Tuesday, October 13, 2009

ಪಶ್ಚಿಮ ತೀರದ ನಗರಿ ಕೋನಾ...

ಹಿಲೋದಲ್ಲಿ ಅವತ್ತು ನಮ್ಮ ಕೊನೆ ದಿವಸ.

ಹಿಲೋ ಬಿಡುವುದಕ್ಕಿಂತ ಮುಂಚೆ ಹತ್ತಿರದಲ್ಲೇ ಇದ್ದ ಚಿಕ್ಕ ಕಸೂತಿ ಅಂಗಡಿಗೆ ದಾಳಿ ಇಟ್ಟಳು ನನ್ನಾಕೆ. ಅಲ್ಲೊಂದಿಷ್ಟು ಸುಂದರ ಕುಸುರಿ ಕೆಲಸದ ಸರಗಳು, ತೆಂಗಿನ ಗರಿಗಳಿಂದ ಮಾಡಿದ ಪರ್ಸ್ ಕಾರ್ ಸೇರಿದವು.

ಹಿಲೋದಿಂದ ಕೋನಾದ ಕಡೆ ನಮ್ಮ ಪಯಣ ಶುರುವಾಯ್ತು. ನಾವು ಬರುವಾಗ ಹವಾಯಿ ಪೂರ್ವ ತೀರಕ್ಕೆ ಅಂಟಿಕೊಂಡಿರುವ ರಸ್ತೆಯಲ್ಲಿ ಬಂದಿದ್ದೆವು. ಈಗ ಭಿನ್ನತೆಯಿರಲೆಂದು ಹವಾಯಿ ಮಧ್ಯ ಭಾಗದಲ್ಲಿ ಹರಿದು ಹೋಗುವ ಸ್ಯಾಡಲ್ ರಸ್ತೆಗೆ ಇಳಿದೆವು. ಸುಮಾರು ೯೦ ಮೈಲಿಯ ರಸ್ತೆಯಾದರೂ, ಮೊದಲ ೪೦ ಮೈಲಿಯಂತೂ ವಿಪರೀತ ತಿರುವುಗಳು. ನಂತರ ದಾರಿಯಲ್ಲಿ ಸಿಕ್ಕಿದ್ದು ಒಂದು ಬೆಟ್ಟದ ಮೇಲಿದ್ದ ವೀಕ್ಷಣಾಲಯ. ನಂತರ ಅಮೇರಿಕೆ ಸೇನೆಯ ಯಾವುದೋ ಒಂದು ನಿರ್ಬಂಧಿತ ಪ್ರದೇಶ.ಅದಾದ ಮೇಲೆ ಒಮ್ಮೆಗೆ ರಸ್ತೆ ಬೆಟ್ಟ ಎರುತ್ತಾ ಸಾಗುತ್ತದೆ. ಅಮೇಲೆ ಹಸಿರು ಹುಲ್ಲುಗಾವಲು ಪ್ರದೇಶ. ಹೀಗೆ ಸುಮಾರು ೩ ಗಂಟೆಗಳ ನಂತರ ಕೋನ ನಗರಕ್ಕೆ ತಲುಪಿದೆವು.

ಕೋನಾ...

ಬಿಗ್ ಐಲೆಂಡ್‍ನ ಪಶ್ಚಿಮ ತೀರದ ನಗರ. ಕಿಲಹೂ ಕೋನ ಆ ನಗರದ ಪೂರ್ಣ ಹೆಸರು. ಕಮಹಮಯ ತನ್ನ ಸಾಮ್ರಾಜ್ಯದ ರಾಜಧಾನಿಯಾಗಿ ಬೆಳಸಿದ ನಗರ. ಮುಂದೆ ಆ ರಾಜಧಾನಿ ಹೊನಲುಲಿಗೆ ಸ್ಥಳಾಂತರವಾದ ನಂತರ, ಕೋನಾ ಹವಾಯಿಯ ರಾಜ ಮನೆತನದ ವಿಶ್ರಾಂತಿ ನಗರವಾಗಿತ್ತು. ಈಗ ಇದು ಬಿಗ್ ಐಲೆಂಡ್‍ನ ಪ್ರಮುಖ ಪ್ರವಾಸಿ ಸ್ಥಳ.

ಅಲೀ ಡ್ರೈವ್, ಸಮುದ್ರ ತೀರದುದ್ದಕ್ಕೂ ಹಬ್ಬಿರುವ ರಸ್ತೆ. ಕೋನಕ್ಕೆ ಆಗಮಿಸುವ ಪ್ರವಾಸಿಗರು ಮೊದಲು ಇಳಿಯುವುದು ಈ ಅಲೀ ಡ್ರೈವ್‍ಗೆ. ಕೋನದ ಬಹುತೇಕ ಪ್ರಮುಖ ಹೋಟೆಲ್‍ಗಳು ಇರುವುದು ಈ ರಸ್ತೆಯಲ್ಲೇ. ಹಾಗೆಯೇ ಎಲ್ಲಾ ನಮೂನೆಯ ಶಾಪಿಂಗ್‍ಗೆ ಬೇಕಾದ ಅಂಗಡಿಗಳು ಇವೆ.

ಹತ್ತಿರದಲ್ಲೇ ಇದ್ದ ಪಾರ್ಕಿಂಗ್‍ನಲ್ಲಿ ಕಾರ್ ನಿಲ್ಲಿಸಿ, ಅಲೀ ಡ್ರೈವ್‍ಗೆ ಇಳಿದೆವು. ಆ ಮಧ್ಯಾಹ್ನದ ಬಿಸಲಿನಲ್ಲೂ ಆ ತೀರದೂದ್ದಕ್ಕೂ ಓಡುತ್ತಿದ್ದವರು ಕಂಡರು.ಅವರೆಲ್ಲಾ ಹವಾಯಿ ಪ್ರಸಿದ್ಧ ’ಐರೆನ್‍ಮ್ಯಾನ್ ಟ್ರೈಥಾಲಾನ್’ಗೆ ತಯಾರಾಗುತ್ತಿದ್ದ ಸ್ಪರ್ಧಾಳುಗಳು. ಐರೆನ್‍ಮ್ಯಾನ್ ಟ್ರೈಥಾಲಾನ್, ಪ್ರಪಂಚದ ಅತ್ಯಂತ ಕಠಿಣ ಟ್ರೈಥಾಲಾನ್. ಸುಮಾರು ಎರಡುವರೆ ಮೈಲಿ ಸಮುದ್ರದಲ್ಲಿ ಈಜು, ೧೧೨ ಮೈಲು ಸೈಕಲ್ ಸವಾರಿ ಕೊನೆಗೆ ೨೬ ಮೈಲಿ ಮೆರಥಾನ್ ಓಟ. ಎಂತಹ ಅಥ್ಲೀಟ್‍ಗೂ ಕಠಿಣ ಸವಾಲೇ. ಇದರಲ್ಲಿ ವಿಶ್ವದ ಯಾವುದೇ ದೇಶದವರು ಭಾಗವಹಿಸಬಹುದು.

ಅಲೀ ಡ್ರೈವ್‌ನ ಪ್ರಮುಖ ಆಕರ್ಷಣೆ - ಅಲ್ಲಿನ ವಿವಿಧ ಅಂಗಡಿಗಳು. ಟೀ ಶರ್ಟ್, ಟೋಪಿಯಿಂದ ವಿವಿಧ ಅಭರಣಗಳವರೆಗೆ ಎಲ್ಲಾ ನಮೂನೆಗಳು ಇಲ್ಲಿವೆ. ಸುಮ್ಮನೆ ಆ ಅಂಗಡಿಗಳ ಮುಂದೆ ಅಲೆಯುವುದು ಒಂದು ಒಳ್ಳೆಯ ಚಟುವಟಿಕೆಯೇ ! ನಾವು ಅಲ್ಲಿದ್ದ ಒಂದು ಹವಾಯಿಯನ್ ಆಭರಣಗಳ ಅಂಗಡಿಗೆ ಹೊಕ್ಕು, ಒಂದು ಹವಾಯಿಯನ್ ಕಲ್ಲುಗಳ ಆಭರಣ ಇಷ್ಟವಾಗಿ, ಅಲ್ಲಿಂದ ಆ ಅಭರಣ ನನ್ನಾಕೆ ಕೊರಳು ಸೇರಿತ್ತು !

ಅಲೀ ಡ್ರೈವ್‍ನಲ್ಲಿ ಇರುವ ಇನ್ನೊಂದು ಅಕರ್ಷಣೆ - ಹುಲಿಹೀ ಅರಮನೆ. ಹವಾಯಿ ರಾಜಮನೆತನದ ರಜೆಕಾಲದ ಅರಮನೆ ಈಗ ಮೂಸಿಯಂ. ಸುಮಾರು ೧೦೦-೧೫೦ ವರ್ಷ ಹಳೆಯ ಈ ಕಟ್ಟಡ, ಅಷ್ಟೇನೂ ದೊಡ್ಡದಿಲ್ಲ, ಅಂತಹ ಕರಕುಶಲತೆಯಾಗಲಿ, ಕುಸುರಿಕಲೆಯಾಗಲಿ ಯಾವುದೂ ಕಂಡುಬರಲಿಲ್ಲ.

ಅಲ್ಲಿಂದ ನಾವು ಒಂದು ಸುಂದರ ಬೀಚ್‍ನೆಡೆಗೆ ಹೊರಟೆವು. ಕೋನದಿಂದ ಸುಮಾರು ೫೦ ನಿಮಿಷದ ದೂರದಲ್ಲಿ ಇರುವ ಬೀಚ್ ಇದು. ಬೇರೆಲ್ಲಾ ಬೀಚ್‍ಗಳಂತೆ ಇಲ್ಲಿ ಜನಸಾಂದ್ರತೆ ಕಡಿಮೆ. ತುಂಬಾ ಕಡಿಮೆ ಜನಕ್ಕೆ ಗೊತ್ತಿರುವ ಸ್ಥಳ. ಇಲ್ಲಿಗೆ ಕೆಲವು ಸಾರಿ ಬಂದಿದ್ದ ನನ್ನ ಸ್ನೇಹಿತರೊಬ್ಬರು ಹೇಳದಿದ್ದರೆ ನಮಗೂ ಈ ಸುಂದರ ಬೀಚ್‍ ಬಗ್ಗೆ ತಿಳಿಯುತ್ತಿರಲಿಲ್ಲ.

ತಿಳಿನೀಲಿ ಬಣ್ಣದ ಸಾಗರ ಮತ್ತು ಸುಂದರ-ಚಿಕ್ಕ ಮರಳಿನ ತೀರ ಅದ್ಭುತವಾಗಿತ್ತು. ಸಮುದ್ರದ ನೀರು ಪಾರದರ್ಶಕವಾಗಿ ತಳದ ಕಲ್ಲುಗಳು ಕಾಣುತ್ತಿದ್ದವು. ಆ ಮರಳು-ನೀರಿನ್ನೂದ್ದಕ್ಕೂ ಬರಿಗಾಲಿನಲ್ಲಿ ಸ್ವಲ್ಪ ಹೊತ್ತು ನಮ್ಮ ಸುತ್ತಾಟ ನಡೆಯಿತು. ನಂತರ ಅಲ್ಲೇ ಮರಳಲ್ಲಿ ಸ್ವಲ್ಪ ಹೊತ್ತು ಬಿದ್ದುಕೊಂಡಿದ್ದೆ. ಆಗಲೇ ನನ್ನಾಕೆ ನೀರಲ್ಲಿ ಇಳಿದು ಆಗಲೇ ಆಟವಾಡುತ್ತಿದ್ದಳು.

ಸಂಜೆ ಕೆಂಪಾಗುವರೆಗೆ ಅಲ್ಲೇ ನೀರನಲ್ಲಿ ಆಟವಾಡಿ, ಬೀಚ್‍ನಲ್ಲಿ ಮತ್ತೆ ತಿರುಗಾಡುವಷ್ಟರಲ್ಲಿ ಆಗಲೇ ಆರು ಗಂಟೆಯ ಸಮಯ. ನಮ್ಮ ವಾಪಸ್ ಯಾತ್ರೆ ಇನ್ನೊಂದು ಎರಡು ಗಂಟೆಯಲ್ಲಿ ಶುರುವಾಗಲ್ಲಿತ್ತು. ಆ ಬೀಚ್‍ಗೆ ವಿದಾಯ ಹೇಳಿ ನಮ್ಮ ಪಯಣ ಕೋನಾ ವಿಮಾನ ನಿಲ್ದಾಣದೆಡೆಗೆ ಹೊರಟಿತು. ದಾರಿಯುದ್ದಕ್ಕೂ ಕೆಂಪಾದ ಸೂರ್ಯ ಆ ನೀಲ ಸಾಗರದಲ್ಲಿ ಕರಗಿ ಹೋಗುವದನ್ನು ನೋಡುತ್ತಾ ನಡೆದವು.

ಕೋನಾ ವಿಮಾನ ನಿಲ್ದಾಣಕ್ಕೆ ಬಂದು, ನಮ್ಮ ಹವಾಯಿ ಯಾತ್ರೆಯ ಪ್ರಮುಖ ಭಾಗವಾದ ಕಾರನ್ನು ಮರಳಿ ಕೊಟ್ಟೆವು. ಅಲ್ಲಿಂದ ಸೆಕ್ಯುರಿಟಿ ತಪಾಸಣೆ ಮುಗಿಸಿಕೊಂಡು ವಿಮಾನ ಹೊಕ್ಕೆವು. ಜಾತ್ರೆಗೆ ಹೋಗಿ ಮರಳಿ ಬರುವಾಗ ಇರುವ ಬಸ್ಸಿನಂತೆ ಇತ್ತು ಸನ್ನಿವೇಶ ! ಎಲ್ಲರ ಮೈಮೇಲೂ ಹವಾಯಿಯ ಶರ್ಟ್‍ಗಳು, ಕೆಲವರು ಹವಾಯಿ ಹಾರಗಳನ್ನು ಧರಿಸಿ ಬಂದಿದ್ದರು. ಎಲ್ಲರ ಹತ್ತಿರವೂ ಹವಾಯಿಯಲ್ಲಿ ತೆಗೆದುಕೊಂಡ ಅನೇಕ ವಸ್ತುಗಳು. ಹಬ್ಬದಂತಹ ವಾತಾವರಣ !

ಕೋನಾದ ಬಿಟ್ಟು ವಿಮಾನ ಆಕಾಶಕ್ಕೆ ಹಾರಿದಾಗ ಆಗಲೇ ರಾತ್ರಿ ೧೦ರ ಸಮಯ.

ಸುಂದರ ಬೀಚ್‍ಗಳು, ಕಿತ್ತಲೆ ಬಣ್ಣದ ಲಾವಾ, ಹಸಿರು ಕಾನನ, ಜಲಪಾತಗಳು, ಜ್ವಾಲಾಮುಖಿ...ಮನಸ್ಸು ಖುಷಿಯಾಗಿ ಮೆಲುಕು ಹಾಕುತಿತ್ತು.

ಬೆಳಗಿನ ತಿರುಗಾಟದಿಂದ ಸುಸ್ತಿನಿಂದ ಕೆಲವು ಕ್ಷಣಗಳಲ್ಲಿ ನಿದ್ದೆಗೆ ಹಾರಿದ್ದೆವು...

ಮತ್ತೆ ಹವಾಯಿ ಕಾಡುತ್ತಿತ್ತು..

Wednesday, September 09, 2009

ಅಪ್ರತಿಮ ಯೋಧನೊಬ್ಬನ ಕಥೆ...

ಹವಾಯಿಯಲ್ಲಿ ಇಳಿದಾಗಿನಿಂದ ಇಲ್ಲಿಯವರೆಗೆ ಎಲ್ಲಿ ಆಲೆದಾಡಿದರೂ ಒಂದು ಹೆಸರು ಪದೇ ಪದೇ ಕಾಣಿಸುತಿತ್ತು.

ಕಮಹಮಯ...

ಅನೇಕ ನಗರಗಳ ಮುಖ್ಯ ರಸ್ತೆಗಳು, ಅಲ್ಲಿನ ವಿಶ್ವವಿದ್ಯಾಲಯ..ಎಲ್ಲೆಲ್ಲೂ ಕಮಹಮಯ ಹೆಸರು.

ಹವಾಯಿ ದ್ವೀಪಗಳ ಭೌಗೋಳಿಕ ಮತ್ತು ನೈಸರ್ಗಿಕ ಸೌಂದರ್ಯ್ಯದಷ್ಟೇ ವಿಭಿನ್ನವಾಗಿರುವುದು ಅದರ ಇತಿಹಾಸ.

ನಮ್ಮ ಕಾರ್ ಅಂತಹ ಒಂದು ಐತಿಹಾಸಿಕ ತಾಣದೆಡೆಗೆ ಹೊರಟಿತ್ತು. ಪುಕೋಹಲ ಹಿಹೂ ಎಂಬುದು ಹವಾಯಿ ಅತ್ಯಂತ ಪುರಾತನ ದೇವಾಲಯ ಮತ್ತು ಪ್ರಾಚೀನ ಸ್ಥಳ. ಹಿಲೋದಿಂದ ಸುಮಾರು ೨ ಗಂಟೆಗಳ ಪಯಣ..

ಪಾಲಿನೇಷಿಯನ್ ಜನ ಈ ದ್ವೀಪಗಳಿಗೆ ಬಂದು, ತಮ್ಮ ವಾಸಸ್ಥಳ ಮಾಡಿಕೊಳ್ಳುವುದರಿಂದ ಶುರುವಾಗುತ್ತದೆ ಹವಾಯಿ ಇತಿಹಾಸ. ನಂತರದ ಪ್ರಮುಖ ಘಟ್ಟ- ಬ್ರಿಟಿಷ್ ನಾವಿಕ ಕ್ಯಾಪ್ಟನ್ ಕುಕ್‍ ಈ ದ್ವೀಪಗಳನ್ನು ಅನ್ವೇಷಿಸುವುದು. ನಡುವೆ ಹವಾಯಿ ಸಾಮ್ರಾಜ್ಯ ಸ್ಥಾಪನೆ. ಕ್ರೈಸ್ತ ಮಿಷಿನರಿಗಳ ಆಗಮನ, ಫ್ರೆಂಚ್‍ರೊಂದಿಗೆ ಯುದ್ಧ, ಆಂತರಿಕ ಯುದ್ಧಗಳು, ಆಮೇರಿಕೆದೊಂದಿಗೆ ಒಪ್ಪಂದ, ಕೊನೆಗೆ ಅಮೇರಿಕೆಯ ೫೦ನೇ ರಾಜ್ಯವಾಗಿ ಸೇರ್ಪಡೆ, ಎರಡನೇಯ ವಿಶ್ವಯುದ್ಧದಲ್ಲಿ ಜಪಾನಿಯರಿಂದ ಹವಾಯಿ ಪರ್ಲ್ ಹಾರ್ಬರ್ ಮೇಲೆ ದಾಳಿ- ಪರಿಣಾಮ ಯುದ್ಧಕ್ಕೆ ಅಮೇರಿಕದ ಪ್ರವೇಶ......

ಹೀಗೆ ತೆರೆದುಕೊಳ್ಳುತ್ತಾ ಹೋಗುತ್ತದೆ ಹವಾಯಿ ಇತಿಹಾಸ ರಕ್ತಸಿಕ್ತವಾಗಿ ...

ಇಂತಹ ಹವಾಯಿಯ ಇತಿಹಾಸದಲ್ಲಿ ಪ್ರಮುಖ ಘಟ್ಟವೇ...ಹವಾಯಿ ಸಾಮ್ರಾಜ್ಯ ಸ್ಥಾಪನೆ.

ಅದು ೧೭೦೦ ಸಮಯ, ಹವಾಯಿ ದ್ವೀಪಗಳನ್ನು ಅಲ್ಲಿನ ಅಸಂಖ್ಯಾತ ಬುಡಕಟ್ಟಿನ ನಾಯಕರು ಆಳುತ್ತಿದ್ದರು. ದ್ವೀಪಗಳ ನಡುವೆ ಯುದ್ಧ ಸರ್ವೇಸಾಮಾನ್ಯವಾಗಿತ್ತು. ಹವಾಯಿ ಕತೆಗಳ ಪ್ರಕಾರ ಮಹಾನ್ ಯೋಧನೊಬ್ಬ ಈ ಎಲ್ಲಾ ದ್ವೀಪಗಳನ್ನು ಒಗ್ಗೂಡಿಸಿ, ಅದರ ರಾಜ್ಯಭಾರ ಮಾಡುತ್ತಾನೆಂದು, ಆ ಯೋಧ ಹುಟ್ಟಿದ ದಿನದಂದು ಧೂಮಕೇತುವೊಂದು ಕಾಣಿಸುವುದೆಂದು ಪ್ರತೀತಿ.

ಆಂತಹ ಧೂಮಕೇತುವೊಂದು ಕಾಣಿಸಿಕೊಂಡ ದಿನದಂದು ಹುಟ್ಟಿದವನೇ ಕಮಹಮಯ.(೧೭೫೦ ರ ಸಮಯದಲ್ಲಿ ಹವಾಯಿಯಲ್ಲಿ ಹ್ಯಾಲಿ ಧೂಮಕೇತು ಕಾಣಿಸಿಕೊಂಡ ಉಲ್ಲೇಖಗಳಿವೆ). ಆಗ ಆಳ್ವಿಕೆ ನಡೆಸುತ್ತಿದ್ದ ಆಳಪ ಎನ್ನುವ ರಾಜ, ಈ ಮಗು ಬೆಳೆದರೆ ತನ್ನ ಅಧಿಕಾರಕ್ಕೆ ಕೊನೆಗಾಲವೆಂದು, ಈ ಮಗುವನ್ನು ಕೊಲ್ಲಲು ಆದೇಶಿಸುತ್ತಾನೆ. ಇದನ್ನು ಮೊದಲೇ ಅರಿತಿದ್ದ ಕಮಹಮಯಯ ಪೋಷಕರು, ಆ ಮಗುವನ್ನು ಹುಟ್ಟಿದ ಕೂಡಲೇ ಇನ್ನೊಬ್ಬ ಪಂಗಡದ ನಾಯಕನಿಗೆ ಗುಪ್ತವಾಗಿ ವರ್ಗಾಯಿಸಿರುತ್ತಾರೆ. ಆ ಮಗು ಅಲ್ಲಿ ಗುಪ್ತವಾಗಿ ಬೆಳೆಯುತ್ತದೆ. ಸುಮಾರು ಐದು ವರ್ಷದ ನಂತರ, ಆ ರಾಜನಿಗೆ ತಾನು ಮಾಡಿದ್ದು ತಪ್ಪೆಂದು ಅನಿಸಿ, ಆ ಮಗುವನ್ನು ಹುಡುಕಿಸಿ ಮರಳಿ ಕರೆತಂದು ಶಿಕ್ಷಣ ಕೊಡಿಸುತ್ತಾನೆ. ಅಲ್ಲಿ ಕಮಹಮಯನ ಯುದ್ಧ ಮತ್ತು ರಾಜತಾಂತ್ರಿಕತೆಯ ಶಿಕ್ಷಣ ನಡೆಯುತ್ತದೆ.

ಆಳಪ ರಾಜ ತೀರಿಕೊಂಡಾಗ, ಅವನ ಸ್ಥಾನ ತುಂಬಲು ಆಳಪನ ಮಗ ಮತ್ತು ಆಳಪನ ಸಂಬಂಧಿಯೊಬ್ಬನ ನಡುವೆ ಸಂಘರ್ಷ ಉಂಟಾಗುತ್ತದೆ. ಆಗ ಕಮಹಮಯ ಆಳಪನ ಸಂಬಂಧಿಗೆ ಬೆಂಬಲ ನೀಡಿ, ಆತನ ಮಂತ್ರಿಮಂಡಲದಲ್ಲಿ ಸ್ಥಾನ ಪಡೆಯುತ್ತಾನೆ. ಮುಂದೆ ಈ ರಾಜನೂ ಸತ್ತಾಗ ಕಮಹಮಯ ತಾನೇ ರಾಜನಾಗುತ್ತಾನೆ. ಬ್ರಿಟಿಷ್ ಮತ್ತು ಅಮೇರಿಕದ ವ್ಯಾಪಾರಿಗಳ ಜೊತೆ ಸಂಧಾನ ಮಾಡಿಕೊಂಡು, ಅವರಿಂದ ಹೊಸ ಆಯುಧಗಳನ್ನು ಪಡೆಯುತ್ತಾನೆ. ಹೊಸ ಆಯುಧಗಳು, ಯುದ್ಧತಂತ್ರಗಳಿಂದ ಮುಂದಿನ ಹಲವು ವರ್ಷಗಳಲ್ಲಿ ಹವಾಯಿ ದ್ವೀಪದ ಎಲ್ಲಾ ನಾಯಕರನ್ನು ಮಣಿಸುತ್ತಾನೆ. ಮುಂದೆ ಹವಾಯಿಯನ್ನು ಒಂದು ಅಖಂಡ ಪ್ರಾಂತ್ಯವನ್ನಾಗಿ ರೂಪಿಸುತ್ತಾನೆ. ಹವಾಯಿನ್ ಜನರ ನೆಲ-ಕಲೆ-ಭಾಷೆ ಅಭಿವೃದ್ಧಿಗಾಗಿ ಅನೇಕ ಶಾಸನಗಳನ್ನು ಹೊರತರುತ್ತಾನೆ...ಹೀಗೆ ಹವಾಯಿಯ ಸುಪ್ರಸಿದ್ಧ ವ್ಯಕ್ತಿತ್ವವಾಗುತ್ತಾನೆ.

ಎರಡು ಗಂಟೆಗಳ ಪಯಣದ ನಂತರ ನಾವೀಗ ಪುಕೋಹಲ ಹಿಹೂ ತಲುಪಿದ್ದೆವು. ಅದೊಂದು ಕೆಂಪು ಕಲ್ಲುಗಳನ್ನು ಜೋಡಿಸಿ ಕಟ್ಟಿದ ಬೃಹತ್ ಕಟ್ಟಡ. ದೇವಾಲಯ ಅಂದೊಂಡನೆ ನಮ್ಮಲ್ಲಿನ ಕಲ್ಲಿನಲ್ಲಿ ಅರಳಿದ ದೇವಾಲಯಗಳು ಕಣ್ಮುಂದೆ ಬಂದವು. ಆದರೆ ಈ ದೇವಾಲಯದಲ್ಲಿ ಅಷ್ಟೊಂದು ಕರಕುಶಲತೆಯಾಗಲಿ ಅಥವಾ ಕುಸುರಿಕಲೆಯಾಗಲಿ ಇರಲೇ ಇಲ್ಲ. ಅದೊಂದು ಕಲ್ಲುಗಳನ್ನು ಒಟ್ಟಾಗಿ ಜೋಡಿಸಿಟ್ಟ ಕಟ್ಟಡವಾಗಿತ್ತು.

ಆ ಯುದ್ಧಗಾಲದಲ್ಲಿ ಎಲ್ಲವನ್ನೂ ಗೆಲ್ಲುತ್ತಾ ಬಂದ ಕಮಹಮಯ, ಒಬ್ಬ ನಾಯಕನೊಡನೆ ೮ ಸಾರಿ ಯುದ್ಧ ಮಾಡಿದರೂ ಯಾವುದೇ ಪಲಿತಾಂಶ ಬಂದೇ ಇರುವುದಿಲ್ಲ. ಆಗ ಒಬ್ಬ ಅರ್ಚಕನೊಬ್ಬ ಕಮಹಮಯನಿಗೆ, ಯುದ್ಧ ದೇವತೆಯ ಆರಾಧಿಸಲು ಒಂದು ದೇವಾಲಯ ಕಟ್ಟಲು ಸೂಚಿಸುತ್ತಾನೆ. ಆಗ ಕಟ್ಟಿದ್ದೇ ಪುಕೋಹಲ ಹಿಹೂ. ಇದರ ಕಟ್ಟಡ ಮುಗಿದಾಗ ಕಮಹಮಯ , ಆ ಪ್ರತಿಸ್ಪರ್ದಿ ನಾಯಕನಿಗೆ ಶಾಂತಿ ಮಾತುಕತೆಗೆ ಇಲ್ಲಿಗೆ ಆಹ್ವಾನಿಸುತ್ತಾನೆ. ಅಲ್ಲೆನೋ ಆಗುತ್ತೆಂದು ಗೊತ್ತಿದ್ದು, ಆ ನಾಯಕ ಬಂದಾಗ, ಅವನನ್ನು ಕಮಹಮಯಿಯ ಯೋಧರು ಹತ್ತೆಗೈಯುತ್ತಾರೆ.ಜಾನ್ ಯಂಗ್ ಎಂಬ ಬ್ರಿಟಿಷ್ ನಾವಿಕ ಕಮಹಮಯಿಯ ಯುದ್ಧ ಸಲಹೆಗಾರ. ಜಾನ್‍ನ ಮನೆ ಮತ್ತು ಅವನ ರಾಂಚ್ ಪುಕೋಹಲ ಹಿಹೂ ಹತ್ತಿರದಲ್ಲೆ ಇದೆ.

ಅಲ್ಲಿಂದ ಹಿಲೋಗೆ ಮರಳಿದಾಗ ಮಧ್ಯಾಹ್ನದ ಸಮಯ. ವಿಪರೀತ ಬಿಸಿಲು. ಹಿಲೋದಲ್ಲಿ ಕಮಹಮಯನ ೧೪ ಅಡಿ ಎತ್ತರದ ಬೃಹತ್ ಪ್ರತಿಮೆಯೊಂದಿದೆ. ಅದನ್ನು ನೋಡಿಕೊಂಡು,ನಮ್ಮ ಹೋಟೆಲ್ ಹತ್ತಿರವಿದ್ದ ಕೊಕೋನೆಟ್ ದ್ವೀಪಕ್ಕೆ ತೆರಳಿ, ಅಲ್ಲಿ ಸಮುದ್ರದ ದಡದಲ್ಲಿ ಕುಳಿತೆವು. ಬಿಸಿಲಿನ ದಗೆಯಿಂದ ದಡಕ್ಕಿಂತ ನೀರಿನಲ್ಲೇ ಹೆಚ್ಚು ಜನವಿದ್ದರು. ಅದ್ಯಾವುದೋ ಎತ್ತರದ ಕಟ್ಟೆಯಿಂದ ಹುಡುಗರು ಸಮುದ್ರಕ್ಕೆ ಧುಮುಕುತ್ತಿದ್ದರು. ಈ ಕಡೆ ಅನೇಕ ಕುಟುಂಬಗಳು ತಿಂಡಿ-ತಿನಿಸು ಮೆಲ್ಲುತ್ತಾ ಇದ್ದವು. ಅದ್ಯಾವುದೋ ಹವಾಯಿಯನ್ ಕುಟುಂಬವೊಂದು ನಮ್ಮನ್ನು ಕರೆದು ಮಾತಾಡಿಸಿ, ಭಾರತದ ಬಗ್ಗೆ ಒಂದು ರಾಶಿ ಕುತೂಹಲ ತೋರಿಸಿಕೊಂಡರು.

ಆ ತೀರ ಬಹುತೇಕ ಕಡೆ ಕಲ್ಲುಬಂಡೆಗಳಿಂದ ಆವೃತವಾಗಿತ್ತು. ಅದ್ಯಾವುದೋ ಕಲ್ಲು ಬಂಡೆಯ ಮೇಲೆ ನನ್ನಾಕೆ ಬ್ಯಾಗ್ ಒಂದರಲ್ಲಿ ತನ್ನ ಟವೆಲ್ ಇಟ್ಟುಕೊಂಡು ಕುಳಿತ್ತಿದ್ದಳು. ಆಗ ಅದೆಲ್ಲಂದಲೋ ಬಂದ ಒಂದು ದೊಡ್ಡ ಅಲೆ ಆ ಟವಲ್ ಬ್ಯಾಗ್ ನೀರಿಗೆ ಎಳೆದುಕೊಂಡು ಹೋಗಬೇಕೇ. ಸರಿ, ಅಂತಹ ಆಳವಾಗಿರಲಿಲ್ಲವೆಂದು ಎಣಿಸಿ, ಆ ಬ್ಯಾಗ್‍ನ ತರಲು ಇಳಿದೆ ನೀರಿಗೆ. ಅಲೆಯ ಹೊಡೆತಕ್ಕೆ ಆ ಬ್ಯಾಗ್ ತೇಲುತ್ತಾ ತೇಲುತ್ತಾ ಎಲ್ಲೆಲ್ಲೋ ಹೋಗತೊಡಗಿತ್ತು. ಕೊನೆಗೂ ಅದನ್ನು ಹಿಡಿದುಕೊಂಡು ನೀರಿನಿಂದ ಹೊರಬಂದಾಗ, ಪೂರ್ತಿ ಒದ್ದೆ ಒದ್ದೆ. ಆವಾಗ ನೋಡಿಕೊಂಡಿದ್ದು, ಕಾಲಿನಿಂದ ಜಿನುಗಿತ್ತಿದ್ದ ರಕ್ತ. ಆಗಿದ್ದೆನೆಂದರೆ, ಆ ಬ್ಯಾಗ್ ಹಿಡಿಯಲು ಹೋದಾಗ ತಳದಲ್ಲಿದ್ದ ಚೂಪಾದ ಕಲ್ಲುಗಳು ಪಾದವನ್ನು ಕೊಯ್ದಿದ್ದವು. ಅಂತಹ ದೊಡ್ಡ ಗಾಯವೇನೂ ಆಗಿಲ್ಲದಿದ್ದರೂ, ಹವಾಯಿ ನೆನಪಿಗೆಂದು ಕಾಲಿನಲ್ಲಿ ಗುರುತುಗಳು ಮೂಡಿದ್ದವು ! ಇನ್ನೂ ಬ್ಯಾಗ್‍ಗೋಸ್ಕರ ನಾನು ಮಾಡಿದ ಸಾಹಸ ನೋಡಿ ನನ್ನಾಕೆಯಿಂದ ಪೂರ್ತಿ ಅಂಕ ಸಿಕ್ಕವು!

(ಕೊನೆಯ ಭಾಗದಲ್ಲಿ: ಕೋನದ ವೀಕ್ಷಣೆ ಮತ್ತು ವೈಕೋಲವೆಂಬ ಮೋಹಕ ಬೀಚ್)

Thursday, August 20, 2009

ಜ್ವಾಲಾಮುಖಿಯ ಮುಂದೆ ನಿಂತು...

ಸಾವಿರಾರು ಮಿಲಿಯನ್ ವರ್ಷಗಳ ಹಿಂದೆ ಸಮುದ್ರದಲ್ಲಿನ ಜ್ವಾಲಾಮುಖಿಯ ನಿರಂತರ ಆಟದಿಂದ ಉಂಟಾಗಿದ್ದೇ ಈ ಹವಾಯಿ ದ್ವೀಪ ಸಮೂಹ. ಇಂತಹ ದ್ವೀಪ ಸಮೂಹವನ್ನು ಸೃಷ್ಟಿ ಮಾಡಿದ ಜ್ವಾಲಾಮುಖಿಯ ಈಗಲೂ ತನ್ನ ಇರುವಿಕೆಯನ್ನು ತೋರಿಸುತ್ತಿದೆ.

ಸನಿಹದಿಂದ ಆ ಆಗಾಧ ಶಕ್ತಿಯ ಜ್ವಾಲಾಮುಖಿಯನ್ನು ನೋಡಲು ಅತ್ಯಂತ ಪ್ರಶಸ್ತ ಸ್ಥಳ- ಹವಾಯಿ ವಾಲ್‍ಕೆನೊ ನ್ಯಾಷನಲ್ ಪಾರ್ಕ್.

ಹವಾಯಿ ದ್ವೀಪಗಳಲ್ಲೇ ಅಗ್ರಗಣ್ಯ ಪ್ರೇಕ್ಷಣೀಯ ತಾಣ.

ತಿಳಿದ ಮಟ್ಟಿಗೆ ಜಗತ್ತಿನ ಬೇರೆ ಎಲ್ಲೂ ಜ್ವಾಲಾಮುಖಿಯನ್ನು ಮುಖಾಮುಖಿ ನೋಡಲು ಸಾಧ್ಯವಿಲ್ಲವೇನೊ?

ಹಿಲೋ ನಗರದಿಂದ ಸುಮಾರು ೫೦ ನಿಮಿಷದ ಕಾರ್ ಪ್ರಯಾಣದ ನಂತರ ಆ ವಾಲ್‍ಕೆನೊ ನ್ಯಾಷನಲ್ ಪಾರ್ಕ್‍ನ ಬಾಗಿಲಲ್ಲಿ ಇದ್ದೆವು. ಮೌನಲೂ ಶಿಖರದಿಂದ ಸಮುದ್ರದವರೆಗೆ ಹಬ್ಬಿರುವ ೩೩೦೦೦೦ ಎಕರೆಯ ಬೃಹತ್ ಪ್ರದೇಶ. ಎರಡು ಸಕ್ರಿಯ ಜ್ವಾಲಾಮುಖಿಗಳು, ಲೆಕ್ಕವಿಲ್ಲದಷ್ಟು ಜ್ವಾಲಾಮುಖಿ ಕಣಿವೆಗಳು, ಆಕರ್ಷಕ ಲಾವಾ ಟ್ಯೂಬ್, ೧೮ ಮೈಲಿಗಳ ವಿಭಿನ್ನ ಡ್ರೈವ್...ಏನುಂಟು ಏನಿಲ್ಲ !

ನಾವು ಮೊದಲು ಹೊಕ್ಕಿದ್ದು ’ಕಿಲಯಿಯ ವಿಸಿಟರ್ ಸೆಂಟರ್’ . ಇಲ್ಲಿದ್ದ ರೇಂಜರ್ ಅಫೀಸರ್‌ಗಳು, ಎಲ್ಲೆಲ್ಲಿ ಪ್ರವಾಸಿಗರು ಹೋಗಲು ಕ್ಷೇಮ, ಎಲ್ಲೆಲ್ಲಿ ಹೋಗಬಾರದು ಎನ್ನುವುದರ ಬಗ್ಗೆ ಹೇಳುತ್ತಿದ್ದರು. ಹಾಗೇ ಪ್ರದೇಶದಲ್ಲಿನ ಗಾಳಿಯ ಸಧ್ಯದ ಸಲ್ಫರ್ ಡೈ ಆಕ್ಸಡ್ ಪ್ರಮಾಣದ ಬಗ್ಗೆಯೂ ತಿಳಿಸಿ, ಅಲ್ಲಿನ ಆಕರ್ಷಣೆಗಳ ವಿವರಣೆ ನೀಡಿದರು. ಹವಾಯಿ ಜ್ವಾಲಾಮುಖಿಯ ಕುರಿತಾದ ಸಾಕ್ಷ್ಯಚಿತ್ರ ನೋಡಿದ ಮೇಲಂತೂ ಜ್ವಾಲಾಮುಖಿ ನೋಡುವ ತುಡಿತ ಹೆಚ್ಚಾಯಿತು.

ಜ್ವಾಲಾಮುಖಿ ಪಾರ್ಕ್‍ನ ಹೃದಯ ಭಾಗದಲ್ಲಿ ಹಬ್ಬಿರುವುದೇ ಕ್ರೇಟರ್ ರೋಡ್. ಈ ರಸ್ತೆಯಲ್ಲಿ ಮೊದಲಿಗೆ ಸಿಗುವುದು - ಸ್ಟೀಮ್ ವೆಂಟ್ಸ್. ನೆಲದಲ್ಲಿನ ಬಿಲದಿಂದ ಹೊರಹೊಮ್ಮಿತ್ತಿದ್ದ ಬಿಸಿ ಹವಾ. ಎಲ್ಲಿ ನೋಡಿದರೂ, ಇಂತಹ ಅನೇಕ ಬಿಸಿ ಹವೆ ಬಿಲಗಳು. ಮಳೆಯಿಂದ ನೆಲದೊಳಗೆ ನೀರು, ನೆಲದೊಳಗಿನ ಕಲ್ಲುಬಂಡೆಗಳು, ತಳದಲ್ಲೆಲ್ಲೋ ಇರುವ ಲಾವಾದ ಬಿಸಿಯಾಗಿ, ಈ ನೀರು ಬಿದ್ದೊಡನೆ ಅವಿಯಾಗಿ ಹೊರಹೊಮ್ಮುತ್ತದೆ.

ಅಲ್ಲೇ ಸ್ಪಲ್ಪ ದೂರದಲ್ಲಿ ನಡೆದುಹೋದರೆ ಸಲ್ಫರ್ ಬ್ಯಾಂಕ್. ಜ್ವಾಲಾಮುಖಿಯಿಂದ ಹೊಮ್ಮಿದ ಅನಿಲಗಳಲ್ಲಿ ಇರುವ ಸಲ್ಫರ್, ಕಲ್ಲು ಬಂಡೆಗಳ ಮೇಲೆ ಕುಳಿತು ಆಗಿರುವುದೇ ಈ ಸಲ್ಪರ್ ಬ್ಯಾಂಕ್. ಹಳದಿ ಬಣ್ಣದ ಬಂಡೆಗಳು, ಯಾವುದೋ ಕಾಲೇಜ್ ‍ಲ್ಯಾಬ್‍ನಲ್ಲಿರುವಂತೆ ಸಲ್ಫರ್‌ನ ಘಾಟು ವಾಸನೆ.

ಕ್ರೇಟರ್ ರಿಮ್ ರಸ್ತೆಯಲ್ಲಿ ಮುಂದೆ ಡ್ರೈವ್ ಮಾಡುತ್ತಿದ್ದಂತೆ ಎದುರಿಗೆ ಥಾಮಸ್ ಜಾಗರ್ ಮ್ಯೂಸಿಯಂ. ಹವಾಯಿ ಜ್ವಾಲಾಮುಖಿಯ ಬಗ್ಗೆ ಅಧ್ಯಯನ ಮಾಡಲು ವೀಕ್ಷಣಾಲಯ ಪ್ರಾರಂಭಿಸಿದ ವಿಜ್ಞಾನಿ ಥಾಮಸ್ ಜಾಪರ್‌ನ ಹೆಸರಿನ ಈ ಮ್ಯೂಸಿಯಂ‍ನಲ್ಲಿ ಜ್ವಾಲಾಮುಖಿ ವಿಜ್ಞಾನಕ್ಕೆ ಸಂಬಂಧಿಸಿದ ಉಪಕರಣಗಳು ಮತ್ತು ಮಾಹಿತಿ ಕೇಂದ್ರವಿದೆ.

ಮ್ಯೂಸಿಯಂ ಪಕ್ಕದಲ್ಲೆ ಇರುವುದೇ ’ಹಲಿಮಮಾವು ಕಂದಕ’. ಸುಮಾರು ೩೦೦೦ ಆಡಿಗಳಷ್ಟು ಅಗಲ ಮತ್ತು ಸುಮಾರು ೩೦೦ ಅಡಿ ಆಳದ ಕಂದಕ. ಹವಾಯಿಯನ್ ಜನರಿಗೆ ಜ್ವಾಲಾಮುಖಿ ದೇವತೆ ’ಪೆಲೇ’ ವಾಸಿಸುವ ಸ್ಥಳ. ೨೦-೮೦ ವರ್ಷಗಳ ಕೆಳಗೆ ಈ ಕಂದಕದಲ್ಲಿ ಕುದಿಯುವ ಲಾವ ಇತ್ತಂತೆ, ಈಗ ಅಲ್ಲಿ ಲಾವಾ ಕಂಡುಬರದಿದ್ದರೂ ಯಾವಾಗಲೂ ಹೊಗೆ ಉಗುಳುತ್ತಿರುತ್ತದೆ. ಇಡೀ ಕ್ರೇಟರ್ ರಿಮ್ ರೋಡ್ ಈ ಕಂದಕದ ಸುತ್ತ ಗಿರಕಿ ಹೊಡೆಯುತ್ತದೆ.


ಈಗ ಕ್ರೇಟರ್ ರಸ್ತೆಯ ಡ್ರೈವ್ ಮುಗಿಸಿ, ನಾವು ’ಚೈನ್ ಆಫ್ ಕ್ರೇಟರ್ಸ್’ ರಸ್ತೆಗೆ ಬಂದಿದ್ದೆವು. ಅದು ’ಲಾವಾ ಟ್ಯೂಬ್’. ಸ್ಥಳಿಯ ಪತ್ರಕರ್ತ ಲೋರಿನ್ ಥರ್ಸ್ಟನ್ ಇದನ್ನು ಪತ್ತೆ ಹಚ್ಚಿದ್ದರಿಂದ ಇದಕ್ಕೆ ಥರ್ಸ್ಟನ್ ಲಾವಾ ಟ್ಯೂಬ್ ಎಂಬ ಹೆಸರು. ದಟ್ಟ ಕಾನನದ ನಡುವೆ ಹುದುಗಿರುವ ಇದು ಲಾವಾ ಹರಿದಾಗ ಆಗಿದ್ದಂತೆ. ಹರಿಯುತ್ತಿದ್ದ ಲಾವಾದ ಹೊರ ಪದರ ಗಟ್ಟಿಯಾಗಿ ಆಗಿರುವ ಈ ಗುಹೆಯಲ್ಲಿ ನಡೆಯುವುದು ವಿಭಿನ್ನ ಅನುಭವ. ಮುಂದೆ ಇನ್ನೊಂದು ಗುಹೆಯಿತ್ತಿದ್ದರೂ, ಅಲ್ಲಿ ತುಂಬಾ ಗಾಢ ಕತ್ತಲು, ಟಾರ್ಚ್ ಇಲ್ಲದೆ ಒಳಗೆ ಹೋಗಲ್ಲಿಕ್ಕೆ ಆಗುವುದಿಲ್ಲ.ನಮ್ಮ ಬಳಿ ಟಾರ್ಚ್ ಇಲ್ಲದ ಕಾರಣ ನಾವು ಆ ಸಾಹಸಕ್ಕೆ ಹೊರಡಲಿಲ್ಲ.


ಅಲ್ಲಿಂದ ಮುಂದೆ ಡ್ರೈವ್ ಮಾಡುತ್ತಿದ್ದಂತೆ ದಾರಿಯ ಅಕ್ಕಪಕ್ಕ ಎಲ್ಲೆಲ್ಲೂ ಕಪ್ಪು ಲಾವಾ ಬಂಡೆ. ಸುಮಾರು ೮ ಮೈಲಿಯ ವಿನೂತನ ದೃಶ್ಯಾವಳಿ. ದಾರಿ ಒಮ್ಮೆಗೆ ಕೊನೆಗೊಳ್ಳುತ್ತದೆ, ಯಾಕೆಂದರೆ ಅಲ್ಲಿಂದ ಮುಂದೆ ರಸ್ತೆ ಇಲ್ಲವೇ ಇಲ್ಲ. ಇದ್ದ ರಸ್ತೆಯ ಮೇಲೆ ಲಾವಾ ಹರಿದು ಗಟ್ಟಿ ಬಂಡೆಯಾಗಿ ಈಗ ಆ ರಸ್ತೆ ಲಾವಾ ಬಂಡೆಗಳ ಅಡಿ ಕಳೆದುಹೋಗಿದೆ. ಅಲ್ಲಿಂದ ಇಳಿದು ನಾವು ಬಂಡೆಗಳನ್ನೇರಿ ಹಾಗೇ ಮುಂದುವರಿದೆವು. ಹೀಗೆ ಸುಮಾರು ೧೫-೨೦ ನಿಮಿಷ ಬಂಡೆಗಳಲ್ಲಿ ಸುಳಿದಾಡಿ ಅಲ್ಲಿ ಮೊದಲಿದ್ದ ರಸ್ತೆಯ ತುಣುಕುಗಳನ್ನು ನೋಡುತ್ತಾ ಮತ್ತೆ ರಸ್ತೆಗೆ ಮರಳಿದೆವು.


ಇಷ್ಟೆಲ್ಲಾ ತಿರುಗಾಡುವಷ್ಟರಲ್ಲಿ ಆಗಲೇ ಸಂಜೆ ಆರುವರೆ ಸಮಯ. ಅದರೆ ನಾವು ನೋಡಬೇಕೆಂದಿದ್ದ ಪ್ರಮುಖವಾದದ್ದನ್ನು ಇನ್ನೂ ನೋಡೇ ಇರಲಿಲ್ಲ. ಹೌದು, ಇನ್ನೂ ಹರಿಯುವ ಲಾವಾದ ದರ್ಶನ ಆಗಿರಲಿಲ್ಲ.ಹರಿಯುವ ಲಾವಾ ನೋಡಲು ಪ್ರಶಸ್ತ ಸ್ಥಳವೆಂದರೆ ಕಾಲಪನ . ಆದರೆ ಅ ಸ್ಥಳವಿದ್ದದ್ದು ಅಲ್ಲಿಂದ ೪೫ ಮೈಲಿ ದೂರದಲ್ಲಿ ಮತ್ತು ಇನ್ನೊಂದು ವಿಷಯವೆಂದರೆ ಆ ಸ್ಥಳಕ್ಕೆ ೮ ಗಂಟೆಯ ಒಳಗೆ ಬರುವ ವಾಹನಗಳಿಗಷ್ಟೇ ಮಾತ್ರ ಪ್ರವೇಶ. ಆಗಿದ್ದಾಗಲಿ ಎಂದು ಅಲ್ಲಿಗೆ ಹೊರಟೆ ಬಿಟ್ಟೆವು. ಹವಾಯಿ ಇನ್ನೊಂದು ವಿಶೇಷವೆಂದರೆ ಇಲ್ಲಿನ ೨ ಲೇನ್ ದಾರಿಗಳು. ಅಮೇರಿಕದ ಬೇರೆಡೆ ಇರುವಂತೆ ಇದನ್ನು ಫ್ರೀವೇ ಅನ್ನಲಾಗುವುದಿಲ್ಲ. ಇಲ್ಲಿ ತುಂಬಾ ನಿಧಾನ ಸಾಗುವ ಟ್ರಾಫಿಕ್. ಕಿಲಯಿಯ ಹೆಸರಿನ ಆ ಜ್ವಾಲಾಮುಖಿ, ೧೯೮೪ರಿಂದಲೂ ನಿರಂತರವಾಗಿ ಸಿಡಿಯುತ್ತಿರುವ ಎಕೈಕ ಸಕ್ರಿಯ ಜ್ವಾಲಾಮುಖಿ. ನಾವು ಇನ್ನೇನೂ ಆ ಜ್ವಾಲಾಮುಖಿ, ಆ ಲಾವಾ ದೃಶ್ಯ ತಪ್ಪಿಸಿಕೊಳ್ಳುತ್ತೇವೆ ಎಂದುಕೊಳ್ಳುತ್ತಲೇ ಆ ಸ್ಥಳ ಮುಟ್ಟಿದಾಗ ಎಂಟಾಗಲಿಕ್ಕೆ ಇದದ್ದು ೪ ನಿಮಿಷ !

ಆಗಲೇ ದಟ್ಟ ಕತ್ತಲು ಕವಿದಿತ್ತು. ಈ ದಟ್ಟ ಕತ್ತಲೆಯಲ್ಲಿ ಹೇಗೆ ಲಾವಾ ಹುಡುಕುವುದು ಎಂದುಕೊಳ್ಳುತ್ತಿದ್ದರೆ, ಅಲ್ಲಿದ್ದ ಎಲ್ಲರ ಕೈಯಲ್ಲಿ ಟಾರ್ಚ್‍ಗಳು. ಓಹ್, ಟಾರ್ಚ್ ಇಲ್ಲದೇ ಹೇಗೆ ಹೋಗುವುದು ಎನ್ನುವಾಗ ಸಿಕ್ಕ ಆ ವ್ಯಕ್ತಿ. ಒಂದು ಕೃತಕ ಕಣ್ಣು, ನೋಡಲು ಸ್ಪಲ್ಪ ಭಯವುಂಟು ಮಾಡುವಂತಿದ್ದ ಆತ. ಅಲ್ಲಿಗೆ ಬಂದ ಕಾರ್‌ಗಳನ್ನು ಇರುವ ಜಾಗದಲ್ಲಿ ಪಾರ್ಕ್ ಮಾಡಿಸಲು ನೆರವಾಗುತ್ತಿದ್ದ. ನಾವು ಇಲ್ಲಿಯವರೆಗೆ ಬಂದು ಟಾರ್ಚ್ ಇಲ್ಲದಿರುವ ಒಂದೇ ಕಾರಣಕ್ಕೆ ಏನೂ ನೋಡದೇ ಹೋಗಬೇಕಾಯಿತಲ್ಲ ಎಂದುಕೊಳ್ಳುತ್ತಿದ್ದೆವು. ಬಹುಷಃ ನಮ್ಮ ಸಂಕಟ ಅರ್ಥವಾಯಿತೇನೋ ಎಂಬಂತೆ ನಮ್ಮನ್ನು ಕರೆದುಕೊಂಡು ಹೋಗಿ, ತನ್ನ ವಾಹನದಲ್ಲಿದ್ದ ಎರಡು ಟಾರ್ಚ್‍ನ್ನು ನೀಡಿದ. ನಮಗೆ ನಂಬಲಿಕ್ಕೆ ಆಗಲಿಲ್ಲ.

ಟಾರ್ಚ್ ಬೆಳಕಿನಲ್ಲಿ ನಡೆಯುತ್ತಿದ್ದಂತೆ ಕಣ್ಣುಂದೆ ನೂರಾರು ಮಿಣಕು ದೀಪಗಳು. ಆ ಮಿಣಕು ದೀಪಗಳು ಚಲಿಸುತ್ತಿದ್ದವು. ಆಗ ಗೊತ್ತಾಗಿದ್ದು, ಅವೆರಲ್ಲ ನಮ್ಮಂತೆ ಟಾರ್ಚ್ ಹಿಡಿದು ನಡೆಯುತ್ತಿದ್ದ ಜನವೆಂದು ! ಆ ಕಗ್ಗತ್ತಲೆಯಲ್ಲಿ ಆ ಲಾವಾ ಬಂಡೆಗಳ ಮೇಲೇ ಹುಷಾರಾಗಿ ಕಾಲಿಡುತ್ತಾ ಹೋಗುತ್ತಿದ್ದೆವು. ಆ ಲಾವಾ ಬಂಡೆಗಳ ಮೇಲೆ ದಾರಿಗಾಗಿ ಬಣ್ಣದಿಂದ ಗುರುತುಗಳಿದ್ದವು. ಎಲ್ಲರೂ ಆ ಗುರುತುಗಳನ್ನು ಹಿಂಬಾಲಿಸಿಕೊಂಡು ಹೋಗುತ್ತಿದ್ದೆವು. ಹೀಗೆ ಕತ್ತಲಲ್ಲಿ, ಈ ಮಿಣುಕು ಬೆಳಕಿನಲ್ಲಿ, ಜೊತೆಯಲ್ಲಿ ನನ್ನ ಹುಡುಗಿ..ಹೀಗೆ ಸಾಗಲಿ ಈ ದಾರಿ ಇನ್ನೂ ದೂರ ಅನಿಸುತ್ತಿದ್ದಾಗ, ಅಲ್ಲೆಲ್ಲೋ ಆಕಾಶಕ್ಕೆ ಕೇಸರಿ ಬಣ್ಣ ಬಳಿದಂತೆ ಗೋಚರಿಸಿತು. ಬಿಳಿ ಹೊಗೆ ಸ್ಪಷ್ಟವಾಗಿ ಕಾಣತೊಡಗಿತು. ಆ ಗುರುತುಗಳು ಈಗ ನಮ್ಮನ್ನು ಸಮುದ್ರದ ಅಂಚಿನ ಲಾವಾ ಕಲ್ಲುಗಳ ಮಧ್ಯೆ ತಂದು ನಿಲ್ಲಿಸಿತ್ತು. ಪಕ್ಕಕ್ಕೆ ತಿರುಗೆ ನೋಡಿದರೆ ಒಂದು ಕ್ಷಣ ಎಲ್ಲರೂ ಸ್ತಬ್ಧ ! ಕುದಿಯುವ ಲಾವಾ ಕಣ್ಣ್ಮುಂದೆ !


ಕಿತ್ತಳೆ ಬಣ್ಣದ ಲಾವಾ ಬಂಡೆಗಳ ಮಧ್ಯದಿಂದ ಹರಿದು ಸಮುದ್ರಕ್ಕೆ ಸೇರುತಿತ್ತು. ಲಾವಾ ಚಿಕ್ಕ ಜಲಪಾತದಂತೆ ಬೀಳುತ್ತಿದ್ದರೆ, ಅಲ್ಲಿ ಸಮುದ್ರ ನೀರಿನಲ್ಲಿ ಚಿಕ್ಕ ಚಿಕ್ಕ ಕಲರವ. ಸಣ್ಣ ಸಣ್ಣ ಸ್ಫೋಟಗಳು. ಆಕಾಶದೆತ್ತರಕ್ಕೆ ಚಿಮ್ಮುತ್ತಿದ್ದ ಬಿಳಿ ಹೊಗೆ. ಅಲ್ಲಿ ಬಂದಿದ್ದ ಎಲ್ಲರಿಗೂ ಮಾತು ಮರತೇ ಹೋದಂಗಿತ್ತು. ನಿಸರ್ಗದ ದೈತ್ಯ ಶಕ್ತಿಯೆದುರು ನಾವೆಷ್ಟು ಚಿಕ್ಕವರೆಂಬ ನಿಜ ಮತ್ತೊಮ್ಮೆ ಮನದಟ್ಟಾಗಿತ್ತು. ಹರಿಯುತ್ತಿದ್ದ ಲಾವಾ ಸುಮ್ಮನೆ ನೋಡುತ್ತಾ ಹಾಗೇ ಕುಳಿತು ಬಿಟ್ಟೆವು.

ಎಷ್ಟೋ ಹೊತ್ತಿನ ನಂತರ ಮತ್ತೆ ಟಾರ್ಚ್ ಬೆಳಕಿನಲ್ಲಿ ಬಂಡೆಗಳ ಮಧ್ಯೆ ದಾರಿ ಹುಡುಕುತ್ತಾ ಮರಳಿದೆವು . ಆ ನಮ್ಮ ಆಗಂತುಕ ಗೆಳಯನಿಗೆ ಧನ್ಯವಾದ ಆರ್ಪಿಸಿ ಮರಳಿ ಹಿಲೋ ಕಡೆ ಹೊರಟೆವು.

ಲಾವಾ ದೃಶ್ಯ ಎಷ್ಟು ಗಾಢವಾಗಿತ್ತೆಂದರೆ ಹಿಲೋ ಬರುವವರೆಗೆ ಬೇರೆನೂ ಮಾತೇ ಇರಲಿಲ್ಲ...

(ಮುಂದಿನ ಭಾಗದಲ್ಲಿ: ಹವಾಯಿ ಐತಿಹಾಸಿಕ ಸ್ಥಳ ಮತ್ತು ಅಪ್ರತಿಮ ಯೋಧನೊಬ್ಬನ ಕತೆ)

Friday, July 17, 2009

ಬಿಗ್ ಐಲ್ಯಾಂಡ್ ಆಕಾಶಯಾನ

ಹಿಲೋ ವಿಮಾನ ನಿಲ್ದಾಣದಿಂದ ನಮ್ಮ ಹೆಲಿಕಾಪ್ಟರ್ ಪ್ರವಾಸ ಶುರುವಾಗಲಿತ್ತು.

ಹೋಟೆಲ್‍ನಿಂದ ವಿಮಾನ ನಿಲ್ದಾಣದ ಕಡೆ ಜಿಪಿಎಸ್ ತೋರಿಸಿದ ಮಾರ್ಗದಲ್ಲಿ ಚಲಿಸುತ್ತಿದ್ದ ನಾವು ಯಾಕೋ ದಾರಿ ಸರಿಯಿಲ್ಲವೆನಿಸ ತೊಡಗಿತ್ತು. ನಾವು ಊಹಿಸಿದಂತೆ, ಅದು ವಿಮಾನ ನಿಲ್ದಾಣ ತೋರಿಸಿದೆ ಯಾರದೋ ಮನೆಯನ್ನು ತೋರಿಸಿತ್ತು ! ಮತ್ತೆ ಅಲ್ಲಿಂದ ವಿಮಾನ ನಿಲ್ದಾಣದ ಕಡೆ ಕಾರ್ ತಿರುಗಿಸಿ, ಅಲ್ಲಿ ಮುಟ್ಟಿದಾಗ ನಮ್ಮ ಹೆಲಿಕಾಪ್ಟರ್ ಪ್ರವಾಸಕ್ಕೆ ಸಿದ್ಧತೆಗಳು ನಡೆದಿದ್ದವು.

ಹೆಲಿಕ್ಟಾಪರ್ ಪ್ರವಾಸಕ್ಕೆ ಬೇಕಾದ ಪೂರ್ವಭಾವಿ ನಿರ್ದೇಶನಗಳನ್ನು ಪಡೆದು, ’ಬ್ಲೂ ಹವಾಯಿಯನ್’ ಹೆಲಿಕಾಪ್ಟರ್ ಎರಿದೆವು. ಹವಾಯಿ ದ್ವೀಪಗಳ ವಾಯು ವೀಕ್ಷಣೆ ಜನಪ್ರಿಯ. ಅದರಲ್ಲೂ ’ಬ್ಲೂ ಹವಾಯಿಯನ್’ ಸಂಸ್ಥೆ ಸುಪ್ರಸಿದ್ಧ. ನಮ್ಮದು ೬ ಆಸನಗಳ ನೀಲಿ ಬಣ್ಣದ ಆಕರ್ಷಕ ’ಎ-ಸ್ಟಾರ್’ಹೆಲಿಕಾಪ್ಟರ್. ನನ್ನ ಮತ್ತು ನನ್ನಾಕೆಯ ಆಸನಗಳು ಪೈಲೆಟ್ ಪಕ್ಕದ್ದು.

ಹೆಲಿಕಾಪ್ಟರ್ ಮೆಲ್ಲಗೆ ಓಡುತ್ತಾ ಕ್ರಮೇಣ ವೇಗ ಹೆಚ್ಚಿಸಿಕೊಂಡು, ನೆಲ ಬಿಟ್ಟು ಗಾಳಿಗೆ ಹಾರಿದಾಗ ’ವಾವ್’ ಎಂಬ ಉದ್ಗಾರ. ಕೆಲವೇ ನಿಮಿಷದಲ್ಲಿ ಹಾರುತ್ತಾ ನಾವು ಸಮುದ್ರದ ಮೇಲಿದ್ದೆವು. ಕೆಳಗೆ ನಮ್ಮ ಹೋಟೆಲ್ ಸಮುದ್ರ ದಂಡೆಯ ಮೇಲೆ ಚಿಕ್ಕ ರಟ್ಟಿನ ಮನೆಯಂತೆ ಕಾಣುತಿತ್ತು. ಹಾಗೇ ಚಿಕ್ಕ ಕೋಕೋನೆಟ್ ದ್ವೀಪ ಇನ್ನೂ ಚಿಕ್ಕದಾಗಿ ಮತ್ತು ಸುಂದರವಾಗಿ ಕಾಣುತಿತ್ತು. ಹಿಲೋ ನಗರದ ಅಂಚಿನಲ್ಲಿ ಹಾರುತ್ತಾ ಈಗ ದಟ್ಟ ಮಳೆಕಾಡಿನ ಕಡೆಗೆ ಹಾರಿತ್ತು. ನಮ್ಮ ಪೈಲೆಟ್ ವಿಲ್‍ನ ನಿರಂತರ ವೀಕ್ಷಕ ವಿವರಣೆ ಮುಂದುವರೆದಿತ್ತು.


ಹಸಿರು ಮಳೆಕಾಡಿನ ಮೇಲೆ ತೇಲುವಾಗ, ಚಿಕ್ಕ-ದೊಡ್ಡ ಜಲಪಾತಗಳು ಎದುರಾದವು. ಎಷ್ಟೋ ಜಲಪಾತಗಳು ದಟ್ಟ ಕಾಡಿನ ನಡುವೆ ಇದ್ದು ಕೇವಲ ಹಾರುವಾಗ ಕಾಣಬಹುದೆಂದು ನಮ್ಮ ಪೈಲೆಟ್ ಹೇಳುತ್ತಿದ್ದ. ಸುಂದರ ಜಲಪಾತಗಳು - ಹಸಿರು ಕಾನನದ ನಂತರ ಮುಂದೇನು ಎನ್ನುವಾಗ, ಯಾವುದೋ ಮುಸುಕು ಕವಿದ ಪ್ರದೇಶದೊಳಗೆ ನಮ್ಮ ಹೆಲಿಕಾಪ್ಟರ್ ಹಾರಿತ್ತು.

ಕೆಳಗಡೆ ಕಪ್ಪನೆ ಕಲ್ಲಿನಿಂದ ನೆಲವೆಲ್ಲ ಅವರಿಸಿದಂತಿತ್ತು , ಕೆಲವಡೆ ನೆಲದಿಂದ ಹೊಗೆ ಬರುತಿತ್ತು. ಆಗ ಗೊತ್ತಾಗಿದ್ದು ನಾವು ಜ್ವಾಲಾಮುಖಿ ಪ್ರದೇಶದಲ್ಲಿದ್ದೇವೆಂದು. ಆ ಕಪ್ಪನೆ ಕಲ್ಲು, ಜ್ವಾಲಾಮುಖಿಯಿಂದ ಹರಿದು ಬಂದ ಲಾವಾರಸ ತಣ್ಣಗಾಗಿ ಆದ ಲಾವಾ ರಾಕ್. ನೆಲದೊಳಗೆ ಹರಿಯುತ್ತಿರುವ ಲಾವಾದ ಬಿಸಿಯಿಂದ ಉಂಟಾಗಿದ್ದು, ನೆಲದಿಂದ ಅಲ್ಲಲ್ಲಿ ಬರುತ್ತಿದ್ದ ಹೊಗೆ.

ನೋಡಿದ ಕಡೆಯಲೆಲ್ಲಾ ಕಪ್ಪನೆ ಲಾವಾ ಶಿಲೆ. ಆಗ ಕಂಡಿದ್ದು ಆ ಶಿಲೆಯ ನಡುವೆ ಕಿತ್ತಲೆ ಬಣ್ಣದ ಒಂದು ಜಗಜಗಿಸುವ ರಂಧ್ರ. ಹತ್ತಿರ ಹಾರುತ್ತಿದ್ದಂತೆ ಅದರಲ್ಲೇನೊ ಕುದಿಯುತ್ತಿರುವಂತೆ ಕಾಣಿಸತೊಡಗಿತ್ತು. ಅದು ಲಾವಾ ರಸ. ಆ ಒಂದು ಚಿಕ್ಕ ರಂಧ್ರದಿಂದ ಆ ಲಾವಾ ರಸ ಕುದಿಯುವುದು ಕಾಣುತಿತ್ತು. ಆ ಲಾವಾ ರಂಧ್ರದಿಂದಾಚೆ ಹಾರಿ ಈಗ ಹೆಲಿಕಾಪ್ಟರ್ ಅರ್ಧ ಅರೆಬರೆ ಕಾಡಿನಂತಿದ್ದ ಪ್ರದೇಶದ ಮೇಲೆ ಹಾರುತ್ತಿತ್ತು.

ಅದು ಜ್ವಾಲಾಮುಖಿಯಿಂದ ಹೊಮ್ಮಿದ ಲಾವಾ, ಅದರಿಂದು ಬರುವ ಸಲ್ಫರ್ ಡೈಆಕ್ಸೈಡ್‍ದಿಂದ ಸಾಯುತ್ತಿದ್ದ ಮರಗಳು. ಈ ಎಲ್ಲದರ ಮಧ್ಯೆ ಇತ್ತು ಆ ಒಂಟಿ ಮನೆ. ಜ್ವಾಲಾಮುಖಿ ಬರುವ ಮುಂಚೆ ಇದ್ದ ಮನೆಗಳೆಲ್ಲಾ ಹಾಳಾಗಿ ಹೋಗಿದ್ದರೂ, ಈ ಒಂದು ಮನೆ ಮಾತ್ರ ಏನೂ ಆಗದೇ ಉಳಿದಿತ್ತು. ಅಲ್ಲಿದ್ದ ಜನರೆಲ್ಲಾ ಆ ಜ್ವಾಲಾಮುಖಿ ಪ್ರದೇಶ ಬಿಟ್ಟು ಬೇರೆಡೆಗೆ ಹೋದರೂ ಆ ಮನೆಯವನೊಬ್ಬ ಅಲ್ಲೇ ಉಳಿದುಬಿಟ್ಟಿದ್ದ.

ಆತನ ಹೆಸರು ಜಾಕ್ ಥಾಂಪ್‍ಸನ್. ಆತನಿಗೆ ಈಗ ೭೦ರ ಹರೆಯ. ಈಗಲೂ ಆತ ಅದೇ ಜ್ಚಾಲಾಮುಖಿ ಪ್ರದೇಶದ ಒಂಟಿ ಮನೆಯಲ್ಲಿ ಇದ್ದಾನೆ. ಆಗಾಗ ಗಣ್ಯ ಅತಿಥಿಗಳು ಆತನ ಒಂಟಿಮನೆಗೆ ಬಂದು ಕಾಲ ಕಳೆಯುತ್ತಾರಂತೆ.


ಈಗ ದೂರದಲ್ಲಿ ರಭಸವಾಗಿ ಬರುತ್ತಿದ ಬೆಳ್ಳನೆ ಹೊಗೆ ಕಾಣುತಿತ್ತು. ಹಾರುತ್ತಿದ್ದಂತೆ ಎದುರಿಗೆ ಸಮುದ್ರ ತೀರ. ಈ ಹೊಗೆ ಆ ತೀರದಿಂದ ಬರುತ್ತಿದ್ದು, ಹತ್ತಿರ ಹೋದಾಗ ಕಂಡಿದ್ದು ಅಲ್ಲಿ ಸಮುದ್ರಕ್ಕೆ ಹರಿಯುತ್ತಿದ್ದ ಲಾವಾ ರಸ. ಬೆಂಕಿಯಂತಹ ಲಾವಾ ಆ ತಣ್ಣನೆ ಸಮುದ್ರದ ನೀರಿಗೆ ಹರಿಯುತ್ತಿದ್ದಂತೆ, ಒಟ್ಟಿಗೆ ನೂರಾರು ಚಿಕ್ಕ ಚಿಕ್ಕ ಸ್ಫೋಟಗಳು. ಧೋ ಎಂದು ಆಕಾಶಕ್ಕೆ ಎಳುತ್ತಿದ್ದ ಹೊಗೆ. ಲಾವಾ ತಣ್ಣಗಾಗಿ ಕಪ್ಪನೆ ಚಿಕ್ಕ ಚಿಕ್ಕ ಕಣಗಳಾಗಿ ತೀರಕ್ಕೆ ಅಪ್ಪಳಿಸಿ ಅಲ್ಲಿ ಕಪ್ಪನೆ ಮರಳಿನ ತೀರ.

ಆ ಲಾವಾ-ಸಮುದ್ರದ ನಿರಂತರ ಕಲಹ ನೋಡುತ್ತಾ ಕೆಲವು ಕ್ಷಣ ಅದರ ಸುತ್ತು ಹಾಕಿ, ಮತ್ತೆ ಹೆಲಿಕಾಪ್ಟರ್ ಮರಳಿ ಹೆಲಿಪ್ಯಾಡ್‍ಗೆ ಹಾರತೊಡಗಿತು.

ಹೆಲಿಕಾಪ್ಟರ್ ನೆಲಕ್ಕೆ ಇಳಿದು, ಸೊಂಟಕ್ಕೆ ಬಿಗಿದಿದ್ದ ಪ್ಯಾರಾಚೂಟ್ ಪ್ಯಾಕ್ ಬಿಚ್ಚಿಕೊಟ್ಟು ಹೊರಬಿದ್ದಾಗ, ಕಣ್ಣು ತುಂಬಾ ಇನ್ನೂ ಲಾವಾ-ಸಮುದ್ರದ ರಮಣೀಯ ದೃಶ್ಯ ತೇಲುತಿತ್ತು.

ವಾಯುವೀಕ್ಷಣೆಯ ನಂತರ ನಮ್ಮ ಮುಂದಿನ ಪಯಣ, ಸುಂದರ ಜಲಪಾತಗಳ ತಾಣ ’ಅಕಕ ರಾಷ್ಟ್ರೀಯ ಉದ್ಯಾನವನ’.

ನಿತ್ಯ ಹರಿದ್ವರ್ಣ ಅರಣ್ಯದ ಮಧ್ಯೆ ಸುಮಾರು ೧-೧.೫ ಮೈಲಿ ದೂರದಲ್ಲಿ ನಡೆದಾಗ ಕಾಣುತ್ತೆ ಬಿಗ್ ಐಲೆಂಡ್‍ನ ಆ ಎರಡು ಸುಂದರ ಜಲಪಾತಗಳು.

ಸುಮಾರು ೧೦೦ ಅಡಿಗಳ ಕಹೂನ ಜಲಪಾತ, ಅದರ ಸನಿಹದಲ್ಲಿದೆ ಆಕಕ ಜಲಪಾತ ೪೪೨ ಅಡಿಗಳ ಮೋಹಕ ಜಲಪಾತ. ಅಲ್ಲಲ್ಲಿ ಚಿಕ್ಕ ತೊರೆಗಳು, ವಿನೂತನ ಹೂವುಗಳಿಂದ ಆ ಜಾಗ ವಿಭಿನ್ನ ಮತ್ತು ಸುಂದರವಾಗಿತ್ತು.

ಜಲಪಾತಗಳ ನೋಟ ಸವಿದು ಮರಳಿ ಬರುವಾಗ ರಸ್ತೆ ಪಕ್ಕವಿದ್ದ ಕಬ್ಬಿನ ಗದ್ದೆ ನನ್ನಾಕೆಯ ಕಣ್ಣಿಗೆ ಬಿತ್ತು. ಆಲ್ಲೇ ಕಾರ್ ನಿಲ್ಲಿಸಿದಾಗ , ಕಬ್ಬಿನ ಗದ್ದೆ ಕಡೆ ಓಡಿ, ಕಬ್ಬು ಮುರಿದು ಕೊಂಡು ಬಂದಿದ್ದಳು. ಕಬ್ಬು ಅಗಿಯುತ್ತಾ ಮತ್ತೆ ಸಮುದ್ರ ಪಕ್ಕದ ರಸ್ತೆಯಲ್ಲಿ ಡ್ರೈವ್ ಮಾಡುತ್ತಾ ಹೊರಟೆವು.

ಮತ್ತೊಮ್ಮೆ ಕಾರ್ ನಿಲ್ಲಿಸಿದ್ದು ಹವಾಯಿ ಕುಸುರಿಕಲೆಗಳ ಒಂದು ಚಿಕ್ಕ ಅಂಗಡಿ ಮುಂದೆ. ಅಲ್ಲಿನ ವೃದ್ಧ ದಂಪತಿಗಳು ತಮ್ಮ ಕೈಕೆಲಸದಿಂದ ಮಾಡಿದ ಚಿಕ್ಕ ಚಿಕ್ಕ ಕುಸುರಿ ಕೆಲಸಗಳು ಮನ ಸೆಳೆಯುತ್ತಿದ್ದವು. ಅಲ್ಲೊಂದಿಷ್ಟು ಖರೀದಿ ಮುಗಿಸಿ ಹಿಲೋ ಕಡೆ ಹೊರಟಾಗ ಮುಸ್ಸಂಜೆ.

ಹಿಲೋ ನಗರ ಸಂಜೆಗೆ ಕೆಂಪಾಗುತಿತ್ತು.

(ಮುಂದಿನ ಭಾಗದಲ್ಲಿ ಜ್ವಾಲಾಮುಖಿಯ ಮಧ್ಯೆ ಆಲೆದಾಟ)

Monday, June 15, 2009

ಹವಾಯಿಗೆ ಹಾರಿ...

ಆಮೇರಿಕನ್ ಎರ್‌ಲೈನ್ ವಿಮಾನ ಕೋನ ಮುಟ್ಟಿದಾಗ ರಾತ್ರಿಯ ೮ ಗಂಟೆ. ಕ್ಯಾಲಿಪೋರ್ನಿಯಾದಲ್ಲಿ ಆಗಲೇ ೧೧ ಗಂಟೆ.

ಕೋನ ನಿಲ್ದಾಣ ನಮ್ಮ ಯಾವುದೇ ಚಿಕ್ಕ ಬಸ್-ರೈಲು ನಿಲ್ದಾಣದಂತಿತ್ತು. ಬಸ್ ಇಳಿದು ಹೋಗುವಂತೆ ನಿಲ್ದಾಣದಿಂದ ಹೊರಗೆ ಬರಲು ೨ ನಿಮಿಷವಾಯ್ತು ಅಷ್ಟೇ. ನಿಲ್ದಾಣ ಚಿಕ್ಕದಿದ್ದರೂ ವಿಭಿನ್ನ-ಸುಂದರವಾಗಿತ್ತು.

ರೆಂಟಲ್ ಕಾರ್‌ ಕಂಪೆನಿಯ ಬಸ್ ಆವಾಗಲೇ ನಮಗೆ ಅಲ್ಲಿ ಕಾಯ್ತಿತ್ತು. ರೆಂಟಲ್ ಕಾರ್ ತಗೊಂಡು ಮತ್ತೆ ರಸ್ತೆಗೆ ಇಳಿದಾಗ ಆಗಲೇ ೯ ಗಂಟೆ. ನಮ್ಮ ಪಯಾಣ ಹೊರಟ್ಟಿತ್ತು ಹಿಲೋ ಕಡೆ.

ಹವಾಯಿ..

ಫೆಸಿಪಿಕ್ ಸಾಗರದಲ್ಲಿನ ದ್ವೀಪ ಸಮೂಹ.

ಸುಂದರ ಸಮುದ್ರ ತೀರಗಳು, ವರ್ಣರಂಜಿತ ಉಡುಗೆ-ತೊಡುಗೆಗಳು, ವಿಶಿಷ್ಟ ಭಾಷೆ-ಸಂಗೀತ-ಆಚಾರಗಳು, ಹಸಿರು ಕಾನನಗಳು, ಬೆಂಕಿ ಕಾರುವ ಜ್ವಾಲಮುಖಿಗಳು, ಮೋಹಕ ಜಲಪಾತಗಳು, ಐತಿಹಾಸಿಕ ಹಿನ್ನಲೆ. ಹೀಗೆ ಎಲ್ಲಾ ತರದ ವಿಭಿನ್ನ ಎಳೆಗಳು ಒಂದೆಡೆ ಸಿಗುವ ಮನಮೋಹಕ ದ್ವೀಪಗಳು.

ಚಲಿಸುತ್ತಿದ್ದ ನಮ್ಮ ಕಾರ್ ಹೆಡಲೈಟ್ ಬೆಳಕು ಬಿಟ್ಟರೆ ಬೇರೆ ಯಾವುದೇ ಬೆಳಕಿಲ್ಲದೇ ಆ ಹೆದ್ದಾರಿ ಮೊದಮೊದಲು ಸ್ಪಲ್ಪ ಅಂಜಿಸಿತ್ತು. ೨೦-೨೫ ನಿಮಿಷದವರೆಗೆ ಯಾವುದೇ ವಾಹನವು ಕಾಣದೇ, ನಾವು ಸರಿಯಿದ ದಾರಿಯಲ್ಲಿ ಸಾಗುತ್ತಿದ್ದವೆಯೇ ಎಂಬ ಸಂಶಯ. ನಮ್ಮ ಜಿಪಿಎಸ್ ಮಾತ್ರ ಸರಿಯಾದ ದಾರಿ ಎನ್ನುತಿತ್ತು. ಸ್ಪಲ್ಪ ಸಮಯದ ನಂತರ, ನಮಗೆ ಜೊತೆಯಾಗಿ ಇನ್ನು ಕೆಲವು ಕಾರುಗಳು ಸೇರಿದವು.

ಹವಾಯಿ ದ್ವೀಪ ಸಮೂಹದಲ್ಲಿ ಕ್ವಾಹಿ, ಓಹಹೋ, ಮೊಲಕಯಿ,ಲನೈಯಿ, ಮಾಯಿ,ಬಿಗ್ ಐಲೆಂಡ್ ಎಂಬ ೬ ದ್ವೀಪಗಳಿವೆ. ಒಂದೊಂದು ದ್ವೀಪದಲ್ಲೂ ಒಂದು ವಿಶಿಷ್ಟತೆ. ಹವಾಯಿಯ ಯಾವ ದ್ವೀಪಕ್ಕೆ ಹೋಗಬೇಕೆನ್ನುವ ಪ್ರವಾಸಿಗರಿಗೆ ಯಕ್ಷಪ್ರಶ್ನೆ ಎದುರಾಗುವುದು ಅವಾಗಲೇ. ಒಂದಕ್ಕಿಂತ ಒಂದು ಸುಂದರ ದ್ವೀಪಗಳು.

ನಾವು ಆರಿಸಿಕೊಂಡಿದ್ದು ಬಿಗ್ ಐಲೆಂಡ್. ಈ ದ್ವೀಪದ ಅಸಲಿ ಹೆಸರು ಹವಾಯಿ. ಆದರೆ ಈಡೀ ದ್ವೀಪ ಸಮೂಹಕ್ಕೂ ಹವಾಯಿ ಎಂದು ಕರೆಯುವುದರಿಂದ , ಗೊಂದಲ ತಪ್ಪಿಸಲು ಈ ದ್ವೀಪಕ್ಕೆ ’ಬಿಗ್ ಐಲೆಂಡ್’ ಎಂಬ ಹೆಸರು. ಹೆಸರಿಗೆ ತಕ್ಕಂತೆ ಈಡೀ ಹವಾಯಿ ದ್ವೀಪ ಸಮೂಹದಲ್ಲೇ ದೊಡ್ಡ ದ್ವೀಪವಿದು. ಬಿಗ್ ಐಲೆಂಡ್‍ನಲ್ಲಿ, ನಮಗೆ ಸಕ್ರಿಯ ಜ್ವಾಲಮುಖಿ ಹತ್ತಿರದಿಂದ ನೋಡಬಹುದೆಂಬ ಸಂಗತಿಯೆ ವಿಸ್ಮಯವುಂಟು ಮಾಡಿತ್ತು. ಅದರ ಜೊತೆ ಕೆಲವು ಸುಂದರ ಸಮುದ್ರ ಬೀಚಿಗಳು ಮತ್ತು ಐತಿಹಾಸಿಕ ಸ್ಥಳಗಳ ಬಗ್ಗೆ ತಿಳಿದು, ನಾವು ಬಿಗ್ ಐಲೆಂಡ್‍ನಲ್ಲಿ ಇಳಿದಿದ್ದೆವು.

ಕೋನ ಈ ದ್ವೀಪದ ಪಶ್ಚಿಮ ತೀರದ ನಗರ, ಹಿಲೋ ಪೂರ್ವ ತೀರದ ನಗರ. ನಮ್ಮ ಪಯಣ ಹೊರಟಿತ್ತು ಹಿಲೋ ಕಡೆಗೆ.

ಸುಮಾರು ೧೦೦ ಮೈಲಿಯ ಈ ಪಯಾಣ ಸಾಗಿತ್ತು ಆ ಎರಡು ಲೇನ್ ಹೆದ್ದಾರಿಯಲ್ಲಿ. ಅಂದರೆ ಒಂದರ ಹಿಂದೊಂದು ಸಾಲಿನಲ್ಲಿ ಹೋಗುವ ವಾಹನಗಳು. ಹಕಲಾವು, ಹೋನಮು, ಪೆಪೆಕಿವೊ ಪಟ್ಟಣ ಬಳಸಿ ಸುಮಾರು ಎರಡುವರೆ ಗಂಟೆಗಳ ನಂತರ ಹಿಲೋ ತಲುಪಿದ್ದೆವು.

ಹಿಲೋದ ಬ್ಯಾನಿಯನ್ ಡ್ರೈವ್‍ನಲ್ಲಿನ ’ಕ್ಯಾಸಲ್ ಹಿಲೋ ಹವಾಯಿಯನ್’ ಹೋಟಲ್ ಹೊಕ್ಕು, ಅಲ್ಲಿಂದ ಪರದೆ ಸರಿಸಿದಾಗ ಬಾಲ್ಕನಿಯಿಂದ ಫೆಸಿಪಿಕ್ ಸಾಗರ ದೊಡ್ಡ ಕಪ್ಪು ಹಾವು ಮಲಗಿದಂತೆ ಭಾಸವಾಗುತಿತ್ತು.

ಜ್ವಾಲಮುಖಿ ಮತ್ತು ಸಮುದ್ರದ ಬಗ್ಗೆ ಮಾತಾಡುತ್ತ ಯಾವಾಗ ನಿದ್ದೆಗೆ ಜಾರಿದೆವು ಅರಿಯಲಿಲ್ಲ..

(ಮುಂದಿನ ಭಾಗದಲ್ಲಿ ಹೆಲಿಕಾಪ್ಟರ್‌ನಲ್ಲಿ ದ್ವೀಪದ ವೀಕ್ಷಣೆ ಮತ್ತು ಜಲಪಾತಗಳು)

Sunday, May 10, 2009

ಶರಧಿ

ನೋಟಕ್ಕೆ ಮೀರಿದ ಆಗಾಧತೆ
ವ್ಯಾಪ್ತಿಗೆ ನಿಲುಕದ ಆಳ
ಸುಂದರ ಶಾಂತ ಆ ಶರಧಿ

ಆ ಶರಧಿಯೇ ಆದವರು ನೀವು

ನೋಡಲು ಅದೆಷ್ಟು ಶಾಂತ
ಆದರೆ ತಳದಲಿ ಅಡಗಿಸಿಕೊಂಡಿದ್ದೀರೋ
ಅದೆಷ್ಟು ಕಂಬನಿ ನೋವುಗಳ

ಆ ಬಿರುಗಾಳಿ ಮಳೆಯ ನಡುವೆಯೂ
ಶರದಿಯಲಿ ಮೂಡಿ ಬರುವವಂತೆ
ಅನ್ಯರ್ಘ ಮುತ್ತು-ಹವಳಗಳು
ಮೂಡಿಬಂದಿವೆ ನಿಮ್ಮಿಂದ ಎರಡು ರತ್ನಗಳು

ಶರಧಿಗೆ ಈಗ ಸುಕಾಲ
ಮಬ್ಬು ಹರಿದು ಸೊಗಸು ಮೂಡುವ ಕಾಲ
ಕವಿದ ಮೋಡಗಳಿಂದಾಚೆ ಬೆಳ್ಳಿ ಬೆಳಕು
ತೀರದಲಿ ಬಂಡೆಗಳ ನಡುವೆ ಅರಳಿದ ಶಿಲ್ಪ

ಆ ಶರಧಿಯ ಪ್ರೀತಿಯ ತೀರದಲಿ
ನೆಲೆ ನಿಂತವರು ನಾವು
ಕೋರುವೆವು ನಿಮಗೆ
ಜನ್ಮದ ದಿನದ ಶುಭಾಶಯಗಳ
ಬೇಡುವೆವು ಪ್ರೀತಿ ಹಾರೈಕೆಗಳ

(ಎಲ್ಲ ಅಮ್ಮಂದಿರಿಗೆ ಶುಭಾಶಯಗಳು)

Sunday, February 22, 2009

ಡೆಲ್ಲಿ-6 ಎಂಬ Metaphor

ಜ್ವಲಂತ ಸಮಸ್ಯೆಗಳನ್ನು ಸಿನಿಮಾಗಳು ನೋಡುವ ಬಗೆ ಎರಡು.

೧. ಸಮಸ್ಯೆಗಳನ್ನು ಹಸಿಹಸಿಯಾಗಿ ಪ್ರದರ್ಶಿಸಿ ಮಾರಾಟದ ಸರಕಾಗಿಸುವುದು
೨. ಸಮಸ್ಯೆಗಳನ್ನು ಅತಿರಂಜಿತವಾಗಿಸದೆ,ಸುಪ್ತ-ಸೂಕ್ಷ್ಮವಾಗಿರಿಸಿ, ಅದಕ್ಕೊಂದು ಪರಿಹಾರ ತೋರಿಸುವುದು

ಸ್ಲಂ ಡಾಗ್‍ನಂತವು ಮೊದಲನೆಯ ಗುಂಪಿನಲ್ಲಿ ಸೇರುವಂತಹ ಚಿತ್ರಗಳು.

ಎರಡನೆಯ ಗುಂಪಿನಲ್ಲಿ ಸೇರುವ ಚಿತ್ರ ’ರಂಗ್ ದೇ ಬಸಂತಿ’.

ನಿರ್ದೇಶಕ ರಾಕೇಶ್ ಓಂಪ್ರಕಾಶ್ ’ರಂಗ್ ದೇ’ಯಲ್ಲಿ ಭ್ರಷ್ಟಾಚಾರ, ದೇಶದ ’ಚಲ್ತಾ ಹೈ’ ಮನಸ್ಥಿತಿ, ಅದಕ್ಕೆ ಸೂಚಿಸಿದ ’ಡೈರೆಕ್ಟ್ ಆಕ್ಷ್ಯನ್’(Direct Action) ದೊಡ್ಡ ಸಂಚಲನವುಂಟು ಮಾಡಿದ್ದವು. ಅದು ಶುರು ಮಾಡಿದ ಚರ್ಚೆ-ಜಾಗೃತಿ ಇನ್ನೂ ಎಲ್ಲರ ನೆನಪಿನಲ್ಲಿದೆ.

’ರಂಗ್ ದೇ ಬಸಂತಿ’ ತರದ ಬಡಿದೆಬ್ಬಿಸುವ ಸಿನಿಮಾದ ನಂತರ ಮುಂದೇನು ಅನ್ನುವ ಪ್ರಶ್ನೆಗೆ ಉತ್ತರ ದೊರಕಿದಂತಿದೆ.
ರಾಕೇಶ್ ಹೊಸ ಸಿನಿಮಾ ’ಡೆಲ್ಲಿ-೬’, ಮೇಲೆ ಹೇಳಿದ ಎರಡನೆಯ ಗುಂಪಿಗೆ ಮತ್ತೊಂದು ಸೇರ್ಪಡೆ.

ರಂಗ್ ದೇಯಲ್ಲಿ ಭ್ರಷ್ಟಾಚಾರದ ಬಗ್ಗೆ ಹೇಳಿದ್ದ ರಾಕೇಶ್, ’ಡೆಲ್ಲಿ’ಯಲ್ಲಿ ಹಲವಾರು ಸಮಸ್ಯೆಗಳನ್ನು ಒಟ್ಟಿಗೆ ತಡವಿಕೊಂಡಿದ್ದಾರೆ. ಕೋಮುವಾದ, ಮಂದಿರ-ಮಸೀದಿಯ ಬಗ್ಗೆ ಪ್ರಮುಖವಾಗಿ ಹೇಳುತ್ತಾ, ಅಸ್ಪಶತೆ ಬಗ್ಗೆ ಸೂಕ್ಷ್ಮವಾಗಿ ತೆರೆದಿಟ್ಟಿದ್ದಾರೆ. ಅದಕ್ಕೆ ಅನಿವಾಸಿ ಭಾರತೀಯರ ತೊಳಲಾಟ, ಅಶಕ್ತ ಮಹಿಳೆಯರ ಅಸಹಾಯಕತೆ, ಸ್ವಲ್ಪ ಭಗ್ನ ಪ್ರೇಮದ ಸ್ಪರ್ಶ ನೀಡಿದ್ದಾರೆ.

ರಂಗ್ ದೇ ತರನೇ ಇದರಲ್ಲೂ ಭಾರತವನ್ನು ಹೊರಗಿನವರ ಕಣ್ಣಿನಿಂದ ತೋರಿಸುವ ಶೈಲಿಯಿದೆ. ಆದರೆ ಡೆಲ್ಲಿಯ ತಾಕತ್ತಿರುವುದು ಅದರಲ್ಲಿ ಉಪಯೋಗಿಸಿದ ’ಮೆಟಾಫೆರ್’ಗಳಲ್ಲಿ ಮತ್ತು ಸೃಷ್ಟಿ ಮಾಡಿರುವ ಪಾತ್ರಗಳಲ್ಲಿ.

ತನಗೆ ಸಂಬಂಧಿಸಿದ ಆದರೂ ತಾನು ಹುಟ್ಟಿ-ಬೆಳಯದಿರುವ ದೇಶದಲ್ಲಿನ ರೋಷನ್ ಪಾತ್ರ ಕತೆಯ ಬಿಂದು. ಹಿಂದು-ಮುಸ್ಲಿಮ್-ಭಾರತೀಯ-ಅಮೇರಿಕನ್ ಹೀಗೆ ವಿಭಿನ್ನ ಎಳೆಗಳಲ್ಲಿ ತೊಳಲಾಡುವ ಪಾತ್ರ.

ಭಗ್ನ ಪ್ರೇಮಿ ಅಲಿ ಅಂಕಲ್, ಜಿಲೇಬಿ ಅಂಗಡಿಯ ಮಮ್ಡು, ಅಕ್ಕ-ಪಕ್ಕ ಮನೆಯ ಸಹೋದರರು, ವಿಧವೆ ತಂಗಿ, ಬಾಯಿ ಬಿಟ್ಟರೆ ಕಪಾಳಕ್ಕೆ ಬಾರಿಸುವ ಪೋಲಿಸ್ ಆಫೀಸರ್, ಕಸ ಹೆಕ್ಕುವ ಅಸೃಶ್ಯ ಹೆಂಗಸು, ಶನಿ ಬಾಬಾ, ಭಾರತದಲ್ಲಿ ಕಡೆಯ ದಿನಗಳನ್ನು ಕಳೆಯಬಯಸುವ ಅಜ್ಜಿ..ಹೀಗೆ ಅನೇಕ ವಿಶಿಷ್ಟ ಪಾತ್ರಗಳು, ಕತೆಯ ಓಟಕ್ಕೆ ಎಲ್ಲೂ ತಡೆ ತರುವುದಿಲ್ಲ.

ಈಡೀ ಚಿತ್ರದಲ್ಲಿ ಹಾಸುಹೊಕ್ಕಾಗಿರುವುದು ’ಮೆಟಾಫರ್’(Metaphor).

ಸಾಂಪ್ರದಾಯಿಕ ಹಿನ್ನಲೆಯ, ಹೊಸ ಕನಸುಗಳನ್ನು ಕಾಣುವ ’ಬಿಟ್ಟು’ ಎನ್ನುವ ಹುಡುಗಿಯ ಪಾತ್ರ. ಇದು ಒಂಥರ ಇಡೀ ಭಾರತದ ಪ್ರತಿನಿಧಿ.

ಹಾಗೆಯೇ ಎಲ್ಲರ ಮುಂದೆ ಕನ್ನಡಿ ಹಿಡಿದು ತಿರುಗುವ ಹುಚ್ಚ, ಎಲ್ಲಿಂದಲೋ ಬಂದು ಎಲ್ಲರ ಸ್ವಾಸ್ಥ್ಯ ಕೆಡಿಸುವ ಶನಿ ಬಾಬಾ, ಪಾಳು ಬಿದ್ದ ಮನೆ, ಮಸಕಲಿ ಅನ್ನುವ ಆ ರೆಕ್ಕೆ ಕಟ್ಟಿದ ಪಾರಿವಾಳ, ಸಂದರ್ಭಕ್ಕೆ ತಕ್ಕುದಾಗಿ ಉಪಯೋಗಿಸಿರುವ ರಾಮಲೀಲಾ ಸನ್ನಿವೇಶಗಳು.

ಎಲ್ಲಕ್ಕೂ ಕಳಶವಿಟ್ಟಂತೆ, ’ಕಾಲಾ ಬಂದರ್’ !

ಅದರೆ ತುಂಬಾ ಕಾಡುವ ಪಾತ್ರ ’ಗೋಬರ್’. ಪೆದ್ದನಾಗಿ-ಮುಗ್ಢವಾಗಿ ಮೂಡಿ ಬಂದಿರುವ ಈ ಪಾತ್ರದ ಬಗ್ಗೆ ಮತ್ತೆ ನಗಬೇಕೆನಿಸುವಾಗ, ಕೊನೆಗೆ ನಿಜವಾದ ಗೋಬರ್ ಯಾರು ಎನ್ನುವ ಪ್ರಶ್ನೆ ದುತ್ತನೆ ಎದುರಾಗುತ್ತೆ.

ಡೆಲ್ಲಿಯಲ್ಲಿ ಅನೇಕ ಕಡೆ ಪ್ರಭಾವಿ ದೃಶ್ಯಗಳಿವೆ..
ರಾಮಲೀಲಾದಲ್ಲಿ ಮುಸ್ಲಿಮ್ ಮಮ್ಡು, ರಾಮಲೀಲಾ ಮಂಡಳಿಯ ಬ್ಯಾಡ್ಜ್ ಧರಿಸಿ ಸಂಭ್ರಮದಿಂದ ಭಾಗವಹಿಸುವ ದೃಶ್ಯ ಬಂದು ಹೋಗುತ್ತೆ. ಮುಂದೆ ಅದೇ ಮಮ್ಡುವಿನ ಅಂಗಡಿಯಿಂದ ಹನುಮಾನ್ ಪೋಟೋವನ್ನು ಕಿತ್ತುಕೊಂಡು ಹೋಗುವ ಗಲಭೆಕೋರರು, ನಂತರ ಹತ್ತುವ ಮತಾಂಧತೆ, ಅದರ ಕಿಚ್ಚಿನ ಉರಿಯಲ್ಲಿ ನರಳುವ ಮಮ್ಡುವನ್ನು ನಿಯಂತ್ರಿಸಲು ರೋಷನ್ ಪಡುವ ಶ್ರಮ. ಒಂದು ಸರಳ ಮನಸ್ಸು ಮತಾಂಧತೆಗೆ ಹೊರಳುವುದನ್ನು ತೋರಿಸಿದ ಪರಿ ಅದ್ಭುತ!

ಹಾಗೇ ನ್ಯೂಯಾರ್ಕ್-ಡೆಲ್ಲಿಗಳೆರಡನ್ನೂ ಒಂದೆಡೆ ಒಟ್ಟಿಗೆ ಕಾಣುವ ಕನಸು. ನ್ಯೂಯಾರ್ಕ್ ಬೀದಿಗಳಲ್ಲಿ ಭಾರತದ ದಿನ ನಿತ್ಯದ ಜನ ಜೀವನದ ಕಲ್ಪನೆ ಸೊಗಸಾಗಿದೆ.

ಅಭಿನಯದ ದೃಷ್ಟಿಯಿಂದ ಎಲ್ಲಾ ಪಾತ್ರಗಳಲ್ಲಿ ಸಮತೂಕದ ಅಭಿನಯವಿದೆ. ಮಾತಿಗಿಂತ ಹಾವಭಾವಗಳಲ್ಲಿ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ ಅನಿಸುತ್ತೆ. ರೆಹಮಾನ್ ಹಿನ್ನಲೆ ಸಂಗೀತ ಕತೆಯ ಇನ್ನೊಂದು ಪಾತ್ರವೇ ಆಗಿದೆ.

ರಂಗ್ ದೇ ತರನೇ ಇಲ್ಲೂ ರಾಕೇಶ್, ಭಾರತದ ಜ್ವಲಂತ ಸಮಸ್ಯೆಗಳ ಎಳೆಯೊಂದಿಗೆ ಚಿತ್ರ ಮಾಡಿದ್ದಾರೆ. ಆದರೆ ರಂಗ್ ದೇ ತರ ಇಲ್ಲಿ ಯಾವುದನ್ನೂ ನೇರವಾಗಿ ಹೇಳುವುದಿಲ್ಲ. ಇಲ್ಲಿ ಎಲ್ಲಾ ಮೆಟಾಪರ್‌ಗೆ ಬಿಡಲಾಗಿದೆ. ಹಾಗೆಯೇ ಹಿಂದಿನ ತರ ಸಮಸ್ಯೆಗಳಿಗೆ ಉತ್ತರವನ್ನು ಗನ್‍ನಿಂದ ಕೊಟ್ಟಿಲ್ಲ, ಬದಲಾಗಿ ಸಮಸ್ಯೆಗಳಿಗೆ ಉತ್ತರ ನಮ್ಮಲ್ಲೇ ಅಡಗಿದೆ ಎನ್ನುವ ಆಶಾವಾದವಿದೆ.

’ರಂಗ್ ದೇ ಬಸಂತಿ’ ಯೊಂದಿಗೆ ಹೋಲಿಸುವುದನ್ನು ಬಿಟ್ಟು, ಡೆಲ್ಲಿಯನ್ನು ನೋಡಿದರೆ ಅದು ವಿಭಿನ್ನವೆನಿಸಬಹುದು. ಆದರೆ ಆ ತರದ ’ಕಲ್ಟ್’ (Cult) ಸಿನಿಮಾಗಳ ನಂತರ ಅದರ ನಿರ್ದೇಶಕರಿಗೆ, ಹಿಂದಿನ ಚಿತ್ರದ ಭಾರ ಹೇಗೆ ಯಾವಾಗಲೂ ಅವರ ಮೇಲಿರುತ್ತೆ ಕೇಳಿ ನೋಡಿ. ಇವೆಲ್ಲದರ ಮಧ್ಯೆ ’ಡೆಲ್ಲಿ’ ಒಂದು ಉತ್ತಮ ಪ್ರಯತ್ನ.

Sunday, February 08, 2009

ಜಯ್ ಹೋ...

ಆಸ್ಕರ್‌ನವರು ಇದಕ್ಕೆ ಒಂದು ಪ್ರಶಸ್ತಿ ಕೊಟ್ಟು, ಡ್ಯಾನಿ ಬಾಯಿಲ್ ಪ್ರಶಸ್ತಿ ಸ್ವೀಕರಿಸಿ ’ಈ ಪ್ರಶಸ್ತಿ ಜಮಾಲ್‍ನಂತಹ ಎಲ್ಲಾ ಮುಂಬೈ ಸ್ಲಂ ಹುಡುಗರಿಗೆ’ ಅಂತಾ ಹೇಳಿ, ಆಮೇಲೆ ಅದರ ಬಗ್ಗೆ ಮತ್ತೆ ಚರ್ಚೆಯಾಗಿ, ಸಾಕಪ್ಪ ಇದರ ಬಗ್ಗೆ ಓದಿದ್ದು ಅನ್ನುವರೆಗೆ ಬಹುಷಃ ಇದು ನಡೀತಾ ಇರುತ್ತೆ.

ಇಲ್ಲಿ ನಮ್ಮ ಗೆಳೆಯರ ಬಾಯಿಯಲ್ಲಿ ಮೊದಲು ಕೇಳಿದಾಗ , ಮತ್ತೆ ಇದು ಯಾವುದೋ ’ರಿಯಲ್’ ಭಾರತವನ್ನು ತೋರಿಸುವ ಮತ್ತೊಂದು ಚಿತ್ರವಿರಬಹುದೇ ಅನಿಸಿತು. ಅಷ್ಟರಲ್ಲಿ ಶುರುವಾಯ್ತು ನೋಡಿ ಇಲ್ಲಿ ಪ್ರಶಸ್ತಿಗಳ ಸುಗ್ಗಿ, ಮೊದಲಿಗೆ ಹಾಲಿವುಡ್ ವಿಮರ್ಶಕರು ನೀಡುವ ಪ್ರಶಸ್ತಿಗಳಲ್ಲಿ ಮಿಂಚುವಿಕೆ, ನಂತರ ಆಕ್ಟರ್ ಗಿಲ್ಡ್ ನಲ್ಲಿ ಮುಂದುವರಿಯಿತು ಹಬ್ಬ. ಅಷ್ಟರಲ್ಲಿ ಎಲ್ಲಡೆ ಅದರ ಮಾತು.

ಅದೊಂದು ದಿವಸ ಕೆಲಸದಿಂದ ಬಂದಾಗ ನನ್ನಾಕೆ ಗರಮ್ ಆಗಿದ್ದಳು . ಆಗಿದ್ದೇನೆಂದರೆ ಅಲ್ಲಿ ಇವಳ ಜೊತೆ ಕೆಲಸ ಮಾಡುವ ಪ್ರೆಡ್ ಅನ್ನೋ ಅಮೇರಿಕನ್‍ನೊಬ್ಬ ’ಸ್ಲಂ ಡಾಗ್ ಅದ್ಬುತ ಸಿನಿಮಾ, ನಿಜವಾದ ಭಾರತ ಏನು ಅಂತಾ ಅದರಲ್ಲಿ ತೋರಿಸಿದ್ದಾರೆ. ಭಾರತದಲ್ಲಿ ಜನ ಇನ್ನೂ ಪಾಪ ಹಾಗೇ ಇದ್ದಾರೆ’, ಭಾರತ ಅಂದರೆ ಒಂದು ಸ್ಲಂ ಅನ್ನುವ ಹಾಗೇ ಹೇಳಿದ್ದ.

ಒಬ್ಬ ಪ್ರೆಡ್ ಗೆ ಆದಂತೆ ಈ ’ರಿಯಲ್’ ಭಾರತದ ದರ್ಶನ ಪ್ರಪಂಚದ ಬೇರೆಡೆ ಇನ್ನೂ ಅದೆಷ್ಟು ಜನರಿಗೆ ಆಗಿರಬಹುದು. ಅದೆಷ್ಟು ಜನ ಈ ’ಸ್ಲಂ ಡಾಗ್’ ಅನ್ನೋ ಮಹಾನ್ ಬೋಧಿ ವೃಕ್ಷದ ಕೆಳಗೆ ಕುಳಿತು , ೨ ತಾಸಿನ ನಂತರ ಬುದ್ಧನ ತರ ಫೋಸ್ ನೀಡುತ್ತಾ ’ಭಾರತ ಅಂದರೆ ಇಷ್ಟೇ ರೀ, ಅವರು ಐಟಿ-ಬಿಟಿ-ಚಂದ್ರ ಅಂತಾ ನಮ್ಮ ಕಣ್ಣಿಗೆ ಚಮಕ್ ತೋರಿಸ್ತಾ ಇದ್ದರು, ನೋಡಿದರೆ ಅವರು ಎಲ್ಲಿ ಶುರುಮಾಡಿದ್ದರೋ ಇನ್ನು ಅಲ್ಲೇ ಇದಾರೆ’ ಅಂತ ಮಾತಾಡಿಕೊಂಡರೇನೊ.

ಬೇರೆಯವರು ಬೇಡ, ನಮ್ಮದೇ ಬಾಲಿವುಡ್‍ನ ಪ್ರೀತಿ ಜಿಂಟಾ, ’ನಮ್ಮ ಮುಂಬೈನಲ್ಲಿ ಇಷ್ಟು ಕೊಳಚೆ-ಸ್ಲಂ ಇದೆ ಅಂತಾ ಈ ಸಿನಿಮಾ ನೋಡಿದ ಮೇಲೆ ನನಗೆ ತಿಳಿಯಿತು’ ಅಂದರೆ..

ಈ ಚಿತ್ರದ ಬಗ್ಗೆ ಪೂರ್ವಾಗ್ರಹ ಪೀಡಿತ ಅಭಿಪ್ರಾಯಗಳೇನು ಇರಲಿಲ್ಲ. ನಿಜ ಹೇಳಬೇಕೆಂದರೆ ಚಿತ್ರ ವೀಕ್ಷಿಸುವಾಗ ಪಕ್ಕಾ ಮನೋರಂಜನಾತ್ಮಕ ಅನಿಸಿತ್ತು. ಚಿತ್ರದ ನಿರೂಪಣೆ ಮತ್ತೆ ಛಾಯಾಗ್ರಹಣ ಹಿಡಿದಿಟ್ಟಿದ್ದು ನಿಜ. ಆಶಾದಾಯಕವಾದ ಅಂತ್ಯವಾದ್ದರಿಂದ ಒಂದು ತರಹ ಫೀಲ್ ಗುಡ್.

ಅದು ನೋಡಿ ಸ್ಪಲ್ಪ ದಿವಸಕ್ಕೆ ಇಲ್ಲಿ ಓಬಾಮನ ಅಧಿಕಾರ ಸ್ವೀಕಾರ ನಡೆದಿದ್ದು ಆಯ್ತು. ನಿಜಕ್ಕೂ ಪ್ರತಿಭೆಯುಳ್ಳ ’ಅಂಡರ್ ಡಾಗ್’ನನ್ನು ಜನ ಹೇಗೆ ಕೈ ಹಿಡಿದು ಮೇಲೆ ಎತ್ತುತ್ತಾರೆಂದು ಅನಿಸಿತು. ಹಾಗೆ ಕೆಳವರ್ಗದ, ತುಳಿತಕ್ಕೆ ಒಳಗಾದವರಿಂದ ಒಬ್ಬ ಮೇಲೆ ಬಂದರೆ ಆ ಕತೆಯನ್ನು ಜನ-ಮಾಧ್ಯಮ ಹೇಗೆ ಇಷ್ಟಪಡುತ್ತಾರೆಂದು ಗೊತ್ತಾಗಿದ್ದು ಆವಾಗಲೇ. ಬಹುಷಃ ಅದೇ ಕಾರಣಕ್ಕೇ ಜಮಾಲ್‍ನ ಕತೆ ನಮಗೂ ಇಷ್ಟವಾಗಿರಬಹುದು ಅನಿಸಿತ್ತು.

ಆದರೆ ಇನ್ನೂ ಸೂಕ್ಷ್ಮವಾಗಿ ನೋಡಿದಾಗ, ಕತೆಯಲ್ಲಿ ಎಷ್ಟೊಂದು ಕಂದಕಗಳಿದ್ದವು.

’ಅಂಡರ್ ಡಾಗ್’ ವಿಷಯದಲ್ಲಿ ಭಾರತೀಯರು ತೋರಿಸುವ ಮೆಚ್ಚುಗೆ-ಕುತೂಹಲ ಗೊತ್ತಿದ್ದದ್ದೆ. ಅಲ್ಲಿ ಒಬ್ಬ ’ಗೋವಿಂದ್ ಜಸ್ವಾಲ್’ ಐಎ‍ಎಸ್ ಪರೀಕ್ಷೆಯಲ್ಲಿ ರಾಂಕ್ ಬಂದಾಗ, ಆತ ಬಡ ಕಾರ್ಮಿಕನ ಮಗನೆಂದು-ಎಷ್ಟು ಶ್ರಮಪಟ್ಟಿದ್ದನೆಂದು , ಮಾಧ್ಯಮದವರು ಅದರ ಬಗ್ಗೆ ಪ್ರಶಂಸಿ ಬರೆದಿದ್ದು ನೆನಪಿರಬಹುದು. ಅದೇ ರೀತಿ ಅದನ್ನು ಕೇಳಿದ-ಓದಿದ ನಾವೆಲ್ಲಾ ಮೆಚ್ಚುಗೆ ಸೂಚಿಸಿದ್ದೆವು. ತುಂಬಾ ಕಷ್ಟ ಪಟ್ಟು ಮೇಲೆ ಬಂದವರ ಬಗ್ಗೆ ನಮ್ಮ ಮೆಚ್ಚುಗೆ ಇದ್ದೇ ಇರುತಿತ್ತು.
ಹೀಗಿರುವಾಗ ಜಮಾಲ್‍ನನ್ನು ’ಚಾಯ್‍ವಾಲ’ ಅಂತಾ ಗೇಮ್ ಶೋ ದಲ್ಲಿ ಹಾಸ್ಯ ಮಾಡಿದ್ದು, ಅವನನ್ನು ಪೋಲಿಸ್‍ಗೆ ಒಪ್ಪಿಸಿದ್ದು...ಭಾರತದಲ್ಲಿ ಎಲ್ಲಿ ಮಾಡ್ತಾರೆ?

ಹಾಗೇ ಇನ್ನೊಂದೆಡೆ ಇರುವ ’ರಿಯಲ್ ಅಮೇರಿಕನ್’ ಸನ್ನಿವೇಶ. ಇದು ನನಗೆ ತುಂಬಾ ನಗು ತರಿಸಿದ ವಿಷಯ. ಈ ಚಿತ್ರವಿರೋದು ಭಾರತದ ಬಗ್ಗೆ, ಚಿತ್ರ ಮಾಡುತ್ತಾ ಇರೋದು ಒಬ್ಬ ಬ್ರಿಟಿಷ್, ಅದರ ಅಲ್ಲಿ ನೂರು ಡಾಲರ್ ಕೊಡಿಸಿ ’ರಿಯಲ್ ಅಮೇರಿಕ’ ತೋರಿಸುವ ಅವಶ್ಯಕತೆ ಎಲ್ಲಿತ್ತು? ಬಹುಷಃ ಅಸ್ಕರ್ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿನ ಅಮೇರಿಕನ್‌ರನ್ನು ಪಟಾಯಿಸಲಿಕ್ಕೆ ಇರಬಹುದೇ ಈ ಡೈಲಾಗು !

ಮತ್ತೊಂದು ಅತೀ ಅನಿಸುವಷ್ಟು ಇದ್ದ ಆ ಅಮಿತಾಭ್ ಆಟೋಗ್ರಾಫ್ ಸನ್ನಿವೇಶ. ನಿಜ, ಅಲ್ಲಿ ಹಾಗೇ ಇರಬಹುದು. ಆದರೆ ಅದನ್ನು ವೈಭವೀಕರಿಸಿ ಅಷ್ಟು ತೋರಿಸುವ ಅವಶ್ಯಕತೆ ಇತ್ತೇ?

ಅವಶ್ಯಕತೆ ಇತ್ತು..ಇಲ್ಲದಿದ್ದರೆ ನಮ್ಮ-ನಿಮ್ಮಂತಹವರು ಇದರ ಬಗ್ಗೆ ಮಾತಾಡುತ್ತಿದ್ದವೆ? ಗೊತ್ತಿಲ್ಲದ ಹಾಗೆ ಪುಗಸಟ್ಟೆ ಪಬ್ಲಿಸಿಟಿ ನೀಡುತ್ತಿದ್ದವೆ? ಆಸ್ಕರ್ ಅನ್ನೋ ಆ ಮಹಾನ್ ಶಂಖದಿಂದ ಬರುವ ತೀರ್ಥದ ಹತ್ತಿರ ಇದಕ್ಕೆ ಹೋಗಲಿಕ್ಕೆ ಆಗುತಿತ್ತೆ?

ಇದೇನೂ ಸಾಮಾಜಿಕ ಕಾಳಜಿ ಇಟ್ಟುಕೊಂಡು ಮಾಡಿದ ಚಿತ್ರವಲ್ಲ.’ಪಥೇರ್ ಪಂಚಲಿ’ಯ ಹಾಗೆ ಬಡತನದ ಬಗ್ಗೆ ಮರುಗುವಂತೆ ಮಾಡುವುದಿಲ್ಲ, ಹಾಗೇ ಸ್ಲಂ‍ನ ಕ್ರೂರತೆ-ಆಪರಾಧದ ತೆರೆದಿಡುವ ’ಸಿಟಿ ಆಫ್ ಗಾಡ್’ ಕೂಡ ಅಲ್ಲ. ಇದು ಕೇವಲ ಮನೋರಂಜನಾತ್ಮಕ ಚಿತ್ರ !

ಆದರೆ ಜಿಗುಪ್ಸೆ ತರಿಸಿದ್ದು ಪಾಶ್ಚಾತ್ಯರ ನಿಲುವುಗಳು. ಯಾವುದೋ ಒಂದು ೨ ಗಂಟೆ ಸಿನಿಮಾ ನೋಡಿ, ಭಾರತವನ್ನು ಆಳೆಯುವುದು. ಏನೇ ಮಾಡಿದರೂ ಇವರಿನ್ನು ಅಲ್ಲಿಂದ ಮುಂದೆ ಬೆಳೆದೇ ಇಲ್ಲಾ ಅನ್ನುವ ಅದೇ ಗತಕಾಲದ ಗತ್ತಿನ ನಡವಳಿಕೆ.

ಹಾಗಂತ ಭಾರತದಲ್ಲಿ ಅಲ್ಲಿ ತೋರಿಸಿದ್ದು ಯಾವುದು ಇಲ್ಲವೇ ಇಲ್ಲಾ ಅಂತಲ್ಲ. ಅದೇ ರೀತಿ ಕರಣ್ ಜೋಹರ್-ಸೂರಜ್ ಭಾರತ್ಯಾಜ ಚಿತ್ರಗಳಲ್ಲಿದ್ದಂತೆ ಜನ ಚಮಕ್ ಶೆರ್ವಾನಿ-ಗಾಗ್ರ-ಚೋಲಿಗಳಲ್ಲಿ ಯಾವಾಗಲೂ ಮಿಂಚುತ್ತಾ ಇರುತ್ತಾರೆಂಬುದು ಸುಳ್ಳು.

ಭಾರತ ಇವೆರಡು ಅಲ್ಲಾ. ಅದು ಇವುಗಳ ಮಧ್ಯೆದಲ್ಲೆಲೋ ಇದೆ.

ನೂರು ಕೋಟಿ ಜನಸಂಖ್ಯೆಯಿಟ್ಟುಕೊಂಡೂ, ಭಾಷೆ-ಜಾತಿ-ಪ್ರಾಂತ್ಯ ಅಂತೆಲ್ಲಾ ಭಿನ್ನಾಭಿಪ್ರಾಯಗಳಿದ್ದೂ, ನಾವು ಮುನ್ನಡೆಯುತ್ತಿದ್ದೇವೆ. ಹೌದು, ಈಗಲೂ ನಮ್ಮಲ್ಲಿ ಸ್ಮಂ ಗಳಿವೆ, ಜನ ಮೂಲಭೂತ ಸೌಕರ್ಯಗಳಿಗೆ ಪರದಾಡುತ್ತಿದ್ದಾರೆ. ಆದರೂ ನಾವು ಕನಸು ಕಾಣುವುದು ನಿಲ್ಲಿಸಿಲ್ಲ. ಅದು ನಿಜವಾದ ಭಾರತ.

ಹೊಸ ಗಾದೆ: ಸಿನಿಮಾಗೆ ಆಸ್ಕರ್ ಬೇಕು ಅಂತಾ ಕೇಳಿದರೆ, ಅದರಲ್ಲಿ ಭಾರತದ ಸ್ಲಂ ಇದೆಯಾ ಅಂದರಂತೆ !

ಜಯ್ ಹೋ !