ಮೆಕ್ಸಿಕೋ ದೇಶ ದಿನನಿತ್ಯ ನರಳುತ್ತಿರುವುದು ಡ್ರಗ್ಸ್ ಮಾಫಿಯಾದ ಕಪಿಮುಷ್ಟಿಯಲ್ಲಿ. ಸರ್ಕಾರ ಡ್ರಗ್ಸ್ ಮಾಫಿಯಾ ವಿರುದ್ಧ ಯುದ್ಧ ಶುರುಮಾಡಿ ವರ್ಷಗಳೇ ಕಳೆದಿದ್ದರೂ, ಮಾಫಿಯಾದ ಹಾವಳಿ ಕಡಿಮೆಯೇನು ಆಗಿಲ್ಲ. ಗ್ಯಾಂಗ್ ವಾರ್‌ಗಳು ಮತ್ತು ಪೋಲಿಸ್ ವಿರುದ್ಧ ಹೋರಾಟದಲ್ಲಿ ನಿತ್ಯವೂ ಹೆಣಗಳು ಉರುಳುತ್ತಲೇ ಇವೆ. ಜೌರಿಜ್ ಎಂಬ ಪಟ್ಟಣವೊಂದರಲ್ಲೇ ೨೦೦೭ ರಿಂದ ಇಲ್ಲಿಯವರೆಗೇ ಸುಮಾರು ೬೦೦೦ ಜನ ಹತರಾಗಿದ್ದಾರೆ.
೭೪ ವರ್ಷದ ಅಜ್ಜಿಯೊಬ್ಬಳು, ಹಿಂಸೆಯಲ್ಲಿ ಬೇಯುತ್ತಿರುವ ಈ ನಗರಕ್ಕೆ ನಿತ್ಯವೂ ತೆರಳಿ ಗಾಯಗೊಂಡವರ ಸೂಶ್ರುಷೆ ಮಾಡುವಲ್ಲಿ ಶ್ರಮಿಸುತ್ತಿದ್ದಾಳೆ. ಆ ಅಜ್ಜಿ ಕಟ್ಟಿದ ಅಸ್ಪತ್ರೆಯಲ್ಲಿ ಇಲ್ಲಿಯವರೆಗೆ ಸಾವಿರಾರು ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ನಿತ್ಯದ ಹಿಂಸಾಚಾರದಲ್ಲಿ ತನ್ನ ಅನೇಕ ಸ್ನೇಹಿತ-ಬಂಧುಗಳನ್ನು ಕಳೆದುಕೊಂಡಿದ್ದರೂ ಆ ಹಿರಿಯ ವಯಸ್ಸಿನ ಮಹಿಳೆ ತನ್ನ ಸೇವೆಯನ್ನು ಚಾಚು ತಪ್ಪದೆ ಮಾಡುತ್ತಿದ್ದಾಳೆ.
ಅದರ ಜೊತೆ ಅಲ್ಲಿನ ಮಹಿಳೆಯರ ಮತ್ತು ಮಕ್ಕಳ ಆರೋಗ್ಯಕ್ಕೆ ತನ್ನ ಆಸ್ಪತ್ರೆಯಲ್ಲಿ ವಿಶೇಷ ಸವಲತ್ತು ಕಲ್ಪಿಸಿದ್ದಾಳೆ. ವಿಶೇಷವಾಗಿ ಗರ್ಭಿಣಿ ಸ್ತ್ರೀ ಮತ್ತು ನವಜಾತ ಶಿಶುಗಳ ಪಾಲನೆಯಲ್ಲಿ ತೊಡಗಿಸಿಕೊಂಡಿದ್ದಾಳೆ.
ಕಳೆದ ೩೫ ವರ್ಷದಿಂದ ಆ ನಗರಕ್ಕೆ ಬ್ಯಾಂಡೇಜ್ ಹಾಕುತ್ತಿರುವ ಅಜ್ಜಿಯ ಹೆಸರು - ಗೊಡಲುಪ್ ಲಿ ವೆಗಾ.
********************
ಮಧುರೆಯ ನಾರಾಯಣ ಕೃಷ್ಣನ್ ಪಂಚತಾರ ಹೋಟೆಲೊಂದರಲ್ಲಿ ಮುಖ್ಯ ಚೆಫ್ (ಬಾಣಾಸಿಗ)ನಾಗಿ ಕೆಲಸ ಮಾಡುತ್ತಿದ್ದವನು. ಸ್ವಿಟ್ಸರ್‌ಲೆಂಡ್‌ನಲ್ಲಿ ಅವನು ಆಸೆಪಟ್ಟ ಕೆಲಸವೂ ಸಿಕ್ಕಿತ್ತು. ಅಲ್ಲಿಗೆ ಹೋಗುವದಕ್ಕಿಂತ ಮುಂಚೆ ತನ್ನ ಕುಟುಂಬವನ್ನು ಮಾತಾಡಿಸಲು ತನ್ನೂರಿಗೆ ಹೋದವನು ದಾರಿಯಲ್ಲಿ ಕಂಡ ದೃಶ್ಯ ನೋಡಿ ಅವಕ್ಕಾದನು. ವೃದ್ಧನೊಬ್ಬ ಹಸಿವೆಯಿಂದ ತನ್ನ ವಿಸರ್ಜನೆಯನ್ನು ತಾನೇ ತಿನ್ನುತ್ತಿರುವ ದೃಶ್ಯ ಮನ ಕಲಕಿತು. ತನ್ನ ಹೋಟೆಲ್ ನೌಕರಿ ಬಿಟ್ಟು- ಸ್ವಿಟ್ಸರ್‌ಲೆಂಡ್‌ನ ಕೆಲಸದ ಆಮಂತ್ರಣವನ್ನು ತಿರಸ್ಕರಿಸಿದರು. ೨೦೦೩ರಲ್ಲಿ ತಾನು ಗಳಿಸಿದ ಸ್ವಂತ ಹಣದಿಂದ ’ಅಕ್ಷಯಾ ಟ್ರಸ್ಟ್’ ಶುರುಮಾಡಿ, ದೀನರ ಸಹಾಯಕ್ಕೆ ನಿಂತರು.
ದಿನ ನಿತ್ಯವೂ ತನ್ನ ಮನೆಯಲ್ಲಿ ಅಡುಗೆ ಮಾಡಿಕೊಂಡು ತನ್ನ ವ್ಯಾನ್‍ನಲ್ಲಿ ಹಾಕಿಕೊಂಡು ನಾರಾಯಣ ಹಸಿದವರನ್ನು ಹುಡುಕಿಕೊಂಡು ಹೋಗುತ್ತಾರೆ. ಮಾನಸಿಕ ಅಸ್ವಸ್ಥರು, ವಯಸ್ಸಾಗಿ ಮನೆಯಿಂದ ಹೊರಗಟ್ಟಿಸಿಕೊಂಡವರು, ಯಾವುದೋ ಪಾಳು ಕಟ್ಟಡಗಳಲ್ಲಿರುವವರು..ಎಲ್ಲರ ಬಳಿಗೆ ಹೋಗಿ ಬಿಸಿಯೂಟ ಮಾಡಿಸಿಬರುತ್ತಾರೆ. ಹಾಗೆಯೇ ತನ್ನ ಜೊತೆಯಲ್ಲಿ ಬಾಚಣಿಕೆ, ಕತ್ತರಿ, ಶೇವಿಂಗ್ ಸೇಟ್ ಒಯ್ಯುವ ನಾರಾಯಣ್ ಆ ನತದೃಷ್ಟರ ಕ್ಷೌರಿಕನಾಗಿಯೂ ಕೆಲಸ ಮಾಡುತ್ತಾರೆ. ದಿನವೂ ಸುಮಾರು ೪೦೦-೫೦೦ ಜನರಿಗೆ ಅನ್ನ ನೀಡುತ್ತಿರುವ ನಾರಾಯಣ್‍ಗೆ ೨೯ ವರ್ಷ.
**********************
ಮಾದಕ ವಸ್ತುಗಳ ಸೇವನೆಗಾಗಿ ಜೈಲಿಗೆ ಹೋದ ಸೂಸನ್ ಬರ್ಟನ್ ಅಲ್ಲಿಂದ ಹೊರಬಂದಾಗ, ಅಪರಾಧ ಲೋಕ ಕೈಬೀಸಿ ಕರೆಯುತಿತ್ತು. ಅದರ ಕಟು ಅನುಭವವಿದ್ದ ಸೂಸನ್, ತನ್ನಂತೆ ಜೈಲಿನಿಂದ ಶಿಕ್ಷೆ ಅನುಭವಿಸಿ ಹೊರಬರುವ ಮಹಿಳೆಯರಿಗೆ ಏನಾದರೂ ಸಹಾಯ ಮಾಡಬೇಕೆನ್ನುವ ಉದ್ದೇಶದಿಂದ ತನ್ನ ಮನೆಯನ್ನು ಅವರಿಗೊಸ್ಕರ ತೆರೆದಿಟ್ಟಳು. ಜೈಲಿನಿಂದ ಹೊರಬಂದ ಮಹಿಳೆಯರನ್ನು ತಾನೇ ಹೋಗಿ ಜೈಲಿನ ಗೇಟಿನಿಂದ ತನ್ನ ಕರೆತಂದು ಅವರಿಗೆ ಸಾಂತ್ವನ ಹೇಳಿದಳು. ಆ ಮಹಿಳೆಯರ ಮುಂದಿನ ಜೀವನಕ್ಕೆ ಬೇಕಾದ ವೃತ್ತಿ ತರಬೇತಿ, ಕೌನ್ಸಿಲಿಂಗ್, ಬೆಂಬಲವನ್ನು ನೀಡುತ್ತಾ ಬಂದಿದ್ದಾಳೆ.
ಇಲ್ಲಿಯವರೆಗೆ ಸೂಸನ್ ತರಬೇತಿ ನೀಡಿದ ಸುಮಾರು ೫೦೦ ಮಹಿಳೆಯರು ತಮ್ಮ ಕಾಲಮೇಲೆ ನಿಂತುಕೊಂಡು ಮತ್ತೆ ಅಪರಾಧಿ ಲೋಕದ ಸುಳಿಗೆ ಸಿಲುಕಿಲ್ಲ. ಇದರ ಜೊತೆ ತನ್ನ ಊರಿನಲ್ಲಿ ಮಹಿಳೆಯರ ಮತ್ತು ಮಕ್ಕಳ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾಳೆ.
*************************
ಕಂಬೋಡಿಯ ದೇಶ ಅಂತರಿಕ ಯುದ್ಧದಲ್ಲಿ ಸುಮಾರು ೩ ದಶಕಗಳ ಕಾಲ ನಲುಗಿತು. ಆ ಸಮಯದಲ್ಲಿ ಸುಮಾರು ೧೫ ಲಕ್ಷ ಜನ ಹತರಾಗಿದ್ದರು. ದೇಶದ ತುಂಬೆಲ್ಲಾ ನೆಲಬಾಂಬ್(ಲ್ಯಾಂಡ್ ಮೈನ್)ಗಳನ್ನು ಹುದುಗಿಸಿ ಇಡಲಾಗಿತ್ತು.
ಮಿಲಿಟೆಂಟ್ ಪಡೆಗಳು ಕುಟುಂಬಗಳನ್ನು ಹತ್ಯೆ ಮಾಡಿ, ಚಿಕ್ಕ ಬಾಲಕರನ್ನು ಹೊತ್ಯೊಯ್ದು ಅವರಿಗೆ ತಮ್ಮ ಪಡೆಯಲ್ಲಿ ಸೇರಿಸಿಕೊಳ್ಳುತ್ತಿದ್ದರು. ಅಂತಹ ಒಬ್ಬ ಬಾಲ ಸೈನಿಕ - ಅಕಿರೋ. ೧೦ ವರ್ಷಕ್ಕೆ ಮಿಲಿಟೆಂಟ್ ಪಡೆಯಲ್ಲಿ ಬಲವಂತವಾಗಿ ಸೇರಿಸಲ್ಪಟ್ಟ ಅಕಿರೋ ತನ್ನ ಅರಿವು ಮೂಡುವ ವಯಸ್ಸಿಗಾಗಲೇ ಮಾಡಿದ ಹತ್ಯೆಗಳಿಗೆ ಲೆಕ್ಕವಿರಲಿಲ್ಲ.
ಕದನವೆಲ್ಲಾ ಮುಗಿದು ಶಾಂತಿ ಮರಳಿದಾಗ, ದೇಶಕ್ಕೆ ಕಾಡಿದ ಮುಂದಿನ ಸಮಸ್ಯೆ ನೆಲದಲ್ಲಿ ಹುದುಗಿಸಿಟ್ಟಿದ್ದ ನೆಲಬಾಂಬ್‍ಗಳು. ಸುಮಾರು ೨೦ ಸಾವಿರ ಜನ ನೆಲಬಾಂಬ್ ತುಳಿದು ಹತರಾಗಿದ್ದರು.
ಅಕಿರೋ ತಾನು ಅರಿವಿಲ್ಲದಂತೆ ಬಾಲ್ಯದಲ್ಲಿ ಮಾಡಿದ ಅಪರಾಧಗಳ ಪ್ರಾಯಶ್ಚಿತಕ್ಕೆ ಹುಡುಕಿಕೊಂಡ ಹಾದಿ - ನೆಲಬಾಂಬ್ ನಿಷ್ಕ್ರಿಯಗೊಳಿಸುವುದು. ಇಲ್ಲಿಯವರೆಗೆ ಅಕಿರೋ ಸುಮಾರು ೫೦ ಸಾವಿರ ನೆಲಬಾಂಬ್‍ಗಳನ್ನು ಪತ್ತೆ ಹಚ್ಚಿ ನಿಷ್ಕ್ರಿಯಗೊಳಿಸಿದ್ದಾನೆ. ತನ್ನದೇ ಒಂದು ತಂಡ ಕಟ್ಟಿಕೊಂಡು, ಈಡೀ ದೇಶದ ಪ್ರತಿ ಅಂಗುಲವನ್ನೂ ತಪಾಸಿಸುತ್ತಿದ್ದಾನೆ.
*****************************
ಥ್ಯಾಂಕ್ಸ್ ಗೀವಿಂಗ್ ಎಂಬುದು ಅಮೇರಿಕೆಯ ವಿಶಿಷ್ಟ ಆಚರಣೆ. ಪ್ರತಿ ವರ್ಷ ನವೆಂಬರ್ ಕೊನೆಯ ಗುರುವಾರ ಆಚರಿಸಲ್ಪಡುವ ಈ ಹಬ್ಬದ ಮೂಲ ಧೇಯೋದ್ದೇಶ ಹೆಸರೇ ಹೇಳುವಂತೆ - ವಂದನೆ ಅರ್ಪಿಸುವುದು. ಇಂತಹ ಥ್ಯಾಂಕ್ಸ್ ಗೀವಿಂಗ್ ದಿನ ’ಸಿಎನ್‍ಎನ್’ ಶುರುಮಾಡಿದ ವಿಭಿನ್ನ ಕಾರ್ಯಕ್ರಮ - ’ಸಿಎನ್‍ಎನ್ ಹೀರೋ’. ಪ್ರಪಂಚದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳನ್ನು ಗುರುತಿಸಿ ಅವರೆಲ್ಲರಿಗೂ ಕರೆದು ಸನ್ಮಾನ ಮಾಡುವುದು ಈ ಕಾರ್ಯಕ್ರಮದ ಉದ್ದೇಶ. ಕಳೆದ ಮೂರು ವರ್ಷದಿಂದಲೂ ನಡೆಯುತ್ತಿರುವ ಈ ಕಾರ್ಯಕ್ರಮ ವಿಶಿಷ್ಟ ಮತ್ತು ಸ್ಪೂರ್ತಿದಾಯಕ.
ಗೊಡಲುಪ್, ನಾರಾಯಣ್, ಸೂಸೆನ್, ಅಕಿರೋ - ಈ ಎಲ್ಲಾ ಅದ್ಭುತ ವ್ಯಕ್ತಿಗಳೆಲ್ಲರೂ ಈ ವರ್ಷದ ’ಸಿಎನ್‍ಎನ್ ಹೀರೊ’ ಗಳ ಪಟ್ಟಿಯಲ್ಲಿರುವವರು.
ತಮ್ಮ ಅವಿರತ ಪ್ರಯತ್ನದಿಂದ, ತಮ್ಮ ನಿಸ್ವಾರ್ಥ ಸೇವಾಮನೋಭಾವದಿಂದ ಸಮಾಜದ ಸ್ವಾಸ್ಥಕ್ಕಾಗಿ ಶ್ರಮಿಸುತ್ತಿರುವ ಈ ಹೀರೋಗಳನ್ನು ನೋಡಿ ಕಣ್ಣುಗಳು ತುಂಬಿ ಬಂದವು. ಮಾನವತೆ ಇನ್ನೂ ಉಸಿರಾಡುತ್ತದೆ ಎಂಬ ಸಮಾಧಾನ. ಯಾವಾಗಲೂ ನಾನು-ನನ್ನದೆನ್ನುವ ಸುಳಿಯಲ್ಲಿ ಇರುವ ನಾವುಗಳು ಈ ಮಟ್ಟಕ್ಕೆ ಏರುವುದು ಯಾವಾಗ ಎಂಬ ಪ್ರಶ್ನೆ ಕಾಡತೊಡಗಿತ್ತು.
(ಮುಂದಿನ ಕಂತಿನಲ್ಲಿ ಇನ್ನೂ ಹಲವಾರು ಮಾನವೀಯ-ಸ್ಪೂರ್ತಿದಾಯಕ ಕತೆಗಳು ಮತ್ತು ಉಳಿದ ಹೀರೋಗಳ ಪರಿಚಯ)
14 comments:
ಅದ್ಭುತ ಲೇಖನ.ತುಂಬಾ ಇಷ್ಟವಾಯ್ತು.ಇನ್ನಷ್ಟು ಇಂತಹ ಲೇಖನಗಳು ನಿಮ್ಮಿಂದ ಬರಲಿ ಎಂದು ಹಾರೈಸುತ್ತೇನೆ.ನಮಸ್ಕಾರ.
ಈ ವಿಚಾರಗಳು ತಿಳಿದಿರಲಿಲ್ಲ. ನೋವು೦ಡವರಿಗೆ ಹೆಗಲನ್ನಿತ್ತು ಸಹಾಯ ನೀಡಿದ ಮಹನೀಯರ ನಿಸ್ವಾರ್ಥ ಸೇವೆ ನಿಜಕ್ಕೂ ತು೦ಬಾ ಶ್ಲಾಘನೀಯ..
ಒಳ್ಳೆಯ ಲೇಖನ..
ಮಾನವೀಯತೆಯ ಆಶಾಕಿರಣ ಇನ್ನೂ ಹೊಳೆಯುತ್ತಿದೆ ಎನ್ನುವ ಭರವಸೆ ನೀಡುವ ನಿಮ್ಮ ಲೇಖನಕ್ಕೆ ಕೃತಜ್ಞತೆಗಳು.
ಕೃಷ್ಣಮೂರ್ತಿ ಸರ್,
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.
ಮನಮುಕ್ತಾ,
ವಂದನೆಗಳು..ಈ ಮಾನವೀಯ ಗುಣಸಂಪನ್ನರ ಕೆಲಸ ದೊಡ್ಡದು
ಸುನಾಥ್ ಕಾಕಾ,
ಹೌದು ಮಾನವತೆ ಇನ್ನೂ ನಶಿಸಿಲ್ಲ ಎನ್ನುವುದಕ್ಕೆ ಇವರೇ ಸಾಕ್ಷಿ..
ಧನ್ಯವಾದಗಳು
ಮಾನವತೆಯನ್ನು ಮೆರೆವ ಆತ್ಮಗಳು ಚಿರ ಅವನ್ನು ಧರಿಸುವ ಶರೀರಗಳು ಬದಲಾಗಬಹುದು ..ಅಂದರೆ ಪರೋಪಕಾರ ಮನೋಧರ್ಮ ಆತ್ಮದ ಕೊಡುಗೆ ಎಂದೇ ನನ್ನ ಭಾವನೆ....ಹೌದು..ಇಂತಹವರೇ ಮಾನವತೆ ಎಂದರೆ ಏನು ಎನ್ನಲು ನಿದರ್ಶನಪ್ರಾಯರು...ಒಳ್ಳೆಯ ಲೇಖನ....
ಮಾನವತೆಯನ್ನು ಮೆರೆವ ಆತ್ಮಗಳು ಚಿರ ಅವನ್ನು ಧರಿಸುವ ಶರೀರಗಳು ಬದಲಾಗಬಹುದು ..ಅಂದರೆ ಪರೋಪಕಾರ ಮನೋಧರ್ಮ ಆತ್ಮದ ಕೊಡುಗೆ ಎಂದೇ ನನ್ನ ಭಾವನೆ....ಹೌದು..ಇಂತಹವರೇ ಮಾನವತೆ ಎಂದರೆ ಏನು ಎನ್ನಲು ನಿದರ್ಶನಪ್ರಾಯರು...ಒಳ್ಳೆಯ ಲೇಖನ....
tumbaa oLLeya maahiti iruva lekhana....
innu inthaha jana iddaaraa endare nambuva haagilla..
god bless them...
thanks for sharing this..
ಅಜಾದ್,
ನಿಮ್ಮ ಸಹಮತಕ್ಕೆ ವಂದನೆಗಳು.
ದಿನಕರ್,
ಇನ್ನೂ ಇಂತಹ ಜನ ನಮ್ಮ ನಡುವೆ ಇರೋದರಿಂದ ಲೋಕ ಇನ್ನೂ ಬಾಳಲು ಯೋಗ್ಯವಾಗಿದೆ.
great...evarugala munde naavu...nimma e lekhanadinda nannalenadaru badalavane aguta....
ಕನ್ನಡಬ್ಲಾಗ್ ಲಿಸ್ಟ್,
ಪಾತರಗಿತ್ತಿಗೆ ಭೇಟಿ ನೀಡಿದ್ದಕ್ಕೆ ವಂದನೆಗಳು !
Post a Comment