Showing posts with label Memories. Show all posts
Showing posts with label Memories. Show all posts

Monday, May 14, 2007

ಒಮ್ಮೆ ನೋಡಿದರೆ ಇನ್ನೊಮ್ಮೆ !

"ನಟ ಸಾರ್ವಭೌಮ, ಗಾನ ಗಂಧರ್ವ ಡಾಕ್ಟರ್ ರಾಜ್ ಕುಮಾರ್ ಅಭಿನಯಿಸಿರುವ ,ಇಂಪಾದ ಹಾಡುಗಳಿಂದ,ಮಧುರವಾದ ಸಂಗೀತದಿಂದಲೂ,ಭಯಂಕರ ಹೋರಾಟಗಳಿಂದಲೂ ಒಡಗೂಡಿರುವ ಸಂಪೂರ್ಣ ಪ್ರಮಾಣಿತ ಸಿನಿಮಾಸ್ಕೋಪ್ ಕನ್ನಡ ಚಲನಚಿತ್ರ- ಅದೇ ಕಣ್ಣು...ಅದೇ ಕಣ್ಣು.

ದಿನಾ ಮೂರು ಆಟಗಳು. ಇಂದೇ ಬಂದು ನೋಡಿರಿ ನಿಮ್ಮ ನೆಚ್ಚಿನ ಜಯಶ್ರೀ ಚಿತ್ರಮಂದಿರದಲ್ಲಿ. ಮರೆತು ನಿರಾಶರಾಗಿದೀರಿ,ಚಿತ್ರಕಲಾ ರಸಿಕರೇ.ಒಮ್ಮೆ ನೋಡಿದರೆ ಇನ್ನೊಮ್ಮೆ, ಇನ್ನೊಮ್ಮೆ ನೋಡಿದರೆ ಮೊಗದೊಮ್ಮೆ ನೋಡಲೇಬೇಕು ಎನಿಸುವ ಚಿತ್ರ..ಅದೇ ಕಣ್ಣು"

ಈಗಂತ ಆ ಆಟೋ ಊರಿನ ಬೀದಿಗಳಲ್ಲಿ ಸುತ್ತಾಡುತ್ತ ಸಿನಿಮಾ ಬಂದ ಸುದ್ದಿ ಜಾಹೀರುಗೊಳಿಸುತ್ತಿದ್ದರೆ, ಒಂದು ಕ್ಷಣ ಕೆಲಸ ನಿಲ್ಲಿಸಿ ಎಲ್ಲರೂ ಆ ಆಟೋ ಕಡೆಗೆ ನೋಡುವವರೆ. ಆಟೋದ ಹಿಂದುಗಡೆ ಆ ಸಿನಿಮಾದ ಪೋಸ್ಟರ್. ಆಟೋದಲ್ಲಿ ಕುಳಿತು ಸಿನಿಮಾದ ಬಗ್ಗೆ, ಅದರ ಬಗ್ಗೆ ಒಂದೆರಡು ಸಾಲಲ್ಲೇ ಹೇಳುವ ಅದೇ ಪರಿಚಿತ ಧ್ವನಿ.

ಆ ಊರಲ್ಲಿ ಯಾವ ಸಿನಿಮಾ ಬಂದರೂ, ಅದರ ವರ್ಣನೆ ಎಲ್ಲರ ಕಿವಿಯಲ್ಲಿ ಬೀಳ್ತಾ ಇದದ್ದು, ಮೇಲಿನ ಸಾಲುಗಳಲ್ಲೇ, ಅದೇ ಧ್ವನಿಯಲ್ಲಿ. ಸಿನಿಮಾದ ಹೆಸರು ಬದಲಾಗುತಿತ್ತು, ನಟ-ನಟಿಯರ ಹೆಸರು, ಸಿನಿಮಾ ಮಂದಿರದ ಹೆಸರು ಬದಲಾಯಿಸಿ ಮತ್ತೆ ಅದೇ ಗೊತ್ತಿರುವ ಸಾಲುಗಳು..'ಒಮ್ಮೆ ನೋಡಿದರೆ ಇನ್ನೊಮ್ಮೆ..'

ಅದಕ್ಕೂ ಮೊದಲ ಸಿನಿಮಾ ಪ್ರಚಾರಕ್ಕೆ ಆಟೋದ ಬದಲು ಎತ್ತಿನ ಗಾಡಿ ಬಳಸುತ್ತಿದ್ದರು ಅನ್ನೊ ನೆನಪು.ಆ ಎತ್ತಿನ ಗಾಡಿಗೆ ಸಿನಿಮಾದ ಎರಡು ಬೃಹತ್ ಪೋಸ್ಟರ್‍ಗಳನು ಹಚ್ಚಿ ಅದರಲ್ಲಿ ಮೈಕ್ ಹಿಡಿದು ಅದೇ ಧ್ವನಿ, ಅದೇ ಸಾಲುಗಳು.

ಹೀಗೆ ಪ್ರಚಾರ ಕೇಳಿ ಸಿನಿಮಾ ನೋಡಲು ಹೋದರೆ ಕೆಲವೊಮ್ಮೆ ವಿಪರೀತ ಜನಜಂಗುಳಿ. ಟಿಕೇಟ್ ಕೊಡುವ ಕೌಂಟರ್‌ಗೆ ಉದ್ದದ ಸಾಲು. ಕೌಂಟರ್ ಎಕ್ಕೆಡೆಗಳಲಿ ತಂತಿಯ ಜಾಲರಿ. ಅದು ಯಾಕೇ ಬೇಕಿತ್ತು ಅನ್ನೋದು ನನಗೆ ತಿಳಿದೇ ಇರಲಿಲ್ಲ, ಅದೊಂದು ಟಿಕೇಟ್ ಕೊಳ್ಳುವಾಗಿನ ಪ್ರಸಂಗ ನೋಡುವವರೆಗೆ.

ನಾನು ಆವಾಗ ಸಿನಿಮಾ ನೋಡುತ್ತಿದ್ದೆ ಕಡಿಮೆ. ಅದ್ಯಾವುದೋ ತುಂಬಾ ಚೆನ್ನಾಗಿದೆ ಅಂತಾ ಗೆಳೆಯರು ಹೇಳಿದ ಮೇಲೆ ಆ ಸಿನಿಮಾ ನೋಡಲು ಹೊರಟರೆ ಅಲ್ಲಿ ಜನ ಜಾತ್ರೆ. ಬಂದದ್ದಾಗಿದೆ ಸಾಲಿನಲ್ಲಿ ನಿಂತು ನೋಡೋಣವೆಂದು ನಿಂತ ಕೆಲವು ಕ್ಷಣದಲ್ಲೇ ಟಿಕೇಟ್ ಕೊಡಲು ಶುರು. ಮೊದಮೊದಲು ಸರಾಗವಾಗೇ ಸಾಗಿದ್ದ ಸಾಲಿನಲ್ಲಿ ತರಲೆ ಶುರುವಾಗಿದ್ದು ಮುಂದಿದ್ದ ಯಾರೋ ಒಬ್ಬ ಸಾಲಿನಲ್ಲಿ ಹಿಂದಿದ್ದ ತನ್ನ ಸ್ನೇಹಿತನನ್ನು ತನ್ನೆಡೆಗೆ ಕರೆದಾಗ. ನನಗೋ ಆಶ್ಚರ್ಯ, ಈ ಜಾಲರಿ ಅಡಿಯಲ್ಲಿ ನಿಂತಿದ್ದೆವೆ, ಅದೂ ಒಬ್ಬರೇ ನಿಲ್ಲುವಷ್ಟು ಸ್ಥಳವಿರುವ ಸಾಲಿನಲ್ಲಿ. ಇವನು ಮುಂದೆ ಹೇಗೆ ಹೋದಾನು ಅಂತಾ. ನನ್ನ ಊಹೆಗೂ ಮೀರಿ, ಆ ವ್ಯಕ್ತಿ ಆ ತಂತಿ ಜಾಲರಿಗೆ ನೇತು ಬಿದ್ದು ಅಲ್ಲಲ್ಲಿ ಗೋಡೆಗೆ ಕಾಲಿಟ್ಟು,ಜಾಲರಿಗೆ ಒದಗಿಸಿದ್ದ ಕಂಬಗಳ ಹಿಡಿದು ನಮ್ಮ ತಲೆಯ ಮೇಲೆ ಸಾಗಿ ಹೋಗಿದ್ದ. ಸ್ಪೈಡರ್ ಮ್ಯಾನ್‍ನಂತೆ ! ಕುಂಭಮೇಳದಲ್ಲಿ ಕಳೆದುಹೋಗಿದ್ದ ಸ್ಪೈಡರ್ ಮ್ಯಾನ್‍ನ ತಮ್ಮನಿರಬೇಕು!

ಅಂದಾಗೆ ಕಳೆದ ವಾರ ಇಲ್ಲಿ ಕನ್ನಡ ಸಿನಿಮಾ ನೋಡೋಕೇ ಹೋದಾಗ ಇದೆಲ್ಲಾ ನೆನಪಾಯ್ತು.

ಮುಂಗಾರು ಮಳೆ ಅನ್ನೋ ಆ ಸೂಪರ್ ಹಿಟ್ ಚಿತ್ರವನ್ನು ಅಮೇರಿಕೆಗೆ ಕರೆ ತಂದಿದ್ದರು. ಅಫೀಸ್‍ನಲ್ಲಿ ಕುಳಿತುಕೊಂಡೇ ಪೋನ್‍ ಮೂಲಕ ಟಿಕೇಟ್ ಕಾಯ್ದಿರಿಸಿ, ನಂತರ ಅವತ್ತೊಂದಿನ ಭಾನುವಾರ ಬಹುತೇಕ ತುಂಬಿದ್ದ ನಾಸ್ ಚಿತ್ರಮಂದಿರದಲ್ಲಿ ಅಷ್ಟೊಂದು ಕನ್ನಡಿಗರೊಂದಿಗೆ ಕುಳಿತು ಚಿತ್ರ ನೋಡಿದ್ದು ಖುಷಿಯೆನಿಸಿತು.

ಚಿತ್ರ ನೋಡಿ ಮುಗಿಸಿ ವಾಪಸ್ ಆಗಬೇಕಾದರೆ ಬೇಡಬೇಡವೆಂದರೂ ನಮ್ಮ ಆ ಊರ ಸಿನಿಮಾ ಸಂಬಂಧಿ ಈ ಕತೆಗಳು ತಲೆಯಲ್ಲಿ ರೀಲ್‍ನಂತೆ ಬರ್ತಾ ಇದ್ದವು.

ಟಿಕೇಟ್ ತಗೋಬೇಕಾದರೆ ನಮ್ಮ ಆ ಊರಲ್ಲಿ ಇನ್ನೊಂದು ಸಾಮಾನ್ಯ ದೃಶ್ಯವೆಂದರೆ ಸಾಲಿನಲ್ಲಿ ನಡೆಯುತ್ತಿದ್ದ ಜಟಾಪಟಿಗಳು. ಯಾರೋ ಸಾಲಿನಲ್ಲಿ ಮಧ್ಯ ಸೇರಕೊಂಡರು ಅಂತಾ ಜಗಳ ಶುರುವಾಗ್ತಿತ್ತು. ಹೌಸ್‍ಫುಲ್ ಸಿನಿಮಾಕ್ಕೆ ಟಿಕೇಟ್ ಕೊಡುವವನ ಗತ್ತು ನೋಡೇ ಆನಂದಿಸಬೇಕು !

ಇನ್ನು ಮಂಗಳವಾರ ಬಂತೆಂದರೆ ಅದು ಬೇರೇನೇ ಕತೆ. ಅವತ್ತು ಊರಲ್ಲಿ ಸಂತೆ. ಅಕ್ಕಪಕ್ಕದ ಹಳ್ಳಿಗಳಿಂದ ಜನ ತರಕಾರಿ-ಕಾಳು-ಬೆಣ್ಣೆ ಇತ್ಯಾದಿಗಳನ್ನು ಸಂತೆಗೆ ತಂದು ಮಾರಿ, ಹಳ್ಳಿಗೆ ಮರಳುವುದಕ್ಕಿಂತ ಮುಂಚೆ ಒಂದು ಸಿನಿಮಾ ನೋಡಿಕೊಂಡು ಹೋಗುವುದು ಪರಿಪಾಠ. ಅವತ್ತು ಎಂತದೇ ಸಿನಿಮಾ ಇರಲಿ ಎಲ್ಲಾ ಹೌಸ್‍ಫುಲ್.

ಇನ್ನು ಟಾಕೀಸ್ ಒಳಗಡೆ ಕತೆಗಳು ಅಷ್ಟೇ ರೋಚಕವಾಗಿರುತ್ತಿದ್ದವು. ಸೀಟ್ ನಂಬರ್ ಇರ್ತಾ ಇಲ್ಲದ ಕಾರಣ ಯಾರು ಎಲ್ಲಿ ಬೇಕಾದರೂ ಕುಳಿತುಕೊಳ್ಳಬಹುದಿತ್ತು. ಕೆಲವರು, ಯಾರು ಬರದೆ ಇದ್ದರೂ, ಸುಮ್ಮನೆ ಒಂದೆರಡು ಸೀಟ್ ಹಿಡಿದುಕೊಂಡು ಸೀಟ್ ಖಾಲಿ ಇದೆಯಾ ಅಂತಾ ಬಂದವರಿಗೆ 'ಇಲ್ಲಿ ಬರ್ತಾರೀ' ಅನ್ನೋದು ಸಾಮಾನ್ಯವಾಗಿತ್ತು. ಹಾಗೇ ಕೆಲವೊಮ್ಮೆ ಇಂಟರ್‌ವೆಲ್ ಮುಂಚೆ ಖಾಲಿ ಇರ್ತಾ ಇದ್ದ ಬಾಲ್ಕನಿ, ಇಂಟರ್‌ವೆಲ್ ನಂತರ ಫುಲ್ ! ನೋಡಿದರೆ ಇಂಟರ್‌ವೆಲ್ ಮುಂಚೆ ಮುಂದಿನ ಸೀಟ್‍ಗಳ ಪಡ್ಡೆಗಳೆಲ್ಲಾ ಅಲ್ಲಿಗೆ ವರ್ಗಾವಾಗಿಬಿಟ್ಟಿರಿತ್ತಿದ್ದವು. ಮೊದಲೇ ಹೇಳಿದ ಹಾಗೆ, ಸೀಟ್ ನಂಬರ್ ಇರ್ತಾ ಇಲ್ಲಾ, ಕೆಲವೊಮ್ಮೆ ಬಾಲ್ಕನಿನೂ ಖಾಲಿ ಹೊಡಿತಾ ಇರ್ತಿತ್ತು.

ಮುಂದಿನಸಾಲು ಸೀಟ್ ಅಂದಕೂಡಲೇ ಅಲ್ಲಿನ ಟೆಂಟ್ ಸಿನಿಮಾಗಳ ನೆನಪಾಯ್ತು. ಅವುಗಳಲ್ಲಿ 'ಗಾಂಧಿ ಸೀಟ್' ಅಂತಾ ಇರ್ತಿತ್ತು. ಪರದೆಯ ಮುಂದಿನ ಮೊದಲ ಕೆಲವು ಸಾಲುಗಳೇ ಈ ಗಾಂಧಿ ಸೀಟ್‍ಗಳು. ಅವಕ್ಕೆ ಯಾಕೇ ಗಾಂಧೀ ಸೀಟ್ ಅಂತಿದ್ದರೂ ಸರಿ ಗೊತ್ತಿಲ್ಲಾ. ಬಹುಷಃ ದುಡ್ಡು ಕಡಿಮೆಯಿದ್ದದಕ್ಕೆ ಇರಬಹುದು. ಆದರೆ ಸಿನಿಮಾ ಪೂರ್ತಿ ಅಸ್ವಾದಿಸುತ್ತಿದ್ದವರು ಈ ಗಾಂಧಿ ಸೀಟ್ ಪ್ರೇಕ್ಷಕರು. ಸಿನಿಮಾದಲ್ಲಿ ವಿಷಿಲ್ ಹಾಕೋದು, ಚಪ್ಪಾಳೆಗಳು, ಕೇಕೇ ಹಾಕೋದು..ಹೆಚ್ಚಿನ ಭಾಗವಹಿಸುವಿಕೆ ಇಲ್ಲಿಂದಲೇ. ಅದರ ಜೊತೆಗೆ ಕೆಲವೊಮ್ಮೆ ಪರದೆಯ ಮೇಲೆ ನಾಲ್ಕಾಣೆ-ಎಂಟಾಣೆ ನಾಣ್ಯಗಳನ್ನು ಎಸೆಯುತ್ತಿದ್ದವರು ಉಂಟು !

ಆ ಊರಿನ ಒಂದೊಂದು ಸಿನಿಮಾ ಮಂದಿರಗಳು ಒಂದೊಂದು ಬ್ರಾಂಡ್ ಆಗಿಬಿಟ್ಟಿದ್ದವು. ಜಯಶ್ರೀ ಹೊಸ ಕನ್ನಡ ಚಲನಚಿತ್ರಗಳಿಗೆ, ಶ್ರೀಕಾಂತ್ ಹೊಸ ಇಂಗ್ಲೀಷ್-ಹಿಂದಿ ಚಿತ್ರಗಳಿಗೆ, ಶೋಭಾ ಹಳೆ ಕನ್ನಡ-ಹಿಂದಿ ಚಿತ್ರಗಳಿಗೆ, ಚಿತ್ರಾ ಹೊಸ ಹಿಂದಿ-ಇಂಗ್ಲೀಷ್ ಚಿತ್ರ ವಿತ್ ಟೆಂಟ್ ಅನುಭವಕ್ಕೆ ಮತ್ತು ಕೃಷ್ಣಾ 'ದೇವರ' ಚಿತ್ರಗಳಿಗೆ ! ಅದರಲ್ಲೂ ಚಿತ್ರಾ ಮತ್ತು ಕೃಷ್ಣಾ ಚಿತ್ರಮಂದಿರಗಳು ಅಲ್ಲಿನ ಹೊಳೆ ಹತ್ತಿರವಿದ್ದು, ಸೇತುವೆ ದಾಟಿ ಚಿತ್ರಾಕ್ಕೆ ಹೋಗಬೇಕಿತ್ತು. ಯಾರಾದರೂ ಗೆಳಯರು ಅಲ್ಲಿ ಕೃಷ್ಣಾ ಚಿತ್ರಮಂದಿರದ ಸುತ್ತಮುತ್ತ ಕಂಡರೆ ಮುಗಿಯಿತು ಮಾರನೇ ದಿನ ಶಾಲೆಯಲ್ಲಿ ಹುಡುಗರೆಲ್ಲಾ ಹಾಗೇ ಕಂಡವನೆಡೆಗೆ 'ಯಾವುದು ಸಿನಿಮಾ?' ಅಂತಾ ಕಣ್ಣು ಮಿಟುಕಿಸಿ ಕೇಳಿದ್ದೇ ಕೇಳಿದ್ದು !

ಅಂದಾಗೆ ನೀವು ಸ್ಪೈಡರ್ ಮ್ಯಾನ್-೩ ನೋಡಿದೀರಾ? ಕಳೆದ ವಾರದಲ್ಲಿ ಐ-ಮ್ಯಾಕ್ಸ್ ಥಿಯೇಟರ್‌ನ ಬೃಹತ್ ಪರದೆ ಮೇಲೆ ನನ್ನ ಸ್ನೇಹಿತರೊಂದಿಗೆ ನೋಡೋಕೇ ಹೋಗಿದ್ದೆ. ಆನ್-ಲೈನ್‍ನಲ್ಲಿ ಸೀಟ್ ಬುಕ್ ಮಾಡಿ, ಅದರ ಜೊತೆ ನಮಗೆ ಬೇಕಾದ ಕೊನೆ ಸಾಲಿನಲ್ಲಿ ಸೀಟ್‍ಗಳನ್ನು ಬುಕ್ ಮಾಡಿದ್ದೆವು.ಐ-ಮ್ಯಾಕ್ಸ್‍ದಲ್ಲಿ ಆ ಸಿನಿಮಾ ನೋಡೋದು ಸೂಪರ್ ಆಗಿತ್ತು!

Thursday, February 22, 2007

ಅದೊಂದು ಸಂಜೆ

ಅದೊಂದು ಸಂಜೆ ಮನಸ್ಸಾನ್ನ ಮತ್ತೆಮತ್ತೆ ಕಾಡುತ್ತೆ..

ಆವತ್ತು ಬೆಳಿಗ್ಗೆಯಿಂದಾಲೇ ಇವತ್ತು ಯಾಕೇ ಬೆಳಗಾಬೇಕಿತ್ತು ಅಂತಾ ಅನಿಸಿತ್ತು. ಯಾಕೆಂದರೆ ನನಗೆ ಆವತ್ತು ಸಂಜೆ ಆಗೋದು ಬೇಕಿರಲಿಲ್ಲ. ಕೊನೆಗೂ ಅದು ಬಂದೇಬಿಡ್ತು.ಆವಾಗ ನಿನ್ನ ಮನದಲ್ಲಿ ಎನು ನಡೆಯುತಿತ್ತೋ ಗೊತ್ತಿಲ್ಲ, ನನ್ನ ಮನಸ್ಸು ಕಡೇ ಪಕ್ಷ ಇನ್ನೊಂದು ದಿವಸ ಸಿಗಬಾರದಿತ್ತೆ ಅನ್ನೋ ಚಟಪಟಿಕೆಯಲ್ಲಿ ಇತ್ತು.

ಟ್ಯಾಕ್ಸಿ ಬಂದು, ಬ್ಯಾಗ್‍ನೆಲ್ಲ ಅದಕ್ಕೆ ಹಾಕಿ ಮನೆಯಿಂದ ಹೊರಡುವಾಗ ನೆನಪಾಗಿದ್ದು ಈ ಸಾಲುಗಳು

ಪಯಣಿಸುವ ವೇಳೆಯಲಿ ಬಂದು ಅಡಿಗೆರಗಿ
ಮುಂದೆ ನಿಂತಳು ನನ್ನ ಕೈ ಹಿಡಿದ ಹುಡುಗಿ
ಇನ್ನೆಂದು ಬರುವಿರೆಂದೆನ್ನ ಕೇಳಿದಳು
ಇನ್ನೊಂದು ತಿಂಗಳಿಗೆ ಎಂದು ಹೇಳಿದೆನು

ನಾನು ಅದೇ ತರ 'ಇನ್ನೊಂದು ತಿಂಗಳಿಗೆ' ಅಂತಾ ನಿನಗೆ ಹೇಳುವ ಹಾಗಿದ್ದರೆ ಏಷ್ಟು ಚೆನ್ನಾಗಿ ಇತ್ತು..

ಏರಪೋರ್ಟ್‍ಗೆ ಹೋಗುವಾಗ ನಡುವೆ ನಡುವೆ 'ಶುಭ ಪ್ರಯಾಣ' ಹೇಳೋಕೇ ಬರ್ತಾ ಇದ್ದ ಪೋನ್‍ಕರೆಗಳು, ಸುಮ್ಮನೆ ಯಾಂತ್ರಿಕವಾಗಿ ಪೋನ್ ಮಾಡಿದವರ ಜೊತೆ ಮಾತು.ಸುಮ್ಮನೆ ಕಷ್ಟಪಟ್ಟು ತಂದುಕೊಂಡು ನಗ್ತಾ ಇದ್ದು ನಗೆ.

ನಾನೆಲ್ಲಿ ಇದ್ದೆ? ನಿನ್ನ ಕೈ ಹಿಡಕೊಂಡವನಿಗೆ ಬೇರೆ ಎನೂ ಬೇಕಿರಲಿಲ್ಲ. ನನ್ನ ಕೈಯಲ್ಲಿ ನಿನ್ನ ಕೈ ಇದ್ದಾಗ, ಹಾಗೇ ಅಲ್ಲೇ ಸಮಯ ನಿಂತುಬಿಡಲಿ ಅಂತಾ ಮನಸ್ಸು ಕೂಗ್ತಿತ್ತು. ದಾರಿಯುದ್ದಕ್ಕೂ ಮಾತಿಗಿಂತ ನಮ್ಮಲ್ಲಿ ಮೌನನೇ ಜಾಸ್ತಿ ಇತ್ತಲ್ವ ಅವತ್ತು.

ನಂಗೆ ಎನೂ ಬೇಕಿರಲಿಲ್ಲ..ನಿನ್ನ ಸಾನಿಧ್ಯ ಒಂದೇ ಸಾಕಿತ್ತು. ನಿನ್ನ ಒಂದು ಸ್ಪರ್ಶ ಸಾಕಿತ್ತು.

ಟ್ಯಾಕ್ಸಿ ಹಾಗೇ ಸುಮ್ಮನೆ ಹೋಗ್ತಾನೇ ಇರಲಿ ಅಂತಾ ಎಷ್ಟು ಅನಿಸ್ತಾ ಇತ್ತು. ಎರಪೋರ್ಟ್ ಹತ್ತಿರಕ್ಕೆ ಬಂದಾಗೆ ಅದೊಂದು ಹೇಳಲಾಗದ ಒಂದು ಭಾವನೆ ಆವರಿಸಿಕೊಂಡುಬಿಟ್ಟಿತ್ತು.

ಅವತ್ತು ನಿನ್ನ ಜೊತೆ ಕಳೆಯುವ ಒಂದು ನಿಮಿಷಕ್ಕಾಗಿ, ನಿನ್ನ ಜೊತೆ ಮಾತಾಡೋ ಒಂದು ಮಾತಿಗಾಗಿ, ನಿನ್ನ ನೋಡೋ ಒಂದು ಅವಕಾಶಕ್ಕಾಗಿ ನಾನು ಎಷ್ಟು ಪರಿತಪಿಸಿದ್ದೆ...ನೀರಿಂದ ಹೊರಗೆ ತಗೀತಾರೆ ಅಂತಾ ಗೊತ್ತಾದ ಮೀನಿನ ತರ . ಅವತ್ತು ಬಹುಷಃ ಯಾರಾದರೂ ನನಗೆ 'ನಿನ್ನ ಜೀವನದ ಒಂದು ದಿವಸ ಕೊಟ್ರೆ, ಅವಳ ಜೊತೆ ಕಳೆಯೋಕೆ ಇನ್ನೊಂದು ನಿಮಿಷ ಕೊಡಿಸ್ತೀನಿ' ಅಂತಾ ಹೇಳಿದ್ದರೂ, ನಾನು ಹಿಂದೆ-ಮುಂದೆ ನೋಡದೇ ಒಪ್ಪಕೊಳ್ಳತ್ತಿದ್ದೆ.

'ನಿನ್ನೆವರೆಗೆ ನಾ ಯಾರೋ ನೀ ಯಾರೋ ಅಂತಾ ಇದ್ದೆ..'ಆದರೆ ಅಮೇಲೆ ಎನಾಯಿತು?

ಎರಪೊರ್ಟ್ ಬಂದು ಮನಸ್ಸಿಲ್ಲದ ಮನಸಿಂದ ಇಳಿದಿದ್ದೆ. ಲಗೇಜ್ ಚೆಕ್-ಇನ್ ಮಾಡೋ ಉದ್ದಸಾಲು ನೋಡಿ, ಅಲ್ಲಿನ ಪ್ರಯಾಣಿಕರಲಿ ಬಹುಷಃ ಖುಷಿಯಾಗಿದ್ದು ನನಗೊಬ್ಬನಿಗೆ ಅನಿಸುತ್ತೆ ! ಚೆಕ್-ಇನ್ ಮಾಡೋವರೆಗೆ ಮತ್ತೆ ನಿನ್ನ ಜೊತೆ ಇರಬಹುದೆನ್ನುವ ಸಂತಸ. ಆ ಸಾಲಿನಲ್ಲಿ ನನ್ನ ಬ್ಯಾಗ್‍ಗಳನ್ನು ಇಟ್ಟು ಅಲ್ಲಿಂದ ನೀನು ನಿಂತ ಕಡೆ ನಾ ಎಷ್ಟು ಸಲ ಬಂದು ಹೋದೆನೋ ಗೊತ್ತಿಲ್ಲ. ಛೇ,ಕೊನೆಗೂ ನನ್ನ ಸರದಿ ಬಂದೆ ಬಿಡ್ತು ಅಲ್ಲಿ. ಲಗೇಜ್ ಎಲ್ಲಾ ಹಾಕಿ ನಿನ್ನ ಕಡೆ ಬಂದಾಗ, ಯಾವ ಕ್ಷಣವನ್ನು ನಾ ಬೇಡ ಅಂತಾ ಇದ್ದೇನೋ ಅದು ಎದುರಿಗೆ ನಿಂತಿತ್ತು.

ನಿನ್ನನ್ನು ಅಗಲುವ ಕ್ಷಣ..

ಎನು ಹೇಳಬೇಕು, ಎನು ಮಾಡಬೇಕು ಅಂತಾ ತೋಚದ ಕ್ಷಣ. ಸುಮ್ಮನೆ ನಿನ್ನ ಕೈಯನ್ನು ನನ್ನ ಕೈಯಲ್ಲಿ ತಗೊಂಡಿದ್ದೆ. ನನ್ನ ಪ್ರೀತಿ ಹುಡುಗಿ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದೆ. ಭರವಸೆಯ ನಾಳೆಗಳ ಬಗ್ಗೆ ನೆನೆಯುತ್ತಾ ನಿನ್ನ ಕೈ ಅದುಮಿದ್ದೆ..

ನಿನ್ನ ಮನದಲ್ಲಿ ಎನು ಆಗ್ತಾ ಇತ್ತು ಹುಡುಗಿ?

ಭಾರವಾದ ಹೆಜ್ಜೆ ಇಡ್ತಾ ಇಮಿಗ್ರೇಷನ್ ಚೆಕ್ ಕಡೆ ಹೋಗುವಾಗ ತಿರುಗಿ ಒಮ್ಮೆ ನೋಡಿದ್ದೆ. ನೀನು ಅಳುತ್ತಿದ್ದ ಅಮ್ಮನಿಗೆ ನಿನ್ನ ಪ್ರೀತಿ ಕೈಗಳಿಂದ ಸಮಾಧಾನ ಮಾಡ್ತಾ, ಅಲ್ಲಿಂದ ಅವರ ಜೊತೆ ಹೊರಗೆ ಹೋಗೋದಾ ನೋಡ್ತಾ ನಿಂತಿದ್ದೆ.ನೀನು ಮರೆಯಾಗುವರೆಗೆ ಅಲ್ಲೇ ನಿಂತಿದ್ದೆ...

ನಂಗೆ ಗೊತ್ತಿಲ್ಲಾ..ನನ್ನ ಕಣ್ಣು ತೇವವಾಗಿತ್ತಾ ಅಥವಾ ಮನಸು ಅಳ್ತಾ ಇತ್ತಾ..

ಇಮಿಗ್ರೇಷನ್ ಚೆಕ್ ಮುಗಿಸಿ, ತಪಾಸಣೆಯ ನಂತರ ವಿಮಾನ ಇನ್ನೇನೂ ಹತ್ತಬೇಕು ಅನ್ನುವಾಗ, ಈ ಸಾಲು ನೆನಪಾಗಿದ್ದವು..

ಅಲ್ಲಲ್ಲಿ ನಿಂದವಳ ನೋಡುತಡಿಗಡಿಗೆ
ತೆರಳಿದೆನು ವಿರಹದಲಿ ನಿಲ್ದಾಣದೆಡೆಗೆ
ದಾರಿಯಲಿ ಕಂಡೊಬ್ಬ ಹಣ್ಣು ಮಾರುವನು
ಹೊರಟು ಹೋಯಿತು ಬಂಡಿ ಎಂದು ಹೇಳಿದನು
ಹಿಂದುರಿಗಿ ಬಂದೆನ್ನ ಒಂದೆ ಮಾತಿನಲಿ
ತಿಂಗಳಾಯಿತೇ ಎಂದಳೆನ್ನ ಹೊಸ ಹುಡುಗಿ

ಕೆ.ಎಸ್.ನ ಹೇಳಿದಂತೆ ,ಅಲ್ಲಿ ಯಾರಾದರೂ ಹಣ್ಣಿನವನು ಸಿಗ್ತನಾ ಅಂತಾ ನೋಡಿದ್ದೆ, ನನ್ನದೂ ವಿಮಾನ ಹೊರಟು ಹೋಗಿದೆ ಅಂತಾ ಹೇಳ್ತಾನಾ ಅಂತಾ ಕಾದಿದ್ದೆ. ಆಮೇಲೆ ಮನೆಗೆ ಹೋಗಿ, ಬಾಗಿಲು ಬಡಿದು, ನೀನು ಬಂದು, ಬಾಗಿಲಲ್ಲಿ ನಿಂತ ನನ್ನ ನೋಡಿ, ನಿನ್ನ ಪ್ರೀತಿ ತುಂಬಿದ ಬಟ್ಟಲುಗಣ್ಣಗಳಲ್ಲಿ ಆಶ್ಚರ್ಯ ತುಂಬಿಕೊಂಡು 'ತಿಂಗಳಾಯಿತೇ' ಅಂತಾ ಕೇಳೋದು ನೋಡೋಕೆ ಎಷ್ಟು ಚೆನ್ನಾಗಿರುತ್ತೆ ಅಂತಾ ಕನಸು ಕಾಣ್ತಾ ವಿಮಾನದ ಬಾಗಿಲಲ್ಲಿ ನಿಂತಿದ್ದೆ.

ಗಗನಸಖಿ 'ಗುಡ್ ಇವಿನಿಂಗ್..ಗುಡ್ ಇವಿನಿಂಗ್' ಅಂತಾ ಎರಡು ಸಲ ಎಚ್ಚರಿಸಿದಾಗಲೇ ನೆನಪಾಗಿದ್ದು, ಇನ್ನೆಲ್ಲಿ ಬರಬೇಕು,ಎಲ್ಲಿಂದ ಬರಬೇಕು ಹಣ್ಣಿನವನು ಅಂತಾ.

ವಿಮಾನದ ಕೊನೆಯಲ್ಲಿ ಇದ್ದ ನನ್ನ ಸೀಟ್‍ಗೆ ಹೋಗಿ ಆಸೀನಾಗಿದ್ದೆ. ಚೆಕ್-ಇನ್ ಮಾಡುವ ಸಾಲಿನಲ್ಲಿ ನನ್ನ ಮುಂದೆ ಇದ್ದ ಸಹಪ್ರಯಾಣಿಕ, ಈಗ ನನ್ನ ಪಕ್ಕದ ಸೀಟಿನಲ್ಲಿದ್ದ. ಸಾಲಿನಲ್ಲಿದ್ದಾಗ ಹಾಗೇ ಒಂದು ಚಿಕ್ಕ ಹರಟೆ ಆಗಿತ್ತು. ಈಗ ತನ್ನ ಮೊಬೈಲ್‍ನಲ್ಲಿ ಯಾರಿಗೋ ಕರೆ ಮಾಡ್ತಾ ಇದ್ದ. ವಿಮಾನದಲ್ಲಿ ಮೊಬೈಲ್ ಬಳಕೆ ನಿಷೇಧವಿದ್ದರೂ ಇನ್ನೂ ವಿಮಾನ ಶುರುವಾಗಿರದರಿಂದ ಮತ್ತು ನಮ್ಮದು ಕೊನೆ ಸೀಟ್ ಆದ್ದರಿಂದ ಗುಪ್ತವಾಗಿ ಕರೆ ನಡೀತಾ ಇತ್ತು. ಅವನೂ ಕರೆ ಮುಗಿಸುತ್ತಿದ್ದಂತೆ ಇದ್ದ ಚಿಕ್ಕ ಪರಿಚಯದಿಂದ ಅವನ ಮೊಬೈಲ್ ತೆಗೊಂಡು ಮಾಡಿದ್ದು ಕರೆ ನಿನಗೆ. ಸುಮ್ಮನೆ ಒಂದೆರಡು ಕ್ಷಣನಾದರೂ ನಿನ್ನ ಧ್ವನಿ ಕೇಳಬೇಕು ಅನ್ನೋ ಕೊನೆ ಆಸೆ..ಗಗನಸಖಿ ಬಂದು 'ಪ್ಲೀಸ್, ಸ್ವಿಚ್ ಆಫ್ ಮೊಬೈಲ್' ಅಂದಾಗ ಮಾಡಲೇಬೇಕಾಗಿತ್ತು..

ನಂತರ ವಿಮಾನ ಅಲ್ಲಿಂದ ಹಾರಿತ್ತು,ನನ್ನ ಕರಕೊಂಡು.ಅದರೆ ನಾನು ಅಲ್ಲಿ ವಿಮಾನದಲ್ಲಿ ಇದ್ದನಾ?? ಭಾರತಕ್ಕೆ ಬರುವಾಗ ಇದ್ದ 'ನಾನು', ಈಗ ಭಾರತದಿಂದ ಹೋಗುವಾಗ 'ನಾನಗಿರಲಿಲ್ಲ'. ನನ್ನದೇ ಹೃದಯದ ಒಂದು ಭಾಗ ಬಿಟ್ಟು ಹೋಗುವಾಗಿನ ವೇದನೆ ಅದು..

ವಿಮಾನ ತೇಲಿತ್ತು ಆ ಕತ್ತಲ ರಾತ್ರಿಯ ಆಕಾಶದಲ್ಲಿ...

ನಾನು ತೇಲಿದ್ದೆ ನಿನ್ನ ನೆನಪಿನ ಆಗಸದಲ್ಲಿ..


*************************************************
ವಿಕ್ರಾಂತ ಕರ್ನಾಟಕದ ಈ ವಾರದ ಸಂಚಿಕೆಯಲಿ ಈ ಭಾವ ಲಹರಿಯನ್ನು ಪ್ರಕಟಿಸಿದ್ದಕ್ಕೆ ವಿಕ್ರಾಂತದ ಬಳಗಕ್ಕೆ ವಂದನೆಗಳು
*************************************************

Sunday, August 27, 2006

ಗಣಪ ಬಂದ..


ಆನೆ ಮುಖ,ಡೊಳ್ಳು ಹೊಟ್ಟೆ,ಇಲಿಯಂತ ವಾಹನ,ವಿದ್ಯಾ-ಬುದ್ದಿಗೆ ಅಧಿಪತಿ,ಅದರ ಮೇಲೆ ಎಲ್ಲಕ್ಕಿಂತ ಮೊದಲು ಪೂಜೆಗೊಳ್ಳುವವ..

ಹೀಗೆ ಗಣಪನ ಬಗ್ಗೆ ನಮ್ಮ ಕಲ್ವನೆ ಒಂದು ವಿಭಿನ್ನತೆ, ಎನೋ ಕುತೂಹಲ,ಭಯ-ಭಕ್ತಿಯಿಂದ ಕೂಡಿದೆ.ಹಾಗೆಯೇ ನಮ್ಮ ಗಣಪ ಅತ್ಯಂತ designed ದೇವರು.ಗಣಪ ಎಂದರೆ ಕಲಾವಿದರಿಗೆ ಹಬ್ಬ.ಕಲಾವಿದರ ಕಲ್ಪನೆಯ ಪ್ರಕಾರ ಅವನು ಧರಿಸಿರೋ ರೂಪಗಳು-ತೊಟ್ಟ ವೇಷಗಳು ಅನೇಕ. ಇಂತಹ ಎಲ್ಲರಿಗೂ ಪ್ರಿಯನಾದ ಗಣಪನ ಹಬ್ಬ ಕೂಡ ಅವರವರ ಭಾವಕ್ಕೆ ಅವರವರ ಭಕುತಿಗೆ ತಕ್ಕಂತೆ ಆಚರಿಸಲ್ಪಡುತ್ತಿದ್ದೆ.

ನಾವು ಹರಿಹರದಲ್ಲಿ ಇರೋವರೆಗೆ ಅಲ್ಲಿನ ಗಣಪನ ಹಬ್ಬದ್ದು ಒಂದು ವಿಶಿಷ್ಟತೆ ಇತ್ತು.ಅಲ್ಲಿ ನಾವು ಇದದ್ದು ಒಂದು ವಟಾರದ ತರದ ಮನೆ.ಅಕ್ಕಪಕ್ಕದ ಮನೆಯವರೆಲ್ಲ ಸಂಬಂಧಿಗಳೇ..ಚಿಕ್ಕಪ್ಪ-ದೊಡ್ಡಪ್ಪಗಳ ಕುಟುಂಬಗಳು.ಅದೇನು ಆಗುತಿತ್ತೋ ಆ ವಟಾರದಲ್ಲಿ ಯಾವಾಗಲೂ ಸೋದರ ಕುಟುಂಬಗಳ ನಡುವೆ ನಿಲ್ಲದ ಜಗಳಗಳು.ಆದರೆ ಗಣಪನ ಹಬ್ಬ ಬರುತ್ತಿದಂತೆ ಒಂದು ಕದನವಿರಾಮ! ಎಲ್ಲರೂ ಸೇರುತ್ತಿದದ್ದು ಒಟ್ಟಿಗೆ ಆಚರಿಸುತ್ತಿದದ್ದು ಗಣಪತಿ ಹಬ್ಬವೊಂದೇ.

ಹಬ್ಬಕ್ಕೆ ವಾರ ಇದ್ದಂತೆ ನಮ್ಮ ವಟಾರದಲ್ಲಿದ್ದ 'ನಡುಮನೆ' ಅಂತಾ ಕರೆಯುತ್ತಿದ್ದ ಒಂದು ದೊಡ್ಡ ಮನೆಯಲ್ಲಿ ನೆಲಕ್ಕೆ ಸೆಗಣಿ ಬಳಿದು ಸಾರಿಸಿ,ಗೋಡೆಗೆ ಸುಣ್ಣ-ಬಣ್ಣಗಳ ಅಲಂಕಾರ.ಹಬ್ಬಕ್ಕೆ ೧-೨ ದಿವಸ ಇದ್ದಂತೆ ಪೇಟೆಯಿಂದ ಬಣ್ಣದ ಪೇಪರ್ ತಂದು ಅದನ್ನು ವಿವಿಧ ಆಕೃತಿಯ ಸರಪಳಿಯಲ್ಲಿ ಕತ್ತರಿಸುತ್ತಿದ್ದೆವು. ಆ ಬಣ್ಣದ ಕಟ್ಟಿಂಗ್ಸ್ ಅಂಟಿಸಲು ವಿಶೇಷ ತರದ ಅಂಟು ಮನೆಯಲ್ಲಿ ತಯಾರಯಾಗುತಿತ್ತು.ಅ ಬಣ್ಣದ ಕಟ್ಟಿಂಗ್ಸ್ ನ್ನು ಆ ನಡುಮನೆಯ ಜಂತಿಗೆ ರಾತಿಯಿಡೀ ಅಂಟಿಸುತ್ತಿದ್ದೆವು.

ಬಣ್ಣದ ಕಟ್ಟಿಂಗ್ ಅಂಟಿಸಿದ ಮೇಲೆ ಮುಂದಿನ ಕಾರ್ಯ ನಡುಮನೆಯ ಗೋಡೆ ಮೇಲೆ ಒಂದು ಇಂಚು ಬಿಡದೆ ವಿವಿಧ ಕ್ಯಾಲೆಂಡರ್-ಚಿತ್ರಪಟಗಳನ್ನು ಬಡಿಯೋದು.ಅದರಲ್ಲಿ ಬಹುತೇಕ ಕ್ಯಾಲೆಂಡರ್‍ಗಳು ಗಣಪತಿ-ದೇವಾನುದೇವತೆಗಳದು.ಆ ಕ್ಯಾಲೆಂಡರ್ ಎಷ್ಟು ವರ್ಷದ ಕಲೆಕ್ಷೆನ್ನೋ ನಾ ಕಾಣೇ.

ಗಣಪನನ್ನು ಕೂಡಿಸಲು ಗೋಡೆಯಲ್ಲಿ ಒಂದು ದೊಡ್ಡ ಕಿಟಕಿಯಂತ ಗೂಡು.ಅದಕ್ಕೆ 'ಗಣಪನ ಗೂಡು' ಅಂತಾ ಹೆಸರು.ಆ ಗಣಪನ ಗೂಡಿಗೆ ವಿಶೇಷ ಅಲಂಕಾರ.ಗಣಪ ಕೂಡುವ ಪೀಠದ ಹಿಂದೆ ಒಂದು ಬ್ಯಾಟರಿ-ಚಾಲಿತ ಬಣ್ಣದ ಚಿಕ್ಕ ಫ್ಯಾನ್.ಅದು ಸರಿಯಾಗಿ ಗಣಪನ ಕಿರೀಟದ ಹಿಂದೆ ಇದ್ದು ಗಣಪನಿಗೆ ಸ್ಪೆಷಲ್ ಎಪೆಕ್ಟ್! ಇನ್ನು ಗಣಪನ ಗೂಡಿನ ಮುಂದೆ ಮರದ ಹಲಗೆಯನ್ನು ಹಂತ ಹಂತವಾಗಿ ಜೋಡಿಸಿ ಒಂದು ಮೆಟ್ಟಿಲಿನಾಕೃತಿ. ಒಂದು ಮೆಟ್ಟಿಲ ಮೇಲೆ ನಮ್ಮ ಚಿಕ್ಕಪ್ಪ ಮಣ್ಣಿನಿಂದ ಮಾಡಿದ ವಿವಿಧ ಆಕೃತಿಗಳು- ಬೆಣ್ಣೆ ತಿನ್ನುತ್ತಿರುವ ಬಾಲಕೃಷ್ಣ, ಹಾವನ್ನು ಬೇಟ ಆಡುತ್ತಿರುವ ಹದ್ದು,ಹೆಡೆ ಬಿಚ್ಚಿದ ನಾಗರ ಹಾವು ...ಎಲ್ಲವೂ ಲೈಪ್ ಸೈಜ್ ಆಕೃತಿಗಳು.

ಕೊನೆಯ ಸುತ್ತಿನ ಆಲಂಕಾರದಲ್ಲಿ ನಡುಮನೆಯಲ್ಲಿ ವಿವಿಧ ಹೂವಿನ ಗಿಡದ ಕುಂಡಗಳನ್ನು ಇಟ್ಟು, ಕಲರ್ ಬಲ್ಬ್ ಗಳನ್ನು ಹಾಕಿದರೆ ಆಲಂಕಾರ ಒಂದು ಹಂತಕ್ಕೆ ಬಂದಂತೆ!

ಇಷ್ಟೆಲ್ಲ ನಡುಮನೆಯಲ್ಲಿ ಆಗುತ್ತಿದ್ದಂತೆ ಇನ್ನು ಆ ಕಡೆ ಆಡುಗೆ ಮನೆಯಲ್ಲಿ ಗಣಪನ ಮುಂದೆ ಇಡಲು ವಿವಿಧ ತಿಂಡಿಗಳ ತಯಾರಿ.ಚಕ್ಕಲಿ,ಕೋಡುಬಳೆ,ಕರ್ಚಿಕಾಯಿ,ಕಡುಬು,ಶಂಕರಪೊಳ್ಯ..ಒಂದೇ ಎರಡೇ ತಿನಿಸುಗಳು !

ಹಬ್ಬದ ದಿನ ಬೇಗ ಎದ್ದು ತಯಾರಾಗಿ ಗಣಪತಿ ತರಲು 'ಗಣಪತಿ ಮಾಡೋರ' ಮನೆ ಕಡೆ ಪಯಣ.ಅಲ್ಲಿಂದ ಗಣಪನ ಹಿಡಕೊಂಡು ನಮ್ಮ ತಂದೆ ಬರುತ್ತಿದ್ದರೆ , ಅವರ ಮುಂದೆ ಸೋದರ ಸಂಬಂಧಿಗಳಾದ ನನ್ನ ಓರಗೆಯ ಹುಡುಗರದು ಒಂದು ಚಿಕ್ಕ ಸೈನ್ಯ. ದಾರಿಯುದ್ದಕ್ಕೂ 'ವಿಘ್ನೇಶ್ವರ್ ಮಹಾರಾಜ್ ಕೀ ಜೈ' ಅಂತಾ ಕೂಗೋದು. ನಡುನಡುವೆ 'ಬಂದನಪ್ಪ ಬಂದನಪ್ಪ' ಅಂತಾ ಒಬ್ಬರು ಕೂಗಿದರೆ ಉಳಿದವರೆಲ್ಲ ಕೋರಸ್‍ನಲ್ಲಿ 'ಗಣೇಶ ಬಂದ' ಅಂತಾ ಕೂಗೋದು .ಇನ್ನೊಂದು ಪಾಪುಲರ್ ಕೂಗು 'ಗಣಪ ಬಂದ..ಕಾಯಿಕಡುಬು ತಿಂದ' !!

ಗಣೇಶನನ್ನು 'ಗೂಡಿ'ನಲ್ಲಿ ಕುಳ್ಳಿರಿಸಿ, ಎಲ್ಲ ಕುಟುಂಬದವರ ಸಮ್ಮುಖದಲ್ಲಿ ನನ್ನ ತಂದೆಯಿಂದ ಮೊದಲು ಪೂಜೆ-ಮಂಗಳಾರತಿ.ಪೂಜೆ ಕೊನೆಯಲ್ಲಿ ನನ್ನಪ್ಪ 'ಜಯಂನವ ಪಾರ್ವತಿ ಪತಿಹರ' ಅನ್ನುತ್ತಿದ್ದಂತೆ ನಾವೆಲ್ಲ ದ್ವನಿ ಕೂಡಿಸಿ ''ಜಯಂನವ ಪಾರ್ವತಿ ಪತಿಹರ ಮಹಾದೇವ್' ಅಂದು ಕೈಲ್ಲಿದ್ದ ಅಕ್ಷತೆಯನ್ನು ಗಣಪನ ಮೇಲೆ ಹಾಕುತ್ತಿದ್ದೆವು.

ಆಮೇಲೆ ಅಲ್ಲಿ ಪ್ರಸಾದ ವಿನಯೋಗ.ಗಣಪನ ಮುಂದೆ ಕೂತು ಸ್ಪಲ್ಪ ಹೊತ್ತು ಎಲ್ಲರ ಹರಟೆ. ನಂತರ ಅವರವರ ಮನೆಗೆ ಊಟಕ್ಕೆ ತೆರಳುವುದು. ಕೆಲವೊಮ್ಮೆ ಪ್ರೀತಿ ಜಾಸ್ತಿಯಾಗಿ ಒಬ್ಬರನ್ನು ಇನ್ನೊಬ್ಬರ ಮನೆಗೆ ಊಟಕ್ಕೆ ಕರೆದೊಯ್ಯುವುದು ನಡೆಯುತಿತ್ತು !! ಈ ಭಾಂದವ್ಯ ಬೇರೆ ದಿನ ಎಲ್ಲಿ ಮಾಯವಾಗುತಿತ್ತೋ ಅಂದು ಅನಿಸದಿರಲಿಲ್ಲ..

ಈ ನಡುವೆ ಕೆಲವು ವರ್ಷಗಳ ಕಾಲ ನನ್ನ ಸೋದರ ಸಂಬಂಧಿಯೊಬ್ಬ ನಮ್ಮ ವಟಾರದಲ್ಲಿ ತಾನೇ ಗಣಪನ ವಿಗ್ರಹವನ್ನು ಮಾಡತೊಡಗಿದ.ಅವನಿಗೆ ಸಹಾಯ ಮಾಡೋಕೆ ಕುಂಚ ಹಿಡಿದು ಗಣಪನ ವಿಗ್ರಹಕ್ಕೆ ನಾನು ಬಣ್ಣ ಹಚ್ಚಿದ್ದು ಉಂಟು.ಕೆಲವೊಮ್ಮೆ ವಿಭಿನ್ನ ಆರ್ಡರ್‍ಗಳು ಬರುತ್ತಿದ್ದವು.ಒಮ್ಮೆ ಒಬ್ಬರು ಎರಡು ಹಸ್ತಗಳ ಮಧ್ಯೆ ಇರುವ ಗಣಪನಿಗೆ ಆರ್ಡರ್ ಮಾಡಿದ್ದರು.

ಆದರೆ ಪ್ಲಾಸ್ಟರ್ ಆಫ್ ಪ್ಯಾರಿಸ್‍ನ ಕಡಿಮೆ ಬೆಲೆಯ ಮಾಸ್ ಗಣಪಗಳು ಬಂದ ಮೇಲೆ ಈ ರೀತಿ ಮಣ್ಣಿನ ಗಣಪಗಳಿಗೆ ಬೇಡಿಕೆ ಇಳಯತೊಡಗಿತು.

ಇನ್ನು ಹಬ್ಬದ ಸಂಜೆ ಊರಿನ ಸಾರ್ವಜನಿಕ ಗಣಪನ ನೋಡೋಕೆ ಹೋಗೋದು. ಹರಿಹರದ ಸಾರ್ವಜನಿಕ ಗಣಪ ಅಲ್ಲಿನ 'ಗಾಂಧೀ ಮೈದಾನ'ದಲ್ಲಿ ಕೂಡಿಸುತ್ತಿದ್ದರು. ಮೈದಾನದಲ್ಲಿ ಗಣಪನ ನೋಡಿಕೊಂಡು ಅಲ್ಲಿ ಎರ್ಪಡಿಸಿದ ರಸಮಂಜರಿ-ನಾಟಕ ನೋಡಿಕೊಂಡು ಮನೆಗೆ ತೆರಳಿ ಹೋಳಿಗೆ-ತುಪ್ಪ ಊಟ !!

ಗಣಪ ಇದ್ದ ೩ ಅಥವಾ ೫ ದಿವಸಗಳವರೆಗೆ ನಡುಮನೆಯಲ್ಲಿ ಗಣಪನಿಗೆ ವಿಶೇಷ ಪೂಜೆ. ಪ್ರತಿದಿನ ಸಂಜೆ ವಿವಿಧೆಡೆ ಇರೋ ಗಣಪನ ನೋಡೋಕೆ ಹೋಗೋದು.ಈ ಗಣಪನ ಮಂಡಳಿಗಳಲ್ಲಿ ತೀವ್ರ ಸ್ಪರ್ಧೆ.ಯಾರು ವಿಭಿನ್ನ ಅಲಂಕಾರ ಮಾಡುತ್ತಾರೆ,ಯಾರದೂ ಎಷ್ಟು ಎತ್ತರದ ಗಣಪ ಇತ್ಯಾದಿ..

ಕಾಲ ಕಳೆದಂತೆ ಈ ಮಂಡಳಿಗಳ ಗಣಪನಲ್ಲಿ ತಂತ್ರಜ್ಞಾನದ ಪ್ರವೇಶವಾಯಿತು.ಗಣಪ ಕೇವಲ ಒಂದು ವಿಗ್ರಹವಾಗಿ ಉಳಿಯಲಿಲ್ಲ.ಗಣಪ ಮುಖ್ಯಪಾತ್ರದಲ್ಲಿರುವ ಪುರಾಣ ಪ್ರಸಂಗಗಳು ಜೀವ ಪಡೆಯಲಾರಂಭಿಸಿದವು.ಉದಾಹರಣೆಗೆ ರಾವಣ ಕೈಲಾಸದಿಂದ ಅತ್ಮಲಿಂಗ ತಂದು ದನಗಾಹಿ ವೇಶದಲ್ಲಿರುವ ಗಣಪನಿಗೆ ಕೊಡೋದು,ಅದನ್ನು ಗಣಪ ನೆಲದ ಮೇಲೆ ಇಡೋದು,ರಾವಣ ಅದನ್ನು ಎತ್ತೋಕೋ ಯತ್ನಿಸುವುದು.ಕಡೆಗೆ ಗಣೇಶ ಸ್ತುತಿ.ಈ ಪ್ರಸಂಗದಲ್ಲಿ ಎಲ್ಲವೂ ಚಲಿಸುವ ವಿಗ್ರಹಗಳು, ಜೊತೆಗೆ sound-lights effect ಕೂಡಿ ಅದು ಒಂದು ಮಯಾಲೋಕ ಸೃಷ್ಟಿಸುತಿತ್ತು. ಕೆಲವೊಮ್ಮೆ ಬೇರೆ ದೇವರುಗಳ ಪಾತ್ರವನ್ನು ಗಣಪನಿಗೆ ಕೊಟ್ಟ ಪ್ರಸಂಗಗಳು ಊಂಟು.ಉದಾಹರಣೆಗೆ ಕಾಳಿಂಗ ಮರ್ದನದ ಪ್ರಸಂಗದಲ್ಲಿ ಕೃಷ್ಣನನ್ನು substitue ಮಾಡಿ ಗಣಪನನ್ನು ಕಾಳಿಂಗ ಮರ್ದನಕ್ಕೆ ಕಳುಹಿಸಿದ್ದು ಉಂಟು !!

ಬರುಬರುತ್ತಾ ಈ ಪ್ರಸಂಗಗಳು 'ಶೋ'ಗಳಾಗತೊಡಗಿದವು.ಮಂಡಳಿಗಳು ವಿಶೇಷ ಆಹ್ವಾನಿತರಿಗೆ,ದಾನಿಗಳಿಗೆ ಮುಂದಿನ ಸಾಲಿನಲ್ಲಿ ಕುಳ್ಳಿರಿಸಿ, ಉಳಿದೆಲ್ಲರನ್ನೂ ನಿಲ್ಲಿಸಿ ಶೋ ನಡೆಸುವ 'ಅ-ಸಮಾನತೆ' ಸಂಪ್ರದಾಯವೂ ಶುರುವಾಯಿತು.

ಮಂಡಳಿಗಳ ಇನ್ನೊಂದ ವಿಶೇಷವೆಂದರೆ ಗಣಪನಿಗೂ ಪ್ರಸ್ತುತ ವಿಷಯಗಳಿಗೂ ಲಿಂಕ್ ಮಾಡುತ್ತಿದ್ದ ರೀತಿ.ಕಾರ್ಗಿಲ್ ಯುದ್ದದ ವರ್ಷದಲ್ಲಿ ಗಣಪ ಸೈನಿಕನ ವೇಷ ತೊಟ್ಟು ದೇಶದ ಗಡಿಯಲ್ಲಿ ನಿಂತ ಅವತಾರದಲ್ಲಿದ್ದರೆ, ವಿಶ್ವಕಪ್ ಸಮಯದಲ್ಲಿ ಗಣಪ ಭಾರತದ ಟೀ ಶರ್ಟ್ ತೊಟ್ಟು ಬ್ಯಾಟ್ ಹಿಡಿದು ನಿಂತದ್ದು ಉಂಟು.ಕೆಲವೊಮ್ಮೆ ಮಂಡಳಿಯವರು ವಿಪರೀತ ಬುದ್ದಿ ಖರ್ಚು ಮಾಡಿದ ಪ್ರಸಂಗಗಳು ಉಂಟು.ಒಮ್ಮೆ ಗಣಪನನ್ನು ವೀರಪ್ಪನ್ ತರ ವೇಷದಲ್ಲಿ ಒಂದು ಮಂಡಳಿಯವರು ಅವತರಿಸಿದ್ದರು !

೩-೫ ದಿವಸದ ನಂತರ ಇನ್ನು ಗಣಪನ ವಿರ್ಸಜಿಸುವ ಕಾರ್ಯಕ್ರಮ ದುಃಖದಿಂದ ಕೂಡಿದ ಸಮಯ.ಗಣಪನಿಗೆ ಇಷ್ಟವಾದ ಕಡುಬು ಮಾಡಿ ಅದನ್ನು ಪಾರ್ಸಲ್ ಕಟ್ಟಿ ಮನೆಯಿಂದ ಹೊರಟರೆ, ಮತ್ತದೆ ನಮ್ಮ ಸೈನ್ಯದ ಮೆರವಣಿಗೆ.'ಮೋರ್‍ಗಯಾ ರೇ ಮೋರ್‍ಗಯಾ' ಅಂತಾ ಒಬ್ಬ ಕೂಗಿದರೆ ಉಳಿದವರೆಲ್ಲ 'ಗಣೇಶ ಮೋರ್‍ಗಯಾ' ಅಂತಾ ಕೋರಸ್ ನೀಡುತ್ತಿದ್ದೆವು.ತುಂಗಾಭದ್ರ ನದಿ ಮುಟ್ಟಿ ಅಲ್ಲಿ ಇನ್ನೊಂದು ಸುತ್ತಿನ ಪೂಜೆ ಮಾಡಿ ಭಾರದ ಮನದಿಂದ ಗಣಪನ ನೀರಿನಲ್ಲಿ ಮೂರು ಸಲ ಮುಳುಗಿಸಿ ಕೈ ಬಿಟ್ಟಾಗ ಎನೋ ಖಾಲಿಯಾದ ಭಾವನೆ..

ಈ ಮಧ್ಯೆ ಮಂಡಳಿಗಳ ಗಣಪನ ವಿಸರ್ಜನೆಗೆ ಹೊರಡುತಿದ್ದ ಗುಂಪು ಆಮೆವೇಗದಲ್ಲಿ ಸಾಗುತ್ತ ದಾರಿಯುದ್ದಕ್ಕೂ ಕೂಗು ಹಾಕುವುದೇನೋ, ಮೆರವಣಿಗೆಯಲ್ಲಿ ಆರ್ಕೆಸ್ಟ್ರಾದವರ ಗಣಪನಿಗೆ ಸ್ಪಲ್ಪವೂ ಸಂಬಂಧವೇ ಇಲ್ಲದ ಹಾಡಿಗೆ ಹೈಕಳು ಕುಣಿದು ಕುಪ್ಪಳಿಸಿವುದೇನೋ. ಅತ್ಯಂತ ಉತ್ಸಾಹಭರಿತ ವಾತಾವರಣ. ಮೆರವಣಿಗೆಯಲ್ಲಿ ನಿಜಕ್ಕೂ ಜೋಶ್ ಉಂಟು ಮಾಡುತ್ತಿದದ್ದು 'ಡೊಳ್ಳು ಕುಣಿತ'.ಅದು ಮಾಡುವ ರುದ್ರನಾದಕ್ಕೆ ಉತ್ಸಾಹ ಬರದಿದ್ದರೆ ಹೇಳಿ.ಆದರೆ ಮೆರವಣಿಗೆಯಲ್ಲಿ ಕೆಲವೊಬ್ಬರು ಹೊಟ್ಟೆಗೆ 'ದ್ರವ'ಗಳನ್ನು ಇಳಿಸಿಕೊಂಡು ಬಂದು ಮಾಡುತ್ತಿದ್ದ ವರಸೆಗಳು ಮೆರವಣಿಗೆಯ ಸಡಗರಕ್ಕೆ ನೀಡುತ್ತಿದ್ದವು ಇನ್ನೊಂದು ಮಜಲು.

ಒಂದು ವರ್ಷ ವಿಸರ್ಜನೆ ವೇಳೆಯಲ್ಲಿ ನಡೆದ ಕೋಮು ಗಲಭೆಯ ನಂತರ ಮೆರವಣಿಗೆ ಸಂಜೆ ಬೇಗನೆ ಶುರು ಮಾಡತೊಡಗಿದರು.ಇಲ್ಲದಿದ್ದರೆ ಮೆರವಣಿಗೆಗಳೂ ಶುರುವಾಗುತಿದ್ದೆ ೮-೯ ಗಂಟೆಗೆ, ತುಂಗಾಭದ್ರ ಮುಟ್ಟೋವಷ್ಟರಲ್ಲಿ ರಾತ್ರಿ ೧೨-೧ ಗಂಟೆಯಾಗುತಿತ್ತು.

ವಿಸರ್ಜನೆಯ ನಂತರ ಮನೆಗೆ ಬಂದು ನೋಡಿದರೆ ಅದೇ ನಡುಮನೆ,ಅದೇ ಅಲಂಕಾರ,ಎಲ್ಲಾ ಇದೇ..ಆದರೆ ಇರಬೇಕಾದದ್ದು ಇಲ್ಲ. ಬಹುಷಃ ಇದಕ್ಕೆ ಹೇಳುತ್ತಾರೆ 'ಆತ್ಮವಿಲ್ಲದ ದೇಹ'.ಮುಂದಿನ ವರ್ಷ ಮತ್ತೆ ಗಣಪ ಬರ್ತಾನೆ ಅನ್ನೋ ಸಮಾಧಾನ..

ಆದರೆ ನಮ್ಮ ಅಜ್ಜ ಗತರಾದ ನಂತರ ಆ ಸಾಮೂಹಿಕ ಗಣಪನ ಆಚರಣೆಯೂ ನಿಂತಿತು.ಆದಾದ ಮೇಲೆ ಒಂದೇ ವಟಾರದಲ್ಲಿ ಮನೆಗೊಂದರಂತೆ ಗಣಪಗಳು.ಸ್ಪಲ್ಪ ವರ್ಷಗಳ ನಂತರ ನಮ್ಮ ಹರಿಹರದ ಋಣ ಮುಗಿದ ಮೇಲೆ ಅಲ್ಲಿನ ಗಣಪನ ಪೂಜೆಗೂ ವಿದಾಯ.

ಮತ್ತೊಂದು ಊರು..ಮತ್ತೊಂದು ದೇಶ....

ನಮ್ಮ ಗಣಪ ಮಾತ್ರ ಅವನೇ..ಅದೇ ವಕ್ರತುಂಡ,ಅದೇ ಮಹಾಕಾಯ..
ಅದಕ್ಕೆ ಅಲ್ವೇ ಗಣಪ ಸಮಯಾತೀತ !

Saturday, August 12, 2006

ಪೋಟೋ ಪ್ಲ್ಯಾಶ್ ಬ್ಯಾಕ್


ಹೀಗೆ ಸುಮ್ಮನೆ ಹಳೇ ಪೋಟೋಗಳನ್ನು ಆನ್ ಲೈನ್ ಅಲ್ಬಮ್‍ನಲ್ಲಿ ನೋಡ್ತಾ ಇದ್ದೆ. ಮಿತ್ರರೊಂದಿಗೆ ಹೋದ ಪಿಕನಿಕ್-ಪ್ರವಾಸ ಪೋಟೋಗಳು, ಟ್ರೆಕಿಂಗ್ ಪೋಟೋಗಳು. ಸುನಾಮಿ ಸಂತ್ರಸ್ತ ಪ್ರದೇಶದಲ್ಲಿ ಕಳೆದ ಆ ದಿನಗಳ ಪೋಟೋಗಳು, ಆಫೀಸ್ ಪೋಟೋಗಳು,ಸ್ನೇಹಿತರ ಮದುವೆ ಪೋಟೋ..

ಈ ಪೋಟೋ-ಕ್ಯಾಮರಗಳಲ್ಲಿದ್ದರೆ ಬಹುಷಃ ನಮ್ಮ ನೆನಪುಗಳನ್ನು ಮತ್ತೆ ಮತ್ತೆ ಹೆಕ್ಕಿ ತೆಗೆದು ಆ ನೆನಪುಗಳಲ್ಲಿ ಕಳೆದುಹೋಗೋದು ಕಷ್ಟವಾಗತಿತ್ತೋ ಎನೋ..

ಹಂಗೆ ಯೋಚನೆ ಮಾಡ್ತಾ ಇದ್ದಾಗ ನೆನಪಾದದ್ದು ಶಾಲೆಯ ಆ ಪೋಟೋ ಸೆಷನ್‍ಗಳು.ನಮ್ಮ ಶಾಲೆಯಲ್ಲಿ ಪ್ರತಿ ವರ್ಷ ತರಗತಿಯ ಗ್ರೂಪ್ ಪೋಟೋ ತೆಗೆತಿದ್ದರು.ಆಮೇಲೆ ಪೋಟೋ ಬೇಕಾದವರೆಲ್ಲ ಟೀಚರ್‍ಗೆ ಹೆಸರು ಕೊಡ್ತಾ ಇದ್ದಿವಿ.ಒಂದು ವಾರ ನಂತರ ಕವರ್‍ನಲ್ಲಿ ಒಂದೊಂದು ಪೋಟೋ ಸಿಗ್ತಾ ಇತ್ತು.ಆವಾಗ ಆ ಪೋಟೋಗಳು ಅಂತ ವಿಶೇಷ ಅನಿಸಿರಲಿಲ್ಲ.ಈಗ ಆ ಫೋಟೋಗಳಲ್ಲಿ ಸ್ನೇಹಿತರನ್ನು ಗುರ್ತಿಸಿ ಅವರ ಅವಾಗೀನ ಅವತಾರವನ್ನು ಈಗೀನ ಅವತಾರಕ್ಕೆ ಹೋಲಿಸಿ ನೋಡುವದರಲ್ಲಿ ಮಜಾ ಇರುತ್ತೆ!

ಮನೆಯಲ್ಲಿ ನಾನು ೬ ತಿಂಗಳು ಆಗಿದ್ದಾಗ ತೆಗೆದ ಕಪ್ಪು-ಬಿಳುಪು ಪೋಟೋ ಒಂದು ಇದೆ.ಅದರಲ್ಲಿ ಅಳುತ್ತಿರುವ ನನ್ನ ನೋಡಿದಾಗ ಈಗ ಮಂದಹಾಸ ಮೂಡದಿದ್ದರೆ ಕೇಳಿ! ಹಾಗೆ ಅಪ್ಪ-ಅಮ್ಮ ಮದುವೆಯ ನಂತರ ಸ್ಟುಡಿಯೋದಲ್ಲಿ ತೆಗೆಸಿಕೊಂಡ ಪೋಟೋ. ಆ ಪೋಟೋಗಳಿಗೆ ಹಾಕಿದ ಆ ಕಪ್ಪು ಫ್ರೇಮ್.

ನಮ್ಮ ಊರು ಕಡೆ ಅದಕ್ಕೆ 'ಪೋಟೋಕ್ಕೆ ಕಟ್ಟು ಹಾಕಿಸೋದು' ಅಂತಿದ್ದರು.ಅದಕ್ಕೆ ಅಂತಾ ಒಂದು ಅಂಗಡಿ ಇತ್ತು.ಅಲ್ಲಿ ಪೋಟೋ ಕೊಟ್ಟರೆ ,ಒಂದು ತೆಳು ಹಲಗೆ ಮೇಲೆ ಅದನ್ನು ಇಟ್ಟು, ಅದಕ್ಕೆ ಹೊಂದುವಷ್ಟು ಗಾಜು ಕೊರೆದು ಅದನ್ನು ಪೋಟೋ ಮೇಲೆ ಇಟ್ಟು ಅದಕ್ಕೆ ನಾಲ್ಕು ಕಡೆ ಫ್ರೇಮ್ ಹಾಕಿ ಕೊಡ್ತಾ ಇದ್ದರು.ಅದನ್ನು ತಂದು ಮನೆ ಗೋಡೆ ಮೇಲೆ ತೂಗಿ ಹಾಕೋದರಲ್ಲಿ ಒಂದು ಸಂಭ್ರಮ!

ಕ್ರಮೇಣ ಪೋಟೋಗೆ ಕಟ್ಟು ಹಾಕಿಸೋದು ಕಡಿಮೆಯಾಗ್ತ ಬಂತು.ಅದರ ಜಾಗದಲ್ಲಿ ಬಂತು ಅಲ್ಬಮ್‍ಗಳು.ಅದು ಒಂದು ತರ ಮಜದ ಕೆಲಸ, ಸ್ಟುಡಿಯೋದಿಂದ ಪೋಟೋ ಪ್ರಿಂಟ್ ಹಾಕಿಸಿಕೊಂಡು ಬಂದು ಒಂದೊಂದೇ ಪೋಟೋ ಮೊದಲ ಸಲ ನೋಡಿ ಅದನ್ನು ಅಲ್ಬಮ್‍ಗೆ ಹಾಕೋದರಲ್ಲಿ ಎನೋ ಖುಷಿಯಾಗ್ತಿತ್ತು.

ಕ್ಯಾಮರ ಬಗ್ಗೆ ಆವಾಗಿಂದ ಒಂದು ಪ್ರೀತಿಭರಿತ ಕುತೂಹಲವಿದ್ದೆ ಇತ್ತು.ಮೊದಲ ಸಲ ನನ್ನ ಕೈಗೆ ಕ್ಯಾಮರ ಸಿಕ್ಕಿದು ನಾನು ಇಂಜಿನಿಯರಿಂಗ್ ಸೇರಿದ ಮೇಲೆನೇ. ೬ನೇಯ ಸೆಮಿಸ್ಟರ್ ಇದ್ದಾಗ ಈಡೀ ಕ್ಲಾಸ್ ೧೯ ದಿನಗಳ ಒಂದು ಮಹಾ ಪ್ರವಾಸ ಹೋಗಿದ್ದೆವು .ಅವಾಗ ಅಣ್ಣನಿಂದ ಕ್ಯಾಮರ ಪಡೆದು ತೆಗೆದುಕೊಂಡು ಹೋಗಿದ್ದೆ.ಆ ಪ್ರವಾಸದ್ದು ಒಂದು ದೊಡ್ಡ ಕತೆಗಳ ಕಂತೆಯಾದರೆ ಆ ಸಮಯದಲ್ಲಿ ತೆಗೆದ ಪೋಟೋಗಳದ್ದು ಇನ್ನೊಂದು ಕತೆ.

ಪ್ರವಾಸದ ಸಮಯದಲ್ಲಿ ಆದ ಒಂದು ಪೋಟೋ ಕತೆ...ನನ್ನ ಸ್ನೇಹಿತೆಯೊಬ್ಬಳು ಕ್ಯಾಮರದಲ್ಲಿ ಕ್ಲಿಕ್‍ಸಿದ ಪೋಟೋ ರೋಲನ್ನು ನನ್ನ ಬಳಿ ಜೋಪಾನವಾಗಿ ಇಟ್ಟುಕೊಳ್ಳಲು ಕೊಟ್ಟಿದ್ದಳು.ಪ್ರವಾಸವೆಲ್ಲ ಮುಗಿಸಿ ಬಂದು ಪೋಟೋ ಡೆವಲಪ್‍ಗೆ ಕೊಟ್ಟಾಗ ಕಾದಿತ್ತು ನಮಗೆ ಅಘಾತ.ಸ್ನೇಹಿತೆ ನನ್ನ ಬಳಿ ಕೊಟ್ಟಿದ್ದ ಪೋಟೋ ರೋಲ್ ಡೆವಲಪ್ ಮಾಡಿದಾಗ ಪೂರ್ತಿ ಬ್ಲ್ಯಾಂಕ್ ಆಗಿಬಂದಿತ್ತು.ನನ್ನ ರೋಲ್ ಡೆವಲಪ್‍ಗೆ ಕೊಟ್ಟಾಗ ಕಾದಿತ್ತು ಇನ್ನೊಂದು ಅಘಾತ.ಒಂದು ರೋಲ್‍ನಲ್ಲಿ ಒಂದರ ಮೇಲೆ ಒಂದರಂತೆ ಎರಡೆರಡು ಪೋಟೋಗಳು ಇದ್ದವು! ಆಗಿದ್ದೆನೆಂದರೆ ನನ್ನ ಖಾಲಿ ರೋಲ್ ಮತ್ತು ಸ್ನೇಹಿತೆಯ ರೋಲ್ ಅದಲು ಬದಲಾಗಿ, ನನ್ನ ಕ್ಯಾಮರಕ್ಕೆ ಖಾಲಿ ರೋಲ್ ಬದಲು ಸ್ನೇಹಿತೆಯ ರೋಲ್ ಹಾಕಿ ಕ್ಲಿಕ್‍ಸಿದ್ದೆ!!

ಕೆಲಸಕ್ಕೆ ಸೇರಿ ಸ್ಪಲ್ಪ ದಿನದಲ್ಲೇ ನನ್ನದೇ ಒಂದು ಸ್ವಂತ ಕ್ಯಾಮರ ಖರೀದಿಸಿದ್ದೆ. ಆ ಕ್ಯಾಮರ ನನ್ನ ಅನೇಕ ನೆನಪುಗಳಿಗೆ ಜೊತೆ ನೀಡಿತು.ನನ್ನ ಎಲ್ಲ ಪ್ರವಾಸ,ಪಿಕ್‍ನಿಕ್,ಟ್ರೇಕಿಂಗ್‍ಗಳ ಅವಿಭಾಜ್ಯ ಅಂಗವಾಯಿತು.ಹಾಗೆಯೇ ಸುನಾಮಿಯ ಪ್ರಳಯದ ನಂತರದ ಘೋರ ಘಟನೆಗಳನ್ನು ನೋಡಿದ್ದು ಈ ಕ್ಯಾಮರ ಕಣ್ಣುಗಳಿಂದ.

ಕೆಲ ವರ್ಷಗಳ ನಂತರ ವೀಸಾ ಸಂದರ್ಶನಕ್ಕೆ ಹೋಗುವ ಸಮಯ ಬಂತು.ಆ ವೇಳೆಯಲ್ಲಿ ನಡೆದದ್ದು ಈ ಪೋಟೋ ತೆಗೆಸುವ ಪ್ರಸಂಗ.ನನ್ನ ಎಲ್ಲ ವೀಸಾ ಪೇಪರ್ ತೆಗೊಂಡು ಹೋಗಿ ನಮ್ಮ ಕಛೇರಿಯ ವೀಸಾ ಸೆಲ್‍ನವರಿಗೆ ಕೊಟ್ಟರೆ, ಅವರು ಪೋಟೋ ಸಂಪೂರ್ಣ ಬಿಳಿ ಬ್ಯಾಕ್‍ಗ್ರೌಂಡ್ ಇರಬೇಕು,ಆದರೆ ಇದರಲ್ಲಿ ಅಷ್ಟು ಬಿಳಿ ಕಾಣಿಸುತ್ತಿಲ್ಲ, ಇನ್ನೊಮ್ಮ ತೆಗೆಸಿಕೊಳ್ಳಿ ಅಂದಾಗ ಪೂರ್ತಿ ತಲೆಕೆಟ್ಟು ಹೋಗಿತ್ತು.ನಂತರ ನಮ್ಮ ವೀಸಾ ಸೆಲ್‍ನವರು ಹೇಳಿದರು 'ಇಲ್ಲೇ ಸರಿ ಮಾಡಿಕೊಂಡು ಹೋಗುವುದು ಒಳ್ಳೆದು, ಇಲ್ಲಾ ಅಂದರೆ ಅಲ್ಲಿ ವೀಸಾ ಸಂದರ್ಶನದಲ್ಲಿ ಹೆಂಗಿದ್ದರೂ ಅದನ್ನು ನೋಡಿ ತಿರಸ್ಕರಿಸಬಹುದು'.ಇದು ಒಳ್ಳೆ ಸರ್ಪ್ ಎಕ್ಸಲ್ ಬಿಳುಪಿನ ಕತೆ ಆಯಿತಲ್ಲ ಅಂತಾ ಗೊಣಿಗಿಕೊಂಡು ಮತ್ತೊಮ್ಮೆ ಹಾಲಿನಂತ ಬಿಳುಪಿನ ಬ್ಯಾಕ್‍ಗ್ರೌಂಡ್ ಪೋಟೋ ತೆಗೆಸಿಕೊಂಡಾಯಿತು.

ಅಲ್ಲಿಂದ ಇಲ್ಲಿಗೆ ನೆಗೆದ ಮೇಲೆ ನಾನು ಮಾಡಿದ ಮೊದಲ ಕೆಲಸ ಡಿಜಿಟಲ್ ಕ್ಯಾಮರ ಕೊಂಡಿದ್ದು. ಡಿಜಿಟಲ್ ಕ್ಯಾಮರದಲ್ಲಿ ಖುಷಿಯಾಗುವ ವಿಚಾರವೆಂದರೆ ತೆಗೆದ ಪೋಟೋ ಅಲ್ಲೇ ನೋಡಬಹುದು, ಬೇಡದಿದ್ದರೆ ಇನ್ನೊಮ್ಮೆ ಕ್ಲಿಕ್‍ಸಿಬಹುದು.ಪೋಟೋ ರೋಲ್ ಹಾಕುವ ಆಗಿಲ್ಲ, ಕ್ಲಿಕ್‍ಸಿದ ಅ ಪೋಟೋ ಹೇಗೆ ಬಂದಿರಬಹುದು ಅಂತಾ ಕಾಯುವ ಆಗಿಲ್ಲ.ಎಲ್ಲ ಅಲ್ಲೇ ಗೊತ್ತಾಗಿ ಬಿಡುತ್ತೆ. ಈಗ ಎನಿದ್ದರೂ ಪೋಟೋ ಕ್ಲಿಕ್‍ಸಿ, ಅದನ್ನು ಕ್ಯಾಮರದಿಂದ ಕಂಪ್ಯೂಟರ್‍ಗೆ ವರ್ಗಾಯಿಸಿದರೆ ಆಯಿತು.ಅಲ್ಲಿಂದ ಬೇಕಾದವರಿಗೆ ಇ-ಮೇಲ್‍ನಲ್ಲಿ ಪೋಟೋ ಕಳಿಸಬಹುದು.ಇಲ್ಲ ಅಂದರೆ ಎಲ್ಲ ಪೋಟೋ ಆನ್‍ಲೈನ್ ಅಲ್ಬಮ್‍ಗೆ ಹಾಕಿ, ಆ ಆಲ್ಬಮ್ ಲಿಂಕ್ ಕಳುಹಿಸಿದರಾಯಿತು.

ಫಿಲ್ಮ್ ರೋಲ್ ಕ್ಯಾಮರದಿಂದ ಡಿಜಿಟಲ್ ಕ್ಯಾಮರಕ್ಕೆ,ಅಲ್ಬಮ್‍ನಿಂದ ಆನ್‍ಲೈನ್ ಅಲ್ಬಮ್‍ಗೆ ಬಂದಾಯಿತು.ಮುಂದಿನ ಅವಿಷ್ಕಾರಗಳು ಪೋಟೋ-ಕ್ಯಾಮರವನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಾವೋ ನೋಡಬೇಕು.

ಇಷ್ಟೆಲ್ಲ ಆದರೂ ಆ ಕಪ್ಪು-ಬಿಳುಪು ಪೋಟೋಗಳು,ಆ ಕಟ್ಟು ಹಾಕಿದ ಪೋಟೋಗಳನ್ನು ನೋಡುತ್ತಿದ್ದರೆ ನಾಸ್ಟಾಲಿಜಿಯಾ ಆಗದಿದ್ದರೆ ಹೇಳಿ..

Friday, June 16, 2006

ಆಹಾ ! ಪಾನಿಪುರಿ !!



ಸುಮ್ಮನೆ ಕೆಲಸ ಮಾಡುತ್ತ ಕುಂತಾಗ ಎಲ್ಲಿಂದ ಬಂತೋ ಗೊತ್ತಿಲ್ಲ..ಅದರ ನೆನಪು !

ಬಂದು ಸುಮ್ಮನೆ ಹೋದರೆ ಚೆನ್ನಾರ್ಗಿತಿತ್ತು.ಆದರೆ ಪಾಪಿ ಅಮೇರಿಕಾಕ್ಕೆ ಹೋದರೂ ಪಾನಿಪುರಿ ನೆನಪು ತಪ್ಪಲಿಲ್ಲವಂತೆ !! ಅದರ ರುಚಿನೆನಪಿನಲ್ಲಿ ಪಟ್ಟ ಹಿಂಸೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳೋಣ ಅಂತ...

ಪಾನಿಪುರಿ ಅಂದ ಕೂಡಲೇ ಏನು ನೆನಪಿಗೆ ಬಂತು ರೀ?
ಸಣ್ಣ ಸಣ್ಣ ಪುರಿ,ಬಟಾಣಿಯಿಂದ ಕಟ್ಟಿದ ದುಂಡು ಒಡ್ಡು, ಅದರಲ್ಲಿ ಯಾವಾಗಲೂ ಹೊಗೆಯಾಡುತ್ತಿರುವ ಬಟಾಣಿ,'ಪಾನಿ' ಅಂತ ಕರೆಯಲ್ಪಡುವ ಆ ವಿಶಿಷ್ಟ ಮಸಾಲನೀರು ಹಾಗೂ ಆ ಪಾನಿಪುರಿ ತಳ್ಳುಗಾಡಿಗಳು..

ನನಗೆ ಅನಿಸಿದ ಹಾಗೆ ಪಾನಿಪುರಿದು ಬಹುಷಃ ರಾಜಸ್ತಾನಿ ಮೂಲ.ನಾನು ಚಿಕ್ಕವನಿದ್ದಾಗ ತಿಂದದ್ದು ಎಲ್ಲ ಈ ರಾಜಸ್ತಾನಿ ಪಾನಿಪುರಿ ಗಾಡಿಗಳಲ್ಲೆ.ಅದಕ್ಕೆನಾದರೂ ಅದು ರಾಜಸ್ತಾನಿ ಅಂದುಕೊಂಡಿರಬಹುದು.ಅದು ಎಲ್ಲಿದೇ ಇರಲಿ, ಎಷ್ಟು ಬೇಗ ಪ್ರಸಿದ್ದ ಆಯಿತು ಅಲ್ವ? ನಮ್ಮೂರಲ್ಲಿ ಮೊದಲಿದದ್ದು ೪-೫ ಪಾನಿಪುರಿ ಗಾಡಿಗಳು.ನೋಡು ನೋಡುಷ್ಟರಲ್ಲಿ ಪಾನಿಪುರಿ ಗಾಡಿಗಳು ಬೀದಿಗೊಂದರಂತೆ ಅದವು. ಸಂಜೆ ಗೆಳಯರ ಗುಂಪಿನಲ್ಲಿ ತಿರುಗಾಡಿ ಪಾನಿಪುರಿ ತಿಂದೆ ಮುಂದಿನ ಕೆಲಸ ಸಾಗುತಿತ್ತು. ಆದರೆ ಎಷ್ಟು ದಿನ ಇರುತ್ತೆ ಆ ಊರಿನ ಪಾನಿಪುರಿ ನಂಟು?

ಅಲ್ಲಿಂದ ನೆಗದದ್ದು ಬೆಂಗಳೂರೆಂಬ ನಗರಿಗೆ.ಮೊದಮೊದಲು ಕೆಲವೊಂದು ರಾತ್ರಿಗಳಿಗೆ ಪಾನಿಪುರಿ ಒಂದೇ ತಿಂದು ಜೀವಿಸಿದ್ದೂ ಆಯಿತು.ನಂತರ ಐಟಿಪಿಎಲ್ ಎಂಬ ಚಮಕ್‍ನಲ್ಲಿದ್ದ ೩ ವರ್ಷ ಅಲ್ಲಿದ್ದ ಇದ್ದಬದ್ದ ಪಾನಿಪುರಿ ಸೇವನೆ ಮಾಡಿದ್ದಾಯಿತು.ರುಚಿ ಬಗ್ಗೆ ಕೇಳೋಕ್ಕೆ ಹೋಗಬೇಡಿ.ಪಾನಿಪುರಿ ಸೇವನೆಗೆ ಜೊತೆ ಚೆನ್ನಾಗಿತ್ತು.ಅಷ್ಟು ಗೊತ್ತಾಗಲಿಲ್ಲ! ಅವಗಾವಗ ಮೇಯೋಹಾಲ್ ಹತ್ತಿರ ಹಾಗು ಸಿಎಂಹೆಚ್ ರೋಡ್‍ನಲ್ಲಿ ಸ್ವಾಹ ಆಗುತಿತ್ತು.

ಅನೇಕ ಹೋಟೆಲ್-ದರ್ಶಿನಿಗಳಲ್ಲಿ ನಾವೆಲ್ಲ ಪಾನಿಪುರಿ ತಿಂದಿರಬಹುದು, ಆದರೆ ತಳ್ಳುಗಾಡಿಯ ಪಾನಿಪುರಿಯ ರುಚಿಯ ಮುಂದೆ ಎಲ್ಲವೂ ಶೂನ್ಯ!

ಇದೇನು..ಆವಾಗಿಂದ ಪಾನಿಪುರಿ ಒಂದೇ ಆಯ್ತು, ಉಳಿದವು ಎಲ್ಲಿ ಅಂತೀರಾ..
ಪಾನಿಪುರಿ ಜೊತೆ ಸೇವ್‍ಪುರಿ,ಮಸಾಲಪುರಿ,ಬೇಲ್‍ಪುರಿ,ದಾಹಿಪುರಿಗಳ ಬಗ್ಗೆ ಹೇಳದಿದ್ದರೆ ಹೇಗೆ..ಒಂದೊಂದಕ್ಕೂ ಒಂದೊಂದು ವಿಶಿಷ್ಟ ರುಚಿ.ಅವುಗಳನ್ನು ಮಾಡೋದ ನೋಡೋದೇ ಚೆನ್ನಾ ! ಪುರಿಯನ್ನು ಮುರಿದು, ಅದರ ಮೇಲೆ ಆ ಬಟಾಣಿ ಮಿಶ್ರಣ ಹರಡಿ,ನಂತರ ಸೇವ್ ಅಥವಾ ಮೊಸರನ್ನೋ ಹಾಕಿ, ಉಪ್ಪು-ಮಸಾಲೆ ಉದುರಿಸುತ್ತಿದ್ದರೆ ..ಇಲ್ಲದಿರುವ ಎಲ್ಲಾ ಹಸಿವುಗಳು ಒಮ್ಮೆಗೆ ಪ್ರತ್ಯಕ್ಷ. ಬಾಯಿಯಲ್ಲಿ 'ಗಂಗೇಚಾ ಯಮೂನಾ' !!ಇನ್ನು ಬೇಲ್‍ಪುರಿಯಾದರೆ , ನೂರೆಂಟು ಮಸಾಲೆ,ಟಮೋಟ,ಮಂಡಕ್ಕಿ ಒಂದು ಪಾತ್ರೆಯಲ್ಲಿ ಹಾಕಿ ಆವನ್ನು ಸೌಟಿನಲ್ಲಿ ಕಲೆಸುತ್ತಿದ್ದರೆ..

ಈ ಎಲ್ಲ ಪುರಿಗಳನ್ನು ತಿಂದ ಮೇಲೆ ಪ್ರತ್ಯೇಕವಾಗಿ 'ಪಾನಿ' ಹಾಕಿಸಿಕೊಂಡು ಕುಡಿಯದಿದ್ದರೆ ಹೇಗೆ ?

ಇಲ್ಲಿಗೆ ಬಂದ ಮೇಲೆ ಮೊದಲ ಸಲ 'ಇಂಡಿಯನ್ ಶ್ಯಾಪ್' ನಲ್ಲಿ ಪಾನಿಪುರಿ ನೋಡಿದ್ದೆ , ಯಾವತ್ತು ಅದನ್ನು ನೋಡೇ ಇಲ್ಲ ಅನ್ನೋರ ತರ ಅದನ್ನು ನೋಡಿ, ೨ ಡಾಲರ್ ಕೊಟ್ಟು ತಗೊಂಡು ತಿಂದದ್ದಾಯಿತು.ಬೇಡ ಬೇಡವೆಂದರೂ ಇಲ್ಲಿನ ರುಚಿಯನ್ನು ಅಲ್ಲಿಗೆ ಹೋಲಿಸಿ ಕಷ್ಟಪಟ್ಟಿದ್ದೂ ಆಯಿತು ! ಸರಿ, ಮಾಡೋದೇನು ಅಂತ 'ಪಾಲಿಗೆ ಬಂದದ್ದು ಪಾನಿಪುರಿ' ಅಂತ ಸ್ವೀಕರಿಸಿದ್ದಾಯಿತು!!!

ಇಂದು ಇಲ್ಲಿ ಪಾನಿಪುರಿ ,ನಾಳೆ ಇನ್ನೇಲ್ಲೋ....

'ಪಾನಿಪುರಿ ಪುರಾಣ'ವನ್ನು ಈ ಒಂದು ಮಸಾಲಭರಿತ ಪದ್ಯದಿಂದ ಮುಗಿಸುತ್ತಿದ್ದೇನೆ.

ಪಾನಿಪುರಿ ಮಾಡೋನು ಬಟಾಣಿ,ಇರುಳ್ಳಿ,ಪಾನಿ ತುಂಬಿಸಿ,
ಪುರಿಯನ್ನು ಒಂದೊಂದೇ ಕೊಡುತ್ತಾ ಇದ್ದರೆ,
ಒಂದೇ ಗುಕ್ಕಿನಲ್ಲಿ ಅದನ್ನು ಬಾಯಿ ತುಂಬಾ ತುಂಬಿಸಿ,
ಹಾಗೆಯೇ ಕರಗಿಸಿ ಮೆಲ್ಲುತ್ತಿದ್ದರೆ ಸ್ವರ್ಗಕ್ಕೆ ಒಂದು ಪ್ಲೇಟ್ ಕಳುಹಿಸೆಂದ ಪಾನಿಪುರಿ ತಜ್ಞ

ವಿ.ಸೂ:ಇದೆಲ್ಲ ಓದಿದ ಮೇಲೆ ನೀವು ಪಾನಿಪುರಿ ಹುಡುಕಿಕೊಂಡು ಹೊರಟರೆ ನಾನು ಜವಾಬ್ದಾರನಲ್ಲ !!!

Sunday, June 04, 2006

ಮಾಮರವೆಲ್ಲೋ..ಮೇಕೆ ಹಾಲೆಲ್ಲೋ


ಮನೆ ಹತ್ತಿರ ಇರುವ ಅಂಗಡಿಗೆ ಹೊಕ್ಕು ವಾರಕ್ಕೆ ಬೇಕುವಾಗ ದಿನಸಿ,ತರಕಾರಿ,ಹಣ್ಣು,ಹಾಲು ಇತ್ಯಾದಿಗಳನ್ನು ಖರೀದಿಸುತ್ತಿರುವಾಗಲೇ ಕಣ್ಣಿಗೆ ಬಿದ್ದದ್ದು 'ಪ್ರೋಸನ್ ಮ್ಯಾಂಗೋ'.ಮಾವಿನಕಾಯಿಯನ್ನು ತುಂಡು ತುಂಡಾಗಿಸಿ ಅದನ್ನು ಒಂದು ಬಾಟಲಿನಲ್ಲಿ ಸಂಸ್ಕರಿಸಿದ್ದು.

ಆ ಮಾವಿನಕಾಯಿಯನ್ನು ನೋಡಿದ್ದೆ ನನ್ನ ಮನ ಶರವೇಗದಲ್ಲಿ ಪ್ಲಾಶ್‍ಬ್ಯಾಕ್‍ನಲ್ಲಿ ಹೋಗಿಬಿಟ್ಟಿತು.

ಆಗ ನಾನು ಪ್ರಾಥಮಿಕ ಶಾಲೆಯಲ್ಲಿದ್ದೆ.ವಾರ್ಷಿಕ ಪರೀಕ್ಷೆಯ ಫಲಿತಾಂಶ ನೋಡಿಕೊಂಡು ಮನೆಗೆ ಬಂದರೆ ಅಮ್ಮನ ಕೈಯಲ್ಲಿ ಬ್ಯಾಗು.ಎಲ್ಲಿಗೆ ಹೋಗ್ತಿದಿವಿ ಅಂತಾ ಕೇಳುವಷ್ಟರಲ್ಲಿ ನಮ್ಮ ಚಿಕ್ಕಪ್ಪ 'ಬೇಸಿಗೆ ರಜಕ್ಕೆ ನಿಮ್ಮನ್ನು ನಮ್ಮ ಹಳ್ಳಿಗೆ ಕರಕೊಂಡು ಹೋಗುತ್ತಿದ್ದಿನಿ'.

ದಾವಣಗೆರೆಗೆ ಹೋಗಿ ಅಲ್ಲಿಂದ ಖಾಸಗಿ ಬಸ್ಸೊಂದನ್ನೇರಿ, ಅದರಲ್ಲಿದ್ದ ಎರಡು ಬಸ್ಸಿಗೆ ಆಗುವಷ್ಟಿದ್ದ ಜನರ ಮಧ್ಯ ಸೀಟೊಂದನ್ನು ಗಿಟ್ಟಿಸಿ,ಶ್ಯಾಗಲೆ ಅನ್ನುವ ಆ ಹಳ್ಳಿಯನ್ನು ಮುಟ್ಟುವಷ್ಟರಲ್ಲಿ ಸುಸ್ತೋ ಸುಸ್ತು. ಮರುದಿನ ಚಿಕ್ಕಪ್ಪ ಹೊಲಕ್ಕೆ ಹೊರಟು ನಿಂತಾಗ ಚಿಕ್ಕಮ್ಮ 'ಇವ್ನು ಯಾಕೆ ಕರಕೊಂಡು ಹೋಗಬಾರದು'ಅಂತಾ ತಾಕೀತು.ಸರಿ, ಚಿಕ್ಕಪ್ಪನ ಜೊತೆ ಹೊಲಕ್ಕೆ ಹೆಜ್ಜೆ ಹಾಕಿದ್ದಾಯಿತು. ಅಲ್ಲಿ ತಲುಪಿದಾಗಲೇ ತಿಳಿದದ್ದು ಅದು ಹೊಲ ಅಲ್ಲ ಅದು ಮಾವಿನ ತೋಪು.

ಮೊದಲ ದಿನ ಕೆಲಸಕ್ಕೆ ಸೇರಿಕೊಂಡ ಉದ್ಯೋಗಿಯನ್ನು ಮೆನೇಜರ್ ಕರೆದು ಕೆಲಸದ ಬಗ್ಗೆ ತಿಳಿಹೇಳುವಂತೆ, ಚಿಕ್ಕಪ್ಪನಿಂದ ಮಾವಿನ ತೋಪಿನಲ್ಲಿ ನಾನು ಮಾಡಬೇಕಿರುವ ಕೆಲಸದ ಬಗ್ಗೆ ಬ್ರೀಫಿಂಗ್ ! ನನ್ನ ಕೆಲಸ ತೋಪಿನಲ್ಲಿರುವ ಮಾವಿನಕಾಯಿಗಳನ್ನು ಕಾಯುವುದು.ನಾನು ಕಣ್ಣಿಟ್ಟು ಮಾವಿನಕಾಯಿಗಳನ್ನು ಕಾಯಬೇಕಿರುವುದು ದನ-ಎಮ್ಮೆ-ಮೇಕೆ ಕಾಯುವ ಹುಡುಗರಿಂದ.ಆ ದನಗಾಹಿಗಳು ತೋಟದಲ್ಲಿ ಕಂಡ ತಕ್ಷಣ ಒಂದು ಕೂಗು ಹಾಕುವುದು ನನ್ನ ಕೆಲಸ. ಹತ್ತಿರವೇ ಇರುವ ಗದ್ದೆಯಲ್ಲಿ ಕೆಲಸ ಮಾಡುತ್ತಿರುವ ಚಿಕ್ಕಪ್ಪನಿಗೆ ನನ್ನ ಕೂಗು ಒಂದು ಅಲರ್ಟ್ ಸಿಗ್ನಲ್.

ಚಿಕ್ಕಮ್ಮ ಮಧ್ಯಾಹ್ನ ಊಟ ತಗೊಂಡು ಬಂದಾಗಲೇ ಗೊತ್ತಾಗಿದ್ದು ಮಧ್ಯಾಹ್ನ ಆಗಿದೆಯಂತ.ಮಾವಿನ ಮರದ ತಂಪಿನಲ್ಲಿ ಕುಳಿತು ರೊಟ್ಟಿ-ಚಟ್ನಿ-ಬುತ್ತಿ ತಿನ್ನುವಾಗ ಅದುವೇ ಅಮೃತ.ಊಟದ ನಂತರ ಪಕ್ಕದಲ್ಲಿಯೇ ಹರಿಯುತ್ತಿದ್ದ ತೊರೆಯಲ್ಲಿ ಕುಡಿಯಲು ನೀರು.ಊಟದ ನಂತರ ಮತ್ತೆ ಶುರು ಕಾವಲು ಕಾರ್ಯ.ಆಗಾಗ ಮಾವಿನಕಾಯಿ ರುಚಿ ನೋಡಲು ಅವಕಾಶ.ಮಧ್ಯಾಹ್ನ ವಿಪರೀತ ಬಿಸಿಲು ಜಾಸ್ತಿಯಾಗುತ್ತಿದಂತೆ ತೊರೆಯಲ್ಲಿ ಸ್ನಾನ-ನೀರಾಟ-ದೋಣಿ ಆಟ.

ಸಂಜೆ ಆಗುತ್ತಿದಂತೆ ಮನೆಗೆ ವಾಪಸಾಗುವ ತಯಾರಿ. ಆ ಸಮಯಕ್ಕೆ ಸರಿಯಾಗಿ ಎಲ್ಲ ಎಮ್ಮೆ-ದನದ ಹಿಂಡುಗಳು ಮನೆ ಕಡೆಗೆ.ಆ ರೀತಿ ಸಂಜೆ ದೂಳೆಬ್ಬಿಸುತ್ತ ಹೊರಟ ದನದ ಹಿಂಡಿನ ಹಿಂದೆ ನಮ್ಮ ಸವಾರಿ.'ಗೋದೂಳಿ' ಪದದ ಅರ್ಥವಾಗಿದ್ದು ಆಗ.ಮನೆಗೆ ಬಂದೊಡನೆ ತೋಟದಿಂದ ತಂದ ಮಾವಿನಕಾಯಿ ಅಮ್ಮ-ಚಿಕ್ಕಮ್ಮನಿಗೆ ಅರ್ಪಣೆ.ರಾತ್ರಿ ಊಟದಲ್ಲಿ ಮಾವಿನಕಾಯಿ ಚಟ್ನಿ ಹಾಜರ್!

ಈ ದಿನಚರಿ ಹೀಗೆ ನಡೆಯಿತು ಕೆಲವು ದಿನ.ಅದೊಂದು ದಿನ ಕಾವಲು ಮಾಡುವಾಗ ನೋಡಿದರೆ ದನಗಾಹಿಯೊಬ್ಬ ತೋಟದಲ್ಲಿ ಕಾಣಬೇಕೇ.ಇನ್ನೇನು ಕೂಗು ಹಾಕಬೇಕುವೆನ್ನುವಷ್ಟರಲ್ಲಿ ಅವನ ಜೊತೆ ಚಿಕ್ಕಪ್ಪ..ಬಹುಷಃ ಮಾವಿನಕಾಯಿ ಕದಿಯಲು ಬಂದಾಗ ಸಿಕ್ಕಿಬಿದ್ದಿರಬೇಕು ಅಂದುಕೊಂಡು ಅಲ್ಲಿಗೆ ಹೋದರೆ, ಆಶ್ಚರ್ಯ ಕಾದಿತ್ತು.ಚಿಕ್ಕಪ್ಪ ಅವನಿಗೆ ಸಾಕಷ್ಟು ಮಾವಿನಕಾಯಿ ಕೊಡಬೇಕೇ ! ಆ ದನಗಾಹಿ ಮಾವಿನಕಾಯಿ ತಗೊಂಡು ನಂತರ ಚಿಕ್ಕಪ್ಪನ ಜೊತೆ ಹೊರಟ.ನೀನು ಬಾ ಎಂಬಂತೆ ನನಗೆ ಸನ್ನೆ.

ಆ ಹುಡುಗ ಕರೆದುಕೊಂಡು ಹೋಗಿದ್ದು ಅವನ ಮೇಕೆ ಹಿಂಡಿನ ಹತ್ತಿರ. ಒಂದು ಮೇಕೆಯನ್ನು ಕರೆದುಕೊಂಡು ಬಂದು ಚಿಕ್ಕಪ್ಪನ ಹತ್ತಿರವಿದ್ದ ಚೊಂಬಿನಲ್ಲಿ ಸರಸರ ಅಂತ ಹಾಲು ಕರೆದುಬಿಟ್ಟ. ನಂತರ ನನ್ನೆಡೆಗೆ ನೋಡಿ 'ಮೇಕೆ ಹಸಿ ಹಾಲು ಕುಡಿದಿಯಾ ಯಾವಾಗಲದರೂ' ಎಂದಾಗ ನಾನು ಕಕ್ಕಾಬಿಕ್ಕಿ. ಚಿಕ್ಕಪ್ಪ 'ಪಟ್ಟಣದ ಹುಡುಗ ಬಹುಷಃ ಮೇಕೆನೇ ನೋಡಿಲ್ಲ, ಹಾಲು ಎಲ್ಲಿಂದ ಬರಬೇಕು' ಅನ್ನುತ್ತ ನಕ್ಕಿದ್ದೆ ನಕ್ಕಿದ್ದು.

ಚಿಕ್ಕಪ್ಪ ಹಾಲಿನ ಚೊಂಬು ನನಗೆ ಕೊಡುತ್ತ ರುಚಿ ನೋಡು ಅಂದಾಗೆ, ಆ ಮೇಕೆ ಹುಡುಗ 'ಆ ಚೊಂಬಿನಲ್ಲಿ ಆಮೇಲೆ ಕುಡಿ, ಈಗ ಇಲ್ಲಿ ಬಾ' ಅಂದ.ನನ್ನನ್ನು ನೆಲದ ಮೇಲೆ ಬಾಗಿ ಕುಳಿತುಕೊಳ್ಳುವಂತೆ ಹೇಳಿ, ಆ ಮೇಕೆ ಕೆಚ್ಚಲಿನಿಂದ ನೇರವಾಗಿ ನನ್ನ ಬಾಯಿಗೆ ಹಾಲು ಬೀಳುವಂತೆ ಕರೆಯತೊಡಗಿದ.ನಮ್ಮ ಹಾಲಿನವ ಕೊಡುತ್ತಿದ್ದ ನೀರಿನಂತ ಹಾಲಿಗಿಂತ ಗಟ್ಟಿ ಮತ್ತು ರುಚಿ. ಹಾಲು ಆಗಾಗ ಬಾಯಿಗೆ ಬೀಳದೆ ಮುಖದ ಮೇಲೆ ಬಿದ್ದಾಗ ಹಾಲಿನ ಅಭಿಷೇಕ!

ಈ ಮಾವು ಕಾಯುವ ಕಾಯಕ ನನ್ನ ಬೇಸಿಗೆ ರಜೆ ಮುಗಿಯುವರೆಗೆ ನಡೆಯಿತು...ಆ ನಡುವೆ ಆ ದನಗಾಹಿಗಳೊಂದಿಗೆ ಬೆಳೆದ ಸ್ನೇಹ,ಸಂಜೆ ಮನೆಗೆ ಮರುಳುವಾಗ ಅವರ ಎಮ್ಮೆಯ ಮೇಲೆ ಕುಳಿತು ಮಾವಿನಕಾಯಿ ತಿನ್ನುತ್ತಾ ಸವಾರಿ. ಎಷ್ಟೊಂದು ಸುಮಧುರ ಆ ನೆನಪುಗಳು..

ಶ್ಯಾಪಿಂಗ್ ಮಳಿಗೆಯಲ್ಲಿ '2% fat milk' ಡಬ್ಬಿಯನ್ನು ಮತ್ತು 'frozen cut mango' ನೋಡಿ ಮುಖದ ಮೇಲೆ ಮಂದಹಾಸ.

ನೊರೆಭರಿತ ಮೇಕೆ ಹಾಲಿನ ನೆನಪು...

ತೋಟದಲ್ಲಿ ಉಪ್ಪಿನ ಜೊತೆ ತಿಂದ ಮಾವಿನಕಾಯಿಯ ನೆನಪು..