Thursday, February 21, 2008

ನಾಳೆಗಳ ಭರವಸೆಯಲ್ಲಿ...

ಗಾಢ ಅಂಧಕಾರದಲ್ಲಿನ
ಮುದುಡಿದ ಕೆಂದಾವರೆಗೆ
ಸೂರ್ಯೋದಯವಾಗದಿದ್ದರೆ ಎನ್ನುವ ಆತಂಕ

ಚಂದ್ರನಿಲ್ಲದ ಬಾನು
ಅಮಾವಾಸ್ಯೆ ನಿರಂತರ
ಎನ್ನುವ ಹೆದರಿಕೆ

ಬೀಜ ಬಿತ್ತಿದ ರೈತನಿಗೆ
ಮಳೆ ಹೊತ್ತು ತರುವ ಕರಿಮೋಡ
ಬಾರದಿದ್ದರೆ ಎನ್ನುವ ಆತಂಕ

ಯಾಕೇ ಗೆಳತಿ ಈ ಹತಾಶೆ

ರಾತ್ರಿಯ ಕತ್ತಲ ಸೀಳಿ
ಸೂರ್ಯ ಬಂದೇ ಬರುತ್ತಾನೆ
ಆಗ ಕೆಂದಾವರೆ ಅರಳಲಿದೆ

ಅಮಾವಾಸ್ಯೆಯ ನಂತರ
ಚಂದ್ರ ಮೂಡುತ್ತಾನೆ
ಬೆಳದಿಂಗಳು ಎಲ್ಲೆಡೆ ಚೆಲ್ಲಲಿದೆ

ಬರಗಾಲದ ನಂತರ
ಒಂದು ವರ್ಷಧಾರೆ ಅಗುತ್ತದೆ
ರೈತನಿಗೆ ಮತ್ತೆ ಹುಮ್ಮಸ್ಸು ಬರಲಿದೆ

ಕನಸುಗಳ ಹೊಲಕ್ಕೂ
ಅವಕಾಶದ ಮಳೆ ಬರಲಿದೆ
ಆಸೆಗಳೆಲ್ಲಾ ಚಿಗುರಿ ಫಸಲಾಗಲಿದೆ

ಅಲ್ಲಿಯವರೆಗೆ ಇರಲಿ ಗೆಳತಿ
ಆ ಗಳಿಗೆಗೋಸ್ಕರ ಛಲದಿಂದ ಕಾಯುವ
ಸೋಲಿನ ನೆರಳಿನಿಂದ ದೂರವಿರುವ ಮನ