Thursday, August 20, 2009

ಜ್ವಾಲಾಮುಖಿಯ ಮುಂದೆ ನಿಂತು...

ಸಾವಿರಾರು ಮಿಲಿಯನ್ ವರ್ಷಗಳ ಹಿಂದೆ ಸಮುದ್ರದಲ್ಲಿನ ಜ್ವಾಲಾಮುಖಿಯ ನಿರಂತರ ಆಟದಿಂದ ಉಂಟಾಗಿದ್ದೇ ಈ ಹವಾಯಿ ದ್ವೀಪ ಸಮೂಹ. ಇಂತಹ ದ್ವೀಪ ಸಮೂಹವನ್ನು ಸೃಷ್ಟಿ ಮಾಡಿದ ಜ್ವಾಲಾಮುಖಿಯ ಈಗಲೂ ತನ್ನ ಇರುವಿಕೆಯನ್ನು ತೋರಿಸುತ್ತಿದೆ.

ಸನಿಹದಿಂದ ಆ ಆಗಾಧ ಶಕ್ತಿಯ ಜ್ವಾಲಾಮುಖಿಯನ್ನು ನೋಡಲು ಅತ್ಯಂತ ಪ್ರಶಸ್ತ ಸ್ಥಳ- ಹವಾಯಿ ವಾಲ್‍ಕೆನೊ ನ್ಯಾಷನಲ್ ಪಾರ್ಕ್.

ಹವಾಯಿ ದ್ವೀಪಗಳಲ್ಲೇ ಅಗ್ರಗಣ್ಯ ಪ್ರೇಕ್ಷಣೀಯ ತಾಣ.

ತಿಳಿದ ಮಟ್ಟಿಗೆ ಜಗತ್ತಿನ ಬೇರೆ ಎಲ್ಲೂ ಜ್ವಾಲಾಮುಖಿಯನ್ನು ಮುಖಾಮುಖಿ ನೋಡಲು ಸಾಧ್ಯವಿಲ್ಲವೇನೊ?

ಹಿಲೋ ನಗರದಿಂದ ಸುಮಾರು ೫೦ ನಿಮಿಷದ ಕಾರ್ ಪ್ರಯಾಣದ ನಂತರ ಆ ವಾಲ್‍ಕೆನೊ ನ್ಯಾಷನಲ್ ಪಾರ್ಕ್‍ನ ಬಾಗಿಲಲ್ಲಿ ಇದ್ದೆವು. ಮೌನಲೂ ಶಿಖರದಿಂದ ಸಮುದ್ರದವರೆಗೆ ಹಬ್ಬಿರುವ ೩೩೦೦೦೦ ಎಕರೆಯ ಬೃಹತ್ ಪ್ರದೇಶ. ಎರಡು ಸಕ್ರಿಯ ಜ್ವಾಲಾಮುಖಿಗಳು, ಲೆಕ್ಕವಿಲ್ಲದಷ್ಟು ಜ್ವಾಲಾಮುಖಿ ಕಣಿವೆಗಳು, ಆಕರ್ಷಕ ಲಾವಾ ಟ್ಯೂಬ್, ೧೮ ಮೈಲಿಗಳ ವಿಭಿನ್ನ ಡ್ರೈವ್...ಏನುಂಟು ಏನಿಲ್ಲ !

ನಾವು ಮೊದಲು ಹೊಕ್ಕಿದ್ದು ’ಕಿಲಯಿಯ ವಿಸಿಟರ್ ಸೆಂಟರ್’ . ಇಲ್ಲಿದ್ದ ರೇಂಜರ್ ಅಫೀಸರ್‌ಗಳು, ಎಲ್ಲೆಲ್ಲಿ ಪ್ರವಾಸಿಗರು ಹೋಗಲು ಕ್ಷೇಮ, ಎಲ್ಲೆಲ್ಲಿ ಹೋಗಬಾರದು ಎನ್ನುವುದರ ಬಗ್ಗೆ ಹೇಳುತ್ತಿದ್ದರು. ಹಾಗೇ ಪ್ರದೇಶದಲ್ಲಿನ ಗಾಳಿಯ ಸಧ್ಯದ ಸಲ್ಫರ್ ಡೈ ಆಕ್ಸಡ್ ಪ್ರಮಾಣದ ಬಗ್ಗೆಯೂ ತಿಳಿಸಿ, ಅಲ್ಲಿನ ಆಕರ್ಷಣೆಗಳ ವಿವರಣೆ ನೀಡಿದರು. ಹವಾಯಿ ಜ್ವಾಲಾಮುಖಿಯ ಕುರಿತಾದ ಸಾಕ್ಷ್ಯಚಿತ್ರ ನೋಡಿದ ಮೇಲಂತೂ ಜ್ವಾಲಾಮುಖಿ ನೋಡುವ ತುಡಿತ ಹೆಚ್ಚಾಯಿತು.

ಜ್ವಾಲಾಮುಖಿ ಪಾರ್ಕ್‍ನ ಹೃದಯ ಭಾಗದಲ್ಲಿ ಹಬ್ಬಿರುವುದೇ ಕ್ರೇಟರ್ ರೋಡ್. ಈ ರಸ್ತೆಯಲ್ಲಿ ಮೊದಲಿಗೆ ಸಿಗುವುದು - ಸ್ಟೀಮ್ ವೆಂಟ್ಸ್. ನೆಲದಲ್ಲಿನ ಬಿಲದಿಂದ ಹೊರಹೊಮ್ಮಿತ್ತಿದ್ದ ಬಿಸಿ ಹವಾ. ಎಲ್ಲಿ ನೋಡಿದರೂ, ಇಂತಹ ಅನೇಕ ಬಿಸಿ ಹವೆ ಬಿಲಗಳು. ಮಳೆಯಿಂದ ನೆಲದೊಳಗೆ ನೀರು, ನೆಲದೊಳಗಿನ ಕಲ್ಲುಬಂಡೆಗಳು, ತಳದಲ್ಲೆಲ್ಲೋ ಇರುವ ಲಾವಾದ ಬಿಸಿಯಾಗಿ, ಈ ನೀರು ಬಿದ್ದೊಡನೆ ಅವಿಯಾಗಿ ಹೊರಹೊಮ್ಮುತ್ತದೆ.

ಅಲ್ಲೇ ಸ್ಪಲ್ಪ ದೂರದಲ್ಲಿ ನಡೆದುಹೋದರೆ ಸಲ್ಫರ್ ಬ್ಯಾಂಕ್. ಜ್ವಾಲಾಮುಖಿಯಿಂದ ಹೊಮ್ಮಿದ ಅನಿಲಗಳಲ್ಲಿ ಇರುವ ಸಲ್ಫರ್, ಕಲ್ಲು ಬಂಡೆಗಳ ಮೇಲೆ ಕುಳಿತು ಆಗಿರುವುದೇ ಈ ಸಲ್ಪರ್ ಬ್ಯಾಂಕ್. ಹಳದಿ ಬಣ್ಣದ ಬಂಡೆಗಳು, ಯಾವುದೋ ಕಾಲೇಜ್ ‍ಲ್ಯಾಬ್‍ನಲ್ಲಿರುವಂತೆ ಸಲ್ಫರ್‌ನ ಘಾಟು ವಾಸನೆ.

ಕ್ರೇಟರ್ ರಿಮ್ ರಸ್ತೆಯಲ್ಲಿ ಮುಂದೆ ಡ್ರೈವ್ ಮಾಡುತ್ತಿದ್ದಂತೆ ಎದುರಿಗೆ ಥಾಮಸ್ ಜಾಗರ್ ಮ್ಯೂಸಿಯಂ. ಹವಾಯಿ ಜ್ವಾಲಾಮುಖಿಯ ಬಗ್ಗೆ ಅಧ್ಯಯನ ಮಾಡಲು ವೀಕ್ಷಣಾಲಯ ಪ್ರಾರಂಭಿಸಿದ ವಿಜ್ಞಾನಿ ಥಾಮಸ್ ಜಾಪರ್‌ನ ಹೆಸರಿನ ಈ ಮ್ಯೂಸಿಯಂ‍ನಲ್ಲಿ ಜ್ವಾಲಾಮುಖಿ ವಿಜ್ಞಾನಕ್ಕೆ ಸಂಬಂಧಿಸಿದ ಉಪಕರಣಗಳು ಮತ್ತು ಮಾಹಿತಿ ಕೇಂದ್ರವಿದೆ.

ಮ್ಯೂಸಿಯಂ ಪಕ್ಕದಲ್ಲೆ ಇರುವುದೇ ’ಹಲಿಮಮಾವು ಕಂದಕ’. ಸುಮಾರು ೩೦೦೦ ಆಡಿಗಳಷ್ಟು ಅಗಲ ಮತ್ತು ಸುಮಾರು ೩೦೦ ಅಡಿ ಆಳದ ಕಂದಕ. ಹವಾಯಿಯನ್ ಜನರಿಗೆ ಜ್ವಾಲಾಮುಖಿ ದೇವತೆ ’ಪೆಲೇ’ ವಾಸಿಸುವ ಸ್ಥಳ. ೨೦-೮೦ ವರ್ಷಗಳ ಕೆಳಗೆ ಈ ಕಂದಕದಲ್ಲಿ ಕುದಿಯುವ ಲಾವ ಇತ್ತಂತೆ, ಈಗ ಅಲ್ಲಿ ಲಾವಾ ಕಂಡುಬರದಿದ್ದರೂ ಯಾವಾಗಲೂ ಹೊಗೆ ಉಗುಳುತ್ತಿರುತ್ತದೆ. ಇಡೀ ಕ್ರೇಟರ್ ರಿಮ್ ರೋಡ್ ಈ ಕಂದಕದ ಸುತ್ತ ಗಿರಕಿ ಹೊಡೆಯುತ್ತದೆ.


ಈಗ ಕ್ರೇಟರ್ ರಸ್ತೆಯ ಡ್ರೈವ್ ಮುಗಿಸಿ, ನಾವು ’ಚೈನ್ ಆಫ್ ಕ್ರೇಟರ್ಸ್’ ರಸ್ತೆಗೆ ಬಂದಿದ್ದೆವು. ಅದು ’ಲಾವಾ ಟ್ಯೂಬ್’. ಸ್ಥಳಿಯ ಪತ್ರಕರ್ತ ಲೋರಿನ್ ಥರ್ಸ್ಟನ್ ಇದನ್ನು ಪತ್ತೆ ಹಚ್ಚಿದ್ದರಿಂದ ಇದಕ್ಕೆ ಥರ್ಸ್ಟನ್ ಲಾವಾ ಟ್ಯೂಬ್ ಎಂಬ ಹೆಸರು. ದಟ್ಟ ಕಾನನದ ನಡುವೆ ಹುದುಗಿರುವ ಇದು ಲಾವಾ ಹರಿದಾಗ ಆಗಿದ್ದಂತೆ. ಹರಿಯುತ್ತಿದ್ದ ಲಾವಾದ ಹೊರ ಪದರ ಗಟ್ಟಿಯಾಗಿ ಆಗಿರುವ ಈ ಗುಹೆಯಲ್ಲಿ ನಡೆಯುವುದು ವಿಭಿನ್ನ ಅನುಭವ. ಮುಂದೆ ಇನ್ನೊಂದು ಗುಹೆಯಿತ್ತಿದ್ದರೂ, ಅಲ್ಲಿ ತುಂಬಾ ಗಾಢ ಕತ್ತಲು, ಟಾರ್ಚ್ ಇಲ್ಲದೆ ಒಳಗೆ ಹೋಗಲ್ಲಿಕ್ಕೆ ಆಗುವುದಿಲ್ಲ.ನಮ್ಮ ಬಳಿ ಟಾರ್ಚ್ ಇಲ್ಲದ ಕಾರಣ ನಾವು ಆ ಸಾಹಸಕ್ಕೆ ಹೊರಡಲಿಲ್ಲ.


ಅಲ್ಲಿಂದ ಮುಂದೆ ಡ್ರೈವ್ ಮಾಡುತ್ತಿದ್ದಂತೆ ದಾರಿಯ ಅಕ್ಕಪಕ್ಕ ಎಲ್ಲೆಲ್ಲೂ ಕಪ್ಪು ಲಾವಾ ಬಂಡೆ. ಸುಮಾರು ೮ ಮೈಲಿಯ ವಿನೂತನ ದೃಶ್ಯಾವಳಿ. ದಾರಿ ಒಮ್ಮೆಗೆ ಕೊನೆಗೊಳ್ಳುತ್ತದೆ, ಯಾಕೆಂದರೆ ಅಲ್ಲಿಂದ ಮುಂದೆ ರಸ್ತೆ ಇಲ್ಲವೇ ಇಲ್ಲ. ಇದ್ದ ರಸ್ತೆಯ ಮೇಲೆ ಲಾವಾ ಹರಿದು ಗಟ್ಟಿ ಬಂಡೆಯಾಗಿ ಈಗ ಆ ರಸ್ತೆ ಲಾವಾ ಬಂಡೆಗಳ ಅಡಿ ಕಳೆದುಹೋಗಿದೆ. ಅಲ್ಲಿಂದ ಇಳಿದು ನಾವು ಬಂಡೆಗಳನ್ನೇರಿ ಹಾಗೇ ಮುಂದುವರಿದೆವು. ಹೀಗೆ ಸುಮಾರು ೧೫-೨೦ ನಿಮಿಷ ಬಂಡೆಗಳಲ್ಲಿ ಸುಳಿದಾಡಿ ಅಲ್ಲಿ ಮೊದಲಿದ್ದ ರಸ್ತೆಯ ತುಣುಕುಗಳನ್ನು ನೋಡುತ್ತಾ ಮತ್ತೆ ರಸ್ತೆಗೆ ಮರಳಿದೆವು.


ಇಷ್ಟೆಲ್ಲಾ ತಿರುಗಾಡುವಷ್ಟರಲ್ಲಿ ಆಗಲೇ ಸಂಜೆ ಆರುವರೆ ಸಮಯ. ಅದರೆ ನಾವು ನೋಡಬೇಕೆಂದಿದ್ದ ಪ್ರಮುಖವಾದದ್ದನ್ನು ಇನ್ನೂ ನೋಡೇ ಇರಲಿಲ್ಲ. ಹೌದು, ಇನ್ನೂ ಹರಿಯುವ ಲಾವಾದ ದರ್ಶನ ಆಗಿರಲಿಲ್ಲ.ಹರಿಯುವ ಲಾವಾ ನೋಡಲು ಪ್ರಶಸ್ತ ಸ್ಥಳವೆಂದರೆ ಕಾಲಪನ . ಆದರೆ ಅ ಸ್ಥಳವಿದ್ದದ್ದು ಅಲ್ಲಿಂದ ೪೫ ಮೈಲಿ ದೂರದಲ್ಲಿ ಮತ್ತು ಇನ್ನೊಂದು ವಿಷಯವೆಂದರೆ ಆ ಸ್ಥಳಕ್ಕೆ ೮ ಗಂಟೆಯ ಒಳಗೆ ಬರುವ ವಾಹನಗಳಿಗಷ್ಟೇ ಮಾತ್ರ ಪ್ರವೇಶ. ಆಗಿದ್ದಾಗಲಿ ಎಂದು ಅಲ್ಲಿಗೆ ಹೊರಟೆ ಬಿಟ್ಟೆವು. ಹವಾಯಿ ಇನ್ನೊಂದು ವಿಶೇಷವೆಂದರೆ ಇಲ್ಲಿನ ೨ ಲೇನ್ ದಾರಿಗಳು. ಅಮೇರಿಕದ ಬೇರೆಡೆ ಇರುವಂತೆ ಇದನ್ನು ಫ್ರೀವೇ ಅನ್ನಲಾಗುವುದಿಲ್ಲ. ಇಲ್ಲಿ ತುಂಬಾ ನಿಧಾನ ಸಾಗುವ ಟ್ರಾಫಿಕ್. ಕಿಲಯಿಯ ಹೆಸರಿನ ಆ ಜ್ವಾಲಾಮುಖಿ, ೧೯೮೪ರಿಂದಲೂ ನಿರಂತರವಾಗಿ ಸಿಡಿಯುತ್ತಿರುವ ಎಕೈಕ ಸಕ್ರಿಯ ಜ್ವಾಲಾಮುಖಿ. ನಾವು ಇನ್ನೇನೂ ಆ ಜ್ವಾಲಾಮುಖಿ, ಆ ಲಾವಾ ದೃಶ್ಯ ತಪ್ಪಿಸಿಕೊಳ್ಳುತ್ತೇವೆ ಎಂದುಕೊಳ್ಳುತ್ತಲೇ ಆ ಸ್ಥಳ ಮುಟ್ಟಿದಾಗ ಎಂಟಾಗಲಿಕ್ಕೆ ಇದದ್ದು ೪ ನಿಮಿಷ !

ಆಗಲೇ ದಟ್ಟ ಕತ್ತಲು ಕವಿದಿತ್ತು. ಈ ದಟ್ಟ ಕತ್ತಲೆಯಲ್ಲಿ ಹೇಗೆ ಲಾವಾ ಹುಡುಕುವುದು ಎಂದುಕೊಳ್ಳುತ್ತಿದ್ದರೆ, ಅಲ್ಲಿದ್ದ ಎಲ್ಲರ ಕೈಯಲ್ಲಿ ಟಾರ್ಚ್‍ಗಳು. ಓಹ್, ಟಾರ್ಚ್ ಇಲ್ಲದೇ ಹೇಗೆ ಹೋಗುವುದು ಎನ್ನುವಾಗ ಸಿಕ್ಕ ಆ ವ್ಯಕ್ತಿ. ಒಂದು ಕೃತಕ ಕಣ್ಣು, ನೋಡಲು ಸ್ಪಲ್ಪ ಭಯವುಂಟು ಮಾಡುವಂತಿದ್ದ ಆತ. ಅಲ್ಲಿಗೆ ಬಂದ ಕಾರ್‌ಗಳನ್ನು ಇರುವ ಜಾಗದಲ್ಲಿ ಪಾರ್ಕ್ ಮಾಡಿಸಲು ನೆರವಾಗುತ್ತಿದ್ದ. ನಾವು ಇಲ್ಲಿಯವರೆಗೆ ಬಂದು ಟಾರ್ಚ್ ಇಲ್ಲದಿರುವ ಒಂದೇ ಕಾರಣಕ್ಕೆ ಏನೂ ನೋಡದೇ ಹೋಗಬೇಕಾಯಿತಲ್ಲ ಎಂದುಕೊಳ್ಳುತ್ತಿದ್ದೆವು. ಬಹುಷಃ ನಮ್ಮ ಸಂಕಟ ಅರ್ಥವಾಯಿತೇನೋ ಎಂಬಂತೆ ನಮ್ಮನ್ನು ಕರೆದುಕೊಂಡು ಹೋಗಿ, ತನ್ನ ವಾಹನದಲ್ಲಿದ್ದ ಎರಡು ಟಾರ್ಚ್‍ನ್ನು ನೀಡಿದ. ನಮಗೆ ನಂಬಲಿಕ್ಕೆ ಆಗಲಿಲ್ಲ.

ಟಾರ್ಚ್ ಬೆಳಕಿನಲ್ಲಿ ನಡೆಯುತ್ತಿದ್ದಂತೆ ಕಣ್ಣುಂದೆ ನೂರಾರು ಮಿಣಕು ದೀಪಗಳು. ಆ ಮಿಣಕು ದೀಪಗಳು ಚಲಿಸುತ್ತಿದ್ದವು. ಆಗ ಗೊತ್ತಾಗಿದ್ದು, ಅವೆರಲ್ಲ ನಮ್ಮಂತೆ ಟಾರ್ಚ್ ಹಿಡಿದು ನಡೆಯುತ್ತಿದ್ದ ಜನವೆಂದು ! ಆ ಕಗ್ಗತ್ತಲೆಯಲ್ಲಿ ಆ ಲಾವಾ ಬಂಡೆಗಳ ಮೇಲೇ ಹುಷಾರಾಗಿ ಕಾಲಿಡುತ್ತಾ ಹೋಗುತ್ತಿದ್ದೆವು. ಆ ಲಾವಾ ಬಂಡೆಗಳ ಮೇಲೆ ದಾರಿಗಾಗಿ ಬಣ್ಣದಿಂದ ಗುರುತುಗಳಿದ್ದವು. ಎಲ್ಲರೂ ಆ ಗುರುತುಗಳನ್ನು ಹಿಂಬಾಲಿಸಿಕೊಂಡು ಹೋಗುತ್ತಿದ್ದೆವು. ಹೀಗೆ ಕತ್ತಲಲ್ಲಿ, ಈ ಮಿಣುಕು ಬೆಳಕಿನಲ್ಲಿ, ಜೊತೆಯಲ್ಲಿ ನನ್ನ ಹುಡುಗಿ..ಹೀಗೆ ಸಾಗಲಿ ಈ ದಾರಿ ಇನ್ನೂ ದೂರ ಅನಿಸುತ್ತಿದ್ದಾಗ, ಅಲ್ಲೆಲ್ಲೋ ಆಕಾಶಕ್ಕೆ ಕೇಸರಿ ಬಣ್ಣ ಬಳಿದಂತೆ ಗೋಚರಿಸಿತು. ಬಿಳಿ ಹೊಗೆ ಸ್ಪಷ್ಟವಾಗಿ ಕಾಣತೊಡಗಿತು. ಆ ಗುರುತುಗಳು ಈಗ ನಮ್ಮನ್ನು ಸಮುದ್ರದ ಅಂಚಿನ ಲಾವಾ ಕಲ್ಲುಗಳ ಮಧ್ಯೆ ತಂದು ನಿಲ್ಲಿಸಿತ್ತು. ಪಕ್ಕಕ್ಕೆ ತಿರುಗೆ ನೋಡಿದರೆ ಒಂದು ಕ್ಷಣ ಎಲ್ಲರೂ ಸ್ತಬ್ಧ ! ಕುದಿಯುವ ಲಾವಾ ಕಣ್ಣ್ಮುಂದೆ !


ಕಿತ್ತಳೆ ಬಣ್ಣದ ಲಾವಾ ಬಂಡೆಗಳ ಮಧ್ಯದಿಂದ ಹರಿದು ಸಮುದ್ರಕ್ಕೆ ಸೇರುತಿತ್ತು. ಲಾವಾ ಚಿಕ್ಕ ಜಲಪಾತದಂತೆ ಬೀಳುತ್ತಿದ್ದರೆ, ಅಲ್ಲಿ ಸಮುದ್ರ ನೀರಿನಲ್ಲಿ ಚಿಕ್ಕ ಚಿಕ್ಕ ಕಲರವ. ಸಣ್ಣ ಸಣ್ಣ ಸ್ಫೋಟಗಳು. ಆಕಾಶದೆತ್ತರಕ್ಕೆ ಚಿಮ್ಮುತ್ತಿದ್ದ ಬಿಳಿ ಹೊಗೆ. ಅಲ್ಲಿ ಬಂದಿದ್ದ ಎಲ್ಲರಿಗೂ ಮಾತು ಮರತೇ ಹೋದಂಗಿತ್ತು. ನಿಸರ್ಗದ ದೈತ್ಯ ಶಕ್ತಿಯೆದುರು ನಾವೆಷ್ಟು ಚಿಕ್ಕವರೆಂಬ ನಿಜ ಮತ್ತೊಮ್ಮೆ ಮನದಟ್ಟಾಗಿತ್ತು. ಹರಿಯುತ್ತಿದ್ದ ಲಾವಾ ಸುಮ್ಮನೆ ನೋಡುತ್ತಾ ಹಾಗೇ ಕುಳಿತು ಬಿಟ್ಟೆವು.

ಎಷ್ಟೋ ಹೊತ್ತಿನ ನಂತರ ಮತ್ತೆ ಟಾರ್ಚ್ ಬೆಳಕಿನಲ್ಲಿ ಬಂಡೆಗಳ ಮಧ್ಯೆ ದಾರಿ ಹುಡುಕುತ್ತಾ ಮರಳಿದೆವು . ಆ ನಮ್ಮ ಆಗಂತುಕ ಗೆಳಯನಿಗೆ ಧನ್ಯವಾದ ಆರ್ಪಿಸಿ ಮರಳಿ ಹಿಲೋ ಕಡೆ ಹೊರಟೆವು.

ಲಾವಾ ದೃಶ್ಯ ಎಷ್ಟು ಗಾಢವಾಗಿತ್ತೆಂದರೆ ಹಿಲೋ ಬರುವವರೆಗೆ ಬೇರೆನೂ ಮಾತೇ ಇರಲಿಲ್ಲ...

(ಮುಂದಿನ ಭಾಗದಲ್ಲಿ: ಹವಾಯಿ ಐತಿಹಾಸಿಕ ಸ್ಥಳ ಮತ್ತು ಅಪ್ರತಿಮ ಯೋಧನೊಬ್ಬನ ಕತೆ)