Thursday, February 18, 2016

ಅವಳು, ಮಗಳು, ನೆನಪು, ನಲಿವು

ಅದು ಯಾವುದೋ ನಗರಿ
ರಸ್ತೆ ರಸ್ತೆಯಲ್ಲ ಅಲ್ಲಿ
ಊರ ತುಂಬ ಕಾಲುವೆ
ಪಯಣ ಒಂದು ದೋಣಿಯಾನ
ಕಾಲುವೆಗೊಂದು ಕೆಂಪುಹಸಿರು ದೀಪ
ಹಸಿರುದೀಪದಿ ತೆರೆವ ಬಾಗಿಲು
ಮತ್ತೆ ಸಾಗುವ ದೋಣಿ
ದೋಣಿ ನಡೆಸುವ ಅವಳು
ಅವಳ ನಗು ಬೆಳದಿಂಗಳು

ಮತ್ತೆ ಯಾನ ನಿಲ್ಲಿಸುವ
ಕೆಂಪುದೀಪ ಆ ಬಾಗಿಲುಗಳು
ದೋಣಿ ನಿಂತಾಗ ನೋಡುವ
ಅವಳ ನಿಷ್ಕಳಂಕ ನಯನ
ಅದು ಸೋಸುವ ಪ್ರೀತಿ
ಆ ಪ್ರೀತಿಯ ರೀತಿ
ಮತ್ತೆ ಹಸಿರು ದೀಪ
ತೆರೆಯುವ ಬಾಗಿಲುಗಳು ಮನಸ್ಸು
ಹೊರಟಾಗ ಮತ್ತದೇ ಸಡಗರ

ದೂರ ತೀರದ ಪಯಾಣ
ದಣಿವು ಬಾಯರಿಕೆ ಕ್ರಮೇಣ
ಪ್ರಶ್ನೆಗಳು ಪ್ರಜ್ಞೆಗಳು
ಬಂದ ದಾರಿ ನೋಡಲು
ಹಿಂದೆ ಜಲ ಸಾಗರ
ಮುಂದೆ ದಾರಿ ಹುಡುಕಲು
ಮುಂದೆ ಜಲ ಸಾಗರ
ಅವಳದೊಂದು ಸ್ನಿಗ್ಧ ಮನ
ಅಲ್ಲೊಂದು ದಿಕ್ಸೂಚಿ

ದೂರ ಕಂಡ ತೀರದಂಚು
ದೋಣಿ ತುಂಬ ತುಂಬು ನಗು
ನಕ್ಕು ಕಣ್ಣು ಬಿಡಲು
ಪಕ್ಕ ಕನಸ ಮಲ್ಲಿಗೆ
ಅದೇ ನಯನ ತಾವರೆ
ಸೇರಿ ಸವಿದ ಮಧುರ ನೆನಪು
ಸಕ್ಕರೆ ಗೊಂಬೆ ಮುದ್ಧು ಮಗಳು
ಅವಳು, ಮಗಳು, ನೆನಪು, ನಲಿವು
ಪಯಣದಲ್ಲಿ ಇನ್ನೇನು ಆಯಾಸ !