Monday, December 10, 2007

ಸಾವಿನ ಹೊಸ್ತಿಲಲ್ಲಿ ನಿಂತವನ ಮಾತು...

ನೀವು ಬಹಳ ಅಂದರೆ ಇನ್ನು ೩-೬ ತಿಂಗಳು ಬದುಕಬಹುದೆಂದು ಗೊತ್ತಾದಾಗ, ನಿಮ್ಮ ಕ್ರಿಯೆ-ಪ್ರತಿಕ್ರಿಯೆಗಳು ಹೇಗಿರುತ್ತೆ. ದೇಹದ ಒಳಗಿದ್ದುಕೊಂಡು ದಿನ ದಿನವು ಜೀವ ತಿನ್ನುತ್ತಿರುವ ಕ್ಯಾನ್ಸರ್ ಎನ್ನುವ ಆ ಹೃದಯಹೀನ ಹಂತಕನಿಗೆ ಶರಣಾಗಿ, ಉಳಿದಿರುವ ಅಲ್ಪ ಸಮಯವನ್ನು ಅದಕ್ಕೆ ಒಪ್ಪಿಸಬೇಕೇ? ಅಥವ ಇರುವ ದಿನಗಳನ್ನೇ ಅರ್ಥಪೂರ್ಣವಾಗಿ ಬದುಕಿ, ಸಾವಿನಲ್ಲೂ ಒಂದು ಸಂದೇಶ ಕಳಿಸುವಂತೆ ಬಾಳುವುದೋ?

ಅವರ ಹೆಸರು ರಾಂಡಿ ಪೌಸ್ಚ್.

ಕಳೆದ ೨-೩ ತಿಂಗಳಿನಿಂದ ಅಂತರ್ಜಾಲದಲ್ಲಿ ಸಂಚಲನ ಉಂಟುಮಾಡಿರುವ ಹೆಸರು. ಆತ ಸುಮಾರು ೪೦೦ ಜನ ವಿದ್ಯಾರ್ಥಿಗಳು-ಪ್ರೊಪೆಸರ್‌ಗಳ ಮುಂದೆ ಕಳೆದ ಸೆಪ್ಟಂಬರ್‌ನಲ್ಲಿ 'ಲಾಸ್ಟ್ ಲೆಕ್ಚರ್' ಅನ್ನುವ ಮನೋಜ್ಞ ಉಪನ್ಯಾಸ ನೀಡಿದ. ಅಂತರ್ಜಾಲದಲ್ಲೂ ಲಭ್ಯವಿದ್ದ ಆ ಉಪನ್ಯಾಸ, ಎಲ್ಲಡೆ ಹರಡತೊಡಗಿತು. ಮೊದಲ ತಿಂಗಳಲಲ್ಲೇ ಅಂತರ್ಜಾಲದಲ್ಲಿ ಸುಮಾರು ಒಂದು ಮಿಲಿಯನ್ ಜನ ನೋಡಿದರು. ನೋಡಿ ತಮಗೆ ಬೇಕಾದವರಿಗೂ ಹೇಳಿದರು. ನೋಡುನೋಡುತ್ತಿದ್ದಂತೆ ರಾಂಡಿ ಪೌಸ್ಚ್ ಎಷ್ಟು ಪ್ರಸಿದ್ಧನಾದನೆಂದರೆ ಅಮೇರಿಕೆಯ ಟಿವಿ ಚಾನಲ್‍ಗಳು ಅವನ ಬಗ್ಗೆ, ಅವನ ಸಂದರ್ಶನಗಳನ್ನು ಪ್ರಸಾರಮಾಡಲಿಕ್ಕೇ ಪೈಪೋಟಿಗಿಳಿದವು.

ಅಂದಾಗೆ ಯಾರು ಈ ರಾಂಡಿ ಪೌಸ್ಚ್? ಅವನ 'ಲಾಸ್ಟ್ ಲೆಕ್ಚರ್' ಯಾಕೇ ಅಷ್ಟು ಜನಮನ ಮುಟ್ಟಿತು?

ರಾಂಡಿ ಪೌಸ್ಚ್ ಪ್ರಸಿದ್ದ ಕರ್ನಿಗಿ ಮೆಲನ್ ವಿಶ್ವವಿದ್ಯಾಲಯದಲ್ಲಿ ಗಣಕವಿಜ್ಞಾನ ವಿಭಾಗದ ಮೇಧಾವಿ ಪ್ರೊಫೆಸರ್. ವರ್ಚುಲ್ ರಿಯಾಲಿಟಿ ಕ್ಷೇತ್ರದಲ್ಲಿ ದೊಡ್ಡ ಹೆಸರು. ಪತ್ನಿ-ಮೂರು ಚಿಕ್ಕ ಮಕ್ಕಳ ಸಂಸಾರ. ಅದರೆ ಕಳೆದ ವರ್ಷ ರಾಂಡಿಗೆ ಕ್ಯಾನ್ಸರ್ ಇದೆಯೆಂದು ತಿಳಿಯಿತು. ಚಿಕಿತ್ಸೆಗಳು ಶುರುವಾದವು. ಕ್ಯಾನ್ಸರ್ ಯಾವುದಕ್ಕೂ ಜಗ್ಗದೇ ಬೆಳಯಿತು. ಅಗಸ್ಟ್ ಹೊತ್ತಿನಲ್ಲಿ ರಾಂಡಿಗೆ ಇನ್ನು ೩-೬ ತಿಂಗಳು ಬದುಕಬಹುದೆಂದು ವೈದ್ಯರು ಹೇಳಿದರು.

ಅದೇ ಸಮಯದಲ್ಲಿ ರಾಂಡಿ ಕೆಲಸ ಮಾಡುತ್ತಿದ್ದ ಕರ್ನಿಗಿ ಮೆಲನ್ ವಿಶ್ವವಿದ್ಯಾಲಯದಲ್ಲಿ ಏರ್ಪಾಡಾಗಿದ್ದೆ ಈ 'ಲಾಸ್ಟ್ ಲೆಕ್ಚರ್'. ರಾಂಡಿ ಸುಮಾರು ಒಂದುವರೆ ಗಂಟೆ ನೀಡಿದ ಉಪನ್ಯಾಸದಲ್ಲಿ ಯಾವುದೇ ದೊಡ್ಡ ತತ್ವಜ್ಞಾನವಿರಲಿಲ್ಲ, ಅದರಲ್ಲಿ ಸಾವಿನೊಂದಿಗಿನ ಹೋರಾಟದ ಬಗ್ಗೆಯೂ ಇರಲಿಲ್ಲ. ಆ ಉಪನ್ಯಾಸದಲ್ಲಿ ಇದದ್ದು ಹಾಸ್ಯಭರಿತ ಶೈಲಿಯಲ್ಲಿ ಅವನ ಬಾಲ್ಯದ ಕನಸುಗಳ ಬಗ್ಗೆ, ನನಸಾದ-ನನಸಾಗದ ಕನಸುಗಳ ಬಗ್ಗೆ. ಆ ಉಪನ್ಯಾಸ ನೀಡಿದ ಒಂದು ತಿಂಗಳಲ್ಲೇ ಅದು ಅಂತರ್ಜಾಲದಲ್ಲಿ ಎಲ್ಲೆಡೇ ಹರಡಿ,ಸುಮಾರು ೬ ಮಿಲಿಯನ್ ಜನ ಅದನ್ನು ನೋಡಿ, ಜಗತ್ತಿನ ಮೂಲೆ ಮೂಲೆಗೂ ತಲುಪಿ, ರಾಂಡಿ ಒಬ್ಬ ಪ್ರವರ್ತಕನ ತರ ಕಾಣತೊಡಗಿದ.

'ಲಾಸ್ಟ್ ಲೆಕ್ಚರ್' ನೋಡಿ ಅನೇಕ ಜನ ತಮ್ಮ ಜೀವನ ಶೈಲಿ ಬದಲಿಸಿಕೊಂಡವರಿದ್ದಾರೆ.

ಟಿವಿ ಚಾನೆಲ್‍ಗಳ ರಾಂಡಿಯ ಸಂದರ್ಶನ ಮುಗಿಬಿದ್ದವು.ಲಾಸ್ಟ್ ಲೆಕ್ಚರ್ ರಾಂಡಿ ತನ್ನ ಮೂರು ಮಕ್ಕಳಿಗೊಸ್ಕರ ನೀಡಿದ್ದಂತೆ, ಅದು ಎಲ್ಲರಿಗೂ ಇಷ್ಟವಾದದ್ದು ರಾಂಡಿಗೆ ಸಂತಸ ಮತ್ತು ಆಶ್ಚರ್ಯ ತಂದಿವೆಯಂತೆ. ಸದ್ಯಕ್ಕೆ ಉಳಿದ ಕೆಲವೇ ತಿಂಗಳುಗಳಲ್ಲಿ ತನ್ನ ಮೂರು ಮಕ್ಕಳು-ಹೆಂಡತಿಯೊಂದಿಗೆ ಅದಷ್ಟು ಸಮಯ ಕಳೆಯುತ್ತಿದ್ದಾನೆ ರಾಂಡ್. ಈ ಮಧ್ಯೆ 'ಲಾಸ್ಟ್ ಲೆಕ್ಚರ್' ಪುಸ್ತಕ ರೂಪದಲ್ಲೂ ಬರಲಿದೆ.

ಅಂದಾಗೆ ರಾಂಡಿಯ ಈಡೇರದ ಕನಸುಗಳ ಪಟ್ಟಿಯಲ್ಲಿ 'ಸ್ಟಾರ್ ಟ್ರೆಕ್'‍ನ ಕಾಪ್ಟನ್ ಆಗಬೇಕು ಎನ್ನುವ ಕನಸು ನನಸಾಗದಿದ್ದರೂ , ಸ್ಟಾರ್ ಟ್ರೆಕ್‍ನ ಮುಂದಿನ ಚಿತ್ರದಲ್ಲಿ ಒಂದು ಗೌರವ ಪಾತ್ರ ರಾಂಡಿಗೆ ಕೊಟ್ಟಿದ್ದಾರಂತೆ. ಹಾಗೇ ಚಿಕ್ಕಂದಿನಲ್ಲಿದ್ದಾಗ ರಾಷ್ಟ್ರೀಯ ಪುಟ್ಬಾಲ್ ತಂಡದಲ್ಲಿ ಸ್ಥಾನಗಳಿಸಬೇಕೆಂಬ ಕನಸು ನನಸಾಗದಿದ್ದರೂ, ಆ ತಂಡವೇ ರಾಂಡಿಯನ್ನು ತಮ್ಮೊಂದಿಗೆ ಅಭ್ಯಾಸಮಾಡಲ್ಲಿಕ್ಕೇ ಕರೆಸಿಕೊಂಡಿವೆ.

ನೀವು ಇದನ್ನು ಹೊತ್ತಿಗೆ ರಾಂಡಿಯ ಕ್ಯಾನ್ಸರ್ ಕಿಮೋ ತೆರಪಿಯಲ್ಲಿ ಹಾಗೂ ಹೀಗೂ ಒಂದೆರಡು ವಾರಗಳಷ್ಟು ಮೃತ್ಯುವನ್ನು ಮುಂದಕ್ಕೆ ಹಾಕುವಲ್ಲಿ ಯಶ್ವಸಿಯಾಗಿದ್ದಾನೆ. ಆದರೆ ಅದು ಕ್ಷಣಿಕ ಜಯವಷ್ಟೇ, ಸಾವಿನ ಒಳ ಬಾಗಿಲಲ್ಲಿ ನಿಂತವನಿಗೆ ಮರಳಿ ಬರಲು ಆಗುವುದು ಅಸಾಧ್ಯ.


ರಾಂಡಿಯ 'ಲಾಸ್ಟ್ ಲೆಕ್ಚರ್' ನೀವು ನೋಡಿರದಿದ್ದರೆ ಇಲ್ಲಿದೆ ಅದರ ಲಿಂಕ್

http://video.google.com/videoplay?docid=-5700431505846055184

ಹಾಗೆಯೇ ರಾಂಡಿಯ ಬ್ಲಾಗ್ ಇಲ್ಲಿದೆ

http://www.cs.cmu.edu/~pausch/


ಆ 'ಲಾಸ್ಟ್ ಲೆಕ್ಚರ್' ನೋಡಿದ ಮೇಲೆ, ಮನಸಿನ ಆಳದಲ್ಲಿ, ನಮ್ಮ ಜೀವನಗಳ ಬಗ್ಗೆ, ಜೀವನ ಶೈಲಿಯ ಬಗ್ಗೆ, ಜೀವನದಲ್ಲಿ ನಾವು ವಿವಿಧ ವಿಷಯಗಳಿಗೆ ಕೊಟ್ಟಿರುವ ಪ್ರಾಮುಖ್ಯತೆಗಳ ಬಗ್ಗೆ ಪ್ರಶ್ನೆಗಳು ಉದ್ಭವಿಸದಿದ್ದರೆ ಕೇಳಿ..

Tuesday, November 13, 2007

ಮೊದಲ ದೀಪಾವಳಿ !!

ಮೊದಲ ದೀಪಾವಳಿಯಂತೆ
ಅತ್ತೆ ಮನೆಯಲ್ಲಿ ಹಬ್ಬವಂತೆ
ಒಂದೂ ಅರಿಯೆ ನಾ !

ಎಣ್ಣೆ ಮಜ್ಜನವಂತೆ
ನಂತರ ಶಾವಿಗೆ ಊಟವಂತೆ
ಒಂದೂ ಅರಿಯೆ ನಾ!

ಮರುದಿನ ಲಕ್ಷ್ಮಿಪೂಜೆಯಂತೆ
ಅಡುಗೆಮನೆಯಲ್ಲಿ ಹೋಳಿಗೆ ಜೋರಂತೆ
ಒಂದೂ ಅರಿಯೆ ನಾ!

ನಾದಿನಿಗೆ ಪಟಾಕಿ ಕೇಳುತ್ತಿದ್ದಳಂತೆ
ನಾನು ಕೊಡಿಸುತ್ತಿದ್ದೆನಂತೆ
ಒಂದೂ ಅರಿಯೆ ನಾ !

ಮನೆತುಂಬಾ ನನ್ನಾಕೆಯ ಓಡಾಟವಂತೆ
ಮನೆಮಂದಿಗೆಲ್ಲಾ ಸಂಭ್ರಮವಂತೆ
ಒಂದೂ ಅರಿಯೆ ನಾ !

ಮದುವೆಯಾಗಿ ತಿಂಗಳಿಗೆ
ಪರದೇಶಕ್ಕೆ ಹಾರಿದೆನಂತೆ
ಅದು ಹೇಗೆ ಅತ್ತೆ ಮನೆಯ
ಮೊದಲ ದೀಪಾವಳಿ ತಿಳಿಯುವದಂತೆ !?

Thursday, August 09, 2007

ಜೋಡಿ ಹಕ್ಕಿ ಮಾತಾಡಿವೆ..

ಎಲ್ಲರಿಗೂ ನಮಸ್ಕಾರ !

'ಕಾಣದಂತೆ ಮಾಯವಾದನು ನಮ್ಮ ಶಿವ' ಅಂತಾ ನೀವು ಹಾಡು ಹೇಳೋಕೇ ಮುಂಚೆನೇ ನಿಮ್ಮ ಮುಂದೆ ಬಂದು ನಿಂತಿದೀನಿ !

ನೀವು ಶುಭ ಕೋರಿ ಕಳುಹಿಸಿದ ಮೇಲ್‍ಗಳು, ನೀವು ಪಾತರಗಿತ್ತಿಯಲ್ಲಿ ಬರೆದ ಕಾಮೆಂಟ್‍ಗಳು, ನನ್ನ ಸಂಭ್ರಮದಲ್ಲಿ ಬಂದು ಭಾಗವಹಿಸಿದ್ದಕ್ಕೆ ನಿಮ್ಮೆಲ್ಲರಿಗೂ ನನ್ನ ಒಲವಿನ ವಂದನೆಗಳು.ನಿಮ್ಮ ಪ್ರೀತಿಯ ಹಾರೈಕೆಗೆ, ನನ್ನ ಮತ್ತು ನನ್ನಾಕೆಯ ನಮನಗಳು.

ಕಳೆದ ಸಲ ಪಾತರಗಿತ್ತಿಯಲ್ಲಿ ಬರೆದಿದ್ದು ನಿಮ್ಮನ್ನು ನನ್ನ ವಿವಾಹಕ್ಕೆ ಆಹ್ವಾನಿಸುವ ಸಂದರ್ಭದಲ್ಲಿ. ಆದಾದ ನಂತರ ಏನೇಲ್ಲಾ ಆಯ್ತು..

ಇಷ್ಟು ದಿವಸ ಕನಸು-ಕವನ-ಕನವರಿಕೆಗಳಲ್ಲಿ ಕಾಡುತಿದ್ದ ನನ್ನ ಹುಡುಗಿ ಕೊನೆಗೂ ನನ್ನ ವರಿಸಿದ್ದು ಅದೇ ಜೂನ್ ೨೪ ರಂದು. ಮದುವೆಯೆಂಬ ಆ ವಿಶಿಷ್ಟ ಅನುಭವ..ಸಂಬಂಧ, ಸಂಭ್ರಮ, ಸಲ್ಲಾಪ, ಸಡಗರಗಳ ಒಂದು ಹೊಸ ಲೋಕವದು.

ಇಷ್ಟು ದಿವಸ ಕೇವಲ ಪೋನು-ಮೇಲ್-ಕವನಗಳಲ್ಲಿ ಹರಿಯುತ್ತಿದ್ದ ಭಾವನಾ ಲಹರಿಗೆ , ಮನದಲ್ಲಿದ್ದವರು ಎದುರಿಗೆ ಬಂದಾಗ ಆದ ಸಂಭ್ರಮ...ಅವಿಸ್ಮರಣೀಯ. ಪ್ರೀತಿಯ ತೊರೆಯಲ್ಲಿ ಬೊಗಸೆಯಲ್ಲಿ ಕುಡಿದ ಅಮೃತವೂ ಅವಿಸ್ಮರಣೀಯ..

ಮದುವೆಯ ಹಿಂದಿನ ದಿವಸ ನನ್ನ ಹುಡುಗಿಯ ಶಿವಮೊಗ್ಗೆಯಲ್ಲಿ ನಡೆದಿತ್ತು ನನ್ನ ಪುಸ್ತಕ್ 'ಸ್ವೀಟ್ ಡ್ರೀಮ್ಸ್ ಅಂದ್ರೇನು !'ಬಿಡುಗಡೆ. ಅದಾಗಿ ಮರುದಿನವೇ ನನ್ನ ಜೀವನದ ಅತೀ ಮಧುರ ಸ್ವೀಟ್ ಡ್ರೀಮ್ ನನ್ನ ಭಾಳಸಂಗಾತಿಯಾಗಿದ್ದು....

ಅಲ್ಲಿ ಸ್ಪಲ್ಪ ಕಾಲ ಇದ್ದು ನಾವು ಮರಳಿದೆವು ದೂರದ ಅಮೇರಿಕೆಗೆ...

ಇಲ್ಲಿ ನಮ್ಮ ಪುಟ್ಟ ಗೂಡಿನಲ್ಲಿ ನಮ್ಮ ಬಾಳಪಯಣ ಸುಂದರವಾಗಿ ಸಾಗುತಿದೆ...

ಮತ್ತೆ ಸಿಗುವೇ..ಅಲ್ಲಿಯವರಿಗೆ ಪ್ರೀತಿಯಿರಲಿ

Wednesday, June 20, 2007

ಆತ್ಮೀಯ ಆಹ್ವಾನ

ತುಂಗೆಯ ತೀರದಿಂದ ತಂದು ಮಲ್ಲಿಗೆ ಸಸಿಯೊಂದ
ಮನದ ಅಂಗಳದಿ ಹಚ್ಚಿ ಪ್ರೀತಿಯ ಸಿಂಚನ ಮಾಡಲು
ಅರಳಿದೆ ಮೊಗ್ಗು ನನ್ನ ಎದೆಯಂಗಳದಿ
ಪ್ರೀತಿಯ ಪರಿಮಳ ಬೀರಲಿದೆ ನನ್ನ ಮನೆಯಂಗಳದಿ

ಹೀಗೆ ನನ್ನ ಎದೆಯ ತುಂಬಾ ಮೋಹಕ ಸುವಾಸನೆ ಸೂಸುತ್ತಿರುವ ಆ ನನ್ನ ಮಧುರ ಮಲ್ಲಿಗೆಯ ಹೆಸರು ಶಿಲ್ಪಶ್ರೀ.

ಜೀವನದ ಎಲ್ಲಾ ವಸಂತ-ಗ್ರೀಷ್ಮ ಖುತುಗಳನ್ನು ಹಂಚಿಕೊಳ್ಳಲ್ಲಿರುವ ನನ್ನ ಪ್ರೀತಿಯ ಹುಡುಗಿಯನ್ನು ಬಾಳಸಂಗಾತಿಯಾಗಿ ಸ್ಪೀಕರಿಸುವ ಶುಭ ಮೂಹೂರ್ತಕ್ಕೆ ನಿಮಗೆ ಆತ್ಮೀಯ ಆಹ್ವಾನ

ಮುಹೂರ್ತ: ಭಾನುವಾರ ೨೪ ಜೂನ್ ೨೦೦೭, ಬೆಳಿಗ್ಗೆ ೧೦:೩೦ - ೧೧:೩೦
ಸ್ಥಳ: ವೀರಶೈವ ಕಲ್ಯಾಣ ಮಂದಿರ, ಶಿವಮೊಗ್ಗ

ಆರತಕ್ಷತೆ:ಶುಕ್ರವಾರ ೨೯ ಜೂನ್ ೨೦೦೭, ಸಂಜೆ ೭:೦೦ - ೧೦:೦೦
ಸ್ಥಳ:ನ್ಯೂ ಆತಿಥ್ಯ ರೆಸ್ಟೋರೆಂಟ್,ಗಾಂಧೀ ಬಜಾರ್,ಬೆಂಗಳೂರು

ಅಂದಾಗೆ ಇದರ ಜೊತೆ ಇನ್ನೊಂದು ಸಂಭ್ರಮದ ಸುದ್ದಿ ನಿಮ್ಮೊಡನೆ ಹಂಚಿಕೊಳ್ಳಲ್ಲಿಕ್ಕೆ ಇದೆ.
ಮದುವೆಯ ಹಿಂದಿನ ದಿವಸ ಅಂದರೆ ಜೂನ್ ೨೩ಕ್ಕೆ ಶಿವಮೊಗ್ಗದಲ್ಲಿ ನನ್ನ ಚೊಚ್ಚಲ ಪುಸ್ತಕ ’ಸ್ವೀಟ್ ಡ್ರೀಮ್ಸ್ ಅಂದರೇನು!’ ಬಿಡುಗಡೆ ಆಗಲಿದೆ.

ನನ್ನ ಈ ಎಲ್ಲಾ ಸಂತಸದ ಕ್ಷಣಗಳನ್ನು ಹಂಚಿಕೊಳ್ಳಲ್ಲಿಕ್ಕೆ ನಿಮಗೆ ಮತ್ತೊಮ್ಮೆ ಆಹ್ವಾನ..

ಪ್ರೀತಿಯಿರಲಿ
ಶಿವಶಂಕರ

Monday, May 28, 2007

ಮನೆ-ಮನಗಳು ಕಾದಿವೆ..

ಆ ಕಟ್ಟಡಗಳ ಮುಂದೆ ನನ್ನ ಕಾರ್ ಪಾರ್ಕ್ ಮಾಡಿ, ಒಳಗೆ ಹೋಗಿ ಅಲ್ಲಿನ ರೆಸಿಡೆಂಟ್ ಮ್ಯಾನೇಜರ್ ಭೇಟಿಯಾಗುತ್ತೇನೆ. ಅವರು ದೇಶಾವರಿ ನಕ್ಕು, ಬಂದ ಕಾರಣ ಕೇಳುತ್ತಾರೆ. ನಾನು ನಿಮ್ಮ ಆಪಾರ್ಟ್‍ಮೆಂಟ್‍ನಲ್ಲಿ ಮನೆ ಖಾಲಿಯಿದೆ ಅಂತಾ ಕೇಳಿದೆ ಅಂತಾ ಪ್ರಸ್ತಾವ ಮಾಡುತ್ತೇನೆ. ಅಲ್ಲಿಂದ ನಿರೀಕ್ಷಿಸಿದಂತೆ ಬರುತ್ತೆ ಪ್ರಶ್ನೆ ' ಎಷ್ಟು ಜನ ಇರ್ತೀರಾ'. ನಾನು ಹೇಳ್ತಾನೆ 'ನಾನು ನನ್ನ ಪತ್ನಿ'. ಹಾಗೇ ಹೇಳುವಾಗ ನನ್ನ ಕಣ್ಣುಗಳಲ್ಲಿ ನಿನ್ನದೇ ಬಿಂಬ.

ಯಾಕೋ ಈ ಮನೆ ಅಷ್ಟು ಇಷ್ಟವಾಗಲಿಲ್ಲ. ಮತ್ತೆ ಮರುದಿನ ಇನ್ನೊಂದು ಮನೆಗೆ ಭೇಟಿ. ಮತ್ತೆ ಪ್ರಶ್ನಾವಳಿ ಶುರು. ಅಪಾರ್ಟ್‍ಮೆಂಟ್ ಮ್ಯಾನೇಜರ್ ಕೇಳ್ತಾರೆ ' ಎಷ್ಟು ಜನ ಇರ್ತಿರಾ', ನಾನು ಹೇಳ್ತಾನೆ 'ನಾನು ನನ್ನ ಹೆಂಡತಿ'. ಮುಂದಿನ ಪ್ರಶ್ನೆ ನುಗ್ಗಿ ಬರುತ್ತೆ 'ಮಕ್ಕಳು ಇದರಾ'. ನನಗೆ ನಗು ತಡೆಯಲು ಆಗುವುದಿಲ್ಲ. ನಸುನಕ್ಕ ಇಲ್ಲಾ ಅನ್ನುತ್ತೇನೆ. ಅವರಿಗೆ ಹೇಳ್ತೇನೆ "ಇಲ್ಲಾ ಇನ್ನೂ ಮದುವೆಯಾಗಿಲ್ಲ, 'ಮದುವೆ'ಯಾಗಿ ಶೀಘ್ರದಲ್ಲಿ ಹೆಂಡತಿ ಕರೆ ತರುತ್ತೇನೆ" .

ಆ ಮ್ಯಾನೇಜರ್‍ ಪ್ರಶ್ನಾವಳಿ ಮುಂದುವರಿಯುತ್ತೆ ' ನಿಮ್ಮ ಹೆಂಡತಿ ಬರಲಿಲ್ಲವಾ ನಿಮ್ಮ ಜೊತೆ ಮನೆ ನೋಡಲು?'. ನೀನು 'ಹೆಂಡತಿ'ಯಾಗಿದ್ದು ಎಕೋ ಖುಷಿಯೆನಿಸುತ್ತೆ. ಆ ಮ್ಯಾನೇಜರ್‌ಗೆ ನಮ್ಮ ನಾನೊಂದು ತೀರ, ನೀನೊಂದು ತೀರದ ವಿರಹದ ಕತೆ ಹೇಳಬೇಕು ಅನಿಸುತ್ತೆ. ಸುಂಕದವರ ಮುಂದೆ ಸುಖದುಃಖ ಹೇಳೋದೇ ! ಸುಮ್ಮನೆ 'ಇಲ್ಲಾ' ಅನ್ನುತ್ತೇನೆ. ಮುಂದಿನ ಪ್ರಶ್ನೆ 'ನಿಮ್ಮ ಮನೆಯಲ್ಲಿ ಪೆಟ್ ಇದೇಯಾ?' ನಾನು ಮನಸ್ಸಲ್ಲೇ ಅಂದುಕೊಳ್ಳುತ್ತೇನೆ 'ನನ್ನಾಕೆಗೆ ನಾನೇ ಪೆಟ್, ನನಗೆ ಅವಳೇ ಪೆಟ್, ಹೀಗಿರುವಾಗ ಬೇರೆ ಪೆಟ್ ಯಾಕೇ'.

ಹಲವಾರು ಈ ತರದ ಸಂದರ್ಶನಗಳ ಬಳಿಕ ಒಂದು ಮನೆ ಇಷ್ಟವಾಗುತ್ತೆ. ಇಲ್ಲಿ ಅದೇನೋ 'ಕ್ರೆಡಿಟ್ ಚೆಕ್' ಅಂತಾ ಮಾಡ್ತಾರೆ. ಒಂಥರ ಆ ವ್ಯಕ್ತಿಯ ಜಾತಕ ಜಾಲಾಡಿದಂತೆ ಆ ಕ್ರೆಡಿಟ್ ಚೆಕ್. ಆ ವ್ಯಕ್ತಿಯ ಅರ್ಥಿಕ ವಹಿವಾಟುಗಳು-ವ್ಯಕ್ತಿಯ ಹಿನ್ನಲೆ ಎಲ್ಲಾ ಪರಿಶೀಲಿಸಲಾಗುತ್ತೆ. ಮರುದಿನ ಮ್ಯಾನೇಜರ್ ಕರೆ ಮಾಡಿ ' ಅಭಿನಂದನೆಗಳು , ನಿಮ್ಮ ಕ್ರೆಡಿಟ್ ಚೆಕ್ ಪಾಸಾಯಿತು' ಎನ್ನುತ್ತಾರೆ. ಅವರಿಂದ ಮನೆಯ ಬಾಡಿಗೆ, ವಿವರಗಳನ್ನು, ಅವರ ಆಪಾರ್ಟ್‍ಮೆಂಟ್‍ಗಳ ಕಟ್ಟಳೆಗಳನ್ನು ಕೇಳಿಸಿಕೊಂಡು ಆ ಮನೆಯ ಕಾಗದ ಪತ್ರಕ್ಕೆ ಸಹಿ ಹಾಕುತ್ತೇನೆ.

ಒಂದು ಬಿಡುವಿನ ದಿವಸ ಅಲ್ಲಿಗೆ ವರ್ಗಾವಾಗುತ್ತೇನೆ. ಬ್ರಹ್ಮಚಾರಿ ಜೀವನದ ದೊಡ್ಡ ಪ್ಲಸ್ ಪಾಯಿಂಟ್ ಅಂದರೆ ಹೆಚ್ಚಿಗೆ ಲಗೇಜ್ ಇರೋಲ್ಲಾ.

ಮನೆಯಲ್ಲಿ ಹೊಸ ಪೇಂಟ್‍ನ ವಾಸನೆ. ಯಾಕೋ ನನಗೆ ಅದು ಇಷ್ಟವಾಗುತ್ತೆ.

ಅದು ಎಲ್ಲಿತ್ತೋ ನಿನ್ನ ನೆನಪು ಬಂದು ಹಿಂದಿನಿಂದ ಅಪ್ಪಿಕೊಂಡುಬಿಡುತ್ತೆ. ನಿನ್ನ ನೆನಪನ್ನು ಕೂಸುಮರಿ ಮಾಡಿಕೊಂಡು ಆ ಮನೆಯಲ್ಲೆಲ್ಲಾ ಒಂದು ಸುತ್ತು ಹಾಕುತ್ತೇನೆ. ಆ ನಿನ್ನ ನೆನಪಿಗೆ ಹೇಳುತ್ತೇನೆ 'ಇದು ನನ್ನ ಹುಡುಗಿ ಇಲ್ಲಿಗೆ ಬಂದಾಗ ನಾವಿಬ್ಬರು ಇರೋ ನಮ್ಮ ಮನೆ'. ಆವಾಗ ಆ ನೆನಪು ಕೇಳುತ್ತೆ 'ಮತ್ತೆ ನಾನು ಎಲ್ಲಿ ಇರೋದು?'. ನಾನು ಅದಕ್ಕೆ ಹೇಳ್ತಾನೆ ' ನೀನು ನಮ್ಮ ಜೊತೆಯಲ್ಲಿ ಇರಬಹುದು. ಆದರೆ ನನ್ನ ಹುಡುಗಿಯೇ ಇಲ್ಲಿಗೆ ಬಂದ ಮೇಲೆ ನೀನು ಹೇಗೆ ಬರ್ತಿಯಾ?'

ಆ ನೆನಪಿಗೆ ಅರ್ಥವಾಗುತ್ತೆ.

ಅಲ್ಲಿಂದ ಅಡುಗೆಮನೆಗೆ ಹೊಕ್ಕರೆ ನಿನ್ನ ನೆನಪು ಬಂದು ಹಿಂದೆ ನಿಂತು ' ಎನು ಅಡುಗೆ ಇವತ್ತು' ಅಂತಾ ಕೇಳುತ್ತೆ. ನಿನ್ನ ನೆನಪಿನ ಜೊತೆ ಊಟಕ್ಕೆ ಕೂತು, ನನ್ನ ಅಡುಗೆ ರುಚಿ ತೋರಿಸುತ್ತೇನೆ.

ಆಮೇಲೆ ಬೆಡ್ ರೂಮ್ ಹೊಕ್ಕುತ್ತಿದ್ದಂತೆ ನೆನಪಿಗೆ ಎನೋ ಹೊಳೆದು ನನ್ನ ಕಡೆ ಒಮ್ಮೆ, ನನ್ನ ಲ್ಯಾಪ್ ಟಾಪ್‍ನಲ್ಲಿರುವ ನಿನ್ನ ಪೋಟೋದ ಕಡೆ ಒಮ್ಮೆ ನೋಡಿ ಮಂದಹಾಸ ಬೀರುತ್ತೆ. ನಾನು ಆ ತರಲೆ ನೆನಪಿಗೆ 'ಆಯ್ತು ತಾವು ಬಂದು ತುಂಬಾ ಹೊತ್ತಾಯ್ತು' ಅನ್ನುತ್ತೇನೆ. ಅದರು ನೆನಪು ಬಿಡದೆ 'ಇದು ನಿಮ್ಮ ಬೆಡ್ ರೂಮ್ ಅಲ್ವಾ' ಅನ್ನುತ್ತೆ. ನಾನು ನಸುನಗುತ್ತಾ 'ಹೌದು ಹೌದು, ತಾವು ಹೊರಡಿ ಅನ್ನುತ್ತೇನೆ'.

ಆ ತರಲೆಯನ್ನೇನೋ ಕಳಿಸಿ ಆಯ್ತು. ಆದರೆ ಮನಸ್ಸಿಗೆ ಎನಾಯ್ತು ಈಗ. ಮತ್ತೆ ಶುರುವಾಯ್ತು ನೋಡು ನಿನ್ನ ನೆನಪಿನ ಮೆರವಣಿಗೆ.

ನಿದ್ದೆ ಬರದೇ ಸುಮ್ಮನೆ ಹೊರಳಾಡ್ತಾ ಇದೀನಿ.

ಮನೆ ತುಂಬಾ ಖಾಲಿ ಖಾಲಿ ಅನಿಸ್ತಾ ಇದೆ ಕಣೇ. ನನ್ನ ಮನವೂ ಸಹ..

ಬೇಗ ಬಂದು ನನ್ನ ಮನೆ-ಮನವನ್ನು ತುಂಬು..

Monday, May 14, 2007

ಒಮ್ಮೆ ನೋಡಿದರೆ ಇನ್ನೊಮ್ಮೆ !

"ನಟ ಸಾರ್ವಭೌಮ, ಗಾನ ಗಂಧರ್ವ ಡಾಕ್ಟರ್ ರಾಜ್ ಕುಮಾರ್ ಅಭಿನಯಿಸಿರುವ ,ಇಂಪಾದ ಹಾಡುಗಳಿಂದ,ಮಧುರವಾದ ಸಂಗೀತದಿಂದಲೂ,ಭಯಂಕರ ಹೋರಾಟಗಳಿಂದಲೂ ಒಡಗೂಡಿರುವ ಸಂಪೂರ್ಣ ಪ್ರಮಾಣಿತ ಸಿನಿಮಾಸ್ಕೋಪ್ ಕನ್ನಡ ಚಲನಚಿತ್ರ- ಅದೇ ಕಣ್ಣು...ಅದೇ ಕಣ್ಣು.

ದಿನಾ ಮೂರು ಆಟಗಳು. ಇಂದೇ ಬಂದು ನೋಡಿರಿ ನಿಮ್ಮ ನೆಚ್ಚಿನ ಜಯಶ್ರೀ ಚಿತ್ರಮಂದಿರದಲ್ಲಿ. ಮರೆತು ನಿರಾಶರಾಗಿದೀರಿ,ಚಿತ್ರಕಲಾ ರಸಿಕರೇ.ಒಮ್ಮೆ ನೋಡಿದರೆ ಇನ್ನೊಮ್ಮೆ, ಇನ್ನೊಮ್ಮೆ ನೋಡಿದರೆ ಮೊಗದೊಮ್ಮೆ ನೋಡಲೇಬೇಕು ಎನಿಸುವ ಚಿತ್ರ..ಅದೇ ಕಣ್ಣು"

ಈಗಂತ ಆ ಆಟೋ ಊರಿನ ಬೀದಿಗಳಲ್ಲಿ ಸುತ್ತಾಡುತ್ತ ಸಿನಿಮಾ ಬಂದ ಸುದ್ದಿ ಜಾಹೀರುಗೊಳಿಸುತ್ತಿದ್ದರೆ, ಒಂದು ಕ್ಷಣ ಕೆಲಸ ನಿಲ್ಲಿಸಿ ಎಲ್ಲರೂ ಆ ಆಟೋ ಕಡೆಗೆ ನೋಡುವವರೆ. ಆಟೋದ ಹಿಂದುಗಡೆ ಆ ಸಿನಿಮಾದ ಪೋಸ್ಟರ್. ಆಟೋದಲ್ಲಿ ಕುಳಿತು ಸಿನಿಮಾದ ಬಗ್ಗೆ, ಅದರ ಬಗ್ಗೆ ಒಂದೆರಡು ಸಾಲಲ್ಲೇ ಹೇಳುವ ಅದೇ ಪರಿಚಿತ ಧ್ವನಿ.

ಆ ಊರಲ್ಲಿ ಯಾವ ಸಿನಿಮಾ ಬಂದರೂ, ಅದರ ವರ್ಣನೆ ಎಲ್ಲರ ಕಿವಿಯಲ್ಲಿ ಬೀಳ್ತಾ ಇದದ್ದು, ಮೇಲಿನ ಸಾಲುಗಳಲ್ಲೇ, ಅದೇ ಧ್ವನಿಯಲ್ಲಿ. ಸಿನಿಮಾದ ಹೆಸರು ಬದಲಾಗುತಿತ್ತು, ನಟ-ನಟಿಯರ ಹೆಸರು, ಸಿನಿಮಾ ಮಂದಿರದ ಹೆಸರು ಬದಲಾಯಿಸಿ ಮತ್ತೆ ಅದೇ ಗೊತ್ತಿರುವ ಸಾಲುಗಳು..'ಒಮ್ಮೆ ನೋಡಿದರೆ ಇನ್ನೊಮ್ಮೆ..'

ಅದಕ್ಕೂ ಮೊದಲ ಸಿನಿಮಾ ಪ್ರಚಾರಕ್ಕೆ ಆಟೋದ ಬದಲು ಎತ್ತಿನ ಗಾಡಿ ಬಳಸುತ್ತಿದ್ದರು ಅನ್ನೊ ನೆನಪು.ಆ ಎತ್ತಿನ ಗಾಡಿಗೆ ಸಿನಿಮಾದ ಎರಡು ಬೃಹತ್ ಪೋಸ್ಟರ್‍ಗಳನು ಹಚ್ಚಿ ಅದರಲ್ಲಿ ಮೈಕ್ ಹಿಡಿದು ಅದೇ ಧ್ವನಿ, ಅದೇ ಸಾಲುಗಳು.

ಹೀಗೆ ಪ್ರಚಾರ ಕೇಳಿ ಸಿನಿಮಾ ನೋಡಲು ಹೋದರೆ ಕೆಲವೊಮ್ಮೆ ವಿಪರೀತ ಜನಜಂಗುಳಿ. ಟಿಕೇಟ್ ಕೊಡುವ ಕೌಂಟರ್‌ಗೆ ಉದ್ದದ ಸಾಲು. ಕೌಂಟರ್ ಎಕ್ಕೆಡೆಗಳಲಿ ತಂತಿಯ ಜಾಲರಿ. ಅದು ಯಾಕೇ ಬೇಕಿತ್ತು ಅನ್ನೋದು ನನಗೆ ತಿಳಿದೇ ಇರಲಿಲ್ಲ, ಅದೊಂದು ಟಿಕೇಟ್ ಕೊಳ್ಳುವಾಗಿನ ಪ್ರಸಂಗ ನೋಡುವವರೆಗೆ.

ನಾನು ಆವಾಗ ಸಿನಿಮಾ ನೋಡುತ್ತಿದ್ದೆ ಕಡಿಮೆ. ಅದ್ಯಾವುದೋ ತುಂಬಾ ಚೆನ್ನಾಗಿದೆ ಅಂತಾ ಗೆಳೆಯರು ಹೇಳಿದ ಮೇಲೆ ಆ ಸಿನಿಮಾ ನೋಡಲು ಹೊರಟರೆ ಅಲ್ಲಿ ಜನ ಜಾತ್ರೆ. ಬಂದದ್ದಾಗಿದೆ ಸಾಲಿನಲ್ಲಿ ನಿಂತು ನೋಡೋಣವೆಂದು ನಿಂತ ಕೆಲವು ಕ್ಷಣದಲ್ಲೇ ಟಿಕೇಟ್ ಕೊಡಲು ಶುರು. ಮೊದಮೊದಲು ಸರಾಗವಾಗೇ ಸಾಗಿದ್ದ ಸಾಲಿನಲ್ಲಿ ತರಲೆ ಶುರುವಾಗಿದ್ದು ಮುಂದಿದ್ದ ಯಾರೋ ಒಬ್ಬ ಸಾಲಿನಲ್ಲಿ ಹಿಂದಿದ್ದ ತನ್ನ ಸ್ನೇಹಿತನನ್ನು ತನ್ನೆಡೆಗೆ ಕರೆದಾಗ. ನನಗೋ ಆಶ್ಚರ್ಯ, ಈ ಜಾಲರಿ ಅಡಿಯಲ್ಲಿ ನಿಂತಿದ್ದೆವೆ, ಅದೂ ಒಬ್ಬರೇ ನಿಲ್ಲುವಷ್ಟು ಸ್ಥಳವಿರುವ ಸಾಲಿನಲ್ಲಿ. ಇವನು ಮುಂದೆ ಹೇಗೆ ಹೋದಾನು ಅಂತಾ. ನನ್ನ ಊಹೆಗೂ ಮೀರಿ, ಆ ವ್ಯಕ್ತಿ ಆ ತಂತಿ ಜಾಲರಿಗೆ ನೇತು ಬಿದ್ದು ಅಲ್ಲಲ್ಲಿ ಗೋಡೆಗೆ ಕಾಲಿಟ್ಟು,ಜಾಲರಿಗೆ ಒದಗಿಸಿದ್ದ ಕಂಬಗಳ ಹಿಡಿದು ನಮ್ಮ ತಲೆಯ ಮೇಲೆ ಸಾಗಿ ಹೋಗಿದ್ದ. ಸ್ಪೈಡರ್ ಮ್ಯಾನ್‍ನಂತೆ ! ಕುಂಭಮೇಳದಲ್ಲಿ ಕಳೆದುಹೋಗಿದ್ದ ಸ್ಪೈಡರ್ ಮ್ಯಾನ್‍ನ ತಮ್ಮನಿರಬೇಕು!

ಅಂದಾಗೆ ಕಳೆದ ವಾರ ಇಲ್ಲಿ ಕನ್ನಡ ಸಿನಿಮಾ ನೋಡೋಕೇ ಹೋದಾಗ ಇದೆಲ್ಲಾ ನೆನಪಾಯ್ತು.

ಮುಂಗಾರು ಮಳೆ ಅನ್ನೋ ಆ ಸೂಪರ್ ಹಿಟ್ ಚಿತ್ರವನ್ನು ಅಮೇರಿಕೆಗೆ ಕರೆ ತಂದಿದ್ದರು. ಅಫೀಸ್‍ನಲ್ಲಿ ಕುಳಿತುಕೊಂಡೇ ಪೋನ್‍ ಮೂಲಕ ಟಿಕೇಟ್ ಕಾಯ್ದಿರಿಸಿ, ನಂತರ ಅವತ್ತೊಂದಿನ ಭಾನುವಾರ ಬಹುತೇಕ ತುಂಬಿದ್ದ ನಾಸ್ ಚಿತ್ರಮಂದಿರದಲ್ಲಿ ಅಷ್ಟೊಂದು ಕನ್ನಡಿಗರೊಂದಿಗೆ ಕುಳಿತು ಚಿತ್ರ ನೋಡಿದ್ದು ಖುಷಿಯೆನಿಸಿತು.

ಚಿತ್ರ ನೋಡಿ ಮುಗಿಸಿ ವಾಪಸ್ ಆಗಬೇಕಾದರೆ ಬೇಡಬೇಡವೆಂದರೂ ನಮ್ಮ ಆ ಊರ ಸಿನಿಮಾ ಸಂಬಂಧಿ ಈ ಕತೆಗಳು ತಲೆಯಲ್ಲಿ ರೀಲ್‍ನಂತೆ ಬರ್ತಾ ಇದ್ದವು.

ಟಿಕೇಟ್ ತಗೋಬೇಕಾದರೆ ನಮ್ಮ ಆ ಊರಲ್ಲಿ ಇನ್ನೊಂದು ಸಾಮಾನ್ಯ ದೃಶ್ಯವೆಂದರೆ ಸಾಲಿನಲ್ಲಿ ನಡೆಯುತ್ತಿದ್ದ ಜಟಾಪಟಿಗಳು. ಯಾರೋ ಸಾಲಿನಲ್ಲಿ ಮಧ್ಯ ಸೇರಕೊಂಡರು ಅಂತಾ ಜಗಳ ಶುರುವಾಗ್ತಿತ್ತು. ಹೌಸ್‍ಫುಲ್ ಸಿನಿಮಾಕ್ಕೆ ಟಿಕೇಟ್ ಕೊಡುವವನ ಗತ್ತು ನೋಡೇ ಆನಂದಿಸಬೇಕು !

ಇನ್ನು ಮಂಗಳವಾರ ಬಂತೆಂದರೆ ಅದು ಬೇರೇನೇ ಕತೆ. ಅವತ್ತು ಊರಲ್ಲಿ ಸಂತೆ. ಅಕ್ಕಪಕ್ಕದ ಹಳ್ಳಿಗಳಿಂದ ಜನ ತರಕಾರಿ-ಕಾಳು-ಬೆಣ್ಣೆ ಇತ್ಯಾದಿಗಳನ್ನು ಸಂತೆಗೆ ತಂದು ಮಾರಿ, ಹಳ್ಳಿಗೆ ಮರಳುವುದಕ್ಕಿಂತ ಮುಂಚೆ ಒಂದು ಸಿನಿಮಾ ನೋಡಿಕೊಂಡು ಹೋಗುವುದು ಪರಿಪಾಠ. ಅವತ್ತು ಎಂತದೇ ಸಿನಿಮಾ ಇರಲಿ ಎಲ್ಲಾ ಹೌಸ್‍ಫುಲ್.

ಇನ್ನು ಟಾಕೀಸ್ ಒಳಗಡೆ ಕತೆಗಳು ಅಷ್ಟೇ ರೋಚಕವಾಗಿರುತ್ತಿದ್ದವು. ಸೀಟ್ ನಂಬರ್ ಇರ್ತಾ ಇಲ್ಲದ ಕಾರಣ ಯಾರು ಎಲ್ಲಿ ಬೇಕಾದರೂ ಕುಳಿತುಕೊಳ್ಳಬಹುದಿತ್ತು. ಕೆಲವರು, ಯಾರು ಬರದೆ ಇದ್ದರೂ, ಸುಮ್ಮನೆ ಒಂದೆರಡು ಸೀಟ್ ಹಿಡಿದುಕೊಂಡು ಸೀಟ್ ಖಾಲಿ ಇದೆಯಾ ಅಂತಾ ಬಂದವರಿಗೆ 'ಇಲ್ಲಿ ಬರ್ತಾರೀ' ಅನ್ನೋದು ಸಾಮಾನ್ಯವಾಗಿತ್ತು. ಹಾಗೇ ಕೆಲವೊಮ್ಮೆ ಇಂಟರ್‌ವೆಲ್ ಮುಂಚೆ ಖಾಲಿ ಇರ್ತಾ ಇದ್ದ ಬಾಲ್ಕನಿ, ಇಂಟರ್‌ವೆಲ್ ನಂತರ ಫುಲ್ ! ನೋಡಿದರೆ ಇಂಟರ್‌ವೆಲ್ ಮುಂಚೆ ಮುಂದಿನ ಸೀಟ್‍ಗಳ ಪಡ್ಡೆಗಳೆಲ್ಲಾ ಅಲ್ಲಿಗೆ ವರ್ಗಾವಾಗಿಬಿಟ್ಟಿರಿತ್ತಿದ್ದವು. ಮೊದಲೇ ಹೇಳಿದ ಹಾಗೆ, ಸೀಟ್ ನಂಬರ್ ಇರ್ತಾ ಇಲ್ಲಾ, ಕೆಲವೊಮ್ಮೆ ಬಾಲ್ಕನಿನೂ ಖಾಲಿ ಹೊಡಿತಾ ಇರ್ತಿತ್ತು.

ಮುಂದಿನಸಾಲು ಸೀಟ್ ಅಂದಕೂಡಲೇ ಅಲ್ಲಿನ ಟೆಂಟ್ ಸಿನಿಮಾಗಳ ನೆನಪಾಯ್ತು. ಅವುಗಳಲ್ಲಿ 'ಗಾಂಧಿ ಸೀಟ್' ಅಂತಾ ಇರ್ತಿತ್ತು. ಪರದೆಯ ಮುಂದಿನ ಮೊದಲ ಕೆಲವು ಸಾಲುಗಳೇ ಈ ಗಾಂಧಿ ಸೀಟ್‍ಗಳು. ಅವಕ್ಕೆ ಯಾಕೇ ಗಾಂಧೀ ಸೀಟ್ ಅಂತಿದ್ದರೂ ಸರಿ ಗೊತ್ತಿಲ್ಲಾ. ಬಹುಷಃ ದುಡ್ಡು ಕಡಿಮೆಯಿದ್ದದಕ್ಕೆ ಇರಬಹುದು. ಆದರೆ ಸಿನಿಮಾ ಪೂರ್ತಿ ಅಸ್ವಾದಿಸುತ್ತಿದ್ದವರು ಈ ಗಾಂಧಿ ಸೀಟ್ ಪ್ರೇಕ್ಷಕರು. ಸಿನಿಮಾದಲ್ಲಿ ವಿಷಿಲ್ ಹಾಕೋದು, ಚಪ್ಪಾಳೆಗಳು, ಕೇಕೇ ಹಾಕೋದು..ಹೆಚ್ಚಿನ ಭಾಗವಹಿಸುವಿಕೆ ಇಲ್ಲಿಂದಲೇ. ಅದರ ಜೊತೆಗೆ ಕೆಲವೊಮ್ಮೆ ಪರದೆಯ ಮೇಲೆ ನಾಲ್ಕಾಣೆ-ಎಂಟಾಣೆ ನಾಣ್ಯಗಳನ್ನು ಎಸೆಯುತ್ತಿದ್ದವರು ಉಂಟು !

ಆ ಊರಿನ ಒಂದೊಂದು ಸಿನಿಮಾ ಮಂದಿರಗಳು ಒಂದೊಂದು ಬ್ರಾಂಡ್ ಆಗಿಬಿಟ್ಟಿದ್ದವು. ಜಯಶ್ರೀ ಹೊಸ ಕನ್ನಡ ಚಲನಚಿತ್ರಗಳಿಗೆ, ಶ್ರೀಕಾಂತ್ ಹೊಸ ಇಂಗ್ಲೀಷ್-ಹಿಂದಿ ಚಿತ್ರಗಳಿಗೆ, ಶೋಭಾ ಹಳೆ ಕನ್ನಡ-ಹಿಂದಿ ಚಿತ್ರಗಳಿಗೆ, ಚಿತ್ರಾ ಹೊಸ ಹಿಂದಿ-ಇಂಗ್ಲೀಷ್ ಚಿತ್ರ ವಿತ್ ಟೆಂಟ್ ಅನುಭವಕ್ಕೆ ಮತ್ತು ಕೃಷ್ಣಾ 'ದೇವರ' ಚಿತ್ರಗಳಿಗೆ ! ಅದರಲ್ಲೂ ಚಿತ್ರಾ ಮತ್ತು ಕೃಷ್ಣಾ ಚಿತ್ರಮಂದಿರಗಳು ಅಲ್ಲಿನ ಹೊಳೆ ಹತ್ತಿರವಿದ್ದು, ಸೇತುವೆ ದಾಟಿ ಚಿತ್ರಾಕ್ಕೆ ಹೋಗಬೇಕಿತ್ತು. ಯಾರಾದರೂ ಗೆಳಯರು ಅಲ್ಲಿ ಕೃಷ್ಣಾ ಚಿತ್ರಮಂದಿರದ ಸುತ್ತಮುತ್ತ ಕಂಡರೆ ಮುಗಿಯಿತು ಮಾರನೇ ದಿನ ಶಾಲೆಯಲ್ಲಿ ಹುಡುಗರೆಲ್ಲಾ ಹಾಗೇ ಕಂಡವನೆಡೆಗೆ 'ಯಾವುದು ಸಿನಿಮಾ?' ಅಂತಾ ಕಣ್ಣು ಮಿಟುಕಿಸಿ ಕೇಳಿದ್ದೇ ಕೇಳಿದ್ದು !

ಅಂದಾಗೆ ನೀವು ಸ್ಪೈಡರ್ ಮ್ಯಾನ್-೩ ನೋಡಿದೀರಾ? ಕಳೆದ ವಾರದಲ್ಲಿ ಐ-ಮ್ಯಾಕ್ಸ್ ಥಿಯೇಟರ್‌ನ ಬೃಹತ್ ಪರದೆ ಮೇಲೆ ನನ್ನ ಸ್ನೇಹಿತರೊಂದಿಗೆ ನೋಡೋಕೇ ಹೋಗಿದ್ದೆ. ಆನ್-ಲೈನ್‍ನಲ್ಲಿ ಸೀಟ್ ಬುಕ್ ಮಾಡಿ, ಅದರ ಜೊತೆ ನಮಗೆ ಬೇಕಾದ ಕೊನೆ ಸಾಲಿನಲ್ಲಿ ಸೀಟ್‍ಗಳನ್ನು ಬುಕ್ ಮಾಡಿದ್ದೆವು.ಐ-ಮ್ಯಾಕ್ಸ್‍ದಲ್ಲಿ ಆ ಸಿನಿಮಾ ನೋಡೋದು ಸೂಪರ್ ಆಗಿತ್ತು!

Saturday, April 28, 2007

ಸಡಗರ

ಬಳೆಗಳಿಗೆ ಸಡಗರ
ಅವಳ ಕೈ ಹಿಡಿದಿರುವನೆಂದು
ಓಲೆಗಳಿಗೆ ಸಡಗರ
ಅವಳ ಕಿವಿ ಕಚ್ಚುವೆನೆಂದು
ಕುಂಕುಮಕ್ಕೆ ಸಡಗರ
ಅವಳ ಹಣೆ ಮುತ್ತಿಡುವೆನೆಂದು
ಮಲ್ಲಿಗೆಗೆ ಸಡಗರ
ಅವಳ ಮುಡಿಯಲಿ ಬೆರಳಾಡಿಸುವೆನೆಂದು
ಕನ್ನಡಿಗೆ ಸಡಗರ
ಅವಳ ಸೌಂದರ್ಯ ನೋಡುವೆನೆಂದು

ಸರಕ್ಕೆ ಸಡಗರ
ಎದೆ ಹತ್ತಿರ ಇರುವೆನೆಂದು
ವೇಣಿಗೆ ಸಡಗರ
ಅವಳ ಬೆನ್ನು ಸವರುವೆನೆಂದು
ಸೀರೆಗೆ ಸಡಗರ
ಅವಳ ನಡು ಬಳಸುವೆನೆಂದು
ದಿಂಬಿಗೆ ಸಡಗರ
ಅವಳ ಕೆನ್ನೆ ತಟ್ಟುವೆನೆಂದು
ಹೊದಿಕೆಗೆ ಸಡಗರ
ಅವಳ ಆಲಂಗಿಸಿ ಮಲಗುವೆನೆಂದು

ಕಾಲುಗಳಿಗೆ ಸಡಗರ
ಅವಳ ಗೆಜ್ಜೆನಾದ ಮಾಡುವೆನೆಂದು
ಕಂಠಕ್ಕೆ ಸಡಗರ
ಅವಳ ಮುದ್ದುಮಾತು ನುಡಿವೆನೆಂದು
ರೆಪ್ಪೆಗಳಿಗೆ ಸಡಗರ
ಅವಳ ಕಣ್ಣೋಟ ಬಚ್ಚಿಟ್ಟುಕೊಳ್ಳುವೆನೆಂದು
ತುಟಿಗಳಿಗೆ ಸಡಗರ
ಅವಳ ಜೇನು ತನ್ನಲ್ಲಿ ಇಹುದೆಂದು
ಹೃದಯಕ್ಕೆ ಸಡಗರ
ಅವಳ ಎದೆಬಡಿತ ತನ್ನಿಂದೆಂದು

ಅವಕ್ಕೆ ಗೊತ್ತಿಲ್ಲವೇ ನಾ
ಅವಕ್ಕಿಂತ ಹೆಚ್ಚು ಸಡಗರ ಪಡುವವನೆಂದು
ಅವಕ್ಕೆ ಗೊತ್ತಿಲ್ಲವೇ ನಾ
ಅವು ಸಡಗರ ಪಡುವ ಎಲ್ಲವನ್ನು ಮಾಡುವವನೆಂದು
ಅವಕ್ಕೆ ಗೊತ್ತಿಲ್ಲವೇ ನಾ
ಅವಳ ಒಲವಿನ ನಲ್ಲನೆಂದು

Wednesday, April 18, 2007

ಕಾರ್ ಡ್ರೈವಿಂಗ್ ವೃತ್ತಾಂತವೂ ಮತ್ತು ಭಾವಾನುವಾದವೂ..

ಕಾಲ, ದೇಶಗಳು ಕಾರು ಕಲಿಯೋದಿಕ್ಕೆ ಕೂಡಿ ಬರಬೇಕು ಅನ್ನೋದು ನನ್ನ ಮಟ್ಟಿಗಂತು ನಿಜ. ಯಾಕಂದ್ರೆ, ಇಂಜಿನಿಯರಿಂಗ್ ಓದುವಾಗ, ಬೆಂಗಳೂರಿನಲ್ಲಿ ಕೆಲಸ ಮಾಡುವಾಗ ಕೂಡ ಈ ವಾಹನ ಚಾಲನೆ (ಮೋಟಾರ್ ಬೈಕು ಸೇರಿ) ನನ್ನನ್ನು ಅಷ್ಟೇನೂ ಆಕರ್ಷಿಸಿರಲಿಲ್ಲ. ಎಲ್ಲಿ ಹೋದರೂ ಜೊತೆ ಕೊಡುತಿದ್ದ ಸ್ನೇಹಿತರ ಪಿಲಿಯನ್ ಸೀಟು, ಬಿಟ್ಟರೆ ಬಸ್ಸು ಇಲ್ಲಾಂದ್ರೆ ಆಟೊ ರಿಕ್ಷಾ ಹೀಗೆ ನಡೀತಿತ್ತು ಬಿಡಿ.

ಕೆಲಸದ ನಿಮಿತ್ತ ಕ್ಯಾಲಿಫೋರ್ನಿಯಾಗೆ ಕಾಲಿಟ್ಟ ಮೇಲೆ ಕಾರು ಫಾರಿನ್ ದೈವ ಅನಿಸಿ, ಒಂದು ಶುಭ ದಿನದಂದು ಸ್ವಂತ ಸಂಪಾದನೆಯಲ್ಲಿ ಕಾರು ಕೊಂಡೆ. ಕಾರು ನನ್ನ ಬಳಿ ಚಲಿಸಿತೆ ವಿನಃ ನನಗೆ ಅದರ ಚಾಲನೆ ಬರಲಿಲ್ಲ. ಕಾನೂನಿನ ಪ್ರಕಾರ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಮೊದಲು ಲಿಖಿತ ಪರೀಕ್ಷೆ ಕೊಡಬೇಕಿತ್ತು, ರಸ್ತೆ ನಿಯಮಗಳು, ಚಾಲನಾ ಮಾಹಿತಿಗಳಿಗೆ ಸಂಬಂಧಪಟ್ಟಂತೆ. ಅದರಲ್ಲೇನೊ ಪಾಸಾದೆ. ಗಂಟೆಗೆ ೩೫ ಡಾಲರ್ ಕೊಟ್ಟು, ಒಂದು ತರಬೇತಿ ಕೇಂದ್ರ ಸೇರಿ ಡ್ರೈವಿಂಗ್‌ನ ಪ್ರಥಮ ಪಾಠಗಳನ್ನು ಕಲಿತಿದ್ದಾಯಿತು.

ಹತ್ತಿರದ ವಾಣಿಜ್ಯ ಮಳಿಗೆಯ ಬೃಹತ್ ಪಾರ್ಕಿಂಗ್ ಮಳಿಗೆಗಳಲ್ಲಿ ಅದೆಷ್ಟೋ ರಾತ್ರಿ ನಡೆದ ನನ್ನ ಡ್ರೈವಿಂಗ್ ಸರ್ಕಸ್, ನಂತರ ಕಡಿಮೆ ಜನಸಂದಣಿಯ ದಾರಿಗೆ ಬಡ್ತಿ ಪಡೆಯಿತು. ಹೀಗೆ ನನ್ನ ಆತ್ಮವಿಶ್ವಾಸವು ಹೆಚ್ಚಿ ಕಛೇರಿಗೂ ಕೂಡ ಕಾರಲ್ಲಿಯೆ ಹೋಗಿ ಬರಲು ಶುರುಮಾಡಿದೆ, ಗೆಳೆಯನೊಬ್ಬ ವಿಪರೀತ ಧೈರ್ಯ ಮಾಡಿ ಜೊತೆ ಕೊಟ್ಟ. ಎಲ್ಲ ಸರೀನೆ ಇತ್ತು, ಕಾರಿನ ಹಿಡಿತ ತಪ್ಪಿ ಅಪಾರ್ಟ್‌ಮೆಂಟ್‌ವೊಂದರ ಗೋಡೆ ಒಡೆಯುವವರೆಗೆ. ಬಾಡಿಗೆ ಕಾರು ಆಗಿದ್ದರಿಂದ ಇನ್ಶುರೆನ್ಸ್‌ನ ತಲೆನೋವು ತಪ್ಪಿತು ಅಷ್ಟೆ. ಜೊತೆಗೆ ನನ್ನ ವಿಶ್ವಾಸವು ಕುಸಿದು ಕಾರು ೧೫ ದಿನ ಮನೆಯಲ್ಲಿ ಉಳಿತು.

ಮರಳಿ ಯತ್ನವ ಮಾಡಿ ಅಂತೂ ಡ್ರೈವಿಂಗ್ ಪರೀಕ್ಷೆ ಕೊಡುವ ದಿನ ಬಂತು. ಇಲ್ಲಿನ RTO ತರಹ ಅಲ್ಲಿನ್ಲ DMV (ಮೋಟಾರು ವಾಹನಗಳ ಇಲಾಖೆ) ಲೈಸೆನ್ಸ್ ಕೊಡುತ್ತೆ. ಪರೀಕ್ಷೆ ಹೇಗೆ ಅಂದರೆ ಪರೀಕ್ಷಕ ಬಂದು ಪಕ್ಕದಲ್ಲಿ ಕೂತ ಮೇಲೆ ಆತ ಹೇಳಿದ ಹಾಗೆ ಡ್ರೈವ್ ಮಾಡಬೇಕು. ನಾನು ಸ್ವಲ್ಪ ಹೆಚ್ಚಾಗಿಯೇ ತಯಾರಾಗಿದ್ದೆ, ಅದಕ್ಕೆ ಪರೀಕ್ಷಕ ಬಂದು ಕೂರುವ ಮೊದಲೆ ಕಾರು ಸ್ಟಾರ್ಟ್ ಮಾಡಿದೆ, ಗಡಿಬಿಡಿಯಲ್ಲಿ ಬ್ರೇಕ್ ಬದಲು ಆಕ್ಸಿಲೇಟರ್ ಒತ್ತಿದೆ. ಕಾರು ಜೋರಾಗಿ ಕೂಗಿತು, ಆ ಸದ್ದಿಗೆ ಪರೀಕ್ಷೆ ಮಾಡುವವ ಹೆದರಿ ಓಡಿ ಹೋದ, ಪರೀಕ್ಷೆ ರದ್ದಾಯ್ತು.

ಆದರೆ ಅದೃಷ್ಟ ಚೆನ್ನಾಗಿತ್ತು ಅನಿಸುತ್ತೆ, ಅದಕ್ಕೆ ಮಾರನೆ ದಿನವೆ ಇನ್ನೊಮ್ಮೆ ಪರೀಕ್ಷೆ ತೆಗೆದುಕೊಳ್ಳುವ ಅವಕಾಶ ಸಿಕ್ಕಿತು. ಅಂದು ಯಾವ ತಪ್ಪು ಮಾಡದೆ ಪರೀಕ್ಷೆ ಕೊಟ್ಟೆ, ಫಲಿತಾಂಶ ಪಾಸು ಅಂತ ಗೊತ್ತಾದಾಗ ಅತ್ಯದ್ಭುತವಾದ ವಿದ್ಯೆ ಕರಗತವಾದ ಸಂಭ್ರಮ ನನ್ನಲ್ಲಿತ್ತು.

**************************************************

ಇದು ನನಗೆ ಡ್ರೈವಿಂಗ್ ಲೈಸನ್ಸ್ ಸಿಕ್ಕಾಗಿನ ಕತೆ.

ಈ ಲೇಖನ ನನ್ನ ಇಂಗ್ಲೀಷ್ ಬ್ಲಾಗ್‍ನೆಲ್ಲೂ ಅಡಗಿ ಕುಳಿತಿತ್ತು. ಈ ಸಲ ಸುಧಾ ಯುಗಾದಿ ವಿಶೇಷಾಂಕದಲ್ಲಿ 'ಕಾರ್ ಡ್ರೈವಿಂಗ್ ಕಲಿತದ್ದು' ಅನ್ನೋ ಶೀರ್ಷಿಕೆಯಲ್ಲಿ ಲೇಖನ ಆಹ್ವಾನಿಸಿದಾಗ ನನ್ನ ಇಂಗ್ಲೀಷ್ ಬ್ಲಾಗ್‍ನಲ್ಲಿ ಇದ್ದ ನನ್ನ ಕಾರು ಕತೆಯನ್ನ (ನನ್ನ ಅನುಮತಿ ಪಡೆದು!)ಕನ್ನಡಕ್ಕೆ ಭಾವಾನುವಾದ ಮಾಡಿ, ಅದನ್ನು ಸುಧಾಕ್ಕೆ ಕಳಿಸಿದವಳು ನನ್ನ ಹುಡುಗಿ !!

ಅದು ಈ ಸರ್ತಿ ಸುಧಾ ವಿಶೇಷಾಂಕದಲ್ಲಿ ಪ್ರಕಟನೂ ಆಗಿ, ಇದರ ಕ್ರೆಡಿಟ್ ಯಾರಿಗೆ ಹೋಗಬೇಕು ಅಂತಾ ನಾನು ನನ್ನ ಹುಡುಗಿ ಪ್ರೀತಿಯ ಜಗಳವಾಡಿದ್ದು ಆಯ್ತು !

ಲೇಖನವನ್ನು ಮೂಲಕ್ಕೆ ಧಕ್ಕೆಯಾಗದಂತೆ ಇರುವ ಪದಗಳ ಸಂಖೆಯ ನಿರ್ಬಂಧದಲ್ಲಿ ಭಾವಾನುವಾದ ಮಾಡೋದು ಕಷ್ಟದ ಕೆಲಸ,ಭಾವಾನುವಾದ ಮಾಡಿದ ಅವಳಿಗೆ ಇದರ ಕ್ರೆಡಿಟ್ಟು ಅಂತಾ ನಾನೆಂದೆ. ಯಾವಾಗಲೂ ಮೂಲ ಲೇಖನನೇ ಮೂಖ್ಯ,ಅದರಲ್ಲಿ ಸತ್ವ ಇದ್ದರೆ ಅನುವಾದ ಮಾಡೋದು ಸುಲಭ ಅಂತಾ ಕ್ರೆಡಿಟ್ಟು ನನ್ನ ಕಡೆ ಕಳಿಸಿದಳು ಅವಳು.ನಮ್ಮ ಪ್ರೀತಿ-ಜಗಳಗಳು ಹೀಗೆ ಇರುತ್ತೆ ಬಿಡಿ !!

ನಮ್ಮದು ಹೆತ್ತವರಿಗೆ ಹೆಗ್ಗಣನೂ ಮುದ್ದು ತರ ಆಯ್ತು..ನಿಮಗೇನು ಅನಿಸ್ತು ಅನುವಾದ ಓದಿ?

ನೀವೇನಂತೀರಾ..ಅನುವಾದಗೊಂಡ ಲೇಖನಗಳಲ್ಲಿ ಯಾರಿಗೆ ಜಾಸ್ತಿ ಪಾಲು..ಮೂಲ ಲೇಖಕ(ಕೆ)ಅಥವಾ ಭಾವಾನುವಾದ ಲೇಖಕ(ಕೆ)? ಅಥವಾ ಸೇಫ್ ಆಗಿ ಇಬ್ಬರಿಗೂ ಸಮಪಾಲು ಅಂತೀರಾ ?

Friday, April 06, 2007

ಬಿಳಿಗಡ್ಡದ ಅಂಕಲ್

ಅವತ್ತು ಪೋನ್‍ನಲ್ಲಿ ಮಾತಾಡುವಾಗ ನನ್ನ ಹುಡುಗಿ ಕೇಳಿದಳು 'ರೀ ಇವತ್ತು ಯಾರನ್ನ ನೋಡಿದೆ ಹೇಳಿ'.

ಆ ಊರಿನಲ್ಲಿದ್ದುಕೊಂಡು ಅವಳು ಅಷ್ಟು ಖಾತರದಿಂದ ಹೇಳ್ತಿದಾಳೆ ಅಂದ್ರೆ ನನಗೆ ನೆನಪಾಗಿದ್ದು ಕೇವಲ ಒಂದೇ ಹೆಸರು.. 'ತೇಜಸ್ವಿ' !

ಕಾನನದ ಆ ವಿಸ್ಮಯದ ಲೋಕ ಸೃಷ್ಟಿಸಿದವರು.ಅಲ್ಲಿ ಹಾರುವ ಓತಿಯನ್ನು ಹುಡುಕುತ್ತಾ ಆ ದಟ್ಟ ಕಾಡಲ್ಲಿ ಹೊರಟರೆ ಓದುಗರಿಗೆ ಕಾಡಿನಲ್ಲಿ ಎಲೆಗಳ ಮೇಲೆ ಚರಪರ ಸದ್ದು ಮಾಡಿ ನಡೆದಾಡಿದ ಹಾಗೆ ಮಾಡಿದವರು. ಕಾನನವನ್ನು ಅಷ್ಟು ಪ್ರೀತಿಸಿ ಅದರಲ್ಲೇ ಬದುಕಿದವರು. ಕನ್ನಡದಲ್ಲಿ ದೊಡ್ಡ ಮಟ್ಟದಲ್ಲಿ ವಿಜ್ಞಾನ ವಿಷಯಗಳ ಬರೆದು ಅದನ್ನು ಓದಿಸಿದವರು. ಹಾಗೆಯೇ ಮನಕ್ಕೆ ತಟ್ಟುವ ಪ್ರಭಾವಿ ಪಾತ್ರಗಳನ್ನು ತಂದು ನಿಲ್ಲಿಸಿದವರು.ಕ್ಯಾಮರ ಕಣ್ಣಲ್ಲಿ ಪ್ರಕೃತಿಯನ್ನು ಅಷ್ಟು ಸುಂದರವಾಗಿ ಸೆರೆಹಿಡಿದು ತಂದು ತೋರಿಸಿದವರು..

ಕುವೆಂಪುರಂತಹ ತಂದೆಯ ಮಗನಾಗಿ ಅದೇ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸುವುದು ಸುಲಭದ ಕೆಲಸವಲ್ಲ. ಕುವೆಂಪು ಒಂದು ಶರಧಿ. ಅದರ ಪರಧಿಯನ್ನು ಮೀರಿ ಬಂದು ,'ಕುವೆಂಪು ಅವರ ಮಗ ತೇಜಸ್ವಿ' ಅನ್ನೋ ಇಮೇಜ್‍ನಿಂದ ದೂರವಿದ್ದು, ತಮ್ಮದೇ ಒಂದು ಸ್ವಂತ ಇಮೇಜ್ ಸೃಷ್ಟಿಸಿಕೊಂಡವರು..

ನಾನು ನನ್ನ ಹುಡುಗಿ ಸಂಬಂಧದಲ್ಲಿ ಸೇರಿದ ಪ್ರಾರಂಭದ ದಿನಗಳವು.ಅದು-ಇದು ಮಾತಾಡುತ್ತ ಮಾತು 'ಕರ್ವಾಲೋ' ಕಡೆ ಬಂದಾಗ, ನಾವು ಅದೆಷ್ಟು ಮಾತಾಡಿದ್ದೆವು. ನಂತರ ನನ್ನ ಹುಡುಗಿ ತೇಜಸ್ವಿಯವರ ಭಾರೀ ಅಭಿಮಾನಿಯೆಂದು ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ತೇಜಸ್ವಿಯವರ ಕೃತಿಗಳ ಮಾತು ಬಂದರೆ ನನ್ನಾಕೆಯ ಉತ್ಸಾಹ ಇಮ್ಮಡಿಯಾಗುತಿತ್ತು.

ಅವತ್ತು ನನ್ನ ಹುಡುಗಿ ದಾರಿಯಲ್ಲಿ ಹೋಗುವಾಗ, ಎದುರಿಗೆ ಸ್ಕೂಟರ್ ಸವಾರಿ ಮಾಡಿಕೊಂಡು ಬಿಳಿಗಡ್ಡದ ಅವಳ ನೆಚ್ಚಿನ ಸಾಹಿತಿ ಹೋದಾಗ ಅವಳಿಗೆ ಆದ ಸಂತೋಷದಲ್ಲೇ ನನ್ನ ಕೇಳಿದ್ದು ಯಾರನ್ನು ನೋಡಿದೆ ಹೇಳಿಯೆಂದು. ಆಮೇಲೆ ನಾನು 'ನೀನು ಯಾಕೇ ತೇಜಸ್ವಿಯವರನ್ನು ಒಮ್ಮೆ ಮಾತಾಡಿಸಿಕೊಂಡು ಬರಬಾರದು' ಎನ್ನುವ ಮೊದಲೇ ಅವಳು ಮೂಡಿಗೆರೆಯಲ್ಲಿ ಅವರ ಮನೆಯನ್ನು ಪತ್ತೆ ಮಾಡಿದ್ದಾಗಿತ್ತು.ಅವರ ಎಸ್ಟೇಟ್ ಇವರ ಕಾಲೇಜಿಂದ ತೀರಾ ಹತ್ತಿರದಲ್ಲಿ ಇದೆಯಂತೆ.

ಅದೊಂದು ದಿವಸ ಪೋನ್‍ನಲ್ಲಿ ನನ್ನ ಹುಡುಗಿ ಧ್ವನಿಯಲ್ಲಿ ಸಾರ್ಥಕ ಭಾವ. ಅವಳಿಗೆ ಎಷ್ಟು ಖುಷಿಯಾಗಿತ್ತೆಂದರೆ ಅವಳು ಮಾತಾಡ್ತಾನೇ ಇಲ್ಲ. ಮತ್ತೆ ಕೇಳಿದಳು 'ಇವತ್ತು ಗೊತ್ತಾ ಎನಾಯ್ತು, ಊಹಿಸಿ ನೋಡೋಣ' ? ನನಗೆ ತಕ್ಷಣವೇ ಹೊಳೆದಿದ್ದು 'ತೇಜಸ್ವಿಯವರು ಸಿಕ್ಕಿದಿರಾ?' ಅದಕ್ಕೆ ಅವಳು 'ಅಷ್ಟೆ ಅಲ್ಲಾ..ನಾನು ಅವರ ಮನೆಗೆ ಹೋಗಿದ್ದೆ !'

ಆಗಿದ್ದೆನೆಂದರೆ ನನ್ನ ಹುಡುಗಿಯ ಸ್ನೇಹಿತೆಯ ಪ್ರೊಪೆಸರ್‍ರೊಬ್ಬರು ತೇಜಸ್ವಿಯವರು ಒಳ್ಳೆ ಗೆಳಯರು. ಅವರ ಪರಿಚಯದ ಮೇಲೆ ನನ್ನ ಹುಡುಗಿ ಮತ್ತು ಅವಳ ಸ್ನೇಹಿತೆ ತೇಜಸ್ವಿಯವರ ಮನೆಗೆ ಹೋಗಿದ್ದಾರೆ. ಇವರಿಗೋ ಮನದಲ್ಲಿ ಅಳಕು, ಗೊತ್ತು ಪರಿಚಯವಿಲ್ಲದೇ ತೇಜಸ್ವಿಯವರನ್ನು ಭೇಟಿಮಾಡಲು ಹೊರಟಿದ್ದೇವೆ ಅಂತಾ.ಅದರ ಜೊತೆಗೆ ತೇಜಸ್ವಿಯವರ ಭಯಂಕರ ಮೂಡಿನ ಬಗ್ಗೆ ಎಲ್ಲೋ ಓದಿದ-ಕೇಳಿದ ನೆನಪು.

ಇವರನ್ನು ನೋಡಿದ ತೇಜಸ್ವಿ ಮತ್ತು ಅವರ ಪತ್ನಿ ರಾಜೇಶ್ವರಿಯವರು ತುಂಬಾ ಪ್ರೀತಿಯಿಂದ ಕರೆದು ಮಾತಾಡಿಸಿದ್ದಾರೆ. ನನ್ನ ಹುಡುಗಿಯನ್ನು ನೋಡಿ 'ನೀನು ಅಲ್ಲಿ ಕಾಲೇಜ್‍ನಲ್ಲಿ ಟ್ರೈನಿಂಗ್ ಕೊಡ್ತಾ ಇದೀಯಾ, ಚಿಕ್ಕ ಹುಡುಗಿ ತರ ಇದಿಯಾ' ಅಂತಾ ತೇಜಸ್ವಿ ತಮಾಷೆ ಮಾಡಿದರಂತೆ. ನಂತರ ನನ್ನಾಕೆ ಅದು ಇದು ಮಾತಾಡುತ್ತ ತೇಜಸ್ವಿಯವರ ಸ್ಕೂಟರ್ ಬಗ್ಗೆ ಕೇಳಿದ್ದಾಳೆ. ಮೂಡಿಗೆರೆಯಲ್ಲೇ ಪ್ರಖ್ಯಾತವಾದ, ೨೦ಕ್ಕೂ ವರ್ಷ ಹಳೆಯದಾದ ಅವರ ಆ ಸ್ಕೂಟರ್ ಇತಿಹಾಸ ಸಿಕ್ಕಿದೆ !

ನಂತರ ಅವರು ತೆಗೆದ ಕಾಡು-ಹಕ್ಕಿಗಳ ಪೋಟೋ ನೋಡಿದ್ದಾಳೆ. ನನ್ನ ಹುಡುಗಿ ಅವರ ಪ್ರಕಾಶನದಲ್ಲಿ ಅವರ ಕೆಲವು ಪುಸ್ತಕ ತೆಗೆದುಕೊಂಡಿದ್ದಾಳೆ. ಅವಳ ಹತ್ತಿರ 'ಅಣ್ಣನ ನೆನಪು' ಇದ್ದರೂ ತೇಜಸ್ವಿಯವರ ಆಟೋಗ್ರಾಪ್‍ಗಾಗಿ ಮತ್ತೆ ಆ ಪುಸ್ತಕ ತೆಗೊಂಡು ಅವರ ಹತ್ತಿರ ಆಟೋಗ್ರಾಪ್ ಕೇಳಿದ್ದಾಳೆ. ಅವರು ಸಂತೋಷದಿಂದ ಅದಕ್ಕೆ ಸಹಿ ಹಾಕಿಕೊಟ್ಟಿದ್ದಾರೆ. ನಂತರ ಅವರ ಮನೆಯ ಸುತ್ತವಿರುವ ವಿವಿಧ ಹಕ್ಕಿಗಳ ವಿವರಣೆ ಸಿಕ್ಕಿದೆ.ನನ್ನ ಹುಡುಗಿ ಅವರ ಪತ್ನಿ ರಾಜೇಶ್ವರಿಯವರೊಂದಿಗೆ ತೇಜಸ್ವಿಯವರ ಜೊತೆ ಜೀವನದ ಅನುಭವಗಳ ಬಗ್ಗೆ ಹರಟಿದ್ದಾಳೆ. ಅವರ ತೋಟದಲ್ಲಿ ಯಾವುದೋ ಗಿಡದ ರುಟಿಂಗ್ ಮಾಡಿಕೊಟ್ಟಿದ್ದಾಳೆ.

ಕೊನೆಗೆ ಅಳುಕುತ್ತಲೇ ಕ್ಯಾಮರ ಹೊರತೆಗೆದು ತೇಜಸ್ವಿಯವರಿಗೆ ಅವರ ಜೊತೆ ಪೋಟೋ ತೆಗೆಸಿಕೊಳ್ಳಬೇಕೆಂದಿದ್ದಾಳೆ.ಅವರು ಸಂತೋಷವಾಗಿ ಒಪ್ಪಿಕೊಂಡು ಪೋಟೋಗೆ ಪೋಸ್ ಕೊಟ್ಟು ಇನ್ನೇನೂ ಕ್ಲಿಕಿಸಬೇಕೆಂದಾಗ ಕ್ಯಾಮರದ ಬ್ಯಾಟರಿ ಖಾಲಿಯಾಗಬೇಕೇ? ಆಗಿದ್ದೆನೆಂದರೆ ನನ್ನ ಹುಡುಗಿ-ಅವಳ ಸ್ನೇಹಿತೆ ತೇಜಸ್ವಿಯವರ ಎಸ್ಟೇಟ್-ಅವರ್‍ಅ ಪತ್ನಿ ಜೊತೆ ಪೋಟೋ ಕ್ಲಿಕಿಸುವ ಭರದಲ್ಲಿ ಬ್ಯಾಟರಿ ಸ್ಥಿತಿ ಮರತೇ ಬಿಟ್ಟಿದ್ದಾರೆ.ತೇಜಸ್ವಿಯವರ ಹತ್ತಿರ ಪೋಟೋ ತೆಗೆಸಿಕೊಳ್ಳುವಾಗ ಬ್ಯಾಟರಿ ಕೈಕೊಟ್ಟಿದೆ.

ತೇಜಸ್ವಿಯವರು ತಕ್ಷಣವೇ ತಮ್ಮ ಕ್ಯಾಮರ ಹೊರತೆಗೆದು ಅದರಲ್ಲಿ ಪೋಟೋ ತೆಗೆದುಕೊಳ್ಳುವಂತೆ ಹೇಳಿದರಂತೆ.ಅವರ 'ಉದ್ದದ' ಹೈ-ಟೆಕ್ ಕ್ಯಾಮರ ಹೇಗೆ ಉಪಯೋಗಿಸುವುದು ಅಂತಾನೂ ಹೇಳಿಕೊಟ್ಟು, ನಂತರ ಇವರ ಜೊತೆ ಪೋಟೋ ತೆಗೆಸಿಕೊಂಡಿದ್ದಾರೆ.ನನ್ನ ಹುಡುಗಿ-ಅವಳ ಸ್ನೇಹಿತೆ ಅಲ್ಲಿಂದ ಮರಳುವಾಗ ತೇಜಸ್ವಿ ದಂಪತಿಗಳಿಂದ 'ಆವಾಗವಾಗ ಬಂದು ಹೋಗ್ತಾ ಇರೀ' ಅಂತಾ ಕೇಳಿ ನನ್ನ ಹುಡುಗಿಗೆ ಸ್ವರ್ಗಕ್ಕೆ ಮೂರೇ ಗೇಣು.

ವಾಪಾಸ್ ಬರುವಾಗ ಅವಳ ಸ್ನೇಹಿತೆ 'ಎನೇ ಮಾರಾಯ್ತಿ, ತೇಜಸ್ವಿಯವರನ್ನು ಹಾಗೇ ನೋಡುತ್ತಾ ಇದ್ದೆ..ನಿನ್ನ ಹುಡುಗನ್ನು ಯಾವಾಗಲಾದರೂ ಹಾಗೇ ನೋಡಿದ್ದೋ ಇಲ್ವೋ !' ಅಂತಾ ಛೇಡಿಸಿದಳಂತೆ.

ಅವತ್ತು ಪೋನ್‍ನಲ್ಲಿ ತೇಜಸ್ವಿ ಬಿಟ್ಟರೆ ಬೇರೆ ಎನೂ ಮಾತೇ ಇಲ್ಲಾ. ಮೊದಲೇ ಅವರ ಅಭಿಮಾನಿಯಾಗಿದ್ದ ನನ್ನಾಕೆ ಅವತ್ತು ಸಿಕ್ಕಾಪಟ್ಟೆ ಖುಷಿಯಾಗಿದ್ದಳು.

ಅವಳ ಮಾತುಗಳಲ್ಲೇ ಕೇಳಿ ತೇಜಸ್ವಿ ಹೇಗೆ ಅನಿಸಿದರು ಅಂತಾ..

"ಅವರು ಜನರೊಂದಿಗೆ ಸರಿಯಾಗಿ ಮಾತಾಡೊಲ್ಲಾ-ಬೆರೆಯೊಲ್ಲಾ ಅಂತಾ ಕೇಳಿದ್ದೆ-ಓದಿದ್ದೆ..ಅವರು ಇಷ್ಟು ಆತ್ಮೀಯವಾಗಿ ಮಾತಾಡಿಸಿದರು..ಅವರದೇ ಆದ ಒಂದು ಸುಂದರ ಲೋಕ ಕಟ್ಟಿಕೊಂಡಿದ್ದಾರೆ ಅವರು ಅಲ್ಲಿ. ಅವರು ಎಷ್ಟು ಚೆನ್ನಾಗಿ ಪೋಟೋ ತೆಗೆದಿದ್ದಾರೆ ಗೊತ್ತಾ.ಅವರ ಎಸ್ಟೇಟ್‍ ಸುತ್ತ ಎಷ್ಟೊಂದು ವಿಧವಿಧದ ಹಕ್ಕಿಗಳಿವೆ. ಅವರು ಅವುಗಳ ಪೋಟೋ ಹೇಗೆ ತೆಗೆದಿದಾರೆ ಗೊತ್ತಾ...ಅಬ್ಬಾ..ಅವರಿಗೆ ಕಂಪ್ಯೂಟರ್ ಬಗ್ಗೆ ಎಷ್ಟೆಲ್ಲಾ ಗೊತ್ತು ! ಅದೇನೋ ಕಂಪ್ಯೂಟರ್‌ನಲ್ಲಿ ಕನ್ನಡ ಅಳವಡಿಕೆ ಮಾಡ್ತಾ ಇದ್ದರು.ಅವರು ಇಷ್ಟು ವಯಸ್ಸಲ್ಲಿ ಎಷ್ಟು ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.ನಿಮಗೆ ಗೊತ್ತಾ.. ರಾಜೇಶ್ವರಿ ಅಂಟಿದು-ತೇಜಸ್ವಿಯವರದು ಲವ್ ಮ್ಯಾರೇಜ್... ಮುಂದಿನ ಸಲ ಹೋದಾಗ ಅವರ ಕ್ಯಾಮರದಲ್ಲಿರುವ ಅವರ ಜೊತೆ ತೆಗೆಸಿಕೊಂಡ ಪೋಟೋಗಳನ್ನು ತೆಗೆದುಕೊಂಡು,ಹಾಗೇ ಬರುವಾಗ ತೇಜಸ್ವಿಯವರಿಗೆ ಬಲು ಇಷ್ಟದ ಅಣಬೆಗಳನ್ನು ತರ್ತೀನಿ ಅಂತಾ ಹೇಳಿಬಂದೆ"

ಅಮೇಲೆ ಮತ್ತೆ ಯಾವಾಗಲೋ ಮಾತಾಡುವಾಗ ನಾನು ಕೇಳಿದೆ 'ತೇಜಸ್ವಿಯವರನ್ನು-ರಾಜೇಶ್ವರಿ ಅಂಟಿನಾ ನಮ್ಮ ಮದುವೆಗೆ ಕರೆಯೋಣವಾ'. ಅದಕ್ಕೆ ನನ್ನ ಹುಡುಗಿ 'ಕರಿಬಹುದು, ಆದರೆ ತೇಜಸ್ವಿಯವರು ಬಹುಷಃ ಬರೋ ಸಾಧ್ಯತೆ ತುಂಬಾ ಕಡಿಮೆ ರೀ..ಅವರು ಇಂತಹ ಕಾರ್ಯಕ್ರಮಗಳಿಗೆ ಹೋಗೋದು ಕಡಿಮೆಯಂತೆ' ಅಂದಿದ್ದಳು.

ಇಷ್ಟು ಆಗಿ ಕೆಲವು ದಿನಕ್ಕೆ ಇವಳ ಕಾಲೇಜ್‍ನಲ್ಲಿ 'ಕೀಟ ಪ್ರದರ್ಶನ'ಕ್ಕೆ ತೇಜಸ್ವಿ ಬಂದಿದ್ದರಂತೆ.ಪ್ರದರ್ಶನದ ನಡುವೆ ನನ್ನ ಹುಡುಗಿ ಎದುರಿಗೆ ಸಿಕ್ಕಾಗ 'ಯಾಕೋ ಮನೆ ಕಡೆ ಬಂದೇ ಇಲ್ಲಾ.ಅವತ್ತು ನೀನು ಮಾಡಿದ ರುಟಿಂಗ್ ಸರಿಯಾಗಿ ಮಾಡಿರಲಿಲ್ಲ ಅನಿಸುತ್ತೆ' ಅಂದರಂತೆ. ತೇಜಸ್ವಿ ಇವಳ ಜೊತೆ ಹೀಗೆ ಆತ್ಮೀಯವಾಗಿ ಮಾತಾಡೋದು ಕೇಳಿ ಅಲ್ಲಿದ್ದವರೆಲ್ಲಾ ಎಷ್ಟು ವರ್ಷದ ಪರಿಚಯವೋ ಅಂದುಕೊಂಡಿರಬಹುದು.

ಇನ್ನೊಂದು ಸಲ ಪೋನ್‍ನಲ್ಲಿ ನನ್ನಾಕೆಗೆ ಕೇಳಿದೆ 'ನಾನು ಅಲ್ಲಿಗೆ ಬಂದಾಗ ತೇಜಸ್ವಿಯವರನ್ನು ಭೇಟಿಮಾಡಿಸೇ'.ಅದಕ್ಕೆ 'ಆಯ್ತು ನೋಡೋಣಾ' ಅಂತಾ ನನ್ನ ಹುಡುಗಿಯ ಬಿಂಕ !

ಮೊನ್ನೆ ದಿನ ಮಾತಾಡಬೇಕಾದರೆ ಯಾಕೋ ಮಾತು ತೇಜಸ್ವಿಯವರ ಬಗ್ಗೆ ತಿರುಗಿತು.ನಾನು ನನ್ನ ಹುಡುಗಿಗೆ ತೇಜಸ್ಚಿಯವರ ಮನೆಗೆ ಮತ್ತೆ ಹೋಗಿಬಂದೆಯಾ ಅಂದೆ.ಅದಕ್ಕೆ ಅವಳು 'ಇಲ್ಲಾರೀ, ಅವರ ಇಷ್ಟದ ಅಣಬೆ ಪ್ಯಾಕ್ ಮಾಡಿಕೊಂಡಿದ್ದೆ ಎರಡು ಸಲನೂ ಎನೋ ಕೆಲಸದಿಂದ ಹೋಗೋಕೇ ಆಗಲಿಲ್ಲ. ಮುಂದಿನವಾರ ಅಣಬೆ ತಗೊಂಡು ಅವರನ್ನು ನೋಡಿಕೊಂಡು ಬರ್ತಿನಿ' ಅಂದಿದ್ದಳು.ನಾನು ಅವಾಗ 'ನಾನು ಬಂದಾಗ, ನಾವಿಬ್ಬರು ಹೋಗಿ ನಿಮ್ಮ 'ಅಂಕಲ್' ಭೇಟಿಯಾಗೋಣ' ಅಂದಿದ್ದೆ.

ಈಗ ನೋಡಿದರೆ ಅಣಬೆ ತಗೊಂಡು ಹೋಗಿ ಕೊಟ್ಟರೆ...ಇಷ್ಟಪಡೋ ಅವರೇ ಇಲ್ಲಾ...

ಅವರ ಸಾವಿನ ಸುದ್ದಿ ಕೇಳಿದ ನಂತರ ನನ್ನ ಹುಡುಗಿಗೆ ಪೋನ್ ಮಾಡಿದಾಗ ಅವಳ ಧ್ವನಿಯಲ್ಲಿ ಇನ್ನೂ ಶಾಕ್ ಇತ್ತು,ಹಾಗೇ ಇನ್ನೊಮ್ಮೆ ನೋಡಲ್ಲಿಕ್ಕಾಗಲಿಲ್ಲ ಎನ್ನುವ ಕೊರಗು. ಅವರ ಇಷ್ಟದ ಅಣಬೆ ಅವರಿಗೆ ಕೊನೆಗೂ ತಗೊಂಡು ಹೋಗಿ ಕೊಡಲಿಲ್ಲ ಎನ್ನೋ ಕೊರಗು. ಬಹುಷಃ ಅದು ಅವಳಿಗೆ ತುಂಬಾ ದಿನ ಕಾಡುತ್ತೆ..

ಸುದ್ದಿ ಕೇಳಿದ ತಕ್ಷಣ ಅವರ ಮನೆಗೆ ಹತ್ತಿರವೇ ಇರುವ ಕಾಲೇಜ್ ಕ್ಯಾಂಪಸ್‍ನಿಂದ ಇವರೆಲ್ಲಾ ಅಲ್ಲಿಗೆ ಧಾವಿಸಿಹೋದರಂತೆ.ನನ್ನ ಹುಡುಗಿ ತೇಜಸ್ವಿಯವರಿಗೆ ಹೇಳಿದಂತೆ ಮತ್ತೆ ಅವರ ಮನೆಗೆ ಹೋಗಿದ್ದಾಳೆ..

ಆದರೆ ರುಟಿಂಗ್ ಬಗ್ಗೆ, ಪಕ್ಷಿಗಳ ಬಗ್ಗೆ, ಗಿಡಗಳ ಬಗ್ಗೆ ಹೇಳೋಕೆ ಅಲ್ಲಿ ಅವಳ 'ಅಂಕಲ್' ಈಗ ಅಲ್ಲಿರಲಿಲ್ಲ..

ಅಲ್ಲಿ ಇದದ್ದು ಕೇವಲ 'ನಿರುತ್ತರ' ..

Sunday, April 01, 2007

ಮಳೆ

ಆಕಾಶದಿ ತೇಲಿ ಬಂದಿವೆ
ಮಳೆ ಹೊತ್ತ ಮೋಡಗಳು
ಮೋಡ ಸುರಿಸೋ ಹನಿಗಳ
ಚುಂಬನಕೆ ತವಕದಿ
ಕಾದಿರುವಳು ಭುವಿ

ಇಲ್ಲಿ ಕಿಟಕಿಯಲಿ ನೋಡುತಾ
ಕಾಯುತಿಹೆವು ನಾವಿಬ್ಬರು
ಆಕಾಶದಿಂದ ಧರೆಗಿಳಿವ
ಮಳೆ ಹನಿಗಳು
ಭುವಿಯನು ಸ್ಪರ್ಶಿಸುವ ಕ್ಷಣಕೆ

ಕೊನೆಗೂ ಆಕಾಶನಿಗೆ
ಭುವಿಯನು ಕಾಡಿಸಿದ್ದು ಸಾಕೇನಿಸಿ
ಬಂದಿರುವನು ಭುವಿಯ ಸೇರಲು
ನಾವಿಬ್ಬರೂ ಓಡಿದ್ದೇವೆ
ಮನೆಯಿಂದ ಆ ಮಳೆಯಲಿ ನೆನೆಯಲು

ಆಕಾಶನಿಗೆ ಭುವಿಯನು ಎಷ್ಟು
ಮುತ್ತಿಟ್ಟರು ತೀರದ ದಾಹ
ಕೈಯಲಿ ಕೈ ಹಿಡಿದು
ನಡೆದಿಹೆವು ಮಳೆಯಲಿ
ನೆನೆದಿಹೆವು ನಮ್ಮ ಮೊದಲ ಮಳೆಯಲಿ

ನೆನೆದು ನಡೆದು ನಲಿದು
ಕುಣಿದು ಈಗ ತೆಕ್ಕೆಯಲಿ
ಸೇರಿವೆ ಆಕಾಶ ಭುವಿ
ನಡುಗುವ ಮೈಗಳಿಗೆ
ಬಿಸಿ ಅಪ್ಪುಗೆ ಹೊದಿಕೆ

ಮಳೆ ನಿಂತಾ ಹಾಗಿದೆ
ನಾವು ನಡೆದಿಹೆವು ಮನೆಯೊಳಗೆ
ಒದ್ದೆ ಬಟ್ಟೆ ಬದಲಿನಿ
ಬೆಚ್ಚನೆ ವಸ್ತ್ರ ಧರಿಸಿ
ಮತ್ತೆ ಕುಳಿತಿಹೆವು ಕಿಟಕಿಯಲಿ

ಹೊರಗೆ ಮಳೆ ನಿಂತರೂ
ಮನದಲಿ ದಟ್ಟವಾಗುತಿದೆ
ಬಯಕೆಯ ಮೋಡಗಳು
ಕಣ್ಣಿನಲಿ ಮಿಂಚುಗಳು
ಎದೆಯ ಡವಡವ ಗುಡುಗು

ಸ್ಪರ್ಶವೊಂದು ಸಾಕಿತ್ತು
ಬಯಕೆ ಮಳೆ ಸುರಿಯಲು
ಸುರಿಯುತಿದೆ ಮುಸಲಧಾರೆಯಾಗಿ
ಆ ಮಳೆಯಲೂ ತಾಪವೇರಿ
ಅರಳಿವೆ ಮೈ-ಮನಗಳು

ಒಳಗೆ ಸತತ ಸಾಗಿದೆ
ಒಲವು ಸುಖದ ನೃತ್ಯ
ಮತ್ತೆ ತೊಯ್ದು ಹೋಗಿದ್ದೆವೆ
ಹೊರಗೆ ಮತ್ತೆ ಶುರುವಾಗಿದೆ
ಮಳೆ-ಭುವಿಯ ನೃತ್ಯ

Tuesday, March 20, 2007

ಸ್ವೀಟ್ ಡ್ರೀಮ್ಸ್ ಅಂದರೇನು?

ನೀನು ನನಗೆ ಕಳಿಸಿದ್ದ ಮೊದಲ ಇ-ಮೇಲ್‍ ನೋಡ್ತಾ ಇದ್ದೆ.

ಅದರಲ್ಲಿ ಇದ್ದ ಆ ಕೊನೆ ಸಾಲು 'ಸ್ವೀಟ್ ಡ್ರೀಮ್ಸ್ ಅಂದ್ರೇನು?' ನೋಡುತ್ತಿದ್ದಂತೆ ನನ್ನ ಮುಖದ ಮೇಲೆ ಒಂದು ನಗೆ ಮೋಡ ಹಾಗೇ ತೇಲಿಹೋಯಿತು. ಅದು ಬೇರೆ 'ಫಾರ್ ಎಕ್ಸೆಂಪಲ್' ಅಂತಾ ಉದಾಹರಣೆ ಕೇಳಿದ್ದೆ. ನೀನು ಸುಮ್ಮನೆ ಕೀಟಲೆ ಮಾಡಿದ್ದ ಅಥವಾ ನಿಜಕ್ಕೂ ಹಂಗದೆರೇನು ಅಂತಾ ಕೇಳ್ತಾ ಇದ್ದೋ?

ಹೌದಲ್ಲವಾ..ಕನಸುಗಳು ಕಣೋದು ಇರಲಿ..ಒಬ್ಬರಿಗೆ ಇನ್ನೊಬ್ಬರ ಬಗ್ಗೆ ಗೊತ್ತಿದ್ದಾರೂ ಎನು? ಇಬ್ಬರಲ್ಲಿ ಇದ್ದ ಒಂದೇ ಸಮಾನತೆ ಅಂದ್ರೆ..ಇಬ್ಬರೂ ಅಜ್‍ನಬಿಗಳೇ ! ಆದಾದ ನಂತರ ಎನೆಲ್ಲಾ ಆಯಿತು..

ಎಕ್ ಅಜ್‍ನಬಿ ಹಸೀನಾಸೇ ಹ್ಯೂ ಮುಲಾಕಾತ್ ಹೋಗಯ
ಫಿರ್ ಕ್ಯಾ ಹುವಾ ಏ ನಾ ಪೂಚೋ ಕುಚ್ ಐಸೆ ಬಾತ್ ಹೋಗಯ

ಅಜ್‍ನಬಿಗಳಾಗಿದ್ದ ನಾವು ಅದಾವುದೋ ಕ್ಷಣದಲ್ಲಿ ಒಂದು ಮಧುರ ಸಂಬಂಧದಲ್ಲಿ ಬೆಸೆಯಲ್ಪಟ್ಟಿದ್ದೆವು. ನಮ್ಮ ನಡುವಿದ್ದ ಸಂಬಂಧಕ್ಕೊಂದು ಹೆಸರಿತ್ತು, ಮನೆಯವರ ಆರ್ಶಿವಾದವಿತ್ತು.ಆಗಬೇಕಾಗಿದ್ದು ನನ್ನ-ನಿನ್ನ ಹೃದಯದ ಮಿಲನ..

ದಿನಗಳು ಹೇಗೆ ಹೋದವಲ್ಲವಾ...
ಮುಂಜಾನೆಯ ಚುಮುಚುಮು ಮಂದ ಬೆಳಕಿನಂತೆ ಆರಂಭವಾದ ನಮ್ಮ ನಡುವಿನ ಸಂಬಂಧ, ನೋಡುನೋಡುತ್ತಲೇ ಬೆಳ್ಳನೇ ಬೆಳಕಾಗಿ ಎಲ್ಲೆಡೇ ಹರಡಿ, ಆ ಬೆಳಕಿನಲ್ಲಿ 'ನಾನು-ನೀನು' ಅನ್ನೋದು ದೂರಾಗಿತ್ತು.ಅದು ನನ್ನ ಜೀವನ, ಇದು ನಿನ್ನ ಜೀವನ ಅಂತಿದ್ದ ಎರಡು ಬೇರೆ ಲೋಕಗಳು ಮಾಯವಾಗಿ, ಅಲ್ಲಿ ನಗುತ್ತಾ ನಿಂತಿತ್ತು 'ನಮ್ಮಿಬ್ಬರ' ಜೀವನ. ಬಾಳಿಗೊಂದು ಸಂಬಂಧ, ಆ ಸಂಬಂಧಕ್ಕೊಂದು ಅರ್ಥ ಬರತೊಡಗಿತ್ತು.

ಆ ಸಂಬಂಧ ತಳಹದಿಯ ಮೇಲೆ ನಿಧಾನವಾಗಿ ನಮ್ಮ ಪ್ರೀತಿಯ ಸೌಧ ಬೆಳಿತು ಅಲ್ವಾ..

ಇಬ್ಬರು ಅಜ್‍ನಬಿಗಳ ನಡುವೆ ಅದು ಯಾವಾಗ ಚಿಗುರಿತು ಆ ಪ್ರೀತಿ ? ಅದು ಯಾವಾಗ ವಿಶ್ವಾಸ ಮೂಡಿದ್ದು ಹೃದಯಗಳಲ್ಲಿ? ಕಣ್ಮುಂದೆ ಮೊಳಕೆಯೊಡೆದ ನಮ್ಮ ಮಧುರ ಸಂಬಂಧ ಕೆಲವೇ ದಿನಗಳಲ್ಲಿ ಬ್ಯಾಂಬೂ ಗಳದಂತೆ ಬಹುಬೇಗನೆ ಎತ್ತರಕ್ಕೆ ಬೆಳಯಿತಲ್ಲವಾ..ಆಮೇಲೆ ನಾವಿಬ್ಬರು ಅ ಸಂಬಂಧದ ಚೌಕಟ್ಟಿನಲ್ಲಿ ನಮ್ಮದೇ ಆದ 'ಸುಂದರ ಲೋಕ'ವೊಂದನ್ನು ಸೃಷ್ಟಿಸಿಕೊಂಡೆವಲ್ಲವಾ.

ಅಲ್ಲಿ ಏನೇಲ್ಲಾ ಇದೆ..
ಆಸರೆ, ಭರವಸೆ, ಕನಸು, ನಿರ್‍ಈಕ್ಷೆ, ಪ್ರೀತಿಯ ಸೆಳೆತ, ತುಂಟತನದ ಸೊಗಸು, ವಿರಹದ ವೇದನೆ..ಸಾಂತ್ವನಕ್ಕೆ ಹೆಗಲು, ಬೆಚ್ಚನೆ ಅಪ್ಪುಗೆ, ಮುತ್ತಿನಹಾರ, ಎಲ್ಲಾ ಮರೆತು ವಿಶ್ರಮಿಸುವದಕ್ಕೆ ಎದೆ ಎಂಬ ದಿಂಬು..

ಆದರೆ ಕೆಲವೊಮ್ಮೆ ಈ ಸುಂದರಲೋಕದಲ್ಲಿ ನಮ್ಮ ಸ್ಟುಪಿಡ್‍ತನದಿಂದ ಇನ್ನೊಬ್ಬರ ಮನಕ್ಕೆ ನೋವುಂಟು ಆಗುತ್ತೆ ಅಲ್ವಾ, ಸುಮ್ಮನೆ ಬೇಡದ ವಿಚಾರಗಳು ಬರುತ್ತೆ ಅಲ್ವಾ.ನಮ್ಮಿಬ್ಬರಲ್ಲಿ ಯಾರಿಗೆ ನೋವಾದರೂ ಅದು ಇನ್ನೊಬ್ಬರಿಗೆ ನೋವು ಉಂಟು ಮಾಡೇ ಮಾಡುತ್ತೆ.ಎನೂ ಕೆಲಸಕ್ಕೆ ಬಾರದ ವಿಚಾರಗಳಿಂದ ನಮ್ಮ ಸುಂದರಲೋಕ ಹಾಳು ಮಾಡಿಕೊಳ್ಳದೋ ಬೇಡಾ ಕಣೇ. ನಮ್ಮಬ್ಬಿರಲ್ಲಿ ಇನ್ನೊಬ್ಬರ ಬಗ್ಗೆ ಎಷ್ಟು ಪ್ರೀತಿ-ವಿಶ್ವಾಸ ಇದೆ ಅಂತಾ ನಮಗೆ ಚೆನ್ನಾಗಿ ಗೊತ್ತಿದೆ.ಯಾವುದೋ ಒಂದು ಒರಟು ಮಾತು-ಇನ್ನಾವುದೋ ಒಂದು ಹುಚ್ಚು ವಿಚಾರ ಅ ಸುಂದರ ಸಂಬಂಧದಲ್ಲಿ ಪ್ರಶ್ನೆಗಳನ್ನು-ಸಂಶಯಗಳನ್ನು ಹುಟ್ಟುಹಾಕುವುದು ಬೇಡ.

ಆದರೆ ಒಂದು ವಿಷಯ ಗಮನಿಸಿದಿಯಾ?
ಈ ತರದ ಸ್ಟುಪಿಡ್ ವಿರಸದ ನಂತರ, ನಾವು ಒಬ್ಬರನ್ನೊಬ್ಬರನ್ನು ಇನ್ನೂ ಚೆನ್ನಾಗಿ ಅರ್ಥಮಾಡಿಕೊಂಡಿದ್ದೇವೆ ಅನಿಸುತ್ತೆ.ನಾವು ಹಿಂದಿಗಿಂತ ಇನ್ನೂ ಹತ್ತಿರಕ್ಕೆ ಬಂದಿದೀವಿ ಅನಿಸುತ್ತೆ.ಇರಲಿ ವಿರಸದ ವಿಷಯ. ನಾವು ಅದನ್ನು ನಮ್ಮ ಮನಗಳಲ್ಲಿ ಬಿಟ್ಟಕೊಳ್ಳೋದೇ ಬೇಡ.

ನಮ್ಮ ಈ ಸುಂದರ ಲೋಕಕ್ಕೆ ತಳಕುಹಾಕೊಂಡಿರೋದೇ ಆ ಸುಂದರ ಸ್ವಪ್ನಗಳು...
ಸುಮ್ಮನೆ ನಿನ್ನ ಕೈ ಹಿಡಕೊಂಡಿರೋದು, ಕೈ ಹಿಡಕೊಂಡು ಹಾಗೇ ತಿರುಗಾಡೋದು..ನಿನ್ನ ಮಡಿಲಲ್ಲಿ ತಲೆಯಿಟ್ಟು ಮಲಗುವುದು, ನೀನು ನನ್ನ ತಲೆಗೂದಲಲ್ಲಿ ಬೆರಳಾಡಿಸುತ್ತಿದಂತೆ ಹಾಗೇ ನಿದ್ದೆಗೆ ಜಾರುವುದು, ನಿನಗೆ ನಿದ್ದೆ ಬರದಿದ್ದರೆ ಎದೆಗೆ ಒರಗಿಸಿಕೊಂಡು ಬಿಸಿ ಅಪ್ಪುಗೆಯಲ್ಲಿ ಮಲಗಿಸಿಕೊಳ್ಳುವುದು,ಬೆಳಗೆದ್ದು ಕಣ್ಣು ಬಿಟ್ಟಾಗ ನಿನ್ನ ಮುದ್ದು ಮುಖ ನೋಡುವುದು, ನಂತರ ಈಡೀ ಹಗಲು ನಿನ್ನ ಬಾಹುಗಳಲ್ಲಿ ಕಳೆಯುವುದು, ಸಂಜೆ ನಿನ್ನ ತುಟಿಗೆ ಹಾಲ್ಜೇನಾಗುವುದು, ರಾತ್ರಿಗೆ ನಿನ್ನ ಒಡಲಲ್ಲಿ ಕರಗಿ ಪ್ರೀತಿಯ ಧಾರೆಯಾಗುವುದು..

ಹೀಗೆ ಅದೊಂದು ಸ್ವಪ್ನಗಳ ಮೂಟೆಯೇ ಇದೆ..

ಎಕ್ ದಿನ್ ಆಪ್ ಹಮ್ ಕೋ ಮಿಲ್‍ಜಾಯೇಗಾ
ದೇಖತೇಯೀ ಫೂಲ್ ಕಿಲ್ ಜಾಯೇಗಾ

ಸ್ವೀಟ್ ಡ್ರೀಮ್ಸ್ ಗಳ ಬಗ್ಗೆ ಈಗ ನೀನು ತುಂಬಾ ಚೆನ್ನಾಗಿ ಅರ್ಥಮಾಡಿಕೊಂಡಿದ್ದೀಯಾ ಅಂತಾ ನನಗೆ ಗೊತ್ತು.

ಈಗ ಹೇಳು ನನ್ನ ಒಲವೇ, ಸ್ವೀಟ್ ಡ್ರೀಮ್ಸ್ ಅಂದರೇನು ಅಂತಾ ..

************************************************
ವಿಕ್ರಾಂತ ಕರ್ನಾಟಕದ ಯುಗಾದಿ ವಿಶೇಷಾಂಕದಲ್ಲಿ ಈ ಲೇಖನ ಪ್ರಕಟಿಸಿದ್ದಕ್ಕೆ ವಿಕ್ರಾಂತದ ಬಳಗಕ್ಕೆ ನನ್ನ ಧನ್ಯವಾದಗಳು
************************************************

Wednesday, March 14, 2007

ಯಾಕೋ ಗೊತ್ತಿಲ್ಲಾ..

ಯಾಕೋ ಗೊತ್ತಿಲ್ಲಾ..
ಮನಸು ಹಟ ಹಿಡಿದಿದೆ
ನಿನ್ನ ನೋಡಬೇಕೆಂದು
ಯಾಕೊ ಗೊತ್ತಿಲ್ಲಾ
ಮನಸು ಮಾತು ಕೇಳುತ್ತಿಲ್ಲ
ನಿನ್ನ ಧ್ವನಿ ಕೇಳಬೇಕೆಂದು
ಯಾಕೋ ಗೊತ್ತಿಲ್ಲಾ..
ಮನಸು ಹಟ ಹಿಡಿದಿದೆ
ನಿನ್ನ ಮುದ್ದಿಸಬೇಕೆಂದು
ಯಾಕೋ ಗೊತ್ತಿಲ್ಲಾ
ಮನಸು ಮಾತು ಕೇಳುತ್ತಿಲ್ಲ
ಎದೆಗೆ ಒರಗಿ ಮಲಗಬೇಕೆಂದು

ನಿನ್ನ ಒಂದು ನೋಟ
ನಿನ್ನ ಒಂದು ಮಾತು
ನಿನ್ನ ಒಂದು ಮುತ್ತು
ನಿನ್ನ ಒಂದು ಅಪ್ಪುಗೆ
ಸಾಕು ಜೀವವೇ ಈ ಜೀವಕ್ಕೆ
ನಾನು ಜೀವಿಸೋಕೆ
ಎಂದಿದೆ ಮನಸು

ಎನು ಹೇಳಲಿ ಗೆಳತಿ
ಈ ಹುಚ್ಚು ಮನಕ್ಕೆ
ಹೇಗೆ ತಿಳಿಹೇಳಲಿ
ನಮ್ಮನ್ನು ದೂರವಿಟ್ಟಿರುವ
ಈ ಸಾಗರಗಳ ಬಗ್ಗೆ
ಹೇಗೆ ತಿಳಿಹೇಳಲಿ
ನಮ್ಮನ್ನು ದೂರವಿಟ್ಟಿರುವ
ಈ ಸಮಯದ ಸಂಕೋಲೆಯ ಬಗ್ಗೆ

ಮನಸು ಎಷ್ಟು ಹೇಳಿದರೂ
ಮತ್ತೆ ನಿನ್ನ ಹಂಬಲಿಸುತ್ತಿದೆ
ಮತ್ತೆ ನಿನ್ನ ನೆನಯುತಿದೆ
ಹೇಗೆ ರಮಿಸಲಿ ಗೆಳತಿ
ನನ್ನ ಕಾಡುವ ನಿನ್ನ ಹಂಬಲಿಸುವ
ಈ ಹುಚ್ಚು ಮನಕ್ಕೆ

Monday, March 05, 2007

ಅಲ್‍ಕಟ್ರಾಸ್

ನೀವು 'ದಿ ರಾಕ್' ಅನ್ನೋ ಸಿನಿಮಾ ನೋಡಿರಬಹುದು. ಸೀನ್ ಕಾನೇರಿ ಮತ್ತು ನಿಕೋಲಸ್ ಕೇಜ್ ಇರುವ ಈ ಸಿನಿಮಾ ಬಂದಿದ್ದು ೧೯೯೬ರಲ್ಲಿ.ಸ್ಯಾನ್ ಪ್ರಾನಿಸ್‍ಸ್ಕೋದ ಹತ್ತಿರವಿರುವ ದ್ವೀಪವೊಂದಕ್ಕೆ ಹೋದ ಪ್ರವಾಸಿಗರನ್ನು ಸೆರೆಯಾಳಾಗಿ ಮಾಡಿಕೊಂಡು, ಆ ದ್ವೀಪದಿಂದ ಸ್ಯಾನ್ ಪ್ರಾನಿಸ್‍ಸ್ಕೋದ ಮೇಲೆ ರಾಸಾಯನಿಕ ದಾಳಿಯ ಯೋಜನೆ ಬಗ್ಗೆ ಇರುವ ಕತೆ.ಇತ್ತೀಚಿಗೆ 'ಅಲ್‍ಕಟ್ರಾಸ್' ಅನ್ನೋ ಆ ದ್ವೀಪವನ್ನೂ, ಅಲ್ಲಿನ ಆ ಕುಖ್ಯಾತ ಸೆರಮನೆಯ ಪ್ರವಾಸ ಮಾಡಿದಾಗ ಮತ್ತೆ ನೆನಪಾಗಿದ್ದು ಆ ಸಿನಿಮಾ.

ಸ್ಯಾನ್ ಪ್ರಾನಿಸ್‍ಸ್ಕೋದ ಬೇ ಎರಿಯಾದಿಂದ ಜಿನಿಗುಡುತ್ತಿದ್ದ ಮಳೆ ಮತ್ತು ನಡುಗುವ ಚಳಿಯ ಜೊತೆ ದೋಣಿಯಲ್ಲಿ ಹೊರಟ ನಾವು ಆ ದ್ವೀಪವನ್ನು ೨೦-೨೫ ನಿಮಿಷದಲ್ಲಿ ಮುಟ್ಟಿದ್ದೆವು. ಸ್ಯಾನ್ ಪ್ರಾನಿಸ್‍ಸ್ಕೋದ ಬೇ ಮಧ್ಯೆ ಇರುವ ಆ ದ್ವೀಪ, ಅದರಲ್ಲಿ ಕೋಟೆಯಂತ ಕಟ್ಟಡ....ತೀರಾ ಸಾಮಾನ್ಯವಾಗಿ ಕಾಣುತಿತ್ತು, ಅದರ ಇತಿಹಾಸ ತಿಳಿಯುವವರೆಗೆ. ಅಲ್ಲಿ ಹೋಗುತ್ತಿರುವಂತೆ ಗೈಡ್ ಒಬ್ಬ ಪ್ರವಾಸಿಗರನ್ನು ಉದ್ದೇಶಿಸಿ ಮಾತಾಡಿದ.ನಂತರ ಅಲ್ಲಿಂದ ನಾವು 'ಅಲ್‍ಕಟ್ರಾಸ್' ಬಗ್ಗೆ ಡಿಸ್ಕವೇರಿ ಚಾನಲ್‍ರವರ ಕಿರುಚಿತ್ರ ವೀಕ್ಷಿಸಿ, ಆ ಕುಖ್ಯಾತ ಸೆರೆಮನೆಯ ಪ್ರವಾಸಕ್ಕೆ ತೆರಳಿದೆವು.ಮೊದಲು ರಕ್ಷಣಾ ತಾಣವಾಗಿದ್ದು ನಂತರ ಸೆರಮನೆಯಾಗಿ ಮಾರ್ಪಾಟ್ಟು, ಈಗ ರಾಷ್ಟ್ರೀಯ ಸ್ಮಾರಕವಾಗಿದೆ 'ಅಲ್‍ಕಟ್ರಾಸ್'. ಆ ಸೆರಮನೆ ಪ್ರವೇಶಿಸುತ್ತಿದ್ದಂತೆ ಹೆಡ್‍ಪೋನ್ ಜೊತೆ ಮೊಬೈಲ್‍ನಂತ ಸಾಧನವೊಂದು ಪ್ರವಾಸಿಗರಿಗೆ ಕೊಡಲಾಯಿತು. ಆ ಸಾಧನ ನಾವು ಸೆರಮನೆಯಲಿ ಹೋಗುವ ಪ್ರತಿ ಜಾಗದ ಬಗ್ಗೆ ವಿವರಣೆ ನೀಡತೊಡಗಿತು.

೧೯೩೩ರಲ್ಲಿ ಶುರುವಾದ ಸೆರಮನೆ ತಾನಿದ್ದ ಭೌಗೋಳಿಕ ಸ್ಥಾನ, ಅಲ್ಲಿನ ವಿಪರೀತ ಹವಾಮಾನದಿಂದ ಅದು ಒಂದು ಅತ್ಯಂತ ಕಠಿಣ ಸೆರಮನೆಯ ಸ್ಥಾನಗಳಿಸಿತು.ಬೇರೆ ಜೈಲುಗಳಲ್ಲಿ ಹಿಡಿದಿಡಲಾಗದ ಆಗಿನ ಕಾಲದ ಅತ್ಯಂತ ಕುಖ್ಯಾತ ಕ್ರಿಮಿನಲ್‍ಗಳನ್ನು ಅಮೇರಿಕಾ ಸರ್ಕಾರ ಅಲ್ಲಿ ಇಡತೊಡಗಿತು. ಹೊರಗಿನ ಪ್ರಪಂಚದವರಿಗೆ ಅಲ್ಲಿ ಪ್ರವೇಶ ಇಲ್ಲದಿದ್ದರಿಂದ ಮೊದಲೇ ಕುತೂಹಲದ ಬೀಡಾಗಿದ್ದ 'ಅಲ್‍ಕಟ್ರಾಸ್' ಈ ಕುಖ್ಯಾತರ ಆಗಮನದಿಂದ ಇನ್ನೂ ಕುತೂಹಲ ಹೆಚ್ಚಿಸಿತು. ಅದಕ್ಕೂ ಹೆಚ್ಚು ರೋಚಕ ಮೂಡಿಸಿದ್ದು ಅಲ್ಲಿನ ಕೈದಿಗಳ ಜೀವನ ಮತ್ತು ಅವರ ಜೈಲಿಂದ ಪರಾರಿಯಾಗುವ ಪ್ರಯತ್ನಗಳು.ಅದು ಕಾರ್ಯನಿರ್ವಹಿಸಿದ ೨೯ ವರ್ಷ ಅನೇಕ ದಂತಕತೆಗಳಿಗೆ-ಹಾಲಿವುಡ್ ಸಿನಿಮಾಗಳಿಗೆ ಸ್ಪೂರ್ತಿ ಆಯಿತು.

ಇದನೆಲ್ಲಾ ಕೇಳುತ್ತಿದ್ದಂತೆ ನಾವು ಆ ಸೆರಮನೆಯೊಳಗೆ ಒಂದು ನೇರವಾದ ಪ್ಯಾಸೇಜ್‍ಗೆ ಬಂದಿದ್ದೆವು. ಅದರ ಅಕ್ಕಪಕ್ಕ ಸಾಲು ಸಾಲು ಕೈದಿಗಳ ಕೋಣೆಗಳು. ತೀರಾ ಚಿಕ್ಕದಾದ ಕೋಣೆ, ಅದರಲ್ಲಿ ಒಂದು ಹಾಸಿಗೆ, ಒಂದು ಕಮೋಡ್ ಬಿಟ್ಟರೆ ಎನೂ ಇರ್ತಿರಲಿಲ್ಲ. ಪ್ರತಿಕೋಣೆಗೂ ಎರಡು ಸುತ್ತು ಕಬ್ಬಿಣದ ಸರಳುಗಳ ಬಾಗಿಲು.ಆ ಕೋಣೆಗಳನು ನೋಡುತ್ತಾ ಮುಂದೆ ಸಾಗುತ್ತಿದ್ದಂತೆ ಒಂದು ತಿರುವು. ಅಲ್ಲಿ ಇತ್ತು 'ಬ್ಲ್ಯಾಕ್ ಹೋಲ್'. ತೀರಾ ಎಗರಾಡುವ ಕೈದಿಗಳನ್ನು ಇದರಲ್ಲಿ ೨-೩ ದಿವಸ ಹಾಕುತ್ತಿದ್ದರಂತೆ. ಬ್ಲ್ಯಾಕ್ ಹೋಲ್ ಹೆಸರಿಗೆ ತಕ್ಕಂತೆ ಒಂದು ಬೆಳಕಿನ ಕಿರಣವು ಬರದ ಕೋಣೆ..ಅದರಲ್ಲಿ ಮಂಚವಾಗಲಿ, ಕಮೋಡ್ ಆಗಲಿ ಯಾವುದೂ ಇರಲಿಲ್ಲ. ಅದರಲ್ಲಿ ಇದದ್ದು ನೆಲದ ಯಾವುದೋ ಮೂಲೆಯಲ್ಲಿ ಒಂದು ಸಣ್ಣ ತೂತು. ಅಲ್ಲಿರುವರೆಗೆ ಅತ್ಯಂತ ಕಡಿಮೆ ಊಟ. ಕೈದಿಗಳ ಮನೋಬಲ ಮುರಿಯುವಲ್ಲಿ ಇದು ಸಾಕಷ್ಟು ಯಶಸ್ವಿಯಾಗಿತ್ತಂತೆ.

ಅಲ್ಲೇ ಗೋಡೆಯಲ್ಲಿ ಮೇಲೆ ಇದ್ದವು ಆ ಮಹಾನುಭಾವರ ಚಿತ್ರಗಳು.. ಆ ಸೆರಮನೆಯಲ್ಲಿ ಇದ್ದು ಅತ್ಯಂತ ಕುಖ್ಯಾತರಾದ ಕ್ರಿಮಿನಲ್‍ಗಳು.

ಅಲ್ ಕೆಪೋನಿ- ಆಗಿನ ಮಾಫಿಯ ದೊರೆ.ಬೇರೆ ಯಾವುದೇ ಜೈಲಿನಲ್ಲಿದ್ದರೂ ಅಲ್ಲಿಂದಲೇ ತನ್ನ ದಂಧೆ ನಡೆಸುತ್ತಿದ್ದನಂತೆ. ಈ ಸೆರಮನೆಗೆ ಬಂದ ಮೊದಲ ಬ್ಯಾಚ್‍ನಲ್ಲಿದ್ದವನು. ಜೈಲಿನ ಆರಂಭಕ್ಕಿಂತಲೂ ಅವನು ಅಲ್ಲಿ ಬಂದದ್ದು ಪತ್ರಿಕೆಗಳಲ್ಲಿ ದೊಡ್ಡ ಸುದ್ದಿಯಾಗಿತ್ತಂತೆ. ಅಲ್‍ಕಟ್ರಾಸ್‍ಗೆ ಬಂದ ಮೇಲೆ ಅವನನ್ನು ಸಾಮಾನ್ಯ ಕೆಲಸಕ್ಕೆ ಬಾರದ ಕೈದಿಯಾಗಿ ಮಾಡಿದರಂತೆ ! ಜೈಲಿನಲ್ಲಿ ಇದದ್ದು ೬ ವರ್ಷ.

ಜಾರ್ಜ್ ಕೆಲ್ಲಿ-ಇವನು ದರೋಡೆ, ಅಪಹರಣ ಹಾಗು ಇನ್ನೂ ಅನೇಕ ಕೇಸ್‍ಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸಿ ಬೇರೆ ಜೈಲುಗಳಿಂದ ಇಲ್ಲಿಗೆ ವರ್ಗವಾಗಿ ಬಂದವನು. ಜೈಲಿನಲ್ಲಿ ಇದದ್ದು ೧೭ ವರ್ಷ.

ಅಲ್ವಿನ್ ಕರ್ಪಿಸ್-ಇವನು ಸಹ ದರೋಡೆ, ಅಪಹರಣ ಹಾಗು ಇನ್ನೂ ಅನೇಕ ಕೇಸ್‍ಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸಿ ಬೇರೆ ಜೈಲುಗಳಿಂದ ಇಲ್ಲಿಗೆ ಬಂದವನು.ಇಲ್ಲಿ ಇದದ್ದು ೨೬ ವರ್ಷ

ರಾಬರ್ಟ್ ಸ್ಟೌರ್ಡ್ - ಅಲ್‍ಕಟ್ರಾಸ್‍ನ ಅತ್ಯಂತ ಕುಖ್ಯಾತ-ಅತೀ ಹೆಚ್ಚು ಮಿಡಿಯಾ ಕವರೇಜ್ ಪಡೆದವನು. ಇಲ್ಲಿಗೆ ಬರುವ ಮುಂಚೆಯಿದ್ದ ಜೈಲಿನಲ್ಲಿ ತನ್ನ ಕೋಣೆಯಲ್ಲಿ ಹಕ್ಕಿಗಳನ್ನು ಇಟ್ಟುಕೊಂಡು ಅವುಗಳನ್ನು ಅಭ್ಯಾಸಮಾಡುತ್ತಿದ್ದನಂತೆ.ಅವುಗಳ ಬಗ್ಗೆ ಲೇಖನಗಳನ್ನು ಬರೆದಿದ್ದನಂತೆ. ಅದೇ ಕಾರಣಕ್ಕೆ 'ಬರ್ಡ್ ಮ್ಯಾನ್' ಅನ್ನೋ ಅಡ್ಡಹೆಸರಿನಿಂದ ಎಲ್ಲೆಡೆಗೆ ಪ್ರಸಿದ್ದನಾದವನು.ಆದರೆ ಇಲ್ಲಿಗೆ ಬರಲು ಕಾರಣ ಹಿಂದಿದ್ದ ಜೈಲಿನ ಅಧಿಕಾರಿಯೊಬ್ಬನನ್ನು ಸುಮಾರು ೨೦೦೦ ಕೈದಿಗಳ ಎದುರು ನಿರ್ಧಯವಾಗಿ ಹತ್ಯೆ ಮಾಡಿದ್ದಕ್ಕೆ.ಇದದ್ದು ೧೭ ವರ್ಷ.

ಮಾರ್ಟನ್ ಸೊಬೆಲ್-ಜೈಲಿಗೆ ಬರಲು ಕಾರಣ ಅಮೇರಿಕಾದಲ್ಲಿ ಕಮ್ಯುನಿಸ್ಟ್ ಚಳುವಳಿಗೆ ಪ್ರಯತ್ನಪಟ್ಟಿದ್ದು ! ಇದದ್ದು ೫ ವರ್ಷ.
ಹೀಗೆ ಇನ್ನೂ ಅನೇಕ ವಿಶಿಷ್ಟ ವ್ಯಕ್ತಿಗಳ ಬೀಡಾಗಿದ್ದ ಈ ಜೈಲಿನಿಂದ ತಪ್ಪಿಸಿಕೊಳ್ಳುವದಕ್ಕೆ ಪ್ರಯತ್ನಪಟ್ಟವರು ಅನೇಕರು. ಅಧಿಕೃತ ಅಂಕಿ-ಅಂಶಗಳ ಪ್ರಕಾರ ಒಟ್ಟು ಪ್ರಯತ್ನಗಳು - ೩೬. ಅದರಲ್ಲಿ ಏಳು ಕೈದಿಗಳು ಪ್ರಯತ್ನದಲ್ಲಿದ್ದಾಗ ಶಾಟ್ ಡೆಡ್, ಇಬ್ಬರು ಜೈಲಿನಿಂದ ಹೊರಬಂದರು ಅಲ್ಲಿನ ಸಮುದ್ರದಲ್ಲಿ ಮುಳುಗಿ ಸತ್ತವರು, ಇಬ್ಬರು ಜೈಲು-ದ್ವೀಪದಿಂದ ತಪ್ಪಿಸಿಕೊಂಡರು ಮರಳಿ ಹಿಡಿಯಲ್ಪಟ್ಟವರು, ೫ ಜನ ನಾಪತ್ತೆ ಆದವರು, ಇನ್ನು ಉಳಿದವರು ಪರಾರಿಯಾಗುವಾಗ ಸಿಕ್ಕು ಮರಳಿದವರು. ಆ ೫ ಜನ ನಾಪತ್ತೆಯದವರಲ್ಲಿರುವ ಹೆಸರುಗಳೇ - ಮೌರಿಸ್ ಮತ್ತು ಎಂಜಿಲಿನ್ ಸಹೋದರರು.

ಈ ಇಬ್ಬರು ಸೋದರರು ಇಲ್ಲಿಂದ ಪರಾರಿಯಾದ ಬಗ್ಗೆ ಅನೇಕ ಕತೆಗಳಿವೆ. ಆದರೆ ಅವರು ಉಪಯೋಗಿಸಿದ ವಿಧಾನ, ಅವರು ತಮ್ಮ ಡಮ್ಮಿಗಳನ್ನು ತಮ್ಮ ಕೋಣೆಯಲ್ಲಿ ಮಲಗಿಸಿ ಪರಾರಿಯಾದ ಬಗ್ಗೆ ತೀರಾ ಸಿನಿಮೀಯಾ. ಅವರು ತಪ್ಪಿಸಿಕೊಂಡು ಹೋಗಿಲ್ಲ ಅನ್ನುತ್ತದೆ ಅಧಿಕೃತ ವರದಿ, ಅದರ ಪ್ರಕಾರ ಅವರು ಪರಾರಿ ಪ್ರಯತ್ನದಲ್ಲಿದ್ದಾಗ ಆ ಕೊರೆಯುವ ಸಮುದ್ರದಲೆಲ್ಲೋ ಮುಳುಗಿ ಸತ್ತಿರಬಹುದೆಂದು. ಆದರೆ ಇನ್ನೂ ಅನೇಕರ ಪ್ರಕಾರ ಅಲ್ಲಿಂದ ಅವರು ಯಶಸ್ವಿಯಾಗಿ ಪರಾರಿಯಾದವರು.ಇವರ ಕತೆಯನ್ನು ಆಧಾರಿಸಿ ಬಂದಿದ್ದೆ ಹಾಲಿವುಡ್ ಚಿತ್ರ -'ಎಸ್ಕೇಪ್ ಫ್ರಾಮ್ ಅಲ್‍ಕಟ್ರಾಸ್'.

ಸೆರಮನೆಯ ಕುಖ್ಯಾತರ ಬಗ್ಗೆ ಕೇಳುತ್ತಾ ಕೇಳುತ್ತಾ ಈಗ ನಾವು ಈ ಸೋದರರಿದ್ದ ಸೆಲ್‍ನ ಮುಂದೆ ನಿಂತಿದ್ದೆವು. ಅವರ ಕೋಣೆಯಲ್ಲಿ ಆ ಡಮ್ಮಿಗಳ ಪ್ರತಿಕೃತಿಗಳು ಹಾಗೇ ಇಟ್ಟಿದ್ದರು. ಅಲ್ಲಿದ್ದ ಗ್ರಂಥಾಲಯದಲ್ಲಿ ತಿರುಗಾಡಿ, ಕೈದಿಗಳ ಭೇಟಿಗೆ ಇದ್ದ ಕಿಟಕಿಯಲ್ಲಿ ಕುಳಿತು,ಜೈಲಿನ ಅಧಿಕಾರಿಗಳ ಕಚೇರಿಯನ್ನು ನೋಡಿ, ಕೊನೆಗೆ ಕೈದಿಗಳ ಊಟದ ಮನೆಗೆ ಹೊಕ್ಕೆವು. ಅಲ್ಲಿ ಯಾವುದೇ ಕುರ್ಚಿ-ಟೇಬಲ್-ಪೋರ್ಕ್-ಚಾಕುಗಳನ್ನು ಇಟ್ಟಿರಲಿಲ್ಲವಂತೆ. ದಿನವೂ ಅದೇ ಮೆನು.

ಇಂತಹ ಸೆರಮನೆಯ ನಿರ್ವಹಿಸುವ ವೆಚ್ಚ ದಿನವೊಂದಕ್ಕೆ ಕೈದಿಯೊಬ್ಬನಿಗೆ ಆ ದಿನಗಳಲ್ಲೇ ೧೦೦ ಡಾಲರ್ ಆಗಿತ್ತಂತೆ. ಹೆಚ್ಚುತ್ತಿದ್ದ ಈ ನಿರ್ವಹಿಸುವ ವೆಚ್ಚ ನೋಡಿ ಕೊನೆಗೂ ೨೯ ವರ್ಷದ ನಂತರ ಈ ಸೆರಮನೆಯನ್ನು ಮುಚ್ಚಲಾಯಿತು.ನಂತರ ಇದನ್ನು ರಾಷ್ಟ್ರೀಯ ಸ್ಮಾರಕವಾಗಿ ಮಾರ್ಪಾಡಿಸಲಾಯಿತು.

ನಂತರ ಬಂತು ೧೯೬೯..ಸ್ಠಳೀಯ ರೆಡ್ ಇಂಡಿಯನ್ ಮತ್ತು ಇತರ ಬುಡಕಟ್ಟು ಜನರಿಂದ ಬಲವಂತವಾಗಿ ಕಸಿದುಕೊಂಡ ನೆಲವನ್ನು ವಾಪಾಸ್ ಮಾಡುವಂತೆ ಆಗ್ರಹಿಸಿ ಕೆಲವು ವಿದ್ಯಾರ್ಥಿ ಗುಂಪುಗಳು - ಕೆಲವು ಇಂಡಿಯನ್ ಜನ ಅಲ್‍ಕಟ್ರಾಸ್‍ಗೆ ಮುತ್ತಿಗೆ ಹಾಕಿದರು. ಸಂಕೇತವಾಗಿದ್ದ ಈ ಪ್ರತಿಭಟನೆ ನೋಡುನೋಡುತ್ತಿದ್ದಂತೆ ಪೂರ್ಣಪ್ರಮಾಣವಾಗಿ ಈಡೀ ದ್ವೀಪವನ್ನು ಈ ಗುಂಪು ಆಕ್ರಮಿಸಿಕೊಂಡಿತು. ಅವರ ಬೇಡಿಕೆಗಳು - ಆ ದ್ವೀಪದ ಮೇಲೆ ಇಂಡಿಯನ್ ಸಂಸ್ಕೃತಿ ಬಿಂಬಿಸುವ ಒಂದು ಕಲ್ಚರಲ್ ಕೇಂದ್ರ, ಒಂದು ಶೈಕ್ಷಣಿಕ ಕೇಂದ್ರ ಮತ್ತು ಒಂದು ನಿಸರ್ಗ-ಅಧ್ಯಯನ ಕೇಂದ್ರ. ಸ್ಥಾಪಿಸುವುದು. ಸುಮಾರು ಒಂದು ವರ್ಷದವರೆಗೆ ದ್ವೀಪದ ಮೇಲಿದ್ದ ಈ ಇಂಡಿಯನ್ ಹಿಡಿತ ಕೊನೆಗೂ ಕಮಾಂಡೊಗಳ ಕ್ಷಿಪ್ರಕಾರ್ಯಾಚರಣೆಯಲ್ಲಿ ಕೊನೆಗೊಂಡಿತ್ತು.ಆದರೆ ಅದು ಉಂಟುಮಾಡಿದ ಜನಜಾಗೃತಿಗೆ ಶರಣಾಗಿ ಸರಕಾರ ಆಕ್ರಮಿಸಿದ್ದ ಅನೇಕ ಪ್ರದೇಶಗಳನು ಮರಳಿ ಕೊಟ್ಟಿತಂತೆ.

ಇಷ್ಟೆಲ್ಲಾ ಇತಿಹಾಸವಿರುವ ಸೆರಮನೆ-ದ್ವೀಪ ನೋಡಿ ಮರಳುತ್ತಿದ್ದಂತೆ ಗತಕಾಲಕ್ಕೆ ಹೋಗಿಬಂದಂತೆ ಭಾಸವಾಗುತಿತ್ತು.

ಕೈದಿಗಳ ಧ್ವನಿ, ಗಾರ್ಡ್‍ನ ಸೀಟಿಯ ಶಬ್ದ, ಗುಂಡಿನ ಸದ್ದು, ಇಂಡಿಯನ್ ಜನರ ಕೂಗು ಇನ್ನೂ ಅಲ್ಲಿ ಪ್ರತಿಧ್ವನಿಸುತ್ತಿದೆ ಅನಿಸಿತು..

Thursday, February 22, 2007

ಅದೊಂದು ಸಂಜೆ

ಅದೊಂದು ಸಂಜೆ ಮನಸ್ಸಾನ್ನ ಮತ್ತೆಮತ್ತೆ ಕಾಡುತ್ತೆ..

ಆವತ್ತು ಬೆಳಿಗ್ಗೆಯಿಂದಾಲೇ ಇವತ್ತು ಯಾಕೇ ಬೆಳಗಾಬೇಕಿತ್ತು ಅಂತಾ ಅನಿಸಿತ್ತು. ಯಾಕೆಂದರೆ ನನಗೆ ಆವತ್ತು ಸಂಜೆ ಆಗೋದು ಬೇಕಿರಲಿಲ್ಲ. ಕೊನೆಗೂ ಅದು ಬಂದೇಬಿಡ್ತು.ಆವಾಗ ನಿನ್ನ ಮನದಲ್ಲಿ ಎನು ನಡೆಯುತಿತ್ತೋ ಗೊತ್ತಿಲ್ಲ, ನನ್ನ ಮನಸ್ಸು ಕಡೇ ಪಕ್ಷ ಇನ್ನೊಂದು ದಿವಸ ಸಿಗಬಾರದಿತ್ತೆ ಅನ್ನೋ ಚಟಪಟಿಕೆಯಲ್ಲಿ ಇತ್ತು.

ಟ್ಯಾಕ್ಸಿ ಬಂದು, ಬ್ಯಾಗ್‍ನೆಲ್ಲ ಅದಕ್ಕೆ ಹಾಕಿ ಮನೆಯಿಂದ ಹೊರಡುವಾಗ ನೆನಪಾಗಿದ್ದು ಈ ಸಾಲುಗಳು

ಪಯಣಿಸುವ ವೇಳೆಯಲಿ ಬಂದು ಅಡಿಗೆರಗಿ
ಮುಂದೆ ನಿಂತಳು ನನ್ನ ಕೈ ಹಿಡಿದ ಹುಡುಗಿ
ಇನ್ನೆಂದು ಬರುವಿರೆಂದೆನ್ನ ಕೇಳಿದಳು
ಇನ್ನೊಂದು ತಿಂಗಳಿಗೆ ಎಂದು ಹೇಳಿದೆನು

ನಾನು ಅದೇ ತರ 'ಇನ್ನೊಂದು ತಿಂಗಳಿಗೆ' ಅಂತಾ ನಿನಗೆ ಹೇಳುವ ಹಾಗಿದ್ದರೆ ಏಷ್ಟು ಚೆನ್ನಾಗಿ ಇತ್ತು..

ಏರಪೋರ್ಟ್‍ಗೆ ಹೋಗುವಾಗ ನಡುವೆ ನಡುವೆ 'ಶುಭ ಪ್ರಯಾಣ' ಹೇಳೋಕೇ ಬರ್ತಾ ಇದ್ದ ಪೋನ್‍ಕರೆಗಳು, ಸುಮ್ಮನೆ ಯಾಂತ್ರಿಕವಾಗಿ ಪೋನ್ ಮಾಡಿದವರ ಜೊತೆ ಮಾತು.ಸುಮ್ಮನೆ ಕಷ್ಟಪಟ್ಟು ತಂದುಕೊಂಡು ನಗ್ತಾ ಇದ್ದು ನಗೆ.

ನಾನೆಲ್ಲಿ ಇದ್ದೆ? ನಿನ್ನ ಕೈ ಹಿಡಕೊಂಡವನಿಗೆ ಬೇರೆ ಎನೂ ಬೇಕಿರಲಿಲ್ಲ. ನನ್ನ ಕೈಯಲ್ಲಿ ನಿನ್ನ ಕೈ ಇದ್ದಾಗ, ಹಾಗೇ ಅಲ್ಲೇ ಸಮಯ ನಿಂತುಬಿಡಲಿ ಅಂತಾ ಮನಸ್ಸು ಕೂಗ್ತಿತ್ತು. ದಾರಿಯುದ್ದಕ್ಕೂ ಮಾತಿಗಿಂತ ನಮ್ಮಲ್ಲಿ ಮೌನನೇ ಜಾಸ್ತಿ ಇತ್ತಲ್ವ ಅವತ್ತು.

ನಂಗೆ ಎನೂ ಬೇಕಿರಲಿಲ್ಲ..ನಿನ್ನ ಸಾನಿಧ್ಯ ಒಂದೇ ಸಾಕಿತ್ತು. ನಿನ್ನ ಒಂದು ಸ್ಪರ್ಶ ಸಾಕಿತ್ತು.

ಟ್ಯಾಕ್ಸಿ ಹಾಗೇ ಸುಮ್ಮನೆ ಹೋಗ್ತಾನೇ ಇರಲಿ ಅಂತಾ ಎಷ್ಟು ಅನಿಸ್ತಾ ಇತ್ತು. ಎರಪೋರ್ಟ್ ಹತ್ತಿರಕ್ಕೆ ಬಂದಾಗೆ ಅದೊಂದು ಹೇಳಲಾಗದ ಒಂದು ಭಾವನೆ ಆವರಿಸಿಕೊಂಡುಬಿಟ್ಟಿತ್ತು.

ಅವತ್ತು ನಿನ್ನ ಜೊತೆ ಕಳೆಯುವ ಒಂದು ನಿಮಿಷಕ್ಕಾಗಿ, ನಿನ್ನ ಜೊತೆ ಮಾತಾಡೋ ಒಂದು ಮಾತಿಗಾಗಿ, ನಿನ್ನ ನೋಡೋ ಒಂದು ಅವಕಾಶಕ್ಕಾಗಿ ನಾನು ಎಷ್ಟು ಪರಿತಪಿಸಿದ್ದೆ...ನೀರಿಂದ ಹೊರಗೆ ತಗೀತಾರೆ ಅಂತಾ ಗೊತ್ತಾದ ಮೀನಿನ ತರ . ಅವತ್ತು ಬಹುಷಃ ಯಾರಾದರೂ ನನಗೆ 'ನಿನ್ನ ಜೀವನದ ಒಂದು ದಿವಸ ಕೊಟ್ರೆ, ಅವಳ ಜೊತೆ ಕಳೆಯೋಕೆ ಇನ್ನೊಂದು ನಿಮಿಷ ಕೊಡಿಸ್ತೀನಿ' ಅಂತಾ ಹೇಳಿದ್ದರೂ, ನಾನು ಹಿಂದೆ-ಮುಂದೆ ನೋಡದೇ ಒಪ್ಪಕೊಳ್ಳತ್ತಿದ್ದೆ.

'ನಿನ್ನೆವರೆಗೆ ನಾ ಯಾರೋ ನೀ ಯಾರೋ ಅಂತಾ ಇದ್ದೆ..'ಆದರೆ ಅಮೇಲೆ ಎನಾಯಿತು?

ಎರಪೊರ್ಟ್ ಬಂದು ಮನಸ್ಸಿಲ್ಲದ ಮನಸಿಂದ ಇಳಿದಿದ್ದೆ. ಲಗೇಜ್ ಚೆಕ್-ಇನ್ ಮಾಡೋ ಉದ್ದಸಾಲು ನೋಡಿ, ಅಲ್ಲಿನ ಪ್ರಯಾಣಿಕರಲಿ ಬಹುಷಃ ಖುಷಿಯಾಗಿದ್ದು ನನಗೊಬ್ಬನಿಗೆ ಅನಿಸುತ್ತೆ ! ಚೆಕ್-ಇನ್ ಮಾಡೋವರೆಗೆ ಮತ್ತೆ ನಿನ್ನ ಜೊತೆ ಇರಬಹುದೆನ್ನುವ ಸಂತಸ. ಆ ಸಾಲಿನಲ್ಲಿ ನನ್ನ ಬ್ಯಾಗ್‍ಗಳನ್ನು ಇಟ್ಟು ಅಲ್ಲಿಂದ ನೀನು ನಿಂತ ಕಡೆ ನಾ ಎಷ್ಟು ಸಲ ಬಂದು ಹೋದೆನೋ ಗೊತ್ತಿಲ್ಲ. ಛೇ,ಕೊನೆಗೂ ನನ್ನ ಸರದಿ ಬಂದೆ ಬಿಡ್ತು ಅಲ್ಲಿ. ಲಗೇಜ್ ಎಲ್ಲಾ ಹಾಕಿ ನಿನ್ನ ಕಡೆ ಬಂದಾಗ, ಯಾವ ಕ್ಷಣವನ್ನು ನಾ ಬೇಡ ಅಂತಾ ಇದ್ದೇನೋ ಅದು ಎದುರಿಗೆ ನಿಂತಿತ್ತು.

ನಿನ್ನನ್ನು ಅಗಲುವ ಕ್ಷಣ..

ಎನು ಹೇಳಬೇಕು, ಎನು ಮಾಡಬೇಕು ಅಂತಾ ತೋಚದ ಕ್ಷಣ. ಸುಮ್ಮನೆ ನಿನ್ನ ಕೈಯನ್ನು ನನ್ನ ಕೈಯಲ್ಲಿ ತಗೊಂಡಿದ್ದೆ. ನನ್ನ ಪ್ರೀತಿ ಹುಡುಗಿ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದೆ. ಭರವಸೆಯ ನಾಳೆಗಳ ಬಗ್ಗೆ ನೆನೆಯುತ್ತಾ ನಿನ್ನ ಕೈ ಅದುಮಿದ್ದೆ..

ನಿನ್ನ ಮನದಲ್ಲಿ ಎನು ಆಗ್ತಾ ಇತ್ತು ಹುಡುಗಿ?

ಭಾರವಾದ ಹೆಜ್ಜೆ ಇಡ್ತಾ ಇಮಿಗ್ರೇಷನ್ ಚೆಕ್ ಕಡೆ ಹೋಗುವಾಗ ತಿರುಗಿ ಒಮ್ಮೆ ನೋಡಿದ್ದೆ. ನೀನು ಅಳುತ್ತಿದ್ದ ಅಮ್ಮನಿಗೆ ನಿನ್ನ ಪ್ರೀತಿ ಕೈಗಳಿಂದ ಸಮಾಧಾನ ಮಾಡ್ತಾ, ಅಲ್ಲಿಂದ ಅವರ ಜೊತೆ ಹೊರಗೆ ಹೋಗೋದಾ ನೋಡ್ತಾ ನಿಂತಿದ್ದೆ.ನೀನು ಮರೆಯಾಗುವರೆಗೆ ಅಲ್ಲೇ ನಿಂತಿದ್ದೆ...

ನಂಗೆ ಗೊತ್ತಿಲ್ಲಾ..ನನ್ನ ಕಣ್ಣು ತೇವವಾಗಿತ್ತಾ ಅಥವಾ ಮನಸು ಅಳ್ತಾ ಇತ್ತಾ..

ಇಮಿಗ್ರೇಷನ್ ಚೆಕ್ ಮುಗಿಸಿ, ತಪಾಸಣೆಯ ನಂತರ ವಿಮಾನ ಇನ್ನೇನೂ ಹತ್ತಬೇಕು ಅನ್ನುವಾಗ, ಈ ಸಾಲು ನೆನಪಾಗಿದ್ದವು..

ಅಲ್ಲಲ್ಲಿ ನಿಂದವಳ ನೋಡುತಡಿಗಡಿಗೆ
ತೆರಳಿದೆನು ವಿರಹದಲಿ ನಿಲ್ದಾಣದೆಡೆಗೆ
ದಾರಿಯಲಿ ಕಂಡೊಬ್ಬ ಹಣ್ಣು ಮಾರುವನು
ಹೊರಟು ಹೋಯಿತು ಬಂಡಿ ಎಂದು ಹೇಳಿದನು
ಹಿಂದುರಿಗಿ ಬಂದೆನ್ನ ಒಂದೆ ಮಾತಿನಲಿ
ತಿಂಗಳಾಯಿತೇ ಎಂದಳೆನ್ನ ಹೊಸ ಹುಡುಗಿ

ಕೆ.ಎಸ್.ನ ಹೇಳಿದಂತೆ ,ಅಲ್ಲಿ ಯಾರಾದರೂ ಹಣ್ಣಿನವನು ಸಿಗ್ತನಾ ಅಂತಾ ನೋಡಿದ್ದೆ, ನನ್ನದೂ ವಿಮಾನ ಹೊರಟು ಹೋಗಿದೆ ಅಂತಾ ಹೇಳ್ತಾನಾ ಅಂತಾ ಕಾದಿದ್ದೆ. ಆಮೇಲೆ ಮನೆಗೆ ಹೋಗಿ, ಬಾಗಿಲು ಬಡಿದು, ನೀನು ಬಂದು, ಬಾಗಿಲಲ್ಲಿ ನಿಂತ ನನ್ನ ನೋಡಿ, ನಿನ್ನ ಪ್ರೀತಿ ತುಂಬಿದ ಬಟ್ಟಲುಗಣ್ಣಗಳಲ್ಲಿ ಆಶ್ಚರ್ಯ ತುಂಬಿಕೊಂಡು 'ತಿಂಗಳಾಯಿತೇ' ಅಂತಾ ಕೇಳೋದು ನೋಡೋಕೆ ಎಷ್ಟು ಚೆನ್ನಾಗಿರುತ್ತೆ ಅಂತಾ ಕನಸು ಕಾಣ್ತಾ ವಿಮಾನದ ಬಾಗಿಲಲ್ಲಿ ನಿಂತಿದ್ದೆ.

ಗಗನಸಖಿ 'ಗುಡ್ ಇವಿನಿಂಗ್..ಗುಡ್ ಇವಿನಿಂಗ್' ಅಂತಾ ಎರಡು ಸಲ ಎಚ್ಚರಿಸಿದಾಗಲೇ ನೆನಪಾಗಿದ್ದು, ಇನ್ನೆಲ್ಲಿ ಬರಬೇಕು,ಎಲ್ಲಿಂದ ಬರಬೇಕು ಹಣ್ಣಿನವನು ಅಂತಾ.

ವಿಮಾನದ ಕೊನೆಯಲ್ಲಿ ಇದ್ದ ನನ್ನ ಸೀಟ್‍ಗೆ ಹೋಗಿ ಆಸೀನಾಗಿದ್ದೆ. ಚೆಕ್-ಇನ್ ಮಾಡುವ ಸಾಲಿನಲ್ಲಿ ನನ್ನ ಮುಂದೆ ಇದ್ದ ಸಹಪ್ರಯಾಣಿಕ, ಈಗ ನನ್ನ ಪಕ್ಕದ ಸೀಟಿನಲ್ಲಿದ್ದ. ಸಾಲಿನಲ್ಲಿದ್ದಾಗ ಹಾಗೇ ಒಂದು ಚಿಕ್ಕ ಹರಟೆ ಆಗಿತ್ತು. ಈಗ ತನ್ನ ಮೊಬೈಲ್‍ನಲ್ಲಿ ಯಾರಿಗೋ ಕರೆ ಮಾಡ್ತಾ ಇದ್ದ. ವಿಮಾನದಲ್ಲಿ ಮೊಬೈಲ್ ಬಳಕೆ ನಿಷೇಧವಿದ್ದರೂ ಇನ್ನೂ ವಿಮಾನ ಶುರುವಾಗಿರದರಿಂದ ಮತ್ತು ನಮ್ಮದು ಕೊನೆ ಸೀಟ್ ಆದ್ದರಿಂದ ಗುಪ್ತವಾಗಿ ಕರೆ ನಡೀತಾ ಇತ್ತು. ಅವನೂ ಕರೆ ಮುಗಿಸುತ್ತಿದ್ದಂತೆ ಇದ್ದ ಚಿಕ್ಕ ಪರಿಚಯದಿಂದ ಅವನ ಮೊಬೈಲ್ ತೆಗೊಂಡು ಮಾಡಿದ್ದು ಕರೆ ನಿನಗೆ. ಸುಮ್ಮನೆ ಒಂದೆರಡು ಕ್ಷಣನಾದರೂ ನಿನ್ನ ಧ್ವನಿ ಕೇಳಬೇಕು ಅನ್ನೋ ಕೊನೆ ಆಸೆ..ಗಗನಸಖಿ ಬಂದು 'ಪ್ಲೀಸ್, ಸ್ವಿಚ್ ಆಫ್ ಮೊಬೈಲ್' ಅಂದಾಗ ಮಾಡಲೇಬೇಕಾಗಿತ್ತು..

ನಂತರ ವಿಮಾನ ಅಲ್ಲಿಂದ ಹಾರಿತ್ತು,ನನ್ನ ಕರಕೊಂಡು.ಅದರೆ ನಾನು ಅಲ್ಲಿ ವಿಮಾನದಲ್ಲಿ ಇದ್ದನಾ?? ಭಾರತಕ್ಕೆ ಬರುವಾಗ ಇದ್ದ 'ನಾನು', ಈಗ ಭಾರತದಿಂದ ಹೋಗುವಾಗ 'ನಾನಗಿರಲಿಲ್ಲ'. ನನ್ನದೇ ಹೃದಯದ ಒಂದು ಭಾಗ ಬಿಟ್ಟು ಹೋಗುವಾಗಿನ ವೇದನೆ ಅದು..

ವಿಮಾನ ತೇಲಿತ್ತು ಆ ಕತ್ತಲ ರಾತ್ರಿಯ ಆಕಾಶದಲ್ಲಿ...

ನಾನು ತೇಲಿದ್ದೆ ನಿನ್ನ ನೆನಪಿನ ಆಗಸದಲ್ಲಿ..


*************************************************
ವಿಕ್ರಾಂತ ಕರ್ನಾಟಕದ ಈ ವಾರದ ಸಂಚಿಕೆಯಲಿ ಈ ಭಾವ ಲಹರಿಯನ್ನು ಪ್ರಕಟಿಸಿದ್ದಕ್ಕೆ ವಿಕ್ರಾಂತದ ಬಳಗಕ್ಕೆ ವಂದನೆಗಳು
*************************************************

Wednesday, February 14, 2007

ನಿನ್ನ ಹೆಸರು..

ಚಿಗುರು ಮಾವಿನೆಲೆಯಲಿ
ಕೋಗಿಲೆ ಕುಹುವಿನಲಿ
ವಸಂತ ಋತುವಾಗಿ
ಆಗಮಿಸಿದ ಹೆಸರು..ನಿನ್ನದು

ಪ್ರೇಮ ರಾಗದಲಿ
ಒಲವ ತಾಳದಲಿ
ಹೃದಯದ ಹಾಡಾಗಿ
ಹೊಮ್ಮಿದ ಹೆಸರು..ನಿನ್ನದು

ಸ್ವಾತಿ ಮಳೆಯಲಿ
ಕಪ್ಪೆ ಚಿಪ್ಪಲಿ
ಹೊಳೆವ ಮುತ್ತಾಗಿ
ಸಿಕ್ಕ ಹೆಸರು..ನಿನ್ನದು

ಬಿಸಿಲ ಊರಿನಲಿ
ಮಳೆಯ ಬೀದಿಯಲಿ
ಕಾಮನಬಿಲ್ಲಾಗಿ
ಹಬ್ಬಿದ ಹೆಸರು..ನಿನ್ನದು

ಪ್ರಣಯ ತೋಟದಲಿ
ಬಯಕೆ ಬಳ್ಳಿಯಲಿ
ನಗುವ ಹೂವಾಗಿ
ಅರಳಿದ ಹೆಸರು..ನಿನ್ನದು

ಶಿಲೆಯ ಸೊಬಗಲಿ
ಪ್ರೀತಿ ಕೆತ್ತೆನೆಯಲಿ
ಶಿಲಾಬಾಲಕಿಯಾಗಿ
ಮೂರ್ತಿವೆತ್ತಿದ ಹೆಸರು..ನಿನ್ನದು

ಮನದ ದಿಗಂತದಲಿ
ಹೃದಯ ಕಡಲಂಚಲಿ
ಕೆಂಪು ವರ್ಣ ಚೆಲ್ಲುತಾ
ಮುಡಿ ಬಂದ ಹೆಸರು... ನಿನ್ನದು

ಮಗುವ ನಗುವಿನಲಿ
ರೇಶ್ಮೆಯ ಸ್ಪರ್ಶದಲಿ
ನವಿರು ಭಾವನೆಯ ಕಾರಂಜಿಯಾಗಿ
ಚಿಮ್ಮಿದ ಹೆಸರು..ನಿನ್ನದು

ಪ್ರೀತಿ ಸ್ವರ್ಗದಲಿ
ಅಮೃತ ಸರೋವರದಲಿ
ಕಿನ್ನರಿಯಾಗಿ
ದಾಹ ತೀರಿಸಿದ ಹೆಸರು..ನಿನ್ನದು

ದೇಹದ ಪ್ರತಿ ಉಸಿರಲಿ
ಜೀವದ ಕೊನೆನಾಳೆಯಲಿ
ಬದುಕಿನ ಸೆಲೆಯಾಗಿ
ಉಕ್ಕುವ ಹೆಸರು..ನಿನ್ನದು

ಬಾಳ ಹಾದಿಯಲಿ
ಹೆಜ್ಜೆ ಹೆಜ್ಜೆಯಲಿ
ಜನ್ಮಜನ್ಮದ ಜೊತೆಯಾಗಿ
ನಡೆವ ಆ ಹೆಸರು..ನನ್ನ ಹುಡುಗಿಯ ಹೆಸರು

***********************************************
ಕವನಾರ್ಪಣೆ: ನನ್ನ ಹುಡುಗಿಗೆ

ನಿಮಗೆಲ್ಲರಿಗೂ ಪ್ರೇಮಿಗಳ ದಿನದ ಶುಭಾಶಯಗಳು
***********************************************

Sunday, February 04, 2007

ಕಾರ್ಮೋಡ ಚದುರಿದಾಗ..

ಕಾರ್ಮೋಡವೊಂದು
ಸೂರ್ಯನ ಒಂದು ಕ್ಷಣ
ಮಂಕಾಗಿಸಿತ್ತೆ
ಉಕ್ಕಿ ಹರಿಯುತ್ತಿದ್ದ
ಶರಧಿ ಒಂದು ಕ್ಷಣ
ತೀರದಿಂದ ದೂರಹೋಗಿತ್ತೆ

ಆ ರಾತ್ರಿ
ಕಣ್ಣಿಗೆ ನಿದ್ದೆಯಿಲ್ಲ
ಹೊಟ್ಟೆಗೆ ಹಸಿವಿರಲಿಲ್ಲ
ಮನದಲೆಲ್ಲೋ ಆಳವಾಗಿ
ನಾಟಿದ್ದ ತೀಕ್ಷ್ಣವಾದ ವಾಗ್ಬಾಣ

ಒಂದೊಂದು ಕ್ಷಣ
ಒಂದೊಂದು ಯುಗದಂತೆ
ಕೊನೆಗೂ ಕತ್ತಲ ರಾತ್ರಿ ಕಳೆದಿತ್ತು..

ಮುಂಜಾವಿನ ಪ್ರಖರ ಸೂರ್ಯ
ಕವಿದಿದ್ದ ಕಾರ್ಮೋಡವನ್ನು ಓಡಿಸಿದ್ದ
ಶರಧಿ ರಭಸವಾಗಿ ತೀರದೆಡೆ
ಉಕ್ಕಿ ಹರಿಯ ತೊಡಗಿತ್ತು
ಒಲವು ನಾಟಿದ್ದ ಬಾಣವನ್ನು ಕಿತ್ತು
ಅಲ್ಲಿಗೆ ಪ್ರೀತಿಯ ಮದ್ದು ಹಚ್ಚಿತ್ತು

ಶರಧಿಯ ಮತ್ತದೇ
ನಿಷ್ಕಂಳಕ ಪ್ರೀತಿ
ಸೂರ್ಯನ ಮತ್ತದೇ
ಬೆಚ್ಚಗಿನ ಅಪ್ಪುಗೆ
ಅದೇ ಜೇನಿನ ಮಾತು
ಅದೇ ಒಲವಿನ ಹಾಡು

ಎನೂ ಬದಲಾಗಿಲ್ಲ

ಮೊದಲಿಗಿಂತ ಇನ್ನೂ ಹೆಚ್ಚು
ತುಡಿವ ಮನಗಳು
ಮೊದಲಿಗಿಂತ ಇನ್ನೂ ಹೆಚ್ಚು
ಬಯಸುವ ಹೃದಯಗಳು
ಮೊದಲಿಗಿಂತ ಇನ್ನೂ ಹೆಚ್ಚು
ಪ್ರೀತಿಸುವ ಜೀವಗಳು

ಎನೂ ಬದಲಾಗುವುದಿಲ್ಲ

Thursday, January 18, 2007

ಮಿಸ್ಟಿರೀ ಪಾಯಿಂಟ್

ಅವತ್ತು ನಾವು ಹೊರಟ ಜಾಗಕ್ಕೆ ಇದ್ದ ಹೆಸರಲ್ಲೇ ಒಂದು ಕೌತಕವಿತ್ತು... 'ಮಿಸ್ಟಿರೀ ಸ್ಪಾಟ್' !

ಕುಪರ್ಟಿನೋದಿಂದ ೨ ಗಂಟೆ ಡ್ರೈವ್ ನಂತರ ನಾವು ಒಂದು ಕಾಡಿನಂತ ಜಾಗ ಹೊಕ್ಕಾಗ ನಾವು ನಿಜಕ್ಕೂ 'ಮಿಸ್ಟಿರೀ ಸ್ಪಾಟ್' ಕಡೆ ಹೊರಟಿದ್ದಿವಾ ಅಥವಾ ಅದು ಎಲ್ಲಿದೆ ಅಂತಾ ಹುಡುಕೋದೇ ಒಂದು 'ಮಿಸ್ಟರೀ' ಆಗೋತ್ತೋ ಅಂತಾ ಅನಿಸಿಕೆ ನಮ್ಮಲ್ಲಿ. ರಸ್ತೆ ಫಲಕಗಳನ್ನು ಪಾಲಿಸಿಕೊಂಡು ಕೊನೆಗೂ ಆ ಕಾಡಿನ ಮಧ್ಯೆ ಒಂದು ಅತೀ ಚಿಕ್ಕ ಗುಡ್ಡದ ಹತ್ತಿರ ಬಂದು ನಿಂತೆವು. ಎದುರಲ್ಲೇ 'ಮಿಸ್ಟಿರೀ ಸ್ಪಾಟ್‍ಗೆ ಪ್ರವೇಶ ದ್ವಾರ' ಅಂತಾ ದೊಡ್ಡ ಫಲಕ.

೫ $ ಕೊಟ್ಟು ಪ್ರವೇಶ ಚೀಟಿ ಪಡೆದು, ಒಂದು ಹತ್ತು ನಿಮಿಷ ಕಾಯ್ದೆವು. ೨೦ ಜನರ ಗುಂಪು ಮಾಡಿ ಒಳೆಗೆ ಬಿಡ್ತಾ ಇದ್ದರು. ಒಬ್ಬ 'ಮಿಸ್ಟಿರೀ ಸ್ಪಾಟ್'ನ ಗೈಡ್ ಬಂದು ನಮ್ಮನ್ನು ಒಳೆಗೆ ಕರೆದುಕೊಂಡು ಹೋದ. ಮೊದಲು ಅವನು ಕರೆದುಕೊಂಡು ಹೋಗಿ ನಮ್ಮನೆಲ್ಲಾ ಒಂದು ಸ್ಥಳದ ಸುತ್ತ ನಿಲ್ಲಿಸಿದ. ಅಲ್ಲಿ ನಡುವಲ್ಲಿ ಇದ್ದವು ಎರಡು ಚಿಕ್ಕ ಸಿಮೆಂಟ್‍ನ ಕಟ್ಟೆ.ಗುಂಪಿನಿಂದ ೫ ಅಡಿ ಮತ್ತು ಐದುವರೆ ಅಡಿ ಎತ್ತರದ ಇಬ್ಬರನ್ನು ಕರೆದ ಗೈಡ್ ಅವುಗಳ ಮೇಲೆ ಎದುರುಬದುರಾಗಿ ನಿಲ್ಲಲು ಹೇಳಿದ. ಅಂತಾ ವಿಶೇಷವೇನು ಕಾಣಲಿಲ್ಲ.ಈಗ ಅವರಿಬ್ಬರಿಗೆ ಪರಸ್ಪರ ಜಾಗ ಬದಲಾಯಸಿಕೊಳ್ಳಲು ಹೇಳಿದ. ಈಗ ಕಾದಿತ್ತು ಆಶ್ಚರ್ಯ, ೫ ಅಡಿಯ ವ್ಯಕ್ತಿಯ ಎತ್ತರ ಐದುವರೆ ಅಡಿಯ ವ್ಯಕ್ತಿಯಷ್ಟೇ ಅನಿಸ್ತಾ ಇತ್ತು !

ಅದರ ಬಗ್ಗೆ ಯೋಚನೆ ಮಾಡ್ತ ಇದ್ದಾಗೆ ಮುಂದಿನ ಜಾಗಕ್ಕೆ ಹೋದೆವು.ಅದೊಂದು ಇಳಿಜಾರು. ನೀವು ಇಳಿಜಾರಿನಲ್ಲಿ ನಿಂತಾಗ ನಿಮ್ಮ ಕಾಲು, ಆ ಇಳಿಜಾರಿಗೆ ಯಾವ ಕೋನದಲ್ಲಿ ಇದೆ ನೋಡಿ. ೯೦ ಡಿಗ್ರಿ ಕೋನದ ಅಸುಪಾಸು ಇರುತ್ತೆ. ಆದರೆ ಇಲ್ಲಿ ನಮ್ಮ ಕಾಲು ಹಾಗೀರದೆ ಸುಮಾರು ೧೨೦ ಡಿಗ್ರಿ ಕೋನದಲ್ಲಿತ್ತೇ? ನಮಗೆ ಇನ್ನೂ ಆಶ್ಚರ್ಯ.ಅದು ಮುಗಿಯುವ ಮೊದಲು ಗೈಡ್ ಕರೆದುಕೊಂಡು ಹೋಗಿದ್ದು 'ಫನ್ ಹೌಸ್'ಗೆ.

ಮರದಿಂದ ಮಾಡಿದ ಆ ಮನೆ ನೆಲಕ್ಕೆ ೩೦ ಡಿಗ್ರಿ ಕೋನಕ್ಕೆ ಬಾಗಿ ವಿಚಿತ್ರವಾಗಿ ಕಾಣುತಿತ್ತು. ಗೈಡ್ ಈಗ ಒಂದು ಸಮದಟ್ಟವಾದ ಮರದ ಹಲಗೆಯ ಮೇಲೆ ಒಂದು ಚೆಂಡನ್ನು ಇಟ್ಟ. ಸಮದಟ್ಟವಾದ್ದರಿಂದ ಚೆಂಡು ಅಲ್ಲೇ ನಿಲ್ಲುತ್ತೆ ಅಂದುಕೊಳ್ಳುವಷ್ಟರಲ್ಲಿ ಅದು ಆಗಲೇ ಆ ಮನೆ ಕಡೆ ಉರುಳೋಕೆ ಶುರುವಾಗಿತ್ತು.ಈಗ ಆ ಮನೆ ಒಳೆಗೆ ಹೊಕ್ಕಾಗ ಯಾವುದೋ ಒಂದು ಕಾಣದ ಕೈ ದೂಕುವಂತ ಅನುಭವ. ನಾವೆಲ್ಲರೂ ನೆಲಕ್ಕೆ ೪೫ ಡಿಗ್ರಿಯಲ್ಲಿ ಇದ್ದೀವಿ ಅನಿಸ್ತಿತ್ತು. ಅದೇ ಕೋಣೆಯಲ್ಲಿದ್ದ ಟೇಬಲ್ ಮೇಲೆ ಹತ್ತಿದ ಗೈಡ್ ಮೆಟ್ರಿಕ್ಸ್ ಸಿನಿಮಾ ಶೈಲಿಯಲ್ಲಿ ಅಲ್ಲಿಂದ ಗಾಳಿಯಲ್ಲಿ ನೆಲಕ್ಕೆ ಸುಮಾರು ೩೦ ಡಿಗ್ರಿ ಕೋನದಲ್ಲಿ ನಿಲ್ಲುವುದೇ ! ನಾವು ನೋಡೇಬಿಡೋಣ ಅಂದುಕೊಂಡು ಆ ಟೇಬೆಲ್ ಮೇಲಿಂದ ನಿಂತು ಮುಂದೆ ಬಾಗಿದೆವು. ಅರೇ ! ನಾವು ಸಹ ಗೈಡ್‍ನಂತೆ ಗಾಳಿಯಲ್ಲಿ ನಿಂತಂತೆ ಭಾಸವಾಗ್ತಿತ್ತು.ಗುರುತ್ವಾಕರ್ಷಣೆಯ ನಿಯಮಗಳೆಲ್ಲಾ ಇಲ್ಲಿ ಮರೆತು ಹೋದಂತೆ ಕಾಣುತಿತ್ತು.

ಆ ಮನೆ ಒಳಗಿದ್ದ ಬಾಗಿಲಲ್ಲಿ ಜೋತು ಬಿದ್ದಾಗ ನಮ್ಮ ದೇಹ ಮತ್ತೆ ಯಾವ ಕಡೆಗೋ ಎಳೆದಂತೆ ಅನಿಸಿತು. ಬಾಗಿಲಿಂದ ಅಥವಾ ಎತ್ತರದ ಬಾರ್‌ನಿಂದ ಜೋತು ಬಿದ್ದಾಗ ನಮ್ಮ ದೇಹ ಆ ಬಾಗಿಲಿಗೆ ಅಥವಾ ಬಾರ್‌ಗೆ ಸಮಾನಂತರವಾಗಿರುತ್ತೆ.ಆದರೆ ಇಲ್ಲಿ ಬಾಗಿಲಿಗೆ ದೇಹ ಮತ್ತೆ ೪೫ ಡಿಗ್ರಿ ಕೋನದಲ್ಲಿರುವುದೇ.

ಎನೋ ವಿಚಿತ್ರವಾಗಿತ್ತು ಆ ಮರದ ಮನೆ !

ಅಲ್ಲಿಂದ ಹೊರಬಂದಾಗ ಗೈಡ್ ವಿವಿಧ ಎತ್ತರದ ೪-೫ ಜನರನ್ನು ಒಂದು ಕಟ್ಟೆ ಮೇಲೆ ಎತ್ತರಕ್ಕೆ ಅನುಗುಣವಾಗಿ ನಿಲ್ಲಲು ಹೇಳಿದ. ಎಲ್ಲಾ ಸರಿಯಾಗಿ ಇತ್ತು. ನಂತರ ಆ ಗುಂಪಿನಲ್ಲಿ ಅತೀ ಉದ್ದದ ಮತ್ತು ಅತೀ ಚಿಕ್ಕ ವ್ಯಕ್ತಿಗಳನ್ನು ಜಾಗ ಅದಲುಬದಲಿಸುವಂತೆ ಹೇಳಿದ. ಮತ್ತೆ ಆಶ್ಚರ್ಯ ಕಾದಿತ್ತು. ಅವರಿಬ್ಬರೂ ಒಂದೇ ಎತ್ತರದಲ್ಲಿರುವಂತೆ ಅನಿಸುತಿತ್ತು !

ಗೈಡ್ ಈಗ ಆ ಮನೆಯ ಸುತ್ತ ಇರೋ ಮರಗಳ ಬಗ್ಗೆ ಹೇಳ್ತಾ ಇದ್ದ. ಅಲ್ಲಿದ್ದ ಎಲ್ಲಾ ಮರಗಳು ವಿಚಿತ್ರವಾದ ಕೋನದಲ್ಲಿ ಬಾಗಿದಂತೆ ಅನಿಸ್ತಾ ಇದ್ದವು ಅಥವಾ ಗೈಡ್ ಹಾಗೇ ಹೇಳಿದ ಮೇಲೆ ಹಾಗೇ ಅನಿಸಿತೋ ತಿಳಿಯಲಿಲ್ಲ. ಅವನು ಹೇಳಿದ ಹಾಗೇ ಅಲ್ಲಿ ಒಂದು ಪಕ್ಷಿಗಳು ಇರಲಿಲ್ಲ.

ಅಲ್ಲಿಂದ ಹೊರಬಂದಾಗ ತಲೆಯಲಿ ನೂರೆಂಟು ಪ್ರಶ್ನೆ.

ಗೈಡ್ ಹೇಳಿದ ಹಾಗೇ ಇದು 'ವಿಜ್ಞಾನ ಉತ್ತರಿಸಿಲಾಗದ ಕೌತಕವೇ?' ಅಥವಾ ಇದೆಲ್ಲಾ 'ಆಪ್ಟಿಕಲ್ ಇಲ್ಯೂಷನ್' ಪ್ರಭಾವವೇ? ಅಥವಾ ಎಲ್ಲೋ ಓದಿದ ಹಾಗೇ ಅಲ್ಲಿರಬಹುದಾದ ವಿಪರೀತ ಖನಿಜದ ಪ್ರಭಾವವೇ ಅದು ? ಅಲ್ಲಿ ನಿಜವಾಗಿಯೂ ಗುರುತ್ವಾಕರ್ಷಣ ಶಕ್ತಿ ಬೇರೆ ಕಡೆ ಇದ್ದಾಗೆ ಇಲ್ಲವೇ? ಅಥವಾ ಇನ್ನೂ ಕೆಲವು ಜನ ಹೇಳುವಂತೆ ಅದು ಅನ್ಯಗ್ರಹಿಗಳು ಭೂಮಿಯಲ್ಲಿ 'ಹಾರುವ ತಟ್ಟೆ' ಬಚ್ಚಿಟ್ಟ ಸ್ಥಳವೇ?

ಪ್ರಶ್ನೆಗಳು ಪ್ರಶ್ನೆಗಳಾಗೇ ಉಳಿಯುತ್ತೆ...

ಮಿಸ್ಟಿರೀ ಪಾಯಿಂಟ್‍ನಿಂದ ನಾವು ಹೊರಟಿದ್ದು '೧೭ ಮೈಲಿಗಳ ಡ್ರೈವ್'ಗೆ . ಈ ಜಾಗ ಹೆಸರೇ ಹೇಳುವಂತೆ ೧೭ ಮೈಲಿಗಳ ಸುಂದರ ಕಡಲು ತೀರದ ಉದ್ದಕ್ಕೂ ಸಾಗುವ ರಸ್ತೆ. ಇದರಲ್ಲಿ ಸುಮಾರು ೨೦ ಪಾಯಿಂಟ್‍ಗಳು ಸಿಗುತ್ತೆ. ಅಲ್ಲಿಂದ ಫೆಸಿಪಿಕ್ ಎಷ್ಟು ಅದ್ಬುತವಾಗಿ ಕಾಣುತಿತ್ತು.ಫೆಸಿಪಿಕ್ ಗ್ರೂವ್‍ನಿಂದ ಶುರುವಾಗೋ ಇದು ಸ್ಪಾನಿಷ್ ಬೇ, ಪೆಬೆಲ್ ಬೀಚ್, ಬರ್ಡ್ಸ್ ಎನ್‍ಕ್ಲೋವ್, ಲೋನ್ಲಿ ಸೈಪ್ರ್‍ಅಸ್ ಟ್ರೀ..ಹೀಗೆ ಕೆಲವು ವಿಶಿಷ್ಟವಾದ ಪ್ರೇಕ್ಷಣೀಯ ಪಾಯಿಂಟ್‍ಗಳ ಮೂಲಕ ಹೋಗುತ್ತೆ.

೧೭ ಮೈಲ್ ಡ್ರೈವ್ ನಂತರ ನಾವು ಮರಳಿ ಕುಪರ್ಟಿನೋಗೆ ಹೊರಟಾಗ ಆಗಲೇ ಸಂಜೆ ಆಗುತಿತ್ತು.

ಅಂದು ಬೆಳಿಗ್ಗೆ ನೋಡಿದ 'ಮಿಸ್ಟಿರೀ ಪಾಯಿಂಟ್' ಬಗ್ಗೆ ಯೋಚಿಸುತ್ತಿದ್ದೆ, ಆಗ ಅನಿಸಿದ್ದು ಇವೆಲ್ಲಕ್ಕಿಂತ ಮಿಗಿಲಾದ ಒಂದು 'ಮಿಸ್ಟಿರೀ ಪಾಯಿಂಟ್' ಒಂದು ಇದೆ ಅಂತಾ. ಅದು ಬೇರೆ ಎಲ್ಲೂ ಇಲ್ಲ, ನಮ್ಮಲ್ಲೇ ಇರೋದು ಅದು. ಅದೇ ನಮ್ಮ ಮನಸ್ಸು ! ಸಂತಸ, ದುಃಖ, ಆಸೆ, ನಿರಾಸೆ, ಮೋಹ, ದಾಹ, ಸಿಟ್ಟು, ಕೋಪ, ಕರುಣೆ, ವಾತ್ಸಲ್ಯ..ಹೀಗೆ ಹತ್ತು ಹನ್ನೊಂದು ಭಾವನೆಗಳು ಹುಟ್ಟೋದು ಒಂದೇ ಜಾಗದಲ್ಲಿ, ಅದು ಮನಸೆಂಬ ಈ ಮಿಸ್ಟಿರೀ ಪಾಯಿಂಟ್‍ನಲ್ಲಿ.

ಈ ಮನಸಿಗಿಂತ ಬೇರೆ 'ಮಿಸ್ಟಿರೀ ಪಾಯಿಂಟ್' ಉಂಟೇ ?

Sunday, January 14, 2007

ಸಂಕ್ರಮಣ

ಸೂರ್ಯ ಮಕರ ರಾಶಿಗೆ ಪ್ರವೇಶಿಸಿದಂತೆ
ನನ್ನ ಜೀವನದಲಿ ಬಂದವಳು ನೀನು

ಸುಗ್ಗಿಕಾಲ ರೈತನಿಗೆ ಹುಲುಸು ಬೆಳೆ ತಂದಂತೆ
ನನ್ನ ಬಾಳಿನಲ್ಲಿ ತುಂಬು ಪ್ರೀತಿ ತಂದವಳು ನೀನು

ಕಬ್ಬಿನ ಜಲ್ಲೆಗಳ ಸಿಹಿ ಮರೆಸುವಂತೆ
ನನಗೆ ಜೇನು ಉಣಿಸಿದವಳು ನೀನು

ಮನೆಗಳಲಿ ಎಳ್ಳು-ಬೆಲ್ಲವಾ ಬೀರಿದಂತೆ
ನನ್ನ ಮನದಲಿ ಅಮೃತ ಬೀರಿದವಳು ನೀನು

ಲಲನೆಯರು ಲಂಗ-ದಾವಣಿಯುಟ್ಟು ಸಂಭ್ರಮಿಸುವಂತೆ
ನನ್ನ ಹೃದಯಕೆ ಸಂಭ್ರಮ ಉಡಿಸಿ ನಲಿಸಿದವಳು ನೀನು

ರಂಗುರಂಗಿನ ಗಾಳಿಪಟಗಳು ಆಗಸದಲಿ ಚಿತ್ತಾರ ಮೂಡಿಸುವಂತೆ
ನನ್ನ ಕನಸುಗಳಲಿ ಸುಂದರ ಚಿತ್ತಾರ ಮೂಡಿಸಿದವಳು ನೀನು

ಬಣ್ಣದ ಸಕ್ಕರೆ ಗೊಂಬೆಗಳು ಸವಿಯಂತೆ
ನನ್ನ ಸಕ್ಕರೆ ಗೊಂಬೆಯೇ ಆದವಳು ನೀನು

ಜಗಕೆ
ಮಕರ ಸಂಕ್ರಮಣ
ನಮಗೆ
ಪ್ರೇಮ ಸಂಕ್ರಮಣ

Saturday, January 06, 2007

ನನ್ನಾಕೆ

ನನ್ನಾಕೆ ನಡೆದರೆ
ಮೆಲ್ಲ ಬೀಸುವ ತಂಗಾಳಿ ಸುಳಿದಂತೆ
ನನ್ನಾಕೆ ಬಂದು ನಿಂತರೆ
ಸೊಬಗ ರಾಶಿಯೊಂದು ಮೂರ್ತಿವೆತಂತೆ

ನನ್ನಾಕೆ ನುಡಿದರೆ
ವೀಣೆಯೊಂದು ಉಲಿದಂತೆ
ನನ್ನಾಕೆ ನೋಟ ಬೀರಿದರೆ
ಸಾಲು ದೀಪ ಹೃದಯದಿ ಬೆಳಗಿದಂತೆ

ನನ್ನಾಕೆ ನಕ್ಕರೆ
ದುಂಡು ಮಲ್ಲಿಗೆ ಮಗ್ಗು ಅರಳಿದಂತೆ
ನನ್ನಾಕೆ ನಾಚಿದರೆ
ಸಂಜೆ ಸೂರ್ಯ ಕೆಂಪಾದಂತೆ

ನನ್ನಾಕೆ ಬೇಸರವಾದರೆ
ಆಕಾಶದ ನಕ್ಷತ್ರಗಳ ಬೆಳಕು ಮುಗಿದು ಮಂಕಾದಂತೆ
ನನ್ನಾಕೆ ಒಲಿದರೆ
ನೂರು ಚಂದ್ರರ ಬೆಳದಿಂಗಳ ರಾತ್ರಿಯಂತೆ

ನನ್ನಾಕೆ ಸ್ಪರ್ಶಿಸಿದರೆ
ರೋಮಾಂಚನದಿ ಮನ ಉಯ್ಯಾಲೆಯಂತೆ
ನನ್ನಾಕೆ ಬಾಹು ಬಂಧಿಸಿದರೆ
ಬಿಸಿಲ ಪಯಣಿಗ ಮರದ ತಂಪು ನೆರಳು ಸೇರಿದಂತೆ

ನನ್ನಾಕೆ ನೆನೆದರೆ
ಮುಂಗಾರ ಮಳೆಗೆ ಕಾದು ನಿಂತ ಭುವಿಯಂತೆ
ನನ್ನಾಕೆ ಬಯಸಿದರೆ
ಸಪ್ತಸಾಗರಗದ ಆಲೆಗಳು ಒಮ್ಮೆಗೆ ಉಕ್ಕಿ ಹರಿದಂತೆ

ನನ್ನಾಕೆ..
ನನ್ನ ಮೈ-ಮನಗಳ ಒಡತಿ ಆಕೆ
ನನ್ನಾಕೆ..
ನನ್ನ ಕನಸು-ನನಸುಗಳ ಶಿಲ್ಪಿ ಆಕೆ


*********************************************
ವಿಕ್ರಾಂತ ಕರ್ನಾಟಕದಲ್ಲಿ ಈ ಕವನ ಪ್ರಕಟಮಾಡಿದ್ದಕ್ಕೆ ವಿಕ್ರಾಂತದ ಬಳಗಕ್ಕೆ ವಂದನೆಗಳು
*********************************************