Monday, May 28, 2007

ಮನೆ-ಮನಗಳು ಕಾದಿವೆ..

ಆ ಕಟ್ಟಡಗಳ ಮುಂದೆ ನನ್ನ ಕಾರ್ ಪಾರ್ಕ್ ಮಾಡಿ, ಒಳಗೆ ಹೋಗಿ ಅಲ್ಲಿನ ರೆಸಿಡೆಂಟ್ ಮ್ಯಾನೇಜರ್ ಭೇಟಿಯಾಗುತ್ತೇನೆ. ಅವರು ದೇಶಾವರಿ ನಕ್ಕು, ಬಂದ ಕಾರಣ ಕೇಳುತ್ತಾರೆ. ನಾನು ನಿಮ್ಮ ಆಪಾರ್ಟ್‍ಮೆಂಟ್‍ನಲ್ಲಿ ಮನೆ ಖಾಲಿಯಿದೆ ಅಂತಾ ಕೇಳಿದೆ ಅಂತಾ ಪ್ರಸ್ತಾವ ಮಾಡುತ್ತೇನೆ. ಅಲ್ಲಿಂದ ನಿರೀಕ್ಷಿಸಿದಂತೆ ಬರುತ್ತೆ ಪ್ರಶ್ನೆ ' ಎಷ್ಟು ಜನ ಇರ್ತೀರಾ'. ನಾನು ಹೇಳ್ತಾನೆ 'ನಾನು ನನ್ನ ಪತ್ನಿ'. ಹಾಗೇ ಹೇಳುವಾಗ ನನ್ನ ಕಣ್ಣುಗಳಲ್ಲಿ ನಿನ್ನದೇ ಬಿಂಬ.

ಯಾಕೋ ಈ ಮನೆ ಅಷ್ಟು ಇಷ್ಟವಾಗಲಿಲ್ಲ. ಮತ್ತೆ ಮರುದಿನ ಇನ್ನೊಂದು ಮನೆಗೆ ಭೇಟಿ. ಮತ್ತೆ ಪ್ರಶ್ನಾವಳಿ ಶುರು. ಅಪಾರ್ಟ್‍ಮೆಂಟ್ ಮ್ಯಾನೇಜರ್ ಕೇಳ್ತಾರೆ ' ಎಷ್ಟು ಜನ ಇರ್ತಿರಾ', ನಾನು ಹೇಳ್ತಾನೆ 'ನಾನು ನನ್ನ ಹೆಂಡತಿ'. ಮುಂದಿನ ಪ್ರಶ್ನೆ ನುಗ್ಗಿ ಬರುತ್ತೆ 'ಮಕ್ಕಳು ಇದರಾ'. ನನಗೆ ನಗು ತಡೆಯಲು ಆಗುವುದಿಲ್ಲ. ನಸುನಕ್ಕ ಇಲ್ಲಾ ಅನ್ನುತ್ತೇನೆ. ಅವರಿಗೆ ಹೇಳ್ತೇನೆ "ಇಲ್ಲಾ ಇನ್ನೂ ಮದುವೆಯಾಗಿಲ್ಲ, 'ಮದುವೆ'ಯಾಗಿ ಶೀಘ್ರದಲ್ಲಿ ಹೆಂಡತಿ ಕರೆ ತರುತ್ತೇನೆ" .

ಆ ಮ್ಯಾನೇಜರ್‍ ಪ್ರಶ್ನಾವಳಿ ಮುಂದುವರಿಯುತ್ತೆ ' ನಿಮ್ಮ ಹೆಂಡತಿ ಬರಲಿಲ್ಲವಾ ನಿಮ್ಮ ಜೊತೆ ಮನೆ ನೋಡಲು?'. ನೀನು 'ಹೆಂಡತಿ'ಯಾಗಿದ್ದು ಎಕೋ ಖುಷಿಯೆನಿಸುತ್ತೆ. ಆ ಮ್ಯಾನೇಜರ್‌ಗೆ ನಮ್ಮ ನಾನೊಂದು ತೀರ, ನೀನೊಂದು ತೀರದ ವಿರಹದ ಕತೆ ಹೇಳಬೇಕು ಅನಿಸುತ್ತೆ. ಸುಂಕದವರ ಮುಂದೆ ಸುಖದುಃಖ ಹೇಳೋದೇ ! ಸುಮ್ಮನೆ 'ಇಲ್ಲಾ' ಅನ್ನುತ್ತೇನೆ. ಮುಂದಿನ ಪ್ರಶ್ನೆ 'ನಿಮ್ಮ ಮನೆಯಲ್ಲಿ ಪೆಟ್ ಇದೇಯಾ?' ನಾನು ಮನಸ್ಸಲ್ಲೇ ಅಂದುಕೊಳ್ಳುತ್ತೇನೆ 'ನನ್ನಾಕೆಗೆ ನಾನೇ ಪೆಟ್, ನನಗೆ ಅವಳೇ ಪೆಟ್, ಹೀಗಿರುವಾಗ ಬೇರೆ ಪೆಟ್ ಯಾಕೇ'.

ಹಲವಾರು ಈ ತರದ ಸಂದರ್ಶನಗಳ ಬಳಿಕ ಒಂದು ಮನೆ ಇಷ್ಟವಾಗುತ್ತೆ. ಇಲ್ಲಿ ಅದೇನೋ 'ಕ್ರೆಡಿಟ್ ಚೆಕ್' ಅಂತಾ ಮಾಡ್ತಾರೆ. ಒಂಥರ ಆ ವ್ಯಕ್ತಿಯ ಜಾತಕ ಜಾಲಾಡಿದಂತೆ ಆ ಕ್ರೆಡಿಟ್ ಚೆಕ್. ಆ ವ್ಯಕ್ತಿಯ ಅರ್ಥಿಕ ವಹಿವಾಟುಗಳು-ವ್ಯಕ್ತಿಯ ಹಿನ್ನಲೆ ಎಲ್ಲಾ ಪರಿಶೀಲಿಸಲಾಗುತ್ತೆ. ಮರುದಿನ ಮ್ಯಾನೇಜರ್ ಕರೆ ಮಾಡಿ ' ಅಭಿನಂದನೆಗಳು , ನಿಮ್ಮ ಕ್ರೆಡಿಟ್ ಚೆಕ್ ಪಾಸಾಯಿತು' ಎನ್ನುತ್ತಾರೆ. ಅವರಿಂದ ಮನೆಯ ಬಾಡಿಗೆ, ವಿವರಗಳನ್ನು, ಅವರ ಆಪಾರ್ಟ್‍ಮೆಂಟ್‍ಗಳ ಕಟ್ಟಳೆಗಳನ್ನು ಕೇಳಿಸಿಕೊಂಡು ಆ ಮನೆಯ ಕಾಗದ ಪತ್ರಕ್ಕೆ ಸಹಿ ಹಾಕುತ್ತೇನೆ.

ಒಂದು ಬಿಡುವಿನ ದಿವಸ ಅಲ್ಲಿಗೆ ವರ್ಗಾವಾಗುತ್ತೇನೆ. ಬ್ರಹ್ಮಚಾರಿ ಜೀವನದ ದೊಡ್ಡ ಪ್ಲಸ್ ಪಾಯಿಂಟ್ ಅಂದರೆ ಹೆಚ್ಚಿಗೆ ಲಗೇಜ್ ಇರೋಲ್ಲಾ.

ಮನೆಯಲ್ಲಿ ಹೊಸ ಪೇಂಟ್‍ನ ವಾಸನೆ. ಯಾಕೋ ನನಗೆ ಅದು ಇಷ್ಟವಾಗುತ್ತೆ.

ಅದು ಎಲ್ಲಿತ್ತೋ ನಿನ್ನ ನೆನಪು ಬಂದು ಹಿಂದಿನಿಂದ ಅಪ್ಪಿಕೊಂಡುಬಿಡುತ್ತೆ. ನಿನ್ನ ನೆನಪನ್ನು ಕೂಸುಮರಿ ಮಾಡಿಕೊಂಡು ಆ ಮನೆಯಲ್ಲೆಲ್ಲಾ ಒಂದು ಸುತ್ತು ಹಾಕುತ್ತೇನೆ. ಆ ನಿನ್ನ ನೆನಪಿಗೆ ಹೇಳುತ್ತೇನೆ 'ಇದು ನನ್ನ ಹುಡುಗಿ ಇಲ್ಲಿಗೆ ಬಂದಾಗ ನಾವಿಬ್ಬರು ಇರೋ ನಮ್ಮ ಮನೆ'. ಆವಾಗ ಆ ನೆನಪು ಕೇಳುತ್ತೆ 'ಮತ್ತೆ ನಾನು ಎಲ್ಲಿ ಇರೋದು?'. ನಾನು ಅದಕ್ಕೆ ಹೇಳ್ತಾನೆ ' ನೀನು ನಮ್ಮ ಜೊತೆಯಲ್ಲಿ ಇರಬಹುದು. ಆದರೆ ನನ್ನ ಹುಡುಗಿಯೇ ಇಲ್ಲಿಗೆ ಬಂದ ಮೇಲೆ ನೀನು ಹೇಗೆ ಬರ್ತಿಯಾ?'

ಆ ನೆನಪಿಗೆ ಅರ್ಥವಾಗುತ್ತೆ.

ಅಲ್ಲಿಂದ ಅಡುಗೆಮನೆಗೆ ಹೊಕ್ಕರೆ ನಿನ್ನ ನೆನಪು ಬಂದು ಹಿಂದೆ ನಿಂತು ' ಎನು ಅಡುಗೆ ಇವತ್ತು' ಅಂತಾ ಕೇಳುತ್ತೆ. ನಿನ್ನ ನೆನಪಿನ ಜೊತೆ ಊಟಕ್ಕೆ ಕೂತು, ನನ್ನ ಅಡುಗೆ ರುಚಿ ತೋರಿಸುತ್ತೇನೆ.

ಆಮೇಲೆ ಬೆಡ್ ರೂಮ್ ಹೊಕ್ಕುತ್ತಿದ್ದಂತೆ ನೆನಪಿಗೆ ಎನೋ ಹೊಳೆದು ನನ್ನ ಕಡೆ ಒಮ್ಮೆ, ನನ್ನ ಲ್ಯಾಪ್ ಟಾಪ್‍ನಲ್ಲಿರುವ ನಿನ್ನ ಪೋಟೋದ ಕಡೆ ಒಮ್ಮೆ ನೋಡಿ ಮಂದಹಾಸ ಬೀರುತ್ತೆ. ನಾನು ಆ ತರಲೆ ನೆನಪಿಗೆ 'ಆಯ್ತು ತಾವು ಬಂದು ತುಂಬಾ ಹೊತ್ತಾಯ್ತು' ಅನ್ನುತ್ತೇನೆ. ಅದರು ನೆನಪು ಬಿಡದೆ 'ಇದು ನಿಮ್ಮ ಬೆಡ್ ರೂಮ್ ಅಲ್ವಾ' ಅನ್ನುತ್ತೆ. ನಾನು ನಸುನಗುತ್ತಾ 'ಹೌದು ಹೌದು, ತಾವು ಹೊರಡಿ ಅನ್ನುತ್ತೇನೆ'.

ಆ ತರಲೆಯನ್ನೇನೋ ಕಳಿಸಿ ಆಯ್ತು. ಆದರೆ ಮನಸ್ಸಿಗೆ ಎನಾಯ್ತು ಈಗ. ಮತ್ತೆ ಶುರುವಾಯ್ತು ನೋಡು ನಿನ್ನ ನೆನಪಿನ ಮೆರವಣಿಗೆ.

ನಿದ್ದೆ ಬರದೇ ಸುಮ್ಮನೆ ಹೊರಳಾಡ್ತಾ ಇದೀನಿ.

ಮನೆ ತುಂಬಾ ಖಾಲಿ ಖಾಲಿ ಅನಿಸ್ತಾ ಇದೆ ಕಣೇ. ನನ್ನ ಮನವೂ ಸಹ..

ಬೇಗ ಬಂದು ನನ್ನ ಮನೆ-ಮನವನ್ನು ತುಂಬು..

Monday, May 14, 2007

ಒಮ್ಮೆ ನೋಡಿದರೆ ಇನ್ನೊಮ್ಮೆ !

"ನಟ ಸಾರ್ವಭೌಮ, ಗಾನ ಗಂಧರ್ವ ಡಾಕ್ಟರ್ ರಾಜ್ ಕುಮಾರ್ ಅಭಿನಯಿಸಿರುವ ,ಇಂಪಾದ ಹಾಡುಗಳಿಂದ,ಮಧುರವಾದ ಸಂಗೀತದಿಂದಲೂ,ಭಯಂಕರ ಹೋರಾಟಗಳಿಂದಲೂ ಒಡಗೂಡಿರುವ ಸಂಪೂರ್ಣ ಪ್ರಮಾಣಿತ ಸಿನಿಮಾಸ್ಕೋಪ್ ಕನ್ನಡ ಚಲನಚಿತ್ರ- ಅದೇ ಕಣ್ಣು...ಅದೇ ಕಣ್ಣು.

ದಿನಾ ಮೂರು ಆಟಗಳು. ಇಂದೇ ಬಂದು ನೋಡಿರಿ ನಿಮ್ಮ ನೆಚ್ಚಿನ ಜಯಶ್ರೀ ಚಿತ್ರಮಂದಿರದಲ್ಲಿ. ಮರೆತು ನಿರಾಶರಾಗಿದೀರಿ,ಚಿತ್ರಕಲಾ ರಸಿಕರೇ.ಒಮ್ಮೆ ನೋಡಿದರೆ ಇನ್ನೊಮ್ಮೆ, ಇನ್ನೊಮ್ಮೆ ನೋಡಿದರೆ ಮೊಗದೊಮ್ಮೆ ನೋಡಲೇಬೇಕು ಎನಿಸುವ ಚಿತ್ರ..ಅದೇ ಕಣ್ಣು"

ಈಗಂತ ಆ ಆಟೋ ಊರಿನ ಬೀದಿಗಳಲ್ಲಿ ಸುತ್ತಾಡುತ್ತ ಸಿನಿಮಾ ಬಂದ ಸುದ್ದಿ ಜಾಹೀರುಗೊಳಿಸುತ್ತಿದ್ದರೆ, ಒಂದು ಕ್ಷಣ ಕೆಲಸ ನಿಲ್ಲಿಸಿ ಎಲ್ಲರೂ ಆ ಆಟೋ ಕಡೆಗೆ ನೋಡುವವರೆ. ಆಟೋದ ಹಿಂದುಗಡೆ ಆ ಸಿನಿಮಾದ ಪೋಸ್ಟರ್. ಆಟೋದಲ್ಲಿ ಕುಳಿತು ಸಿನಿಮಾದ ಬಗ್ಗೆ, ಅದರ ಬಗ್ಗೆ ಒಂದೆರಡು ಸಾಲಲ್ಲೇ ಹೇಳುವ ಅದೇ ಪರಿಚಿತ ಧ್ವನಿ.

ಆ ಊರಲ್ಲಿ ಯಾವ ಸಿನಿಮಾ ಬಂದರೂ, ಅದರ ವರ್ಣನೆ ಎಲ್ಲರ ಕಿವಿಯಲ್ಲಿ ಬೀಳ್ತಾ ಇದದ್ದು, ಮೇಲಿನ ಸಾಲುಗಳಲ್ಲೇ, ಅದೇ ಧ್ವನಿಯಲ್ಲಿ. ಸಿನಿಮಾದ ಹೆಸರು ಬದಲಾಗುತಿತ್ತು, ನಟ-ನಟಿಯರ ಹೆಸರು, ಸಿನಿಮಾ ಮಂದಿರದ ಹೆಸರು ಬದಲಾಯಿಸಿ ಮತ್ತೆ ಅದೇ ಗೊತ್ತಿರುವ ಸಾಲುಗಳು..'ಒಮ್ಮೆ ನೋಡಿದರೆ ಇನ್ನೊಮ್ಮೆ..'

ಅದಕ್ಕೂ ಮೊದಲ ಸಿನಿಮಾ ಪ್ರಚಾರಕ್ಕೆ ಆಟೋದ ಬದಲು ಎತ್ತಿನ ಗಾಡಿ ಬಳಸುತ್ತಿದ್ದರು ಅನ್ನೊ ನೆನಪು.ಆ ಎತ್ತಿನ ಗಾಡಿಗೆ ಸಿನಿಮಾದ ಎರಡು ಬೃಹತ್ ಪೋಸ್ಟರ್‍ಗಳನು ಹಚ್ಚಿ ಅದರಲ್ಲಿ ಮೈಕ್ ಹಿಡಿದು ಅದೇ ಧ್ವನಿ, ಅದೇ ಸಾಲುಗಳು.

ಹೀಗೆ ಪ್ರಚಾರ ಕೇಳಿ ಸಿನಿಮಾ ನೋಡಲು ಹೋದರೆ ಕೆಲವೊಮ್ಮೆ ವಿಪರೀತ ಜನಜಂಗುಳಿ. ಟಿಕೇಟ್ ಕೊಡುವ ಕೌಂಟರ್‌ಗೆ ಉದ್ದದ ಸಾಲು. ಕೌಂಟರ್ ಎಕ್ಕೆಡೆಗಳಲಿ ತಂತಿಯ ಜಾಲರಿ. ಅದು ಯಾಕೇ ಬೇಕಿತ್ತು ಅನ್ನೋದು ನನಗೆ ತಿಳಿದೇ ಇರಲಿಲ್ಲ, ಅದೊಂದು ಟಿಕೇಟ್ ಕೊಳ್ಳುವಾಗಿನ ಪ್ರಸಂಗ ನೋಡುವವರೆಗೆ.

ನಾನು ಆವಾಗ ಸಿನಿಮಾ ನೋಡುತ್ತಿದ್ದೆ ಕಡಿಮೆ. ಅದ್ಯಾವುದೋ ತುಂಬಾ ಚೆನ್ನಾಗಿದೆ ಅಂತಾ ಗೆಳೆಯರು ಹೇಳಿದ ಮೇಲೆ ಆ ಸಿನಿಮಾ ನೋಡಲು ಹೊರಟರೆ ಅಲ್ಲಿ ಜನ ಜಾತ್ರೆ. ಬಂದದ್ದಾಗಿದೆ ಸಾಲಿನಲ್ಲಿ ನಿಂತು ನೋಡೋಣವೆಂದು ನಿಂತ ಕೆಲವು ಕ್ಷಣದಲ್ಲೇ ಟಿಕೇಟ್ ಕೊಡಲು ಶುರು. ಮೊದಮೊದಲು ಸರಾಗವಾಗೇ ಸಾಗಿದ್ದ ಸಾಲಿನಲ್ಲಿ ತರಲೆ ಶುರುವಾಗಿದ್ದು ಮುಂದಿದ್ದ ಯಾರೋ ಒಬ್ಬ ಸಾಲಿನಲ್ಲಿ ಹಿಂದಿದ್ದ ತನ್ನ ಸ್ನೇಹಿತನನ್ನು ತನ್ನೆಡೆಗೆ ಕರೆದಾಗ. ನನಗೋ ಆಶ್ಚರ್ಯ, ಈ ಜಾಲರಿ ಅಡಿಯಲ್ಲಿ ನಿಂತಿದ್ದೆವೆ, ಅದೂ ಒಬ್ಬರೇ ನಿಲ್ಲುವಷ್ಟು ಸ್ಥಳವಿರುವ ಸಾಲಿನಲ್ಲಿ. ಇವನು ಮುಂದೆ ಹೇಗೆ ಹೋದಾನು ಅಂತಾ. ನನ್ನ ಊಹೆಗೂ ಮೀರಿ, ಆ ವ್ಯಕ್ತಿ ಆ ತಂತಿ ಜಾಲರಿಗೆ ನೇತು ಬಿದ್ದು ಅಲ್ಲಲ್ಲಿ ಗೋಡೆಗೆ ಕಾಲಿಟ್ಟು,ಜಾಲರಿಗೆ ಒದಗಿಸಿದ್ದ ಕಂಬಗಳ ಹಿಡಿದು ನಮ್ಮ ತಲೆಯ ಮೇಲೆ ಸಾಗಿ ಹೋಗಿದ್ದ. ಸ್ಪೈಡರ್ ಮ್ಯಾನ್‍ನಂತೆ ! ಕುಂಭಮೇಳದಲ್ಲಿ ಕಳೆದುಹೋಗಿದ್ದ ಸ್ಪೈಡರ್ ಮ್ಯಾನ್‍ನ ತಮ್ಮನಿರಬೇಕು!

ಅಂದಾಗೆ ಕಳೆದ ವಾರ ಇಲ್ಲಿ ಕನ್ನಡ ಸಿನಿಮಾ ನೋಡೋಕೇ ಹೋದಾಗ ಇದೆಲ್ಲಾ ನೆನಪಾಯ್ತು.

ಮುಂಗಾರು ಮಳೆ ಅನ್ನೋ ಆ ಸೂಪರ್ ಹಿಟ್ ಚಿತ್ರವನ್ನು ಅಮೇರಿಕೆಗೆ ಕರೆ ತಂದಿದ್ದರು. ಅಫೀಸ್‍ನಲ್ಲಿ ಕುಳಿತುಕೊಂಡೇ ಪೋನ್‍ ಮೂಲಕ ಟಿಕೇಟ್ ಕಾಯ್ದಿರಿಸಿ, ನಂತರ ಅವತ್ತೊಂದಿನ ಭಾನುವಾರ ಬಹುತೇಕ ತುಂಬಿದ್ದ ನಾಸ್ ಚಿತ್ರಮಂದಿರದಲ್ಲಿ ಅಷ್ಟೊಂದು ಕನ್ನಡಿಗರೊಂದಿಗೆ ಕುಳಿತು ಚಿತ್ರ ನೋಡಿದ್ದು ಖುಷಿಯೆನಿಸಿತು.

ಚಿತ್ರ ನೋಡಿ ಮುಗಿಸಿ ವಾಪಸ್ ಆಗಬೇಕಾದರೆ ಬೇಡಬೇಡವೆಂದರೂ ನಮ್ಮ ಆ ಊರ ಸಿನಿಮಾ ಸಂಬಂಧಿ ಈ ಕತೆಗಳು ತಲೆಯಲ್ಲಿ ರೀಲ್‍ನಂತೆ ಬರ್ತಾ ಇದ್ದವು.

ಟಿಕೇಟ್ ತಗೋಬೇಕಾದರೆ ನಮ್ಮ ಆ ಊರಲ್ಲಿ ಇನ್ನೊಂದು ಸಾಮಾನ್ಯ ದೃಶ್ಯವೆಂದರೆ ಸಾಲಿನಲ್ಲಿ ನಡೆಯುತ್ತಿದ್ದ ಜಟಾಪಟಿಗಳು. ಯಾರೋ ಸಾಲಿನಲ್ಲಿ ಮಧ್ಯ ಸೇರಕೊಂಡರು ಅಂತಾ ಜಗಳ ಶುರುವಾಗ್ತಿತ್ತು. ಹೌಸ್‍ಫುಲ್ ಸಿನಿಮಾಕ್ಕೆ ಟಿಕೇಟ್ ಕೊಡುವವನ ಗತ್ತು ನೋಡೇ ಆನಂದಿಸಬೇಕು !

ಇನ್ನು ಮಂಗಳವಾರ ಬಂತೆಂದರೆ ಅದು ಬೇರೇನೇ ಕತೆ. ಅವತ್ತು ಊರಲ್ಲಿ ಸಂತೆ. ಅಕ್ಕಪಕ್ಕದ ಹಳ್ಳಿಗಳಿಂದ ಜನ ತರಕಾರಿ-ಕಾಳು-ಬೆಣ್ಣೆ ಇತ್ಯಾದಿಗಳನ್ನು ಸಂತೆಗೆ ತಂದು ಮಾರಿ, ಹಳ್ಳಿಗೆ ಮರಳುವುದಕ್ಕಿಂತ ಮುಂಚೆ ಒಂದು ಸಿನಿಮಾ ನೋಡಿಕೊಂಡು ಹೋಗುವುದು ಪರಿಪಾಠ. ಅವತ್ತು ಎಂತದೇ ಸಿನಿಮಾ ಇರಲಿ ಎಲ್ಲಾ ಹೌಸ್‍ಫುಲ್.

ಇನ್ನು ಟಾಕೀಸ್ ಒಳಗಡೆ ಕತೆಗಳು ಅಷ್ಟೇ ರೋಚಕವಾಗಿರುತ್ತಿದ್ದವು. ಸೀಟ್ ನಂಬರ್ ಇರ್ತಾ ಇಲ್ಲದ ಕಾರಣ ಯಾರು ಎಲ್ಲಿ ಬೇಕಾದರೂ ಕುಳಿತುಕೊಳ್ಳಬಹುದಿತ್ತು. ಕೆಲವರು, ಯಾರು ಬರದೆ ಇದ್ದರೂ, ಸುಮ್ಮನೆ ಒಂದೆರಡು ಸೀಟ್ ಹಿಡಿದುಕೊಂಡು ಸೀಟ್ ಖಾಲಿ ಇದೆಯಾ ಅಂತಾ ಬಂದವರಿಗೆ 'ಇಲ್ಲಿ ಬರ್ತಾರೀ' ಅನ್ನೋದು ಸಾಮಾನ್ಯವಾಗಿತ್ತು. ಹಾಗೇ ಕೆಲವೊಮ್ಮೆ ಇಂಟರ್‌ವೆಲ್ ಮುಂಚೆ ಖಾಲಿ ಇರ್ತಾ ಇದ್ದ ಬಾಲ್ಕನಿ, ಇಂಟರ್‌ವೆಲ್ ನಂತರ ಫುಲ್ ! ನೋಡಿದರೆ ಇಂಟರ್‌ವೆಲ್ ಮುಂಚೆ ಮುಂದಿನ ಸೀಟ್‍ಗಳ ಪಡ್ಡೆಗಳೆಲ್ಲಾ ಅಲ್ಲಿಗೆ ವರ್ಗಾವಾಗಿಬಿಟ್ಟಿರಿತ್ತಿದ್ದವು. ಮೊದಲೇ ಹೇಳಿದ ಹಾಗೆ, ಸೀಟ್ ನಂಬರ್ ಇರ್ತಾ ಇಲ್ಲಾ, ಕೆಲವೊಮ್ಮೆ ಬಾಲ್ಕನಿನೂ ಖಾಲಿ ಹೊಡಿತಾ ಇರ್ತಿತ್ತು.

ಮುಂದಿನಸಾಲು ಸೀಟ್ ಅಂದಕೂಡಲೇ ಅಲ್ಲಿನ ಟೆಂಟ್ ಸಿನಿಮಾಗಳ ನೆನಪಾಯ್ತು. ಅವುಗಳಲ್ಲಿ 'ಗಾಂಧಿ ಸೀಟ್' ಅಂತಾ ಇರ್ತಿತ್ತು. ಪರದೆಯ ಮುಂದಿನ ಮೊದಲ ಕೆಲವು ಸಾಲುಗಳೇ ಈ ಗಾಂಧಿ ಸೀಟ್‍ಗಳು. ಅವಕ್ಕೆ ಯಾಕೇ ಗಾಂಧೀ ಸೀಟ್ ಅಂತಿದ್ದರೂ ಸರಿ ಗೊತ್ತಿಲ್ಲಾ. ಬಹುಷಃ ದುಡ್ಡು ಕಡಿಮೆಯಿದ್ದದಕ್ಕೆ ಇರಬಹುದು. ಆದರೆ ಸಿನಿಮಾ ಪೂರ್ತಿ ಅಸ್ವಾದಿಸುತ್ತಿದ್ದವರು ಈ ಗಾಂಧಿ ಸೀಟ್ ಪ್ರೇಕ್ಷಕರು. ಸಿನಿಮಾದಲ್ಲಿ ವಿಷಿಲ್ ಹಾಕೋದು, ಚಪ್ಪಾಳೆಗಳು, ಕೇಕೇ ಹಾಕೋದು..ಹೆಚ್ಚಿನ ಭಾಗವಹಿಸುವಿಕೆ ಇಲ್ಲಿಂದಲೇ. ಅದರ ಜೊತೆಗೆ ಕೆಲವೊಮ್ಮೆ ಪರದೆಯ ಮೇಲೆ ನಾಲ್ಕಾಣೆ-ಎಂಟಾಣೆ ನಾಣ್ಯಗಳನ್ನು ಎಸೆಯುತ್ತಿದ್ದವರು ಉಂಟು !

ಆ ಊರಿನ ಒಂದೊಂದು ಸಿನಿಮಾ ಮಂದಿರಗಳು ಒಂದೊಂದು ಬ್ರಾಂಡ್ ಆಗಿಬಿಟ್ಟಿದ್ದವು. ಜಯಶ್ರೀ ಹೊಸ ಕನ್ನಡ ಚಲನಚಿತ್ರಗಳಿಗೆ, ಶ್ರೀಕಾಂತ್ ಹೊಸ ಇಂಗ್ಲೀಷ್-ಹಿಂದಿ ಚಿತ್ರಗಳಿಗೆ, ಶೋಭಾ ಹಳೆ ಕನ್ನಡ-ಹಿಂದಿ ಚಿತ್ರಗಳಿಗೆ, ಚಿತ್ರಾ ಹೊಸ ಹಿಂದಿ-ಇಂಗ್ಲೀಷ್ ಚಿತ್ರ ವಿತ್ ಟೆಂಟ್ ಅನುಭವಕ್ಕೆ ಮತ್ತು ಕೃಷ್ಣಾ 'ದೇವರ' ಚಿತ್ರಗಳಿಗೆ ! ಅದರಲ್ಲೂ ಚಿತ್ರಾ ಮತ್ತು ಕೃಷ್ಣಾ ಚಿತ್ರಮಂದಿರಗಳು ಅಲ್ಲಿನ ಹೊಳೆ ಹತ್ತಿರವಿದ್ದು, ಸೇತುವೆ ದಾಟಿ ಚಿತ್ರಾಕ್ಕೆ ಹೋಗಬೇಕಿತ್ತು. ಯಾರಾದರೂ ಗೆಳಯರು ಅಲ್ಲಿ ಕೃಷ್ಣಾ ಚಿತ್ರಮಂದಿರದ ಸುತ್ತಮುತ್ತ ಕಂಡರೆ ಮುಗಿಯಿತು ಮಾರನೇ ದಿನ ಶಾಲೆಯಲ್ಲಿ ಹುಡುಗರೆಲ್ಲಾ ಹಾಗೇ ಕಂಡವನೆಡೆಗೆ 'ಯಾವುದು ಸಿನಿಮಾ?' ಅಂತಾ ಕಣ್ಣು ಮಿಟುಕಿಸಿ ಕೇಳಿದ್ದೇ ಕೇಳಿದ್ದು !

ಅಂದಾಗೆ ನೀವು ಸ್ಪೈಡರ್ ಮ್ಯಾನ್-೩ ನೋಡಿದೀರಾ? ಕಳೆದ ವಾರದಲ್ಲಿ ಐ-ಮ್ಯಾಕ್ಸ್ ಥಿಯೇಟರ್‌ನ ಬೃಹತ್ ಪರದೆ ಮೇಲೆ ನನ್ನ ಸ್ನೇಹಿತರೊಂದಿಗೆ ನೋಡೋಕೇ ಹೋಗಿದ್ದೆ. ಆನ್-ಲೈನ್‍ನಲ್ಲಿ ಸೀಟ್ ಬುಕ್ ಮಾಡಿ, ಅದರ ಜೊತೆ ನಮಗೆ ಬೇಕಾದ ಕೊನೆ ಸಾಲಿನಲ್ಲಿ ಸೀಟ್‍ಗಳನ್ನು ಬುಕ್ ಮಾಡಿದ್ದೆವು.ಐ-ಮ್ಯಾಕ್ಸ್‍ದಲ್ಲಿ ಆ ಸಿನಿಮಾ ನೋಡೋದು ಸೂಪರ್ ಆಗಿತ್ತು!