Saturday, November 09, 2024

ರೇಷ್ಮೆ ಬಟ್ಟೆ

ಅದು ಸುಮಾರು 90ರ ದಶಕದ ಮಧ್ಯದ ಸಮಯ ಅನಿಸುತ್ತೆ. ಬೆಂಗಳೂರಿಗೆ ಭಾರತದಲ್ಲೇ ಮೊದಲ ಕೆ ಎಫ್ ಸಿ ಬಂದದ್ದು. ಬ್ರಿಗೇಡ್ ರೋಡಿನಲ್ಲಿದ್ದ ಆ ಕೆ ಎಫ್ ಸಿ ವಿರುದ್ಧ ಪ್ರತಿಭಟನೆ ನಡೆಯಿತೆಂದು ಓದಿದ ನೆನಪು. ಹಾಗೇ ಅದರ ಆಸುಪಾಸಿನಲ್ಲೇ ಪಿಜ್ಜಾ ಹಟ್ ಸಹ ಬಂದಿದ್ದು ಅನಿಸುತ್ತೆ. ಆಗಲೇ ನಮ್ಮ ಜನರೇಶನಿನವರಿಗೆ ‘ಜಾಗತೀಕರಣ’ ಅರಿವಾಗಿದ್ದು, ದೋಸೆ-ಇಡ್ಲಿ ಎನ್ನುವವರ ಕಿವಿ-ಬಾಯಿಗಳಿಗೆ  ಬರ್ಗರ್, ಪಿಜ್ಜಾನಂತಹ ಪದಗಳ ಪ್ರವೇಶವಾಗಿದ್ದು. 

ವಸುಧೇಂದ್ರ ಅವರ 'ರೇಷ್ಮೆ ಬಟ್ಟೆ' ಓದುತ್ತಿದ್ದಂತೆ , ನಮ್ಮ ಕಣ್ಣ ಮುಂದೆಯೇ ಇವೆಲ್ಲಾ ನಡೆದು ಹೋದದ್ದು , ಅರಿವಿಲ್ಲದೆಯೇ ಜಾಗತೀಕರಣದ ಭಾಗವಾಗಿದ್ದು ಭಾಸವಾಯಿತು. ಆದರೆ ಈ ಜಾಗತೀಕರಣವೆಂಬುದು ಇಂದು-ನಿನ್ನೆಯದ್ದಲ್ಲ. ಅದು ಯಾವುದೋ ಕಾಲದಿಂದ ನಡೆದು ಬಂದದ್ದು ಎಂಬುದನ್ನು ರೇಷ್ಮೆ ಬಟ್ಟೆ ಪುಟ ತಿರುಗಿಸಿದ್ದನಂತೆ ಖಾತ್ರಿಯಾಗತೊಡಗಿತು. 


ಇತಿಹಾಸದ ಕಂಬಗಳಿಗೆ ಕಲ್ಪನೆಯ ಹಂದರ ಹಾಕಿ, ಪ್ರಭಾವಿ ಪಾತ್ರಗಳ ಮಾಲೆ ತೊಡಿಸಿ , ಅಲ್ಲೊಂದು ಇಲ್ಲೊಂದು ಧರ್ಮದ ತೂಗುದೀಪ ಇಳಿಬಿಟ್ಟರೆ … ಅದೇ ರೇಷ್ಮೆ ಬಟ್ಟೆ !


ನಾವು ಬೆಳೆದ ಅಥವಾ ನಮ್ಮ ಸುತ್ತಲಿನ ಪರಿಸರದ ಆಧಾರಿತವಾಗಿ ತಕ್ಕ ಮಟ್ಟಿಗೆ ಶ್ರಮಪಟ್ಟರೆ ಒಂದು ಪ್ರಪಂಚವನ್ನು ಓದುಗರಿಗೆ ಕಟ್ಟಿಕೊಡುವುದು ಸುಲಭವೆನಿಸುತ್ತೆ. ಅದೇ ಕಾಣದ ಕೇಳದ ಕಾಲದ ಒಂದು ಕಲ್ಪನಾ ಪ್ರಪಂಚ ರಚಿಸುವುದು ಎಂತಹ ಲೇಖಕನಿಗೂ ಒಂದು ಸವಾಲೇ ! ವಸುಧೇಂದ್ರ ಇಷ್ಟವಾಗುವುದು ಅವರು ಕಟ್ಟಿರುವ 2ನೇ ಶತಮಾನದ ಈ ಒಂದು ಪ್ರಪಂಚದ ಚಿತ್ರಣದಲ್ಲಿ.. 


2000 ವರ್ಷಗಳ ಹಿಂದೆ ಚೀನಾದಿಂದ ರೋಮ್ ದೇಶದವರೆಗೆ ಇದ್ದದ್ದು ‘ಸಿಲ್ಕ್ ರೂಟ್’ . ಈ ವ್ಯಾಪಾರದ ರಸ್ತೆ ಹಾದು ಹೋಗಿದ್ದು ಅನೇಕ ದೇಶ-ಪ್ರದೇಶಗಳ ಮೂಲಕ. ಅದು ಹೇಗೆ ಒಂದು ವ್ಯಾಪಾರದ ರಸ್ತೆ ಸ್ಥಳೀಯ ಸಂಸ್ಕೃತಿಯ ಮೇಲೆ ಪರಿಣಾಮ ಬೀರಿತು. ಅದರಿಂದ ಅದು ಹೇಗೆ ಭಾಷೆ-ವೇಷ-ಮನುಷ್ಯ ಬದಲಾದ ಎನ್ನುವುದು ಕಾದಂಬರಿಯ ಸಾರ. ಪುರುಷಪುರ, ಬಾಹ್ಲಿಕಾ, ಸಮರಖಂಡ ಮತ್ತು ಲುವೊಯಾಂಗ್ , ಈ ನಾಲ್ಕು ಪ್ರದೇಶಗಳು ಹೇಗೆ ಈ ರೇಷ್ಮೆ ದಾರಿಯಲ್ಲಿ ಬದಲಾದವು, ಅದು ಹೇಗೆ ತಳಕು ಹಾಕಿಕೊಂಡವು ಎನ್ನುವುದು ವಿಭಿನ್ನ ಪಾತ್ರಗಳು ಮತ್ತು ಹೃದಯಕ್ಕೆ ಹತ್ತಿರವಾಗುವ ಅವುಗಳ ಕತೆಗಳ ಮೂಲಕ ಅನಾವರಣವಾಗುತ್ತಾ ಸಾಗುತ್ತದೆ. 


ಕಾದಂಬರಿ ಓದಿಸಿಕೊಂಡು ಹೋಗುತ್ತೆ ಅಂದರೆ ತಪ್ಪಾಗುತ್ತದೆ. ಓದಿಸಿಕೊಂಡು ಹೋಗುವ ಜೊತೆಗೆ ಚಿಂತನೆಗೂ ಹಚ್ಚುತ್ತದೆ. 2000 ವರ್ಷದ ಹಿಂದಿನ ಕತೆಯಾದರೂ ಅಲ್ಲಲ್ಲಿ ಬರುವ ಕೆಲವೊಂದು ಪ್ರಶ್ನೆಗಳಿಗೆ ಈಗಲೂ ನಮ್ಮ ಬಳಿ ಉತ್ತರವಿಲ್ಲವೆನಿಸುತ್ತೆ.  ಧರ್ಮ-ರಾಜಕೀಯ, ಕಾಡು-ನಾಡು, ಪರ್ವತ-ಮರುಭೂಮಿ, ವಜ್ರ-ರೇಷ್ಮೆ , ಸನ್ಯಾಸಿ-ಸಂಸಾರಿ, ಹೀಗೆ ಹಲವಾರು ತದ್ವಿರುದ್ಧವೆನಿಸಬಹುದಾದ ಸಂಗತಿಗಳು ಘರ್ಷಿಸಿ, ಕೊನೆಗೆ ಅವುಗಳೆಲ್ಲಾ ತಾರ್ಕಿಕ ಅಂತ್ಯವಾಗುವುದು ಖುಷಿ ನೀಡುತ್ತದೆ. 


ನನಗೆ ತಿಳಿದ ಮಟ್ಟಿಗೆ ಕನ್ನಡದಲ್ಲಿ ಹಳೆಯ ಚೀನಾದ ಸಾಮಾಜಿಕ ಸ್ತರಗಳ ಬಗ್ಗೆ ಇಷ್ಟು ಚೆನ್ನಾಗಿ ಬರೆದಿದ್ದು ಕಡಿಮೆ, ಅಲ್ಲಿನ ವಿವಿಧ ಶ್ರೇಣಿಯ ಪ್ರಜೆಗಳು, ಭ್ರಷ್ಟಾಚಾರ, ವಾಮಾಚಾರ , ಗೃಹಿಣಿಯರ ಬಗ್ಗೆ ಬರೆದಿರುವುದು ಸೋಜಿಗವೇ ಸರಿ.


ವ್ಯಾಪಾರ-ವಾಣಿಜ್ಯದಲ್ಲಿ ಜನ ಸಾಮಾನ್ಯರ ಬದುಕು ಹೇಗೆ ಬದಲಾಯಿತು ಎನ್ನುವುದರ ಜೊತೆಗೆ ಮತ್ತೊಂದು ಸುಂದರ ಚಿತ್ರಣವೆಂದರೆ ಅದು ಧರ್ಮಗಳದ್ದು. ಬೌದ್ಧ, ಪಾರಿಸಿಕ, ವೈದಿಕ, ಕಾನ್ ಪ್ಯೂಷಿಯಸ್, ತಾವೋ ಧರ್ಮಗಳ ಸಾರವನ್ನು ಬಟ್ಟಿಯಿಳಿಸಿ, ಅದನ್ನು ಹಿತವಾಗಿ ಅಲ್ಲಲ್ಲಿ ನೀಡಿದ ರೀತಿ ಇಷ್ಟವಾಗುತ್ತದೆ. ನನ್ನ ಪ್ರಕಾರ ಮಹಿಳಾ ಪಾತ್ರಗಳು ಹೆಚ್ಚು ಅಳ ಮತ್ತು ಪರಿಣಾಮಕಾರಿ ಅನಿಸುತ್ತವೆ. 


ಕತೆಯ ಕೆಲವು ಎಳೆಗಳನ್ನು ಹಾಗೆಯೇ ಕೂಡಿಸದೆ ಬಿಟ್ಟ ಹಾಗಿದೆ. ಅದು ಪ್ರಯತ್ನಪೂರ್ವಕವಾಗಿ ಮಾಡಿದ್ದೋ ಅಥವಾ ಭಾಗ ಎರಡಕ್ಕೆ ಬಿಟ್ಟಿರುವುದೋ ತಿಳಿಯಲಿಲ್ಲ. 


ಇದೊಂದು ಮ್ಯಾಗ್ನ್ಯಾಯಂ ಓಪಸ್. ಇಲ್ಲಿ ಕ್ಯಾನ್ವಾಸ್ ಮತ್ತು ಚಿತ್ರಣದ ವ್ಯಾಪ್ತಿ ದೊಡ್ಡದ್ದು. ಒಮ್ಮೆ ಕಾಡಿನ ಆಳದಲ್ಲಿ, ಇನ್ನೊಮ್ಮೆ ಗುಹೆಗಳಲ್ಲಿ, ಅಲ್ಲಿ ನಗರಗಳ ಬೀದಿಯಲ್ಲಿ , ಮತ್ತೆ ಅಲ್ಲಿ ಮರುಭೂಮಿಯಲ್ಲಿ ಪಾತ್ರಗಳೊಂದಿಗೆ ನೀವು ಪಯಾಣಿಸುತ್ತೀರಿ. ವಿಶಾಲ ವ್ಯಾಪ್ತಿಯಲ್ಲಿ ಸಾಗುತ್ತಾ ಕೆಲವೊಂದೆಡೆ ಪಾತ್ರಗಳ ಮೇಲೆ ಕೇಂದ್ರೀಕರಿಸುತ್ತಾ ನಡೆಯುತ್ತದೆ. ನೀವು ಎಲ್ಲೇ ಹೋದರೂ ಯಾವ ಕತೆಯ ಭಾಗವಾದರೂ, ರೇಷ್ಮೆ ದಾರಿಯಲ್ಲಿ ನಿಮ್ಮ ಜೊತೆ ಯಾವಾಗಲೂ ಸಾಗುವುದು ಮಾತ್ರ ತಥಾಗತ ಒಬ್ಬನೇ !


ರೇಷ್ಮೆ ಬಟ್ಟೆ ಕನ್ನಡದ ಮಟ್ಟಿಗೆ ಒಂದು ಅಪರೂಪದ ಪ್ರಯತ್ನ. ಅಂತಹ ಪ್ರಯತ್ನಗಳನ್ನು ಮೆಚ್ಚಬೇಕು. 

Monday, January 22, 2024

ವಿರಾಜಮಾನ

ಎಂತಹ ದಿನಗಳು...

ಬೀಗದ ಬಾಗಿಲಿನ ಕತ್ತಲಲಿ

ದೂಳಿನ ಜೇಡರ ಬಲೆಯಲಿ


ಎಷ್ಟೊಂದು ದಿನಗಳು...


ಹೊರಗೆ ಘೋರ ಹೋರಾಟ

ಎಲ್ಲೆಲ್ಲೂ ಸಂಘರ್ಷ ನರಳಾಟ


ಎಲ್ಲಿ ಹೋಗಲಿ ಅಮ್ಮ?


ಜೋಪಡಿಯಾಯ್ತು ನನ್ನ ತಾಣ

ಹೃದಯವಾಯ್ತು ನಿಟ್ಟುಸಿರು ನಿತ್ರಾಣ


ಎಷ್ಟೊಂದು ದಿನಗಳು....


ಮುಂದುವರೆಯುವುದೇ ಮರಳುವ ನಿರೀಕ್ಷೆ 

ಮರೆತುಬಿಟ್ಟರೋ ನನ್ನ ಅಪೇಕ್ಷೆ


ಎನು ಮಾಡಲಿ ಅಮ್ಮ?


ಸೂರ್ಯವಂಶಿಗೆ ಬಂತೇ ಶುಭದಿನ

ನನಸಾಗುವುದೇ  ಸುದಿನ


ಎನು ಮಾಡಿದಿರಿ ಅಮ್ಮ !!


ಆಡಿ ಬೆಳೆದ ಜಾಗದಲಿ

ಆಗಮಿಸಿದೆ ಜನಿಸಿದ ಮಣ್ಣಿನಲಿ


೫೦೦ ವರ್ಷಗಳ ನಂತರ

ನೆಲೆಸುವೆ ಮನೆಯಲಿ ನಿರಂತರ


ಲಲ್ಲಾ ಎನ್ನುವ ಕರೆಯಲಿ

ಮರಳಿದೆ ಅಮ್ಮನ ತೋಳಿನಲಿ





Tuesday, September 06, 2022

ಯಾವ ಮೋಹನ ಮುರಳಿ ...

 

ಅವಧಿಯಲ್ಲಿ ನನ್ನ ಈ ಲೇಖನ ಪ್ರಕಟಿಸಿದ ಟೀಮ್ ಅವಧಿಗೆ ವಂದನೆಗಳು 


ಲೇಖನದ ಅವಧಿಯ ಲಿಂಕ್ ಇಲ್ಲಿದೆ 


Thursday, September 16, 2021

ಯಾ ಯಾಯಾ ಕೋಕೋ ಜಂಬೋ…

 

ಅವಧಿಯಲ್ಲಿ ನನ್ನ ಈ ಲೇಖನ ಪ್ರಕಟಿಸಿದ ಟೀಮ್ ಅವಧಿಗೆ ವಂದನೆಗಳು 


ಲೇಖನದ ಅವಧಿಯ ಲಿಂಕ್ ಇಲ್ಲಿದೆ 


Thursday, February 09, 2017

ಗೋಲಕದಿಂದ ...


ಮಗಳು ಬೆಳಗ್ಗೆಯೇ ಗೋಲಕ ಮುಂದಿಟ್ಟುಕೊಂಡು ಕುಳಿತು ಕೊಂಡಿದ್ದಳು...

ಅದರಲ್ಲಿ ಅವಳು ಬಹು ದಿನಗಳಿಂದ ಕೂಡಿಟ್ಟಿದ್ದ ನಾಣ್ಯ-ನೋಟುಗಳು.  ಮಗಳಿಗೆ ಆ ದುಡ್ಡಿನಿಂದ ತನ್ನ ಇಷ್ಟದ ಯಾವುದೋ ಒಂದು ಗೊಂಬೆ ಕೊಂಡುಕೊಳ್ಳುವ ಮಹತ್ ಯೋಜನೆ. ಅದರ ಬಗ್ಗೆ ಬಹಳ ಸಲ ಹೇಳಿದ್ದೇ ಹೇಳಿದ್ದು. ಗೋಲಕದಲ್ಲಿದ್ದ ಆ ಹಣದ ಬಗ್ಗೆ ಸ್ವಲ್ಪ ಜಾಸ್ತಿ ಪ್ರೀತಿ !

ಇಂತಪ್ಪ ಗೋಲಕದಿಂದ ಬೆಳ್ಳಂಬೆಳ್ಳಿಗ್ಗೆಯೇ ದುಡ್ಡು ಹೊರಬಂದಿತ್ತು. ಮಗಳು ನೋಟುಗಳನ್ನು ಮತ್ತು ನಾಣ್ಯಗಳನ್ನು ಗುಂಪೆ ಹಾಕಿಕೊಂಡು ಎಣಿಸುತ್ತಿದ್ದಳು.

ಮಗಳಿಗೆ ಕಾರಣ ಕೇಳಿದಾಗ ತಿಳಿದಿದ್ದು...
ಮಗು ನನ್ನ ಹುಟ್ಟುಹಬ್ಬಕ್ಕೆ ಗಿಫ್ಟ್ ತರಲಿಕ್ಕೆ , ತಾನು ಕೂಡಿಟ್ಟಿದ್ದ ಹಣ ಹೊರತೆಗೆಯುತಿತ್ತು.

ನನ್ನ ಮಗಳ ಪ್ರೀತಿಗೆ ಅದರ ನಿಷ್ಕಳಂಕ ರೀತಿಗೆ, ಕಣ್ಣ ಅಂಚಿನಲಿ ಹನಿ....



**********************

ನನ್ನ ಕಾಲೇಜಿನ ಕೊನೆಯ ಸೆಮಿಸ್ಟರ್ ಹೊತ್ತಿಗೆ ಮನೆಯಲ್ಲಿ ಸ್ವಲ್ಪ ಕಷ್ಟದ ಸಮಯ.

ನನ್ನ ಅಮ್ಮ ಗೋಲಕ ಒಡೆದು, ತಾನು ಕೂಡಿಟ್ಟಿದ್ದ ಹಣ ತೆಗೆದು ನನ್ನ ಕೈಗಿಟ್ಟಿದ್ದಳು.
ಆ ಕಷ್ಟದ ಕಾಲದಲ್ಲಿ ಆ ದುಡ್ಡು ಮತ್ತು ಆ ಸಾಂತ್ವನದ ಮಾತುಗಳು ನೀಡಿದ್ದವು ಧೈರ್ಯ..

*******************

ಧೈರ್ಯಕ್ಕೆ ಇನ್ನೊಂದು ಹೆಸರು ಬಹುಷಃ ಇವಳಿರಬಹುದು !

ಕಾಲೇಜಿನ ತನ್ನ ಓದು, ಮನೆಯ ಕೆಲಸ, ಮಗಳ ಕಾಳಜಿ ..
ಇವೆಲ್ಲವುಗಳನ್ನು ಅದು ಎಷ್ಟು ಸಮವಾಗಿ ತೂಗಿಸಿಕೊಂಡು ಹೋಗುತ್ತಿದ್ದಾಳೆ .

ಇಡೀ ದಿನ ಆಫೀಸಿನ ಕೆಲಸ ಮುಗಿಸಿಕೊಂಡು ಬಂದು, ಮತ್ತೆ ಅಡುಗೆಮನೆಯಲ್ಲಿ ಒಂದು ಗಂಟೆ ನಿಂತು ಏನೋ ಮಾಡುತ್ತಿದ್ದಳು.
ಆ ಶ್ರಮದ ಫಲ ನನ್ನ ನೆಚ್ಚಿನ ಹಾಲಿನ ಕೋವಾ !

ಜಿ.ಎಸ್.ಎಸ್ ಹೇಳಿದ್ದಂತೆ

ಮನೆಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ

*******************

ಆಫೀಸಿನಿಂದ ಮನೆಗೆ ಬಂದರೆ ಮನೆಯಲ್ಲಿ ಚೆಂದದ ಅಲಂಕಾರ !

ಮಗಳು ಅಮ್ಮನೊಂದಿಗೆ ಹೋಗಿ ಪುಟ್ಬಾಲ್ ತರದ ಕೇಕ್ ತಂದಿಟ್ಟಿದ್ದಳು..

ಈ ಪ್ರೀತಿಯ ಧಾರೆ..

ಆ ಧಾರೆಗೆ ನಾನು ಅರ್ಹನೇ ?
ಬಹು ಧನ್ಯತೆ, ಚಿಕ್ಕ ಭಯ

*******************

ಮತ್ತೆ ಜಿ.ಎಸ್.ಎಸ್ ಪದಗಳ ನೆರವು ಪಡೆದು...

ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?

Saturday, June 04, 2016

ಗಿರಿಯಪ್ಪ ಗೌಡರ ಮಗಳು


ನನ್ನಿಷ್ಟದ ದಂಪತಿಗಳು ತಮ್ಮ ಅರವತ್ತನೇ ವಿವಾಹ ವಾರ್ಷಿಕ ಅಚರಿಸಿಕೊಳ್ಳುತ್ತಿದ್ದಾರೆ.
ಈ ಸಾಲುಗಳು ಆ ದಂಪತಿಗಳಿಗೆ ಮತ್ತು ಅವರ ದೀರ್ಘ ಸಹಬಾಳ್ವೆಗೆ..

ಇಲ್ಲಿನ ಕೆಲವು ಸಾಲುಗಳು ನೆಚ್ಚಿನ ಕೆ.ಎಸ್.ನ ಅವರಿಂದ ಸ್ಪೂರ್ತಿ!

****************************************

ಗಿರಿಯಪ್ಪ ಗೌಡರ ಮಗಳು ರತ್ನದಂತಹ ಹುಡುಗಿ ಊರಿಗೆಲ್ಲಾ
ಬಲುಜಾಣೆ ಗಂಭೀರೆ ಹೆಸರು ಕಮಲ
ಹತ್ತಿರದ ಹೊಳೆಯಿಂದ ನೀರ ತರುವಾಗವಳ ನೋಡಬೇಕು
ಕರುವನಾಡಿಸುವಾಗ ಅಡಿಕೆಯ ತೋಟದಲಿ ಅವಳ ಗಂಡನ ಹೆಸರು ಕೇಳಬೇಕು

ಮೊನ್ನೆ ಚಿಕ್ಕಬಸೂರು ಹಾಲಪ್ಪನವರ ಮಗನು ಹೆಣ್ಣ ನೋಡಲು ಬಂದ ಹೊಳೆಹೊನ್ನಿರಿಗೆ
ಅವರ ಮನೆಯಲಿ ಹೇಗೋ ಏನೋ ಎಂದಳು ಕಮಲ ಕೋಣೆಯೊಳಗೆ
ಚಿಕ್ಕ ಮಗಳ ಮಾತನು ಕೇಳಿ ನಕ್ಕುಬಿಟ್ಟರು ತಂದೆ
ಚಿಕ್ಕಬಸೂರಿನಿಂದ ಬಂದಿದ್ದ ಗಂಡು ಬಲು ಸೊಗಸುಗಾರ

ಹೆಸರು ಚಂದ್ರಶೇಖರ ಶಾಲೆಯ ಮಾಸ್ತರನಂತೆ
ಪ್ಯಾಂಟನಲಿ ಹೊಳೆಯುತಿಹ ಮಾಸ್ತರ ನೋಡಿ
ಹೊನಲಾಗಿಬಿಟ್ಟರು  ಹೊಳೆಹೊನ್ನೂರ ಜನತೆ
ಮುಂದೆ ಶುಭ ಮುಹೂರ್ತದಿ ಮದುವೆ ನಡೆಯಿತು ಮನೆಯಂಗಳದಿ

ಗೌಡರಿಗೆ ಚಿಂತೆ ಮಗಳ ಹೊಸಬದುಕ ಬಗ್ಗೆ
ಚಂದ್ರಶೇಖರ ಚಂದ್ರದಂತ ತಂಪನೆ ಮನಸಿನವನು
ಅದರ ಕಂಪಿನಲಿ ಅರಳಿತು ಬಲು ಬೇಗ ಪ್ರೀತಿ ಕಮಲ
ಬದುಕು ಬೆಳೆಯಿತು ಬಾಳು ಬೆಳಗಿತು

ಕಷ್ಟದಲಿ ಕೈಹಿಡಿದು ಸುಖದಲಿ ಸವಿನುಡಿದು
ಸವೆಸಿದರು ದಂಪತಿಗಳು ಬಾಳ ದಾರಿ
ಕಾಲ ಚಕ್ರ ಉರುಳಿ ವೇಗವಾಗಿ
ಅರಳಿ ನಿಂತವು ಐದು ಪ್ರೇಮ ಕುಸುಮಗಳು

ಶಶಿಧರನೆಂದರು ಸತೀಶನೆಂದರೂ  ಓಗೊಡುವ ಪರಶಿವನು
ಜೋಡಿಯ ಹರಸಿದನು ಸವಿ-ತಾ ತಂದು ಬಾಳನಲಿ
ಜೀವನ ಗೀತಾ ಸುಗುಮವಾಗಿ ಬದುಕು ಸುನಂದ-ನವಾಗಿ
ನೋಡು ನೋಡುತ್ತಾಲೇ ಕಳೆದು ಹೋದವು ದಶಕಗಳು ಆರು

ಚಂದ್ರಕಮಲವೀಗ  ಮೊಮ್ಮಕ್ಕಳು-ಮರಿಮಗಳ  ಕಲರವದ ಗೂಡು
ಮರಳಿ ನೋಡಲು ಗೌಡರ ಅದೇ ರತ್ನದಂತ ಹುಡುಗಿ
ಅದೇ  ಪ್ಯಾಂಟಿನ ತಂಪನೆ ಹುಡುಗ
ನಮ್ಮದೊಂದು ಶರಣು ಈ ಜೋಡಿ ಜೀವಕೆ ಹರಕೆ ಆಯುವಿಗೆ

****************************************

Thursday, February 18, 2016

ಅವಳು, ಮಗಳು, ನೆನಪು, ನಲಿವು

ಅದು ಯಾವುದೋ ನಗರಿ
ರಸ್ತೆ ರಸ್ತೆಯಲ್ಲ ಅಲ್ಲಿ
ಊರ ತುಂಬ ಕಾಲುವೆ
ಪಯಣ ಒಂದು ದೋಣಿಯಾನ
ಕಾಲುವೆಗೊಂದು ಕೆಂಪುಹಸಿರು ದೀಪ
ಹಸಿರುದೀಪದಿ ತೆರೆವ ಬಾಗಿಲು
ಮತ್ತೆ ಸಾಗುವ ದೋಣಿ
ದೋಣಿ ನಡೆಸುವ ಅವಳು
ಅವಳ ನಗು ಬೆಳದಿಂಗಳು

ಮತ್ತೆ ಯಾನ ನಿಲ್ಲಿಸುವ
ಕೆಂಪುದೀಪ ಆ ಬಾಗಿಲುಗಳು
ದೋಣಿ ನಿಂತಾಗ ನೋಡುವ
ಅವಳ ನಿಷ್ಕಳಂಕ ನಯನ
ಅದು ಸೋಸುವ ಪ್ರೀತಿ
ಆ ಪ್ರೀತಿಯ ರೀತಿ
ಮತ್ತೆ ಹಸಿರು ದೀಪ
ತೆರೆಯುವ ಬಾಗಿಲುಗಳು ಮನಸ್ಸು
ಹೊರಟಾಗ ಮತ್ತದೇ ಸಡಗರ

ದೂರ ತೀರದ ಪಯಾಣ
ದಣಿವು ಬಾಯರಿಕೆ ಕ್ರಮೇಣ
ಪ್ರಶ್ನೆಗಳು ಪ್ರಜ್ಞೆಗಳು
ಬಂದ ದಾರಿ ನೋಡಲು
ಹಿಂದೆ ಜಲ ಸಾಗರ
ಮುಂದೆ ದಾರಿ ಹುಡುಕಲು
ಮುಂದೆ ಜಲ ಸಾಗರ
ಅವಳದೊಂದು ಸ್ನಿಗ್ಧ ಮನ
ಅಲ್ಲೊಂದು ದಿಕ್ಸೂಚಿ

ದೂರ ಕಂಡ ತೀರದಂಚು
ದೋಣಿ ತುಂಬ ತುಂಬು ನಗು
ನಕ್ಕು ಕಣ್ಣು ಬಿಡಲು
ಪಕ್ಕ ಕನಸ ಮಲ್ಲಿಗೆ
ಅದೇ ನಯನ ತಾವರೆ
ಸೇರಿ ಸವಿದ ಮಧುರ ನೆನಪು
ಸಕ್ಕರೆ ಗೊಂಬೆ ಮುದ್ಧು ಮಗಳು
ಅವಳು, ಮಗಳು, ನೆನಪು, ನಲಿವು
ಪಯಣದಲ್ಲಿ ಇನ್ನೇನು ಆಯಾಸ !