Monday, May 28, 2007

ಮನೆ-ಮನಗಳು ಕಾದಿವೆ..

ಆ ಕಟ್ಟಡಗಳ ಮುಂದೆ ನನ್ನ ಕಾರ್ ಪಾರ್ಕ್ ಮಾಡಿ, ಒಳಗೆ ಹೋಗಿ ಅಲ್ಲಿನ ರೆಸಿಡೆಂಟ್ ಮ್ಯಾನೇಜರ್ ಭೇಟಿಯಾಗುತ್ತೇನೆ. ಅವರು ದೇಶಾವರಿ ನಕ್ಕು, ಬಂದ ಕಾರಣ ಕೇಳುತ್ತಾರೆ. ನಾನು ನಿಮ್ಮ ಆಪಾರ್ಟ್‍ಮೆಂಟ್‍ನಲ್ಲಿ ಮನೆ ಖಾಲಿಯಿದೆ ಅಂತಾ ಕೇಳಿದೆ ಅಂತಾ ಪ್ರಸ್ತಾವ ಮಾಡುತ್ತೇನೆ. ಅಲ್ಲಿಂದ ನಿರೀಕ್ಷಿಸಿದಂತೆ ಬರುತ್ತೆ ಪ್ರಶ್ನೆ ' ಎಷ್ಟು ಜನ ಇರ್ತೀರಾ'. ನಾನು ಹೇಳ್ತಾನೆ 'ನಾನು ನನ್ನ ಪತ್ನಿ'. ಹಾಗೇ ಹೇಳುವಾಗ ನನ್ನ ಕಣ್ಣುಗಳಲ್ಲಿ ನಿನ್ನದೇ ಬಿಂಬ.

ಯಾಕೋ ಈ ಮನೆ ಅಷ್ಟು ಇಷ್ಟವಾಗಲಿಲ್ಲ. ಮತ್ತೆ ಮರುದಿನ ಇನ್ನೊಂದು ಮನೆಗೆ ಭೇಟಿ. ಮತ್ತೆ ಪ್ರಶ್ನಾವಳಿ ಶುರು. ಅಪಾರ್ಟ್‍ಮೆಂಟ್ ಮ್ಯಾನೇಜರ್ ಕೇಳ್ತಾರೆ ' ಎಷ್ಟು ಜನ ಇರ್ತಿರಾ', ನಾನು ಹೇಳ್ತಾನೆ 'ನಾನು ನನ್ನ ಹೆಂಡತಿ'. ಮುಂದಿನ ಪ್ರಶ್ನೆ ನುಗ್ಗಿ ಬರುತ್ತೆ 'ಮಕ್ಕಳು ಇದರಾ'. ನನಗೆ ನಗು ತಡೆಯಲು ಆಗುವುದಿಲ್ಲ. ನಸುನಕ್ಕ ಇಲ್ಲಾ ಅನ್ನುತ್ತೇನೆ. ಅವರಿಗೆ ಹೇಳ್ತೇನೆ "ಇಲ್ಲಾ ಇನ್ನೂ ಮದುವೆಯಾಗಿಲ್ಲ, 'ಮದುವೆ'ಯಾಗಿ ಶೀಘ್ರದಲ್ಲಿ ಹೆಂಡತಿ ಕರೆ ತರುತ್ತೇನೆ" .

ಆ ಮ್ಯಾನೇಜರ್‍ ಪ್ರಶ್ನಾವಳಿ ಮುಂದುವರಿಯುತ್ತೆ ' ನಿಮ್ಮ ಹೆಂಡತಿ ಬರಲಿಲ್ಲವಾ ನಿಮ್ಮ ಜೊತೆ ಮನೆ ನೋಡಲು?'. ನೀನು 'ಹೆಂಡತಿ'ಯಾಗಿದ್ದು ಎಕೋ ಖುಷಿಯೆನಿಸುತ್ತೆ. ಆ ಮ್ಯಾನೇಜರ್‌ಗೆ ನಮ್ಮ ನಾನೊಂದು ತೀರ, ನೀನೊಂದು ತೀರದ ವಿರಹದ ಕತೆ ಹೇಳಬೇಕು ಅನಿಸುತ್ತೆ. ಸುಂಕದವರ ಮುಂದೆ ಸುಖದುಃಖ ಹೇಳೋದೇ ! ಸುಮ್ಮನೆ 'ಇಲ್ಲಾ' ಅನ್ನುತ್ತೇನೆ. ಮುಂದಿನ ಪ್ರಶ್ನೆ 'ನಿಮ್ಮ ಮನೆಯಲ್ಲಿ ಪೆಟ್ ಇದೇಯಾ?' ನಾನು ಮನಸ್ಸಲ್ಲೇ ಅಂದುಕೊಳ್ಳುತ್ತೇನೆ 'ನನ್ನಾಕೆಗೆ ನಾನೇ ಪೆಟ್, ನನಗೆ ಅವಳೇ ಪೆಟ್, ಹೀಗಿರುವಾಗ ಬೇರೆ ಪೆಟ್ ಯಾಕೇ'.

ಹಲವಾರು ಈ ತರದ ಸಂದರ್ಶನಗಳ ಬಳಿಕ ಒಂದು ಮನೆ ಇಷ್ಟವಾಗುತ್ತೆ. ಇಲ್ಲಿ ಅದೇನೋ 'ಕ್ರೆಡಿಟ್ ಚೆಕ್' ಅಂತಾ ಮಾಡ್ತಾರೆ. ಒಂಥರ ಆ ವ್ಯಕ್ತಿಯ ಜಾತಕ ಜಾಲಾಡಿದಂತೆ ಆ ಕ್ರೆಡಿಟ್ ಚೆಕ್. ಆ ವ್ಯಕ್ತಿಯ ಅರ್ಥಿಕ ವಹಿವಾಟುಗಳು-ವ್ಯಕ್ತಿಯ ಹಿನ್ನಲೆ ಎಲ್ಲಾ ಪರಿಶೀಲಿಸಲಾಗುತ್ತೆ. ಮರುದಿನ ಮ್ಯಾನೇಜರ್ ಕರೆ ಮಾಡಿ ' ಅಭಿನಂದನೆಗಳು , ನಿಮ್ಮ ಕ್ರೆಡಿಟ್ ಚೆಕ್ ಪಾಸಾಯಿತು' ಎನ್ನುತ್ತಾರೆ. ಅವರಿಂದ ಮನೆಯ ಬಾಡಿಗೆ, ವಿವರಗಳನ್ನು, ಅವರ ಆಪಾರ್ಟ್‍ಮೆಂಟ್‍ಗಳ ಕಟ್ಟಳೆಗಳನ್ನು ಕೇಳಿಸಿಕೊಂಡು ಆ ಮನೆಯ ಕಾಗದ ಪತ್ರಕ್ಕೆ ಸಹಿ ಹಾಕುತ್ತೇನೆ.

ಒಂದು ಬಿಡುವಿನ ದಿವಸ ಅಲ್ಲಿಗೆ ವರ್ಗಾವಾಗುತ್ತೇನೆ. ಬ್ರಹ್ಮಚಾರಿ ಜೀವನದ ದೊಡ್ಡ ಪ್ಲಸ್ ಪಾಯಿಂಟ್ ಅಂದರೆ ಹೆಚ್ಚಿಗೆ ಲಗೇಜ್ ಇರೋಲ್ಲಾ.

ಮನೆಯಲ್ಲಿ ಹೊಸ ಪೇಂಟ್‍ನ ವಾಸನೆ. ಯಾಕೋ ನನಗೆ ಅದು ಇಷ್ಟವಾಗುತ್ತೆ.

ಅದು ಎಲ್ಲಿತ್ತೋ ನಿನ್ನ ನೆನಪು ಬಂದು ಹಿಂದಿನಿಂದ ಅಪ್ಪಿಕೊಂಡುಬಿಡುತ್ತೆ. ನಿನ್ನ ನೆನಪನ್ನು ಕೂಸುಮರಿ ಮಾಡಿಕೊಂಡು ಆ ಮನೆಯಲ್ಲೆಲ್ಲಾ ಒಂದು ಸುತ್ತು ಹಾಕುತ್ತೇನೆ. ಆ ನಿನ್ನ ನೆನಪಿಗೆ ಹೇಳುತ್ತೇನೆ 'ಇದು ನನ್ನ ಹುಡುಗಿ ಇಲ್ಲಿಗೆ ಬಂದಾಗ ನಾವಿಬ್ಬರು ಇರೋ ನಮ್ಮ ಮನೆ'. ಆವಾಗ ಆ ನೆನಪು ಕೇಳುತ್ತೆ 'ಮತ್ತೆ ನಾನು ಎಲ್ಲಿ ಇರೋದು?'. ನಾನು ಅದಕ್ಕೆ ಹೇಳ್ತಾನೆ ' ನೀನು ನಮ್ಮ ಜೊತೆಯಲ್ಲಿ ಇರಬಹುದು. ಆದರೆ ನನ್ನ ಹುಡುಗಿಯೇ ಇಲ್ಲಿಗೆ ಬಂದ ಮೇಲೆ ನೀನು ಹೇಗೆ ಬರ್ತಿಯಾ?'

ಆ ನೆನಪಿಗೆ ಅರ್ಥವಾಗುತ್ತೆ.

ಅಲ್ಲಿಂದ ಅಡುಗೆಮನೆಗೆ ಹೊಕ್ಕರೆ ನಿನ್ನ ನೆನಪು ಬಂದು ಹಿಂದೆ ನಿಂತು ' ಎನು ಅಡುಗೆ ಇವತ್ತು' ಅಂತಾ ಕೇಳುತ್ತೆ. ನಿನ್ನ ನೆನಪಿನ ಜೊತೆ ಊಟಕ್ಕೆ ಕೂತು, ನನ್ನ ಅಡುಗೆ ರುಚಿ ತೋರಿಸುತ್ತೇನೆ.

ಆಮೇಲೆ ಬೆಡ್ ರೂಮ್ ಹೊಕ್ಕುತ್ತಿದ್ದಂತೆ ನೆನಪಿಗೆ ಎನೋ ಹೊಳೆದು ನನ್ನ ಕಡೆ ಒಮ್ಮೆ, ನನ್ನ ಲ್ಯಾಪ್ ಟಾಪ್‍ನಲ್ಲಿರುವ ನಿನ್ನ ಪೋಟೋದ ಕಡೆ ಒಮ್ಮೆ ನೋಡಿ ಮಂದಹಾಸ ಬೀರುತ್ತೆ. ನಾನು ಆ ತರಲೆ ನೆನಪಿಗೆ 'ಆಯ್ತು ತಾವು ಬಂದು ತುಂಬಾ ಹೊತ್ತಾಯ್ತು' ಅನ್ನುತ್ತೇನೆ. ಅದರು ನೆನಪು ಬಿಡದೆ 'ಇದು ನಿಮ್ಮ ಬೆಡ್ ರೂಮ್ ಅಲ್ವಾ' ಅನ್ನುತ್ತೆ. ನಾನು ನಸುನಗುತ್ತಾ 'ಹೌದು ಹೌದು, ತಾವು ಹೊರಡಿ ಅನ್ನುತ್ತೇನೆ'.

ಆ ತರಲೆಯನ್ನೇನೋ ಕಳಿಸಿ ಆಯ್ತು. ಆದರೆ ಮನಸ್ಸಿಗೆ ಎನಾಯ್ತು ಈಗ. ಮತ್ತೆ ಶುರುವಾಯ್ತು ನೋಡು ನಿನ್ನ ನೆನಪಿನ ಮೆರವಣಿಗೆ.

ನಿದ್ದೆ ಬರದೇ ಸುಮ್ಮನೆ ಹೊರಳಾಡ್ತಾ ಇದೀನಿ.

ಮನೆ ತುಂಬಾ ಖಾಲಿ ಖಾಲಿ ಅನಿಸ್ತಾ ಇದೆ ಕಣೇ. ನನ್ನ ಮನವೂ ಸಹ..

ಬೇಗ ಬಂದು ನನ್ನ ಮನೆ-ಮನವನ್ನು ತುಂಬು..

20 comments:

Anonymous said...

ಸರದಾರ,
ಇನ್ನೂ ಎಷ್ಟು ದಿನವಪ್ಪ ನಿನ್ನ ವಿರಹ?
ಬರಹ ತುಂಬ ಚೆನ್ನಾಗಿದೆ. ಮಜಾ ಬಂತು, ಅಳು ಬಂತು, ನಗು ಬಂತು, ಕನಸು ಬಿತ್ತು.

ಮನಸ್ವಿನಿ said...

ಹಮ್................

Anonymous said...

ರೀ ಶಿವ್,
ನೆನಪುಗಳೊಟ್ಟಿಗೆ ಜೀವನ ಎಷ್ಟು ಚಂದ ಅಲ್ವಾ ಅದನ್ನಾ ಹೇಗೆ ಬೇಕಾದ್ರು ಕಾಣಬಹುದು... ಹಗಲು ಗನಸುಗಳು. ನಾನಂತು ಎಷ್ಟು ಹಗಲು ಕನಸು ಕಾಣ್ತೀನಿ ಅಂದ್ರೆ ನಂಗೆ ವಾಸ್ತವಕ್ಕಿಂತ ಹೀಗೆ ಹಗಲು ಕನಸು ಕಾಣೋದೆ ಇಷ್ಟ ಆಗಿ ಹೋಗಿದೆ.

ನಿಮ್ಮ ವಿರಹಕ್ಕೆ ಆದಷ್ಟು ಬೇಗ ಫುಲ್ ಸ್ಟಾಪ್ ಸಿಗ್ಲಿ.

ಸುಪ್ತದೀಪ್ತಿ suptadeepti said...

ಸರದಾರ.. ಚೆನ್ನಾಗಿದೆ ಹೆಸರು! ಲೇಖನವೂ ಚೆನ್ನಾಗಿದೆ. ನೆನಪುಗಳ ಕೂಸುಮರಿ ಮಾಡುವ ಕಲ್ಪನೆಯಂತೂ ತುಂಬಾ ಹಿಡಿಸಿತು.
ಬೆಡ್ರೂಮಿನಲ್ಲಿ ಸಧ್ಯಕ್ಕೆ ಅವಳಿಲ್ಲವಲ್ಲ, ನೆನಪುಗಳನ್ನೇ ದಿಂಬಾಗಲು (ತೋಳ್ದಿಂಬು ಇಲ್ಲವಲ್ಲ) ಕರೆಯಬೇಕಿತ್ತು, ಯಾಕೆ ಹೊರಗೆ ಓಡಿಸಿದಿರಿ?

ವಿರಹದಿಂದ ತೀರಾ ಸೊರಗದಿರಿ, ಗುರುತು ಹತ್ತದೆ ಹೋದೀತು!! ಅಮೆರಿಕದ ಗಾಳಿನೀರಿಗೆ ದಪ್ಪಗಾಗಿದ್ದರೆ ಇದೀಗ ಒಳ್ಳೇದು. Good Luck.

Shiv said...

DS,
ವಂದನೆಗಳು !
Almost there :)

ಮನಸ್ವಿನಿ,
ಹಮ್ !
ಎನ್ರೀ ಹಿಂದಿನಲ್ಲಿ ಮಾತಾಡೋಕೆ ಶುರುಮಾಡ್ಕೊಂಡು ಬಿಟ್ಟಿದೀರಾ

ರಂಜು,
ಹೌದು..ಕನಸುಗಳು ಸುಂದರ..ಹಗಲುಗನಸುಗಳು ಇನ್ನೂ ಸುಂದರ..ಆದರೆ ಹಾಳಾದ್ದು ಅಫೀಸ್‍ನಲ್ಲಿ ಬಿಡುವೆ ಸಿಗಲ್ಲಾರೀ :)ನಿಮ್ಮ ಹಾರೈಕೆಗೆ ರ್ಥ್ಯಾಂಕ್ಸ್ ರೀ

Shiv said...

ಸುಪ್ತದೀಪ್ತಿ ಅವರೇ,
ನಮಸ್ಕಾರ ! ತುಂಬಾ ದಿವಸ ಆಯ್ತು ತಮ್ಮ ದರ್ಶನ ಆಗಿ..
ಆಯ್ಯೋ ಆ ನೆನಪುಗಳು ತುಂಬಾ ತರಲೆ ಕಣ್ರೀ..ಸುಮ್ಮನೆ ಇರೋಲ್ಲಾ..

ಧನ್ಯವಾದಗಳು !

ಸಂತೋಷಕುಮಾರ said...

ಭಾವನೆಗಳಲ್ಲಿ ಅದ್ದಿ ತಗೆದಂಗೆ ಬರೆದಿದ್ದಿರಾ. ಇಷ್ಟ ಆಯ್ತು.

Unknown said...

ಏನ್ ಸಕ್ಕತ್ತಾಗ್ ಬರ್ದಿದ್ದ್ಯಲ್ಲೆ ತಮ್ಮಾ!!! ನನ್ ತಲೀ ಒಳ್ಗ ಹಾ೦ಗೆ ಗು೦!!! ಅ೦ತ ಗು೦ಯ್ಗುಡ್ತಿದೆ ಈ ಪತ್ರ.

~ ಹರ್ಷ

Anonymous said...

ನಿಮ್ಮ ಹುಡುಗಿ ತುಂಬಾ ತುಂಬಾ ತುಂಬಾ ಲಕ್ಕೀ!!!!

Shiv said...

ಚಿರವಿರಹಿಗಳೇ,
ಪಾತರಗಿತ್ತಿಗೆ ಆತ್ಮೀಯ ಸ್ವಾಗತ !
ನಿಮ್ಮ ಮೆಚ್ಚುಗೆಗೆ ವಂದನೆಗಳು

ಹರ್ಷ,
ಪಸಂದ ಬಂದಿದ್ದಕ್ಕೆ ಥ್ಯಾಂಕ್ಸ್ ಕಣಣ್ಣೋ..

ಮಂದಾರ,
ಪಾತರಗಿತ್ತಿಗೆ ಭೇಟಿ ನೀಡಿದ್ದಕ್ಕೆ ವಂದನೆಗಳು
ಲಕ್ಕೀ..ಅದು ಗೊತ್ತಿಲ್ಲಾರೀ :)

Sushrutha Dodderi said...

ಆಹ! ಏನ್ ಚಂದ ಬರ್ದಿದೀರ! "ನೆನಪನ್ನು ಕೂಸುಮರಿ ಮಾಡಿ..." ಸೂಪರ್!
ನಿಜಕ್ಕೂ ಮೂಡಿಗೆರೆಯ ಅಕ್ಕ ಲಕ್ಕಿ! ಅವ್ರು ಬರೋ ಮೊದ್ಲೇ ನೀವು -ನಿಮ್ಮ ಮನೆ ರೆಡಿ ಆಗಿದೆ ಅಂದ್ರೆ...

mouna said...

howdu shiv, mane seri, aadre manasu yaavattigu khali anisabaradu. naa ee maatanna nimage modalamme (in fact addakkinta hechchu) heLidinni nija, aadre matte Helitini, i'm feeling happy for you!!

may your house be filled with laughter and happiness always!!

Shiv said...

ಸುಶ್,
ಮೆಚ್ಚುಗೆಗೆ ಥ್ಯಾಂಕ್ಸ್ ಕಣೋ..
ವಾಕ್ಯ ಪೂರ್ತಿ ಮಾಡು :)

ಮೌನ,
ನಿಮ್ಮ ಮಾತು ಅಕ್ಷರಶಃ ನಿಜ..ಮನ ಖಾಲಿ ಅನಿಸಿದರೆ..ಅದೊಂದು ತರ ಹೇಳಲಾಗದ ವ್ಯಥೆ
ನಿಮ್ಮ ಹಾರೈಕೆಗೆ-ಸ್ನೇಹಕ್ಕೆ ನಾನು ಅಭಾರಿ.

Unknown said...

Have given the link in my post.
Thanks for dropping in

Harsha

ರಾಜೇಶ್ ನಾಯ್ಕ said...

ವಿರಹ ವೇದನೆ ದಿನೇ ದಿನೇ ಹೆಚ್ಚಾಗುತ್ತಿರುವಂತೆ ತೋರುತ್ತಿದೆ. ಬೇಗ ವಾಲಗ ಊದಿಸ್ಕೊಳ್ಲಿ ಶಿವ್.

ಸಿಂಧು sindhu said...

ಶಿವ್,
ಸೊಗಸಾದ ಬರಹ.
ಹೀಗೆಲ್ಲ ಬರೆದರೆ ಅವಳಿಗೆ ಕಷ್ಟವಾಗುತ್ತೆ, ವೀಸಾ ಸಿಗುವುದಕ್ಕೆ ಮೊದಲೇ ಯಾರದ್ದಾದರೂ ಬ್ಯಾಗೇಜಿನಲ್ಲಿ ತೂರಿಕೊಂಡು ಬರಬೇಕೆನ್ನಿಸಿದಿದರೆ ಕಷ್ಟ.
ನೀವು ಕೂಸುಮರಿ ಮಾಡಿಸಿ ಅಲ್ಲಿಂದ ಕಳಿಸಿಕೊಟ್ಟ ನೆನಪಿನ ರಾಶಿ, ಇಲ್ಲಿ ಅವಳೂರಲ್ಲಿ ದಿನರಾತ್ರಿಗಳಿಗೆ ಹಗ್ಗ ಕಟ್ಟಿ ಜೋಕಾಲಿಯಾಡುತ್ತಾ ಅವಳನ್ನು ಗೋಳಾಡಿಸುತ್ತಿರಬಹುದು..

ಇನ್ನೂ ಕಾಯುವುದು ಯಾಕೆ.. ಬೇಗ ಕಲ್ಯಾಣ ರಾಗ ಕೇಳಿಸಿ.

Shiv said...

ರಾಜೇಶ್,
ಅದು ಮೌಂಟ್ ಎವರೆಸ್ಟ್ ಮುಟ್ಟಿದೆ ಕಣ್ರೀ :)

ಸಿಂಧು,
ವೀಸಾ ಈಗಾಗಲೇ ಸಿಕ್ಕಿದೆ ..
ನೆನಪಿನ ಜೋಕಾಲಿ..ನೆನಪು ಎನೆಲ್ಲಾ ಆಗುತ್ತಲ್ವಾ..ಸೊಗಸಾಗಿದೆ ನಿಮ್ಮ ಕಲ್ಪನೆ
ಹೂಂ ರೀ..ಸಮಯ ಓಡ್ತಾ ಇದೆ

v.v. said...

ಶಿವ್,
ಬಹಳ ಸುಂದರವಾಗಿ ಮೂಡಿ ಬಂದಿದೆ ಈ ನಿಮ್ಮ ಬರಹ.
ಅದನ್ನು ಓದಿದಾಗ ತೆಲುಗು ಮಾಯಾ ಬಜಾರ್ ಚಿತ್ರದ ಒಂದು ಹಾಡು ನೆನಪಿಗೆ ಬಂತು:
"...ವಿರಹಮು ಕೂಡಾ ಸುಖಮೇ ಕಾದಾ..
ನಿರುತಮು ಚಿಂತನ ಮಧುರಮೇ ಕಾದಾ.."


..
ಧನ್ಯವಾದಗಳು.

PRAVINA KUMAR.S said...

ಅದಷ್ಟು ಬೇಗ ನಿಮ್ಮ ಮನದೆನ್ನೆ ಮನೆ- ಮನ ಬೆಳಗಲಿ.....

Enigma said...

nimma hudgi odthala nimma blog na?