Sunday, August 22, 2010

1984

Big Brother, Thought Police, Doublethink, Memory hole, Thoughtcrime

ಈ ಎಲ್ಲಾ ಇಂಗ್ಲೀಷ್ ಪದಗಳಲ್ಲಿರುವ ಸಾಮ್ಯತೆಯೇನು !
ಎಲ್ಲಾ ಪದಗಳು ಇಂಗ್ಲೀಷ್‍ಗೆ ಕಾಲಿರಿಸಿದ್ದೇ ಒಂದು ಪುಸ್ತಕದ ಮೂಲಕ. ಆ ಕೃತಿಯ ಹೆಸರು ’1984'.

ಪುಸ್ತಕದ ಹೆಸರು '1984' ಆದರೂ, ಆ ಪುಸ್ತಕ ಬಂದದ್ದು ೧೯೪೮ರಲ್ಲಿ. ಈಗಲೂ ಇಂಗ್ಲೀಷ್‍ನ ಅತ್ಯಂತ ಜನಪ್ರಿಯ ಅಥವಾ ಪ್ರಮುಖ ೧೦-೨೦ ಪುಸ್ತಕಗಳ ಸಾಲಿನಲ್ಲಿ ಈ ಪುಸ್ತಕ ಇದ್ದೇ ಇರುತ್ತದೆ.

ಅಂದ ಹಾಗೆ ಯಾವುದರ ಬಗ್ಗೆ ಈ ಪುಸ್ತಕ ?

ಜಾರ್ಜ್ ಆರ್ವೆಲ್ ಎಂಬ ಲೇಖಕ ೧೯೪೮ರಲ್ಲಿ ಈ ಕೃತಿಯನ್ನು ಬರೆದಿದ್ದು.ಆರ್ವೆಲ್ ಬ್ರಿಟಿಷ್ ಸೇನೆಯಲ್ಲಿ ಕೆಲಸ ಮಾಡಿ, ಕೆಲವು ವರ್ಷ ಭಾರತ-ಬರ್ಮದಲ್ಲೂ ಕಳೆದಿದ್ದ. ಆಗಿಂದ ಸುಮಾರು ೩೦-೪೦ ವರ್ಷಗಳಲ್ಲಿ, ಸರಿಸುಮಾರು ೧೯೮೪ರ ಸಮಯದಲ್ಲಿ ಪ್ರಪಂಚದ ರಾಜಕೀಯ-ಸಾಮಾಜಿಕ-ಸಾಂಸ್ಕೃತಿಕ ತಲ್ಲಣಗಳ ಬಗ್ಗೆ ಬರೆದಿರುವ ಒಂದು ಕಾಲ್ಪನಿಕ ಕಾದಂಬರಿ. ನಿರಂಕುಶ ಆಡಳಿತದಲ್ಲಿ ಹೇಗೆ ಎಲ್ಲವನ್ನೂ ಸರಕಾರ ನಿಯಂತ್ರಿಸಬಹುದು, ಸಾಂಸ್ಕೃತಿಕ ಲೋಕದ ಜೊತೆ ಜನರ ವೈಯುಕ್ತಿಕ ಜೀವನವನ್ನು ಪ್ರತಿ ಗಳಿಗೆಯೂ ಬಿಡದೆ ಕಣ್ಣಿಟ್ಟು ಹೇಗೆ ಗಮನಿಸಬಹುದು ಎನ್ನುವ ಕಥಾವಸ್ತುವನ್ನು ಬಿಚ್ಚಿಟ್ಟು ಜನರನ್ನು ಬೆಚ್ಚಿಬೀಳಿಸುವಂತೆ ಮಾಡಿದ್ದೇ ಈ ಪುಸ್ತಕ.


ಓಷಿಯನೀಯಾ ಎಂಬ ಕಾಲ್ಪನಿಕ ದೇಶದಲ್ಲಿ ನಡೆಯುವ ಕತೆಗೆ ಹಿನ್ನಲೆಯಾಗಿ ವಿಶ್ವದ ಕೊನೆಯ ಮಹಾಯುದ್ಧ ನಡೆದು, ಇಡೀ ಜಗತ್ತೆ ಪ್ರಮುಖ ಮೂರು ಭಾಗಗಳಾಗಿ ವಿಂಗಡನೆಯಾಗಿರುತ್ತದೆ - ಓಷಿಯನೀಯಾ(Ocenia), ಯೂರೇಷಿಯಾ(Eurosia)ಮತ್ತು ಈಸ್ಟೇಷಿಯಾ(Eastasia).

ಬ್ರಿಟನ್, ಅಸ್ಟ್ರೇಲಿಯಾ, ಅಮೇರಿಕಾ, ಆಪ್ರಿಕಾದ ದಕ್ಷಿಣ ಭಾಗದ ಪ್ರಾಂತ್ಯಗಳು ಸೇರಿ ಓಷಿಯನೀಯಾ ಎಂಬ ಬೃಹತ್ ದೇಶವಾಗಿರುತ್ತದೆ. ಯೂರೋಪಿನ ಎಲ್ಲಾ ದೇಶಗಳು ಮತ್ತು ಉತ್ತರ ಏಷ್ಯಾದ ಭಾಗಗಳು ಸೇರಿ ಯೂರೇಷಿಯಾವಾಗಿರುತ್ತದೆ. ಚೀನಾ, ಜಪಾನ್, ಕೊರಿಯಾ, ಉತ್ತರ ಭಾರತ ಸೇರಿ ಈಸ್ಟೇಷಿಯಾ. ಈ ಮೂರರ ಆಡಳಿತದಲ್ಲಿ ಬರದೇ ಇರುವ ಪ್ರಾಂತ್ಯಗಳ ನಿಯಂತ್ರಣಕ್ಕೆಂದು ಈ ಮೂರು ದೇಶಗಳ ಮಧ್ಯೆ ಯಾವಾಗಲೂ ನಿರಂತರ ಯುದ್ಧ.

ಓಷಿಯನೀಯಾ ದೇಶವನ್ನು ಆಳುವ ಸರ್ವಾಧಿಕಾರಿಗೆ ಹೆಸರಿಲ್ಲ, ಆದರೆ ಎಲ್ಲರೂ ಅವನನ್ನು ಕರೆಯುವುದು ’ಬಿಗ್ ಬ್ರದರ್’(Big Brother). ಬಿಗ್ ಬ್ರದರ್‌ಗೆ ದೇಶದ ಪ್ರತಿಯೊಂದರ ಮೇಲೂ ನಿಯಂತ್ರಣ, ಜನರ ಪ್ರತಿ ನಡೆ-ನುಡಿಯೂ ಟೆಲೆಸ್ಚ್ರೀನ್(Telescreen)ಯೆಂಬ ಯಂತ್ರದ ಮೂಲಕ ನಿರಂತರವಾಗಿ ಪರಿಶೀಲನೆಗೆ ಒಳಪಟ್ಟಿರುತ್ತದೆ. ಯಾರಾದರೂ ಬಿಗ್ ಬ್ರದರ್‍ ವಿರುದ್ಧವಾಗಿ ಮಾತಾಡಿದ್ದೇ ಆದರೆ, ವಿರೋಧಿಸುವ ಯೋಚಿಸಿದ್ದೇ ಆದರೆ , ಅವರು ಕೆಲವೇ ದಿನಗಳಲ್ಲೇ ಜನಜೀವನದಿಂದ ಮಾಯ ! ಅದಕ್ಕಾಗಿ 'Thought Police' ಎಂಬ ಜನರ ಯೋಚನೆಗಳ ನಿಯಂತ್ರಿಸುವ ಗುಪ್ತ ಪೋಲಿಸ್ ಪಡೆ.

ಬಿಗ್ ಬ್ರದರ್‌ನ ಆಡಳಿತದಲ್ಲಿರುವ ಇಲಾಖೆಗಳು- ಶಾಂತಿ ಸಚಿವಾಲಯ (Ministry of Peace), ಸಮೃದ್ಧಿ ಸಚಿವಾಲಯ(Ministry of Plenty), ಪ್ರೇಮ ಸಚಿವಾಲಯ(Ministry of Love) , ಸತ್ಯ ಸಚಿವಾಲಯ(Ministry of Truth). ಹೆಸರಿಗೂ ಮಾಡುವ ಕೆಲಸಕ್ಕೂ ಏನೂ ಸಂಬಂಧವೇ ಇಲ್ಲದ ಇಲಾಖೆಗಳಿವು.

ಶಾಂತಿ ಸಚಿವಾಲಯದ ಕೆಲಸ ದೇಶದ ಪ್ರಜೆಗಳನ್ನು ಸದಾ ಯುದ್ಧದ ಆತಂಕದಲ್ಲಿ, ಭಯದ ನೆರಳಿನಲ್ಲಿ ಇಡುವುದು. ಪ್ರೇಮ ಸಚಿವಾಲಯದ ಕೆಲಸ ವಿರೋಧಿಗಳನ್ನು ನಿರಂತರವಾಗಿ ಹುಡುಕಿ ರಾತ್ರೋರಾತ್ರಿ ನಾಶಮಾಡುವುದು. ಸಮೃದ್ಧಿ ಸಚಿವಾಲಯಕ್ಕೆ ದೇಶದ ಆರ್ಥಿಕ ಪ್ರಗತಿಯ ಹೊಣೆ, ಜನರಿಗೆಲ್ಲಾ ದೇಶ ಅತೀವ ಪ್ರಗತಿ ಸಾಧಿಸುತ್ತಿದೆ ಎಂದು ಹೇಳುತ್ತ ಜನರಿಗೆ ವಾರಕೆ ಇಷ್ಟೇ ಎಂದು ರ್‍ಏಷನ್ ನೀಡುವ ಕೆಲಸ. ಸತ್ಯ ಸಚಿವಾಲಯಕ್ಕೆ ಇತಿಹಾಸವನ್ನು ತಿರುಚಿ, ಸುದ್ದಿಮಾಧ್ಯಮವನ್ನು ಬೇಕಾದ ಹಾಗೇ ನಿಯಂತ್ರಿಸಿ, ಸುಳ್ಳನ್ನೇ ಸತ್ಯವಾಗಿ ಬಿಂಬಿಸುವ ಕೆಲಸ.

ಹೀಗಿರುವ ಸರ್ವಾಧಿಕಾರಿ ಬಿಗ್ ಬ್ರದರ್‌ನ ಪರಮ ವೈರಿ ’ಇಮಾನ್ಯುಯಿಲ್ ಗೋಲ್ಡ್ ಸ್ಟೇನ್’(Emmanuel Goldstein). ಬಿಗ್ ಬ್ರದರ್ ಜೊತೆ ಹಲವು ವರ್ಷವಿದ್ದು ಕಡೆಗೆ ಆಡಳಿತವನ್ನು ವಿರೋಧಿಸಿ ಭೂಗತನಾದವನು. ಗೋಲ್ಡ್ ಸ್ಟೇನ್‍ ಎಲ್ಲಿದ್ದಾನೆ, ಯಾರೆಂದು ಯಾರಿಗೂ ತಿಳಿಯದು. ಆದರೂ ಬಿಗ್ ಬ್ರದರ್ ಬಗ್ಗೆ ಕೋಪವಿರುವವರಿಗೆ ಗೋಲ್ಡ್‍ಸ್ಟೇನ್ ಮುಂದೊಂದು ದಿನ ಬಂದೇ ಬರುತ್ತಾನೆಂಬ ನಂಬುಗೆ.

ಈ ’ಸತ್ಯ ಸಚಿವಾಲಯ’ದಲ್ಲಿ ಕೆಲಸ ಮಾಡುವ ವಿನಸ್ಟನ್ ಸ್ಮಿತ್‍(Winstein Smith).ನಮ್ಮ ಕಥಾನಾಯಕ ಹಾಗು ಕಥೆ ಸಾಗುವುದೇ ಅವನ ಕಣ್ಣಿನ ಮೂಲಕ. ಅನೇಕ ವರ್ಷಗಳಿಂದ ಈ ಉಸಿರುಗಟ್ಟುವ ಆಡಳಿತದಲ್ಲಿ ಬದುಕಿದ್ದ ವಿನಸ್ಟನ್‍ಗೆ ಸಿಡಿದೇಳುವ ತುಡಿತ. ಅದಕ್ಕೆ ಧ್ವನಿಗೂಡಿಸುವ ಜೂಲೀಯ ಎಂಬ ಅದೇ ಸಚಿವಾಲಯದದಲ್ಲಿ ಕೆಲಸ ಮಾಡುವವಳು. ಬಿಗ್ ಬ್ರದರ್ ಆಳ್ವಿಕೆಯಲ್ಲಿ ಪ್ರೇಮ-ಕಾಮಕ್ಕೆ ಅವಕಾಶವೇ ಇರುವುದಿಲ್ಲ. ಹೀಗಿದ್ದರೂ ಇವರಿಬ್ಬರೂ ಗುಪ್ತವಾಗಿ ಅದರಲ್ಲಿ ತೊಡಗಿಕೊಳ್ಳುವರು. ಗೋಲ್ಡ್ ಸ್ಟೇನ್‍ ಕಡೆಯವರೆಂದು ತಿಳಿದು Thought policeನವರ ಹತ್ತಿರವೇ ಇವರಿಬ್ಬರೂ ಬಿಗ್ ಬ್ರದರ್ ವಿರುದ್ಧ ಯೋಚನೆ ರೂಪಿಸಿ ಸಿಕ್ಕು ಬೀಳುವುದು.Thought policeನವರಿಂದ ಹಿಂಸೆಗೆ ಒಳಪಟ್ಟು , ಕೊನೆಗೆ ಬಿಗ್ ಬ್ರದರ್‍ ಎನ್ನುವುದೇ ಸತ್ಯ ಉಳಿದಿದ್ದೆಲ್ಲಾ ಮಿಥ್ಯ ಎಂದು ಪೂರ್ತಿ ಬದಲಾಗಿ, ಬದುಕಿಗೆ ಮರಳುವುದರಲ್ಲಿ ಕಾದಂಬರಿ ಮುಗಿಯುತ್ತದೆ.

ಪುಸ್ತಕದ ಕೊನೆ ನಿರಾಶದಾಯಕವಾಗಿ ಕಂಡುಬಂದರೂ, ಅದರ ಲೇಖಕ ಅರ್ವಲ್ ಹೇಳುವಂತೆ ಅದು ಮುಂಬರುವ ದಿನಗಳಿಗೆ ಒಂದು ಎಚ್ಚರಿಕೆ ಗಂಟೆ ಅಷ್ಟೆ !

೧೯೮೪ರ ತಾಕತ್ತಿರುವುದು ಆದರ ಆಳವಾದ ವಿಶ್ಲೇಷಣೆಯಲ್ಲಿ, ಅಲ್ಲಿ ಬಾಗಿಲು ತೆರೆದುಕೊಳ್ಳುತ್ತಾ ಹೋಗುವ ನಾಳೆಯ ಭಯಾನಕವಾದ ದಿನಗಳ ವರ್ಣನೆಯಲ್ಲಿ.

ಪುಸ್ತಕ ಓದುತ್ತಿದ್ದಂತೆ ಅದು ಕ್ರಮೇಣ ಮನವನ್ನು ಆವರಿಸಕೊಳ್ಳತೊಡಗುತ್ತದೆ.

ಪುಸ್ತಕದಲ್ಲಿ ಆರ್ವೆಲ್ ಕೊಡುವ ಕೆಲವೊಂದು ಉದಾಹರಣೆಗಳನ್ನು ನೋಡಿ
- ಜನರನ್ನು ಹತೋಟಿಯಲ್ಲಿ ಇಡಲು ಯಾವಾಗಲೂ ಅವರನ್ನು ಯುದ್ಧದ ಭಯದ ನೆರಳಿನಲ್ಲಿಡಬೇಕು. ಕೆಲವೊಮ್ಮೆ ತಮ್ಮ ದೇಶದ ಊರುಗಳ ಮೇಲೆ ತಾವೇ ರಾಕೆಟ್ ದಾಳಿ ಮಾಡಿ ಅದು ವೈರಿಗಳ ಕೈವಾಡವೆಂದು ಭಯ ಹೆಚ್ಚಿಸಬೇಕು
- ಚಿಕ್ಕ ವಯಸ್ಸಿನಲ್ಲಿಯೇ ಬಿಗ್ ಬ್ರದರ್ ಬಗ್ಗೆ ನಂಬುಗೆ-ಗೌರವ ಉಂಟು ಮಾಡಲು ಶಿಕ್ಷಣದಲ್ಲಿ ಬಿಗ್ ಬ್ರದರ್‍ ಬಗ್ಗೆಯೇ ಪಾಠಗಳಿರಬೇಕು. ಯಾವಾಗಲೂ ಬಿಗ್ ಬ್ರದರ್ ಬಗ್ಗೆ ವಿಜಯದ-ಸಾಧನೆಯ ಸುದ್ದಿಗಳೇ ಬರುತ್ತಿರಬೇಕು
- ಪ್ರೇಮ-ಕಾಮವೆಂಬುದು ದೇಶದ ಪ್ರಗತಿಗೆ ಮಾರಕ. ಇದರಲ್ಲಿ ಮೈಮರತರೆ ವೈರಿಗೆ ಅವಕಾಶ. ಆದ್ದರಿಂದ ಚಿಕ್ಕ ವಯಸ್ಸಿನಿಂದ ಇದರ ಬಗ್ಗೆ ವಿರೋಧ ಬೆಳಯಬೇಕು.
- ಜನರಿಗೆ ವಾರಕ್ಕೆ ರೇಷನ್‍ನಲ್ಲಿ ಒಂದು ಬಾರ್ ಚಾಕಲೇಟ್
- ಬಿಗ್ ಬ್ರದರ್ ವಿರೋಧಿಗಳನ್ನು ಗಲ್ಲಿಗೇರಿಸುವ, ಹಿಂಸಿಸುವ ಚಟುವಟಿಗೆಗಳು ಚಿಕ್ಕ ಮಕ್ಕಳ ಮನೋರಂಜನಾತ್ಮಕ ಚಟುವಟಿಕೆಗಳು. ಸ್ವಂತ ಕುಟುಂಬದ ಸದಸ್ಯರು ಬಿಗ್ ಬ್ರದರ್ ಬಗ್ಗೆ ವಿರೋಧಿಸಿದರೆ ಅವರನ್ನು ಸಹ Thought Policeಗೆ ಹಿಡಿದುಕೊಡಬೇಕು
- ಯಾವುದಾದರೂ ಪುಸ್ತಕ-ಪತ್ರಿಕೆಯಲ್ಲಿ ಬಿಗ್ ಬ್ರದರ್ ಬಗ್ಗೆ ವಿರೋಧಿಸಿ ಬರೆದಿದ್ದರೆ, ಅದನ್ನು ತಕ್ಷಣ ಬೇಕಾದಂತೆ ತಿದ್ದಿ ಮತ್ತೆ ಬಿಡುಗಡೆ ಮಾಡಬೇಕು. ಹಾಗೆಯೇ ಇತಿಹಾಸವನ್ನು ಬಿಗ್ ಬ್ರದರ್‌ಗೆ ಪೂರಕವಾಗಿ ತಿದ್ದಿಬರೆಯಬೇಕು

ಸುಮಾರು ೭೦ ಭಾಷೆಗಳಲ್ಲಿ ಈ ಪುಸ್ತಕ ಪ್ರಕಟವಾಗಿದೆ. ಈ ಪುಸ್ತಕ ಬಂದು ಸುಮಾರು ೬೦ ವರುಷಗಳೇ ಕಳೆದಿವೆ. ಇನ್ನೂ ಈ ಪುಸ್ತಕ ಸಮಕಾಲೀನವೆನಿಸುತ್ತದೆ. ಇದನ್ನು ಕಾಲ್ಪನಿಕ ಕತೆಯೆಂದು ತಳ್ಳಿಹಾಕಲು ಆಗುವುದಿಲ್ಲ. ನಮ್ಮ ದೇಶದಲ್ಲೇ ೧೯೭೫ರ ತುರ್ತು ಪರಿಸ್ಥಿತಿ, ಆಗ ನಡೆದ ವಿದ್ಯಮಾನಗಳು ಆ ಸರ್ವನಿಯಂತ್ರಿತ ಆಡಳಿತವೆನ್ನುವುದು ಮರೆಯಲ್ಲಿ ಕಾದಿರುವ ಮಾರಿಯೆಂದೆ ಸೂಚಿಸುತ್ತದೆ. ಹಾಗೆಯೇ ಪ್ರಪಂಚದ ಅನೇಕ ಕಡೆ ತಲೆ ಎತ್ತಿದ ಸರ್ವಾಧಿಕಾರಿ ಸರ್ಕಾರಗಳು ನಮ್ಮ ಕಣ್ಮುಂದೆ ಇವೆ.

ಇನ್ನು Big brother is watching ಎನ್ನುವುದು ಪುಸ್ತಕದಲ್ಲಷ್ಟೇ ಉಳಿದಿಲ್ಲ.ಪ್ರತಿಯೊಬ್ಬರ ಮಾತು-ಚಟುವಟಿಕೆಗಳನ್ನು ಆಲಿಸುವ ಟೆಲಿಸ್ಕ್ರೀನ್ ಯಂತ್ರ ಕಾಲ್ಪನಿಕವಾಗೇನೂ ಉಳಿದಿಲ್ಲ. ಸಿಸಿಟಿವಿ-ಕಂಪ್ಯೂಟರ್-ಈಮೇಲ್-ಪೋನ್‍ಗಳ ಮೂಲಕ ಯಾರನ್ನೂ ಎಲ್ಲಿ ಬೇಕಾದರೂ ಅನುಸರಿಸಿ ಒಂದು ಕಣ್ಣಿಡಬಹುದಾಗಿದೆ.

ಇನ್ನು ಈ ಪುಸ್ತಕ ಉಂಟುಮಾಡಿದ ಸಾಂಸ್ಕೃತಿಕ ಪರಿಣಾಮಗಳು ಅನೇಕ.

ಅದು ಇಂಗ್ಲೀಷ್‍ಗೆ ಕೊಟ್ಟ ಪದಗಳ ಬಗ್ಗೆ ಹೇಳುವುದಾದರೆ, Doublethink ಎನ್ನುವುದು ಎರಡು ಸಂಪೂರ್ಣ ತದ್ವಿರುದ್ಧ ವಿಚಾರಗಳನ್ನು ಸರಿಯೆಂದು ಒಪ್ಪಿಕೊಳ್ಳುವುದು. Memory hole ಎನ್ನುವುದು ಬೇಡವಾದ-ಮುಜುಗರವುಂಟು ಮಾಡುವ ದಾಖಲೆಗಳನ್ನು, ಪ್ರತಿಗಳನ್ನು, ಚಿತ್ರಗಳನ್ನು ನಾಶಮಾಡುವುದು ಅಥವಾ ತಿರುಚುವುದು.Thoughtcrime ಎನ್ನುವುದು ವಿರೋಧಿ ಯೋಚನೆಗಳನ್ನು-ಭಾವನೆಗಳನ್ನು ನಿಯಂತ್ರಿಸುವ ಸಾಧನ.

ಈ ಎಲ್ಲಾ ತತ್ವಗಳನ್ನು ಒಟ್ಟಾಗಿ ಅರ್ವೆಲಿಸಮ್(Orwellism)ಎಂದು ಕರೆಯುತ್ತಾರೆ.

ಹಾಗೆಯೇ ಈ ಪುಸ್ತಕದಿಂದ ಪ್ರಭಾವಿತವಾದ ಅನೇಕ ಪುಸ್ತಕಗಳು, ಚಲನಚಿತ್ರಗಳು, ಹಾಡುಗಳು ಹೊರಹೊಮ್ಮಿವೆ. 'Big Brother' ಹೆಸರಿನ ಟಿವಿ ಷೋ ಇದರಿಂದ ಪ್ರೇರಿತವಾಗಿದ್ದು.

ಪುಸ್ತಕದಿಂದ ಅತ್ಯಂತ ಪ್ರಭಾವಿತ ಆಪೆಲ್(Apple)ಕಂಪೆನಿ ೧೯೮೪ರಲ್ಲಿ ಆಪೆಲ್ ಮೆಕಂತೋಷ್(Macintosh)ಬಿಡುಗಡೆ ಮಾಡಿದಾಗಿನ ಜಾಹೀರಾತು ಇಲ್ಲಿದೆ.

ಕೆಲವು ಪುಸ್ತಕಗಳೇ ಹಾಗೇ, ಓದಿದ ಮೇಲೂ ಕಾಡುತ್ತಿರುತ್ತವೆ. ಅಂತಹ 1984ರ ಬಗ್ಗೆ ಯೋಚಿಸುತ್ತಾ , ಪುಸ್ತಕದ ಅತ್ಯಂತ ಸುಪ್ರಸಿದ್ಧ ಸಾಲುಗಳೊಂದಿಗೆ ಮುಗಿಸೋಣ.

War is Peace
Freedom is Slavery
Ignorance is Stregth

6 comments:

sunaath said...

ಈ ಪುಸ್ತಕವನ್ನು ಬಹಳ ಹಿಂದೆ ಓದಿದ್ದೆ. ಮತ್ತೊಮ್ಮೆ ನೆನಪು ಮಾಡಿಕೊಟ್ಟಿರಿ. ಧನ್ಯವಾದಗಳು. ಈ ಪುಸ್ತಕದ ಕತೆಯು ವಾಸ್ತವವಾಗುವ ಹೆದರಿಕೆ ಯಾವಾಗಲೂ ಇದೆ, ಅಲ್ಲವೆ!

ಮನಮುಕ್ತಾ said...

ಈ ಪುಸ್ತಕವನ್ನು ನಾನು ಓದಿಲ್ಲ.ವಿವರವಾದ ಮಾಹಿತಿಗಾಗಿ ಧನ್ಯವಾದಗಳು.

ಸಾಗರದಾಚೆಯ ಇಂಚರ said...

ಮಾಹಿತಿಗಾಗಿ ಧನ್ಯವಾದಗಳು
ಖಂಡಿತ ಕೊಂಡು ಓದುವೆ

Shiv said...

ಸುನಾಥ್ ಕಾಕಾ,
ಈ ಪುಸ್ತಕವನ್ನು ’Instructional Manual' ತರಹ ಉಪಯೋಗಿಸುತ್ತಿರಬಹುದೇನೋ ಅನ್ನುವಷ್ಟು ಕೆಲವೊಂದು ದೇಶಗಳು ಆಳಿಬಿಟ್ಟಿವೆ. ವಾಸ್ತವವಾಗುವ ಹೆದರಿಕೆ ಸದಾ ಇದ್ದೆ ಇರುತ್ತೆ.

Shiv said...

ಮನಮುಕ್ತಾ,
ಧನ್ಯವಾದಗಳು

Shiv said...

ಇಂಚರ,
ನಿಮ್ಮ ಪುಸ್ತಕ ಪ್ರೀತಿಗೆ ವಂದನೆ !