ನಿಗದಿತ ಸಮಯಕ್ಕೆ ವಿಮಾನ ನೆಲ ಬಿಟ್ಟು ಆಕಾಶಕ್ಕೆ ನೆಗೆದು ಕೆಲವೇ ನಿಮಿಷಗಳಾಗಿತ್ತು. ಹತ್ತಿರದಲ್ಲಿಯೇ ಇದ್ದ ಗಗನ ಪರಿಚಾರಕಿಗೆ , ಆ ಕೂಪರ್ ಕಾಗದದ ತುಂಡನ್ನು ನೀಡಿದ್ದ. ಆ ಕಾಗದವನ್ನು ಆಕೆ ತನ್ನ ಕಿಸೆಗೆ ಸೇರಿಸುವಷ್ಟರಲ್ಲಿ, ಕೂಪರ್ ಅವಳೆಡೆ ಬಾಗಿ,ತನ್ನ ಬ್ರೀಫ್ ಕೇಸ್ ಕಡೆ ತೋರಿಸಿ, ತನ್ನ ಬಳಿ ಬಾಂಬ್ ಇರುವುದೆಂದು ಕೂಡಲೇ ಆ ಪತ್ರವನ್ನು ಓದಬೇಕೆಂದು ಕೇಳಿದ್ದ. ಗಾಭರಿಗೊಂಡ ಪರಿಚಾರಕಿ ಆ ಕಾಗದವನ್ನು ವಿಮಾನದ ಪೈಲಟ್ ಬಳಿ ಒಯ್ದಳು. ಪೈಲಟ್ ತಕ್ಷಣವೇ ನಿಲ್ದಾಣವನ್ನು ಸಂಪರ್ಕಿಸಿ ಬಾಂಬ್ ಬೆದರಿಕೆಯ ಬಗ್ಗೆ ತಿಳಿಸಿದ್ದ. ಕೆಲವೇ ಕ್ಷಣಗಳಲ್ಲಿ ಸಿಯಾಟೆಲ್ ಪೋಲಿಸ್ ಮತ್ತು ಎಫ್.ಬಿ.ಐ ಕಾರ್ಯನಿರತವಾಗಿದ್ದವು.
ನಾರ್ಥ್ವೆಸ್ಟ್ ಕಂಪೆನಿಗೆ ಕೂಪರ್ನ ಬೇಡಿಕೆಗಳು - ಸಿಯಟಲ್ನಲ್ಲಿ ವಿಮಾನ ಇಳಿದಾಗ ೨ ಮಿಲಿಯನ್ ಡಾಲರ್ ನಗದು ಮತ್ತು ಎರಡು ಜೊತೆ ಪ್ಯಾರಾಚೂಟ್ಗಳು. ನಗದು ಹಣ ಇಪ್ಪತ್ತು ಡಾಲರ್ಗಳ ಕಟ್ಟುಗಳಲ್ಲಿ ಇರಬೇಕೆಂದು, ಆ ನೋಟುಗಳು ಒಂದೇ ಕ್ರಮಾಂಕದಲ್ಲಿ ಇರಬಾರದೆಂದು ಸೂಚನೆಗಳಿದ್ದವು. ಇಷ್ಟು ಸೂಚನೆಗಳನ್ನು ನಿಯಂತ್ರಣ ಕೊಠಡಿಗೆ ರವಾನಿಸಿದ ಪೈಲಟ್. ಹಣ ಮತ್ತು ಪ್ಯಾರಾಚೂಟ್ ಸಿದ್ಧವಾಗುವವರೆಗೆ ಆಕಾಶದಲ್ಲೇ ಹಾರಬೇಕೆಂದು ಕೂಪರ್ ಪೈಲೆಟ್ಗೆ ಮತ್ತೊಂದು ಆದೇಶ ನೀಡಿದ್ದ. ತಾನು ಪೊಳ್ಳು ಬೆದರಿಕೆ ಹಾಕುತ್ತಿಲ್ಲವೆಂದು ತೋರಿಸಲು, ಪರಿಚಾರಿಕೆಗೆ ತನ್ನ ಬ್ರೀಫ್ ಕೇಸ್ ತೆರೆದು ಅದರಲ್ಲಿದ್ದ ಎರಡು ಕೆಂಪು ಸಿಲಂಡರ್ಗಳು ಮತ್ತು ಅವಕ್ಕೆ ಜೋಡಿಸಿದ್ದ ವೈರ್ಗಳನ್ನು ತೋರಿಸಿದ್ದ.
ಹಣ ಮತ್ತು ಪ್ಯಾರಾಚೂಟ್ ಸಿದ್ಧವಾದ ತಕ್ಷಣ, ಪೈಲೆಟ್ಗೆ ಸಂದೇಶ ರವಾನೆಯಾಯ್ತು. ಸಿಯಟಲ್ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ, ಕೂಪರ್ ವಿಮಾನವನ್ನು ನಿಲ್ದಾಣದಿಂದ ದೂರವಿರುವ ಆದರೆ ತುಂಬಾ ಬೆಳಕಿರುವ ಪ್ರದೇಶದಲ್ಲಿ ನಿಲ್ಲಿಸಲು ಹೇಳಿದ್ದ. ಹಾಗೇ ವಿಮಾನದ ಒಳಗಿದ್ದ ದೀಪಗಳೆಲ್ಲವನ್ನು ಆರಿಸಲು ಹೇಳಿದ್ದ. ಹೊರಗಿನಿಂದ ವಿಮಾನದ ಮೇಲೆ ಶಾರ್ಪ್ ಶ್ಯೂಟರ್ಸ್ ಸಹಾಯದಿಂದ ದಾಳಿ ಮಾಡಬಹುದಾದ ಯೋಚನೆಯನ್ನು ಕೂಪರ್ ಈ ಮೂಲಕ ಮೊದಲೇ ಗ್ರಹಿಸಿದ್ದ.
ನಂತರ ವಿಮಾನಯಾನ ಕಂಪೆನಿಯ ನೌಕರನೊಬ್ಬನೇ ಬಂದು, ಎರಡು ಜೊತೆ ಪ್ಯಾರಾಚೂಟ್ ಮತ್ತು ಹಣವನ್ನು ವಿಮಾನದ ಹತ್ತಿರಕ್ಕೆ ತರಬೇಕೆಂದು ಮುಂದಿನ ಆದೇಶವಾಗಿತ್ತು. ಅದರಂತೆ ಹಣ ಮತ್ತು ಪ್ಯಾರಾಚೂಟ್ ಬಂದಾಗ, ವಿಮಾನದ ಪರಿಚಾರಿಕೆಯಿಂದ ಅವನ್ನು ವಿಮಾನದೊಳಗೆ ತರಿಸಿದ್ದ. ತನ್ನ ಬೇಡಿಕೆ ಈಡೇರಿದ ನಂತರ, ವಿಮಾನದ ಸಿಬ್ಬಂದಿಯೊಂದನ್ನು ಬಿಟ್ಟು ವಿಮಾನದಲ್ಲಿದ್ದ ಇತರ ೩೬ ಪ್ರಯಾಣಿಕರನ್ನು ಬಿಡುಗಡೆ ಮಾಡಿದ್ದ. ಅಲ್ಲಿಂದ ಬಿಡುವ ಮುಂಚೆ ವಿಮಾನಕ್ಕೆ ಇಂಧನ ತುಂಬಿಸುವ ಆದೇಶ ನೀಡಿದ್ದ.ವಿಮಾನ ಸಿಯಟಲ್ ಬಿಟ್ಟ ನಂತರ, ಪೈಲೆಟ್ಗೆ ವಿಮಾನವನ್ನು ೧೦ ಸಾವಿರ ಅಡಿ ಎತ್ತರದಲ್ಲಿ, ೧೫೦ ನಾಟ್(ಸುಮಾರು ಗಂಟೆಗೆ ೨೦೦ ಮೈಲಿ) ವೇಗದಲ್ಲಿ ಮತ್ತು ರೆಕ್ಕೆಗಳು ೧೫ ಡಿಗ್ರಿ ಕೋನದಲ್ಲಿ ಹಾರಿಸಬೇಕೆಂದು ನಿರ್ದೇಶಿಸಿದ್ದ. ನಂತರ ಮೆಕ್ಸಿಕೋ ದೇಶಕ್ಕೆ ವಿಮಾನ ತಿರುಗಿಸಲು ಹೇಳಿದ್ದ. ಆದರೆ ವಿಮಾನದಲ್ಲಿರುವ ವಿಮಾನ ಅಲ್ಲಿಯವರೆಗೆ ಸಾಕಾಗುವುದಿಲ್ಲವೆಂದು ಪೈಲೆಟ್ ಹೇಳಿದ ನಂತರ, ಬೇರೊಂದು ನಿಲ್ದಾಣದಲ್ಲಿ ಇನ್ನೊಂದು ನಿಲುಗಡೆ ಮಾಡಿ ಇಂಧನ ತುಂಬಿಸಿಕೊಳ್ಳುವ ನಿರ್ಧಾರವಾಯ್ತು.
ಸಿಯಟಲ್ನಿಂದ ಹಾರಿದ ಸ್ಪಲ್ಪ ಸಮಯದಲ್ಲೇ ವಿಮಾನದ ಸಿಬ್ಬಂದಿಯೆಲ್ಲವೂ ಕಾಕ್ಪಿಟ್ ಒಳಗೆ ಸೇರಬೇಕೆಂದು ಆದೇಶ ನೀಡಿದ್ದ ಕೂಪರ್. ಆದಾಗಿ ಸ್ಪಲ್ಪ ಸಮಯದಲ್ಲೇ, ವಿಮಾನದ ಹಿಂಬದಿಯ ಬಾಗಿಲು ತೆರೆದ ಶಬ್ದ ಕೇಳಿಸಿತ್ತು. ಕೂಪರ್ ಹಣವನ್ನು ಕಟ್ಟಿಕೊಂಡು ವಿಮಾನದಿಂದ ಪ್ಯಾರಾಚೂಟ್ನಲ್ಲಿ ಕತ್ತಲೆಯ ರಾತ್ರಿಗೆ ಜಿಗಿದಿದ್ದ. ಹೊರಗಡೆ ಸುಮಾರು ಮೈನಸ್ ೭ ಡಿಗ್ರಿ ಚಳಿಯಿತ್ತು.
ಬಾಂಬ್ ಬೆದರಿಕೆಯಲ್ಲಿದ್ದ ವಿಮಾನ ಸಿಬ್ಬಂದಿ ಮುಂದಿನ ನಿಲ್ದಾಣ ಬರುವವರೆಗೆ ಕಾಕ್ಪಿಟ್ನಿಂದ ಹೊರಬರಲಾಗಲಿಲ್ಲ. ವಿಮಾನ ನೆಲಕ್ಕೆ ಮುಟ್ಟಿದ ನಂತರ ನೋಡಿದಾಗ, ವಿಮಾನದ ಬಾಗಿಲು ತೆರೆದಿತ್ತು. ಹಣ, ಪ್ಯಾರಾಚೂಟ್ ಮತ್ತು ಕೂಪರ್ ಮಾಯವಾಗಿದ್ದ.
ತಕ್ಷಣವೇ ಶುರುವಾಯ್ತು ತನಿಖೆ. ಆದರೆ ವಿಪರೀತ ಮಳೆಯ ಕಾರಣ ಕೂಪರ್ ಹಾರಿದ್ದ ಪ್ರದೇಶವನ್ನು ಜಾಲಾಡುವುದು ಮರುದಿನ ಬೆಳಿಗ್ಗೆಯವರೆಗೆ ಮುಂದೂಡಲಾಯಿತು. ವಿಮಾನ ಸಿಬ್ಬಂದಿಯನ್ನು ಮಾತಾಡಿಸಿದ ಎಫ್.ಬಿ.ಐ, ಡಿಬಿ ಕೂಪರ್ನ ಒಂದು ರೇಖಾಚಿತ್ರ ನಿರ್ಮಿಸಿದರು. ಕೂಪರ್ ವಿಮಾನದಲ್ಲಿ ಬಿಟ್ಟು ಹೋಗಿದ್ದು ತನ್ನ ಟೈ ಮತ್ತು ಸೇದಿ ಎಸೆದಿದ್ದ ಸಿಗರೇಟ್ ತುಂಡುಗಳು.
ಕೂಪರ್ ಹಾರಿದ ಪ್ರದೇಶದ ಶೋಧನೆ ಕಾರ್ಯ ಪ್ರಾರಂಭವಾಯ್ತು. ನೆಲ ಮತ್ತು ವಾಯು ಮಾರ್ಗದಲ್ಲಿ ತೀವ್ರ ಶೋಧನೆಯ ನಂತರವೂ ಕೂಪರ್ ಅಥವಾ ಅವನ ಅವಶೇಷಗಳಾಗಲಿ, ಹಣ ಅಥವಾ ಪ್ಯಾರಾಚೂಟ್ ಯಾವುದೂ ಸಿಗಲಿಲ್ಲ.
ಈಡೀ ಹೈಜಾಕ್ ಯೋಜನೆಯನ್ನು ತುಂಬಾ ಯೋಚಿಸಿ ಮಾಡಲಾಗಿತ್ತು. ೨೦ ಡಾಲರ್ಗಳ ಕಂತುಗಳಲ್ಲಿ ೨೦ ಮಿಲಿಯನ್ ಡಾಲರ್ ಸುಮಾರು ೨೦ ಪೌಂಡ್(ಸುಮಾರು ೧೦ ಕೆಜಿ) ತೂಕವಾಗುತಿತ್ತು. ಕಡಿಮೆ ಮೊತ್ತದ ಕಂತುಗಳಾದರೆ ತೂಕ ಹೆಚ್ಚಾಗುತ್ತೆಂದು , ಹೆಚ್ಚಿನ ಮೊತ್ತದ ನೋಟುಗಳು ಸುಮ್ಮನೆ ಸಂಶಯವುಂಟು ಮಾಡುವುದು ಎಂಬ ಮುಂದಾಲೋಚನೆ ಮಾಡಲಾಗಿತ್ತು.ಹಾಗೆ ವಿಮಾನದ ವೇಗ, ಹಾರುವ ಎತ್ತರ, ಕೋನ, ನಿಲ್ದಾಣಗಳ ಬಗ್ಗೆ ತುಂಬಾ ಮಾಹಿತಿಯುಳ್ಳವರು ಈ ಕೆಲಸಕ್ಕೆ ಕೈಹಾಕಿದ್ದರು.
ಎಫ್.ಬಿ.ಐ ಸುಮಾರು ೨ ಸಾವಿರ ಜನರನ್ನು ತನಿಖೆಗೆ ಒಳಪಡಿಸಿತ್ತು. ಕೂಪರ್ಗೆ ನೀಡಿದ ಆ ನೋಟುಗಳ ಕ್ರಮಸಂಖೆಗಳನ್ನು ಎಲ್ಲಾ ಬ್ಯಾಂಕುಗಳಿಗೂ, ಪ್ರಪಂಚದ ಎಲ್ಲಾ ತನಿಖಾ ಸಂಸ್ಥೆಗಳಿಗೆ ನೀಡಲಾಗಿತ್ತು. ಆ ಹಣಗಳು ಎಲ್ಲಿ ಚಲಾವಣೆಗೆ ಬಂದರೂ ಅದನ್ನು ಹಿಂಬಾಲಿಸುವ ಪ್ರಯತ್ನವಾಗಿತ್ತು. ಆದರೆ ಅ ನೋಟುಗಳು ಚಲಾವಣೆಗೆ ಬರಲಿಲ್ಲ.
ಸರಿಸುಮಾರು ಅರ್ಧ ಡಜನ್ ಜನರು ಕೂಪರ್ ಇರಬಹುದೆಂದು ದಟ್ಟ ವದಂತಿಗಳಿದ್ದವು. ಆದರೆ ಅವರು ಯಾರು ಕೂಪರ್ನ ಗುಣ-ಲಕ್ಷಣಗಳಿಗೆ ಹೋಲಿಕೆಯಾಗಲೇ ಇಲ್ಲ.
ಇದಾಗಿ ಸುಮಾರು ೧೦ ವರ್ಷದ ನಂತರ , ಅದೇ ಪ್ರದೇಶದಲ್ಲಿ ನದಿಯ ದಂಡೆಯಲ್ಲಿ ಆಡುತ್ತಿದ್ದ ಚಿಕ್ಕ ಹುಡುಗನೊಬ್ಬನಿಗೆ, ನೆನೆದು ಹಾಳಾಗಿ ಹೋದ ಮೂರು ೨೦ ಡಾಲರ್ ನೋಟುಗಳ ಕಂತೆಗಳು ಸಿಕ್ಕವು. ಅವುಗಳ ಕ್ರಮಾಂಕವೂ ಕೂಪರ್ಗೆ ಕೊಟ್ಟ ನೋಟುಗಳೊಂದಿಗೆ ಹೊಂದಿಕೆಯಾಗುತಿತ್ತು. ಉಳಿದ ಹಣ ಮತ್ತು ಕೂಪರ್ ಬಗ್ಗೆ ಮತ್ತೆ ತನಿಖೆ ಶುರುವಾಯ್ತು. ಯಾವುದೇ ಫಲಿತಾಂಶವೂ ಬರಲಿಲ್ಲ.
ಕೂಪರ್ ಜಿಗಿತ ದಂತಕತೆಯಾಗಿ ಬಿಟ್ಟಿತ್ತು ಮತ್ತು ಕಾಪಿಕ್ಯಾಟ್ಗಳನ್ನು ತಯಾರುಮಾಡಿಬಿಟ್ಟಿತ್ತು. ಅದೇ ವರ್ಷದಲ್ಲಿ ಕನಿಷ್ಟ ಮೂರು ಅಂತಹ ವಿಮಾನ ಅಪಹರಣ ಮತ್ತು ಜಿಗಿತದ ವಿಫಲ ಪ್ರಯತ್ನಗಳು ನಡೆದವು. ಆದರೆ ಯಾರು ಕೂಪರ್ ಸಾಧಿಸಿದ್ದನ್ನು ಮೀರಲಾಗಲಿಲ್ಲ.
********************
ಕೂಪರ್ ಹೈಜಾಕ್ ಪ್ರಕರಣದ ವಿಮಾನಯಾನದ ರೂಪುರೇಶೆಯನ್ನು ಸಂಪೂರ್ಣ ಬದಲಾಯಿಸಿತು.
ಬೋಯಿಂಗ್ನ ೨೩೭ ವಿಮಾನದ ಬಾಗಿಲುಗಳು ತೆರೆಯದಂತೆ ವಾಲ್ವನ್ನು ಆಳವಡಿಸಲಾಯ್ತು. ಅದಕ್ಕೆ ’ಕೂಪರ್ ವೇನ್’ ಎಂದು ಹೆಸರು !
ವಿಮಾನ ಎರುವುದಕ್ಕಿಂತ ಮುಂಚೆ ಪ್ರಯಾಣಿಕರ ತಪಾಸಣೆ ಮತ್ತು ಅವರ ಲಾಗೇಜ್ ತಪಾಸಣೆ ಪ್ರಾರಂಭವಾಯ್ತು. ಅಲ್ಲಿಯವರೆಗೆ ಯಾವುದೇ ಶೋಧನೆಯಿಲ್ಲದೆ ವಿಮಾನದಲ್ಲಿ ಎರುವುದು ಸಾಮಾನ್ಯವಾಗಿತ್ತು.
ಕೂಪರ್ ಬಗ್ಗೆ ಸುಮಾರು ಅರ್ಧ ಡಜನ್ ಪುಸ್ತಕಗಳು , ಸಿನಿಮಾಗಳು ಮತ್ತು ಲೆಕ್ಕವಿಲ್ಲದಷ್ಟು ಟಿವಿ ಕಾರ್ಯಕ್ರಮಗಳು ಬಂದವು.
ಇಂತಹ ರೋಮಾಂಚಕ ಘಟನೆಗೆ ಕಾರಣನಾದ ಕೂಪರ್ ಯಾರು ? ಜಿಗಿದ ಮೇಲೆ ಕೂಪರ್ ಕತೆಯೇನಾಯ್ತು. ಅವನು ಬದುಕಿ ಅಲ್ಲಿಂದ ಪರಾರಿಯಾದನೇ ಅಥವಾ ತನಿಖಾ ಸಂಸ್ಥೆಗಳು ಹೇಳುವ ಹಾಗೇ ಆ ಯತ್ನದಲ್ಲೇ ಸತ್ತು ಹೋದನೇ ? ಸತ್ತರೆ ಅವನ ಹೆಣವಾಗಲಿ, ಅವನ ಬಳಿಯಿದ್ದ ಉಳಿದ ಹಣವಾಗಲಿ ಇಲ್ಲಿಯವರೆಗೆ ಯಾಕೇ ಸಿಗಲಿಲ್ಲ.
ಪ್ರಶ್ನೆಗಳು ಪ್ರಶ್ನೆಗಳೇ ಉಳಿದುಬಿಟ್ಟವು...
ಅಮೇರಿಕದ ವಿಮಾನಗಳ ಹೈಜಾಕ್ ಇತಿಹಾಸದಲ್ಲಿ ಬಿಡಿಸಲಾಗದ ಏಕೈಕ ಪ್ರಕರಣವಾಗಿ ಇನ್ನೂ ಎಫ್.ಬಿ.ಐ ಮುಂದಿದೆ...
5 comments:
ಅದ್ಭುತ,ರೋಮಾಂಚಕ ಘಟನೆ. ಕೂಪರನ ಬಗೆಗೆ ಒಂದು ತರಹದ superman image ಭಾಸವಾಗುತ್ತಿದೆ!
ಸುನಾಥ್ ಕಾಕಾ,
ಈಗಲೂ ಕೂಪರ್ ಬಗ್ಗೆ ಇಷ್ಟು ಕತೆಗಳಿವೆ. ೪೦ ವರ್ಷಗಳ ನಂತರ ದಿನಕ್ಕೊಂದು ಕತೆಗಳು ಹುಟ್ಟಿಕೊಳ್ಳುತ್ತವೆ ಕೂಪರ್ ಬಗ್ಗೆ.
ಪಾತರ ಗಿತ್ತಿ..ನನ್ನ ಮಗಳಿ ನ್ಯಾಟ್ ಜಿಯೋ ದಲ್ಲಿ ಬರುವ ಹೈಜ್ಯಾಕ್ ಸ್ಟೋರಿಗಳನ್ನ ನೋಡಿ ನನಗೆ ಹೇಳಿದಾಗ..ಅವನ್ನ ನಾನೂ ಕೆಲವು ನೋಡಿದೆ...ನಿಜ...ಬಹಳ ಚಾಕ ಚಕ್ಯತೆಯ ಕೆಲ್ಸ ಮಾಡುವ ಜನ ಇವರು..ಬಹಳ ಚನಾಗಿ ನಿರೂಪಿಸಿದ್ದೀರಿ...
ಆಜಾದ್,
ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ.
ಹೈಜಾಕ್ ಸ್ಟೋರಿ ಸಖತ್ತಾಗಿ ಮೂಡಿ ಬಂದಿದೆ..
Post a Comment