ದೀಪಾವಳಿಗೆ ಮನೆ ಮುಂದೆ ಆಕಾಶಬುಟ್ಟಿ ಕಟ್ಟಿದರೆ ಎಷ್ಟು ಚೆಂದ ...
ಇವಳ ತಲೆಯಲ್ಲಿ ಇಂತದೊಂದು ಯೋಚನೆ ಬಂದರೆ ಮುಗಿಯಿತು..
ಇಲ್ಲಿರುವ ಅಂಗಡಿಗಳಲ್ಲಿ ಎಲ್ಲಿ ಅಲೆದರೂ ಎಲ್ಲೂ ಆಕಾಶಬುಟ್ಟಿ ಸಿಗಲಿಲ್ಲ.
ಇವಳದೋ ತಲೆಯಲ್ಲಿ ಅಕಾಶಬುಟ್ಟಿಯೇ ತಿರುಗುತಿತ್ತು....
ಸರಿ.. ಕಾನೂನನ್ನು ಕೈಗೆ ತೆಗೆದುಕೊಂಡು ಆಕಾಶಬುಟ್ಟಿ ಮನೆಯಲ್ಲೇ ಮಾಡುವ ಯೋಜನೆಯಾಯಿತು.
**********************************
ಹಬ್ಬದ ದಿನ ಊರ ಮಾರುಕಟ್ಟೆಯಲ್ಲಿ ಬರೀ ಚೆಂಡಿ ಹೂವಿನದ್ದೇ ಕಂಪು ..
ಎಲ್ಲಿ ನೋಡಿದರೂ ಕೇಸರಿ-ಹಳದಿ ವರ್ಣದಲ್ಲಿ ನಳನಳಿಸುತ್ತ , ಹಬ್ಬದ ವಾತಾವರಣವನ್ನು ಇಮ್ಮಡಿಗೊಳಿಸುವ ಸಮಗ್ರ ಭಾರವನ್ನು ತಾನೇ ಹೊತ್ತಂತೆ ತೋರುತಿತ್ತು.
ಅದೊಂದು ದಿವಸ ಅದೆಲ್ಲಿಂದ ತರುತ್ತಿದ್ದರೋ , ತಾವರೆ ಪಿರಕಿ ಎನ್ನುವ ಆ ಹಳದಿ ಚಿಕ್ಕ ಹೂವುಗಳು.
ಹೆಸರು ನೆನಪಾಗುತ್ತಿಲ್ಲ..ಉದ್ದನೇ ಹುಲ್ಲಿನಂತಹ ಗಿಡದ ತೊನೆ ತೊನೆ ಎಲ್ಲೆಡೇ ...
ಇಷ್ಟು ಖರೀದಿಸಿ ಅಪ್ಪನ ಜೊತೆ ಸಾಗುತ್ತಿರುವಾಗ , ಹೆಜ್ಜೆಗಳು ಗಕ್ಕನೆ ನಿಲ್ಲುತ್ತಿದ್ದವು ಶೆಟ್ಟಿ ಅಂಗಡಿ ಮುಂದೆ..
ಪಟಾಕಿ ಸರ, ರಾಕೆಟ್, ಲಕ್ಷ್ಮೀ ಪಟಾಕಿ , ಭೂ ಚಕ್ರ , ಹನುಮಂತನ ಬಾಲ, ಸುರಸುರ ಬತ್ತಿ, ಹಾವಿನ ಗುಳಿಗೆ, ಹೂವಿನ ಕುಂಡಕ್ಕಾಗಿ !
ಮನೆಗೆ ಬಂದ ಕೂಡಲೇ ಅಟ್ಟಿ ಲಕ್ಕವ್ವ ಮಾಡುವ ಕೆಲಸ ಶುರು.
ಸೆಗಣಿಯಲ್ಲಿ ಚಿಕ್ಕ ಗುಂಡಿನಾಕೃತಿಗಳನ್ನು ಮಾಡಿ, ಅದಕ್ಕೆ ಚೆಂಡಿ, ತಾವರೆ ಪಿರಕಿ ಸಿಗಿಸಿ ಅಲಂಕರಿಸಿದರೆ ಅದುವೇ ಅಟ್ಟಿ ಲಕ್ಕವ್ವ .
ಮನೆಯ ಬಾಗಿಲ ಹೊಸ್ತಿಲನ ಎರಡು ಕಡೆ , ಬೀಸುವ ಕಲ್ಲಿನ ಹತ್ತಿರ, ಒನಕೆ ಕುಟ್ಟುವ ಕಲ್ಲಿನ ಹತ್ತಿರ ಒಂದೊಂದು ಲಕ್ಕವ್ವ ಇಟ್ಟು, ಅದರ ಪಕ್ಕ ಒಂದು ಹುಲ್ಲಿನ ದಂಟು.
ಇಷ್ಟು ಮಾಡುವಷ್ಟರಲ್ಲೇ ಕತ್ತಲು ಕದ ತಟ್ಟುತಿತ್ತು.
ಮಣ್ಣಿನ ಚಿಕ್ಕ ಹಣತೆಗಳನ್ನು ಲಕ್ಕವ್ವ ಇದ್ದ ಕಡೆ ಇಟ್ಟು ದೀಪ ಹಚ್ಚಿದರೆ... ಮನೆಯ ಮುಂದೆ ಕಟ್ಟಿದ ಆಕಾಶಬುಟ್ಟಿಯ ಚುಮು ಚುಮು ಬೆಳಕಿನೊಂದಿಗೆ ಅದೊಂದು ಬೇರೆಯದೇ ಲೋಕ !
**********************************
ಆಕಾಶಬುಟ್ಟಿ = Diwali Lantern ಎಂದು ಸರಳವಾಗಿ ಸಮೀಕರಿಸಿ, ಮಗಳಿಗೆ ಆಕಾಶಬುಟ್ಟಿ ಮಾಡುವ ಮಹತ್ ಯೋಜನೆಯ ಬಗ್ಗೆ ಹೇಳಿದ್ದಾಯಿತು. ಮಗಳು ಸಂಭ್ರಮದಲ್ಲೇ ಸಹಾಯಕ್ಕೆ ನಿಂತಳು. ಬಣ್ಣದ ಕಾಗದ ಕತ್ತರಿಸಿ , ಅವುಗಳನ್ನು ಸೇರಿಸಿ ಆಕೃತಿ ಮಾಡಿ , ಚಮಕ್ ಗೆ ಪಳಪಳವೆನ್ನುವ ಕಾಗದ ಹಚ್ಚಿ , ಉದ್ದನೆ ಬಾಲ ಗುಚ್ಚವನ್ನು ಇಳಿಬಿಟ್ಟು , ಮೇಲೆ ದಾರ ಪೋಣಿಸಿದರೆ ಆಕಾಶಬುಟ್ಟಿ ತಯಾರು !
ಆಕಾಶಬುಟ್ಟಿ ತೋರಿಸಿಲು ನೋಡಿದರೆ ಇವಳೂ ನಿದ್ದೆ , ಮಗಳೂ ನಿದ್ದೆ.
ಬೆಳಿಗ್ಗೆ ಎಚ್ಚರವಾಗಿದ್ದೇ ಇವರಿಬ್ಬರ ಸಂಭ್ರಮದ ಕಿಳಕಿಲದಿಂದ.. ಆಕಾಶಬುಟ್ಟಿ ಹಿಡಿದು ಸಂಭ್ರಮಿಸುತ್ತಿದ್ದರು. ನಮ್ಮತ್ತೆಯವರು ಆಕಾಶಬುಟ್ಟಿಯ ಬಾಲ ಹಿಂಗೆ ಇರುತ್ತೆ ಎನ್ನುವ ದೃಡೀಕರಣ ಕೊಡುವಲ್ಲಿಗೆ ಆಕಾಶಬುಟ್ಟಿಗೆ ಒಂದು ಅಧಿಕೃತ ಮೊಹರು ದೊರೆಯಿತು !
ಇನ್ನೇನೂ ಹೋಗಿ ಮನೆ ಹೊರಗೆ ಕಟ್ಟಬೇಕು ಅನ್ನುವಷ್ಟರಲ್ಲಿ , ಮಗಳು ಐಪೋನ್ನ ಸಿರಿಗೆ 'Is it going to rain today ' ಎಂದು ಕೇಳಿದಳು. ಸಿರಿಯಿಂದ 'Its going to rain today , please carry umbrella ' ಎಂದು ತಾಕೀತು. ಮಳೆಯ ಕಾರಣ ಆಕಾಶಬುಟ್ಟಿ ಹಾಕುವ ಕಾರ್ಯಕ್ರಮ ಮುಂದೂಡಲಾಯಿತು.
**********************************
ಲಕ್ಷ್ಮಿ ಪೂಜೆ ಮುಗಿಸುತ್ತಿದಂತೆ ಪಟಾಕಿ ಹೊಡೆಯುವುದು ಶುರುವಾಗುತಿತ್ತು.
ಕಮಲದಲ್ಲಿ ನಿಂತ ಲಕ್ಷ್ಮಿ ಚಿತ್ರವಿದ್ದ, ನೀಲಿ ಬಣ್ಣದ, ದಪ್ಪನೆ , ಉದ್ದನೆ ಪಟಾಕಿ ಅಬ್ಬರಿಸಿ ಬೊಬ್ಬಿಡುವ ಸದ್ದು ಮಾಡುತಿತ್ತು. ಕೆಂಪನೆ ಸರ ಪಟಾಕಿ ನಿಮಿಷದಲ್ಲಿ ಉರಿದು ಸಿಡಿದಾಗ ಮತ್ತೆ ಬರಿಗೈ. ರಾಕೆಟ್ಗಳು ಬಹುತೇಕ ಆಕಾಶಕ್ಕೆ ಹೋದರೆ ಇನ್ನು ಕೆಲವು ಬಾಟಲಿ ಉರುಳಿ ನೆಲಕ್ಕೆ ಸಮವಾಗಿ ಹಾರಿ ನಷ್ಟದ ಲೆಕ್ಕಕ್ಕೆ ಸೇರುತ್ತಿದ್ದವು. ಎತ್ತರಕ್ಕೆ ಹೂ ಸುರಿಸುತ್ತಿದ್ದ ಹೂವಿನ ಕುಂಡ ಕೆಲವೊಮ್ಮೆ ಏನು ಮಾಡದೆ ಸುಮ್ಮನಾಗುತಿತ್ತು. ಆಗೆಲ್ಲಾ ಅದರ ಮೂತಿ ಹರಿದು ಕಲ್ಲಿಗೆ ಅದನ್ನು ಉಜ್ಜಿ ಮರಳಿ ಪ್ರಯತ್ನ ನಡೆಯುತ್ತಿತ್ತು.
ಭೂ ಚಕ್ರ ತಿರುಗುವಾಗ ಮಹಾಭಾರತದ ಕೃಷ್ಣನ ಚಕ್ರ ನೆನಪಾಗಿದ್ದು, ಕೈಯಲ್ಲಿ ಇದು ತಿರುಗಿದರೆ ಎಷ್ಟು ಚೆನ್ನ ಎಂದು ತರಲೆ ಯೋಚನೆಗೆ ಬರವಿರುತ್ತಿರಲಿಲ್ಲ .. ಇನ್ನು ಸುರಸುರ ಬತ್ತಿ, ಹಾವಿನ ಗುಳಿಗೆಗಳು ಕಾರ್ಯಕ್ರಮದ ನಡುವೆ ಬರುವ ಜಾಹಿರಾತಿನಂತೆ ಬಂದು ಸುಟ್ಟು ಹೋಗುತ್ತಿದ್ದವು.
ಇವೆಲ್ಲದರ ನಡುವೆ ಒಂದು ಸಲ ಕೈ ಸುಟ್ಟುಕೊಂಡು ಬರ್ನಲ್ ಹಚ್ಚಿಕೊಳ್ಳದಿದ್ದರೆ ಹೇಗೆ !
ಪಟಾಕಿ ಕಾರ್ಯಕ್ರಮದ ಕೊನೆಯ ಅಂಕ.. ಪಟಾಕಿ ರೈಲು
ಒಂದು ಕಂಬದಿಂದ ಇನ್ನೊಂದು ಕಂಬಕ್ಕೆ ಉದ್ದದ ದಾರ ಬಿಗಿದು , ಆ ದಾರದಲ್ಲಿ ಪಟಾಕಿ ರೈಲು ಪೋಣಿಸಿ , ಊದುಬತ್ತಿಯ ತುದಿಯಲ್ಲಿನ ಕಿಡಿಯನ್ನು ರೈಲಿನ ಬಿಳಿ ತುದಿಗೆ ಹತ್ತಿಸಿದಾಗ ಓಡುತಿತ್ತು ಆ ರೈಲು. ಕಟ್ಟಿದ ದಾರದ ಉದ್ದಕ್ಕೂ ಬೆಳಕು ಚೆಲ್ಲುತ್ತಾ ವೇಗವಾಗಿ ಸಾಗಿ ಕೊನೆಗೆ ಮದ್ದು ಮುಗಿಯುದ್ದಿಂತೆ ದಾರದಲ್ಲೇ ಗಿರಕಿ ಹೊಡೆಯುತಿತ್ತು.
**********************************
ಅಂತು ಮಳೆ ನಿಂತು , ಸಿರಿ 'Its not going to rain in next few days' ಎಂದು ಅಪ್ಪಣೆ ಕೊಟ್ಟಾಗ , ಆಕಾಶಬುಟ್ಟಿ ಮನೆಯ ಮುಂದೆ ಕಟ್ಟಲ್ಪಟ್ಟಿತು.
ಈ ಆಕಾಶಬುಟ್ಟಿಯ ಕೆಳಗೆ ಪಟಾಕಿ ರೈಲು, ಅಟ್ಟಿ ಲಕ್ಕವ್ವ , ಬರ್ನಲ್ ವಾಸನೆ ಯಾಕೋ ನೆನಪಾದವು..
**********************************
ಪಾತರಗಿತ್ತಿ ಶುರು ಮಾಡಿ ಮುಂದಿನ ವರ್ಷಕ್ಕೆ ಒಂದು ದಶಕ. ತೋಚಿದ್ದು - ಬಯಸಿದ್ದು ಬರಿಯಲ್ಲಿಕ್ಕೆ ನನಗೆ ಇದ್ದ ಒಂದು ಚಿಕ್ಕ ಪ್ರಪಂಚ ಇದು.
'ಜ್ಹಿಂದಗಿ ಏಕ್ ಸಫರ ಸುಹಾನ..' ಎನ್ನುತ್ತಾ ಕಾಲಿಗೆ ಚಕ್ರ ಕಟ್ಟಿಕೊಂಡು ಬದುಕು ಕಟ್ಟಿ ಕೊಳ್ಳುವ ಇರಾದೆಯಲ್ಲಿ , ಕಳೆದು ಕೆಲವು ವರ್ಷ ಪಾತರಗಿತ್ತಿ ಎಲ್ಲೂ ಹಾರಿದ್ದೇ ಇಲ್ಲ..
ಈ ಆಕಾಶಬುಟ್ಟಿ ಮೂಲಕ ಕನಸು-ನನಸು-ನೆನಪುಗಳಿಗೆ ಪದ ಕಟ್ಟುವ ಪ್ರಯತ್ನಕ್ಕೆ ಮರಳುತ್ತಿದ್ದೇನೆ . ..
ಎಲ್ಲರಿಗೂ ದೀಪಾವಳಿಯ ಶುಭಾಶಯಗಳು !