ಹವಾಯಿಯಲ್ಲಿ ಇಳಿದಾಗಿನಿಂದ ಇಲ್ಲಿಯವರೆಗೆ ಎಲ್ಲಿ ಆಲೆದಾಡಿದರೂ ಒಂದು ಹೆಸರು ಪದೇ ಪದೇ ಕಾಣಿಸುತಿತ್ತು.
ಕಮಹಮಯ...
ಅನೇಕ ನಗರಗಳ ಮುಖ್ಯ ರಸ್ತೆಗಳು, ಅಲ್ಲಿನ ವಿಶ್ವವಿದ್ಯಾಲಯ..ಎಲ್ಲೆಲ್ಲೂ ಕಮಹಮಯ ಹೆಸರು.
ಹವಾಯಿ ದ್ವೀಪಗಳ ಭೌಗೋಳಿಕ ಮತ್ತು ನೈಸರ್ಗಿಕ ಸೌಂದರ್ಯ್ಯದಷ್ಟೇ ವಿಭಿನ್ನವಾಗಿರುವುದು ಅದರ ಇತಿಹಾಸ.
ನಮ್ಮ ಕಾರ್ ಅಂತಹ ಒಂದು ಐತಿಹಾಸಿಕ ತಾಣದೆಡೆಗೆ ಹೊರಟಿತ್ತು. ಪುಕೋಹಲ ಹಿಹೂ ಎಂಬುದು ಹವಾಯಿ ಅತ್ಯಂತ ಪುರಾತನ ದೇವಾಲಯ ಮತ್ತು ಪ್ರಾಚೀನ ಸ್ಥಳ. ಹಿಲೋದಿಂದ ಸುಮಾರು ೨ ಗಂಟೆಗಳ ಪಯಣ..
ಪಾಲಿನೇಷಿಯನ್ ಜನ ಈ ದ್ವೀಪಗಳಿಗೆ ಬಂದು, ತಮ್ಮ ವಾಸಸ್ಥಳ ಮಾಡಿಕೊಳ್ಳುವುದರಿಂದ ಶುರುವಾಗುತ್ತದೆ ಹವಾಯಿ ಇತಿಹಾಸ. ನಂತರದ ಪ್ರಮುಖ ಘಟ್ಟ- ಬ್ರಿಟಿಷ್ ನಾವಿಕ ಕ್ಯಾಪ್ಟನ್ ಕುಕ್ ಈ ದ್ವೀಪಗಳನ್ನು ಅನ್ವೇಷಿಸುವುದು. ನಡುವೆ ಹವಾಯಿ ಸಾಮ್ರಾಜ್ಯ ಸ್ಥಾಪನೆ. ಕ್ರೈಸ್ತ ಮಿಷಿನರಿಗಳ ಆಗಮನ, ಫ್ರೆಂಚ್‍ರೊಂದಿಗೆ ಯುದ್ಧ, ಆಂತರಿಕ ಯುದ್ಧಗಳು, ಆಮೇರಿಕೆದೊಂದಿಗೆ ಒಪ್ಪಂದ, ಕೊನೆಗೆ ಅಮೇರಿಕೆಯ ೫೦ನೇ ರಾಜ್ಯವಾಗಿ ಸೇರ್ಪಡೆ, ಎರಡನೇಯ ವಿಶ್ವಯುದ್ಧದಲ್ಲಿ ಜಪಾನಿಯರಿಂದ ಹವಾಯಿ ಪರ್ಲ್ ಹಾರ್ಬರ್ ಮೇಲೆ ದಾಳಿ- ಪರಿಣಾಮ ಯುದ್ಧಕ್ಕೆ ಅಮೇರಿಕದ ಪ್ರವೇಶ......
ಹೀಗೆ ತೆರೆದುಕೊಳ್ಳುತ್ತಾ ಹೋಗುತ್ತದೆ ಹವಾಯಿ ಇತಿಹಾಸ ರಕ್ತಸಿಕ್ತವಾಗಿ ...
ಇಂತಹ ಹವಾಯಿಯ ಇತಿಹಾಸದಲ್ಲಿ ಪ್ರಮುಖ ಘಟ್ಟವೇ...ಹವಾಯಿ ಸಾಮ್ರಾಜ್ಯ ಸ್ಥಾಪನೆ.
ಅದು ೧೭೦೦ ಸಮಯ, ಹವಾಯಿ ದ್ವೀಪಗಳನ್ನು ಅಲ್ಲಿನ ಅಸಂಖ್ಯಾತ ಬುಡಕಟ್ಟಿನ ನಾಯಕರು ಆಳುತ್ತಿದ್ದರು. ದ್ವೀಪಗಳ ನಡುವೆ ಯುದ್ಧ ಸರ್ವೇಸಾಮಾನ್ಯವಾಗಿತ್ತು. ಹವಾಯಿ ಕತೆಗಳ ಪ್ರಕಾರ ಮಹಾನ್ ಯೋಧನೊಬ್ಬ ಈ ಎಲ್ಲಾ ದ್ವೀಪಗಳನ್ನು ಒಗ್ಗೂಡಿಸಿ, ಅದರ ರಾಜ್ಯಭಾರ ಮಾಡುತ್ತಾನೆಂದು, ಆ ಯೋಧ ಹುಟ್ಟಿದ ದಿನದಂದು ಧೂಮಕೇತುವೊಂದು ಕಾಣಿಸುವುದೆಂದು ಪ್ರತೀತಿ.
ಆಂತಹ ಧೂಮಕೇತುವೊಂದು ಕಾಣಿಸಿಕೊಂಡ ದಿನದಂದು ಹುಟ್ಟಿದವನೇ ಕಮಹಮಯ.(೧೭೫೦ ರ ಸಮಯದಲ್ಲಿ ಹವಾಯಿಯಲ್ಲಿ ಹ್ಯಾಲಿ ಧೂಮಕೇತು ಕಾಣಿಸಿಕೊಂಡ ಉಲ್ಲೇಖಗಳಿವೆ). ಆಗ ಆಳ್ವಿಕೆ ನಡೆಸುತ್ತಿದ್ದ ಆಳಪ ಎನ್ನುವ ರಾಜ, ಈ ಮಗು ಬೆಳೆದರೆ ತನ್ನ ಅಧಿಕಾರಕ್ಕೆ ಕೊನೆಗಾಲವೆಂದು, ಈ ಮಗುವನ್ನು ಕೊಲ್ಲಲು ಆದೇಶಿಸುತ್ತಾನೆ. ಇದನ್ನು ಮೊದಲೇ ಅರಿತಿದ್ದ ಕಮಹಮಯಯ ಪೋಷಕರು, ಆ ಮಗುವನ್ನು ಹುಟ್ಟಿದ ಕೂಡಲೇ ಇನ್ನೊಬ್ಬ ಪಂಗಡದ ನಾಯಕನಿಗೆ ಗುಪ್ತವಾಗಿ ವರ್ಗಾಯಿಸಿರುತ್ತಾರೆ. ಆ ಮಗು ಅಲ್ಲಿ ಗುಪ್ತವಾಗಿ ಬೆಳೆಯುತ್ತದೆ. ಸುಮಾರು ಐದು ವರ್ಷದ ನಂತರ, ಆ ರಾಜನಿಗೆ ತಾನು ಮಾಡಿದ್ದು ತಪ್ಪೆಂದು ಅನಿಸಿ, ಆ ಮಗುವನ್ನು ಹುಡುಕಿಸಿ ಮರಳಿ ಕರೆತಂದು ಶಿಕ್ಷಣ ಕೊಡಿಸುತ್ತಾನೆ. ಅಲ್ಲಿ ಕಮಹಮಯನ ಯುದ್ಧ ಮತ್ತು ರಾಜತಾಂತ್ರಿಕತೆಯ ಶಿಕ್ಷಣ ನಡೆಯುತ್ತದೆ.
ಆಳಪ ರಾಜ ತೀರಿಕೊಂಡಾಗ, ಅವನ ಸ್ಥಾನ ತುಂಬಲು ಆಳಪನ ಮಗ ಮತ್ತು ಆಳಪನ ಸಂಬಂಧಿಯೊಬ್ಬನ ನಡುವೆ ಸಂಘರ್ಷ ಉಂಟಾಗುತ್ತದೆ. ಆಗ ಕಮಹಮಯ ಆಳಪನ ಸಂಬಂಧಿಗೆ ಬೆಂಬಲ ನೀಡಿ, ಆತನ ಮಂತ್ರಿಮಂಡಲದಲ್ಲಿ ಸ್ಥಾನ ಪಡೆಯುತ್ತಾನೆ. ಮುಂದೆ ಈ ರಾಜನೂ ಸತ್ತಾಗ ಕಮಹಮಯ ತಾನೇ ರಾಜನಾಗುತ್ತಾನೆ. ಬ್ರಿಟಿಷ್ ಮತ್ತು ಅಮೇರಿಕದ ವ್ಯಾಪಾರಿಗಳ ಜೊತೆ ಸಂಧಾನ ಮಾಡಿಕೊಂಡು, ಅವರಿಂದ ಹೊಸ ಆಯುಧಗಳನ್ನು ಪಡೆಯುತ್ತಾನೆ. ಹೊಸ ಆಯುಧಗಳು, ಯುದ್ಧತಂತ್ರಗಳಿಂದ ಮುಂದಿನ ಹಲವು ವರ್ಷಗಳಲ್ಲಿ ಹವಾಯಿ ದ್ವೀಪದ ಎಲ್ಲಾ ನಾಯಕರನ್ನು ಮಣಿಸುತ್ತಾನೆ. ಮುಂದೆ ಹವಾಯಿಯನ್ನು ಒಂದು ಅಖಂಡ ಪ್ರಾಂತ್ಯವನ್ನಾಗಿ ರೂಪಿಸುತ್ತಾನೆ. ಹವಾಯಿನ್ ಜನರ ನೆಲ-ಕಲೆ-ಭಾಷೆ ಅಭಿವೃದ್ಧಿಗಾಗಿ ಅನೇಕ ಶಾಸನಗಳನ್ನು ಹೊರತರುತ್ತಾನೆ...ಹೀಗೆ ಹವಾಯಿಯ ಸುಪ್ರಸಿದ್ಧ ವ್ಯಕ್ತಿತ್ವವಾಗುತ್ತಾನೆ.
ಎರಡು ಗಂಟೆಗಳ ಪಯಣದ ನಂತರ ನಾವೀಗ ಪುಕೋಹಲ ಹಿಹೂ ತಲುಪಿದ್ದೆವು. ಅದೊಂದು ಕೆಂಪು ಕಲ್ಲುಗಳನ್ನು ಜೋಡಿಸಿ ಕಟ್ಟಿದ ಬೃಹತ್ ಕಟ್ಟಡ. ದೇವಾಲಯ ಅಂದೊಂಡನೆ ನಮ್ಮಲ್ಲಿನ ಕಲ್ಲಿನಲ್ಲಿ ಅರಳಿದ ದೇವಾಲಯಗಳು ಕಣ್ಮುಂದೆ ಬಂದವು. ಆದರೆ ಈ ದೇವಾಲಯದಲ್ಲಿ ಅಷ್ಟೊಂದು ಕರಕುಶಲತೆಯಾಗಲಿ ಅಥವಾ ಕುಸುರಿಕಲೆಯಾಗಲಿ ಇರಲೇ ಇಲ್ಲ. ಅದೊಂದು ಕಲ್ಲುಗಳನ್ನು ಒಟ್ಟಾಗಿ ಜೋಡಿಸಿಟ್ಟ ಕಟ್ಟಡವಾಗಿತ್ತು.
ಆ ಯುದ್ಧಗಾಲದಲ್ಲಿ ಎಲ್ಲವನ್ನೂ ಗೆಲ್ಲುತ್ತಾ ಬಂದ ಕಮಹಮಯ, ಒಬ್ಬ ನಾಯಕನೊಡನೆ ೮ ಸಾರಿ ಯುದ್ಧ ಮಾಡಿದರೂ ಯಾವುದೇ ಪಲಿತಾಂಶ ಬಂದೇ ಇರುವುದಿಲ್ಲ. ಆಗ ಒಬ್ಬ ಅರ್ಚಕನೊಬ್ಬ ಕಮಹಮಯನಿಗೆ, ಯುದ್ಧ ದೇವತೆಯ ಆರಾಧಿಸಲು ಒಂದು ದೇವಾಲಯ ಕಟ್ಟಲು ಸೂಚಿಸುತ್ತಾನೆ. ಆಗ ಕಟ್ಟಿದ್ದೇ ಪುಕೋಹಲ ಹಿಹೂ. ಇದರ ಕಟ್ಟಡ ಮುಗಿದಾಗ ಕಮಹಮಯ , ಆ ಪ್ರತಿಸ್ಪರ್ದಿ ನಾಯಕನಿಗೆ ಶಾಂತಿ ಮಾತುಕತೆಗೆ ಇಲ್ಲಿಗೆ ಆಹ್ವಾನಿಸುತ್ತಾನೆ. ಅಲ್ಲೆನೋ ಆಗುತ್ತೆಂದು ಗೊತ್ತಿದ್ದು, ಆ ನಾಯಕ ಬಂದಾಗ, ಅವನನ್ನು ಕಮಹಮಯಿಯ ಯೋಧರು ಹತ್ತೆಗೈಯುತ್ತಾರೆ.ಜಾನ್ ಯಂಗ್ ಎಂಬ ಬ್ರಿಟಿಷ್ ನಾವಿಕ ಕಮಹಮಯಿಯ ಯುದ್ಧ ಸಲಹೆಗಾರ. ಜಾನ್‍ನ ಮನೆ ಮತ್ತು ಅವನ ರಾಂಚ್ ಪುಕೋಹಲ ಹಿಹೂ ಹತ್ತಿರದಲ್ಲೆ ಇದೆ.
ಅಲ್ಲಿಂದ ಹಿಲೋಗೆ ಮರಳಿದಾಗ ಮಧ್ಯಾಹ್ನದ ಸಮಯ. ವಿಪರೀತ ಬಿಸಿಲು. ಹಿಲೋದಲ್ಲಿ ಕಮಹಮಯನ ೧೪ ಅಡಿ ಎತ್ತರದ ಬೃಹತ್ ಪ್ರತಿಮೆಯೊಂದಿದೆ. ಅದನ್ನು ನೋಡಿಕೊಂಡು,ನಮ್ಮ ಹೋಟೆಲ್ ಹತ್ತಿರವಿದ್ದ ಕೊಕೋನೆಟ್ ದ್ವೀಪಕ್ಕೆ ತೆರಳಿ, ಅಲ್ಲಿ ಸಮುದ್ರದ ದಡದಲ್ಲಿ ಕುಳಿತೆವು. ಬಿಸಿಲಿನ ದಗೆಯಿಂದ ದಡಕ್ಕಿಂತ ನೀರಿನಲ್ಲೇ ಹೆಚ್ಚು ಜನವಿದ್ದರು. ಅದ್ಯಾವುದೋ ಎತ್ತರದ ಕಟ್ಟೆಯಿಂದ ಹುಡುಗರು ಸಮುದ್ರಕ್ಕೆ ಧುಮುಕುತ್ತಿದ್ದರು. ಈ ಕಡೆ ಅನೇಕ ಕುಟುಂಬಗಳು ತಿಂಡಿ-ತಿನಿಸು ಮೆಲ್ಲುತ್ತಾ ಇದ್ದವು. ಅದ್ಯಾವುದೋ ಹವಾಯಿಯನ್ ಕುಟುಂಬವೊಂದು ನಮ್ಮನ್ನು ಕರೆದು ಮಾತಾಡಿಸಿ, ಭಾರತದ ಬಗ್ಗೆ ಒಂದು ರಾಶಿ ಕುತೂಹಲ ತೋರಿಸಿಕೊಂಡರು.
ಆ ತೀರ ಬಹುತೇಕ ಕಡೆ ಕಲ್ಲುಬಂಡೆಗಳಿಂದ ಆವೃತವಾಗಿತ್ತು. ಅದ್ಯಾವುದೋ ಕಲ್ಲು ಬಂಡೆಯ ಮೇಲೆ ನನ್ನಾಕೆ ಬ್ಯಾಗ್ ಒಂದರಲ್ಲಿ ತನ್ನ ಟವೆಲ್ ಇಟ್ಟುಕೊಂಡು ಕುಳಿತ್ತಿದ್ದಳು. ಆಗ ಅದೆಲ್ಲಂದಲೋ ಬಂದ ಒಂದು ದೊಡ್ಡ ಅಲೆ ಆ ಟವಲ್ ಬ್ಯಾಗ್ ನೀರಿಗೆ ಎಳೆದುಕೊಂಡು ಹೋಗಬೇಕೇ. ಸರಿ, ಅಂತಹ ಆಳವಾಗಿರಲಿಲ್ಲವೆಂದು ಎಣಿಸಿ, ಆ ಬ್ಯಾಗ್‍ನ ತರಲು ಇಳಿದೆ ನೀರಿಗೆ. ಅಲೆಯ ಹೊಡೆತಕ್ಕೆ ಆ ಬ್ಯಾಗ್ ತೇಲುತ್ತಾ ತೇಲುತ್ತಾ ಎಲ್ಲೆಲ್ಲೋ ಹೋಗತೊಡಗಿತ್ತು. ಕೊನೆಗೂ ಅದನ್ನು ಹಿಡಿದುಕೊಂಡು ನೀರಿನಿಂದ ಹೊರಬಂದಾಗ, ಪೂರ್ತಿ ಒದ್ದೆ ಒದ್ದೆ. ಆವಾಗ ನೋಡಿಕೊಂಡಿದ್ದು, ಕಾಲಿನಿಂದ ಜಿನುಗಿತ್ತಿದ್ದ ರಕ್ತ. ಆಗಿದ್ದೆನೆಂದರೆ, ಆ ಬ್ಯಾಗ್ ಹಿಡಿಯಲು ಹೋದಾಗ ತಳದಲ್ಲಿದ್ದ ಚೂಪಾದ ಕಲ್ಲುಗಳು ಪಾದವನ್ನು ಕೊಯ್ದಿದ್ದವು. ಅಂತಹ ದೊಡ್ಡ ಗಾಯವೇನೂ ಆಗಿಲ್ಲದಿದ್ದರೂ, ಹವಾಯಿ ನೆನಪಿಗೆಂದು ಕಾಲಿನಲ್ಲಿ ಗುರುತುಗಳು ಮೂಡಿದ್ದವು ! ಇನ್ನೂ ಬ್ಯಾಗ್‍ಗೋಸ್ಕರ ನಾನು ಮಾಡಿದ ಸಾಹಸ ನೋಡಿ ನನ್ನಾಕೆಯಿಂದ ಪೂರ್ತಿ ಅಂಕ ಸಿಕ್ಕವು!
(ಕೊನೆಯ ಭಾಗದಲ್ಲಿ: ಕೋನದ ವೀಕ್ಷಣೆ ಮತ್ತು ವೈಕೋಲವೆಂಬ ಮೋಹಕ ಬೀಚ್)
4 comments:
ಕಮಹಮಯನ ಕತೆ ಓದಿದಾಗ ನಮ್ಮ ಪೌರಾಣಿಕ ಕತೆಗಳೂ ನೆನಪಿಗೆ ಬಂದವು. ಮಾನವಕುಲ ಒಂದೇ ಎಂದು ಇದಕ್ಕಾಗಿಯೇ ಹೇಳಿದ್ದಾರೇನೊ?
ಸುನಾಥ್ ಕಾಕಾ,
ನೀವು ಹೇಳಿದ್ದು ನಿಜ.
ಕಮಹಮಯ ಜನನದ ಸುತ್ತಲಿನ ಕತೆ ನಮ್ಮ ಕೃಷ್ಣನ ಜನ್ಮದ ಕತೆಗಳಂತೆ ಇವೆಯಲ್ಲವಾ..
ಮಹಾನ್ ಯೋಧನೊಬ್ಬ ಹುಟ್ಟುತ್ತಾನೆ ಅನ್ನುವ ಭವಿಷ್ಯದ ಮೇಲೆಯೇ ಆಗ ಹುಟ್ಟಿದ ಮಗುವಿನ ಭವಿಷ್ಯವೂ ತಳಕು ಹಾಕಿಕೊಳ್ಳುತ್ತದೆ. ಅದಕ್ಕಾಗಿಯೇ ಪರ-ವಿರೋಧಿಗಳು ಕಾಯುತ್ತಾ ಆ ಮಗುವಿನ ವ್ಯಕ್ತಿತ್ವ ನಿರ್ದಿಷ್ಟ ದಿಕ್ಕಿನಲ್ಲಿಯೇ ಬೆಳೆಯಲು ಸಹಾಯಕರಾಗುತ್ತಾರೆ, ಅಲ್ಲವೆ?
ಮನದನ್ನೆಯ ಟವೆಲ್ ಮತ್ತು ಬ್ಯಾಗ್ ತರಲು ನೀವು ಮಾಡಿದ ಸಾಹಸಕ್ಕೆ ಮರುಳಾಗಿ ಅವರು ಪೂರ್ಣ ಅಂಕ ಕೊಟ್ಟಿದ್ದು ಆಶ್ಚರ್ಯವೇನಲ್ಲ. ಕಾಲಿನ ಗಾಯಗಳು ಮಾಗಿದವೆ? ನೆನಪುಗಳಂತೂ ಮಾಯದಂತೆ ಇಲ್ಲಿ ದಾಖಲಾಗಿ ಕೂತವು. ಗುಡ್.
Its good sir :-)
Innu tumba pravaasagalige hogbanni....baritaa iri naavu hogodu tapputte annuvashtu chennagide nimma kathana :-)
Sunil.
Post a Comment