ಅದೊಂದು ಸಂಜೆ ಮನಸ್ಸಾನ್ನ ಮತ್ತೆಮತ್ತೆ ಕಾಡುತ್ತೆ..
ಆವತ್ತು ಬೆಳಿಗ್ಗೆಯಿಂದಾಲೇ ಇವತ್ತು ಯಾಕೇ ಬೆಳಗಾಬೇಕಿತ್ತು ಅಂತಾ ಅನಿಸಿತ್ತು. ಯಾಕೆಂದರೆ ನನಗೆ ಆವತ್ತು ಸಂಜೆ ಆಗೋದು ಬೇಕಿರಲಿಲ್ಲ. ಕೊನೆಗೂ ಅದು ಬಂದೇಬಿಡ್ತು.ಆವಾಗ ನಿನ್ನ ಮನದಲ್ಲಿ ಎನು ನಡೆಯುತಿತ್ತೋ ಗೊತ್ತಿಲ್ಲ, ನನ್ನ ಮನಸ್ಸು ಕಡೇ ಪಕ್ಷ ಇನ್ನೊಂದು ದಿವಸ ಸಿಗಬಾರದಿತ್ತೆ ಅನ್ನೋ ಚಟಪಟಿಕೆಯಲ್ಲಿ ಇತ್ತು.
ಟ್ಯಾಕ್ಸಿ ಬಂದು, ಬ್ಯಾಗ್‍ನೆಲ್ಲ ಅದಕ್ಕೆ ಹಾಕಿ ಮನೆಯಿಂದ ಹೊರಡುವಾಗ ನೆನಪಾಗಿದ್ದು ಈ ಸಾಲುಗಳು
ಪಯಣಿಸುವ ವೇಳೆಯಲಿ ಬಂದು ಅಡಿಗೆರಗಿ
ಮುಂದೆ ನಿಂತಳು ನನ್ನ ಕೈ ಹಿಡಿದ ಹುಡುಗಿ
ಇನ್ನೆಂದು ಬರುವಿರೆಂದೆನ್ನ ಕೇಳಿದಳು
ಇನ್ನೊಂದು ತಿಂಗಳಿಗೆ ಎಂದು ಹೇಳಿದೆನು
ನಾನು ಅದೇ ತರ 'ಇನ್ನೊಂದು ತಿಂಗಳಿಗೆ' ಅಂತಾ ನಿನಗೆ ಹೇಳುವ ಹಾಗಿದ್ದರೆ ಏಷ್ಟು ಚೆನ್ನಾಗಿ ಇತ್ತು..
ಏರಪೋರ್ಟ್‍ಗೆ ಹೋಗುವಾಗ ನಡುವೆ ನಡುವೆ 'ಶುಭ ಪ್ರಯಾಣ' ಹೇಳೋಕೇ ಬರ್ತಾ ಇದ್ದ ಪೋನ್‍ಕರೆಗಳು, ಸುಮ್ಮನೆ ಯಾಂತ್ರಿಕವಾಗಿ ಪೋನ್ ಮಾಡಿದವರ ಜೊತೆ ಮಾತು.ಸುಮ್ಮನೆ ಕಷ್ಟಪಟ್ಟು ತಂದುಕೊಂಡು ನಗ್ತಾ ಇದ್ದು ನಗೆ.
ನಾನೆಲ್ಲಿ ಇದ್ದೆ? ನಿನ್ನ ಕೈ ಹಿಡಕೊಂಡವನಿಗೆ ಬೇರೆ ಎನೂ ಬೇಕಿರಲಿಲ್ಲ. ನನ್ನ ಕೈಯಲ್ಲಿ ನಿನ್ನ ಕೈ ಇದ್ದಾಗ, ಹಾಗೇ ಅಲ್ಲೇ ಸಮಯ ನಿಂತುಬಿಡಲಿ ಅಂತಾ ಮನಸ್ಸು ಕೂಗ್ತಿತ್ತು. ದಾರಿಯುದ್ದಕ್ಕೂ ಮಾತಿಗಿಂತ ನಮ್ಮಲ್ಲಿ ಮೌನನೇ ಜಾಸ್ತಿ ಇತ್ತಲ್ವ ಅವತ್ತು.
ನಂಗೆ ಎನೂ ಬೇಕಿರಲಿಲ್ಲ..ನಿನ್ನ ಸಾನಿಧ್ಯ ಒಂದೇ ಸಾಕಿತ್ತು. ನಿನ್ನ ಒಂದು ಸ್ಪರ್ಶ ಸಾಕಿತ್ತು.
ಟ್ಯಾಕ್ಸಿ ಹಾಗೇ ಸುಮ್ಮನೆ ಹೋಗ್ತಾನೇ ಇರಲಿ ಅಂತಾ ಎಷ್ಟು ಅನಿಸ್ತಾ ಇತ್ತು. ಎರಪೋರ್ಟ್ ಹತ್ತಿರಕ್ಕೆ ಬಂದಾಗೆ ಅದೊಂದು ಹೇಳಲಾಗದ ಒಂದು ಭಾವನೆ ಆವರಿಸಿಕೊಂಡುಬಿಟ್ಟಿತ್ತು.
ಅವತ್ತು ನಿನ್ನ ಜೊತೆ ಕಳೆಯುವ ಒಂದು ನಿಮಿಷಕ್ಕಾಗಿ, ನಿನ್ನ ಜೊತೆ ಮಾತಾಡೋ ಒಂದು ಮಾತಿಗಾಗಿ, ನಿನ್ನ ನೋಡೋ ಒಂದು ಅವಕಾಶಕ್ಕಾಗಿ ನಾನು ಎಷ್ಟು ಪರಿತಪಿಸಿದ್ದೆ...ನೀರಿಂದ ಹೊರಗೆ ತಗೀತಾರೆ ಅಂತಾ ಗೊತ್ತಾದ ಮೀನಿನ ತರ . ಅವತ್ತು ಬಹುಷಃ ಯಾರಾದರೂ ನನಗೆ 'ನಿನ್ನ ಜೀವನದ ಒಂದು ದಿವಸ ಕೊಟ್ರೆ, ಅವಳ ಜೊತೆ ಕಳೆಯೋಕೆ ಇನ್ನೊಂದು ನಿಮಿಷ ಕೊಡಿಸ್ತೀನಿ' ಅಂತಾ ಹೇಳಿದ್ದರೂ, ನಾನು ಹಿಂದೆ-ಮುಂದೆ ನೋಡದೇ ಒಪ್ಪಕೊಳ್ಳತ್ತಿದ್ದೆ.
'ನಿನ್ನೆವರೆಗೆ ನಾ ಯಾರೋ ನೀ ಯಾರೋ ಅಂತಾ ಇದ್ದೆ..'ಆದರೆ ಅಮೇಲೆ ಎನಾಯಿತು?
ಎರಪೊರ್ಟ್ ಬಂದು ಮನಸ್ಸಿಲ್ಲದ ಮನಸಿಂದ ಇಳಿದಿದ್ದೆ. ಲಗೇಜ್ ಚೆಕ್-ಇನ್ ಮಾಡೋ ಉದ್ದಸಾಲು ನೋಡಿ, ಅಲ್ಲಿನ ಪ್ರಯಾಣಿಕರಲಿ ಬಹುಷಃ ಖುಷಿಯಾಗಿದ್ದು ನನಗೊಬ್ಬನಿಗೆ ಅನಿಸುತ್ತೆ ! ಚೆಕ್-ಇನ್ ಮಾಡೋವರೆಗೆ ಮತ್ತೆ ನಿನ್ನ ಜೊತೆ ಇರಬಹುದೆನ್ನುವ ಸಂತಸ. ಆ ಸಾಲಿನಲ್ಲಿ ನನ್ನ ಬ್ಯಾಗ್‍ಗಳನ್ನು ಇಟ್ಟು ಅಲ್ಲಿಂದ ನೀನು ನಿಂತ ಕಡೆ ನಾ ಎಷ್ಟು ಸಲ ಬಂದು ಹೋದೆನೋ ಗೊತ್ತಿಲ್ಲ. ಛೇ,ಕೊನೆಗೂ ನನ್ನ ಸರದಿ ಬಂದೆ ಬಿಡ್ತು ಅಲ್ಲಿ. ಲಗೇಜ್ ಎಲ್ಲಾ ಹಾಕಿ ನಿನ್ನ ಕಡೆ ಬಂದಾಗ, ಯಾವ ಕ್ಷಣವನ್ನು ನಾ ಬೇಡ ಅಂತಾ ಇದ್ದೇನೋ ಅದು ಎದುರಿಗೆ ನಿಂತಿತ್ತು.
ನಿನ್ನನ್ನು ಅಗಲುವ ಕ್ಷಣ..
ಎನು ಹೇಳಬೇಕು, ಎನು ಮಾಡಬೇಕು ಅಂತಾ ತೋಚದ ಕ್ಷಣ. ಸುಮ್ಮನೆ ನಿನ್ನ ಕೈಯನ್ನು ನನ್ನ ಕೈಯಲ್ಲಿ ತಗೊಂಡಿದ್ದೆ. ನನ್ನ ಪ್ರೀತಿ ಹುಡುಗಿ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದೆ. ಭರವಸೆಯ ನಾಳೆಗಳ ಬಗ್ಗೆ ನೆನೆಯುತ್ತಾ ನಿನ್ನ ಕೈ ಅದುಮಿದ್ದೆ..
ನಿನ್ನ ಮನದಲ್ಲಿ ಎನು ಆಗ್ತಾ ಇತ್ತು ಹುಡುಗಿ?
ಭಾರವಾದ ಹೆಜ್ಜೆ ಇಡ್ತಾ ಇಮಿಗ್ರೇಷನ್ ಚೆಕ್ ಕಡೆ ಹೋಗುವಾಗ ತಿರುಗಿ ಒಮ್ಮೆ ನೋಡಿದ್ದೆ. ನೀನು ಅಳುತ್ತಿದ್ದ ಅಮ್ಮನಿಗೆ ನಿನ್ನ ಪ್ರೀತಿ ಕೈಗಳಿಂದ ಸಮಾಧಾನ ಮಾಡ್ತಾ, ಅಲ್ಲಿಂದ ಅವರ ಜೊತೆ ಹೊರಗೆ ಹೋಗೋದಾ ನೋಡ್ತಾ ನಿಂತಿದ್ದೆ.ನೀನು ಮರೆಯಾಗುವರೆಗೆ ಅಲ್ಲೇ ನಿಂತಿದ್ದೆ...
ನಂಗೆ ಗೊತ್ತಿಲ್ಲಾ..ನನ್ನ ಕಣ್ಣು ತೇವವಾಗಿತ್ತಾ ಅಥವಾ ಮನಸು ಅಳ್ತಾ ಇತ್ತಾ..
ಇಮಿಗ್ರೇಷನ್ ಚೆಕ್ ಮುಗಿಸಿ, ತಪಾಸಣೆಯ ನಂತರ ವಿಮಾನ ಇನ್ನೇನೂ ಹತ್ತಬೇಕು ಅನ್ನುವಾಗ, ಈ ಸಾಲು ನೆನಪಾಗಿದ್ದವು..
ಅಲ್ಲಲ್ಲಿ ನಿಂದವಳ ನೋಡುತಡಿಗಡಿಗೆ
ತೆರಳಿದೆನು ವಿರಹದಲಿ ನಿಲ್ದಾಣದೆಡೆಗೆ
ದಾರಿಯಲಿ ಕಂಡೊಬ್ಬ ಹಣ್ಣು ಮಾರುವನು
ಹೊರಟು ಹೋಯಿತು ಬಂಡಿ ಎಂದು ಹೇಳಿದನು
ಹಿಂದುರಿಗಿ ಬಂದೆನ್ನ ಒಂದೆ ಮಾತಿನಲಿ
ತಿಂಗಳಾಯಿತೇ ಎಂದಳೆನ್ನ ಹೊಸ ಹುಡುಗಿ
ಕೆ.ಎಸ್.ನ ಹೇಳಿದಂತೆ ,ಅಲ್ಲಿ ಯಾರಾದರೂ ಹಣ್ಣಿನವನು ಸಿಗ್ತನಾ ಅಂತಾ ನೋಡಿದ್ದೆ, ನನ್ನದೂ ವಿಮಾನ ಹೊರಟು ಹೋಗಿದೆ ಅಂತಾ ಹೇಳ್ತಾನಾ ಅಂತಾ ಕಾದಿದ್ದೆ. ಆಮೇಲೆ ಮನೆಗೆ ಹೋಗಿ, ಬಾಗಿಲು ಬಡಿದು, ನೀನು ಬಂದು, ಬಾಗಿಲಲ್ಲಿ ನಿಂತ ನನ್ನ ನೋಡಿ, ನಿನ್ನ ಪ್ರೀತಿ ತುಂಬಿದ ಬಟ್ಟಲುಗಣ್ಣಗಳಲ್ಲಿ ಆಶ್ಚರ್ಯ ತುಂಬಿಕೊಂಡು 'ತಿಂಗಳಾಯಿತೇ' ಅಂತಾ ಕೇಳೋದು ನೋಡೋಕೆ ಎಷ್ಟು ಚೆನ್ನಾಗಿರುತ್ತೆ ಅಂತಾ ಕನಸು ಕಾಣ್ತಾ ವಿಮಾನದ ಬಾಗಿಲಲ್ಲಿ ನಿಂತಿದ್ದೆ.
ಗಗನಸಖಿ 'ಗುಡ್ ಇವಿನಿಂಗ್..ಗುಡ್ ಇವಿನಿಂಗ್' ಅಂತಾ ಎರಡು ಸಲ ಎಚ್ಚರಿಸಿದಾಗಲೇ ನೆನಪಾಗಿದ್ದು, ಇನ್ನೆಲ್ಲಿ ಬರಬೇಕು,ಎಲ್ಲಿಂದ ಬರಬೇಕು ಹಣ್ಣಿನವನು ಅಂತಾ.
ವಿಮಾನದ ಕೊನೆಯಲ್ಲಿ ಇದ್ದ ನನ್ನ ಸೀಟ್‍ಗೆ ಹೋಗಿ ಆಸೀನಾಗಿದ್ದೆ. ಚೆಕ್-ಇನ್ ಮಾಡುವ ಸಾಲಿನಲ್ಲಿ ನನ್ನ ಮುಂದೆ ಇದ್ದ ಸಹಪ್ರಯಾಣಿಕ, ಈಗ ನನ್ನ ಪಕ್ಕದ ಸೀಟಿನಲ್ಲಿದ್ದ. ಸಾಲಿನಲ್ಲಿದ್ದಾಗ ಹಾಗೇ ಒಂದು ಚಿಕ್ಕ ಹರಟೆ ಆಗಿತ್ತು. ಈಗ ತನ್ನ ಮೊಬೈಲ್‍ನಲ್ಲಿ ಯಾರಿಗೋ ಕರೆ ಮಾಡ್ತಾ ಇದ್ದ. ವಿಮಾನದಲ್ಲಿ ಮೊಬೈಲ್ ಬಳಕೆ ನಿಷೇಧವಿದ್ದರೂ ಇನ್ನೂ ವಿಮಾನ ಶುರುವಾಗಿರದರಿಂದ ಮತ್ತು ನಮ್ಮದು ಕೊನೆ ಸೀಟ್ ಆದ್ದರಿಂದ ಗುಪ್ತವಾಗಿ ಕರೆ ನಡೀತಾ ಇತ್ತು. ಅವನೂ ಕರೆ ಮುಗಿಸುತ್ತಿದ್ದಂತೆ ಇದ್ದ ಚಿಕ್ಕ ಪರಿಚಯದಿಂದ ಅವನ ಮೊಬೈಲ್ ತೆಗೊಂಡು ಮಾಡಿದ್ದು ಕರೆ ನಿನಗೆ. ಸುಮ್ಮನೆ ಒಂದೆರಡು ಕ್ಷಣನಾದರೂ ನಿನ್ನ ಧ್ವನಿ ಕೇಳಬೇಕು ಅನ್ನೋ ಕೊನೆ ಆಸೆ..ಗಗನಸಖಿ ಬಂದು 'ಪ್ಲೀಸ್, ಸ್ವಿಚ್ ಆಫ್ ಮೊಬೈಲ್' ಅಂದಾಗ ಮಾಡಲೇಬೇಕಾಗಿತ್ತು..
ನಂತರ ವಿಮಾನ ಅಲ್ಲಿಂದ ಹಾರಿತ್ತು,ನನ್ನ ಕರಕೊಂಡು.ಅದರೆ ನಾನು ಅಲ್ಲಿ ವಿಮಾನದಲ್ಲಿ ಇದ್ದನಾ?? ಭಾರತಕ್ಕೆ ಬರುವಾಗ ಇದ್ದ 'ನಾನು', ಈಗ ಭಾರತದಿಂದ ಹೋಗುವಾಗ 'ನಾನಗಿರಲಿಲ್ಲ'. ನನ್ನದೇ ಹೃದಯದ ಒಂದು ಭಾಗ ಬಿಟ್ಟು ಹೋಗುವಾಗಿನ ವೇದನೆ ಅದು..
ವಿಮಾನ ತೇಲಿತ್ತು ಆ ಕತ್ತಲ ರಾತ್ರಿಯ ಆಕಾಶದಲ್ಲಿ...
ನಾನು ತೇಲಿದ್ದೆ ನಿನ್ನ ನೆನಪಿನ ಆಗಸದಲ್ಲಿ..
*************************************************
ವಿಕ್ರಾಂತ ಕರ್ನಾಟಕದ ಈ ವಾರದ ಸಂಚಿಕೆಯಲಿ ಈ ಭಾವ ಲಹರಿಯನ್ನು ಪ್ರಕಟಿಸಿದ್ದಕ್ಕೆ ವಿಕ್ರಾಂತದ ಬಳಗಕ್ಕೆ ವಂದನೆಗಳು
*************************************************
19 comments:
ಶಿವ್,
ಒ೦ದು ಅದ್ಭುತವಾದ ಅನುಭೂತಿ ಹೊ೦ದಿದೆ ನಿನ್ನ Blog ಓದಿದ ನ೦ತರ
ನಿಜ ಹೇಳಬೇಕ೦ದ್ರೆ, ಬೆಳಿಗ್ಗೆಯಿ೦ದ ಮನಸ್ಸು ಯಾಕೋ ಖಾಲಿ ಖಾಲಿ ಆಗಿತ್ತು... ಕೆಲಸ ಮಾಡ್ಲಿಕ್ಕೆ Mood ಇರ್ಲಿಲ್ಲ. But, ಈಗ ಎಷ್ಟು Zoom ಆಗಿದೆ ಗೊತ್ತಾ?
ಈ ಕವನದ ಪೂರ್ತಿ ಸಾಲುಗಳು ನಿನ್ನ ಬಳಿ ಇದ್ದರೆ ಹ೦ಚಿಕೊಳ್ತಿಯಾ?
~ಹರ್ಷ
ಹರ್ಷ,
ಮನಸ್ಸು ಹಾಗೇ ಅಲ್ವಾ..
ಆ ಕವನದ ಎಲ್ಲಾ ಸಾಲುಗಳನ್ನ ನಿನಗೆ ಕಳಿಸ್ತೀನಿ..
ಯಾವಾಗಲೂ zoom ನಲ್ಲೇ ಇರಲಿ ನಿನ್ನ ಮನ
ಶಿವು, ವಿದಾಯದ ನೋವನ್ನು ಬರಹದಲ್ಲಿ ಚೆನ್ನಾಗಿ ಹಿಡಿದಿಟ್ಟಿದ್ದೀರಿ. ವಿಮಾನದೊಳಗೆ ಹೋದ ನಂತರ, ಈಗ ಹಿಂತಿರುಗುವುದು ಸಾಧ್ಯವಿಲ್ಲ ಎಂಬ ಭಾವನೆಯಂತೂ ಮನಸ್ಸನ್ನು ತುಂಬಾ ಹಿಂಸಿಸುತ್ತದೆ.
ನಿಮ್ಮ ವಿರಹ ಬೇಗ ಕೊನೆಯಾಗಲಿ. ಮದುವೆ ಯಾವಾಗ? ಹೆಸರೇನು? ಒಂದೂ ಗುಟ್ಟು ಬಿಟ್ಟುಕೊಡುತ್ತಿಲ್ಲವಲ್ಲಾ ನೀವು!
ನಿಮ್ಮ ಹುಟ್ಟುಹಬ್ಬಕ್ಕೆ ನನ್ನ ಶುಭಾಶಯಗಳು - ತಡವಾಗಿ :)
ತ್ರಿವೇಣಿಯವರೇ,
ಲಂಬೀ ಜುದಾಯಿ ಚಾರ್ ದಿನೋಕೀ..
ದಿನದಿನವು ಕ್ಷಣಕ್ಷಣವೂ ಎಲ್ಲೊ ಜಾರುವ ಮನ..
ನಿಮ್ಮ ಶುಭಾಶಯಗಳಿಗೆ ವಂದನೆಗಳು!!
'payaNIsuva veLeyalli......
.... yendu heLidenu'
these words made me smile. something that one like to read over and over again, for the sheer simplicity and the amazing weight in those words.
thanks for providing us a lovely post. and congrats again!
take care!
ಮೌನ,
ಕೆ.ಎಸ್.ನ ಅವರ ಕವನಗಳ ಜಾದುನೇ ಅಂತದ್ದು..
ಸರಳ-ಸುಂದರ
ಮೆಚ್ಚುಗೆಗೆ ಧನ್ಯವಾದಗಳು !
ಶಿವ್,
ನಿಮ್ಮ ಸುಮಾರು ಬರಹಗಳನ್ನ ಈ ಹಿಂದೆ ಓದಿದ್ದರೂ, ಯಾಕೊ ಸ್ಪಂದಿಸಿರಲಿಲ್ಲ. ಬಣ್ಣ ಬಣ್ಣದ ಪಾತರಗಿತ್ತಿ ಪಕ್ಕನ ನೋಡಿ( ಓದಿ ) ಖುಶಿಯಾಯ್ತು . ಬರಯುತ್ತಿರಿ
ಮನಸ್ವಿನಿ ಅವರೇ,
ಪಾತರಗಿತ್ತಿಗೆ ಭೇಟಿ ನೀಡಿ ಪ್ರತಿಕ್ರಿಯಿಸಿದಕ್ಕೆ ವಂದನೆಗಳು !
ತುಂಬ ಸುಂದರವಾದ ಬರವಣಿಗೆ. ಕೆ.ಎಸ್.ನ. ಕವಿತೆಯ ಸಾಲುಗಳು ಇಡೀ ಬರವಣಿಗೆಗೆ ಹೊಸ ಮೆರುಗು ಕೊಟ್ಟಿವೆ.
ಕವನದ ಪೂರ್ತಿ ಸಾಲುಗಳನ್ನು ಕಳಿಸಿ. ಇಲ್ಲ, ತುಳಸಿವನದಲ್ಲಿ ಹಾಕ್ಲಿಕ್ಕೆ ಹೇಳಿ.
ಭಾಗವತರೇ,
ಧನ್ಯವಾದಗಳು..
ಪೂರ್ತಿ ಕವನ ತುಳಸಿವನದಲಿ ಹಾಕೋದು ಎಣ್ಣ್ ಮಾಡೋ ವಿಚಾರ
ಬರಹ ಬಹಳ ಚೆನ್ನಾಗಿದೆ. ಅಮ್ಮಾವ್ರು ಬರೋದ್ರೊಳಗೆ, ನೀವು ರಸಕವಿಯಿಂದ ವರಕವಿಯ ಪಟ್ಟಕ್ಕೇರಿ ಎಂದು ಹಾರೈಸುವೆ
ಹಿಂದೆ ಸುಮ್ಮನೆ ತಮಾಷೆಗೆ ಬರೆದಿದ್ದೆ. ಇಂದು ನಿಮ್ಮ ಬ್ಲಾಗನ್ನು ಬಾಗಿಸಿ ನೋಡಿದಾಗ ನೆನಪಾಗುತ್ತಿದೆ. ನಿಮ್ಮನ್ನೇ ಮನದಲ್ಲಿಟ್ಟುಕೊಂಡು ಬರೆದಿರಬೇಕು ಎಂದು.
ನಿನ್ನೆ ನಾನು ನಾನೇನೇ ನೀನು ನೀನೇನೇ
ನನ್ನನು ನೀನು ನಿನ್ನನು ನಾನು ನೋ
ನನ್ನನ್ನ ನೀನೂ ನಿನ್ನನ್ನ ನಾನು
ನೆನೆ ನನ್ನನ್ನೇ ನೀನು ನಿನ್ನನ್ನೇ ನಾನು
ಟಿಪ್ಪಣಿ : ನಿನ್ನೆಯವರೆವಿಗೆ ನಾವಿಬ್ಬರು ಅಪರಿಚಿತರು
ಇಬ್ಬರೂ ಮುಖಾಮುಖಿ ನೋಡಲು
ನನ್ನ ಮನದೊಳಗೆ ನೀನು ನಿನ್ನ ಮನದೊಳಗೆ ನಾನು ಹೊಕ್ಕಾಯಿತು
ಈಗೇನಿದ್ದರೂ ಒಬ್ಬರನ್ನೊಬ್ಬರು ಮತ್ತು ಕಳೆದು ಹೋದ ಕ್ಷಣಗಳನ್ನು ನೆನೆ ನೆನೆದು, ಮುಂಬರುವ ವರ್ಷ ಕಾಲವನ್ನೇ ಎದುರು ನೋಡುವುದು.
ತವಿಶ್ರೀ,
ಚೆನ್ನಾಗಿದೆ ನಿಮ್ಮ ಹಾರೈಕೆ :)
ನೀವು ಆ 'ನ'ಕಾರದ ಸಾಲುಗಳನ್ನು ನಿಮ್ಮ ಬ್ಲಾಗ್‍ನಲ್ಲಿ ಒಮ್ಮೆ ಹಾಕಿದ ನೆನಪು..ಅರ್ಥ ತುಂಬಾ ಚೆನ್ನಾಗಿದೆ
en bareeteera swaami.. aahaa...
ಶ್ರೀನಿಧಿಯವರೇ,
ಪಾತರಗಿತ್ತಿಗೆ ಸ್ವಾಗತ !
ವಂದನೆಗಳು
ಶಿವು,
ಸಂಜೆಯಾಗಿ, ರಾತ್ರಿಯಾಗಿ, ಇನ್ನೊಂದು ಬೆಳಿಗ್ಗೆ ಆಗಿಯಾಯ್ತು. ನೀವು ಎಲ್ಲಿದ್ದೀರಿ, ಮಾರಾಯ್ರೆ? ಆಗೊಮ್ಮೆ, ಈಗೊಮ್ಮೆ ಮುಖ ತೋರಿಸಿ. ಇದಕ್ಕೆಲ್ಲ ಸಮಯ ಸಿಗ್ತಿಲ್ವ ಇತ್ತೀಚೆಗೆ?:-)
ಬಹಳ ಚೆನ್ನಾಗಿ ಬರೀತಿರಾ ಸಾರ್... ಕನ್ನಡದಲ್ಲಿ ಇಷ್ಟು ಒಳ್ಳೆಯ ಬರಹಗಳು ಓದಿ ತು೦ಬಾ ದಿನ ಆಗಿತ್ತು... ಈಗ ಬ್ಲಾಗ್ ಗಳ ಜಗತ್ತಿಗೆ ನಾ ಬ೦ದ ಮೇಲೆ, ಮೇಧಾವಿಗಳ ಸರ್ಟಿಫಿಕೇಟ್ ಅಗತ್ಯವಿಲ್ಲದ ಉತ್ತಮ, ಫ್ರೆಶ್ ಬರಹಗಳು ತು೦ಬಾ ತು೦ಬಾ ಕಾಣಿಸ್ತಿವೆ... ಕನ್ನಡ ಸಾಹಿತ್ಯ ಜೀವ೦ತವಾಗಿದೆ ಅನ್ನೋ ನ೦ಬಿಕೆ ಬರ್ತಾ ಇದೆ!!
ಭಾಗವತರೇ,
ಸ್ಪಲ್ಪ ಕಚೇರಿ ಕೆಲಸದಲ್ಲಿ ತೀರಾ ವ್ಯಸ್ತನಾಗಿದ್ದೆ.ಅದಕ್ಕೆ ಈ ಕಡೆ ಬಂದಿರಲಿಲ್ಲ.
ಶ್ರೀ,
ಸಾಹಿತ್ಯ ಅನ್ನೋದು ಎಲ್ಲಿಯವರಿಗೆ ಜನಸಾಮಾನ್ಯರ ನಡುವೆ ಅರಳಿ ಅವರಲ್ಲಿ ಓಡಾಡುತ್ತೋ ಅಲ್ಲಿಯವರಿಗೆ ಜೀವಂತ ಇರುತ್ತೆ ಅನ್ನೋದು ನನ್ನ ಅಭಿಪ್ರಾಯ.
ನಿಮ್ಮ ಅಭಿಮಾನಕ್ಕೆ ವಂದನೆಗಳು.
"ಮೇಧಾವಿಗಳ ಸರ್ಟಿಫಿಕೇಟ್ ಅಗತ್ಯವಿಲ್ಲದ..." ಸತ್ಯದ ಮಾತು. ಈ ವಿಮರ್ಶಕರ, ಮೇಧಾವಿಗಳ ಅಡ್ಡ-ಉದ್ದ ಅಳತೆಪಟ್ಟಿಗಳಿಗೆ ಸಿಲುಕದ "ಬ್ಲಾಗ್" ಬರಹಗಳು ಹೊಸತನ ಮತ್ತು ಹೊಸರೀತಿಗಳಲ್ಲಿ ಬೆಳೆಯುತ್ತಿವೆ. ಕನ್ನಡ ಭಾಷೆ ಅಳಿವಿನತ್ತ ಸಾಗುತ್ತಿದೆ ಅನ್ನುವ ಭೀತಿ ಇರುವವರಿಗೆ ಎರಡು ಪ್ರಮುಖ ದಾರಿಗಳನ್ನು ತೋರಿಸಬಹುದು:(೧)ಕನ್ನಡ ಬ್ಲಾಗ್ ಲೋಕ (೨)ಕನ್ನಡ ನಾಡಿನ ಹಳ್ಳಿಗಳು. ಇವೆರಡೂ ಕನ್ನಡ ನಿಚ್ಚಳವಾಗಿ ಉಸಿರಾಡುತ್ತಿರುವ ತಾಣಗಳು.
ಜ್ಯೋತಿ ಅವರೇ,
ಪಾತರಗಿತ್ತಿಗೆ ಸ್ವಾಗತ..ಭೇಟಿ ನೀಡಿದ್ದಕ್ಕೆ ವಂದನೆಗಳು..
Post a Comment