Sunday, October 31, 2010

ಎಲೆನ್

ಆ ಚಿಕ್ಕ ದೋಣಿಯಲ್ಲಿ ತನ್ನ ತಾಯಿ ಮತ್ತು ಇನ್ನು ಕೆಲವರೊಂದಿಗೆ ಕ್ಯೂಬಾವೆಂಬ ಆ ದ್ವೀಪದೇಶದಿಂದ ಪಲಾಯನ ಮಾಡಿ, ಅಮೇರಿಕೆಗೆ ಹೊರಟಾಗ, ಎಲೆನ್ ಎಂಬ ಹೆಸರಿನ ಹುಡುಗನಿನ್ನೂ ೫ ವರ್ಷದವನು. ಆದರೆ ದೋಣಿಯ ಯಂತ್ರ ಕೆಟ್ಟು, ನೀರು ತುಂಬಿಕೊಂಡು ಸಮುದ್ರದಲ್ಲಿ ಮುಳುಗತೊಡಗಿದಾಗ, ಆತನ ತಾಯಿ ಅವನನ್ನು ರಬ್ಬರ್ ಟ್ಯೂಬ್‍ವೊಂದರಲ್ಲಿ ತೇಲಿಬಿಡುತ್ತಾಳೆ. ದೋಣಿಯಲ್ಲಿದ್ದ ಎಲ್ಲರೂ ನೀರು ಪಾಲಾಗುತ್ತಾರೆ. ರಬ್ಬರ್ ಟ್ಯೂಬಿನಲ್ಲಿ ಸಮುದ್ರದಲ್ಲಿ ತೇಲುತ್ತಿದ್ದ ಬಾಲಕನನ್ನು ಅಮೇರಿಕನ್ ಮೀನುಗಾರರಿಬ್ಬರ ಕಣ್ಣಿಗೆ ಬಿದ್ದು, ಅಲ್ಲಿಂದ ಅಮೇರಿಕೆ ಗಡಿ ರಕ್ಷಣ ಪಡೆ ತಲುಪುತ್ತಾನೆ.

ಅಮೇರಿಕೆಯ ವಲಸೆ ಇಲಾಖೆ ಆ ಬಾಲಕನನ್ನು , ಅಮೇರಿಕೆದ ಮೀಯಾಮಿಯಲ್ಲಿಯೇ ಇದ್ದ ಆತನ ಹತ್ತಿರದ ಸಂಬಂಧಿಯೊಬ್ಬರ ವಶಕ್ಕೆ ನೀಡುತ್ತಾರೆ. ಈ ಹುಡುಗನ ತರವೇ, ಕ್ಯೂಬಾದಿಂದ ವಲಸೆ ಬಂದು ಅಮೇರಿಕದ ಆಶ್ರಯ ಕೋರಿ ಬಹಳಷ್ಟು ಕ್ಯೂಬನ್ ವಲಸೆಗಾರು ನೆಲವುರಿದ್ದು ಆ ಮೀಯಾಮಿಯಲ್ಲಿ. ಅವರೆಲ್ಲರ ಒಮ್ಮತ ಅಭಿಪ್ರಾಯದಂತೆ ಆ ಬಾಲಕನನ್ನು ತಮ್ಮೊಡನೆ ಅಮೇರಿಕದಲ್ಲೇ ಬೆಳಸುವುದೆಂದು ತೀರ್ಮಾನಿಸುತ್ತಾರೆ. ಅಮೇರಿಕದ ಸುದ್ಧಿಮಾಧ್ಯಮಗಳಲ್ಲಿ ಈ ಬಾಲಕನದೇ ಸುದ್ಧಿ.

ಇದಾಗಿ ಸ್ಪಲ್ಪ ದಿನಕ್ಕೆ ಕ್ಯೂಬಾದಿಂದ ಎಲೆನ್‍ನ ತಂದೆಯ ಪತ್ರ ಬರುತ್ತದೆ. ತನ್ನ ಮಗನನ್ನು ತನ್ನ ಇಚ್ಚೆಗೆ ವಿರುದ್ಧವಾಗಿ ತನ್ನ ಹೆಂಡತಿ ಕರೆದೊಯ್ಯದಳೆಂದು, ತನಗೆ ತನ್ನ ಮಗನನ್ನು ಒಪ್ಪಿಸಬೇಕೆಂದು ಮನವಿ ಮಾಡಿಕೊಂಡಿರುತ್ತಾನೆ. ಕ್ಯೂಬಾಕ್ಕೆ ಮರಳಿದರೆ ಆ ಹುಡುಗನಿಗೆ ಭವಿಷ್ಯವಿಲ್ಲವೆಂದು, ಆತನಿಗೆ ಅಮೇರಿಕೆದಲ್ಲಿಯೇ ಉಳಿಸಿಕೊಳ್ಳಬೇಕೆಂದು ಅಮೇರಿಕದ ಸಂಬಂಧಿಗಳ ವಾದ ಶುರುವಾಗುತ್ತದೆ.

ಕುಟುಂಬವೊಂದರ ವ್ಯಾಜ್ಯದಂತಿದ್ದ ಈ ಪ್ರಕರಣ, ಕ್ರಮೇಣ ಕ್ಯೂಬಾ-ಅಮೇರಿಕೆಯ ಪ್ರತಿಷ್ಠೆ ಪ್ರಶ್ನೆಯವರೆಗೆ ಬೆಳಯುತ್ತದೆ. ಹುಡುಗ ಸ್ಪಲ್ಪ ಸಮಯದಲ್ಲೇ ಸುದ್ಧಿಮಾಧ್ಯಮಗಳ ಪ್ರಿಯವಸ್ತುವಾಗುತ್ತಾನೆ. ಅನೇಕ ಅನಿರೀಕ್ಷಿತ ಸವಲತ್ತುಗಳು-ತಲೆನೋವುಗಳು ಅವನೆಡೆಗೆ ಬರತೊಡಗುತ್ತವೆ. ಒಂದು ದಿನ, ಎಲೆನ್ ಡಿಸ್ನಿಲ್ಯಾಂಡ್‍ ನೋಡಲು ಹೋದರೆ, ಮಗದೊಂದು ದಿನ ರಾಜಕೀಯದವರು ಎಲೆನ್‍ನನ್ನು ನೋಡಲು ಬರುತ್ತಾರೆ.

ಪ್ರಕರಣ ಕೋರ್ಟಿನ ಮೆಟ್ಟಲೇರಿ, ಮಗುವಿಗೆ ಅಮೇರಿಕ ಆಶ್ರಯ ನೀಡಬೇಕೆಂಬ ವಾದವನ್ನು ನ್ಯಾಯಾಲಯ ತಳ್ಳಿ ಹಾಕಿ, ಆತನನ್ನು ತಂದೆಯ ವಶಕ್ಕೆ ಒಪ್ಪಿಸಬೇಕೆಂದು ಆದೇಶಿಸುತ್ತದೆ. ಮೀಯಾಮಿಯ ಕ್ಯೂಬನ್ ವಲಸೆಗಾರರು ಇದ್ದಕ್ಕೆ ಭಾರೀ ವಿರೋಧ ವ್ಯಕ್ತಪಡಿಸುತ್ತಾರೆ. ಅಮೇರಿಕೆದ ಸಂಬಂಧಿಗಳು ನ್ಯಾಯಾಲಯದ ಮಾತನ್ನು ನಿರಾಕರಿಸಿ ಮಗುವನ್ನು ಮತ್ತೆ ಕ್ಯೂಬಾಕ್ಕೆ ಮರಳಿಸಲಿಕ್ಕೆ ಬಿಡುವುದಿಲ್ಲವೆಂದು ಪಟ್ಟುಹಿಡಿಯುತ್ತಾರೆ.
ಎಲ್ಲಾ ಸಂಧಾನಗಳು ವಿಫಲವಾದಾಗ, ಕಡೆಗೆ ಮಗುವನ್ನು ಕರೆತರೆಲು ಕ್ಷಿಪ್ರ ಪಡೆಯನ್ನು ನಿಯೋಜಿಸಲಾಗುತ್ತದೆ. ಅಕ್ಷರಶಃ ಮಗುವಿದ್ದ ಮನೆ ರಣರಂಗವಾಗುತ್ತದೆ. ಕ್ಯೂಬನ್ ವಲಸಿಗಾರರು ತೀವ್ರ ಪ್ರತಿರೋಧವೊಡ್ಡುತ್ತಾರೆ. ಕಡೆಗ ಕ್ಷಿಪ್ರ ಪಡೆ ಮನೆಯೊಳಗೆ ನುಗ್ಗಿ ಎಲೆನ್‍ನನ್ನು ಕರೆತರುತ್ತಾರೆ.

ಎಲೆನ್‍ನನ್ನು ವಶಕ್ಕೆ ಪಡೆದು ಅವನ ತಂದೆ ಮರಳಿ ಕ್ಯೂಬಾಕ್ಕೆ ಕರೆದೊಯ್ಯದಾಗ, ಆ ದೇಶದಾಂತ್ಯ ಭಾರೀ ಸಂಭ್ರಮ. ಮಗು ಕ್ಯೂಬಾ ಸರ್ಕಾರದ ಕಣ್ಮಣಿಯಾಗಿ ಬಿಡುತ್ತದೆ. ಖುದ್ದು ಕ್ಯೂಬಾದ ಅಧ್ಯಕ್ಷ ಫಿಡಲ್ ಕ್ಯಾಸ್ಟ್ರೋ ಎಲೆನ್ ಹುಟ್ಟುಹಬ್ಬಕ್ಕೆ ಆಗಮಿಸುತ್ತಾನೆ.

ಒಂದು ಕುಟುಂಬದ ಕಲಹವಾಗಿದ್ದ ಇದು, ಎರಡು ದೇಶಗಳ ನಡುವೆ ಚಕಮಕಿಗೆ ಕಾರಣವಾದದ್ದು ಹೇಗೆ ?

ಕ್ಯೂಬಾ ಮತ್ತು ಅಮೇರಿಕೆದ್ದು ಬಹಳ ಹಿಂದಿನಿಂದಲೂ ಸಂಘರ್ಷ ನಡದೇ ಇದೆ. ಕ್ಯೂಬಾದಲ್ಲಿ ರಕ್ತಕ್ರಾಂತಿ ನಡೆದು, ಫೀಡಲ್ ಕ್ಯಾಸ್ಟ್ರೋ ನೇತೃತ್ವದಲ್ಲಿ ಕಮ್ಯುನಿಷ್ಟ್ ಅಳ್ವಿಕೆ ಬಂದಾಗಿನಿಂದ, ಅಮೇರಿಕ ಆ ಸರ್ಕಾರ ಉರುಳಿಸಲು ಸತತ ಪ್ರಯತ್ನಪಟ್ಟಿತ್ತು. ಅದು ೧೯೬೨, ಶೀತಲ ಸಮರ ಪರಾಕಾಷ್ಟೆ ಮುಟ್ಟಿದ ವರ್ಷ. ಈಡೀ ಪ್ರಪಂಚ, ಅಮೇರಿಕ ಮತ್ತು ರಷ್ಯಾ ಎಂಬ ಎರಡು ಶಕ್ತಿಗಳಲ್ಲಿ ಹಂಚಿಹೋಗಿ, ನ್ಯೂಕ್ಲಿಯರ್ ಮಾರಕಾಸ್ತ್ರಗಳ ಪೈಪೋಟಿ ನಡೆಯುತ್ತಿದ್ದ ಸಮಯ. ಅಮೇರಿಕದ ಹಿತ್ತಲಲ್ಲೇ ಇದ್ದ ಕ್ಯೂಬಾವನ್ನು ರಷ್ಯಾ ತನ್ನ ಗುಂಪಿಗೆ ಸೆಳೆದುಕೊಂಡಿತು. ರಷ್ಯ ತನ್ನ ನ್ಯೂಕ್ಲಿಯರ್ ಕ್ಷಿಪಣಿ ನೆಲೆಗಳನ್ನು ಕ್ಯೂಬಾದಲ್ಲಿ ಸ್ಥಾಪಿಸಿತ್ತು. ಅಲ್ಲಿಂದ ಹಾರಿಸಿದ ಕ್ಷಿಪಣಿಗಳು ಈಡೀ ಅಮೇರಿಕೆಯನ್ನು ಧ್ವಂಸ ಮಾಡುವ ಶಕ್ತಿಹೊಂದಿದ್ದವು.

ಜಗತ್ತು ಅಣುಯುದ್ಧದ ಅಂಚಿಗೆ ಬಂದು ನಿಂತಿತ್ತು. ಅದೃಷ್ಟವಷಾತ್ ಸಂಧಾನ ಸಫಲವಾಗಿ ರಷ್ಯಾ ತನ್ನ ಕ್ಷಿಪಣಿಗಳನ್ನು ಕ್ಯೂಬಾದಿಂದ ಹಿಂದೆಗೆತಿತ್ತು. ಅಮೇರಿಕಾ ಕ್ಯೂಬಾದ ಮೇಲೆ ದಾಳಿ ಮಾಡುವುದಿಲ್ಲವೆಂದು ಘೋಷಿಸಿತ್ತು. ಅಂದಿನಿಂದ ಇಲ್ಲಿಯವರೆಗೆ ಕ್ಯೂಬಾ ಮತ್ತು ಅಮೇರಿಕೆಯ ಸಂಬಂಧ ಅಷ್ಟಕಷ್ಟೇ. ಅವಕಾಶ ಸಿಕ್ಕಾಗಲೆಲ್ಲಾ ಒಬ್ಬರೊನ್ನಬ್ಬರು ಹಣಿಯುವ ತವಕ. ಬಾಲಕ ಎಲೆನ್ ಪ್ರಕರಣ, ಅದಕ್ಕೆ ಒಂದು ಚಿಕ್ಕ ಉದಾಹರಣೆ ಅಷ್ಟೇ

ಕ್ಯೂಬಾದ ಜನರ ಸ್ಥಿತಿಗತಿ ಅಷ್ಟೇನೂ ಚೆನ್ನಾಗಿಲ್ಲವೆನ್ನುತ್ತವೆ ಮಾಧ್ಯಮಗಳು. ಅರ್ಥಿಕ ಸಮಸ್ಯೆಗಳು- ಸರ್ಕಾರದ ಅತಿರೇಕಗಳ ಬಗ್ಗೆ ಕ್ಯೂಬಾ ವಾಸಿಗಳಲ್ಲಿ ಅಸಮಾಧಾನವಿದೆ. ಹಾಗೆಯೇ ಭವಿಷ್ಯದ ಬಗ್ಗೆ ಚಿಂತೆಯಿದೆ. ಅವಕಾಶ ದೊರೆತಾಗ ಕ್ಯೂಬಾದಿಂದ ತಪ್ಪಿಸಿಕೊಂಡು ಅಮೇರಿಕೆಗೆ ತಲುಪಿ ಹೊಸ ಜೀವನ ಕಂಡುಕೊಳ್ಳುವುದು ಅನೇಕ ಕ್ಯೂಬನ್‍ರ ಹಂಬಲವಂತೆ.


ಎಲೆನ್ ಕ್ಯೂಬಾಕ್ಕೆ ಮರಳಿ ಹೋದಾಗ ಆತನಿಗೆ ೫ ವರ್ಷ. ನಂತರ ಅವನನ್ನು ಕ್ಯೂಬಾ ಸರ್ಕಾರ, ಮಾಧ್ಯಮಗಳಿಂದ ದೂರವೇ ಇಟ್ಟಿತ್ತು. ಏನಾದ ಆ ಹುಡುಗ ಎಂಬ ಪ್ರಶ್ನೆ ತುಂಬಾ ಜನರಲ್ಲಿತ್ತು. ಹತ್ತು ವರ್ಷದ ನಂತರ, ಕಳೆದ ತಿಂಗಳು ಕ್ಯೂಬಾದಿಂದ ಎಲೆನ್‍ನ ಹೊಸ ಪೋಟೋ-ಸುದ್ಧಿ ಬಂದಿವೆ. ಈಗ ೧೫ ವರ್ಷದ ಎಲೆನ್ ಹೈಸ್ಕೂಲ್ ಮುಗಿಸಿ, ಮಿಲಿಟರಿ ಶಾಲೆಯೊಂದಕ್ಕೆ ಸೇರಿದ್ದಾನೆ. ಹಾಗೆಯೇ ಯುವ ಕಮ್ಯುನಿಷ್ಟ್ ಪಕ್ಷದ ಸದಸ್ಯತ್ವ ಪಡೆದಿದ್ದಾನೆ.

ಇಲ್ಲಿಯವರೆಗೆ ಎಲೆನ್ ಸಾಗಿದ ಹಾದಿ ಬಹಳ ವಿಭಿನ್ನವಾದದ್ದು.

ಸನ್ನಿವೇಶ-ಸಮಯ ಯಾರನ್ನು ಎಲ್ಲೆಲ್ಲಿ ಕರೆದೊಯ್ಯುವುದೋ ಏನೋ...

10 comments:

sunaath said...

ದೇಶ ದೇಶಗಳ ನಡುವೆ ಕಾದಾಟಕ್ಕೆ ಕಾರಣನಾದ ಈ ಪುಟ್ಟ ಬಾಲಕನ ಕತೆ ಸ್ವಾರಸ್ಯಕರವಾಗಿದೆ!

Shiv said...

ಸುನಾಥ್ ಕಾಕಾ,

ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ !

ಜಲನಯನ said...

ಹಿರಿಯರ, ದೊಡ್ದವರ ಮಧ್ಯೆಯ ಕಾದಾಟಕ್ಕೆ ಚಿಕ್ಕವರು ದಾಳಗಳಾಗುವುದು ಮೊದಲಿನಿಂದ ನಡೆದುಬಂದಿರುವ ರಾಜಕೀಯದಾಟವೇ...ಚನ್ನಾಗಿದೆ ಘಟನೆಯ ಸುತ್ತಲಿನ ಇತರ ವೃತ್ತಾಂತಗಳು...

ಶರಶ್ಚಂದ್ರ ಕಲ್ಮನೆ said...

ನಿಜವಾಗಿಯೂ ಸ್ವಾರಸ್ಯಕರ ಕಥೆ... ಮಾಹಿತಿಗೆ ವಂದನೆಗಳು :)

ರಾಜೇಶ್ ನಾಯ್ಕ said...

ಉತ್ತಮ ಮಾಹಿತಿ. ಧನ್ಯವಾದ.

Shiv said...

ಆಜಾದ್,
ಪಾತರಗಿತ್ತಿಗೆ ಭೇಟಿ ನೀಡಿ ಪ್ರತಿಕ್ರಿಯೆಗೆ ಧನ್ಯವಾದಗಳು.

Shiv said...

ಶರತ್,

ನಿಮಗೆ ಲೇಖನ ಇಷ್ಟವಾಗಿದ್ದು ಸಂತೋಷ.

Shiv said...

ರಾಜೇಶ್,
ಅಲೆಮಾರಿಗಳಿಗೆ ನಮಸ್ಕಾರಗಳು.

ತೇಜಸ್ವಿನಿ ಹೆಗಡೆ said...

ತುಂಬಾ ಕುತೂಹಲಕರ, ಮಾಹಿತಿಪೂರ್ಣ, ಚಿಂತನಾಶೀಲ ಲೇಖನಗಳನ್ನು ಕೊಟ್ಟಿದ್ದೀರಿ. ಜೋನ್ಸ್ ಟೌನ್ ಕಥೆಯಂತೂ ಹೃದಯ ವಿದ್ರಾವಕವಾಗಿದೆ! ಲೆನಿನ್ ಕಥೆ ಮನುಷ್ಯನ ಅಹಮಿಕೆಯ ಪರಾಕಷ್ಠೆಯನ್ನು ತೋರುತ್ತದೆ.
ನಿಜ... ಮನಸೇ ಮನುಷ್ಯನ ಶತ್ರು ಹಾಗೂ ಮಿತ್ರ. ಇದನ್ನು ತಿಳಿದೂ ತಿಳಿದೂ ಬದುಕು ಪೂರ್ತಿ ತನ್ನ ಶತ್ರು ಹಾಗೂ ಮಿತ್ರನ ಹುಡುಕಾಟದಲ್ಲೇ ಸವೆಯುತ್ತಾನೆ ಈತ!

ಧನ್ಯವಾದಗಳು.

Shiv said...

ತೇಜಸ್ವಿನಿ ಅವರೇ,

ನೀವು ಹೇಳಿದ್ದು ಸಂಪೂರ್ಣ ಸತ್ಯ..
ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು.