Saturday, June 04, 2016

ಗಿರಿಯಪ್ಪ ಗೌಡರ ಮಗಳು


ನನ್ನಿಷ್ಟದ ದಂಪತಿಗಳು ತಮ್ಮ ಅರವತ್ತನೇ ವಿವಾಹ ವಾರ್ಷಿಕ ಅಚರಿಸಿಕೊಳ್ಳುತ್ತಿದ್ದಾರೆ.
ಈ ಸಾಲುಗಳು ಆ ದಂಪತಿಗಳಿಗೆ ಮತ್ತು ಅವರ ದೀರ್ಘ ಸಹಬಾಳ್ವೆಗೆ..

ಇಲ್ಲಿನ ಕೆಲವು ಸಾಲುಗಳು ನೆಚ್ಚಿನ ಕೆ.ಎಸ್.ನ ಅವರಿಂದ ಸ್ಪೂರ್ತಿ!

****************************************

ಗಿರಿಯಪ್ಪ ಗೌಡರ ಮಗಳು ರತ್ನದಂತಹ ಹುಡುಗಿ ಊರಿಗೆಲ್ಲಾ
ಬಲುಜಾಣೆ ಗಂಭೀರೆ ಹೆಸರು ಕಮಲ
ಹತ್ತಿರದ ಹೊಳೆಯಿಂದ ನೀರ ತರುವಾಗವಳ ನೋಡಬೇಕು
ಕರುವನಾಡಿಸುವಾಗ ಅಡಿಕೆಯ ತೋಟದಲಿ ಅವಳ ಗಂಡನ ಹೆಸರು ಕೇಳಬೇಕು

ಮೊನ್ನೆ ಚಿಕ್ಕಬಸೂರು ಹಾಲಪ್ಪನವರ ಮಗನು ಹೆಣ್ಣ ನೋಡಲು ಬಂದ ಹೊಳೆಹೊನ್ನಿರಿಗೆ
ಅವರ ಮನೆಯಲಿ ಹೇಗೋ ಏನೋ ಎಂದಳು ಕಮಲ ಕೋಣೆಯೊಳಗೆ
ಚಿಕ್ಕ ಮಗಳ ಮಾತನು ಕೇಳಿ ನಕ್ಕುಬಿಟ್ಟರು ತಂದೆ
ಚಿಕ್ಕಬಸೂರಿನಿಂದ ಬಂದಿದ್ದ ಗಂಡು ಬಲು ಸೊಗಸುಗಾರ

ಹೆಸರು ಚಂದ್ರಶೇಖರ ಶಾಲೆಯ ಮಾಸ್ತರನಂತೆ
ಪ್ಯಾಂಟನಲಿ ಹೊಳೆಯುತಿಹ ಮಾಸ್ತರ ನೋಡಿ
ಹೊನಲಾಗಿಬಿಟ್ಟರು  ಹೊಳೆಹೊನ್ನೂರ ಜನತೆ
ಮುಂದೆ ಶುಭ ಮುಹೂರ್ತದಿ ಮದುವೆ ನಡೆಯಿತು ಮನೆಯಂಗಳದಿ

ಗೌಡರಿಗೆ ಚಿಂತೆ ಮಗಳ ಹೊಸಬದುಕ ಬಗ್ಗೆ
ಚಂದ್ರಶೇಖರ ಚಂದ್ರದಂತ ತಂಪನೆ ಮನಸಿನವನು
ಅದರ ಕಂಪಿನಲಿ ಅರಳಿತು ಬಲು ಬೇಗ ಪ್ರೀತಿ ಕಮಲ
ಬದುಕು ಬೆಳೆಯಿತು ಬಾಳು ಬೆಳಗಿತು

ಕಷ್ಟದಲಿ ಕೈಹಿಡಿದು ಸುಖದಲಿ ಸವಿನುಡಿದು
ಸವೆಸಿದರು ದಂಪತಿಗಳು ಬಾಳ ದಾರಿ
ಕಾಲ ಚಕ್ರ ಉರುಳಿ ವೇಗವಾಗಿ
ಅರಳಿ ನಿಂತವು ಐದು ಪ್ರೇಮ ಕುಸುಮಗಳು

ಶಶಿಧರನೆಂದರು ಸತೀಶನೆಂದರೂ  ಓಗೊಡುವ ಪರಶಿವನು
ಜೋಡಿಯ ಹರಸಿದನು ಸವಿ-ತಾ ತಂದು ಬಾಳನಲಿ
ಜೀವನ ಗೀತಾ ಸುಗುಮವಾಗಿ ಬದುಕು ಸುನಂದ-ನವಾಗಿ
ನೋಡು ನೋಡುತ್ತಾಲೇ ಕಳೆದು ಹೋದವು ದಶಕಗಳು ಆರು

ಚಂದ್ರಕಮಲವೀಗ  ಮೊಮ್ಮಕ್ಕಳು-ಮರಿಮಗಳ  ಕಲರವದ ಗೂಡು
ಮರಳಿ ನೋಡಲು ಗೌಡರ ಅದೇ ರತ್ನದಂತ ಹುಡುಗಿ
ಅದೇ  ಪ್ಯಾಂಟಿನ ತಂಪನೆ ಹುಡುಗ
ನಮ್ಮದೊಂದು ಶರಣು ಈ ಜೋಡಿ ಜೀವಕೆ ಹರಕೆ ಆಯುವಿಗೆ

****************************************

Thursday, February 18, 2016

ಅವಳು, ಮಗಳು, ನೆನಪು, ನಲಿವು

ಅದು ಯಾವುದೋ ನಗರಿ
ರಸ್ತೆ ರಸ್ತೆಯಲ್ಲ ಅಲ್ಲಿ
ಊರ ತುಂಬ ಕಾಲುವೆ
ಪಯಣ ಒಂದು ದೋಣಿಯಾನ
ಕಾಲುವೆಗೊಂದು ಕೆಂಪುಹಸಿರು ದೀಪ
ಹಸಿರುದೀಪದಿ ತೆರೆವ ಬಾಗಿಲು
ಮತ್ತೆ ಸಾಗುವ ದೋಣಿ
ದೋಣಿ ನಡೆಸುವ ಅವಳು
ಅವಳ ನಗು ಬೆಳದಿಂಗಳು

ಮತ್ತೆ ಯಾನ ನಿಲ್ಲಿಸುವ
ಕೆಂಪುದೀಪ ಆ ಬಾಗಿಲುಗಳು
ದೋಣಿ ನಿಂತಾಗ ನೋಡುವ
ಅವಳ ನಿಷ್ಕಳಂಕ ನಯನ
ಅದು ಸೋಸುವ ಪ್ರೀತಿ
ಆ ಪ್ರೀತಿಯ ರೀತಿ
ಮತ್ತೆ ಹಸಿರು ದೀಪ
ತೆರೆಯುವ ಬಾಗಿಲುಗಳು ಮನಸ್ಸು
ಹೊರಟಾಗ ಮತ್ತದೇ ಸಡಗರ

ದೂರ ತೀರದ ಪಯಾಣ
ದಣಿವು ಬಾಯರಿಕೆ ಕ್ರಮೇಣ
ಪ್ರಶ್ನೆಗಳು ಪ್ರಜ್ಞೆಗಳು
ಬಂದ ದಾರಿ ನೋಡಲು
ಹಿಂದೆ ಜಲ ಸಾಗರ
ಮುಂದೆ ದಾರಿ ಹುಡುಕಲು
ಮುಂದೆ ಜಲ ಸಾಗರ
ಅವಳದೊಂದು ಸ್ನಿಗ್ಧ ಮನ
ಅಲ್ಲೊಂದು ದಿಕ್ಸೂಚಿ

ದೂರ ಕಂಡ ತೀರದಂಚು
ದೋಣಿ ತುಂಬ ತುಂಬು ನಗು
ನಕ್ಕು ಕಣ್ಣು ಬಿಡಲು
ಪಕ್ಕ ಕನಸ ಮಲ್ಲಿಗೆ
ಅದೇ ನಯನ ತಾವರೆ
ಸೇರಿ ಸವಿದ ಮಧುರ ನೆನಪು
ಸಕ್ಕರೆ ಗೊಂಬೆ ಮುದ್ಧು ಮಗಳು
ಅವಳು, ಮಗಳು, ನೆನಪು, ನಲಿವು
ಪಯಣದಲ್ಲಿ ಇನ್ನೇನು ಆಯಾಸ !