Saturday, November 09, 2024

ರೇಷ್ಮೆ ಬಟ್ಟೆ

ಅದು ಸುಮಾರು 90ರ ದಶಕದ ಮಧ್ಯದ ಸಮಯ ಅನಿಸುತ್ತೆ. ಬೆಂಗಳೂರಿಗೆ ಭಾರತದಲ್ಲೇ ಮೊದಲ ಕೆ ಎಫ್ ಸಿ ಬಂದದ್ದು. ಬ್ರಿಗೇಡ್ ರೋಡಿನಲ್ಲಿದ್ದ ಆ ಕೆ ಎಫ್ ಸಿ ವಿರುದ್ಧ ಪ್ರತಿಭಟನೆ ನಡೆಯಿತೆಂದು ಓದಿದ ನೆನಪು. ಹಾಗೇ ಅದರ ಆಸುಪಾಸಿನಲ್ಲೇ ಪಿಜ್ಜಾ ಹಟ್ ಸಹ ಬಂದಿದ್ದು ಅನಿಸುತ್ತೆ. ಆಗಲೇ ನಮ್ಮ ಜನರೇಶನಿನವರಿಗೆ ‘ಜಾಗತೀಕರಣ’ ಅರಿವಾಗಿದ್ದು, ದೋಸೆ-ಇಡ್ಲಿ ಎನ್ನುವವರ ಕಿವಿ-ಬಾಯಿಗಳಿಗೆ  ಬರ್ಗರ್, ಪಿಜ್ಜಾನಂತಹ ಪದಗಳ ಪ್ರವೇಶವಾಗಿದ್ದು. 

ವಸುಧೇಂದ್ರ ಅವರ 'ರೇಷ್ಮೆ ಬಟ್ಟೆ' ಓದುತ್ತಿದ್ದಂತೆ , ನಮ್ಮ ಕಣ್ಣ ಮುಂದೆಯೇ ಇವೆಲ್ಲಾ ನಡೆದು ಹೋದದ್ದು , ಅರಿವಿಲ್ಲದೆಯೇ ಜಾಗತೀಕರಣದ ಭಾಗವಾಗಿದ್ದು ಭಾಸವಾಯಿತು. ಆದರೆ ಈ ಜಾಗತೀಕರಣವೆಂಬುದು ಇಂದು-ನಿನ್ನೆಯದ್ದಲ್ಲ. ಅದು ಯಾವುದೋ ಕಾಲದಿಂದ ನಡೆದು ಬಂದದ್ದು ಎಂಬುದನ್ನು ರೇಷ್ಮೆ ಬಟ್ಟೆ ಪುಟ ತಿರುಗಿಸಿದ್ದನಂತೆ ಖಾತ್ರಿಯಾಗತೊಡಗಿತು. 


ಇತಿಹಾಸದ ಕಂಬಗಳಿಗೆ ಕಲ್ಪನೆಯ ಹಂದರ ಹಾಕಿ, ಪ್ರಭಾವಿ ಪಾತ್ರಗಳ ಮಾಲೆ ತೊಡಿಸಿ , ಅಲ್ಲೊಂದು ಇಲ್ಲೊಂದು ಧರ್ಮದ ತೂಗುದೀಪ ಇಳಿಬಿಟ್ಟರೆ … ಅದೇ ರೇಷ್ಮೆ ಬಟ್ಟೆ !


ನಾವು ಬೆಳೆದ ಅಥವಾ ನಮ್ಮ ಸುತ್ತಲಿನ ಪರಿಸರದ ಆಧಾರಿತವಾಗಿ ತಕ್ಕ ಮಟ್ಟಿಗೆ ಶ್ರಮಪಟ್ಟರೆ ಒಂದು ಪ್ರಪಂಚವನ್ನು ಓದುಗರಿಗೆ ಕಟ್ಟಿಕೊಡುವುದು ಸುಲಭವೆನಿಸುತ್ತೆ. ಅದೇ ಕಾಣದ ಕೇಳದ ಕಾಲದ ಒಂದು ಕಲ್ಪನಾ ಪ್ರಪಂಚ ರಚಿಸುವುದು ಎಂತಹ ಲೇಖಕನಿಗೂ ಒಂದು ಸವಾಲೇ ! ವಸುಧೇಂದ್ರ ಇಷ್ಟವಾಗುವುದು ಅವರು ಕಟ್ಟಿರುವ 2ನೇ ಶತಮಾನದ ಈ ಒಂದು ಪ್ರಪಂಚದ ಚಿತ್ರಣದಲ್ಲಿ.. 


2000 ವರ್ಷಗಳ ಹಿಂದೆ ಚೀನಾದಿಂದ ರೋಮ್ ದೇಶದವರೆಗೆ ಇದ್ದದ್ದು ‘ಸಿಲ್ಕ್ ರೂಟ್’ . ಈ ವ್ಯಾಪಾರದ ರಸ್ತೆ ಹಾದು ಹೋಗಿದ್ದು ಅನೇಕ ದೇಶ-ಪ್ರದೇಶಗಳ ಮೂಲಕ. ಅದು ಹೇಗೆ ಒಂದು ವ್ಯಾಪಾರದ ರಸ್ತೆ ಸ್ಥಳೀಯ ಸಂಸ್ಕೃತಿಯ ಮೇಲೆ ಪರಿಣಾಮ ಬೀರಿತು. ಅದರಿಂದ ಅದು ಹೇಗೆ ಭಾಷೆ-ವೇಷ-ಮನುಷ್ಯ ಬದಲಾದ ಎನ್ನುವುದು ಕಾದಂಬರಿಯ ಸಾರ. ಪುರುಷಪುರ, ಬಾಹ್ಲಿಕಾ, ಸಮರಖಂಡ ಮತ್ತು ಲುವೊಯಾಂಗ್ , ಈ ನಾಲ್ಕು ಪ್ರದೇಶಗಳು ಹೇಗೆ ಈ ರೇಷ್ಮೆ ದಾರಿಯಲ್ಲಿ ಬದಲಾದವು, ಅದು ಹೇಗೆ ತಳಕು ಹಾಕಿಕೊಂಡವು ಎನ್ನುವುದು ವಿಭಿನ್ನ ಪಾತ್ರಗಳು ಮತ್ತು ಹೃದಯಕ್ಕೆ ಹತ್ತಿರವಾಗುವ ಅವುಗಳ ಕತೆಗಳ ಮೂಲಕ ಅನಾವರಣವಾಗುತ್ತಾ ಸಾಗುತ್ತದೆ. 


ಕಾದಂಬರಿ ಓದಿಸಿಕೊಂಡು ಹೋಗುತ್ತೆ ಅಂದರೆ ತಪ್ಪಾಗುತ್ತದೆ. ಓದಿಸಿಕೊಂಡು ಹೋಗುವ ಜೊತೆಗೆ ಚಿಂತನೆಗೂ ಹಚ್ಚುತ್ತದೆ. 2000 ವರ್ಷದ ಹಿಂದಿನ ಕತೆಯಾದರೂ ಅಲ್ಲಲ್ಲಿ ಬರುವ ಕೆಲವೊಂದು ಪ್ರಶ್ನೆಗಳಿಗೆ ಈಗಲೂ ನಮ್ಮ ಬಳಿ ಉತ್ತರವಿಲ್ಲವೆನಿಸುತ್ತೆ.  ಧರ್ಮ-ರಾಜಕೀಯ, ಕಾಡು-ನಾಡು, ಪರ್ವತ-ಮರುಭೂಮಿ, ವಜ್ರ-ರೇಷ್ಮೆ , ಸನ್ಯಾಸಿ-ಸಂಸಾರಿ, ಹೀಗೆ ಹಲವಾರು ತದ್ವಿರುದ್ಧವೆನಿಸಬಹುದಾದ ಸಂಗತಿಗಳು ಘರ್ಷಿಸಿ, ಕೊನೆಗೆ ಅವುಗಳೆಲ್ಲಾ ತಾರ್ಕಿಕ ಅಂತ್ಯವಾಗುವುದು ಖುಷಿ ನೀಡುತ್ತದೆ. 


ನನಗೆ ತಿಳಿದ ಮಟ್ಟಿಗೆ ಕನ್ನಡದಲ್ಲಿ ಹಳೆಯ ಚೀನಾದ ಸಾಮಾಜಿಕ ಸ್ತರಗಳ ಬಗ್ಗೆ ಇಷ್ಟು ಚೆನ್ನಾಗಿ ಬರೆದಿದ್ದು ಕಡಿಮೆ, ಅಲ್ಲಿನ ವಿವಿಧ ಶ್ರೇಣಿಯ ಪ್ರಜೆಗಳು, ಭ್ರಷ್ಟಾಚಾರ, ವಾಮಾಚಾರ , ಗೃಹಿಣಿಯರ ಬಗ್ಗೆ ಬರೆದಿರುವುದು ಸೋಜಿಗವೇ ಸರಿ.


ವ್ಯಾಪಾರ-ವಾಣಿಜ್ಯದಲ್ಲಿ ಜನ ಸಾಮಾನ್ಯರ ಬದುಕು ಹೇಗೆ ಬದಲಾಯಿತು ಎನ್ನುವುದರ ಜೊತೆಗೆ ಮತ್ತೊಂದು ಸುಂದರ ಚಿತ್ರಣವೆಂದರೆ ಅದು ಧರ್ಮಗಳದ್ದು. ಬೌದ್ಧ, ಪಾರಿಸಿಕ, ವೈದಿಕ, ಕಾನ್ ಪ್ಯೂಷಿಯಸ್, ತಾವೋ ಧರ್ಮಗಳ ಸಾರವನ್ನು ಬಟ್ಟಿಯಿಳಿಸಿ, ಅದನ್ನು ಹಿತವಾಗಿ ಅಲ್ಲಲ್ಲಿ ನೀಡಿದ ರೀತಿ ಇಷ್ಟವಾಗುತ್ತದೆ. ನನ್ನ ಪ್ರಕಾರ ಮಹಿಳಾ ಪಾತ್ರಗಳು ಹೆಚ್ಚು ಅಳ ಮತ್ತು ಪರಿಣಾಮಕಾರಿ ಅನಿಸುತ್ತವೆ. 


ಕತೆಯ ಕೆಲವು ಎಳೆಗಳನ್ನು ಹಾಗೆಯೇ ಕೂಡಿಸದೆ ಬಿಟ್ಟ ಹಾಗಿದೆ. ಅದು ಪ್ರಯತ್ನಪೂರ್ವಕವಾಗಿ ಮಾಡಿದ್ದೋ ಅಥವಾ ಭಾಗ ಎರಡಕ್ಕೆ ಬಿಟ್ಟಿರುವುದೋ ತಿಳಿಯಲಿಲ್ಲ. 


ಇದೊಂದು ಮ್ಯಾಗ್ನ್ಯಾಯಂ ಓಪಸ್. ಇಲ್ಲಿ ಕ್ಯಾನ್ವಾಸ್ ಮತ್ತು ಚಿತ್ರಣದ ವ್ಯಾಪ್ತಿ ದೊಡ್ಡದ್ದು. ಒಮ್ಮೆ ಕಾಡಿನ ಆಳದಲ್ಲಿ, ಇನ್ನೊಮ್ಮೆ ಗುಹೆಗಳಲ್ಲಿ, ಅಲ್ಲಿ ನಗರಗಳ ಬೀದಿಯಲ್ಲಿ , ಮತ್ತೆ ಅಲ್ಲಿ ಮರುಭೂಮಿಯಲ್ಲಿ ಪಾತ್ರಗಳೊಂದಿಗೆ ನೀವು ಪಯಾಣಿಸುತ್ತೀರಿ. ವಿಶಾಲ ವ್ಯಾಪ್ತಿಯಲ್ಲಿ ಸಾಗುತ್ತಾ ಕೆಲವೊಂದೆಡೆ ಪಾತ್ರಗಳ ಮೇಲೆ ಕೇಂದ್ರೀಕರಿಸುತ್ತಾ ನಡೆಯುತ್ತದೆ. ನೀವು ಎಲ್ಲೇ ಹೋದರೂ ಯಾವ ಕತೆಯ ಭಾಗವಾದರೂ, ರೇಷ್ಮೆ ದಾರಿಯಲ್ಲಿ ನಿಮ್ಮ ಜೊತೆ ಯಾವಾಗಲೂ ಸಾಗುವುದು ಮಾತ್ರ ತಥಾಗತ ಒಬ್ಬನೇ !


ರೇಷ್ಮೆ ಬಟ್ಟೆ ಕನ್ನಡದ ಮಟ್ಟಿಗೆ ಒಂದು ಅಪರೂಪದ ಪ್ರಯತ್ನ. ಅಂತಹ ಪ್ರಯತ್ನಗಳನ್ನು ಮೆಚ್ಚಬೇಕು. 

Monday, January 22, 2024

ವಿರಾಜಮಾನ

ಎಂತಹ ದಿನಗಳು...

ಬೀಗದ ಬಾಗಿಲಿನ ಕತ್ತಲಲಿ

ದೂಳಿನ ಜೇಡರ ಬಲೆಯಲಿ


ಎಷ್ಟೊಂದು ದಿನಗಳು...


ಹೊರಗೆ ಘೋರ ಹೋರಾಟ

ಎಲ್ಲೆಲ್ಲೂ ಸಂಘರ್ಷ ನರಳಾಟ


ಎಲ್ಲಿ ಹೋಗಲಿ ಅಮ್ಮ?


ಜೋಪಡಿಯಾಯ್ತು ನನ್ನ ತಾಣ

ಹೃದಯವಾಯ್ತು ನಿಟ್ಟುಸಿರು ನಿತ್ರಾಣ


ಎಷ್ಟೊಂದು ದಿನಗಳು....


ಮುಂದುವರೆಯುವುದೇ ಮರಳುವ ನಿರೀಕ್ಷೆ 

ಮರೆತುಬಿಟ್ಟರೋ ನನ್ನ ಅಪೇಕ್ಷೆ


ಎನು ಮಾಡಲಿ ಅಮ್ಮ?


ಸೂರ್ಯವಂಶಿಗೆ ಬಂತೇ ಶುಭದಿನ

ನನಸಾಗುವುದೇ  ಸುದಿನ


ಎನು ಮಾಡಿದಿರಿ ಅಮ್ಮ !!


ಆಡಿ ಬೆಳೆದ ಜಾಗದಲಿ

ಆಗಮಿಸಿದೆ ಜನಿಸಿದ ಮಣ್ಣಿನಲಿ


೫೦೦ ವರ್ಷಗಳ ನಂತರ

ನೆಲೆಸುವೆ ಮನೆಯಲಿ ನಿರಂತರ


ಲಲ್ಲಾ ಎನ್ನುವ ಕರೆಯಲಿ

ಮರಳಿದೆ ಅಮ್ಮನ ತೋಳಿನಲಿ





Tuesday, September 06, 2022

ಯಾವ ಮೋಹನ ಮುರಳಿ ...

 

ಅವಧಿಯಲ್ಲಿ ನನ್ನ ಈ ಲೇಖನ ಪ್ರಕಟಿಸಿದ ಟೀಮ್ ಅವಧಿಗೆ ವಂದನೆಗಳು 


ಲೇಖನದ ಅವಧಿಯ ಲಿಂಕ್ ಇಲ್ಲಿದೆ 


Thursday, September 16, 2021

ಯಾ ಯಾಯಾ ಕೋಕೋ ಜಂಬೋ…

 

ಅವಧಿಯಲ್ಲಿ ನನ್ನ ಈ ಲೇಖನ ಪ್ರಕಟಿಸಿದ ಟೀಮ್ ಅವಧಿಗೆ ವಂದನೆಗಳು 


ಲೇಖನದ ಅವಧಿಯ ಲಿಂಕ್ ಇಲ್ಲಿದೆ 


Thursday, February 09, 2017

ಗೋಲಕದಿಂದ ...


ಮಗಳು ಬೆಳಗ್ಗೆಯೇ ಗೋಲಕ ಮುಂದಿಟ್ಟುಕೊಂಡು ಕುಳಿತು ಕೊಂಡಿದ್ದಳು...

ಅದರಲ್ಲಿ ಅವಳು ಬಹು ದಿನಗಳಿಂದ ಕೂಡಿಟ್ಟಿದ್ದ ನಾಣ್ಯ-ನೋಟುಗಳು.  ಮಗಳಿಗೆ ಆ ದುಡ್ಡಿನಿಂದ ತನ್ನ ಇಷ್ಟದ ಯಾವುದೋ ಒಂದು ಗೊಂಬೆ ಕೊಂಡುಕೊಳ್ಳುವ ಮಹತ್ ಯೋಜನೆ. ಅದರ ಬಗ್ಗೆ ಬಹಳ ಸಲ ಹೇಳಿದ್ದೇ ಹೇಳಿದ್ದು. ಗೋಲಕದಲ್ಲಿದ್ದ ಆ ಹಣದ ಬಗ್ಗೆ ಸ್ವಲ್ಪ ಜಾಸ್ತಿ ಪ್ರೀತಿ !

ಇಂತಪ್ಪ ಗೋಲಕದಿಂದ ಬೆಳ್ಳಂಬೆಳ್ಳಿಗ್ಗೆಯೇ ದುಡ್ಡು ಹೊರಬಂದಿತ್ತು. ಮಗಳು ನೋಟುಗಳನ್ನು ಮತ್ತು ನಾಣ್ಯಗಳನ್ನು ಗುಂಪೆ ಹಾಕಿಕೊಂಡು ಎಣಿಸುತ್ತಿದ್ದಳು.

ಮಗಳಿಗೆ ಕಾರಣ ಕೇಳಿದಾಗ ತಿಳಿದಿದ್ದು...
ಮಗು ನನ್ನ ಹುಟ್ಟುಹಬ್ಬಕ್ಕೆ ಗಿಫ್ಟ್ ತರಲಿಕ್ಕೆ , ತಾನು ಕೂಡಿಟ್ಟಿದ್ದ ಹಣ ಹೊರತೆಗೆಯುತಿತ್ತು.

ನನ್ನ ಮಗಳ ಪ್ರೀತಿಗೆ ಅದರ ನಿಷ್ಕಳಂಕ ರೀತಿಗೆ, ಕಣ್ಣ ಅಂಚಿನಲಿ ಹನಿ....



**********************

ನನ್ನ ಕಾಲೇಜಿನ ಕೊನೆಯ ಸೆಮಿಸ್ಟರ್ ಹೊತ್ತಿಗೆ ಮನೆಯಲ್ಲಿ ಸ್ವಲ್ಪ ಕಷ್ಟದ ಸಮಯ.

ನನ್ನ ಅಮ್ಮ ಗೋಲಕ ಒಡೆದು, ತಾನು ಕೂಡಿಟ್ಟಿದ್ದ ಹಣ ತೆಗೆದು ನನ್ನ ಕೈಗಿಟ್ಟಿದ್ದಳು.
ಆ ಕಷ್ಟದ ಕಾಲದಲ್ಲಿ ಆ ದುಡ್ಡು ಮತ್ತು ಆ ಸಾಂತ್ವನದ ಮಾತುಗಳು ನೀಡಿದ್ದವು ಧೈರ್ಯ..

*******************

ಧೈರ್ಯಕ್ಕೆ ಇನ್ನೊಂದು ಹೆಸರು ಬಹುಷಃ ಇವಳಿರಬಹುದು !

ಕಾಲೇಜಿನ ತನ್ನ ಓದು, ಮನೆಯ ಕೆಲಸ, ಮಗಳ ಕಾಳಜಿ ..
ಇವೆಲ್ಲವುಗಳನ್ನು ಅದು ಎಷ್ಟು ಸಮವಾಗಿ ತೂಗಿಸಿಕೊಂಡು ಹೋಗುತ್ತಿದ್ದಾಳೆ .

ಇಡೀ ದಿನ ಆಫೀಸಿನ ಕೆಲಸ ಮುಗಿಸಿಕೊಂಡು ಬಂದು, ಮತ್ತೆ ಅಡುಗೆಮನೆಯಲ್ಲಿ ಒಂದು ಗಂಟೆ ನಿಂತು ಏನೋ ಮಾಡುತ್ತಿದ್ದಳು.
ಆ ಶ್ರಮದ ಫಲ ನನ್ನ ನೆಚ್ಚಿನ ಹಾಲಿನ ಕೋವಾ !

ಜಿ.ಎಸ್.ಎಸ್ ಹೇಳಿದ್ದಂತೆ

ಮನೆಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ

*******************

ಆಫೀಸಿನಿಂದ ಮನೆಗೆ ಬಂದರೆ ಮನೆಯಲ್ಲಿ ಚೆಂದದ ಅಲಂಕಾರ !

ಮಗಳು ಅಮ್ಮನೊಂದಿಗೆ ಹೋಗಿ ಪುಟ್ಬಾಲ್ ತರದ ಕೇಕ್ ತಂದಿಟ್ಟಿದ್ದಳು..

ಈ ಪ್ರೀತಿಯ ಧಾರೆ..

ಆ ಧಾರೆಗೆ ನಾನು ಅರ್ಹನೇ ?
ಬಹು ಧನ್ಯತೆ, ಚಿಕ್ಕ ಭಯ

*******************

ಮತ್ತೆ ಜಿ.ಎಸ್.ಎಸ್ ಪದಗಳ ನೆರವು ಪಡೆದು...

ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?

Saturday, June 04, 2016

ಗಿರಿಯಪ್ಪ ಗೌಡರ ಮಗಳು


ನನ್ನಿಷ್ಟದ ದಂಪತಿಗಳು ತಮ್ಮ ಅರವತ್ತನೇ ವಿವಾಹ ವಾರ್ಷಿಕ ಅಚರಿಸಿಕೊಳ್ಳುತ್ತಿದ್ದಾರೆ.
ಈ ಸಾಲುಗಳು ಆ ದಂಪತಿಗಳಿಗೆ ಮತ್ತು ಅವರ ದೀರ್ಘ ಸಹಬಾಳ್ವೆಗೆ..

ಇಲ್ಲಿನ ಕೆಲವು ಸಾಲುಗಳು ನೆಚ್ಚಿನ ಕೆ.ಎಸ್.ನ ಅವರಿಂದ ಸ್ಪೂರ್ತಿ!

****************************************

ಗಿರಿಯಪ್ಪ ಗೌಡರ ಮಗಳು ರತ್ನದಂತಹ ಹುಡುಗಿ ಊರಿಗೆಲ್ಲಾ
ಬಲುಜಾಣೆ ಗಂಭೀರೆ ಹೆಸರು ಕಮಲ
ಹತ್ತಿರದ ಹೊಳೆಯಿಂದ ನೀರ ತರುವಾಗವಳ ನೋಡಬೇಕು
ಕರುವನಾಡಿಸುವಾಗ ಅಡಿಕೆಯ ತೋಟದಲಿ ಅವಳ ಗಂಡನ ಹೆಸರು ಕೇಳಬೇಕು

ಮೊನ್ನೆ ಚಿಕ್ಕಬಸೂರು ಹಾಲಪ್ಪನವರ ಮಗನು ಹೆಣ್ಣ ನೋಡಲು ಬಂದ ಹೊಳೆಹೊನ್ನಿರಿಗೆ
ಅವರ ಮನೆಯಲಿ ಹೇಗೋ ಏನೋ ಎಂದಳು ಕಮಲ ಕೋಣೆಯೊಳಗೆ
ಚಿಕ್ಕ ಮಗಳ ಮಾತನು ಕೇಳಿ ನಕ್ಕುಬಿಟ್ಟರು ತಂದೆ
ಚಿಕ್ಕಬಸೂರಿನಿಂದ ಬಂದಿದ್ದ ಗಂಡು ಬಲು ಸೊಗಸುಗಾರ

ಹೆಸರು ಚಂದ್ರಶೇಖರ ಶಾಲೆಯ ಮಾಸ್ತರನಂತೆ
ಪ್ಯಾಂಟನಲಿ ಹೊಳೆಯುತಿಹ ಮಾಸ್ತರ ನೋಡಿ
ಹೊನಲಾಗಿಬಿಟ್ಟರು  ಹೊಳೆಹೊನ್ನೂರ ಜನತೆ
ಮುಂದೆ ಶುಭ ಮುಹೂರ್ತದಿ ಮದುವೆ ನಡೆಯಿತು ಮನೆಯಂಗಳದಿ

ಗೌಡರಿಗೆ ಚಿಂತೆ ಮಗಳ ಹೊಸಬದುಕ ಬಗ್ಗೆ
ಚಂದ್ರಶೇಖರ ಚಂದ್ರದಂತ ತಂಪನೆ ಮನಸಿನವನು
ಅದರ ಕಂಪಿನಲಿ ಅರಳಿತು ಬಲು ಬೇಗ ಪ್ರೀತಿ ಕಮಲ
ಬದುಕು ಬೆಳೆಯಿತು ಬಾಳು ಬೆಳಗಿತು

ಕಷ್ಟದಲಿ ಕೈಹಿಡಿದು ಸುಖದಲಿ ಸವಿನುಡಿದು
ಸವೆಸಿದರು ದಂಪತಿಗಳು ಬಾಳ ದಾರಿ
ಕಾಲ ಚಕ್ರ ಉರುಳಿ ವೇಗವಾಗಿ
ಅರಳಿ ನಿಂತವು ಐದು ಪ್ರೇಮ ಕುಸುಮಗಳು

ಶಶಿಧರನೆಂದರು ಸತೀಶನೆಂದರೂ  ಓಗೊಡುವ ಪರಶಿವನು
ಜೋಡಿಯ ಹರಸಿದನು ಸವಿ-ತಾ ತಂದು ಬಾಳನಲಿ
ಜೀವನ ಗೀತಾ ಸುಗುಮವಾಗಿ ಬದುಕು ಸುನಂದ-ನವಾಗಿ
ನೋಡು ನೋಡುತ್ತಾಲೇ ಕಳೆದು ಹೋದವು ದಶಕಗಳು ಆರು

ಚಂದ್ರಕಮಲವೀಗ  ಮೊಮ್ಮಕ್ಕಳು-ಮರಿಮಗಳ  ಕಲರವದ ಗೂಡು
ಮರಳಿ ನೋಡಲು ಗೌಡರ ಅದೇ ರತ್ನದಂತ ಹುಡುಗಿ
ಅದೇ  ಪ್ಯಾಂಟಿನ ತಂಪನೆ ಹುಡುಗ
ನಮ್ಮದೊಂದು ಶರಣು ಈ ಜೋಡಿ ಜೀವಕೆ ಹರಕೆ ಆಯುವಿಗೆ

****************************************

Thursday, February 18, 2016

ಅವಳು, ಮಗಳು, ನೆನಪು, ನಲಿವು

ಅದು ಯಾವುದೋ ನಗರಿ
ರಸ್ತೆ ರಸ್ತೆಯಲ್ಲ ಅಲ್ಲಿ
ಊರ ತುಂಬ ಕಾಲುವೆ
ಪಯಣ ಒಂದು ದೋಣಿಯಾನ
ಕಾಲುವೆಗೊಂದು ಕೆಂಪುಹಸಿರು ದೀಪ
ಹಸಿರುದೀಪದಿ ತೆರೆವ ಬಾಗಿಲು
ಮತ್ತೆ ಸಾಗುವ ದೋಣಿ
ದೋಣಿ ನಡೆಸುವ ಅವಳು
ಅವಳ ನಗು ಬೆಳದಿಂಗಳು

ಮತ್ತೆ ಯಾನ ನಿಲ್ಲಿಸುವ
ಕೆಂಪುದೀಪ ಆ ಬಾಗಿಲುಗಳು
ದೋಣಿ ನಿಂತಾಗ ನೋಡುವ
ಅವಳ ನಿಷ್ಕಳಂಕ ನಯನ
ಅದು ಸೋಸುವ ಪ್ರೀತಿ
ಆ ಪ್ರೀತಿಯ ರೀತಿ
ಮತ್ತೆ ಹಸಿರು ದೀಪ
ತೆರೆಯುವ ಬಾಗಿಲುಗಳು ಮನಸ್ಸು
ಹೊರಟಾಗ ಮತ್ತದೇ ಸಡಗರ

ದೂರ ತೀರದ ಪಯಾಣ
ದಣಿವು ಬಾಯರಿಕೆ ಕ್ರಮೇಣ
ಪ್ರಶ್ನೆಗಳು ಪ್ರಜ್ಞೆಗಳು
ಬಂದ ದಾರಿ ನೋಡಲು
ಹಿಂದೆ ಜಲ ಸಾಗರ
ಮುಂದೆ ದಾರಿ ಹುಡುಕಲು
ಮುಂದೆ ಜಲ ಸಾಗರ
ಅವಳದೊಂದು ಸ್ನಿಗ್ಧ ಮನ
ಅಲ್ಲೊಂದು ದಿಕ್ಸೂಚಿ

ದೂರ ಕಂಡ ತೀರದಂಚು
ದೋಣಿ ತುಂಬ ತುಂಬು ನಗು
ನಕ್ಕು ಕಣ್ಣು ಬಿಡಲು
ಪಕ್ಕ ಕನಸ ಮಲ್ಲಿಗೆ
ಅದೇ ನಯನ ತಾವರೆ
ಸೇರಿ ಸವಿದ ಮಧುರ ನೆನಪು
ಸಕ್ಕರೆ ಗೊಂಬೆ ಮುದ್ಧು ಮಗಳು
ಅವಳು, ಮಗಳು, ನೆನಪು, ನಲಿವು
ಪಯಣದಲ್ಲಿ ಇನ್ನೇನು ಆಯಾಸ !

Wednesday, November 11, 2015

ಆಕಾಶಬುಟ್ಟಿ

ದೀಪಾವಳಿಗೆ ಮನೆ ಮುಂದೆ ಆಕಾಶಬುಟ್ಟಿ ಕಟ್ಟಿದರೆ ಎಷ್ಟು ಚೆಂದ ...

ಇವಳ ತಲೆಯಲ್ಲಿ ಇಂತದೊಂದು ಯೋಚನೆ ಬಂದರೆ ಮುಗಿಯಿತು..
ಇಲ್ಲಿರುವ ಅಂಗಡಿಗಳಲ್ಲಿ ಎಲ್ಲಿ ಅಲೆದರೂ ಎಲ್ಲೂ ಆಕಾಶಬುಟ್ಟಿ ಸಿಗಲಿಲ್ಲ.

ಇವಳದೋ ತಲೆಯಲ್ಲಿ ಅಕಾಶಬುಟ್ಟಿಯೇ ತಿರುಗುತಿತ್ತು....

ಸರಿ.. ಕಾನೂನನ್ನು ಕೈಗೆ ತೆಗೆದುಕೊಂಡು ಆಕಾಶಬುಟ್ಟಿ ಮನೆಯಲ್ಲೇ ಮಾಡುವ ಯೋಜನೆಯಾಯಿತು.

**********************************

ಹಬ್ಬದ ದಿನ ಊರ ಮಾರುಕಟ್ಟೆಯಲ್ಲಿ ಬರೀ ಚೆಂಡಿ ಹೂವಿನದ್ದೇ ಕಂಪು ..
ಎಲ್ಲಿ ನೋಡಿದರೂ ಕೇಸರಿ-ಹಳದಿ ವರ್ಣದಲ್ಲಿ ನಳನಳಿಸುತ್ತ , ಹಬ್ಬದ ವಾತಾವರಣವನ್ನು ಇಮ್ಮಡಿಗೊಳಿಸುವ ಸಮಗ್ರ ಭಾರವನ್ನು ತಾನೇ ಹೊತ್ತಂತೆ ತೋರುತಿತ್ತು.
ಅದೊಂದು ದಿವಸ ಅದೆಲ್ಲಿಂದ ತರುತ್ತಿದ್ದರೋ , ತಾವರೆ ಪಿರಕಿ ಎನ್ನುವ ಆ ಹಳದಿ ಚಿಕ್ಕ ಹೂವುಗಳು.

ಹೆಸರು ನೆನಪಾಗುತ್ತಿಲ್ಲ..ಉದ್ದನೇ ಹುಲ್ಲಿನಂತಹ ಗಿಡದ ತೊನೆ ತೊನೆ ಎಲ್ಲೆಡೇ ...

ಇಷ್ಟು ಖರೀದಿಸಿ ಅಪ್ಪನ ಜೊತೆ ಸಾಗುತ್ತಿರುವಾಗ , ಹೆಜ್ಜೆಗಳು ಗಕ್ಕನೆ ನಿಲ್ಲುತ್ತಿದ್ದವು ಶೆಟ್ಟಿ ಅಂಗಡಿ ಮುಂದೆ..
ಪಟಾಕಿ ಸರ, ರಾಕೆಟ್, ಲಕ್ಷ್ಮೀ ಪಟಾಕಿ , ಭೂ ಚಕ್ರ , ಹನುಮಂತನ ಬಾಲ, ಸುರಸುರ ಬತ್ತಿ, ಹಾವಿನ ಗುಳಿಗೆ, ಹೂವಿನ ಕುಂಡಕ್ಕಾಗಿ !

ಮನೆಗೆ ಬಂದ ಕೂಡಲೇ ಅಟ್ಟಿ ಲಕ್ಕವ್ವ ಮಾಡುವ ಕೆಲಸ ಶುರು.

ಸೆಗಣಿಯಲ್ಲಿ ಚಿಕ್ಕ ಗುಂಡಿನಾಕೃತಿಗಳನ್ನು  ಮಾಡಿ, ಅದಕ್ಕೆ  ಚೆಂಡಿ, ತಾವರೆ ಪಿರಕಿ ಸಿಗಿಸಿ ಅಲಂಕರಿಸಿದರೆ ಅದುವೇ ಅಟ್ಟಿ ಲಕ್ಕವ್ವ .
ಮನೆಯ ಬಾಗಿಲ ಹೊಸ್ತಿಲನ ಎರಡು ಕಡೆ , ಬೀಸುವ ಕಲ್ಲಿನ ಹತ್ತಿರ, ಒನಕೆ ಕುಟ್ಟುವ ಕಲ್ಲಿನ ಹತ್ತಿರ ಒಂದೊಂದು ಲಕ್ಕವ್ವ ಇಟ್ಟು, ಅದರ ಪಕ್ಕ ಒಂದು ಹುಲ್ಲಿನ ದಂಟು.
ಇಷ್ಟು ಮಾಡುವಷ್ಟರಲ್ಲೇ ಕತ್ತಲು ಕದ ತಟ್ಟುತಿತ್ತು.

ಮಣ್ಣಿನ ಚಿಕ್ಕ ಹಣತೆಗಳನ್ನು  ಲಕ್ಕವ್ವ ಇದ್ದ ಕಡೆ ಇಟ್ಟು ದೀಪ ಹಚ್ಚಿದರೆ... ಮನೆಯ ಮುಂದೆ ಕಟ್ಟಿದ ಆಕಾಶಬುಟ್ಟಿಯ ಚುಮು ಚುಮು ಬೆಳಕಿನೊಂದಿಗೆ ಅದೊಂದು ಬೇರೆಯದೇ ಲೋಕ !

**********************************

ಆಕಾಶಬುಟ್ಟಿ = Diwali Lantern ಎಂದು ಸರಳವಾಗಿ ಸಮೀಕರಿಸಿ, ಮಗಳಿಗೆ ಆಕಾಶಬುಟ್ಟಿ ಮಾಡುವ ಮಹತ್ ಯೋಜನೆಯ ಬಗ್ಗೆ ಹೇಳಿದ್ದಾಯಿತು. ಮಗಳು ಸಂಭ್ರಮದಲ್ಲೇ ಸಹಾಯಕ್ಕೆ ನಿಂತಳು. ಬಣ್ಣದ ಕಾಗದ ಕತ್ತರಿಸಿ , ಅವುಗಳನ್ನು ಸೇರಿಸಿ ಆಕೃತಿ ಮಾಡಿ , ಚಮಕ್ ಗೆ ಪಳಪಳವೆನ್ನುವ ಕಾಗದ ಹಚ್ಚಿ , ಉದ್ದನೆ ಬಾಲ ಗುಚ್ಚವನ್ನು  ಇಳಿಬಿಟ್ಟು , ಮೇಲೆ ದಾರ ಪೋಣಿಸಿದರೆ ಆಕಾಶಬುಟ್ಟಿ  ತಯಾರು !



ಆಕಾಶಬುಟ್ಟಿ ತೋರಿಸಿಲು ನೋಡಿದರೆ ಇವಳೂ ನಿದ್ದೆ , ಮಗಳೂ ನಿದ್ದೆ.

ಬೆಳಿಗ್ಗೆ ಎಚ್ಚರವಾಗಿದ್ದೇ ಇವರಿಬ್ಬರ ಸಂಭ್ರಮದ ಕಿಳಕಿಲದಿಂದ.. ಆಕಾಶಬುಟ್ಟಿ ಹಿಡಿದು ಸಂಭ್ರಮಿಸುತ್ತಿದ್ದರು.  ನಮ್ಮತ್ತೆಯವರು ಆಕಾಶಬುಟ್ಟಿಯ ಬಾಲ ಹಿಂಗೆ ಇರುತ್ತೆ ಎನ್ನುವ ದೃಡೀಕರಣ ಕೊಡುವಲ್ಲಿಗೆ ಆಕಾಶಬುಟ್ಟಿಗೆ ಒಂದು ಅಧಿಕೃತ ಮೊಹರು ದೊರೆಯಿತು !

ಇನ್ನೇನೂ ಹೋಗಿ ಮನೆ ಹೊರಗೆ ಕಟ್ಟಬೇಕು ಅನ್ನುವಷ್ಟರಲ್ಲಿ , ಮಗಳು ಐಪೋನ್ನ ಸಿರಿಗೆ 'Is it going to rain today ' ಎಂದು ಕೇಳಿದಳು. ಸಿರಿಯಿಂದ  'Its going to rain today , please carry umbrella ' ಎಂದು ತಾಕೀತು.  ಮಳೆಯ ಕಾರಣ ಆಕಾಶಬುಟ್ಟಿ ಹಾಕುವ ಕಾರ್ಯಕ್ರಮ ಮುಂದೂಡಲಾಯಿತು.

**********************************

ಲಕ್ಷ್ಮಿ ಪೂಜೆ ಮುಗಿಸುತ್ತಿದಂತೆ  ಪಟಾಕಿ ಹೊಡೆಯುವುದು ಶುರುವಾಗುತಿತ್ತು.

ಕಮಲದಲ್ಲಿ ನಿಂತ ಲಕ್ಷ್ಮಿ ಚಿತ್ರವಿದ್ದ, ನೀಲಿ ಬಣ್ಣದ, ದಪ್ಪನೆ , ಉದ್ದನೆ ಪಟಾಕಿ ಅಬ್ಬರಿಸಿ ಬೊಬ್ಬಿಡುವ ಸದ್ದು ಮಾಡುತಿತ್ತು. ಕೆಂಪನೆ ಸರ ಪಟಾಕಿ ನಿಮಿಷದಲ್ಲಿ ಉರಿದು ಸಿಡಿದಾಗ ಮತ್ತೆ ಬರಿಗೈ. ರಾಕೆಟ್ಗಳು ಬಹುತೇಕ ಆಕಾಶಕ್ಕೆ ಹೋದರೆ ಇನ್ನು ಕೆಲವು ಬಾಟಲಿ ಉರುಳಿ ನೆಲಕ್ಕೆ ಸಮವಾಗಿ ಹಾರಿ ನಷ್ಟದ ಲೆಕ್ಕಕ್ಕೆ ಸೇರುತ್ತಿದ್ದವು. ಎತ್ತರಕ್ಕೆ ಹೂ ಸುರಿಸುತ್ತಿದ್ದ ಹೂವಿನ ಕುಂಡ ಕೆಲವೊಮ್ಮೆ ಏನು ಮಾಡದೆ ಸುಮ್ಮನಾಗುತಿತ್ತು. ಆಗೆಲ್ಲಾ ಅದರ ಮೂತಿ ಹರಿದು ಕಲ್ಲಿಗೆ ಅದನ್ನು ಉಜ್ಜಿ ಮರಳಿ ಪ್ರಯತ್ನ ನಡೆಯುತ್ತಿತ್ತು.

 ಭೂ ಚಕ್ರ ತಿರುಗುವಾಗ ಮಹಾಭಾರತದ ಕೃಷ್ಣನ ಚಕ್ರ ನೆನಪಾಗಿದ್ದು, ಕೈಯಲ್ಲಿ ಇದು ತಿರುಗಿದರೆ ಎಷ್ಟು ಚೆನ್ನ ಎಂದು ತರಲೆ ಯೋಚನೆಗೆ ಬರವಿರುತ್ತಿರಲಿಲ್ಲ ..   ಇನ್ನು ಸುರಸುರ ಬತ್ತಿ, ಹಾವಿನ ಗುಳಿಗೆಗಳು ಕಾರ್ಯಕ್ರಮದ ನಡುವೆ ಬರುವ ಜಾಹಿರಾತಿನಂತೆ ಬಂದು ಸುಟ್ಟು ಹೋಗುತ್ತಿದ್ದವು.

ಇವೆಲ್ಲದರ ನಡುವೆ ಒಂದು ಸಲ ಕೈ ಸುಟ್ಟುಕೊಂಡು  ಬರ್ನಲ್ ಹಚ್ಚಿಕೊಳ್ಳದಿದ್ದರೆ ಹೇಗೆ !

ಪಟಾಕಿ ಕಾರ್ಯಕ್ರಮದ ಕೊನೆಯ ಅಂಕ.. ಪಟಾಕಿ ರೈಲು

ಒಂದು ಕಂಬದಿಂದ ಇನ್ನೊಂದು ಕಂಬಕ್ಕೆ ಉದ್ದದ ದಾರ ಬಿಗಿದು , ಆ ದಾರದಲ್ಲಿ ಪಟಾಕಿ ರೈಲು ಪೋಣಿಸಿ , ಊದುಬತ್ತಿಯ ತುದಿಯಲ್ಲಿನ ಕಿಡಿಯನ್ನು ರೈಲಿನ ಬಿಳಿ ತುದಿಗೆ ಹತ್ತಿಸಿದಾಗ ಓಡುತಿತ್ತು ಆ ರೈಲು. ಕಟ್ಟಿದ ದಾರದ ಉದ್ದಕ್ಕೂ ಬೆಳಕು ಚೆಲ್ಲುತ್ತಾ ವೇಗವಾಗಿ ಸಾಗಿ ಕೊನೆಗೆ ಮದ್ದು ಮುಗಿಯುದ್ದಿಂತೆ ದಾರದಲ್ಲೇ ಗಿರಕಿ ಹೊಡೆಯುತಿತ್ತು.

**********************************

ಅಂತು ಮಳೆ ನಿಂತು , ಸಿರಿ 'Its not going to rain in next few days' ಎಂದು ಅಪ್ಪಣೆ ಕೊಟ್ಟಾಗ , ಆಕಾಶಬುಟ್ಟಿ ಮನೆಯ ಮುಂದೆ ಕಟ್ಟಲ್ಪಟ್ಟಿತು.
ಈ ಆಕಾಶಬುಟ್ಟಿಯ ಕೆಳಗೆ ಪಟಾಕಿ ರೈಲು,  ಅಟ್ಟಿ ಲಕ್ಕವ್ವ , ಬರ್ನಲ್ ವಾಸನೆ  ಯಾಕೋ ನೆನಪಾದವು..



**********************************

ಪಾತರಗಿತ್ತಿ ಶುರು ಮಾಡಿ ಮುಂದಿನ ವರ್ಷಕ್ಕೆ ಒಂದು ದಶಕ. ತೋಚಿದ್ದು - ಬಯಸಿದ್ದು ಬರಿಯಲ್ಲಿಕ್ಕೆ ನನಗೆ ಇದ್ದ ಒಂದು ಚಿಕ್ಕ ಪ್ರಪಂಚ ಇದು.
'ಜ್ಹಿಂದಗಿ ಏಕ್ ಸಫರ ಸುಹಾನ..' ಎನ್ನುತ್ತಾ ಕಾಲಿಗೆ ಚಕ್ರ ಕಟ್ಟಿಕೊಂಡು ಬದುಕು ಕಟ್ಟಿ ಕೊಳ್ಳುವ ಇರಾದೆಯಲ್ಲಿ , ಕಳೆದು ಕೆಲವು ವರ್ಷ ಪಾತರಗಿತ್ತಿ ಎಲ್ಲೂ ಹಾರಿದ್ದೇ ಇಲ್ಲ..

ಈ ಆಕಾಶಬುಟ್ಟಿ ಮೂಲಕ ಕನಸು-ನನಸು-ನೆನಪುಗಳಿಗೆ  ಪದ ಕಟ್ಟುವ ಪ್ರಯತ್ನಕ್ಕೆ ಮರಳುತ್ತಿದ್ದೇನೆ . ..

ಎಲ್ಲರಿಗೂ ದೀಪಾವಳಿಯ  ಶುಭಾಶಯಗಳು !

Monday, January 10, 2011

ಕೂಪರ್‍, ಹೈಜ್ಯಾಕ್ ಮತ್ತು ದಂತಕತೆ

೧೯೭೧ರ ನವೆಂಬರ್ ತಿಂಗಳ ಆ ತಣ್ಣನೆ ಸಂಜೆಯಲ್ಲಿ ಬೋಯಿಂಗ್ ೭೨೭ ವಿಮಾನ ಪೋರ್ಟ್‍ಲೆಂಡ್‍ನಿಂದ ಸಿಯಾಟಲ್-ಟೆಕೋಮಾಕ್ಕೆ ಹೊರಡುವ ಸಿದ್ಧತೆಯಲ್ಲಿತ್ತು. ವಿಮಾನ ಹೊರಡುವ ಅರ್ಧ ಘಂಟೆ ಮುಂಚೆ, ನಾರ್ಥ್‍ವೆಸ್ಟ್ ವಿಮಾನಯಾನ ಕಂಪೆನಿಯ ಟಿಕೆಟ್ ಕೌಂಟರ್‍ನಲ್ಲಿ ಡ್ಯಾನ್ ಕೂಪರ್ ಹೆಸರಿನ ವ್ಯಕ್ತಿ ೨೦ ಡಾಲರ್ ಕೊಟ್ಟು ಟಿಕೆಟ್ ಕೊಂಡು ವಿಮಾನವೇರಿದ್ದ. ಸುಮಾರು ೯೦ ಜನ ಹಿಡಿಸುವ ಆ ವಿಮಾನದಲ್ಲಿ, ಅಂದು ೩೭ ಜನ ಅಷ್ಟೇ ಪ್ರಯಾಣಿಕರಿದ್ದರು.

ನಿಗದಿತ ಸಮಯಕ್ಕೆ ವಿಮಾನ ನೆಲ ಬಿಟ್ಟು ಆಕಾಶಕ್ಕೆ ನೆಗೆದು ಕೆಲವೇ ನಿಮಿಷಗಳಾಗಿತ್ತು. ಹತ್ತಿರದಲ್ಲಿಯೇ ಇದ್ದ ಗಗನ ಪರಿಚಾರಕಿಗೆ , ಆ ಕೂಪರ್ ಕಾಗದದ ತುಂಡನ್ನು ನೀಡಿದ್ದ. ಆ ಕಾಗದವನ್ನು ಆಕೆ ತನ್ನ ಕಿಸೆಗೆ ಸೇರಿಸುವಷ್ಟರಲ್ಲಿ, ಕೂಪರ್ ಅವಳೆಡೆ ಬಾಗಿ,ತನ್ನ ಬ್ರೀಫ್ ಕೇಸ್ ಕಡೆ ತೋರಿಸಿ, ತನ್ನ ಬಳಿ ಬಾಂಬ್ ಇರುವುದೆಂದು ಕೂಡಲೇ ಆ ಪತ್ರವನ್ನು ಓದಬೇಕೆಂದು ಕೇಳಿದ್ದ. ಗಾಭರಿಗೊಂಡ ಪರಿಚಾರಕಿ ಆ ಕಾಗದವನ್ನು ವಿಮಾನದ ಪೈಲಟ್ ಬಳಿ ಒಯ್ದಳು. ಪೈಲಟ್ ತಕ್ಷಣವೇ ನಿಲ್ದಾಣವನ್ನು ಸಂಪರ್ಕಿಸಿ ಬಾಂಬ್ ಬೆದರಿಕೆಯ ಬಗ್ಗೆ ತಿಳಿಸಿದ್ದ. ಕೆಲವೇ ಕ್ಷಣಗಳಲ್ಲಿ ಸಿಯಾಟೆಲ್ ಪೋಲಿಸ್ ಮತ್ತು ಎಫ್.ಬಿ.ಐ ಕಾರ್ಯನಿರತವಾಗಿದ್ದವು.

ನಾರ್ಥ್‍ವೆಸ್ಟ್‍ ಕಂಪೆನಿಗೆ ಕೂಪರ್‌ನ ಬೇಡಿಕೆಗಳು - ಸಿಯಟಲ್‍ನಲ್ಲಿ ವಿಮಾನ ಇಳಿದಾಗ ೨ ಮಿಲಿಯನ್ ಡಾಲರ್ ನಗದು ಮತ್ತು ಎರಡು ಜೊತೆ ಪ್ಯಾರಾಚೂಟ್‍ಗಳು. ನಗದು ಹಣ ಇಪ್ಪತ್ತು ಡಾಲರ್‌ಗಳ ಕಟ್ಟುಗಳಲ್ಲಿ ಇರಬೇಕೆಂದು, ಆ ನೋಟುಗಳು ಒಂದೇ ಕ್ರಮಾಂಕದಲ್ಲಿ ಇರಬಾರದೆಂದು ಸೂಚನೆಗಳಿದ್ದವು. ಇಷ್ಟು ಸೂಚನೆಗಳನ್ನು ನಿಯಂತ್ರಣ ಕೊಠಡಿಗೆ ರವಾನಿಸಿದ ಪೈಲಟ್. ಹಣ ಮತ್ತು ಪ್ಯಾರಾಚೂಟ್ ಸಿದ್ಧವಾಗುವವರೆಗೆ ಆಕಾಶದಲ್ಲೇ ಹಾರಬೇಕೆಂದು ಕೂಪರ್ ಪೈಲೆಟ್‍ಗೆ ಮತ್ತೊಂದು ಆದೇಶ ನೀಡಿದ್ದ. ತಾನು ಪೊಳ್ಳು ಬೆದರಿಕೆ ಹಾಕುತ್ತಿಲ್ಲವೆಂದು ತೋರಿಸಲು, ಪರಿಚಾರಿಕೆಗೆ ತನ್ನ ಬ್ರೀಫ್ ಕೇಸ್ ತೆರೆದು ಅದರಲ್ಲಿದ್ದ ಎರಡು ಕೆಂಪು ಸಿಲಂಡರ್‌ಗಳು ಮತ್ತು ಅವಕ್ಕೆ ಜೋಡಿಸಿದ್ದ ವೈರ್‌‍ಗಳನ್ನು ತೋರಿಸಿದ್ದ.

ಇತ್ತ ಕೂಪರ್ ಕೇಳಿದ್ದ ೨ ಮಿಲಿಯನ್ ಡಾಲರ್ ಹಣವನ್ನು ಹೊಂದಿಸುವ ಕಾರ್ಯ ಶುರುವಾಯ್ತು. ಕೂಪರ್ ಬೇಡಿಕೆಯಂತೆ ಒಂದೇ ಕ್ರಮಾಂಕದ ನೋಟುಗಳನ್ನು ಎಫ್.ಬಿ.ಐ ಕೊಡಲಿಲ್ಲ. ಆದರೆ ಆ ಎಲ್ಲಾ ನೋಟುಗಳು ಒಂದೇ ಕೋಡ್ ಅಕ್ಷರದಿಂದ ಶುರುವಾಗುವ ಹಾಗೇ ನೋಡಿಕೊಂಡಿದ್ದರು. ಅದರ ಜೊತೆಗೆ ಅಲ್ಪ ಸಮಯದಲ್ಲೇ ಆ ಎಲ್ಲಾ ೧೦ ಸಾವಿರ ಸಂಖ್ಯೆಯಲ್ಲಿದ್ದ ೨೦ ಡಾಲರ್ ನೋಟುಗಳ ಮೈಕ್ರೋಫಿಲಂ ಸಹ ತೆಗೆದುಕೊಳ್ಳಲಾಗಿತ್ತು !

ಹಣ ಮತ್ತು ಪ್ಯಾರಾಚೂಟ್ ಸಿದ್ಧವಾದ ತಕ್ಷಣ, ಪೈಲೆಟ್‍ಗೆ ಸಂದೇಶ ರವಾನೆಯಾಯ್ತು. ಸಿಯಟಲ್ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ, ಕೂಪರ್ ವಿಮಾನವನ್ನು ನಿಲ್ದಾಣದಿಂದ ದೂರವಿರುವ ಆದರೆ ತುಂಬಾ ಬೆಳಕಿರುವ ಪ್ರದೇಶದಲ್ಲಿ ನಿಲ್ಲಿಸಲು ಹೇಳಿದ್ದ. ಹಾಗೇ ವಿಮಾನದ ಒಳಗಿದ್ದ ದೀಪಗಳೆಲ್ಲವನ್ನು ಆರಿಸಲು ಹೇಳಿದ್ದ. ಹೊರಗಿನಿಂದ ವಿಮಾನದ ಮೇಲೆ ಶಾರ್ಪ್ ಶ್ಯೂಟರ್ಸ್ ಸಹಾಯದಿಂದ ದಾಳಿ ಮಾಡಬಹುದಾದ ಯೋಚನೆಯನ್ನು ಕೂಪರ್ ಈ ಮೂಲಕ ಮೊದಲೇ ಗ್ರಹಿಸಿದ್ದ.

ನಂತರ ವಿಮಾನಯಾನ ಕಂಪೆನಿಯ ನೌಕರನೊಬ್ಬನೇ ಬಂದು, ಎರಡು ಜೊತೆ ಪ್ಯಾರಾಚೂಟ್ ಮತ್ತು ಹಣವನ್ನು ವಿಮಾನದ ಹತ್ತಿರಕ್ಕೆ ತರಬೇಕೆಂದು ಮುಂದಿನ ಆದೇಶವಾಗಿತ್ತು. ಅದರಂತೆ ಹಣ ಮತ್ತು ಪ್ಯಾರಾಚೂಟ್ ಬಂದಾಗ, ವಿಮಾನದ ಪರಿಚಾರಿಕೆಯಿಂದ ಅವನ್ನು ವಿಮಾನದೊಳಗೆ ತರಿಸಿದ್ದ. ತನ್ನ ಬೇಡಿಕೆ ಈಡೇರಿದ ನಂತರ, ವಿಮಾನದ ಸಿಬ್ಬಂದಿಯೊಂದನ್ನು ಬಿಟ್ಟು ವಿಮಾನದಲ್ಲಿದ್ದ ಇತರ ೩೬ ಪ್ರಯಾಣಿಕರನ್ನು ಬಿಡುಗಡೆ ಮಾಡಿದ್ದ. ಅಲ್ಲಿಂದ ಬಿಡುವ ಮುಂಚೆ ವಿಮಾನಕ್ಕೆ ಇಂಧನ ತುಂಬಿಸುವ ಆದೇಶ ನೀಡಿದ್ದ.

ವಿಮಾನ ಸಿಯಟಲ್ ಬಿಟ್ಟ ನಂತರ, ಪೈಲೆಟ್‍ಗೆ ವಿಮಾನವನ್ನು ೧೦ ಸಾವಿರ ಅಡಿ ಎತ್ತರದಲ್ಲಿ, ೧೫೦ ನಾಟ್(ಸುಮಾರು ಗಂಟೆಗೆ ೨೦೦ ಮೈಲಿ) ವೇಗದಲ್ಲಿ ಮತ್ತು ರೆಕ್ಕೆಗಳು ೧೫ ಡಿಗ್ರಿ ಕೋನದಲ್ಲಿ ಹಾರಿಸಬೇಕೆಂದು ನಿರ್ದೇಶಿಸಿದ್ದ. ನಂತರ ಮೆಕ್ಸಿಕೋ ದೇಶಕ್ಕೆ ವಿಮಾನ ತಿರುಗಿಸಲು ಹೇಳಿದ್ದ. ಆದರೆ ವಿಮಾನದಲ್ಲಿರುವ ವಿಮಾನ ಅಲ್ಲಿಯವರೆಗೆ ಸಾಕಾಗುವುದಿಲ್ಲವೆಂದು ಪೈಲೆಟ್ ಹೇಳಿದ ನಂತರ, ಬೇರೊಂದು ನಿಲ್ದಾಣದಲ್ಲಿ ಇನ್ನೊಂದು ನಿಲುಗಡೆ ಮಾಡಿ ಇಂಧನ ತುಂಬಿಸಿಕೊಳ್ಳುವ ನಿರ್ಧಾರವಾಯ್ತು.


ಸಿಯಟಲ್‍ನಿಂದ ಹಾರಿದ ಸ್ಪಲ್ಪ ಸಮಯದಲ್ಲೇ ವಿಮಾನದ ಸಿಬ್ಬಂದಿಯೆಲ್ಲವೂ ಕಾಕ್‍ಪಿಟ್ ಒಳಗೆ ಸೇರಬೇಕೆಂದು ಆದೇಶ ನೀಡಿದ್ದ ಕೂಪರ್. ಆದಾಗಿ ಸ್ಪಲ್ಪ ಸಮಯದಲ್ಲೇ, ವಿಮಾನದ ಹಿಂಬದಿಯ ಬಾಗಿಲು ತೆರೆದ ಶಬ್ದ ಕೇಳಿಸಿತ್ತು. ಕೂಪರ್ ಹಣವನ್ನು ಕಟ್ಟಿಕೊಂಡು ವಿಮಾನದಿಂದ ಪ್ಯಾರಾಚೂಟ್‍ನಲ್ಲಿ ಕತ್ತಲೆಯ ರಾತ್ರಿಗೆ ಜಿಗಿದಿದ್ದ. ಹೊರಗಡೆ ಸುಮಾರು ಮೈನಸ್ ೭ ಡಿಗ್ರಿ ಚಳಿಯಿತ್ತು.

ಬಾಂಬ್ ಬೆದರಿಕೆಯಲ್ಲಿದ್ದ ವಿಮಾನ ಸಿಬ್ಬಂದಿ ಮುಂದಿನ ನಿಲ್ದಾಣ ಬರುವವರೆಗೆ ಕಾಕ್‍ಪಿಟ್‍ನಿಂದ ಹೊರಬರಲಾಗಲಿಲ್ಲ. ವಿಮಾನ ನೆಲಕ್ಕೆ ಮುಟ್ಟಿದ ನಂತರ ನೋಡಿದಾಗ, ವಿಮಾನದ ಬಾಗಿಲು ತೆರೆದಿತ್ತು. ಹಣ, ಪ್ಯಾರಾಚೂಟ್ ಮತ್ತು ಕೂಪರ್ ಮಾಯವಾಗಿದ್ದ.

ತಕ್ಷಣವೇ ಶುರುವಾಯ್ತು ತನಿಖೆ. ಆದರೆ ವಿಪರೀತ ಮಳೆಯ ಕಾರಣ ಕೂಪರ್ ಹಾರಿದ್ದ ಪ್ರದೇಶವನ್ನು ಜಾಲಾಡುವುದು ಮರುದಿನ ಬೆಳಿಗ್ಗೆಯವರೆಗೆ ಮುಂದೂಡಲಾಯಿತು. ವಿಮಾನ ಸಿಬ್ಬಂದಿಯನ್ನು ಮಾತಾಡಿಸಿದ ಎಫ್.ಬಿ.ಐ, ಡಿಬಿ ಕೂಪರ್‌ನ ಒಂದು ರೇಖಾಚಿತ್ರ ನಿರ್ಮಿಸಿದರು. ಕೂಪರ್ ವಿಮಾನದಲ್ಲಿ ಬಿಟ್ಟು ಹೋಗಿದ್ದು ತನ್ನ ಟೈ ಮತ್ತು ಸೇದಿ ಎಸೆದಿದ್ದ ಸಿಗರೇಟ್ ತುಂಡುಗಳು.

ಕೂಪರ್ ಹಾರಿದ ಪ್ರದೇಶದ ಶೋಧನೆ ಕಾರ್ಯ ಪ್ರಾರಂಭವಾಯ್ತು. ನೆಲ ಮತ್ತು ವಾಯು ಮಾರ್ಗದಲ್ಲಿ ತೀವ್ರ ಶೋಧನೆಯ ನಂತರವೂ ಕೂಪರ್ ಅಥವಾ ಅವನ ಅವಶೇಷಗಳಾಗಲಿ, ಹಣ ಅಥವಾ ಪ್ಯಾರಾಚೂಟ್ ಯಾವುದೂ ಸಿಗಲಿಲ್ಲ.

ಈಡೀ ಹೈಜಾಕ್ ಯೋಜನೆಯನ್ನು ತುಂಬಾ ಯೋಚಿಸಿ ಮಾಡಲಾಗಿತ್ತು. ೨೦ ಡಾಲರ್‌ಗಳ ಕಂತುಗಳಲ್ಲಿ ೨೦ ಮಿಲಿಯನ್ ಡಾಲರ್ ಸುಮಾರು ೨೦ ಪೌಂಡ್(ಸುಮಾರು ೧೦ ಕೆಜಿ) ತೂಕವಾಗುತಿತ್ತು. ಕಡಿಮೆ ಮೊತ್ತದ ಕಂತುಗಳಾದರೆ ತೂಕ ಹೆಚ್ಚಾಗುತ್ತೆಂದು , ಹೆಚ್ಚಿನ ಮೊತ್ತದ ನೋಟುಗಳು ಸುಮ್ಮನೆ ಸಂಶಯವುಂಟು ಮಾಡುವುದು ಎಂಬ ಮುಂದಾಲೋಚನೆ ಮಾಡಲಾಗಿತ್ತು.ಹಾಗೆ ವಿಮಾನದ ವೇಗ, ಹಾರುವ ಎತ್ತರ, ಕೋನ, ನಿಲ್ದಾಣಗಳ ಬಗ್ಗೆ ತುಂಬಾ ಮಾಹಿತಿಯುಳ್ಳವರು ಈ ಕೆಲಸಕ್ಕೆ ಕೈಹಾಕಿದ್ದರು.

ಎಫ್.ಬಿ.ಐ ಸುಮಾರು ೨ ಸಾವಿರ ಜನರನ್ನು ತನಿಖೆಗೆ ಒಳಪಡಿಸಿತ್ತು. ಕೂಪರ್‌ಗೆ ನೀಡಿದ ಆ ನೋಟುಗಳ ಕ್ರಮಸಂಖೆಗಳನ್ನು ಎಲ್ಲಾ ಬ್ಯಾಂಕುಗಳಿಗೂ, ಪ್ರಪಂಚದ ಎಲ್ಲಾ ತನಿಖಾ ಸಂಸ್ಥೆಗಳಿಗೆ ನೀಡಲಾಗಿತ್ತು. ಆ ಹಣಗಳು ಎಲ್ಲಿ ಚಲಾವಣೆಗೆ ಬಂದರೂ ಅದನ್ನು ಹಿಂಬಾಲಿಸುವ ಪ್ರಯತ್ನವಾಗಿತ್ತು. ಆದರೆ ಅ ನೋಟುಗಳು ಚಲಾವಣೆಗೆ ಬರಲಿಲ್ಲ.

ಸರಿಸುಮಾರು ಅರ್ಧ ಡಜನ್ ಜನರು ಕೂಪರ್ ಇರಬಹುದೆಂದು ದಟ್ಟ ವದಂತಿಗಳಿದ್ದವು. ಆದರೆ ಅವರು ಯಾರು ಕೂಪರ್‌‍ನ ಗುಣ-ಲಕ್ಷಣಗಳಿಗೆ ಹೋಲಿಕೆಯಾಗಲೇ ಇಲ್ಲ.


ಇದಾಗಿ ಸುಮಾರು ೧೦ ವರ್ಷದ ನಂತರ , ಅದೇ ಪ್ರದೇಶದಲ್ಲಿ ನದಿಯ ದಂಡೆಯಲ್ಲಿ ಆಡುತ್ತಿದ್ದ ಚಿಕ್ಕ ಹುಡುಗನೊಬ್ಬನಿಗೆ, ನೆನೆದು ಹಾಳಾಗಿ ಹೋದ ಮೂರು ೨೦ ಡಾಲರ್ ನೋಟುಗಳ ಕಂತೆಗಳು ಸಿಕ್ಕವು. ಅವುಗಳ ಕ್ರಮಾಂಕವೂ ಕೂಪರ್‌ಗೆ ಕೊಟ್ಟ ನೋಟುಗಳೊಂದಿಗೆ ಹೊಂದಿಕೆಯಾಗುತಿತ್ತು. ಉಳಿದ ಹಣ ಮತ್ತು ಕೂಪರ್ ಬಗ್ಗೆ ಮತ್ತೆ ತನಿಖೆ ಶುರುವಾಯ್ತು. ಯಾವುದೇ ಫಲಿತಾಂಶವೂ ಬರಲಿಲ್ಲ.

ಕೂಪರ್ ಜಿಗಿತ ದಂತಕತೆಯಾಗಿ ಬಿಟ್ಟಿತ್ತು ಮತ್ತು ಕಾಪಿಕ್ಯಾಟ್‍ಗಳನ್ನು ತಯಾರುಮಾಡಿಬಿಟ್ಟಿತ್ತು. ಅದೇ ವರ್ಷದಲ್ಲಿ ಕನಿಷ್ಟ ಮೂರು ಅಂತಹ ವಿಮಾನ ಅಪಹರಣ ಮತ್ತು ಜಿಗಿತದ ವಿಫಲ ಪ್ರಯತ್ನಗಳು ನಡೆದವು. ಆದರೆ ಯಾರು ಕೂಪರ್ ಸಾಧಿಸಿದ್ದನ್ನು ಮೀರಲಾಗಲಿಲ್ಲ.

********************
ಕೂಪರ್ ಹೈಜಾಕ್ ಪ್ರಕರಣದ ವಿಮಾನಯಾನದ ರೂಪುರೇಶೆಯನ್ನು ಸಂಪೂರ್ಣ ಬದಲಾಯಿಸಿತು.

ಬೋಯಿಂಗ್‍ನ ೨೩೭ ವಿಮಾನದ ಬಾಗಿಲುಗಳು ತೆರೆಯದಂತೆ ವಾಲ್‍ವನ್ನು ಆಳವಡಿಸಲಾಯ್ತು. ಅದಕ್ಕೆ ’ಕೂಪರ್ ವೇನ್’ ಎಂದು ಹೆಸರು !

ವಿಮಾನ ಎರುವುದಕ್ಕಿಂತ ಮುಂಚೆ ಪ್ರಯಾಣಿಕರ ತಪಾಸಣೆ ಮತ್ತು ಅವರ ಲಾಗೇಜ್ ತಪಾಸಣೆ ಪ್ರಾರಂಭವಾಯ್ತು. ಅಲ್ಲಿಯವರೆಗೆ ಯಾವುದೇ ಶೋಧನೆಯಿಲ್ಲದೆ ವಿಮಾನದಲ್ಲಿ ಎರುವುದು ಸಾಮಾನ್ಯವಾಗಿತ್ತು.

ಕೂಪರ್ ಬಗ್ಗೆ ಸುಮಾರು ಅರ್ಧ ಡಜನ್ ಪುಸ್ತಕಗಳು , ಸಿನಿಮಾಗಳು ಮತ್ತು ಲೆಕ್ಕವಿಲ್ಲದಷ್ಟು ಟಿವಿ ಕಾರ್ಯಕ್ರಮಗಳು ಬಂದವು.

ಇಂತಹ ರೋಮಾಂಚಕ ಘಟನೆಗೆ ಕಾರಣನಾದ ಕೂಪರ್ ಯಾರು ? ಜಿಗಿದ ಮೇಲೆ ಕೂಪರ್ ಕತೆಯೇನಾಯ್ತು. ಅವನು ಬದುಕಿ ಅಲ್ಲಿಂದ ಪರಾರಿಯಾದನೇ ಅಥವಾ ತನಿಖಾ ಸಂಸ್ಥೆಗಳು ಹೇಳುವ ಹಾಗೇ ಆ ಯತ್ನದಲ್ಲೇ ಸತ್ತು ಹೋದನೇ ? ಸತ್ತರೆ ಅವನ ಹೆಣವಾಗಲಿ, ಅವನ ಬಳಿಯಿದ್ದ ಉಳಿದ ಹಣವಾಗಲಿ ಇಲ್ಲಿಯವರೆಗೆ ಯಾಕೇ ಸಿಗಲಿಲ್ಲ.

ಪ್ರಶ್ನೆಗಳು ಪ್ರಶ್ನೆಗಳೇ ಉಳಿದುಬಿಟ್ಟವು...

ಅಮೇರಿಕದ ವಿಮಾನಗಳ ಹೈಜಾಕ್ ಇತಿಹಾಸದಲ್ಲಿ ಬಿಡಿಸಲಾಗದ ಏಕೈಕ ಪ್ರಕರಣವಾಗಿ ಇನ್ನೂ ಎಫ್.ಬಿ.ಐ ಮುಂದಿದೆ...

Thursday, December 30, 2010

ಸಹಾಯ ಹಸ್ತಕ್ಕೆ ನಮನ

ಕೀನ್ಯಾ ದೇಶದ ಹಲವಾರು ಜಲಾವೃತ ಊರುಗಳನ್ನು ತಲುಪುವುದು ದುಸ್ಸಾಹಸ. ಈ ನದಿಗಳಲ್ಲಿ ಯಾವಾಗ ಬೇಕಾದರೂ ಬರಬಹುದಾದ ಕ್ಷಿಪ್ರ ಪ್ರವಾಹ. ಅದರ ಜೊತೆ ಆ ನದಿಗಳು ಮೊಸಳೆಗಳಿಂದ ತುಂಬಿವೆ. ಈ ನದಿಗಳಿಗೆ ಸೇತುವೆಗಳಿಲ್ಲ. ಇಂತಹ ಪ್ರದೇಶಗಳಿಗೆ ಸ್ವಯಂಸೇವಕರಾಗಿ ಬಂದ ಅಮೇರಿಕನ್ ದಂಪತಿಗಳೊಬ್ಬರು ಅಂತಹ ನದಿಯೊಂದರಲ್ಲಿ ಕೊಚ್ಚಿಕೊಂಡು ಹೋಗುತ್ತಾರೆ. ಅದಾಗಿ ಸುಮಾರು ೧೩ ವರ್ಷದ ನಂತರ ಆ ದಂಪತಿಗಳ ಮಗ ಅದೇ ಊರಿಗೆ ಮರಳಿ ಬರುತ್ತಾನೆ. ತನ್ನಂತೆ ಇತರರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಳ್ಳಬಾರದೆಂದು, ತನ್ನ ತಂದೆ-ತಾಯಿಯನ್ನು ನುಂಗಿದ ನದಿಗೆ ಅಡ್ಡಲಾಗಿ ಸೇತುವೆ ಕಟ್ಟುತ್ತಾನೆ.

ನಂತರ ಅದೇ ದೇಶದಲ್ಲೇ ಉಳಿದು ಅದೇ ತರ ಬೇರೆ ಜಲಾವೃತ ಊರುಗಳಿಗೆ ಸೇತುವೆ ಕಟ್ಟಲು ತೊಡಗುತ್ತಾನೆ. ಸ್ಥಳೀಯರ ಸಹಕಾರದಿಂದ ಇಲ್ಲಿಯವರಿಗೆ ಸುಮಾರು ೪೫ ಸೇತುವೆಗಳು ಕಟ್ಟಿದ್ದಾನೆ.ಈ ಊರುಗಳಿಗೆಲ್ಲಾ ಹೊರಜಗತ್ತಿನ ಸಂಪರ್ಕಕ್ಕೆ ಎಕೈಕ ಕೊಂಡಿಯಾಗಿವೆ ಈ ಸೇತುವೆಗಳು. ವಾಣಿಜ್ಯ, ಉದ್ಯೋಗ, ಶಿಕ್ಷಣದ ಕ್ಷೇತ್ರಗಳಲ್ಲಿ ಸ್ಪಲ್ಪ ಪ್ರಗತಿಗೆ ಈ ಸೇತುವೆಗಳು ಪಾಲುದಾರರಾಗಿವೆ.

ಆತನ ಹೆಸರು ಡೇವಿಡ್ ಕಕುಕೊ.

***************

ಡ್ಯಾನ್ ವಾಲ್‍ರತ್ ಮನೆಗಳನ್ನು ಕಟ್ಟಿಕೊಡುವ ವೃತ್ತಿಯಲ್ಲಿರುವವನು. ತನ್ನ ಸ್ನೇಹಿತನೊಬ್ಬನ ಮನೆ ನವೀಕರಣಕ್ಕೆ ಹೋದಾಗ, ಸ್ನೇಹಿತನ ಮಗ ಇರಾಕ್ ಯುದ್ಧದಲ್ಲಿ ಗಾಯಾಳುವಾಗಿ ಮರಳಿದ ದೃಶ್ಯ ನೋಡುತ್ತಾನೆ. ಈಡೀ ಕುಟುಂಬಕ್ಕೆ ಆಸರೆಯಾಗಿದ್ದ ಮಗ ಈಗ ಸಂಪೂರ್ಣ ಜರ್ಜಿತನಾಗಿ ಮರಳಿ ಬಂದದ್ದು ನೋಡಿ ಮನ ಮರುಗುತ್ತದೆ. ಆತನ ಕುಟುಂಬ ಇರುವ ಮನೆಯನ್ನು ಆವನಿಗೆ ಅನುಕೂಲವಾಗುವಂತೆ ಮಾರ್ಪಾಡಿಸಲು ಡ್ಯಾನ್‍ನನ್ನು ಕರೆದಿರುತ್ತಾರೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವ - ಅಂಗಗಳನ್ನು ಕಳೆದುಕೊಂಡು ಈಡೀ ಜೀವನ ಬದುಕುವ ಸೈನಿಕರಿಗೆ ಅವರ ಕುಟುಂಬದವರಿಗೆ ಏನಾದರೂ ಸಹಾಯ ಮಾಡಬೇಕೆಂದು ಅಲ್ಲೇ ನಿರ್ಧಾರ ಮಾಡುತ್ತಾನೆ. ಆ ಮನೆಯನ್ನು ಸಂಪೂರ್ಣವಾಗಿ ಮಾರ್ಪಾಡಿಸುತ್ತಾನೆ, ಏನೂ ದುಡ್ಡು ತೆಗೆದುಕೊಳ್ಳದೇ..

ನಂತರ ಯುದ್ಧದಿಂದ ಮರಳಿ ಬರುವ ಸೈನಿಕರಿಗೆ ಉಚಿತವಾಗಿ ಮನೆಗಳನ್ನು ಕಟ್ಟಿಸಿ ಕೊಡತೊಡಗುತ್ತಾನೆ. ಯುದ್ಧದಿಂದ ಮರಳಿ ಗಾಯಾಳುಗಳಾಗಿ, ಅಂಗವಿಹನರಾಗಿ ತಮ್ಮ ಜೀವನ ಸಾಗಿಸಿಲಿಕ್ಕೆ ಹೋರಾಡುವ ಈ ಯೋಧರಿಗೆ, ಸ್ವಂತ ಮನೆ ಒದಗಿಸಿ ಅವರ ಪರಿಶ್ರಮ ಕಡಿಮೆ ಮಾಡುತ್ತಿದ್ದಾನೆ.

*****************

ಕೀನ್ಯಾ ಮತ್ತು ಅಫ್ರಿಕಾದ ಇತರೆ ಹಲವು ದೇಶಗಳ ಮನೆಗಳಲ್ಲಿ, ಅಡುಗೆ ಮಾಡಲು ಮತ್ತು ರಾತ್ರಿ ದೀಪಕ್ಕೆ ಸೀಮೆ ಎಣ್ಣೆಯೊಂದೇ ಆಧಾರ. ಶಾಲಾಮಕ್ಕಳಿಗೆ ಓದಲು ಸೀಮೆ ಎಣ್ಣೆ ಬುಡ್ಡಿ. ರಾತ್ರಿ ಸೀಮೆ ಎಣ್ಣೆ ಉರಿಸಿದರೆ ಮರುದಿನಕ್ಕೆ ಏನೂ ಇಲ್ಲ. ಮತ್ತೆ ಸೀಮೆ ಎಣ್ಣೆ ಕೊಳ್ಳಬೇಕೆಂದರೆ , ಅಂದಿನ ಅನ್ನಕ್ಕೆ ಬೇಕಾದ ದುಡ್ಡು ಕೊಡಬೇಕು. ಅದಕ್ಕೆ ಬಹುತೇಕ ಮನೆಗಳಲ್ಲಿ ರಾತ್ರಿ ಸೀಮೆ ಎಣ್ಣೆ ಉಪಯೋಗ ಸೀಮಿತ. ಮಕ್ಕಳು ಓದು ಕುಂಟಿತ.

ಇದಲ್ಲೆವನ್ನೂ ನೋಡಿದ ಇವಾನ್ಸ್ ವಡಂಗೊ ಇದಕ್ಕೆ ಪರಿಹಾರ ಕಂಡುಕೊಳ್ಳಲು ಹಿಡಿದ ದಾರಿ ವಿಶಿಷ್ಟ. ತನ್ನ ಅನ್ವೇಷಣೆಯಿಂದ ಕಡಿಮೆ ವೆಚ್ಚದಲ್ಲಿ ತಯಾರಿಸಬಹುದಾದ ಸೌರ್ಯಶಕ್ತಿ ಚಲಿತ ದೀಪಗಳನ್ನು ಕಂಡುಹಿಡಿದಿದ್ದಾನೆ. ೨೩ ವರ್ಷದ ಇವಾನ್ಸ್ ವಡಂಗೊ ಇಲ್ಲಿಯವರಿಗೆ ೧೦೦೦೦ ಸೌರ್ಯ ದೀಪಗಳನ್ನು ತಯಾರಿಸಿ ಉಚಿತವಾಗಿ ಹಂಚಿದ್ದಾನೆ.

ಇದರಿಂದ ಮಕ್ಕಳ ಓದು, ಸೀಮೆ ಎಣ್ಣೆಗಾಗಿ ಪಡುವ ಕಷ್ಟ ಸ್ಪಲ್ಪ ತಪ್ಪಿಸಬಹುದೆಂಬ ಇವಾನ್ಸ್‍ಗೆ ವಿಶ್ವಾಸವಿದೆ.

*********************

ವರ್ಷಕ್ಕೆ ಸುಮಾರು ೧೦ ರಿಂದ ೧೫ ಸಾವಿರ ಹೆಣ್ಣುಮಕ್ಕಳನ್ನು ನೇಪಾಳದ ಗಡಿಯಿಂದ ಭಾರತಕ್ಕೆ ವೇಶ್ಯಾಟನೆಗೆ ಸಾಗಿಸಲಾಗುತ್ತದಂತೆ. ಒಮ್ಮೆ ಈ ಸುಳಿಯೊಳಗೆ ಬಿದ್ದವರು, ಅಲ್ಲಿನ ನಿತ್ಯ ಹಿಂಸೆ, ವೇದನೆ, ರೋಗಗಳಿಂದ ಮರಳಿ ಬರುವುದು ಅಸಾಧ್ಯ. ಅಲ್ಲಿಂದ ಮರಳಿ ಬಂದರೂ, ಸಮಾಜದಲ್ಲಿ ಅವರು ಹೊರಗಿನವರು.

ಇಂತಹ ವೇದನೆಯಲ್ಲಿ ಬೇಯುತ್ತಿರುವ ಹೆಣ್ಣುಮಕ್ಕಳಿಗೆ ಆಸರೆಯಾಗಿ ಕಾಪಾಡುತ್ತಿರುವ ೬೧ ವರ್ಷದ ಮಹಿಳೆ ಅನುರಾಧ ಕೊಯಿರಾಲ.

ಇಲ್ಲಿಯವರೆಗೆ ಸುಮಾರು ಅಂತಹ ೪೦೦ ಹೆಣ್ಣುಮಕ್ಕಳನ್ನು ಕಾಪಾಡಿ ತಮ್ಮ ’ಮೇಟಿ ನೇಪಾಳ’ ದಲ್ಲಿ ಆಶ್ರಯ ನೀಡಿದ್ದಾರೆ. ಆಶ್ರಯದ ಜೊತೆ ಅವರಿಗೆ ಬೇಕಾದ ಶಿಕ್ಷಣ, ತರಬೇತಿ ಎಲ್ಲಕ್ಕಿಂತ ಹೆಚ್ಚಾಗಿ ಸಾಂತ್ವನ ನೀಡಿದ್ದಾರೆ. ಇವರಲ್ಲಿ ಏಡ್ಸ್‍ನಿಂದ ಬಳಲುತ್ತಿರುವ ಅನೇಕರಿಗೆ ಚಿಕಿತ್ಸೆ ಮತ್ತು ಅವರ ಕೊನೆಯ ದಿನಗಳ ಮನೆಯಾಗಿದ್ದಾರೆ.

ಇದು ಅಲ್ಲದೇ ನೇಪಾಳದ ಹಳ್ಳಿಗಳಲ್ಲಿ ಉದ್ಯೋಗದ ಅಮೀಷ ತೋರಿಸಿ ಸಾಗಿಸುವುದರ ಬಗ್ಗೆ ಜನಜಾಗೃತಿ ಮೂಡಿಸುತ್ತಿದ್ದಾರೆ.

*********************

ಮಾನವತೆ ಸಕಾರ ಎತ್ತಿದಂತೆ ಇರುವ ಈ ಮಹನೀಯರು, ತಮ್ಮ ವೈಯುಕ್ತಿಕ ಬದುಕನ್ನು ಮೀರಿ, ತಮ್ಮ ಸುತ್ತಲಿನ ಜನರಿಗೆ ಒಳಿತು ಮಾಡುವ ಕಾಯಕದಲ್ಲಿ ತೊಡಗಿದವರು. ಇವರಿಗೆಲ್ಲಾ ಬೇಕಾಗಿದ್ದರೆ ತಮ್ಮ ಜೀವನ ತಾವು ನೋಡಿಕೊಂಡು ತಮ್ಮ ಪಾಡಿಗೆ ತಾವು ಇರಬಹುದಿತ್ತು. ಆದರೆ ಅವರು ಆರಿಸಿಕೊಂಡ ದಾರಿ ಬೇರೆಯಾಗಿತ್ತು. ಚಿಕ್ಕ ಚಿಕ್ಕ ಹೆಜ್ಜೆಗಳಿಂದ ಶುರುಮಾಡಿದ ಅವರ ಸೇವೆ ಹೆಮ್ಮರವಾಗಿ ಬೆಳೆದು ನಿಂತಿವೆ.

ಮಹಾತ್ಮ ಗಾಂಧೀಜಿ ಹೇಳಿದಂತೆ ’Be the change you want to see’.

ಹೊಸ ವರುಷದಲ್ಲಿ ಎಲ್ಲರಿಗೂ ಶುಭವಾಗಲಿ.

ಹಾಗೇ ಅಸಹಾಯಕರಿಗೆ-ನೊಂದವರಿಗೆ ಸಾಂತನ್ವದ ಮಾತುಗಳು ಮತ್ತು ಸಹಾಯ ಹಸ್ತ ಚಾಚುವ ಮನಸ್ಸು ನಮ್ಮದಾಗಲಿ..

Monday, November 29, 2010

ಪರೋಪಕಾರ್ಥಂ ಇದಂ ಶರೀರಂ

ಮೆಕ್ಸಿಕೋ ದೇಶ ದಿನನಿತ್ಯ ನರಳುತ್ತಿರುವುದು ಡ್ರಗ್ಸ್ ಮಾಫಿಯಾದ ಕಪಿಮುಷ್ಟಿಯಲ್ಲಿ. ಸರ್ಕಾರ ಡ್ರಗ್ಸ್ ಮಾಫಿಯಾ ವಿರುದ್ಧ ಯುದ್ಧ ಶುರುಮಾಡಿ ವರ್ಷಗಳೇ ಕಳೆದಿದ್ದರೂ, ಮಾಫಿಯಾದ ಹಾವಳಿ ಕಡಿಮೆಯೇನು ಆಗಿಲ್ಲ. ಗ್ಯಾಂಗ್ ವಾರ್‌ಗಳು ಮತ್ತು ಪೋಲಿಸ್‍ ವಿರುದ್ಧ ಹೋರಾಟದಲ್ಲಿ ನಿತ್ಯವೂ ಹೆಣಗಳು ಉರುಳುತ್ತಲೇ ಇವೆ. ಜೌರಿಜ್ ಎಂಬ ಪಟ್ಟಣವೊಂದರಲ್ಲೇ ೨೦೦೭ ರಿಂದ ಇಲ್ಲಿಯವರೆಗೇ ಸುಮಾರು ೬೦೦೦ ಜನ ಹತರಾಗಿದ್ದಾರೆ.

೭೪ ವರ್ಷದ ಅಜ್ಜಿಯೊಬ್ಬಳು, ಹಿಂಸೆಯಲ್ಲಿ ಬೇಯುತ್ತಿರುವ ಈ ನಗರಕ್ಕೆ ನಿತ್ಯವೂ ತೆರಳಿ ಗಾಯಗೊಂಡವರ ಸೂಶ್ರುಷೆ ಮಾಡುವಲ್ಲಿ ಶ್ರಮಿಸುತ್ತಿದ್ದಾಳೆ. ಆ ಅಜ್ಜಿ ಕಟ್ಟಿದ ಅಸ್ಪತ್ರೆಯಲ್ಲಿ ಇಲ್ಲಿಯವರೆಗೆ ಸಾವಿರಾರು ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ನಿತ್ಯದ ಹಿಂಸಾಚಾರದಲ್ಲಿ ತನ್ನ ಅನೇಕ ಸ್ನೇಹಿತ-ಬಂಧುಗಳನ್ನು ಕಳೆದುಕೊಂಡಿದ್ದರೂ ಆ ಹಿರಿಯ ವಯಸ್ಸಿನ ಮಹಿಳೆ ತನ್ನ ಸೇವೆಯನ್ನು ಚಾಚು ತಪ್ಪದೆ ಮಾಡುತ್ತಿದ್ದಾಳೆ.

ಅದರ ಜೊತೆ ಅಲ್ಲಿನ ಮಹಿಳೆಯರ ಮತ್ತು ಮಕ್ಕಳ ಆರೋಗ್ಯಕ್ಕೆ ತನ್ನ ಆಸ್ಪತ್ರೆಯಲ್ಲಿ ವಿಶೇಷ ಸವಲತ್ತು ಕಲ್ಪಿಸಿದ್ದಾಳೆ. ವಿಶೇಷವಾಗಿ ಗರ್ಭಿಣಿ ಸ್ತ್ರೀ ಮತ್ತು ನವಜಾತ ಶಿಶುಗಳ ಪಾಲನೆಯಲ್ಲಿ ತೊಡಗಿಸಿಕೊಂಡಿದ್ದಾಳೆ.

ಕಳೆದ ೩೫ ವರ್ಷದಿಂದ ಆ ನಗರಕ್ಕೆ ಬ್ಯಾಂಡೇಜ್ ಹಾಕುತ್ತಿರುವ ಅಜ್ಜಿಯ ಹೆಸರು - ಗೊಡಲುಪ್ ಲಿ ವೆಗಾ.

********************

ಮಧುರೆಯ ನಾರಾಯಣ ಕೃಷ್ಣನ್ ಪಂಚತಾರ ಹೋಟೆಲೊಂದರಲ್ಲಿ ಮುಖ್ಯ ಚೆಫ್ (ಬಾಣಾಸಿಗ)ನಾಗಿ ಕೆಲಸ ಮಾಡುತ್ತಿದ್ದವನು. ಸ್ವಿಟ್ಸರ್‌ಲೆಂಡ್‌ನಲ್ಲಿ ಅವನು ಆಸೆಪಟ್ಟ ಕೆಲಸವೂ ಸಿಕ್ಕಿತ್ತು. ಅಲ್ಲಿಗೆ ಹೋಗುವದಕ್ಕಿಂತ ಮುಂಚೆ ತನ್ನ ಕುಟುಂಬವನ್ನು ಮಾತಾಡಿಸಲು ತನ್ನೂರಿಗೆ ಹೋದವನು ದಾರಿಯಲ್ಲಿ ಕಂಡ ದೃಶ್ಯ ನೋಡಿ ಅವಕ್ಕಾದನು. ವೃದ್ಧನೊಬ್ಬ ಹಸಿವೆಯಿಂದ ತನ್ನ ವಿಸರ್ಜನೆಯನ್ನು ತಾನೇ ತಿನ್ನುತ್ತಿರುವ ದೃಶ್ಯ ಮನ ಕಲಕಿತು. ತನ್ನ ಹೋಟೆಲ್ ನೌಕರಿ ಬಿಟ್ಟು- ಸ್ವಿಟ್ಸರ್‌ಲೆಂಡ್‌ನ ಕೆಲಸದ ಆಮಂತ್ರಣವನ್ನು ತಿರಸ್ಕರಿಸಿದರು. ೨೦೦೩ರಲ್ಲಿ ತಾನು ಗಳಿಸಿದ ಸ್ವಂತ ಹಣದಿಂದ ’ಅಕ್ಷಯಾ ಟ್ರಸ್ಟ್’ ಶುರುಮಾಡಿ, ದೀನರ ಸಹಾಯಕ್ಕೆ ನಿಂತರು.

ದಿನ ನಿತ್ಯವೂ ತನ್ನ ಮನೆಯಲ್ಲಿ ಅಡುಗೆ ಮಾಡಿಕೊಂಡು ತನ್ನ ವ್ಯಾನ್‍ನಲ್ಲಿ ಹಾಕಿಕೊಂಡು ನಾರಾಯಣ ಹಸಿದವರನ್ನು ಹುಡುಕಿಕೊಂಡು ಹೋಗುತ್ತಾರೆ. ಮಾನಸಿಕ ಅಸ್ವಸ್ಥರು, ವಯಸ್ಸಾಗಿ ಮನೆಯಿಂದ ಹೊರಗಟ್ಟಿಸಿಕೊಂಡವರು, ಯಾವುದೋ ಪಾಳು ಕಟ್ಟಡಗಳಲ್ಲಿರುವವರು..ಎಲ್ಲರ ಬಳಿಗೆ ಹೋಗಿ ಬಿಸಿಯೂಟ ಮಾಡಿಸಿಬರುತ್ತಾರೆ. ಹಾಗೆಯೇ ತನ್ನ ಜೊತೆಯಲ್ಲಿ ಬಾಚಣಿಕೆ, ಕತ್ತರಿ, ಶೇವಿಂಗ್ ಸೇಟ್ ಒಯ್ಯುವ ನಾರಾಯಣ್ ಆ ನತದೃಷ್ಟರ ಕ್ಷೌರಿಕನಾಗಿಯೂ ಕೆಲಸ ಮಾಡುತ್ತಾರೆ. ದಿನವೂ ಸುಮಾರು ೪೦೦-೫೦೦ ಜನರಿಗೆ ಅನ್ನ ನೀಡುತ್ತಿರುವ ನಾರಾಯಣ್‍ಗೆ ೨೯ ವರ್ಷ.

**********************

ಮಾದಕ ವಸ್ತುಗಳ ಸೇವನೆಗಾಗಿ ಜೈಲಿಗೆ ಹೋದ ಸೂಸನ್ ಬರ್ಟನ್ ಅಲ್ಲಿಂದ ಹೊರಬಂದಾಗ, ಅಪರಾಧ ಲೋಕ ಕೈಬೀಸಿ ಕರೆಯುತಿತ್ತು. ಅದರ ಕಟು ಅನುಭವವಿದ್ದ ಸೂಸನ್, ತನ್ನಂತೆ ಜೈಲಿನಿಂದ ಶಿಕ್ಷೆ ಅನುಭವಿಸಿ ಹೊರಬರುವ ಮಹಿಳೆಯರಿಗೆ ಏನಾದರೂ ಸಹಾಯ ಮಾಡಬೇಕೆನ್ನುವ ಉದ್ದೇಶದಿಂದ ತನ್ನ ಮನೆಯನ್ನು ಅವರಿಗೊಸ್ಕರ ತೆರೆದಿಟ್ಟಳು. ಜೈಲಿನಿಂದ ಹೊರಬಂದ ಮಹಿಳೆಯರನ್ನು ತಾನೇ ಹೋಗಿ ಜೈಲಿನ ಗೇಟಿನಿಂದ ತನ್ನ ಕರೆತಂದು ಅವರಿಗೆ ಸಾಂತ್ವನ ಹೇಳಿದಳು. ಆ ಮಹಿಳೆಯರ ಮುಂದಿನ ಜೀವನಕ್ಕೆ ಬೇಕಾದ ವೃತ್ತಿ ತರಬೇತಿ, ಕೌನ್ಸಿಲಿಂಗ್, ಬೆಂಬಲವನ್ನು ನೀಡುತ್ತಾ ಬಂದಿದ್ದಾಳೆ.

ಇಲ್ಲಿಯವರೆಗೆ ಸೂಸನ್ ತರಬೇತಿ ನೀಡಿದ ಸುಮಾರು ೫೦೦ ಮಹಿಳೆಯರು ತಮ್ಮ ಕಾಲಮೇಲೆ ನಿಂತುಕೊಂಡು ಮತ್ತೆ ಅಪರಾಧಿ ಲೋಕದ ಸುಳಿಗೆ ಸಿಲುಕಿಲ್ಲ. ಇದರ ಜೊತೆ ತನ್ನ ಊರಿನಲ್ಲಿ ಮಹಿಳೆಯರ ಮತ್ತು ಮಕ್ಕಳ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾಳೆ.

*************************

ಕಂಬೋಡಿಯ ದೇಶ ಅಂತರಿಕ ಯುದ್ಧದಲ್ಲಿ ಸುಮಾರು ೩ ದಶಕಗಳ ಕಾಲ ನಲುಗಿತು. ಆ ಸಮಯದಲ್ಲಿ ಸುಮಾರು ೧೫ ಲಕ್ಷ ಜನ ಹತರಾಗಿದ್ದರು. ದೇಶದ ತುಂಬೆಲ್ಲಾ ನೆಲಬಾಂಬ್‍(ಲ್ಯಾಂಡ್ ಮೈನ್)ಗಳನ್ನು ಹುದುಗಿಸಿ ಇಡಲಾಗಿತ್ತು.

ಮಿಲಿಟೆಂಟ್ ಪಡೆಗಳು ಕುಟುಂಬಗಳನ್ನು ಹತ್ಯೆ ಮಾಡಿ, ಚಿಕ್ಕ ಬಾಲಕರನ್ನು ಹೊತ್ಯೊಯ್ದು ಅವರಿಗೆ ತಮ್ಮ ಪಡೆಯಲ್ಲಿ ಸೇರಿಸಿಕೊಳ್ಳುತ್ತಿದ್ದರು. ಅಂತಹ ಒಬ್ಬ ಬಾಲ ಸೈನಿಕ - ಅಕಿರೋ. ೧೦ ವರ್ಷಕ್ಕೆ ಮಿಲಿಟೆಂಟ್ ಪಡೆಯಲ್ಲಿ ಬಲವಂತವಾಗಿ ಸೇರಿಸಲ್ಪಟ್ಟ ಅಕಿರೋ ತನ್ನ ಅರಿವು ಮೂಡುವ ವಯಸ್ಸಿಗಾಗಲೇ ಮಾಡಿದ ಹತ್ಯೆಗಳಿಗೆ ಲೆಕ್ಕವಿರಲಿಲ್ಲ.

ಕದನವೆಲ್ಲಾ ಮುಗಿದು ಶಾಂತಿ ಮರಳಿದಾಗ, ದೇಶಕ್ಕೆ ಕಾಡಿದ ಮುಂದಿನ ಸಮಸ್ಯೆ ನೆಲದಲ್ಲಿ ಹುದುಗಿಸಿಟ್ಟಿದ್ದ ನೆಲಬಾಂಬ್‍ಗಳು. ಸುಮಾರು ೨೦ ಸಾವಿರ ಜನ ನೆಲಬಾಂಬ್ ತುಳಿದು ಹತರಾಗಿದ್ದರು.

ಅಕಿರೋ ತಾನು ಅರಿವಿಲ್ಲದಂತೆ ಬಾಲ್ಯದಲ್ಲಿ ಮಾಡಿದ ಅಪರಾಧಗಳ ಪ್ರಾಯಶ್ಚಿತಕ್ಕೆ ಹುಡುಕಿಕೊಂಡ ಹಾದಿ - ನೆಲಬಾಂಬ್ ನಿಷ್ಕ್ರಿಯಗೊಳಿಸುವುದು. ಇಲ್ಲಿಯವರೆಗೆ ಅಕಿರೋ ಸುಮಾರು ೫೦ ಸಾವಿರ ನೆಲಬಾಂಬ್‍ಗಳನ್ನು ಪತ್ತೆ ಹಚ್ಚಿ ನಿಷ್ಕ್ರಿಯಗೊಳಿಸಿದ್ದಾನೆ. ತನ್ನದೇ ಒಂದು ತಂಡ ಕಟ್ಟಿಕೊಂಡು, ಈಡೀ ದೇಶದ ಪ್ರತಿ ಅಂಗುಲವನ್ನೂ ತಪಾಸಿಸುತ್ತಿದ್ದಾನೆ.

*****************************

ಥ್ಯಾಂಕ್ಸ್ ಗೀವಿಂಗ್ ಎಂಬುದು ಅಮೇರಿಕೆಯ ವಿಶಿಷ್ಟ ಆಚರಣೆ. ಪ್ರತಿ ವರ್ಷ ನವೆಂಬರ್ ಕೊನೆಯ ಗುರುವಾರ ಆಚರಿಸಲ್ಪಡುವ ಈ ಹಬ್ಬದ ಮೂಲ ಧೇಯೋದ್ದೇಶ ಹೆಸರೇ ಹೇಳುವಂತೆ - ವಂದನೆ ಅರ್ಪಿಸುವುದು. ಇಂತಹ ಥ್ಯಾಂಕ್ಸ್ ಗೀವಿಂಗ್ ದಿನ ’ಸಿಎನ್‍ಎನ್’ ಶುರುಮಾಡಿದ ವಿಭಿನ್ನ ಕಾರ್ಯಕ್ರಮ - ’ಸಿಎನ್‍ಎನ್ ಹೀರೋ’. ಪ್ರಪಂಚದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳನ್ನು ಗುರುತಿಸಿ ಅವರೆಲ್ಲರಿಗೂ ಕರೆದು ಸನ್ಮಾನ ಮಾಡುವುದು ಈ ಕಾರ್ಯಕ್ರಮದ ಉದ್ದೇಶ. ಕಳೆದ ಮೂರು ವರ್ಷದಿಂದಲೂ ನಡೆಯುತ್ತಿರುವ ಈ ಕಾರ್ಯಕ್ರಮ ವಿಶಿಷ್ಟ ಮತ್ತು ಸ್ಪೂರ್ತಿದಾಯಕ.

ಗೊಡಲುಪ್, ನಾರಾಯಣ್, ಸೂಸೆನ್, ಅಕಿರೋ - ಈ ಎಲ್ಲಾ ಅದ್ಭುತ ವ್ಯಕ್ತಿಗಳೆಲ್ಲರೂ ಈ ವರ್ಷದ ’ಸಿಎನ್‍ಎನ್ ಹೀರೊ’ ಗಳ ಪಟ್ಟಿಯಲ್ಲಿರುವವರು.

ತಮ್ಮ ಅವಿರತ ಪ್ರಯತ್ನದಿಂದ, ತಮ್ಮ ನಿಸ್ವಾರ್ಥ ಸೇವಾಮನೋಭಾವದಿಂದ ಸಮಾಜದ ಸ್ವಾಸ್ಥಕ್ಕಾಗಿ ಶ್ರಮಿಸುತ್ತಿರುವ ಈ ಹೀರೋಗಳನ್ನು ನೋಡಿ ಕಣ್ಣುಗಳು ತುಂಬಿ ಬಂದವು. ಮಾನವತೆ ಇನ್ನೂ ಉಸಿರಾಡುತ್ತದೆ ಎಂಬ ಸಮಾಧಾನ. ಯಾವಾಗಲೂ ನಾನು-ನನ್ನದೆನ್ನುವ ಸುಳಿಯಲ್ಲಿ ಇರುವ ನಾವುಗಳು ಈ ಮಟ್ಟಕ್ಕೆ ಏರುವುದು ಯಾವಾಗ ಎಂಬ ಪ್ರಶ್ನೆ ಕಾಡತೊಡಗಿತ್ತು.

(ಮುಂದಿನ ಕಂತಿನಲ್ಲಿ ಇನ್ನೂ ಹಲವಾರು ಮಾನವೀಯ-ಸ್ಪೂರ್ತಿದಾಯಕ ಕತೆಗಳು ಮತ್ತು ಉಳಿದ ಹೀರೋಗಳ ಪರಿಚಯ)

Sunday, October 31, 2010

ಎಲೆನ್

ಆ ಚಿಕ್ಕ ದೋಣಿಯಲ್ಲಿ ತನ್ನ ತಾಯಿ ಮತ್ತು ಇನ್ನು ಕೆಲವರೊಂದಿಗೆ ಕ್ಯೂಬಾವೆಂಬ ಆ ದ್ವೀಪದೇಶದಿಂದ ಪಲಾಯನ ಮಾಡಿ, ಅಮೇರಿಕೆಗೆ ಹೊರಟಾಗ, ಎಲೆನ್ ಎಂಬ ಹೆಸರಿನ ಹುಡುಗನಿನ್ನೂ ೫ ವರ್ಷದವನು. ಆದರೆ ದೋಣಿಯ ಯಂತ್ರ ಕೆಟ್ಟು, ನೀರು ತುಂಬಿಕೊಂಡು ಸಮುದ್ರದಲ್ಲಿ ಮುಳುಗತೊಡಗಿದಾಗ, ಆತನ ತಾಯಿ ಅವನನ್ನು ರಬ್ಬರ್ ಟ್ಯೂಬ್‍ವೊಂದರಲ್ಲಿ ತೇಲಿಬಿಡುತ್ತಾಳೆ. ದೋಣಿಯಲ್ಲಿದ್ದ ಎಲ್ಲರೂ ನೀರು ಪಾಲಾಗುತ್ತಾರೆ. ರಬ್ಬರ್ ಟ್ಯೂಬಿನಲ್ಲಿ ಸಮುದ್ರದಲ್ಲಿ ತೇಲುತ್ತಿದ್ದ ಬಾಲಕನನ್ನು ಅಮೇರಿಕನ್ ಮೀನುಗಾರರಿಬ್ಬರ ಕಣ್ಣಿಗೆ ಬಿದ್ದು, ಅಲ್ಲಿಂದ ಅಮೇರಿಕೆ ಗಡಿ ರಕ್ಷಣ ಪಡೆ ತಲುಪುತ್ತಾನೆ.

ಅಮೇರಿಕೆಯ ವಲಸೆ ಇಲಾಖೆ ಆ ಬಾಲಕನನ್ನು , ಅಮೇರಿಕೆದ ಮೀಯಾಮಿಯಲ್ಲಿಯೇ ಇದ್ದ ಆತನ ಹತ್ತಿರದ ಸಂಬಂಧಿಯೊಬ್ಬರ ವಶಕ್ಕೆ ನೀಡುತ್ತಾರೆ. ಈ ಹುಡುಗನ ತರವೇ, ಕ್ಯೂಬಾದಿಂದ ವಲಸೆ ಬಂದು ಅಮೇರಿಕದ ಆಶ್ರಯ ಕೋರಿ ಬಹಳಷ್ಟು ಕ್ಯೂಬನ್ ವಲಸೆಗಾರು ನೆಲವುರಿದ್ದು ಆ ಮೀಯಾಮಿಯಲ್ಲಿ. ಅವರೆಲ್ಲರ ಒಮ್ಮತ ಅಭಿಪ್ರಾಯದಂತೆ ಆ ಬಾಲಕನನ್ನು ತಮ್ಮೊಡನೆ ಅಮೇರಿಕದಲ್ಲೇ ಬೆಳಸುವುದೆಂದು ತೀರ್ಮಾನಿಸುತ್ತಾರೆ. ಅಮೇರಿಕದ ಸುದ್ಧಿಮಾಧ್ಯಮಗಳಲ್ಲಿ ಈ ಬಾಲಕನದೇ ಸುದ್ಧಿ.

ಇದಾಗಿ ಸ್ಪಲ್ಪ ದಿನಕ್ಕೆ ಕ್ಯೂಬಾದಿಂದ ಎಲೆನ್‍ನ ತಂದೆಯ ಪತ್ರ ಬರುತ್ತದೆ. ತನ್ನ ಮಗನನ್ನು ತನ್ನ ಇಚ್ಚೆಗೆ ವಿರುದ್ಧವಾಗಿ ತನ್ನ ಹೆಂಡತಿ ಕರೆದೊಯ್ಯದಳೆಂದು, ತನಗೆ ತನ್ನ ಮಗನನ್ನು ಒಪ್ಪಿಸಬೇಕೆಂದು ಮನವಿ ಮಾಡಿಕೊಂಡಿರುತ್ತಾನೆ. ಕ್ಯೂಬಾಕ್ಕೆ ಮರಳಿದರೆ ಆ ಹುಡುಗನಿಗೆ ಭವಿಷ್ಯವಿಲ್ಲವೆಂದು, ಆತನಿಗೆ ಅಮೇರಿಕೆದಲ್ಲಿಯೇ ಉಳಿಸಿಕೊಳ್ಳಬೇಕೆಂದು ಅಮೇರಿಕದ ಸಂಬಂಧಿಗಳ ವಾದ ಶುರುವಾಗುತ್ತದೆ.

ಕುಟುಂಬವೊಂದರ ವ್ಯಾಜ್ಯದಂತಿದ್ದ ಈ ಪ್ರಕರಣ, ಕ್ರಮೇಣ ಕ್ಯೂಬಾ-ಅಮೇರಿಕೆಯ ಪ್ರತಿಷ್ಠೆ ಪ್ರಶ್ನೆಯವರೆಗೆ ಬೆಳಯುತ್ತದೆ. ಹುಡುಗ ಸ್ಪಲ್ಪ ಸಮಯದಲ್ಲೇ ಸುದ್ಧಿಮಾಧ್ಯಮಗಳ ಪ್ರಿಯವಸ್ತುವಾಗುತ್ತಾನೆ. ಅನೇಕ ಅನಿರೀಕ್ಷಿತ ಸವಲತ್ತುಗಳು-ತಲೆನೋವುಗಳು ಅವನೆಡೆಗೆ ಬರತೊಡಗುತ್ತವೆ. ಒಂದು ದಿನ, ಎಲೆನ್ ಡಿಸ್ನಿಲ್ಯಾಂಡ್‍ ನೋಡಲು ಹೋದರೆ, ಮಗದೊಂದು ದಿನ ರಾಜಕೀಯದವರು ಎಲೆನ್‍ನನ್ನು ನೋಡಲು ಬರುತ್ತಾರೆ.

ಪ್ರಕರಣ ಕೋರ್ಟಿನ ಮೆಟ್ಟಲೇರಿ, ಮಗುವಿಗೆ ಅಮೇರಿಕ ಆಶ್ರಯ ನೀಡಬೇಕೆಂಬ ವಾದವನ್ನು ನ್ಯಾಯಾಲಯ ತಳ್ಳಿ ಹಾಕಿ, ಆತನನ್ನು ತಂದೆಯ ವಶಕ್ಕೆ ಒಪ್ಪಿಸಬೇಕೆಂದು ಆದೇಶಿಸುತ್ತದೆ. ಮೀಯಾಮಿಯ ಕ್ಯೂಬನ್ ವಲಸೆಗಾರರು ಇದ್ದಕ್ಕೆ ಭಾರೀ ವಿರೋಧ ವ್ಯಕ್ತಪಡಿಸುತ್ತಾರೆ. ಅಮೇರಿಕೆದ ಸಂಬಂಧಿಗಳು ನ್ಯಾಯಾಲಯದ ಮಾತನ್ನು ನಿರಾಕರಿಸಿ ಮಗುವನ್ನು ಮತ್ತೆ ಕ್ಯೂಬಾಕ್ಕೆ ಮರಳಿಸಲಿಕ್ಕೆ ಬಿಡುವುದಿಲ್ಲವೆಂದು ಪಟ್ಟುಹಿಡಿಯುತ್ತಾರೆ.
ಎಲ್ಲಾ ಸಂಧಾನಗಳು ವಿಫಲವಾದಾಗ, ಕಡೆಗೆ ಮಗುವನ್ನು ಕರೆತರೆಲು ಕ್ಷಿಪ್ರ ಪಡೆಯನ್ನು ನಿಯೋಜಿಸಲಾಗುತ್ತದೆ. ಅಕ್ಷರಶಃ ಮಗುವಿದ್ದ ಮನೆ ರಣರಂಗವಾಗುತ್ತದೆ. ಕ್ಯೂಬನ್ ವಲಸಿಗಾರರು ತೀವ್ರ ಪ್ರತಿರೋಧವೊಡ್ಡುತ್ತಾರೆ. ಕಡೆಗ ಕ್ಷಿಪ್ರ ಪಡೆ ಮನೆಯೊಳಗೆ ನುಗ್ಗಿ ಎಲೆನ್‍ನನ್ನು ಕರೆತರುತ್ತಾರೆ.

ಎಲೆನ್‍ನನ್ನು ವಶಕ್ಕೆ ಪಡೆದು ಅವನ ತಂದೆ ಮರಳಿ ಕ್ಯೂಬಾಕ್ಕೆ ಕರೆದೊಯ್ಯದಾಗ, ಆ ದೇಶದಾಂತ್ಯ ಭಾರೀ ಸಂಭ್ರಮ. ಮಗು ಕ್ಯೂಬಾ ಸರ್ಕಾರದ ಕಣ್ಮಣಿಯಾಗಿ ಬಿಡುತ್ತದೆ. ಖುದ್ದು ಕ್ಯೂಬಾದ ಅಧ್ಯಕ್ಷ ಫಿಡಲ್ ಕ್ಯಾಸ್ಟ್ರೋ ಎಲೆನ್ ಹುಟ್ಟುಹಬ್ಬಕ್ಕೆ ಆಗಮಿಸುತ್ತಾನೆ.

ಒಂದು ಕುಟುಂಬದ ಕಲಹವಾಗಿದ್ದ ಇದು, ಎರಡು ದೇಶಗಳ ನಡುವೆ ಚಕಮಕಿಗೆ ಕಾರಣವಾದದ್ದು ಹೇಗೆ ?

ಕ್ಯೂಬಾ ಮತ್ತು ಅಮೇರಿಕೆದ್ದು ಬಹಳ ಹಿಂದಿನಿಂದಲೂ ಸಂಘರ್ಷ ನಡದೇ ಇದೆ. ಕ್ಯೂಬಾದಲ್ಲಿ ರಕ್ತಕ್ರಾಂತಿ ನಡೆದು, ಫೀಡಲ್ ಕ್ಯಾಸ್ಟ್ರೋ ನೇತೃತ್ವದಲ್ಲಿ ಕಮ್ಯುನಿಷ್ಟ್ ಅಳ್ವಿಕೆ ಬಂದಾಗಿನಿಂದ, ಅಮೇರಿಕ ಆ ಸರ್ಕಾರ ಉರುಳಿಸಲು ಸತತ ಪ್ರಯತ್ನಪಟ್ಟಿತ್ತು. ಅದು ೧೯೬೨, ಶೀತಲ ಸಮರ ಪರಾಕಾಷ್ಟೆ ಮುಟ್ಟಿದ ವರ್ಷ. ಈಡೀ ಪ್ರಪಂಚ, ಅಮೇರಿಕ ಮತ್ತು ರಷ್ಯಾ ಎಂಬ ಎರಡು ಶಕ್ತಿಗಳಲ್ಲಿ ಹಂಚಿಹೋಗಿ, ನ್ಯೂಕ್ಲಿಯರ್ ಮಾರಕಾಸ್ತ್ರಗಳ ಪೈಪೋಟಿ ನಡೆಯುತ್ತಿದ್ದ ಸಮಯ. ಅಮೇರಿಕದ ಹಿತ್ತಲಲ್ಲೇ ಇದ್ದ ಕ್ಯೂಬಾವನ್ನು ರಷ್ಯಾ ತನ್ನ ಗುಂಪಿಗೆ ಸೆಳೆದುಕೊಂಡಿತು. ರಷ್ಯ ತನ್ನ ನ್ಯೂಕ್ಲಿಯರ್ ಕ್ಷಿಪಣಿ ನೆಲೆಗಳನ್ನು ಕ್ಯೂಬಾದಲ್ಲಿ ಸ್ಥಾಪಿಸಿತ್ತು. ಅಲ್ಲಿಂದ ಹಾರಿಸಿದ ಕ್ಷಿಪಣಿಗಳು ಈಡೀ ಅಮೇರಿಕೆಯನ್ನು ಧ್ವಂಸ ಮಾಡುವ ಶಕ್ತಿಹೊಂದಿದ್ದವು.

ಜಗತ್ತು ಅಣುಯುದ್ಧದ ಅಂಚಿಗೆ ಬಂದು ನಿಂತಿತ್ತು. ಅದೃಷ್ಟವಷಾತ್ ಸಂಧಾನ ಸಫಲವಾಗಿ ರಷ್ಯಾ ತನ್ನ ಕ್ಷಿಪಣಿಗಳನ್ನು ಕ್ಯೂಬಾದಿಂದ ಹಿಂದೆಗೆತಿತ್ತು. ಅಮೇರಿಕಾ ಕ್ಯೂಬಾದ ಮೇಲೆ ದಾಳಿ ಮಾಡುವುದಿಲ್ಲವೆಂದು ಘೋಷಿಸಿತ್ತು. ಅಂದಿನಿಂದ ಇಲ್ಲಿಯವರೆಗೆ ಕ್ಯೂಬಾ ಮತ್ತು ಅಮೇರಿಕೆಯ ಸಂಬಂಧ ಅಷ್ಟಕಷ್ಟೇ. ಅವಕಾಶ ಸಿಕ್ಕಾಗಲೆಲ್ಲಾ ಒಬ್ಬರೊನ್ನಬ್ಬರು ಹಣಿಯುವ ತವಕ. ಬಾಲಕ ಎಲೆನ್ ಪ್ರಕರಣ, ಅದಕ್ಕೆ ಒಂದು ಚಿಕ್ಕ ಉದಾಹರಣೆ ಅಷ್ಟೇ

ಕ್ಯೂಬಾದ ಜನರ ಸ್ಥಿತಿಗತಿ ಅಷ್ಟೇನೂ ಚೆನ್ನಾಗಿಲ್ಲವೆನ್ನುತ್ತವೆ ಮಾಧ್ಯಮಗಳು. ಅರ್ಥಿಕ ಸಮಸ್ಯೆಗಳು- ಸರ್ಕಾರದ ಅತಿರೇಕಗಳ ಬಗ್ಗೆ ಕ್ಯೂಬಾ ವಾಸಿಗಳಲ್ಲಿ ಅಸಮಾಧಾನವಿದೆ. ಹಾಗೆಯೇ ಭವಿಷ್ಯದ ಬಗ್ಗೆ ಚಿಂತೆಯಿದೆ. ಅವಕಾಶ ದೊರೆತಾಗ ಕ್ಯೂಬಾದಿಂದ ತಪ್ಪಿಸಿಕೊಂಡು ಅಮೇರಿಕೆಗೆ ತಲುಪಿ ಹೊಸ ಜೀವನ ಕಂಡುಕೊಳ್ಳುವುದು ಅನೇಕ ಕ್ಯೂಬನ್‍ರ ಹಂಬಲವಂತೆ.


ಎಲೆನ್ ಕ್ಯೂಬಾಕ್ಕೆ ಮರಳಿ ಹೋದಾಗ ಆತನಿಗೆ ೫ ವರ್ಷ. ನಂತರ ಅವನನ್ನು ಕ್ಯೂಬಾ ಸರ್ಕಾರ, ಮಾಧ್ಯಮಗಳಿಂದ ದೂರವೇ ಇಟ್ಟಿತ್ತು. ಏನಾದ ಆ ಹುಡುಗ ಎಂಬ ಪ್ರಶ್ನೆ ತುಂಬಾ ಜನರಲ್ಲಿತ್ತು. ಹತ್ತು ವರ್ಷದ ನಂತರ, ಕಳೆದ ತಿಂಗಳು ಕ್ಯೂಬಾದಿಂದ ಎಲೆನ್‍ನ ಹೊಸ ಪೋಟೋ-ಸುದ್ಧಿ ಬಂದಿವೆ. ಈಗ ೧೫ ವರ್ಷದ ಎಲೆನ್ ಹೈಸ್ಕೂಲ್ ಮುಗಿಸಿ, ಮಿಲಿಟರಿ ಶಾಲೆಯೊಂದಕ್ಕೆ ಸೇರಿದ್ದಾನೆ. ಹಾಗೆಯೇ ಯುವ ಕಮ್ಯುನಿಷ್ಟ್ ಪಕ್ಷದ ಸದಸ್ಯತ್ವ ಪಡೆದಿದ್ದಾನೆ.

ಇಲ್ಲಿಯವರೆಗೆ ಎಲೆನ್ ಸಾಗಿದ ಹಾದಿ ಬಹಳ ವಿಭಿನ್ನವಾದದ್ದು.

ಸನ್ನಿವೇಶ-ಸಮಯ ಯಾರನ್ನು ಎಲ್ಲೆಲ್ಲಿ ಕರೆದೊಯ್ಯುವುದೋ ಏನೋ...

Thursday, September 30, 2010

ಜೋನ್ಸ್ ಟೌನ್

ಬಹುಷಃ ಮನುಷ್ಯನ ಮನಸ್ಸಿನಷ್ಟು ನಿಗೂಢವಾದದ್ದು ಇನ್ನೊಂದು ಈ ಜಗತ್ತಿನಲ್ಲಿ ಇರಲಿಕ್ಕಿಲ್ಲ.

ಚಂದ್ರಯಾನ, ಎವೆರಷ್ಟ್ ಆರೋಹಣದಂತಹ ಊಹೆಗೆ ಮೀರಿದ ಅಸಾಧ್ಯತೆಗಳನ್ನು ಸಾಧಿಸಿದ ಮನಸ್ಸುಗಳು ಹಲವು.

ಆದರೆ ತರ್ಕಕ್ಕೆ ನಿಲುಕದ ಮನಸ್ಸುಗಳು ಕೆಲವು.ಅಂತಹ ವಿಚಿತ್ರ ಮನಸ್ಸುಗಳ ಒಂದು ಘೋರ ಕತೆ ಇತಿಹಾಸದ ಪುಟಗಳಿಂದ.

ಅಂದು ನವೆಂಬರ್ ೧೮, ೧೯೭೮. ೯೧೩ ಜನ ಅಮೇರಿಕನ್‍ರು ಗಯಾನದ ಕಾಡಿನಲ್ಲಿ ’ಸಾಮೂಹಿಕ ಆತ್ಮಹತ್ಯೆ’ ಮಾಡಿಕೊಂಡಿದ್ದಾರೆಂಬ ಭೀಕರ ಸುದ್ಧಿ ಎಲ್ಲೆಡೆ ತಲ್ಲಣವುಂಟು ಮಾಡಿತ್ತು. ಸತ್ತ ಅವರೆಲ್ಲರೂ ’ಪೀಪಲ್ಸ್ ಟೆಂಪಲ್’ ಹೆಸರಿನ ವಿಲಕ್ಷಣ ಗುಂಪೊಂದಕ್ಕೆ ಸೇರಿದವರಾಗಿದ್ದರು.

’ಜಿಮ್ ಜೇಮ್ಸ್’ ಹೆಸರಿನ ಆ ವ್ಯಕ್ತಿ ವರ್ಣಭೇದದ ದಿನಗಳಲ್ಲಿ, ೧೯೬೩ರಲ್ಲಿ ಎಲ್ಲಾ ವರ್ಣದವರನ್ನು ಸೇರಿಸಿ ಯಾವಾಗ ’ಪೀಪಲ್ಸ್ ಟೆಂಪಲ್’ ಹೆಸರಿನ ಚರ್ಚ್ ಶುರುಮಾಡಿದನೋ, ಅಲ್ಲಿಂದ ಈ ಕತೆ ತೆರೆದುಕೊಳ್ಳುತ್ತದೆ. ಜಿಮ್ ಜೇಮ್ಸ್ ಸಮಾಜದಲ್ಲಿ ತುಳಿತಕ್ಕೆ ಒಳಗಾದವರನ್ನು, ಜೀವನದಲ್ಲಿ ತುಂಬಾ ಹತಾಶೆಗೊಳಗಾದವರನ್ನು ತನ್ನ ಚರ್ಚ್‍ಗೆ ಸೆಳೆದುಕೊಳ್ಳುತ್ತಾನೆ. ಇದರ ಜೊತೆಗೆ ಸ್ಪರ್ಶ-ಪ್ರಾರ್ಥನೆಯಿಂದ ಕ್ಯಾನ್ಸರ್ ಗುಣ ಪಡಿಸುವುದು-ಅಂಧರಿಗೆ ಕಣ್ಣು ಬರುವಂತೆ ಮಾಡುವ ವಿದ್ಯೆ ತನಗಿದೆಯೆಂದು ಅಲ್ಲಿಂದೊಷ್ಟು ಹಣ ಮಾಡುತ್ತಾನೆ. ಹಣ ಬರತೊಡಗಿದನೆ ಸ್ಥಳೀಯ ರಾಜಕಾರಣಿಗಳ ಸಾಂಗತ್ಯ ಬೆಳಿಸಿಕೊಂಡು, ಎಲ್ಲರಿಗೂ ಬೇಕಾದವನಾಗುತ್ತಾನೆ. ನೋಡುನೋಡುತ್ತಲೇ ಅವನ ಚರ್ಚ್ ಇಂಡೀಯಾನಪೋಲಿಸ್‍ನಲ್ಲಿ ಬೆಳಯತೊಡಗುತ್ತದೆ. ಅದರ ಜೊತೆಗೆ ಅವನ ಹುಚ್ಚಾಟಗಳು ಬೆಳೆಯತೊಡಗುತ್ತವೆ.

ಪೀಪಲ್ಸ್ ಟೆಂಪಲ್‍ಗೆ ಸೇರಬಯಸುವವ ಸದಸ್ಯರಿಗೆ ತಮ್ಮ ನಿಷ್ಠೆ ಪ್ರದರ್ಶಿಸಲು ಕಠಿಣವಾದ ಪರೀಕ್ಷೆಗಳಿರುತ್ತವೆ.ಹೊಸದಾಗಿ ಸೇರಿದವರು ಚರ್ಚ್‍ಗೆ ಬೇಕಾದರೆ ವಂತಿಗೆ ನೀಡಬಹುದಾಗಿರುತ್ತದೆ.ಹೊಸ ಸದಸ್ಯರು ಕಾಲ ಕಳೆದಂತೆ ಚರ್ಚ್‍ಗೆ ಕೊಡುವ ವಂತಿಗೆಯೂ ಹೆಚ್ಚಾಗುತ್ತ ಹೋಗುತ್ತದೆ.ಕೊನೆಯ ಹಂತದಲ್ಲಿ ಅನೇಕ ಸದಸ್ಯರು ತಮ್ಮ ಆಸ್ತಿ-ಹಣ ಎಲ್ಲವನ್ನೂ ಜಿಮ್‍ಗೆ ನೀಡಿ ಅವನ ಇಚ್ಚೆಯಂತೆ ನಡೆಯುತೊಡಗುತ್ತಾರೆ.ಜಿಮ್ ಅವರಿಗೆಲ್ಲಾ ಚಿಂತೆಗಳಿಲ್ಲದ-ಕಷ್ಟನಷ್ಟಗಳಿಲ್ಲದ ಸಮಾಜವಾದದ ಕನಸೊಂದನ್ನು ಕಟ್ಟಿಬಿಟ್ಟಿರುತ್ತಾನೆ. ಸದಸ್ಯರು ತಮ್ಮ ವೈಯುಕ್ತಿಕ ದುರ್ಬಲತೆಗಳನ್ನು ಅವನೊಂದಿಗೆ ಹಂಚಿಕೊಂಡು ಇರುತ್ತಾರೆ. ಹೀಗೆ ಅರ್ಥಿಕವಾಗಿ-ಮಾನಸಿಕವಾಗಿ ಜಿಮ್ ಮೇಲೆ ಅವಲಂಬಿತವಾದ ಒಂದು ದೊಡ್ಡ ಪಡೆಯೇ ತಯಾರಾಗುತ್ತದೆ.

ಯಾವಾಗ ಪೀಪಲ್ಸ್ ಟೆಂಪಲ್‍ನ ವಿಲಕ್ಷಣತೆಯ ಬಗ್ಗೆ ಇಂಡೀಯಾನಪೊಲಿಸ್‍ನಲ್ಲಿ ಸುದ್ಧಿಮಾಧ್ಯಮಗಳು ಮಾತಾಡತೊಡಗುತ್ತವೋ,ಜಿಮ್ ಅಲ್ಲಿಂದ ಕ್ಯಾಲಿಪೋರ್ನಿಯಾಕ್ಕೆ ತನ್ನ ಶಿಷ್ಯರೊಂದಿಗೆ ವರ್ಗವಾಗುತ್ತಾನೆ. ಸ್ಯಾನ್‍ಪ್ರಾನ್ಸಿಸ್ಕೊದ ತನ್ನದೇ ಒಂದು ಚಿಕ್ಕ ಪ್ರದೇಶದಲ್ಲಿ ಚಟುವಟಿಗೆಗಳು ಮುಂದುವರೆಯುತ್ತವೆ. ಸ್ಯಾನ್‍ಪ್ರಾನ್ಸಿಸ್ಕೊದ ಮೇಯರ್ ಚುನಾವಣೆಯಲ್ಲಿ ಸಾಕಷ್ಟು ಹಣ ಸಹಾಯ ಮಾಡಿ ಅಲ್ಲಿನವರಿಗೆ ಪ್ರಿಯವಾಗುತ್ತಾನೆ. ಅಷ್ಟೇ ಅಲ್ಲದೇ ಆಗೀನ ಅಮೇರಿಕ ಅಧ್ಯಕ್ಷರ ಚುನಾವಣೆಯ ಸಂದರ್ಭದಲ್ಲಿ ಜಿಮ್ಮಿ ಕಾರ್ಟರ್‌ಗೆ ತನ್ನ ಬೆಂಬಲ ಘೋಷಿಸಿ, ಅದಕೋಸ್ಕರ ದೇಣಿಗೆ ಸಂಗ್ರಹದಲ್ಲೂ ನೆರವಾಗುತ್ತಾನೆ.

ಇದೆಲ್ಲದರ ಮಧ್ಯೆ ಪೀಪಲ್ಸ್ ಟೆಂಪಲ್‍ನಿಂದ ಹೊರಗೆ ಬಂದವರು ಮೆಲ್ಲಗೆ ಹೊರಜಗತ್ತಿಗೆ ಅದರ ವಿರುದ್ಧ ಮಾತಾಡತೊಡಗುತ್ತಾರೆ. ಗುಂಪಿನಿಂದ ಹೊರಬಂದವರು ಕೆಲವರು ನಿಗೂಢವಾಗಿ ಸತ್ತಾಗ ಎಲ್ಲೆಡೆ ’ಪೀಪಲ್ಸ್ ಟೆಂಪಲ್’ ಕೈವಾಡ ಕೇಳಿಬರತೊಡಗುತ್ತದೆ. ಹಾಗೇ ಸದಸ್ಯರ ಕುಟುಂಬದವರು ತಮಗೆ ತಮ್ಮ ಮಗ/ಮಗಳು/ಗಂಡ/ಹೆಂಡತಿ ಜಿಮ್‍ನಿಂದ ಬಿಡಿಸಿಕೊಡಬೇಕೆಂದು ಕೋರ್ಟ್‍ಗಳ ಮೊರೆ ಹೋಗುತ್ತಾರೆ. ಇಡೀ ಮಾಧ್ಯಮವೇ ಯಾವಾಗ ಜಿಮ್-ಪೀಪಲ್ಸ್ ಬಗ್ಗೆ ಕೂಗತೊಡಗುತ್ತದೋ, ಜಿಮ್‍ನ ಹೊಸ ಯೋಜನೆ ಶುರುವಾಗುತ್ತದೆ.

ದಕ್ಷಿಣ ಅಮೇರಿಕಾ ಖಂಡದ ಗಯಾನ ಹೆಸರಿನ ದೇಶದ ಸರ್ಕಾರದೊಡನೆ ಹೇಗೋ ಒಪ್ಪಂದ ಕುದುರಿಸಿ, ಅಲ್ಲಿ ಸುಮಾರು ೧೭೦ ಎಕರೆ ಕಾಡನ್ನು ಜಿಮ್ ಕೊಂಡುಕೊಳ್ಳುತ್ತಾನೆ. ಸ್ಯಾನ್‍ಪ್ರಾನ್ಸಿಸ್ಕೊದ ಸಹವಾಸ ಸಾಕು ಮಾಡಿ, ಜಿಮ್ ತನ್ನ ಶಿಷ್ಯಕೋಟಿಯೊಡನೆ ಗಯಾನಕ್ಕೆ ಹೊರಡುತ್ತಾನೆ. ಹೊಸ ದೇಶದಲ್ಲಿ, ಕಗ್ಗಾಡಿನಲ್ಲಿ ತಮ್ಮದೇ ಲೋಕ ಕಟ್ಟಿಕೊಳ್ಳುವ ಕನಸು ತೋರಿಸುತ್ತಾನೆ. ಅವರೆಲ್ಲರು ಕೈಕಾರ್ಯ ಮಾಡಿ ಆ ಕಾಡಿನ ಮಧ್ಯೆ ಚಿಕ್ಕ ಪಟ್ಟಣವನ್ನು ಕಟ್ಟುತ್ತಾರೆ. ಅದಕ್ಕೆ ’ಜೋನ್ಸ್ ಟೌನ್’ ಎಂಬ ಹೆಸರನ್ನೂ ಇಡುತ್ತಾರೆ.

ಸುದ್ಧಿ ಮಾಧ್ಯಮ-ಸರಕಾರದ ಕಣ್ಣಿಂದ ದೂರವಾದ ನಂತರ ಜಿಮ್ ತನ್ನ ಪಟ್ಟಣದಲ್ಲಿ ಸಮಾಜವಾದ ಜೀವನದ ಪ್ರಯೋಗಗಳನ್ನು ಶುರುಮಾಡುತ್ತಾನೆ. ಎಲ್ಲರೂ ದುಡಿದು ತಿನ್ನುವುದು, ಸಮಾಜದ ಒಳಿತಿಗಾಗಿ ಎಲ್ಲರೂ ಶ್ರಮಿಸುವುದು ಎಲ್ಲವೂ ಮೊದಮೊದಲು ಚೆನ್ನಾಗೇ ನಡೆಯುತ್ತದೆ. ಕೆಲ ಸಮಯದ ನಂತರ ಸದಸ್ಯರ ಕುಟುಂಬಗಳು ಅಮೇರಿಕೆಯಲ್ಲಿ ಮತ್ತೆ ಪೀಪಲ್ಸ್ ಬಗ್ಗೆ ಅಕ್ಷೇಪಗಳನ್ನು ಎತ್ತತೊಡಗುತ್ತಾರೆ. ಕೆಲ ಸದಸ್ಯರನ್ನು ಅವರ ಇಚ್ಚೆಗೆ ವಿರುದ್ಧವಾಗಿ ಗಯಾನಕ್ಕೆ ಕರೆದೊಯ್ಯಲಾಗಿದೆಯೆಂಬ ಅರೋಪವು ನಡೆಯುತ್ತದೆ.

ಈ ಕಡೆ ಜಿಮ್‍ನಿಂದ ತನ್ನ ಹಿಂಬಾಲಕರಿಗೆ ಮತ್ತೆ ಅಮೇರಿಕೆಗೆ ಮರಳಿ ಅಲ್ಲಿ ತಮಗೆ ಆಗದವರ ಜೊತೆ ಬಾಳುವುದಕ್ಕಿಂತ ತಾವಿರುವ ಸ್ಥಳದಲ್ಲಿ ಕಷ್ಟಪಟ್ಟು ಬದುಕುವುದೇ ಲೇಸು ಎನ್ನುವ ನಿತ್ಯ ಪ್ರವಚನ ನಡದೇ ಇರುತ್ತದೆ. ಜಿಮ್‍ನನ್ನು ದೇವರೆಂದೇ ಭಾವಿಸುವ ಆ ಶಿಷ್ಯಪಡೆ, ಅಕ್ಷರಶ: ಜಿಮ್ ಹೇಳಿದ್ದನ್ನೇ ಕೇಳುತ್ತದೆ. ಕಡೆಕಡೆಗೆ ಸಂದರ್ಭ ಬಂದರೆ ತಾವೆಲ್ಲರೂ ಒಟ್ಟಿಗೆ ಮರಣಿಸಲು ತಯಾರಿರಬೇಕೆಂದು ಜಿಮ್‍ ಬ್ರೆನ್‍ವಾಶ್ ನಡೆಸಿರುತ್ತಾನೆ.

ಇತ್ತ ಕುಟುಂಬದವರ-ಸುದ್ಧಿಮಾಧ್ಯಮದವರ ಅಕ್ಷೇಪಗಳು ಹೆಚ್ಚಾದಾಗ,ಅಮೇರಿಕದ ಸಂಸತ್ ಸದಸ್ಯ ’ಲಿಯೋ ರಯಾನ್’, ಪ್ರತ್ಯಕ್ಷವಾಗಿ ನೋಡಲು ಗಯಾನಕ್ಕೆ ಬರುತ್ತಾನೆ. ರಯಾನ್ ಭೇಟಿಯ ಸಮಯದಲ್ಲಿ, ಜಿಮ್‍ನ ಗುಂಪಿನಿಂದ ಹಲವಾರು ಪೀಪಲ್ಸ್ ಬಿಟ್ಟು ಮರಳಿ ಅಮೇರಿಕೆಗೆ ಬರುವ ಆಶಯ ವ್ಯಕ್ತಪಡಿಸುತ್ತಾರೆ. ರಯಾನ್ ಅವೆರಲ್ಲರನ್ನೂ ಕರೆದುಕೊಂಡು ವಿಮಾನ ಹತ್ತುತ್ತಿದ್ದಂತೆ ಜಿಮ್ ಕಡೆಯ ಬಂದೂಕಧಾರಿಗಳು ರಯಾನ್ ಸಮೇತವಾಗಿ ೫-೬ ಜನರನ್ನು ಕೊಲ್ಲುತ್ತಾರೆ.

ನಂತರ ನಡೆಯುವುದೇ ವಿವೇಚನೆಗೆ ನಿಲುಕದ ಘಟನೆ..

ರಯನ್ ಮತ್ತು ಅಮೇರಿಕದ ತಂಡವನ್ನು ತಾವು ಕೊಂದ ನಂತರ,ಜಿಮ್ ತನ್ನ ಎಲ್ಲಾ ಅನುಮಾಯಿಗಳಿಗೆ ಸಭೆಗೆ ಕರೆದು ಹೇಳುತ್ತಾನೆ.ಅಮೇರಿಕ ಸರಕಾರ ತಮ್ಮೆಲ್ಲರನ್ನೂ ಹುಡುಕಿ ಕೊಲ್ಲಿಸುತ್ತೆಂದು,ಅದಕ್ಕಿಂತ ಉತ್ತಮ ಮಾರ್ಗವೆಂದರೆ ಜೀವ ತೊರೆದು ಕ್ರಾಂತಿ ಮಾಡುವುದೆಂದು ಘೋಷಿಸುತ್ತಾನೆ. ಅದಾಗಿ ಕೆಲ ಸಮಯದಲ್ಲಿ ಸೈನಾಯಿಡ್ ಮಿಶ್ರಿತ ಪಾನೀಯವನ್ನು ಸಭೆಯಲ್ಲಿದ್ದವರೆಲ್ಲಾ ಒಟ್ಟಾಗಿ ಕುಡಿಯುತ್ತಾರೆ. ಕೆಲವು ನಿಮಿಷಗಳಲ್ಲೇ ಅಲ್ಲಿದ್ದ ೯೧೪ ಜನ ಜೀವ ಚೆಲ್ಲುತ್ತಾರೆ. ಅವರಲ್ಲಿ ೨೭೬ ಮಕ್ಕಳು...

ಆ ಸಾಮೂಹಿಕ ಆತ್ಮಹತ್ಯೆ ನಡೆದು ಸುಮಾರು ೩೦ ವರ್ಷಗಳೇ ಕಳೆದಿದೆ. ಅಷ್ಟೊಂದು ಜನ ಅದು ಹೇಗೆ ಇಂತಹ ಕಾರ್ಯಕ್ಕೆ ಶರಣಾದರು ಎಂಬ ಪ್ರಶ್ನೆ ಈಗಲೂ ಇದೆ. ಅಷ್ಟೊಂದು ಜನರ ಮನವನ್ನು ಸೂತ್ರದಾರನಂತೆ ಜಿಮ್ ಹೇಗೆ ನಿಯಂತ್ರಿಸಿದ್ದು ಎಂಬುದು ಯಕ್ಷಪ್ರಶ್ನೆ.

ಸಮಾಜ ಜೀವಿಗಳಾದ ಮಾನವರು ,ತಮಗಿಂತ ದೊಡ್ಡದಾದ ಒಂದು ಶಕ್ತಿ-ಪಂಗಡ-ವ್ಯಕ್ತಿಯ ಮೂಲಕ ತಮ್ಮ ಗುರುತನ್ನು ಕಂಡುಕೊಳ್ಳುವ ಪ್ರಯತ್ನ ನಿರಂತರ. ಈ ತರದ ಆಶಯಗಳನ್ನು, ಜನರ ದುರ್ಬಲತೆಗಳನ್ನು ಉಪಯೋಗಿಸಿಕೊಳ್ಳುವ ಚಾಣಾಕ್ಷರು ಯಾವಾಗಲೂ ಇದ್ದೇ ಇರುತ್ತಾರೆ.

ಮನಸ್ಸಿಗಿಂತ ದೊಡ್ಡ ಮಿತ್ರ-ಶತ್ರು ಇನ್ನ್ಯಾವುದಿದೆ ?

Sunday, September 05, 2010

ಗುರವೇ ನಮಃ

ಗಾಂಧೀ ಸರ್ಕಲ್ ದಾಟಿ ಸ್ವಲ್ಪ ಮುಂದೆ ಹೋಗಿ ಅಂಡರ್‌ಬ್ರೀಡ್ಜ್ ಕೆಳಗೆ ಹಾದು, ಏರಿನಲ್ಲಿ ಸೈಕಲ್‍ ತುಳಿದರೆ ಸಿಗುವುದು ಶಾಲೆ. ಈ ಏರಿನಲ್ಲೇ ಆ ಲೂನ ಎದುಸಿರು ಬಿಡುತ್ತ ಹೋಗಲಿಕ್ಕೆ ಹರಸಾಹಸ ಪಡುತ್ತಿದ್ದರೆ, ಲೂನ ಪಕ್ಕದಲ್ಲಿಯೇ ಶರವೇಗದಲ್ಲಿ ಸೈಕಲ್ ತುಳಿಯುತ್ತಾ ’ಗಣಪ’ ಎಂದು ಕರೆದು ಮಾಯವಾಗುತ್ತಿದ್ದ ಹುಡುಗರು.ಲೂನ ಶಾಲೆ ಮುಂದೆ ನಿಂತು, ಅಷ್ಟರಲ್ಲಿ ಪ್ರಾರ್ಥನೆ ಶುರುವಾಗಿ, ನಂತರ ತರಗತಿಗೆ ಡೊಳ್ಳು ಹೊಟ್ಟೆ ’ಗಣಪ’ ಬಂದಾಗ ಹುಡುಗರಲ್ಲಿ ಮುಂದೇನಾಗುತ್ತೆ ಎಂಬುದು ಖಾತ್ರಿಯಾಗಿರುತಿತ್ತು. ’ಯಾವನೋ ಆವನು ಗಣಪ ಅಂತದ್ದು ಓಡಿ ಬಂದವನು, ನೀವಾಗಿ ಬರ್ತಿರೋ ಇಲ್ಲಾ ನಾನೇ ಎಬ್ಬಿಸಬೇಕಾ ’. ಮಾಮೂಲಿಯಾಗಿ ಇದೇ ಕೆಲಸ ಮಾಡ್ತಿದ್ದ ಗುಂಪಿನಿಂದ ಒಂದಿಬ್ಬಿರು ಹುಡುಗರು ತರಗತಿಯಿಂದ ಹೊರಕ್ಕೆ.

ಅದೇಗೆ ಹಾಗೆ ಏನೋ, ಹೈಸ್ಕೂಲ್ ಶಾಲೆಯ ಎಲ್ಲಾ ಸರ್‌ಗಳಿಗೂ ಒಂದು ಸಂಕ್ಷಿಪ್ತ ಹೆಸರಿತ್ತು. ಸಿ.ಜಿ.ಕೆ, ಕೆ.ಜಿ.ಕೆ, ಅರ್.ಎನ್.ಅರ್, ಎಲ್.ಎಸ್.ಪಿ, ಅರ್.ಅರ್,ವಿ.ಎಸ್.ಎಚ್,ಜಿ.ಎನ್.ಜಿ, ಎಮ್.ಜೆ.ಜ... ತುಂಬಾ ದಿವಸದವರೆಗೆ ಅವರ ಪೂರ್ತಿ ಹೆಸರೇನು ಅಂತ ಗೊತ್ತೇ ಇರಲಿಲ್ಲ. ಇನ್ನು ಕೆಲವರದು ಈಗಲೂ ಗೊತ್ತಿಲ್ಲ.

***************

ಆಗಿನ್ನು ಶಾಲೆ ಸೇರಿದ ಸಮಯವಿರಬೇಕು. ಶಾಲೆ ವಾತಾವರಣ ಹೊಸದು. ನಗುಮುಖದಿಂದ ಯಾವಾಗಲೂ ಅಮ್ಮನ ತರ ಮಾತಾಡಿಸುತ್ತಿದ್ದ ಉಮ ಟೀಚರ್. ಶಾಲೆಯಿಂದ ಮಕ್ಕಳನ್ನು ಕರೆದೊಯ್ಯಲು ಬರುತ್ತಿದ್ದ ಅಪ್ಪ-ಅಮ್ಮಂದಿರು ಬರುವುದು ತಡವಾದರೆ, ಅವರು ಬರುವ ತನಕ ಜೊತೆಗೆ ಇದ್ದು ಸಮಾಧಾನಿಸುತ್ತಿದ್ದ ಪರಿ, ಇನ್ನೂ ನೆನಪಿಂದ ಮಾಸಿಲ್ಲ.

****************

ಇಂಜಿನಿಯರಿಂಗ್ ಓದುವಾಗ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿದ್ದ ನಮಗೆಲ್ಲಾ ಒಬ್ಬರು ಪ್ರೊಫೆಸರ್‍ ಬಗ್ಗೆ ಸ್ಪಲ್ಪ ಹೆದರಿಕೆ. ಗಡ್ಡಧಾರಿ ಆ ಪ್ರೊಫೆಸರ್ ಕೈಯಲ್ಲಿ ಸಿಕ್ಕುಬಿದ್ದು ಬೈಸಿಕೊಂಡ ಕತೆಗಳು ವಿಪುಲವಾಗಿದ್ದವು. ಕ್ಲಾಸಿ‍ನಲ್ಲಿ ಮಾಡಿದ ಕಿತಾಪತಿ-ತರಲೆಗಳ ಜೊತೆ, ತರಗತಿಯ ಹೊರಗೆ-ಲ್ಯಾಬಿನಲ್ಲಿ-ಕಾಲೇಜ್ ಕಾರಿಡಾರಿನಲ್ಲಿ ನಡೆದ ಮಂಗಾಟಗಳಿಗೂ ಇವರಿಂದ ಮಂಗಳಾರತಿ ಕಾದಿರುತಿತ್ತು. ಇಂತಹ ಪ್ರೊಫೆಸರ್ ನಮ್ಮ ಪ್ರೊಜಕ್ಟ್ ಗೈಡ್ ಆಗಿದ್ದು ನಮ್ಮ ಯಾವ ಜನ್ಮದ ಪುಣ್ಯವೋ ಅಂದುಕೊಂಡು ಹಲುಬಿದ್ದೆವು.

ಬರುಬರುತ್ತಾ ಅವರು ಹೇಳಿದ್ದು ನಮ್ಮ ಒಳ್ಳೆಯದಕ್ಕೆನ್ನುವ ಸತ್ಯ ಅರಿವಾಗತೊಡಗಿತ್ತು.ನಮ್ಮ ಕಾಲೇಜಿನ ಕೊನೆಯ ದಿನಗಳಲ್ಲಿ ಅವರು ರಸ್ತೆ ಅಪಘಾತವೊಂದರಲ್ಲಿ ಗಾಯಗೊಂಡು, ತುಂಬಾ ಬಳಲಿಬಿಟ್ಟಿದ್ದರು. ಅವರನ್ನು ಮಾತಾಡಿಸಲು ಮನೆಗೆ ಹೋದಾಗ, ಹಾಸಿಗೆ ಪಕ್ಕ ಕುಳ್ಳಿರಿಸಿಕೊಂಡು ಒಂದೆರಡು ಹಿತವಾಗಿ ಮಾತಾಡಿದ್ದರು.ನಮಗೆ ಅವರ ಬಗ್ಗೆ ಇದ್ದ ಕಲ್ಪನೆಗಳಿಗೆ ಅಂದು ಅವರ ಮಾತುಗಳಿಗೂ ಯಾಕೋ ಹೊಂದಿಕೆ ಆಗುತ್ತಿರಲಿಲ್ಲ. ಅವರು ಬೇಕೆಂದಲೇ ಕಾಲೇಜ್‍ನಲ್ಲಿ ಆ ತರ ಇದ್ದಿರಬಹುದೇ ಅನಿಸಿತ್ತು.

****************

ಮಿಡ್ಲ್ ಸ್ಕೂಲ್‍ನಲ್ಲಿ ವಿಜ್ಞಾನ-ಗಣಿತ ಭೋದಿಸುತ್ತಿದ್ದ ಪಾಟೀಲ್ ಮೇಷ್ಟ್ರು, ತರಗತಿಯಲ್ಲಿ ರಾಗದಂತೆ ಮಾತಾಡುತ್ತಿದ್ದರು. ಅವರ ತರಗತಿಯಲ್ಲಿ ಅಶಿಸ್ತನ್ನು ಎಂದೂ ಸಹಿಸುತ್ತಿರಲಿಲ್ಲ, ಸಿಕ್ಕಬಿದ್ದವರಿಗೆ ಕಠಿಣ ಶಿಕ್ಷೆ ಇರುತಿತ್ತು. ಅವರ ರಾಗದಂತಿದ್ದ ಮಾತುಗಳ ಬಗ್ಗೆ ನಮ್ಮನಮ್ಮಲ್ಲಿ ಗುಪ್ತವಾಗಿ ಮಾತಾಡಿಕೊಂಡು ನಗುವುದು ನಡೆಯುತಿತ್ತು.

ಅದ್ಯಾವುದೋ ಒಂದು ದಿವಸ , ಶಾಲೆಯ ಬಿಡುವಿನ ಸಮಯ ’ಗೇಮ್ಸ್ ರೂಮ್’ನಲ್ಲಿ ಗೆಳಯರೊಂದಿಗೆ ಚೆಸ್ ಆಡುತ್ತಿದ್ದೆ. ಅದು ಇದು ಮಾತಾಡುತ್ತಾ ನಡೆಯುತ್ತಿದ್ದ ಆಟದ ಭರದಲ್ಲಿ ನಾನು ಆ ಮೇಷ್ಟ್ರ ತರ ಮಾತಾಡತೊಡಗಿದ್ದೆ. ಅವರನ್ನೇ ಅನುಕರಿಸಿ ಸುಮಾರು ಒಂದು ಹತ್ತು ನಿಮಿಷ ಮಾತಾಡಿರಬಹುದು. ಇದರ ಮಧ್ಯೆದಲ್ಲಿ ಆ ರೂಮ್‍ನಲ್ಲಿದ್ದವರು ಅದ್ಯಾಕೋ ಒಮ್ಮೆಲೇ ಮಾತಾಡದೇ ಸುಮ್ಮನಾಗಿದ್ದರು. ನಾನು ಅದನ್ನು ಗಮನಿಸದೆ, ಮೇಷ್ಟ್ರನ್ನೇ ಅನುಕರಿಸುತ್ತಾ ಮಾತಾಡುತ್ತ ಹಿಂದೆ ತಿರುಗಿದೆ. ಆ ಮೇಷ್ಟ್ರು ನನ್ನ ಬೆನ್ನ ಹಿಂದೆ ನಿಂತು ನಮ್ಮ ಚೆಸ್ ಆಟವನ್ನೂ-ಅವರ ಅನುಕರಣೆಯನ್ನು ನೋಡಿದ್ದರು. ನಾನು ಒಮ್ಮೆಗೆ ಸಣ್ಣಗೆ ನಡುಗಿದ್ದೆ. ಅವರು ಎನೂ ಹೇಳದೇ ಸುಮ್ಮನೆ ನಗುತ್ತಾ ಅಲ್ಲಿಂದ ಹೊರನಡೆದರೂ, ನನಗೆ ಮರುದಿನ ಗ್ರಹಚಾರ ಕಾದಿದೆ ಎಂಬ ಹೆದರಿಕೆ ಶುರುವಾಗಿತ್ತು. ಆ ತರ ಏನು ಆಗದೇ ನನಗೆ ಸಂತೋಷ-ಆಚ್ಚರಿಗಳಾಗಿದ್ದವು.

********************

ಕೆಲಸಕ್ಕೆ ಸೇರಿ ನಾನು ಬೆಂಗಳೂರಿಗೆ ಬಂದ ಕೆಲ ವರ್ಷದಲ್ಲಿ, ಅಪ್ಪ-ಅಮ್ಮನಿಗೆ ನಾವಿದ್ದ ಊರಿನ ಪೇಟೆಯಲ್ಲಿ ಸಿಕ್ಕದ್ದರಂತೆ ನಮ್ಮ ಟೀಚರ್. ನಮ್ಮ ಮಿಡ್ಲ್ ಸ್ಕೂಲ್‍ನ ಹೆಡ್ ಮಾಸ್ಟರ್ ಆಗಿದ್ದವರು. ನಾನು ಶಾಲೆ ಮುಗಿಸಿ ಸುಮಾರು ೮-೧೦ ವರ್ಷದ ನಂತರ ಸಿಕ್ಕ ಮೇಲೂ ಸಹ ನನ್ನ ಹೆಸರನ್ನು ನೆನಪಿಟ್ಟುಕೊಂಡು, ನನ್ನ ಬಗ್ಗೆ ಸವಿವರವಾಗಿ ಕೇಳಿದರಂತೆ.

ಆ ನಮ್ಮ ಕಮಲ ಮಿಸ್, ನನ್ನ ಆತ್ಮವಿಶ್ವಾಸ ಹೆಚ್ಚು ಮಾಡಿದವರು, ಹೊಸತನದ ಹವ್ಯಾಸಗಳನ್ನು ಪರಿಚಯಿಸಿದವರು, ಏನೋ ವಿಶ್ವಾಸ-ಪ್ರೀತಿ.

********************

ಇನ್ನೊಬ್ಬರಿದ್ದರು ಹೈಸ್ಕೂಲ್‍ನಲ್ಲಿ ಟಿ.ಆರ್.ಜಿ. ದಿನವೂ ಇನ್ನೊಂದು ಊರಿನಿಂದ ಬಸ್ಸಿನಲ್ಲಿ ಬಂದು ಹೋಗುತ್ತಿದ್ದರು. ಅವರ ತರಗತಿಯನ್ನು ಯಾರು ತಪ್ಪಿಸಿಕೊಳ್ಳುತ್ತಿರಲಿಲ್ಲ, ಅವರ ವಿರುದ್ಧ ಮಾತಾಡಿದ್ದು ಕಂಡೇ ಇರಲಿಲ್ಲ. ಅವರ ವೃತ್ತಿಪರತೆ, ಭೋಧನಾ ಶೈಲಿ, ಅವರ ವ್ಯಕ್ತಿತ್ವ..ನಮಗೆಲ್ಲಾ ಅವರು ಸಂಪೂರ್ಣ ಜಂಟಲ್‍ಮನ್. ತುಂಬಾ ಸಲ, ನಾನೇದರೂ ಮೇಷ್ಟ್ರು ಆದರೆ ಇವರ ತರ ಆಗಬೇಕೆಂದುಕೊಂಡದ್ದು ಇದೆ.

********************

ಕ್ಲಾಸಿನಲ್ಲಿ ತಿಂಗಳು ಕೊಡುವ ಮಾರ್ಕ್ಸ್ ಕಾರ್ಡ್‍ಗಳನ್ನು ತುಂಬಲು ನಮ್ಮ ಕ್ಲಾಸ್ ಟೀಚರ್‌ಗೆ ಸಹಾಯ ಮಾಡುತ್ತಿದ್ದೆ. ಅದು ಶಾಲೆ ಮುಗಿದ ಮೇಲೆ ಸಂಜೆ ಅವರ ಮನೆಯಲ್ಲಿ ನಡೆಯುತಿತ್ತು. ನನಗೆ ಅದಕ್ಕಿಂತ ಇಷ್ಟವಾಗುತ್ತಿದ್ದು ಅವರ ಮನೆಯಲ್ಲಿ ಕೊಡುತ್ತಿದ್ದ ಧಾರವಾಡ ಫೇಡೆ-ಖಾರಾ ! ಅದರ ಜೊತೆ ನಮ್ಮ ಗಡ್ ಸರ್ ಮಾತಾಡುತ್ತಿದ್ದ ವಿಷಯಗಳು. ಸಂಸ್ಕೃತ ಪಂಡಿತರೂ ಆಗಿದ್ದ ಅವರ ಮಾತುಗಳು ಕಾಳಿದಾಸನಿಂದ ಹಿಡಿದು ಮಣಿರತ್ನಂ ಸಿನಿಮಾಗಳ ಬಗ್ಗೆ ನಡೆಯುತಿತ್ತು.

*********************

ಶಿಕ್ಷಕರು ಎಂದೊಡನೆ. ಸಿನಿಮಾ ರೀಲಿನಂತೆ ಹೀಗೆ ಸಾಲು ಸಾಲಾಗಿ ನನ್ನ ತಲೆಯಲ್ಲಿ ಓಡಿದ ನೆನಪಿನ ದೃಶ್ಯಾವಳಿಗಳು ಇವು.ಈ ತರ ಇನ್ನೂ ಅನೇಕ ಶಿಕ್ಷಕರ ನೆಚ್ಚಿನ ನೆನಪುಗಳಿವೆ. ಮೇಲೆ ಹೇಳಿದ ಸನ್ನಿವೇಶಗಳು ಕೇವಲ ಕೆಲವು ಉದಾಹರಣೆಗಳಷ್ಟೇ. ಇದೊಂದು ಶಿಕ್ಷಕರ ದಿನಾಚರಣೆಯ ನೆವದಲ್ಲಿ ನಮಗೆಲ್ಲಾ ದಾರಿದೀಪದವರ ಬಗ್ಗೆ ನೆನೆವ ಅವಕಾಶ.

ಶಾಲೆಯಿಂದ ಹಿಡಿದು ಉನ್ನತ ವ್ಯಾಸಂಗದವರೆಗೆ ಹೆಜ್ಜೆಹೆಜ್ಜೆಗೂ ಜೊತೆಗಿದ್ದು, ಶಿಕ್ಷಣ ಎಂಬ ಅದ್ಭುತ ಶಕ್ತಿಯನ್ನು ಧಾರೆ ಎರೆದವರು ನಮ್ಮ ಶಿಕ್ಷಕರು. ನಮ್ಮನ್ನು ರೂಪಿಸಿ, ನಮ್ಮ ವ್ಯಕ್ತಿತ್ವ ವಿಕಾಸದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ನಮ್ಮನ್ನು ವಿಶ್ವದ ಉತ್ತಮ ಪ್ರಜೆಗಳನ್ನಾಗಿ ಮಾಡುವ ಕೆಲಸ ಮಾಡಿದವರು.

ನಮ್ಮ ಪ್ರೀತಿ, ಮೆಚ್ಚುಗೆ, ತಮಾಷೆ, ವಿಶ್ವಾಸ ಎಲ್ಲದರಲ್ಲೂ ಭಾಗಿಯಾದವರು.

ಅಮ್ಮನಂತ ಪ್ರೀತಿ, ಅಪ್ಪನಂತ ಶಿಸ್ತು, ಗೆಳಯನಂತ ವಿಶ್ವಾಸ ತೋರಿದ ನಮ್ಮ ಶಿಕ್ಷಕರಿಗೆಲ್ಲಾ ಹೃದಯಪೂರ್ವಕ ವಂದನೆಗಳು.

Sunday, August 22, 2010

1984

Big Brother, Thought Police, Doublethink, Memory hole, Thoughtcrime

ಈ ಎಲ್ಲಾ ಇಂಗ್ಲೀಷ್ ಪದಗಳಲ್ಲಿರುವ ಸಾಮ್ಯತೆಯೇನು !
ಎಲ್ಲಾ ಪದಗಳು ಇಂಗ್ಲೀಷ್‍ಗೆ ಕಾಲಿರಿಸಿದ್ದೇ ಒಂದು ಪುಸ್ತಕದ ಮೂಲಕ. ಆ ಕೃತಿಯ ಹೆಸರು ’1984'.

ಪುಸ್ತಕದ ಹೆಸರು '1984' ಆದರೂ, ಆ ಪುಸ್ತಕ ಬಂದದ್ದು ೧೯೪೮ರಲ್ಲಿ. ಈಗಲೂ ಇಂಗ್ಲೀಷ್‍ನ ಅತ್ಯಂತ ಜನಪ್ರಿಯ ಅಥವಾ ಪ್ರಮುಖ ೧೦-೨೦ ಪುಸ್ತಕಗಳ ಸಾಲಿನಲ್ಲಿ ಈ ಪುಸ್ತಕ ಇದ್ದೇ ಇರುತ್ತದೆ.

ಅಂದ ಹಾಗೆ ಯಾವುದರ ಬಗ್ಗೆ ಈ ಪುಸ್ತಕ ?

ಜಾರ್ಜ್ ಆರ್ವೆಲ್ ಎಂಬ ಲೇಖಕ ೧೯೪೮ರಲ್ಲಿ ಈ ಕೃತಿಯನ್ನು ಬರೆದಿದ್ದು.ಆರ್ವೆಲ್ ಬ್ರಿಟಿಷ್ ಸೇನೆಯಲ್ಲಿ ಕೆಲಸ ಮಾಡಿ, ಕೆಲವು ವರ್ಷ ಭಾರತ-ಬರ್ಮದಲ್ಲೂ ಕಳೆದಿದ್ದ. ಆಗಿಂದ ಸುಮಾರು ೩೦-೪೦ ವರ್ಷಗಳಲ್ಲಿ, ಸರಿಸುಮಾರು ೧೯೮೪ರ ಸಮಯದಲ್ಲಿ ಪ್ರಪಂಚದ ರಾಜಕೀಯ-ಸಾಮಾಜಿಕ-ಸಾಂಸ್ಕೃತಿಕ ತಲ್ಲಣಗಳ ಬಗ್ಗೆ ಬರೆದಿರುವ ಒಂದು ಕಾಲ್ಪನಿಕ ಕಾದಂಬರಿ. ನಿರಂಕುಶ ಆಡಳಿತದಲ್ಲಿ ಹೇಗೆ ಎಲ್ಲವನ್ನೂ ಸರಕಾರ ನಿಯಂತ್ರಿಸಬಹುದು, ಸಾಂಸ್ಕೃತಿಕ ಲೋಕದ ಜೊತೆ ಜನರ ವೈಯುಕ್ತಿಕ ಜೀವನವನ್ನು ಪ್ರತಿ ಗಳಿಗೆಯೂ ಬಿಡದೆ ಕಣ್ಣಿಟ್ಟು ಹೇಗೆ ಗಮನಿಸಬಹುದು ಎನ್ನುವ ಕಥಾವಸ್ತುವನ್ನು ಬಿಚ್ಚಿಟ್ಟು ಜನರನ್ನು ಬೆಚ್ಚಿಬೀಳಿಸುವಂತೆ ಮಾಡಿದ್ದೇ ಈ ಪುಸ್ತಕ.


ಓಷಿಯನೀಯಾ ಎಂಬ ಕಾಲ್ಪನಿಕ ದೇಶದಲ್ಲಿ ನಡೆಯುವ ಕತೆಗೆ ಹಿನ್ನಲೆಯಾಗಿ ವಿಶ್ವದ ಕೊನೆಯ ಮಹಾಯುದ್ಧ ನಡೆದು, ಇಡೀ ಜಗತ್ತೆ ಪ್ರಮುಖ ಮೂರು ಭಾಗಗಳಾಗಿ ವಿಂಗಡನೆಯಾಗಿರುತ್ತದೆ - ಓಷಿಯನೀಯಾ(Ocenia), ಯೂರೇಷಿಯಾ(Eurosia)ಮತ್ತು ಈಸ್ಟೇಷಿಯಾ(Eastasia).

ಬ್ರಿಟನ್, ಅಸ್ಟ್ರೇಲಿಯಾ, ಅಮೇರಿಕಾ, ಆಪ್ರಿಕಾದ ದಕ್ಷಿಣ ಭಾಗದ ಪ್ರಾಂತ್ಯಗಳು ಸೇರಿ ಓಷಿಯನೀಯಾ ಎಂಬ ಬೃಹತ್ ದೇಶವಾಗಿರುತ್ತದೆ. ಯೂರೋಪಿನ ಎಲ್ಲಾ ದೇಶಗಳು ಮತ್ತು ಉತ್ತರ ಏಷ್ಯಾದ ಭಾಗಗಳು ಸೇರಿ ಯೂರೇಷಿಯಾವಾಗಿರುತ್ತದೆ. ಚೀನಾ, ಜಪಾನ್, ಕೊರಿಯಾ, ಉತ್ತರ ಭಾರತ ಸೇರಿ ಈಸ್ಟೇಷಿಯಾ. ಈ ಮೂರರ ಆಡಳಿತದಲ್ಲಿ ಬರದೇ ಇರುವ ಪ್ರಾಂತ್ಯಗಳ ನಿಯಂತ್ರಣಕ್ಕೆಂದು ಈ ಮೂರು ದೇಶಗಳ ಮಧ್ಯೆ ಯಾವಾಗಲೂ ನಿರಂತರ ಯುದ್ಧ.

ಓಷಿಯನೀಯಾ ದೇಶವನ್ನು ಆಳುವ ಸರ್ವಾಧಿಕಾರಿಗೆ ಹೆಸರಿಲ್ಲ, ಆದರೆ ಎಲ್ಲರೂ ಅವನನ್ನು ಕರೆಯುವುದು ’ಬಿಗ್ ಬ್ರದರ್’(Big Brother). ಬಿಗ್ ಬ್ರದರ್‌ಗೆ ದೇಶದ ಪ್ರತಿಯೊಂದರ ಮೇಲೂ ನಿಯಂತ್ರಣ, ಜನರ ಪ್ರತಿ ನಡೆ-ನುಡಿಯೂ ಟೆಲೆಸ್ಚ್ರೀನ್(Telescreen)ಯೆಂಬ ಯಂತ್ರದ ಮೂಲಕ ನಿರಂತರವಾಗಿ ಪರಿಶೀಲನೆಗೆ ಒಳಪಟ್ಟಿರುತ್ತದೆ. ಯಾರಾದರೂ ಬಿಗ್ ಬ್ರದರ್‍ ವಿರುದ್ಧವಾಗಿ ಮಾತಾಡಿದ್ದೇ ಆದರೆ, ವಿರೋಧಿಸುವ ಯೋಚಿಸಿದ್ದೇ ಆದರೆ , ಅವರು ಕೆಲವೇ ದಿನಗಳಲ್ಲೇ ಜನಜೀವನದಿಂದ ಮಾಯ ! ಅದಕ್ಕಾಗಿ 'Thought Police' ಎಂಬ ಜನರ ಯೋಚನೆಗಳ ನಿಯಂತ್ರಿಸುವ ಗುಪ್ತ ಪೋಲಿಸ್ ಪಡೆ.

ಬಿಗ್ ಬ್ರದರ್‌ನ ಆಡಳಿತದಲ್ಲಿರುವ ಇಲಾಖೆಗಳು- ಶಾಂತಿ ಸಚಿವಾಲಯ (Ministry of Peace), ಸಮೃದ್ಧಿ ಸಚಿವಾಲಯ(Ministry of Plenty), ಪ್ರೇಮ ಸಚಿವಾಲಯ(Ministry of Love) , ಸತ್ಯ ಸಚಿವಾಲಯ(Ministry of Truth). ಹೆಸರಿಗೂ ಮಾಡುವ ಕೆಲಸಕ್ಕೂ ಏನೂ ಸಂಬಂಧವೇ ಇಲ್ಲದ ಇಲಾಖೆಗಳಿವು.

ಶಾಂತಿ ಸಚಿವಾಲಯದ ಕೆಲಸ ದೇಶದ ಪ್ರಜೆಗಳನ್ನು ಸದಾ ಯುದ್ಧದ ಆತಂಕದಲ್ಲಿ, ಭಯದ ನೆರಳಿನಲ್ಲಿ ಇಡುವುದು. ಪ್ರೇಮ ಸಚಿವಾಲಯದ ಕೆಲಸ ವಿರೋಧಿಗಳನ್ನು ನಿರಂತರವಾಗಿ ಹುಡುಕಿ ರಾತ್ರೋರಾತ್ರಿ ನಾಶಮಾಡುವುದು. ಸಮೃದ್ಧಿ ಸಚಿವಾಲಯಕ್ಕೆ ದೇಶದ ಆರ್ಥಿಕ ಪ್ರಗತಿಯ ಹೊಣೆ, ಜನರಿಗೆಲ್ಲಾ ದೇಶ ಅತೀವ ಪ್ರಗತಿ ಸಾಧಿಸುತ್ತಿದೆ ಎಂದು ಹೇಳುತ್ತ ಜನರಿಗೆ ವಾರಕೆ ಇಷ್ಟೇ ಎಂದು ರ್‍ಏಷನ್ ನೀಡುವ ಕೆಲಸ. ಸತ್ಯ ಸಚಿವಾಲಯಕ್ಕೆ ಇತಿಹಾಸವನ್ನು ತಿರುಚಿ, ಸುದ್ದಿಮಾಧ್ಯಮವನ್ನು ಬೇಕಾದ ಹಾಗೇ ನಿಯಂತ್ರಿಸಿ, ಸುಳ್ಳನ್ನೇ ಸತ್ಯವಾಗಿ ಬಿಂಬಿಸುವ ಕೆಲಸ.

ಹೀಗಿರುವ ಸರ್ವಾಧಿಕಾರಿ ಬಿಗ್ ಬ್ರದರ್‌ನ ಪರಮ ವೈರಿ ’ಇಮಾನ್ಯುಯಿಲ್ ಗೋಲ್ಡ್ ಸ್ಟೇನ್’(Emmanuel Goldstein). ಬಿಗ್ ಬ್ರದರ್ ಜೊತೆ ಹಲವು ವರ್ಷವಿದ್ದು ಕಡೆಗೆ ಆಡಳಿತವನ್ನು ವಿರೋಧಿಸಿ ಭೂಗತನಾದವನು. ಗೋಲ್ಡ್ ಸ್ಟೇನ್‍ ಎಲ್ಲಿದ್ದಾನೆ, ಯಾರೆಂದು ಯಾರಿಗೂ ತಿಳಿಯದು. ಆದರೂ ಬಿಗ್ ಬ್ರದರ್ ಬಗ್ಗೆ ಕೋಪವಿರುವವರಿಗೆ ಗೋಲ್ಡ್‍ಸ್ಟೇನ್ ಮುಂದೊಂದು ದಿನ ಬಂದೇ ಬರುತ್ತಾನೆಂಬ ನಂಬುಗೆ.

ಈ ’ಸತ್ಯ ಸಚಿವಾಲಯ’ದಲ್ಲಿ ಕೆಲಸ ಮಾಡುವ ವಿನಸ್ಟನ್ ಸ್ಮಿತ್‍(Winstein Smith).ನಮ್ಮ ಕಥಾನಾಯಕ ಹಾಗು ಕಥೆ ಸಾಗುವುದೇ ಅವನ ಕಣ್ಣಿನ ಮೂಲಕ. ಅನೇಕ ವರ್ಷಗಳಿಂದ ಈ ಉಸಿರುಗಟ್ಟುವ ಆಡಳಿತದಲ್ಲಿ ಬದುಕಿದ್ದ ವಿನಸ್ಟನ್‍ಗೆ ಸಿಡಿದೇಳುವ ತುಡಿತ. ಅದಕ್ಕೆ ಧ್ವನಿಗೂಡಿಸುವ ಜೂಲೀಯ ಎಂಬ ಅದೇ ಸಚಿವಾಲಯದದಲ್ಲಿ ಕೆಲಸ ಮಾಡುವವಳು. ಬಿಗ್ ಬ್ರದರ್ ಆಳ್ವಿಕೆಯಲ್ಲಿ ಪ್ರೇಮ-ಕಾಮಕ್ಕೆ ಅವಕಾಶವೇ ಇರುವುದಿಲ್ಲ. ಹೀಗಿದ್ದರೂ ಇವರಿಬ್ಬರೂ ಗುಪ್ತವಾಗಿ ಅದರಲ್ಲಿ ತೊಡಗಿಕೊಳ್ಳುವರು. ಗೋಲ್ಡ್ ಸ್ಟೇನ್‍ ಕಡೆಯವರೆಂದು ತಿಳಿದು Thought policeನವರ ಹತ್ತಿರವೇ ಇವರಿಬ್ಬರೂ ಬಿಗ್ ಬ್ರದರ್ ವಿರುದ್ಧ ಯೋಚನೆ ರೂಪಿಸಿ ಸಿಕ್ಕು ಬೀಳುವುದು.Thought policeನವರಿಂದ ಹಿಂಸೆಗೆ ಒಳಪಟ್ಟು , ಕೊನೆಗೆ ಬಿಗ್ ಬ್ರದರ್‍ ಎನ್ನುವುದೇ ಸತ್ಯ ಉಳಿದಿದ್ದೆಲ್ಲಾ ಮಿಥ್ಯ ಎಂದು ಪೂರ್ತಿ ಬದಲಾಗಿ, ಬದುಕಿಗೆ ಮರಳುವುದರಲ್ಲಿ ಕಾದಂಬರಿ ಮುಗಿಯುತ್ತದೆ.

ಪುಸ್ತಕದ ಕೊನೆ ನಿರಾಶದಾಯಕವಾಗಿ ಕಂಡುಬಂದರೂ, ಅದರ ಲೇಖಕ ಅರ್ವಲ್ ಹೇಳುವಂತೆ ಅದು ಮುಂಬರುವ ದಿನಗಳಿಗೆ ಒಂದು ಎಚ್ಚರಿಕೆ ಗಂಟೆ ಅಷ್ಟೆ !

೧೯೮೪ರ ತಾಕತ್ತಿರುವುದು ಆದರ ಆಳವಾದ ವಿಶ್ಲೇಷಣೆಯಲ್ಲಿ, ಅಲ್ಲಿ ಬಾಗಿಲು ತೆರೆದುಕೊಳ್ಳುತ್ತಾ ಹೋಗುವ ನಾಳೆಯ ಭಯಾನಕವಾದ ದಿನಗಳ ವರ್ಣನೆಯಲ್ಲಿ.

ಪುಸ್ತಕ ಓದುತ್ತಿದ್ದಂತೆ ಅದು ಕ್ರಮೇಣ ಮನವನ್ನು ಆವರಿಸಕೊಳ್ಳತೊಡಗುತ್ತದೆ.

ಪುಸ್ತಕದಲ್ಲಿ ಆರ್ವೆಲ್ ಕೊಡುವ ಕೆಲವೊಂದು ಉದಾಹರಣೆಗಳನ್ನು ನೋಡಿ
- ಜನರನ್ನು ಹತೋಟಿಯಲ್ಲಿ ಇಡಲು ಯಾವಾಗಲೂ ಅವರನ್ನು ಯುದ್ಧದ ಭಯದ ನೆರಳಿನಲ್ಲಿಡಬೇಕು. ಕೆಲವೊಮ್ಮೆ ತಮ್ಮ ದೇಶದ ಊರುಗಳ ಮೇಲೆ ತಾವೇ ರಾಕೆಟ್ ದಾಳಿ ಮಾಡಿ ಅದು ವೈರಿಗಳ ಕೈವಾಡವೆಂದು ಭಯ ಹೆಚ್ಚಿಸಬೇಕು
- ಚಿಕ್ಕ ವಯಸ್ಸಿನಲ್ಲಿಯೇ ಬಿಗ್ ಬ್ರದರ್ ಬಗ್ಗೆ ನಂಬುಗೆ-ಗೌರವ ಉಂಟು ಮಾಡಲು ಶಿಕ್ಷಣದಲ್ಲಿ ಬಿಗ್ ಬ್ರದರ್‍ ಬಗ್ಗೆಯೇ ಪಾಠಗಳಿರಬೇಕು. ಯಾವಾಗಲೂ ಬಿಗ್ ಬ್ರದರ್ ಬಗ್ಗೆ ವಿಜಯದ-ಸಾಧನೆಯ ಸುದ್ದಿಗಳೇ ಬರುತ್ತಿರಬೇಕು
- ಪ್ರೇಮ-ಕಾಮವೆಂಬುದು ದೇಶದ ಪ್ರಗತಿಗೆ ಮಾರಕ. ಇದರಲ್ಲಿ ಮೈಮರತರೆ ವೈರಿಗೆ ಅವಕಾಶ. ಆದ್ದರಿಂದ ಚಿಕ್ಕ ವಯಸ್ಸಿನಿಂದ ಇದರ ಬಗ್ಗೆ ವಿರೋಧ ಬೆಳಯಬೇಕು.
- ಜನರಿಗೆ ವಾರಕ್ಕೆ ರೇಷನ್‍ನಲ್ಲಿ ಒಂದು ಬಾರ್ ಚಾಕಲೇಟ್
- ಬಿಗ್ ಬ್ರದರ್ ವಿರೋಧಿಗಳನ್ನು ಗಲ್ಲಿಗೇರಿಸುವ, ಹಿಂಸಿಸುವ ಚಟುವಟಿಗೆಗಳು ಚಿಕ್ಕ ಮಕ್ಕಳ ಮನೋರಂಜನಾತ್ಮಕ ಚಟುವಟಿಕೆಗಳು. ಸ್ವಂತ ಕುಟುಂಬದ ಸದಸ್ಯರು ಬಿಗ್ ಬ್ರದರ್ ಬಗ್ಗೆ ವಿರೋಧಿಸಿದರೆ ಅವರನ್ನು ಸಹ Thought Policeಗೆ ಹಿಡಿದುಕೊಡಬೇಕು
- ಯಾವುದಾದರೂ ಪುಸ್ತಕ-ಪತ್ರಿಕೆಯಲ್ಲಿ ಬಿಗ್ ಬ್ರದರ್ ಬಗ್ಗೆ ವಿರೋಧಿಸಿ ಬರೆದಿದ್ದರೆ, ಅದನ್ನು ತಕ್ಷಣ ಬೇಕಾದಂತೆ ತಿದ್ದಿ ಮತ್ತೆ ಬಿಡುಗಡೆ ಮಾಡಬೇಕು. ಹಾಗೆಯೇ ಇತಿಹಾಸವನ್ನು ಬಿಗ್ ಬ್ರದರ್‌ಗೆ ಪೂರಕವಾಗಿ ತಿದ್ದಿಬರೆಯಬೇಕು

ಸುಮಾರು ೭೦ ಭಾಷೆಗಳಲ್ಲಿ ಈ ಪುಸ್ತಕ ಪ್ರಕಟವಾಗಿದೆ. ಈ ಪುಸ್ತಕ ಬಂದು ಸುಮಾರು ೬೦ ವರುಷಗಳೇ ಕಳೆದಿವೆ. ಇನ್ನೂ ಈ ಪುಸ್ತಕ ಸಮಕಾಲೀನವೆನಿಸುತ್ತದೆ. ಇದನ್ನು ಕಾಲ್ಪನಿಕ ಕತೆಯೆಂದು ತಳ್ಳಿಹಾಕಲು ಆಗುವುದಿಲ್ಲ. ನಮ್ಮ ದೇಶದಲ್ಲೇ ೧೯೭೫ರ ತುರ್ತು ಪರಿಸ್ಥಿತಿ, ಆಗ ನಡೆದ ವಿದ್ಯಮಾನಗಳು ಆ ಸರ್ವನಿಯಂತ್ರಿತ ಆಡಳಿತವೆನ್ನುವುದು ಮರೆಯಲ್ಲಿ ಕಾದಿರುವ ಮಾರಿಯೆಂದೆ ಸೂಚಿಸುತ್ತದೆ. ಹಾಗೆಯೇ ಪ್ರಪಂಚದ ಅನೇಕ ಕಡೆ ತಲೆ ಎತ್ತಿದ ಸರ್ವಾಧಿಕಾರಿ ಸರ್ಕಾರಗಳು ನಮ್ಮ ಕಣ್ಮುಂದೆ ಇವೆ.

ಇನ್ನು Big brother is watching ಎನ್ನುವುದು ಪುಸ್ತಕದಲ್ಲಷ್ಟೇ ಉಳಿದಿಲ್ಲ.ಪ್ರತಿಯೊಬ್ಬರ ಮಾತು-ಚಟುವಟಿಕೆಗಳನ್ನು ಆಲಿಸುವ ಟೆಲಿಸ್ಕ್ರೀನ್ ಯಂತ್ರ ಕಾಲ್ಪನಿಕವಾಗೇನೂ ಉಳಿದಿಲ್ಲ. ಸಿಸಿಟಿವಿ-ಕಂಪ್ಯೂಟರ್-ಈಮೇಲ್-ಪೋನ್‍ಗಳ ಮೂಲಕ ಯಾರನ್ನೂ ಎಲ್ಲಿ ಬೇಕಾದರೂ ಅನುಸರಿಸಿ ಒಂದು ಕಣ್ಣಿಡಬಹುದಾಗಿದೆ.

ಇನ್ನು ಈ ಪುಸ್ತಕ ಉಂಟುಮಾಡಿದ ಸಾಂಸ್ಕೃತಿಕ ಪರಿಣಾಮಗಳು ಅನೇಕ.

ಅದು ಇಂಗ್ಲೀಷ್‍ಗೆ ಕೊಟ್ಟ ಪದಗಳ ಬಗ್ಗೆ ಹೇಳುವುದಾದರೆ, Doublethink ಎನ್ನುವುದು ಎರಡು ಸಂಪೂರ್ಣ ತದ್ವಿರುದ್ಧ ವಿಚಾರಗಳನ್ನು ಸರಿಯೆಂದು ಒಪ್ಪಿಕೊಳ್ಳುವುದು. Memory hole ಎನ್ನುವುದು ಬೇಡವಾದ-ಮುಜುಗರವುಂಟು ಮಾಡುವ ದಾಖಲೆಗಳನ್ನು, ಪ್ರತಿಗಳನ್ನು, ಚಿತ್ರಗಳನ್ನು ನಾಶಮಾಡುವುದು ಅಥವಾ ತಿರುಚುವುದು.Thoughtcrime ಎನ್ನುವುದು ವಿರೋಧಿ ಯೋಚನೆಗಳನ್ನು-ಭಾವನೆಗಳನ್ನು ನಿಯಂತ್ರಿಸುವ ಸಾಧನ.

ಈ ಎಲ್ಲಾ ತತ್ವಗಳನ್ನು ಒಟ್ಟಾಗಿ ಅರ್ವೆಲಿಸಮ್(Orwellism)ಎಂದು ಕರೆಯುತ್ತಾರೆ.

ಹಾಗೆಯೇ ಈ ಪುಸ್ತಕದಿಂದ ಪ್ರಭಾವಿತವಾದ ಅನೇಕ ಪುಸ್ತಕಗಳು, ಚಲನಚಿತ್ರಗಳು, ಹಾಡುಗಳು ಹೊರಹೊಮ್ಮಿವೆ. 'Big Brother' ಹೆಸರಿನ ಟಿವಿ ಷೋ ಇದರಿಂದ ಪ್ರೇರಿತವಾಗಿದ್ದು.

ಪುಸ್ತಕದಿಂದ ಅತ್ಯಂತ ಪ್ರಭಾವಿತ ಆಪೆಲ್(Apple)ಕಂಪೆನಿ ೧೯೮೪ರಲ್ಲಿ ಆಪೆಲ್ ಮೆಕಂತೋಷ್(Macintosh)ಬಿಡುಗಡೆ ಮಾಡಿದಾಗಿನ ಜಾಹೀರಾತು ಇಲ್ಲಿದೆ.

ಕೆಲವು ಪುಸ್ತಕಗಳೇ ಹಾಗೇ, ಓದಿದ ಮೇಲೂ ಕಾಡುತ್ತಿರುತ್ತವೆ. ಅಂತಹ 1984ರ ಬಗ್ಗೆ ಯೋಚಿಸುತ್ತಾ , ಪುಸ್ತಕದ ಅತ್ಯಂತ ಸುಪ್ರಸಿದ್ಧ ಸಾಲುಗಳೊಂದಿಗೆ ಮುಗಿಸೋಣ.

War is Peace
Freedom is Slavery
Ignorance is Stregth

Friday, August 13, 2010

ಮರಿದುಂಬಿ !

ನಲ್ಮೆಯ ಸ್ನೇಹಿತರೇ,

ಹೀಗೊಂದು ವಾರದ ಹಿಂದೆ ನಮ್ಮ ಮನೆಯಲ್ಲಿ ನವಜೀವದ ಪ್ರವೇಶವಾಗಿದೆ.
ನಮ್ಮ ಪ್ರೀತಿಯ ಪ್ರತೀಕದ ಮಗಳ ಹೆಸರು - ಸಾನ್ವಿ

ಸಾನ್ವಿ ಚಿಕ್ಕ ಚಿಕ್ಕ ಹೆಜ್ಜೆ ಗುರುತುಗಳನ್ನು ಹೆಕ್ಕಿ ಜೋಪಾನಿಸಲಿಕ್ಕೆ ಒಂದು ಹೊಸ ಬ್ಲಾಗ್ ಶುರುಮಾಡಿದ್ದೇನೆ.

ಬ್ಲಾಗ್ ಹೆಸರು - ’ಸಾನ್ವಿಯ ಜೊತೆಯಲಿ’.

http://oursaanvi.blogspot.com/

ನಮ್ಮ ಸಂತಸ-ಸಡಗರದ ಹೆಜ್ಜೆಗಳನ್ನು ನೀವು ಬ್ಲಾಗ್ ಮೂಲಕ ನೋಡಿ ಆನಂದಿಸಿ ಆಶೀರ್ವದಿಸಿ.

ಪ್ರೀತಿಯಿಂದ,
ಪಾತರಗಿತ್ತಿ (ಮರಿದುಂಬಿಯೊಂದಿಗೆ)

Saturday, July 10, 2010

ಸಂಖ್ಯೆ ೧೦ ಜರ್ಸಿ

ಎಲ್ಲಾ ಕ್ರೀಡೆಗಳಲ್ಲಿ ಇದ್ದಂತೆ ಪುಟ್ಬಾಲ್‍ನಲ್ಲೂ ಜರ್ಸಿಯ ಪಾತ್ರ ಮಹತ್ವದ್ದು. ಜರ್ಸಿಯ ಬಣ್ಣ- ವಿನ್ಯಾಸದಿಂದ ಅದು ಯಾವ ತಂಡದ್ದೆಂದು ಅರಿಯಲು ಹೆಚ್ಚು ಸಮಯ ಬೇಕಿಲ್ಲ. ಹಾಲೆಂಡಿನ ಕೇಸರಿ ಬಣ್ಣದ ಜರ್ಸಿ, ಬ್ರೆಜಿಲ್‍ನ ಹಳದಿ ಜರ್ಸಿ, ಮೆಕ್ಸಿಕೋದ ಹಸಿರು ಜರ್ಸಿ, ಅರ್ಜೆಂಟೇನಾದ ಆಕಾಶ ನೀಲಿ-ಬಿಳಿ ಪಟ್ಟೆ ಜರ್ಸಿ..ಹೀಗೆ ನೋಡಿದ ತಕ್ಷಣ ಯಾವ ದೇಶದೆಂದು ಗೊತ್ತಾಗುವ ಪ್ರಸಿದ್ಧ ಜರ್ಸಿಗಳು.

ಇವೆಲ್ಲಕ್ಕಿಂತಲೂ ಸುಪ್ರಸಿದ್ಧವಾದದ್ದು ನಂ.೧೦ ರ ಜರ್ಸಿ.

ತಂಡದ ಶ್ರೇಷ್ಠ ಆಟಗಾರನಿಗೆ ಆ ೧೦ನೇ ಸಂಖ್ಯೆಯ ಜರ್ಸಿ ಮೀಸಲು. ಈ ಆಟಗಾರರು ಉತ್ಕೃಷ್ಟ ಪುಟ್ಬಾಲ್ ಕಲೆವುಳ್ಳವರು, ಹಾಗೇ ತಂಡದದ ಆಟದ ವೇಗವನ್ನು ನಿಯಂತ್ರಿಸುವವರು. ಒಂದೇ ಮಾತಲ್ಲಿ ಹೇಳುವುದಾದರೆ - ಪ್ಲೇ ಮೇಕರ್.


ಸಂಖ್ಯೆ ೧೦ ಜರ್ಸಿಯ ಸಂಪ್ರದಾಯ ಯಾವಾಗ-ಎಲ್ಲಿ ಪ್ರಾರಂಭವಾಯಿತೋ ಗೊತ್ತಿಲ್ಲ. ಆದರೆ ಸಂಖ್ಯೆ ೧೦ ಜರ್ಸಿ ಧರಿಸಿ ಅದಕ್ಕೆ ಸಿಕ್ಕಾಪಟ್ಟೆ ಮಹತ್ವವನ್ನು ತಂದವನು ಪೀಲೆ. ಬ್ರೆಜಿಲ್‍ನ ಈ ದಂತಕತೆ ಬಗ್ಗೆ ಅರಿಯದವರು ತುಂಬಾ ಕಡಿಮೆ.

ಆದರೆ ಸಂಖ್ಯೆ ಎಲ್ಲರ ಜನಮನದಲ್ಲಿ ನೆಲಸುವಂತೆ ಮಾಡಿದವನು ಮರಡೋನ. ಅರ್ಜೇಂಟೇನಾದ ಈ ಮಹಾನ್ ಆಟಗಾರ ೧೦ರ ಜರ್ಸಿ ಧರಿಸಿ ಮೈದಾನಕ್ಕೆ ಇಳಿದರೆ ಅಭಿಮಾನಿಗಳಲ್ಲಿ ರೋಮಾಂಚನ.


ನಂತರದ ದಿನಗಳಲ್ಲಿ ಇಟಲಿಯಲ್ಲಿ ರಾಬರ್ಟೋ ಬ್ಯಾಗಿಯೋ, ಫ್ರಾನ್ಸ್‍ನಲ್ಲಿ ಜಿನಡೀನ್ ಜೀಡಾನ್, ಬ್ರೆಜಿಲ್‍ನಲ್ಲಿ ರಿವಾಲ್ಡೋ, ರೋನಾಲ್ಡೋ ೧೦ರ ಜರ್ಸಿ ಧರಿಸಿದವರು.

ಇತ್ತೀಚಿನ ದಿನಗಳಲ್ಲಿ ೧೦ರ ಜರ್ಸಿ ವಾರಸುದಾರರು ಹೊಸ ಪೀಳಿಗೆಯ ಶ್ರೇಷ್ಠ ಆಟಗಾರರು. ಈ ಸಲದ ವಿಶ್ವಕಪ್‍ನಲ್ಲಿ ನಂ.೧೦ ಧರಿಸಿದವರ ಪಟ್ಟಿ ನೋಡಿ.

ಅರ್ಜೆಂಟೇನಾದ ಮಾಯಾವಿ ಲಿಯಾನಾಲ್ ಮೆಸ್ಸಿ

ಇಂಗ್ಲೆಂಡ್‍ನ ವೇನ್ ರೂನಿ

ಬ್ರೆಜಿಲ್‍ನ ಕಾಕಾ

ಹಾಲೆಂಡ್‍ನ ವೆಸ್ಲೆ ಸಿನ್ಡಿಜರ್

ಸ್ಪೇನ್‍ನ ಪೆಬ್ರಿಗಸ್

ಹೀಗೆ ನಿಜಕ್ಕೂ ಬಹುತೇಕ ತಂಡಗಳಲ್ಲಿ ನಂ.೧೦ ಶ್ರೇಷ್ಠರಿಗೆ ಮೀಸಲಾಗಿದೆ.

ಈ ಬಾರಿಯ ವಿಶ್ವಕಪ್‍ನ ಇನ್ನೊಂದು ಸಂಗತಿಯೆಂದರೆ ತುಂಬಾ ನಿರೀಕ್ಷೆಯುಂಟು ಮಾಡಿದ್ದ ಅನೇಕ ನಂ.೧೦ ಆಟಗಾರರು, ಹೇಳಿಕೊಳ್ಳುವಂತಹ ಪಾತ್ರವಹಿಸದಿದ್ದದ್ದು.


ಮೆಸ್ಸಿ, ಮೆರಡೋನ ನಂತರ ಯಾರು ಎಂಬ ಪ್ರಶ್ನೆಗೆ ಆರ್ಜೆಂಟೇನಾದ ಉತ್ತರ. ಮರಡೋನನ ಶೈಲಿ ಹೋಲುವ ಆಟ, ಡ್ರಿಬ್ಲಿಂಗ್ ಮತ್ತು ಸುಂದರ ಪಾಸ್‍ಗಳು. ಆದರೆ ಅಂತಹ ಹೇಳಿಕೊಳ್ಳುವಂತಹ ಸಾಧನೆ ಬರಲೇ ಇಲ್ಲ. ಅರ್ಜೆಂಟೇನಾ ವಿಶ್ವಕಪ್‍ನಿಂದ ಹೊರಗೆ.

ಮತ್ತೊಬ್ಬ ಆಟಗಾರ ರೂನಿ, ಇಂಗ್ಲೆಂಡ್‍ ತಂಡದ ಮಿಂಚಿನ ಬಳ್ಳಿ ಈ ಸಲ ಮಿಂಚಲೇ ಇಲ್ಲ. ಇಂಗ್ಲೆಂಡ್ ಸಹ ವಿಶ್ವಕಪ್‍ನಿಂದ ಹೊರಕ್ಕೆ.

ಇದರ ಆಧಾರದ ಮೇಲೆ ಸಂಚಲಿಸುತ್ತಿರುವ ಹೊಸ ವಾದವೆಂದರೆ ನಂ.೧೦ರ ಶ್ರೇಷ್ಠನನ್ನು ನೆಚ್ಚಿಕೊಂಡ ತಂಡಗಳೆಲ್ಲಾ ಸೋಲು ಕಂಡಿವೆ. ಅದರ ಬದಲಿಗೆ ಯಾವುದೇ ಶ್ರೇಷ್ಠರಿಲ್ಲದ ಆದರೆ ಅತ್ಯುತ್ತಮ ಸಾಂಘಿಕ ಆಟ ನೀಡುವ ತಂಡಗಳು ಮುನ್ನಡೆಯುತ್ತಿವೆ. ಉದಾಹರಣೆಗೆ ಜರ್ಮನಿ.

ಎನೇ ಆಗಲಿ, ನಂ.೧೦ ಜರ್ಸಿ ಧರಿಸಿದವರಿಗಷ್ಟೇ ಗೊತ್ತು ಅದರ ಮಹಿಮೆ ಮತ್ತು ಭಾರ.

Monday, July 05, 2010

ಜೋಗ ಬೋನಿಟೊ !!

ಅದು ೧೯೫೦

ವಿಶ್ವಕಪ್ ಪುಟ್ಬಾಲ್ ಆ ವರ್ಷ ಬ್ರೆಜಿಲ್‍ನಲ್ಲಿ, ಎಲ್ಲಕ್ಕೂ ಕಳಶವಿಟ್ಟಂತೆ ಅತಿಥೇಯ ಬ್ರೆಜಿಲ್ ಫೈನಲ್ ತಲುಪಿತ್ತು. ಫೈನಲ್‍ನಲಿ ಎದುರಾಳಿ ಉರುಗ್ವೆ. ಬ್ರೆಜಿಲ್ ವಿಜಯ ನಿರೀಕ್ಷಿಸಿ ಇಡೀ ಬ್ರೆಜಿಲ್‍ಗೆ ಬ್ರೆಜಿಲ್ ಕಾತರದಿಂದ ಕಾದಿತ್ತು. ಆದರೆ ಫೈನಲ್‍ನಲ್ಲಿ ಉರುಗ್ವೆ ಬ್ರೆಜಿಲ್‍ನ್ನು ೨-೧ ಗೋಲುಗಳ ಅಂತರದಿಂದ ಸೋಲಿಸಿ ವಿಶ್ವಕಪ್ ಗೆದ್ದುಬಿಟ್ಟಿತ್ತು.ಸೋಲಿನ ಸುದ್ದಿ ಬ್ರೆಜಿಲ್ ಜನರನ್ನು ಕಂಗೆಡಿಸಿಬಿಟ್ಟಿತ್ತು. ೧೦ ವರ್ಷದ ಚಿಕ್ಕ ಹುಡುಗನೊಬ್ಬ ತನ್ನ ತಂದೆ ಆ ಸೋಲಿನ ಸುದ್ದಿಗೆ ಕಣ್ಣೀರು ಹಾಕಿದ್ದನ್ನು ನೋಡಿದ್ದ. ಮಲಗುವ ಮುನ್ನ ತನ್ನ ತಂದೆಗೆ ಹೇಳಿದ್ದ ’ನಾನು ವಿಶ್ವಕಪ್ ಗೆಲ್ಲುತ್ತೇನೆ. ಬ್ರೆಜಿಲ್‍ಗೆ ಮತ್ತು ನಿನಗೆ ವಿಶ್ವಕಪ್ ತಂದುಕೊಡುತ್ತೇನೆ’.

ಅದಾಗಿ ೮ ವರ್ಷದಲ್ಲಿ ಆ ಹುಡುಗ ಬ್ರೆಜಿಲ್‍ಗೆ ವಿಶ್ವಕಪ್‍ನ್ನು ಗೆದ್ದುಕೊಟ್ಟ ಸಹ. ನಂತರ ಇನ್ನೂ ಎರಡು ಸಲ ಬ್ರೆಜಿಲ್ ಪುಟ್ಬಾಲ್ ವಿಶ್ವಕಪ್ ‍ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ.

ಆತ ಪೀಲೆ. ಪುಟ್ಬಾಲ್‍ನ ದಂತಕತೆ ಆದವನು.

ಜಗತ್ತಿನ ಬೇರೆಡೆ ಪುಟ್ಬಾಲ್ ಒಂದು ಕ್ರೀಡೆಯಾದರೆ , ಬ್ರೆಜಿಲ್‍ಗೆ ಪುಟ್ಬಾಲ್ ಎಂದರೆ ಜೀವನ, ಜೀವನವೆಂದರೆ ಪುಟ್ಬಾಲ್.

ಇಂಗ್ಲೀಷ್‍ರು ಪುಟ್ಬಾಲ್‍ ಕಂಡುಹಿಡಿದದ್ದು, ಬ್ರೆಜಿಲ್‍ನವರು ಪುಟ್ಬಾಲ್ ಪರಿಪಕ್ವ ಮಾಡಿದ್ದು ಎಂಬ ಮಾತಲ್ಲಿ ಏನೂ ಸಂಶಯವಿಲ್ಲ.

ಪೀಲೆ ಕಾಲದಲ್ಲಿ ಶುರುವಾದ ಪುಟ್ಬಾಲ್ ಸೊಗಸು ಇಲ್ಲಿಯವರಿಗೆ ಹಾಗೇ ಸಾಗಿ ಬಂದು, ಬ್ರೆಜಿಲ್ ಐದು ಬಾರಿ ವಿಶ್ವಕಪ್ ಗೆದ್ದಿದೆ. ಪೀಲೆ ನಂತರ ರೋನಾಲ್ಡೋ, ರೋಮಾರಿಯೋ, ರಿವಾರಿಯೋ, ರಿರ್ಚಾಡೋ ಕಾರ್ಲೋಸ್, ಬೆಬಿಟೋ ತರದ ಇನ್ನೂ ಅನೇಕ ಶ್ರೇಷ್ಠ ಆಟಗಾರರು ಬ್ರೆಜಿಲ್‍ನಿಂದ ಹೊರಹೊಮ್ಮಿದ್ದಾರೆ.


ಒಂದು ದೇಶದಿಂದ ಇಷ್ಟೊಂದು ಜನ ಶ್ರೇಷ್ಠ ಆಟಗಾರರು, ಒಂದು ತಂಡದಿಂದ ಇಷ್ಟೊಂದು ನಿರೀಕ್ಷೆ ಆಗಿದ್ದಾದರೂ ಹೇಗೆ?

ಉತ್ತರ ಇರುವುದು ಬ್ರೆಜಿಲ್‍ನ ಗಲ್ಲಿಗಲ್ಲಿಗಳಲ್ಲಿ !

ಪೀಲೆಯಿಂದ ಹಿಡಿದು ಇತ್ತೀಚಿನ ರೋನಾಲ್ಡೋವರೆಗೆ, ಎಲ್ಲಾ ಮಹಾನ್ ಆಟಗಾರರು ಬಂದದ್ದು ಬ್ರೆಜಿಲ್‍ನ ಕಡುಬಡತನದಿಂದ ನರಳುತ್ತಿದ್ದ ಬೀದಿಗಳಿಂದ. ಪುಟ್ಬಾಲ್ ಆಟದ ಪ್ರೀತಿಯ ಜೊತೆಗೆ ಬಡತನದ ಸುಳಿಯಿಂದ ಹೊರಬರುವ ಹೋರಾಟವು ಸೇರಿ, ಪುಟ್ಬಾಲ್ ಜೀವನದ ಭಾಗವೇ ಆಗಿಬಿಟ್ಟಿತ್ತು. ಪೀಲೆಯಂತ ಬ್ರೆಜಿಲ್‍ ಆಟಗಾರನನ್ನು ಕೋಟಿಗಟ್ಟಲೇ ಹಣ ನೀಡಿ,ತಮ್ಮ ಕ್ಲಬ್‍ಗಳಿಗೆ ಆಡುವಂತೆ ಯೂರೋಪ್‍ನ ಹಣವಂತ ಪುಟ್ಬಾಲ್ ಕ್ಲಬ್‍ಗಳು ಬ್ರೆಜಿಲ್ ಕದ ತಟ್ಟಲು ಯಾವಾಗ ಶುರು ಮಾಡಿದವೋ, ಬ್ರೆಜಿಲ್‍ನ ಬೀದಿಬೀದಿಗಳಲ್ಲಿ ಪುಟ್ಬಾಲ್ ಆಡುತ್ತಿದ್ದ ಹುಡುಗರಲ್ಲಿ ಬಡತನಕ್ಕೆ ಉತ್ತರ ಸಿಕ್ಕಿಬಿಟ್ಟಿತ್ತು.ಬ್ರೆಜಿಲ್ ಅಲ್ಲದೇ ಲ್ಯಾಟೀನ್ ಅಮೇರಿಕಾದ ಅನೇಕ ದೇಶಗಳಲ್ಲಿ ಪುಟ್ಬಾಲ್ ಆಡುವ ಹುಡುಗರು ಪೌಂಡ್-ಡಾಲರ್-ಯುರೋಗಳಲ್ಲಿ ಹಣ ಎಣಿಸತೊಡಗಿದರು. ಈಗಲೂ ಯುರೋಪಿನ ಪುಟ್ಬಾಲ್ ಕ್ಲಬ್‍ನ ಆಟಗಾರರ ಪಟ್ಟಿಯಲ್ಲಿ ಬ್ರೆಜಿಲ್ ಮತ್ತು ಇತರೆ ಲ್ಯಾಟೀನ್ ಅಮೇರಿಕಾ ದೇಶದ ಆಟಗಾರರ ಸಂಖ್ಯೆ ಗಣನೀಯ.


ಅದರೆ ಅಭಿಮಾನಿಗಳಿಗೆ ಬ್ರೆಜಿಲ್ ಇತರ ತಂಡಗಳಿಗಿಂತ ಬಿನ್ನವಾಗಿ ನಿಲ್ಲುವುದು - ಆಟದ ಶೈಲಿಯಲ್ಲಿ. ಬ್ರೆಜಿಲ್‍ನ ಆಟಕ್ಕೆ ಇರುವ ಹೆಸರು ’ಜೋಗ ಬೋನಿಟೊ’(ಸುಂದರ ಆಟ). ಹೆಸರಿಗೆ ತಕ್ಕಂತೆ ಬ್ರೆಜಿಲ್ ಆಟ ನೋಡಲು ಮನಮೋಹಕ. ಆಟದಲ್ಲಿನ ಕಲ್ಮಾತಕತೆ, ಕೌಶಲ್ಯ, ಕುಸುರಿ ಕಲೆ. ನೋಡಲಿಕ್ಕೆ ಚೆಂದ.

ಇಂತಹ ಬ್ರೆಜಿಲ್, ಪೀಲೆಯ ನಂತರ ಸುಮಾರು ೨೪ ವರ್ಷ ವಿಶ್ವಕಪ್‍ನಲ್ಲಿ ಅಂತಹ ಸಾಧನೆಯೇನೂ ಮಾಡಲಿಲ್ಲ. ಕೊನೆಗೆ ೧೯೯೪ರಲ್ಲಿ ಮರಳಿ ವಿಶ್ವಕಪ್ ಗೆದ್ದಾಗ ಆ ಬರಗಾಲ ಮುಗಿದಿತ್ತು. ಅದಾದ ನಂತರ ಮತ್ತೆ ೨೦೦೨ರ ವಿಶ್ವಕಪ್ ಜಯಿಸಿತ್ತು. ನಂತರ ೨೦೦೬ರ ವಿಶ್ವಕಪ್‍ನಲ್ಲೂ ಅಂತಹ ನಿರೀಕ್ಷಿತ ಫಲಿತಾಂಶ ಬರಲಿಲ್ಲ.

ಬ್ರೆಜಿಲ್ ಯಾವ ಪಂದ್ಯ ಆಡಲು ಇಳಿದರೂ, ಗೆದ್ದೆ ಗೆಲ್ಲಬೇಕೆಂಬ ನಿರೀಕ್ಷೆ ಯಾವಾಗಲೂ ಇದ್ದದ್ದೇ. ಈ ನಂಬಿಕೆ ಮತ್ತು ನಿರೀಕ್ಷೆ ಕೆಲವೊಮ್ಮೆ ಬ್ರೆಜಿಲ್‍ ತಂಡವನ್ನು ಸುಖಾಸುಮ್ಮನೆ ಅತೀ ಒತ್ತಡಕ್ಕೆ ಒಳಪಡಿಸುವಂತೆ ತೋರುತ್ತದೆ. ಈ ಒತ್ತಡದ ಜೊತೆ ಬ್ರೆಜಿಲ್ ಆಟದ ಶೈಲಿಯ ಬಗ್ಗೆಯೂ ಚರ್ಚೆ ನಡೆದಿದೆ. ಜೋಗ ಬೋನಿಟೋ ಶೈಲಿ ನೋಡಲಿಕ್ಕೆ ಸೊಗಸೆನಿಸಿದರೂ ಫಲಿತಾಂಶ ಬರುತ್ತಿಲ್ಲವೆಂಬ ವಾದವಿದೆ.

ಆ ವಾದದ ಆಧಾರದ ಮೇಲೆಯೇ ಈ ಸಲದ ವಿಶ್ವಕಪ್‍ನ ಬ್ರೆಜಿಲ್ ತರಬೇತುದಾರ ಡುಂಗಾ, ಶೈಲಿಗಿಂತ ಫಲಿತಾಂಶ ನೀಡುವ ಕಡೆಗೆ ಗಮನ ಹರಿಸಿದ್ದ.ವಿಶ್ವಕಪ್‍ನ ಮೊದಲು ನಾಲ್ಕು ಪಂದ್ಯಗಳಲ್ಲಿ ಸೊಗಸಾಗಿ ಆಡಿ ಗೆದ್ದ ಬ್ರೆಜಿಲ್ ಮತ್ತೆ ನಿರೀಕ್ಷೆ ಮೂಡಿಸಿತ್ತು. ಆದರೆ ಬ್ರೆಜಿಲ್ ಕ್ವಾರ್ಟರ್ ಫೈನಲ್‍ನಲ್ಲಿ ಅನಿರೀಕ್ಷಿತವಾಗಿ ಮುಗ್ಗರಿಸಿತು.

ಈಗ ಮತ್ತೆ ಬ್ರೆಜಿಲ್ ಆಟದ ತಂತ್ರಗಾರಿಕೆಯ ಬಗ್ಗೆ ವಾದ ಶುರುವಾಗಿದೆ. ಮುಂದಿನ ವಿಶ್ವಕಪ್ ೨೦೧೪ರಲ್ಲಿ ಬ್ರೆಜಿಲ್‍ನಲ್ಲೇ ನಡೆಯಲಿದೆ. ಅಲ್ಲಿಯವರೆಗೆ ಬ್ರೆಜಿಲ್ ಪುಟ್ಬಾಲ್ ಯಾವ ಹಾದಿಯಲ್ಲಿ ನಡೆಯಲಿದೆ ಎನ್ನುವುದು ಕುತೂಹಲ ಎಲ್ಲಾ ಅಭಿಮಾನಿಗಳಿಗೆ ಇದ್ದೇ ಇದೆ.ಇಲ್ಲಿಯವರೆಗೆ ಆದ ಎಲ್ಲಾ ವಿಶ್ವಕಪ್‍ಗಳಲ್ಲಿ ಭಾಗವಹಿಸಿದ ಏಕಮೇವ ದೇಶ, ಮುಂದಿನ ದಿನಗಳಲ್ಲಿ ಹೇಗೆ ಮುಂದುವರೆಯಲಿದೆ, ಕಾದು ನೋಡಬೇಕು.

Sunday, June 13, 2010

ವೀವಾ ಪುಟ್ಬಾಲ್ !


ನೆರೆತ ಗಡ್ಡದ ಚಿಕ್ಕ ಕಾಯದ ಆ ಸೂಟ್‍ದಾರಿ ಕ್ರೀಡಾಂಗಣದಲ್ಲಿ ಬರುತ್ತಿದ್ದಂತೆ ಎಲ್ಲೆಡೆ ಮಿಂಚಿನ ಸಂಚಲನ. ಸಾವಿರಾರು ಪ್ರೇಕ್ಷಕರಿಂದ ಮೆಚ್ಚುಗೆಯ ಕರತಾಡನ. ಆತ ಆ ತಂಡದ ಆಟಗಾರನಲ್ಲ. ತಂಡದ ಕೋಚ್..

ಆತ ಡಿಯಗೋ ಮರಡೋನ..

ಅರ್ಜೆಂಟೇನಾ ಎಂಬ ಆ ಲ್ಯಾಟೀನ್ ಅಮೇರಿಕಾದ ದೇಶದ ಬಗ್ಗೆ ಜಗತ್ತು ನಿಬ್ಬೆರಗಾಗಿ ನೋಡುವಂತೆ ಮಾಡಿದ್ದವನು. ನಮ್ಮಂತಹ ಸಣ್ಣ ಊರಿನ ಚಿಕ್ಕ ಹುಡುಗರು ಪುಟ್ಬಾಲ್‍ ಎಂಬ ಆ ಮೋಹಕ ಸುಳಿಯಲ್ಲಿ ಸಿಲುಕುವಂತೆ ಮಾಡಿದ್ದವನು. ನಿಜವೆಂದರೆ ಆರ್ಜೆಂಟೇನಾ ಎಂಬ ದೇಶದ ಹೆಸರು ಮೊದಲು ಕೇಳಿದ್ದೆ ಆತನ ಮೂಲಕ. ಒಂದಿಡೀ ತಲೆಮಾರು ಪುಟ್ಬಾಲ್‍ನ್ನು ಒಂದು ಧರ್ಮದಂತೆ , ಆತನನ್ನು ಪುಟ್‍ಬಾಲ್ ದೈವದಂತೆ ಕಂಡಿದ್ದರಲ್ಲಿ ಆಶ್ಚರ್ಯವೇನಿಲ್ಲ.

’ಜಯ್ ಹಿಂದ್’ ಹೆಸರಿನ ನಮ್ಮೂರಿನ ಪುಟ್ಬಾಲ್ ಕ್ಲಬ್‍ಗೆ ಸೇರುವಂತೆ ಮಾಡಿದ್ದು ಮರಡೋನ ಎಂಬ ಮಾಂತ್ರಿಕನ ಆಟದ ಮೋಡಿ. ಆಗ ಮೋಡಿ ಎಷ್ಟಿತ್ತೆಂದರೆ ಆರ್ಜೇಂಟೇನಾದ ನೀಲಿ-ಬಿಳಿ ಪಟ್ಟಿಯ ಸಮವಸ್ತ್ರ ನಮ್ಮ ತಂಡದ ಸಮವಸ್ತ್ರವೂ ಆಗಿಬಿಟ್ಟಿತ್ತು. ನಮ್ಮೂರಿನ ಕ್ಲಬ್ ಅದಕ್ಕಿಂತ ತುಂಬಾ ವರ್ಷ ಮುಂಚಿನಿಂದ ಇದ್ದು ಹೆಸರು ಮಾಡಿದ್ದರೂ, ಅನೇಕ ಬಾಲಕರನ್ನು, ಬಿಸಿ ರಕ್ತದ ಹುಡುಗರನ್ನು ಪುಟ್ಬಾಲ್ ಕಡೆ ಸೆಳೆದದ್ದು ಮರಡೋನ ಕಾಲದಲ್ಲಿ.

ಒರೆಗೆಯ ಹುಡುಗರು ಕ್ರಿಕೆಟ್ ಬ್ಯಾಟ್-ಬಾಲ್ ಹಿಡಿದು ಓಡಾಡುತ್ತಿದ್ದರೆ, ನಮ್ಮದು ಬೇರೆಯದೇ ಪ್ರಪಂಚ. ಮಂಗಳವಾರವೊಂದು ಬಿಟ್ಟು ವಾರದ ಪ್ರತಿದಿನವು ೫ ಗಂಟೆಗೆ ಗಾಂಧೀ ಮೈದಾನದಲ್ಲಿ ಪುಟ್ಬಾಲ್ ಓಡತೊಡಗುತಿತ್ತು. ಮಂಗಳವಾರ ನಮ್ಮೂರಿನ ಸಂತೆ ಇದ್ದರಿಂದ ಆವತ್ತು ಮೈದಾನಕ್ಕೆ-ನಮಗೆ ರಜೆ !

ಮೈದಾನಕ್ಕೆ ಬರುತ್ತಿದ್ದಂತೆ ಎಲ್ಲರೂ ಕಡ್ಡಾಯವಾಗಿ ಮೈದಾನದ ೨-೩ ಸುತ್ತು ಓಡಿ, ನಂತರ ವಾರ್ಮ್-ಅಪ್ ಕಸರತ್ತು ಮಾಡಿದ ಮೇಲೆಯೇ ಪುಟ್ಬಾಲ್ ಮುಟ್ಟುವುದಕ್ಕೆ ಬಿಡುತ್ತಿದ್ದದ್ದು. ನಮ್ಮ ಕ್ಲಬ್‍ನ ಹಿರಿಯ-ಕಿರಿಯ ಆಟಗಾರವೆನ್ನದೆ ಎಲ್ಲರಿಗೂ ಇದು ಕಡ್ಡಾಯ. ನಮ್ಮಂತಹ ೧೦-೧೨ ವರ್ಷದ ಹುಡುಗರಿಂದ ಹಿಡಿದು ೪೦-೫೦ ವರ್ಷದವರೆಗಿನ ದೊಡ್ಡವರೆಲ್ಲರೂ ನಮ್ಮ ಕ್ಲಬ್‍ನ ಸದಸ್ಯರು. ವಯಸ್ಸಿಗೆ ಅನುಗುಣವಾಗಿ ಸಬ್ ಜ್ಯೂನಿಯರ್, ಜ್ಯೂನಿಯರ್ ಮತ್ತು ಸೀನಿಯರ್ ತಂಡಗಳಾಗಿ ವಿಂಗಡನೆ.

ವಾರ್ಮ್ ಅಪ್ ಆದ ನಂತರ ಉರುಳುವ ಚೆಂಡನ್ನು ಗೋಲ್ ಮೇಲೆ ಹೊಡೆಯುವ ಅಭ್ಯಾಸ. ಸಬ್ ಜ್ಯೂನಿಯರ್- ಜ್ಯೂನಿಯರ್ ಆಟಗಾರರೆಲ್ಲಾ ಗೋಲ್ ಕಂಬದ ಹಿಂದೆ ನಿಲ್ಲುತ್ತಿದ್ದೆವು. ಸೀನಿಯರ್ ತಂಡದ ಆಟಗಾರರು ಹೊಡೆದ ಚೆಂಡು ಮೈದಾನದ ಆಚೆ ಹೋಗದಂತೆ ತಡೆಯುವುದೇ ನಮ್ಮ ಕೆಲಸ. ಆ ಮೈದಾನಕ್ಕೆ ಕಾಂಪೊಂಡ್-ಬೇಲಿ ಯಾವುದೂ ಇರದಿದ್ದರಿಂದ ಒದ್ದ ಬಾಲ್‍ಗಳೆಲ್ಲಾ ಪಕ್ಕದ ರಸ್ತೆಗೆ ಬೀಳುತ್ತಿದ್ದವು. ಕ್ಲಬ್‍ಗೆ ಹೊಸದಾಗಿ ಸೇರಿದ ನಮ್ಮಂತಹ ಕಲಿಯುವ ಹುಡುಗರ ಕೆಲಸ ಆ ಚೆಂಡುಗಳು ರಸ್ತೆಗೆ ಬೀಳದಂತೆ ನೋಡಿಕೊಳ್ಳುವುದು. ಅದರ ಜೊತೆ ಗೋಲ್ ಪೋಸ್ಟಿನ ಹಿಂದಿನಿಂದ ಯಾವ ಸಂದರ್ಭದಲ್ಲಿ ಚೆಂಡನ್ನು ಹೇಗೆ ಹೊಡೆಯಬೇಕೆಂಬುದನ್ನು ಹತ್ತಿರದಿಂದ ನೋಡಿ ಕಲಿಯುವ ಅವಕಾಶ.

ಗೋಲ್ ಹೊಡೆಯುವ ಅಭ್ಯಾಸದ ನಂತರ ಅಭ್ಯಾಸ ಪಂದ್ಯ ಪ್ರಾರಂಭ. ಅಭ್ಯಾಸಕ್ಕೆ ಬಂದ ಆಟಗಾರರನ್ನು ಎರಡು ತಂಡಗಳಾಗಿ ವಿಂಗಡಿಸಲಾಗುತಿತ್ತು. ಸೀನಿಯರ್ ಮತ್ತು ಬಹುತೇಕ ಜ್ಯೂನಿಯರ್ ಆಟಗಾರರು ಆ ತಂಡಗಳಲ್ಲಿ ಇರುತ್ತಿದ್ದರು. ಅವರ ಪಂದ್ಯ ಶುರುವಾಗುತಿದ್ದಂತೆ ನಾವು ಸಬ್ ಜ್ಯೂನಿಯರ್ ಆಟಗಾರರು ನಮ್ಮದೇ ತಂಡಗಳನ್ನು ಮಾಡಿಕೊಂಡು ನಮ್ಮ ಪಂದ್ಯ ಶುರುಮಾಡಿಕೊಳ್ಳುತ್ತಿದ್ದೆವು.

ಪುಟ್‍ಬಾಲ್‍ನಲ್ಲಿ ಪಾಸ್‍ಗಳ ಪಾತ್ರ ಪ್ರಮುಖ, ಒಬ್ಬ ಆಟಗಾರ ಚೆಂಡನ್ನು ಇನ್ನೊಬ್ಬ ಆಟಗಾರನಿಗೆ ಸಾಗಿಸುವುದೇ ಪಾಸ್. ನಮ್ಮ ಕ್ಲಬ್‍ನಲ್ಲಿ ಯಾವಾಗಲೂ ಬಾಲ್ ಪಾಸ್ ಮಾಡಬೇಕೆಂಬುದು ಮೊದಲ ಪಾಠ . ಕ್ಷಿಪ್ರ ಪಾಸ್‍ಗಳಿಂದ ಎದುರಾಳಿ ತಂಡದ ರಕ್ಷಣೆ ಭೇದಿಸಿ ಗೋಲ್ ಮಾಡುವುದು ಉದ್ದೇಶ.

ಅದೇ ಸಮಯದಲ್ಲಿ ನಾವೆಲ್ಲ ನೋಡಿದ್ದು ಮರಡೋನನ ಅದ್ಭುತ ಕಾಲ್ಚೆಳಕ. ಪಾಸ್‍ಗಳಿಗಿಂತ ಡ್ರಿಬ್ಲಿಂಗ್‍ನಿಂದ ನಮ್ಮನ್ನು ಆಕರ್ಷಿಸಿದವನು. ಪ್ರತಿದ್ವಂದಿ ತಂಡದ ಆಟಗಾರರನ್ನು ಕಲಾತ್ಮಕವಾಗಿ-ಚಾಣಾಕ್ಷತೆಯಿಂದ ಕಂಗೆಡಿಸಿ ಚೆಂಡನ್ನು ಮುನ್ನಡಿಸಿಕೊಂಡು ಹೋಗುವುದೆ ಡ್ರಿಬ್ಲಿಂಗ್‍. ಮರಡೋನ ತಾಕತ್ ಇದ್ದಿದ್ದೇ ಇದರಲ್ಲಿ. ೩-೪ ಎದುರಾಳಿ ಆಟಗಾರರನ್ನು ವಂಚಿಸಿ ಗೋಲ್ ಮಾಡಿದ್ದು, ಒಮ್ಮೆ ಇಂಗ್ಲೆಂಡ್ ವಿರುದ್ಧ ೬ ಆಟಗಾರರನ್ನು ವಂಚಿಸಿ ಗೋಲ್ ಮಾಡಿದ್ದು, ನಮಗೆಲ್ಲಾ ಮರಡೋನ ಹೀರೋ ಪಟ್ಟಕ್ಕೆ ಏರಿಸಲು ಸಾಕಿತ್ತು.

ಡ್ರಿಬ್ಲಿಂಗ್ ಮಾಡುವದರಿಂದ ಅದು ಸಾಂಘಿಕ ಆಟವಾಗದೇ ಒಬ್ಬ ಆಟಗಾರನ ಆಟವಾಗುತ್ತೆಂಬ ಭಾವನೆಯಿದೆ. ಅದು ತಕ್ಕ ಮಟ್ಟಿಗೆ ನಿಜ ಸಹ. ಅದೇ ಕಾರಣಕ್ಕೆ ನಮ್ಮ ಕ್ಲಬ್‍ನಲ್ಲಿ ಡ್ರಿಬ್ಲಿಂಗ್‍ಕ್ಕಿಂತ ಪಾಸ್‍ಗೆ ಹೆಚ್ಚು ಒತ್ತು ನೀಡುತ್ತಿದ್ದುದು. ಆವಾಗಲೇ ಮರಡೋನ ಪರಿಣಾಮ ಕಾಣಿಸತೊಡಗಿದ್ದು. ನಮ್ಮ ತಂಡದಲ್ಲಿ ಜ್ಯೂನಿಯರ್ ಆಟಗಾರರು ಹೆಚ್ಚು ಡ್ರಿಬ್ಲಿಂಗ್ ಮಾಡತೊಡಗಿದ್ದು ಮತ್ತು ಸೀನಿಯರ್ ಆಟಗಾರರು ನಮ್ಮನೆಲ್ಲಾ ಬೈಯತೊಡಗಿದ್ದು !

ಮರಡೋನ ತಂಡದಲ್ಲಿ ಇರುವವರೆಗೆ ಆರ್ಜೆಂಟೇನಾ ಬಿಟ್ಟು ಬೇರೆ ತಂಡವನ್ನು ವಿಶ್ವಕಪ್‍ನಲ್ಲಿ ಬೆಂಬಲಿಸಿದ್ದೇ ಇಲ್ಲ. ಮರಡೋನ ಆಟಗಾರನಾಗಿ ನೇಪಥ್ಯಕ್ಕೆ ಸರಿದದ್ದು ೧೯೯೪ರಲ್ಲಿ. ಅಂತಹ ಮರಡೋನ ಬಹು ವರ್ಷಗಳ ನಂತರ ಮರಳಿದ್ದು ಈ ಸಲದ ವಿಶ್ವಕಪ್‍ಗೆ ಅರ್ಜೆಂಟೀನಾ ತಂಡದ ಕೋಚ್ ಆಗಿ.

ಪುಟ್ಬಾಲ್ ವಿಶ್ವಕಪ್...

೪ ವರ್ಷಗಳಿಗೊಮ್ಮೆ ನಡೆಯುವ ಪುಟ್ಬಾಲ್ ಮಾಂತ್ರಿಕರ ಸಮರ. ಬಹುಷಃ ಓಲಂಪಿಕ್‍ನಷ್ಟೇ ಜಗತ್ತಿನಾದ್ಯಂತದ ದೇಶಗಳಲ್ಲಿ ಜನ ನೋಡುವ ಪಂದ್ಯಾವಳಿ.ಜಗತ್ತಿನ ಸುಮಾರು ೨೦೦ಕ್ಕೂ ಹೆಚ್ಚು ದೇಶಗಳು ಪೂರ್ವಭಾವಿ ಸುತ್ತುಗಳಲ್ಲಿ ಸೆಣಸಿ, ಅದರಲ್ಲಿ ೩೨ ದೇಶಗಳಷ್ಟೇ ವಿಶ್ವಕಪ್‍ಗೆ ಮುನ್ನಡೆಯುವುದು. ಅಲ್ಲಿ ಜಗತ್ತಿನ ಶ್ರೇಷ್ಠ ತಂಡಗಳೊಡನೆ ಸ್ಪರ್ಧಿಸಿ ಕೊನೆಗೆ ವಿಶ್ವಕಪ್ ಗೆಲ್ಲುವುದು ಎಲ್ಲಾ ದೇಶಗಳ ಕನಸು.

ಒಂದೊಂದು ವಿಶ್ವಕಪ್‍ ಸಹ ಹಲವಾರು ಯಶಸ್ಸಿನ ಕತೆಗಳನ್ನು ಮತ್ತು ಅಮೋಘ ಆಟಗಾರರ ದಂತಕತೆಗಳನ್ನು ತೆರೆದಿಡುತ್ತದೆ. ಹಾಗೆಯೇ ಮತ್ತೆ ನೆನಪು ಮಾಡಿಕೊಳ್ಳಲು ಇಚ್ಚಿಸದ ಕತೆಗಳನ್ನು ಸಹ.

೧೯೮೬ ಮೆಕ್ಸಿಕೋ ವಿಶ್ವಕಪ್‍ನಲ್ಲಿ ಆರ್ಜೆಂಟೇನಾ ತಂಡದ ಜಯ, ೧೯೯೦ ಇಟಲಿ ವಿಶ್ವಕಪ್‍ನಲ್ಲಿ ಅದೇ ಅರ್ಜೆಂಟೇನಾ ತಂಡ ಸೋತದ್ದು, ೧೯೯೪ರ ಅಮೇರಿಕಾ ವಿಶ್ವಕಪ್‍ನಲ್ಲಿ ಬ್ರೆಜಿಲ್‍ನ ಪುನಾರಗಮನ, ೧೯೯೮ರ ಫ್ರಾನ್ಸ್ ವಿಶ್ವಕಪ್‍ನಲ್ಲಿ ಅತಿಥೇಯರ ದಿಗ್ವಿಜಯ, ಅದೇ ಪಂದ್ಯಾವಳಿಯಲ್ಲಿ ಬ್ರೆಜಿಲ್‍ ಮುಖಭಂಗ ಅನುಭವಿಸಿದ್ದು, ೨೦೦೨ರ ಜಪಾನ್ ವಿಶ್ವಕಪ್‍ನಲ್ಲಿ ಮತ್ತೆ ಬ್ರೆಜಿಲ್‍ನ ಪರಾಕ್ರಮ, ೨೦೦೬ರ ಜರ್ಮನಿ ವಿಶ್ವಕಪ್‍ನಲ್ಲಿ ಇಟಲಿಯ ವಿಜಯ....ಹೀಗೆ ಅನೇಕ ಗೆಲುವಿನ-ಸೋಲಿನ ಮಹಾನ್ ಕತೆಗಳು.

ಹಾಗೆಯೇ ಮರಡೋನ, ರೋನಾಲ್ಡೋ, ಬೆಕಮ್, ಜೀಡಾನ್‍ನಂತಹ ವಿಸ್ಮಯಿ ಆಟಗಾರರ ಕತೆಗಳು.

ಅಂತಹ ಜಾಗತಿಕ ಪುಟ್ಬಾಲ್ ಹಬ್ಬ ಮತ್ತೆ ಶುರುವಾಗಿದೆ. ಇನ್ನೊಂದು ತಿಂಗಳು ಪುಟ್ಬಾಲ್ ರಸದೂಟ ಎಲ್ಲೆಡೆ.

ವೀವಾ ಪುಟ್ಬಾಲ್ !

Tuesday, October 13, 2009

ಪಶ್ಚಿಮ ತೀರದ ನಗರಿ ಕೋನಾ...

ಹಿಲೋದಲ್ಲಿ ಅವತ್ತು ನಮ್ಮ ಕೊನೆ ದಿವಸ.

ಹಿಲೋ ಬಿಡುವುದಕ್ಕಿಂತ ಮುಂಚೆ ಹತ್ತಿರದಲ್ಲೇ ಇದ್ದ ಚಿಕ್ಕ ಕಸೂತಿ ಅಂಗಡಿಗೆ ದಾಳಿ ಇಟ್ಟಳು ನನ್ನಾಕೆ. ಅಲ್ಲೊಂದಿಷ್ಟು ಸುಂದರ ಕುಸುರಿ ಕೆಲಸದ ಸರಗಳು, ತೆಂಗಿನ ಗರಿಗಳಿಂದ ಮಾಡಿದ ಪರ್ಸ್ ಕಾರ್ ಸೇರಿದವು.

ಹಿಲೋದಿಂದ ಕೋನಾದ ಕಡೆ ನಮ್ಮ ಪಯಣ ಶುರುವಾಯ್ತು. ನಾವು ಬರುವಾಗ ಹವಾಯಿ ಪೂರ್ವ ತೀರಕ್ಕೆ ಅಂಟಿಕೊಂಡಿರುವ ರಸ್ತೆಯಲ್ಲಿ ಬಂದಿದ್ದೆವು. ಈಗ ಭಿನ್ನತೆಯಿರಲೆಂದು ಹವಾಯಿ ಮಧ್ಯ ಭಾಗದಲ್ಲಿ ಹರಿದು ಹೋಗುವ ಸ್ಯಾಡಲ್ ರಸ್ತೆಗೆ ಇಳಿದೆವು. ಸುಮಾರು ೯೦ ಮೈಲಿಯ ರಸ್ತೆಯಾದರೂ, ಮೊದಲ ೪೦ ಮೈಲಿಯಂತೂ ವಿಪರೀತ ತಿರುವುಗಳು. ನಂತರ ದಾರಿಯಲ್ಲಿ ಸಿಕ್ಕಿದ್ದು ಒಂದು ಬೆಟ್ಟದ ಮೇಲಿದ್ದ ವೀಕ್ಷಣಾಲಯ. ನಂತರ ಅಮೇರಿಕೆ ಸೇನೆಯ ಯಾವುದೋ ಒಂದು ನಿರ್ಬಂಧಿತ ಪ್ರದೇಶ.ಅದಾದ ಮೇಲೆ ಒಮ್ಮೆಗೆ ರಸ್ತೆ ಬೆಟ್ಟ ಎರುತ್ತಾ ಸಾಗುತ್ತದೆ. ಅಮೇಲೆ ಹಸಿರು ಹುಲ್ಲುಗಾವಲು ಪ್ರದೇಶ. ಹೀಗೆ ಸುಮಾರು ೩ ಗಂಟೆಗಳ ನಂತರ ಕೋನ ನಗರಕ್ಕೆ ತಲುಪಿದೆವು.

ಕೋನಾ...

ಬಿಗ್ ಐಲೆಂಡ್‍ನ ಪಶ್ಚಿಮ ತೀರದ ನಗರ. ಕಿಲಹೂ ಕೋನ ಆ ನಗರದ ಪೂರ್ಣ ಹೆಸರು. ಕಮಹಮಯ ತನ್ನ ಸಾಮ್ರಾಜ್ಯದ ರಾಜಧಾನಿಯಾಗಿ ಬೆಳಸಿದ ನಗರ. ಮುಂದೆ ಆ ರಾಜಧಾನಿ ಹೊನಲುಲಿಗೆ ಸ್ಥಳಾಂತರವಾದ ನಂತರ, ಕೋನಾ ಹವಾಯಿಯ ರಾಜ ಮನೆತನದ ವಿಶ್ರಾಂತಿ ನಗರವಾಗಿತ್ತು. ಈಗ ಇದು ಬಿಗ್ ಐಲೆಂಡ್‍ನ ಪ್ರಮುಖ ಪ್ರವಾಸಿ ಸ್ಥಳ.

ಅಲೀ ಡ್ರೈವ್, ಸಮುದ್ರ ತೀರದುದ್ದಕ್ಕೂ ಹಬ್ಬಿರುವ ರಸ್ತೆ. ಕೋನಕ್ಕೆ ಆಗಮಿಸುವ ಪ್ರವಾಸಿಗರು ಮೊದಲು ಇಳಿಯುವುದು ಈ ಅಲೀ ಡ್ರೈವ್‍ಗೆ. ಕೋನದ ಬಹುತೇಕ ಪ್ರಮುಖ ಹೋಟೆಲ್‍ಗಳು ಇರುವುದು ಈ ರಸ್ತೆಯಲ್ಲೇ. ಹಾಗೆಯೇ ಎಲ್ಲಾ ನಮೂನೆಯ ಶಾಪಿಂಗ್‍ಗೆ ಬೇಕಾದ ಅಂಗಡಿಗಳು ಇವೆ.

ಹತ್ತಿರದಲ್ಲೇ ಇದ್ದ ಪಾರ್ಕಿಂಗ್‍ನಲ್ಲಿ ಕಾರ್ ನಿಲ್ಲಿಸಿ, ಅಲೀ ಡ್ರೈವ್‍ಗೆ ಇಳಿದೆವು. ಆ ಮಧ್ಯಾಹ್ನದ ಬಿಸಲಿನಲ್ಲೂ ಆ ತೀರದೂದ್ದಕ್ಕೂ ಓಡುತ್ತಿದ್ದವರು ಕಂಡರು.ಅವರೆಲ್ಲಾ ಹವಾಯಿ ಪ್ರಸಿದ್ಧ ’ಐರೆನ್‍ಮ್ಯಾನ್ ಟ್ರೈಥಾಲಾನ್’ಗೆ ತಯಾರಾಗುತ್ತಿದ್ದ ಸ್ಪರ್ಧಾಳುಗಳು. ಐರೆನ್‍ಮ್ಯಾನ್ ಟ್ರೈಥಾಲಾನ್, ಪ್ರಪಂಚದ ಅತ್ಯಂತ ಕಠಿಣ ಟ್ರೈಥಾಲಾನ್. ಸುಮಾರು ಎರಡುವರೆ ಮೈಲಿ ಸಮುದ್ರದಲ್ಲಿ ಈಜು, ೧೧೨ ಮೈಲು ಸೈಕಲ್ ಸವಾರಿ ಕೊನೆಗೆ ೨೬ ಮೈಲಿ ಮೆರಥಾನ್ ಓಟ. ಎಂತಹ ಅಥ್ಲೀಟ್‍ಗೂ ಕಠಿಣ ಸವಾಲೇ. ಇದರಲ್ಲಿ ವಿಶ್ವದ ಯಾವುದೇ ದೇಶದವರು ಭಾಗವಹಿಸಬಹುದು.

ಅಲೀ ಡ್ರೈವ್‌ನ ಪ್ರಮುಖ ಆಕರ್ಷಣೆ - ಅಲ್ಲಿನ ವಿವಿಧ ಅಂಗಡಿಗಳು. ಟೀ ಶರ್ಟ್, ಟೋಪಿಯಿಂದ ವಿವಿಧ ಅಭರಣಗಳವರೆಗೆ ಎಲ್ಲಾ ನಮೂನೆಗಳು ಇಲ್ಲಿವೆ. ಸುಮ್ಮನೆ ಆ ಅಂಗಡಿಗಳ ಮುಂದೆ ಅಲೆಯುವುದು ಒಂದು ಒಳ್ಳೆಯ ಚಟುವಟಿಕೆಯೇ ! ನಾವು ಅಲ್ಲಿದ್ದ ಒಂದು ಹವಾಯಿಯನ್ ಆಭರಣಗಳ ಅಂಗಡಿಗೆ ಹೊಕ್ಕು, ಒಂದು ಹವಾಯಿಯನ್ ಕಲ್ಲುಗಳ ಆಭರಣ ಇಷ್ಟವಾಗಿ, ಅಲ್ಲಿಂದ ಆ ಅಭರಣ ನನ್ನಾಕೆ ಕೊರಳು ಸೇರಿತ್ತು !

ಅಲೀ ಡ್ರೈವ್‍ನಲ್ಲಿ ಇರುವ ಇನ್ನೊಂದು ಅಕರ್ಷಣೆ - ಹುಲಿಹೀ ಅರಮನೆ. ಹವಾಯಿ ರಾಜಮನೆತನದ ರಜೆಕಾಲದ ಅರಮನೆ ಈಗ ಮೂಸಿಯಂ. ಸುಮಾರು ೧೦೦-೧೫೦ ವರ್ಷ ಹಳೆಯ ಈ ಕಟ್ಟಡ, ಅಷ್ಟೇನೂ ದೊಡ್ಡದಿಲ್ಲ, ಅಂತಹ ಕರಕುಶಲತೆಯಾಗಲಿ, ಕುಸುರಿಕಲೆಯಾಗಲಿ ಯಾವುದೂ ಕಂಡುಬರಲಿಲ್ಲ.

ಅಲ್ಲಿಂದ ನಾವು ಒಂದು ಸುಂದರ ಬೀಚ್‍ನೆಡೆಗೆ ಹೊರಟೆವು. ಕೋನದಿಂದ ಸುಮಾರು ೫೦ ನಿಮಿಷದ ದೂರದಲ್ಲಿ ಇರುವ ಬೀಚ್ ಇದು. ಬೇರೆಲ್ಲಾ ಬೀಚ್‍ಗಳಂತೆ ಇಲ್ಲಿ ಜನಸಾಂದ್ರತೆ ಕಡಿಮೆ. ತುಂಬಾ ಕಡಿಮೆ ಜನಕ್ಕೆ ಗೊತ್ತಿರುವ ಸ್ಥಳ. ಇಲ್ಲಿಗೆ ಕೆಲವು ಸಾರಿ ಬಂದಿದ್ದ ನನ್ನ ಸ್ನೇಹಿತರೊಬ್ಬರು ಹೇಳದಿದ್ದರೆ ನಮಗೂ ಈ ಸುಂದರ ಬೀಚ್‍ ಬಗ್ಗೆ ತಿಳಿಯುತ್ತಿರಲಿಲ್ಲ.

ತಿಳಿನೀಲಿ ಬಣ್ಣದ ಸಾಗರ ಮತ್ತು ಸುಂದರ-ಚಿಕ್ಕ ಮರಳಿನ ತೀರ ಅದ್ಭುತವಾಗಿತ್ತು. ಸಮುದ್ರದ ನೀರು ಪಾರದರ್ಶಕವಾಗಿ ತಳದ ಕಲ್ಲುಗಳು ಕಾಣುತ್ತಿದ್ದವು. ಆ ಮರಳು-ನೀರಿನ್ನೂದ್ದಕ್ಕೂ ಬರಿಗಾಲಿನಲ್ಲಿ ಸ್ವಲ್ಪ ಹೊತ್ತು ನಮ್ಮ ಸುತ್ತಾಟ ನಡೆಯಿತು. ನಂತರ ಅಲ್ಲೇ ಮರಳಲ್ಲಿ ಸ್ವಲ್ಪ ಹೊತ್ತು ಬಿದ್ದುಕೊಂಡಿದ್ದೆ. ಆಗಲೇ ನನ್ನಾಕೆ ನೀರಲ್ಲಿ ಇಳಿದು ಆಗಲೇ ಆಟವಾಡುತ್ತಿದ್ದಳು.

ಸಂಜೆ ಕೆಂಪಾಗುವರೆಗೆ ಅಲ್ಲೇ ನೀರನಲ್ಲಿ ಆಟವಾಡಿ, ಬೀಚ್‍ನಲ್ಲಿ ಮತ್ತೆ ತಿರುಗಾಡುವಷ್ಟರಲ್ಲಿ ಆಗಲೇ ಆರು ಗಂಟೆಯ ಸಮಯ. ನಮ್ಮ ವಾಪಸ್ ಯಾತ್ರೆ ಇನ್ನೊಂದು ಎರಡು ಗಂಟೆಯಲ್ಲಿ ಶುರುವಾಗಲ್ಲಿತ್ತು. ಆ ಬೀಚ್‍ಗೆ ವಿದಾಯ ಹೇಳಿ ನಮ್ಮ ಪಯಣ ಕೋನಾ ವಿಮಾನ ನಿಲ್ದಾಣದೆಡೆಗೆ ಹೊರಟಿತು. ದಾರಿಯುದ್ದಕ್ಕೂ ಕೆಂಪಾದ ಸೂರ್ಯ ಆ ನೀಲ ಸಾಗರದಲ್ಲಿ ಕರಗಿ ಹೋಗುವದನ್ನು ನೋಡುತ್ತಾ ನಡೆದವು.

ಕೋನಾ ವಿಮಾನ ನಿಲ್ದಾಣಕ್ಕೆ ಬಂದು, ನಮ್ಮ ಹವಾಯಿ ಯಾತ್ರೆಯ ಪ್ರಮುಖ ಭಾಗವಾದ ಕಾರನ್ನು ಮರಳಿ ಕೊಟ್ಟೆವು. ಅಲ್ಲಿಂದ ಸೆಕ್ಯುರಿಟಿ ತಪಾಸಣೆ ಮುಗಿಸಿಕೊಂಡು ವಿಮಾನ ಹೊಕ್ಕೆವು. ಜಾತ್ರೆಗೆ ಹೋಗಿ ಮರಳಿ ಬರುವಾಗ ಇರುವ ಬಸ್ಸಿನಂತೆ ಇತ್ತು ಸನ್ನಿವೇಶ ! ಎಲ್ಲರ ಮೈಮೇಲೂ ಹವಾಯಿಯ ಶರ್ಟ್‍ಗಳು, ಕೆಲವರು ಹವಾಯಿ ಹಾರಗಳನ್ನು ಧರಿಸಿ ಬಂದಿದ್ದರು. ಎಲ್ಲರ ಹತ್ತಿರವೂ ಹವಾಯಿಯಲ್ಲಿ ತೆಗೆದುಕೊಂಡ ಅನೇಕ ವಸ್ತುಗಳು. ಹಬ್ಬದಂತಹ ವಾತಾವರಣ !

ಕೋನಾದ ಬಿಟ್ಟು ವಿಮಾನ ಆಕಾಶಕ್ಕೆ ಹಾರಿದಾಗ ಆಗಲೇ ರಾತ್ರಿ ೧೦ರ ಸಮಯ.

ಸುಂದರ ಬೀಚ್‍ಗಳು, ಕಿತ್ತಲೆ ಬಣ್ಣದ ಲಾವಾ, ಹಸಿರು ಕಾನನ, ಜಲಪಾತಗಳು, ಜ್ವಾಲಾಮುಖಿ...ಮನಸ್ಸು ಖುಷಿಯಾಗಿ ಮೆಲುಕು ಹಾಕುತಿತ್ತು.

ಬೆಳಗಿನ ತಿರುಗಾಟದಿಂದ ಸುಸ್ತಿನಿಂದ ಕೆಲವು ಕ್ಷಣಗಳಲ್ಲಿ ನಿದ್ದೆಗೆ ಹಾರಿದ್ದೆವು...

ಮತ್ತೆ ಹವಾಯಿ ಕಾಡುತ್ತಿತ್ತು..