ಗಾಂಧೀ ಸರ್ಕಲ್ ದಾಟಿ ಸ್ವಲ್ಪ ಮುಂದೆ ಹೋಗಿ ಅಂಡರ್ಬ್ರೀಡ್ಜ್ ಕೆಳಗೆ ಹಾದು, ಏರಿನಲ್ಲಿ ಸೈಕಲ್ ತುಳಿದರೆ ಸಿಗುವುದು ಶಾಲೆ. ಈ ಏರಿನಲ್ಲೇ ಆ ಲೂನ ಎದುಸಿರು ಬಿಡುತ್ತ ಹೋಗಲಿಕ್ಕೆ ಹರಸಾಹಸ ಪಡುತ್ತಿದ್ದರೆ, ಲೂನ ಪಕ್ಕದಲ್ಲಿಯೇ ಶರವೇಗದಲ್ಲಿ ಸೈಕಲ್ ತುಳಿಯುತ್ತಾ ’ಗಣಪ’ ಎಂದು ಕರೆದು ಮಾಯವಾಗುತ್ತಿದ್ದ ಹುಡುಗರು.ಲೂನ ಶಾಲೆ ಮುಂದೆ ನಿಂತು, ಅಷ್ಟರಲ್ಲಿ ಪ್ರಾರ್ಥನೆ ಶುರುವಾಗಿ, ನಂತರ ತರಗತಿಗೆ ಡೊಳ್ಳು ಹೊಟ್ಟೆ ’ಗಣಪ’ ಬಂದಾಗ ಹುಡುಗರಲ್ಲಿ ಮುಂದೇನಾಗುತ್ತೆ ಎಂಬುದು ಖಾತ್ರಿಯಾಗಿರುತಿತ್ತು. ’ಯಾವನೋ ಆವನು ಗಣಪ ಅಂತದ್ದು ಓಡಿ ಬಂದವನು, ನೀವಾಗಿ ಬರ್ತಿರೋ ಇಲ್ಲಾ ನಾನೇ ಎಬ್ಬಿಸಬೇಕಾ ’. ಮಾಮೂಲಿಯಾಗಿ ಇದೇ ಕೆಲಸ ಮಾಡ್ತಿದ್ದ ಗುಂಪಿನಿಂದ ಒಂದಿಬ್ಬಿರು ಹುಡುಗರು ತರಗತಿಯಿಂದ ಹೊರಕ್ಕೆ.
ಅದೇಗೆ ಹಾಗೆ ಏನೋ, ಹೈಸ್ಕೂಲ್ ಶಾಲೆಯ ಎಲ್ಲಾ ಸರ್ಗಳಿಗೂ ಒಂದು ಸಂಕ್ಷಿಪ್ತ ಹೆಸರಿತ್ತು. ಸಿ.ಜಿ.ಕೆ, ಕೆ.ಜಿ.ಕೆ, ಅರ್.ಎನ್.ಅರ್, ಎಲ್.ಎಸ್.ಪಿ, ಅರ್.ಅರ್,ವಿ.ಎಸ್.ಎಚ್,ಜಿ.ಎನ್.ಜಿ, ಎಮ್.ಜೆ.ಜ... ತುಂಬಾ ದಿವಸದವರೆಗೆ ಅವರ ಪೂರ್ತಿ ಹೆಸರೇನು ಅಂತ ಗೊತ್ತೇ ಇರಲಿಲ್ಲ. ಇನ್ನು ಕೆಲವರದು ಈಗಲೂ ಗೊತ್ತಿಲ್ಲ.
***************
ಆಗಿನ್ನು ಶಾಲೆ ಸೇರಿದ ಸಮಯವಿರಬೇಕು. ಶಾಲೆ ವಾತಾವರಣ ಹೊಸದು. ನಗುಮುಖದಿಂದ ಯಾವಾಗಲೂ ಅಮ್ಮನ ತರ ಮಾತಾಡಿಸುತ್ತಿದ್ದ ಉಮ ಟೀಚರ್. ಶಾಲೆಯಿಂದ ಮಕ್ಕಳನ್ನು ಕರೆದೊಯ್ಯಲು ಬರುತ್ತಿದ್ದ ಅಪ್ಪ-ಅಮ್ಮಂದಿರು ಬರುವುದು ತಡವಾದರೆ, ಅವರು ಬರುವ ತನಕ ಜೊತೆಗೆ ಇದ್ದು ಸಮಾಧಾನಿಸುತ್ತಿದ್ದ ಪರಿ, ಇನ್ನೂ ನೆನಪಿಂದ ಮಾಸಿಲ್ಲ.
****************
ಇಂಜಿನಿಯರಿಂಗ್ ಓದುವಾಗ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿದ್ದ ನಮಗೆಲ್ಲಾ ಒಬ್ಬರು ಪ್ರೊಫೆಸರ್ ಬಗ್ಗೆ ಸ್ಪಲ್ಪ ಹೆದರಿಕೆ. ಗಡ್ಡಧಾರಿ ಆ ಪ್ರೊಫೆಸರ್ ಕೈಯಲ್ಲಿ ಸಿಕ್ಕುಬಿದ್ದು ಬೈಸಿಕೊಂಡ ಕತೆಗಳು ವಿಪುಲವಾಗಿದ್ದವು. ಕ್ಲಾಸಿನಲ್ಲಿ ಮಾಡಿದ ಕಿತಾಪತಿ-ತರಲೆಗಳ ಜೊತೆ, ತರಗತಿಯ ಹೊರಗೆ-ಲ್ಯಾಬಿನಲ್ಲಿ-ಕಾಲೇಜ್ ಕಾರಿಡಾರಿನಲ್ಲಿ ನಡೆದ ಮಂಗಾಟಗಳಿಗೂ ಇವರಿಂದ ಮಂಗಳಾರತಿ ಕಾದಿರುತಿತ್ತು. ಇಂತಹ ಪ್ರೊಫೆಸರ್ ನಮ್ಮ ಪ್ರೊಜಕ್ಟ್ ಗೈಡ್ ಆಗಿದ್ದು ನಮ್ಮ ಯಾವ ಜನ್ಮದ ಪುಣ್ಯವೋ ಅಂದುಕೊಂಡು ಹಲುಬಿದ್ದೆವು.
ಬರುಬರುತ್ತಾ ಅವರು ಹೇಳಿದ್ದು ನಮ್ಮ ಒಳ್ಳೆಯದಕ್ಕೆನ್ನುವ ಸತ್ಯ ಅರಿವಾಗತೊಡಗಿತ್ತು.ನಮ್ಮ ಕಾಲೇಜಿನ ಕೊನೆಯ ದಿನಗಳಲ್ಲಿ ಅವರು ರಸ್ತೆ ಅಪಘಾತವೊಂದರಲ್ಲಿ ಗಾಯಗೊಂಡು, ತುಂಬಾ ಬಳಲಿಬಿಟ್ಟಿದ್ದರು. ಅವರನ್ನು ಮಾತಾಡಿಸಲು ಮನೆಗೆ ಹೋದಾಗ, ಹಾಸಿಗೆ ಪಕ್ಕ ಕುಳ್ಳಿರಿಸಿಕೊಂಡು ಒಂದೆರಡು ಹಿತವಾಗಿ ಮಾತಾಡಿದ್ದರು.ನಮಗೆ ಅವರ ಬಗ್ಗೆ ಇದ್ದ ಕಲ್ಪನೆಗಳಿಗೆ ಅಂದು ಅವರ ಮಾತುಗಳಿಗೂ ಯಾಕೋ ಹೊಂದಿಕೆ ಆಗುತ್ತಿರಲಿಲ್ಲ. ಅವರು ಬೇಕೆಂದಲೇ ಕಾಲೇಜ್ನಲ್ಲಿ ಆ ತರ ಇದ್ದಿರಬಹುದೇ ಅನಿಸಿತ್ತು.
****************
ಮಿಡ್ಲ್ ಸ್ಕೂಲ್ನಲ್ಲಿ ವಿಜ್ಞಾನ-ಗಣಿತ ಭೋದಿಸುತ್ತಿದ್ದ ಪಾಟೀಲ್ ಮೇಷ್ಟ್ರು, ತರಗತಿಯಲ್ಲಿ ರಾಗದಂತೆ ಮಾತಾಡುತ್ತಿದ್ದರು. ಅವರ ತರಗತಿಯಲ್ಲಿ ಅಶಿಸ್ತನ್ನು ಎಂದೂ ಸಹಿಸುತ್ತಿರಲಿಲ್ಲ, ಸಿಕ್ಕಬಿದ್ದವರಿಗೆ ಕಠಿಣ ಶಿಕ್ಷೆ ಇರುತಿತ್ತು. ಅವರ ರಾಗದಂತಿದ್ದ ಮಾತುಗಳ ಬಗ್ಗೆ ನಮ್ಮನಮ್ಮಲ್ಲಿ ಗುಪ್ತವಾಗಿ ಮಾತಾಡಿಕೊಂಡು ನಗುವುದು ನಡೆಯುತಿತ್ತು.
ಅದ್ಯಾವುದೋ ಒಂದು ದಿವಸ , ಶಾಲೆಯ ಬಿಡುವಿನ ಸಮಯ ’ಗೇಮ್ಸ್ ರೂಮ್’ನಲ್ಲಿ ಗೆಳಯರೊಂದಿಗೆ ಚೆಸ್ ಆಡುತ್ತಿದ್ದೆ. ಅದು ಇದು ಮಾತಾಡುತ್ತಾ ನಡೆಯುತ್ತಿದ್ದ ಆಟದ ಭರದಲ್ಲಿ ನಾನು ಆ ಮೇಷ್ಟ್ರ ತರ ಮಾತಾಡತೊಡಗಿದ್ದೆ. ಅವರನ್ನೇ ಅನುಕರಿಸಿ ಸುಮಾರು ಒಂದು ಹತ್ತು ನಿಮಿಷ ಮಾತಾಡಿರಬಹುದು. ಇದರ ಮಧ್ಯೆದಲ್ಲಿ ಆ ರೂಮ್ನಲ್ಲಿದ್ದವರು ಅದ್ಯಾಕೋ ಒಮ್ಮೆಲೇ ಮಾತಾಡದೇ ಸುಮ್ಮನಾಗಿದ್ದರು. ನಾನು ಅದನ್ನು ಗಮನಿಸದೆ, ಮೇಷ್ಟ್ರನ್ನೇ ಅನುಕರಿಸುತ್ತಾ ಮಾತಾಡುತ್ತ ಹಿಂದೆ ತಿರುಗಿದೆ. ಆ ಮೇಷ್ಟ್ರು ನನ್ನ ಬೆನ್ನ ಹಿಂದೆ ನಿಂತು ನಮ್ಮ ಚೆಸ್ ಆಟವನ್ನೂ-ಅವರ ಅನುಕರಣೆಯನ್ನು ನೋಡಿದ್ದರು. ನಾನು ಒಮ್ಮೆಗೆ ಸಣ್ಣಗೆ ನಡುಗಿದ್ದೆ. ಅವರು ಎನೂ ಹೇಳದೇ ಸುಮ್ಮನೆ ನಗುತ್ತಾ ಅಲ್ಲಿಂದ ಹೊರನಡೆದರೂ, ನನಗೆ ಮರುದಿನ ಗ್ರಹಚಾರ ಕಾದಿದೆ ಎಂಬ ಹೆದರಿಕೆ ಶುರುವಾಗಿತ್ತು. ಆ ತರ ಏನು ಆಗದೇ ನನಗೆ ಸಂತೋಷ-ಆಚ್ಚರಿಗಳಾಗಿದ್ದವು.
********************
ಕೆಲಸಕ್ಕೆ ಸೇರಿ ನಾನು ಬೆಂಗಳೂರಿಗೆ ಬಂದ ಕೆಲ ವರ್ಷದಲ್ಲಿ, ಅಪ್ಪ-ಅಮ್ಮನಿಗೆ ನಾವಿದ್ದ ಊರಿನ ಪೇಟೆಯಲ್ಲಿ ಸಿಕ್ಕದ್ದರಂತೆ ನಮ್ಮ ಟೀಚರ್. ನಮ್ಮ ಮಿಡ್ಲ್ ಸ್ಕೂಲ್ನ ಹೆಡ್ ಮಾಸ್ಟರ್ ಆಗಿದ್ದವರು. ನಾನು ಶಾಲೆ ಮುಗಿಸಿ ಸುಮಾರು ೮-೧೦ ವರ್ಷದ ನಂತರ ಸಿಕ್ಕ ಮೇಲೂ ಸಹ ನನ್ನ ಹೆಸರನ್ನು ನೆನಪಿಟ್ಟುಕೊಂಡು, ನನ್ನ ಬಗ್ಗೆ ಸವಿವರವಾಗಿ ಕೇಳಿದರಂತೆ.
ಆ ನಮ್ಮ ಕಮಲ ಮಿಸ್, ನನ್ನ ಆತ್ಮವಿಶ್ವಾಸ ಹೆಚ್ಚು ಮಾಡಿದವರು, ಹೊಸತನದ ಹವ್ಯಾಸಗಳನ್ನು ಪರಿಚಯಿಸಿದವರು, ಏನೋ ವಿಶ್ವಾಸ-ಪ್ರೀತಿ.
********************
ಇನ್ನೊಬ್ಬರಿದ್ದರು ಹೈಸ್ಕೂಲ್ನಲ್ಲಿ ಟಿ.ಆರ್.ಜಿ. ದಿನವೂ ಇನ್ನೊಂದು ಊರಿನಿಂದ ಬಸ್ಸಿನಲ್ಲಿ ಬಂದು ಹೋಗುತ್ತಿದ್ದರು. ಅವರ ತರಗತಿಯನ್ನು ಯಾರು ತಪ್ಪಿಸಿಕೊಳ್ಳುತ್ತಿರಲಿಲ್ಲ, ಅವರ ವಿರುದ್ಧ ಮಾತಾಡಿದ್ದು ಕಂಡೇ ಇರಲಿಲ್ಲ. ಅವರ ವೃತ್ತಿಪರತೆ, ಭೋಧನಾ ಶೈಲಿ, ಅವರ ವ್ಯಕ್ತಿತ್ವ..ನಮಗೆಲ್ಲಾ ಅವರು ಸಂಪೂರ್ಣ ಜಂಟಲ್ಮನ್. ತುಂಬಾ ಸಲ, ನಾನೇದರೂ ಮೇಷ್ಟ್ರು ಆದರೆ ಇವರ ತರ ಆಗಬೇಕೆಂದುಕೊಂಡದ್ದು ಇದೆ.
********************
ಕ್ಲಾಸಿನಲ್ಲಿ ತಿಂಗಳು ಕೊಡುವ ಮಾರ್ಕ್ಸ್ ಕಾರ್ಡ್ಗಳನ್ನು ತುಂಬಲು ನಮ್ಮ ಕ್ಲಾಸ್ ಟೀಚರ್ಗೆ ಸಹಾಯ ಮಾಡುತ್ತಿದ್ದೆ. ಅದು ಶಾಲೆ ಮುಗಿದ ಮೇಲೆ ಸಂಜೆ ಅವರ ಮನೆಯಲ್ಲಿ ನಡೆಯುತಿತ್ತು. ನನಗೆ ಅದಕ್ಕಿಂತ ಇಷ್ಟವಾಗುತ್ತಿದ್ದು ಅವರ ಮನೆಯಲ್ಲಿ ಕೊಡುತ್ತಿದ್ದ ಧಾರವಾಡ ಫೇಡೆ-ಖಾರಾ ! ಅದರ ಜೊತೆ ನಮ್ಮ ಗಡ್ ಸರ್ ಮಾತಾಡುತ್ತಿದ್ದ ವಿಷಯಗಳು. ಸಂಸ್ಕೃತ ಪಂಡಿತರೂ ಆಗಿದ್ದ ಅವರ ಮಾತುಗಳು ಕಾಳಿದಾಸನಿಂದ ಹಿಡಿದು ಮಣಿರತ್ನಂ ಸಿನಿಮಾಗಳ ಬಗ್ಗೆ ನಡೆಯುತಿತ್ತು.
*********************
ಶಿಕ್ಷಕರು ಎಂದೊಡನೆ. ಸಿನಿಮಾ ರೀಲಿನಂತೆ ಹೀಗೆ ಸಾಲು ಸಾಲಾಗಿ ನನ್ನ ತಲೆಯಲ್ಲಿ ಓಡಿದ ನೆನಪಿನ ದೃಶ್ಯಾವಳಿಗಳು ಇವು.ಈ ತರ ಇನ್ನೂ ಅನೇಕ ಶಿಕ್ಷಕರ ನೆಚ್ಚಿನ ನೆನಪುಗಳಿವೆ. ಮೇಲೆ ಹೇಳಿದ ಸನ್ನಿವೇಶಗಳು ಕೇವಲ ಕೆಲವು ಉದಾಹರಣೆಗಳಷ್ಟೇ. ಇದೊಂದು ಶಿಕ್ಷಕರ ದಿನಾಚರಣೆಯ ನೆವದಲ್ಲಿ ನಮಗೆಲ್ಲಾ ದಾರಿದೀಪದವರ ಬಗ್ಗೆ ನೆನೆವ ಅವಕಾಶ.
ಶಾಲೆಯಿಂದ ಹಿಡಿದು ಉನ್ನತ ವ್ಯಾಸಂಗದವರೆಗೆ ಹೆಜ್ಜೆಹೆಜ್ಜೆಗೂ ಜೊತೆಗಿದ್ದು, ಶಿಕ್ಷಣ ಎಂಬ ಅದ್ಭುತ ಶಕ್ತಿಯನ್ನು ಧಾರೆ ಎರೆದವರು ನಮ್ಮ ಶಿಕ್ಷಕರು. ನಮ್ಮನ್ನು ರೂಪಿಸಿ, ನಮ್ಮ ವ್ಯಕ್ತಿತ್ವ ವಿಕಾಸದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ನಮ್ಮನ್ನು ವಿಶ್ವದ ಉತ್ತಮ ಪ್ರಜೆಗಳನ್ನಾಗಿ ಮಾಡುವ ಕೆಲಸ ಮಾಡಿದವರು.
ನಮ್ಮ ಪ್ರೀತಿ, ಮೆಚ್ಚುಗೆ, ತಮಾಷೆ, ವಿಶ್ವಾಸ ಎಲ್ಲದರಲ್ಲೂ ಭಾಗಿಯಾದವರು.
ಅಮ್ಮನಂತ ಪ್ರೀತಿ, ಅಪ್ಪನಂತ ಶಿಸ್ತು, ಗೆಳಯನಂತ ವಿಶ್ವಾಸ ತೋರಿದ ನಮ್ಮ ಶಿಕ್ಷಕರಿಗೆಲ್ಲಾ ಹೃದಯಪೂರ್ವಕ ವಂದನೆಗಳು.
10 comments:
ನಿಮ್ಮ ಶಿಕ್ಷಕರನ್ನು ನೆನೆಸಿಕೊಂಡು ಬರೆದ ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ.
ಗುರುಗಳನ್ನು ನೆನಸಿಕೊಳ್ಳುವಾಗ, ನಮ್ಮ ಬಾಲ್ಯದ ದಿನಗಳ ಸವಿನೆನಪೂ ಆಗುತ್ತದೆ. ಉತ್ತಮ ನಿರೂಪಣೆ ಮಾಡಿದ್ದೀರಿ.
ಕೃಷ್ಣಮೂರ್ತಿ ಸರ್,
ಧನ್ಯವಾದಗಳು !
ಸುನಾಥ್ ಕಾಕಾ,
ಬಾಲ್ಯದ ಒಂದು ಮುಖ್ಯ ಭಾಗ ಗುರುಗಳಲ್ವೇ.
ನಿಮಗೆ ಶಿಕ್ಷಕರ ದಿನದ ವಿಶೇಷ ಅಭಿನಂದನೆಗಳು.
ನಿಮ್ಮ ಬರಹ ಓದಿ ನನ್ನ ಬಾಲ್ಯ,ಶಾಲೆ ಶಿಕ್ಷಕರು ಎಲ್ಲಾ ನೆನಪಾದವು.ಧನ್ಯವಾದಗಳು.
ಚೆನ್ನಾಗಿ ಬರೆದಿದ್ದೀರಿ.
ಮನಮುಕ್ತಾ,
ನಿಮ್ಮ ಮೆಚ್ಚುಗೆಗೆ ವಂದನೆಗಳು !
ನಿಮ್ಮ ನೆನಪಿನ ಸಂಚಿಯಿಂದ ಬಂದ ಈ ಲೇಖನ ಚೆನ್ನಾಗಿದೆ ..
ಶ್ರೀಧರ್ ಅವರೇ,
ಪಾತರಗಿತ್ತಿಗೆ ಸ್ವಾಗತ !
ನಿಮ್ಮ ಅಭಿಪ್ರಾಯಕ್ಕೆ ವಂದನೆಗಳು
MKET ಹರಿಹರ????
ಹರೀಶ್,
ಪಾತರಗಿತ್ತಿಗೆ ಸ್ವಾಗತ !
ಹೌದು..ಅದು ಹರಿಹರದ ಎಂ.ಕೆ.ಟಿ !!
Post a Comment