Saturday, December 30, 2006

ಗೋಲ್ಡನ್ ಗೇಟ್

ಆ ಚಳಿಯಲ್ಲಿ ಸುಮ್ಮನೆ ಬೆಚ್ಚಗೆ ಮನೆಯಲ್ಲಿ ಸುಮ್ಮನೆ ಕೂತು ನಮ್ಮವರು ಜೊತೆ ಪೋನ್‍ನಲ್ಲಿ ಮಾತಾಡ್ತ ಇದ್ದಬಿಡಬೇಕು ಅನಿಸ್ತಾ ಇತ್ತು.ಮೊದಲೆಲ್ಲ ಪ್ರವಾಸ ಅಂದರೆ ತುದಿಗಾಲಲ್ಲಿ ನಿಲ್ಲತಾ ಇದ್ದೆ.ಗೊತ್ತಿಲ್ಲ ಈಗ ಎನಾಯಿತು ಅಂತಾ ಬೇರೆ ಯಾವುದರಲ್ಲೂ ಆಸಕ್ತಿನೇ ಇರಲ್ಲ. ಅಂತೂ ಸ್ನೇಹಿತೆರೆಲ್ಲ ಉಗಿದ ಮೇಲೆ ಪ್ರವಾಸಕ್ಕೆ ತಯಾರಿಗಿದ್ದು.

ನನ್ನ ನಳಪಾಕದ ರುಚಿ ನೋಡಿ, ಸುಪ್ರೀತ, ಪ್ರಕಾಶ್,ಹರ್ಷನ ಜೊತೆ ಮನೆಯಿಂದ ಬಿಟ್ಟಾಗ ಅವಾಗಲೇ ಮಧ್ಯರಾತ್ರಿ ಆಗ್ತಾ ಬಂದಿತ್ತು. ಇನ್ನೊಂದು ೬-೭ ಗಂಟೆ ಡ್ರೈವ್ ‍ನಂತರ ಕುಪರ್‍‍ಟಿನೋ ಅನ್ನೋ ಆ ಊರು ಮುಟ್ಟಿದಾಗ ಬೆಳಗಿನ ಜಾವ.ಕುಪರ್‍‍ಟಿನೋದಲ್ಲಿ ಬೆಳಗಿನ ತಿಂಡಿಗೆ ಸ್ನೇಹಿತೆರಾದ ದೀಪ್ತಿ ಮತ್ತು ಪೊನ್ನಮ್ಮ ಮನೆಗೆ ದಾಳಿ ಇಟ್ಟೆವು. ಆಗಲೇ ಡೆನ್‍ವರ್‍ನಿಂದ ಅರ್ಚನಾ ಬಂದು ಅಲ್ಲಿ ನಮ್ಮ ಸ್ವಾಗತ ಕಮೀಟಿಯಲ್ಲಿ ಇದ್ದರು. ತುಪ್ಪದಲ್ಲಿ ಮಾಡಿದ ಶ್ಯಾವಿಗೆಭಾತ್ ತಿಂದ ಮೇಲೆ ದೀಪ್ತಿ ಅಡುಗೆ ಬಗ್ಗೆ ಇದ್ದ ಸಂಶಯ ಸ್ಪಲ್ಪ ಮಾಯವಾಯ್ತು!

ಅಲ್ಲಿಂದ ಸ್ಯಾನ್‍ ಪ್ರಾನ್ಸಿಸ್ಕೋ ಕಡೆ ಹೊರಟೆವು.ಸ್ಯಾನ್‍ ಪ್ರಾನ್ಸಿಸ್ಕೋ ಅಂದಾ ಕೂಡಲೇ ನೆನಪಿಗೆ ಬರೋದು - ಸಿಲಿಕಾನ್ ವ್ಯಾಲಿ ಮತ್ತು ಗೋಲ್ಡನ್ ಗೇಟ್ ಸೇತುವೆ. ನಾವು ದಿನದ ೨೪ ಗಂಟೆನೂ ಮಾಡೋ ಕೆಲಸಕ್ಕೆ ಸಂಬಂಧ ಪಟ್ಟದನ್ನು ರಜದಿನದಲ್ಲೂ ನೋಡುವ ಅಪೇಕ್ಷೆ ಇಲ್ಲದ ಕಾರಣ ಸಿಲಿಕಾನ್ ವ್ಯಾಲಿ ಕಡೆ ಹೋಗಲಿಲ್ಲ ! ವಿಪರೀತ ವಾಹನದಟ್ಟಣೆ ನಡುವೆ ಕೊನೆಗೂ ಸೇತುವೆ ಮುಟ್ಟಿದೆವು.

ಗೋಲ್ಡನ್ ಗೇಟ್ ಸೇತುವೆ..
ಸುಮಾರು ೧.೭ ಮೈಲಿ ಉದ್ದದ ಈ ಸೇತುವೆ ಸ್ಯಾನ್‍ ಪ್ರಾನ್ಸಿಸ್ಕೋ ಕೊಲ್ಲಿಯ ಮೇಲೆ ಕಟ್ಟಲ್ಪಟ್ಟಿದೆ. ೧೯೩೭ರಲ್ಲಿ ಇದನ್ನು ಕಟ್ಟಿದಾಗ ಅದು ಜಗತ್ತಿನಲ್ಲಿ ಅತೀ ಉದ್ದದ ತೂಗು ಸೇತುವೆ ಅನ್ನೋ ಖ್ಯಾತಿಗೆ ಪಾತ್ರವಾಗಿತ್ತು.ಕಟ್ಟಲ್ಲಿಕ್ಕೆ ಸುಮಾರು ೪ ವರ್ಷವಾದವಂತೆ. ಕೆಂಪು-ಮಿಶ್ರಿತ-ಕಿತ್ತಲೆ ಬಣ್ಣದ ಈ ದೈತ ಸೇತುವೆ ಮೇಲೆ ಹಾಗೇ ತಿರುಗಾಡಿದೆವು. ಪೋಟೋ ಸೆಷನ್‍ಗಳಿಗೆ ಹೇಳಿ ಮಾಡಿಸಿದ ಜಾಗ ಇದು.

ಸುಸ್ತಾಗೋವರೆಗೆ ಸೇತುವೆ ಮೇಲೆ ಆಡ್ಡಾಡಿ ನಂತರ ಸೇತುವೆ ವಿಶಿಷ್ಟವಾಗಿ ಕಾಣುವ ಇನ್ನೊಂದು ಜಾಗಕ್ಕೆ ತೆರಳಿದೆವು.ಅಲ್ಲಿಂದ ಈಡೀ ಗೋಲ್ಡನ್ ಗೇಟ್ ತುಂಬಾ ಸುಂದರವಾಗಿ ಕಾಣುತಿತ್ತು. ಬಹುತೇಕ ಪ್ರವಾಸಿಗರು ಈ ತಾಣದಿಂದ ಸೇತುವೆ ನೋಡಬಹುದೆಂದು ತಿಳಿದಿರಲ್ಲ, ನೀವು ಗೋಲ್ಡನ್ ಗೇಟ್ ನೋಡೋಕೆ ಹೋದರೆ ಹತ್ತಿರವೇ ಇರೋ ಈ ಚಿಕ್ಕ ಬೆಟ್ಟ ಹತ್ತೋಕೆ ಮರೀಬೇಡಿ.

೧೯೩೦ರ ಕಾಲದಲ್ಲಿ ಅಮೇರಿಕೆಯಲ್ಲಿ ವಿಪರೀತ ಅರ್ಥಿಕ ದುರ್ಬರತೆ. ಎಲ್ಲಿ ನೋಡಿದರೂ ನಿರುದ್ಯೋಗ-ಹಿಂಸೆಯ ಕಾಲವದು. ಆ ಸಮಯದಲ್ಲಿ ಜೋಸೆಫ್ ಸ್ಟ್ರೌಸ್ ಎಂಬ ಒಬ್ಬ ಇಂಜಿನೀಯರ್ ಗೋಲ್ಡನ್ ಗೇಟ್ ಸೇತುವೆ ಕಟ್ಟುವ ಪ್ರಸ್ತಾಪ ಮಾಡಿದಾಗ , ಅದನ್ನು ಕೇಳಿ ಅವನನ್ನು ಹೀಯಾಳಿಸದವರು ಅದೆಷ್ಟೋ ಜನ, ತಿನ್ನಲ್ಲಿಕ್ಕೆ ಎನೂ ಇಲ್ಲ, ಇನ್ನು ಸೇತುವೆಗೆ ಹಣ ಎಲ್ಲಿಂದ ಬರುತ್ತೆ ಅಂತಾ ಅಂದವರು ಎಷ್ಟೋ ಜನ.ಆದರೆ ಸ್ಟ್ರೌಸ್ ಸರ್ಕಾರಕ್ಕೆ ಸೇತುವೆ ಕಟ್ಟುವದರಿಂದ ಆಗುವ ಉಪಯೋಗಗಳ ಬಗ್ಗೆ ಮನವರಿಕೆ ಮಾಡಿಕೊಟ್ಟ. ಸೇತುವೆ ಕಟ್ಟಡದಿಂದ ಬಹು ಉದ್ಯೋಗಗಳ ಸೃಷ್ಟಿಯಾಗುವದರ ಬಗ್ಗೆ, ಸೇತುವೆಯಿಂದ ಉಳಿಯಬಹುದಾದ ಪ್ರಯಾಣದ ಖರ್ಚಿನ ಬಗ್ಗೆ, ಅದು ಉಂಟು ಮಾಡುವ ಮಾರುಕಟ್ಟೆಗಳ ಬಗ್ಗೆ ಹೇಳಿ, ಕೊನೆಗೂ ಸರ್ಕಾರದ ಒಪ್ಪಿಗೆ ಪಡೆದ.ಸೇತುವೆಯ ಕಟ್ಟುವಿಕೆ ಅಷ್ಟು ಸುಲಭವಾಗಿರಲಿಲ್ಲ. ಕಟ್ಟುವಿಕೆಯ ವೇಳೆಯಲ್ಲಿ ಅನೇಕ ತಾಂತ್ರಿಕ ಸಮಸ್ಯೆಗಳು ತಲೆದೂರಿದವು. ಅನೇಕ ಅವಘಡಗಳು ಘಟಿಸಿದವು.ಇಷ್ಟೆಲ್ಲದರ ನಡುವೆಯೂ ೪ ವರ್ಷದ ನಂತರ ಸೇತುವೆ ಸಿದ್ದವಾಯಿತು.

ಗೋಲ್ಡನ್ ಗೇಟ್ ಸೇತುವೆಗೆ ಸಂಬಂಧ ಪಟ್ಟಂತೆ ಅನೇಕ ವಿಶಿಷ್ಟತೆಗಳಿವೆ.

'ಹಾಫ್ ವೇ ಟು ಹೆಲ್' ಅನ್ನೋದು ೧೯ ಜನರ ಒಂದು ವಿಶಿಷ್ಟ ಗುಂಪು. ಈ ೧೯ ಜನ ಸೇತುವೆ ಕಟ್ಟುವಾಗ ಮೇಲಿಂದ ಬಿದ್ದವರು. ಸೇತುವೆ ಕಟ್ಟುವಾಗ ಉಪಯೋಗಿಸಿದ್ದ ಸೇಫ್ಟಿ ಬಲೆಯಲ್ಲಿ ಬಿದ್ದು ಪ್ರಾಣ ಉಳಿಸಿಕೊಂಡವರು.

ಈಗ ಸೇತುವೆಯ ಉಸ್ತುವರಿಗೆಂದೇ ೧೭ ಜನ ಕಮ್ಮಾರರು ಹಾಗು ೩೮ ಪೇಂಟರ್‌ಗಳು ಇದ್ದಾರಂತೆ. ಅವರು ವರ್ಷವಿಡೀ ಸೇತುವೆಯ ನಟ್-ಬೋಲ್ಟ್-ಬಣ್ಣದ ಕಾಳಜಿ ವಹಿಸುತಾರಂತೆ.

ಹಾಗೇ ಈ ಸೇತುವೆ ಅತ್ಮಹತ್ಯೆ ಮಾಡಿಕೊಳ್ಳೋರ ಫೆವರೆಟ್ ಜಾಗ ಕೂಡ ಹೌದು. ಸೇತುವೆ ಮೇಲಿಂದ ನೆಗೆದು ಪ್ರಾಣ ಬಿಟ್ಟವರೂ ಅದು ಎಷ್ಟು ಸಹಸ್ರನೋ.ಇದು ಎಷ್ಟು ದೊಡ್ಡ ಸಮಸ್ಯೆಯಾಗಿದೆ ಅಂದರೆ, ಸೇತುವೆಯ ಇಕ್ಕೆಲಗಳಲ್ಲೂ ಎತ್ತರದ ಜಾಲರಿ ಕಟ್ಟುವ ವಿಚಾರ ನಡೆದಿದೆಯಂತೆ, ರಾತ್ರಿ ವೇಳೆ ಸೇತುವೆ ಮೇಲೆ ಸಂಚಾರಿಗಳನು ನಿಷೇದಿಸೋದು ಇನ್ನೊಂದು ವಿಚಾರವಂತೆ. ಆದರೆ ಇವೆಲ್ಲಕ್ಕಿಂತ ವಿಶಿಷ್ಟವಾದ ಯೋಚನೆಯೆಂದರೆ 'ಜಂಪ್ ಫಾರ್ ಲೈಫ್'. ಇದರ ಮೂಲ ಉದ್ದೇಶ ಸೇತುವೆಯನ್ನು ಅತ್ಮಹತ್ಯೆ ಮಾಡಿಕೊಳ್ಳೋಕೆ ಸೂಕ್ತತಾಣ ಅನ್ನೋ ಅಕರ್ಷಣೆ ಕಡಿಮೆ ಮಾಡೋದು.ಇದರ ಪ್ರಕಾರ ಸೇತುವೆಯಿಂದ 'ಬಂಜೀ ಜಂಪ್' ಮಾಡೋಕೆ ಅವಕಾಶ ಕೊಟ್ಟು,ಆ ಮೂಲಕ ಸಂಗ್ರಹಿಸುವ ಧನವನ್ನು ಅತ್ಮಹತ್ಯೆ ನಿರೋಧಿ ಕೆಲಸಗಳಿಗೆ ಉಪಯೋಗಿಸುವದು. ಈ ಮೂಲಕ ಅದು ಸೇತುವೆಯ ಬಗೆಗಿನ ಅತ್ಮಹತ್ಯೆ-ಪ್ರಚೋದನಕಾರಿ ಇಮೇಜ್ ಕಡಿಮೆ ಮಾಡುತ್ತಂತೆ.

ಇಷ್ಟೆಲ್ಲಾ ವಿಶಿಷ್ಟವಾದ ಸೇತುವೆಯ ಮೇಲೆ ತಿರುಗಾಡಿ, ಪೋಟೋ ಕ್ಲಿಕ್ಕಿಸಿ ಅಲ್ಲಿಂದ ಮರುಳುವಾಗ ಸಂಜೆಯ ಸಮಯ.ಅಲ್ಲೇ ಹತ್ತಿರದಲ್ಲೇ ೭-೮ ತಿಂಗಳು ಇದ್ದರೂ ಸೇತುವೆ ನೋಡದೇ ಹೆಂಗೆ ಇದ್ದಳು ದೀಪ್ತೀ ಅಂತಾ? ನನ್ನ ಜೊತೆ ಬಂದಿದ್ದ ಹರ್ಷ, ಪ್ರಕಾಶ, ಅರ್ಚನಾ, ಸುಪ್ರೀತ ಸೇತುವೆಯ ಮೇಲಿಂದ ನೆಗೆಯುವ ಯಾವುದೇ ವಿಚಾರ ಮಾಡದೇ ಒಳ್ಳೆ ಹುಡುಗ-ಹುಡುಗಿಯರ ತರ ವಾಪಾಸ್ ಬಂದರು ! ಬಹುಷ ಅದು ಅಂತಾ ಸ್ಥಳ ಅಂತಾ ಅವರಿಗೆ ಗೊತ್ತಿರದೇ ಇದ್ದದು ಒಳ್ಳೇದೇ ಅಯ್ತು !

ಅಲ್ಲಿಂದ ಹೊರಟು ನಾವು ಸ್ಯಾನ್‍ ಪ್ರಾನ್ಸಿಸ್ಕೋದ ಇನ್ನೊಂದು ಅಕರ್ಷಣೆ - 'ಕ್ರೂಕೆಡ್ ಸ್ಟ್ರೀಟ್' ಕಡೆ ಹೊರಟೆವು. ಅಂಕು-ಡೊಂಕಿನ ಬೀದಿ ಅನ್ನೋ ಹೆಸರಿನ ಈ ಸ್ಥಳ ಮುಟ್ಟಲ್ಲಿಕ್ಕೆ ಲಾಂಬಾರ್ಡ್ ಅನ್ನೋ ಸುಮಾರು ೩೦ ಡಿಗ್ರೀ ಇನ್‍ಕ್ಲೀನಿಷನ್‍ನಲ್ಲಿ ಇರೋ ರಸ್ತೆಯಲ್ಲಿ ಸಾಗಿದೆವು. 'ಕ್ರೂಕೆಡ್ ಸ್ಟ್ರೀಟ್' ಸುಮಾರು ಕಾಲು ಮೈಲಿ ಇರುವ ಜಿಗ್-ಜಾಗ್ ರಸ್ತೆ. ಅಲ್ಲಿ ಡ್ರೈವ್ ಮಾಡಿದ ನಂತರ 'ಪಿಯರ್ ೩೯' ಅನ್ನೋ ಜಾಗಕ್ಕೆ ಹೊರಟೆವು.

ಪಿಯರ್ ೩೯ ರ ಇನ್ನೊಂದು ಹೆಸರು 'ಫಿಷರ್‌ಮೆನ್ಸ್ ವಾರ್ಪ್'. ಸಮುದ್ರದ ದಡಕ್ಕೆ ಅಂಟಿಕೊಂಡಿರೋ ಇದರಲ್ಲಿ ಅನೇಕ ಅಂಗಡಿ ಮಳಿಗೆಗಳಿವೆ. ಪ್ರವಾಸಿಗರಿಗೆ ಬೇಕಾಗೋ ಸ್ಯಾನ್‍ ಪ್ರಾನ್ಸಿಸ್ಕೋದ ಸ್ಮರಣ-ಫಲಕಗಳು, ಟೀಶರ್ಟ್, ಚಾಕಲೋಟ್‍ಗಳು, ಅನೇಕ ರೆಸ್ಟೋರೆಂಟ್‍ಗಳು ಇಲ್ಲಿವೆ. ಅಲ್ಲಿ ನನ್ನ ಗೆಳಯರು ಸ್ಪಲ್ಪ ಶ್ಯಾಪಿಂಗ್ ಮಾಡಿ, ನಂತರ ಅಲ್ಲಿ ಅಡ್ಡಾಡಿ ಮರಳಿ ಕುಪರ್‍ಟಿನೋ ಕಡೆ ಹೊರಟಾಗ ರಾತ್ರಿ.

ಕುಪರ್‍ಟಿನೋದಲ್ಲಿ ಎಷ್ಟೊಂದು ಭಾರತೀಯ ಹೋಟೆಲ್‍ಗಳಿವೆ ! ಅದು ಯಾವುದೋ 'ಪ್ಯಾಸೇಜ್ ಟು ಇಂಡಿಯಾ' ಅನ್ನೋ ಹೋಟೆಲ್ ಹೊಕ್ಕು ಅಲ್ಲಿ ನಮ್ಮ ಇನಿಂಗ್ಸ್ ಆರಂಬಿಸಿದೆವು. ತುಂಬಾ ಹಸಿವಾದ್ದರಿಂದ ಬಿರುಸಿನ ಬ್ಯಾಟಿಂಗ್ ನಡೆಯಿತು. ಅಲ್ಲಿಂದ ಹೋಟೆಲ್‍ಗೆ ಮರಳಿದಾಗ ಮಧ್ಯರಾತ್ರಿ.

ಮರುದಿನದ ನಮ್ಮ ಕಾರ್ಯಕ್ರಮ 'ಮಿಸ್ಟಿರೀ ಪಾಯಿಂಟ್'ಗೆ ಭೇಟಿ..

Wednesday, December 20, 2006

ಪ್ರೀತಿಯ ಶರಧಿಯೇ..

ನನ್ನ ಹೃದಯದ ಒಡತಿಯೇ,

ನೀನು ನನಗೆ ಗೊತ್ತಿಲ್ಲದಂಗೆ ಕದ್ದೊಯ್ದ ನನ್ನ ಹೃದಯ ಹೇಗಿದೆ?

ಅದು ಯಾವಾಗ, ಎಲ್ಲಿ, ಹೇಗೆ ಅದನ್ನ ನೀ ದೋಚಿದೆ ಇನ್ನೂ ಗೊತ್ತಾಗಲಿಲ್ಲ. ನಿನ್ನ ಸುಖ ಬಂಧನದಲ್ಲಿ ಅದಕ್ಕೆ ಬಹುಷಃ ನಾನು ಮರೆತುಹೋಗಿದೀನಿ ಅನಿಸುತ್ತೆ.ಪಾಪ, ಅದರ ತಪ್ಪಿಲ್ಲ ಬಿಡು, ನೀನು ಇರೋದೇ ಹಾಗೆ, ಜೊತೆಗಿದ್ದರೆ ಈಡೀ ಜಗತನ್ನೇ ಮರೆಸಿಬಿಡೋ ಹಾಗೇ ಪ್ರೀತಿ ಮಾಡಿಸ್ತಿಯಾ..

ಮೊನ್ನೆ ನಿನ್ನ ನೆನಪು ನನ್ನ ಸಿಕ್ಕಪಟ್ಟೆ ಕಾಡ್ತಿತ್ತು. ಅದು ಯಾವಾಗ ಕಾಡೋದಿಲ್ಲ ಹೇಳು. ಆದರೆ ಅವತ್ತು ಯಾಕೋ ಬಹಳ ಬಹಳ ನೆನಪಾಗ್ತ ಇದ್ದೆ ಹುಡುಗಿ..

ಒಲವಿನ ಪ್ರಿಯಲತೆ
ಅವಳದೇ ಚಿಂತೆ
ಅವಳ ಮಾತೇ ಮಧುರ ಗೀತೆ
ಅವಳೇಯೆನ್ನ ದೇವತೆ

ಇಲ್ಲಿ ನನ್ನ ಮೆಚ್ಚಿನ ಒಂದು ಜಾಗವಿದೆ - ಪಾಲೋಸ್ ವರ್ಡೀಸ್ ಅಂತಾ. ಫೆಸಿಪಿಕ್ ಸಾಗರದ ಪಕ್ಕದಲ್ಲಿದೆ ಹರಡಿದೆ ಈ ಗುಡ್ಡ, ಸಾಗರದ ಪಕ್ಕಕ್ಕೆ ಈ ಗುಡ್ಡದಲ್ಲಿ ಓಡುತ್ತೆ ರಸ್ತೆ. ಪ್ರಶಾಂತ ಮಹಾಸಾಗರದ ಸೊಬಗು ಸವಿಯುತ್ತ ಈ ರಸ್ತೆಯಲ್ಲಿ ಡ್ರೈವ್ ಮಾಡಿಕೊಂಡು ಹೋಗಿ, ಅಲ್ಲಿ ಸಮುದ್ರ ತಟದಲ್ಲಿ ಕೂತು ಸೂರ್ಯಾಸ್ತ ನೋಡಿಬರೋದು ನನ್ನ ಮೆಚ್ಚಿನ ಕೆಲಸ.

ಅವತ್ತು ನಿನ್ನ ನೆನಪನ್ನು ಜೊತೆಗೆ ಕರಕೊಂಡು ಸಾಗರದ ಹತ್ತಿರ ಡ್ರೈವ್‍ಗೆ ಹೋಗಿದ್ದೆ. ಸಂಜೆ ಸಮಯವಾಗ್ತಾ ಇತ್ತು. ಹಕ್ಕಿಗಳೆಲ್ಲಾ ಮನೆ ಕಡೆ ವಾಪಾಸ್ ಹೋಗ್ತಾ ಇದ್ದವು. ಆ ಹಕ್ಕಿಗಳ ಹಾಗೆ ನನಗೂ ರೆಕ್ಕೆ ಇದ್ದರೆ ಎಷ್ಟು ಚೆನ್ನಾ ಅನಿಸ್ತು. ದಿನ ಹಾರಿಕೊಂಡು ಬಂದು ನಿನ್ನ ಬಾಹುಗಳ ಗೂಡು ಸೇರುತಿದ್ದೆ.ದಿನ ನಿನ್ನ ಪ್ರೀತಿಯ ಗುಟುಕು ತಿನ್ತಾ ಇದ್ದೆ...

ಫೆಸಿಪಿಕ್ ಸಾಗರದ ಮೇಲೆ ಒಂದು ಜೋಡಿ ಹಕ್ಕಿ ಎಲ್ಲಾ ಮರೆತು ತಮ್ಮ ಪ್ರಪಂಚದಲ್ಲಿ ತಾವು ಹಾರಿಕೊಂಡು ಆರಾಮಾಗಿ ವಿಹರಿಸುತ್ತಿದ್ದವು.

ಅದು ಯಾಕೋ ಗೊತ್ತಿಲ್ಲ ನನಗೆ ಫೆಸಿಪಿಕ್ ಸಾಗರ ತುಂಬಾ ಶಾಂತ ಅನಿಸುತ್ತೆ.ಅದಕ್ಕೆ ಅದನ್ನ ಪ್ರಶಾಂತ ಮಹಾಸಾಗರ ಅಂತಾ ಕರಿತಾರೋ ಎನೋ. ಅದನ್ನು ನೋಡ್ತಾ ಇದ್ದಂಗೆ ಮತ್ತೆ ನಿನ್ನ ನೆನಪು ಶುರುವಾಯಿತು. ನಿನ್ನ ಪ್ರೀತಿನೂ ಹಂಗೆ ಅಲ್ವಾ...ಏನೂ ಸದ್ದು ಮಾಡದೇ ಇದ್ದರೂ, ಅದರ ಆಳ ಆ ಸಾಗರಕ್ಕಿಂತ ಕಡಿಮೆ ಏನಿಲ್ಲ. ಆ ನಿನ್ನ ಮನಸ್ಸೆಂಬ ಸಾಗರದ ಆಳಕ್ಕೆ ಇಳಿಯುತ್ತಿದ್ದಂತೆ, ಅಲ್ಲಿ ನನಗೋಸ್ಕರ ಇರುವ ಪ್ರೀತಿ ನೋಡಿ ನಾನು ಸೋತು, ಈಜೋದನ್ನು ಬಿಟ್ಟು , ಅಲ್ಲೇ ಮುಳುಗಿ , ನಿನ್ನ ಮನದಲ್ಲಿ ಉಳಿದು ಹೋಗಿದೀನಿ..

ಅವತ್ತು ಸೂರ್ಯಾಸ್ತ ತುಂಬಾ ಸುಂದರ ಅನಿಸ್ತು.ಸೂರ್ಯ ಪೂರ್ತಿ ಸಾಗರದ ಆಳಕ್ಕೆ ಸೇರೋವರೆಗೆ ನೋಡಿ ಅಲ್ಲಿಂದ ಹೊರಟೆ.ಸೂರ್ಯಸ್ತ ನೋಡೋಕೆ ಬಂದಿತ್ತು ಯಾವುದೋ ಒಂದು ಜೋಡಿ. ಸೂರ್ಯಾಸ್ತದ ಆ ಸುಂದರ ಸಂಜೆಯಲ್ಲಿ ಆ ಜೋಡಿ ಇನ್ನೂ ಸುಂದರವಾದ ಕೆಲಸದಲ್ಲಿ ತೊಡಗಿದ್ದರು! ಬಹಳ ಬಹಳ ನಿನ್ನ ಮಿಸ್ ಮಾಡಕೊಂಡೆ ಹುಡುಗಿ..

ಡ್ರೈವ್ ಮಾಡಿಕೊಂಡು ವಾಪಾಸ್ ಬರಬೇಕಾದರೆ, ನಿನ್ನ ಜೊತೆಗಿದ್ದ ಆ ೩ ದಿನ ಇಷ್ಟು ನೆನಪಿಗೆ ಬಂತು ಗೊತ್ತಾ. ನಾವಿಬ್ಬರು ಒಟ್ಟಿಗೆ ಮೊದಲ ಸರ್ತಿ ಪಾನಿಪುರಿ ತಿಂದದ್ದು ನೆನಪಾಯಿತು. ಹಂಗೆ ಆ ತಂಪು ಸಂಜೆಯಲ್ಲಿ ನಿನ್ನ ಜೊತೆ ಕೆಲವೊಮ್ಮೆ ಮಾತಿಲ್ಲದೇ, ಕೆಲವೊಮ್ಮೆ ಮಾತು ಹೊರಡದೇ, ಕೆಲವೊಮ್ಮೆ ಸುಮ್ಮನೆ ನಿನ್ನ ನೋಡಕೊಂಡು , ಕೆಲವೊಮ್ಮೆ ನೀನು ಮಾತಾಡೋದಾ ಕೇಳಿಕೊಂಡಿದ್ದು, ಹಂಗೆ ಆಟೋದಲ್ಲಿ ವಾಪಾಸ್ ಹೋಗುವಾಗ ನಿನ್ನ ಮನ ಎಲ್ಲೋ ಕಳೆದುಹೋಗಿದ್ದು..ಎಲ್ಲಾ ನೆನಪಾಯ್ತು.

ಡ್ರೈವ್ ಮಾಡ್ತಾ ಇದ್ದೋನು ಇಂಡಿಯನ್ ಶ್ಯಾಪ್ ಬರ್ತಾ ಇದ್ದಾಗೆ ನಿಲ್ಲಿಸಿದೆ. ನೀನು ತುಂಬಾ ಇಷ್ಟ ಪಡೋ ಪಾನಿಪುರಿ ನೋಡಿದ್ದೇ ಅಲ್ಲಿ ಹೊಕ್ಕೆ. ಪಾನಿಪುರಿ ತಿನ್ನಬೇಕು ಅನ್ನೋದಿಕ್ಕಿಂತ ನಿನ್ನ ನೆನಪಾಗಿ ಸುಮ್ಮನೇ ಪಾನಿಪುರಿ ತಗೊಂಡೆ.ಪಾನಿಪುರಿ ಮೊದಲು ತಿನ್ನಬೇಕಾದರೆ ಸುಮ್ಮನೆ ಪಾನಿಪುರಿ ಬಿಟ್ಟರೆ ಎನೂ ತಲೆಯಲಿ ಬರ್ತಾ ಇದ್ದಿಲ್ಲ.ಈಗ ಹೆಂಗೆ ಆಗಿದೆಯೆಂದರೆ ಒಂದೊಂದು ಪಾನಿಪುರಿ ತಿನ್ನಬೇಕಾದರೂ ನಿನ್ನ ನೆನಪು ಬಂದು ಬಾಯಿ ತೆರೆಯುತ್ತೆ.

ಅಲ್ಲಿಂದ ಮನೆಗೆ ಬಂದ ಮೇಲೆ ಯಾಕೋ ಗೊತ್ತಿಲ್ಲ, ಎನೂ ಮಾಡೋಕೆ ಮನಸು ಬರ್ತಾ ಇಲ್ಲ. ಸುಮ್ಮನೆ ಹಾಸಿಗೆ ಮೇಲೆ ಬಿದ್ದಿದೀನಿ, ನಿನ್ನ ನೆನಪೆಂಬ ಹೊದ್ದಿಕೆ ಹೊದ್ದುಕೊಂಡು. ಅದು ಯಾವಾಗ ಕನಸಿಗೆ ಜಾರ್ತಿನೋ ಗೊತ್ತಿಲ್ಲ...

ಸರಿ, ಅಲ್ಲೇ ಕನಸಲಿ ಸಿಗ್ತೀನಿ..ಉಳಿದದ್ದು ಅಲ್ಲೇ ಹೇಳ್ತೀನಿ..

ನಿನ್ನ ಪ್ರೀತಿಯಲ್ಲಿ ಕಳೆದುಹೋದ,
ನಿನ್ನವನು

Sunday, December 03, 2006

ನಿರೀಕ್ಷೆ

ನಿನ್ನ ಮೋಹಕ ನಗೆಯಲಿ
ಕಾಣೆಯಾಯಿತು ದಣಿವು
ನಿನ್ನ ಧ್ವನಿಯ ನಾದದಲಿ
ನನ್ನದಲ್ಲವಾಯಿತು ಮನವು

ನಿನ್ನ ನೆನಪುಗಳ ಅಂಗಳದಲ್ಲಿ
ಕಳೆದುಹೋಯಿತು ನನ್ನ ಮನ
ನಿನ್ನ ಪ್ರೀತಿಯ ಸಾಗರದಲ್ಲಿ
ಮುಳುಗಿಹೋಯಿತು ನನ್ನ ಮನ

ಪ್ರತಿ ಕ್ಷಣವೂ ಧ್ಯಾನ ನಿನ್ನದೇ
ಪ್ರತಿ ಬಡಿತದಲ್ಲೂ ಹೆಸರು ನಿನ್ನದೇ
ಪ್ರತಿ ಇರುಳಲ್ಲೂ ಕನಸು ನಿನ್ನದೇ
ಪ್ರತಿ ದಿನವೂ ನನ್ನ ಜೀವ ನಿನ್ನದೇ

ಅನುಭವಿಸುತ್ತಿದ್ದೇನೆ ಒಂದೊಂದು ಕ್ಷಣವು
ಭಾರ ಹೃದಯದಿಂದ ಅಗಲುವಿಕೆಯ ನೋವು
ನನ್ನಿಂದ ಅಷ್ಟು ದೂರ ಇದ್ದರೂ ನೀನು
ಅದು ಹೇಗೆ ಮನವನ್ನು ಕಾಡುತ್ತೀಯಾ ನೀನು?

ಜೀವಿಸುತ್ತಿದೇನೆ ಆ ಕ್ಷಣಕ್ಕಾಗಿ
ಪ್ರೀತಿಯ ಹಕ್ಕಿಗಳೆರಡು ಸ್ವಚ್ಚಂದ ಆಗಸದಲಿ
ಒಟ್ಟಿಗೆ ಹಾರುವ ಆ ಕ್ಷಣಕ್ಕಾಗಿ
ಜೀವಿಸುತ್ತಿದೇನೆ ಆ ದಿನಕ್ಕಾಗಿ
ಕಾದು ಒಣಗಿದ ಭೂಮಿಯನು
ಮೊದಲು ಮಳೆ ಹನಿ ಚುಂಬಿಸುವ ದಿನಕ್ಕಾಗಿ