Sunday, August 27, 2006

ಗಣಪ ಬಂದ..


ಆನೆ ಮುಖ,ಡೊಳ್ಳು ಹೊಟ್ಟೆ,ಇಲಿಯಂತ ವಾಹನ,ವಿದ್ಯಾ-ಬುದ್ದಿಗೆ ಅಧಿಪತಿ,ಅದರ ಮೇಲೆ ಎಲ್ಲಕ್ಕಿಂತ ಮೊದಲು ಪೂಜೆಗೊಳ್ಳುವವ..

ಹೀಗೆ ಗಣಪನ ಬಗ್ಗೆ ನಮ್ಮ ಕಲ್ವನೆ ಒಂದು ವಿಭಿನ್ನತೆ, ಎನೋ ಕುತೂಹಲ,ಭಯ-ಭಕ್ತಿಯಿಂದ ಕೂಡಿದೆ.ಹಾಗೆಯೇ ನಮ್ಮ ಗಣಪ ಅತ್ಯಂತ designed ದೇವರು.ಗಣಪ ಎಂದರೆ ಕಲಾವಿದರಿಗೆ ಹಬ್ಬ.ಕಲಾವಿದರ ಕಲ್ಪನೆಯ ಪ್ರಕಾರ ಅವನು ಧರಿಸಿರೋ ರೂಪಗಳು-ತೊಟ್ಟ ವೇಷಗಳು ಅನೇಕ. ಇಂತಹ ಎಲ್ಲರಿಗೂ ಪ್ರಿಯನಾದ ಗಣಪನ ಹಬ್ಬ ಕೂಡ ಅವರವರ ಭಾವಕ್ಕೆ ಅವರವರ ಭಕುತಿಗೆ ತಕ್ಕಂತೆ ಆಚರಿಸಲ್ಪಡುತ್ತಿದ್ದೆ.

ನಾವು ಹರಿಹರದಲ್ಲಿ ಇರೋವರೆಗೆ ಅಲ್ಲಿನ ಗಣಪನ ಹಬ್ಬದ್ದು ಒಂದು ವಿಶಿಷ್ಟತೆ ಇತ್ತು.ಅಲ್ಲಿ ನಾವು ಇದದ್ದು ಒಂದು ವಟಾರದ ತರದ ಮನೆ.ಅಕ್ಕಪಕ್ಕದ ಮನೆಯವರೆಲ್ಲ ಸಂಬಂಧಿಗಳೇ..ಚಿಕ್ಕಪ್ಪ-ದೊಡ್ಡಪ್ಪಗಳ ಕುಟುಂಬಗಳು.ಅದೇನು ಆಗುತಿತ್ತೋ ಆ ವಟಾರದಲ್ಲಿ ಯಾವಾಗಲೂ ಸೋದರ ಕುಟುಂಬಗಳ ನಡುವೆ ನಿಲ್ಲದ ಜಗಳಗಳು.ಆದರೆ ಗಣಪನ ಹಬ್ಬ ಬರುತ್ತಿದಂತೆ ಒಂದು ಕದನವಿರಾಮ! ಎಲ್ಲರೂ ಸೇರುತ್ತಿದದ್ದು ಒಟ್ಟಿಗೆ ಆಚರಿಸುತ್ತಿದದ್ದು ಗಣಪತಿ ಹಬ್ಬವೊಂದೇ.

ಹಬ್ಬಕ್ಕೆ ವಾರ ಇದ್ದಂತೆ ನಮ್ಮ ವಟಾರದಲ್ಲಿದ್ದ 'ನಡುಮನೆ' ಅಂತಾ ಕರೆಯುತ್ತಿದ್ದ ಒಂದು ದೊಡ್ಡ ಮನೆಯಲ್ಲಿ ನೆಲಕ್ಕೆ ಸೆಗಣಿ ಬಳಿದು ಸಾರಿಸಿ,ಗೋಡೆಗೆ ಸುಣ್ಣ-ಬಣ್ಣಗಳ ಅಲಂಕಾರ.ಹಬ್ಬಕ್ಕೆ ೧-೨ ದಿವಸ ಇದ್ದಂತೆ ಪೇಟೆಯಿಂದ ಬಣ್ಣದ ಪೇಪರ್ ತಂದು ಅದನ್ನು ವಿವಿಧ ಆಕೃತಿಯ ಸರಪಳಿಯಲ್ಲಿ ಕತ್ತರಿಸುತ್ತಿದ್ದೆವು. ಆ ಬಣ್ಣದ ಕಟ್ಟಿಂಗ್ಸ್ ಅಂಟಿಸಲು ವಿಶೇಷ ತರದ ಅಂಟು ಮನೆಯಲ್ಲಿ ತಯಾರಯಾಗುತಿತ್ತು.ಅ ಬಣ್ಣದ ಕಟ್ಟಿಂಗ್ಸ್ ನ್ನು ಆ ನಡುಮನೆಯ ಜಂತಿಗೆ ರಾತಿಯಿಡೀ ಅಂಟಿಸುತ್ತಿದ್ದೆವು.

ಬಣ್ಣದ ಕಟ್ಟಿಂಗ್ ಅಂಟಿಸಿದ ಮೇಲೆ ಮುಂದಿನ ಕಾರ್ಯ ನಡುಮನೆಯ ಗೋಡೆ ಮೇಲೆ ಒಂದು ಇಂಚು ಬಿಡದೆ ವಿವಿಧ ಕ್ಯಾಲೆಂಡರ್-ಚಿತ್ರಪಟಗಳನ್ನು ಬಡಿಯೋದು.ಅದರಲ್ಲಿ ಬಹುತೇಕ ಕ್ಯಾಲೆಂಡರ್‍ಗಳು ಗಣಪತಿ-ದೇವಾನುದೇವತೆಗಳದು.ಆ ಕ್ಯಾಲೆಂಡರ್ ಎಷ್ಟು ವರ್ಷದ ಕಲೆಕ್ಷೆನ್ನೋ ನಾ ಕಾಣೇ.

ಗಣಪನನ್ನು ಕೂಡಿಸಲು ಗೋಡೆಯಲ್ಲಿ ಒಂದು ದೊಡ್ಡ ಕಿಟಕಿಯಂತ ಗೂಡು.ಅದಕ್ಕೆ 'ಗಣಪನ ಗೂಡು' ಅಂತಾ ಹೆಸರು.ಆ ಗಣಪನ ಗೂಡಿಗೆ ವಿಶೇಷ ಅಲಂಕಾರ.ಗಣಪ ಕೂಡುವ ಪೀಠದ ಹಿಂದೆ ಒಂದು ಬ್ಯಾಟರಿ-ಚಾಲಿತ ಬಣ್ಣದ ಚಿಕ್ಕ ಫ್ಯಾನ್.ಅದು ಸರಿಯಾಗಿ ಗಣಪನ ಕಿರೀಟದ ಹಿಂದೆ ಇದ್ದು ಗಣಪನಿಗೆ ಸ್ಪೆಷಲ್ ಎಪೆಕ್ಟ್! ಇನ್ನು ಗಣಪನ ಗೂಡಿನ ಮುಂದೆ ಮರದ ಹಲಗೆಯನ್ನು ಹಂತ ಹಂತವಾಗಿ ಜೋಡಿಸಿ ಒಂದು ಮೆಟ್ಟಿಲಿನಾಕೃತಿ. ಒಂದು ಮೆಟ್ಟಿಲ ಮೇಲೆ ನಮ್ಮ ಚಿಕ್ಕಪ್ಪ ಮಣ್ಣಿನಿಂದ ಮಾಡಿದ ವಿವಿಧ ಆಕೃತಿಗಳು- ಬೆಣ್ಣೆ ತಿನ್ನುತ್ತಿರುವ ಬಾಲಕೃಷ್ಣ, ಹಾವನ್ನು ಬೇಟ ಆಡುತ್ತಿರುವ ಹದ್ದು,ಹೆಡೆ ಬಿಚ್ಚಿದ ನಾಗರ ಹಾವು ...ಎಲ್ಲವೂ ಲೈಪ್ ಸೈಜ್ ಆಕೃತಿಗಳು.

ಕೊನೆಯ ಸುತ್ತಿನ ಆಲಂಕಾರದಲ್ಲಿ ನಡುಮನೆಯಲ್ಲಿ ವಿವಿಧ ಹೂವಿನ ಗಿಡದ ಕುಂಡಗಳನ್ನು ಇಟ್ಟು, ಕಲರ್ ಬಲ್ಬ್ ಗಳನ್ನು ಹಾಕಿದರೆ ಆಲಂಕಾರ ಒಂದು ಹಂತಕ್ಕೆ ಬಂದಂತೆ!

ಇಷ್ಟೆಲ್ಲ ನಡುಮನೆಯಲ್ಲಿ ಆಗುತ್ತಿದ್ದಂತೆ ಇನ್ನು ಆ ಕಡೆ ಆಡುಗೆ ಮನೆಯಲ್ಲಿ ಗಣಪನ ಮುಂದೆ ಇಡಲು ವಿವಿಧ ತಿಂಡಿಗಳ ತಯಾರಿ.ಚಕ್ಕಲಿ,ಕೋಡುಬಳೆ,ಕರ್ಚಿಕಾಯಿ,ಕಡುಬು,ಶಂಕರಪೊಳ್ಯ..ಒಂದೇ ಎರಡೇ ತಿನಿಸುಗಳು !

ಹಬ್ಬದ ದಿನ ಬೇಗ ಎದ್ದು ತಯಾರಾಗಿ ಗಣಪತಿ ತರಲು 'ಗಣಪತಿ ಮಾಡೋರ' ಮನೆ ಕಡೆ ಪಯಣ.ಅಲ್ಲಿಂದ ಗಣಪನ ಹಿಡಕೊಂಡು ನಮ್ಮ ತಂದೆ ಬರುತ್ತಿದ್ದರೆ , ಅವರ ಮುಂದೆ ಸೋದರ ಸಂಬಂಧಿಗಳಾದ ನನ್ನ ಓರಗೆಯ ಹುಡುಗರದು ಒಂದು ಚಿಕ್ಕ ಸೈನ್ಯ. ದಾರಿಯುದ್ದಕ್ಕೂ 'ವಿಘ್ನೇಶ್ವರ್ ಮಹಾರಾಜ್ ಕೀ ಜೈ' ಅಂತಾ ಕೂಗೋದು. ನಡುನಡುವೆ 'ಬಂದನಪ್ಪ ಬಂದನಪ್ಪ' ಅಂತಾ ಒಬ್ಬರು ಕೂಗಿದರೆ ಉಳಿದವರೆಲ್ಲ ಕೋರಸ್‍ನಲ್ಲಿ 'ಗಣೇಶ ಬಂದ' ಅಂತಾ ಕೂಗೋದು .ಇನ್ನೊಂದು ಪಾಪುಲರ್ ಕೂಗು 'ಗಣಪ ಬಂದ..ಕಾಯಿಕಡುಬು ತಿಂದ' !!

ಗಣೇಶನನ್ನು 'ಗೂಡಿ'ನಲ್ಲಿ ಕುಳ್ಳಿರಿಸಿ, ಎಲ್ಲ ಕುಟುಂಬದವರ ಸಮ್ಮುಖದಲ್ಲಿ ನನ್ನ ತಂದೆಯಿಂದ ಮೊದಲು ಪೂಜೆ-ಮಂಗಳಾರತಿ.ಪೂಜೆ ಕೊನೆಯಲ್ಲಿ ನನ್ನಪ್ಪ 'ಜಯಂನವ ಪಾರ್ವತಿ ಪತಿಹರ' ಅನ್ನುತ್ತಿದ್ದಂತೆ ನಾವೆಲ್ಲ ದ್ವನಿ ಕೂಡಿಸಿ ''ಜಯಂನವ ಪಾರ್ವತಿ ಪತಿಹರ ಮಹಾದೇವ್' ಅಂದು ಕೈಲ್ಲಿದ್ದ ಅಕ್ಷತೆಯನ್ನು ಗಣಪನ ಮೇಲೆ ಹಾಕುತ್ತಿದ್ದೆವು.

ಆಮೇಲೆ ಅಲ್ಲಿ ಪ್ರಸಾದ ವಿನಯೋಗ.ಗಣಪನ ಮುಂದೆ ಕೂತು ಸ್ಪಲ್ಪ ಹೊತ್ತು ಎಲ್ಲರ ಹರಟೆ. ನಂತರ ಅವರವರ ಮನೆಗೆ ಊಟಕ್ಕೆ ತೆರಳುವುದು. ಕೆಲವೊಮ್ಮೆ ಪ್ರೀತಿ ಜಾಸ್ತಿಯಾಗಿ ಒಬ್ಬರನ್ನು ಇನ್ನೊಬ್ಬರ ಮನೆಗೆ ಊಟಕ್ಕೆ ಕರೆದೊಯ್ಯುವುದು ನಡೆಯುತಿತ್ತು !! ಈ ಭಾಂದವ್ಯ ಬೇರೆ ದಿನ ಎಲ್ಲಿ ಮಾಯವಾಗುತಿತ್ತೋ ಅಂದು ಅನಿಸದಿರಲಿಲ್ಲ..

ಈ ನಡುವೆ ಕೆಲವು ವರ್ಷಗಳ ಕಾಲ ನನ್ನ ಸೋದರ ಸಂಬಂಧಿಯೊಬ್ಬ ನಮ್ಮ ವಟಾರದಲ್ಲಿ ತಾನೇ ಗಣಪನ ವಿಗ್ರಹವನ್ನು ಮಾಡತೊಡಗಿದ.ಅವನಿಗೆ ಸಹಾಯ ಮಾಡೋಕೆ ಕುಂಚ ಹಿಡಿದು ಗಣಪನ ವಿಗ್ರಹಕ್ಕೆ ನಾನು ಬಣ್ಣ ಹಚ್ಚಿದ್ದು ಉಂಟು.ಕೆಲವೊಮ್ಮೆ ವಿಭಿನ್ನ ಆರ್ಡರ್‍ಗಳು ಬರುತ್ತಿದ್ದವು.ಒಮ್ಮೆ ಒಬ್ಬರು ಎರಡು ಹಸ್ತಗಳ ಮಧ್ಯೆ ಇರುವ ಗಣಪನಿಗೆ ಆರ್ಡರ್ ಮಾಡಿದ್ದರು.

ಆದರೆ ಪ್ಲಾಸ್ಟರ್ ಆಫ್ ಪ್ಯಾರಿಸ್‍ನ ಕಡಿಮೆ ಬೆಲೆಯ ಮಾಸ್ ಗಣಪಗಳು ಬಂದ ಮೇಲೆ ಈ ರೀತಿ ಮಣ್ಣಿನ ಗಣಪಗಳಿಗೆ ಬೇಡಿಕೆ ಇಳಯತೊಡಗಿತು.

ಇನ್ನು ಹಬ್ಬದ ಸಂಜೆ ಊರಿನ ಸಾರ್ವಜನಿಕ ಗಣಪನ ನೋಡೋಕೆ ಹೋಗೋದು. ಹರಿಹರದ ಸಾರ್ವಜನಿಕ ಗಣಪ ಅಲ್ಲಿನ 'ಗಾಂಧೀ ಮೈದಾನ'ದಲ್ಲಿ ಕೂಡಿಸುತ್ತಿದ್ದರು. ಮೈದಾನದಲ್ಲಿ ಗಣಪನ ನೋಡಿಕೊಂಡು ಅಲ್ಲಿ ಎರ್ಪಡಿಸಿದ ರಸಮಂಜರಿ-ನಾಟಕ ನೋಡಿಕೊಂಡು ಮನೆಗೆ ತೆರಳಿ ಹೋಳಿಗೆ-ತುಪ್ಪ ಊಟ !!

ಗಣಪ ಇದ್ದ ೩ ಅಥವಾ ೫ ದಿವಸಗಳವರೆಗೆ ನಡುಮನೆಯಲ್ಲಿ ಗಣಪನಿಗೆ ವಿಶೇಷ ಪೂಜೆ. ಪ್ರತಿದಿನ ಸಂಜೆ ವಿವಿಧೆಡೆ ಇರೋ ಗಣಪನ ನೋಡೋಕೆ ಹೋಗೋದು.ಈ ಗಣಪನ ಮಂಡಳಿಗಳಲ್ಲಿ ತೀವ್ರ ಸ್ಪರ್ಧೆ.ಯಾರು ವಿಭಿನ್ನ ಅಲಂಕಾರ ಮಾಡುತ್ತಾರೆ,ಯಾರದೂ ಎಷ್ಟು ಎತ್ತರದ ಗಣಪ ಇತ್ಯಾದಿ..

ಕಾಲ ಕಳೆದಂತೆ ಈ ಮಂಡಳಿಗಳ ಗಣಪನಲ್ಲಿ ತಂತ್ರಜ್ಞಾನದ ಪ್ರವೇಶವಾಯಿತು.ಗಣಪ ಕೇವಲ ಒಂದು ವಿಗ್ರಹವಾಗಿ ಉಳಿಯಲಿಲ್ಲ.ಗಣಪ ಮುಖ್ಯಪಾತ್ರದಲ್ಲಿರುವ ಪುರಾಣ ಪ್ರಸಂಗಗಳು ಜೀವ ಪಡೆಯಲಾರಂಭಿಸಿದವು.ಉದಾಹರಣೆಗೆ ರಾವಣ ಕೈಲಾಸದಿಂದ ಅತ್ಮಲಿಂಗ ತಂದು ದನಗಾಹಿ ವೇಶದಲ್ಲಿರುವ ಗಣಪನಿಗೆ ಕೊಡೋದು,ಅದನ್ನು ಗಣಪ ನೆಲದ ಮೇಲೆ ಇಡೋದು,ರಾವಣ ಅದನ್ನು ಎತ್ತೋಕೋ ಯತ್ನಿಸುವುದು.ಕಡೆಗೆ ಗಣೇಶ ಸ್ತುತಿ.ಈ ಪ್ರಸಂಗದಲ್ಲಿ ಎಲ್ಲವೂ ಚಲಿಸುವ ವಿಗ್ರಹಗಳು, ಜೊತೆಗೆ sound-lights effect ಕೂಡಿ ಅದು ಒಂದು ಮಯಾಲೋಕ ಸೃಷ್ಟಿಸುತಿತ್ತು. ಕೆಲವೊಮ್ಮೆ ಬೇರೆ ದೇವರುಗಳ ಪಾತ್ರವನ್ನು ಗಣಪನಿಗೆ ಕೊಟ್ಟ ಪ್ರಸಂಗಗಳು ಊಂಟು.ಉದಾಹರಣೆಗೆ ಕಾಳಿಂಗ ಮರ್ದನದ ಪ್ರಸಂಗದಲ್ಲಿ ಕೃಷ್ಣನನ್ನು substitue ಮಾಡಿ ಗಣಪನನ್ನು ಕಾಳಿಂಗ ಮರ್ದನಕ್ಕೆ ಕಳುಹಿಸಿದ್ದು ಉಂಟು !!

ಬರುಬರುತ್ತಾ ಈ ಪ್ರಸಂಗಗಳು 'ಶೋ'ಗಳಾಗತೊಡಗಿದವು.ಮಂಡಳಿಗಳು ವಿಶೇಷ ಆಹ್ವಾನಿತರಿಗೆ,ದಾನಿಗಳಿಗೆ ಮುಂದಿನ ಸಾಲಿನಲ್ಲಿ ಕುಳ್ಳಿರಿಸಿ, ಉಳಿದೆಲ್ಲರನ್ನೂ ನಿಲ್ಲಿಸಿ ಶೋ ನಡೆಸುವ 'ಅ-ಸಮಾನತೆ' ಸಂಪ್ರದಾಯವೂ ಶುರುವಾಯಿತು.

ಮಂಡಳಿಗಳ ಇನ್ನೊಂದ ವಿಶೇಷವೆಂದರೆ ಗಣಪನಿಗೂ ಪ್ರಸ್ತುತ ವಿಷಯಗಳಿಗೂ ಲಿಂಕ್ ಮಾಡುತ್ತಿದ್ದ ರೀತಿ.ಕಾರ್ಗಿಲ್ ಯುದ್ದದ ವರ್ಷದಲ್ಲಿ ಗಣಪ ಸೈನಿಕನ ವೇಷ ತೊಟ್ಟು ದೇಶದ ಗಡಿಯಲ್ಲಿ ನಿಂತ ಅವತಾರದಲ್ಲಿದ್ದರೆ, ವಿಶ್ವಕಪ್ ಸಮಯದಲ್ಲಿ ಗಣಪ ಭಾರತದ ಟೀ ಶರ್ಟ್ ತೊಟ್ಟು ಬ್ಯಾಟ್ ಹಿಡಿದು ನಿಂತದ್ದು ಉಂಟು.ಕೆಲವೊಮ್ಮೆ ಮಂಡಳಿಯವರು ವಿಪರೀತ ಬುದ್ದಿ ಖರ್ಚು ಮಾಡಿದ ಪ್ರಸಂಗಗಳು ಉಂಟು.ಒಮ್ಮೆ ಗಣಪನನ್ನು ವೀರಪ್ಪನ್ ತರ ವೇಷದಲ್ಲಿ ಒಂದು ಮಂಡಳಿಯವರು ಅವತರಿಸಿದ್ದರು !

೩-೫ ದಿವಸದ ನಂತರ ಇನ್ನು ಗಣಪನ ವಿರ್ಸಜಿಸುವ ಕಾರ್ಯಕ್ರಮ ದುಃಖದಿಂದ ಕೂಡಿದ ಸಮಯ.ಗಣಪನಿಗೆ ಇಷ್ಟವಾದ ಕಡುಬು ಮಾಡಿ ಅದನ್ನು ಪಾರ್ಸಲ್ ಕಟ್ಟಿ ಮನೆಯಿಂದ ಹೊರಟರೆ, ಮತ್ತದೆ ನಮ್ಮ ಸೈನ್ಯದ ಮೆರವಣಿಗೆ.'ಮೋರ್‍ಗಯಾ ರೇ ಮೋರ್‍ಗಯಾ' ಅಂತಾ ಒಬ್ಬ ಕೂಗಿದರೆ ಉಳಿದವರೆಲ್ಲ 'ಗಣೇಶ ಮೋರ್‍ಗಯಾ' ಅಂತಾ ಕೋರಸ್ ನೀಡುತ್ತಿದ್ದೆವು.ತುಂಗಾಭದ್ರ ನದಿ ಮುಟ್ಟಿ ಅಲ್ಲಿ ಇನ್ನೊಂದು ಸುತ್ತಿನ ಪೂಜೆ ಮಾಡಿ ಭಾರದ ಮನದಿಂದ ಗಣಪನ ನೀರಿನಲ್ಲಿ ಮೂರು ಸಲ ಮುಳುಗಿಸಿ ಕೈ ಬಿಟ್ಟಾಗ ಎನೋ ಖಾಲಿಯಾದ ಭಾವನೆ..

ಈ ಮಧ್ಯೆ ಮಂಡಳಿಗಳ ಗಣಪನ ವಿಸರ್ಜನೆಗೆ ಹೊರಡುತಿದ್ದ ಗುಂಪು ಆಮೆವೇಗದಲ್ಲಿ ಸಾಗುತ್ತ ದಾರಿಯುದ್ದಕ್ಕೂ ಕೂಗು ಹಾಕುವುದೇನೋ, ಮೆರವಣಿಗೆಯಲ್ಲಿ ಆರ್ಕೆಸ್ಟ್ರಾದವರ ಗಣಪನಿಗೆ ಸ್ಪಲ್ಪವೂ ಸಂಬಂಧವೇ ಇಲ್ಲದ ಹಾಡಿಗೆ ಹೈಕಳು ಕುಣಿದು ಕುಪ್ಪಳಿಸಿವುದೇನೋ. ಅತ್ಯಂತ ಉತ್ಸಾಹಭರಿತ ವಾತಾವರಣ. ಮೆರವಣಿಗೆಯಲ್ಲಿ ನಿಜಕ್ಕೂ ಜೋಶ್ ಉಂಟು ಮಾಡುತ್ತಿದದ್ದು 'ಡೊಳ್ಳು ಕುಣಿತ'.ಅದು ಮಾಡುವ ರುದ್ರನಾದಕ್ಕೆ ಉತ್ಸಾಹ ಬರದಿದ್ದರೆ ಹೇಳಿ.ಆದರೆ ಮೆರವಣಿಗೆಯಲ್ಲಿ ಕೆಲವೊಬ್ಬರು ಹೊಟ್ಟೆಗೆ 'ದ್ರವ'ಗಳನ್ನು ಇಳಿಸಿಕೊಂಡು ಬಂದು ಮಾಡುತ್ತಿದ್ದ ವರಸೆಗಳು ಮೆರವಣಿಗೆಯ ಸಡಗರಕ್ಕೆ ನೀಡುತ್ತಿದ್ದವು ಇನ್ನೊಂದು ಮಜಲು.

ಒಂದು ವರ್ಷ ವಿಸರ್ಜನೆ ವೇಳೆಯಲ್ಲಿ ನಡೆದ ಕೋಮು ಗಲಭೆಯ ನಂತರ ಮೆರವಣಿಗೆ ಸಂಜೆ ಬೇಗನೆ ಶುರು ಮಾಡತೊಡಗಿದರು.ಇಲ್ಲದಿದ್ದರೆ ಮೆರವಣಿಗೆಗಳೂ ಶುರುವಾಗುತಿದ್ದೆ ೮-೯ ಗಂಟೆಗೆ, ತುಂಗಾಭದ್ರ ಮುಟ್ಟೋವಷ್ಟರಲ್ಲಿ ರಾತ್ರಿ ೧೨-೧ ಗಂಟೆಯಾಗುತಿತ್ತು.

ವಿಸರ್ಜನೆಯ ನಂತರ ಮನೆಗೆ ಬಂದು ನೋಡಿದರೆ ಅದೇ ನಡುಮನೆ,ಅದೇ ಅಲಂಕಾರ,ಎಲ್ಲಾ ಇದೇ..ಆದರೆ ಇರಬೇಕಾದದ್ದು ಇಲ್ಲ. ಬಹುಷಃ ಇದಕ್ಕೆ ಹೇಳುತ್ತಾರೆ 'ಆತ್ಮವಿಲ್ಲದ ದೇಹ'.ಮುಂದಿನ ವರ್ಷ ಮತ್ತೆ ಗಣಪ ಬರ್ತಾನೆ ಅನ್ನೋ ಸಮಾಧಾನ..

ಆದರೆ ನಮ್ಮ ಅಜ್ಜ ಗತರಾದ ನಂತರ ಆ ಸಾಮೂಹಿಕ ಗಣಪನ ಆಚರಣೆಯೂ ನಿಂತಿತು.ಆದಾದ ಮೇಲೆ ಒಂದೇ ವಟಾರದಲ್ಲಿ ಮನೆಗೊಂದರಂತೆ ಗಣಪಗಳು.ಸ್ಪಲ್ಪ ವರ್ಷಗಳ ನಂತರ ನಮ್ಮ ಹರಿಹರದ ಋಣ ಮುಗಿದ ಮೇಲೆ ಅಲ್ಲಿನ ಗಣಪನ ಪೂಜೆಗೂ ವಿದಾಯ.

ಮತ್ತೊಂದು ಊರು..ಮತ್ತೊಂದು ದೇಶ....

ನಮ್ಮ ಗಣಪ ಮಾತ್ರ ಅವನೇ..ಅದೇ ವಕ್ರತುಂಡ,ಅದೇ ಮಹಾಕಾಯ..
ಅದಕ್ಕೆ ಅಲ್ವೇ ಗಣಪ ಸಮಯಾತೀತ !

9 comments:

Raghavendra D R said...

gaNapathi habbadha bagge bahaLa svaarasyakaravaadha baravaNige!

nimage gaNeshana habbadha shubhaashayagaLu!

Enigma said...

nange nanna balyada dian galu nenapadavu. dodappana maneyalli ganapathi matte inndou daydi maneyalli gouri ( dodda vigraha) amele thindi :) ella nenapadavu

bhadra said...

ಬಹಳ ಸುಂದರವಾದ ಬರಹ. ಓದುತ್ತಿದ್ದಂತೆ ನನಗೂ ಹಳೆಯ ನೆನಪುಗಳು ಮರುಕಳಿಸಿದವು. ದೀಪಾಲಂಕಾರ ಮಾಡಿರುವ ಆ ಗಣಪತಿಯ ಚಿತ್ರ ಮಾತ್ರ ಬಹಳ ಸುಂದರವಾಗಿದೆ.

ಕಡೆಯ ಮಾತು ಮಾತ್ರ ಸತ್ಯ. ಆ ಗಣಪ ನಮ್ಮ ಹೃದಯದಲ್ಲಿ ಹೊಕ್ಕಿದ್ದಾನೆ. ನಾವೆಲ್ಲಿಗೇ ಹೋಗಲಿ, ನಮ್ಮೊಂದಿಗೇ ಇರುವನು.

ಇಂತಹ ಉತ್ತಮ ಲೇಖನಗಳನ್ನು ಪ್ರಕಟಣೆಗೆ ಕಳುಹಿಸಿ.

Shiv said...

ರಘು,
ಧನ್ಯವಾದಗಳು.
ನಿಮ್ಮ ಗಣಪನ ಹಬ್ಬ ಹೇಗಿತ್ತು??

ಎನಿಗ್ಮಾ,
ಹೌದು ರೀ..ಗಣಪನ ಹಬ್ಬದ ಹೈಲೈಟ್ ಅಂದ್ರೆ ತಿಂಡಿ ಅಲ್ವಾ..

ತವಿಶ್ರೀಗಳೇ,
ಆ ದೀಪಾಲಂಕಾರ ಮಾಡಿದ ಗಣಪ ನೀವು ಹೇಳುತ್ತಿದ್ದ 'ದಗಡು ಶೇಟ್ ಗಣಪ'.ನೆಟ್‍ನಿಂದ ಇಳಿಸಿದ್ದು.

Sree said...

ಹಳೆಯ ಅನುಭವಗಳ ನೆನಪನ್ನ ಚೆನ್ನಾಗಿ ಹಂಚಿಕೊಂಡಿದೀರಾ...ಈಸಲದ ಹಬ್ಬವನ್ನ "ಮತ್ತೊಂದು ಊರು..ಮತ್ತೊಂದು ದೇಶ..."ದಲ್ಲಿ ಹೇಗೆ ಮಾಡಿದ್ರಿ ಅಂತನೂ ಬರೆದಿದ್ದ್ರೆ ಚೆನಾಗಿರ್ತಿತ್ತು ಅಲ್ಲ್ವಾ?:)

Anveshi said...

ಶಿವರೇ ಶಂಕರರೇ,
ಬ್ರಿಟಿಷರ ವಿರುದ್ಧ ರಾಷ್ಟ್ರದ ಜನತೆಯಲ್ಲಿ ಒಗ್ಗಟ್ಟು ಮೂಡಿಸಲು ಗಣಪತಿ ಉತ್ಸವ ಆಚರಿಸಲು ಆರಂಭಿಸಿದ್ದು ಅಂತ ಕೇಳಿದ್ದೆ... ಅಂತೂ ನಿಮ್ಮ ಮನೆಯಲ್ಲೂ ಒಗ್ಗಟ್ಟು ಮೂಡಿಸಲು ಗಣಪನೇ ಬೇಕು.

ಆದ್ರೆ

ನೀವು ಗೂಡಿನಲ್ಲಿ ಇಲಿಯನ್ನು ಹಾಕುವ ಬದಲು ಶಿವ-ಶಂಕರನ ಮಗ ಗಣಪನನ್ನು ಇಡೋದೇಕೆ ಅಂತ ಒಂದು ಶಂಕೆ.

Anonymous said...

ಶಿವ್ ಶಂಕರ್,
ಎಲ್ಲಿ ಹೋಗಿದ್ದೀರಿ....
ಕಾಣಿಸ್ತಾನೇ ಇಲ್ಲ....
ಬೇಗ ಮರಳಿ ಬನ್ನಿ

Mahantesh said...

hi avi,
Avi bengaLuranalli iddare...mostly innu oMdu tiMglu kayabeku ansutte avar blog update agoke...:)

Anonymous said...

ಈ ಪಾತರಗಿತ್ತಿ ನಮ್ಮ ಗಣಪನ್ನ ಬಿಟ್ಟು ಯಾಕೋ ಮುಂದೇ ಹೋಗ್ತಾ ಇಲ್ಲವಲ್ಲ? ಕಡುಬಿನ ಆಸೆಗೋ?