Sunday, June 13, 2010

ವೀವಾ ಪುಟ್ಬಾಲ್ !


ನೆರೆತ ಗಡ್ಡದ ಚಿಕ್ಕ ಕಾಯದ ಆ ಸೂಟ್‍ದಾರಿ ಕ್ರೀಡಾಂಗಣದಲ್ಲಿ ಬರುತ್ತಿದ್ದಂತೆ ಎಲ್ಲೆಡೆ ಮಿಂಚಿನ ಸಂಚಲನ. ಸಾವಿರಾರು ಪ್ರೇಕ್ಷಕರಿಂದ ಮೆಚ್ಚುಗೆಯ ಕರತಾಡನ. ಆತ ಆ ತಂಡದ ಆಟಗಾರನಲ್ಲ. ತಂಡದ ಕೋಚ್..

ಆತ ಡಿಯಗೋ ಮರಡೋನ..

ಅರ್ಜೆಂಟೇನಾ ಎಂಬ ಆ ಲ್ಯಾಟೀನ್ ಅಮೇರಿಕಾದ ದೇಶದ ಬಗ್ಗೆ ಜಗತ್ತು ನಿಬ್ಬೆರಗಾಗಿ ನೋಡುವಂತೆ ಮಾಡಿದ್ದವನು. ನಮ್ಮಂತಹ ಸಣ್ಣ ಊರಿನ ಚಿಕ್ಕ ಹುಡುಗರು ಪುಟ್ಬಾಲ್‍ ಎಂಬ ಆ ಮೋಹಕ ಸುಳಿಯಲ್ಲಿ ಸಿಲುಕುವಂತೆ ಮಾಡಿದ್ದವನು. ನಿಜವೆಂದರೆ ಆರ್ಜೆಂಟೇನಾ ಎಂಬ ದೇಶದ ಹೆಸರು ಮೊದಲು ಕೇಳಿದ್ದೆ ಆತನ ಮೂಲಕ. ಒಂದಿಡೀ ತಲೆಮಾರು ಪುಟ್ಬಾಲ್‍ನ್ನು ಒಂದು ಧರ್ಮದಂತೆ , ಆತನನ್ನು ಪುಟ್‍ಬಾಲ್ ದೈವದಂತೆ ಕಂಡಿದ್ದರಲ್ಲಿ ಆಶ್ಚರ್ಯವೇನಿಲ್ಲ.

’ಜಯ್ ಹಿಂದ್’ ಹೆಸರಿನ ನಮ್ಮೂರಿನ ಪುಟ್ಬಾಲ್ ಕ್ಲಬ್‍ಗೆ ಸೇರುವಂತೆ ಮಾಡಿದ್ದು ಮರಡೋನ ಎಂಬ ಮಾಂತ್ರಿಕನ ಆಟದ ಮೋಡಿ. ಆಗ ಮೋಡಿ ಎಷ್ಟಿತ್ತೆಂದರೆ ಆರ್ಜೇಂಟೇನಾದ ನೀಲಿ-ಬಿಳಿ ಪಟ್ಟಿಯ ಸಮವಸ್ತ್ರ ನಮ್ಮ ತಂಡದ ಸಮವಸ್ತ್ರವೂ ಆಗಿಬಿಟ್ಟಿತ್ತು. ನಮ್ಮೂರಿನ ಕ್ಲಬ್ ಅದಕ್ಕಿಂತ ತುಂಬಾ ವರ್ಷ ಮುಂಚಿನಿಂದ ಇದ್ದು ಹೆಸರು ಮಾಡಿದ್ದರೂ, ಅನೇಕ ಬಾಲಕರನ್ನು, ಬಿಸಿ ರಕ್ತದ ಹುಡುಗರನ್ನು ಪುಟ್ಬಾಲ್ ಕಡೆ ಸೆಳೆದದ್ದು ಮರಡೋನ ಕಾಲದಲ್ಲಿ.

ಒರೆಗೆಯ ಹುಡುಗರು ಕ್ರಿಕೆಟ್ ಬ್ಯಾಟ್-ಬಾಲ್ ಹಿಡಿದು ಓಡಾಡುತ್ತಿದ್ದರೆ, ನಮ್ಮದು ಬೇರೆಯದೇ ಪ್ರಪಂಚ. ಮಂಗಳವಾರವೊಂದು ಬಿಟ್ಟು ವಾರದ ಪ್ರತಿದಿನವು ೫ ಗಂಟೆಗೆ ಗಾಂಧೀ ಮೈದಾನದಲ್ಲಿ ಪುಟ್ಬಾಲ್ ಓಡತೊಡಗುತಿತ್ತು. ಮಂಗಳವಾರ ನಮ್ಮೂರಿನ ಸಂತೆ ಇದ್ದರಿಂದ ಆವತ್ತು ಮೈದಾನಕ್ಕೆ-ನಮಗೆ ರಜೆ !

ಮೈದಾನಕ್ಕೆ ಬರುತ್ತಿದ್ದಂತೆ ಎಲ್ಲರೂ ಕಡ್ಡಾಯವಾಗಿ ಮೈದಾನದ ೨-೩ ಸುತ್ತು ಓಡಿ, ನಂತರ ವಾರ್ಮ್-ಅಪ್ ಕಸರತ್ತು ಮಾಡಿದ ಮೇಲೆಯೇ ಪುಟ್ಬಾಲ್ ಮುಟ್ಟುವುದಕ್ಕೆ ಬಿಡುತ್ತಿದ್ದದ್ದು. ನಮ್ಮ ಕ್ಲಬ್‍ನ ಹಿರಿಯ-ಕಿರಿಯ ಆಟಗಾರವೆನ್ನದೆ ಎಲ್ಲರಿಗೂ ಇದು ಕಡ್ಡಾಯ. ನಮ್ಮಂತಹ ೧೦-೧೨ ವರ್ಷದ ಹುಡುಗರಿಂದ ಹಿಡಿದು ೪೦-೫೦ ವರ್ಷದವರೆಗಿನ ದೊಡ್ಡವರೆಲ್ಲರೂ ನಮ್ಮ ಕ್ಲಬ್‍ನ ಸದಸ್ಯರು. ವಯಸ್ಸಿಗೆ ಅನುಗುಣವಾಗಿ ಸಬ್ ಜ್ಯೂನಿಯರ್, ಜ್ಯೂನಿಯರ್ ಮತ್ತು ಸೀನಿಯರ್ ತಂಡಗಳಾಗಿ ವಿಂಗಡನೆ.

ವಾರ್ಮ್ ಅಪ್ ಆದ ನಂತರ ಉರುಳುವ ಚೆಂಡನ್ನು ಗೋಲ್ ಮೇಲೆ ಹೊಡೆಯುವ ಅಭ್ಯಾಸ. ಸಬ್ ಜ್ಯೂನಿಯರ್- ಜ್ಯೂನಿಯರ್ ಆಟಗಾರರೆಲ್ಲಾ ಗೋಲ್ ಕಂಬದ ಹಿಂದೆ ನಿಲ್ಲುತ್ತಿದ್ದೆವು. ಸೀನಿಯರ್ ತಂಡದ ಆಟಗಾರರು ಹೊಡೆದ ಚೆಂಡು ಮೈದಾನದ ಆಚೆ ಹೋಗದಂತೆ ತಡೆಯುವುದೇ ನಮ್ಮ ಕೆಲಸ. ಆ ಮೈದಾನಕ್ಕೆ ಕಾಂಪೊಂಡ್-ಬೇಲಿ ಯಾವುದೂ ಇರದಿದ್ದರಿಂದ ಒದ್ದ ಬಾಲ್‍ಗಳೆಲ್ಲಾ ಪಕ್ಕದ ರಸ್ತೆಗೆ ಬೀಳುತ್ತಿದ್ದವು. ಕ್ಲಬ್‍ಗೆ ಹೊಸದಾಗಿ ಸೇರಿದ ನಮ್ಮಂತಹ ಕಲಿಯುವ ಹುಡುಗರ ಕೆಲಸ ಆ ಚೆಂಡುಗಳು ರಸ್ತೆಗೆ ಬೀಳದಂತೆ ನೋಡಿಕೊಳ್ಳುವುದು. ಅದರ ಜೊತೆ ಗೋಲ್ ಪೋಸ್ಟಿನ ಹಿಂದಿನಿಂದ ಯಾವ ಸಂದರ್ಭದಲ್ಲಿ ಚೆಂಡನ್ನು ಹೇಗೆ ಹೊಡೆಯಬೇಕೆಂಬುದನ್ನು ಹತ್ತಿರದಿಂದ ನೋಡಿ ಕಲಿಯುವ ಅವಕಾಶ.

ಗೋಲ್ ಹೊಡೆಯುವ ಅಭ್ಯಾಸದ ನಂತರ ಅಭ್ಯಾಸ ಪಂದ್ಯ ಪ್ರಾರಂಭ. ಅಭ್ಯಾಸಕ್ಕೆ ಬಂದ ಆಟಗಾರರನ್ನು ಎರಡು ತಂಡಗಳಾಗಿ ವಿಂಗಡಿಸಲಾಗುತಿತ್ತು. ಸೀನಿಯರ್ ಮತ್ತು ಬಹುತೇಕ ಜ್ಯೂನಿಯರ್ ಆಟಗಾರರು ಆ ತಂಡಗಳಲ್ಲಿ ಇರುತ್ತಿದ್ದರು. ಅವರ ಪಂದ್ಯ ಶುರುವಾಗುತಿದ್ದಂತೆ ನಾವು ಸಬ್ ಜ್ಯೂನಿಯರ್ ಆಟಗಾರರು ನಮ್ಮದೇ ತಂಡಗಳನ್ನು ಮಾಡಿಕೊಂಡು ನಮ್ಮ ಪಂದ್ಯ ಶುರುಮಾಡಿಕೊಳ್ಳುತ್ತಿದ್ದೆವು.

ಪುಟ್‍ಬಾಲ್‍ನಲ್ಲಿ ಪಾಸ್‍ಗಳ ಪಾತ್ರ ಪ್ರಮುಖ, ಒಬ್ಬ ಆಟಗಾರ ಚೆಂಡನ್ನು ಇನ್ನೊಬ್ಬ ಆಟಗಾರನಿಗೆ ಸಾಗಿಸುವುದೇ ಪಾಸ್. ನಮ್ಮ ಕ್ಲಬ್‍ನಲ್ಲಿ ಯಾವಾಗಲೂ ಬಾಲ್ ಪಾಸ್ ಮಾಡಬೇಕೆಂಬುದು ಮೊದಲ ಪಾಠ . ಕ್ಷಿಪ್ರ ಪಾಸ್‍ಗಳಿಂದ ಎದುರಾಳಿ ತಂಡದ ರಕ್ಷಣೆ ಭೇದಿಸಿ ಗೋಲ್ ಮಾಡುವುದು ಉದ್ದೇಶ.

ಅದೇ ಸಮಯದಲ್ಲಿ ನಾವೆಲ್ಲ ನೋಡಿದ್ದು ಮರಡೋನನ ಅದ್ಭುತ ಕಾಲ್ಚೆಳಕ. ಪಾಸ್‍ಗಳಿಗಿಂತ ಡ್ರಿಬ್ಲಿಂಗ್‍ನಿಂದ ನಮ್ಮನ್ನು ಆಕರ್ಷಿಸಿದವನು. ಪ್ರತಿದ್ವಂದಿ ತಂಡದ ಆಟಗಾರರನ್ನು ಕಲಾತ್ಮಕವಾಗಿ-ಚಾಣಾಕ್ಷತೆಯಿಂದ ಕಂಗೆಡಿಸಿ ಚೆಂಡನ್ನು ಮುನ್ನಡಿಸಿಕೊಂಡು ಹೋಗುವುದೆ ಡ್ರಿಬ್ಲಿಂಗ್‍. ಮರಡೋನ ತಾಕತ್ ಇದ್ದಿದ್ದೇ ಇದರಲ್ಲಿ. ೩-೪ ಎದುರಾಳಿ ಆಟಗಾರರನ್ನು ವಂಚಿಸಿ ಗೋಲ್ ಮಾಡಿದ್ದು, ಒಮ್ಮೆ ಇಂಗ್ಲೆಂಡ್ ವಿರುದ್ಧ ೬ ಆಟಗಾರರನ್ನು ವಂಚಿಸಿ ಗೋಲ್ ಮಾಡಿದ್ದು, ನಮಗೆಲ್ಲಾ ಮರಡೋನ ಹೀರೋ ಪಟ್ಟಕ್ಕೆ ಏರಿಸಲು ಸಾಕಿತ್ತು.

ಡ್ರಿಬ್ಲಿಂಗ್ ಮಾಡುವದರಿಂದ ಅದು ಸಾಂಘಿಕ ಆಟವಾಗದೇ ಒಬ್ಬ ಆಟಗಾರನ ಆಟವಾಗುತ್ತೆಂಬ ಭಾವನೆಯಿದೆ. ಅದು ತಕ್ಕ ಮಟ್ಟಿಗೆ ನಿಜ ಸಹ. ಅದೇ ಕಾರಣಕ್ಕೆ ನಮ್ಮ ಕ್ಲಬ್‍ನಲ್ಲಿ ಡ್ರಿಬ್ಲಿಂಗ್‍ಕ್ಕಿಂತ ಪಾಸ್‍ಗೆ ಹೆಚ್ಚು ಒತ್ತು ನೀಡುತ್ತಿದ್ದುದು. ಆವಾಗಲೇ ಮರಡೋನ ಪರಿಣಾಮ ಕಾಣಿಸತೊಡಗಿದ್ದು. ನಮ್ಮ ತಂಡದಲ್ಲಿ ಜ್ಯೂನಿಯರ್ ಆಟಗಾರರು ಹೆಚ್ಚು ಡ್ರಿಬ್ಲಿಂಗ್ ಮಾಡತೊಡಗಿದ್ದು ಮತ್ತು ಸೀನಿಯರ್ ಆಟಗಾರರು ನಮ್ಮನೆಲ್ಲಾ ಬೈಯತೊಡಗಿದ್ದು !

ಮರಡೋನ ತಂಡದಲ್ಲಿ ಇರುವವರೆಗೆ ಆರ್ಜೆಂಟೇನಾ ಬಿಟ್ಟು ಬೇರೆ ತಂಡವನ್ನು ವಿಶ್ವಕಪ್‍ನಲ್ಲಿ ಬೆಂಬಲಿಸಿದ್ದೇ ಇಲ್ಲ. ಮರಡೋನ ಆಟಗಾರನಾಗಿ ನೇಪಥ್ಯಕ್ಕೆ ಸರಿದದ್ದು ೧೯೯೪ರಲ್ಲಿ. ಅಂತಹ ಮರಡೋನ ಬಹು ವರ್ಷಗಳ ನಂತರ ಮರಳಿದ್ದು ಈ ಸಲದ ವಿಶ್ವಕಪ್‍ಗೆ ಅರ್ಜೆಂಟೀನಾ ತಂಡದ ಕೋಚ್ ಆಗಿ.

ಪುಟ್ಬಾಲ್ ವಿಶ್ವಕಪ್...

೪ ವರ್ಷಗಳಿಗೊಮ್ಮೆ ನಡೆಯುವ ಪುಟ್ಬಾಲ್ ಮಾಂತ್ರಿಕರ ಸಮರ. ಬಹುಷಃ ಓಲಂಪಿಕ್‍ನಷ್ಟೇ ಜಗತ್ತಿನಾದ್ಯಂತದ ದೇಶಗಳಲ್ಲಿ ಜನ ನೋಡುವ ಪಂದ್ಯಾವಳಿ.ಜಗತ್ತಿನ ಸುಮಾರು ೨೦೦ಕ್ಕೂ ಹೆಚ್ಚು ದೇಶಗಳು ಪೂರ್ವಭಾವಿ ಸುತ್ತುಗಳಲ್ಲಿ ಸೆಣಸಿ, ಅದರಲ್ಲಿ ೩೨ ದೇಶಗಳಷ್ಟೇ ವಿಶ್ವಕಪ್‍ಗೆ ಮುನ್ನಡೆಯುವುದು. ಅಲ್ಲಿ ಜಗತ್ತಿನ ಶ್ರೇಷ್ಠ ತಂಡಗಳೊಡನೆ ಸ್ಪರ್ಧಿಸಿ ಕೊನೆಗೆ ವಿಶ್ವಕಪ್ ಗೆಲ್ಲುವುದು ಎಲ್ಲಾ ದೇಶಗಳ ಕನಸು.

ಒಂದೊಂದು ವಿಶ್ವಕಪ್‍ ಸಹ ಹಲವಾರು ಯಶಸ್ಸಿನ ಕತೆಗಳನ್ನು ಮತ್ತು ಅಮೋಘ ಆಟಗಾರರ ದಂತಕತೆಗಳನ್ನು ತೆರೆದಿಡುತ್ತದೆ. ಹಾಗೆಯೇ ಮತ್ತೆ ನೆನಪು ಮಾಡಿಕೊಳ್ಳಲು ಇಚ್ಚಿಸದ ಕತೆಗಳನ್ನು ಸಹ.

೧೯೮೬ ಮೆಕ್ಸಿಕೋ ವಿಶ್ವಕಪ್‍ನಲ್ಲಿ ಆರ್ಜೆಂಟೇನಾ ತಂಡದ ಜಯ, ೧೯೯೦ ಇಟಲಿ ವಿಶ್ವಕಪ್‍ನಲ್ಲಿ ಅದೇ ಅರ್ಜೆಂಟೇನಾ ತಂಡ ಸೋತದ್ದು, ೧೯೯೪ರ ಅಮೇರಿಕಾ ವಿಶ್ವಕಪ್‍ನಲ್ಲಿ ಬ್ರೆಜಿಲ್‍ನ ಪುನಾರಗಮನ, ೧೯೯೮ರ ಫ್ರಾನ್ಸ್ ವಿಶ್ವಕಪ್‍ನಲ್ಲಿ ಅತಿಥೇಯರ ದಿಗ್ವಿಜಯ, ಅದೇ ಪಂದ್ಯಾವಳಿಯಲ್ಲಿ ಬ್ರೆಜಿಲ್‍ ಮುಖಭಂಗ ಅನುಭವಿಸಿದ್ದು, ೨೦೦೨ರ ಜಪಾನ್ ವಿಶ್ವಕಪ್‍ನಲ್ಲಿ ಮತ್ತೆ ಬ್ರೆಜಿಲ್‍ನ ಪರಾಕ್ರಮ, ೨೦೦೬ರ ಜರ್ಮನಿ ವಿಶ್ವಕಪ್‍ನಲ್ಲಿ ಇಟಲಿಯ ವಿಜಯ....ಹೀಗೆ ಅನೇಕ ಗೆಲುವಿನ-ಸೋಲಿನ ಮಹಾನ್ ಕತೆಗಳು.

ಹಾಗೆಯೇ ಮರಡೋನ, ರೋನಾಲ್ಡೋ, ಬೆಕಮ್, ಜೀಡಾನ್‍ನಂತಹ ವಿಸ್ಮಯಿ ಆಟಗಾರರ ಕತೆಗಳು.

ಅಂತಹ ಜಾಗತಿಕ ಪುಟ್ಬಾಲ್ ಹಬ್ಬ ಮತ್ತೆ ಶುರುವಾಗಿದೆ. ಇನ್ನೊಂದು ತಿಂಗಳು ಪುಟ್ಬಾಲ್ ರಸದೂಟ ಎಲ್ಲೆಡೆ.

ವೀವಾ ಪುಟ್ಬಾಲ್ !

2 comments:

sunaath said...

ಬಹಳ ದಿನಗಳ ಬಳಿಕ ಬಂದರೂ, ಉತ್ತಮ ಲೇಖನ ಕೊಟ್ಟಿದ್ದೀರಿ. ಫುಟ್ ಬಾಲ್ ಇನ್ನೂ ಆಡುತ್ತಿರುವಿರಾ?

Shiv said...

ಸುನಾಥ್ ಕಾಕಾ,

ಧನ್ಯವಾದಗಳು ಭೇಟಿ ನೀಡಿದ್ದಕ್ಕೆ.
ಈಗ ಅಡಲ್ಲಿಕ್ಕೆ ಆಗುತ್ತಿಲ್ಲ, ಕೆಲಸದ ಒತ್ತಡ :)