Friday, July 17, 2009

ಬಿಗ್ ಐಲ್ಯಾಂಡ್ ಆಕಾಶಯಾನ

ಹಿಲೋ ವಿಮಾನ ನಿಲ್ದಾಣದಿಂದ ನಮ್ಮ ಹೆಲಿಕಾಪ್ಟರ್ ಪ್ರವಾಸ ಶುರುವಾಗಲಿತ್ತು.

ಹೋಟೆಲ್‍ನಿಂದ ವಿಮಾನ ನಿಲ್ದಾಣದ ಕಡೆ ಜಿಪಿಎಸ್ ತೋರಿಸಿದ ಮಾರ್ಗದಲ್ಲಿ ಚಲಿಸುತ್ತಿದ್ದ ನಾವು ಯಾಕೋ ದಾರಿ ಸರಿಯಿಲ್ಲವೆನಿಸ ತೊಡಗಿತ್ತು. ನಾವು ಊಹಿಸಿದಂತೆ, ಅದು ವಿಮಾನ ನಿಲ್ದಾಣ ತೋರಿಸಿದೆ ಯಾರದೋ ಮನೆಯನ್ನು ತೋರಿಸಿತ್ತು ! ಮತ್ತೆ ಅಲ್ಲಿಂದ ವಿಮಾನ ನಿಲ್ದಾಣದ ಕಡೆ ಕಾರ್ ತಿರುಗಿಸಿ, ಅಲ್ಲಿ ಮುಟ್ಟಿದಾಗ ನಮ್ಮ ಹೆಲಿಕಾಪ್ಟರ್ ಪ್ರವಾಸಕ್ಕೆ ಸಿದ್ಧತೆಗಳು ನಡೆದಿದ್ದವು.

ಹೆಲಿಕ್ಟಾಪರ್ ಪ್ರವಾಸಕ್ಕೆ ಬೇಕಾದ ಪೂರ್ವಭಾವಿ ನಿರ್ದೇಶನಗಳನ್ನು ಪಡೆದು, ’ಬ್ಲೂ ಹವಾಯಿಯನ್’ ಹೆಲಿಕಾಪ್ಟರ್ ಎರಿದೆವು. ಹವಾಯಿ ದ್ವೀಪಗಳ ವಾಯು ವೀಕ್ಷಣೆ ಜನಪ್ರಿಯ. ಅದರಲ್ಲೂ ’ಬ್ಲೂ ಹವಾಯಿಯನ್’ ಸಂಸ್ಥೆ ಸುಪ್ರಸಿದ್ಧ. ನಮ್ಮದು ೬ ಆಸನಗಳ ನೀಲಿ ಬಣ್ಣದ ಆಕರ್ಷಕ ’ಎ-ಸ್ಟಾರ್’ಹೆಲಿಕಾಪ್ಟರ್. ನನ್ನ ಮತ್ತು ನನ್ನಾಕೆಯ ಆಸನಗಳು ಪೈಲೆಟ್ ಪಕ್ಕದ್ದು.

ಹೆಲಿಕಾಪ್ಟರ್ ಮೆಲ್ಲಗೆ ಓಡುತ್ತಾ ಕ್ರಮೇಣ ವೇಗ ಹೆಚ್ಚಿಸಿಕೊಂಡು, ನೆಲ ಬಿಟ್ಟು ಗಾಳಿಗೆ ಹಾರಿದಾಗ ’ವಾವ್’ ಎಂಬ ಉದ್ಗಾರ. ಕೆಲವೇ ನಿಮಿಷದಲ್ಲಿ ಹಾರುತ್ತಾ ನಾವು ಸಮುದ್ರದ ಮೇಲಿದ್ದೆವು. ಕೆಳಗೆ ನಮ್ಮ ಹೋಟೆಲ್ ಸಮುದ್ರ ದಂಡೆಯ ಮೇಲೆ ಚಿಕ್ಕ ರಟ್ಟಿನ ಮನೆಯಂತೆ ಕಾಣುತಿತ್ತು. ಹಾಗೇ ಚಿಕ್ಕ ಕೋಕೋನೆಟ್ ದ್ವೀಪ ಇನ್ನೂ ಚಿಕ್ಕದಾಗಿ ಮತ್ತು ಸುಂದರವಾಗಿ ಕಾಣುತಿತ್ತು. ಹಿಲೋ ನಗರದ ಅಂಚಿನಲ್ಲಿ ಹಾರುತ್ತಾ ಈಗ ದಟ್ಟ ಮಳೆಕಾಡಿನ ಕಡೆಗೆ ಹಾರಿತ್ತು. ನಮ್ಮ ಪೈಲೆಟ್ ವಿಲ್‍ನ ನಿರಂತರ ವೀಕ್ಷಕ ವಿವರಣೆ ಮುಂದುವರೆದಿತ್ತು.


ಹಸಿರು ಮಳೆಕಾಡಿನ ಮೇಲೆ ತೇಲುವಾಗ, ಚಿಕ್ಕ-ದೊಡ್ಡ ಜಲಪಾತಗಳು ಎದುರಾದವು. ಎಷ್ಟೋ ಜಲಪಾತಗಳು ದಟ್ಟ ಕಾಡಿನ ನಡುವೆ ಇದ್ದು ಕೇವಲ ಹಾರುವಾಗ ಕಾಣಬಹುದೆಂದು ನಮ್ಮ ಪೈಲೆಟ್ ಹೇಳುತ್ತಿದ್ದ. ಸುಂದರ ಜಲಪಾತಗಳು - ಹಸಿರು ಕಾನನದ ನಂತರ ಮುಂದೇನು ಎನ್ನುವಾಗ, ಯಾವುದೋ ಮುಸುಕು ಕವಿದ ಪ್ರದೇಶದೊಳಗೆ ನಮ್ಮ ಹೆಲಿಕಾಪ್ಟರ್ ಹಾರಿತ್ತು.

ಕೆಳಗಡೆ ಕಪ್ಪನೆ ಕಲ್ಲಿನಿಂದ ನೆಲವೆಲ್ಲ ಅವರಿಸಿದಂತಿತ್ತು , ಕೆಲವಡೆ ನೆಲದಿಂದ ಹೊಗೆ ಬರುತಿತ್ತು. ಆಗ ಗೊತ್ತಾಗಿದ್ದು ನಾವು ಜ್ವಾಲಾಮುಖಿ ಪ್ರದೇಶದಲ್ಲಿದ್ದೇವೆಂದು. ಆ ಕಪ್ಪನೆ ಕಲ್ಲು, ಜ್ವಾಲಾಮುಖಿಯಿಂದ ಹರಿದು ಬಂದ ಲಾವಾರಸ ತಣ್ಣಗಾಗಿ ಆದ ಲಾವಾ ರಾಕ್. ನೆಲದೊಳಗೆ ಹರಿಯುತ್ತಿರುವ ಲಾವಾದ ಬಿಸಿಯಿಂದ ಉಂಟಾಗಿದ್ದು, ನೆಲದಿಂದ ಅಲ್ಲಲ್ಲಿ ಬರುತ್ತಿದ್ದ ಹೊಗೆ.

ನೋಡಿದ ಕಡೆಯಲೆಲ್ಲಾ ಕಪ್ಪನೆ ಲಾವಾ ಶಿಲೆ. ಆಗ ಕಂಡಿದ್ದು ಆ ಶಿಲೆಯ ನಡುವೆ ಕಿತ್ತಲೆ ಬಣ್ಣದ ಒಂದು ಜಗಜಗಿಸುವ ರಂಧ್ರ. ಹತ್ತಿರ ಹಾರುತ್ತಿದ್ದಂತೆ ಅದರಲ್ಲೇನೊ ಕುದಿಯುತ್ತಿರುವಂತೆ ಕಾಣಿಸತೊಡಗಿತ್ತು. ಅದು ಲಾವಾ ರಸ. ಆ ಒಂದು ಚಿಕ್ಕ ರಂಧ್ರದಿಂದ ಆ ಲಾವಾ ರಸ ಕುದಿಯುವುದು ಕಾಣುತಿತ್ತು. ಆ ಲಾವಾ ರಂಧ್ರದಿಂದಾಚೆ ಹಾರಿ ಈಗ ಹೆಲಿಕಾಪ್ಟರ್ ಅರ್ಧ ಅರೆಬರೆ ಕಾಡಿನಂತಿದ್ದ ಪ್ರದೇಶದ ಮೇಲೆ ಹಾರುತ್ತಿತ್ತು.

ಅದು ಜ್ವಾಲಾಮುಖಿಯಿಂದ ಹೊಮ್ಮಿದ ಲಾವಾ, ಅದರಿಂದು ಬರುವ ಸಲ್ಫರ್ ಡೈಆಕ್ಸೈಡ್‍ದಿಂದ ಸಾಯುತ್ತಿದ್ದ ಮರಗಳು. ಈ ಎಲ್ಲದರ ಮಧ್ಯೆ ಇತ್ತು ಆ ಒಂಟಿ ಮನೆ. ಜ್ವಾಲಾಮುಖಿ ಬರುವ ಮುಂಚೆ ಇದ್ದ ಮನೆಗಳೆಲ್ಲಾ ಹಾಳಾಗಿ ಹೋಗಿದ್ದರೂ, ಈ ಒಂದು ಮನೆ ಮಾತ್ರ ಏನೂ ಆಗದೇ ಉಳಿದಿತ್ತು. ಅಲ್ಲಿದ್ದ ಜನರೆಲ್ಲಾ ಆ ಜ್ವಾಲಾಮುಖಿ ಪ್ರದೇಶ ಬಿಟ್ಟು ಬೇರೆಡೆಗೆ ಹೋದರೂ ಆ ಮನೆಯವನೊಬ್ಬ ಅಲ್ಲೇ ಉಳಿದುಬಿಟ್ಟಿದ್ದ.

ಆತನ ಹೆಸರು ಜಾಕ್ ಥಾಂಪ್‍ಸನ್. ಆತನಿಗೆ ಈಗ ೭೦ರ ಹರೆಯ. ಈಗಲೂ ಆತ ಅದೇ ಜ್ಚಾಲಾಮುಖಿ ಪ್ರದೇಶದ ಒಂಟಿ ಮನೆಯಲ್ಲಿ ಇದ್ದಾನೆ. ಆಗಾಗ ಗಣ್ಯ ಅತಿಥಿಗಳು ಆತನ ಒಂಟಿಮನೆಗೆ ಬಂದು ಕಾಲ ಕಳೆಯುತ್ತಾರಂತೆ.


ಈಗ ದೂರದಲ್ಲಿ ರಭಸವಾಗಿ ಬರುತ್ತಿದ ಬೆಳ್ಳನೆ ಹೊಗೆ ಕಾಣುತಿತ್ತು. ಹಾರುತ್ತಿದ್ದಂತೆ ಎದುರಿಗೆ ಸಮುದ್ರ ತೀರ. ಈ ಹೊಗೆ ಆ ತೀರದಿಂದ ಬರುತ್ತಿದ್ದು, ಹತ್ತಿರ ಹೋದಾಗ ಕಂಡಿದ್ದು ಅಲ್ಲಿ ಸಮುದ್ರಕ್ಕೆ ಹರಿಯುತ್ತಿದ್ದ ಲಾವಾ ರಸ. ಬೆಂಕಿಯಂತಹ ಲಾವಾ ಆ ತಣ್ಣನೆ ಸಮುದ್ರದ ನೀರಿಗೆ ಹರಿಯುತ್ತಿದ್ದಂತೆ, ಒಟ್ಟಿಗೆ ನೂರಾರು ಚಿಕ್ಕ ಚಿಕ್ಕ ಸ್ಫೋಟಗಳು. ಧೋ ಎಂದು ಆಕಾಶಕ್ಕೆ ಎಳುತ್ತಿದ್ದ ಹೊಗೆ. ಲಾವಾ ತಣ್ಣಗಾಗಿ ಕಪ್ಪನೆ ಚಿಕ್ಕ ಚಿಕ್ಕ ಕಣಗಳಾಗಿ ತೀರಕ್ಕೆ ಅಪ್ಪಳಿಸಿ ಅಲ್ಲಿ ಕಪ್ಪನೆ ಮರಳಿನ ತೀರ.

ಆ ಲಾವಾ-ಸಮುದ್ರದ ನಿರಂತರ ಕಲಹ ನೋಡುತ್ತಾ ಕೆಲವು ಕ್ಷಣ ಅದರ ಸುತ್ತು ಹಾಕಿ, ಮತ್ತೆ ಹೆಲಿಕಾಪ್ಟರ್ ಮರಳಿ ಹೆಲಿಪ್ಯಾಡ್‍ಗೆ ಹಾರತೊಡಗಿತು.

ಹೆಲಿಕಾಪ್ಟರ್ ನೆಲಕ್ಕೆ ಇಳಿದು, ಸೊಂಟಕ್ಕೆ ಬಿಗಿದಿದ್ದ ಪ್ಯಾರಾಚೂಟ್ ಪ್ಯಾಕ್ ಬಿಚ್ಚಿಕೊಟ್ಟು ಹೊರಬಿದ್ದಾಗ, ಕಣ್ಣು ತುಂಬಾ ಇನ್ನೂ ಲಾವಾ-ಸಮುದ್ರದ ರಮಣೀಯ ದೃಶ್ಯ ತೇಲುತಿತ್ತು.

ವಾಯುವೀಕ್ಷಣೆಯ ನಂತರ ನಮ್ಮ ಮುಂದಿನ ಪಯಣ, ಸುಂದರ ಜಲಪಾತಗಳ ತಾಣ ’ಅಕಕ ರಾಷ್ಟ್ರೀಯ ಉದ್ಯಾನವನ’.

ನಿತ್ಯ ಹರಿದ್ವರ್ಣ ಅರಣ್ಯದ ಮಧ್ಯೆ ಸುಮಾರು ೧-೧.೫ ಮೈಲಿ ದೂರದಲ್ಲಿ ನಡೆದಾಗ ಕಾಣುತ್ತೆ ಬಿಗ್ ಐಲೆಂಡ್‍ನ ಆ ಎರಡು ಸುಂದರ ಜಲಪಾತಗಳು.

ಸುಮಾರು ೧೦೦ ಅಡಿಗಳ ಕಹೂನ ಜಲಪಾತ, ಅದರ ಸನಿಹದಲ್ಲಿದೆ ಆಕಕ ಜಲಪಾತ ೪೪೨ ಅಡಿಗಳ ಮೋಹಕ ಜಲಪಾತ. ಅಲ್ಲಲ್ಲಿ ಚಿಕ್ಕ ತೊರೆಗಳು, ವಿನೂತನ ಹೂವುಗಳಿಂದ ಆ ಜಾಗ ವಿಭಿನ್ನ ಮತ್ತು ಸುಂದರವಾಗಿತ್ತು.

ಜಲಪಾತಗಳ ನೋಟ ಸವಿದು ಮರಳಿ ಬರುವಾಗ ರಸ್ತೆ ಪಕ್ಕವಿದ್ದ ಕಬ್ಬಿನ ಗದ್ದೆ ನನ್ನಾಕೆಯ ಕಣ್ಣಿಗೆ ಬಿತ್ತು. ಆಲ್ಲೇ ಕಾರ್ ನಿಲ್ಲಿಸಿದಾಗ , ಕಬ್ಬಿನ ಗದ್ದೆ ಕಡೆ ಓಡಿ, ಕಬ್ಬು ಮುರಿದು ಕೊಂಡು ಬಂದಿದ್ದಳು. ಕಬ್ಬು ಅಗಿಯುತ್ತಾ ಮತ್ತೆ ಸಮುದ್ರ ಪಕ್ಕದ ರಸ್ತೆಯಲ್ಲಿ ಡ್ರೈವ್ ಮಾಡುತ್ತಾ ಹೊರಟೆವು.

ಮತ್ತೊಮ್ಮೆ ಕಾರ್ ನಿಲ್ಲಿಸಿದ್ದು ಹವಾಯಿ ಕುಸುರಿಕಲೆಗಳ ಒಂದು ಚಿಕ್ಕ ಅಂಗಡಿ ಮುಂದೆ. ಅಲ್ಲಿನ ವೃದ್ಧ ದಂಪತಿಗಳು ತಮ್ಮ ಕೈಕೆಲಸದಿಂದ ಮಾಡಿದ ಚಿಕ್ಕ ಚಿಕ್ಕ ಕುಸುರಿ ಕೆಲಸಗಳು ಮನ ಸೆಳೆಯುತ್ತಿದ್ದವು. ಅಲ್ಲೊಂದಿಷ್ಟು ಖರೀದಿ ಮುಗಿಸಿ ಹಿಲೋ ಕಡೆ ಹೊರಟಾಗ ಮುಸ್ಸಂಜೆ.

ಹಿಲೋ ನಗರ ಸಂಜೆಗೆ ಕೆಂಪಾಗುತಿತ್ತು.

(ಮುಂದಿನ ಭಾಗದಲ್ಲಿ ಜ್ವಾಲಾಮುಖಿಯ ಮಧ್ಯೆ ಆಲೆದಾಟ)