Sunday, July 30, 2006

ಪ್ರೀತಿಯೆಂದರೆ ಇದೇನಾ ?

ಕಾಲೇಜ್ ದಿನದ ಸ್ನೇಹಿತರನ್ನು ಬಹಳ ವರ್ಷಗಳ ನಂತರ ಭೇಟಿ ಮಾಡೋದರಲ್ಲಿ ಎನೋ ಒಂದು ಸಂಭ್ರಮವಿರುತ್ತೆ.ಕಳೆದ ವಾರ ನನ್ನ ಒಬ್ಬ ಕಾಲೇಜ್ ಮಿತ್ರನನ್ನು ಸುಮಾರು ೫ ವರ್ಷಗಳ ನಂತರ ನೋಡುತ್ತಿದ್ದೆ. ಉಭಯಕೋಶಲೋಪರಿಯ ನಂತರ ನಮ್ಮ ಮಾತುಕತೆಗಳು ಕಾಲೇಜ್ ದಿನಗಳೆಡೆಗೆ ಹೊರಳಿದವು.

ಆ ದಿನಗಳೇ ಹಾಗೇ...

ವಯಸ್ಸು ಸಹ ಅಂತದ್ದೇ.ಎನೋ ಸಾಧಿಸಬೇಕೆಂಬ ಹಂಬಲ, ಕಣ್ಣುಗಳಲ್ಲಿ ನಾಳೆಯ ಕನಸುಗಳು, ಮನದ ಮೂಲೆಯಲೆಲ್ಲೋ ಅನಿಶ್ಚಿತತೆ ಹಾಗೂ ಯಾವಯಾವುದೋ ಅಕರ್ಷಣೆಗಳು.

ಮಿತ್ರನ್ನೊಂದಿಗೆ ಕಾಲೇಜ್ ದಿನಗಳ ಬಗ್ಗೆ ಮಾತಾಡುತ್ತಿರುವಾಗ ನೆನಪಾಗಿದ್ದು ಆ ಹುಡುಗನ ಕತೆ...

ಅವನೊಬ್ಬ ಕನಸುಗಳನ್ನು ತುಂಬಿಕೊಂಡ ಹುಡುಗ. ತುಂಬಾ ಶ್ರಮಜೀವಿ. ತನ್ನ ಇತಿಮಿತಿಗಳನ್ನು ಅರಿತು ನಡೆವ ಹುಡುಗ.ಇಂತಹ ಸ್ಥಿತಪ್ರಜ್ಞ ಹುಡುಗ ಬಹುಷಃ ತಾನಾಯಿತು ತನ್ನ ಓದಾಯಿತು ಅಂತ ಇರುತ್ತದ್ದನೋ ಎನೋ, ಆ ಹುಡುಗಿ ಇಲ್ಲದಿದ್ದರೆ....

ಆ ಹುಡುಗಿ...ಸರಳ ಮತ್ತು ಸೌಜನ್ಯದ ಪ್ರತೀಕ. ಸ್ನೇಹ ಬೆಳಯಲು ತುಂಬಾ ದಿನ ಬೇಕಾಗಲಿಲ್ಲ. ಎಂತಹ ಮಧುರ ಸ್ನೇಹವದು..ಆ ಹುಡುಗಿಗೆ ಯಾಹೂನಲ್ಲಿ ಐಡಿ ಕ್ರಿಯೇಟ್ ಮಾಡಿ, ಹೇಗೆ ಚಾಟು ಮಾಡುವುದು ಅಂತ ನಮ್ಮ ಹುಡುಗ ಹೇಳಿಕೊಟ್ಟಿದ್ದ. ಹಾಗೆಯೇ ಹುಡುಗನ ಬಗ್ಗೆ ಎನೋ ಭರವಸೆ-ನಂಬುಗೆ ಆ ಹುಡುಗಿಯಲ್ಲಿ.

ಅದು ಯಾರು ಯಾವ ಮಹೂರ್ತದಲ್ಲಿ ಹೇಳಿದರೋ..'ಒಬ್ಬ ಹುಡುಗ ಒಬ್ಬ ಹುಡುಗಿ ಒಳ್ಳೆ ಸ್ನೇಹಿತರಾಗೇ ಇರಲು ಸಾಧ್ಯವೇ ಇಲ್ಲ'.

ಅದು ಎನಾಯಿತೋ ಎನೋ ಆ ಹುಡುಗನಿಗೆ ಆ ಹುಡುಗಿಯ ಬಗ್ಗೆ ಸ್ನೇಹಕ್ಕಿಂತ ಮಿರಿದ ಸೆಳೆತ ಶುರುವಾಯಿತು. ಹುಡುಗ ತಾನು ಮಾಡುತ್ತಿರುವದು ಸರಿಯೇ ಅನ್ನೋ ಗೊಂದಲ. 'ಈಗ ಇರೋ ಸ್ನೇಹಕ್ಕೂ ದ್ರೋಹ ಬಗೆತಿದಿಯಾ' ಅಂತ ಒಂದು ಸರ್ತಿ ಮನಸ್ಸು ಹೇಳಿದರೆ, ಇನ್ನೊಂದು ಸಲ ಅದೇ ಮನಸ್ಸು ಹೇಳಿತು 'ಸ್ನೇಹವಿಲ್ಲದೆ ಪ್ರೀತಿ ಇರೋಕೆ ಸಾಧ್ಯ ಇಲ್ಲ, ನಿನ್ನ ಭಾವನೆಗಳು ಸರಿ'.

ಆಂತು ಇಂತು ಧೈರ್ಯ ಮಾಡಿ ಒಂದು ದಿನ ಆ ಹುಡುಗಿಗೆ ನಮ್ಮ ಹುಡುಗ ಸೂಚ್ಯವಾಗಿ ತನ್ನ ಮನದ ಮಾತು ಬಿಚ್ಚಿಟ್ಟಿದ್ದ.ಆದರೆ ಅವನೆಂದುಕೊಂಡಂತೆ ಆಕೇ ಸಿಟ್ಟಿಗೇಳಲಿಲ್ಲ. ಬದಲಾಗಿ ತುಂಬಾ ಸೌಮ್ಯವಾಗಿ ಹುಡುಗನಿಗೆ 'ಇದು ಆಗದ ಹೋಗದ ಮಾತು.ನಾವಿಬ್ಬರು ಒಳ್ಳೆ ಸ್ನೇಹಿತರು.ಹಾಗೇ ಇದ್ದಬಿಡೋಣ' ಅಂದಿದ್ದಳು.

ಈ ರೀತಿ ಸಂದರ್ಭದಲ್ಲಿ ನಾನು ನೋಡಿರೋ ಪ್ರಕಾರ ಹುಡುಗರು ಎರಡು ರೀತಿಯಾಗಿ ವರ್ತಿಸುತ್ತಾರೆ. ಒಂದನೇಯ ಪ್ರಕಾರದವರು ಹುಡುಗಿ ಹೇಳಿದ್ದು ಒಪ್ಪಿಕೊಂಡು ಮಿತ್ರರಾಗಿ ಉಳಿದುಬಿಡ್ತಾರೆ. ಎರಡನೇಯವರು ಆವಾಗ ಒಪ್ಪಿಕೊಂಡರೂ ಮನದಲ್ಲಿ ಆ ಭಾವನೆ ಇದ್ದೆ ಇರುತ್ತೆ, ಮುಂದೊಂದು ದಿನ ಆಕೇ ಒಪ್ಪುತ್ತಾಳೆ ಅನ್ನೋ ಆಸೆವುಳ್ಳವರು.

ನಮ್ಮ ಹುಡುಗ ಎರಡನೇಯ ಪ್ರಕಾರದವನು. ಅದು ಆ ಹುಡುಗಿಗೆ ಗೊತ್ತಾದಗ ಈ ಸಲ ಸ್ಪಲ್ಪ ಖಾರವಾಗಿಯೇ ಹುಡುಗನಿಗೆ ಉತ್ತರ ಸಿಕ್ಕಿತ್ತು.ಇಷ್ಟರಲ್ಲಿ ಕಾಲೇಜ್ ಜೀವನ ಮುಗಿದು ನೌಕರಿ ಎಂಬ ಇನ್ನೊಂದು ಅಧ್ಯಾಯ ಶುರುವಾಗಿತ್ತು.ಅದರ ಮೊದಮೊದಲ ಸಂಭ್ರಮ ಆಚರಿಸುವ ಮೊದಲೇ ಆ ಹುಡುಗಿಯಿಂದ ಆ ಸುದ್ದಿ ಬಂದಿತ್ತು ಅಮಂತ್ರಣದೊಂದಿಗೆ...

ಆದಾಗಿ ಎಷ್ಟೋ ವರ್ಷಗಳು ಕಳೆದವೋ..ಈಗಲೂ ಅವರಿಬ್ಬರ ಮಧ್ಯೆ ಒಂದು ಮಾತಿಲ್ಲಿದ, ಮೇಲ್ ಇಲ್ಲದ ಮೌನದ ಬೇಲಿ.

ನನ್ನ ಸ್ನೇಹಿತನ ಭೇಟಿಯ ನಂತರ ಮರಳಿ ಬರುವಾಗ ನೆನಪಾಗಿದ್ದು ಇನ್ನೊಂದು ಪ್ರೀತಿಯ ಕತೆ..

ಇದು ಒಂದಾನೊಂದು ಅಫೀಸ್‍ನಲ್ಲಿ ಅರಳಿದ ಕತೆ. ಆತ ತುಂಬಾ ಸ್ನೇಹಮಯಿ,ಹಾಸ್ಯಪ್ರಜ್ಞೆವುಳ್ಳ ಒಬ್ಬ ಉತ್ಸಾಹಿ ಯುವಕ.ಅದೇ ಅಫೀಸ್‍ನಲ್ಲಿದ್ದಾಳೆ ಆ ಯುವತಿ.ಇಬ್ಬರಿಗೂ ಸಮಾನ ಇಷ್ಟವಾದ ಅನೇಕ ಅಭಿರುಚಿಗಳು.ಬಹು ಬೇಗನೆ ಬೆಳಯಿತು ಗಾಢ ಸ್ನೇಹ. ಅವರಿಬ್ಬರು ಮಾತಾಡದ ವಿಷಯವಿಲ್ಲ,ಪೋನ್-ಮೇಲ್-ಎಸೆಂಎಸ್ ಇಲ್ಲದ ದಿನಗಳಿಲ್ಲ.ದೋಸೆ,ಐಸ್‍ಕ್ರೀಮ್,ಪಾಸ್ತ,ಫಿಡ್ಜಾ..ಒಟ್ಟಿಗೆ ತಿನ್ನದ ಹೋಟೆಲ್‍ಗಳಿಲ್ಲ.

ದಿನಗಳೆದಂತೆ ಆಕೆಗೆ ಸ್ಪಷ್ಟವಾಗತೊಡಗಿತು ಅವರಿಬ್ಬರು ಸ್ನೇಹದ ಎಲ್ಲೆ ಮೀರುತ್ತಿದ್ದಾರೆ.ಆಕೆ ಅವನಿಗೆ ಹೇಳಿದ್ದಳು 'ಇದು ಆಗದ ಹೋಗದ ಮಾತು.ನಾವಿಬ್ಬರು ಒಳ್ಳೆ ಸ್ನೇಹಿತರು.ಹಾಗೇ ಇದ್ದಬಿಡೋಣ'. ಅವನಿಗೆ ಆವಾಗ ಅದು ಸರಿ ಅನಿಸಿ ಅದನ್ನು ಒಪ್ಪಿಕೊಂಡರೂ ಮನದ ಮೂಲೆಯಲ್ಲಿ ಆ ಪ್ರೀತಿಯ ಭಾವನೆ ಇದ್ದೆ ಇತ್ತು. ಮೊದಲಿಗಿಂತಲೂ ಗಾಢವಾಗಿತ್ತು ಸ್ನೇಹ.

ಕೊನೆಗೆ ಒಂದು ದಿನ ಅವರ ಸಂಜೆ ಭೇಟಿಯಲ್ಲಿ ಆಕೆ ಅವನಿಗೆ ಆ ಸುದ್ದಿ ಹೇಳಿದ್ದಳು. ಅವನಿಗೆ ಅದು ಅನಿರೀಕ್ಷಿತವಲ್ಲದಿದ್ದರೂ ಮನದಲ್ಲಿ ಒಂದು ನೋವಿನ ಅಲೆ ಬಂದು ಅಪ್ಪಳಿಸಿತ್ತು. ಆಕೆಗೆ ಗೊತ್ತು ಅವನ ಮನದಲ್ಲಿ ನಡೆಯುತ್ತಿರುವ ಗದ್ದಲದ ಬಗ್ಗೆ, ಆದರೆ ಅವಳು ಆಸಹಾಯಕಳು?

ಅದೊಂದು ಅಶ್ರುತುಂಬಿದ ವಿದಾಯ...ಆದರೆ ಅವರ ನಡುವಿನ ನಿಷ್ಕಲ್ಮಶ ಸ್ನೇಹ ಮುಂದುವರೆದಿತ್ತು.ಅವಗೊಮ್ಮೆ ಇವಗೊಮ್ಮೆ ಕಳಿಸುವ ಮೇಲ್‍ಗಳು, ಅಪರೂಪದ ಪೋನ್‍ಕಾಲ್‍ಗಳು.ಅದೇ ಸ್ನೇಹ.. ಆದರೆ ಇಬ್ಬರಿಗೂ ಗೊತ್ತು ಎಲ್ಲಿ ಗೆರೆ ಎಳೆಯಬೇಕೆಂದು.

ಈ ಕತೆಗಳ ಬಗ್ಗೆ ಯೋಚಿಸುತ್ತಿರುವಾಗ ನನ್ನ ಸ್ನೇಹಿತೆಯೊಬ್ಬಳ ಕರೆ ಬಂತು.ಅವಳು ಬಹಳ ಗಲಿಬಿಲಿಗೊಂಡಿದ್ದಳು. ೨-೩ ತಿಂಗಳುಗಳಿಂದ ಜೊತೆಗೆ ಕೆಲಸ ಮಾಡುವ ಅವಳ ಸಹೋದ್ಯೋಗಿಯೊಬ್ಬ ಅವಳ ಬಗ್ಗೆ ವಿಪರೀತ ಆಸಕ್ತಿ ಬೆಳಸಿಕೊಂಡಿದ್ದಾನೆ ಅಂತಾ ತಿಳಿಯಿತು.ನಂತರ ಮಾತುಕತೆಯ ನಂತರ ಸ್ಪಷ್ಟವಾಗಿದ್ದು ಅದರಲ್ಲಿ ಆಕೆ ಆ ರೀತಿ ಭಾವನೆ ಬರೋ ಹಾಗೆ ಮಾಡಿದ್ದು ಎನೂ ಇಲ್ಲ. ಅವಳು ಅವನಿಗೆ ಸ್ಪಷ್ಟವಾಗಿ ನಿರಾಕರಿಸಿ ಹೇಳಿದಳಂತೆ.

ನನ್ನ ಸ್ನೇಹಿತೆಗೆ ಕಿವಿಮಾತು ಹೇಳಿದೆ "Feeling of love is like sea waves, it keeps coming.Watch out !'

ಈ ಎಲ್ಲ ಎಪಿಸೋಡ್‍ಗಳನ್ನು ನೋಡಿದಾಗ ಮೂಡಿದ್ದು ಅನೇಕ ಪ್ರಶ್ನೆಗಳು....
೧. ಪ್ರೀತಿ ಅಥವಾ ಆ ಹೆಸರಿನ ಭಾವನೆಗಳು ಹೇಗೆ-ಯಾಕೆ ಮೊಳೆಯುತ್ತೆ?
೨. ಅಸಾಧ್ಯ ಅಂತಾ ಗೊತ್ತಿದ್ದರೂ ಕೊನೆಯ ಕ್ಷಣದವರೆಗೆ ಪ್ರೀತಿ ಮರಳಿ ಬರುತ್ತೆ ಅಂತಾ ಯಾಕೇ ಅಸೆ ಇರುತ್ತೆ?
೩. ಒಬ್ಬ ಹುಡುಗ-ಒಬ್ಬ ಹುಡುಗಿ ಒಳ್ಳೆ ಸ್ನೇಹಿತರಾಗೇ ಇರೋಕೆ ಸಾಧ್ಯನೇ ಇಲ್ವಾ?

ಪ್ರಶ್ನೆಗಳು ಕಾಡುತ್ತಿದ್ದಂತೆ ಬಂತು ಒಂದು ಸಂತಸದ ಸುದ್ದಿ. ನನ್ನ ಅತ್ಯಂತ ಅತ್ಮೀಯರಾದ ದಂಪತಿಗಳ ಕುಟುಂಬಕ್ಕೆ ಹೊಸ ಜೀವವೊಂದರ ಸೇರ್ಪಡೆ. ದಂಪತಿಗಳಿಬ್ಬರೂ ನನ್ನ ಕಾಲೇಜ್ ಸಹಪಾಠಿಗಳು ,ನಮ್ಮ ಮುಂದೆಯೇ ಅರಳಿದ ಪ್ರೀತಿಯದು, ಅವರು ಅನುಭವಿಸಿದ ನೋವು-ನಲಿವು ಎಲ್ಲ ತಿಳಿದ ನಾನು ಸಂಭ್ರಮದಿಂದ ಫೋನಾಯಿಸಿದೆ.

ಬಹುಷ: ಈ ಮೇಲಿನ ಪ್ರಶ್ನೆಗಳಿಗೆ ಉತ್ತರ ಇವರ ಹತ್ತಿರ ಉತ್ತರ ಸಿಕ್ಕರೂ ಸಿಗಬಹುದೇನೋ.ಆ ಕಡೆಯಿಂದ ನನ್ನ ಮಿತ್ರನ ಧ್ವನಿಯಲ್ಲಿ ಧನ್ಯನಾದೆ ಅನ್ನುವ ಭಾವನೆ..ಸಂತಸದ ಹೊನಲು..ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವಂತೆ ಇದ್ದ ಅವರ ಪ್ರೀತಿಯಲ್ಲಿ ಅರಳಿದ ಹೂವು.

ಬಹುಷಃ ಪ್ರೀತಿಯೆಂದರೆ ಇದೇನಾ?

Saturday, July 22, 2006

ನ್ಯೂಯಾರ್ಕ್ ನಗರ ಪ್ರದಕ್ಷಿಣೆ

ನ್ಯೂಯಾರ್ಕ್ ನಗರಕ್ಕೆ ಪ್ರವೇಶಿಸುತ್ತಿರುವಂತೆ ಅಲ್ಲಿನ ಹೆಜ್ಜೆಗೊಂದರಂತಿರುವ ಟ್ರಾಫಿಕ್ ಸಿಗ್ನಲ್‍ಗಳು ಸ್ವಾಗತ ಕೋರಿದವು.ಅವುಗಳ ಜೊತೆ ಮನಸೋ ಇಚ್ಛೆ ವಾಹನ ಚಾಲಿಸುವ ಜನ.

ನಾನಿರುವ ಟೋರೆನ್ಸ್ ಅಲ್ಲಿ, ಸುಪ್ಪಿಯ ಫಿನಿಕ್ಸ್ ಅಲ್ಲಿ, ಅರ್ಚನಾಳ ಡೆನವರ್ನ್ ಅಲ್ಲಿ, ದೀಪ್ತೀಯ ಕೊಪರ್ಟಿನೋಗಳಲ್ಲಿ textbook ಡ್ರೈವಿಂಗ್.ವಾಹನ ಸಂಚಾರ ಬಹು ಮಟ್ಟಿಗೆ ಶಿಸ್ತುಬದ್ದ. ಬಹುತೇಕ ಎಲ್ಲರೂ ಚಾಚುತಪ್ಪದೆ ಟ್ರಾಫಿಕ್ ರೂಲ್ಸ್ ಪಾಲಿಸುತ್ತಾರೆ. ಅಂತಹ textbook ಡ್ರೈವಿಂಗ್ ಒಗ್ಗಿದ ನಮಗೆ ಈ ನ್ಯೂಯಾರ್ಕ್ ಟ್ರಾಫಿಕ್ ಮೊದಮೊದಲಿಗೆ ಇರಸುಮುರಿಸು ಮಾಡಿದ್ದು ನಿಜ.

ಕೊನೆಗೂ ನಾವು ಬುಕ್ ಮಾಡಿದ ಆ ಹೋಟೆಲ್ ಮುಟ್ಟಿದಾಗಲೇ ತಿಳಿದಿದ್ದು ನಾವು ಬೇಸ್ತುಬಿದ್ದಿವಿಯಂತ.ನೆಟ್‍ನಲ್ಲಿ ಆ ಹೋಟೆಲ್‍ನ ಮೋಹಕ ವೆಬ್‍ಸೈಟ್‍ಗೆ ಮರುಳಾಗಿ ಆ ಹೋಟೆಲ್‍ನ economical ಬೆಲೆಯನ್ನು ನೋಡಿ ಖುಷಿಯಾಗಿ ಬುಕ್ ಮಾಡಿದ್ದೆವು.ಆದರೆ ಆ ಹೋಟೆಲ್ ಎಷ್ಟು ಭಯಂಕರವಾಗಿತ್ತೆಂದರೆ ಅಲ್ಲಿ ನಿಲ್ಲಲು ಸಹ ನಮಗೆ ಮನಸಾಗಲಿಲ್ಲ.ಬುಕಿಂಗ್ ರದ್ದು ಮಾಡುವಂತೆ ಎಷ್ಟು ಕೋರಿದರೂ ಅದು ಆಗಲಿಲ್ಲ.ಹೋಟೆಲ್‍ನವರ ಜೂತೆ ಒಂದು ಸುತ್ತು ಹಾಗೂ ಹೋಟೆಲ್ ಬುಕ್ ಮಾಡಿದ ಎಜೆನ್ಸಿ ಅವರ ಜೊತೆ ಪೋನ್‍ನಲ್ಲಿ ವ್ಯರ್ಥ ಜಗಳ ಮಾಡಿದ್ದಾಯಿತು.

ಸರಿ..ಎಕ್ ಅಜನಬಿ ಶಹರ್‍ದಲ್ಲಿ ಹಮ್ ದಿವಾನೆ ಹೋಟೆಲ್ ಹುಡುಕಹೊರಟೆವು. ಇದ್ದಬದ್ದ ನಂಬರ್‍ಗೆ ಫೋನ್ ಮಾಡಿದ ಕೊನೆಗೂ ಒಂದು ಒಳ್ಳೆ ಹೋಟೆಲ್ ಸಿಕ್ಕಿತು.ಚಕಚಕ ತಯಾರಾಗಿ ನಮ್ಮ ನ್ಯೂಯಾರ್ಕ್ ನಗರ ದರ್ಶನಕ್ಕೆಅಣಿಯಾದೆವು.ಇನ್ನೊಂದು ಕಾರ್ಯಕ್ರಮಕ್ಕೆ ಹೊರಟ ಪೊನ್ನಮ್ಮಗೆ ದಾರಿ ಮಧ್ಯೆದಲ್ಲಿ ವಿದಾಯ ಹೇಳಿದೆವು.

ಕಾರ್‍ನಲ್ಲಿ ನ್ಯೂಯಾರ್ಕ್ ತಿರುಗುವ ಯೋಚನೆ ಸರಿ ಹೋಗಲಿಲ್ಲ. ಕಾರಣ..ಕಾರ್ ಪಾರ್ಕಿಂಗ್..
ನ್ಯೂಯಾರ್ಕ ಯಾವುದೇ ಮೂಲೆಗೋದರೂ ಪಾರ್ಕಿಂಗ್ ಬಹು ದೊಡ್ಡ ಸಮಸ್ಯೆ. ಒಂದು ಗಂಟೆ ಪಾರ್ಕಿಂಗ್‍ಗೆ ೧೫-೨೦ ಡಾಲರ್ ಕಕ್ಕಬೇಕು.ಆ ಪಾರ್ಕಿಂಗ್ ಸಿಕ್ಕರೂ ಅದು ಯಾವುದೋ ಒಂದು ದಿಕ್ಕು, ನಾವು ಹೋಗಬೇಕಿರುವ ಸ್ಠಳ ಇನ್ನೊಂದು ದಿಕ್ಕು.ಕಾರ್‍ ಅನ್ನು ವಾಪಾಸ್ ಮಾಡಿ ನ್ಯೂಯಾರ್ಕ್ ಪ್ರಸಿದ್ದ ಹಳದಿ ಟ್ಯಾಕ್ಸಿ ಸವಾರಿ ಶುರುಮಾಡಿಕೊಂಡವಿ. ನ್ಯೂಯಾರ್ಕ್ ಯಾವ ಮೂಲೆಯಲ್ಲಿ ನೋಡಿದರೂ ಈ ಹಳದಿ ಟ್ಯಾಕ್ಸಿಗಳು ಇದ್ದೆ ಇರುತ್ತೆ.ಇನ್ನೊಂದು ವಿಶೇಷವೆಂದರೆ ಬಹುತೇಕ ಟ್ಯಾಕ್ಸಿ ಚಾಲಕರು ದೇಸಿಗಳು.ನಾವು ನ್ಯೂಯಾರ್ಕ್ ಅಲ್ಲಿ ಪ್ರಯಾಣಿಸಿದ ಟ್ಯಾಕ್ಸಿಗಳೆಲ್ಲ ಸರದಾರ್‍ಜಿ ಚಾಲಕರೇ ಇದ್ದದ್ದು.

ಮೊದಲು ಭೇಟಿ..Ground Zero

ಒಮ್ಮೆ ಘನ-ಗಾಂಭಿರ್ಯಾದಿಂದ ತಲೆಯೆತ್ತಿ ನಿಂತಿದ್ದ WTCಯ ಜೋಡಿ ಗಗನಚುಂಬಿ ಕಟ್ಟಡದ ಸ್ಥಳದಲ್ಲಿ ಈಗ ಅಸಹನೀಯ ಶೂನ್ಯತೆ. ಆ ಸ್ಥಳದ ಸುತ್ತಲಿನ ಜಾಲರಿಯಲ್ಲಿ ಆ ಕರಾಳ ಸೆಪ್ಟಂಬರ್ ೧೧ ರ ನಡೆದ ಘಟನೆ ಬಿಂಬಿಸುವ ಫಲಕಗಳು, ಅಂದು ಮೃತರಾದವರ ಎಲ್ಲರ ಹೆಸರಿರುವ ಫಲಕಗಳು.ಹಾಗೆಯೇ ಗ್ರೌಂಡ್ ಜೀರೋ ದರ್ಶಿಸಿದ ಮೇಲೆ ಜನತೆ ತಮ್ಮ ಮನಸಿನ ನೋವು-ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದ ಗೋಡೆಬರಹಗಳು.

ಆಲ್ಲಿ ನಿಂತ ನನಗೆ ೦೯/೧೧ ರ ವಿಮಾನಗಳು ಕಟ್ಟಡಕ್ಕೆ ಅಪ್ಪಳಿಸುವ ಆ ವಿದ್ವಂಸಕಾರಿ ದೃಶಗಳು ಪದೆಪದೇ ತಲೆಯಲ್ಲಿ ಸುತ್ತುತ್ತ ಇತ್ತು. ಒಟ್ಟು ಮೃತರಾದವರು ಸುಮಾರು ೨೭೫೦ ಜನ. ಎಷ್ಟೊಂದು ಜೀವಗಳು ಕಮರಿಹೋದವು, ಎಷ್ಟೊಂದು ಕನಸುಗಳು ಛಿದ್ರವಾದವು..

ಆ ನಿಷ್ಪಾಪಿ ಜೀವಗಳು ಮಾಡಿದ ತಪ್ಪಾದರೂ ಏನು? ಆ ಕಟುಕರಿಗೆ ದಿಕ್ಕಾರವಿರಲಿ..

ಭಗ್ನಾವಶೇಷಗಳ ಮಧ್ಯೆ ಅದೇ ಸ್ಥಳದಲ್ಲಿ Freedom Tower ಎಂಬ ಹೊಸ ಕಟ್ಟಡ ತಲೆಯೆತ್ತುತಿದೆ. ಇದು WTC ಕಟ್ಟಡಕ್ಕಿಂತ ಎತ್ತರವಿರುತ್ತೆಂತೆ, ಅದರೆ ಅದು ಕೇವಲ ಸ್ಮಾರಕವಾಗಿರುತ್ತೆ...ಗ್ರೌಂಡ್ ಜೀರೋದಲ್ಲಿ ಮಡಿದ ಎಲ್ಲರಿಗೂ ನಮನ ಸಲ್ಲಿಸಿ ಮುನ್ನಡೆದೆವು.

ಮುಂದಿನ ಜಾಗ Empire State Building ಎನ್ನುವ ಇನ್ನೊಂದು ಗಗನಚುಂಬಿ ಕಟ್ಟಡ.

WTC ಹೋದ ನಂತರ ನ್ಯೂಯಾರ್ಕನ ಅತ್ಯಂತ ಎತ್ತರದ ಕಟ್ಟಡ.ನಾವು ಹೋದಾಗ ವಿಪರೀತ ಜನಸಂದಣಿ.೧ ಗಂಟೆ ಸರದಿಯಲ್ಲಿ ಕಾಯ್ದ ನಂತರ ಕಟ್ಟಡದ ಮೇಲ್ಛಾವಣಿ ಮುಟ್ಟಿದೆವು.ನಿಜಕ್ಕೂ ಅಲ್ಲಿಂದ ನ್ಯೂಯಾರ್ಕ್ ರಮಣೀಯವಾಗಿ ಕಾಣುತಿತ್ತು. ರಾತ್ರಿಯ ಆ ಮಿನುಗುವ ವಿದ್ಯುತ್ ದೀಪಗಳಲ್ಲಿ ವಿವಿಧ ಕಟ್ಟಡಗಳು,ರಸ್ತೆಗಳು ಹಾಗು ಸೇತುವೆಗಳು ಸುಂದರವಾಗಿ ಕಾಣಿಸುತ್ತಿದ್ದವು.ನಾವು ತೆಗೆದುಕೊಂಡ 'ಟೋನಿ ಆಡಿಯೋ' ಅಲ್ಲಿಂದ ಕಾಣುತ್ತಿದ್ದ ಎಲ್ಲ ಕಟ್ಟಡಗಳು-ಸೇತುವೆಗಳ ಬಗ್ಗೆ ಚೆನ್ನಾಗಿ ವಿವರಣೆ ನೀಡುತಿತ್ತು. ಎಂಪೈರ್ ಸ್ಟೇಟ್ ಕಟ್ಟಡದಿಂದ ಹೊರಬಂದಾಗ ರಾತ್ರಿ ೧೦ ಗಂಟೆ. ಅಲ್ಲಿಂದ ಇನ್ನೊಂದು ಟ್ಯಾಕ್ಸಿ ಹಿಡಿದು ನಮ್ಮ ಮುಂದಿನ ಜಾಗ Times Sqaure ಗೆ ಹೊರಟೆವು.

ಟೈಂ ಸ್ಕ್ವೇರ್‍ನಲ್ಲಿ ಟ್ಯಾಕ್ಸಿಯಿಂದ ಇಳಿಯುತ್ತಿಂದತೆ ಯಾವುದೋ ಮಯಾಲೋಕದಲ್ಲಿ ಇಳಿದಿವೇನೋ ಅನ್ನಿಸಿತು. ಎಲ್ಲಿ ನೋಡಿದರೂ ಜಗಮಗಿಸುವ ಕಟ್ಟಡಗಳು, ಕಣ್ಣು ಕೋರೈಸುವ ಬಣ್ಣಬಣ್ಣದ ಜಾಹೀರಾತು ಫಲಕಗಳು ಮತ್ತು ವರ್ಣಮಯ ಜನಸಾಗರ ! ಆರಾಮವಾಗಿ ತಿರುಗಾಡುತ್ತ, window shopping ಮಾಡುತ್ತ, Starbucks-Cola ಹೀರುತ್ತ ತೇಲುವ ಜನ, ರಸ್ತೆ ಬದಿಯಲ್ಲಿ portrait-painting ಮಾಡಿ ಮಾರುವ ಕಲಾವಿದರು.ನಮ್ಮ ಬೆಂಗಳೂರಿನ ಎಂಜಿ-ಬ್ರಿಗೇಡ್‍ನ ಹಿರಿಯಣ್ಣನಂತೆ ಇತ್ತು ಆ ಟೈಂ ಸ್ಕ್ವೇರ್‍.

ಸಾಕಷ್ಟು ತಿರುಗಾಡಿದ ನಂತರ ಅಲ್ಲಿಯ ಇದ್ದ ಇಟಾಲಿಯನ್ ರೆಸ್ಟೋರೆಂಟ್‍ನಲ್ಲಿ ಗಾರ್ಲಿಕ್ ಬ್ರೆಡ್-ಪಾಸ್ತ ಸವಿದೆವು. ಊಟದ ನಂತರ ಇನ್ನೊಂದು ಸುತ್ತು ಟೈಂ ಸ್ಕ್ವೇರ್‍ ಪ್ರದಕ್ಷಿಣೆ.ಹೋಟೆಲ್‍ಗೆ ಮರಳಬೇಕುನ್ನುವಾಗ ನಾವು ಹೋಟೆಲ್ ವಿಳಾಸ ಮರೆಯುವದೇ..ದೀಪ್ತೀ ಹೋಟೆಲ್ ನಂಬರ್‍ಗೆ ಕರೆ ಮಾಡಿ ಅದು 146 street,7th Avenueದಲ್ಲಿ ಇದೆಯೆಂದು ಹೇಳಿದಳು.ನಾವೆಲ್ಲ ಟ್ಯಾಕ್ಸಿ ಹಿಡಿದು ಆ ವಿಳಾಸಕ್ಕೆ ಹೊರಟೆವು.ಆ ವಿಳಾಸ ಮುಟ್ಟಿದರೆ ಅಲ್ಲಿ ನಮ್ಮ ಹೋಟೆಲ್ ಇಲ್ವೇ !! ಮತ್ತೆ ಕರೆ ಮಾಡಿದಾಗ ತಿಳಿದಿದ್ದು ಆ ಹೋಟೆಲ್ ಇರುವುದು 46 street,7th Avenue. ನಾವು ಟೈಂ ಸ್ಕ್ವೇರ್‍‍ನಿಂದ ಟ್ಯಾಕ್ಸಿ ಹಿಡಿದದ್ದು 47 street ನಿಂದ !! ಅಂದರೆ ಕೊಂಕಣ ಸುತ್ತಿ ಮೈಲಾರಕ್ಕೆ ಹೋದರು ಎನ್ನುವಂತೆ ಮುಂದಿನ ಬೀದಿಯಲ್ಲಿದ್ದ ಹೋಟೆಲ್ ಮುಟ್ಟಲು ಎಲ್ಲ ಕಡೆ ಸುತ್ತಾಡಿ ಮರಳಿ ಬಂದಾಯಿತು !! ಹೋಟೆಲ್ ಮುಟ್ಟಿದ ನಂತರ ಕಿಡಕಿಯಿಂದ ಟೈಂ ಸ್ಕ್ವೇರ್‍‍ ನೋಡಿ ಒಬ್ಬರಿಗೊಬ್ಬರು ಗೇಲಿಮಾಡಿಕೊಂಡು ಹೊಟ್ಟೆ ಹುಣ್ಣಾಗುವಂತೆ ನಕ್ಕೆವು !

ಮರುದಿನದ ಕಾರ್ಯಕ್ರಮದಲ್ಲಿ ಮೊದಲು ಸೆಂಟ್ರಲ್ ಪಾರ್ಕ್ ಭೇಟಿ.

ನಮ್ಮ ಹೋಟೆಲ್‍ನಿಂದ ನಡೆದುಕೊಂಡು ಹೋಗುವಷ್ಟು ಹತ್ತಿರದಲ್ಲಿತ್ತು ಸೆಂಟ್ರಲ್ ಪಾರ್ಕ್ . ಕಾಂಕ್ರೀಟ್ ಜಂಗಲ್‍ನಂತಿರುವ ನ್ಯೂಯಾರ್ಕನ ಮಧ್ಯೆದಲ್ಲಿದೆ ಈ ವಿಶಾಲ ಪಾರ್ಕ್.ಒಂದು ತರ ಆ ನಗರದ ಶ್ವಾಸಕೋಶವಿದ್ದ ಹಾಗೆ. ಆ ಪಾರ್ಕ್‍ ಹೊಕ್ಕು ತಿರುವಂತೆ ನಮಗೆ ಸಿಕ್ಕವರು ಜಾಗ್ ಮಾಡುವವರು, ಸೈಕ್ಲಿಂಗ್ ಮಾಡುವವರು, ಸ್ಕೇಟ್ ಮಾಡುವವರು..ಒಂದು ರೀತಿಯ active ವಾತಾವರಣ.

ಅಲ್ಲಿನ ಬೆಂಚ್‍ಗಳಲ್ಲಿ ಕುಳಿತು ಅಲ್ಲಿದ್ದ ಒಬ್ಬ ದೇಸಿ ಅಂಗಡಿಯವನಿಂದ ಐಸ್‍ಕ್ರೀಂ ಕೊಂಡು, ತಿಂದು ಅನಂದಿಸಿದೆವು.ಅಲ್ಲಿ ಸುತ್ತಾಡಿದ ಮೇಲೆ ಮರಳಿ ಟೈಂ ಸ್ಕ್ವೇರ್‍‍ ಗೆ .ಅಲ್ಲಿನ ಫೀಡ್ಜಾ ಅಂಗಡಿಯಲ್ಲಿ ಎಲ್ಲ ತರದ ವೆಜಿ ಫೀಡ್ಜಾದ ರುಚಿ ನೋಡಿದೆವು. ಮದ್ಯಾಹ್ನದ ವಿಮಾನ ಹಿಡಿಯಬೇಕಿದ್ದ ದೀಪ್ತಿಗೆ ವಿದಾಯ ಹೇಳಿ ನಾವು ಮತ್ತೆ ಸೆಂಟ್ರಲ್ ಪಾರ್ಕ್ ಹೊಕ್ಕೆವು.

ಸೆಂಟ್ರಲ್ ಪಾರ್ಕ್ ನಲ್ಲಿ ಸೈಕ್ಲಿಂಗ್ ಮಾಡುವ ಐಡಿಯಾ ಬಂದದ್ದು ಅರ್ಚನಾಗೆ. ೨ ಗಂಟೆಗೆ ೨೦ ಡಾಲರ್ ಕೊಟ್ಟು ಪಾರ್ಕ್ ಹೊರಗಿದ್ದ ಸೈಕಲ್‍ಗಳನ್ನು ತಗೊಂಡು ನಮ್ಮ ಸೆಂಟ್ರಲ್ ಪಾರ್ಕ್ ಯಾತ್ರೆ ಶುರುವಾಯಿತು.ನನಗೋ ಸೈಕ್ಲಿಂಗ್ ಮಾಡಿ ತುಂಬಾ ದಿವಸಗಳಾಗಿತ್ತು.ಮೊದಮೊದಲಿಗೆ ಸ್ಪಲ್ಪ ಕಷ್ಟಪಟ್ಟ ನಂತರ ಸಲಿಸಾಗಿ ಮುನ್ನಡೆಯಿತು ಸೈಕಲ್. ೨ ಗಂಟೆ ಪಾರ್ಕ್ನಲ್ಲಿ ಸೈಕಲ್ ಮಾಡಿ ದಣಿದ ನಂತರ ಆಯಾಸವಾಗಿತ್ತು, ಆದರೆ ಮನ ಉಲ್ಲಾಸಿತವಾಗಿತ್ತು. ಮತ್ತೊಮ್ಮೆ ಟೈಂ ಸ್ಕ್ವೇರ್‍‍ ಹೊಕ್ಕು ಅಲ್ಲಿದ starbucksನಲ್ಲಿ ಪಾನೀಯ ಹೀರಿ,ಹೋಟೆಲ್‍ಗೆ ತೆರಳಿ,ಅಲ್ಲಿಂದ ಮರಳಿ JFK-LGAಗೆ ನಮ್ಮ ವಿಮಾನ ಹಿಡಿಯ ಹೊರಟೆವು.

ಹೀಗೆ ಮುಕ್ತಾಯವಾಯಿತು ನಮ್ಮ eventful ನ್ಯೂಯಾರ್ಕ್ ಪ್ರವಾಸ !

ನಾವು ಅಂದುಕೊಂಡಂತೆ, ನಾವು ಯೋಜನೆ ಮಾಡಿದಂತೆ ಸುಗಮವಾಗಿ ಸಾಗಲಿಲ್ಲ ಈ ಪ್ರವಾಸ.ಆದರೆ ಸ್ನೇಹಿತರ ಜೊತೆ ಕಳೆದ ಆ ಸವಿಕ್ಷಣಗಳ ಮುಂದೆ ಇವೆಲ್ಲ ಸಣ್ಣ ತೊಡಕುಗಳು ಯಾವ ಲೆಕ್ಕ !!

Friday, July 14, 2006

ನಯಾಗರದ ಜಲಸಿರಿ

ಭಾಫೆಲೋದ ಆ ಹೋಟೆಲ್ ನಲ್ಲಿ ದಿಂಬಿಗೆ ತಲೆ ಇಟ್ಟದೊಂದೆ ನೆನಪು. ಕಾಯ್ದು ಕುಳಿತಿದ್ದ ನಿದ್ರೆ ಅನ್ನುವ ಕಿನ್ನರಿ ತಡಮಾಡದೆ ನಮ್ಮನ್ನು ಅವಾರಿಸಿಕೊಂಡದ್ದಾಯಿತು. ಬೆಳಿಗ್ಗೆ ಆದಷ್ಟು ಬೇಗ ಎದ್ದು ನಯಾಗರಕ್ಕೆ ಹೊರಡುವ ಯೋಚನೆ ಯೋಚನೆಯಾಗಿಯೇ ಉಳಿಯಿತು.ನಾವೆಲ್ಲ ಎದ್ದು ಸಿದ್ದವಾದಾಗ ಬೆಳಿಗ್ಗೆ ೧೧ ಗಂಟೆ.

ನಿದ್ದೆಗೊಮ್ಮೆ ನಿತ್ಯಮರಣ ಎದ್ದ ಸಲ ನವೀನ ಜನನ...

ಒಂದು ಒಳ್ಳೆಯ ನಿದ್ದೆ ದಣಿದ ದೇಹವನ್ನು ಹೇಗೆ ಉಲ್ಲಾಸಿತಗೊಳಿಸುತ್ತೆ! ಆ ಒಂದು ಸುನಿದ್ದೆಯ ನಂತರ ನಮ್ಮ ಗೆಳೆಯರಲ್ಲಿ ಹೊಸ ಉತ್ಸಾಹ ಪುಟಿಯುತಿತ್ತು.ಭಾಫೆಲೋದಿಂದ ೫೦ ಮೈಲಿ ದೂರದಲ್ಲಿನ ನಯಾಗರದೆಡೆಗೆ ಶುರುವಾಯಿತು ನಮ್ಮ ಪಯಣ .ನಯಾಗರ ನಗರ ಮುಟ್ಟಿದಾಗ ೧ ಗಂಟೆ.ಕಾರ್ ಪಾರ್ಕಿಂಗ್ ಹುಡುಕೋದರಲ್ಲಿ ಇನ್ನೊಂದು ಅರ್ಧಗಂಟೆ.ಕೊನೆಗೆ ಯಾವುದೋ ಪೇಡ್ ಪಾರ್ಕಿಂಗ್ ಅಲ್ಲಿ ಕಾರ್ ನಿಲ್ಲಿಸಿ, ನಯಾಗರ ಇನ್‍ಪರ್ಮೇಷನ್ ಸೆಂಟರ್‍ಗೆ ಲಗ್ಗೆ ಹಾಕಿದೆವು.

ನಯಾಗರ ಸೊಬಗು ಸವಿಯಲು ಅಲ್ಲಿರುವ ಕೆಲವು ಜಲಪ್ರವಾಸಗಳನ್ನು ಮಾಡಬೇಕೆಂದು ನಮ್ಮ ಗೂಗಲ್ ಜ್ಞಾನ ಹೇಳುತಿತ್ತು.ಸೆಂಟರ್‍ನಲ್ಲಿ ನೀಡಿದ ಮಾಹಿತಿಯು ಅದನ್ನು ಪುಷ್ಟೀಕರಿಸುತಿತ್ತು.ಅಲ್ಲಿದ್ದ 'ಸಂಪೂರ್ಣ ನಯಾಗರ ದರ್ಶನ' ಪ್ರವಾಸಕ್ಕೆ ಟಿಕೇಟ್ ಕೊಂಡೆವು.ಅದರೆ ನಮ್ಮ ಪ್ರವಾಸ ಸಂಜೆ ೪:೩೦ಗೆ ಶುರುವಾಗಲಿತ್ತು.ಅಂದರೆ ಇನ್ನೂ ೨ ಗಂಟೆಗಳ ಸಮಯವಿತ್ತು.ನಮ್ಮ ಮೊದಲಿನ ಯೋಜನೆ ಪ್ರಕಾರ ನಾವು ನಯಾಗರದಿಂದ ೪-೫ ಗಂಟೆಗೆ ಮರಳಿ ಹೊರಡಬೇಕಿತ್ತು.ಈಗ ನೋಡಿದರೆ ನಮ್ಮ ಪ್ರವಾಸ ಆರಂಭವಾಗುವುದೇ ೪:೩೦ ಗೆ ! ಪ್ರವಾಸ ಅಂದರೆ ಇದೇ ಅಲ್ವಾ..ಎನೋ ಯೋಜನೆ ಹಾಕಿಕೊಂಡು ಹೋಗೋದು,ಅಲ್ಲಿ ಎನೋ ಆಗುತ್ತೆ, ನಂತರ ಯೋಜನೆಗಿಂತ ಭಿನ್ನವಾಗಿ ಇನ್ನೇನೋ ಆಗುತ್ತೆ.ಕೊನೆಗೆ ಹಂಗೆ ಆಗಿದ್ದೆ ಒಳ್ಳೆದಾಯಿತು ಅನಿಸುತ್ತೆ!

ತಾಳ ಹಾಕುತ್ತಿದ್ದ ಹೊಟ್ಟೆಯನ್ನು ತಣಿಸಲು ಹತ್ತಿರದಲ್ಲೇ ಇದ್ದ 'ಪಂಜಾಬಿ ಢಾಭಾ'ಕ್ಕೆ ನುಗ್ಗಿದೆವು. ಅಂದಾಗೆ ಭಾರತದ ಯಾವುದೋ ಪಟ್ಟಣದಲ್ಲಿದ್ದೆವೆನೋ ಅನ್ನುವ ಭಾವನೆ ಬರುವಷ್ಟು ದೇಸಿಗಳಿದ್ದರು ನಯಾಗರದಲ್ಲಿ .ಅದು ಯಾವುದೇ ಕೋನದಿಂದ ಢಾಭಾದ ತರ ಇದ್ದಿಲ್ಲವಾದರೂ ದೇಸಿ ಊಟ ಸವಿಯುವ ಉದ್ದೇಶದಿಂದ ಹೊಕ್ಕಿದ್ದಾಯಿತು.ಸರದಾರಜೀಯ ಹೋಟೆಲ್‍ನಲ್ಲಿ ಬುಫೆ ಊಟ ಮತ್ತು ಹರಟೆ ನಡೆಯಿತು.

ನಯಾಗರ ಪ್ರವಾಸ ಆರಂಭ ಮಾಡುವ ಮುನ್ನ ನಯಾಗರದ ಬಗ್ಗೆ ಸ್ಪಲ್ಪ ಮಾಹಿತಿ.ನಯಾಗರ ಇರುವುದು ಆಮೇರಿಕಾ ಮತ್ತು ಕೆನಡಾ ದೇಶಗಳ ಗಡಿಯಲ್ಲಿ. ಹತ್ತಿರದಲ್ಲೆ ಕಾಣುತಿತ್ತು ಗಡಿ ಚೆಕ್‍ಪೋಸ್ಟ್ .ನಯಾಗರವೆಂದರೆ ಕೇವಲ ಒಂದು ಜಲಪಾತವಲ್ಲ.ಅಲ್ಲಿರೋದು ೩ ಜಲಪಾತಗಳು - ಆಮೇರಿಕನ್ ಜಲಪಾತ,ಬ್ರೈಡಲ್ ವೇಲ್ ಜಲಪಾತ ಮತ್ತು ಕೆನಡಿಯನ್ ಜಲಪಾತ.

ನಮ್ಮ ನಯಾಗರ ದರ್ಶನದ ಮೊದಲನೆಯ ಭಾಗದಲ್ಲಿ 'Maid of the Mist' ಅನ್ನುವ ಪ್ರವಾಸಕ್ಕೆ ಕರೆದೊಯ್ಯದರು. ಹೋಗುತ್ತಿದ್ದಂತೆ ಎಲ್ಲ ಪ್ರವಾಸಿಗರಿಗೆ ನೀಲಿ ಬಣ್ಣದ ಜಾಕೇಟ್‍ಗಳನ್ನು ನೀಡಲಾಯಿತು.ಆ ಪ್ಲಾಸ್ಟಿಕ್ ಜಾಕೇಟ್‍ನಲ್ಲಿ ನಾವೆಲ್ಲ ಯಾವುದೋ ಗ್ರಹದಿಂದ ಇಳಿದವರ ತರ ಕಾಣುತ್ತಿದ್ದೆವು! ಅಂದಾಗೆ 'ಮೇಡ್ ಆಫ್ ದಿ ಮಿಸ್ಟ್' ಅನ್ನೋದು ನಯಾಗರ ಜಲಪಾತಕ್ಕೆ ಪ್ರವಾಸಿಗರನ್ನು ಕರೆದೊಯ್ಯುವ ದೋಣಿಯ ಹೆಸರು. ದೋಣಿ ಜಲಪಾತದೆಡೆಗೆ ಸಾಗುತ್ತಿದ್ದಂತೆ ಜಾಕೇಟ್‍ನ ಮಹಿಮೆ ಅರಿವಾಗತೊಡಗಿತು.

ಮೊದಲು ಸಿಕ್ಕಿದ್ದು ಅಮೇರಿಕನ್ ಜಲಪಾತ.

೧೦೬೦ ಅಡಿ ಅಗಲ ಮತ್ತು ೧೮೦ ಅಡಿ ಎತ್ತರದ ಆಗಾಧ ಜಲಪಾತ.ವೇಗವಾಗಿ ಬೀಸುತ್ತಿದ್ದ ಗಾಳಿ ಜಲಪಾತದ ನೀರ ಹನಿಗಳನ್ನು ತಂದು ನಮ್ಮ ಮೇಲೆ ಸಿಂಚನ ಮಾಡುತಿತ್ತು.ಜಾಕೇಟ್ ಇಲ್ಲದಿದ್ದರೆ ಎಲ್ಲರೂ ತೊಯ್ದು ತುಪ್ಪೆಯಾಗುತ್ತಿದ್ದೆವೋ ಎನೋ..

ಅಷ್ಟೊಂದು ನೀರು ಅಷ್ಟೊಂದು ಎತ್ತರದಿಂದ ದುಮ್ಮಿಕ್ಕಿತ್ತಿರುವದನ್ನು ನೋಡುವುದೇ ಚಂದ. ಆ ನೀರಿನ ಬಿಂದುಗಳು ಸೂರ್ಯ ಕಿರಣಗಳ ಜೊತೆ ಚೆಲ್ಲಾಟವಾಡಿ, ಜಲಪಾತದ ಮೇಲ್ಗಡೆ ಕಾಮನಬಿಲ್ಲು ಮೂಡಿತ್ತು.ಅತ್ಯಂತ ಸೊಬಗಿನ ದೃಶಾವಳಿಗಳಲ್ಲಿ ಒಂದು. ಅಮೇರಿಕನ್ ಜಲಪಾತದ ದೃಶ್ಯವೈಭವವನ್ನು ಇನ್ನೂ ಮೆಲುಕು ಹಾಕುತ್ತಿದ್ದಂತೆ ಹತ್ತಿರದಲ್ಲೆ ಭೋರ್ಗೆರವ ನೀರಿನ ಸದ್ದು.

ನಮ್ಮ ದೋಣಿ ಸ್ಪಲ್ಪ ದೂರ ಹೋಗುತ್ತಿದ್ದಂತೆ ಅಲ್ಲಿ ಕಂಡಿತು 'ಹಾರ್ಸ್ ಶ್ಯೂ'.

ಕುದುರೆಲಾಳ ಅಥವಾ 'U' ಆಕಾರದ ಆ ಕೆನಡಿಯನ್ ಜಲಪಾತ.ದೋಣಿ ಆ 'ಹಾರ್ಸ್ ಶ್ಯೂ' ಒಳಗೆ ತೇಲುತ್ತಿದ್ದಂತೆ ಕಂಡದ್ದು.......ಎಡಕ್ಕ..ಬಲಕ್ಕೆ..ಎದುರಿನಲ್ಲಿ... ಹುಚ್ಚೆದ್ದು ದುಮುಕುತಿರುವ ಜಲರಾಶಿ.ನಾ ಕಂಡ ಇನ್ನೊಂದು ಮರೆಯಲಾಗದಂತ ದೃಶ್ಯ.

೨೬೦೦ ಅಡಿ ಅಗಲದ,೧೭೩ ಅಡಿ ಎತ್ತರದ ಆ ಜಲಪಾತ ಮುಂದೆ ನಿಂತಾಗ ಎನೋ ಅವ್ಯಕ್ತ ಸಂತಸ.ದೋಣಿಯ ಧ್ವನಿವರ್ದಕದಲ್ಲಿ 'Ladies & Gentlemen, This is Niagara' ಅನ್ನೋ ಘೋಷಣೆ ಮಾಡುತ್ತಿದ್ದಂತೆ ದೋಣಿಯಲ್ಲಿ ಕರತಾಡನ ಮತ್ತು ಆನಂದದ ಕೇಕೆ.

ಆ ಕೆನಡಿಯನ್ ಜಲಪಾತದಿಂದ ದೋಣಿ ನಮ್ಮನ್ನು ಮರಳಿ ಕರೆತರುವಾಗ ತಿರುತಿರುಗಿ ಅದನ್ನು ನೋಡಿದ್ದಾಯಿತು.ನಿಸರ್ಗದ ಮೋಹಕ ಮತ್ತು ಅಷ್ಟೆ ದೈತ ಶಕ್ತಿಯ ಮುಂದೆ ಮಾನವ ಎಷ್ಟು ಕುಬ್ಜ ಎನಿಸಿತು. ದಡಕ್ಕೆ ಬಂದು ಅಮೇರಿಕನ್ ಜಲಪಾತವನ್ನು ಇನ್ನೊಂದು ಹತ್ತಿರದ view point ನಿಂದ ನೋಡಿದೆವು.

ಅಲ್ಲಿಂದ ನಮ್ಮನ್ನು ಕರೆದುಕೊಂಡು ಹೊರಟಿತು ನಮ್ಮ ನಯಾಗರ ಪ್ರವಾಸ ಬಸ್ಸು.ನಮ್ಮ ನಯಾಗರ ದರ್ಶನದ ಎರಡನೇಯ ಚರಣದಲ್ಲಿ 'Cave of the Winds' ಅನ್ನುವ ಇನ್ನೊಂದು ಪ್ರವಾಸ ಕಾದಿತ್ತು. ಇಲ್ಲಿ ನಮೆಗೆಲ್ಲ ಹಳದಿ ಜಾಕೇಟ್ ಜೊತೆಗೆ ಸ್ಲಿಪರ್‍ಗಳನ್ನು ನೀಡಿದರು.ತುಂಬಾ ಉದ್ದದ ಸರದಿ.ಸಾಲಿನಲ್ಲಿ ನಿಂತೆ 'ಫ್ರೆಂಚ್ ಫ್ರೈ'-ಸೇಬುರಸ ಸ್ವಾಹ ಮಾಡಿದೆವು. ನಮ್ಮ ಸರದಿ ಬಂದಾಗ ಮುಸ್ಸಂಜೆಯಾಗಿತ್ತು.ನಾನು ಮೊದಲೇ ಹೇಳಿದಾಗೆ ಇಲ್ಲಿರುವ ೩ ಜಲಪಾತಗಳು.ಅವುಗಳ ಪೈಕಿ ಚಿಕ್ಕದು 'Bridal Veil' ಜಲಪಾತ.ಈ ಚರಣದಲ್ಲಿ ನಾವು ಈ ಒಂದು ಜಲಪಾತದ ಬುಡ ತಲುಪಲಿದ್ದೆವು.

ಸ್ಪಲ್ಪ ದೂರ ಸಾಗಿದಂತೆ ಕಂಡಿತು ರಭಸವಾಗಿ ಬೀಳುತ್ತಿದ್ದ ಆ ಜಲಪಾತ.ಕನ್ನಡದಲ್ಲಿ 'ವಧುವಿನ ಸೆರಗು' ಎಂಬ ಸುಂದರ ಹೆಸರಿನ ಆ ಜಲಪಾತ. ಅಲ್ಲಿರುವ ಮರದ ಅಟ್ಟಣಿಗೆಗಳನ್ನು ಏರಿ ಮುಂದೆ ಹೋದರೆ ಸೀದಾ ಜಲಪಾತದ ಕೆಳಗೆ. ಧೋ ಅಂತಾ ಸುರಿಯುತ್ತಿದ್ದ ಜಲಪಾತದ ಕೆಳಗೆ ನಿಂತಾಗ ಅ ಜಲಶಕ್ತಿಯ ಅರಿವಾಯಿತು.ಎಷ್ಟೊಂದು ಬಲವಿದೆ ಅದರಲ್ಲಿ.ನೀರು ಕಂಡರೆ ಎಂತವರಿಗೂ ಆಡಬೇಕೆನಿಸುತ್ತೆಲ್ವಾ.ನಮ್ಮ ತಲೆಯ ಮೇಲಿದ್ದ ಆ ಪ್ಲಾಸ್ಟಿಕ್ ಟೊಪ್ಪಿಗೆಯಂತದನ್ನು ಕಳಚಿ ಜಲಪಾತದ ಕೆಳಗೆ ಹೋಗಿ ನಿಂತೆವು.ಪ್ಲಾಸ್ಟಿಕ್ ಜಾಕೀಟ್-ಸ್ಲಿಪರ್ ಪೂರ್ತಿ ಉಪಯೋಗವಾಯಿತು.ಅದ್ಬುತ ಅನುಭವ!

ಅಲ್ಲಿಂದ ಪಕ್ಕದಲ್ಲಿದ್ದ ಅಮೇರಿಕನ್ ಜಲಪಾತ ಇನ್ನೊಂದು ಕೋನದಿಂದ ಮೋಹಕವಾಗಿ ಕಾಣುತಿತ್ತು.ಹಾಗೆಯೇ ಕೆನಡಾ ಮತ್ತು ಅಮೇರಿಕೆಯ ಮಧ್ಯವಿರುವ 'ರೈನ್ ಬೋ' ಸೇತುವೆಯ ನೋಟ ಸೊಗಸಾಗಿತ್ತು.ಸೂರ್ಯ ದಿನದ ತನ್ನ ಕೊನೆಯ ಕ್ಷಣಗಳನ್ನು ನಯಾಗರದ ಜೊತೆ ಕಳೆಯುತ್ತಿರುವಂತೆ ಭಾಸವಾಗುತಿತ್ತು.'ಕೇವ್ ಆಫ್ ದಿ ವಿಂಡ್ಸ್' ನಿಂದ ಹೊರಬರುತ್ತಿದ್ದಂತೆ ಕೆನಡಾ ಗಡಿಯಿಂದ ವಿದ್ಯುತ್ ಬೆಳಕು ನಯಾಗರದ ಮೇಲೆ ಬೀಳತೊಡಗಿತು.ಎಲ್ಲೆಡೆ ಪೂರ್ತಿ ಕತ್ತಲೆ ಕವಿದಿತ್ತು.

ನಮ್ಮ ನಯಾಗರ ಪ್ರವಾಸದ ಗೈಡ್ ಹ್ಯಾರಿ ನಮಗೆ ಇನ್ನು ಸ್ವಲ್ಪ ಹೊತ್ತಿನಲ್ಲಿ ಸಿಡಿಮದ್ದಿನ ಶೋ ಶುರುವಾಗುವದೆಂದು, ಅದನ್ನು ಎಲ್ಲಿಂದ ನೋಡಿದರೆ ಚೆನ್ನಾ ಎಂಬ ಮಾಹಿತಿ ನೀಡಿದನು.ಈಗ ನಾವುಗಳು ಅಮೇರಿಕನ್ ಜಲಪಾತ ಮತ್ತು ಬ್ರೈಡಲ್ ವೇಲ್ ಜಲಪಾತಗಳ ಮಧ್ಯೆವಿರುವ 'ಗೋಟ್ ದ್ಪೀಪ' ದಲ್ಲಿ ನಿಂತೆವು.

ರಾತ್ರಿಯಲ್ಲಿ ನಯಾಗರದ್ದು ವಿಭಿನ್ನ ಸೌಂದರ್ಯ.ಕೆಂಪು,ನೀಲಿ,ಹಸಿರು ಬಣ್ಣಗಳ ಬೆಳಕಿನಲ್ಲಿ ಅದು ಇನ್ನೂ ಸುಂದರವಾಗಿ ಕಾಣುತಿತ್ತು. ನದಿಯ ಆ ದಡದಲ್ಲಿ, ಅದೇ ಕೆನಡಾದಲ್ಲಿ ಎತ್ತರವಾದ ಕಟ್ಟಡಗಳು ಬಣ್ಣಬಣ್ಣದ ವಿದ್ಯುತ್ ದೀಪಗಳಲ್ಲಿ ಜಗಮಗಿಸುತ್ತಿದ್ದವು.ಸರಿಯಾಗಿ ೧೦ ಗಂಟೆಯಾಗುತ್ತಿದ್ದಂತೆ ಕೆನಡಾ ಗಡಿಯಿಂದ ಶುರುವಾಯಿತು ಸಿಡಿಮದ್ದಿನ ಶೋ.ಬಣ್ಣದ ಬಣ್ಣದ ಪಟಾಕಿಗಳು ಆಕಾಶದಲ್ಲಿ ಸಿಡಿದು ಅಲ್ಲಿ ಚಿತ್ತಾರಗಳನ್ನು ರಚಿಸುತ್ತಿದ್ದವು.ಪಕ್ಕಕ್ಕೆ ದುಮುಕುತ್ತಿರುವ ನಯಾಗರ, ಆಕಾಶದಲ್ಲಿ ಬಾಣ-ಬಿರುಸುಗಳ ಸಿಡಿತ.ಯಾವುದೋ ಸ್ವಪ್ನ ಲೋಕದಲ್ಲಿ ವಿಹಾರಿಸುತ್ತಿದೆವೆಯೇ ಅನ್ನೋ ಭಾವನೆ..

ಮಳೆಯ ಕಾರಣ ಸಿಡಿಮದ್ದು ಶೋ ೫ ನಿಮಿಷ ಬೇಗ ನಿಂತರೂ ಮನ ಹರ್ಷಿತವಾಗಿತ್ತು.ಮರಳಿ ಬಸ್ಸು ನಮ್ಮನ್ನು ನಯಾಗರ ಸೆಂಟರ್ ಹತ್ತಿರ ಬಿಟ್ಟಾಗ ರಾತ್ರಿ ೧೧ ಗಂಟೆ.ಅಲ್ಲಿದ್ದ ಇನ್ನೊಂದು ಭಾರತೀಯ ಹೋಟೆಲ್‍ಗೆ ರಾತ್ರಿ ಭೋಜನಕ್ಕೆ ತೆರಳಿದೆವು. ಹೋಟೆಲ್‍ನಲ್ಲಿ ಒಬ್ಬ ದೇಸಿ ಮತ್ತು ಹೋಟೆಲ್ ‍ಮಾಲೀಕನ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ನಡೆಯುತಿತ್ತು. ನಾವು ಊಟ ಮಾಡಿ ಹೊರಡುತ್ತಿದ್ದಂತೆ ಅಲ್ಲಿಯವರಿಗೆ ವಾಗ್ದಾಳಿಯಲ್ಲಿ ತೊಡಗಿದ್ದ ಅವರಿಬ್ಬರು ರಾಜಿಯಾಗಿ ಹೋಟೆಲ್ ಮಾಲೀಕ ಆ ದೇಸಿಯನ್ನು 'ಭೂರಾ ಮತ್ ಸಮ್ಜನಾ ಭೇಟ' ಅಂದದ್ದನ್ನು ನೋಡಿ ನಮಗೆ ಮುಸಿಮುಸಿ ನಗು..

ಸ್ಪಲ್ಪ ಒದ್ದೆಯಾಗಿದ್ದ ಬಟ್ಟೆಗಳನ್ನು ಬದಲಿಸಿ, ಕಾರಿಗೆ ಊಟ ಮಾಡಿಸಿ(ಪೆಟ್ರೋಲ್ ಕುಡಿಸಿ) ನಯಾಗರ ಬಿಟ್ಟಾಗ ರಾತ್ರಿ ೧ ಗಂಟೆ. ನಮ್ಮ ಪ್ರಯಾಣ ಮರಳಿ ನ್ಯೂಯಾರ್ಕ್ ಗೆ.ದೂರ ೪೫೦ ಮೈಲಿ.ಓಪನಿಂಗ್ ಬ್ಯಾಟ್ಸ್ ‍ಮೆನ್ ಆಗಿ ನಾನು ಡ್ರೈವರ್ ಸ್ಥಾನದಲ್ಲಿ ಅಸೀನನಾದೆನು.ಮತ್ತೆ ಶುರುವಾಯಿತು ಫ್ರೀ ವೇ ಸವಾರಿ.

ಬೆಳಗಿನ ಹೊತ್ತಿನ ಡ್ರೈವ್ ರಾತ್ರಿಯ ಡ್ರೈವ್‍ಗಿಂತ ವಿಭಿನ್ನವಾಗಿತ್ತು. ಹಿಂದಿನ ಸೀಟಿನಲ್ಲಿದ್ದ ಅರ್ಚನಾ ಮತ್ತು ಪೊನ್ನಮ್ಮ ಆಯಾಸದಿಂದ ನಿದ್ರೆಗೆ ಜಾರಿದ್ದರು. ದೀಪ್ತೀ ಐ-ಪೋಡ್ ನಲ್ಲಿ request show ಮುಂದುವರಿಸುತ್ತಿದ್ದಳು. ನಮ್ಮ ಮುಂದಿನ ಬ್ಯಾಟ್ಸ್ ಮೆನ್ ಸುಪ್ರೀತನಿಗೆ ವಿಶ್ರಾಂತಿ ಕೊಡುವ ಉದ್ದೇಶದಿಂದ ಅವನಿಗೆ ಮಲಗಿಕೊಳ್ಳಲು ಹೇಳಿದೆವು.ಹಾಡು-ಮಾತುಗಳ ಮಧ್ಯೆ ದಾರಿ ಹೋಗಿದ್ದೆ ತಿಳಯಲಿಲ್ಲ.ನಾನು ಸುಪ್ರೀತ್‍ನ ಕೈಗೆ ಸ್ಟೇರಿಂಗ್ ಕೊಟ್ಟಾಗ ಬೆಳಗಿನ ೪:೩೦.ಹಾಗೆಯೇ ನಿದ್ದೆಗೆ ಜಾರಿದೆ.

ಎರಡು ಗಂಟೆಗಳ ನಂತರ ಎಚ್ಚರವಾದಗ ನ್ಯೂಯಾರ್ಕ್‍‍ಗೆ ಸಮೀಪದಲ್ಲಿದ್ದೆವು..

ಮುಂದಿನ ಭಾಗದಲ್ಲಿ...ನ್ಯೂಯಾರ್ಕ್ ನಗರ ವೀಕ್ಷಣೆ

Friday, July 07, 2006

ಸ್ವಾತಂತ್ರ್ಯ ದೇವತೆಯ ಮಡಿಲಲ್ಲಿ..

ಬರೆದು ಅದು ಯಾವ ಕಾಲ ಆಯಿತೋ ಎನೋ..

ನಾನು ಎಲ್ಲೋ ಕಾಣೆಯಾಗಿದೀನಿ ಅಂತಾ ತಿಳಕೊಂಡು ಕಂಪ್ಲೆಂಟ್ ಕೊಡೋಕೆ ಹೊರಟಿದ್ದರು ನನ್ನ ಬ್ಲಾಗ್ ಮಿತ್ರರು. ಅವರೆಲ್ಲ ಸೇರಿಕೊಂಡು 'ಕಾಣೆಯಾದವರು' ಪಟ್ಟಿಗೆ ನನ್ನ ಸೇರಿಸಿವುದಕ್ಕಿಂತ ಮುಂಚೆ ನಾನು ಬರೆಯೋದು ಒಳ್ಳೆಯದು!

ಎನಪ್ಪಾ ಆಯಿತು ಅಂದ್ರೆ..ಅಮೇರಿಕಾದ್ದು ಸ್ವಾತಂತ್ರ ದಿನಾಚರಣೆ ರಜೆಯ ಜೊತೆ ಇನ್ನೊಂದು ರಜೆ ಜಡಿದು , ನ್ಯೂಯಾರ್ಕ್ ಮತ್ತು ನಯಾಗರಕ್ಕೆ ಒಂದ್ನಾಲ್ಕು ದಿವಸ ಪ್ರವಾಸಕ್ಕೆ ಹೋಗಿದ್ದೆ. ಅದಕ್ಕೆ ಇಲ್ಲಿಂದ ಮಾಯಾ ಅಗಿದ್ದೆ. ಈಗ ಆ ನ್ಯೂಯಾರ್ಕ್ ಪ್ರವಾಸಗಥೆ ಜೊತೆ ನಿಮ್ಮ ಮುಂದೆ...

ಪ್ರವಾಸ ಹೋಗಿದೋಕ್ಕಿಂತ ಮುಂಚೆ ನನ್ನ ಜೊತೆ ಬಂದು ನನ್ನ ಸಹಿಸಿಕೊಂಡವರ ಬಗ್ಗೆ ಒಂದೆರಡು ಮಾತು ! ಫಿನಿಕ್ಸ್ ನಿಂದ ಸುಪ್ರೀತ್, ಡೆನವರ್ ನಿಂದ ಅರ್ಚನ, ಕುಪರ್ಟಿನೋ ದಿಂದ ದೀಪ್ತೀ ನನ್ನ ಸಹಪ್ರವಾಸಿಗರು. ಎಲ್ಲರೂ ಕನ್ನಡಿಗರು, ಬೆಂಗಳೂರಿನಲ್ಲಿದ್ದಾಗ ೨-೩ ವರ್ಷ ನಾವೆಲ್ಲಾ ಒಟ್ಟಿಗೆ ಕೆಲಸ ಮಾಡಿದವರು. ಇವರ ಜೊತೆ ಇನ್ನೊಬ್ಬ ಗೆಳತಿ ಪೊನ್ನಮ್ಮ.ಹಳೇ ಮಿತ್ರರು ಹೊಸ ಜಾಗದಲ್ಲಿ.

ಅವರವರ ಸ್ಥಳಗಳಿಂದ ವಿಮಾನವೇರಿ ನ್ಯೂಯಾರ್ಕ್ ಮುಟ್ಟಿದ್ದಾಯಿತು.ನಾನು ಮತ್ತು ಸುಪ್ರೀತ, ನ್ಯೂಯಾರ್ಕ್ ನಲ್ಲಿ ಕಾರ್ ಒಂದನ್ನು ಬಾಡಿಗೆಗೆ ತಗೆದುಕೊಂಡದ್ದೆ ಒಂದು ಸಾಹಸಗಥೆ !ಅದು ದೀರ್ಘ ವಾರಾಂತ್ಯವಾದ್ದರಿಂದ ಒಂದೇ ಒಂದು ಕಾರ್ ಸಹ ಇದ್ದಿಲ್ಲ. ಆ ಜಾನ್ ಕೆನಡಿ ಎರ್‍ಪೋರ್ಟ್ ನಲ್ಲಿ ಗಣಗಣ ತಿರುಗಿದ್ದು ಪ್ರಯೋಜನವಾಗಲಿಲ್ಲ.ಕೊನೆಗೆ ನನ್ನ ಲ್ಯಾಪ್‍ಟಾಪ್ ತೆಗೆದು ಗೂಗಲ್‍ನಲ್ಲಿ ಹತ್ತಿರದ ಕಾರ್ ರೆಂಟಲ್ ಹುಡುಕಿದಾಗ ಬೆಳಗಿನ ಜಾವ ! ಅಲ್ಲಿಗೆ ಹೋಗಿ ಕಾರ್ ತೆಗೆದುಕೊಳ್ಳುವಷ್ಟರಲ್ಲಿ ಹರೋಹರ. ಇನ್ನೊಂದು ಕಡೆ ಹೋಟೆಲ್ ಗೆ ತೆರಳಿದ ನಮ್ಮ ಉಳಿದ ಮಿತ್ರರದ್ದು ಇನ್ನೊಂದು ತಾಪತ್ರಯ. ಆ ಹೋಟೆಲ್ ಬೇಗ ಮರೆಯಬೇಕೇನ್ನುವಂತಿತ್ತು.

ಕೊನೆಗೂ ಬ್ಯಾಟರಿ ಪಾರ್ಕ್ ಎನ್ನುವ ಸ್ಥಳದಲ್ಲಿ ನಾವೆಲ್ಲ ಭೇಟಿಯಾದದ್ದು ಆಯಿತು. ಬ್ಯಾಟರಿ ಪಾರ್ಕ್ ನಿಂದ ದೋಣಿಯಲ್ಲಿ ನಮ್ಮ ಪ್ರಯಾಣ. ಎರ್‍ಪೋರ್ಟ್‍ ನಲ್ಲಿ ಇರುವಂತೆ ತೀವ್ರ ಶೋಧನೆ ನಂತರ ದೋಣಿ ಹತ್ತಲು ಅವಕಾಶ. ತೀರ ಬಿಟ್ಟು ದೋಣಿ ಮುಂದೆ ಹೋಗುತ್ತಿದ್ದಂತೆ ದೊರದಲ್ಲೆಲ್ಲೋ ಆಕೃತಿಯೊಂದು ಗೋಚರಿಸತೊಡಗಿತು. ಹತ್ತಿರ ಹೋಗುತ್ತಿದ್ದಂತೆ ಆ ಪ್ರತಿಮೆ ಸ್ಪಷ್ಟವಾಗಿ ಗೋಚರಿಸತೊಡಗಿತು. ಒಂದು ಕೈಯಲ್ಲಿ ಪುಸ್ತಕ, ಇನ್ನೊಂದು ಆಕಾಶಕ್ಕೆ ಚಾಚಿದ ಕೈಯಲ್ಲಿ ದೀವಿಗೆ,ವಿಶಿಷ್ಟವಾದ ಮುಖ,ತಲೆಯ ಮೇಲೆ ಎಲೆಗಳ ಕಿರೀಟ.ಆದುವೇ 'ಸ್ವಾತಂತ್ರ ದೇವತೆಯ ಪ್ರತಿಮೆ' ಅಥವಾ 'Statue of Liberty'.

ಆಮೇರಿಕಾದ್ದು ಅಂತಾ ಒಂದು icon ಇದ್ದರೆ, ಅದುವೇ ಲಿಬರ್ಟಿ ಪ್ರತಿಮೆ. ಲಿಬರ್ಟಿ ಪ್ರತಿಮೆ ಇರುವ ದ್ವೀಪ ಮುಟ್ಟಿ, ಪ್ರತಿಮೆಯನ್ನು ಪ್ರವೇಶಿಸುವ ಮುನ್ನ ಇನ್ನೊಂದು ಸುತ್ತಿನ ಸಮಗ್ರ ಶೋಧನೆ ಆಯಿತು. ಸ್ವಾತಂತ್ರ್ಯದ ಸಂಕೇತವಾದ ಈ ಪ್ರತಿಮೆಗೆ ಇಷ್ಟು ಭದ್ರತೆಯೇ , ಇಷ್ಟೊಂದು ಅಸ್ವಾತಂತ್ರ್ಯವೇ ಅನ್ನುವ ಪ್ರಶ್ನೆ ಮನದಲ್ಲಿ ಹೊಕ್ಕಿದೇನೋ ನಿಜ.

ಪ್ರತಿಮೆಯನ್ನೇರಿ ಅದರ ಸುತ್ತ ಸುಳಿದು, ಅಲ್ಲಿನ ಪ್ರತಿಮೆಯ ಬಗ್ಗೆ ಇರುವ ವಸ್ತು ಸಂಗ್ರಹಾಲಯದಲ್ಲಿ ಓಡಾಡಿ, ಅದರ ಬಗ್ಗೆ ಇನ್ನಷ್ಟು ತಿಳಿದುಕೊಂಡಾಗ ಆ ಲಿಬರ್ಟಿ ಪ್ರತಿಮೆಯ ಬಗ್ಗೆ ಪ್ರೀತಿ ಹೆಚ್ಚಾಗತೊಡಗಿತು.ಪ್ರಾನ್ಸ್ ಆಮೇರಿಕಾಕ್ಕೆ ಕೊಟ್ಟ ಹುಟ್ಟು ಹಬ್ಬದ ಉಡುಗೊರೆ ಅದು. ದೇಶ ದೇಶಗಳು ಕಚ್ಚಾಡುವಾಗಿನ ಈಗೀನ ದಿನಗಳಲ್ಲಿ ಒಂದು ದೇಶ ಇನ್ನೊಂದು ಹೊಸ ದೇಶಕ್ಕೆ ಇಂತಹ ಭವ್ಯ ಕಾಣಿಕೆ ಕೊಟ್ಟಿದ್ದು..
ಪ್ರತಿಮೆಯನ್ನು ಇರೋ ಎಲ್ಲ ಕೋನಗಳಿಂದ ಕ್ಯಾಮರದಲ್ಲಿ ಸೆರೆಹಿಡಿದ ಮೇಲೂ ಇನ್ನೂ ಎನೋ ಉಳಿದಿದೆ ಅನ್ನುವಂತಿತ್ತು. ಅಲ್ಲಿ ಮನಪೂರ್ತಿ ತಿರುಗಿ ವಾಪಾಸ್ ದೋಣಿ ಹತ್ತಿ ಲಿಬರ್ಟಿ ಪ್ರತಿಮೆಗೆ ನಮಸ್ಕರಿಸಿ ಮರಳಿ ಬಂದಾಯಿತು.

ಯೋಜನೆ ಪ್ರಕಾರ ನಮ್ಮ ಮುಂದಿನ ಸ್ಥಳ ನ್ಯೂಯಾರ್ಕ್ ನಿಂದ ೪೫೦ ಮೈಲಿ ದೂರದ ಊರು ಭಾಫೆಲೋ. ಕಾರಿನಲ್ಲಿ ಡ್ರೈವ್ ಮಾಡಿಕೊಂಡು ಹೋದರೆ ೮-೯ ಗಂಟೆ ಪ್ರಯಾಣ.ಸರಿ, ಶುರುವಾಯಿತು ನಮ್ಮ ಡ್ರೈವಿಂಗ್. ಸುಪ್ರೀತ ನೂಯಾರ್ಕ್ ಬಿಡೋ ತನಕ ಓಡಿಸಿದ, ನಂತರ ನನ್ನ ಸರದಿ.

ಇಲ್ಲಿನ ಫ್ರೀ ವೇ ಗಳ ಬಗ್ಗೆ ಒಂದು ಮಾತು. ಇವು ಎಷ್ಟೊಂದು ಯೋಜಿತವಾಗಿ ರಚಿಸಲ್ಪಟ್ಟಿವೆ. ಒಂದೊಂದು ಫ್ರೀ ವೇ ನಲ್ಲೂ ೩ ಲೇನ್‍ಗಳು. ಎಲ್ಲಾ ಎಕ್ಸಿಟ್ ಗಳೂ ಬಲಬದಿಯಲ್ಲಿಯೇ ಇರುತ್ತವೆ.

ಮೊದಮೊದಲು ೬೦-೭೦ ಮೈಲಿ ವೇಗದಲ್ಲಿ ಓಡಿಸಿದ್ದಾಯಿತು. ನಂತರ ಅಲ್ಲಿ ಸಿಕ್ಕವು ನೋಡಿ ೪-೫ ಕಾರ್ ‍ಗಳು. ನಂತರ ಶುರುವಾಯಿತು ಅವರ ಜೊತೆ ಒಂದು ವೇಗದ ಹಬ್ಬ.ಕೊನೆ ಕೊನೆಗೆ ನಾನು ೯೦-೯೫ ಮೈಲಿ ಮುಟ್ಟಿದಾಯಿತು. ವೇಗ ಯಾವಾಗಲೂ ಆಪಾಯಕಾರಿ ಎಂದು ತಿಳಿದೇ ಅವಾಗವಾಗ ವೇಗ ತಗ್ಗಿಸಿ ೭೦-೮೦ ಮೈಲಿಯಲ್ಲಿ ಓಡಿಸಿದ್ದಾಯಿತು ! ಒಂದು ನಾಲ್ಕು ಗಂಟೆಗಳ ನನ್ನ ಡ್ರೈವಿಂಗ್ ಬಳಿಕ ಸುಪ್ರೀತನ ಸರದಿ. ಸುಪ್ರೀತ ಇನ್ನೊಬ್ಬ ವೇಗದ ದೊರೆ !

ಈ ಮಧ್ಯೆ ಕಾರಿನಲ್ಲಿದ್ದ ನಮ್ಮ ಗೆಳತಿಯರು ಐ-ಪೋಡ್ ನಲ್ಲಿ request show ನಡೆಸುತ್ತಿದ್ದರು. ಆದೇಕೋ ದೀಪ್ತೀ ಮತ್ತು ಅರ್ಚನಾಗೆ ಅಮೃತಧಾರೆಯ 'ನೀ ಅಮೃತಧಾರೆ ಕೋಟಿ ಜನ್ಮ ಜತೆಗಾರ' ಬಹಳ ಇಷ್ಟವಾದಂತಿತ್ತು. ಬಹುತೇಕ ಕನ್ನಡ ಹಾಡುಗಳ ಮಧ್ಯೆ ಆಗಾಗ ಎಲ್ಲಾ ಭಾಷೆಯ ಹಾಡುಗಳು ಬಂದು ಹೋದವು.

ಕೊನೆಗೆ ಭಾಫೆಲೋ ಮುಟ್ಟಿದಾಗ ರಾತ್ರಿ ೧:೩೦. ಭಾಫೆಲೋ ಬೀದಿಯಲ್ಲಿ ಶನಿವಾರ ರಾತ್ರಿಯ ಪಾರ್ಟಿಗಳು ಜೋರಾಗಿ ನಡೆಯುತ್ತಿದ್ದವು. ಮನಸೇನೋ ಹೋಗೋಣ ಅಂತಿದ್ದರು, ದೇಹ ವಿಶ್ರಾಂತಿ ಬೇಡುತಿತ್ತು. ಕೊನೆಗೂ ದೇಹಕ್ಕೆ ಜಯವಾಗಿ ಹಾಸಿಗೆಗೆ ಬಿದ್ದದ್ದು ಒಂದೇ ನೆನಪು !

ಅಂದಾಗೆ ನಾವು ಭಾಫೆಲೋಗೆ ಯಾಕೆ ಹೋದೆವು ಅನ್ನುವ ಕುತೂಹಲವೇ ? ಅದು ನಯಾಗರ ಅನ್ನುವ ಆ ಮಹೋನ್ನತ ಜಲಪಾತಕ್ಕೆ ಹತ್ತಿರವಿರುವ ಊರು. ನಯಾಗರ ನೋಡಲು ಹೋದವರು ಈ ಊರಲ್ಲಿ ಉಳಿದುಕೊಳ್ಳೋದು.

ಮುಂದಿನ ಭಾಗದಲ್ಲಿ ......ನಯಾಗರದ ಜಲಸಿರಿ