Monday, April 07, 2008

ಪ್ರಿಯ ಸಖಿಗೆ...

ಮನಸು ಮಾತುಗಳಲ್ಲಿ
ಮುದ ಮೂಡಿಸಿ ಪ್ರೀತಿ
ಸೋಸಿ ಪ್ರಣಯದೋಟದಲ್ಲಿ
ಕೈಹಿಡಿದು ವಿಹರಿಸಿದ
ರತಿಯಂತಾಕೆಯೇ

ಕಳೆದಿದ್ದು ನನ್ನೊಂದಿಗೆ
ತಿಂಗಳುಗಳು ಹತ್ತು
ಸವಿದಿದ್ದು ಬೇವು-ಬೆಲ್ಲವೆರಡೂ
ಹೆಚ್ಚಾಗಿದ್ದು ಬೇವೇ-ಬೆಲ್ಲವೇ?

ಜಗಳ ಹಟಗಳಲ್ಲಿ
ಮಾತು ಮರೆತು ಮೌನ ಬಿರಿದು
ದಿಂಬು ಎಸೆದು ಕೋಪಗೊಂಡು
ಶಾಂತಳಾಗಿ ಮಾತಿಲ್ಲದೆ
ಬಂದು ಅಪ್ಪಿದಾಕೆಯೇ

ನೆನ್ನೆಗಳು ಮಾತು ಮಧುರ
ಅದರಲ್ಲಿ ಬೇವಿನ ಒಗರು
ಇರುವುದು ಸಹಜ
ಆದರೆ ಒಗರಿನ ಜೊತೆ
ಬೆಲ್ಲವ ಮರೆವುದೇ?

ಕತ್ತಲೆ ಕೋಣೆಯಲ್ಲಿ ನನ್ನೆಡೆಗೆ
ಭಯಾನಕ ಆಕೃತಿಗಳು
ಬಾಗಿಲು ಒದ್ದು ಒಳಬಂದಾಗ
ಭಯದಿಂದ ಸಣ್ಣಗೆ ಕಿರುಚಿಕೊಂಡ
ನನ್ನ ಅಪ್ಪಿ ತಲೆ ನೇವರಿಸಿದ ಅಮ್ಮನಂತಾಕೆಯೇ

ಆಟ ತುಂಟಾಟಗಳಲ್ಲಿ
ಕಾಡಿಸಿ ಪೀಡಿಸಿ
ಪ್ರೀತಿಸಿ ಪ್ರೀತಿ ಹಂಚಿಕೊಂಡು
ನವವರ್ಷವ ಕಳೆಯೋಣವೇ
ಪ್ರಿಯಸಖಿಯೇ?

ಬರಲಿರುವ ದಿನಗಳಲ್ಲಿ
ನನ್ನ ಹಾರೈಕೆ ಇಷ್ಟೇ
ಇರಲಿ ನಮ್ಮ ಬಾಳಿನಲ್ಲಿ
ಬೆಲ್ಲದ ಸವಿ ಯಶದ ಸವಿ
ಮರೆಯುವುದ ಬೇಡ ಬೇವಿನ ಕಹಿ