್ನೇಹ. ಅವರಿಬ್ಬರು ಮಾತಾಡದ ವಿಷಯವಿಲ್ಲ,ಪೋನ್-ಮೇಲ್-ಎಸೆಂಎಸ್ ಇಲ್ಲದ ದಿನಗಳಿಲ್ಲ.ದೋಸೆ,ಐಸ್‍ಕ್ರೀಮ್,ಪಾಸ್ತ,ಫಿಡ್ಜಾ..ಒಟ್ಟಿಗೆ ತಿನ್ನದ ಹೋಟೆಲ್‍ಗಳಿಲ್ಲ.

ದಿನಗಳೆದಂತೆ ಆಕೆಗೆ ಸ್ಪಷ್ಟವಾಗತೊಡಗಿತು ಅವರಿಬ್ಬರು ಸ್ನೇಹದ ಎಲ್ಲೆ ಮೀರುತ್ತಿದ್ದಾರೆ.ಆಕೆ ಅವನಿಗೆ ಹೇಳಿದ್ದಳು 'ಇದು ಆಗದ ಹೋಗದ ಮಾತು.ನಾವಿಬ್ಬರು ಒಳ್ಳೆ ಸ್ನೇಹಿತರು.ಹಾಗೇ ಇದ್ದಬಿಡೋಣ'. ಅವನಿಗೆ ಆವಾಗ ಅದು ಸರಿ ಅನಿಸಿ ಅದನ್ನು ಒಪ್ಪಿಕೊಂಡರೂ ಮನದ ಮೂಲೆಯಲ್ಲಿ ಆ ಪ್ರೀತಿಯ ಭಾವನೆ ಇದ್ದೆ ಇತ್ತು. ಮೊದಲಿಗಿಂತಲೂ ಗಾಢವಾಗಿತ್ತು ಸ್ನೇಹ.

ಕೊನೆಗೆ ಒಂದು ದಿನ ಅವರ ಸಂಜೆ ಭೇಟಿಯಲ್ಲಿ ಆಕೆ ಅವನಿಗೆ ಆ ಸುದ್ದಿ ಹೇಳಿದ್ದಳು. ಅವನಿಗೆ ಅದು ಅನಿರೀಕ್ಷಿತವಲ್ಲದಿದ್ದರೂ ಮನದಲ್ಲಿ ಒಂದು ನೋವಿನ ಅಲೆ ಬಂದು ಅಪ್ಪಳಿಸಿತ್ತು. ಆಕೆಗೆ ಗೊತ್ತು ಅವನ ಮನದಲ್ಲಿ ನಡೆಯುತ್ತಿರುವ ಗದ್ದಲದ ಬಗ್ಗೆ, ಆದರೆ ಅವಳು ಆಸಹಾಯಕಳು?

ಅದೊಂದು ಅಶ್ರುತುಂಬಿದ ವಿದಾಯ...ಆದರೆ ಅವರ ನಡುವಿನ ನಿಷ್ಕಲ್ಮಶ ಸ್ನೇಹ ಮುಂದುವರೆದಿತ್ತು.ಅವಗೊಮ್ಮೆ ಇವಗೊಮ್ಮೆ ಕಳಿಸುವ ಮೇಲ್‍ಗಳು, ಅಪರೂಪದ ಪೋನ್‍ಕಾಲ್‍ಗಳು.ಅದೇ ಸ್ನೇಹ.. ಆದರೆ ಇಬ್ಬರಿಗೂ ಗೊತ್ತು ಎಲ್ಲಿ ಗೆರೆ ಎಳೆಯಬೇಕೆಂದು.

ಈ ಕತೆಗಳ ಬಗ್ಗೆ ಯೋಚಿಸುತ್ತಿರುವಾಗ ನನ್ನ ಸ್ನೇಹಿತೆಯೊಬ್ಬಳ ಕರೆ ಬಂತು.ಅವಳು ಬಹಳ ಗಲಿಬಿಲಿಗೊಂಡಿದ್ದಳು. ೨-೩ ತಿಂಗಳುಗಳಿಂದ ಜೊತೆಗೆ ಕೆಲಸ ಮಾಡುವ ಅವಳ ಸಹೋದ್ಯೋಗಿಯೊಬ್ಬ ಅವಳ ಬಗ್ಗೆ ವಿಪರೀತ ಆಸಕ್ತಿ ಬೆಳಸಿಕೊಂಡಿದ್ದಾನೆ ಅಂತಾ ತಿಳಿಯಿತು.ನಂತರ ಮಾತುಕತೆಯ ನಂತರ ಸ್ಪಷ್ಟವಾಗಿದ್ದು ಅದರಲ್ಲಿ ಆಕೆ ಆ ರೀತಿ ಭಾವನೆ ಬರೋ ಹಾಗೆ ಮಾಡಿದ್ದು ಎನೂ ಇಲ್ಲ. ಅವಳು ಅವನಿಗೆ ಸ್ಪಷ್ಟವಾಗಿ ನಿರಾಕರಿಸಿ ಹೇಳಿದಳಂತೆ.

ನನ್ನ ಸ್ನೇಹಿತೆಗೆ ಕಿವಿಮಾತು ಹೇಳಿದೆ "Feeling of love is like sea waves, it keeps coming.Watch out !'

ಈ ಎಲ್ಲ ಎಪಿಸೋಡ್‍ಗಳನ್ನು ನೋಡಿದಾಗ ಮೂಡಿದ್ದು ಅನೇಕ ಪ್ರಶ್ನೆಗಳು....
೧. ಪ್ರೀತಿ ಅಥವಾ ಆ ಹೆಸರಿನ ಭಾವನೆಗಳು ಹೇಗೆ-ಯಾಕೆ ಮೊಳೆಯುತ್ತೆ?
೨. ಅಸಾಧ್ಯ ಅಂತಾ ಗೊತ್ತಿದ್ದರೂ ಕೊನೆಯ ಕ್ಷಣದವರೆಗೆ ಪ್ರೀತಿ ಮರಳಿ ಬರುತ್ತೆ ಅಂತಾ ಯಾಕೇ ಅಸೆ ಇರುತ್ತೆ?
೩. ಒಬ್ಬ ಹುಡುಗ-ಒಬ್ಬ ಹುಡುಗಿ ಒಳ್ಳೆ ಸ್ನೇಹಿತರಾಗೇ ಇರೋಕೆ ಸಾಧ್ಯನೇ ಇಲ್ವಾ?

ಪ್ರಶ್ನೆಗಳು ಕಾಡುತ್ತಿದ್ದಂತೆ ಬಂತು ಒಂದು ಸಂತಸದ ಸುದ್ದಿ. ನನ್ನ ಅತ್ಯಂತ ಅತ್ಮೀಯರಾದ ದಂಪತಿಗಳ ಕುಟುಂಬಕ್ಕೆ ಹೊಸ ಜೀವವೊಂದರ ಸೇರ್ಪಡೆ. ದಂಪತಿಗಳಿಬ್ಬರೂ ನನ್ನ ಕಾಲೇಜ್ ಸಹಪಾಠಿಗಳು ,ನಮ್ಮ ಮುಂದೆಯೇ ಅರಳಿದ ಪ್ರೀತಿಯದು, ಅವರು ಅನುಭವಿಸಿದ ನೋವು-ನಲಿವು ಎಲ್ಲ ತಿಳಿದ ನಾನು ಸಂಭ್ರಮದಿಂದ ಫೋನಾಯಿಸಿದೆ.

ಬಹುಷ: ಈ ಮೇಲಿನ ಪ್ರಶ್ನೆಗಳಿಗೆ ಉತ್ತರ ಇವರ ಹತ್ತಿರ ಉತ್ತರ ಸಿಕ್ಕರೂ ಸಿಗಬಹುದೇನೋ.ಆ ಕಡೆಯಿಂದ ನನ್ನ ಮಿತ್ರನ ಧ್ವನಿಯಲ್ಲಿ ಧನ್ಯನಾದೆ ಅನ್ನುವ ಭಾವನೆ..ಸಂತಸದ ಹೊನಲು..ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವಂತೆ ಇದ್ದ ಅವರ ಪ್ರೀತಿಯಲ್ಲಿ ಅರಳಿದ ಹೂವು.

ಬಹುಷಃ ಪ್ರೀತಿಯೆಂದರೆ ಇದೇನಾ?

16 comments:

Anonymous said...

ಶಿವ್,
ನಿಮ್ಮ ಮನದಲ್ಲಿ ಮೂಡಿದ ಪ್ರಶ್ನೆಗಳಿವು, ಅದನ್ನು ಹೀಗೆ

೧. ಪ್ರೀತಿ ಅಥವಾ ಆ ಹೆಸರಿನ ಭಾವನೆಗಳು ಹೇಗೆ-ಯಾಕೆ ಮೊಳೆಯುತ್ತೆ?

ಉ: ಪ್ರೀತಿ ಹುಟ್ಟಲು ಕಾರಣ ಬೇಕಿಲ್ಲ, ಅದೇ ರೀತಿ, ಅದು ಮುರಿದು ಬೀಳಲೂ ಕಾರಣಗಳು ಬೇಕಿಲ್ಲ.

೨. ಅಸಾಧ್ಯ ಅಂತಾ ಗೊತ್ತಿದ್ದರೂ ಕೊನೆಯ ಕ್ಷಣದವರೆಗೆ ಪ್ರೀತಿ ಮರಳಿ ಬರುತ್ತೆ ಅಂತಾ ಯಾಕೇ ಅಸೆ ಇರುತ್ತೆ?

ಉ: ಇಂಥ ನಿರೀಕ್ಷೆಯೇ ಅಲ್ಲವೇ ನಮ್ಮ ಜೀವನವನ್ನು, ಪ್ರೀತಿಯನ್ನು, ಭವಿಷ್ಯವನ್ನು ರೂಪಿಸೋದು ಮತ್ತು ಹೊಸತನ ತುಂಬೋದು?

೩. ಒಬ್ಬ ಹುಡುಗ-ಒಬ್ಬ ಹುಡುಗಿ ಒಳ್ಳೆ ಸ್ನೇಹಿತರಾಗೇ ಇರೋಕೆ ಸಾಧ್ಯನೇ ಇಲ್ವಾ?

ಉ: ಯಾಕೆ ಸಾಧ್ಯವಿಲ್ಲ? ಅನ್ನೋ ಪ್ರಶ್ನೆಯೇ ಇದಕ್ಕೆ ಉತ್ತರ.

bhadra said...

ಹುಡುಗ ಹುಡುಗಿಯ ಪ್ರೀತಿ ಪ್ರೇಮದ ಬಗ್ಗೆ ನನಗೇನೂ ಗೊತ್ತಿಲ್ಲ. ಅದೇ, ಮದುವೆಯಾದ ನಂತರದ ಪ್ರೀತಿ ಪ್ರೇಮದ ಬಗ್ಗೆ ಗೊತ್ತು. ಅದರಲ್ಲೇನಿದೆ ಹೇಳೋದು, ಎರಡು ಮಕ್ಕಳಗಿರೋದು ನೋಡಿದ್ರೇ ಗೊತ್ತಾಗೋಲ್ವೇ? ಹಾಂ! ಇದರಲ್ಲೊಂದು ಸ್ವಾರಸ್ಯಕರ ವಿಷಯವೆಂದರೆ ದಿನಕ್ಕೆ ಒಮ್ಮೆಯಾದರೂ ನಾವು ದಂಪತಿಗಳಿಬ್ಬರೂ ಜಗಳ ಆಡೇ ಆಡ್ತೀವಿ.

Anonymous said...

ಶಿವಣ್ಣ,
ನಿಜ ಹೇಳಬೇಕು ಅ೦ದರೆ ನನಗೆ ಪ್ರೀತಿ ಪ್ರೇಮ ಅ೦ದ್ರೆ ಗೊತ್ತೇ ಇಲ್ಲ ಅನಿಸುತ್ತೆ. ನಿನ್ನ ಲೇಖನ ಓದಿದ ಮೇಲೆ ತಿಳಿದುಕೊಳ್ಳೊ ಪ್ರಯತ್ನ ಮಾಡ್ತ ಇದ್ದಿನಿ. ನಿನ್ನ ಆ ೩ ಪ್ರಶ್ನೆ ನನ್ನ ತಲೇಲೂ ಉತ್ತರ ಸಿಗದೆ ಕಾಡಿಸುತ್ತಿದೆ. ಪ್ರೀತಿ ಅ೦ದರೆ ಗೊತ್ತಿಲ್ಲ, ಆದರೆ ಅದರ ಅನುಭವ ಆಗುತ್ತೆ, ಅದನ್ನು ಕಳೆದು ಕೊ೦ಡಾಗ ಅದರ ನೋವು ಜೀವನ ಪರಿಯ೦ಥ ಕಾಡುತ್ತೆ. ಭಹುಶ ಅದೇ ಪ್ರೀತಿಯ ನಿಯಮ!!!!!

Shiv said...

ಅವೀ,
ಹೂಂ..ನೀವು ಹೇಳಿದ ಉತ್ತರಗಳು ಸಮಂಜಸ ಅನಿಸುತ್ತೆ..ಆದರೂ ಅವು ಒಂದು ತರ ಯಕ್ಷಪ್ರಶ್ನೆಗಳೇ

ತವಿಶ್ರೀ,
ನೀವು ಬಹುಷಃ 'ಗಂಡಹೆಂಡಿರ ಜಗಳ ಉಂಡು ಮಲಗುವ ತನಕ' ಅನ್ನೋ ಗಾದೆಯನ್ನ ಚಾಚುತಪ್ಪದೇ ಪಾಲಿಸುತ್ತೀರ ಅನಿಸುತ್ತೆ..ದಿನ ದಿನ ಜಗಳನಾ :)

ಅನಾಮಾದೇಯವಾಗಿ ಕಾಮೆಂಟಿಸಿದ ಸುಪ್ಪಿ!
>ಪ್ರೀತಿ ಅಂದರೆ ಗೊತ್ತಿಲ್ಲ,ಆದರೆ ಅದರ ಅನುಭವ ಆಗುತ್ತೆ !!!
ಚಿಂತನಾರ್ಹ ಮಾತುಗಳು
ಅಂದಾಗೆ ನೂಯಾರ್ಕ್ ಪ್ರವಾಸದ ನಂತರ ತಾವು ಪ್ರೀತಿಯ ಬಗ್ಗೆ ಜಾಸ್ತಿ ಮಾತಾಡುತ್ತಿದೀರ ಅಂತಾ ಕೇಳಿದೆ??

Raghavendra D R said...

Shiv avare, bahala sundaravaadha baravaNige! maanava svabhaavannu channagi arithu barediddiri..thumba channagide! :)

naanu idhara bagge sumaaru yochane madiddini..mathu nanna opinion nimage "cynical" annisabahudhu. Aadhare, naanu nambuvudhu enandhare...preethi (saadharana drishti koNadalli, obba huduga avana priyathameya bagge enu bhaavane anubhavisathhano..or vice versa), adhu nishkalmasha preethi alla. adharalli yavagalu "an undercurrent of lust" iddhe idhe. preethi ennuvudhakke innu dodda artha idhe antha nanna nambike. udaharanege, mother theresa thanna saha jeevigaLa mele thorisidha preethi, nishkalamashavadaddhu. aa preethiya shakthi apaara. aadhare duraadrusta vashaath, naavu aa tarahadha shuddha preethiyaanu namma antharangadhalli moodisalu bahala saadhane agathya..

nanna anisike aste..
-Raghu

Shiv said...

ರಘು,

ನಿಮ್ಮ ಅನಿಸಿಕೆ ಸಿನಿಕತನದಿಂದ ಕೂಡಿದೆ ಅಂತಾ ಅಂದುಕೊಂಡರು ಅದರಲ್ಲಿ ನಿಜವಿದೆ.ನೀವು ಹೇಳಿದ ಪ್ರೀತಿ ಕೇವಲ ತೆರಸಾ ಅಂತಹ ಕರುಣಾಮಯಿಗಳಲ್ಲಿ ಇರುತ್ತೆ.ಅದಕ್ಕಿಂತ ಹೆಚ್ಚಿನದು ತಾಯಿಯ ಪ್ರೀತಿ.ಅದನ್ನು ಮಮತೆ ಅಂತಾನೂ ಕರಿಬಹುದು.

ಆದರೆ ಈ ಹುಡುಗ-ಹುಡುಗಿ ಪ್ರೀತಿ ಅತ್ಯಂತ ಹೆಚ್ಚು ಆಚರಿಸಲ್ಪಡುತ್ತದೆ.ಹಾಗೆಯೇ ಪ್ರೀತಿಯೆಂದೊಡನೆ ಅದೇ ನೆನಪಿಗೆ ಬರೋದು..

Satish said...

ಮಾನವ ಸಂಬಂಧ ಬಹಳ ಸಂಕೀರ್ಣವಾದದ್ದು, ಗಂಡು-ಹೆಣ್ಣಿನ ನಡುವೆ ಪ್ರಬುದ್ಧತೆ ಬೆಳೆದಂತೆಲ್ಲ 'ಪ್ರೀತಿ'ಯೂ ಹಲವಾರು ರೂಪಗಳನ್ನು ತಾಳುತ್ತದೆ, ವ್ಯಕ್ತಿ ಸಹಜವಾದ ಪ್ರೀತಿಗೆ ಸಮಾಜದ ಅಂದ ಚೆಂದಗಳನ್ನು (ಉದ್ಯೋಗ, ಜಾತಿ, ಅಂತಸ್ತು, ಇತ್ಯಾದಿ) ಪೋಣಿಸಿದಾಗ ಬಹಳಷ್ಟು ಸಾರಿ ಗಂಡು ಅಥವಾ ಹೆಣ್ಣಿನ ಮನಸ್ಸಿನಲ್ಲಿ ಒಂದು ಸಂಬಂಧ ಕೊನೆಯವರೆಗೂ ಉಳಿಯೋ ತೀರ್ಮಾನ ಹುಟ್ಟುತ್ತೆ - ಅದರ ಪ್ರತೀಕವಾಗಿ ಬೆಳೆಯೋದೆ 'ನಾವಿಬ್ಬರೂ ಸ್ನೇಹಿತರಾಗೇ ಉಳಿಯೋಣ' ಎನ್ನುವ ಒಪ್ಪಂದ, ಹೆಚ್ಚು ಜನರಲ್ಲಿ ಹೀಗೆ ಆಗಬೇಕೆಂದೇನೂ ಇಲ್ಲ, ಆದರೆ ಹೀಗಾದ ಬಹಳಷ್ಟು ಸಂಬಂಧಗಳನ್ನು ನೋಡಿದ್ದೇನೆ, ಆ ಬಗ್ಗೆ ಓದಿದ್ದೇನೆ. 'ಸ್ನೇಹಿತ' ಎಂಬ ಪದದ ವ್ಯಾಖ್ಯೆಯನ್ನು ಗಮನಿಸಿದಾಗ ನಮ್ಮೂರುಗಳಲ್ಲಿ ಹಾಗೂ ಹೊರದೇಶಗಳ ಚೌಕಟ್ಟಿನಲ್ಲಿ ಬೇರೆ-ಬೇರೆ ಅರ್ಥಗಳು ಬರುತ್ತವೆ - ಗಂಡು, ಹೆಣ್ಣು ಮದುವೆಯಾಗದೇ ದೈಹಿಕ ಸಂಬಂಧವನ್ನು ಇಟ್ಟುಕೊಂಡ ಉದಾಹರಣೆಗಳಿರುವಂತೆ, ಇಬ್ಬರೂ 'ಬರೀ' ಸ್ನೇಹಿತರಾಗೇ ಉಳಿದಿರುವ ನಿದರ್ಶನಗಳು ಬೇಕಾದಷ್ಟಿವೆ.

'ಅಸಾಧ್ಯ' ಎಂದು ಗೊತ್ತಿದ್ದರೂ ಮರಳಿ ಬಂದೀತು ಎನ್ನೋದು ಆಶಾವಾದ, ಅದಕ್ಕೆ ಪುಷ್ಟಿಕೊಡುವ ಬೇಕಾದಷ್ಟು ಅಂಶಗಳು ದೊರೆಯುತ್ತವೆ, ಒಂದು ಸಿನಿಮಾ ಕಥೆಯಿರಬಹುದು, ಅಥವಾ ಧ್ಯಾನ ಮಾಡುವ ಯೋಗಿಯಂತೆ ಪ್ರೀತಿಸುವ ಸರಳ ಮನಸ್ಸಿರಬಹುದು.

ನಮ್ಮ ಪ್ರಬುದ್ಧತೆಯ ವಿಸ್ತಾರದ ಧ್ಯೋತಕವಾಗಿ 'ಪ್ರೀತಿ' ಮೊಳೆಯೋದು, ಬೆಳೆಯೋದು ಎಲ್ಲವೂ ಸಹಜವಾದ್ದರಿಂದ ಅದನ್ನು ಪ್ರಶ್ನಿಸುವ ಧೈರ್ಯ ನನಗಂತೂ ಇಲ್ಲ, ಇನ್ನು ಉತ್ತರಿಸುವ ಮಾತು ಹಾಗಿರಲಿ!

Anveshi said...

ಪ್ರೀತಿ ಅನ್ನೋದು ಬೆಂಕಿ
ಎಚ್ಚರ ತಪ್ಪಿ ಬಳಸಿದ್ರೆ ಸುಟ್ಟೀತು,
ಸರಿಯಾಗಿ ಬಳಸಿದರೆ ಅದನ್ನು (ಮಂಗಳ)ಆರತಿಯಾಗಿಯೂ ಬಳಸಬಹುದು.

ಪ್ರೀತಿ ಅನ್ನೋದು ನೀರು
ಹರಿಯುತ್ತಾ ಇರುತ್ತೆ.
ಹಿಡಿದಿಡಲು ಯತ್ನಿಸಿದಷ್ಟು ತುಳುಕುತ್ತದೆ.
ಎಚ್ಚರ ತಪ್ಪಿದರೆ ಹರಿಯುತ್ತಾ ಹರಿಯುತ್ತಾ ನಿಮ್ಮಿಂದ ದೂರ ಹೋಗುತ್ತದೆ.

:)

Shiv said...

ಸತೀಶ್ ಅವರೇ,
ಮಾನವ ಸಂಬಂಧಗಳ ಬಗ್ಗೆ ಸಾಕಷ್ಟು ಆಳವಾದ ವ್ಯಾಖ್ಯಾನ ನೀಡಿದಿರಿ.ಪ್ರೀತಿ-ಸ್ನೇಹ ಅನ್ನೋ concepts ನೀವು ಹೇಳೋ ಹಾಗೆ ದೇಶದೇಶಕ್ಕೆ ವ್ಯತ್ಯಾಸವಿರುತ್ತೆ.
ಉತ್ತರಿಸಲು ಆಗೋಲ್ಲ ಅಂತ ನೀವು ಹೇಳಿದರೂ ನಿಮ್ಮ ಮಾತುಗಳಲ್ಲಿ ಅನೇಕ ಉತ್ತರಗಳು ಅಡಗಿವೆ.

ಅಸತ್ಯಿಗಳೇ,
ತಮ್ಮದು ಪ್ರೀತಿಯ (ಮಂಗಳ)ಆರತಿ ಕೇಸೋ ಅಥವಾ ಮಂಗಳವಾದ ಕೇಸೋ ತಿಳಿಯಲಿಲ್ಲ :)

ಜಯಂತ ಬಾಬು said...

nimma lekhanagaLu tumba chennagive nimage enu abhyantara illandare ee link na neevagali athava nanagali ..orkut na kannada kavithe/kathe forumge hakona ...

haage nanu innu blognalli baccha swalpa margadarshana kodi

Anonymous said...

ನನ್ನ ಅನಿಸಿಕೆ...

ಹುಡುಗಿಯೆ ಆಗಲಿ, ಹುಡುಗನೇ ಆಗಲಿ, ಕೆಲವು ಸ್ನೇಹಿತರನ್ನು ಆಯಾ ಸಮಯದ, ಪರಿಸರದಲ್ಲಿನ ನಮ್ಮ ಅವಶ್ಯಕತೆಗಾಗಿ ನಾವು ಮಾಡಿಕೊಂಡಿರುತ್ತೇವೆ. ಸಮಯ ಅಥವಾ ಪರಿಸರ ಬದಲಾದಂತೆ ನಾವು ಅವರನ್ನು ಸ್ಮರಿಸುವುದಿಲ್ಲ. ಇಬ್ಬರಿಗೂ ಅದರ ಅವಶ್ಯಕತೆ ಕಾಣಿಸುವುದಿಲ್ಲ. ಅಥವಾ ಒಬ್ಬರಿಗೆ ಮಾತ್ರ ಬೇಡವೆನಿಸಿದರೆ ಇನ್ನೊಬ್ಬರು ಅದು ಮರಳಿ ಬರುತ್ತೆ ಅಂತ ಕಾಯಬೇಕಾಗುತ್ತದೆ.

ನಿಜವಾದ ಸ್ನೇಹದಲ್ಲಿ ಅವಶ್ಯಕತೆಗಳು ಅಷ್ಟು ಮುಖ್ಯವಲ್ಲ. ನಿಜವಾದ ಸ್ನೇಹಿತರಾದರೆ ಬದಲಾವಣೆಗಳೊಂದಿಗೆ, ಬದಲಾಗುವ ಸಂಬಂಧದ ಅರ್ಥಗಳೊಂದಿಗೆ ಸದಾ ನಮ್ಮೊಡನೆಯೇ ಇರುತ್ತಾರೆ.

ಯಾವಾಗ ಇಬ್ಬರಿಗೂ ಸಂಬಂಧಕ್ಕಿಂತ ಬೇರಾವ ಅವಶ್ಯಕತೆಗಳು ಮುಖ್ಯವಾಗುವುದಿಲ್ಲವೋ, ಯಾವಾಗ ಯಾವುದೇ "ಆಗದ ಹೋಗದ" ಮಾತುಗಳೇ ಇಲ್ಲವೋ ಆಗ ಅದು ಪ್ರೀತಿಯಾಗುತ್ತದೆ!

-ಪಿ. ಕಲ್ಯಾಣ್

Shiv said...

ಜಯಂತ್,
ಅಯ್ಯೋ ಮಾರ್ಗದರ್ಶನ ಅಂತಾ ಎಲ್ಲ ಹೇಳಬೇಡಿ..ನಾನು ಸಹ ಇನ್ನೂ ನಿಮ್ಮ ತರ ಹೊಸಬ..ಬ್ಲಾಗ್‍ಗೆ ಭೇಟಿ ನೀಡಿದಕ್ಕೆ ಧನ್ಯವಾದಗಳು

ಕಲ್ಯಾಣ್,
ಸ್ನೇಹ-ಪ್ರೀತಿಯ ಬಗ್ಗೆ ನಿಮ್ಮ ಮಾತುಗಳು ಅಕ್ಷರಶಃ ನಿಜ.ಒಂದು ಕ್ಷಣ ಕೂತು ಆಲೋಚಿಸಿದಾಗ ಇದು ಸರಿ ಅನಿಸುತ್ತದೆ.ಅದರೆ ಯಾವಾಗ ನಾವು ಹೃದಯದ ಕೈಯಲ್ಲಿ ಬುದ್ದಿ ಕೊಡುತ್ತಿವೋ ಆಗ ಅಲೋಚನೆ ಮಾಡೋದನ್ನು ನಿಲ್ಲಿಸಿಬಿಡ್ತೀವಿ..ಅಲ್ವಾ?
ಪಾತರಗಿತ್ತಿಗೆ ನಿಮ್ಮ ಭೇಟಿಗೆ ವಂದನೆಗಳು

Sree said...

೧. ಪ್ರೀತಿ ಅಥವಾ ಆ ಹೆಸರಿನ ಭಾವನೆಗಳು ಹೇಗೆ-ಯಾಕೆ ಮೊಳೆಯುತ್ತೆ?

ಏನಂದ್ರೂ ಜೀವನದಲ್ಲಿ ಜೊತೆಗೊಬ್ಬರು ಕನಸು - ಕಣ್ಣೀರುಗಳನ್ನ ಹಂಚಿಕೊಳ್ಳೋಕೆ ಬೇಕು - ಎಲ್ಲರಿಗೂ ಅಂತ ನನಗನ್ನಿಸೋದು. 'ಮಿಡಿವ ಹೃದಯ' ಒಂದು ಕಾಣಿಸ್ದಾಗ ಪ್ರೀತಿ ನಮಗೇ ಗೊತ್ತಿಲ್ಲದ್ ಹಾಗೆ ಆವರಿಸಿಕೊಳ್ಳುತ್ತೆ. at an abstract level, it is a selfish need.. ಆದ್ರೆ ಅಲ್ಲಿ ಅಹಂ ಅನ್ನೋದು ತೀರ ಗೌಣವಾದಾಗ ಮಾತ್ರ ಅದು ಪ್ರೀತಿ ಅನ್ನಿಸೋದು...

೨. ಅಸಾಧ್ಯ ಅಂತಾ ಗೊತ್ತಿದ್ದರೂ ಕೊನೆಯ ಕ್ಷಣದವರೆಗೆ ಪ್ರೀತಿ ಮರಳಿ ಬರುತ್ತೆ ಅಂತಾ ಯಾಕೇ ಅಸೆ ಇರುತ್ತೆ?

ಗೊತ್ತಿಲ್ಲಪ್ಪಾ - ಈ ವಿಷ್ಯದಲ್ಲಿ ಅನುಭವ ಇಲ್ಲ:P

೩. ಒಬ್ಬ ಹುಡುಗ-ಒಬ್ಬ ಹುಡುಗಿ ಒಳ್ಳೆ ಸ್ನೇಹಿತರಾಗೇ ಇರೋಕೆ ಸಾಧ್ಯನೇ ಇಲ್ವಾ?

ಖಂಡಿತಾ ಸಾಧ್ಯ. ಅಂಥಾ ಹಲವು ಒಳ್ಳೇ ಸ್ನೇಹಿತರು ಇರೋದು ನನ್ನ್ ಅದೃಷ್ಟ. ಎಷ್ಟೋ ವಿಷಯಗಳ್ ಮಾತಾಡೊಕೆ , ನನ್ನ್ ಯೋಚನೆಗಳಿಗೆ clarity ತಂದುಕೊಳ್ಳೋಕೆ ನನಗೆ ಈ ಗೆಳೆಯರದ್ದೇ ಸಹಾಯ. ಕೆಲವ್ ಸಲ ಹುಡುಗ ಹುಡುಗಿ ಒಳ್ಳೆಯ ಸ್ನೇಹಿತರಾದಾಗ ಇಂಥವ್ರೇ ನಮ್ಮ ಜೀವನಪೂರ್ತಿ ಜೊತೆಯಾಗಬಾರದೇಕೆ ಅಂತ ಅನ್ನಿಸೋ ಸಾಧ್ಯತೆಗಳಿವೆ, ನಿಜ. ಆದ್ರೆ ಆಗ ಬುದ್ಧಿಯ ಕೈಗೆ ನಿರ್ಧಾರ ಬಿಟ್ಟ್ರೆ ಎಲ್ಲಾ ಸರಿ ಹೋಗುತ್ತೆ ಅನ್ನ್ಸುತ್ತೆ:)

Shiv said...

ಶ್ರೀ,
'ಅಹಂ' ಅಂದುಕೂಡಲೇ 'ನನ್ನ ಅಹಂ ಭಾವ ಮರೆಸುವ ಕ್ಷಣ'ನೆನಪಿಗೆ ಬಂತು...ಎಲ್ಲೋ ಓದಿದಂಗೆ ಇದೆಯಲ್ಲ :)

ನೀವು ಹೇಳ್ತಾ ಇರೋದರಲ್ಲಿ ಎಳ್ಳಷ್ಟು ಸಂಶಯವಿಲ್ಲ..esp ನಿಮ್ಮ ಕೊನೆ ಸಾಲು ಎಲ್ಲಾ ಹೇಳಿಬಿಡುತ್ತೆ !

Soni said...

Shiv: ee post odhi nan medhaLalli yaro kai haki kalsidhage agithidhiyallllaaaa....nim kaiyya?? :P

Hmmmm..... swalpa past days nenpig barthidhe.

೧. ಪ್ರೀತಿ ಅಥವಾ ಆ ಹೆಸರಿನ ಭಾವನೆಗಳು ಹೇಗೆ-ಯಾಕೆ ಮೊಳೆಯುತ್ತೆ?
೨. ಅಸಾಧ್ಯ ಅಂತಾ ಗೊತ್ತಿದ್ದರೂ ಕೊನೆಯ ಕ್ಷಣದವರೆಗೆ ಪ್ರೀತಿ ಮರಳಿ ಬರುತ್ತೆ ಅಂತಾ ಯಾಕೇ ಅಸೆ ಇರುತ್ತೆ?
೩. ಒಬ್ಬ ಹುಡುಗ-ಒಬ್ಬ ಹುಡುಗಿ ಒಳ್ಳೆ ಸ್ನೇಹಿತರಾಗೇ ಇರೋಕೆ ಸಾಧ್ಯನೇ ಇಲ್ವಾ?

eee prashnegaLu nannannu kadthive..yaradru sariyagi uttara kodovridhira?

Shiv said...

ಸೋನಿ,
ಮೆದುಳಿನಲ್ಲಿ ನನ್ನ ಕೈ-ವಾಡ ಖಂಡಿತ ಇಲ್ಲಾರೀ !
ಮೋಸ..ಎನೋ ನಿಮ್ಮಂತ ಗೊತ್ತಿದ್ದವರು ಉತ್ತರ ಕೊಡ್ತಾರೆ ಅಂತ ಕೇಳಿದರೆ ನೀವು ಪ್ರಶ್ನೆ ಕೇಳೋದೆ !