Friday, April 06, 2007

ಬಿಳಿಗಡ್ಡದ ಅಂಕಲ್

ಅವತ್ತು ಪೋನ್‍ನಲ್ಲಿ ಮಾತಾಡುವಾಗ ನನ್ನ ಹುಡುಗಿ ಕೇಳಿದಳು 'ರೀ ಇವತ್ತು ಯಾರನ್ನ ನೋಡಿದೆ ಹೇಳಿ'.

ಆ ಊರಿನಲ್ಲಿದ್ದುಕೊಂಡು ಅವಳು ಅಷ್ಟು ಖಾತರದಿಂದ ಹೇಳ್ತಿದಾಳೆ ಅಂದ್ರೆ ನನಗೆ ನೆನಪಾಗಿದ್ದು ಕೇವಲ ಒಂದೇ ಹೆಸರು.. 'ತೇಜಸ್ವಿ' !

ಕಾನನದ ಆ ವಿಸ್ಮಯದ ಲೋಕ ಸೃಷ್ಟಿಸಿದವರು.ಅಲ್ಲಿ ಹಾರುವ ಓತಿಯನ್ನು ಹುಡುಕುತ್ತಾ ಆ ದಟ್ಟ ಕಾಡಲ್ಲಿ ಹೊರಟರೆ ಓದುಗರಿಗೆ ಕಾಡಿನಲ್ಲಿ ಎಲೆಗಳ ಮೇಲೆ ಚರಪರ ಸದ್ದು ಮಾಡಿ ನಡೆದಾಡಿದ ಹಾಗೆ ಮಾಡಿದವರು. ಕಾನನವನ್ನು ಅಷ್ಟು ಪ್ರೀತಿಸಿ ಅದರಲ್ಲೇ ಬದುಕಿದವರು. ಕನ್ನಡದಲ್ಲಿ ದೊಡ್ಡ ಮಟ್ಟದಲ್ಲಿ ವಿಜ್ಞಾನ ವಿಷಯಗಳ ಬರೆದು ಅದನ್ನು ಓದಿಸಿದವರು. ಹಾಗೆಯೇ ಮನಕ್ಕೆ ತಟ್ಟುವ ಪ್ರಭಾವಿ ಪಾತ್ರಗಳನ್ನು ತಂದು ನಿಲ್ಲಿಸಿದವರು.ಕ್ಯಾಮರ ಕಣ್ಣಲ್ಲಿ ಪ್ರಕೃತಿಯನ್ನು ಅಷ್ಟು ಸುಂದರವಾಗಿ ಸೆರೆಹಿಡಿದು ತಂದು ತೋರಿಸಿದವರು..

ಕುವೆಂಪುರಂತಹ ತಂದೆಯ ಮಗನಾಗಿ ಅದೇ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸುವುದು ಸುಲಭದ ಕೆಲಸವಲ್ಲ. ಕುವೆಂಪು ಒಂದು ಶರಧಿ. ಅದರ ಪರಧಿಯನ್ನು ಮೀರಿ ಬಂದು ,'ಕುವೆಂಪು ಅವರ ಮಗ ತೇಜಸ್ವಿ' ಅನ್ನೋ ಇಮೇಜ್‍ನಿಂದ ದೂರವಿದ್ದು, ತಮ್ಮದೇ ಒಂದು ಸ್ವಂತ ಇಮೇಜ್ ಸೃಷ್ಟಿಸಿಕೊಂಡವರು..

ನಾನು ನನ್ನ ಹುಡುಗಿ ಸಂಬಂಧದಲ್ಲಿ ಸೇರಿದ ಪ್ರಾರಂಭದ ದಿನಗಳವು.ಅದು-ಇದು ಮಾತಾಡುತ್ತ ಮಾತು 'ಕರ್ವಾಲೋ' ಕಡೆ ಬಂದಾಗ, ನಾವು ಅದೆಷ್ಟು ಮಾತಾಡಿದ್ದೆವು. ನಂತರ ನನ್ನ ಹುಡುಗಿ ತೇಜಸ್ವಿಯವರ ಭಾರೀ ಅಭಿಮಾನಿಯೆಂದು ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ತೇಜಸ್ವಿಯವರ ಕೃತಿಗಳ ಮಾತು ಬಂದರೆ ನನ್ನಾಕೆಯ ಉತ್ಸಾಹ ಇಮ್ಮಡಿಯಾಗುತಿತ್ತು.

ಅವತ್ತು ನನ್ನ ಹುಡುಗಿ ದಾರಿಯಲ್ಲಿ ಹೋಗುವಾಗ, ಎದುರಿಗೆ ಸ್ಕೂಟರ್ ಸವಾರಿ ಮಾಡಿಕೊಂಡು ಬಿಳಿಗಡ್ಡದ ಅವಳ ನೆಚ್ಚಿನ ಸಾಹಿತಿ ಹೋದಾಗ ಅವಳಿಗೆ ಆದ ಸಂತೋಷದಲ್ಲೇ ನನ್ನ ಕೇಳಿದ್ದು ಯಾರನ್ನು ನೋಡಿದೆ ಹೇಳಿಯೆಂದು. ಆಮೇಲೆ ನಾನು 'ನೀನು ಯಾಕೇ ತೇಜಸ್ವಿಯವರನ್ನು ಒಮ್ಮೆ ಮಾತಾಡಿಸಿಕೊಂಡು ಬರಬಾರದು' ಎನ್ನುವ ಮೊದಲೇ ಅವಳು ಮೂಡಿಗೆರೆಯಲ್ಲಿ ಅವರ ಮನೆಯನ್ನು ಪತ್ತೆ ಮಾಡಿದ್ದಾಗಿತ್ತು.ಅವರ ಎಸ್ಟೇಟ್ ಇವರ ಕಾಲೇಜಿಂದ ತೀರಾ ಹತ್ತಿರದಲ್ಲಿ ಇದೆಯಂತೆ.

ಅದೊಂದು ದಿವಸ ಪೋನ್‍ನಲ್ಲಿ ನನ್ನ ಹುಡುಗಿ ಧ್ವನಿಯಲ್ಲಿ ಸಾರ್ಥಕ ಭಾವ. ಅವಳಿಗೆ ಎಷ್ಟು ಖುಷಿಯಾಗಿತ್ತೆಂದರೆ ಅವಳು ಮಾತಾಡ್ತಾನೇ ಇಲ್ಲ. ಮತ್ತೆ ಕೇಳಿದಳು 'ಇವತ್ತು ಗೊತ್ತಾ ಎನಾಯ್ತು, ಊಹಿಸಿ ನೋಡೋಣ' ? ನನಗೆ ತಕ್ಷಣವೇ ಹೊಳೆದಿದ್ದು 'ತೇಜಸ್ವಿಯವರು ಸಿಕ್ಕಿದಿರಾ?' ಅದಕ್ಕೆ ಅವಳು 'ಅಷ್ಟೆ ಅಲ್ಲಾ..ನಾನು ಅವರ ಮನೆಗೆ ಹೋಗಿದ್ದೆ !'

ಆಗಿದ್ದೆನೆಂದರೆ ನನ್ನ ಹುಡುಗಿಯ ಸ್ನೇಹಿತೆಯ ಪ್ರೊಪೆಸರ್‍ರೊಬ್ಬರು ತೇಜಸ್ವಿಯವರು ಒಳ್ಳೆ ಗೆಳಯರು. ಅವರ ಪರಿಚಯದ ಮೇಲೆ ನನ್ನ ಹುಡುಗಿ ಮತ್ತು ಅವಳ ಸ್ನೇಹಿತೆ ತೇಜಸ್ವಿಯವರ ಮನೆಗೆ ಹೋಗಿದ್ದಾರೆ. ಇವರಿಗೋ ಮನದಲ್ಲಿ ಅಳಕು, ಗೊತ್ತು ಪರಿಚಯವಿಲ್ಲದೇ ತೇಜಸ್ವಿಯವರನ್ನು ಭೇಟಿಮಾಡಲು ಹೊರಟಿದ್ದೇವೆ ಅಂತಾ.ಅದರ ಜೊತೆಗೆ ತೇಜಸ್ವಿಯವರ ಭಯಂಕರ ಮೂಡಿನ ಬಗ್ಗೆ ಎಲ್ಲೋ ಓದಿದ-ಕೇಳಿದ ನೆನಪು.

ಇವರನ್ನು ನೋಡಿದ ತೇಜಸ್ವಿ ಮತ್ತು ಅವರ ಪತ್ನಿ ರಾಜೇಶ್ವರಿಯವರು ತುಂಬಾ ಪ್ರೀತಿಯಿಂದ ಕರೆದು ಮಾತಾಡಿಸಿದ್ದಾರೆ. ನನ್ನ ಹುಡುಗಿಯನ್ನು ನೋಡಿ 'ನೀನು ಅಲ್ಲಿ ಕಾಲೇಜ್‍ನಲ್ಲಿ ಟ್ರೈನಿಂಗ್ ಕೊಡ್ತಾ ಇದೀಯಾ, ಚಿಕ್ಕ ಹುಡುಗಿ ತರ ಇದಿಯಾ' ಅಂತಾ ತೇಜಸ್ವಿ ತಮಾಷೆ ಮಾಡಿದರಂತೆ. ನಂತರ ನನ್ನಾಕೆ ಅದು ಇದು ಮಾತಾಡುತ್ತ ತೇಜಸ್ವಿಯವರ ಸ್ಕೂಟರ್ ಬಗ್ಗೆ ಕೇಳಿದ್ದಾಳೆ. ಮೂಡಿಗೆರೆಯಲ್ಲೇ ಪ್ರಖ್ಯಾತವಾದ, ೨೦ಕ್ಕೂ ವರ್ಷ ಹಳೆಯದಾದ ಅವರ ಆ ಸ್ಕೂಟರ್ ಇತಿಹಾಸ ಸಿಕ್ಕಿದೆ !

ನಂತರ ಅವರು ತೆಗೆದ ಕಾಡು-ಹಕ್ಕಿಗಳ ಪೋಟೋ ನೋಡಿದ್ದಾಳೆ. ನನ್ನ ಹುಡುಗಿ ಅವರ ಪ್ರಕಾಶನದಲ್ಲಿ ಅವರ ಕೆಲವು ಪುಸ್ತಕ ತೆಗೆದುಕೊಂಡಿದ್ದಾಳೆ. ಅವಳ ಹತ್ತಿರ 'ಅಣ್ಣನ ನೆನಪು' ಇದ್ದರೂ ತೇಜಸ್ವಿಯವರ ಆಟೋಗ್ರಾಪ್‍ಗಾಗಿ ಮತ್ತೆ ಆ ಪುಸ್ತಕ ತೆಗೊಂಡು ಅವರ ಹತ್ತಿರ ಆಟೋಗ್ರಾಪ್ ಕೇಳಿದ್ದಾಳೆ. ಅವರು ಸಂತೋಷದಿಂದ ಅದಕ್ಕೆ ಸಹಿ ಹಾಕಿಕೊಟ್ಟಿದ್ದಾರೆ. ನಂತರ ಅವರ ಮನೆಯ ಸುತ್ತವಿರುವ ವಿವಿಧ ಹಕ್ಕಿಗಳ ವಿವರಣೆ ಸಿಕ್ಕಿದೆ.ನನ್ನ ಹುಡುಗಿ ಅವರ ಪತ್ನಿ ರಾಜೇಶ್ವರಿಯವರೊಂದಿಗೆ ತೇಜಸ್ವಿಯವರ ಜೊತೆ ಜೀವನದ ಅನುಭವಗಳ ಬಗ್ಗೆ ಹರಟಿದ್ದಾಳೆ. ಅವರ ತೋಟದಲ್ಲಿ ಯಾವುದೋ ಗಿಡದ ರುಟಿಂಗ್ ಮಾಡಿಕೊಟ್ಟಿದ್ದಾಳೆ.

ಕೊನೆಗೆ ಅಳುಕುತ್ತಲೇ ಕ್ಯಾಮರ ಹೊರತೆಗೆದು ತೇಜಸ್ವಿಯವರಿಗೆ ಅವರ ಜೊತೆ ಪೋಟೋ ತೆಗೆಸಿಕೊಳ್ಳಬೇಕೆಂದಿದ್ದಾಳೆ.ಅವರು ಸಂತೋಷವಾಗಿ ಒಪ್ಪಿಕೊಂಡು ಪೋಟೋಗೆ ಪೋಸ್ ಕೊಟ್ಟು ಇನ್ನೇನೂ ಕ್ಲಿಕಿಸಬೇಕೆಂದಾಗ ಕ್ಯಾಮರದ ಬ್ಯಾಟರಿ ಖಾಲಿಯಾಗಬೇಕೇ? ಆಗಿದ್ದೆನೆಂದರೆ ನನ್ನ ಹುಡುಗಿ-ಅವಳ ಸ್ನೇಹಿತೆ ತೇಜಸ್ವಿಯವರ ಎಸ್ಟೇಟ್-ಅವರ್‍ಅ ಪತ್ನಿ ಜೊತೆ ಪೋಟೋ ಕ್ಲಿಕಿಸುವ ಭರದಲ್ಲಿ ಬ್ಯಾಟರಿ ಸ್ಥಿತಿ ಮರತೇ ಬಿಟ್ಟಿದ್ದಾರೆ.ತೇಜಸ್ವಿಯವರ ಹತ್ತಿರ ಪೋಟೋ ತೆಗೆಸಿಕೊಳ್ಳುವಾಗ ಬ್ಯಾಟರಿ ಕೈಕೊಟ್ಟಿದೆ.

ತೇಜಸ್ವಿಯವರು ತಕ್ಷಣವೇ ತಮ್ಮ ಕ್ಯಾಮರ ಹೊರತೆಗೆದು ಅದರಲ್ಲಿ ಪೋಟೋ ತೆಗೆದುಕೊಳ್ಳುವಂತೆ ಹೇಳಿದರಂತೆ.ಅವರ 'ಉದ್ದದ' ಹೈ-ಟೆಕ್ ಕ್ಯಾಮರ ಹೇಗೆ ಉಪಯೋಗಿಸುವುದು ಅಂತಾನೂ ಹೇಳಿಕೊಟ್ಟು, ನಂತರ ಇವರ ಜೊತೆ ಪೋಟೋ ತೆಗೆಸಿಕೊಂಡಿದ್ದಾರೆ.ನನ್ನ ಹುಡುಗಿ-ಅವಳ ಸ್ನೇಹಿತೆ ಅಲ್ಲಿಂದ ಮರಳುವಾಗ ತೇಜಸ್ವಿ ದಂಪತಿಗಳಿಂದ 'ಆವಾಗವಾಗ ಬಂದು ಹೋಗ್ತಾ ಇರೀ' ಅಂತಾ ಕೇಳಿ ನನ್ನ ಹುಡುಗಿಗೆ ಸ್ವರ್ಗಕ್ಕೆ ಮೂರೇ ಗೇಣು.

ವಾಪಾಸ್ ಬರುವಾಗ ಅವಳ ಸ್ನೇಹಿತೆ 'ಎನೇ ಮಾರಾಯ್ತಿ, ತೇಜಸ್ವಿಯವರನ್ನು ಹಾಗೇ ನೋಡುತ್ತಾ ಇದ್ದೆ..ನಿನ್ನ ಹುಡುಗನ್ನು ಯಾವಾಗಲಾದರೂ ಹಾಗೇ ನೋಡಿದ್ದೋ ಇಲ್ವೋ !' ಅಂತಾ ಛೇಡಿಸಿದಳಂತೆ.

ಅವತ್ತು ಪೋನ್‍ನಲ್ಲಿ ತೇಜಸ್ವಿ ಬಿಟ್ಟರೆ ಬೇರೆ ಎನೂ ಮಾತೇ ಇಲ್ಲಾ. ಮೊದಲೇ ಅವರ ಅಭಿಮಾನಿಯಾಗಿದ್ದ ನನ್ನಾಕೆ ಅವತ್ತು ಸಿಕ್ಕಾಪಟ್ಟೆ ಖುಷಿಯಾಗಿದ್ದಳು.

ಅವಳ ಮಾತುಗಳಲ್ಲೇ ಕೇಳಿ ತೇಜಸ್ವಿ ಹೇಗೆ ಅನಿಸಿದರು ಅಂತಾ..

"ಅವರು ಜನರೊಂದಿಗೆ ಸರಿಯಾಗಿ ಮಾತಾಡೊಲ್ಲಾ-ಬೆರೆಯೊಲ್ಲಾ ಅಂತಾ ಕೇಳಿದ್ದೆ-ಓದಿದ್ದೆ..ಅವರು ಇಷ್ಟು ಆತ್ಮೀಯವಾಗಿ ಮಾತಾಡಿಸಿದರು..ಅವರದೇ ಆದ ಒಂದು ಸುಂದರ ಲೋಕ ಕಟ್ಟಿಕೊಂಡಿದ್ದಾರೆ ಅವರು ಅಲ್ಲಿ. ಅವರು ಎಷ್ಟು ಚೆನ್ನಾಗಿ ಪೋಟೋ ತೆಗೆದಿದ್ದಾರೆ ಗೊತ್ತಾ.ಅವರ ಎಸ್ಟೇಟ್‍ ಸುತ್ತ ಎಷ್ಟೊಂದು ವಿಧವಿಧದ ಹಕ್ಕಿಗಳಿವೆ. ಅವರು ಅವುಗಳ ಪೋಟೋ ಹೇಗೆ ತೆಗೆದಿದಾರೆ ಗೊತ್ತಾ...ಅಬ್ಬಾ..ಅವರಿಗೆ ಕಂಪ್ಯೂಟರ್ ಬಗ್ಗೆ ಎಷ್ಟೆಲ್ಲಾ ಗೊತ್ತು ! ಅದೇನೋ ಕಂಪ್ಯೂಟರ್‌ನಲ್ಲಿ ಕನ್ನಡ ಅಳವಡಿಕೆ ಮಾಡ್ತಾ ಇದ್ದರು.ಅವರು ಇಷ್ಟು ವಯಸ್ಸಲ್ಲಿ ಎಷ್ಟು ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.ನಿಮಗೆ ಗೊತ್ತಾ.. ರಾಜೇಶ್ವರಿ ಅಂಟಿದು-ತೇಜಸ್ವಿಯವರದು ಲವ್ ಮ್ಯಾರೇಜ್... ಮುಂದಿನ ಸಲ ಹೋದಾಗ ಅವರ ಕ್ಯಾಮರದಲ್ಲಿರುವ ಅವರ ಜೊತೆ ತೆಗೆಸಿಕೊಂಡ ಪೋಟೋಗಳನ್ನು ತೆಗೆದುಕೊಂಡು,ಹಾಗೇ ಬರುವಾಗ ತೇಜಸ್ವಿಯವರಿಗೆ ಬಲು ಇಷ್ಟದ ಅಣಬೆಗಳನ್ನು ತರ್ತೀನಿ ಅಂತಾ ಹೇಳಿಬಂದೆ"

ಅಮೇಲೆ ಮತ್ತೆ ಯಾವಾಗಲೋ ಮಾತಾಡುವಾಗ ನಾನು ಕೇಳಿದೆ 'ತೇಜಸ್ವಿಯವರನ್ನು-ರಾಜೇಶ್ವರಿ ಅಂಟಿನಾ ನಮ್ಮ ಮದುವೆಗೆ ಕರೆಯೋಣವಾ'. ಅದಕ್ಕೆ ನನ್ನ ಹುಡುಗಿ 'ಕರಿಬಹುದು, ಆದರೆ ತೇಜಸ್ವಿಯವರು ಬಹುಷಃ ಬರೋ ಸಾಧ್ಯತೆ ತುಂಬಾ ಕಡಿಮೆ ರೀ..ಅವರು ಇಂತಹ ಕಾರ್ಯಕ್ರಮಗಳಿಗೆ ಹೋಗೋದು ಕಡಿಮೆಯಂತೆ' ಅಂದಿದ್ದಳು.

ಇಷ್ಟು ಆಗಿ ಕೆಲವು ದಿನಕ್ಕೆ ಇವಳ ಕಾಲೇಜ್‍ನಲ್ಲಿ 'ಕೀಟ ಪ್ರದರ್ಶನ'ಕ್ಕೆ ತೇಜಸ್ವಿ ಬಂದಿದ್ದರಂತೆ.ಪ್ರದರ್ಶನದ ನಡುವೆ ನನ್ನ ಹುಡುಗಿ ಎದುರಿಗೆ ಸಿಕ್ಕಾಗ 'ಯಾಕೋ ಮನೆ ಕಡೆ ಬಂದೇ ಇಲ್ಲಾ.ಅವತ್ತು ನೀನು ಮಾಡಿದ ರುಟಿಂಗ್ ಸರಿಯಾಗಿ ಮಾಡಿರಲಿಲ್ಲ ಅನಿಸುತ್ತೆ' ಅಂದರಂತೆ. ತೇಜಸ್ವಿ ಇವಳ ಜೊತೆ ಹೀಗೆ ಆತ್ಮೀಯವಾಗಿ ಮಾತಾಡೋದು ಕೇಳಿ ಅಲ್ಲಿದ್ದವರೆಲ್ಲಾ ಎಷ್ಟು ವರ್ಷದ ಪರಿಚಯವೋ ಅಂದುಕೊಂಡಿರಬಹುದು.

ಇನ್ನೊಂದು ಸಲ ಪೋನ್‍ನಲ್ಲಿ ನನ್ನಾಕೆಗೆ ಕೇಳಿದೆ 'ನಾನು ಅಲ್ಲಿಗೆ ಬಂದಾಗ ತೇಜಸ್ವಿಯವರನ್ನು ಭೇಟಿಮಾಡಿಸೇ'.ಅದಕ್ಕೆ 'ಆಯ್ತು ನೋಡೋಣಾ' ಅಂತಾ ನನ್ನ ಹುಡುಗಿಯ ಬಿಂಕ !

ಮೊನ್ನೆ ದಿನ ಮಾತಾಡಬೇಕಾದರೆ ಯಾಕೋ ಮಾತು ತೇಜಸ್ವಿಯವರ ಬಗ್ಗೆ ತಿರುಗಿತು.ನಾನು ನನ್ನ ಹುಡುಗಿಗೆ ತೇಜಸ್ಚಿಯವರ ಮನೆಗೆ ಮತ್ತೆ ಹೋಗಿಬಂದೆಯಾ ಅಂದೆ.ಅದಕ್ಕೆ ಅವಳು 'ಇಲ್ಲಾರೀ, ಅವರ ಇಷ್ಟದ ಅಣಬೆ ಪ್ಯಾಕ್ ಮಾಡಿಕೊಂಡಿದ್ದೆ ಎರಡು ಸಲನೂ ಎನೋ ಕೆಲಸದಿಂದ ಹೋಗೋಕೇ ಆಗಲಿಲ್ಲ. ಮುಂದಿನವಾರ ಅಣಬೆ ತಗೊಂಡು ಅವರನ್ನು ನೋಡಿಕೊಂಡು ಬರ್ತಿನಿ' ಅಂದಿದ್ದಳು.ನಾನು ಅವಾಗ 'ನಾನು ಬಂದಾಗ, ನಾವಿಬ್ಬರು ಹೋಗಿ ನಿಮ್ಮ 'ಅಂಕಲ್' ಭೇಟಿಯಾಗೋಣ' ಅಂದಿದ್ದೆ.

ಈಗ ನೋಡಿದರೆ ಅಣಬೆ ತಗೊಂಡು ಹೋಗಿ ಕೊಟ್ಟರೆ...ಇಷ್ಟಪಡೋ ಅವರೇ ಇಲ್ಲಾ...

ಅವರ ಸಾವಿನ ಸುದ್ದಿ ಕೇಳಿದ ನಂತರ ನನ್ನ ಹುಡುಗಿಗೆ ಪೋನ್ ಮಾಡಿದಾಗ ಅವಳ ಧ್ವನಿಯಲ್ಲಿ ಇನ್ನೂ ಶಾಕ್ ಇತ್ತು,ಹಾಗೇ ಇನ್ನೊಮ್ಮೆ ನೋಡಲ್ಲಿಕ್ಕಾಗಲಿಲ್ಲ ಎನ್ನುವ ಕೊರಗು. ಅವರ ಇಷ್ಟದ ಅಣಬೆ ಅವರಿಗೆ ಕೊನೆಗೂ ತಗೊಂಡು ಹೋಗಿ ಕೊಡಲಿಲ್ಲ ಎನ್ನೋ ಕೊರಗು. ಬಹುಷಃ ಅದು ಅವಳಿಗೆ ತುಂಬಾ ದಿನ ಕಾಡುತ್ತೆ..

ಸುದ್ದಿ ಕೇಳಿದ ತಕ್ಷಣ ಅವರ ಮನೆಗೆ ಹತ್ತಿರವೇ ಇರುವ ಕಾಲೇಜ್ ಕ್ಯಾಂಪಸ್‍ನಿಂದ ಇವರೆಲ್ಲಾ ಅಲ್ಲಿಗೆ ಧಾವಿಸಿಹೋದರಂತೆ.ನನ್ನ ಹುಡುಗಿ ತೇಜಸ್ವಿಯವರಿಗೆ ಹೇಳಿದಂತೆ ಮತ್ತೆ ಅವರ ಮನೆಗೆ ಹೋಗಿದ್ದಾಳೆ..

ಆದರೆ ರುಟಿಂಗ್ ಬಗ್ಗೆ, ಪಕ್ಷಿಗಳ ಬಗ್ಗೆ, ಗಿಡಗಳ ಬಗ್ಗೆ ಹೇಳೋಕೆ ಅಲ್ಲಿ ಅವಳ 'ಅಂಕಲ್' ಈಗ ಅಲ್ಲಿರಲಿಲ್ಲ..

ಅಲ್ಲಿ ಇದದ್ದು ಕೇವಲ 'ನಿರುತ್ತರ' ..

20 comments:

Sushrutha Dodderi said...

ತೇಜಸ್ವಿಯ ಅಗಲಿಕೆ ಎಂಥಾ ದುಃಖದ ಸಂಗತಿಯಾಗಿದೆ ಎಂದರೆ ನಿಮ್ಮ ಹುಡುಗಿಯ ಊರು ಯಾವುದು ಎಂಬ ಗುಟ್ಟು ತಿಳಿದ ಖುಷಿಯನ್ನೂ ನಿಮ್ಮೊಂದಿಗೆ ಒಂದಿಷ್ಟು ಗೇಲಿ ಮಾಡಿ ಮಜಾ ಮಾಡಲು ಮನಸ್ಸು ಬರುತ್ತಿಲ್ಲ.... ;(

Mahantesh said...

nimma hudagi khaMdita punya mAdidru shiv....poornachandrariMda mayalok -2 yavaga barutte aMta kayita idre are niguDavagi kanmare aagibitru...tumba bejarru...kaleda eraDu -mooru dinagaliNda manadalli,maMdaNNa,karate Manj.kariya,pyara ,maara ,kiwi ,kaadu,tejeshwi .....

Shiv said...

ಸುಶ್ರುತ,
ಹೌದು ಕಣೋ...ತುಂಬಾ ಭಾರವಾಗಿದೆ ಮನಸ್ಸು..

ಮಹಾಂತೇಶ್,
ನನ್ನ ಹುಡುಗಿ ತೇಜಸ್ವಿಯವರನ್ನು ಭೇಟಿ ಮಾಡಿದ ಮೇಲೆ ಹೇಳ್ತಾ ಇದ್ದಳು ಅವಳು ಮೂಡಿಗೆರೆಗೆ ಹೋಗಿದ್ದಕ್ಕೂ ಸಾರ್ಥಕವಾಯ್ತು ಅಂತಾ.

ಮಾಯಲೋಕ...ಇನ್ನೆಲ್ಲಿ??

VENU VINOD said...

ತೇಜಸ್ವಿಯವರ ಬಿಳಿಗಡ್ಡದಷ್ಟೇ ಆಪ್ಯಾಯಮಾನವಾದ ನುಡಿನಮನವಿದು

ಶ್ರೀನಿಧಿ.ಡಿ.ಎಸ್ said...

ಇನ್ನು ಕೂಡಾ ಈ ಶಾಕ್‍ನಿಂದ ಹೊರಬರೋಕೆ ಆಗಿಲ್ಲ..
ಇನ್ನೊಬ್ಬ ತೇಜಸ್ವಿ ಸಿಗಲಾರರು ನಮಗೆ..

ಚೆನ್ನಾಗಿ ಬರೆದಿದ್ದೀರಿ ಶಿವ್..

Shiv said...

ವೇಣು,
ಬಿಳಿಗಡ್ಡದ ಮರೆಯಲ್ಲಿದ್ದ ಪೂರ್ಣಚಂದಿರ..
ಈಗ ಲೋಕದಿಂದ ಮರೆಯದ ಪೂರ್ಣಚಂದಿರ

ಶ್ರೀನಿಧಿ,
ಅದೊಂದು ಬಹುದಿನದವರೆಗೆ ಅರಗಿಸಿಕೊಳ್ಳಲಾಗದ ಸತ್ಯ

Unknown said...

ಶಿವ್,
ಹಿ೦ದಿನ ದಿನ ನಾನು ಶೃ೦ಗೇರಿಗೆ ಹೋಗಿದ್ದೆ. ಬೆಳಿಗ್ಗೆ ದರ್ಶನ ಮುಗಿಸಿ ಪತ್ರಿಕೆ ನೋಡಿದಾಗಲೇ ಗೊತ್ತಾಗಿದ್ದು. ತಕ್ಷಣ ಕುಪ್ಪಳ್ಳಿಗೆ ಹೋದೆ. ನಾನು ನನ್ನ ಜೀವಮಾನದಲ್ಲಿ ಒಮ್ಮೆಯೂ ಅವರನ್ನು ಭೇಟಿ ಮಾಡಿರಲಿಲ್ಲ. ಆದರೆ, ಅವರ ಕಾದ೦ಬರಿಗಳಿ೦ದ ನನಗವರ ಬಗ್ಗೆ ಗೊತ್ತಿತ್ತು. ತು೦ಬಾ ಒಳ್ಳೆ ವ್ಯಕ್ತಿತ್ವದ, ನೇರ ನೆಡೆ ನುಡಿಯ ಮನುಶ್ಯ.

ಧನ್ಯವಾದ ನಿಮ್ಮ ನುಡಿ ನಮನಕ್ಕೆ.

~ ಹರ್ಷ

Shiv said...

ಶ್ರೀಹರ್ಷ,
ಜೀವನದಲ್ಲಿ ಒಮ್ಮೆಯೂ ಭೇಟಿಯಾಗದಿರಬಹುದು..ಆದರೆ ಅವರ ಕೃತಿಗಳ ಮೂಲಕ ಎಷ್ಟು ಜನರ ಬದುಕನ್ನು ಸ್ಪರ್ಶಿಸಿದ್ದರು.

ಸಿಂಧು sindhu said...

ಸಾವನ್ನೂ ತೇಜಸ್ವಿ ತಮ್ಮ ಮುಂದಿನ ಕೃತಿಯಾಗಿಸಿ ಹೋದರಾ..ನಮಗೆ ಬೇಕಾದ ಕಲ್ಪನೆ-ನೆನಪುಗಳಲ್ಲಿ ನಾವು ಅವರನ್ನು ಸ್ಪರ್ಶಿಸಲು..?! ನಿಮ್ಮ ಬರಹ ತುಂಬ ಚೆನ್ನಾಗಿದೆ.

ಅವರನ್ನು ಪ್ರೀತಿಸಿದ ನಮ್ಮೆಲ್ಲರ ಬದುಕಿನಲ್ಲೂ ಅವರು ಸೇರಿಹೋಗಿದ್ದಾರೆ. ಯಾವುದೋ ತಿರುವಿನಲ್ಲಿ ನಗುತ್ತ ಜೊತೆಯಾಗುತ್ತಾರೆ ಅವರ ವಿಸ್ಮಯ ಕೃತಿಗಳ ಹೊಳಪಾಗಿ..

Shiv said...

ಸಿಂಧು ಅವರೇ,

ಅವರ ಕೃತಿಗಳು-ಅವರು ಸೃಷ್ಟಿಸಿದ ಪಾತ್ರಗಳಲ್ಲಿ ಅವರ ನೆನಪುಗಳು ಜೀವಂತವಾಗಿರುತ್ತೆ.

ರಾಜೇಶ್ ನಾಯ್ಕ said...

ಕನ್ನಡ ಸಾಹಿತ್ಯದ ಬಗ್ಗೆ ನನ್ನ ಆಸಕ್ತಿ ಅಷ್ಟಕಷ್ಟೆ. ತೇಜಸ್ವಿಯವರ ಒಂದೇ ಕೃತಿ ನಾನು ಓದಿದ್ದು ಅಂದರೆ ೧೨ನೇ ಕ್ಲಾಸ್ ಓದುತ್ತಿರುವಾಗ ಕನ್ನಡ೨ ವಿಷಯವಾಗಿದ್ದ ಮಂದಣ್ಣನ ಹಾರುವ ಓತಿ. ಈಗ ಅವರ ಮರಣದ ನಂತರ ಎಲ್ಲಾ ಬ್ಲಾಗ್ ಗಳಲ್ಲಿಯೂ ಅವರ ವಿಷಯವೇ ಇರುವಾಗ ಇದ್ದಾಗ ತಿಳಿದಕ್ಕಿಂತಲೂ ಇಲ್ಲದಾಗ ಹೆಚ್ಚು ತಿಳಿದಂತೆ ಅನಿಸುತ್ತಿದೆ. ತೇಜಸ್ವಿಯವರ ಬಗ್ಗೆ ಕಳೆದ ವಾರದಲ್ಲಿ ನಾನು ಓದಿದ ಉತ್ತಮ ಬರಹಗಳಲ್ಲಿ ನಿಮ್ಮದೊಂದು. ಧನ್ಯವಾದಗಳು.

Shiv said...

ರಾಜೇಶ್,
ಪಾತರಗಿತ್ತಿಗೆ ಸ್ವಾಗತ !

ಮಂದಣ್ಣನ ಹಾರುವ ಓತಿ ಬಹುಷಃ ಹೆಚ್ಚು ಜನ ಓದಿರಬಹುದಾದ ತೇಜಸ್ವಿಯವರ ಕೃತಿಗಳಲ್ಲೊಂದು..

mouna said...

naanu shaleyallidaaga, naa parisarada kathegalu odiddu unTu, after that, we planned to tour shivamogga and tirthahaLLi(which didn't happen), and i was so adament on visiting tejaswi's house, and i was bowled over by his daughter, sushmitha's innocent words... eega my father pulls my leg over this issue :D

Shiv said...

ಮೌನ,
ನೀವು ಅವರ ಮಗಳ ಮಾತುಗಳನ್ನು ಯಾವಾಗ ಕೇಳಿದ್ದು ..ತೇಜಸ್ವಿಯವರನ್ನು ನೋಡಲು ಹೋಗಬೇಕಿಂದಿರೋ ಅಥವಾ ಅವರ ಪುತ್ರಿಯ ಮಾತು ಕೇಳಲೋ?

Satish said...

ಬಹಳ ಆತ್ಮೀಯವಾದ ಬರಹ - ತೇಜಸ್ವಿಯವರು ಮೂಡಿಗೆರೆಯ ಚೈತನ್ಯವಾಗಿದ್ದರು - ಅಲ್ಲಿ ಇದ್ದದ್ದು ಕೇವಲ ನಿರುತ್ತರ ಎನ್ನುವುದು ಬಹಳ ಇಷ್ಟವಾಯಿತು.

Shiv said...

ಸತೀಶ್,
ವಂದನೆಗಳು
ನಾನು ಕೇಳಿದ ಹಾಗೆ ಮೂಡಿಗೆರೆಯ ಪ್ರತಿಯೊಬ್ಬರಿಗೆ ಅವರ ಬಗ್ಗೆ ಗೊತ್ತಿತ್ತು..ಆಪಾರ ಅಭಿಮಾನ-ಒಂದು ಹೆಮ್ಮ ಇತ್ತು

mouna said...

illa, parisarada katheyalli, there's a story called 'shushmitha mattu hakki mari', i was referring to her dialogues from there :p

swathaha avaru maatu aaDidahaage anisittu..

Shiv said...

ಮೌನ,
ಓ..ಹಾಗೇ..ಹಕ್ಕಿಮರಿ ಕತೆ ಓದಿ ಪ್ರಭಾವಿತರಾಗಿದ್ದು ನೀವು :)
ಅವರನ್ನು ಭೇಟಿಯಾಗಿ ಎನು ಹೇಳುಬೇಕು ಅಂದುಕೊಂಡಿದ್ದೀರಿ?

Anveshi said...

ನುಡಿನಮನ ಆಪ್ಯಾಯಮಾನ

ಈ ಬರಹದಲ್ಲೂ ನಿಮ್ಮ ಹುಡುಗಿಯೇ ನಲಿದಾಡುತ್ತಾ ಇರೋದು ಕಾಕತಾಳೀಯ. :)

Shiv said...

ಅಸತ್ಯಿಗಳೇ,

ಚಂದ್ರನ ಸುತ್ತ ತಿರುಗೋ ಉಪಗ್ರಹ ತರ ನಾನಾಗಿದೀನಿ !
ನಿಮ್ಮ ಮೆಚ್ಚುಗೆಗೆ ವಂದನೆಗಳು