Showing posts with label India. Show all posts
Showing posts with label India. Show all posts

Sunday, February 22, 2009

ಡೆಲ್ಲಿ-6 ಎಂಬ Metaphor

ಜ್ವಲಂತ ಸಮಸ್ಯೆಗಳನ್ನು ಸಿನಿಮಾಗಳು ನೋಡುವ ಬಗೆ ಎರಡು.

೧. ಸಮಸ್ಯೆಗಳನ್ನು ಹಸಿಹಸಿಯಾಗಿ ಪ್ರದರ್ಶಿಸಿ ಮಾರಾಟದ ಸರಕಾಗಿಸುವುದು
೨. ಸಮಸ್ಯೆಗಳನ್ನು ಅತಿರಂಜಿತವಾಗಿಸದೆ,ಸುಪ್ತ-ಸೂಕ್ಷ್ಮವಾಗಿರಿಸಿ, ಅದಕ್ಕೊಂದು ಪರಿಹಾರ ತೋರಿಸುವುದು

ಸ್ಲಂ ಡಾಗ್‍ನಂತವು ಮೊದಲನೆಯ ಗುಂಪಿನಲ್ಲಿ ಸೇರುವಂತಹ ಚಿತ್ರಗಳು.

ಎರಡನೆಯ ಗುಂಪಿನಲ್ಲಿ ಸೇರುವ ಚಿತ್ರ ’ರಂಗ್ ದೇ ಬಸಂತಿ’.

ನಿರ್ದೇಶಕ ರಾಕೇಶ್ ಓಂಪ್ರಕಾಶ್ ’ರಂಗ್ ದೇ’ಯಲ್ಲಿ ಭ್ರಷ್ಟಾಚಾರ, ದೇಶದ ’ಚಲ್ತಾ ಹೈ’ ಮನಸ್ಥಿತಿ, ಅದಕ್ಕೆ ಸೂಚಿಸಿದ ’ಡೈರೆಕ್ಟ್ ಆಕ್ಷ್ಯನ್’(Direct Action) ದೊಡ್ಡ ಸಂಚಲನವುಂಟು ಮಾಡಿದ್ದವು. ಅದು ಶುರು ಮಾಡಿದ ಚರ್ಚೆ-ಜಾಗೃತಿ ಇನ್ನೂ ಎಲ್ಲರ ನೆನಪಿನಲ್ಲಿದೆ.

’ರಂಗ್ ದೇ ಬಸಂತಿ’ ತರದ ಬಡಿದೆಬ್ಬಿಸುವ ಸಿನಿಮಾದ ನಂತರ ಮುಂದೇನು ಅನ್ನುವ ಪ್ರಶ್ನೆಗೆ ಉತ್ತರ ದೊರಕಿದಂತಿದೆ.
ರಾಕೇಶ್ ಹೊಸ ಸಿನಿಮಾ ’ಡೆಲ್ಲಿ-೬’, ಮೇಲೆ ಹೇಳಿದ ಎರಡನೆಯ ಗುಂಪಿಗೆ ಮತ್ತೊಂದು ಸೇರ್ಪಡೆ.

ರಂಗ್ ದೇಯಲ್ಲಿ ಭ್ರಷ್ಟಾಚಾರದ ಬಗ್ಗೆ ಹೇಳಿದ್ದ ರಾಕೇಶ್, ’ಡೆಲ್ಲಿ’ಯಲ್ಲಿ ಹಲವಾರು ಸಮಸ್ಯೆಗಳನ್ನು ಒಟ್ಟಿಗೆ ತಡವಿಕೊಂಡಿದ್ದಾರೆ. ಕೋಮುವಾದ, ಮಂದಿರ-ಮಸೀದಿಯ ಬಗ್ಗೆ ಪ್ರಮುಖವಾಗಿ ಹೇಳುತ್ತಾ, ಅಸ್ಪಶತೆ ಬಗ್ಗೆ ಸೂಕ್ಷ್ಮವಾಗಿ ತೆರೆದಿಟ್ಟಿದ್ದಾರೆ. ಅದಕ್ಕೆ ಅನಿವಾಸಿ ಭಾರತೀಯರ ತೊಳಲಾಟ, ಅಶಕ್ತ ಮಹಿಳೆಯರ ಅಸಹಾಯಕತೆ, ಸ್ವಲ್ಪ ಭಗ್ನ ಪ್ರೇಮದ ಸ್ಪರ್ಶ ನೀಡಿದ್ದಾರೆ.

ರಂಗ್ ದೇ ತರನೇ ಇದರಲ್ಲೂ ಭಾರತವನ್ನು ಹೊರಗಿನವರ ಕಣ್ಣಿನಿಂದ ತೋರಿಸುವ ಶೈಲಿಯಿದೆ. ಆದರೆ ಡೆಲ್ಲಿಯ ತಾಕತ್ತಿರುವುದು ಅದರಲ್ಲಿ ಉಪಯೋಗಿಸಿದ ’ಮೆಟಾಫೆರ್’ಗಳಲ್ಲಿ ಮತ್ತು ಸೃಷ್ಟಿ ಮಾಡಿರುವ ಪಾತ್ರಗಳಲ್ಲಿ.

ತನಗೆ ಸಂಬಂಧಿಸಿದ ಆದರೂ ತಾನು ಹುಟ್ಟಿ-ಬೆಳಯದಿರುವ ದೇಶದಲ್ಲಿನ ರೋಷನ್ ಪಾತ್ರ ಕತೆಯ ಬಿಂದು. ಹಿಂದು-ಮುಸ್ಲಿಮ್-ಭಾರತೀಯ-ಅಮೇರಿಕನ್ ಹೀಗೆ ವಿಭಿನ್ನ ಎಳೆಗಳಲ್ಲಿ ತೊಳಲಾಡುವ ಪಾತ್ರ.

ಭಗ್ನ ಪ್ರೇಮಿ ಅಲಿ ಅಂಕಲ್, ಜಿಲೇಬಿ ಅಂಗಡಿಯ ಮಮ್ಡು, ಅಕ್ಕ-ಪಕ್ಕ ಮನೆಯ ಸಹೋದರರು, ವಿಧವೆ ತಂಗಿ, ಬಾಯಿ ಬಿಟ್ಟರೆ ಕಪಾಳಕ್ಕೆ ಬಾರಿಸುವ ಪೋಲಿಸ್ ಆಫೀಸರ್, ಕಸ ಹೆಕ್ಕುವ ಅಸೃಶ್ಯ ಹೆಂಗಸು, ಶನಿ ಬಾಬಾ, ಭಾರತದಲ್ಲಿ ಕಡೆಯ ದಿನಗಳನ್ನು ಕಳೆಯಬಯಸುವ ಅಜ್ಜಿ..ಹೀಗೆ ಅನೇಕ ವಿಶಿಷ್ಟ ಪಾತ್ರಗಳು, ಕತೆಯ ಓಟಕ್ಕೆ ಎಲ್ಲೂ ತಡೆ ತರುವುದಿಲ್ಲ.

ಈಡೀ ಚಿತ್ರದಲ್ಲಿ ಹಾಸುಹೊಕ್ಕಾಗಿರುವುದು ’ಮೆಟಾಫರ್’(Metaphor).

ಸಾಂಪ್ರದಾಯಿಕ ಹಿನ್ನಲೆಯ, ಹೊಸ ಕನಸುಗಳನ್ನು ಕಾಣುವ ’ಬಿಟ್ಟು’ ಎನ್ನುವ ಹುಡುಗಿಯ ಪಾತ್ರ. ಇದು ಒಂಥರ ಇಡೀ ಭಾರತದ ಪ್ರತಿನಿಧಿ.

ಹಾಗೆಯೇ ಎಲ್ಲರ ಮುಂದೆ ಕನ್ನಡಿ ಹಿಡಿದು ತಿರುಗುವ ಹುಚ್ಚ, ಎಲ್ಲಿಂದಲೋ ಬಂದು ಎಲ್ಲರ ಸ್ವಾಸ್ಥ್ಯ ಕೆಡಿಸುವ ಶನಿ ಬಾಬಾ, ಪಾಳು ಬಿದ್ದ ಮನೆ, ಮಸಕಲಿ ಅನ್ನುವ ಆ ರೆಕ್ಕೆ ಕಟ್ಟಿದ ಪಾರಿವಾಳ, ಸಂದರ್ಭಕ್ಕೆ ತಕ್ಕುದಾಗಿ ಉಪಯೋಗಿಸಿರುವ ರಾಮಲೀಲಾ ಸನ್ನಿವೇಶಗಳು.

ಎಲ್ಲಕ್ಕೂ ಕಳಶವಿಟ್ಟಂತೆ, ’ಕಾಲಾ ಬಂದರ್’ !

ಅದರೆ ತುಂಬಾ ಕಾಡುವ ಪಾತ್ರ ’ಗೋಬರ್’. ಪೆದ್ದನಾಗಿ-ಮುಗ್ಢವಾಗಿ ಮೂಡಿ ಬಂದಿರುವ ಈ ಪಾತ್ರದ ಬಗ್ಗೆ ಮತ್ತೆ ನಗಬೇಕೆನಿಸುವಾಗ, ಕೊನೆಗೆ ನಿಜವಾದ ಗೋಬರ್ ಯಾರು ಎನ್ನುವ ಪ್ರಶ್ನೆ ದುತ್ತನೆ ಎದುರಾಗುತ್ತೆ.

ಡೆಲ್ಲಿಯಲ್ಲಿ ಅನೇಕ ಕಡೆ ಪ್ರಭಾವಿ ದೃಶ್ಯಗಳಿವೆ..
ರಾಮಲೀಲಾದಲ್ಲಿ ಮುಸ್ಲಿಮ್ ಮಮ್ಡು, ರಾಮಲೀಲಾ ಮಂಡಳಿಯ ಬ್ಯಾಡ್ಜ್ ಧರಿಸಿ ಸಂಭ್ರಮದಿಂದ ಭಾಗವಹಿಸುವ ದೃಶ್ಯ ಬಂದು ಹೋಗುತ್ತೆ. ಮುಂದೆ ಅದೇ ಮಮ್ಡುವಿನ ಅಂಗಡಿಯಿಂದ ಹನುಮಾನ್ ಪೋಟೋವನ್ನು ಕಿತ್ತುಕೊಂಡು ಹೋಗುವ ಗಲಭೆಕೋರರು, ನಂತರ ಹತ್ತುವ ಮತಾಂಧತೆ, ಅದರ ಕಿಚ್ಚಿನ ಉರಿಯಲ್ಲಿ ನರಳುವ ಮಮ್ಡುವನ್ನು ನಿಯಂತ್ರಿಸಲು ರೋಷನ್ ಪಡುವ ಶ್ರಮ. ಒಂದು ಸರಳ ಮನಸ್ಸು ಮತಾಂಧತೆಗೆ ಹೊರಳುವುದನ್ನು ತೋರಿಸಿದ ಪರಿ ಅದ್ಭುತ!

ಹಾಗೇ ನ್ಯೂಯಾರ್ಕ್-ಡೆಲ್ಲಿಗಳೆರಡನ್ನೂ ಒಂದೆಡೆ ಒಟ್ಟಿಗೆ ಕಾಣುವ ಕನಸು. ನ್ಯೂಯಾರ್ಕ್ ಬೀದಿಗಳಲ್ಲಿ ಭಾರತದ ದಿನ ನಿತ್ಯದ ಜನ ಜೀವನದ ಕಲ್ಪನೆ ಸೊಗಸಾಗಿದೆ.

ಅಭಿನಯದ ದೃಷ್ಟಿಯಿಂದ ಎಲ್ಲಾ ಪಾತ್ರಗಳಲ್ಲಿ ಸಮತೂಕದ ಅಭಿನಯವಿದೆ. ಮಾತಿಗಿಂತ ಹಾವಭಾವಗಳಲ್ಲಿ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ ಅನಿಸುತ್ತೆ. ರೆಹಮಾನ್ ಹಿನ್ನಲೆ ಸಂಗೀತ ಕತೆಯ ಇನ್ನೊಂದು ಪಾತ್ರವೇ ಆಗಿದೆ.

ರಂಗ್ ದೇ ತರನೇ ಇಲ್ಲೂ ರಾಕೇಶ್, ಭಾರತದ ಜ್ವಲಂತ ಸಮಸ್ಯೆಗಳ ಎಳೆಯೊಂದಿಗೆ ಚಿತ್ರ ಮಾಡಿದ್ದಾರೆ. ಆದರೆ ರಂಗ್ ದೇ ತರ ಇಲ್ಲಿ ಯಾವುದನ್ನೂ ನೇರವಾಗಿ ಹೇಳುವುದಿಲ್ಲ. ಇಲ್ಲಿ ಎಲ್ಲಾ ಮೆಟಾಪರ್‌ಗೆ ಬಿಡಲಾಗಿದೆ. ಹಾಗೆಯೇ ಹಿಂದಿನ ತರ ಸಮಸ್ಯೆಗಳಿಗೆ ಉತ್ತರವನ್ನು ಗನ್‍ನಿಂದ ಕೊಟ್ಟಿಲ್ಲ, ಬದಲಾಗಿ ಸಮಸ್ಯೆಗಳಿಗೆ ಉತ್ತರ ನಮ್ಮಲ್ಲೇ ಅಡಗಿದೆ ಎನ್ನುವ ಆಶಾವಾದವಿದೆ.

’ರಂಗ್ ದೇ ಬಸಂತಿ’ ಯೊಂದಿಗೆ ಹೋಲಿಸುವುದನ್ನು ಬಿಟ್ಟು, ಡೆಲ್ಲಿಯನ್ನು ನೋಡಿದರೆ ಅದು ವಿಭಿನ್ನವೆನಿಸಬಹುದು. ಆದರೆ ಆ ತರದ ’ಕಲ್ಟ್’ (Cult) ಸಿನಿಮಾಗಳ ನಂತರ ಅದರ ನಿರ್ದೇಶಕರಿಗೆ, ಹಿಂದಿನ ಚಿತ್ರದ ಭಾರ ಹೇಗೆ ಯಾವಾಗಲೂ ಅವರ ಮೇಲಿರುತ್ತೆ ಕೇಳಿ ನೋಡಿ. ಇವೆಲ್ಲದರ ಮಧ್ಯೆ ’ಡೆಲ್ಲಿ’ ಒಂದು ಉತ್ತಮ ಪ್ರಯತ್ನ.

Sunday, February 08, 2009

ಜಯ್ ಹೋ...

ಆಸ್ಕರ್‌ನವರು ಇದಕ್ಕೆ ಒಂದು ಪ್ರಶಸ್ತಿ ಕೊಟ್ಟು, ಡ್ಯಾನಿ ಬಾಯಿಲ್ ಪ್ರಶಸ್ತಿ ಸ್ವೀಕರಿಸಿ ’ಈ ಪ್ರಶಸ್ತಿ ಜಮಾಲ್‍ನಂತಹ ಎಲ್ಲಾ ಮುಂಬೈ ಸ್ಲಂ ಹುಡುಗರಿಗೆ’ ಅಂತಾ ಹೇಳಿ, ಆಮೇಲೆ ಅದರ ಬಗ್ಗೆ ಮತ್ತೆ ಚರ್ಚೆಯಾಗಿ, ಸಾಕಪ್ಪ ಇದರ ಬಗ್ಗೆ ಓದಿದ್ದು ಅನ್ನುವರೆಗೆ ಬಹುಷಃ ಇದು ನಡೀತಾ ಇರುತ್ತೆ.

ಇಲ್ಲಿ ನಮ್ಮ ಗೆಳೆಯರ ಬಾಯಿಯಲ್ಲಿ ಮೊದಲು ಕೇಳಿದಾಗ , ಮತ್ತೆ ಇದು ಯಾವುದೋ ’ರಿಯಲ್’ ಭಾರತವನ್ನು ತೋರಿಸುವ ಮತ್ತೊಂದು ಚಿತ್ರವಿರಬಹುದೇ ಅನಿಸಿತು. ಅಷ್ಟರಲ್ಲಿ ಶುರುವಾಯ್ತು ನೋಡಿ ಇಲ್ಲಿ ಪ್ರಶಸ್ತಿಗಳ ಸುಗ್ಗಿ, ಮೊದಲಿಗೆ ಹಾಲಿವುಡ್ ವಿಮರ್ಶಕರು ನೀಡುವ ಪ್ರಶಸ್ತಿಗಳಲ್ಲಿ ಮಿಂಚುವಿಕೆ, ನಂತರ ಆಕ್ಟರ್ ಗಿಲ್ಡ್ ನಲ್ಲಿ ಮುಂದುವರಿಯಿತು ಹಬ್ಬ. ಅಷ್ಟರಲ್ಲಿ ಎಲ್ಲಡೆ ಅದರ ಮಾತು.

ಅದೊಂದು ದಿವಸ ಕೆಲಸದಿಂದ ಬಂದಾಗ ನನ್ನಾಕೆ ಗರಮ್ ಆಗಿದ್ದಳು . ಆಗಿದ್ದೇನೆಂದರೆ ಅಲ್ಲಿ ಇವಳ ಜೊತೆ ಕೆಲಸ ಮಾಡುವ ಪ್ರೆಡ್ ಅನ್ನೋ ಅಮೇರಿಕನ್‍ನೊಬ್ಬ ’ಸ್ಲಂ ಡಾಗ್ ಅದ್ಬುತ ಸಿನಿಮಾ, ನಿಜವಾದ ಭಾರತ ಏನು ಅಂತಾ ಅದರಲ್ಲಿ ತೋರಿಸಿದ್ದಾರೆ. ಭಾರತದಲ್ಲಿ ಜನ ಇನ್ನೂ ಪಾಪ ಹಾಗೇ ಇದ್ದಾರೆ’, ಭಾರತ ಅಂದರೆ ಒಂದು ಸ್ಲಂ ಅನ್ನುವ ಹಾಗೇ ಹೇಳಿದ್ದ.

ಒಬ್ಬ ಪ್ರೆಡ್ ಗೆ ಆದಂತೆ ಈ ’ರಿಯಲ್’ ಭಾರತದ ದರ್ಶನ ಪ್ರಪಂಚದ ಬೇರೆಡೆ ಇನ್ನೂ ಅದೆಷ್ಟು ಜನರಿಗೆ ಆಗಿರಬಹುದು. ಅದೆಷ್ಟು ಜನ ಈ ’ಸ್ಲಂ ಡಾಗ್’ ಅನ್ನೋ ಮಹಾನ್ ಬೋಧಿ ವೃಕ್ಷದ ಕೆಳಗೆ ಕುಳಿತು , ೨ ತಾಸಿನ ನಂತರ ಬುದ್ಧನ ತರ ಫೋಸ್ ನೀಡುತ್ತಾ ’ಭಾರತ ಅಂದರೆ ಇಷ್ಟೇ ರೀ, ಅವರು ಐಟಿ-ಬಿಟಿ-ಚಂದ್ರ ಅಂತಾ ನಮ್ಮ ಕಣ್ಣಿಗೆ ಚಮಕ್ ತೋರಿಸ್ತಾ ಇದ್ದರು, ನೋಡಿದರೆ ಅವರು ಎಲ್ಲಿ ಶುರುಮಾಡಿದ್ದರೋ ಇನ್ನು ಅಲ್ಲೇ ಇದಾರೆ’ ಅಂತ ಮಾತಾಡಿಕೊಂಡರೇನೊ.

ಬೇರೆಯವರು ಬೇಡ, ನಮ್ಮದೇ ಬಾಲಿವುಡ್‍ನ ಪ್ರೀತಿ ಜಿಂಟಾ, ’ನಮ್ಮ ಮುಂಬೈನಲ್ಲಿ ಇಷ್ಟು ಕೊಳಚೆ-ಸ್ಲಂ ಇದೆ ಅಂತಾ ಈ ಸಿನಿಮಾ ನೋಡಿದ ಮೇಲೆ ನನಗೆ ತಿಳಿಯಿತು’ ಅಂದರೆ..

ಈ ಚಿತ್ರದ ಬಗ್ಗೆ ಪೂರ್ವಾಗ್ರಹ ಪೀಡಿತ ಅಭಿಪ್ರಾಯಗಳೇನು ಇರಲಿಲ್ಲ. ನಿಜ ಹೇಳಬೇಕೆಂದರೆ ಚಿತ್ರ ವೀಕ್ಷಿಸುವಾಗ ಪಕ್ಕಾ ಮನೋರಂಜನಾತ್ಮಕ ಅನಿಸಿತ್ತು. ಚಿತ್ರದ ನಿರೂಪಣೆ ಮತ್ತೆ ಛಾಯಾಗ್ರಹಣ ಹಿಡಿದಿಟ್ಟಿದ್ದು ನಿಜ. ಆಶಾದಾಯಕವಾದ ಅಂತ್ಯವಾದ್ದರಿಂದ ಒಂದು ತರಹ ಫೀಲ್ ಗುಡ್.

ಅದು ನೋಡಿ ಸ್ಪಲ್ಪ ದಿವಸಕ್ಕೆ ಇಲ್ಲಿ ಓಬಾಮನ ಅಧಿಕಾರ ಸ್ವೀಕಾರ ನಡೆದಿದ್ದು ಆಯ್ತು. ನಿಜಕ್ಕೂ ಪ್ರತಿಭೆಯುಳ್ಳ ’ಅಂಡರ್ ಡಾಗ್’ನನ್ನು ಜನ ಹೇಗೆ ಕೈ ಹಿಡಿದು ಮೇಲೆ ಎತ್ತುತ್ತಾರೆಂದು ಅನಿಸಿತು. ಹಾಗೆ ಕೆಳವರ್ಗದ, ತುಳಿತಕ್ಕೆ ಒಳಗಾದವರಿಂದ ಒಬ್ಬ ಮೇಲೆ ಬಂದರೆ ಆ ಕತೆಯನ್ನು ಜನ-ಮಾಧ್ಯಮ ಹೇಗೆ ಇಷ್ಟಪಡುತ್ತಾರೆಂದು ಗೊತ್ತಾಗಿದ್ದು ಆವಾಗಲೇ. ಬಹುಷಃ ಅದೇ ಕಾರಣಕ್ಕೇ ಜಮಾಲ್‍ನ ಕತೆ ನಮಗೂ ಇಷ್ಟವಾಗಿರಬಹುದು ಅನಿಸಿತ್ತು.

ಆದರೆ ಇನ್ನೂ ಸೂಕ್ಷ್ಮವಾಗಿ ನೋಡಿದಾಗ, ಕತೆಯಲ್ಲಿ ಎಷ್ಟೊಂದು ಕಂದಕಗಳಿದ್ದವು.

’ಅಂಡರ್ ಡಾಗ್’ ವಿಷಯದಲ್ಲಿ ಭಾರತೀಯರು ತೋರಿಸುವ ಮೆಚ್ಚುಗೆ-ಕುತೂಹಲ ಗೊತ್ತಿದ್ದದ್ದೆ. ಅಲ್ಲಿ ಒಬ್ಬ ’ಗೋವಿಂದ್ ಜಸ್ವಾಲ್’ ಐಎ‍ಎಸ್ ಪರೀಕ್ಷೆಯಲ್ಲಿ ರಾಂಕ್ ಬಂದಾಗ, ಆತ ಬಡ ಕಾರ್ಮಿಕನ ಮಗನೆಂದು-ಎಷ್ಟು ಶ್ರಮಪಟ್ಟಿದ್ದನೆಂದು , ಮಾಧ್ಯಮದವರು ಅದರ ಬಗ್ಗೆ ಪ್ರಶಂಸಿ ಬರೆದಿದ್ದು ನೆನಪಿರಬಹುದು. ಅದೇ ರೀತಿ ಅದನ್ನು ಕೇಳಿದ-ಓದಿದ ನಾವೆಲ್ಲಾ ಮೆಚ್ಚುಗೆ ಸೂಚಿಸಿದ್ದೆವು. ತುಂಬಾ ಕಷ್ಟ ಪಟ್ಟು ಮೇಲೆ ಬಂದವರ ಬಗ್ಗೆ ನಮ್ಮ ಮೆಚ್ಚುಗೆ ಇದ್ದೇ ಇರುತಿತ್ತು.
ಹೀಗಿರುವಾಗ ಜಮಾಲ್‍ನನ್ನು ’ಚಾಯ್‍ವಾಲ’ ಅಂತಾ ಗೇಮ್ ಶೋ ದಲ್ಲಿ ಹಾಸ್ಯ ಮಾಡಿದ್ದು, ಅವನನ್ನು ಪೋಲಿಸ್‍ಗೆ ಒಪ್ಪಿಸಿದ್ದು...ಭಾರತದಲ್ಲಿ ಎಲ್ಲಿ ಮಾಡ್ತಾರೆ?

ಹಾಗೇ ಇನ್ನೊಂದೆಡೆ ಇರುವ ’ರಿಯಲ್ ಅಮೇರಿಕನ್’ ಸನ್ನಿವೇಶ. ಇದು ನನಗೆ ತುಂಬಾ ನಗು ತರಿಸಿದ ವಿಷಯ. ಈ ಚಿತ್ರವಿರೋದು ಭಾರತದ ಬಗ್ಗೆ, ಚಿತ್ರ ಮಾಡುತ್ತಾ ಇರೋದು ಒಬ್ಬ ಬ್ರಿಟಿಷ್, ಅದರ ಅಲ್ಲಿ ನೂರು ಡಾಲರ್ ಕೊಡಿಸಿ ’ರಿಯಲ್ ಅಮೇರಿಕ’ ತೋರಿಸುವ ಅವಶ್ಯಕತೆ ಎಲ್ಲಿತ್ತು? ಬಹುಷಃ ಅಸ್ಕರ್ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿನ ಅಮೇರಿಕನ್‌ರನ್ನು ಪಟಾಯಿಸಲಿಕ್ಕೆ ಇರಬಹುದೇ ಈ ಡೈಲಾಗು !

ಮತ್ತೊಂದು ಅತೀ ಅನಿಸುವಷ್ಟು ಇದ್ದ ಆ ಅಮಿತಾಭ್ ಆಟೋಗ್ರಾಫ್ ಸನ್ನಿವೇಶ. ನಿಜ, ಅಲ್ಲಿ ಹಾಗೇ ಇರಬಹುದು. ಆದರೆ ಅದನ್ನು ವೈಭವೀಕರಿಸಿ ಅಷ್ಟು ತೋರಿಸುವ ಅವಶ್ಯಕತೆ ಇತ್ತೇ?

ಅವಶ್ಯಕತೆ ಇತ್ತು..ಇಲ್ಲದಿದ್ದರೆ ನಮ್ಮ-ನಿಮ್ಮಂತಹವರು ಇದರ ಬಗ್ಗೆ ಮಾತಾಡುತ್ತಿದ್ದವೆ? ಗೊತ್ತಿಲ್ಲದ ಹಾಗೆ ಪುಗಸಟ್ಟೆ ಪಬ್ಲಿಸಿಟಿ ನೀಡುತ್ತಿದ್ದವೆ? ಆಸ್ಕರ್ ಅನ್ನೋ ಆ ಮಹಾನ್ ಶಂಖದಿಂದ ಬರುವ ತೀರ್ಥದ ಹತ್ತಿರ ಇದಕ್ಕೆ ಹೋಗಲಿಕ್ಕೆ ಆಗುತಿತ್ತೆ?

ಇದೇನೂ ಸಾಮಾಜಿಕ ಕಾಳಜಿ ಇಟ್ಟುಕೊಂಡು ಮಾಡಿದ ಚಿತ್ರವಲ್ಲ.’ಪಥೇರ್ ಪಂಚಲಿ’ಯ ಹಾಗೆ ಬಡತನದ ಬಗ್ಗೆ ಮರುಗುವಂತೆ ಮಾಡುವುದಿಲ್ಲ, ಹಾಗೇ ಸ್ಲಂ‍ನ ಕ್ರೂರತೆ-ಆಪರಾಧದ ತೆರೆದಿಡುವ ’ಸಿಟಿ ಆಫ್ ಗಾಡ್’ ಕೂಡ ಅಲ್ಲ. ಇದು ಕೇವಲ ಮನೋರಂಜನಾತ್ಮಕ ಚಿತ್ರ !

ಆದರೆ ಜಿಗುಪ್ಸೆ ತರಿಸಿದ್ದು ಪಾಶ್ಚಾತ್ಯರ ನಿಲುವುಗಳು. ಯಾವುದೋ ಒಂದು ೨ ಗಂಟೆ ಸಿನಿಮಾ ನೋಡಿ, ಭಾರತವನ್ನು ಆಳೆಯುವುದು. ಏನೇ ಮಾಡಿದರೂ ಇವರಿನ್ನು ಅಲ್ಲಿಂದ ಮುಂದೆ ಬೆಳೆದೇ ಇಲ್ಲಾ ಅನ್ನುವ ಅದೇ ಗತಕಾಲದ ಗತ್ತಿನ ನಡವಳಿಕೆ.

ಹಾಗಂತ ಭಾರತದಲ್ಲಿ ಅಲ್ಲಿ ತೋರಿಸಿದ್ದು ಯಾವುದು ಇಲ್ಲವೇ ಇಲ್ಲಾ ಅಂತಲ್ಲ. ಅದೇ ರೀತಿ ಕರಣ್ ಜೋಹರ್-ಸೂರಜ್ ಭಾರತ್ಯಾಜ ಚಿತ್ರಗಳಲ್ಲಿದ್ದಂತೆ ಜನ ಚಮಕ್ ಶೆರ್ವಾನಿ-ಗಾಗ್ರ-ಚೋಲಿಗಳಲ್ಲಿ ಯಾವಾಗಲೂ ಮಿಂಚುತ್ತಾ ಇರುತ್ತಾರೆಂಬುದು ಸುಳ್ಳು.

ಭಾರತ ಇವೆರಡು ಅಲ್ಲಾ. ಅದು ಇವುಗಳ ಮಧ್ಯೆದಲ್ಲೆಲೋ ಇದೆ.

ನೂರು ಕೋಟಿ ಜನಸಂಖ್ಯೆಯಿಟ್ಟುಕೊಂಡೂ, ಭಾಷೆ-ಜಾತಿ-ಪ್ರಾಂತ್ಯ ಅಂತೆಲ್ಲಾ ಭಿನ್ನಾಭಿಪ್ರಾಯಗಳಿದ್ದೂ, ನಾವು ಮುನ್ನಡೆಯುತ್ತಿದ್ದೇವೆ. ಹೌದು, ಈಗಲೂ ನಮ್ಮಲ್ಲಿ ಸ್ಮಂ ಗಳಿವೆ, ಜನ ಮೂಲಭೂತ ಸೌಕರ್ಯಗಳಿಗೆ ಪರದಾಡುತ್ತಿದ್ದಾರೆ. ಆದರೂ ನಾವು ಕನಸು ಕಾಣುವುದು ನಿಲ್ಲಿಸಿಲ್ಲ. ಅದು ನಿಜವಾದ ಭಾರತ.

ಹೊಸ ಗಾದೆ: ಸಿನಿಮಾಗೆ ಆಸ್ಕರ್ ಬೇಕು ಅಂತಾ ಕೇಳಿದರೆ, ಅದರಲ್ಲಿ ಭಾರತದ ಸ್ಲಂ ಇದೆಯಾ ಅಂದರಂತೆ !

ಜಯ್ ಹೋ !

Friday, December 12, 2008

ನಮಗೂ ಒಂದು ಮೊಸದ್ ಬೇಕೇ ?

ಅದಾಗಿ ೧೫ ದಿವಸ ಆಗ್ತಾ ಬಂತು..

ಅಲ್ಲಿ ಮುಂಬೈ ನಗರಿ ಕರಾಳ ಹಸ್ತಗಳಲ್ಲಿ ಸಿಲುಕಿ ಹಿಂಸೆ ಅನುಭವಿಸುತ್ತಿತ್ತು.ಆ ದೃಶ್ಯಗಳನ್ನು ನೋಡುತ್ತಿದ್ದಂತೆ, ಆಕ್ರೋಶ ಕುದಿಯತೊಡಗಿತ್ತು.

ಪಾಕಿ ವಿದೇಶಾಂಗ ಮಂತ್ರಿ ಅಲ್ಲಿ ಪಾಕಿಸ್ತಾನದಲ್ಲಿ ಕುಳಿತು, ಮುಂಬೈ ಘಟನೆಗೂ ಪಾಕಿಸ್ತಾನಕ್ಕೂ ಏನೂ ಸಂಬಂಧವಿಲ್ಲ ಎಂದು ಕತೆ ಹೇಳುತ್ತಿದ್ದ. ಸಿಎನ್‍ಎನ್‍ನಲ್ಲಿ ಅದನ್ನು ನೋಡುತ್ತಿದ್ದ ನನ್ನಾಕೆಗೆ ಬಂತು ನೋಡಿ ಸಿಟ್ಟು, 'ಈ ಪಾಕಿಸ್ತಾನದವರದು ಬರೀ ಇದೇ ಆಯ್ತು, ಮಾಡೋದೆಲ್ಲಾ ಮಾಡಿ ಈಗ ಏನೂ ಗೊತ್ತಿಲ್ಲಾ ಅಂತಾರೆ. ಏಕೆ ನಂಬಬೇಕು ಅವರು ಹೇಳೋದು' ಅಂತಾ ಎನ್‍ಡಿಟಿವಿ ಪ್ರಣಬ್‍ರಾಯ್ ತರನೇ ಕೇಳಿದಳು.

ಹೌದಲ್ವಾ ಅನಿಸ್ತು..

ಸಿಕ್ಕಬಿದ್ದ ಆ ಆತಂಕವಾದಿ ಕರಾಚಿಯವನಂತೆ, ಅಲ್ಲೇ ಪಾಕಿಸ್ತಾನದಲ್ಲಿ ಅವರಿಗೆ ತರಬೇತಿ ಕೊಟ್ಟು ಕಳಿಸಿದರಂತೆ ಅಂತಾ ಪತ್ರಿಕೆಗಳು ಪುಟಗಟ್ಟಲೆ ಬರೀತಾ ಇದ್ದರೆ, ಅಲ್ಲಿ ಪಾಕಿ ಅಧ್ಯಕ್ಷ 'ನಾವು ಅಷ್ಟೇ, ನಿಮ್ಮ ತರನೇ ಆತಂಕವಾದಿಗಳಿಂದ ನರಳುತ್ತಾ ಇದೀವಿ' ಅಂತಾ ಟಿವಿಯಲ್ಲಿ ಹೇಳಿದಾಗ, ಮೊದಲೇ ಕೆಟ್ಟ ತಲೆ ಇನ್ನೂ ಕೆಟ್ಟಾಗಿತ್ತು. ಟಿವಿ ನೋಡ್ತಾ ಇದ್ದ ನನ್ನಾಕೆ ಮುಖ ನೋಡಿದೆ, ಟಿವಿಯಲ್ಲಿದ್ದ ಆ ಅಧ್ಯಕ್ಷನನ್ನು ಗುರಾಯಿಸುತ್ತಿದ್ದಳು.

ಸ್ಪಲ್ಪ ದಿನದಲ್ಲೇ ಮತ್ತೆ ಶುರುವಾಯಿತು ನೋಡಿ ಗೂಬೆ ಕೂರಿಸುವ ಕೆಲಸ. ನೌಕದಳದವರು ಗುಪ್ತಚರ ಇಲಾಖೆ ಮೇಲೆ, ಅವರು ಇವರ ಮೇಲೆ..ನಡದೇ ನಡೀತು. ಎನ್‍ಎಸಿಜಿ ಕಮೊಂಡೋಗಳು ಬರೋಕೇ ಯಾಕೇ ಅಷ್ಟು ವಿಳಂಬವಾಯ್ತು ಅಂತಾ ಇನ್ನೊಂದು ಸುದ್ದಿ. ಇವುಗಳಿಗೆಲ್ಲಾ ಕಳಸವಿಟ್ಟಂತೆ ಮುಂಬೈ ಬೆಂಕಿಯಲ್ಲಿ ರಾಜಕೀಯ ಪಕ್ಷಗಳು ಬಿಸಿ ಕಾಯಿಸಿಕೊಳ್ಳೋಕೆ ಪ್ರಯತ್ನ ಮಾಡಿದ್ದು ಆಯ್ತು.

ಹಿಂದಿನ ವಿದ್ವಂಸಕಾರಿ ಘಟನೆಗಳಂತೆ , ಈ ಸಲನೂ ಏನೂ ಪಾಠ ಕಲಿದೇ, ಯಾರಿಗೂ ಪಾಠನೂ ಕಲಿಸದೇ, ಸ್ಪಲ್ಪ ದಿವಸ ಉದ್ವೇಗದಿಂದ ಮಾತಾಡಿ, ಮತ್ತೆ ಎಲ್ಲಾ ಮರೆತುಹೋಗ್ತಾ ಇದೀವಿ ಅನಿಸೋಕೆ ಶುರುವಾಯ್ತು.

ನನ್ನ ಅರ್ಧಾಂಗಿ ಕೇಳಿದಳು 'ಯಾಕೇ ಸೆಪ್ಟಂಬರ್ ೧೧ರ ದಾಳಿಯ ನಂತರ ಅಮೇರಿಕೆಯಲ್ಲಿ ಮತ್ತೆ ದಾಳಿ ಆಗಲಿಲ್ಲ? ನಮ್ಮಲ್ಲಿ ಯಾಕೇ ತಿಂಗಳಿಗೊಂದು ಆಗ್ತಾ ಇದೆ'.

ಪ್ರಶ್ನೆ ಪ್ರಶ್ನೆಯಾಗೇ ಉಳಿದು ಹೋಯ್ತು..

ಇವೆಲ್ಲದರ ಮಧ್ಯೆ ನಿಜಕ್ಕೂ ಮಿಂಚಂತೆ ಬೆಳಗಿದ್ದು, ನಮ್ಮ ಪೋಲಿಸ್, ನಮ್ಮ ಕಮೊಂಡೋಗಳ ನಿಸ್ವಾರ್ಥ ತ್ಯಾಗ, ವೀರ ಹೋರಾಟ. ಒಂದೊಂದು ವೀರೋಚಿತ ಕತೆಯು ನಮ್ಮ ಸೇನೆಯ ಬಗ್ಗೆ, ನಮ್ಮ ಪೋಲಿಸ್ ಬಗ್ಗೆ ಇನ್ನೂ ಹೆಚ್ಚು ಆಭಿಮಾನದ ಕಿಚ್ಚು ಹೊತ್ತಿಸಿತು.

ಇದೇ ಪೋಲಿಸ್‍ನವರ ಬಗ್ಗೆ ಅಲ್ವಾ, ನಮ್ಮ ಸಿನಿಮಾಗಳಲ್ಲಿ ಲಂಚಕೋರರು-ಕೆಲಸಕ್ಕೆ ಬಾರದವರು ಅಂತಾ ತೋರಿಸಿದ್ದು, ನಾವು ಹೌದು-ಹೌದು ಅಂದಿದ್ದು.ಅದೇ ಖಾಕಿ ಪೋಲಿಸ್‍ನಲ್ಲಿ ಕೆಲ ದಿಟ್ಟಿಗರು, ಅಲ್ಲಿ ಸಿಎಸ್‍ಟಿ ನಿಲ್ದಾಣದಲ್ಲಿ ಕೈಯಲ್ಲಿ ಹಳೇ ರೈಫಲ್/ಬಂದೂಕು ಹಿಡಕೊಂಡು, ಆ ಎಕೆ೪೭-ಗ್ರೆನೇಡ್ ವಿರುದ್ಧ ಹೋರಾಡುತ್ತಿದ್ದರು. ಮತ್ತೊಂದು ಕಡೆ ಅಲ್ಲಿ ತಾಜ್ ಹೋಟೆಲ್‍ನಲ್ಲಿ, ಒಬ್ಬ ಪೋಲಿಸ್ ಆಧಿಕಾರಿ ೬ ಪೇದೆಗಳೊಂದಿಗೆ ಅಲ್ಲಿದ್ದ ಉಗ್ರರೊಂದಿಗೆ, ಕಮಾಂಡೋಗಳು ಬರೋವರೆಗೆ ಹೋರಾಟ ಮಾಡ್ತಾನೇ ಇದ್ದರು..

ಇದೆಲ್ಲದರ ಮಧ್ಯೆ , ಯಾಕೋ ಇಸ್ರೇಲಿ ಗುಪ್ತಚರ ಸಂಸ್ಥೆ 'ಮೊಸದ್' ನೆನಪಾಯ್ತು.

೧೯೭೨ರ ಮ್ಯುನಿಚ್ ಒಲಂಪಿಕ್‍ನಲ್ಲಿ ೧೧ ಇಸ್ರೇಲಿ ಒಲಂಪಿಯನ್‍ರನ್ನು ಉಗ್ರರು ನುಗ್ಗಿ ಹತ್ಯೆ ಮಾಡಿದ್ದರು. ಇಸ್ರೇಲ್ ಸರ್ಕಾರ ತನ್ನ ಗುಪ್ತಚರ ಸಂಸ್ಥೆಗೆ ಒಂದಂಶದ ಆದೇಶ ನೀಡಿತು - 'ಇದಕ್ಕೆ ಕಾರಣರಾದವರಿಗೆ ಶಿಕ್ಷೆಯಾಗಬೇಕು'. ಮೊಸದ್ ಮುಂದಿನ ಹಲವು ವರ್ಷಗಳ ಕಾಲ ಆ ಹಿಂಸೆಗೆ ಕಾರಣರಾದವರನ್ನು ಜಾಲಾಡಿತು, ವಿವಿಧ ತಂತ್ರಗಳಿಂದ ಅವರನ್ನು ಮುಗಿಸಿತು.

ನಮ್ಮಲ್ಲಿ ಆ ತರದ ಒಂದು ಧೃಡ ನಿರ್ಧಾರ ತೆಗೆದುಕೊಳ್ಳುವವರು, ಈ ತರ ನಮ್ಮ ತಂಟೆಗೆ ಬಂದಾಗ, ಅದಕ್ಕೆ ಮರು ಉತ್ತರ ಕೊಡುವವರು ಬೇಕಲ್ವಾ ..

Thursday, November 16, 2006

ಕಳಿಂಗ ರಾಜ್ಯದಲ್ಲಿ..

ಕೊಲ್ಕತ್ತಾದ ಹೌರಾ ನಿಲ್ದಾಣದಿಂದ ಹೊರಟ 'ಜನ್ಮ ಶತಾಬ್ದಿ ಎಕ್ಸ್‍ಪ್ರೆಸ್' ಮೆಲ್ಲಗೆ ಸುರಿಯುತಿದ್ದ ಮಳೆಯಲ್ಲಿ ಓಡುತಿತ್ತು. ಮಳೆ ಬೀಳುವಾಗ ಪ್ರಯಾಣ ಮಾಡುವುದರಲ್ಲಿ ಒಂದು ಹಿತ ಅನುಭವವಿರುತ್ತೆ.ಅಕ್ಕ-ಪಕ್ಕ ಹಸಿರಿನಿಂದ ಕಂಗೊಳಿಸುವ ಗದ್ದೆಗಳು,ಆವಾಗ ತಾನೇ ಮಳೆಯಲ್ಲಿ ಸ್ನಾನ ಮಾಡಿ ನಿಂತಂತಿದ್ದ ಗಿಡಮರಗಳು,ಆ ಮಣ್ಣಿನ ವಾಸನೆ..

ಮಳೆ ಹೀಗೆ ಮುಂದುವರಿದರೆ ನಮ್ಮ ಪ್ರವಾಸದ ಕತೆ ಹೇಗೆ ಅನ್ನುವ ಅಲೋಚನೆ ಬಂದು ಹಾಗೆ ಮಾಯವಾಯಿತು.ನಾವು ಹೊರಟಿದ್ದೆವು ಓರಿಸ್ಸಾ ರಾಜ್ಯಕ್ಕೆ..ಪುರಿ, ಕೊನಾರ್ಕ್ ಮತ್ತು ಭುವನೇಶ್ವರ್ ಭೇಟಿಗೆ..

ಕೊಲ್ಕತ್ತಾದಿಂದ ೭ ಗಂಟೆ ಪ್ರಯಾಣದ ನಂತರ ಭುವನೇಶ್ವರ್ ತಲುಪಿದಾಗ, ನಿಲ್ದಾಣದಲ್ಲಿ ನಮ್ಮ ಗೆಳಯ ಶಿಬಾಸಿಸ್ ಮೊಹಂತಿ ಕಾದಿದ್ದ. ಯೋಜನೆಯ ಪ್ರಕಾರ ಭುವನೇಶರದಿಂದ ಕಾರಿನಲ್ಲಿ ಪುರಿಗೆ ಹೊರಟೆವು. ಭುವನೇಶರದಿಂದ ಪುರಿ ಸುಮಾರು ೨ ಗಂಟೆ ಪ್ರಯಾಣ. ಆದರೆ ಆ ರಸ್ತೆ ಇಷ್ಟು ಚೆನ್ನಾಗಿತ್ತು ಅಂದರೆ ಪ್ರಯಾಣ ಮಾಡಿದ್ದೇ ತಿಳಿಯಲಿಲ್ಲ. ತುಂಬಾ ಇಷ್ಟವಾಗಿದ್ದು ರಸ್ತೆ ಎರಡೂ ಬದಿ ಉದ್ದಕ್ಕೂ ಇದ್ದ ಸಾಲು ಮರಗಳು. ಅವನ್ನು ಯಾರು ನೆಟ್ಟಿದ್ದರೋ ಗೊತ್ತಿಲ್ಲ, ಆದರೆ ಮರದ ತಂಪು ಗಾಳಿಯಲ್ಲಿ ಪ್ರಯಾಣ ಬಹು ಸೊಗಸಾಗಿತ್ತು.

ಪುರಿ ಮುಟ್ಟಿದಾಗ ರಾತ್ರಿ ೧೦ ಗಂಟೆ. ಅಲ್ಲೇ ಪುರಿ ಕಡಲ ತೀರದಲ್ಲಿದ್ದ ಹೋಟೆಲ್ ಒಂದರಲ್ಲಿ ಊಟ ಮುಗಿಸಿ, ಹತ್ತಿರದಲ್ಲಿದ ಲಾಡ್ಜ್ ಒಂದರಲ್ಲಿ ಲಗೇಜ್ ಒಗೆದು ಪುರಿ ಬೀಚ್‍ಗೆ ಹೊರಟೆವು. ರಾತ್ರಿಯ ಆ ನೀರವತೆಯಲ್ಲಿ ಸಮುದ್ರ ಇನ್ನೂ ರುದ್ರರಮಣೀಯವಾಗಿ ತೋರುತಿತ್ತು. ಸಮುದ್ರದ ಅಂಚಿನಲ್ಲಿ ಆ ಕತ್ತಲಲ್ಲಿ ನಕ್ಷತ್ರ ನೋಡುತ್ತ ನಡೆದೆ. ಅಲ್ಲೇ ಬೀಚ್‍ನ ಮರಳಲ್ಲಿ ಮಲಗಿದ್ದರು ಎಷ್ಟೊಂದು ಜನ.ಅವರಲ್ಲಿ ಎಷ್ಟು ಜನ ಪ್ರವಾಸಿಗರೋ, ಸೂರು ಇಲ್ಲದ್ದ ಎಷ್ಟೋ ಜನಕ್ಕೆ ಅದು ನಿತ್ಯ ಹಾಸಿಗೆಯೋ ಎನೋ..

ಬೆಳಗೆದ್ದು ಮತ್ತೆ ಸಮುದ್ರದ ದಡಕ್ಕೆ ಹೋದಾಗ, ರಾತ್ರಿ ಇದ್ದ ನೀರವ ಸಮುದ್ರದ ಜಾಗದಲ್ಲಿ ಈಗ ಇತ್ತು ಜನರಿಂದ ಗೀಜುಗೂಡುತಿದ್ದ ಸಮುದ್ರ. ಅಲ್ಲಿ ಸ್ಪಲ್ಪ ಹೊತ್ತು ತಿರುಗಿ ಪುರಿಯ ಸುಪ್ರಸಿದ್ದ ಜಗನಾಥ ದೇವಾಲಯಕ್ಕೆ ಹೊರಟೆವು. ಸುಮಾರು ೧೧ನೇ ಶತಮಾನದಲ್ಲಿ ಕಟ್ಟಿದ ವಿಶಾಲ ದೇವಾಲಯಲ್ಲಿ ಜಗನಾಥ(ಶ್ರೀಕೃಷ್ಣ), ಬಲಭದ್ರ(ಬಲರಾಮ) ಮತ್ತು ಸುಭದ್ರಾ ಆರಾಧಿಸಿಲ್ಪಡುತ್ತಾರೆ. ನವರಾತ್ರಿ ಸಮಯವಾದ್ದರಿಂದ ದೇವಾಲಯದಲ್ಲಿ ಬಹುಸಂಖ್ಯೆಯಲ್ಲಿ ಭಕ್ತಾದಿಗಳು ನೆರೆದಿದ್ದರು.ದೇವಾಲಯದ ಆವರಣದಲ್ಲಿದ್ದ ಇನ್ನೂ ಸುಮಾರು ಹತ್ತು ದೇವಾಲಯಗಳಿಗೆ ಹೊಕ್ಕು , ಮುಖ್ಯ ದೇವಾಲಯದಲ್ಲಿ ಹೊಕ್ಕೆವು. ದರ್ಶನ ಮಾಡಿ ಹೊರಬರುತ್ತಿದ್ದಂತೆ ತಿಳಿಯಿತು, ಅಂದು ಗರ್ಭಗುಡಿಗೆ ಪ್ರವೇಶಿಸಲು ಅವಕಾಶವಿದೆಯೆಂದು.

೨೫ ರೂಪಾಯಿ ಟಿಕೇಟ್ ಪಡೆದು, ಗರ್ಭಗುಡಿ ಹೊಕ್ಕೆವು.ಸುಭದ್ರೆಯ ಅಕ್ಕಪಕ್ಕ ನಿಂತ ಜಗನಾಥ - ಬಲಭದ್ರರು.ಆದರೆ ಆ ವಿಗ್ರಹಗಳಾವು ಸಂಪೂರ್ಣ ಆಕಾರದಲ್ಲಿ ಇರಲಿಲ್ಲ.ಜಗನಾಥನ ಸುತ್ತ ಕತ್ತಲಲ್ಲಿ ಒಂದು ಪ್ರದಕ್ಷಿಣೆ ಹಾಕಿ ಬರುತ್ತಿದ್ದಂತೆ ಅಲ್ಲಿನ ಅರ್ಚಕರು ದುಡ್ಡು ಕೀಳುವ ಕೆಲಸ ಶುರುಮಾಡಿಕೊಂಡರು. ನನ್ನ ಜೊತೆ ಇದ್ದ ಸ್ನೇಹಿತನಿಗೆ ಯಾವುದೋ ಒಂದು ಮಂತ್ರ ಹೇಳಿಸಿ, ನಂತರ ೫೦೧ ರೂಪಾಯಿ ಕೊಡುವಂತೆ ಒತ್ತಾಯಿಸತೊಡಗಿದರು ! ಅಲ್ಲಿಂದ ತಪ್ಪಿಸಿಕೊಂಡು ಬರುತ್ತಿದ್ದಂತೆ ಇನ್ನೊಬ್ಬ ಅರ್ಚಕ ಆರತಿ ತಟ್ಟೆ ಹಿಡಕೊಂಡು ದಾರಿಗಡ್ಡವಾಗಿ ನಿಂತಿದ್ದರು. ಅರ್ಚಕರ ಈ ಕಾಯಕವೊಂದು ಯಾಕೋ ಅಷ್ಟು ಸರಿ ಅನಿಸಲಿಲ್ಲ.ಜನ ದೇವಾಲಯಕ್ಕೆ ಬರೋದೇ ತಮ್ಮ ಕಷ್ಟ-ಸುಖ ಅರಿಸಿ, ಅಂತ ಜನರ ಹತ್ತಿರ ದುಡ್ಡು ಕೀಳೋದು ಎಷ್ಟು ಸರಿ? ಅವರು ಮನಪೂರ್ತಿ ಕೊಟ್ಟರೆ ಅದು ಒಂದತರ. ಬಹುಷಃ ಆ ಆರ್ಚಕರಿಗೆ ಸಿಗುವ ವರಮಾನ ಕಡಿಮೆ ಇರಬಹುದೇ? ಅದಕ್ಕೆ ಈ ತರ ಜನರಿಂದ ಹಣ ನಿರೀಕ್ಷಿಸುತ್ತಾರ?

ಅಂದಾಗೆ ವಿಗ್ರಹಗಳು ಅಪೂರ್ಣ ಯಾಕೇ ಅಂತಾ ಕೇಳಿದಾಗ, ತಿಳಿದು ಬಂದ ಕತೆಯೇನೆಂದರೆ. ಇಂದ್ರದುಮ್ಯ ಅನ್ನೋ ಕೃಷ್ಣ-ಭಕ್ತ ರಾಜನಿಗೆ ಶ್ರೀಕೃಷ್ಣ ದರ್ಶನವಿತ್ತು, ಸಮುದ್ರದಲ್ಲಿ ಕೊಚ್ಚಿಕೊಂಡು ಬಂದಿರುವ ಮರದ ದಿಣ್ಣೆಯಲ್ಲಿ ತನ್ನ ವಿಗ್ರಹ ಮಾಡಿಸಬೇಕೆಂದು ಆದೇಶಿಸಿದನಂತೆ. ಅದೇ ಸಮಯಕ್ಕೆ ಅಲ್ಲಿಗೆ ಬಂದ ಒಬ್ಬ ವೃದ್ಧ ಬ್ರಾಹ್ಮಣ ತಾನು ಆ ವಿಗ್ರಹ ಕಟೆಯುತ್ತೆನೆಂದು, ಆದರೆ ಅದು ಮುಗಿಯುವವರೆಗೆ ಯಾರು ತನ್ನ ಕೋಣೆಯಲ್ಲಿ ಬರಬಾರದೆಂದು ಹೇಳಿದನಂತೆ.ಬಹುದಿನ ಕೆಲಸದ ನಂತರ ಕೋಣೆಯಿಂದ ಶಬ್ದ ಬರುವುದು ನಿಂತಿತಂತೆ, ಕಾತರದಿಂದ ಕಾದಿದ್ದ ರಾಜ ಮುಗಿದಿರಬೇಕೆಂದು ಕೋಣೆ ಹೊಕ್ಕನಂತೆ, ಆಗ ಅಲ್ಲಿದ್ದ ಬ್ರಾಹ್ಮಣ ಮಾಯವಾದನಂತೆ.ನೋಡಿದರೆ ಅರ್ಧಮುಗಿದ ಪೂರ್ತಿ ಕೈ-ಕಾಲುಗಳು ಇಲ್ಲದ ವಿಗ್ರಹಗಳು. ತನ್ನ ಆತುರದಿಂದ ಆದ ಅವಘಡಕ್ಕೆ ರಾಜ ರೋದಿಸಲು ಅಲ್ಲಿಗೆ ಬಂದ ನಾರದರು, ಶ್ರೀಕೃಷ್ಣನ ಈ ಸ್ವರೂಪವು ಪೂಜೆಗೆ ಅರ್ಹವೆಂದರಂತೆ.ಅಂದಾಗೆ ಆ ಬ್ರಾಹ್ಮಣ ಶಿಲ್ಪಿ ವಿಶ್ವಕರ್ಮನಂತೆ..

ದೇವಾಲಯದಿಂದ ಹೊರಬಂದು ಅಲ್ಲಿನ ವಿಶಾಲ ರಥಬೀದಿಯಲ್ಲಿ ಸಾಗಿದೆವು. ಇಲ್ಲಿನ ಜಗನಾಥ ರಥೋತ್ಸವ ಬಹು ಸುಪ್ರಸಿದ್ಧ. ಈ ಜಗನಾಥ ರಥೋತ್ಸವದಿಂದ ಒಂದು ಹೊಸ ಪದ ಇಂಗ್ಲೀಷ್ ಭಾಷೆಗೆ ಬಂದಿದೆ ಅಂತಾ ಗೊತ್ತಾ! 'Juggernaut' ಅನ್ನೋ ಪದವಿದೆ, ಅದಕ್ಕೆ ಕೊಟ್ಟಿರುವ ಅರ್ಥ- 'ತಡೆಯಲು ಅಸಾಧ್ಯವಾದದ್ದು'.ಇದರ ಮೂಲ ಶೋಧಿಸಿದಾಗ ಆ ಪದ ಬಂದಿರುವುದು 'ಜಗನಾಥ' ಪದದಿಂದ.ಆಗಿದ್ದೇನೆಂದರೆ ಬ್ರಿಟೀಷ್‍ರಿದ್ದ ಕಾಲದಲ್ಲಿ ನಡೆದ ಕೆಲವು ಜಗನಾಥ ರಥೋತ್ಸವಗಳಲ್ಲಿ ಕೆಲವು ಅಪಘಾತಗಳು ನಡೆದವು. ನೂಕುನುಗ್ಗಲಲ್ಲಿ ಕೆಲವು ಭಕ್ತಾದಿಗಳು ರಥದ ಗಾಲಿಗೆ ಸಿಕ್ಕಿ ಸತ್ತರು.ಇದನ್ನು ನೋಡಿದ ಬ್ರಿಟೀಷ್‍ರು 'ಜಗನಾಥ' ಪದವನ್ನು 'ತಡೆಯಲು ಅಸಾಧ್ಯವಾದ','ನುಚ್ಚುನೂರು ಮಾಡುವ ಶಕ್ತಿ' ಅನ್ನೋ ಅರ್ಥಬರುವಂತೆ ಪ್ರಯೋಗಿಸಲು ಆರಂಭಿಸಿದರು.ಅದು ಕ್ರಮೇಣ 'juggernaut' ಆಯಿತು !!

ರಥಬೀದಿಯಲ್ಲಿದ್ದ ಸ್ವಾದಿಷ್ಟ 'ರಾಬ್ಡಿ ಶರಬತ್ತು' ಸೇವಿಸಿ, ನಮ್ಮ ಪ್ರಯಾಣ ಕೊನಾರ್ಕ್‍ಗೆ ಸಾಗಿತು.ರಾಬ್ಡಿ ಶರಬತ್ತಿನ ಬಗ್ಗೆ ಒಂದೆರ್‍ಅಡು ಮಾತು..ಹಾಲಿನ ಕೆನೆಭರಿತ ಕೋವಾದಿಂದ ಮಾಡಿದ ಪಾನೀಯವದು,ಒಂದು ದೊಡ್ಡ ಗ್ಲಾಸ್‍ನಲ್ಲಿ ಕೋವಾಪಾನೀಯ ಸುರಿದು ಅದರ ಮೇಲೆ ಕೋವಾದ ಪುಡೀ ಉದುರಿಸುತ್ತಾರೆ. ಅಮೋಘ ರುಚಿ!

ಪುರಿಯಿಂದ ಕೊನಾರ್ಕ್‍ಗೆ ಸುಮಾರು ಒಂದೊವರೆ ಗಂಟೆ ಪ್ರಯಾಣ. ರಸ್ತೆ ಬಹಳ ಚೆನ್ನಾಗಿತ್ತು, ಆದರೆ ರಸ್ತೆಯಲ್ಲಿ ಕನಿಷ್ಟ ೨-೩ ಕಡೆ ರಸ್ತೆ ಸುಂಕ ಕಟ್ಟಬೇಕಾಯಿತು. ಈ ರೀತಿ ನಿಲ್ಲಿಸಿ ನಿಲ್ಲಿಸಿ ಸುಂಕ ಕೇಳೋದಿಕ್ಕಿಂತ ಒಂದೇ ಕಡೆ ತೆಗೆಳೋಕೇ ಆಗಲ್ವಾ?

ಕೊನಾರ್ಕ್ ಮುಟ್ಟಿದಾಗ ಮಧ್ಯಾಹ್ನದ ಹೊತ್ತು, ಅಲ್ಲಿನ ಸೂರ್ಯ ದೇವಸ್ಥಾನಕ್ಕೆ ೨೫ ರೂಪಾಯಿ ಕೊಟ್ಟು ಪ್ರವೇಶಚೀಟಿ ಪಡೆದು ಹೊಕ್ಕೆವು. ಪ್ರಾಂಗಣ ಪ್ರವೇಶಿಸಿದಾಗ ಅಲ್ಲಿ ಕಂಡದ್ದು ೨ ಸಿಂಹಾಕೃತಿಗಳು.ಅವುಗಳ ಮಧ್ಯೆ ಕಲ್ಲಿನ ಮೆಟ್ಟಿಲುಗಳು. ಅವನ್ನು ಏರಿ ಮೇಲೆ ಬಂದರೆ ಕಂಬಗಳಿಂದ ಸುತ್ತುವರಿದ ನೃತ್ಯಮಂಟಪದಲ್ಲಿ ಬಂದಂತೆ ಅನಿಸ್ತಿತ್ತು. ಅಲ್ಲಿಂದ ಇಳಿದು ಮುಂದುವರಿದರೆ ವಿಶಾಲವಾದ ದೇವಾಲಯ.ಒಂದು ಕಡೆ ಕುಸಿದಿದ್ದರೂ, ಇನ್ನೊಂದೆಡೆ ಕಬ್ಬಿಣ ಕಂಬಿಗಳಿಂದ ನಿಂತಿದ್ದರೂ ತುಂಬಾ ಸುಂದರವಾಗಿ ಕಾಣುತ್ತಿದ್ದ ಸೂರ್ಯ ದೇವಾಲಯ.

ಸೂರ್ಯ ದೇವಾಲಯ ಒಂದು ವಿಶಾಲ ಕಲ್ಲಿನ ರಥದಂತೆ, ಅದರ ಇಕ್ಕೆಡೆಗಳಲ್ಲಿ ೨೪ ಚಕ್ರಗಳು. ಕೊನಾರ್ಕ್ ಅಥವಾ ಸೂರ್ಯ ದೇವಾಲಯ ಅಂದ ಕೂಡಲೇ ಕಣ್ಣಿಗೆ ಬರೋದು ಇದೇ ಚಕ್ರಗಳು. ಕಲ್ಲಿನಲ್ಲಿ ಅಂತಹ ಅದ್ಭುತ ಕೆತ್ತೆನೆ ಸಾಧ್ಯವೇ ಅನ್ನುವ ಸಂಶಯ ಬರುವಂತೆ ಇದ್ದ ಚಕ್ರಗಳು. ಪ್ರತಿ ಚಕ್ರದ ಮೇಲೂ ಸುಂದರ ಕೆತ್ತೆನೆಗಳು. ಅಂದಾಗೆ ಆ ೨೪ ಚಕ್ರಗಳು ದಿನದ ೨೪ ಗಂಟೆಗಳ ಪ್ರತೀಕ. ಚಕ್ರದ ಜೊತೆಗೆ ಮನಸೆಳೆಯುವ ಇನ್ನೊಂದು ಅಂಶ- ದೇವಾಲಯದ ಗೋಡೆಯ ಮೇಲೆ ಇದ್ದ ಸುಂದರ ಮೋಹಕ ಕೆತ್ತೆನೆಗಳು. ಈಡೀ ಕಾಮಸೂತ್ರವನ್ನು ಕಲ್ಲಿನಲ್ಲಿ ಕಟೆದು ನಿಲ್ಲಿಸಿದಂತೆ ಇತ್ತು. ಒಂದು ಪ್ರಶ್ನೆ ಮನದಲ್ಲಿ ಮೂಡಿದ್ದು..ದೇವಾಲಯಗಳಲ್ಲಿ ಕಾಮಸೂತ್ರ ಹೇಗೆ ಬಂತು? ಅಥವಾ ಆಗಿನ ಜನ ಇದ್ದ ಸಮಾಜ ಅಷ್ಟು ಮುಕ್ತವಾಗಿತ್ತೇ? ಅಥವಾ ಜನಕ್ಕೆ ಶಿಕ್ಷಣ ಕೊಡುವ ವಿಧಾನವೇ ಅದು??

ವಿಶಾಲವಾದ ಆ ಸೂರ್ಯ ದೇವಾಲಯ ಬಹಳಷ್ಟು ಕಡೆ ಕುಸಿದು ಬಿದ್ದಿತ್ತು. ಗರ್ಭಗುಡಿ ಯಾವಾಗಲೋ ಬಿದ್ದುಹೋಗಿದೆಯಂತೆ.ಇದ್ದ ಕಟ್ಟಡವನ್ನು ಉಕ್ಕಿನ ಸರಳಿನಿಂದ ನಿಲ್ಲಿಸಿದ್ದರು.

ದೇವಾಲಯವನ್ನು ಸುತ್ತಿದ ನಂತರ ಹತ್ತಿರದಲ್ಲೇ ಇದ್ದ ಪ್ರವಾಸೋದ್ಯಮದ ಹೋಟೆಲ್‍ನಲ್ಲಿ ಊಟ ಮುಗಿಸಿದೆವು. ನಮ್ಮ ಪ್ರವಾಸೋದ್ಯಮದವರಿಗೆ ಯಾವಾಗ ಬುದ್ದಿ ಬರುತ್ತೋ ಆ ಸೂರ್ಯನಿಗೆ ಗೊತ್ತು. ಒಂದು ಊಟ ಹಾಕಲು ಅವರು ಕಾಯಿಸಿದ್ದು ಸುಮಾರು ೩೦ ನಿಮಿಷ. ನಾನು ದೇವಾಲಯದ ಎದುರಿನ ಬೀದಿಯಲ್ಲಿ ಒಂದು ಚಿಕ್ಕ ಕಲ್ಲಿನ ಚಕ್ರ ಖರೀದಿಸಿದೆ. ಕೊನಾರ್ಕ್ ದೇವಾಲಯದ ಚಕ್ರದ ಚಿಕ್ಕ ಮಾದರಿ. ಜೊತೆಗೆ ಇದ್ದ ಶಿಬಾಸಿಸ್ ಓಡಿಯಾ ಆದ್ದರಿಂದ ನಮ್ಮ ಖರೀದಿ ಕಡಿಮೆ ಬೆಲೆಯಲ್ಲಿ ಆಯ್ತು. ಇಲ್ಲ ಅಂದರೆ ೪೦೦ ರೂಪಾಯಿ ಚಕ್ರ ಕೊನೆಗೆ ೧೨೦ ರೂಪಾಯಿ ಹೇಗೆ ಸಿಕ್ತಾ ಇತ್ತು! ಅದರ ನಂತರ ನಮ್ಮ ಸವಾರಿ ಕೊನಾರ್ಕ್‍ನ ಸಮುದ್ರದ ತಡದ ಕಡೆ ಹೊರಟಿತು. ಕೊನಾರ್ಕ್ ತೀರ ಪುರಿಗೆ ಹೋಲಿಸಿದರೆ ಶುಭ್ರವಾಗಿತ್ತು ಮತ್ತು ಕಡಿಮೆ ಜನಸಂದಣಿಯಿಂದ ಕೂಡಿತ್ತು.

ಅಲ್ಲಿಂದ ಹೊರಟ ನಾವು ಭುವನೇಶ್ವರದ ಕಡೆ ಹೊರಟೆವು. ಮತ್ತೆ ಅದೇ ರಸ್ತೆ ಸುಂಕ ತೆತ್ತು, ನಮ್ಮ ಪ್ರಯಾಣ ಸಾಗಿತು. ಭುವನೇಶ್ವರಕ್ಕೆ ಬಲು ಹತ್ತಿರದಲ್ಲಿದೆ ದವಳಗಿರಿ. ಬೌದ್ದ ಸೂಪ್ತ ಅಲ್ಲಿನ ಆಕರ್ಷಣೆ. ಬುದ್ದನ ಸುಂದರ ವಿಗ್ರಹವಿದೆ. ಅದು ಆಶೋಕನ ಕಾಳಿಂಗ ಪ್ರದೇಶವಂತೆ. ಅಲ್ಲಿಂದ ನೋಡಿದರೆ ದಾಗ ಅನ್ನೋ ನದಿ ಕಾಣುತ್ತೆ. ಅದರ ದಡದಲ್ಲಿ ಕಳಿಂಗ ಯುದ್ದ ನಡೆದು, ಅಶೋಕ ಶಸ್ತ್ರತ್ಯಾಗ ಮಾಡಿದ್ದಂತೆ. ದವಳಗಿರಿಯ ನಂತರ ಭುವನೇಶ್ವರಕ್ಕೆ ಮರಳಿ ಅಲ್ಲಿನ ಸುಪ್ರಸಿದ್ದ ಲಿಂಗರಾಜ ದೇವಸ್ಥಾನಕ್ಕೆ ಭೇಟಿ ನೀಡಿದೆವು. ಆ ದೇವಾಲಯದ ಆಲಯದಲ್ಲಿ ಏಷ್ಟೊಂದು ದೇವಾಲಯಗಳಿದ್ದವು. ಇಲ್ಲೂ ಸಹ ಪುರಿಯ ಅರ್ಚಕರಂತೆ ಜನರಿಂದ ಹಣ ಕೀಳುವ ಯತ್ನ ನಡೆಯುತಿತ್ತು.

ಚಂದೋಗ ಅನ್ನೋದು ಓರಿಸ್ಸಾದ ಕಸೂತಿ ಕಲೆ. ಕೈಯಲ್ಲಿ ಹೆಣೆದ ಸುಂದರವಾದ ಆಕಾಶಬುಟ್ಟಿಯೊಂದನ್ನು ಅಂತಹ ಕರಕುಶಲ ಅಂಗಡಿಯಲಿ ಕೊಂಡೆ.ಮುಂದೆ ಹೋಗಿದ್ದು ನಾವು ಕಂದಗಿರಿ ಅನ್ನೋ ಗುಡ್ಡಕ್ಕೆ. ಅಲ್ಲಿಂದ ಇಡೀ ಭುವನೇಶ್ವರದ ವಿಹಂಗಮ ನೋಟ. ಸಂಜೆಯ ಆ ಇಳಿಹೊತ್ತಿನಲ್ಲಿ ಅಲ್ಲಿ ಕೂತು ಹರಟಿ, ಶಿಬಾಸಿಸ್‍ನ ಮನೆ ತಲುಪಿದಾಗ ರಾತ್ರಿ ಹೊತ್ತು. ಅವನ ಮನೆಯಲ್ಲಿ ಊಟ ಮಾಡಿ, ಪುರಿ ಎಕ್ಸ್‍ಪ್ರೆಸ್ ಏರಿದೆವು.

ಜಗನಾಥ, ರಾಬ್ಡಿ ಶರಬತ್ತು, ಕಲ್ಲಿನ ಚಕ್ರ, ಆ ಮೋಹಕ ಕೆತ್ತೆನೆಗಳು, ಬುದ್ದ...ಹೀಗೆ ಒಂದಾರೊಂದರಂತೆ ದೃಶ್ಯಗಳು ಕಣ್ಮುಂದೆ ಬಂದು ಹೋದವು..ಅದು ಗೊತ್ತಿಲ್ಲ ಯಾವಾಗ ನಿದ್ರಾದೇವಿ ಕರೆದೊಯ್ಯೊದೊಳೋ..

ಹೌರಾ ನಿಲ್ದಾಣ ತಲುಪಿ ಎಚ್ಚರವಾಗಿ,ಹೊರಬರುತ್ತಿದಂತೆ ಆ ಗಿಜಿಗಿಜಿ ರಸ್ತೆಗಳು, ಅದೇ ಹಳದಿ ಟ್ಯಾಕ್ಸಿಗಳು, 'ಕೀ ಕಾಬೋರ್ ದಾದಾ' ಅನ್ನಕೊಂಡು ಓಡಾಡುವ ಬೆಂಗಾಲಿ ಬಾಬುಗಳು...ಅಲ್ಲೇ ಎದುರಿಗೆ ಇತ್ತು ಆ ಮುಂಜಾವಿನಲ್ಲಿ , ವಿಶಾಲವಾಗಿ ಹರಡಿಕೊಂಡು ಮಲಗಿದಂತೆ ಇದ್ದ ಹೌರಾ ಸೇತುವೆ...

Tuesday, October 31, 2006

ಸಿಟಿ ಆಫ್ ಜಾಯ್ !

ತುಂಬಿದ ಅಣೆಕಟ್ಟಿನ ಬಾಗಿಲುಗಳನ್ನು ತೆರೆದಂತೆ ಇತ್ತು...

ನನ್ನ ಮೇಲೆ ಮಮತೆ,ಪ್ರೀತಿ,ಅಕ್ಕರೆಯ ಸುರಿಮಳೆ ಅಗ್ತಾ ಇತ್ತು. ಒಂದು ವರ್ಷದ ನಂತರ ನನ್ನನ್ನು ನೋಡ್ತಾ ಇದ್ದ ಅಪ್ಪ-ಅಮ್ಮನ ಕಣ್ಣುಗಳು ತೇವವಾಗಿದ್ದವು.ಮನೆಗೆ ಬಂದು ಅಮ್ಮನ ಕೈ ಊಟ ಮಾಡ್ತಾ ಇದ್ದರೆ ಸ್ವರ್ಗ.ನಂತರ ಮನೆಮಂದಿಯ ಜೊತೆ ಅಮೇರಿಕಾದ ಕತೆಗಳನ್ನು ಬಿಚ್ಚಿಕೊಂಡು ಕೂತು ಹರಟೆ. ಅಮ್ಮ ನನ್ನ ಕೈಯಲ್ಲಿ ಕಾಗದದ ತುಂಡೊಂದನ್ನು ಇಟ್ಟರು.ನೋಡಿದರೆ ಅದರಲ್ಲಿ ಅಮ್ಮ ನನ್ನ ಬಗ್ಗೆ ಬರೆದ ಒಂದು ಕವನ!! ಅಪ್ಪ-ಅಮ್ಮನಿಗೆ ತಂದ ಉಡುಗೊರೆಗಳನ್ನು ಅವರಿಗೆ ನೀಡಿ,ಅವರು ಪಟ್ಟ ಸಂತೋಷ ನೋಡಿ ಮನಸಿಗೆ ಖುಷಿ.

ನಂತರ ಮಿತ್ರರಿಗೆ ಪೋನಾಯಿಸಿ ನನ್ನ ಭಾರತಾಗಮನದ ಸುದ್ದಿ ನೀಡಿದ್ದಾಯಿತು.ಇಲ್ಲಿನ ಒಬ್ಬ ಮಿತ್ರರಿಗೂ ನಾನು ಬರುವುದು ಗೊತ್ತಿರಲಿಲ್ಲವಾದರಿಂದ ಅವರಿಗೆಲ್ಲ ಅದೊಂದು ಅಚ್ಚರಿಯ ಸುದ್ದಿ.ಅಲ್ಲಿಂದ ತಂದ ಚಾಕೆಲೋಟ್‍ಗಳನ್ನು ಬಂಧು-ಮಿತ್ರರಿಗೆ ಕೊಟ್ಟದಾಯಿತು. ಕೆಲವು ಮಿತ್ರರನ್ನು-ಬಂಧುಗಳ ಜೊತೆ ಬೇಟಿ-ಮಾತು-ಹರಟೆ.ಭೇಟಿ ಮಾಡಲಾಗದವರೊಂದಿಗೆ ಪೋನು.

ಕಳೆದ ಒಂದು ವರ್ಷದಲ್ಲಿ ನನಗೆ ಬ್ಲಾಗ್‍ಗಳ ಮೂಲಕ,ಒರ್ಕೊಟ್ ಮೂಲಕ ಸಿಕ್ಕವರು ಅನೇಕ ಮಿತ್ರರು. ಅಂತಹ ಹಲವು ಮಿತ್ರರನ್ನು ಮಾತಾಡಿಸಿದೆ..ತವಿಶ್ರೀ, ಮಹಾಂತೇಶ್,ಜಯಂತ್.ಅವರೆಲ್ಲರನ್ನು ಮೊದಲ ಸಲ ಮಾತಾಡಿಸುತ್ತಿದ್ದೆ.

ಅದರ ಮಧ್ಯೆ ವೀಸಾ ನವೀಕರಣಕ್ಕೆ ಚಿನೈ ಭೇಟಿ ಕೊಟ್ಟಿದು ಆಯಿತು. ಚಿನೈನಲ್ಲಿ ಒರ್ಕೊಟ್ ಗೆಳತಿ ಕರುಣಾ ಭೇಟಿ ಮಾಡುವ ಅಂದುಕೊಂಡೆ.ಒಂದು ಸಣ್ಣ ಸಮಸ್ಯೆಯಂದರೆ ಕರುಣಾಳನ್ನಾಗಲಿ,ಕರುಣಾಳ ಪೋಟೋವನ್ನಾಗಲಿ ಇಲ್ಲಿಯವರಿಗೆ ನೋಡಿರಲಿಲ್ಲ. ಅದರೆ ನನ್ನನ್ನು ನೋಡಿದ ತಕ್ಷಣ 'ಶಿವ್!' ಅನ್ನೋ ಉದ್ಗಾರ ಕೇಳಿದಾಗ ಅಲ್ಲಿ ನಿಂತಿದ್ದಳು ಕರುಣಾ.ಒರ್ಕೊಟ್‍ನಲ್ಲಿ ಪೋಟೋ ಹಾಕಿರೊದರಿಂದ ಒಂದೊಂದು ಸಲ ಅಗೋ ಪ್ರಯೋಜನ ಇದು! ಸರಿಯಾದ ಬಸ್ ಹತ್ತಿದ ಮೇಲೂ ಬಸ್ಸಿನಲ್ಲಿದವರಿಗೆ 'ಎಲ್ಲಿಗೆ ಹೋಗುತ್ತೆ ಬಸ್' ಅಂತಾ ಕೇಳಿದಂತೆ 'ನೀವು ಕರುಣಾ??' ಅಂತಾ ಕೇಳಿ ಕನ್‍ಫರ್ಮ್ ಮಾಡಿಕೊಂಡೆ ! ಅಸತ್ಯಿಗಳ ದೂರವಾಣಿ ಸಂಖ್ಯೆ ಇರಲಿಲ್ಲವಲ್ಲ..ಇಲ್ಲವಾದರೆ ಬೊಗಳೆ ಪಂಡಿತರನ್ನು ಸಾಕ್ಷತ್ ದರ್ಶನ ಮಾಡಬಹುದಿತ್ತು.

ಎರಡು ವಾರ ಮನೆ-ಮಂದಿಯ ಜೊತೆ, ಗೆಳಯರೊಂದಿಗೆ, ತಿರುಗಾಟದಲ್ಲಿ ಹೇಗೆ ಹೋದವೋ ತಿಳಿಯಲಿಲ್ಲ. ಮತ್ತೊಂದು ಹೊಸ ಊರು ಕೈ ಬೀಸಿ ಕರೆಯುತಿತ್ತು.

ಕೊಲ್ಕತ್ತಾ...

ಅಲ್ಲಿನ ನೇತಾಜಿ ವಿಮಾನ ನಿಲ್ದಾಣದಲ್ಲಿದಿಂದ ಟ್ಯಾಕ್ಸಿಯಲ್ಲಿ ಕಂಪನಿ ಗೆಸ್ಟ್‍ಹೌಸ್‍ ಕಡೆ ಹೊರಟಾಗ ದಾರಿಯುದ್ದಕ್ಕೂ ಕಂಡವು ಆ ಸೈಕಲ್ ರಿಕ್ಷಾಗಳು.ಆ ರಿಕ್ಷಾಗಳನ್ನು ನೋಡುತ್ತಿದ್ದಂತೆ ನೆನಪಾದದ್ದು 'ಸಿಟಿ ಆಫ್ ಜಾಯ್' ಅನ್ನೋ ಆ ಪುಸ್ತಕ. ಕಲ್ಕತ್ತಾದ ಬಗ್ಗೆ, ಕಲ್ಕತ್ತಾದ ರಿಕ್ಷಾ ಎಳೆಯುವರ ಬಗ್ಗೆ ಅಷ್ಟೊಂದು ಮನ ಮುಟ್ಟುವಂತೆ ಬರೆದ ಪುಸ್ತಕ ಬಹುಷಃ ಇನ್ನೊಂದು ಇರಲಿಕ್ಕಿಲ್ಲ.

ಕಲ್ಕತ್ತಾ ಅಂದ ಕೂಡಲೆ ನನಗೆ ಯಾವಾಗಲೂ ನೆನಪಿಗೆ ಬರ್ತಾ ಇದದ್ದು ಈ 'ಸಿಟಿ ಆಫ್ ಜಾಯ್' ಅನ್ನೊ ಪುಸ್ತಕ, ರಸಗುಲ್ಲಾ,ಅಲ್ಲಿ ೨-೩ ದಶಕಗಳಿಂದ ಒಂದೂ ಬ್ರೇಕ್ ಇಲ್ಲದೆ ಆಳ್ತಾ ಇರೋ ಕಮ್ಯುನಿಷ್ಟರು.

ಅಲ್ಲಿ ದಿನ ಕಳೆದಂತೆ ಅನಿಸತೊಡಗಿದ್ದು ಕಲ್ಕತ್ತಾ ತಾನು 'ಐಟಿ' ಉದ್ಯಮದಲ್ಲಿ ಹಿಂದೆ ಬಿದ್ದಿಲ್ಲ ಅಂತಾ ಮನದಟ್ಟು ಮಾಡಲು ಪ್ರಯತ್ನಿಸುತ್ತಿದೆ.ಅಲ್ಲಿನ ಸಾಲ್ಟ್‍ಲೇಕ್ ಅನ್ನೋ ಎರಿಯಾದಲ್ಲಿ ನೀವು ಹೋದರೆ ಗೊತ್ತಾಗುತ್ತೆ..ಎಲ್ಲ 'ಐಟಿ' ಕಂಪನಿಗಳನ್ನು ಕರೆ ತರೋದರಲ್ಲಿ ಯಶಸ್ವಿಯಾಗಿದ್ದಾರೆ.ಕಮುನಿಷ್ಟರು ಮತ್ತು ಬಂಡವಾಳಶಾಹಿ ಕಂಪನಿಗಳು ??!!!

ಐಟಿ,ಸೈಕಲ್ ರಿಕ್ಷಾ,ಕಮುನಿಷ್ಟರು..ಇವೆಲ್ಲದರ ನಡುವೆ ಕಲ್ಕತ್ತಾದ ಅತ್ಯಂತ ಪ್ರಶಾಂತ ಸ್ಥಳಗಳ ಬಗ್ಗೆ ಹೇಳಲೇ ಇಲ್ಲ...ಕಾಳೀಘಟ್ ಮತ್ತು ದಕ್ಷಿಣೇಶ್ವರ.

ಕಾಳಿಘಟ್‍ಗೆ ಹೋದಾಗ ಸಂಜೆಯಾಗಿತ್ತು.ಮೊದಲು ಅಲ್ಲಿ ರಾಮಕೃಷ್ಣ ಪರಮಹಂಸರು ವಾಸವಾಗಿದ್ದ ಆಲಯಕ್ಕೆ ಭೇಟಿ ಕೊಟ್ಟೆವು.ಆ ಚಿಕ್ಕ ಕೋಣೆಯಲ್ಲಿ ಕೂತು ಬಹಳ ಜನ ಕೂತು ಧ್ಯಾನ ಮಾಡುತ್ತಿದ್ದರು.ಅಲ್ಲಿ ಕೂತು ಪರಮಹಂಸರಿಗೆ ವಂದಿಸಿ ಪಕ್ಕದಲ್ಲಿರುವ ಕಾಳೀ ಮಂದಿರಕ್ಕೆ ತೆರಳಿದೆವು.ಪರಮಹಂಸರು ಇದೇ ದೇವಾಲಯದಲ್ಲಿ ಕಾಳೀ ದೇವಿಯ ಸಾಕ್ಷಾತ್ಕಾರ ಮಾಡಿಕೊಂಡಿದ್ದರಂತೆ.ಅಂದು ನವರಾತ್ರಿಯ ಮೊದಲ ದಿನವೂ ಆದ್ದರಿಂದ ದೇವಾಲಯದಲ್ಲಿ ತುಂಬಾ ಜನ.ಕಾಳೀ ದರ್ಶನ ಪಡೆದು ಹೊರಬಂದರೆ, ದೇವಾಲಯದ ಮುಂದಿರುವ ಪ್ರಾಂಗಣದಲ್ಲಿ ನಡೆಯುತ್ತಿತ್ತು ಭಜನೆ.ಕಾಳೀ ದೇವಾಲಯದ ಪಕ್ಕದಲ್ಲಿ ಇರುವ ದ್ವದಶ ಜೋರ್ತ್ಯಿಲಿಂಗಗಳನ್ನು ದರ್ಶಿಸಿ ಪಕ್ಕದಲ್ಲೆ ಹರಿಯುತ್ತಿದ್ದ ಗಂಗಾ ನದಿಯನ್ನು ಸ್ಪರ್ಶಿಸಿದೆವು. ಅಂದಾಗೆ ಕಲ್ಕತ್ತಾ ಅನ್ನೋ ಹೆಸರು ಈ 'ಕಾಳೀಘಟ್' ಎಂಬ ಹೆಸರಿನಿಂದ ಬಂದಿದೆಯಂತೆ.

ಅಲ್ಲಿಂದ ಹೊರಟು ದಕ್ಷಿಣೇಶ್ವರಕ್ಕೆ ಹೊರಟೆವು.ಬೇಲೂರು ಅನ್ನೋ ಈ ಸ್ಥಳದಲ್ಲಿ ರಾಮಕೃಷ್ಣ ಆಶ್ರಮ ಶುರುವಾಯಿತು. ಅಲ್ಲಿದೆ ಅತ್ಯಂತ ಸುಂದರವಾದ ಒಂದು ಪ್ರಾರ್ಥನಾ ಮಂದಿರ.ಅಷ್ಟು ಪ್ರಶಾಂತವಾದ ಆಲಯದಲ್ಲಿ ಕೂತು ಸುಶ್ರ್ಯಾವ ಹಿನ್ನಲೆ ಸಂಗೀತದೊಂದಿಗೆ ಭಜನೆಯಲ್ಲಿ ಪಾಲ್ಗೊಳೊಂಡ ಮೇಲೆ ಮನ ಶಾಂತವಾಗದಿದ್ದರೆ ಕೇಳಿ.ಅಲ್ಲಿನ ಪರಮಹಂಸರ ವಿಗ್ರಹವನ್ನು ಸ್ವಯಂ ವಿವೇಕಾನಂದರೇ ಪರಿಕಲ್ಪಿಸಿದರಂತೆ.

ದೇವಾಲಯ-ಆಶ್ರಮ ದರ್ಶನದ ನಂತರ ಸ್ಪಲ್ಪ 'ಮೆಟೀರಿಯಲಿಸ್ಟಿಕ್' ವಸ್ತುಗಳನ್ನು ನೋಡಲು-ಸವಿಯಲು 'ಸಿಟಿ ಸೆಂಟರ್' ಅಂತಹ ಶಾಪಿಂಗ್ ಮಳಿಗೆಗೆ ಹೊಕ್ಕು ಸ್ಪಲ್ಪ ಹೊತ್ತು ತಿರುಗಾಡಬಹುದು.ಇಲ್ಲದಿದ್ದರೆ ಪಾರ್ಕ್ ಸ್ಟ್ರೀಟ್‍ನ ತಳಕು-ಬೆಳಕಿನ ರಸ್ತೆಯಲ್ಲಿ,ಅಲ್ಲಿನ ಅರೆಗತ್ತಲೆಯ ಪಬ್ಬ್‍ಗಳಲ್ಲಿ ಕಳೆಯಬಹುದು.

ಕಲ್ಕತ್ತಾದ ಇನ್ನೊಂದು ಪ್ರೇಕ್ಷಣೀಯ ಸ್ಥಳ..ವಿಕ್ಟೋರಿಯಾ ಮೆಮೋರಿಯಲ್..ಬ್ರಿಟಿಷ್ ರಾಣಿ ವಿಕ್ಟೋರಿಯಾಳ ಕಾಲದಲ್ಲಿ ಕಟ್ಟಿದ ಭವ್ಯ ಕಟ್ಟಡ. ಅದರ ಸುತ್ತ ಇರುವ ಉದ್ಯಾನ ಪ್ರೇಮಿಗಳಿಗೆ ಬಲು ಪ್ರಿಯ.ಅಂತ ಜನನಿಬಿಡ ಸ್ಠಳದಲ್ಲೂ ಕೂಡ ಪ್ರೇಮಿಗಳು ನಿಸಂಕೋಚವಾಗಿ ತಮ್ಮ ಕೆಲಸ ಮುಂದುವರಿಸುತಿರುತ್ತಾರೆ.

ಪ್ರೇಮಿಗಳಿಂದ ಕಿಕ್ಕಿರಿದು ಕೂಡಿರುವ ಇನ್ನೊಂದು ಸ್ಥಳ- ಸೆಂಟ್ರಲ್ ಪಾರ್ಕ್ ! ಬಹುಷ: ಕಲ್ಕತ್ತಾದಲ್ಲಿ ಬಹು ಹೆಚ್ಚು ಜನಕ್ಕೆ ಗೊತ್ತಿರುವ ಜಾಗ ಎಂದರೆ ಇದೇ ಇರಬೇಕು.ಇಲ್ಲಿ ಪ್ರೇಮಿಗಳಿಗೆ(?) ಯಾವುದೇ ಅಡೆತಡೆ ಇದ್ದಾಗೆ ಕಾಣೋಲ್ಲ.೧೦ ರೂಪಾಯಿ ಕೊಟ್ಟು ಸೆಂಟ್ರಲ್ ಪಾರ್ಕ್ ಪ್ರವೇಶಿಸಿದರೆ ಅವರನ್ನು ಹೇಳೋರು ಕೇಳೋರು ಯಾರು ಇರೋಲ್ಲ.ಸಹಜವಾಗಿ ಇಲ್ಲಿ ಪ್ರೇಮಕ್ಕಿಂತ ಜಾಸ್ತಿ ದೇಹಗಳ ಪ್ರೀತಿ ! ಉಪ್ಪಿ ಭಾಷೆಯಲ್ಲಿ ಹೇಳೋದಾದರೆ 'ಇಂಗ್ಲೀಷ್ ಲವ್' ಮಾಡೋರೆ ಹೆಚ್ಚು ಇಲ್ಲಿಗೆ ಬರೋರು.

ಕಲ್ಕತ್ತಾದಲ್ಲಿದ್ದಾಗ ಕಂಡ ಇನ್ನೊಂದು ಮಹೋನ್ನತ ಅನುಭವ - ದುರ್ಗಾ ಪೂಜೆ. ಅದರ ಬಗ್ಗೆ ಸವಿಸ್ತಾರವಾಗಿ ಮತ್ತೊಮ್ಮೆ ಬರಿತೀನಿ.

ಇನ್ನು ಅಲ್ಲಿನ ಜನ ಊಟದ ವಿಷಯಕ್ಕೆ ಬಂದರೆ ಕೇಳೋದು ಮೂರೇ - ಆಲೂ, ಮಾಂಚ್,ಮಿಶ್ಟಿ. ಅಡುಗೆಯಲ್ಲಿ ಒಂದಾದರೂ ಆಲೂ ಖ್ಯಾದ ಇಲ್ಲದಿದ್ದರೆ ಕೇಳಿ, ಹಾಗೇ ಮೀನು ಬೇಕೇ ಬೇಕು. ಇದರ ಜೊತೆಗೆ ಸಿಹಿ ತಿನಿಸು ತಿನ್ನೋಕೆ ಯಾವಾಗಲೂ ರೆಡಿ..ಅದಕ್ಕೆ ಅಲ್ಲಿ ಜನ ರಸಗುಲ್ಲಾ ತರ ಗುಂಡು ಗುಂಡಾಗಿ ಇರೋದೇ??

ಸೈಕಲ್ ರಿಕ್ಷಾ, ಐಟಿ, ಕಮ್ಯುನಿಷ್ಟ್‍ರು, ಪರಮಹಂಸರು,ಐತಿಹಾಸಿಕ ಸ್ಥಳಗಳು, ರಸಗುಲ್ಲಾ, ದುರ್ಗಾ ಪೂಜೆ, ಪುಟ್‍ಬಾಲ್ ಹುಚ್ಚು...ಕಲ್ಕತ್ತಾದಲ್ಲಿ ಏನಿಲ್ಲ ಎನೀದೆ?

Sunday, August 27, 2006

ಗಣಪ ಬಂದ..


ಆನೆ ಮುಖ,ಡೊಳ್ಳು ಹೊಟ್ಟೆ,ಇಲಿಯಂತ ವಾಹನ,ವಿದ್ಯಾ-ಬುದ್ದಿಗೆ ಅಧಿಪತಿ,ಅದರ ಮೇಲೆ ಎಲ್ಲಕ್ಕಿಂತ ಮೊದಲು ಪೂಜೆಗೊಳ್ಳುವವ..

ಹೀಗೆ ಗಣಪನ ಬಗ್ಗೆ ನಮ್ಮ ಕಲ್ವನೆ ಒಂದು ವಿಭಿನ್ನತೆ, ಎನೋ ಕುತೂಹಲ,ಭಯ-ಭಕ್ತಿಯಿಂದ ಕೂಡಿದೆ.ಹಾಗೆಯೇ ನಮ್ಮ ಗಣಪ ಅತ್ಯಂತ designed ದೇವರು.ಗಣಪ ಎಂದರೆ ಕಲಾವಿದರಿಗೆ ಹಬ್ಬ.ಕಲಾವಿದರ ಕಲ್ಪನೆಯ ಪ್ರಕಾರ ಅವನು ಧರಿಸಿರೋ ರೂಪಗಳು-ತೊಟ್ಟ ವೇಷಗಳು ಅನೇಕ. ಇಂತಹ ಎಲ್ಲರಿಗೂ ಪ್ರಿಯನಾದ ಗಣಪನ ಹಬ್ಬ ಕೂಡ ಅವರವರ ಭಾವಕ್ಕೆ ಅವರವರ ಭಕುತಿಗೆ ತಕ್ಕಂತೆ ಆಚರಿಸಲ್ಪಡುತ್ತಿದ್ದೆ.

ನಾವು ಹರಿಹರದಲ್ಲಿ ಇರೋವರೆಗೆ ಅಲ್ಲಿನ ಗಣಪನ ಹಬ್ಬದ್ದು ಒಂದು ವಿಶಿಷ್ಟತೆ ಇತ್ತು.ಅಲ್ಲಿ ನಾವು ಇದದ್ದು ಒಂದು ವಟಾರದ ತರದ ಮನೆ.ಅಕ್ಕಪಕ್ಕದ ಮನೆಯವರೆಲ್ಲ ಸಂಬಂಧಿಗಳೇ..ಚಿಕ್ಕಪ್ಪ-ದೊಡ್ಡಪ್ಪಗಳ ಕುಟುಂಬಗಳು.ಅದೇನು ಆಗುತಿತ್ತೋ ಆ ವಟಾರದಲ್ಲಿ ಯಾವಾಗಲೂ ಸೋದರ ಕುಟುಂಬಗಳ ನಡುವೆ ನಿಲ್ಲದ ಜಗಳಗಳು.ಆದರೆ ಗಣಪನ ಹಬ್ಬ ಬರುತ್ತಿದಂತೆ ಒಂದು ಕದನವಿರಾಮ! ಎಲ್ಲರೂ ಸೇರುತ್ತಿದದ್ದು ಒಟ್ಟಿಗೆ ಆಚರಿಸುತ್ತಿದದ್ದು ಗಣಪತಿ ಹಬ್ಬವೊಂದೇ.

ಹಬ್ಬಕ್ಕೆ ವಾರ ಇದ್ದಂತೆ ನಮ್ಮ ವಟಾರದಲ್ಲಿದ್ದ 'ನಡುಮನೆ' ಅಂತಾ ಕರೆಯುತ್ತಿದ್ದ ಒಂದು ದೊಡ್ಡ ಮನೆಯಲ್ಲಿ ನೆಲಕ್ಕೆ ಸೆಗಣಿ ಬಳಿದು ಸಾರಿಸಿ,ಗೋಡೆಗೆ ಸುಣ್ಣ-ಬಣ್ಣಗಳ ಅಲಂಕಾರ.ಹಬ್ಬಕ್ಕೆ ೧-೨ ದಿವಸ ಇದ್ದಂತೆ ಪೇಟೆಯಿಂದ ಬಣ್ಣದ ಪೇಪರ್ ತಂದು ಅದನ್ನು ವಿವಿಧ ಆಕೃತಿಯ ಸರಪಳಿಯಲ್ಲಿ ಕತ್ತರಿಸುತ್ತಿದ್ದೆವು. ಆ ಬಣ್ಣದ ಕಟ್ಟಿಂಗ್ಸ್ ಅಂಟಿಸಲು ವಿಶೇಷ ತರದ ಅಂಟು ಮನೆಯಲ್ಲಿ ತಯಾರಯಾಗುತಿತ್ತು.ಅ ಬಣ್ಣದ ಕಟ್ಟಿಂಗ್ಸ್ ನ್ನು ಆ ನಡುಮನೆಯ ಜಂತಿಗೆ ರಾತಿಯಿಡೀ ಅಂಟಿಸುತ್ತಿದ್ದೆವು.

ಬಣ್ಣದ ಕಟ್ಟಿಂಗ್ ಅಂಟಿಸಿದ ಮೇಲೆ ಮುಂದಿನ ಕಾರ್ಯ ನಡುಮನೆಯ ಗೋಡೆ ಮೇಲೆ ಒಂದು ಇಂಚು ಬಿಡದೆ ವಿವಿಧ ಕ್ಯಾಲೆಂಡರ್-ಚಿತ್ರಪಟಗಳನ್ನು ಬಡಿಯೋದು.ಅದರಲ್ಲಿ ಬಹುತೇಕ ಕ್ಯಾಲೆಂಡರ್‍ಗಳು ಗಣಪತಿ-ದೇವಾನುದೇವತೆಗಳದು.ಆ ಕ್ಯಾಲೆಂಡರ್ ಎಷ್ಟು ವರ್ಷದ ಕಲೆಕ್ಷೆನ್ನೋ ನಾ ಕಾಣೇ.

ಗಣಪನನ್ನು ಕೂಡಿಸಲು ಗೋಡೆಯಲ್ಲಿ ಒಂದು ದೊಡ್ಡ ಕಿಟಕಿಯಂತ ಗೂಡು.ಅದಕ್ಕೆ 'ಗಣಪನ ಗೂಡು' ಅಂತಾ ಹೆಸರು.ಆ ಗಣಪನ ಗೂಡಿಗೆ ವಿಶೇಷ ಅಲಂಕಾರ.ಗಣಪ ಕೂಡುವ ಪೀಠದ ಹಿಂದೆ ಒಂದು ಬ್ಯಾಟರಿ-ಚಾಲಿತ ಬಣ್ಣದ ಚಿಕ್ಕ ಫ್ಯಾನ್.ಅದು ಸರಿಯಾಗಿ ಗಣಪನ ಕಿರೀಟದ ಹಿಂದೆ ಇದ್ದು ಗಣಪನಿಗೆ ಸ್ಪೆಷಲ್ ಎಪೆಕ್ಟ್! ಇನ್ನು ಗಣಪನ ಗೂಡಿನ ಮುಂದೆ ಮರದ ಹಲಗೆಯನ್ನು ಹಂತ ಹಂತವಾಗಿ ಜೋಡಿಸಿ ಒಂದು ಮೆಟ್ಟಿಲಿನಾಕೃತಿ. ಒಂದು ಮೆಟ್ಟಿಲ ಮೇಲೆ ನಮ್ಮ ಚಿಕ್ಕಪ್ಪ ಮಣ್ಣಿನಿಂದ ಮಾಡಿದ ವಿವಿಧ ಆಕೃತಿಗಳು- ಬೆಣ್ಣೆ ತಿನ್ನುತ್ತಿರುವ ಬಾಲಕೃಷ್ಣ, ಹಾವನ್ನು ಬೇಟ ಆಡುತ್ತಿರುವ ಹದ್ದು,ಹೆಡೆ ಬಿಚ್ಚಿದ ನಾಗರ ಹಾವು ...ಎಲ್ಲವೂ ಲೈಪ್ ಸೈಜ್ ಆಕೃತಿಗಳು.

ಕೊನೆಯ ಸುತ್ತಿನ ಆಲಂಕಾರದಲ್ಲಿ ನಡುಮನೆಯಲ್ಲಿ ವಿವಿಧ ಹೂವಿನ ಗಿಡದ ಕುಂಡಗಳನ್ನು ಇಟ್ಟು, ಕಲರ್ ಬಲ್ಬ್ ಗಳನ್ನು ಹಾಕಿದರೆ ಆಲಂಕಾರ ಒಂದು ಹಂತಕ್ಕೆ ಬಂದಂತೆ!

ಇಷ್ಟೆಲ್ಲ ನಡುಮನೆಯಲ್ಲಿ ಆಗುತ್ತಿದ್ದಂತೆ ಇನ್ನು ಆ ಕಡೆ ಆಡುಗೆ ಮನೆಯಲ್ಲಿ ಗಣಪನ ಮುಂದೆ ಇಡಲು ವಿವಿಧ ತಿಂಡಿಗಳ ತಯಾರಿ.ಚಕ್ಕಲಿ,ಕೋಡುಬಳೆ,ಕರ್ಚಿಕಾಯಿ,ಕಡುಬು,ಶಂಕರಪೊಳ್ಯ..ಒಂದೇ ಎರಡೇ ತಿನಿಸುಗಳು !

ಹಬ್ಬದ ದಿನ ಬೇಗ ಎದ್ದು ತಯಾರಾಗಿ ಗಣಪತಿ ತರಲು 'ಗಣಪತಿ ಮಾಡೋರ' ಮನೆ ಕಡೆ ಪಯಣ.ಅಲ್ಲಿಂದ ಗಣಪನ ಹಿಡಕೊಂಡು ನಮ್ಮ ತಂದೆ ಬರುತ್ತಿದ್ದರೆ , ಅವರ ಮುಂದೆ ಸೋದರ ಸಂಬಂಧಿಗಳಾದ ನನ್ನ ಓರಗೆಯ ಹುಡುಗರದು ಒಂದು ಚಿಕ್ಕ ಸೈನ್ಯ. ದಾರಿಯುದ್ದಕ್ಕೂ 'ವಿಘ್ನೇಶ್ವರ್ ಮಹಾರಾಜ್ ಕೀ ಜೈ' ಅಂತಾ ಕೂಗೋದು. ನಡುನಡುವೆ 'ಬಂದನಪ್ಪ ಬಂದನಪ್ಪ' ಅಂತಾ ಒಬ್ಬರು ಕೂಗಿದರೆ ಉಳಿದವರೆಲ್ಲ ಕೋರಸ್‍ನಲ್ಲಿ 'ಗಣೇಶ ಬಂದ' ಅಂತಾ ಕೂಗೋದು .ಇನ್ನೊಂದು ಪಾಪುಲರ್ ಕೂಗು 'ಗಣಪ ಬಂದ..ಕಾಯಿಕಡುಬು ತಿಂದ' !!

ಗಣೇಶನನ್ನು 'ಗೂಡಿ'ನಲ್ಲಿ ಕುಳ್ಳಿರಿಸಿ, ಎಲ್ಲ ಕುಟುಂಬದವರ ಸಮ್ಮುಖದಲ್ಲಿ ನನ್ನ ತಂದೆಯಿಂದ ಮೊದಲು ಪೂಜೆ-ಮಂಗಳಾರತಿ.ಪೂಜೆ ಕೊನೆಯಲ್ಲಿ ನನ್ನಪ್ಪ 'ಜಯಂನವ ಪಾರ್ವತಿ ಪತಿಹರ' ಅನ್ನುತ್ತಿದ್ದಂತೆ ನಾವೆಲ್ಲ ದ್ವನಿ ಕೂಡಿಸಿ ''ಜಯಂನವ ಪಾರ್ವತಿ ಪತಿಹರ ಮಹಾದೇವ್' ಅಂದು ಕೈಲ್ಲಿದ್ದ ಅಕ್ಷತೆಯನ್ನು ಗಣಪನ ಮೇಲೆ ಹಾಕುತ್ತಿದ್ದೆವು.

ಆಮೇಲೆ ಅಲ್ಲಿ ಪ್ರಸಾದ ವಿನಯೋಗ.ಗಣಪನ ಮುಂದೆ ಕೂತು ಸ್ಪಲ್ಪ ಹೊತ್ತು ಎಲ್ಲರ ಹರಟೆ. ನಂತರ ಅವರವರ ಮನೆಗೆ ಊಟಕ್ಕೆ ತೆರಳುವುದು. ಕೆಲವೊಮ್ಮೆ ಪ್ರೀತಿ ಜಾಸ್ತಿಯಾಗಿ ಒಬ್ಬರನ್ನು ಇನ್ನೊಬ್ಬರ ಮನೆಗೆ ಊಟಕ್ಕೆ ಕರೆದೊಯ್ಯುವುದು ನಡೆಯುತಿತ್ತು !! ಈ ಭಾಂದವ್ಯ ಬೇರೆ ದಿನ ಎಲ್ಲಿ ಮಾಯವಾಗುತಿತ್ತೋ ಅಂದು ಅನಿಸದಿರಲಿಲ್ಲ..

ಈ ನಡುವೆ ಕೆಲವು ವರ್ಷಗಳ ಕಾಲ ನನ್ನ ಸೋದರ ಸಂಬಂಧಿಯೊಬ್ಬ ನಮ್ಮ ವಟಾರದಲ್ಲಿ ತಾನೇ ಗಣಪನ ವಿಗ್ರಹವನ್ನು ಮಾಡತೊಡಗಿದ.ಅವನಿಗೆ ಸಹಾಯ ಮಾಡೋಕೆ ಕುಂಚ ಹಿಡಿದು ಗಣಪನ ವಿಗ್ರಹಕ್ಕೆ ನಾನು ಬಣ್ಣ ಹಚ್ಚಿದ್ದು ಉಂಟು.ಕೆಲವೊಮ್ಮೆ ವಿಭಿನ್ನ ಆರ್ಡರ್‍ಗಳು ಬರುತ್ತಿದ್ದವು.ಒಮ್ಮೆ ಒಬ್ಬರು ಎರಡು ಹಸ್ತಗಳ ಮಧ್ಯೆ ಇರುವ ಗಣಪನಿಗೆ ಆರ್ಡರ್ ಮಾಡಿದ್ದರು.

ಆದರೆ ಪ್ಲಾಸ್ಟರ್ ಆಫ್ ಪ್ಯಾರಿಸ್‍ನ ಕಡಿಮೆ ಬೆಲೆಯ ಮಾಸ್ ಗಣಪಗಳು ಬಂದ ಮೇಲೆ ಈ ರೀತಿ ಮಣ್ಣಿನ ಗಣಪಗಳಿಗೆ ಬೇಡಿಕೆ ಇಳಯತೊಡಗಿತು.

ಇನ್ನು ಹಬ್ಬದ ಸಂಜೆ ಊರಿನ ಸಾರ್ವಜನಿಕ ಗಣಪನ ನೋಡೋಕೆ ಹೋಗೋದು. ಹರಿಹರದ ಸಾರ್ವಜನಿಕ ಗಣಪ ಅಲ್ಲಿನ 'ಗಾಂಧೀ ಮೈದಾನ'ದಲ್ಲಿ ಕೂಡಿಸುತ್ತಿದ್ದರು. ಮೈದಾನದಲ್ಲಿ ಗಣಪನ ನೋಡಿಕೊಂಡು ಅಲ್ಲಿ ಎರ್ಪಡಿಸಿದ ರಸಮಂಜರಿ-ನಾಟಕ ನೋಡಿಕೊಂಡು ಮನೆಗೆ ತೆರಳಿ ಹೋಳಿಗೆ-ತುಪ್ಪ ಊಟ !!

ಗಣಪ ಇದ್ದ ೩ ಅಥವಾ ೫ ದಿವಸಗಳವರೆಗೆ ನಡುಮನೆಯಲ್ಲಿ ಗಣಪನಿಗೆ ವಿಶೇಷ ಪೂಜೆ. ಪ್ರತಿದಿನ ಸಂಜೆ ವಿವಿಧೆಡೆ ಇರೋ ಗಣಪನ ನೋಡೋಕೆ ಹೋಗೋದು.ಈ ಗಣಪನ ಮಂಡಳಿಗಳಲ್ಲಿ ತೀವ್ರ ಸ್ಪರ್ಧೆ.ಯಾರು ವಿಭಿನ್ನ ಅಲಂಕಾರ ಮಾಡುತ್ತಾರೆ,ಯಾರದೂ ಎಷ್ಟು ಎತ್ತರದ ಗಣಪ ಇತ್ಯಾದಿ..

ಕಾಲ ಕಳೆದಂತೆ ಈ ಮಂಡಳಿಗಳ ಗಣಪನಲ್ಲಿ ತಂತ್ರಜ್ಞಾನದ ಪ್ರವೇಶವಾಯಿತು.ಗಣಪ ಕೇವಲ ಒಂದು ವಿಗ್ರಹವಾಗಿ ಉಳಿಯಲಿಲ್ಲ.ಗಣಪ ಮುಖ್ಯಪಾತ್ರದಲ್ಲಿರುವ ಪುರಾಣ ಪ್ರಸಂಗಗಳು ಜೀವ ಪಡೆಯಲಾರಂಭಿಸಿದವು.ಉದಾಹರಣೆಗೆ ರಾವಣ ಕೈಲಾಸದಿಂದ ಅತ್ಮಲಿಂಗ ತಂದು ದನಗಾಹಿ ವೇಶದಲ್ಲಿರುವ ಗಣಪನಿಗೆ ಕೊಡೋದು,ಅದನ್ನು ಗಣಪ ನೆಲದ ಮೇಲೆ ಇಡೋದು,ರಾವಣ ಅದನ್ನು ಎತ್ತೋಕೋ ಯತ್ನಿಸುವುದು.ಕಡೆಗೆ ಗಣೇಶ ಸ್ತುತಿ.ಈ ಪ್ರಸಂಗದಲ್ಲಿ ಎಲ್ಲವೂ ಚಲಿಸುವ ವಿಗ್ರಹಗಳು, ಜೊತೆಗೆ sound-lights effect ಕೂಡಿ ಅದು ಒಂದು ಮಯಾಲೋಕ ಸೃಷ್ಟಿಸುತಿತ್ತು. ಕೆಲವೊಮ್ಮೆ ಬೇರೆ ದೇವರುಗಳ ಪಾತ್ರವನ್ನು ಗಣಪನಿಗೆ ಕೊಟ್ಟ ಪ್ರಸಂಗಗಳು ಊಂಟು.ಉದಾಹರಣೆಗೆ ಕಾಳಿಂಗ ಮರ್ದನದ ಪ್ರಸಂಗದಲ್ಲಿ ಕೃಷ್ಣನನ್ನು substitue ಮಾಡಿ ಗಣಪನನ್ನು ಕಾಳಿಂಗ ಮರ್ದನಕ್ಕೆ ಕಳುಹಿಸಿದ್ದು ಉಂಟು !!

ಬರುಬರುತ್ತಾ ಈ ಪ್ರಸಂಗಗಳು 'ಶೋ'ಗಳಾಗತೊಡಗಿದವು.ಮಂಡಳಿಗಳು ವಿಶೇಷ ಆಹ್ವಾನಿತರಿಗೆ,ದಾನಿಗಳಿಗೆ ಮುಂದಿನ ಸಾಲಿನಲ್ಲಿ ಕುಳ್ಳಿರಿಸಿ, ಉಳಿದೆಲ್ಲರನ್ನೂ ನಿಲ್ಲಿಸಿ ಶೋ ನಡೆಸುವ 'ಅ-ಸಮಾನತೆ' ಸಂಪ್ರದಾಯವೂ ಶುರುವಾಯಿತು.

ಮಂಡಳಿಗಳ ಇನ್ನೊಂದ ವಿಶೇಷವೆಂದರೆ ಗಣಪನಿಗೂ ಪ್ರಸ್ತುತ ವಿಷಯಗಳಿಗೂ ಲಿಂಕ್ ಮಾಡುತ್ತಿದ್ದ ರೀತಿ.ಕಾರ್ಗಿಲ್ ಯುದ್ದದ ವರ್ಷದಲ್ಲಿ ಗಣಪ ಸೈನಿಕನ ವೇಷ ತೊಟ್ಟು ದೇಶದ ಗಡಿಯಲ್ಲಿ ನಿಂತ ಅವತಾರದಲ್ಲಿದ್ದರೆ, ವಿಶ್ವಕಪ್ ಸಮಯದಲ್ಲಿ ಗಣಪ ಭಾರತದ ಟೀ ಶರ್ಟ್ ತೊಟ್ಟು ಬ್ಯಾಟ್ ಹಿಡಿದು ನಿಂತದ್ದು ಉಂಟು.ಕೆಲವೊಮ್ಮೆ ಮಂಡಳಿಯವರು ವಿಪರೀತ ಬುದ್ದಿ ಖರ್ಚು ಮಾಡಿದ ಪ್ರಸಂಗಗಳು ಉಂಟು.ಒಮ್ಮೆ ಗಣಪನನ್ನು ವೀರಪ್ಪನ್ ತರ ವೇಷದಲ್ಲಿ ಒಂದು ಮಂಡಳಿಯವರು ಅವತರಿಸಿದ್ದರು !

೩-೫ ದಿವಸದ ನಂತರ ಇನ್ನು ಗಣಪನ ವಿರ್ಸಜಿಸುವ ಕಾರ್ಯಕ್ರಮ ದುಃಖದಿಂದ ಕೂಡಿದ ಸಮಯ.ಗಣಪನಿಗೆ ಇಷ್ಟವಾದ ಕಡುಬು ಮಾಡಿ ಅದನ್ನು ಪಾರ್ಸಲ್ ಕಟ್ಟಿ ಮನೆಯಿಂದ ಹೊರಟರೆ, ಮತ್ತದೆ ನಮ್ಮ ಸೈನ್ಯದ ಮೆರವಣಿಗೆ.'ಮೋರ್‍ಗಯಾ ರೇ ಮೋರ್‍ಗಯಾ' ಅಂತಾ ಒಬ್ಬ ಕೂಗಿದರೆ ಉಳಿದವರೆಲ್ಲ 'ಗಣೇಶ ಮೋರ್‍ಗಯಾ' ಅಂತಾ ಕೋರಸ್ ನೀಡುತ್ತಿದ್ದೆವು.ತುಂಗಾಭದ್ರ ನದಿ ಮುಟ್ಟಿ ಅಲ್ಲಿ ಇನ್ನೊಂದು ಸುತ್ತಿನ ಪೂಜೆ ಮಾಡಿ ಭಾರದ ಮನದಿಂದ ಗಣಪನ ನೀರಿನಲ್ಲಿ ಮೂರು ಸಲ ಮುಳುಗಿಸಿ ಕೈ ಬಿಟ್ಟಾಗ ಎನೋ ಖಾಲಿಯಾದ ಭಾವನೆ..

ಈ ಮಧ್ಯೆ ಮಂಡಳಿಗಳ ಗಣಪನ ವಿಸರ್ಜನೆಗೆ ಹೊರಡುತಿದ್ದ ಗುಂಪು ಆಮೆವೇಗದಲ್ಲಿ ಸಾಗುತ್ತ ದಾರಿಯುದ್ದಕ್ಕೂ ಕೂಗು ಹಾಕುವುದೇನೋ, ಮೆರವಣಿಗೆಯಲ್ಲಿ ಆರ್ಕೆಸ್ಟ್ರಾದವರ ಗಣಪನಿಗೆ ಸ್ಪಲ್ಪವೂ ಸಂಬಂಧವೇ ಇಲ್ಲದ ಹಾಡಿಗೆ ಹೈಕಳು ಕುಣಿದು ಕುಪ್ಪಳಿಸಿವುದೇನೋ. ಅತ್ಯಂತ ಉತ್ಸಾಹಭರಿತ ವಾತಾವರಣ. ಮೆರವಣಿಗೆಯಲ್ಲಿ ನಿಜಕ್ಕೂ ಜೋಶ್ ಉಂಟು ಮಾಡುತ್ತಿದದ್ದು 'ಡೊಳ್ಳು ಕುಣಿತ'.ಅದು ಮಾಡುವ ರುದ್ರನಾದಕ್ಕೆ ಉತ್ಸಾಹ ಬರದಿದ್ದರೆ ಹೇಳಿ.ಆದರೆ ಮೆರವಣಿಗೆಯಲ್ಲಿ ಕೆಲವೊಬ್ಬರು ಹೊಟ್ಟೆಗೆ 'ದ್ರವ'ಗಳನ್ನು ಇಳಿಸಿಕೊಂಡು ಬಂದು ಮಾಡುತ್ತಿದ್ದ ವರಸೆಗಳು ಮೆರವಣಿಗೆಯ ಸಡಗರಕ್ಕೆ ನೀಡುತ್ತಿದ್ದವು ಇನ್ನೊಂದು ಮಜಲು.

ಒಂದು ವರ್ಷ ವಿಸರ್ಜನೆ ವೇಳೆಯಲ್ಲಿ ನಡೆದ ಕೋಮು ಗಲಭೆಯ ನಂತರ ಮೆರವಣಿಗೆ ಸಂಜೆ ಬೇಗನೆ ಶುರು ಮಾಡತೊಡಗಿದರು.ಇಲ್ಲದಿದ್ದರೆ ಮೆರವಣಿಗೆಗಳೂ ಶುರುವಾಗುತಿದ್ದೆ ೮-೯ ಗಂಟೆಗೆ, ತುಂಗಾಭದ್ರ ಮುಟ್ಟೋವಷ್ಟರಲ್ಲಿ ರಾತ್ರಿ ೧೨-೧ ಗಂಟೆಯಾಗುತಿತ್ತು.

ವಿಸರ್ಜನೆಯ ನಂತರ ಮನೆಗೆ ಬಂದು ನೋಡಿದರೆ ಅದೇ ನಡುಮನೆ,ಅದೇ ಅಲಂಕಾರ,ಎಲ್ಲಾ ಇದೇ..ಆದರೆ ಇರಬೇಕಾದದ್ದು ಇಲ್ಲ. ಬಹುಷಃ ಇದಕ್ಕೆ ಹೇಳುತ್ತಾರೆ 'ಆತ್ಮವಿಲ್ಲದ ದೇಹ'.ಮುಂದಿನ ವರ್ಷ ಮತ್ತೆ ಗಣಪ ಬರ್ತಾನೆ ಅನ್ನೋ ಸಮಾಧಾನ..

ಆದರೆ ನಮ್ಮ ಅಜ್ಜ ಗತರಾದ ನಂತರ ಆ ಸಾಮೂಹಿಕ ಗಣಪನ ಆಚರಣೆಯೂ ನಿಂತಿತು.ಆದಾದ ಮೇಲೆ ಒಂದೇ ವಟಾರದಲ್ಲಿ ಮನೆಗೊಂದರಂತೆ ಗಣಪಗಳು.ಸ್ಪಲ್ಪ ವರ್ಷಗಳ ನಂತರ ನಮ್ಮ ಹರಿಹರದ ಋಣ ಮುಗಿದ ಮೇಲೆ ಅಲ್ಲಿನ ಗಣಪನ ಪೂಜೆಗೂ ವಿದಾಯ.

ಮತ್ತೊಂದು ಊರು..ಮತ್ತೊಂದು ದೇಶ....

ನಮ್ಮ ಗಣಪ ಮಾತ್ರ ಅವನೇ..ಅದೇ ವಕ್ರತುಂಡ,ಅದೇ ಮಹಾಕಾಯ..
ಅದಕ್ಕೆ ಅಲ್ವೇ ಗಣಪ ಸಮಯಾತೀತ !

Saturday, August 12, 2006

ಪೋಟೋ ಪ್ಲ್ಯಾಶ್ ಬ್ಯಾಕ್


ಹೀಗೆ ಸುಮ್ಮನೆ ಹಳೇ ಪೋಟೋಗಳನ್ನು ಆನ್ ಲೈನ್ ಅಲ್ಬಮ್‍ನಲ್ಲಿ ನೋಡ್ತಾ ಇದ್ದೆ. ಮಿತ್ರರೊಂದಿಗೆ ಹೋದ ಪಿಕನಿಕ್-ಪ್ರವಾಸ ಪೋಟೋಗಳು, ಟ್ರೆಕಿಂಗ್ ಪೋಟೋಗಳು. ಸುನಾಮಿ ಸಂತ್ರಸ್ತ ಪ್ರದೇಶದಲ್ಲಿ ಕಳೆದ ಆ ದಿನಗಳ ಪೋಟೋಗಳು, ಆಫೀಸ್ ಪೋಟೋಗಳು,ಸ್ನೇಹಿತರ ಮದುವೆ ಪೋಟೋ..

ಈ ಪೋಟೋ-ಕ್ಯಾಮರಗಳಲ್ಲಿದ್ದರೆ ಬಹುಷಃ ನಮ್ಮ ನೆನಪುಗಳನ್ನು ಮತ್ತೆ ಮತ್ತೆ ಹೆಕ್ಕಿ ತೆಗೆದು ಆ ನೆನಪುಗಳಲ್ಲಿ ಕಳೆದುಹೋಗೋದು ಕಷ್ಟವಾಗತಿತ್ತೋ ಎನೋ..

ಹಂಗೆ ಯೋಚನೆ ಮಾಡ್ತಾ ಇದ್ದಾಗ ನೆನಪಾದದ್ದು ಶಾಲೆಯ ಆ ಪೋಟೋ ಸೆಷನ್‍ಗಳು.ನಮ್ಮ ಶಾಲೆಯಲ್ಲಿ ಪ್ರತಿ ವರ್ಷ ತರಗತಿಯ ಗ್ರೂಪ್ ಪೋಟೋ ತೆಗೆತಿದ್ದರು.ಆಮೇಲೆ ಪೋಟೋ ಬೇಕಾದವರೆಲ್ಲ ಟೀಚರ್‍ಗೆ ಹೆಸರು ಕೊಡ್ತಾ ಇದ್ದಿವಿ.ಒಂದು ವಾರ ನಂತರ ಕವರ್‍ನಲ್ಲಿ ಒಂದೊಂದು ಪೋಟೋ ಸಿಗ್ತಾ ಇತ್ತು.ಆವಾಗ ಆ ಪೋಟೋಗಳು ಅಂತ ವಿಶೇಷ ಅನಿಸಿರಲಿಲ್ಲ.ಈಗ ಆ ಫೋಟೋಗಳಲ್ಲಿ ಸ್ನೇಹಿತರನ್ನು ಗುರ್ತಿಸಿ ಅವರ ಅವಾಗೀನ ಅವತಾರವನ್ನು ಈಗೀನ ಅವತಾರಕ್ಕೆ ಹೋಲಿಸಿ ನೋಡುವದರಲ್ಲಿ ಮಜಾ ಇರುತ್ತೆ!

ಮನೆಯಲ್ಲಿ ನಾನು ೬ ತಿಂಗಳು ಆಗಿದ್ದಾಗ ತೆಗೆದ ಕಪ್ಪು-ಬಿಳುಪು ಪೋಟೋ ಒಂದು ಇದೆ.ಅದರಲ್ಲಿ ಅಳುತ್ತಿರುವ ನನ್ನ ನೋಡಿದಾಗ ಈಗ ಮಂದಹಾಸ ಮೂಡದಿದ್ದರೆ ಕೇಳಿ! ಹಾಗೆ ಅಪ್ಪ-ಅಮ್ಮ ಮದುವೆಯ ನಂತರ ಸ್ಟುಡಿಯೋದಲ್ಲಿ ತೆಗೆಸಿಕೊಂಡ ಪೋಟೋ. ಆ ಪೋಟೋಗಳಿಗೆ ಹಾಕಿದ ಆ ಕಪ್ಪು ಫ್ರೇಮ್.

ನಮ್ಮ ಊರು ಕಡೆ ಅದಕ್ಕೆ 'ಪೋಟೋಕ್ಕೆ ಕಟ್ಟು ಹಾಕಿಸೋದು' ಅಂತಿದ್ದರು.ಅದಕ್ಕೆ ಅಂತಾ ಒಂದು ಅಂಗಡಿ ಇತ್ತು.ಅಲ್ಲಿ ಪೋಟೋ ಕೊಟ್ಟರೆ ,ಒಂದು ತೆಳು ಹಲಗೆ ಮೇಲೆ ಅದನ್ನು ಇಟ್ಟು, ಅದಕ್ಕೆ ಹೊಂದುವಷ್ಟು ಗಾಜು ಕೊರೆದು ಅದನ್ನು ಪೋಟೋ ಮೇಲೆ ಇಟ್ಟು ಅದಕ್ಕೆ ನಾಲ್ಕು ಕಡೆ ಫ್ರೇಮ್ ಹಾಕಿ ಕೊಡ್ತಾ ಇದ್ದರು.ಅದನ್ನು ತಂದು ಮನೆ ಗೋಡೆ ಮೇಲೆ ತೂಗಿ ಹಾಕೋದರಲ್ಲಿ ಒಂದು ಸಂಭ್ರಮ!

ಕ್ರಮೇಣ ಪೋಟೋಗೆ ಕಟ್ಟು ಹಾಕಿಸೋದು ಕಡಿಮೆಯಾಗ್ತ ಬಂತು.ಅದರ ಜಾಗದಲ್ಲಿ ಬಂತು ಅಲ್ಬಮ್‍ಗಳು.ಅದು ಒಂದು ತರ ಮಜದ ಕೆಲಸ, ಸ್ಟುಡಿಯೋದಿಂದ ಪೋಟೋ ಪ್ರಿಂಟ್ ಹಾಕಿಸಿಕೊಂಡು ಬಂದು ಒಂದೊಂದೇ ಪೋಟೋ ಮೊದಲ ಸಲ ನೋಡಿ ಅದನ್ನು ಅಲ್ಬಮ್‍ಗೆ ಹಾಕೋದರಲ್ಲಿ ಎನೋ ಖುಷಿಯಾಗ್ತಿತ್ತು.

ಕ್ಯಾಮರ ಬಗ್ಗೆ ಆವಾಗಿಂದ ಒಂದು ಪ್ರೀತಿಭರಿತ ಕುತೂಹಲವಿದ್ದೆ ಇತ್ತು.ಮೊದಲ ಸಲ ನನ್ನ ಕೈಗೆ ಕ್ಯಾಮರ ಸಿಕ್ಕಿದು ನಾನು ಇಂಜಿನಿಯರಿಂಗ್ ಸೇರಿದ ಮೇಲೆನೇ. ೬ನೇಯ ಸೆಮಿಸ್ಟರ್ ಇದ್ದಾಗ ಈಡೀ ಕ್ಲಾಸ್ ೧೯ ದಿನಗಳ ಒಂದು ಮಹಾ ಪ್ರವಾಸ ಹೋಗಿದ್ದೆವು .ಅವಾಗ ಅಣ್ಣನಿಂದ ಕ್ಯಾಮರ ಪಡೆದು ತೆಗೆದುಕೊಂಡು ಹೋಗಿದ್ದೆ.ಆ ಪ್ರವಾಸದ್ದು ಒಂದು ದೊಡ್ಡ ಕತೆಗಳ ಕಂತೆಯಾದರೆ ಆ ಸಮಯದಲ್ಲಿ ತೆಗೆದ ಪೋಟೋಗಳದ್ದು ಇನ್ನೊಂದು ಕತೆ.

ಪ್ರವಾಸದ ಸಮಯದಲ್ಲಿ ಆದ ಒಂದು ಪೋಟೋ ಕತೆ...ನನ್ನ ಸ್ನೇಹಿತೆಯೊಬ್ಬಳು ಕ್ಯಾಮರದಲ್ಲಿ ಕ್ಲಿಕ್‍ಸಿದ ಪೋಟೋ ರೋಲನ್ನು ನನ್ನ ಬಳಿ ಜೋಪಾನವಾಗಿ ಇಟ್ಟುಕೊಳ್ಳಲು ಕೊಟ್ಟಿದ್ದಳು.ಪ್ರವಾಸವೆಲ್ಲ ಮುಗಿಸಿ ಬಂದು ಪೋಟೋ ಡೆವಲಪ್‍ಗೆ ಕೊಟ್ಟಾಗ ಕಾದಿತ್ತು ನಮಗೆ ಅಘಾತ.ಸ್ನೇಹಿತೆ ನನ್ನ ಬಳಿ ಕೊಟ್ಟಿದ್ದ ಪೋಟೋ ರೋಲ್ ಡೆವಲಪ್ ಮಾಡಿದಾಗ ಪೂರ್ತಿ ಬ್ಲ್ಯಾಂಕ್ ಆಗಿಬಂದಿತ್ತು.ನನ್ನ ರೋಲ್ ಡೆವಲಪ್‍ಗೆ ಕೊಟ್ಟಾಗ ಕಾದಿತ್ತು ಇನ್ನೊಂದು ಅಘಾತ.ಒಂದು ರೋಲ್‍ನಲ್ಲಿ ಒಂದರ ಮೇಲೆ ಒಂದರಂತೆ ಎರಡೆರಡು ಪೋಟೋಗಳು ಇದ್ದವು! ಆಗಿದ್ದೆನೆಂದರೆ ನನ್ನ ಖಾಲಿ ರೋಲ್ ಮತ್ತು ಸ್ನೇಹಿತೆಯ ರೋಲ್ ಅದಲು ಬದಲಾಗಿ, ನನ್ನ ಕ್ಯಾಮರಕ್ಕೆ ಖಾಲಿ ರೋಲ್ ಬದಲು ಸ್ನೇಹಿತೆಯ ರೋಲ್ ಹಾಕಿ ಕ್ಲಿಕ್‍ಸಿದ್ದೆ!!

ಕೆಲಸಕ್ಕೆ ಸೇರಿ ಸ್ಪಲ್ಪ ದಿನದಲ್ಲೇ ನನ್ನದೇ ಒಂದು ಸ್ವಂತ ಕ್ಯಾಮರ ಖರೀದಿಸಿದ್ದೆ. ಆ ಕ್ಯಾಮರ ನನ್ನ ಅನೇಕ ನೆನಪುಗಳಿಗೆ ಜೊತೆ ನೀಡಿತು.ನನ್ನ ಎಲ್ಲ ಪ್ರವಾಸ,ಪಿಕ್‍ನಿಕ್,ಟ್ರೇಕಿಂಗ್‍ಗಳ ಅವಿಭಾಜ್ಯ ಅಂಗವಾಯಿತು.ಹಾಗೆಯೇ ಸುನಾಮಿಯ ಪ್ರಳಯದ ನಂತರದ ಘೋರ ಘಟನೆಗಳನ್ನು ನೋಡಿದ್ದು ಈ ಕ್ಯಾಮರ ಕಣ್ಣುಗಳಿಂದ.

ಕೆಲ ವರ್ಷಗಳ ನಂತರ ವೀಸಾ ಸಂದರ್ಶನಕ್ಕೆ ಹೋಗುವ ಸಮಯ ಬಂತು.ಆ ವೇಳೆಯಲ್ಲಿ ನಡೆದದ್ದು ಈ ಪೋಟೋ ತೆಗೆಸುವ ಪ್ರಸಂಗ.ನನ್ನ ಎಲ್ಲ ವೀಸಾ ಪೇಪರ್ ತೆಗೊಂಡು ಹೋಗಿ ನಮ್ಮ ಕಛೇರಿಯ ವೀಸಾ ಸೆಲ್‍ನವರಿಗೆ ಕೊಟ್ಟರೆ, ಅವರು ಪೋಟೋ ಸಂಪೂರ್ಣ ಬಿಳಿ ಬ್ಯಾಕ್‍ಗ್ರೌಂಡ್ ಇರಬೇಕು,ಆದರೆ ಇದರಲ್ಲಿ ಅಷ್ಟು ಬಿಳಿ ಕಾಣಿಸುತ್ತಿಲ್ಲ, ಇನ್ನೊಮ್ಮ ತೆಗೆಸಿಕೊಳ್ಳಿ ಅಂದಾಗ ಪೂರ್ತಿ ತಲೆಕೆಟ್ಟು ಹೋಗಿತ್ತು.ನಂತರ ನಮ್ಮ ವೀಸಾ ಸೆಲ್‍ನವರು ಹೇಳಿದರು 'ಇಲ್ಲೇ ಸರಿ ಮಾಡಿಕೊಂಡು ಹೋಗುವುದು ಒಳ್ಳೆದು, ಇಲ್ಲಾ ಅಂದರೆ ಅಲ್ಲಿ ವೀಸಾ ಸಂದರ್ಶನದಲ್ಲಿ ಹೆಂಗಿದ್ದರೂ ಅದನ್ನು ನೋಡಿ ತಿರಸ್ಕರಿಸಬಹುದು'.ಇದು ಒಳ್ಳೆ ಸರ್ಪ್ ಎಕ್ಸಲ್ ಬಿಳುಪಿನ ಕತೆ ಆಯಿತಲ್ಲ ಅಂತಾ ಗೊಣಿಗಿಕೊಂಡು ಮತ್ತೊಮ್ಮೆ ಹಾಲಿನಂತ ಬಿಳುಪಿನ ಬ್ಯಾಕ್‍ಗ್ರೌಂಡ್ ಪೋಟೋ ತೆಗೆಸಿಕೊಂಡಾಯಿತು.

ಅಲ್ಲಿಂದ ಇಲ್ಲಿಗೆ ನೆಗೆದ ಮೇಲೆ ನಾನು ಮಾಡಿದ ಮೊದಲ ಕೆಲಸ ಡಿಜಿಟಲ್ ಕ್ಯಾಮರ ಕೊಂಡಿದ್ದು. ಡಿಜಿಟಲ್ ಕ್ಯಾಮರದಲ್ಲಿ ಖುಷಿಯಾಗುವ ವಿಚಾರವೆಂದರೆ ತೆಗೆದ ಪೋಟೋ ಅಲ್ಲೇ ನೋಡಬಹುದು, ಬೇಡದಿದ್ದರೆ ಇನ್ನೊಮ್ಮೆ ಕ್ಲಿಕ್‍ಸಿಬಹುದು.ಪೋಟೋ ರೋಲ್ ಹಾಕುವ ಆಗಿಲ್ಲ, ಕ್ಲಿಕ್‍ಸಿದ ಅ ಪೋಟೋ ಹೇಗೆ ಬಂದಿರಬಹುದು ಅಂತಾ ಕಾಯುವ ಆಗಿಲ್ಲ.ಎಲ್ಲ ಅಲ್ಲೇ ಗೊತ್ತಾಗಿ ಬಿಡುತ್ತೆ. ಈಗ ಎನಿದ್ದರೂ ಪೋಟೋ ಕ್ಲಿಕ್‍ಸಿ, ಅದನ್ನು ಕ್ಯಾಮರದಿಂದ ಕಂಪ್ಯೂಟರ್‍ಗೆ ವರ್ಗಾಯಿಸಿದರೆ ಆಯಿತು.ಅಲ್ಲಿಂದ ಬೇಕಾದವರಿಗೆ ಇ-ಮೇಲ್‍ನಲ್ಲಿ ಪೋಟೋ ಕಳಿಸಬಹುದು.ಇಲ್ಲ ಅಂದರೆ ಎಲ್ಲ ಪೋಟೋ ಆನ್‍ಲೈನ್ ಅಲ್ಬಮ್‍ಗೆ ಹಾಕಿ, ಆ ಆಲ್ಬಮ್ ಲಿಂಕ್ ಕಳುಹಿಸಿದರಾಯಿತು.

ಫಿಲ್ಮ್ ರೋಲ್ ಕ್ಯಾಮರದಿಂದ ಡಿಜಿಟಲ್ ಕ್ಯಾಮರಕ್ಕೆ,ಅಲ್ಬಮ್‍ನಿಂದ ಆನ್‍ಲೈನ್ ಅಲ್ಬಮ್‍ಗೆ ಬಂದಾಯಿತು.ಮುಂದಿನ ಅವಿಷ್ಕಾರಗಳು ಪೋಟೋ-ಕ್ಯಾಮರವನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಾವೋ ನೋಡಬೇಕು.

ಇಷ್ಟೆಲ್ಲ ಆದರೂ ಆ ಕಪ್ಪು-ಬಿಳುಪು ಪೋಟೋಗಳು,ಆ ಕಟ್ಟು ಹಾಕಿದ ಪೋಟೋಗಳನ್ನು ನೋಡುತ್ತಿದ್ದರೆ ನಾಸ್ಟಾಲಿಜಿಯಾ ಆಗದಿದ್ದರೆ ಹೇಳಿ..

Friday, June 16, 2006

ಆಹಾ ! ಪಾನಿಪುರಿ !!



ಸುಮ್ಮನೆ ಕೆಲಸ ಮಾಡುತ್ತ ಕುಂತಾಗ ಎಲ್ಲಿಂದ ಬಂತೋ ಗೊತ್ತಿಲ್ಲ..ಅದರ ನೆನಪು !

ಬಂದು ಸುಮ್ಮನೆ ಹೋದರೆ ಚೆನ್ನಾರ್ಗಿತಿತ್ತು.ಆದರೆ ಪಾಪಿ ಅಮೇರಿಕಾಕ್ಕೆ ಹೋದರೂ ಪಾನಿಪುರಿ ನೆನಪು ತಪ್ಪಲಿಲ್ಲವಂತೆ !! ಅದರ ರುಚಿನೆನಪಿನಲ್ಲಿ ಪಟ್ಟ ಹಿಂಸೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳೋಣ ಅಂತ...

ಪಾನಿಪುರಿ ಅಂದ ಕೂಡಲೇ ಏನು ನೆನಪಿಗೆ ಬಂತು ರೀ?
ಸಣ್ಣ ಸಣ್ಣ ಪುರಿ,ಬಟಾಣಿಯಿಂದ ಕಟ್ಟಿದ ದುಂಡು ಒಡ್ಡು, ಅದರಲ್ಲಿ ಯಾವಾಗಲೂ ಹೊಗೆಯಾಡುತ್ತಿರುವ ಬಟಾಣಿ,'ಪಾನಿ' ಅಂತ ಕರೆಯಲ್ಪಡುವ ಆ ವಿಶಿಷ್ಟ ಮಸಾಲನೀರು ಹಾಗೂ ಆ ಪಾನಿಪುರಿ ತಳ್ಳುಗಾಡಿಗಳು..

ನನಗೆ ಅನಿಸಿದ ಹಾಗೆ ಪಾನಿಪುರಿದು ಬಹುಷಃ ರಾಜಸ್ತಾನಿ ಮೂಲ.ನಾನು ಚಿಕ್ಕವನಿದ್ದಾಗ ತಿಂದದ್ದು ಎಲ್ಲ ಈ ರಾಜಸ್ತಾನಿ ಪಾನಿಪುರಿ ಗಾಡಿಗಳಲ್ಲೆ.ಅದಕ್ಕೆನಾದರೂ ಅದು ರಾಜಸ್ತಾನಿ ಅಂದುಕೊಂಡಿರಬಹುದು.ಅದು ಎಲ್ಲಿದೇ ಇರಲಿ, ಎಷ್ಟು ಬೇಗ ಪ್ರಸಿದ್ದ ಆಯಿತು ಅಲ್ವ? ನಮ್ಮೂರಲ್ಲಿ ಮೊದಲಿದದ್ದು ೪-೫ ಪಾನಿಪುರಿ ಗಾಡಿಗಳು.ನೋಡು ನೋಡುಷ್ಟರಲ್ಲಿ ಪಾನಿಪುರಿ ಗಾಡಿಗಳು ಬೀದಿಗೊಂದರಂತೆ ಅದವು. ಸಂಜೆ ಗೆಳಯರ ಗುಂಪಿನಲ್ಲಿ ತಿರುಗಾಡಿ ಪಾನಿಪುರಿ ತಿಂದೆ ಮುಂದಿನ ಕೆಲಸ ಸಾಗುತಿತ್ತು. ಆದರೆ ಎಷ್ಟು ದಿನ ಇರುತ್ತೆ ಆ ಊರಿನ ಪಾನಿಪುರಿ ನಂಟು?

ಅಲ್ಲಿಂದ ನೆಗದದ್ದು ಬೆಂಗಳೂರೆಂಬ ನಗರಿಗೆ.ಮೊದಮೊದಲು ಕೆಲವೊಂದು ರಾತ್ರಿಗಳಿಗೆ ಪಾನಿಪುರಿ ಒಂದೇ ತಿಂದು ಜೀವಿಸಿದ್ದೂ ಆಯಿತು.ನಂತರ ಐಟಿಪಿಎಲ್ ಎಂಬ ಚಮಕ್‍ನಲ್ಲಿದ್ದ ೩ ವರ್ಷ ಅಲ್ಲಿದ್ದ ಇದ್ದಬದ್ದ ಪಾನಿಪುರಿ ಸೇವನೆ ಮಾಡಿದ್ದಾಯಿತು.ರುಚಿ ಬಗ್ಗೆ ಕೇಳೋಕ್ಕೆ ಹೋಗಬೇಡಿ.ಪಾನಿಪುರಿ ಸೇವನೆಗೆ ಜೊತೆ ಚೆನ್ನಾಗಿತ್ತು.ಅಷ್ಟು ಗೊತ್ತಾಗಲಿಲ್ಲ! ಅವಗಾವಗ ಮೇಯೋಹಾಲ್ ಹತ್ತಿರ ಹಾಗು ಸಿಎಂಹೆಚ್ ರೋಡ್‍ನಲ್ಲಿ ಸ್ವಾಹ ಆಗುತಿತ್ತು.

ಅನೇಕ ಹೋಟೆಲ್-ದರ್ಶಿನಿಗಳಲ್ಲಿ ನಾವೆಲ್ಲ ಪಾನಿಪುರಿ ತಿಂದಿರಬಹುದು, ಆದರೆ ತಳ್ಳುಗಾಡಿಯ ಪಾನಿಪುರಿಯ ರುಚಿಯ ಮುಂದೆ ಎಲ್ಲವೂ ಶೂನ್ಯ!

ಇದೇನು..ಆವಾಗಿಂದ ಪಾನಿಪುರಿ ಒಂದೇ ಆಯ್ತು, ಉಳಿದವು ಎಲ್ಲಿ ಅಂತೀರಾ..
ಪಾನಿಪುರಿ ಜೊತೆ ಸೇವ್‍ಪುರಿ,ಮಸಾಲಪುರಿ,ಬೇಲ್‍ಪುರಿ,ದಾಹಿಪುರಿಗಳ ಬಗ್ಗೆ ಹೇಳದಿದ್ದರೆ ಹೇಗೆ..ಒಂದೊಂದಕ್ಕೂ ಒಂದೊಂದು ವಿಶಿಷ್ಟ ರುಚಿ.ಅವುಗಳನ್ನು ಮಾಡೋದ ನೋಡೋದೇ ಚೆನ್ನಾ ! ಪುರಿಯನ್ನು ಮುರಿದು, ಅದರ ಮೇಲೆ ಆ ಬಟಾಣಿ ಮಿಶ್ರಣ ಹರಡಿ,ನಂತರ ಸೇವ್ ಅಥವಾ ಮೊಸರನ್ನೋ ಹಾಕಿ, ಉಪ್ಪು-ಮಸಾಲೆ ಉದುರಿಸುತ್ತಿದ್ದರೆ ..ಇಲ್ಲದಿರುವ ಎಲ್ಲಾ ಹಸಿವುಗಳು ಒಮ್ಮೆಗೆ ಪ್ರತ್ಯಕ್ಷ. ಬಾಯಿಯಲ್ಲಿ 'ಗಂಗೇಚಾ ಯಮೂನಾ' !!ಇನ್ನು ಬೇಲ್‍ಪುರಿಯಾದರೆ , ನೂರೆಂಟು ಮಸಾಲೆ,ಟಮೋಟ,ಮಂಡಕ್ಕಿ ಒಂದು ಪಾತ್ರೆಯಲ್ಲಿ ಹಾಕಿ ಆವನ್ನು ಸೌಟಿನಲ್ಲಿ ಕಲೆಸುತ್ತಿದ್ದರೆ..

ಈ ಎಲ್ಲ ಪುರಿಗಳನ್ನು ತಿಂದ ಮೇಲೆ ಪ್ರತ್ಯೇಕವಾಗಿ 'ಪಾನಿ' ಹಾಕಿಸಿಕೊಂಡು ಕುಡಿಯದಿದ್ದರೆ ಹೇಗೆ ?

ಇಲ್ಲಿಗೆ ಬಂದ ಮೇಲೆ ಮೊದಲ ಸಲ 'ಇಂಡಿಯನ್ ಶ್ಯಾಪ್' ನಲ್ಲಿ ಪಾನಿಪುರಿ ನೋಡಿದ್ದೆ , ಯಾವತ್ತು ಅದನ್ನು ನೋಡೇ ಇಲ್ಲ ಅನ್ನೋರ ತರ ಅದನ್ನು ನೋಡಿ, ೨ ಡಾಲರ್ ಕೊಟ್ಟು ತಗೊಂಡು ತಿಂದದ್ದಾಯಿತು.ಬೇಡ ಬೇಡವೆಂದರೂ ಇಲ್ಲಿನ ರುಚಿಯನ್ನು ಅಲ್ಲಿಗೆ ಹೋಲಿಸಿ ಕಷ್ಟಪಟ್ಟಿದ್ದೂ ಆಯಿತು ! ಸರಿ, ಮಾಡೋದೇನು ಅಂತ 'ಪಾಲಿಗೆ ಬಂದದ್ದು ಪಾನಿಪುರಿ' ಅಂತ ಸ್ವೀಕರಿಸಿದ್ದಾಯಿತು!!!

ಇಂದು ಇಲ್ಲಿ ಪಾನಿಪುರಿ ,ನಾಳೆ ಇನ್ನೇಲ್ಲೋ....

'ಪಾನಿಪುರಿ ಪುರಾಣ'ವನ್ನು ಈ ಒಂದು ಮಸಾಲಭರಿತ ಪದ್ಯದಿಂದ ಮುಗಿಸುತ್ತಿದ್ದೇನೆ.

ಪಾನಿಪುರಿ ಮಾಡೋನು ಬಟಾಣಿ,ಇರುಳ್ಳಿ,ಪಾನಿ ತುಂಬಿಸಿ,
ಪುರಿಯನ್ನು ಒಂದೊಂದೇ ಕೊಡುತ್ತಾ ಇದ್ದರೆ,
ಒಂದೇ ಗುಕ್ಕಿನಲ್ಲಿ ಅದನ್ನು ಬಾಯಿ ತುಂಬಾ ತುಂಬಿಸಿ,
ಹಾಗೆಯೇ ಕರಗಿಸಿ ಮೆಲ್ಲುತ್ತಿದ್ದರೆ ಸ್ವರ್ಗಕ್ಕೆ ಒಂದು ಪ್ಲೇಟ್ ಕಳುಹಿಸೆಂದ ಪಾನಿಪುರಿ ತಜ್ಞ

ವಿ.ಸೂ:ಇದೆಲ್ಲ ಓದಿದ ಮೇಲೆ ನೀವು ಪಾನಿಪುರಿ ಹುಡುಕಿಕೊಂಡು ಹೊರಟರೆ ನಾನು ಜವಾಬ್ದಾರನಲ್ಲ !!!

Sunday, June 04, 2006

ಮಾಮರವೆಲ್ಲೋ..ಮೇಕೆ ಹಾಲೆಲ್ಲೋ


ಮನೆ ಹತ್ತಿರ ಇರುವ ಅಂಗಡಿಗೆ ಹೊಕ್ಕು ವಾರಕ್ಕೆ ಬೇಕುವಾಗ ದಿನಸಿ,ತರಕಾರಿ,ಹಣ್ಣು,ಹಾಲು ಇತ್ಯಾದಿಗಳನ್ನು ಖರೀದಿಸುತ್ತಿರುವಾಗಲೇ ಕಣ್ಣಿಗೆ ಬಿದ್ದದ್ದು 'ಪ್ರೋಸನ್ ಮ್ಯಾಂಗೋ'.ಮಾವಿನಕಾಯಿಯನ್ನು ತುಂಡು ತುಂಡಾಗಿಸಿ ಅದನ್ನು ಒಂದು ಬಾಟಲಿನಲ್ಲಿ ಸಂಸ್ಕರಿಸಿದ್ದು.

ಆ ಮಾವಿನಕಾಯಿಯನ್ನು ನೋಡಿದ್ದೆ ನನ್ನ ಮನ ಶರವೇಗದಲ್ಲಿ ಪ್ಲಾಶ್‍ಬ್ಯಾಕ್‍ನಲ್ಲಿ ಹೋಗಿಬಿಟ್ಟಿತು.

ಆಗ ನಾನು ಪ್ರಾಥಮಿಕ ಶಾಲೆಯಲ್ಲಿದ್ದೆ.ವಾರ್ಷಿಕ ಪರೀಕ್ಷೆಯ ಫಲಿತಾಂಶ ನೋಡಿಕೊಂಡು ಮನೆಗೆ ಬಂದರೆ ಅಮ್ಮನ ಕೈಯಲ್ಲಿ ಬ್ಯಾಗು.ಎಲ್ಲಿಗೆ ಹೋಗ್ತಿದಿವಿ ಅಂತಾ ಕೇಳುವಷ್ಟರಲ್ಲಿ ನಮ್ಮ ಚಿಕ್ಕಪ್ಪ 'ಬೇಸಿಗೆ ರಜಕ್ಕೆ ನಿಮ್ಮನ್ನು ನಮ್ಮ ಹಳ್ಳಿಗೆ ಕರಕೊಂಡು ಹೋಗುತ್ತಿದ್ದಿನಿ'.

ದಾವಣಗೆರೆಗೆ ಹೋಗಿ ಅಲ್ಲಿಂದ ಖಾಸಗಿ ಬಸ್ಸೊಂದನ್ನೇರಿ, ಅದರಲ್ಲಿದ್ದ ಎರಡು ಬಸ್ಸಿಗೆ ಆಗುವಷ್ಟಿದ್ದ ಜನರ ಮಧ್ಯ ಸೀಟೊಂದನ್ನು ಗಿಟ್ಟಿಸಿ,ಶ್ಯಾಗಲೆ ಅನ್ನುವ ಆ ಹಳ್ಳಿಯನ್ನು ಮುಟ್ಟುವಷ್ಟರಲ್ಲಿ ಸುಸ್ತೋ ಸುಸ್ತು. ಮರುದಿನ ಚಿಕ್ಕಪ್ಪ ಹೊಲಕ್ಕೆ ಹೊರಟು ನಿಂತಾಗ ಚಿಕ್ಕಮ್ಮ 'ಇವ್ನು ಯಾಕೆ ಕರಕೊಂಡು ಹೋಗಬಾರದು'ಅಂತಾ ತಾಕೀತು.ಸರಿ, ಚಿಕ್ಕಪ್ಪನ ಜೊತೆ ಹೊಲಕ್ಕೆ ಹೆಜ್ಜೆ ಹಾಕಿದ್ದಾಯಿತು. ಅಲ್ಲಿ ತಲುಪಿದಾಗಲೇ ತಿಳಿದದ್ದು ಅದು ಹೊಲ ಅಲ್ಲ ಅದು ಮಾವಿನ ತೋಪು.

ಮೊದಲ ದಿನ ಕೆಲಸಕ್ಕೆ ಸೇರಿಕೊಂಡ ಉದ್ಯೋಗಿಯನ್ನು ಮೆನೇಜರ್ ಕರೆದು ಕೆಲಸದ ಬಗ್ಗೆ ತಿಳಿಹೇಳುವಂತೆ, ಚಿಕ್ಕಪ್ಪನಿಂದ ಮಾವಿನ ತೋಪಿನಲ್ಲಿ ನಾನು ಮಾಡಬೇಕಿರುವ ಕೆಲಸದ ಬಗ್ಗೆ ಬ್ರೀಫಿಂಗ್ ! ನನ್ನ ಕೆಲಸ ತೋಪಿನಲ್ಲಿರುವ ಮಾವಿನಕಾಯಿಗಳನ್ನು ಕಾಯುವುದು.ನಾನು ಕಣ್ಣಿಟ್ಟು ಮಾವಿನಕಾಯಿಗಳನ್ನು ಕಾಯಬೇಕಿರುವುದು ದನ-ಎಮ್ಮೆ-ಮೇಕೆ ಕಾಯುವ ಹುಡುಗರಿಂದ.ಆ ದನಗಾಹಿಗಳು ತೋಟದಲ್ಲಿ ಕಂಡ ತಕ್ಷಣ ಒಂದು ಕೂಗು ಹಾಕುವುದು ನನ್ನ ಕೆಲಸ. ಹತ್ತಿರವೇ ಇರುವ ಗದ್ದೆಯಲ್ಲಿ ಕೆಲಸ ಮಾಡುತ್ತಿರುವ ಚಿಕ್ಕಪ್ಪನಿಗೆ ನನ್ನ ಕೂಗು ಒಂದು ಅಲರ್ಟ್ ಸಿಗ್ನಲ್.

ಚಿಕ್ಕಮ್ಮ ಮಧ್ಯಾಹ್ನ ಊಟ ತಗೊಂಡು ಬಂದಾಗಲೇ ಗೊತ್ತಾಗಿದ್ದು ಮಧ್ಯಾಹ್ನ ಆಗಿದೆಯಂತ.ಮಾವಿನ ಮರದ ತಂಪಿನಲ್ಲಿ ಕುಳಿತು ರೊಟ್ಟಿ-ಚಟ್ನಿ-ಬುತ್ತಿ ತಿನ್ನುವಾಗ ಅದುವೇ ಅಮೃತ.ಊಟದ ನಂತರ ಪಕ್ಕದಲ್ಲಿಯೇ ಹರಿಯುತ್ತಿದ್ದ ತೊರೆಯಲ್ಲಿ ಕುಡಿಯಲು ನೀರು.ಊಟದ ನಂತರ ಮತ್ತೆ ಶುರು ಕಾವಲು ಕಾರ್ಯ.ಆಗಾಗ ಮಾವಿನಕಾಯಿ ರುಚಿ ನೋಡಲು ಅವಕಾಶ.ಮಧ್ಯಾಹ್ನ ವಿಪರೀತ ಬಿಸಿಲು ಜಾಸ್ತಿಯಾಗುತ್ತಿದಂತೆ ತೊರೆಯಲ್ಲಿ ಸ್ನಾನ-ನೀರಾಟ-ದೋಣಿ ಆಟ.

ಸಂಜೆ ಆಗುತ್ತಿದಂತೆ ಮನೆಗೆ ವಾಪಸಾಗುವ ತಯಾರಿ. ಆ ಸಮಯಕ್ಕೆ ಸರಿಯಾಗಿ ಎಲ್ಲ ಎಮ್ಮೆ-ದನದ ಹಿಂಡುಗಳು ಮನೆ ಕಡೆಗೆ.ಆ ರೀತಿ ಸಂಜೆ ದೂಳೆಬ್ಬಿಸುತ್ತ ಹೊರಟ ದನದ ಹಿಂಡಿನ ಹಿಂದೆ ನಮ್ಮ ಸವಾರಿ.'ಗೋದೂಳಿ' ಪದದ ಅರ್ಥವಾಗಿದ್ದು ಆಗ.ಮನೆಗೆ ಬಂದೊಡನೆ ತೋಟದಿಂದ ತಂದ ಮಾವಿನಕಾಯಿ ಅಮ್ಮ-ಚಿಕ್ಕಮ್ಮನಿಗೆ ಅರ್ಪಣೆ.ರಾತ್ರಿ ಊಟದಲ್ಲಿ ಮಾವಿನಕಾಯಿ ಚಟ್ನಿ ಹಾಜರ್!

ಈ ದಿನಚರಿ ಹೀಗೆ ನಡೆಯಿತು ಕೆಲವು ದಿನ.ಅದೊಂದು ದಿನ ಕಾವಲು ಮಾಡುವಾಗ ನೋಡಿದರೆ ದನಗಾಹಿಯೊಬ್ಬ ತೋಟದಲ್ಲಿ ಕಾಣಬೇಕೇ.ಇನ್ನೇನು ಕೂಗು ಹಾಕಬೇಕುವೆನ್ನುವಷ್ಟರಲ್ಲಿ ಅವನ ಜೊತೆ ಚಿಕ್ಕಪ್ಪ..ಬಹುಷಃ ಮಾವಿನಕಾಯಿ ಕದಿಯಲು ಬಂದಾಗ ಸಿಕ್ಕಿಬಿದ್ದಿರಬೇಕು ಅಂದುಕೊಂಡು ಅಲ್ಲಿಗೆ ಹೋದರೆ, ಆಶ್ಚರ್ಯ ಕಾದಿತ್ತು.ಚಿಕ್ಕಪ್ಪ ಅವನಿಗೆ ಸಾಕಷ್ಟು ಮಾವಿನಕಾಯಿ ಕೊಡಬೇಕೇ ! ಆ ದನಗಾಹಿ ಮಾವಿನಕಾಯಿ ತಗೊಂಡು ನಂತರ ಚಿಕ್ಕಪ್ಪನ ಜೊತೆ ಹೊರಟ.ನೀನು ಬಾ ಎಂಬಂತೆ ನನಗೆ ಸನ್ನೆ.

ಆ ಹುಡುಗ ಕರೆದುಕೊಂಡು ಹೋಗಿದ್ದು ಅವನ ಮೇಕೆ ಹಿಂಡಿನ ಹತ್ತಿರ. ಒಂದು ಮೇಕೆಯನ್ನು ಕರೆದುಕೊಂಡು ಬಂದು ಚಿಕ್ಕಪ್ಪನ ಹತ್ತಿರವಿದ್ದ ಚೊಂಬಿನಲ್ಲಿ ಸರಸರ ಅಂತ ಹಾಲು ಕರೆದುಬಿಟ್ಟ. ನಂತರ ನನ್ನೆಡೆಗೆ ನೋಡಿ 'ಮೇಕೆ ಹಸಿ ಹಾಲು ಕುಡಿದಿಯಾ ಯಾವಾಗಲದರೂ' ಎಂದಾಗ ನಾನು ಕಕ್ಕಾಬಿಕ್ಕಿ. ಚಿಕ್ಕಪ್ಪ 'ಪಟ್ಟಣದ ಹುಡುಗ ಬಹುಷಃ ಮೇಕೆನೇ ನೋಡಿಲ್ಲ, ಹಾಲು ಎಲ್ಲಿಂದ ಬರಬೇಕು' ಅನ್ನುತ್ತ ನಕ್ಕಿದ್ದೆ ನಕ್ಕಿದ್ದು.

ಚಿಕ್ಕಪ್ಪ ಹಾಲಿನ ಚೊಂಬು ನನಗೆ ಕೊಡುತ್ತ ರುಚಿ ನೋಡು ಅಂದಾಗೆ, ಆ ಮೇಕೆ ಹುಡುಗ 'ಆ ಚೊಂಬಿನಲ್ಲಿ ಆಮೇಲೆ ಕುಡಿ, ಈಗ ಇಲ್ಲಿ ಬಾ' ಅಂದ.ನನ್ನನ್ನು ನೆಲದ ಮೇಲೆ ಬಾಗಿ ಕುಳಿತುಕೊಳ್ಳುವಂತೆ ಹೇಳಿ, ಆ ಮೇಕೆ ಕೆಚ್ಚಲಿನಿಂದ ನೇರವಾಗಿ ನನ್ನ ಬಾಯಿಗೆ ಹಾಲು ಬೀಳುವಂತೆ ಕರೆಯತೊಡಗಿದ.ನಮ್ಮ ಹಾಲಿನವ ಕೊಡುತ್ತಿದ್ದ ನೀರಿನಂತ ಹಾಲಿಗಿಂತ ಗಟ್ಟಿ ಮತ್ತು ರುಚಿ. ಹಾಲು ಆಗಾಗ ಬಾಯಿಗೆ ಬೀಳದೆ ಮುಖದ ಮೇಲೆ ಬಿದ್ದಾಗ ಹಾಲಿನ ಅಭಿಷೇಕ!

ಈ ಮಾವು ಕಾಯುವ ಕಾಯಕ ನನ್ನ ಬೇಸಿಗೆ ರಜೆ ಮುಗಿಯುವರೆಗೆ ನಡೆಯಿತು...ಆ ನಡುವೆ ಆ ದನಗಾಹಿಗಳೊಂದಿಗೆ ಬೆಳೆದ ಸ್ನೇಹ,ಸಂಜೆ ಮನೆಗೆ ಮರುಳುವಾಗ ಅವರ ಎಮ್ಮೆಯ ಮೇಲೆ ಕುಳಿತು ಮಾವಿನಕಾಯಿ ತಿನ್ನುತ್ತಾ ಸವಾರಿ. ಎಷ್ಟೊಂದು ಸುಮಧುರ ಆ ನೆನಪುಗಳು..

ಶ್ಯಾಪಿಂಗ್ ಮಳಿಗೆಯಲ್ಲಿ '2% fat milk' ಡಬ್ಬಿಯನ್ನು ಮತ್ತು 'frozen cut mango' ನೋಡಿ ಮುಖದ ಮೇಲೆ ಮಂದಹಾಸ.

ನೊರೆಭರಿತ ಮೇಕೆ ಹಾಲಿನ ನೆನಪು...

ತೋಟದಲ್ಲಿ ಉಪ್ಪಿನ ಜೊತೆ ತಿಂದ ಮಾವಿನಕಾಯಿಯ ನೆನಪು..