Monday, July 05, 2010

ಜೋಗ ಬೋನಿಟೊ !!

ಅದು ೧೯೫೦

ವಿಶ್ವಕಪ್ ಪುಟ್ಬಾಲ್ ಆ ವರ್ಷ ಬ್ರೆಜಿಲ್‍ನಲ್ಲಿ, ಎಲ್ಲಕ್ಕೂ ಕಳಶವಿಟ್ಟಂತೆ ಅತಿಥೇಯ ಬ್ರೆಜಿಲ್ ಫೈನಲ್ ತಲುಪಿತ್ತು. ಫೈನಲ್‍ನಲಿ ಎದುರಾಳಿ ಉರುಗ್ವೆ. ಬ್ರೆಜಿಲ್ ವಿಜಯ ನಿರೀಕ್ಷಿಸಿ ಇಡೀ ಬ್ರೆಜಿಲ್‍ಗೆ ಬ್ರೆಜಿಲ್ ಕಾತರದಿಂದ ಕಾದಿತ್ತು. ಆದರೆ ಫೈನಲ್‍ನಲ್ಲಿ ಉರುಗ್ವೆ ಬ್ರೆಜಿಲ್‍ನ್ನು ೨-೧ ಗೋಲುಗಳ ಅಂತರದಿಂದ ಸೋಲಿಸಿ ವಿಶ್ವಕಪ್ ಗೆದ್ದುಬಿಟ್ಟಿತ್ತು.ಸೋಲಿನ ಸುದ್ದಿ ಬ್ರೆಜಿಲ್ ಜನರನ್ನು ಕಂಗೆಡಿಸಿಬಿಟ್ಟಿತ್ತು. ೧೦ ವರ್ಷದ ಚಿಕ್ಕ ಹುಡುಗನೊಬ್ಬ ತನ್ನ ತಂದೆ ಆ ಸೋಲಿನ ಸುದ್ದಿಗೆ ಕಣ್ಣೀರು ಹಾಕಿದ್ದನ್ನು ನೋಡಿದ್ದ. ಮಲಗುವ ಮುನ್ನ ತನ್ನ ತಂದೆಗೆ ಹೇಳಿದ್ದ ’ನಾನು ವಿಶ್ವಕಪ್ ಗೆಲ್ಲುತ್ತೇನೆ. ಬ್ರೆಜಿಲ್‍ಗೆ ಮತ್ತು ನಿನಗೆ ವಿಶ್ವಕಪ್ ತಂದುಕೊಡುತ್ತೇನೆ’.

ಅದಾಗಿ ೮ ವರ್ಷದಲ್ಲಿ ಆ ಹುಡುಗ ಬ್ರೆಜಿಲ್‍ಗೆ ವಿಶ್ವಕಪ್‍ನ್ನು ಗೆದ್ದುಕೊಟ್ಟ ಸಹ. ನಂತರ ಇನ್ನೂ ಎರಡು ಸಲ ಬ್ರೆಜಿಲ್ ಪುಟ್ಬಾಲ್ ವಿಶ್ವಕಪ್ ‍ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ.

ಆತ ಪೀಲೆ. ಪುಟ್ಬಾಲ್‍ನ ದಂತಕತೆ ಆದವನು.

ಜಗತ್ತಿನ ಬೇರೆಡೆ ಪುಟ್ಬಾಲ್ ಒಂದು ಕ್ರೀಡೆಯಾದರೆ , ಬ್ರೆಜಿಲ್‍ಗೆ ಪುಟ್ಬಾಲ್ ಎಂದರೆ ಜೀವನ, ಜೀವನವೆಂದರೆ ಪುಟ್ಬಾಲ್.

ಇಂಗ್ಲೀಷ್‍ರು ಪುಟ್ಬಾಲ್‍ ಕಂಡುಹಿಡಿದದ್ದು, ಬ್ರೆಜಿಲ್‍ನವರು ಪುಟ್ಬಾಲ್ ಪರಿಪಕ್ವ ಮಾಡಿದ್ದು ಎಂಬ ಮಾತಲ್ಲಿ ಏನೂ ಸಂಶಯವಿಲ್ಲ.

ಪೀಲೆ ಕಾಲದಲ್ಲಿ ಶುರುವಾದ ಪುಟ್ಬಾಲ್ ಸೊಗಸು ಇಲ್ಲಿಯವರಿಗೆ ಹಾಗೇ ಸಾಗಿ ಬಂದು, ಬ್ರೆಜಿಲ್ ಐದು ಬಾರಿ ವಿಶ್ವಕಪ್ ಗೆದ್ದಿದೆ. ಪೀಲೆ ನಂತರ ರೋನಾಲ್ಡೋ, ರೋಮಾರಿಯೋ, ರಿವಾರಿಯೋ, ರಿರ್ಚಾಡೋ ಕಾರ್ಲೋಸ್, ಬೆಬಿಟೋ ತರದ ಇನ್ನೂ ಅನೇಕ ಶ್ರೇಷ್ಠ ಆಟಗಾರರು ಬ್ರೆಜಿಲ್‍ನಿಂದ ಹೊರಹೊಮ್ಮಿದ್ದಾರೆ.


ಒಂದು ದೇಶದಿಂದ ಇಷ್ಟೊಂದು ಜನ ಶ್ರೇಷ್ಠ ಆಟಗಾರರು, ಒಂದು ತಂಡದಿಂದ ಇಷ್ಟೊಂದು ನಿರೀಕ್ಷೆ ಆಗಿದ್ದಾದರೂ ಹೇಗೆ?

ಉತ್ತರ ಇರುವುದು ಬ್ರೆಜಿಲ್‍ನ ಗಲ್ಲಿಗಲ್ಲಿಗಳಲ್ಲಿ !

ಪೀಲೆಯಿಂದ ಹಿಡಿದು ಇತ್ತೀಚಿನ ರೋನಾಲ್ಡೋವರೆಗೆ, ಎಲ್ಲಾ ಮಹಾನ್ ಆಟಗಾರರು ಬಂದದ್ದು ಬ್ರೆಜಿಲ್‍ನ ಕಡುಬಡತನದಿಂದ ನರಳುತ್ತಿದ್ದ ಬೀದಿಗಳಿಂದ. ಪುಟ್ಬಾಲ್ ಆಟದ ಪ್ರೀತಿಯ ಜೊತೆಗೆ ಬಡತನದ ಸುಳಿಯಿಂದ ಹೊರಬರುವ ಹೋರಾಟವು ಸೇರಿ, ಪುಟ್ಬಾಲ್ ಜೀವನದ ಭಾಗವೇ ಆಗಿಬಿಟ್ಟಿತ್ತು. ಪೀಲೆಯಂತ ಬ್ರೆಜಿಲ್‍ ಆಟಗಾರನನ್ನು ಕೋಟಿಗಟ್ಟಲೇ ಹಣ ನೀಡಿ,ತಮ್ಮ ಕ್ಲಬ್‍ಗಳಿಗೆ ಆಡುವಂತೆ ಯೂರೋಪ್‍ನ ಹಣವಂತ ಪುಟ್ಬಾಲ್ ಕ್ಲಬ್‍ಗಳು ಬ್ರೆಜಿಲ್ ಕದ ತಟ್ಟಲು ಯಾವಾಗ ಶುರು ಮಾಡಿದವೋ, ಬ್ರೆಜಿಲ್‍ನ ಬೀದಿಬೀದಿಗಳಲ್ಲಿ ಪುಟ್ಬಾಲ್ ಆಡುತ್ತಿದ್ದ ಹುಡುಗರಲ್ಲಿ ಬಡತನಕ್ಕೆ ಉತ್ತರ ಸಿಕ್ಕಿಬಿಟ್ಟಿತ್ತು.ಬ್ರೆಜಿಲ್ ಅಲ್ಲದೇ ಲ್ಯಾಟೀನ್ ಅಮೇರಿಕಾದ ಅನೇಕ ದೇಶಗಳಲ್ಲಿ ಪುಟ್ಬಾಲ್ ಆಡುವ ಹುಡುಗರು ಪೌಂಡ್-ಡಾಲರ್-ಯುರೋಗಳಲ್ಲಿ ಹಣ ಎಣಿಸತೊಡಗಿದರು. ಈಗಲೂ ಯುರೋಪಿನ ಪುಟ್ಬಾಲ್ ಕ್ಲಬ್‍ನ ಆಟಗಾರರ ಪಟ್ಟಿಯಲ್ಲಿ ಬ್ರೆಜಿಲ್ ಮತ್ತು ಇತರೆ ಲ್ಯಾಟೀನ್ ಅಮೇರಿಕಾ ದೇಶದ ಆಟಗಾರರ ಸಂಖ್ಯೆ ಗಣನೀಯ.


ಅದರೆ ಅಭಿಮಾನಿಗಳಿಗೆ ಬ್ರೆಜಿಲ್ ಇತರ ತಂಡಗಳಿಗಿಂತ ಬಿನ್ನವಾಗಿ ನಿಲ್ಲುವುದು - ಆಟದ ಶೈಲಿಯಲ್ಲಿ. ಬ್ರೆಜಿಲ್‍ನ ಆಟಕ್ಕೆ ಇರುವ ಹೆಸರು ’ಜೋಗ ಬೋನಿಟೊ’(ಸುಂದರ ಆಟ). ಹೆಸರಿಗೆ ತಕ್ಕಂತೆ ಬ್ರೆಜಿಲ್ ಆಟ ನೋಡಲು ಮನಮೋಹಕ. ಆಟದಲ್ಲಿನ ಕಲ್ಮಾತಕತೆ, ಕೌಶಲ್ಯ, ಕುಸುರಿ ಕಲೆ. ನೋಡಲಿಕ್ಕೆ ಚೆಂದ.

ಇಂತಹ ಬ್ರೆಜಿಲ್, ಪೀಲೆಯ ನಂತರ ಸುಮಾರು ೨೪ ವರ್ಷ ವಿಶ್ವಕಪ್‍ನಲ್ಲಿ ಅಂತಹ ಸಾಧನೆಯೇನೂ ಮಾಡಲಿಲ್ಲ. ಕೊನೆಗೆ ೧೯೯೪ರಲ್ಲಿ ಮರಳಿ ವಿಶ್ವಕಪ್ ಗೆದ್ದಾಗ ಆ ಬರಗಾಲ ಮುಗಿದಿತ್ತು. ಅದಾದ ನಂತರ ಮತ್ತೆ ೨೦೦೨ರ ವಿಶ್ವಕಪ್ ಜಯಿಸಿತ್ತು. ನಂತರ ೨೦೦೬ರ ವಿಶ್ವಕಪ್‍ನಲ್ಲೂ ಅಂತಹ ನಿರೀಕ್ಷಿತ ಫಲಿತಾಂಶ ಬರಲಿಲ್ಲ.

ಬ್ರೆಜಿಲ್ ಯಾವ ಪಂದ್ಯ ಆಡಲು ಇಳಿದರೂ, ಗೆದ್ದೆ ಗೆಲ್ಲಬೇಕೆಂಬ ನಿರೀಕ್ಷೆ ಯಾವಾಗಲೂ ಇದ್ದದ್ದೇ. ಈ ನಂಬಿಕೆ ಮತ್ತು ನಿರೀಕ್ಷೆ ಕೆಲವೊಮ್ಮೆ ಬ್ರೆಜಿಲ್‍ ತಂಡವನ್ನು ಸುಖಾಸುಮ್ಮನೆ ಅತೀ ಒತ್ತಡಕ್ಕೆ ಒಳಪಡಿಸುವಂತೆ ತೋರುತ್ತದೆ. ಈ ಒತ್ತಡದ ಜೊತೆ ಬ್ರೆಜಿಲ್ ಆಟದ ಶೈಲಿಯ ಬಗ್ಗೆಯೂ ಚರ್ಚೆ ನಡೆದಿದೆ. ಜೋಗ ಬೋನಿಟೋ ಶೈಲಿ ನೋಡಲಿಕ್ಕೆ ಸೊಗಸೆನಿಸಿದರೂ ಫಲಿತಾಂಶ ಬರುತ್ತಿಲ್ಲವೆಂಬ ವಾದವಿದೆ.

ಆ ವಾದದ ಆಧಾರದ ಮೇಲೆಯೇ ಈ ಸಲದ ವಿಶ್ವಕಪ್‍ನ ಬ್ರೆಜಿಲ್ ತರಬೇತುದಾರ ಡುಂಗಾ, ಶೈಲಿಗಿಂತ ಫಲಿತಾಂಶ ನೀಡುವ ಕಡೆಗೆ ಗಮನ ಹರಿಸಿದ್ದ.ವಿಶ್ವಕಪ್‍ನ ಮೊದಲು ನಾಲ್ಕು ಪಂದ್ಯಗಳಲ್ಲಿ ಸೊಗಸಾಗಿ ಆಡಿ ಗೆದ್ದ ಬ್ರೆಜಿಲ್ ಮತ್ತೆ ನಿರೀಕ್ಷೆ ಮೂಡಿಸಿತ್ತು. ಆದರೆ ಬ್ರೆಜಿಲ್ ಕ್ವಾರ್ಟರ್ ಫೈನಲ್‍ನಲ್ಲಿ ಅನಿರೀಕ್ಷಿತವಾಗಿ ಮುಗ್ಗರಿಸಿತು.

ಈಗ ಮತ್ತೆ ಬ್ರೆಜಿಲ್ ಆಟದ ತಂತ್ರಗಾರಿಕೆಯ ಬಗ್ಗೆ ವಾದ ಶುರುವಾಗಿದೆ. ಮುಂದಿನ ವಿಶ್ವಕಪ್ ೨೦೧೪ರಲ್ಲಿ ಬ್ರೆಜಿಲ್‍ನಲ್ಲೇ ನಡೆಯಲಿದೆ. ಅಲ್ಲಿಯವರೆಗೆ ಬ್ರೆಜಿಲ್ ಪುಟ್ಬಾಲ್ ಯಾವ ಹಾದಿಯಲ್ಲಿ ನಡೆಯಲಿದೆ ಎನ್ನುವುದು ಕುತೂಹಲ ಎಲ್ಲಾ ಅಭಿಮಾನಿಗಳಿಗೆ ಇದ್ದೇ ಇದೆ.ಇಲ್ಲಿಯವರೆಗೆ ಆದ ಎಲ್ಲಾ ವಿಶ್ವಕಪ್‍ಗಳಲ್ಲಿ ಭಾಗವಹಿಸಿದ ಏಕಮೇವ ದೇಶ, ಮುಂದಿನ ದಿನಗಳಲ್ಲಿ ಹೇಗೆ ಮುಂದುವರೆಯಲಿದೆ, ಕಾದು ನೋಡಬೇಕು.

4 comments:

sunaath said...

‘ಜೋಗ’ ಎಂದರೆ ‘ಸುಂದರ’ ಎನ್ನುವ ಅರ್ಥವೆ? ಅದಕ್ಕೇ ನಮ್ಮ ‘ಜೋಗ ಜಲಪಾತ’ವು ಸುಂದರ ಜಲಪಾತವಾಗಿರುವದು!

ಸಾಗರದಾಚೆಯ ಇಂಚರ said...

nice write up

Shiv said...

ಸುನಾಥ್ ಕಾಕಾ,

ಪೋರ್ಟಿಗೀಸ್‍ನಲ್ಲಿ ಜೋಗವೆಂದರೆ ಆಟ, ಬೋನಿಟೋ ಅಂದರೆ ಸುಂದರ.

ಅದು ಎನೇ ಆಗಲಿ..ನಮ್ಮ ಜೋಗವಂತೂ ಎಂದಿಗೂ ಸುಂದರವೇ !

Shiv said...

ಇಂಚರ,

ಧನ್ಯವಾದಗಳು ಭೇಟಿ ನೀಡಿ, ಮೆಚ್ಚುಗೆ ಸೂಚಿಸಿದ್ದಕ್ಕೆ.