Monday, November 27, 2006

ನಿನ್ನ ಮುದ್ದು ಕರಡಿಯಿಂದ..

ನನ್ನ ನಲ್ಮೆಯ ಹುಡುಗಿ,

ಏನು ಮಾಡ್ತಾ ಇದೀಯಾ ?

ಬಹುಷಃ ಅಮ್ಮನ ಜೊತೆ ಕೂತು ಮಾತಾಡುತ್ತಿರಬಹುದು.ಇಲ್ಲಾ ಅಂದ್ರೆ ಮನೆಮಂದಿ ಜೊತೆ ಕೂತು ಟಿವಿ ನೋಡ್ತಾ ಇರಬಹುದು.ನನ್ಗೊತ್ತು ಅವರ ಜೊತೆ ಮಾತಾಡುತ್ತಿದ್ದರೂ, ಟಿವಿ ನೋಡುತ್ತಾ ಇದ್ದರೂ ನಾ ನಿನ್ನ ಮನದಲ್ಲಿ ಎಲ್ಲೋ ಇರ್ತೀನಿ.ನಿನ್ನ ಜೊತೆ ಜನ ಇರೋರ್ವಗೆ ನೀನು ಅದು ಹೆಂಗೋ ಸಂಭಾಳಿಸ್ತಿಯಾ ನಿನ್ನ ಕಾಡುವ ಮನವನ್ನ.ಆದರೆ ನೀನು ಏಕಾಂತದಲ್ಲಿದ್ದಾಗ ಏನಾಗುತ್ತೆ? ನಿನ್ನ ಮನದಲ್ಲಿದ್ದ ನಾನು ಹೊರಬರ್ತೀನಾ? ಆಗ ಏನು ಮಾಡ್ತೀಯಾ ನೀನು?

ನನ್ನ ಕತೆ ಕೇಳಬೇಡ್ವೇ.. ಕುಂತ್ರೂ,ನಿಂತ್ರೂ ನಿನ್ನದೆ ಧ್ಯಾನ,ಜೀವಕ್ಕಿಲ್ಲ ಸಮಾಧಾನ..ಎನೋ ನಿನ್ನ ಧ್ವನಿ ಕೇಳಿಕೊಂಡು, ನಿನ್ನ ಪೋಟೋ ನೋಡ್ಕೊಂಡು, ನಾವು ಜೊತೆಗಿದ್ದ ಕ್ಷಣಗಳ ಮೆಲುಕು ಹಾಕ್ತ ದಿನ ತಳ್ತಾ ಇದೀನಿ. ನನ್ನ ಹತ್ತಿರ ಇರೋ ವಿಡಿಯೋದಲ್ಲಿ, ನೀನು ಆ ದೇವಸ್ಥಾನದಲ್ಲಿ ನಗ್ತಾ ಇರೋ ಒಂದು ದೃಶ್ಯ ಇದೆ..ಅದನ್ನ ಇಲ್ಲಿಯವರಿಗೆ ಎಷ್ಟು ಸರ್ತಿ ನೋಡಿದೆನೋ ಗೊತ್ತಿಲ್ಲ.ನಿನ್ನದು ಶುಭ್ರ ಸುಂದರ ನಗು. ಅದನ್ನ ನೋಡ್ತಾ ಇದ್ದಂಗೆ ನಿನ್ನ ನೆನಪು ನನ್ನನ್ನು ಇನ್ನೂ ಬಿಗಿಯಾಗಿ ಆಲಂಗಿಸಿಕೊಂಡುಬಿಡುತ್ತೆ.

ಅಂದಂಗೆ ನಿನ್ನ ರೊಟ್ಟಿ ಕಲಿಕೆ ಎಲ್ಲಿಗೆ ಬಂತು? ಇಷ್ಟು ದಿನ ಅಡುಗೆ ಮನೆಗೆ ಏನೂ ಸಂಬಂಧ ಇಲ್ಲದಂತಿದ್ದವಳು ನೀನು. ಈಗ ನನ್ಗೋಸ್ಕರ ರೊಟ್ಟಿ ಮಾಡೋದಾ ಕಲಿತೀನಿ ಅಂತಾ ಹೊರಟಿದ್ದೀಯಾ ! ಯಾಕೇ ಹೀಗೆ ಅಂತಾ ಕೇಳಿದ್ರೆ, ನನಗೆ ಇಷ್ಟವಾದವರ ಇಷ್ಟ-ಕಷ್ಟ ನನ್ನದು, ಅವರ ಇಷ್ಟ ಪೂರೈಸಲು ಎಷ್ಟು ಕಷ್ಟ ಆದರೂ ಪರವಾಗಿಲ್ಲ ಅಂತೀಯಾ.ನಿನ್ನ ಪ್ರೀತಿಗೆ ನನ್ನ ಬಳಿ ಉತ್ತರವಿಲ್ಲ ಕಣೇ..

ನಮ್ಮ ಮುದ್ದಿನ ಟೆಡ್ಡಿ ಹೇಗಿದೆ. ಅದಕ್ಕಿರುವ ಅದೃಷ್ಟ ನನಗಿಲ್ಲ. ಯಾವಾಗಲೂ ನಿನ್ನ ಜೊತೆನೇ ಇರುತ್ತೆ, ಅದೂ ನಿನ್ನ ರೂಮ್‍ನಲ್ಲಿ. ಇರಲಿ, ಬೇಗ ಆ ಟೆಡ್ಡಿ ಜಾಗಕ್ಕೆ ನಾ ಬರ್ತೀನಿ. ಟೆಡ್ಡಿ ನನ್ನ ತರನೇ ಅಲ್ವಾ..ಎನೂ ತರ್ಲೆ ಮಾಡೋಲ್ಲ..ಅದು ಬೇಕು ಇದು ಬೇಕು ಅಂತಾ ನಿನ್ನ ಪೀಡಿಸಲ್ಲ. ಗೊತ್ತು ,ಇದನ್ನು ಓದ್ತಾ ಇದ್ದಂಗೆ ನೀನು ನಗ್ತೀಯಾ ಅಂತಾ..ಅದರೆ ನಾನು ನಿನ್ನ ಹತ್ತಿರ ಕೇಳೋದಾದರೂ ಏನು.... ನಿನಗೆ ಗೊತ್ತಲ್ವಾ !

ಹಾಂ.. ಇವತ್ತು ಪೋನ್ ಸ್ಯಾಂಪಲ್ ನಂತರ ನಾನು ಪೂರ್ತಿ ಹುಚ್ಚ ಆಗಿಬಿಟ್ಟಿದೀನಿ ಕಣೇ.ತುಂಬಾ ಕಾಡಿಸಬೇಡ್ವೇ..ದಿನಕ್ಕೊಂದು ಡಜನ್ ಸಾಕು..ಜಾಸ್ತಿ ಎನೂ ಕೇಳ್ತಾ ಇಲ್ಲ..ಅಲ್ವಾ.

ಅಂದಾಗೆ ನೆನಪಿದೆಯಾ? ೫ ಡಜನ್ ಪಾರ್ಸಲ್ ಕಳಿಸೋದು ಬಾಕಿ ಇದೆ!

ಐ ಲವ್ ಯು,
ನಿನ್ನ ಮುದ್ದು ಕರಡಿ

Thursday, November 16, 2006

ಕಳಿಂಗ ರಾಜ್ಯದಲ್ಲಿ..

ಕೊಲ್ಕತ್ತಾದ ಹೌರಾ ನಿಲ್ದಾಣದಿಂದ ಹೊರಟ 'ಜನ್ಮ ಶತಾಬ್ದಿ ಎಕ್ಸ್‍ಪ್ರೆಸ್' ಮೆಲ್ಲಗೆ ಸುರಿಯುತಿದ್ದ ಮಳೆಯಲ್ಲಿ ಓಡುತಿತ್ತು. ಮಳೆ ಬೀಳುವಾಗ ಪ್ರಯಾಣ ಮಾಡುವುದರಲ್ಲಿ ಒಂದು ಹಿತ ಅನುಭವವಿರುತ್ತೆ.ಅಕ್ಕ-ಪಕ್ಕ ಹಸಿರಿನಿಂದ ಕಂಗೊಳಿಸುವ ಗದ್ದೆಗಳು,ಆವಾಗ ತಾನೇ ಮಳೆಯಲ್ಲಿ ಸ್ನಾನ ಮಾಡಿ ನಿಂತಂತಿದ್ದ ಗಿಡಮರಗಳು,ಆ ಮಣ್ಣಿನ ವಾಸನೆ..

ಮಳೆ ಹೀಗೆ ಮುಂದುವರಿದರೆ ನಮ್ಮ ಪ್ರವಾಸದ ಕತೆ ಹೇಗೆ ಅನ್ನುವ ಅಲೋಚನೆ ಬಂದು ಹಾಗೆ ಮಾಯವಾಯಿತು.ನಾವು ಹೊರಟಿದ್ದೆವು ಓರಿಸ್ಸಾ ರಾಜ್ಯಕ್ಕೆ..ಪುರಿ, ಕೊನಾರ್ಕ್ ಮತ್ತು ಭುವನೇಶ್ವರ್ ಭೇಟಿಗೆ..

ಕೊಲ್ಕತ್ತಾದಿಂದ ೭ ಗಂಟೆ ಪ್ರಯಾಣದ ನಂತರ ಭುವನೇಶ್ವರ್ ತಲುಪಿದಾಗ, ನಿಲ್ದಾಣದಲ್ಲಿ ನಮ್ಮ ಗೆಳಯ ಶಿಬಾಸಿಸ್ ಮೊಹಂತಿ ಕಾದಿದ್ದ. ಯೋಜನೆಯ ಪ್ರಕಾರ ಭುವನೇಶರದಿಂದ ಕಾರಿನಲ್ಲಿ ಪುರಿಗೆ ಹೊರಟೆವು. ಭುವನೇಶರದಿಂದ ಪುರಿ ಸುಮಾರು ೨ ಗಂಟೆ ಪ್ರಯಾಣ. ಆದರೆ ಆ ರಸ್ತೆ ಇಷ್ಟು ಚೆನ್ನಾಗಿತ್ತು ಅಂದರೆ ಪ್ರಯಾಣ ಮಾಡಿದ್ದೇ ತಿಳಿಯಲಿಲ್ಲ. ತುಂಬಾ ಇಷ್ಟವಾಗಿದ್ದು ರಸ್ತೆ ಎರಡೂ ಬದಿ ಉದ್ದಕ್ಕೂ ಇದ್ದ ಸಾಲು ಮರಗಳು. ಅವನ್ನು ಯಾರು ನೆಟ್ಟಿದ್ದರೋ ಗೊತ್ತಿಲ್ಲ, ಆದರೆ ಮರದ ತಂಪು ಗಾಳಿಯಲ್ಲಿ ಪ್ರಯಾಣ ಬಹು ಸೊಗಸಾಗಿತ್ತು.

ಪುರಿ ಮುಟ್ಟಿದಾಗ ರಾತ್ರಿ ೧೦ ಗಂಟೆ. ಅಲ್ಲೇ ಪುರಿ ಕಡಲ ತೀರದಲ್ಲಿದ್ದ ಹೋಟೆಲ್ ಒಂದರಲ್ಲಿ ಊಟ ಮುಗಿಸಿ, ಹತ್ತಿರದಲ್ಲಿದ ಲಾಡ್ಜ್ ಒಂದರಲ್ಲಿ ಲಗೇಜ್ ಒಗೆದು ಪುರಿ ಬೀಚ್‍ಗೆ ಹೊರಟೆವು. ರಾತ್ರಿಯ ಆ ನೀರವತೆಯಲ್ಲಿ ಸಮುದ್ರ ಇನ್ನೂ ರುದ್ರರಮಣೀಯವಾಗಿ ತೋರುತಿತ್ತು. ಸಮುದ್ರದ ಅಂಚಿನಲ್ಲಿ ಆ ಕತ್ತಲಲ್ಲಿ ನಕ್ಷತ್ರ ನೋಡುತ್ತ ನಡೆದೆ. ಅಲ್ಲೇ ಬೀಚ್‍ನ ಮರಳಲ್ಲಿ ಮಲಗಿದ್ದರು ಎಷ್ಟೊಂದು ಜನ.ಅವರಲ್ಲಿ ಎಷ್ಟು ಜನ ಪ್ರವಾಸಿಗರೋ, ಸೂರು ಇಲ್ಲದ್ದ ಎಷ್ಟೋ ಜನಕ್ಕೆ ಅದು ನಿತ್ಯ ಹಾಸಿಗೆಯೋ ಎನೋ..

ಬೆಳಗೆದ್ದು ಮತ್ತೆ ಸಮುದ್ರದ ದಡಕ್ಕೆ ಹೋದಾಗ, ರಾತ್ರಿ ಇದ್ದ ನೀರವ ಸಮುದ್ರದ ಜಾಗದಲ್ಲಿ ಈಗ ಇತ್ತು ಜನರಿಂದ ಗೀಜುಗೂಡುತಿದ್ದ ಸಮುದ್ರ. ಅಲ್ಲಿ ಸ್ಪಲ್ಪ ಹೊತ್ತು ತಿರುಗಿ ಪುರಿಯ ಸುಪ್ರಸಿದ್ದ ಜಗನಾಥ ದೇವಾಲಯಕ್ಕೆ ಹೊರಟೆವು. ಸುಮಾರು ೧೧ನೇ ಶತಮಾನದಲ್ಲಿ ಕಟ್ಟಿದ ವಿಶಾಲ ದೇವಾಲಯಲ್ಲಿ ಜಗನಾಥ(ಶ್ರೀಕೃಷ್ಣ), ಬಲಭದ್ರ(ಬಲರಾಮ) ಮತ್ತು ಸುಭದ್ರಾ ಆರಾಧಿಸಿಲ್ಪಡುತ್ತಾರೆ. ನವರಾತ್ರಿ ಸಮಯವಾದ್ದರಿಂದ ದೇವಾಲಯದಲ್ಲಿ ಬಹುಸಂಖ್ಯೆಯಲ್ಲಿ ಭಕ್ತಾದಿಗಳು ನೆರೆದಿದ್ದರು.ದೇವಾಲಯದ ಆವರಣದಲ್ಲಿದ್ದ ಇನ್ನೂ ಸುಮಾರು ಹತ್ತು ದೇವಾಲಯಗಳಿಗೆ ಹೊಕ್ಕು , ಮುಖ್ಯ ದೇವಾಲಯದಲ್ಲಿ ಹೊಕ್ಕೆವು. ದರ್ಶನ ಮಾಡಿ ಹೊರಬರುತ್ತಿದ್ದಂತೆ ತಿಳಿಯಿತು, ಅಂದು ಗರ್ಭಗುಡಿಗೆ ಪ್ರವೇಶಿಸಲು ಅವಕಾಶವಿದೆಯೆಂದು.

೨೫ ರೂಪಾಯಿ ಟಿಕೇಟ್ ಪಡೆದು, ಗರ್ಭಗುಡಿ ಹೊಕ್ಕೆವು.ಸುಭದ್ರೆಯ ಅಕ್ಕಪಕ್ಕ ನಿಂತ ಜಗನಾಥ - ಬಲಭದ್ರರು.ಆದರೆ ಆ ವಿಗ್ರಹಗಳಾವು ಸಂಪೂರ್ಣ ಆಕಾರದಲ್ಲಿ ಇರಲಿಲ್ಲ.ಜಗನಾಥನ ಸುತ್ತ ಕತ್ತಲಲ್ಲಿ ಒಂದು ಪ್ರದಕ್ಷಿಣೆ ಹಾಕಿ ಬರುತ್ತಿದ್ದಂತೆ ಅಲ್ಲಿನ ಅರ್ಚಕರು ದುಡ್ಡು ಕೀಳುವ ಕೆಲಸ ಶುರುಮಾಡಿಕೊಂಡರು. ನನ್ನ ಜೊತೆ ಇದ್ದ ಸ್ನೇಹಿತನಿಗೆ ಯಾವುದೋ ಒಂದು ಮಂತ್ರ ಹೇಳಿಸಿ, ನಂತರ ೫೦೧ ರೂಪಾಯಿ ಕೊಡುವಂತೆ ಒತ್ತಾಯಿಸತೊಡಗಿದರು ! ಅಲ್ಲಿಂದ ತಪ್ಪಿಸಿಕೊಂಡು ಬರುತ್ತಿದ್ದಂತೆ ಇನ್ನೊಬ್ಬ ಅರ್ಚಕ ಆರತಿ ತಟ್ಟೆ ಹಿಡಕೊಂಡು ದಾರಿಗಡ್ಡವಾಗಿ ನಿಂತಿದ್ದರು. ಅರ್ಚಕರ ಈ ಕಾಯಕವೊಂದು ಯಾಕೋ ಅಷ್ಟು ಸರಿ ಅನಿಸಲಿಲ್ಲ.ಜನ ದೇವಾಲಯಕ್ಕೆ ಬರೋದೇ ತಮ್ಮ ಕಷ್ಟ-ಸುಖ ಅರಿಸಿ, ಅಂತ ಜನರ ಹತ್ತಿರ ದುಡ್ಡು ಕೀಳೋದು ಎಷ್ಟು ಸರಿ? ಅವರು ಮನಪೂರ್ತಿ ಕೊಟ್ಟರೆ ಅದು ಒಂದತರ. ಬಹುಷಃ ಆ ಆರ್ಚಕರಿಗೆ ಸಿಗುವ ವರಮಾನ ಕಡಿಮೆ ಇರಬಹುದೇ? ಅದಕ್ಕೆ ಈ ತರ ಜನರಿಂದ ಹಣ ನಿರೀಕ್ಷಿಸುತ್ತಾರ?

ಅಂದಾಗೆ ವಿಗ್ರಹಗಳು ಅಪೂರ್ಣ ಯಾಕೇ ಅಂತಾ ಕೇಳಿದಾಗ, ತಿಳಿದು ಬಂದ ಕತೆಯೇನೆಂದರೆ. ಇಂದ್ರದುಮ್ಯ ಅನ್ನೋ ಕೃಷ್ಣ-ಭಕ್ತ ರಾಜನಿಗೆ ಶ್ರೀಕೃಷ್ಣ ದರ್ಶನವಿತ್ತು, ಸಮುದ್ರದಲ್ಲಿ ಕೊಚ್ಚಿಕೊಂಡು ಬಂದಿರುವ ಮರದ ದಿಣ್ಣೆಯಲ್ಲಿ ತನ್ನ ವಿಗ್ರಹ ಮಾಡಿಸಬೇಕೆಂದು ಆದೇಶಿಸಿದನಂತೆ. ಅದೇ ಸಮಯಕ್ಕೆ ಅಲ್ಲಿಗೆ ಬಂದ ಒಬ್ಬ ವೃದ್ಧ ಬ್ರಾಹ್ಮಣ ತಾನು ಆ ವಿಗ್ರಹ ಕಟೆಯುತ್ತೆನೆಂದು, ಆದರೆ ಅದು ಮುಗಿಯುವವರೆಗೆ ಯಾರು ತನ್ನ ಕೋಣೆಯಲ್ಲಿ ಬರಬಾರದೆಂದು ಹೇಳಿದನಂತೆ.ಬಹುದಿನ ಕೆಲಸದ ನಂತರ ಕೋಣೆಯಿಂದ ಶಬ್ದ ಬರುವುದು ನಿಂತಿತಂತೆ, ಕಾತರದಿಂದ ಕಾದಿದ್ದ ರಾಜ ಮುಗಿದಿರಬೇಕೆಂದು ಕೋಣೆ ಹೊಕ್ಕನಂತೆ, ಆಗ ಅಲ್ಲಿದ್ದ ಬ್ರಾಹ್ಮಣ ಮಾಯವಾದನಂತೆ.ನೋಡಿದರೆ ಅರ್ಧಮುಗಿದ ಪೂರ್ತಿ ಕೈ-ಕಾಲುಗಳು ಇಲ್ಲದ ವಿಗ್ರಹಗಳು. ತನ್ನ ಆತುರದಿಂದ ಆದ ಅವಘಡಕ್ಕೆ ರಾಜ ರೋದಿಸಲು ಅಲ್ಲಿಗೆ ಬಂದ ನಾರದರು, ಶ್ರೀಕೃಷ್ಣನ ಈ ಸ್ವರೂಪವು ಪೂಜೆಗೆ ಅರ್ಹವೆಂದರಂತೆ.ಅಂದಾಗೆ ಆ ಬ್ರಾಹ್ಮಣ ಶಿಲ್ಪಿ ವಿಶ್ವಕರ್ಮನಂತೆ..

ದೇವಾಲಯದಿಂದ ಹೊರಬಂದು ಅಲ್ಲಿನ ವಿಶಾಲ ರಥಬೀದಿಯಲ್ಲಿ ಸಾಗಿದೆವು. ಇಲ್ಲಿನ ಜಗನಾಥ ರಥೋತ್ಸವ ಬಹು ಸುಪ್ರಸಿದ್ಧ. ಈ ಜಗನಾಥ ರಥೋತ್ಸವದಿಂದ ಒಂದು ಹೊಸ ಪದ ಇಂಗ್ಲೀಷ್ ಭಾಷೆಗೆ ಬಂದಿದೆ ಅಂತಾ ಗೊತ್ತಾ! 'Juggernaut' ಅನ್ನೋ ಪದವಿದೆ, ಅದಕ್ಕೆ ಕೊಟ್ಟಿರುವ ಅರ್ಥ- 'ತಡೆಯಲು ಅಸಾಧ್ಯವಾದದ್ದು'.ಇದರ ಮೂಲ ಶೋಧಿಸಿದಾಗ ಆ ಪದ ಬಂದಿರುವುದು 'ಜಗನಾಥ' ಪದದಿಂದ.ಆಗಿದ್ದೇನೆಂದರೆ ಬ್ರಿಟೀಷ್‍ರಿದ್ದ ಕಾಲದಲ್ಲಿ ನಡೆದ ಕೆಲವು ಜಗನಾಥ ರಥೋತ್ಸವಗಳಲ್ಲಿ ಕೆಲವು ಅಪಘಾತಗಳು ನಡೆದವು. ನೂಕುನುಗ್ಗಲಲ್ಲಿ ಕೆಲವು ಭಕ್ತಾದಿಗಳು ರಥದ ಗಾಲಿಗೆ ಸಿಕ್ಕಿ ಸತ್ತರು.ಇದನ್ನು ನೋಡಿದ ಬ್ರಿಟೀಷ್‍ರು 'ಜಗನಾಥ' ಪದವನ್ನು 'ತಡೆಯಲು ಅಸಾಧ್ಯವಾದ','ನುಚ್ಚುನೂರು ಮಾಡುವ ಶಕ್ತಿ' ಅನ್ನೋ ಅರ್ಥಬರುವಂತೆ ಪ್ರಯೋಗಿಸಲು ಆರಂಭಿಸಿದರು.ಅದು ಕ್ರಮೇಣ 'juggernaut' ಆಯಿತು !!

ರಥಬೀದಿಯಲ್ಲಿದ್ದ ಸ್ವಾದಿಷ್ಟ 'ರಾಬ್ಡಿ ಶರಬತ್ತು' ಸೇವಿಸಿ, ನಮ್ಮ ಪ್ರಯಾಣ ಕೊನಾರ್ಕ್‍ಗೆ ಸಾಗಿತು.ರಾಬ್ಡಿ ಶರಬತ್ತಿನ ಬಗ್ಗೆ ಒಂದೆರ್‍ಅಡು ಮಾತು..ಹಾಲಿನ ಕೆನೆಭರಿತ ಕೋವಾದಿಂದ ಮಾಡಿದ ಪಾನೀಯವದು,ಒಂದು ದೊಡ್ಡ ಗ್ಲಾಸ್‍ನಲ್ಲಿ ಕೋವಾಪಾನೀಯ ಸುರಿದು ಅದರ ಮೇಲೆ ಕೋವಾದ ಪುಡೀ ಉದುರಿಸುತ್ತಾರೆ. ಅಮೋಘ ರುಚಿ!

ಪುರಿಯಿಂದ ಕೊನಾರ್ಕ್‍ಗೆ ಸುಮಾರು ಒಂದೊವರೆ ಗಂಟೆ ಪ್ರಯಾಣ. ರಸ್ತೆ ಬಹಳ ಚೆನ್ನಾಗಿತ್ತು, ಆದರೆ ರಸ್ತೆಯಲ್ಲಿ ಕನಿಷ್ಟ ೨-೩ ಕಡೆ ರಸ್ತೆ ಸುಂಕ ಕಟ್ಟಬೇಕಾಯಿತು. ಈ ರೀತಿ ನಿಲ್ಲಿಸಿ ನಿಲ್ಲಿಸಿ ಸುಂಕ ಕೇಳೋದಿಕ್ಕಿಂತ ಒಂದೇ ಕಡೆ ತೆಗೆಳೋಕೇ ಆಗಲ್ವಾ?

ಕೊನಾರ್ಕ್ ಮುಟ್ಟಿದಾಗ ಮಧ್ಯಾಹ್ನದ ಹೊತ್ತು, ಅಲ್ಲಿನ ಸೂರ್ಯ ದೇವಸ್ಥಾನಕ್ಕೆ ೨೫ ರೂಪಾಯಿ ಕೊಟ್ಟು ಪ್ರವೇಶಚೀಟಿ ಪಡೆದು ಹೊಕ್ಕೆವು. ಪ್ರಾಂಗಣ ಪ್ರವೇಶಿಸಿದಾಗ ಅಲ್ಲಿ ಕಂಡದ್ದು ೨ ಸಿಂಹಾಕೃತಿಗಳು.ಅವುಗಳ ಮಧ್ಯೆ ಕಲ್ಲಿನ ಮೆಟ್ಟಿಲುಗಳು. ಅವನ್ನು ಏರಿ ಮೇಲೆ ಬಂದರೆ ಕಂಬಗಳಿಂದ ಸುತ್ತುವರಿದ ನೃತ್ಯಮಂಟಪದಲ್ಲಿ ಬಂದಂತೆ ಅನಿಸ್ತಿತ್ತು. ಅಲ್ಲಿಂದ ಇಳಿದು ಮುಂದುವರಿದರೆ ವಿಶಾಲವಾದ ದೇವಾಲಯ.ಒಂದು ಕಡೆ ಕುಸಿದಿದ್ದರೂ, ಇನ್ನೊಂದೆಡೆ ಕಬ್ಬಿಣ ಕಂಬಿಗಳಿಂದ ನಿಂತಿದ್ದರೂ ತುಂಬಾ ಸುಂದರವಾಗಿ ಕಾಣುತ್ತಿದ್ದ ಸೂರ್ಯ ದೇವಾಲಯ.

ಸೂರ್ಯ ದೇವಾಲಯ ಒಂದು ವಿಶಾಲ ಕಲ್ಲಿನ ರಥದಂತೆ, ಅದರ ಇಕ್ಕೆಡೆಗಳಲ್ಲಿ ೨೪ ಚಕ್ರಗಳು. ಕೊನಾರ್ಕ್ ಅಥವಾ ಸೂರ್ಯ ದೇವಾಲಯ ಅಂದ ಕೂಡಲೇ ಕಣ್ಣಿಗೆ ಬರೋದು ಇದೇ ಚಕ್ರಗಳು. ಕಲ್ಲಿನಲ್ಲಿ ಅಂತಹ ಅದ್ಭುತ ಕೆತ್ತೆನೆ ಸಾಧ್ಯವೇ ಅನ್ನುವ ಸಂಶಯ ಬರುವಂತೆ ಇದ್ದ ಚಕ್ರಗಳು. ಪ್ರತಿ ಚಕ್ರದ ಮೇಲೂ ಸುಂದರ ಕೆತ್ತೆನೆಗಳು. ಅಂದಾಗೆ ಆ ೨೪ ಚಕ್ರಗಳು ದಿನದ ೨೪ ಗಂಟೆಗಳ ಪ್ರತೀಕ. ಚಕ್ರದ ಜೊತೆಗೆ ಮನಸೆಳೆಯುವ ಇನ್ನೊಂದು ಅಂಶ- ದೇವಾಲಯದ ಗೋಡೆಯ ಮೇಲೆ ಇದ್ದ ಸುಂದರ ಮೋಹಕ ಕೆತ್ತೆನೆಗಳು. ಈಡೀ ಕಾಮಸೂತ್ರವನ್ನು ಕಲ್ಲಿನಲ್ಲಿ ಕಟೆದು ನಿಲ್ಲಿಸಿದಂತೆ ಇತ್ತು. ಒಂದು ಪ್ರಶ್ನೆ ಮನದಲ್ಲಿ ಮೂಡಿದ್ದು..ದೇವಾಲಯಗಳಲ್ಲಿ ಕಾಮಸೂತ್ರ ಹೇಗೆ ಬಂತು? ಅಥವಾ ಆಗಿನ ಜನ ಇದ್ದ ಸಮಾಜ ಅಷ್ಟು ಮುಕ್ತವಾಗಿತ್ತೇ? ಅಥವಾ ಜನಕ್ಕೆ ಶಿಕ್ಷಣ ಕೊಡುವ ವಿಧಾನವೇ ಅದು??

ವಿಶಾಲವಾದ ಆ ಸೂರ್ಯ ದೇವಾಲಯ ಬಹಳಷ್ಟು ಕಡೆ ಕುಸಿದು ಬಿದ್ದಿತ್ತು. ಗರ್ಭಗುಡಿ ಯಾವಾಗಲೋ ಬಿದ್ದುಹೋಗಿದೆಯಂತೆ.ಇದ್ದ ಕಟ್ಟಡವನ್ನು ಉಕ್ಕಿನ ಸರಳಿನಿಂದ ನಿಲ್ಲಿಸಿದ್ದರು.

ದೇವಾಲಯವನ್ನು ಸುತ್ತಿದ ನಂತರ ಹತ್ತಿರದಲ್ಲೇ ಇದ್ದ ಪ್ರವಾಸೋದ್ಯಮದ ಹೋಟೆಲ್‍ನಲ್ಲಿ ಊಟ ಮುಗಿಸಿದೆವು. ನಮ್ಮ ಪ್ರವಾಸೋದ್ಯಮದವರಿಗೆ ಯಾವಾಗ ಬುದ್ದಿ ಬರುತ್ತೋ ಆ ಸೂರ್ಯನಿಗೆ ಗೊತ್ತು. ಒಂದು ಊಟ ಹಾಕಲು ಅವರು ಕಾಯಿಸಿದ್ದು ಸುಮಾರು ೩೦ ನಿಮಿಷ. ನಾನು ದೇವಾಲಯದ ಎದುರಿನ ಬೀದಿಯಲ್ಲಿ ಒಂದು ಚಿಕ್ಕ ಕಲ್ಲಿನ ಚಕ್ರ ಖರೀದಿಸಿದೆ. ಕೊನಾರ್ಕ್ ದೇವಾಲಯದ ಚಕ್ರದ ಚಿಕ್ಕ ಮಾದರಿ. ಜೊತೆಗೆ ಇದ್ದ ಶಿಬಾಸಿಸ್ ಓಡಿಯಾ ಆದ್ದರಿಂದ ನಮ್ಮ ಖರೀದಿ ಕಡಿಮೆ ಬೆಲೆಯಲ್ಲಿ ಆಯ್ತು. ಇಲ್ಲ ಅಂದರೆ ೪೦೦ ರೂಪಾಯಿ ಚಕ್ರ ಕೊನೆಗೆ ೧೨೦ ರೂಪಾಯಿ ಹೇಗೆ ಸಿಕ್ತಾ ಇತ್ತು! ಅದರ ನಂತರ ನಮ್ಮ ಸವಾರಿ ಕೊನಾರ್ಕ್‍ನ ಸಮುದ್ರದ ತಡದ ಕಡೆ ಹೊರಟಿತು. ಕೊನಾರ್ಕ್ ತೀರ ಪುರಿಗೆ ಹೋಲಿಸಿದರೆ ಶುಭ್ರವಾಗಿತ್ತು ಮತ್ತು ಕಡಿಮೆ ಜನಸಂದಣಿಯಿಂದ ಕೂಡಿತ್ತು.

ಅಲ್ಲಿಂದ ಹೊರಟ ನಾವು ಭುವನೇಶ್ವರದ ಕಡೆ ಹೊರಟೆವು. ಮತ್ತೆ ಅದೇ ರಸ್ತೆ ಸುಂಕ ತೆತ್ತು, ನಮ್ಮ ಪ್ರಯಾಣ ಸಾಗಿತು. ಭುವನೇಶ್ವರಕ್ಕೆ ಬಲು ಹತ್ತಿರದಲ್ಲಿದೆ ದವಳಗಿರಿ. ಬೌದ್ದ ಸೂಪ್ತ ಅಲ್ಲಿನ ಆಕರ್ಷಣೆ. ಬುದ್ದನ ಸುಂದರ ವಿಗ್ರಹವಿದೆ. ಅದು ಆಶೋಕನ ಕಾಳಿಂಗ ಪ್ರದೇಶವಂತೆ. ಅಲ್ಲಿಂದ ನೋಡಿದರೆ ದಾಗ ಅನ್ನೋ ನದಿ ಕಾಣುತ್ತೆ. ಅದರ ದಡದಲ್ಲಿ ಕಳಿಂಗ ಯುದ್ದ ನಡೆದು, ಅಶೋಕ ಶಸ್ತ್ರತ್ಯಾಗ ಮಾಡಿದ್ದಂತೆ. ದವಳಗಿರಿಯ ನಂತರ ಭುವನೇಶ್ವರಕ್ಕೆ ಮರಳಿ ಅಲ್ಲಿನ ಸುಪ್ರಸಿದ್ದ ಲಿಂಗರಾಜ ದೇವಸ್ಥಾನಕ್ಕೆ ಭೇಟಿ ನೀಡಿದೆವು. ಆ ದೇವಾಲಯದ ಆಲಯದಲ್ಲಿ ಏಷ್ಟೊಂದು ದೇವಾಲಯಗಳಿದ್ದವು. ಇಲ್ಲೂ ಸಹ ಪುರಿಯ ಅರ್ಚಕರಂತೆ ಜನರಿಂದ ಹಣ ಕೀಳುವ ಯತ್ನ ನಡೆಯುತಿತ್ತು.

ಚಂದೋಗ ಅನ್ನೋದು ಓರಿಸ್ಸಾದ ಕಸೂತಿ ಕಲೆ. ಕೈಯಲ್ಲಿ ಹೆಣೆದ ಸುಂದರವಾದ ಆಕಾಶಬುಟ್ಟಿಯೊಂದನ್ನು ಅಂತಹ ಕರಕುಶಲ ಅಂಗಡಿಯಲಿ ಕೊಂಡೆ.ಮುಂದೆ ಹೋಗಿದ್ದು ನಾವು ಕಂದಗಿರಿ ಅನ್ನೋ ಗುಡ್ಡಕ್ಕೆ. ಅಲ್ಲಿಂದ ಇಡೀ ಭುವನೇಶ್ವರದ ವಿಹಂಗಮ ನೋಟ. ಸಂಜೆಯ ಆ ಇಳಿಹೊತ್ತಿನಲ್ಲಿ ಅಲ್ಲಿ ಕೂತು ಹರಟಿ, ಶಿಬಾಸಿಸ್‍ನ ಮನೆ ತಲುಪಿದಾಗ ರಾತ್ರಿ ಹೊತ್ತು. ಅವನ ಮನೆಯಲ್ಲಿ ಊಟ ಮಾಡಿ, ಪುರಿ ಎಕ್ಸ್‍ಪ್ರೆಸ್ ಏರಿದೆವು.

ಜಗನಾಥ, ರಾಬ್ಡಿ ಶರಬತ್ತು, ಕಲ್ಲಿನ ಚಕ್ರ, ಆ ಮೋಹಕ ಕೆತ್ತೆನೆಗಳು, ಬುದ್ದ...ಹೀಗೆ ಒಂದಾರೊಂದರಂತೆ ದೃಶ್ಯಗಳು ಕಣ್ಮುಂದೆ ಬಂದು ಹೋದವು..ಅದು ಗೊತ್ತಿಲ್ಲ ಯಾವಾಗ ನಿದ್ರಾದೇವಿ ಕರೆದೊಯ್ಯೊದೊಳೋ..

ಹೌರಾ ನಿಲ್ದಾಣ ತಲುಪಿ ಎಚ್ಚರವಾಗಿ,ಹೊರಬರುತ್ತಿದಂತೆ ಆ ಗಿಜಿಗಿಜಿ ರಸ್ತೆಗಳು, ಅದೇ ಹಳದಿ ಟ್ಯಾಕ್ಸಿಗಳು, 'ಕೀ ಕಾಬೋರ್ ದಾದಾ' ಅನ್ನಕೊಂಡು ಓಡಾಡುವ ಬೆಂಗಾಲಿ ಬಾಬುಗಳು...ಅಲ್ಲೇ ಎದುರಿಗೆ ಇತ್ತು ಆ ಮುಂಜಾವಿನಲ್ಲಿ , ವಿಶಾಲವಾಗಿ ಹರಡಿಕೊಂಡು ಮಲಗಿದಂತೆ ಇದ್ದ ಹೌರಾ ಸೇತುವೆ...

Saturday, November 04, 2006

ಸವಿಹೃದಯಕ್ಕೊಂದು ಓಲೆ..

ಪ್ರೀತಿಯ ಹೃದಯವೇ,

ದೂರವಾಣಿಯಲ್ಲಿ ನಿಮ್ಮ ಧ್ವನಿ ಕೇಳಿದಾಗಲೆಲ್ಲಾ ನನ್ನ ಮನಕ್ಕೆ ಎನೋ ಒಂದು ಸಮಾಧಾನ..

ನಾನು ಈಡೀ ದಿನ ಬದುಕೋದೇ ನಿಮ್ಮೊಡೆನೆ ಮಾತಾಡುವ ಆ ನಿಮಿಷಗಳಿಗೆ ಅನಿಸುತ್ತೆ.ಕರೆ ಮಾಡಿದಾಗ ಅಲ್ಲಿ ರಿಂಗ್ ಆಗ್ತಾ ಇದ್ದರು ಕರೆ ಎತ್ತಲಿಲ್ಲ ಅಂದಾಗ ಆಗುವ ಮನಸಿನ ತಳಮಳ ನಿಮಗೆ ಗೊತ್ತಾ?ನಿಮ್ಮ ಧ್ವನಿ ಕಿವಿಗೆ ಹರಿದು ಅಲ್ಲಿಂದ ನನ್ನ ಮನಕ್ಕೆ ಮುಟ್ಟಿದಾಗಲೇ ಅದೆಲ್ಲಾ ತಳಮಳಕ್ಕೆ ಒಂದು ಅಲ್ಪವಿರಾಮ..

ಮಾತಿನ ನಡುವೆ ಅರಳುವ ನಿಮ್ಮ ನಗೆ ಎಂಬ ಮಲ್ಲಿಗೆಯನ್ನು ಹಾಗೇ ಹೆಕ್ಕಿ ತೆಗೆದು ಜೋಪಾನವಾಗಿಡುತ್ತೇನೆ.ಆ ನಗೆ ಮಲ್ಲಿಗೆಯ, ಮುದ್ದು ಹುಡುಗಿಯ ನೆನಪೇ 'ನಾಳೆ' ಎನ್ನುವ ನದಿ ದಾಟಲು ದೋಣಿ..

ಇವತ್ತು ಎನಾಯಿತು ಗೊತ್ತಾ..೨ ತಿಂಗಳ ನಂತರ ನನ್ನ ಕಾರ್ ಹೊರತೆಗೆದಿದ್ದೆ. ಅದರೆ ಮೇಲೆ ಒಂದು ರಾಶಿ ದೂಳು. ಪರೀಕ್ಷೆಗಿಂತ ಮುಂಚೆ ತೆಗೆದು ನೋಡಿರದ ಪುಸ್ತಕಗಳ ಮೇಲೆ ಇರುತ್ತಲ್ವಾ ಅಷ್ಟು ದೂಳು! ಕಾರ್ ಒಂದು ಹಂತಕ್ಕೆ ಶುಭ್ರಗೊಳಿಸಿ, ಕಾರಿನಲ್ಲಿ ಕೂತರೆ, ನನ್ನ ಪಕ್ಕದ ಸೀಟು ನನಗೆ ಒಂದು ಸ್ಮೈಲ್ ಕೊಡಬೇಕಾ ! "ಯಾಕೇ ತುಂಬಾ ಖುಷಿಯಾಗಿದ್ದಿಯಾ" ಅಂತಾ ಕೇಳಿದರೆ ಎನಂತೂ ಗೊತ್ತಾ ಆ ಸೀಟ್?? "ಎನೋ ವಿಷಯ ಕೇಳಿದೆ..ನಮ್ಮ ಕಾರ್‍ನಲ್ಲಿ ನನ್ನ ಸೀಟ್‍ನಲ್ಲಿ ಬೇಗನೇ ನಿಮ್ಮವರು ಬರ್ತಾ ಇದ್ದಾರಂತೆ..ಹೌದಾ?". ಆ ತರಲೆ ಸೀಟ್‍ಗೆ ಒಂದು ಮುದ್ದು ಗುದ್ದು ಕೊಟ್ಟು ನಕ್ಕೆ ನಾನು..

ಅಫೀಸ್‍ನಲ್ಲಿದ್ದಾಗ ಅದು ಯಾವ ಯಾವ ಕ್ಷಣದಲ್ಲಿ ಕಣ್ಣ್ ಮುಂದೆ ಬಂದು ನಿಂತುಬಿಡ್ತೀಯಾ ನೀನು ! ಹೊತ್ತು ಗೊತ್ತು ಒಂದು ಇಲ್ಲಾ ! ಇವತ್ತು ಅದೇವಾದೋ ಮೀಟಿಂಗ್ ಮಧ್ಯೆದಲ್ಲಿ ತಮ್ಮ ಪ್ರವೇಶ ಆಗಬೇಕಾ..ಯಾವುದೋ ನೆನಪು..ಮುಖದಲ್ಲಿ ಮಿಂಚಿ ಮಾಯವಾದ ಒಂದು ಮಂದಹಾಸ.ಪಾಪ, ಅಲ್ಲಿ ಮೀಟಿಂಗ್‍ನಲ್ಲಿದವರಿಗೆ ನಾನು ಯಾಕೇ ಸುಮ್ಮ ಸುಮ್ಮ್ನೆ ನಗ್ತಾ ಇದ್ದೀನಿ ಅಂತಾ ತಲೆಬುಡ ಅರ್ಥ ಆಗಿಲಿಲ್ಲ !ಇನ್ನೂ ಅಫೀಸ್‍ನಲ್ಲಿ ನನ್ನ ಗೆಳಯರದು ಮುಗಿಯದ ಪ್ರಶ್ನೆಗಳು..ಅವರಿಗೆ ನಿನ್ನ ಬಗ್ಗೆ ಹೇಳ್ತಾ ಹೇಳ್ತಾ ಮತ್ತೆ ಕಳೆದುಹೋಗಿಬಿಡ್ತೀನಿ..

ಇನ್ನು ಮನೆಗೆ ಬಂದರೆ ಅಲ್ಲಿ ನಿಮ್ಮ ನೆನಪು ಫುಲ್‍ಟೈಮ್ ಹಾಜರ್. ಲ್ಯಾಪ್‍ಟಾಪ್ ಹೊರ ತೆಗೆದರೆ ಸಾಕು..ಕೈಗಳು ಅಲ್ಲಿಂದ ನಿನ್ನ ಪೋಟೋ ಅಲ್ಬಮ್ ತೆಕೊಂಡು ಕೂತು ಬಿಡುತ್ತೆ. ಬೆರಳು ನಿಮಗೆ ತುಂಬಾ ಇಷ್ಟವಾದ 'ಝರಾ ಝರಾ ಬೇಹಕ್ತಾ ಹೈ' ಹಾಡು ಹಾಕಿಬಿಡುತ್ತೆ. ಅಮೇಲೆ ನಾನು ಸಂಪೂರ್ಣನಾಗಿ ನಿಮ್ಮ ನೆನಪಿನಾಂಗಳದಲ್ಲಿ ಕಾಣೆಯಾಗಿಬಿಡುತ್ತೇನೆ.

ಒಂದೊಂದು ಸಲ ಅನಿಸುತ್ತೆ, ನನ್ನ-ನಿಮ್ಮ ನಡುವೆ ಈ ವೀಸಾ-ಪಾಸ್‍ಪೋರ್ಟ್ ಅನ್ನುವ ಬೇಲಿ ಏಕೇ ಅಂತಾ? ಎನ್ಮಾಡೋದು ಹೇಳಿ..ಲೋಕಾರೂಡಿ ತಪ್ಪಿಸಿಕ್ಕೋ ಆಗೊಲ್ಲ. ಆದರೆ ಪ್ರೀತಿ ಎಂಬ ವೀಸಾ ಸಿಕ್ಕ ಮೇಲೆ ಬೇರೆ ಎಲ್ಲಾ ವೀಸಾ ಸಿಗೋದು ಅಂತಾ ಕಷ್ಟ ಅಗೋಲ್ಲಾ ಅನಿಸುತ್ತೆ..ಅಲ್ವಾ?

ನಾಳೆ ಮತ್ತೆ ಸಿಗ್ತೀನಿ..

ಸವಿಗನಸುಗಳು,
ಪ್ರೀತಿಯೊಂದಿಗೆ,
ನಿಮ್ಮವನು