ಬಹುಷಃ ಮನುಷ್ಯನ ಮನಸ್ಸಿನಷ್ಟು ನಿಗೂಢವಾದದ್ದು ಇನ್ನೊಂದು ಈ ಜಗತ್ತಿನಲ್ಲಿ ಇರಲಿಕ್ಕಿಲ್ಲ.
ಚಂದ್ರಯಾನ, ಎವೆರಷ್ಟ್ ಆರೋಹಣದಂತಹ ಊಹೆಗೆ ಮೀರಿದ ಅಸಾಧ್ಯತೆಗಳನ್ನು ಸಾಧಿಸಿದ ಮನಸ್ಸುಗಳು ಹಲವು.
ಆದರೆ ತರ್ಕಕ್ಕೆ ನಿಲುಕದ ಮನಸ್ಸುಗಳು ಕೆಲವು.ಅಂತಹ ವಿಚಿತ್ರ ಮನಸ್ಸುಗಳ ಒಂದು ಘೋರ ಕತೆ ಇತಿಹಾಸದ ಪುಟಗಳಿಂದ.
ಅಂದು ನವೆಂಬರ್ ೧೮, ೧೯೭೮. ೯೧೩ ಜನ ಅಮೇರಿಕನ್‍ರು ಗಯಾನದ ಕಾಡಿನಲ್ಲಿ ’ಸಾಮೂಹಿಕ ಆತ್ಮಹತ್ಯೆ’ ಮಾಡಿಕೊಂಡಿದ್ದಾರೆಂಬ ಭೀಕರ ಸುದ್ಧಿ ಎಲ್ಲೆಡೆ ತಲ್ಲಣವುಂಟು ಮಾಡಿತ್ತು. ಸತ್ತ ಅವರೆಲ್ಲರೂ ’ಪೀಪಲ್ಸ್ ಟೆಂಪಲ್’ ಹೆಸರಿನ ವಿಲಕ್ಷಣ ಗುಂಪೊಂದಕ್ಕೆ ಸೇರಿದವರಾಗಿದ್ದರು.
’ಜಿಮ್ ಜೇಮ್ಸ್’ ಹೆಸರಿನ ಆ ವ್ಯಕ್ತಿ ವರ್ಣಭೇದದ ದಿನಗಳಲ್ಲಿ, ೧೯೬೩ರಲ್ಲಿ ಎಲ್ಲಾ ವರ್ಣದವರನ್ನು ಸೇರಿಸಿ ಯಾವಾಗ ’ಪೀಪಲ್ಸ್ ಟೆಂಪಲ್’ ಹೆಸರಿನ ಚರ್ಚ್ ಶುರುಮಾಡಿದನೋ, ಅಲ್ಲಿಂದ ಈ ಕತೆ ತೆರೆದುಕೊಳ್ಳುತ್ತದೆ. ಜಿಮ್ ಜೇಮ್ಸ್ ಸಮಾಜದಲ್ಲಿ ತುಳಿತಕ್ಕೆ ಒಳಗಾದವರನ್ನು, ಜೀವನದಲ್ಲಿ ತುಂಬಾ ಹತಾಶೆಗೊಳಗಾದವರನ್ನು ತನ್ನ ಚರ್ಚ್‍ಗೆ ಸೆಳೆದುಕೊಳ್ಳುತ್ತಾನೆ. ಇದರ ಜೊತೆಗೆ ಸ್ಪರ್ಶ-ಪ್ರಾರ್ಥನೆಯಿಂದ ಕ್ಯಾನ್ಸರ್ ಗುಣ ಪಡಿಸುವುದು-ಅಂಧರಿಗೆ ಕಣ್ಣು ಬರುವಂತೆ ಮಾಡುವ ವಿದ್ಯೆ ತನಗಿದೆಯೆಂದು ಅಲ್ಲಿಂದೊಷ್ಟು ಹಣ ಮಾಡುತ್ತಾನೆ. ಹಣ ಬರತೊಡಗಿದನೆ ಸ್ಥಳೀಯ ರಾಜಕಾರಣಿಗಳ ಸಾಂಗತ್ಯ ಬೆಳಿಸಿಕೊಂಡು, ಎಲ್ಲರಿಗೂ ಬೇಕಾದವನಾಗುತ್ತಾನೆ. ನೋಡುನೋಡುತ್ತಲೇ ಅವನ ಚರ್ಚ್ ಇಂಡೀಯಾನಪೋಲಿಸ್‍ನಲ್ಲಿ ಬೆಳಯತೊಡಗುತ್ತದೆ. ಅದರ ಜೊತೆಗೆ ಅವನ ಹುಚ್ಚಾಟಗಳು ಬೆಳೆಯತೊಡಗುತ್ತವೆ.
ಪೀಪಲ್ಸ್ ಟೆಂಪಲ್‍ಗೆ ಸೇರಬಯಸುವವ ಸದಸ್ಯರಿಗೆ ತಮ್ಮ ನಿಷ್ಠೆ ಪ್ರದರ್ಶಿಸಲು ಕಠಿಣವಾದ ಪರೀಕ್ಷೆಗಳಿರುತ್ತವೆ.ಹೊಸದಾಗಿ ಸೇರಿದವರು ಚರ್ಚ್‍ಗೆ ಬೇಕಾದರೆ ವಂತಿಗೆ ನೀಡಬಹುದಾಗಿರುತ್ತದೆ.ಹೊಸ ಸದಸ್ಯರು ಕಾಲ ಕಳೆದಂತೆ ಚರ್ಚ್‍ಗೆ ಕೊಡುವ ವಂತಿಗೆಯೂ ಹೆಚ್ಚಾಗುತ್ತ ಹೋಗುತ್ತದೆ.ಕೊನೆಯ ಹಂತದಲ್ಲಿ ಅನೇಕ ಸದಸ್ಯರು ತಮ್ಮ ಆಸ್ತಿ-ಹಣ ಎಲ್ಲವನ್ನೂ ಜಿಮ್‍ಗೆ ನೀಡಿ ಅವನ ಇಚ್ಚೆಯಂತೆ ನಡೆಯುತೊಡಗುತ್ತಾರೆ.ಜಿಮ್ ಅವರಿಗೆಲ್ಲಾ ಚಿಂತೆಗಳಿಲ್ಲದ-ಕಷ್ಟನಷ್ಟಗಳಿಲ್ಲದ ಸಮಾಜವಾದದ ಕನಸೊಂದನ್ನು ಕಟ್ಟಿಬಿಟ್ಟಿರುತ್ತಾನೆ. ಸದಸ್ಯರು ತಮ್ಮ ವೈಯುಕ್ತಿಕ ದುರ್ಬಲತೆಗಳನ್ನು ಅವನೊಂದಿಗೆ ಹಂಚಿಕೊಂಡು ಇರುತ್ತಾರೆ. ಹೀಗೆ ಅರ್ಥಿಕವಾಗಿ-ಮಾನಸಿಕವಾಗಿ ಜಿಮ್ ಮೇಲೆ ಅವಲಂಬಿತವಾದ ಒಂದು ದೊಡ್ಡ ಪಡೆಯೇ ತಯಾರಾಗುತ್ತದೆ.
ಯಾವಾಗ ಪೀಪಲ್ಸ್ ಟೆಂಪಲ್‍ನ ವಿಲಕ್ಷಣತೆಯ ಬಗ್ಗೆ ಇಂಡೀಯಾನಪೊಲಿಸ್‍ನಲ್ಲಿ ಸುದ್ಧಿಮಾಧ್ಯಮಗಳು ಮಾತಾಡತೊಡಗುತ್ತವೋ,ಜಿಮ್ ಅಲ್ಲಿಂದ ಕ್ಯಾಲಿಪೋರ್ನಿಯಾಕ್ಕೆ ತನ್ನ ಶಿಷ್ಯರೊಂದಿಗೆ ವರ್ಗವಾಗುತ್ತಾನೆ. ಸ್ಯಾನ್‍ಪ್ರಾನ್ಸಿಸ್ಕೊದ ತನ್ನದೇ ಒಂದು ಚಿಕ್ಕ ಪ್ರದೇಶದಲ್ಲಿ ಚಟುವಟಿಗೆಗಳು ಮುಂದುವರೆಯುತ್ತವೆ. ಸ್ಯಾನ್‍ಪ್ರಾನ್ಸಿಸ್ಕೊದ ಮೇಯರ್ ಚುನಾವಣೆಯಲ್ಲಿ ಸಾಕಷ್ಟು ಹಣ ಸಹಾಯ ಮಾಡಿ ಅಲ್ಲಿನವರಿಗೆ ಪ್ರಿಯವಾಗುತ್ತಾನೆ. ಅಷ್ಟೇ ಅಲ್ಲದೇ ಆಗೀನ ಅಮೇರಿಕ ಅಧ್ಯಕ್ಷರ ಚುನಾವಣೆಯ ಸಂದರ್ಭದಲ್ಲಿ ಜಿಮ್ಮಿ ಕಾರ್ಟರ್‌ಗೆ ತನ್ನ ಬೆಂಬಲ ಘೋಷಿಸಿ, ಅದಕೋಸ್ಕರ ದೇಣಿಗೆ ಸಂಗ್ರಹದಲ್ಲೂ ನೆರವಾಗುತ್ತಾನೆ.
ಇದೆಲ್ಲದರ ಮಧ್ಯೆ ಪೀಪಲ್ಸ್ ಟೆಂಪಲ್‍ನಿಂದ ಹೊರಗೆ ಬಂದವರು ಮೆಲ್ಲಗೆ ಹೊರಜಗತ್ತಿಗೆ ಅದರ ವಿರುದ್ಧ ಮಾತಾಡತೊಡಗುತ್ತಾರೆ. ಗುಂಪಿನಿಂದ ಹೊರಬಂದವರು ಕೆಲವರು ನಿಗೂಢವಾಗಿ ಸತ್ತಾಗ ಎಲ್ಲೆಡೆ ’ಪೀಪಲ್ಸ್ ಟೆಂಪಲ್’ ಕೈವಾಡ ಕೇಳಿಬರತೊಡಗುತ್ತದೆ. ಹಾಗೇ ಸದಸ್ಯರ ಕುಟುಂಬದವರು ತಮಗೆ ತಮ್ಮ ಮಗ/ಮಗಳು/ಗಂಡ/ಹೆಂಡತಿ ಜಿಮ್‍ನಿಂದ ಬಿಡಿಸಿಕೊಡಬೇಕೆಂದು ಕೋರ್ಟ್‍ಗಳ ಮೊರೆ ಹೋಗುತ್ತಾರೆ. ಇಡೀ ಮಾಧ್ಯಮವೇ ಯಾವಾಗ ಜಿಮ್-ಪೀಪಲ್ಸ್ ಬಗ್ಗೆ ಕೂಗತೊಡಗುತ್ತದೋ, ಜಿಮ್‍ನ ಹೊಸ ಯೋಜನೆ ಶುರುವಾಗುತ್ತದೆ.
ದಕ್ಷಿಣ ಅಮೇರಿಕಾ ಖಂಡದ ಗಯಾನ ಹೆಸರಿನ ದೇಶದ ಸರ್ಕಾರದೊಡನೆ ಹೇಗೋ ಒಪ್ಪಂದ ಕುದುರಿಸಿ, ಅಲ್ಲಿ ಸುಮಾರು ೧೭೦ ಎಕರೆ ಕಾಡನ್ನು ಜಿಮ್ ಕೊಂಡುಕೊಳ್ಳುತ್ತಾನೆ. ಸ್ಯಾನ್‍ಪ್ರಾನ್ಸಿಸ್ಕೊದ ಸಹವಾಸ ಸಾಕು ಮಾಡಿ, ಜಿಮ್ ತನ್ನ ಶಿಷ್ಯಕೋಟಿಯೊಡನೆ ಗಯಾನಕ್ಕೆ ಹೊರಡುತ್ತಾನೆ. ಹೊಸ ದೇಶದಲ್ಲಿ, ಕಗ್ಗಾಡಿನಲ್ಲಿ ತಮ್ಮದೇ ಲೋಕ ಕಟ್ಟಿಕೊಳ್ಳುವ ಕನಸು ತೋರಿಸುತ್ತಾನೆ. ಅವರೆಲ್ಲರು ಕೈಕಾರ್ಯ ಮಾಡಿ ಆ ಕಾಡಿನ ಮಧ್ಯೆ ಚಿಕ್ಕ ಪಟ್ಟಣವನ್ನು ಕಟ್ಟುತ್ತಾರೆ. ಅದಕ್ಕೆ ’ಜೋನ್ಸ್ ಟೌನ್’ ಎಂಬ ಹೆಸರನ್ನೂ ಇಡುತ್ತಾರೆ.
ಸುದ್ಧಿ ಮಾಧ್ಯಮ-ಸರಕಾರದ ಕಣ್ಣಿಂದ ದೂರವಾದ ನಂತರ ಜಿಮ್ ತನ್ನ ಪಟ್ಟಣದಲ್ಲಿ ಸಮಾಜವಾದ ಜೀವನದ ಪ್ರಯೋಗಗಳನ್ನು ಶುರುಮಾಡುತ್ತಾನೆ. ಎಲ್ಲರೂ ದುಡಿದು ತಿನ್ನುವುದು, ಸಮಾಜದ ಒಳಿತಿಗಾಗಿ ಎಲ್ಲರೂ ಶ್ರಮಿಸುವುದು ಎಲ್ಲವೂ ಮೊದಮೊದಲು ಚೆನ್ನಾಗೇ ನಡೆಯುತ್ತದೆ. ಕೆಲ ಸಮಯದ ನಂತರ ಸದಸ್ಯರ ಕುಟುಂಬಗಳು ಅಮೇರಿಕೆಯಲ್ಲಿ ಮತ್ತೆ ಪೀಪಲ್ಸ್ ಬಗ್ಗೆ ಅಕ್ಷೇಪಗಳನ್ನು ಎತ್ತತೊಡಗುತ್ತಾರೆ. ಕೆಲ ಸದಸ್ಯರನ್ನು ಅವರ ಇಚ್ಚೆಗೆ ವಿರುದ್ಧವಾಗಿ ಗಯಾನಕ್ಕೆ ಕರೆದೊಯ್ಯಲಾಗಿದೆಯೆಂಬ ಅರೋಪವು ನಡೆಯುತ್ತದೆ.
ಈ ಕಡೆ ಜಿಮ್‍ನಿಂದ ತನ್ನ ಹಿಂಬಾಲಕರಿಗೆ ಮತ್ತೆ ಅಮೇರಿಕೆಗೆ ಮರಳಿ ಅಲ್ಲಿ ತಮಗೆ ಆಗದವರ ಜೊತೆ ಬಾಳುವುದಕ್ಕಿಂತ ತಾವಿರುವ ಸ್ಥಳದಲ್ಲಿ ಕಷ್ಟಪಟ್ಟು ಬದುಕುವುದೇ ಲೇಸು ಎನ್ನುವ ನಿತ್ಯ ಪ್ರವಚನ ನಡದೇ ಇರುತ್ತದೆ. ಜಿಮ್‍ನನ್ನು ದೇವರೆಂದೇ ಭಾವಿಸುವ ಆ ಶಿಷ್ಯಪಡೆ, ಅಕ್ಷರಶ: ಜಿಮ್ ಹೇಳಿದ್ದನ್ನೇ ಕೇಳುತ್ತದೆ. ಕಡೆಕಡೆಗೆ ಸಂದರ್ಭ ಬಂದರೆ ತಾವೆಲ್ಲರೂ ಒಟ್ಟಿಗೆ ಮರಣಿಸಲು ತಯಾರಿರಬೇಕೆಂದು ಜಿಮ್ ಬ್ರೆನ್‍ವಾಶ್ ನಡೆಸಿರುತ್ತಾನೆ.
ಇತ್ತ ಕುಟುಂಬದವರ-ಸುದ್ಧಿಮಾಧ್ಯಮದವರ ಅಕ್ಷೇಪಗಳು ಹೆಚ್ಚಾದಾಗ,ಅಮೇರಿಕದ ಸಂಸತ್ ಸದಸ್ಯ ’ಲಿಯೋ ರಯಾನ್’, ಪ್ರತ್ಯಕ್ಷವಾಗಿ ನೋಡಲು ಗಯಾನಕ್ಕೆ ಬರುತ್ತಾನೆ. ರಯಾನ್ ಭೇಟಿಯ ಸಮಯದಲ್ಲಿ, ಜಿಮ್‍ನ ಗುಂಪಿನಿಂದ ಹಲವಾರು ಪೀಪಲ್ಸ್ ಬಿಟ್ಟು ಮರಳಿ ಅಮೇರಿಕೆಗೆ ಬರುವ ಆಶಯ ವ್ಯಕ್ತಪಡಿಸುತ್ತಾರೆ. ರಯಾನ್ ಅವೆರಲ್ಲರನ್ನೂ ಕರೆದುಕೊಂಡು ವಿಮಾನ ಹತ್ತುತ್ತಿದ್ದಂತೆ ಜಿಮ್ ಕಡೆಯ ಬಂದೂಕಧಾರಿಗಳು ರಯಾನ್ ಸಮೇತವಾಗಿ ೫-೬ ಜನರನ್ನು ಕೊಲ್ಲುತ್ತಾರೆ.
ನಂತರ ನಡೆಯುವುದೇ ವಿವೇಚನೆಗೆ ನಿಲುಕದ ಘಟನೆ..
ರಯನ್ ಮತ್ತು ಅಮೇರಿಕದ ತಂಡವನ್ನು ತಾವು ಕೊಂದ ನಂತರ,ಜಿಮ್ ತನ್ನ ಎಲ್ಲಾ ಅನುಮಾಯಿಗಳಿಗೆ ಸಭೆಗೆ ಕರೆದು ಹೇಳುತ್ತಾನೆ.ಅಮೇರಿಕ ಸರಕಾರ ತಮ್ಮೆಲ್ಲರನ್ನೂ ಹುಡುಕಿ ಕೊಲ್ಲಿಸುತ್ತೆಂದು,ಅದಕ್ಕಿಂತ ಉತ್ತಮ ಮಾರ್ಗವೆಂದರೆ ಜೀವ ತೊರೆದು ಕ್ರಾಂತಿ ಮಾಡುವುದೆಂದು ಘೋಷಿಸುತ್ತಾನೆ. ಅದಾಗಿ ಕೆಲ ಸಮಯದಲ್ಲಿ ಸೈನಾಯಿಡ್ ಮಿಶ್ರಿತ ಪಾನೀಯವನ್ನು ಸಭೆಯಲ್ಲಿದ್ದವರೆಲ್ಲಾ ಒಟ್ಟಾಗಿ ಕುಡಿಯುತ್ತಾರೆ. ಕೆಲವು ನಿಮಿಷಗಳಲ್ಲೇ ಅಲ್ಲಿದ್ದ ೯೧೪ ಜನ ಜೀವ ಚೆಲ್ಲುತ್ತಾರೆ. ಅವರಲ್ಲಿ ೨೭೬ ಮಕ್ಕಳು...
ಆ ಸಾಮೂಹಿಕ ಆತ್ಮಹತ್ಯೆ ನಡೆದು ಸುಮಾರು ೩೦ ವರ್ಷಗಳೇ ಕಳೆದಿದೆ. ಅಷ್ಟೊಂದು ಜನ ಅದು ಹೇಗೆ ಇಂತಹ ಕಾರ್ಯಕ್ಕೆ ಶರಣಾದರು ಎಂಬ ಪ್ರಶ್ನೆ ಈಗಲೂ ಇದೆ. ಅಷ್ಟೊಂದು ಜನರ ಮನವನ್ನು ಸೂತ್ರದಾರನಂತೆ ಜಿಮ್ ಹೇಗೆ ನಿಯಂತ್ರಿಸಿದ್ದು ಎಂಬುದು ಯಕ್ಷಪ್ರಶ್ನೆ.
ಸಮಾಜ ಜೀವಿಗಳಾದ ಮಾನವರು ,ತಮಗಿಂತ ದೊಡ್ಡದಾದ ಒಂದು ಶಕ್ತಿ-ಪಂಗಡ-ವ್ಯಕ್ತಿಯ ಮೂಲಕ ತಮ್ಮ ಗುರುತನ್ನು ಕಂಡುಕೊಳ್ಳುವ ಪ್ರಯತ್ನ ನಿರಂತರ. ಈ ತರದ ಆಶಯಗಳನ್ನು, ಜನರ ದುರ್ಬಲತೆಗಳನ್ನು ಉಪಯೋಗಿಸಿಕೊಳ್ಳುವ ಚಾಣಾಕ್ಷರು ಯಾವಾಗಲೂ ಇದ್ದೇ ಇರುತ್ತಾರೆ.
ಮನಸ್ಸಿಗಿಂತ ದೊಡ್ಡ ಮಿತ್ರ-ಶತ್ರು ಇನ್ನ್ಯಾವುದಿದೆ ?
16 comments:
ಶಿವ,
ಆಧುನಿಕ ಜಗತ್ತು ಎಂದು ಕರೆಯಿಸಿಕೊಳ್ಳುವ ಅಮೆರಿಕದಲ್ಲೂ ಸಹ ಇಂತಹ ಒಂದು ಘಟನೆ ನಡೆಯಬಹುದೆಂದರೆ ವಿಸ್ಮಯವಾಗುತ್ತದೆ. ಬಹುಶಃ ದುರ್ಬಲ ಮನಸ್ಸಿನವರು authority figureಗಳಿಗೆ ಸಮ್ಮೋಹಿತರಾಗುತ್ತಾರೇನೊ?
ಸುನಾಥ್ ಕಾಕಾ,
ನೀವು ಹೇಳಿದ್ದು ಸರಿ..
ಕುರಿಗಳು ಸರ್ ಕುರಿಗಳು
ಅಷ್ಟೊಂದು ಜನರ ಮನಸ್ಸನ್ನು ತನ್ನ ಹಿಡಿತದಲ್ಲಿ ಹೇಗೆ ಇಟ್ಟಿದ್ದ ಎನ್ನುವುದರ ಬಗ್ಗೆ ಆಶ್ಚರ್ಯ ಆಗುತ್ತದೆ. ಮಾಹಿತಿಗೆ ಧನ್ಯವಾದಗಳು ಶಿವು
ಶರಶ್ಚಂದ್ರ.
ಪಾತರಗಿತ್ತಿಗೆ ಸ್ವಾಗತ !
ಹೇಗೆ ಹಿಡಿತದಲ್ಲಿಟ್ಟಿದ್ದ ಅನ್ನುವುದೇ ದೊಡ್ಡ ಪ್ರಶ್ನೆ..
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
ಇದು ಸಮೂಹ ಸನ್ನಿಗೆ ಒಳಪಟ್ಟವರ ಉತ್ತಮ ಉದಾಹರಣೆ.ಒಳ್ಳೆಯಲೆಖನ.ಅಭಿನಂದನೆಗಳು.
ಈ ಎಲ್ಲಾ ವಿಚಾರಗಳೂ ತಿಳಿದಿರಲಿಲ್ಲ..ಮಾಹಿತಿಗಾಗಿ ಧನ್ಯವಾದಗಳು.
ಕೃಷ್ಣಮೂರ್ತಿ ಸರ್,
ಸಮೂಹ ಸನ್ನಿ ಎಂಬುದು ವಿಚಿತ್ರ ಮನಸ್ಥಿತಿ ಅಲ್ವಾ..
ಧನ್ಯವಾದಗಳು
ಮನಮುಕ್ತಾ,
ನಿಮ್ಮ ಪ್ರತಿಕ್ರಿಯೆಗೆ ವಂದನೆ.
ಶಿವ್ ನಿಜ ಸಮೂಹ ಸಮ್ಮೋಹಿನಿ ವಿದ್ಯೆಯೂ ಒಂದು ಇಂತಹುದೇ ಪ್ರಾಕಾರದ್ದು..ನನಗೆಕೆಲವು ಕ್ರಿಶ್ಚಿಯನ್ ಧರ್ಮಗುರುಗಳು ಮಾಡುವ ಭಾಷಣ ಮತ್ತು ಅಲ್ಲಿ ಜನರನ್ನು ಸಮ್ಮೋಹಿತಗೊಳಿಸುವುದು ಇತ್ಯಾದಿ ಟಿ.ವಿ.ಯಲ್ಲಿ ನೋಡಿದ ನೆನಪು..ಧರ್ಮ ಪ್ರಚಾರ ಬೇರೆ ಆದರೆ ಈ ತರಹ ಅಮಾಯಕರನ್ನು ಸಾಮೂಹಿಕ ಆತ್ಮಹತ್ಯೆಗೆ ಪ್ರೇರೇಪಿಸುವುದು..ಕೊಲೆಯಷ್ಟೇ ಗಂಭೀರ ಅಲ್ಲವೇ?..ಚನ್ನಾಗಿದೆ ಮಾಹಿತಿ
ಜಲನಯನ,
ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿದೆ.
ಯಾವುದೇ ಧರ್ಮವಾಗಲಿ, ಅಮಾಯಕರ ಶೋಷಣೆಯಾಗಲಿ, ಸನ್ನಿಯಾಗಲಿ ಸಲ್ಲದು. ಅದರಲ್ಲೂ ಈ ತರದ ಪ್ರಾಣ ತೆಗೆದುಕೊಳ್ಳುವುಂತೆ ಮಾಡುವುದು ಅಕ್ಷಮ್ಯ ಅಪರಾಧ.
ಮನಸ್ಸಿನಷ್ಟು ನಿಗೂಢವಾದುದು ಯಾವುದೂ ಇಲ್ಲ. ಸಮೂಹ ಸನ್ನಿಯಿಂದ ಇಡೀ ಸಮುದಾಯವನ್ನೇ ಮರುಳುಮಾಡುವು ವಿದ್ಯೆ ಮೊದಲಿಂದಲೂ ಇದೆ
ದೀಪಸ್ಮಿತಾ,
ಪಾತರಗಿತ್ತಿ ಬ್ಲಾಗಿಗೆ ಸ್ವಾಗತ !
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
Never knew these facts... very well written.
ಹೆಗಡೆಯವರೇ,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
baraha tumba chennagide, informative.. heege bareeta iri
ವೆಂಕಟ್ರಮಣ ಅವರೇ,
ಪಾತರಗಿತ್ತಿಗೆ ಸ್ವಾಗತ !
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು
ಬರ್ತಿರಿ
Post a Comment