Sunday, August 03, 2008

ಒಂದು ವೈಪರ್‍ನ ಕತೆ..

ಆ ವ್ಯಕ್ತಿಯ ಹೆಸರು ರಾಬರ್ಟ್ ಬಾಬ್ ಕಿಯಾರ್ನ್.

ಕೆಲವೊಮ್ಮೆ ಯಾವಾಗಲೋ ತಲೆಯಲ್ಲಿ ಮಿಂಚಿನಂತೆ ಸುಳಿದುಹೋಗುವ ಯೋಚನೆಗಳು ಹೇಗೆ ಜೀವನವನ್ನು ಬದಲಾಯಿಸಬಹುದು ಎನ್ನುವುದಕ್ಕೆ ರಾಬರ್ಟ್ ಜೀವನವೇ ಸಾಕ್ಷಿ.

ನೀವು ಕಾರ್ ಡ್ರೈವ್ ಮಾಡುವಾಗ ಅಥವಾ ಬಸ್ ಅಥವಾ ಆಟೋದಲ್ಲಿ ಹೋಗುವಾಗ, ಮಳೆ ಶುರುವಾದಾಗ, ವಾಹನದ ವಿಂಡ್‍ಶೀಲ್ಡ್‌‍ನ ಮೇಲಿನ ನೀರನ್ನು ಒರೆಸಿ ಚಾಲಕರಿಗೆ ರಸ್ತೆ ಕಾಣುವಂತೆ ಮಾಡುವ ಚಿಕ್ಕ ಕೋಲಿನಂತಹದದ್ದನ್ನು ನೋಡಿರಬಹುದು. ಮೊದಲೆಲ್ಲ ಕಾರ್‍ಗಳಲ್ಲಿ ಇದ್ದ ವೈಪರ್‌ಗಳು ಸ್ವಯಂಚಾಲಿತವಾಗಿರಲಿಲ್ಲ.

ಈ ರಾಬರ್ಟ್‍ನ ಜೀವನ ಈ ವೈಪರ್ ಸುತ್ತ ತಿರುಗಿದ್ದೆ ಒಂದು ಕಥನ.

ಅದು ಐವತ್ತರ ದಶಕ. ಆವಾಗೆಲ್ಲ ಮಳೆ ಬರುವಾಗ ಕಾರಿನ ಗಾಜಿನ ಮೇಲೆನ ನೀರು ಒರೆಸಲು ಚಾಲಕರು ಆ ವೈಪರ್‌ನ್ನು ನೀರು ಹೋಗುವವರೆಗೆ ತಾವೇ ತಿರುಗಿಸಬೇಕಿತ್ತು.

ಆ ದಿನಗಳಲ್ಲಿ ಈ ರಾಬರ್ಟ್‍ನ ಮದುವೆ ನಡೆಯಿತು. ಮದುವೆ ದಿನದ ಪಾರ್ಟಿಯಲ್ಲಿ, ಆಕಸ್ಮಿಕವಾಗಿ ಚಿಮ್ಮಿದ ಶಾಂಪೇನ್‍ನ ಮುಚ್ಚಳ ರಾಬರ್ಟ್‍ನ ಎಡಗಣ್ಣಿಗೆ ಹೊಡೆಯಿತು.ಕಣ್ಣಿಗೆ ಏನಾದರೂ ಬಡಿದಾಗ, ಕಣ್ಣು ರೆಪ್ಪೆ ಪಟಪಟ ಅಂತಾ ಮುಚ್ಚಿ ತೆಗೆಯುವುದು ಮಾಡುತ್ತಿರುತ್ತೆ ಅಲ್ವಾ. ರಾಬರ್ಟ್‍ಗೆ ಹೊಳೆದಿದ್ದು ,ಕಣ್ಣು ರೆಪ್ಪೆ ಹೇಗೆ ನಿಯಿಮಿತವಾಗಿ ಹೊಡೆದುಕೊಳ್ಳುತ್ತೋ, ಹಾಗೇ ಈ ವೈಪರ್ ನಿಯಮಿತವಾಗಿ ತಿರುಗುವಂತೆ ಮಾಡಿದರೆ ಹೇಗೆ?

ಆದಾಗಿ ಬಹು ವರ್ಷದ ಶ್ರಮದ ನಂತರ ಕೊನೆಗೂ ರಾಬರ್ಟ್ ಹೊಸ ವೈಪರ್ ಸಿದ್ದಮಾಡುತ್ತಾನೆ. ಕಾರ್ ತಯಾರಿಸುವ ಬೃಹತ್ ಕಂಪನಿಗಳೆಲ್ಲಾ ಇನ್ನೂ ಈ ಸಂಶೋದನೆಯಲ್ಲಿ ತೊಡಗಿರುವಾಗ, ರಾಬರ್ಟನ ಕೈಯಲ್ಲಿ ಆ ಹೊಸ ವೈಪರ್. ಇದರಲ್ಲಿ ಚಾಲಕರು ವೈಪರ್ ಬಟನ್ ತಿರುಗಿಸಿದರಾಯ್ತು, ನಿಯಮಿತ ವೇಗದಲ್ಲಿ ವೈಪರ್ ಕಡ್ಡಿ ತಿರುಗಿ ನೀರನ್ನು ಒರೆಸುತ್ತಿರುತ್ತೆ.

ಡಾಕ್ಟರೇಟ್ ಮಾಡಿ ಯುನಿವರ್ಸಿಟಿಯೊಂದರಲ್ಲಿ ಪ್ರೊಫೆಸರಾಗಿ ಕೆಲಸ ಮಾಡುತ್ತಿದ್ದ ರಾಬರ್ಟ್,ಈ ವೈಪರ್ ಸಂಶಧನೆಯ ಪೇಟೆಂಟ್‍ಗೆ ಅರ್ಜಿ ಸಲ್ಲಿಸುತ್ತಾನೆ. ನಂತರ ತನ್ನ ಸಂಶೋಧನೆಯನ್ನು ತೋರಿಸಲು, ತನ್ನ ಫೋರ್ಡ್ ಕಾರಿಗೆ ವೈಪರ್‌ನ್ನು ಅಳವಡಿಸಿಕೊಂಡು, ಫೋರ್ಡ್ ಕಂಪೆನಿಯ ಮುಖ್ಯಾಲಯಕ್ಕೆ ಬರುತ್ತಾನೆ. ಆಗಿನ್ನು ಫೋರ್ಡ್‍ ಇಂಜಿನೀಯರ್‌ಗಳು-ಅವರ ರಿಸರ್ಚ್ ಲ್ಯಾಬ್‍ಗಳು ಇಂತಹ ಒಂದು ವೈಪರ್‌ಗೋಸ್ಕರ ತಿಣುಕುತ್ತಿರುತ್ತವೆ. ರಾಬರ್ಟ್‌‍ನ ಸಂಶೋಧನೆ ನೋಡಲು ಅಲ್ಲಿನ ಇಂಜಿನೀಯರ್‌ಗಳು ಮುಗಿಬೀಳುತ್ತಾರೆ.

ರಾಬರ್ಟ್‌ನ ತನ್ನ ಸಂ‍ಶೋಧನೆ ಫೋರ್ಡ್‌ನ ವರಿಗೆ ಬೇಕಾಗಿದೆ ಎನ್ನುವ ನಂಬುಗೆ. ಫೋರ್ಡ್ ಕಾರುಗಳಿಗೆ ವೈಪರ್ ತಯಾರಿಸಿಕೊಡುವ ಕಾಂಟ್ರಕ್ಟ್ ತನಗೆ ಸಿಗಲಿದೆಂಬ ವಿಶ್ವಾಸವಿರುತ್ತದೆ. ಆದರೆ ಅದಕ್ಕೆ ವಿರುದ್ದವಾಗಿ ಫೋರ್ಡ್, ರಾಬರ್ಟ್‌ನ ಕರೆಗಳನ್ನು ನಿರಾಕರಿಸತೊಡಗುತ್ತದೆ.

ಇದಾಗಿ ಕೆಲವು ವರ್ಷಗಳಿಗೆ ರಾಬರ್ಟ್‌ನ ಪೇಟೆಂಟ್ ಅಂಗೀಕೃತವಾಗುತ್ತದೆ. ಸರಿಸುಮಾರು ಅದೇ ಸಮಯದಲ್ಲಿ ಫೋರ್ಡ್ ಮಾರುಕಟ್ಟೆಗೆ ತನ್ನ ಹೊಸ ಕಾರು ಬಿಡುಗಡೆ ಮಾಡುತ್ತದೆ. ಕಾರಿನ ವಿಶೇಷ - ಹೊಸ ನಮೂನೆಯ ವೈಪರ್ !!

ಆದಾಗಿ ಎಷ್ಟೋ ವರ್ಷಗಳ ನಂತರ ರಾಬರ್ಟ್‌‌ಗೆ ಈ ವಿಷಯ ತಿಳಿದಾಗ, ೧೯೭೮ರಲ್ಲಿ ರಾಬರ್ಟ್, ಫೋರ್ಡ್‌ನ ಮೇಲೆ ತನ್ನ ಪೇಟೆಂಟ್ ಕದ್ದ ಕೇಸ್ ಹಾಕುತ್ತಾನೆ.ಹಾಗೆಯೇ ತನ್ನ ವೈಪರ್ ಪೇಟೆಂಟ್ ಉಪಯೋಗಿಸಿದ ಇತರ ೨೮ ಕಾರು ತಯಾರಿಕ ಕಂಪೆನಿಗಳ ಮೇಲೂ ಕೇಸ್ ಹಾಕುತ್ತಾನೆ.

ಮುಂದಿನ ಸುಮಾರು ೧೦-೧೨ ವರ್ಷ, ಫೋರ್ಡ್ ಕೇಸನಲ್ಲೇ ತನ್ನ ಜೀವನವನ್ನು ಕಳೆಯುತ್ತಾನೆ. ಕೊನೆಗೂ ೧೯೯೦ರಲ್ಲಿ ರಾಬರ್ಟ್ ಕೇಸ್ ಗೆದ್ದಾಗ, ಪೋರ್ಡ್ ರಾಬರ್ಟ್‌‌ಗೆ ೧೦ ಮಿಲಿಯನ್ ಡಾಲರ್ ಕೊಡುತ್ತೆ. ಫೋರ್ಡ್ ಕೇಸಿನ ವಿಜಯದ ನಂತರ ರಾಬರ್ಟ್, ಕ್ರೈಸಲರ್‍ ಎನ್ನುವ ಇನ್ನೊಂದು ಕಾರು ಕಂಪೆನಿಯ ವಿರುದ್ದ ಕೇಸು ನಡೆಸುತ್ತಾನೆ. ಅದರಲ್ಲೂ ಸಹ ೨೦ ಮಿಲಿಯನ್ ಡಾಲರ್ ಸಿಗುತ್ತೆ. ಈ ಕೇಸುಗಳ ಮಧ್ಯೆದಲ್ಲಿ ಉಳಿದ ಕಂಪೆನಿಗಳ ಮೇಲಿನ ಕೇಸುಗಳನ್ನು ಸಂಭಾಳಿಸಲಿಕ್ಕೆ ಆಗದೆ ಆ ಕೇಸುಗಳು ವಜಾವಾಗುತ್ತವೆ.

ಈ ಕಡೆ ಈ ಕೇಸುಗಳ ಓಡಾಟದಿಂದ ರಾಬರ್ಟ್‌ನ ವೈಯುಕ್ತಿಕ ಜೀವನ ಹದೆಗೆಡುತ್ತದೆ. ಅವನ ಪತ್ನಿ ವಿಚ್ಚೇದನ ತೆಗೆದುಕೊಳ್ಳುತ್ತಾಳೆ. ರಾಬರ್ಟ್ ಕೇಸುಗಳನ್ನು ಗೆದ್ದರೂ, ಬಂದ ದುಡ್ಡಲ್ಲಿ ಹತ್ತು ಪರ್ಸೆಂಟ್ ತನ್ನ ವಿಚ್ಚೇದನಕ್ಕೆ ಕೊಡಬೇಕಾಗುತ್ತದೆ. ಇನ್ನೂ ಹೆಚ್ಚು ಹಣ ತನ್ನ ಕೇಸುಗಳನ್ನು ನೋಡಿಕೊಂಡ ಲಾಯರ್‌ಗಳ ಪಾಲಾಗುತ್ತದೆ.

ಕೊನೆಗಾಲದಲ್ಲಿ ಇದೆಲ್ಲವುಗಳಿಂದ ದೂರ ಸರಿದು ಯಾವುದೋ ನದಿದಂಡೆ ಮೇಲೆ ಮನೆಮಾಡಿಕೊಂಡು ರಾಬರ್ಟ್ ದಿನಕಳೆಯುತ್ತಾನೆ. ಆದರೆ ಆಗಾಗ ತನ್ನ ಮಕ್ಕಳಿಗೆ ಮತ್ತು ಲಾಯರ್‌ಗಳಿಗೆ ತನ್ನ ಪೇಟೆಂಟ್‍ಗಳ ಬಗ್ಗೆ ಮಾತಾಡಲು ಪೋನ್ ಮಾಡುತ್ತಿರುತ್ತಾನೆ. ಇಂತಹ ರಾಬರ್ಟ್ ೨೦೦೫ರಲ್ಲಿ ಕೊನೆಯುಸಿರೆಳೆಯುತ್ತಾನೆ.

ಫೋರ್ಡ್ ಮತ್ತು ಇತರೆ ಶಕ್ತಿಶಾಲಿ ಕಾರ್ಪೋರೆಟ್‍ಗಳ ವಿರುದ್ಧ ಸಮರ ಸಾರಿ, ಅದರಲ್ಲಿ ಗೆದ್ದ ಈ ಸಂಶೋಧಕ, ತನ್ನ ಜೀವನದಲ್ಲಿ ಆ ಗೆಲುವಿಗಾಗಿ ಸಂದ ಬೆಲೆ ಮಾತ್ರ ಆಪಾರ. ತನ್ನ ಸಂಶೋಧನೆ ಜಗತ್ತಿನ ಪ್ರತಿ ಕಾರಿನಲ್ಲೂ ಇದ್ದರೂ, ಇದು ತನ್ನದೇ ಸಂಶೋಧನೆ ಎನ್ನುವ ಸತ್ಯ ಜಗತ್ತಿಗೆ ಹೇಳಲು ತನ್ನ ಜೀವವನ್ನು ತೇಯ್ದವನ ದುರಂತ ಕತೆ..

ಯಾವಾಗಲೋ ಎಲ್ಲೋ ಓದಿದ್ದ ಈ ವೈಪರ್ ಕತೆ ಮತ್ತೆ ನೆನಪಾಗಿದ್ದು, ಮೊನ್ನೆ ಹೊಸ ಸಿನಿಮಾವೊಂದರ ಟ್ರೈಲರ್ ನೋಡಿದಾಗ. ರಾಬರ್ಟ್ ಕಿಯಾರ್ನ್‍ನ ಈ ನಿಜ ಜೀವನದ ಕತೆಯನ್ನು ಆಧಾರಿಸಿ ಆಕ್ಟೋಬರ್‌ನಲ್ಲಿ ಬರುತ್ತಿರುವ ಚಿತ್ರದ ಹೆಸರು ' ಪ್ಲಾಶ್ ಆಫ್ ಜೀನಿಯಸ್'.

ಆ ಚಿತ್ರದ ಟ್ಯಾಗ್ ಲೈನ್ ಬಹುಷಃ ರಾಬರ್ಟ್‌ನ ಹೋರಾಟ ಜೀವನದ ಒಟ್ಟು ಸಾರ
"Corporations have time, money and power on their side. All Bob Kearns had on his side was the truth".